ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುದಿ ಎಸರು: ಇನ್ನೆರಡು ನೋಟ

ಡಾ ವಿಜಯಾ ಅವರ ಆತ್ಮಚರಿತ್ರೆಯ ಮೊದಲ ಭಾಗ ಇತ್ತೀಚಿಗೆ ಬಿಡುಗಡೆಯಾಗಿದೆ. 

 ಆ ಕೃತಿ ‘ಕುದಿ ಎಸರು’ 

ಈ ಬಗ್ಗೆ ‘ಅವಧಿ’ಯಲ್ಲಿ ಎರಡು ನೋಟಗಳನ್ನು ಪ್ರಕಟಿಸಲಾಗಿತ್ತು.

ಪ್ರತಿಭಾ ನಂದಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ 

“ಕೊಂಚ ಸ್ವಾತಂತ್ರ್ಯ ಮತ್ತು ಸುಖ”
ಪ್ರಾಯಷಃ ಇದು ಆರ್ಥಿಕ ಮತ್ತು ಲೈಂಗಿಕ ಸ್ವಾತಂತ್ರ್ಯಗಳನ್ನೇ ದೃಷ್ಟಿಯಾಗಿಟ್ಟುಕೊಂಡು ಹೇಳಿರಲಿಕ್ಕೂ ಸಾಕು ಎಂದು ಊಹಿಸಬಹುದು.

ಬಹುತೇಕ ಹೆಣ್ಣುಮಕ್ಕಳು ಸಿಕ್ಕಿಹಾಕಿಕೊಳ್ಳುವುದು ಹಣ ಮತ್ತು ಸಖ್ಯದ ವಿಷಯದಲ್ಲೇ. ಮೇಲ್ವರ್ಗಗಳ ಸಂಪ್ರದಾಯಸ್ಥರಲ್ಲಿ ಇರುವ ಶೀಲದ ಬಗೆಗಿನ ಪರಿಕಲ್ಪನೆ ತಳವರ್ಗದವರಿಗಿಂತ ಭಿನ್ನ ಎಂಬುದನ್ನೂ ಅನೇಕರ ಬರವಣಿಗೆಗಳಲ್ಲಿ ಗಮನಿಸಿದ್ದೇನೆ. ಗಂಡನೇ ದೈವವಾಗಿದ್ದಾಗಲೂ ಪರಪುರುಷರ ಸಂಗ ಮಾಡಿದವರನ್ನು ಹಗುರವಾಗಿ ತೆಗೆದುಕೊಳ್ಳುವವರು, ಅದೇನೂ ಕ್ಷಮಿಸಲಾರದ ಅಪರಾಧವಲ್ಲವೆಂದು ಪರಿಗಣಿಸುವವರೂ ತಳವರ್ಗದಲ್ಲಿ ಹೆಚ್ಚು ಕಾಣಸಿಗುತ್ತಾರೆ. ಆದರೆ ಇದನ್ನೇ ಸುಖ ಎನ್ನಬಹುದೇ..?

ಇನ್ನು ದುಡಿದೇ ಉಣ್ಣಬೇಕಾದ ಅನಿವಾರ್ಯತೆಯೂ ತಳವರ್ಗದ ಮಹಿಳೆಯರಿಗೆ ಎಷ್ಟೋ ಬಾರಿ ಅನಿವಾರ್ಯ. ಹಾಗೆ ದುಡಿದಿದ್ದನ್ನೂ ಅನೇಕ ಬಾರಿ ಗಂಡನೋ, ಮಕ್ಕಳೋ ಕಸಿದುಕೊಳ್ಳುವುದೂ ಕೂಡಾ ಕಂಡುಬಾರದ್ದೇನಲ್ಲ. ಸಂಪಾದಿಸಿಯೂ ಊಟಕ್ಕೆ ತತ್ವಾರವಿರುವ ಅನೇಕ ಹೆಣ್ಣುಮಕ್ಕಳು ಕಾಣಸಿಗುತ್ತಾರೆ.. ಇದನ್ನು ಸ್ವಾತಂತ್ರ್ಯ ಎನ್ನಬಹುದೇ..?

“ಮೇಲುಜಾತಿಗಳವರ ಹಾಸಿಗೆಯಲ್ಲೇ…”. ಎಂಬುದಂತೂ ತುಂಬಾ ಕ್ರೂರವಾದ ವಾಕ್ಯ.
ಹೆಣ್ಣುಗಂಡು ಇಷ್ಟಪಟ್ಟೋ ಮತ್ತಾವ ಲಾಭದ ಕಾರಣಕ್ಕೋ ಜೊತೆಯಾದರೆ ಅದನ್ನೂ ವರ್ಗಭೇದದ ದೃಷ್ಟಿಯಿಂದ ನೋಡುವುದು ತೀರ ಅನ್ಯಾಯ. ಈ ರೀತಿಯ ಜಡ್ಜಮೆಂಟ್ ನ್ನು ಇಷ್ಟು ಸುಲಭಕ್ಕೆ ಪುರುಷ ದೃಷ್ಟಿಕೋನ ಮಾತ್ರ ಕೊಡಬಲ್ಲುದೇನೋ.. ಇವೆಲ್ಲ ಮನೋಭಾವಗಳು ಬದಲಾಗುವುದು ಯಾವಾಗ..?

ವೈವಿಧ್ಯಮಯ ಸಮಾಜ ಗೈರಾಗುವುದು ಗಂಡಸರ ಬರವಣಿಗೆಯಲ್ಲೂ ಆಗಬಹುದು.
ಸೀಮಿತ ವಲಯದ ಬದುಕು ಹೀಗೆ ಮನುಷ್ಯರನ್ನು ಮಿತಗೊಳಿಸುವ ಸಾಧ್ಯತೆಗಳಿವೆ. ವಿಶಾಲ ದೃಷ್ಟಿಕೋನದ ಗ್ರಹಿಕೆಯ ಕೊರತೆ ಹೆಣ್ಣುಗಂಡು ಇಬ್ಬರಲ್ಲೂ ಇರಬಹುದಲ್ಲವೇ..? ಇಲ್ಲಿ ಲಕ್ಷ್ಮೀಪತಿ ಕೋಲಾರ ಅವರು ವಿಜಯಮ್ಮನವರ ಬಗ್ಗೆ ಬರೆಯುತ್ತಿರುವುದರಿಂದ ಇದನ್ನು ಮಹಿಳೆಯರಿಗೇ ಹೇಳಿದ್ದಾರೆ ಎಂಬ ಭಾವನೆ ಬರಬಹುದು, ಅಷ್ಟೇ.

-ಸುಧಾ ಚಿದಾನಂದಗೌಡ 

“ತೀರಾ ಅಪರೂಪಕ್ಕೆ ಅವರು ಕಾಣಿಸಿಕೊಂಡದ್ದೂ ಮೇಲುಜಾತಿಗಳವರ ಹಾಸಿಗೆಯಲ್ಲೇ…”. ಎಂಬುದು ಜನರಲ್ ಹೇಳಿಕೆ ಅಲ್ಲ. ಅದು ಕೇವಲ ಈ ಪುಸ್ತಕದ ಒಳಗಿನ ಚೌಕಟ್ಟಿಗೆ ಸೀಮಿತವಾದದ್ದು ಮತ್ತು ಅದು ಕ್ರೌರ್ಯ ಅನ್ನಿಸಿದ್ದರಿಂದಲೇ ಉಲ್ಲೇಖಿಸಿದ್ದು.

ಜೊತೆಗೆ, ‘ಅವಧಿ’ ಇಲ್ಲಿ ಪ್ರಕಟಿಸಿರುವ ನನ್ನ ಫೇಸ್ ಬುಕ್ ಟಿಪ್ಪಣಿಯು ಪುಸ್ತಕ ಓದಿದ ತಕ್ಷಣ ನನಗೆ ಹೊಳೆದ ಸಂಗತಿಗಳೇ ಹೊರತು ಏನನ್ನೋ ಉದ್ದೇಶಪೂರ್ವಕವಾಗಿ ಹೇಳಹೊರಟ ಹೇಳಿಕೆ ಅಲ್ಲವೇ ಅಲ್ಲ. ಬದುಕಿಗೆ ಸಿಲಬಸ್ ಇಲ್ಲ ನಿಜ. ಆದರೆ ಒಂದು ಆತ್ಮಕತೆಯು ನಡೆದುಹೋಗಿರುವ ಒಂದು ಬದುಕಿನ ಸಿಲಬಸ್ ನ್ನು ಓದುಗನಿಗೆ ತೆರೆದು ತೋರಿಸುತ್ತದೆ.

ಸಹಜವಾಗಿಯೇ ಅಲ್ಲಿ ಏನೇನು ಎಷ್ಟೆಷ್ಟು ಇತ್ತೆಂಬ ಲೆಕ್ಕಾಚಾರ ಓದುಗನಿಗೆ ಅವನ ಮಿತಿಯಲ್ಲಿ ಸಿಗುತ್ತದೆ ಅಲ್ಲವೇ? ಅಂತಹದೇ ಒಂದು ಓದುಗ ಪ್ರತಿಕ್ರಿಯೆ ಟಿಪ್ಪಣಿ ಅದು.

ರಾಜಾರಾಂ ತಲ್ಲೂರು.

‍ಲೇಖಕರು avadhi

29 April, 2017

1 Comment

  1. ಸುಧಾ ಚಿದಾನಂದಗೌಡ

    ಧನ್ಯವಾದ ರಾಜಾರಾಮ್ ತಲ್ಲೂರ್ ಸರ್..
    ನಿಮ್ಮಿಂದ ಈ ಉತ್ತರವನ್ನೇ ನಿರೀಕ್ಷಿಸಿದ್ದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading