‘ವಿದುಷಿ’
ನನಗೆ ಮಾರ್ಕ್ಸ್ ಅಂಬೇಡ್ಕರೂ ಎಷ್ಟು ಇಷ್ಟವೋ ಶಂಕರಾಚಾರ್ಯರ ಸೌಂದರ್ಯಲಹರಿಯೂ ಅಷ್ಟೇ ಇಷ್ಟ. ಓದುತ್ತಲೇ ಇರಬೇಕು, ನೋಡುವ, ಓದುವ ನಡುವೆ ಭಿನ್ನಭೇದವೆಣಿಸಬಾರದು, ಇದು ನನ್ನ ಫಿಲಾಸಫಿ. ಈ ಕಾರಣಕ್ಕೆ ನಾನು ವಾರದಿನಮಾನ ಮನೆಯಲ್ಲಿರುವುದು ಕಡಿಮೆ. ಕರೆದ ಕಡೆ ಹೋಗುತ್ತೇನೆ, ಅರಿವಿಗೆ ದಕ್ಕಿದ್ದನ್ನು ಸಭಿಕರಿಗೆ ಹಂಚುತ್ತೇನೆ, ಕಣ್ಣೆಗೆಟುಕಿದ್ದನ್ನು ಓದುತ್ತೇನೆ, ನೋಡುತ್ತೇನೆ, ಕರ್ಣಪಟಲಕ್ಕೆಟುಕಿದ್ದನ್ನು ಆಲಿಸುತ್ತೇನೆ, ನನ್ನ ಮಾತಿನ ಮರುಜೋಡಣೆಯಿಂದ ಜಾಣನಾಗುತ್ತೇನೆ, ಪ್ರಾಂಜಲ ಮನಸ್ಸಿನಿಂದ ಒಡನಾಡುವುದರ ಮೂಲಕ ಸ್ನೇಹದ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತೇನೆ. ಹೀಗಾಗಿ ನಾಡಿನ, ದೇಶದ ಬಹುಪಾಲು ದೇವಸ್ಥಾನಗಳು, ಗಿರಿಕಂದರಗಳು, ಅರಣ್ಯಗಳು, ಬುಡಕಟ್ಟುಗಳು ಚಿರಪರಿಚಿತ. ಹ್ಹಾಂ! ಅಂದ ಹಾಗೆ ಮೂರುದಶಕಗಳ ಹಿಂದೆ ಮದುವೆಯಾಗಿದ್ದು ಯಮಸಂಧಿಯ ಹುಡುಗಿಯನ್ನು. ಕಾರಣ ಅಲ್ಲಿಗೆ ಹತ್ತಿರವಿರುವ ಬೇಲೂರ ಚೆನ್ನಕೇಶವ ದೇವಸ್ಥಾನವನ್ನು ಮತ್ತೆ ಮತ್ತೆ ನೋಡಬೇಕೆಂಬ ಹಂಬಲದಿಂದ.
ಯಮಸಂಧಿ! ಗ್ರಾಮವಾಚಕವೇ ವಿಚಿತ್ರ. ಯಗಚಿ ನದಿಗಂಟಕೊಂಡಿರುವ ಸುಂದರ ಹಳ್ಳಿ, ಮೇರೆಯಲ್ಲಿ ನಿಂತರೆ ಕನ್ನಡದ ಪ್ರಪ್ರಥಮ ಶಾಸನ ದೊರಕಿದ ಹಲ್ಮಿಡಿ, ಅದರಾಚೆ ಮುಳ್ಳಯ್ಯನಗಿರಿ, ಬಾಬಾಬುಡೆನ್ಗಿರಿ ವಗೈರೆ ಸುಂದರತಾಣಗಳು. ಕುದುರೆಮುಖ ಮತ್ತು ಕಾರ್ಕಳ ಹೆದ್ದಾರಿ ನಡುವೆ ಇರುವ ಭಗವತಿಕಾಡಿನಲ್ಲಿ ಚಾರಣ ಮಾಡಿದ್ದೇನೆ, ಶೃಂಗೇರಿಯಿಂದ ನಡೆದು ಆಗುಂಬೆ ತಲುಪಿದ್ದೇನೆ, ದುರ್ಗಮಗಿರಿಕಂದರಗಳಲ್ಲಿ ದಣಿವರಿಯದೆ ನಡೆದಾಡಿದ್ದೇನೆ.
ಕಳೆದ ಅಕ್ಟೋಬರ್ ಒಂದರಂದು ಉಜೈನಿಯ ಮಹಾಕಾಲೇಶ್ವರನ ಸನ್ನಿಧಿಯಲ್ಲಿ ಜನ್ಮದಿನವನ್ನು ಕಳೆದಿರುವ ನಾನು ಆಸ್ತಿಕನೋ ನಾಸ್ತಿಕನೋ! ನನಗೇ ಡೌಟು. ಪುರುಷದೇವತೆಗಳಿಗಿಂತ ಹೆಣ್ಣುದೇವತೆಗಳೆಂದರೆ ತುಂಬಾ ಇಷ್ಟ. ಶೃಂಗೇರಿಯ ಶಾರದೆ, ಕೊಲ್ಲೂರಿನ ಮೂಕಾಂಬಿಕೆ, ಹೊರನಾಡಿನ ಅನ್ನಪೂರ್ಣೇಶ್ವರಿ , ಕಟೀಲಿನ ದುರ್ಗಾಪರಮೇಶ್ವರಿಯರೇ ಮೊದಲಾದ ಕಾರ್ಪೋರೇಟ್ ದೇವತೆಗಳನ್ನು ಇಷ್ಟಪಡುವಂತೆ ಪುರದಮ್ಮ ಚೌಡಮ್ಮ ದುರ್ಗಮ್ಮ ಕಂದಾರೆಮ್ಮ ಸುಂಕುಲಮ್ಮರಂಥ ದೇಶೀಯ ದೇವತೆಗಳನ್ನೂ ಇಷ್ಟಪಡುತ್ತೇನೆ, ಅಂಜಲೀಬದ್ದನಾಗಿ ಅವುಗಳ ಸೃಷ್ಠಿಕರ್ತರಾದ ಶಿಲ್ಪಿಗಳನ್ನು ಸ್ಮರಿಸಿಕೊಳ್ಳುತ್ತೇನೆ, ನಮಸ್ಕರಿಸುತ್ತೇನೆ, ಕಾರಣ ದೇವಸ್ಥಾನಗಳು, ಧಾರ್ಮಿಕ ಸ್ಥಳಗಳು ಶೌಚಾಲಯಗಳೆ. ಇದು ನನ್ನ ವಾರ್ಷಿಕ ಪರ್ಯಟನ ವಹಿವಾಟು.
ಎಲ್ಲಾ ದೇವಸ್ಥಾನಗಳಿಗಿಂತ ಹೆಚ್ಚು ಇಷ್ಟಪಡುವುದು ಶೃಂಗೇರಿ ಮತ್ತು ಹೊರನಾಡು. ಇವೆರಡೂ ರಮ್ಯ ಪ್ರಕೃತಿಯ ಮಡಿಲಲ್ಲಿವೆ, ಶೃಂಗೇರಿ ಶಾರದೆಯ ಸಮಕ್ಷಮ ನಿಂತು ನನಗೆ ಅಕ್ಷರದಾಸೋಹ ಮಾಡಿದ ಗುರುಗಳನ್ನು ಸ್ಮರಿಸಿಕೊಳ್ಳುತ್ತೇನೆ, ಹೊರನಾಡ ಅನ್ನಪೂರ್ಣೇಶ್ವರಿಯ ಸನ್ನಧಿಯಲ್ಲಿ ಗತಕಾಲದಲ್ಲಿ ಹಸಿದಿರುತ್ತಿದ್ದ ನನಗೆ ಅನ್ನ ನೀಡಿದ ಹತ್ತುಹಲವು ಮಹನೀಯರನ್ನು ನೆನಪು ಮಾಡಿಕೊಳ್ಳುತ್ತೇನೆ. ಅಕ್ಷರಕ್ಕಿಂತ ಅನ್ನ ಮುಖ್ಯ ತಾನೆ! ಅದಕ್ಕೆಂದೇ ನಾನು ವರ್ಷಕ್ಕೊಂದು ಸಲವಾದರೂ ಹೊರನಾಡಿಗೆ ಭೆಟ್ಟಿ ನೀಡುವುದು, ಅದೂ ಅದೇ ಹೆಸರಿನ ಬಾಳಸಂಗಾತಿಯೊಂದಿಗೆ. ಅಲ್ಲಿಗೆ ಒಂದೊಂದು ಸಲ ಹೋದಾಗಲೂ ಒಂದೊಂದು ಅನುಭವ.
ಪ್ರಸ್ತಾಪಿಸಲಿರುವ ಘಟನೆ ನಡೆದು ಇಂತಿಷ್ಟೇ ವರ್ಷವಾಗಿರುವುದೆಂದು ಖಚಿತವಾಗಿ ಹೇಳಲಾರೆನು. ಆದರೆ ಅಂದು ಸಂಭವಿಸಿದ ಆ ಘಟನೆ ಮಾತ್ರ ಮನಃಪಟಲದಲ್ಲಿ ಅಚ್ಚಳಿಯದೆ ಮುದ್ರಿತಗೊಂಡಿರುವುದು. ಒಂದರ ಹಿಂದೊಂದರಂತೆ ಸತತ ಮೂರೂ ಗಂಡುಸಂತಾನ ಪ್ರಾಪ್ತವಾಯಿತು. ಮಗಳ ನಿರೀಕ್ಷೆಯಲ್ಲಿದ್ದ ನಾನು ಹಿಗ್ಗಲೂ ಇಲ್ಲ, ಕುಗ್ಗಲೂ ಇಲ್ಲ. ಆದರೆ ಪತ್ನಿ ಅನ್ನಪೂರ್ಣ ಮಾತ್ರ ಹೆಮ್ಮೆಯಿಂದ ಬೀಗಿದಳು. ಹರಕೆ ತೀರಿಸಲೆಂದು ತಮ್ಮ ಮನೆದೇವತೆಯಾದ ಹೊರನಾಡಿಗೆ ಹೋಗೋಣವೆಂದು ಹಠ ಹಿಡಿದಳು. ಸಮಯದ ಅಭಾವದಿಂದಾಗಿಯೋ, ಹಣದ ಅಡಚಣೆಯಿಂದಾಗಿಯೋ ಕಳೆದ ಒಂದೆರಡು ವರ್ಷಗಳಿಂದ ನಾವು ಎಲ್ಲಿಗೂ ತೀರ್ಥಯಾತ್ರೆ ಕೈಗೊಂಡಿರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಬಾಕಿ ಇದ್ದ ಯಾವುದೋ ಒಂದು ಅರಿಯರ್ಸೂ ಬಂತು, ಮುಖ್ಯವಾಗಿ ಆಕೆ ಅನ್ನಪೂರ್ಣೇಶ್ವರಿ ಹೆಸರಿನಲ್ಲಿ ಸಂಗ್ರಹಿಸಿಟ್ಟಿದ್ದ ಮುಡುಪಿನ ಮೊತ್ತ ಅರಿಯರ್ಸಿನ ಮೊತ್ತಕ್ಕಿಂತ ದುಪ್ಪಟ್ಟಾಗಿತ್ತು. ಅದೂ ಇದೂ ಸೇರಿಸಿದಲ್ಲಿ ಹೊರನಾಡೊಂದೇ ಅಲ್ಲದೆ ಕೊಲ್ಲೂರು, ಶೃಂಗೇರಿ ಕಡೆಗೂ ಹೋಗಿಬಂದರಾಯಿತೆಂದು ಲೆಕ್ಕ ಹಾಕಿದೆವು. ಅದನ್ನು ಕೆಮ್ಮಣ್ಣಗುಂಡಿಯ ಮೂಲಕ ತಲುಪುವುದೋ ಅಥವಾ ಕಳಸದ ಮೂಲಕವೋ! ಚರ್ಚಿಸಿದೆವಾದರೂ ಬಗೆಹರಿಯಲಿಲ್ಲ. ಒಟ್ಟಿನಲ್ಲಿ ಅಲ್ಲಿಗೆ ಮುಟ್ಟಿದರಾಯಿತು.
ದುರ್ಗಾಂಬಾದಲ್ಲಿ ಹೊರಟಾಗ ರಾತ್ರಿ ಎಂಟಾಗಿತ್ತು. ತೃತೀಯ ಸಂತಾನ ಪ್ರವರ ಆಗಿನ್ನೂ ಒಂದೂವರೆ ವರ್ಷದ ಮಗು, ಆರಂಭದಲ್ಲಿ ಪುಳಕಗೊಂಡ ಅವನು ಕ್ಯಾತೆಯನ್ನಾರಂಭಿಸಿದ್ದು ಚಿತ್ರದುರ್ಗ ಸಮೀಪಿಸಿದಾಗ. ರೊಳ್ಳೆಯಿಂದ ಕೆಲವು ಪ್ರಯಾಣಿಕರು ರೋಸಿ ಮುಖಸಿಂಡರಿಸಿಕೊಂಡದ್ದು ಮಬ್ಬುಬೆಳಕಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಇನ್ನೂ ಕೆಲವು ಮಹಿಳೆಯರು ಅವನನ್ನು ರಮಿಸಲು ಶಕ್ತಿಮೀರಿ ಪ್ರಯತ್ನಿಸಿದರು, ಆದರೂ ಪ್ರಯೋಜನವಾಗಲಿಲ್ಲ. ಇಲ್ಲದ ಹುಲಿ ಚಿರತೆಗಳನ್ನು ತೋರಿಸುವುದರ ಮೂಲಕ ಶ್ರಮಿಸುತ್ತಲೇ ನಿದ್ದೆ ಮಾಡಲು ಪ್ರಯತ್ನಿಸಿದೆ, ರ್ರೀ ಮಗೂಗಿಂತ ನಿದ್ದೇನೆ ಮುಖ್ಯವೋ ಎಂದು ಆಕೆ ಸಾಂದರ್ಭಿಕವಾಗಿ ಎಚ್ಚರಿಸಿದ ಬಳಿಕ ನಿದ್ದೆ ಮಾಡುವುದೆಲ್ಲಿ ಸಾಧ್ಯ! ಕೊನೆಗೂ ಪುಣ್ಯಾತ್ಮ ಮೂಡಿಗೆರೆ ದಾಟಿದ ಬಳಿಕ ನಿದ್ದೆ ಹೋದ. ಅರುಣೋದಯ ಪೂರ್ವದ ಬೆಳಕಲ್ಲಿ ನಳನಳಿಸುತ್ತಿದ್ದ ದಟ್ಟಾರಣ್ಯವನ್ನು ನೋಡಬೇಕೆಂಬುದು ನನ್ನ ಬಹುದಿನದ ಬಯಕೆ, ಅಲ್ಲದೆ ಕಡಿದಾದ ಹಾದಿ, ಹೆಜ್ಜೆಹೆಜ್ಜೆಗೆ ತಿರುವುಗಳು, ಅಪಘಾತಗಳನ್ನು ವರದಿ ಮಾಡಿದ ವೃತ್ತಪತ್ರಿಕೆಗಳು ಒಂದೊಂದಾಗಿ ನೆನಪಾಗಲಾರಂಭಿಸಿದವು. ದಡಕಿಗೆ ಮಗುವನ್ನು ಮಡಿಲಲ್ಲಿಟ್ಟುಕೊಂಡಿರುವ ಪತ್ನಿ ಎಲ್ಲಿ ಎಚ್ಚರಗೊಳ್ಳುವಳೋ ಎಂಬ ಆತಂಕ ಬೇರೆ. ಪಡುವಣದ ಮೂಲೆಯಲ್ಲೆಲ್ಲೋ ನಿಧನಿಧಾನವಾಗಿ ನಾಚಿಕೆಯಿಂದ ಹರಿಯುತ್ತಿರುವ ಬೆಳಕು, ಅಸ್ಪಷ್ಟವಾಗಿ ಕೇಳುತ್ತಿರುವ ಪಕ್ಷಿಗಳ ನಾದತರಂಗಗಳು, ಮುಂಬೆಳಗಲ್ಲಿ ಮಿಂದೇಳುತ್ತಿರುವ ವೃಕ್ಷರಾಜಿ, ಪಾತಾಳದಲ್ಲಿ ಪ್ರತಿಫಲಿಸುತ್ತಿರುವ ನೀರತೊರೆ, ರೆಪ್ಪೆಗೆ ರೆಪ್ಪೆ ಅಂಟಿಸುವುದಾಗಲಿಲ್ಲ. ಕೌಶಲ್ಯಪೂರ್ಣವಾಗಿ ಬಸ್ಸನ್ನು ಮುನ್ನಡೆಸುತ್ತ ಚಾಲಕ ಏನನ್ನೋ ಗೊಣಗುತ್ತಿದ್ದ, ಅದು ದೇವರ ಸ್ಮರಣೆಯೋ, ಬಯ್ಗಳೊ! ಹಿಂಬದಿಯ ಸೀಟಿನಲ್ಲಿ ಕುಳಿತಿದ್ದರೂ ಸ್ಪಷ್ಟವಾಗಿ ಕೇಳಿಸಿಕೊಳ್ಳಲಾಗಲಿಲ್ಲ, ಆದರೆ ಸ್ಪಷ್ಟವಾಗಿ ಕೇಳಿಸುತ್ತಿದ್ದುದು ಸಹಪ್ರಯಾಣಿಕರ ಪೈಕಿ ಕೆಲವರು ಕಂತುಕಂತಾಗಿ ಹೊರಚೆಲ್ಲುತ್ತಿದ್ದ ಅಪಾನವಾಯುವಿಗೆ ಸಂಬಂಧಿಸಿದ ಕರ್ಣಕಠೋರ ಸದ್ದು.
ಕೊಟ್ಟಿಗೆಹಾರವನ್ನು ದಾಟುವವರೆಗೆ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಇನ್ನೇನು ಕಳಸ ಸಮೀಪಿಸಿತೆನ್ನುವಾಗ ಬಸ್ಸು ಸಕಾರಣವಾಗಿ ನಿಂತುಬಿಟ್ಟಿತು. ಅರುಣೋದಯ ನೇಪಥ್ಯಕ್ಕೆ ಸರಿದು ಮುಂಬೆಳಗಿಗೆ ಹಾದಿ ಮಾಡಿಕೊಟ್ಟಿತ್ತು, ಬಹುಪಾಲು ಸಹಪ್ರಯಾಣಿಕರು ಎಚ್ಚರಗೊಂಡು ಆಕಳಿಸಲಾರಂಭಿಸಿದರು. ಕೆಲವರು ಮೂತ್ರವಿಸರ್ಜನೆ ನೆಪದಲ್ಲಿ ಕೆಳಕ್ಕಿಳಿದು ಟ್ರಾಫಿಕ್ ಜಾಮಿಗೆ ಕಾರಣಗಳನ್ನು ಶೋಧಿಸತೊಡಗಿದರು. ಮಂಡಿಗಳ ಕೀಲುಗಳನ್ನು ಸೈಲು ಮಾಡಿಕೊಳ್ಳುವ ನಿಮಿತ್ತ ನಾನೂ ಕೆಳಕ್ಕಿಳಿದೆ, ಅವರೊಂದಿಗೆ ನಾನೂ ಶಾಮೀಲಾದೆ. ಮಾಹಿತಿ ಪ್ರಕಾರ ಕಿಲೋಮೀಟರ್ ದೂರದಲ್ಲೆಲ್ಲೋ ಅಪಘಾತ ಸಂಭವಿಸಿರುವುದೆಂದು ತಿಳಿಯಿತು, ಸತ್ತಿರುವರೋ, ಗಾಯಗೊಂಡಿರುವರೋ! ತುರ್ತುಚಿಕಿತ್ಸೆ, ಅಂಬುಲೆನ್ಸು, ಪೋಲಿಸರು, ಆಸ್ಪತ್ರೆ! ಎರಡು ತಾಸುಗಳ ಬಳಿಕ ಯಾರು ಎಲ್ಲಿಂದ ಬಂದರೆಂಬುದು ದೂರದಲ್ಲಿದ್ದ ನಮಗೆ ಖಚಿತವಾಗಿ ತಿಳಿಯಲಿಲ್ಲ. ಅದುವರೆಗೆ ನಿಂತಲ್ಲಿಯೇ ನಿಂತಿದ್ದ ವಾಹನಗಳು ಒಂದೊಂದಾಗಿ ಚಲಿಸಲಾರಂಭಿಸಿದವು. ನಾವಿದ್ದ ವಾಹನವೂ ಸೇರಿದಂತೆ. ಅಷ್ಟೊತ್ತಿಗಾಗಲೇ ಮಗು ಸಂಗಡ ಪತ್ನಿ ಸಹ ಎಚ್ಚರಗೊಂಡು ಆತಂಕಕ್ಕೊಳಗಾಗಿದ್ದಳು, ಆಕೆಯ ತುಟಿಗಳು ಪರಾವರ್ತಿತ ಪ್ರಕ್ರಿಯೆಗೆ ಒಳಪಟ್ಟು ಏನನ್ನೋ ನುಡಿಯಲಾರಂಭಿಸಿದ್ದವು. ಅನ್ನಪೂರ್ಣೇಶ್ವರಿ ಎಂಬ ನಾಮವಾಚಕ ಅಸ್ಪಷ್ಟವಾಗಿ ಕೇಳಿಸಿತು.
ದುರ್ಗಾಂಭಾ ಭದ್ರೆಯಲ್ಲಿ ಇಳಿಯಿತಲ್ಲದೆ ಮೆಲ್ಲಗೆ ತಡವನ್ನು ಸೇರಿದ ಕೂಡಲೆ ಪ್ರಯಾಣಿಕರು ನೆಮ್ಮದಿಯ ಉಸಿರುಬಿಟ್ಟರು. ನಿಧಾನವಾಗಿ ಹೊರನಾಡನ್ನು ಪ್ರವೇಶಿಸಿದ ಬಸ್ಸಿನಿಂದ ಇಳಿದೆವು, ಅನ್ನಪೂರ್ಣಾಷ್ಟಕದ ಕೊನೆ ಚರಣ ಅದೇ ತಾನೆ ಪೂರೈಸಿದ ಬಳಿಕ ಗೋಪುರ ನಿಚ್ಚಳವಾಗಿ ಗೋಚರಿಸಲಾರಂಭಿಸಿತು. ಮೈಮುರಿಯುತ್ತಲೇ ಮುಂಗೈಗಂಟಿದ್ದ ವಾಚು ನೋಡಿಕೊಂಡೆ, ಚಿಕ್ಕಮುಳ್ಳು ಹತ್ತರ ಸಮೀಪದಲ್ಲಿತ್ತು, ಅದು ದೇವಿಯ ವಾರವಾಗಿರಲಿಲ್ಲ, ಆದರೂ ಜನಜಂಗುಳಿಯ ಸಂಭ್ರಮದ ಓಡಾಟ ಕಿಮ್ಮತ್ತಿನಿಂದ ಕೂಡಿತ್ತು. ಅದೇ ದಿವಸ ದೇವಿಯ ದರ್ಶನ ಪಡೆದು ಮರುಪ್ರಯಾಣಕ್ಕೆ! ಆದರೆ ಹೆಂಡತಿ ಖಡಾಖಂಡಿತ ನಿರಾಕರಿಸಿದಳು. ಇಚ್ಛೆ ಪಟ್ಟು ಅಮ್ಮ ನಮ್ಮನ್ನು ಬಹಳ ದಿವಸಕ್ಕ ಕರೆಸಿಕೊಂಡಾಳೆ, ಅವಸರ ಮಾಡಬ್ಯಾಡ್ರಿ, ಒಂದಿನ ಆರಾಮಾಗಿದ್ದು ಆಕೆಯ ದರುಶನ ತಗೊಂಡು ನಿಧಾನಕೀಲೆ ಹೋಗೋಣ ಎಂದು ಹೇಳಿದ ಮೇಲೆ ಮಾರುತ್ತರ ಕೊಡುವುದೆಲ್ಲಿ ಸಾಧ್ಯ!

ಛತ್ರಗಳೊಂದೂ ಖಾಲಿ ಇರಲಿಲ್ಲ, ಎಲ್ಲೋ ಒಂದು ಕಡೆ ರಾತ್ರಿ ಕಳೆದು ಭಕ್ತಿ ಪರಾಕಾಷ್ಠೆ ಮೆರೆಯುವುದಾಗದ ಮಾತು. ಅಲ್ಲಲ್ಲಿ ಹುಡುಕಾಟ ಆರಂಭಿಸಿದೆ, ಮಧ್ಯವರ್ತಿಯೋರ್ವ ವೇಗವಾಗಿ ಕರೆದೊಯ್ದ, ಅದು ಮನೆ, ಆದರೆ ಅದರ ಮಾಲಕ ಅದನ್ನು ವಸತಿಗೃಹವನ್ನಾಗಿ ಮಾರ್ಪಡಿಸಿದ್ದ, ಇಂತಿಷ್ಟು ಎಂದು ಹೇಳಿದ, ಮುಂಗಡ ಪಾವತಿಸಿ ಹೆಂಡತಿಯನ್ನೂ ತನ್ನ ಕಂಕುಳಲ್ಲಿದ್ದ ಮಗುವನ್ನೂ ಅಲ್ಲಿಗೆ ಕರೆತಂದೆ. ನೋಡಿದಳು, ಕೂಲಂಕಷ ಪರಿಶೀಲಿಸಿದಳು, ಒಂದು ರಾತ್ರಿ ಕಳೆಯಲಿಕ್ಕೆ ಅಡ್ಡಿ ಇಲ್ಲವೆಂದು ಪ್ರಮಾಣೀಕರಿಸಿದಳು. ಅದರ ಮಾಲಕ ಇದನ್ನು ನಿಮ್ಮ ಮನೆಯೆಂದೇ ಭಾವಿಸಿ ಎಂದು ಹೇಳಿದ, ಮನೆಯ ಊಟ, ಇಷ್ಟವಾಯಿತು. ರಾತ್ರಿಯಾದಂತೆ ಚಳಿ ಕಂತುಕಂತಾಗಿ ದಟೈಸಿತು, ಗಲೀಜು ಮಂಚ, ಹಾಸಿಗೆ! ಧೈರ್ಯ ಸಾಲದೆ ದುಪ್ಪಟಿಗಳನ್ನು ಹೊದೆಯುವುದಾಗಲಿಲ್ಲ. ಎಷ್ಟೋ ಹೊತ್ತಿನವರೆಗೆ ಮನೆ ಬಾಳುವೆಗೆ ಸಂಬಂಧಿಸಿದಂತೆ ಮಾತುಕತೆ, ಕ್ರಮೇಣ ನಿದ್ದೆ ಆವರಿಸಿತು, ಮಲಗಿದೆವು ಅಂತೂ!
***
ಮಲಗಿದ್ದು ಎಷ್ಟು ಗಂಟೆಗೋ! ಎಚ್ಚರಗೊಂಡಾಗ ಎಷ್ಟು ಹೊತ್ತಾಗಿತ್ತೋ! ಆದರೆ ನಿಶಾಚರಿ ಹೊರನಾಡು ಮಲಗೇ ಇರಲಿಲ್ಲ. ಒಬ್ಬರು ಬೆಳಗಿನ ಪೂಜೆ ಆರೂವರೆ ಎಂದರೆ ಇನ್ನೊಬ್ಬರು ಏಳೂವರೆ ಎಂದರು, ಲಗುಬಗೆಯಿಂದ ತಾವು ಸಿದ್ದರಾಗಿ ದೇವತೆಯ ಸಮಕ್ಷಮ ಹಾಜರಿರುವುದು ಒಳ್ಳೆಯದಲ್ಲವೆ! ಹೇಳಿದ್ದಕ್ಕೆ ತಲೆ ಅಲ್ಲಾಡಿಸಿದೆ. ನೀರು ಬಿಸಿ ಇದೆ, ಸ್ನಾನ ಮಾಡೋರು ಮಾಡ್ಕೊಳ್ಳಿ ಎಂದು ಕೂಗಿದ್ದು ಯಾರೆಂದು ತಿಳಿಯಲಿಲ್ಲ, ನೋಡು ನೋಡುವಷ್ಟರಲ್ಲಿ ಶೌಚಾಲಯದ ಮುಂದೆ, ಸ್ನಾನದ ಕೋಣೆಯ ಮುಂದೆ ಸರತಿ ಸಾಲೇರ್ಪಟ್ಟಿತು, ನಾ ಮುಂದು ತಾ ಮುಂದು ಎಂಬ ಹಕ್ಕೊತ್ತಾಯವೂ ಸಹ. ಯಾರು ಮೊದಲು ಮಾಡಿದರೇನು ಯಾರು ಕೊನೆಗೆ ಮಾಡಿದರೇನು, ಎಲ್ಲರೂ ಸೇರುವುದು ಅಲ್ಲಿಗಲ್ಲವೆ! ಸ್ಥಿತಪ್ರಜ್ಞ ಧ್ವನಿ ಬೆನ್ನ ಹಿಂದೇ ಕೇಳಿಸಿತು. ಎಲ್ಲೋ ಭೋರ್ಗರೆಯುತ್ತಿರುವ ನದಿಯ ಸದ್ದು, ಎಲ್ಲೋ ಇರುವ ಅಲ್ಲಿಗೆ ಹೋಗುವುದೋ, ಅದೇ ಇಲ್ಲೂ. ನೀರು ನೀರೆ, ಭಿನ್ನಭೇದವೆಣಿಸುವುದುಂಟೆ! ಹೆಂಗಸರು ಅನ್ನಪೂಣೇಶ್ವರಿಯ ಪ್ರತಿರೂಪ, ಹೆಂಗಸರು ಮೊದಲು, ಗಂಡಸರು ಆನಂತರ, ಹೇಳಿದವರ ಸಂತಾನ ಸಾವಿರವಾಗಲಿ. ಕಿರಿದಿದ್ದ ಸ್ನಾನದ ಕೋಣೆಯನ್ನು ಪ್ರವೇಶಿಸುತ್ತಿದ್ದುದಾಗಲೀ, ಹೊರಬರುತ್ತಿದ್ದುದಾಗಲೀ ವಿಳಂಬವಾಗುತ್ತಿರಲಿಲ್ಲ, ಹೀಗೆ ಹೋಗುವುದು ಹಾಗೆ ಬರುವುದು, ಹೀಗಾಗಿ ಪತ್ನಿ ಮಗು ಸಂಗಡ ಹೀಗೆ ಹೋಗಿ, ಹಾಗೆ ಬಂದಳು, ನೀವು ಲಗೂನ ಮುಗಿಸಿರಿ ಎಂದು ನನ್ನನ್ನೂ ಒಳಕ್ಕೆ ತಳ್ಳಿದಳು.
ಶುಚಿರ್ಭೂತರಾಗಿ ನಾವು ದೇವಾಲಯದ ಕಡೆ ನಡೆಯಲಾರಂಭಿಸಿದೆವು, ಇನ್ನೂ ನಸುಕಿತ್ತು, ಬೆಳಕು ಸ್ಪಷ್ಟವಾಗಿ ಕಾಣಿಸಿಕೊಂಡಿರಲಿಲ್ಲ, ನೆಲಮುಗಿಲೇಕಾಗಿದ್ದ ಹೊಗೆಮಂಜು. ಸೀರೆಯ ಜರತಾರಿ ಅಂಚುಗಳು, ದಂತಪಂಕ್ತಿ, ಮೂಗನ್ನು ಅಲಂಕರಿಸಿದ್ದ ನತ್ತುಗಳು, ಭ್ರೂಮಧ್ಯೆಯ ತಿಲಕಗಳು, ಮುಂಗೈಯ ಚಿನ್ನದ ಬಳೆಗಳು, ಬೆರಳು ಕೊರಳಲ್ಲಿದ್ದ ತರಾವರಿ ಸರಗಳು ಇವಿಷ್ಟರ ಮೇಲೆ ಅವರೆಲ್ಲ ಹೆಂಗಸರು ಎಂದು ಗುರುತಿಸಬಹುದಿತ್ತು. ಆ ಸುಂದರ ಸನ್ನಿವೇಷದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದೇ ದುಸ್ತರವೆನ್ನಿಸಿತು. ಹೀಗೆ ಒಂದು ಕಿಲೋಮೀಟರ್ ದೂರವನ್ನು ಕ್ರಮಿಸಿ ದೇವಾಲಯದ ಪ್ರಾಂಗಣ ತಲುಪಿದಾಗ ಇನ್ನೂ ಆರಾಗಿರಲಿಲ್ಲ, ಆದರೂ ಏರ್ಪಟ್ಟಿದ್ದ ಸರತಿಸಾಲು ನಿರೀಕ್ಷೆಗಿಂತ ದೊಡ್ಡದಿತ್ತು, ಇನ್ನೂ ಅರ್ಧಗಂಟೆ ಮೊದಲೇ ಬರಬೇಕಿತ್ತು ಎಂದು ಹೇಳುತ್ತ ಅನ್ನಪೂರ್ಣ ಸಾಲಲ್ಲಿ ಜಾಗ ದೊರಕಿಸಿಕೊಂಡಳು. ಕುಂಕುಮಾರ್ಚನೆ ಮಾಡಿಸುವುದಾಗಿ ತಾನು ಬೇಡಿಕೊಂಡಿದ್ದಳಷ್ಟೆ, ಅದಕ್ಕೆ ಅಗತ್ಯವಿದ್ದ ಸಾಮಾಗ್ರಿ ಮತ್ತು ರಸೀತಿಗಳನ್ನು ಜೋಡಿಸಿ ತಂದು ಒಪ್ಪಿಸಿದೆ, ಆಕೆಯ ಸಹವರ್ತಿಯಾಗಿ ನಿಲ್ಲುವುದೋ! ಎಲ್ಲಾದರೂ ತಿರುಗಾಡಿ ಬರುವುದೋ! ಆದರೂ ಆಕೆಯ ಹಿಂದೆ ನಿಂತೆನು ವಿಧೇಯತೆಯಿಂದ. ಆದರೆ ಅಷ್ಟರಲ್ಲಿ..
ಯಾವುದೋ ಒಂದು ರಾಗ ಅಲೆಅಲೆಯಾಗಿ ತೇಲಿ ಬಂದು ಭಕ್ತಿಯ ವಾತಾವರಣದ ಶಿಖರದ ಮೇಲೆ ಚಿನ್ನದ ಕಳಸ ಮುಡಿಸಲಾರಂಭಿಸಿತು.
ಮುಂದಿನ ವಾರಕ್ಕೆ..


ಸಾರ್ ನಮ್ಮೂರ ಅಳಿಯನ ನೀವು ….ಸೂಪರ್ಬ್ 🙂
ಊರಿಂದ ದೂರದಲ್ಲಿರುವ ನನಗೆ ಹಾಸನ, ಬೇಲೂರು, ಮುಳ್ಳಯ್ಯನಗಿರಿ, ಬಾಬಾಬುಡೇನ್ಗಿರಿ, ಕುದುರೆಮುಖ, ಶೃಂಗೇರಿ, ಹೊರನಾಡು ಎಲ್ಲ ನೆನಪಿಸಿದಿರಿ. ಒಂದಕ್ಕಿಂತ ಒಂದು ಅದ್ಭುತ ಸ್ಥಳಗಳು. ಹಾಗೇ ಕುತೂಹಲಕಾರಿ ತಿರುವಿನಲ್ಲಿ ನಿಲ್ಲಿಸಿದ್ದೀರಿ…ಒಂದು ವಾರ ಬೇರೆ ಕಾಯ್ ಬೇಕು ಇನ್ನು…ವೆರಿ ಬ್ಯಾಡ್.
ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೇಶ್ವರಿ ಎಲ್ಲರಿಗು ಸನ್ಮಂಗಳವನ್ನುಂಟು ಮಾಡಲಿ.
ನಮ್ಮನ್ನೂ ಜತೆಗೆ ಕರೆದೊಯ್ದಂತಿದೆ ನಿಮ್ಮ ಬರವಣಿಗೆಯ ಶೈಲಿ. ಕೂತಲ್ಲೇ ಹೊರನಾಡನ್ನು ಕಣ್ಣ ಮುಂದೆ ತಂದುಕೊಳ್ಳುವಂತಾಯಿತು. ಥ್ಯಾಂಕ್ಸ್ ಕುಂ.ವೀ.
houdu hari naanu yamasandhi aliya, vivarakke samparkisi 9449131236
kumvee
ಮುಂದಿನ ಕಂತಿಗೆ ಕಾಯುತ್ತಾ ಇದ್ದೇನೆ …
ಒಹ್ ಸರ್ ನೀವು ನಮ್ಮೂರಿನ ಅಳಿಯ ಅಂತ ನನಗೂ ಗೊತ್ತೇ ಇರ್ಲಿಲ್ಲ…. ಹರಿಯವರ ಹಾಗೆ ನನಗೂ ಆಶ್ಚರ್ಯ ಆಯಿತು …ಮುಂದೆ ಏನಾಯ್ತು ಎಂದು ತಿಳಿಯಲು ಮುಂದಿನ ವಾರದವರೆಗೆ ಕಾಯುತ್ತೇನೆ
anubhavagaLu chennagive sir… mundina kantige kaayutteve.
ಮುಂದಿನ ಕಂತಿಗೆ ಕಾತರದಿಂದ ಕಾಯುತಿದ್ದೇವೆ….
sir, horanadu annapurney darshan madisidiri tanx.. mundin warakke kaytidivi ..
ಸರ್
ಅಂಜಲಿಬದ್ಧನಾಗಿ ಓದಿದೆ.ಚನ್ನಾಗಿದೆ ನಿಮ್ಮದೈತ ಬಲ ಏನೆಂದರೆ ಓದುಗರನ್ನು ಕಥಾವ್ಯಸನಿಯಾಗಿಸಿವದು(adict). ಕುಂವೀ ಕಥೆಗಳು ಓದುಗರನ್ನು ಉಲ್ಲಾಸಿತಗೊಳಿಸುತ್ತವೆ.ನಾಲ್ಕು ಸಾಲುಗಳು ಓದಿದರೆ ಸಾಕು ಕೈಹಿಡಿದು ಕರೆದುಕೊಂಡು ಹೋಗುತ್ತವೆ ಖುಶಿಯಾಯತು ಸರ್.ಮುಂದೆ ಓದುತ್ತೇನೆ
ಮಹಾಂತೇಶ ನವಲಕಲ್
mundina kantu mundina vaara!! 🙁
Sir, very nice write up.
sir,very nice.a naadakkagi kayuvantagide,lakshmishankar.
kumvee annanavarige,
Odutta iddare kemmanagundi, bababudanagiri, mullayanagiri, shringeri, horanadu, sutti banda anubhavavaguthade. jothege eega anumana shuruvagide neevu nasthikaroo alla, nasthikaroo alla, kannadada sahithyada asthi.kannadada keerthi.
Sir,
summaru 10ne class nindalu Naanu nimma abhimani…. Mimma maga pururava mattu naanu hosadaagi mukha pusthaka ( Facebook ) nalli friends aagiddivi…
Naanu eega kelasada nimitta HASSAN nalli vaasavaagiddini,
Nanna Hutturu KOLAR…. Please Hassan ge baruva munche thilisi sir, Nimmanu Bheti maadi kruthaartha naaguttene…
Inthi
Nagabhushana TV
Reliance Communications Ltd.,
Plot No : 382,Road No : 03,
KIADB industrial Growth center,
H.N.Pura Road,
HASSAN – 573201
PH: 9379837755
nimma rayal seema hagu gandhi class odi nimma narrativ technique na abimaniyagiddene n u r life style impressed me a lot