ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ವಾರದ ಕಥೆ : ಶ್ರೀಶೈಲ ಮಲ್ಲಿಕಾರ್ಜುನ ಹೇರ್ ಕಟ್ಟಿಂಗ್ ಸಲೂನ್


ಮಧ್ಯಾಹ್ನದ ಊಟ ಮುಗಿಸಿ ಎಂಜಲುಗೈಯನ್ನು ತೊಳೆದುಕೊಳ್ಳುತ್ತಿದ್ದಂತೆಯೇ ಯಾರೋ ಬಾಗಿಲು ಬಡಿದ ಸದ್ದು ಕೇಳಿಸಿತು. ಅದೂ ಒಂದೇಒಂದು ಸಲ. ಪುನಃ ಮೌನ. ಆ ದಿವಸ ಶನಿವಾರವಾದ್ದರಿಂದ ಬೀದಿಯಲ್ಲಿ ಕ್ರಿಕೆಟ್ ಆಡುತ್ತಿರುವ ಹುಡುಗರು ಎಸೆದ ಚೆಂಡು ಬಾಗಿಲಿಗೆ ತಗುಲಿರಬಹುದೆಂದು ಭಾವಿಸಿದ ಹೆಂಡತಿ ಅವರನ್ನು ಶಪಿಸುತ್ತ ಎಂಜಲು ತಟ್ಟೆಯನ್ನು ಎತ್ತಿಕೊಂಡು ಬಚ್ಚಲಿಗೆ ಹೋದಳು. ಮೇಲೇಳುತ್ತಿದ್ದಂತೆಯೇ ಪುನಃ ಬಾಗಿಲು ಬಡಿದ ಸದ್ದಾಯಿತು, ಅದೂ ಎರಡು ಸಲ. ಅದು ಕ್ರಿಕೆಟ್ಟಿನ ಚೆಂಡು ಬಡಿದ ಸದ್ದಲ್ಲವೇ ಅಲ್ಲವೆಂದು ಖಾತರಿಯಾಯಿತು. ಬಡಿಯುತ್ತಿರುವುದು ನಿಸ್ಸಂದೇಹವಾಗಿ ಯಾರೋ!
ಕಳೆದವಾರ ಪೋಲಿಸ್ ಬಡಾವಣೆಯಲ್ಲಿ ನಿವೃತ್ತ ಎಸೈ ಮದಕರಿಯವರನ್ನು ಹಾಡುಹಗಲೇ ಕೊಲೆ ಮಾಡಿದಂದಿನಿಂದ ಅಪರಿಚಿತರನ್ನು ಸಂದೇಹಿಸುವುದು ಅನಿವಾರ್ಯವಾಗಿರುವುದು. ಇತ್ತೀಚಿಗೆ ಹಗಲು ತನ್ನ ಗೌರವವನ್ನು ಕಳೆದುಕೊಂಡಿದೆ, ಬಾಗಿಲನ್ನು ಭದ್ರಪಡಿಸದೆ ಇರಲಾಗುತ್ತಿಲ್ಲ, ಅದೂ ಪೋಲಿಸ್ ಇಲಾಖೆಯ ಅಹರ್ನಿಶಿ ಒತ್ತಾಯದಿಂದಾಗಿ, ನಾಯಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಸಾಧ್ಯವಾದರೆ ನಾಯಿ ಸಾಕುವುದನ್ನು ಮರೆಯದಿರಿ ಎಂಬ ಸಲಹೆ ಸಹ.
ನಿನ್ನೆ ದಿವಸ ನಾಯಿ ಕುರಿತಂತೆ ನಮ್ಮಿಬ್ಬರ ನಡುವೆ ಚರ್ಚೆ ನಡೆಯಿತು, ಆಪೇಕ್ಷಿಸಿದೊಡನೆ ಮಿತ್ರ ಹಾಗೂ ನಾಯಿ ತಜ್ಞ ರಾಜೇಂದ್ರ ಹವಲ್ದಾರ್ ನಾಯಿಗಳ ವಿವರವಿದ್ದ ಬ್ರೋಚರ್ ಮನೆವರೆಗೆ ಬಂದು ಕೊಟ್ಟಿದ್ದ, ಲ್ಯಾಬ್ರಡಾರ್ ಆಲ್ಸೇಷಿಯನ್, ಜರ್ಮನ್ ಶಪರ್ಡ್ಡ ಆಸ್ಟ್ರೇಲಿಯನ್ ರಿಟ್ರೀವರ್ ಇವೇ ಮೊದಲಾದ ಜಾತಿನಾಯಿಗಳ ಬಗ್ಗೆ ಕಿರುಉಪನ್ಯಾಸವನ್ನು ನೀಡಿದ್ದ ಆಕರ್ಷಕವಾಗಿ. ಎಲ್ಲರೊಂದಿಗೆ ಸ್ನೇಹದಿಂದಿರುವ ಲ್ಯಾಬ್ರಡಾರನ್ನಾಗಲೀ, ಪುಟ್ಟದೇಹದ ಚುರುಕುಬುದ್ದಿಯ ಪೊಮೊರೇಯನ್ ಜಾತಿಯ ನಾಯಿಗಳನ್ನು ಯಾವ ಕಾರಣಕ್ಕೂ ಸಾಕಬೇಡಿ ಎಂದು ಸಲಹೆ ನೀಡಿದ್ದ.
ಎಸೈ ಕೊಲೆಯಾದ ಕ್ಷಣದಿಂದ ಆಲ್ಸೇಷಿಯನ್ ಜರ್ಮನ್ ಶಪರ್ಡ್ ಗಳಿಗೆ ಬೇಡಿಕೆ ಹೆಚ್ಚಿರುವುದಂತೆ, ತನ್ನ ಬಳಿ ಇದ್ದ ನಾಯಿಗಳೆಲ್ಲ ಬಿಕರಿಯಾಗಿರುವವಂತೆ, ನಾಯಿಗಳನ್ನು ಕೂಡಲೆ ಕಳಿಸುವಂತೆ ಚೆನೈ ಮುಂಬಯಿ ಕೇಂದ್ರಗಳಿಗೆ ಆರ್ಡರ್ ನೀಡಿರುವನಂತೆ, ಕನಿಷ್ಟಪಕ್ಷ ಹತ್ತು ನಾಯಿಮರಿಗಳ ಪಾರ್ಸಲ್ ವಾರದೊಳಗೆ ಬರುವುದಂತೆ, ಇಷ್ಟಪಟ್ಟಲ್ಲಿ ಅವುಗಳ ಪೈಕಿ ಒಂದನ್ನು ರಿಜರ್ವ ಮಾಡುವನಂತೆ, ತಾನೋ ನಾಯಿಗಳ ಮಾರಾಟದ ಮೇಲೆ ಬದುಕುತ್ತಿರುವವನು, ಅಷ್ಟೋ ಇಷ್ಟೋ ಮುಂಗಡ ನೀಡಿ ಕಾಯ್ದಿರಿಸುವಂತೆ ಕೇಳಿಕೊಂಡ, ಆದರೆ ಪತ್ನಿ ಒಂದೆರಡು ದಿವಸ ಕಳೆಯಲಿ ಎಂದು ಗೋಡೆ ಮೇಲೆ ದೀಪವಿರಿಸಿದಂತೆ ಹೇಳಿದಳು. ಆಯ್ತು ನಿಮ್ಮಿಷ್ಟ ಎಂದು ಹೇಳಿ ಹೊರಟುಹೋದ.
ಹಿಂದಿನ ದಿವಸ ರಾತ್ರಿ ಕಳ್ಳರು ನಿವೃತ್ತ ಪ್ರಿನ್ಸಿಪಾಲ್ ಜೇಕಬ್ರವರ ಮನೆಯ ಬಾಗಿಲು ಮುರಿಯಲು ಪ್ರಯತ್ನಿಸಿ ಅವರ ಸಾಕು ನಾಯಿ ಬೊಗಳಿದೊಡನೆ ಪಲಾಯನ ಮಾಡಿದರೆಂಬ ಪುಕಾರು ಮೂರನೆ ಕ್ರಾಸಿನಲ್ಲಿ ಕಾಣಿಸಿಕೊಂಡಿತು, ಆಗ ಈಕೆಗೆ ನಾಯಿ ಮಹತ್ವ ಅರ್ಥವಾಯಿತು, ಒಂದೆರಡು ಸಾವಿರ ಮುಂಗಡ ಕೊಟ್ಟಿದ್ದರೆ ಛಲೋ ಇರ್ತಿತ್ತು ಎಂದು ಪೇಚಾಡಿದಳು, ನಿಮ್ಮ ಫ್ರೆಂಡನ್ನು ಕೇಳ್ರಿ ಎಂದು ಒತ್ತಾಯಿಸಿದಳು, ಫೋನಲ್ಲಿ ಸಂಪರ್ಕಿಸಿದ್ದಕ್ಕೆ ರಾಜೇಂದ್ರ ಅಯ್ಯೋ ಅಡ್ವಾನ್ಸಿಗಿಂತ ಮುಖ್ಯವಾಗಿ ನಿನ್ನೇನೆ ಹೇಳಬಹುದಿತ್ತಲ್ಲ! ಐದು ಹತ್ತು ಸಾವಿರ ಅಡ್ವಾನ್ಸ್ ಕೊಟ್ಟಿರೋರೇ ಐವತ್ತು ಜನರಿದ್ದಾರೆ, ಚೆನೈನಿಂದ ಮುಂದಿನವಾರ ಬರ್ತಿರೋದು ಇಪ್ಪತ್ತೇ ಮರಿಗಳು. ಇನ್ನೊಂದೆರಡು ವಾರದಲ್ಲಿ ಮುಂಬಯಿಯಿಂದ ಕನಿಷ್ಟಪಕ್ಷ ಇಪ್ಪತ್ತೈದು ಜರ್ಮನ್ ಶಪಡ್ರ್ಸ ಬರಬಹದು, ಅಲ್ಲಿವರೆಗೆ ಸ್ನೇಹಿತರಾದ ನೀವು ಕಾಯಲೇಬೇಕು, ಈಗ ಅರ್ಜೆಂಟ್ ಬೇಕಿದ್ದರೆ ರ್ಯಾಟ್ ಕಿಲ್ಲರಿದೆ, ಆದ್ರೆ ಅದು ಕಾಸ್ಟ್ಲಿ, ಮರೀನೆ ಐವತ್ಸಾರಾಗ್ತದೆ, ಅದರ ಮಂಥ್ಲೀ ಎಕ್ಸಪೆಂಡಿಚರ್ ಎನಿಲ್ಲಾಂದ್ರು ಟ್ವೆಂಟಿ ಥೌಜಂಡು, ಅದೂ ಅಲ್ಲದೆ ಅದು ತುಂಬಾನೆ ಅಗ್ರೆಸಿವ್, ಒಮ್ಮೆ ಕಚ್ಚಿತಂದ್ರೆ ಡೆತ್ ಗ್ಯಾರಂಟಿ ಎಂದು ಹೇಳಿದ್ದು ಅನಾವಶ್ಯಕ ಅನ್ನಿಸಲಿಲ್ಲ. ಕೇಳಿಸಿಕೊಂಡ ಹೆಂಡತಿ ವಿಷಣ್ಣ ನಗೆ ನಕ್ಕಳು.
ಅಂಥ ಕಾಸ್ಟ್ಲಿ ನಾಯಿಗಳನ್ನು ಸಾಕೋಕೆ ನಾವೇನು ಮೈನ್ಸ್ ಒನರುಗಳೇನು! ನಮಗೆ ಬರ್ತಿರೋ ಸಂಬಳದಲ್ಲಿ ಎರಡು ಮೂರು ಸಾವಿರ ಬೆಲೆಯ ನಾಯಿ ಸಾಕು ಎಂದು ಹೇಳಿದ್ದಳು. ಅದಕ್ಕಿದ್ದು ನಾನು ಅಂದಮೇಲೆ ಅವೆಲ್ಲ ನಮಗೇಕೆ. ನಾಯಿ ನಾಯೀನೆ, ಬೀದಿ ನಾಯಿ ಸಾಕಿದರೆ ಖರ್ಚೂ ಕಡಿಮೆ, ಪುಣ್ಯಾನು ಬರುತ್ತೆ, ಏನಂತೀಯ! ಎಂದು ಹೇಳಿದೆ, ಕಾರಣ ಸ್ಕೂಲಿಗೆ ಹೋಗುವ ದಾರಿಯಲ್ಲಿ ಅದೂ ಡ್ರೈನೇಜ್ ಪೊಟರಿಯಿಂದ ಕೆಲವು ನಾಯಿಮರಿಗಳು ಅಸಹಾಯಕತೆಯಿಂದ ಕತ್ತು ಚಾಚಿ ಅರಚುವುದನ್ನು ನೋಡಿದ್ದೆ, ನನ್ನ ಸಲಹೆಯನ್ನು ಆಕೆ ಸಮ್ಮತಿಸಿದಳು. ಬೇಗನೆ ತಗೊಂಡು ಬನ್ನಿ ಎಂದೂ ಒತ್ತಾಯಿಸಿದ್ದಳು.
ಲಗುಬಗೆಯಿಂದ ಸ್ಥಳ ತಲುಪಿದೆ, ತಾಯಿನಾಯಿ ತನ್ನ ಮರಿಗಳಿಗೆ ಹಾಲುಣ್ಣಿಸುತ್ತ ಮಲಗಿತ್ತು. ಅವುಗಳನ್ನು ಅಪಹರಿಸಲು ಕೆಲವು ಹುಡುಗರು ಅಲ್ಲಲ್ಲಿ ಹೊಂಚಿ ನಿಂತಿದ್ದರು ಭಯದಿಂದ. ನಾನೂ ಅವರೊಂದಿಗೆ ಸೇರಿಕೊಂಡೆ, ಮುಂಜಾಗ್ರತೆಯಿಂದ ಇಟ್ಟುಕೊಂಡಿದ್ದ ಕೆಲವು ಬಿಸ್ಕತ್ತುಗಳನ್ನು ಕೈಯಲ್ಲಿ ಹಿಡಿದುಕೊಂಡು ಮೆಲ್ಲಗೆ ಹತ್ತಿರ ಹೋದೆ, ಅದು ಸ್ವಾಭಿಮಾನ ಅನುಮಾನದಿಂದ ನನ್ನ ಕಡೆ ನೋಡಿತಲ್ಲದೆ ಗುರುಗುಟ್ಟಿ ಪ್ರತಿಭಟಿಸಿತು. ಬಿಸ್ಕತ್ತು ಚೂರುಗಳನ್ನು ಮುಂದೆ ಎಸೆದು ರಾಜಿ ಕುದುರಿಸಿಕೊಂಡೆ, ಮೆಲ್ಲಗೆ ಅದರ ವ್ಯಾಧಿಗ್ರಸ್ತ ಚರ್ಮವನ್ನು ನೇವರಿಸಿ ಹತ್ತಿರವಾದೆ, ಅದಕ್ಕೆ ಸನಿಹದಲ್ಲಿ ತುದಿಗಾಲಲ್ಲಿ ಕುಳಿತೆ, ನೋಡಿದೆ, ಎಣೆಸಿದೆ. ತಾಯಿಯ ಮೊಲೆಗಳ ಸಂಖ್ಯೆಗಿಂತ ಮರಿಗಳ ಸಂಖ್ಯೆಯೇ ಅಧಿಕವಿತ್ತು, ಮರಿಗಳಾಗಿದ್ದರೂ ಒಲಂಪಿಕ್ ಕ್ರೀಡಾಪಟುಗಳಂತೆ ಪೈಪೋಟಿಯಿಂದ ಮೊಲೆಯಿಂದ ಮೊಲೆಯನ್ನು ಆಕ್ರಮಿಸಿ ಬಾಯಲ್ಲಿರಿಸಿಕೊಂಡು ಜಿಬುಕುತ್ತಿದ್ದವು, ಒಂದೊಂದರದೂ ಒಂದೊಂದು ಬಣ್ಣ, ಒಂದರ ಬಣ್ಣ ಕಪ್ಪು, ಇನ್ನೊಂದರ ಬಣ್ಣ ಬೂದು, ಮತ್ತೊಂದರ ಮೈಮೇಲೆ ಅಲ್ಲಲ್ಲಿ ಕಪ್ಪು ಗೆರೆಗಳು, ಮಗುದೊಂದರ ಮೈಯೋ ಅಚ್ಚಬಿಳಿ.
ಬಿಳಿವರ್ಣದ ಮರಿಯನ್ನು ಒಯ್ದಲ್ಲಿ ಮನೆಯಲ್ಲಿರುವ ಮಗ ಅದರ ಸಂಗಡ ಆಡಿಕೊಳ್ಳುತ್ತಾನೇನೋ ಸರಿ, ಆದರೆ ಕಳ್ಳರು ಕತ್ತಲಲ್ಲಿ ಅದನ್ನು ಗುರುತಿಸದೆ ಇರಲಾರರು, ಆದ್ದರಿಂದ ಕಪ್ಪುವರ್ಣದ ಮರಿಯನ್ನೇ ಒಯ್ಯುವುದೇನೋ ಸರಿ, ಆದರೆ ನಮ್ಮ ಮನೆದೇವರು ವೀರಭದ್ರ, ನಮ್ಮ ವಂಶದಲ್ಲಿ ಕಪ್ಪುಬಣ್ಣ ನಿಷೇಧ. ಅಲ್ಲದೆ ಅದು ಅಶುಭಸೂಚಕ ಬೇರೆ. ಆದ್ದರಿಂದ ಮೌಲ್ಯರಹಿತ ಅದನ್ನು ಒಯ್ಯುವುದೇ ಸರಿ ಎಂದು ನಿರ್ಧರಿಸಿದೆನಲ್ಲದೆ ದೃಷ್ಟಿನೆಟ್ಟು ನೋಡಿದೆ, ಗುರುಗುಟ್ಟುತ್ತಿರುವ ಅದು ತುಂಬ ಅಗ್ರೆಸಿವ್ವಿರುವಂತಿದೆ, ಮೆಲ್ಲಗೆ ಅದರ ಕೋಮಲ ಚರ್ಮವನ್ನು ನೇವರಿಸಿ ರೋಮಾಂಚನಗೊಂಡೆ, ಮೆಲ್ಲಗೆ ಮೊಲೆಯಿಂದ ಬೇರ್ಪಡಿಸಲು ಪ್ರಯತ್ನಿಸಿ ವಿಫಲನಾದೆ. ಅವುಗಳ ಹಸಿವೆ ಹಿಂಗುವವರೆಗೆ ಕಾಯುವುದೋ, ಅಷ್ಟರಲ್ಲಿ ಅಲ್ಲಲ್ಲಿದ್ದ ಹುಡುಗರು ರ್ರೀ ಅಂಕಲ್ ಅದು ನಂದೂರಿ, ಇದು ನಂದೂರಿ ಎಂದು ನಿಂತಲ್ಲಿಂದಲೇ ಹಕ್ಕು ಚಲಾಯಿಸಿದರು. ಫಜೀತಿಗಿಟ್ಟುಕೊಂಡಿತು. ಅವರ ಕಡೆ ದೈನ್ಯತೆಯ ದೃಷ್ಟಿ ಹರಿಸಿದೆ. ಹೇಗೋ ತಾನು ಅಂಕಲ್ ಸ್ಥಾನಮಾನದಲ್ಲಿರುವವನು, ಕಬ್ಜಾ ಮಾಡಿದರಾಯಿತು.
ತುಸುಹೊತ್ತಾದ ಬಳಿಕ ಮರಿಗಳ ಹಸಿವು ಹಿಂಗಿತೋ, ಮೊಲೆಯಲ್ಲಿನ ಹಾಲು ತೀರಿತೋ, ತಾಯಿನಾಯಿ ಮೊಲೆಯುಣ್ಣುವ ಪರಿಗೆ ರೋಸಿತೋ, ದಿಗ್ಗನೆದ್ದು ತನ್ನ ಮೊಲೆಗಳನ್ನು ಉಪಸಂಹರಿಸಿಕೊಂಡಿತಲ್ಲದೆ ಕೋಪಕೆರಳಿಸಿಕೊಂಡಿತು, ತನ್ನ ಮೂತಿಯನ್ನು ವಿಲಕ್ಷಣವಾಗಿ ತೆರೆದು ಕಚ್ಚುವಂತೆ ನಟಿಸಿತು, ಹೆದರಿದ ಕುನ್ನಿಗಳು ಮೊಲೆಗಳಿಂದಲೂ ತಮ್ಮ ಜೀವದಾತೆಯ ಸಾನ್ನಿಧ್ಯದಿಂದಲೂ ದೂರ ಸರಿದು ಅವೆಲ್ಲ ಸಭೆ ಸೇರಿದವು, ಮುಖವನ್ನು ಮುಗಿಲಿಗೆ ಮುಖಮಾಡಿ ಕೊಯ್ಯೋ ಕೊಯ್ಯೋ ಎಂದು ಊಳಿಡುತ್ತ ತಮ್ಮ ಅಸಹಾಯಕತೆಯನ್ನು ಆ ಭಗವಂತನಲ್ಲಿ ತೋಡಿಕೊಳ್ಳಲಾರಂಭಿಸಿದವು.
ಇದೇ ಸುವರ್ಣಾವಕಾಶವೆಂದು ಭಾವಿಸಿ ಹುಡುಗರು ಮೈಚಳಿಬಿಟ್ಟು ಹತ್ತಿರಕ್ಕೆ ಓಡಿ ಬಂದರು. ಅದು ನನ್ನದು ಇದು ನನ್ನದು ಎಂದು ಪರಸ್ಪರ ಕಿತ್ತಾಡಲಾರಂಭಿಸಿದರು. ಅವರೆಲ್ಲರ ಗುರಿಯಿದ್ದದು ಬಿಳಿಕುನ್ನಿಯ ಮೇಲೆ. ದೈಹಿಕವಾಗಿ ಸದೃಢವಿದ್ದ ಹುಡುಗನೋರ್ವ ಶ್ವೇತವರ್ಣದ ಕುನ್ನಿಯನ್ನೆತ್ತಿಕೊಂಡೊಡನೆ ಉಳಿದೆಲ್ಲ ಮಕ್ಕಳು ಕೆರಳಿದವು. ಅವರಲ್ಲಿ ಒಬ್ಬ ಅದರ ಮುಂಗಾಲುಗಳನ್ನು ಹಿಡಿದುಕೊಂಡರೆ ಇನ್ನೋರ್ವ ಅದರ ಹಿಂಗಾಲುಗಳನ್ನು ಹಿಡಿದುಕೊಂಡ. ಮತ್ತೋರ್ವ ಅದರ ಕಿವಿಗಳನ್ನು ಹಿಡಿದು ಜಗ್ಗಾಡಲಾರಂಭಿಸಿದ, ಕುನ್ನಿ ಹಿಂಸೆ ತಾಳಲಾರದೆ ಕುಯ್ಯೋ ಎಂದು ಅರಚಲಾರಂಭಿಸಿತು. ಹಸಿಹಸಿ ಬಾಣಂತಿ ಶುನಕ ಅಸಹಾಯಕತೆಯಿಂದ ಅವರತ್ತ ದೈನ್ಯತೆಯಿಂದ ನೋಡಿತೇ ಹೊರತು ಬೊಗಳಿ ಪ್ರತಿಭಟಿಸುವ ಗೋಜಿಗೆ ಹೋಗಲಿಲ್ಲ. ಪ್ರತಿಭಟಿಸುತ್ತಿತ್ತೋ ಏನೋ, ಆದರೆ ಅವರೆಲ್ಲ ಸೇರಿ ತನ್ನನ್ನು ಶಿಕ್ಷಿಸುವರೆಂಬ ಭಯ ಅದಕ್ಕೆ. ನಾನೂ ಮೆಲ್ಲಗೆ ಕಪ್ಪುಕುನ್ನಿಯನ್ನು ಎರಡೂ ಕೈಗಳಿಂದ ಹಿಡಿದುಕೊಂಡೆ, ಅದರ ನುಣುಪು ಶರೀರವನ್ನು ಕೈಯಬೆರಳುಗಳಿಂದ ನೇವರಿಸಿದೆ. ನಿಧಾನವಾಗಿ ಹಿಂದೆ ಸರಿದೆ ತುಸು ಆತಂಕದಿಂದ, ಆದರೆ ಚತುಷ್ಪಾದಿಯಿಂದ ಯಾವುದೇ ಪ್ರತಿರೋಧ ಬರಲಿಲ್ಲ. ಬಳಿಕ ಮನೆ ಕಡೆ ಹೊರಟೆ.
ಬೀದಿಯಲ್ಲಿ ಕೆಲವರು ನನ್ನ ಕಡೆ ಆಶ್ಚರ್ಯದಿಂದ ನೋಡಿದರೆ, ಇನ್ನೂ ಕೆಲವರು ನಿಮ್ಮ ಕೈಲಿರೋದು ಜವಾರೀದೋ, ಜಾತೀದೋ ಎಂದು ಕೇಳುತ್ತ ಹತ್ತಿರ ಬಂದು ತಾವೂ ಅದನ್ನು ಸ್ಪರ್ಶಿಸಿ ಹೋಗಲಾರಂಭಿಸಿದರು. ಯಾರು ಹೇಳಿದ್ದರೇನೋ! ಕಾಂಪೌಂಡಾಚೆ ನಿಂತಿದ್ದ ಹೆಂಡತಿ ನನ್ನ ಚಲನವಲನದ ಮೇಲೆ ನಿಗಾಯಿರಿಸಿದ್ದಳು. ಅಂಗಳ ಪ್ರವೇಶಿಸಿದೊಡನೆ ಆಕೆಯ ಕೈಯಿಂದ ಕೊಸರಿ ಮಗ ನಾಯಿಮರಿ ನಾಯಿಮರಿ ಎಂದು ಕೂಗುತ್ತ ಓಡಿಬಂದ, ಅಲ್ಲದೆ ನನ್ನ ಕೈಯಿಂದ ಕುನ್ನಿಯನ್ನು ಬೇರ್ಪಡಿಸಲು ಪ್ರಯತ್ನಿಸಿ ವಿಫಲನಾದ. ಗೇಟ್ ದಾಟಿದೊಡನೆ ಹೆಂಡತಿ ಅದನ್ನು ಎತ್ತಿಕೊಂಡಳಲ್ಲದೆ ಅದರ ಹಿಂಗಾಲುಗಳನ್ನು ಎತ್ತಿ ಅಯ್ಯೋ ಹೆಣ್ಣೂರಿ, ಗಂಡಿರಲಿಲ್ವೇ! ಎಂದು ಉದ್ಗರಿಸಿದಳು. ಮನೆಗೆಲಸದ ಎಲ್ಲಮ್ಮ ಕಸಗುಡಿಸುತ್ತಲೇ ನಾಯಿಜಾತೀಲಿ ಗಂಡ್ಗಿಂತ ಹೆಣ್ಣೇ ಚುರುಕಮ್ಮೋರೆ, ದನದ ಡಾಟ್ರು ರಂಗಣ್ಣ ಹೇಳ್ತಿದ್ರು ಎಂದು ಹೇಳಿದ್ದನ್ನು ನಾವಿಬ್ಬರೂ ಅನುಮೋದಿಸಿದೆವು.
ಜೋಪಾನವಾಗಿ ಅದನ್ನು ನೆಲದ ಮೇಲಿಳಿಸಿದೆ, ಒಂದೆರಡು ಸುತ್ತು ತಿರುಗಿತು, ಕೀರಲು ಧ್ವನಿ ತೆಗೆದು ಬೊಗಳಲಾರಂಭಿಸಿತು, ಆತಂಕದಿಂದಾಗಿಯೋ, ಸಂತಸದಿಂದಾಗಿಯೋ! ಮಗ ಲೆಪ್ಟ್ಯಾಂಡು ಕೊಡು ರೈಟ್ಯಾಂಡು ಕೊಡು ಎಂದು ತರಭೇತಿ ನೀಡಲಾರಂಭಿಸಿದ. ಅಷ್ಟರಲ್ಲಿ ಅಕ್ಕಪಕ್ಕದ ಒಂದಿಬ್ಬರು ಬಂದು ಕಪ್ಪಗಿದ್ದರೂ ಲಕ್ಷಣವಾಗಿದೆ ಎಂದು ಹೊಗಳಿ ಹೋದರು. ಒಂದೆರಡು ತಾಸುಗಳ ಬಳಿಕ ಅದು ಮನೆಯ ವಾತಾವರಣಕ್ಕೆ ಹೊಂದಿಕೊಂಡಿತಲ್ಲದೆ ಚಪ್ಪಲಿಗೂಡನ್ನು ತನ್ನ ವಾಸಸ್ಥಳವನ್ನಾಗಿ ಪರಿವರ್ತಿಸಿಕೊಂಡಿತು. ಅದಕ್ಕೆ ತಾಯಿ ಮಗನೊಂದಿಗೆ ಚರ್ಚಿಸಿ ಅದಕ್ಕೆ ಟೈಗರ್ ಎಂದು ನಾಮಕರಣ ಮಾಡಿದಳು. ಟೈಗರ್ ಎಷ್ಟಿದ್ದರೂ ಮರಿ ತಾನೆ! ಎಲ್ಲಿ ಬೇಕಂದರಲ್ಲಿ ಅದು ಮಲಮೂತ್ರ ವಿಸರ್ಜನೆ ಮಾಡುತ್ತಿತ್ತಷ್ಟೆ, ಆರಂಭದಲ್ಲಿ ಗೊಣಗಾಡಿದ ಹೆಂಡತಿ ಸಹ ಅಯ್ಯೋ ಪಾಪ ಚಿಕ್ಕದು ಎಂದು ಅನುಕಂಪ ವ್ಯಕ್ತಪಡಿಸುತ್ತಲೇ ಅದರ ಸೇವೆಯನ್ನು ಮಾಡಲಾರಂಭಿಸಿದಳು. ಅದರೆ ಬಾಗಿಲು ಬಡಿದ ಸದ್ದನ್ನಾದರೂ ಕೇಳಿಸಿಕೊಂಡ ಬಳಿಕವೂ ಅದು ಗೂಡಿನಿಂದ ಹೊರಬರದಿರುವುದು, ಮಲಗಿದಲ್ಲಿಂದಲೇ ಬೊಗಳದಿರುವುದು ಕಂಡು ಬೇಸರಪಟ್ಟುಕೊಂಡಳು.ತನ್ನ ಕೆಲಸದ ನಡುವೆಯೇ ಅದರ ಬೇಜವಾಬ್ದಾರಿಯನ್ನು ಶಪಿಸಿದಳು, ನಾಳೆಯಿಂದ ಅದಕ್ಕೆ ಬೊಗಳೋದನ್ನಾದ್ರು ಕಲಿಸ್ರಿ ಎಂದು ನನಗೂ ಸಲಹೆ ನೀಡಿದಳು. ರಾತ್ರಿ ಪರ್ಯಂತ ಅದರ ಅರಣ್ಯರೋಧನ ಕೇಳಿಸುತ್ತಲೇ ಇತ್ತು, ನಡುನಡುವೆ ಪತ್ನಿ ಎಚ್ಚರಗೊಂಡು ಇನ್ನೂ ಮರಿ, ತಾಯಿಬಿಟ್ಟು ಇರೋದು ಕಷ್ಟ ಎಂದು ಹೇಳುತ್ತಿದ್ದಳು.
ಪುನಃ ಬಾಗಿಲು ಬಡಿದ ಸದ್ದು, ಇನ್ನೂ ಬಾಗಿಲು ತೆರೆಯದ ಕಾರಣಕ್ಕೋ, ಮನೆಯಲ್ಲಿ ಯಾರೂ ಇರಲಾರರೆಂದು ತಿಳಿದೋ ಸ್ವಲ್ಪ ಒರಟು ಒರಟಾಗಿ ಸದ್ದು ಕೇಳಿಸಿತು. ಕೂಡಲೆ ಹೋಗಿ ತೆರೆಯದಿದ್ದಲ್ಲಿ ಆ ವ್ಯಕ್ತಿ ಬಾಗಿಲನ್ನು ಮುರಿಯಲೂಬಹುದು, ಅಷ್ಟರಲ್ಲಿ ಕುನ್ನಿ ಹೋ ಎಂದರಚುತ್ತಿರುವುದು ಕೇಳಿಸಿತು, ಪರವಾಗಿಲ್ಲ, ಮೈಚಳಿಬಿಟ್ಟು ತನ್ನ ಕಾಯಕದ ಪ್ರಥಮಪಾಠವನ್ನು ಆರಂಭಿಸಿರುವಂತಿದೆ, ಲುಂಗಿಯನ್ನು ಸರಿಪಡಿಸಿಕೊಳ್ಳುತ್ತಲೇ ಹೋಗಿ ಚಿಲಕವನ್ನು ಸರಿಸಿದೆ. ಬಾಗಿಲು ತಂತಾನೆ ತೆರೆದುಕೊಂಡಿತು. ಆ ವ್ಯಕ್ತಿಯನ್ನು ಕಣಗಿಲೆಗಿಡದ ಪಕ್ಕದಲ್ಲಿದ್ದ ಪುಟ್ಟಕಿಟಿಕಿಯಿಂದ ಇಣುಕಿದ ಆಕೆ ರ್ರೀ ಎಂದು ಕೂಗಿದಳು, ಅದನ್ನು ಕೇಳಿಸಿಕೊಳ್ಳುತ್ತಲೇ ಕಣ್ಣಾಯಿಸಿದೆ, ಸಿದ್ದಲಿಂಗ!
ಜಾಲಿಗಿಡವನ್ನು ಹೋಲುವ ದೇಹದ, ಎಲುಬುಗಳು ಎದ್ದು ಕಾಣುವ ಮುಖದ, ದೈನ್ಯತೆ ಸೂಸುವ ಕಣ್ಣುಗಳ, ನೀಳನಾಸಿಕದ, ಅಲ್ಲಲ್ಲಿ ಬಿಳಿಗೂದಲಿರುವ ಮೀಸೆಯ ಸಿದ್ದಲಿಂಗ! ವಿಭೂತಿಪಟ್ಟೆಗಳನ್ನೆಳೆದುಕೊಂಡಿರುವ ನೊಸಲ, ಹಲವು ದಶಕಗಳ ಹಿಂದೆ ನನ್ನ ಸಹಪಾಠಿಯಾಗಿದ್ದ ಸಿದ್ದಲಿಂಗ! ತನ್ನ ಸಂಗಡ ಹಜಾಮತಿ ಪೆಟ್ಟಿಗೆ ಇರಬೇಕಿತ್ತು, ಆದರೆ ಅದಿಲ್ಲ. ವಿಚಿತ್ರವೆಂದರೆ ಅವನೊಂದಿಗೆ ತಾಯಿ ನಾಯಿ ಸಹ ಬಂದಿತ್ತು, ನೋಡಿದ್ದೇ ತಡ, ಅದು ತನ್ನ ಮರಿಯ ಮೈಯನ್ನು ನಾಲಗೆಯಿಂದ ನೆಕ್ಕಲಾರಂಭಿಸಿತು, ಅವೆರಡೂ ಪರಸ್ಪರ! ಅಷ್ಟರಲ್ಲಿ ಎಲ್ಲೆಲ್ಲಿಂದಲೋ ಬೀದಿಯೊಂದೇ ಅಲ್ಲದೆ ಬಡಾವಣೆಯ ಸಾಕು ನಾಯಿಗಳೆಲ್ಲ ಸೇರಿ ಒಟ್ಟಾಗಿ ಬೊಗಳತೊಡಗಿದವು. ಈ ಸಿದ್ದಲಿಂಗ ಮನೆತನಕ ಯಾಕೆ ಬಂದಿರಬಹುದು! ಪುನಃ ಹಣ ಕೇಳಲೇನಾದರೂ?
ಕುನ್ನಿಯ ಹಾಗೂ ಅದರ ತಾಯಿಯ ಪ್ರತಿಬಿಂಬಗಳನ್ನು ಕಣ್ಣಲ್ಲಿ ತುಂಬಿಕೊಂಡನಲ್ಲದೆ ನಿಟ್ಟುಸಿರುಬಿಟ್ಟನು, ಕೇಳದಿದ್ದರೂ ತಾನೆ ಇದನ್ನು ನಾವು ಸಾಕಿದ್ವಿ ಸಾ, ಆದ್ರೆ ಬೀದಿಪಾಲಾಗಿದ್ದೆ ಮನೆ ಕಡೆ ಸುಳಿಲೇ ಇಲ್ಲ, ನನ್ನ ನೆರಳು ಮೂಸಿ ಗುರುತಿ ಹಿಂಬಾಲಿಸಿಕೊಂಡು ನಿಮ್ಮ ಮನೆತನಕ ಬಂದಿದೆ, ಕುನ್ನೀನು ಇದರದ್ದಿಂಗೈತೆ, ಮನೆ ಅಂದ ಮ್ಯಾಲ ನಾಯಿ ಇರಲೇಬೇಕು ಸಾರ್, ಅದಲ್ಲದೆ ನಾರಾಯಣ ನಾಯಿ ರೂಪದಲ್ಲಿ ಮನೆ ಕಾಯ್ತಾನಂತೆ ಎಂದು ಹೇಳಿದ, ಅಷ್ಟರಲ್ಲಿ ಹೆಂಡತಿ ಬಟ್ಟಲಲ್ಲಿ ಹಾಲುಅನ್ನ ತಂದು ಅವುಗಳ ಮುಂದೆ ಸುರಿದಳೋ ಇಲ್ಲವೋ ತಾಯಿ ತನ್ನ ಮರಿಯನ್ನು ಗದರಿಸಿತಲ್ಲದೆ, ಅದನ್ನು ದೂರ ತಳ್ಳಿ ತಾನೊಂದೆ ತಿಂದು ಮುಗಿಸಿತು ಕ್ಷಣಾರ್ಧದಲ್ಲಿ. ಮರಳುವಾಗ ಸಂಜ್ಞೆ ಮಾಡಿದಳು, ಹಿಂದೆಯೇ ಹೋದೆ. ಅಲ್ಲೇ ಮಾತಾಡಿ ಕಳಿಸಿ, ದುಡ್ಡು ಕೇಳಿದರೂ ಕೇಳಬಹುದು, ಆದರೆ ಕೊಡಲಿಕ್ಕೆ ಮಾತ್ರ ಹೋಗಬೇಡಿ, ಕೊಟ್ಟಿರೋದಿನ್ನೂ ವಾಪಾಸು ಬಂದಿಲ್ಲ, ಆದರೆ ಪಡಸಾಲೆವರೆಗೆ ಮಾತ್ರ ಬಿಟ್ಟುಕೊಳ್ಳಬೇಡಿ, ನಾಡಿದ್ದೇ ಶ್ರಾವಣ ಸೋಮವಾರ, ಮನೆಯನ್ನು ತೊಳೆದಿದ್ದೀನಿ ಬೇರೆ ಎಂದು ಪಿಸುಗುಟ್ಟಿದಳು, ಆಕೆಯ ಧೋರಣೆ ಹಿಡಿಸಲಿಲ್ಲ, ಆದರೆ ಪ್ರತಿಯಾಗಿ ಏನನ್ನೂ ಹೇಳಲಾಗಲಿಲ್ಲ. ಬಾಲ್ಯದ ಗೆಳೆಯ, ಆ ಸಲಿಗೆಯಿಂದ ಅವನು ಒಳಗೆ ಬಂದಿರುವನು, ಕೀಳರಿಮೆಯಿಂದ ಬಾಗಿಲ ಪಕ್ಕ ಕುಳಿತಿರುವನು, ಅದೂ ಕ್ಷೌರಿಕರ ಸಹಜ ಭಂಗಿಯಲ್ಲಿ. ಕುರ್ಚಿಯಲ್ಲಿ ಕುಳಿತೆ, ಅಪಾದಮಸ್ತಕ ದಿಟ್ಟಿಸಿದೆ. ಆದರೆ ತನಗೆ ನನ್ನನ್ನು ನೇರವಾಗಿ ನೋಡುವ ಧೈರ್ಯವಿಲ್ಲ, ಮೇಲೂ ಕೆಳಗೂ ನೋಟವನ್ನು ಹರಿದಾಡಿಸಿ ಪಾರದರ್ಶಕ ನೆಲದಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಳ್ಳುತ್ತಿರುವನು.
(ಮುಂದುವರಿಯುವುದು…)

‍ಲೇಖಕರು avadhi

19 September, 2013

2 Comments

  1. Ganesh Nempe

    ಇದು ಕುಂ ವಿ ಸರ್ ಸ್ಟೈಲ್ 🙂 :)… ಅದ್ಭುತವಾಗಿದೆ ಕಥೆ.. ಎಷ್ಟೋ ದಿನದ ಮೇಲೆ ಒಳ್ಳೆ ಕಥೆ ಓದುವ ಅನುಭವವಾಯಿತು… ಮುಂದಿನ ವಾರಕ್ಕಾಗಿ ಕಾಯುವುದು ಅನಿವಾರ್ಯ.
    ಗಣೇಶ್ ನೆಂಪೆ

  2. Ganesh Nempe

    ನಾಳೆಯಿಂದ ಅದಕ್ಕೆ ಬೊಗಳೋದನ್ನಾದ್ರು ಕಲಿಸ್ರಿ ಎಂದು ನನಗೂ ಸಲಹೆ ನೀಡಿದಳು 🙂 🙂 🙂

Trackbacks/Pingbacks

  1. ಕುಂ ವೀ ವಾರದ ಕಥೆ : ಶ್ರೀಶೈಲ ಮಲ್ಲಿಕಾರ್ಜುನ ಹೇರ್ ಕಟ್ಟಿಂಗ್ ಸಲೂನ್ « ಅವಧಿ / avadhi - [...] ಕುಂ ವೀ ವಾರದ ಕಥೆ : ಶ್ರೀಶೈಲ ಮಲ್ಲಿಕಾರ್ಜುನ ಹೇರ್ ಕಟ್ಟಿಂಗ್ ಸಲೂನ್ September 26, 2013 by Avadhikannada (ಮೊದಲ ಭಾಗ ಓದಲು ಇಲ್ಲಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading