ಹೆಗಲ ಮೇಲಿಂದ ತುಂಬಿದ ಕೊಡವನ್ನು ಕೆಳಕ್ಕಿಳಿಸಿದ, ಪ್ಯಾಂಟಿನ ಹಿಂಬದಿಯ ಕಣಿವೆ ಭಾಗ ಚರ್ ಎಂದು ಸದ್ದು ಮಾಡಿತು, ಹರಿಯಿತು. ವಲ್ಲಿಯಿಂದ ಮುಖದ ಬೆವರನ್ನು ಒರೆಸಿಕೊಳ್ಳಲು ಉದ್ಯುಕ್ತನಾಗಿದ್ದವನು ಕೂಡಲೆ ಅದರಿಂದ ತನ್ನ ತಿಕಭಾಗವನ್ನು ಮುಚ್ಚಿಕೊಂಡ. ಅಡುಗೆ ಮನೆಯಲ್ಲಿ ಅದೇ ತಾನೆ ಬೆಂದಿದ್ದ ಅನ್ನ ಬಸಿಯುತ್ತಿದ್ದ ಹೆಂಡತಿ ಅನ್ನಪೂರ್ಣ ಕೇಳಿಸಿಕೊಂಡಿರಲೂಬಹುದು, ಅಲ್ಲದೆ ಶಾಮಣ್ಣ ಕಾದಂಬರಿಯ ನಾಲ್ಕನೆ ಪರಿಚ್ಛೇದ ಆರಂಭಿಸಿದ್ದ ನಾನಂತೂ ಕೇಳಿಸಿಕೊಂಡೆ. ನಾವು ವಾಸವಿದ್ದ ಮನೆ ಎರಡು ಕೋಣೆಗಳಿದ್ದವು, ಆದರೆ ಯಾವುದಕ್ಕೂ ಬಾಗಿಲಿರಲಿಲ್ಲ, ಮುಖ್ಯ ಬಾಗಿಲಿಗೂ ಕದಗಳಿರಲಿಲ್ಲ. ಅಂಥ ಬಯಲು ರಂಗಭೂಮಿಯಲ್ಲಿ ಹದಿನಾಲ್ಕು ವರ್ಷಗಳ ಕಾಲ ವಾಸಿಸಿದ್ದು ಸಾಹಸದ ವಿಷಯ. ಕೂತಲ್ಲಿಂದಲೇ ಕತ್ತೊರಳಿಸಿ ನೋಡುವುದು ಸಾಧ್ಯವಾಯಿತು. ಅವನು ನಮ್ಮ ಶಾಲೆಯ ಒಂಭತ್ತನೆ ತರಗತಿ ವಿದ್ಯಾರ್ಥಿ, ಅವನ ಹದಿಹರೆಯತನವನ್ನು ಬಡತನ ಕಬಳಿಸಿತ್ತು, ಉತ್ಸಾಹ ಶೂನ್ಯ ಮುಖ, ಮೂಗಿನ ಕೆಳಗೆ ಮೀಸೆ ಅದೇ ತಾನೆ ಮೂಡಿ ಕೆಂಪುವರ್ಣಕ್ಕೆ ತಿರುಗಿತ್ತು. ಗದ್ದದ ಮೇಲೆ ದೂರದಿಂದಲೇ ಎಣೆಸಬಹುದಾದಷ್ಟು ಕೂದಲು. ಹರಕಲು ಬನಿಯನ್ನಿಗೆ ಅವನೆದೆಯ ಬಡಕಲನ್ನು ಮರೆಮಾಚುವ ಶಕ್ತಿ ಇರಲಿಲ್ಲ. ಅವನು ಧರಿಸಿದ್ದ ಪ್ಯಾಂಟು ಗಟ್ಟಿಮುಟ್ಟಾಗಿರಬಹುದೆಂದು ಭಾವಿಸಿದ್ದೆ, ಅವೆರಡೂ ಅವನಲ್ಲವೇ ಅಲ್ಲ, ಬೇರೆಯವರು ತಾವು ಉಟ್ಟುಬಿಟ್ಟಿರಬಹುದಾದ ಉಡುಪುಗಳು. ಅಗತ್ಯವಿರದಿದ್ದರೂ ನಾಚಿಕೆ ಮುಜುಗರದಿಂದ ನನ್ನತ್ತ ನೋಡಿದ, ನಗಬಹುದೆಂಬ ಸಂದೇಹದಿಂದ. ಆದರೆ ನಗುವಷ್ಟು ಸಣ್ಣ ಮನಸ್ಸು ನನ್ನದಾಗಿರಲಿಲ್ಲ. ಅದು ತನಗೂ ಗೊತ್ತು. ವಲ್ಲಿಯನ್ನು ಸೊಂಟದ ಭಾಗಕ್ಕೆ ಸುತ್ತಿಕೊಂಡ, ನನ್ನೆದುರು ಪರಮವಿಧೇಯತೆಯಿಂದ ಕುಳಿತ. ಮಿತಭಾಷಿ, ಮಾತಾಡಿದರೂ ಸೂಜಿಗೆ ಮುದ್ದು ಕೊಟ್ಟಂತೆ, ಎಷ್ಟು ಬೇಕೋ ಅಷ್ಟು.
ಪರಿಚ್ಛೇದವನ್ನು ಸಂಜೆಯೊಳಗೆ ಮುಗಿಸುವ ಒತ್ತಡದಲ್ಲಿದ್ದೆ, ಆದ್ದರಿಂದ ನಾನು ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಮೌನ ಅಸಹನೀಯವೆನ್ನಿಸಿತೋ ಏನೋ! ಹೊರಡುವ ಸನ್ನಾಹವನ್ನು ಪತ್ನಿ ತಾನಿದ್ದಲ್ಲಿಂದಲೇ ಗ್ರಹಿಸಿದಳು, ಶಿಷ್ಯನ ಜಠರದ ತಳಮಳ ಅರ್ಥ ಮಾಡಿಕೊಂಡಳೇನೊ! ಆಕೆ ಎಷ್ಟಿದ್ದರೂ ಹೆಣ್ಣು ತಾನೆ! ಉಂಡೋಗುವಂತಿರು ಶಿವಲಿಂಗ ಎಂದು ಅಲ್ಲಿಂದಲೇ ಹೇಳಿದಳು. ಹಸಿದಿಲ್ಲವೆಂದು ಸುಳ್ಳು ಹೇಳದಂತೆ ಅವನ ಹೊಟ್ಟೆ ಎಚ್ಚರಿಸಿತು. ಅರ್ಧ ಎದ್ದಿದ್ದವನು ಹಾಗೆ ಕುಳಿತ, ತನ್ನ ಬೆನ್ನನ್ನು ಗೋಡೆಗಾನಿಸಿದ. ಕಾಲಕ್ಷೇಪಕ್ಕೋ ಇನ್ನಿತರ ಕಾರಣಕ್ಕೋ ತಲೆಯನ್ನು ಸ್ವಲ್ಪ ಎತ್ತಿ ಕಣ್ಣುಗಳನ್ನರಳಸಿದ, ಕಾರಣ ಕಳೆದ ವಾರದಿಂದ ಮಣ್ಣಗೋಡೆಯ ಮೇಲೆ ಗಾಂಧೀಜಿ, ಅಂಬೇಡ್ಕರ್, ಮಾರ್ಕ್ಸ್, ಲೋಹಿಯಾ, ಕುವೆಂಪು, ಬೇಂದ್ರೆ ಮತ್ತಿತರ ಗಣ್ಯವ್ಯಕ್ತಿಗಳು ತಮ್ಮ ಭಾವಚಿತ್ರಗಳ ಮೂಲಕ ತೂಗಾಡಲಾರಂಭಿಸಿದ್ದರು, ಅದೂ ತಮ್ಮ ಪ್ರಸಿದ್ದ ನಾಮವಾಚಕಗಳೊಂದಿಗೆ. ಅವರೆಲ್ಲರ ನಾಮವಾಚಕಗಳನ್ನು ಓದುತ್ತಿರಬಹುದೆಂದು ಅವನ ತುಟಿ ಚಲನೆಯ ಮೂಲಕ ಗ್ರಹಿಸಿದೆ. ಅವರನ್ನು ಅವನು ಹತ್ತಿರದಿಂದ ನೋಡುವುದು ಎಷ್ಟು ಮುಖ್ಯವೋ, ಅವನನ್ನೂ ಅವರು ಹತ್ತಿರದಿಂದ ನೋಡುವುದು ಸಹ ಅಷ್ಟೇ ಮುಖ್ಯ. ನಾಳೆ ನಾಡಿದ್ದು ಅವರಿರುವ ಎತ್ತರದ ಪ್ರಮಾಣವನ್ನು ಹ್ರಸ್ವಗೊಳಿಸಿದರಾಯಿತೆಂದುಕೊಂಡೆ. ಅದಾದ ಸ್ವಲ್ಪ ಹೊತ್ತಿನ ಬಳಿಕ ಅಡುಗೆ ಮನೆಯಿಂದ ಪತ್ನಿ ಹೊರಗೆ ಕಾಣಿಸಿಕೊಂಡಳು. ಅದೂ ಅನ್ನ ಸಾರು ಇದ್ದ ತಟ್ಟೆಯ ಸಂಗಡ. ಆಕೆಯ ಕಡೆ ಹಸಿದ ಎಳೆಗರುವಿನಂತೆ ನೋಡಿದ. ತನ್ನೆದುರು ಪರಿಮಳಿಸುತ್ತಿರುವ ತಳಿಗೆ, ಉಂಡರೇನು ತಿಳಿದುಕೊಳ್ಳುವರೋ, ಉಣ್ಣದಿದ್ದರೇನು ತಿಳಿದುಕೊಳ್ಳುವರೋ! ಸಂದೇಹ. ನಮ್ಮಿಬ್ಬರ ಕಡೆಗೂ ನೋಡಿದ, ಅವನು ಊಟ ಮಾಡುವ ಕ್ರಿಯೆ ಸವಿಯಲು ನನಗೆ ಕಣ್ಣುಗಳ ಅಗತ್ಯವಿರಲಿಲ್ಲ, ಬರೀ ಶಬ್ದ ಸಾಕಿತ್ತು, ಆದರೆ ಗೋಡೆಗೆ ತನ್ನ ದೇಹದ ಒಂದು ಭಾಗವನ್ನು ಆನಿಸಿ ನಿಂತಿದ್ದ ಅನ್ನಪೂರ್ಣದ್ದು ಆಗಲ್ಲ, ತಮ್ಮ ಪ್ರೀತಿಯ ವಿದ್ಯಾರ್ಥಿ ಉಣ್ಣುವ ಪ್ರತಿ ತುತ್ತನ್ನು ತಾನು ಗಮನಿಸಬೇಕು, ತನ್ನ ಅನುಮತಿಯಿಲ್ಲದೆ ಎಂಜಲುಗೈಯನ್ನು ತೊಳೆದುಕೊಳ್ಳಕೂಡದು. ಅದಕ್ಕೆ ಹಾಗೆ ನಿಂತಿದ್ದ ಆಕೆ ರೋಸಿದ್ದು ಒಂದೂವರೆ ನಿಮಿಷದ ಬಳಿಕ. ಉಣ್ಣಪ್ಪಾ ಉಣ್ಣು ಎಂದು ಒತ್ತಾಯಿಸಿದಳು. ಮನೆಯಲ್ಲಿ ಉಪವಾಸವಿರುವ ತನ್ನ ತಾಯಿಯನ್ನು ತಾನು ನೆನಪಿಸಿಕೊಂಡನೇನೋ! ಇಲ್ರಮ್ಮಾ ಕಟ್ಕೊಂಡೋಗಿ ಮನೇಲುಣ್ತೀನಿ ಎಂದ. ಆ ಉತ್ತರವೇನು ತನಗೆ ಹೊಸದಲ್ಲ. ನೀನು ಮನೇಲಿ ಉಣ್ಣೋದು ತಿಳಿದೈತಿ, ಬಿಸಿಲಲ್ಲಿ ದಣಕೊಂಡದಿ, ಇಲ್ಲೇ ಉಂಡು ಕೈತೊಳ್ಕೊ ಎಂದು ಒತ್ತಾಯಿಸಿದಳು, ಬಳಿಕ ಅವನು ಗಂಗಾಳಕ್ಕೆ ಕೈ ಹಾಕಿದ. ತನ್ನೆರಡೂ ಕಣ್ಣುಗಳಲ್ಲಿ ನೀರು ತುಂಬಿಕೊಂಡ. ಹತ್ತು ತುತ್ತುಗಳನ್ನು ಮೂರೇ ತುತ್ತುಗಳಲ್ಲಿ ಉಂಡು ಮುಗಿಸಿದ, ತನ್ನ ಒಡಲು ತುಂಬಿರುವುದಾಗಿ ಘೋಷಿಸಲೆಂದು ಡೇಗಲು ಪ್ರಯತ್ನಿಸಿದ್ದನ್ನು ಆಕೆ ತಡೆದಳು, ಪುನಃ ಬಡಿಸಿದಳು, ಪುನಃ ಉಂಡ, ಅವನ ಕಣ್ಣುಗಳಲ್ಲಿ ನಿಧನಿಧಾನವಾಗಿ ಬೆಳಕು ಕಾಣಿಸಿಕೊಂಡಿತು. ಎಂಜಲುಗೈಗಳನ್ನು ತೊಳೆದುಕೊಂಡನೇನೋ ಸರಿ, ಆದರೆ ಮೇಲೇಳಲು ಹಿಂಜರಿಕೆ, ಕಾರಣ ತನ್ನ ಹರಿದಿರುವ ಪ್ಯಾಂಟಿನ ಭಾಗ ಕಂಡರೆ! ಎಂಜಲು ತಟ್ಟೆ ತೊಳೆಯಲೆಂದು ಆಕೆ ಬಚ್ಚಲಿಗೆ ಹೋದೊಡನೆ ತಾನೆದ್ದ ನಿಧಾನವಾಗಿ, ಅದೂ ಕಾಲುಗಳನ್ನು ಕಿಸಿಯದೆ, ಅದೂ ವಲ್ಲಿಯಿಂದ ತಿಕ ಭಾಗವನ್ನು ಮರೆಮಾಚಿ. ಬಳಿಕ ರಾಜಾಸ್ಥಾನದಲ್ಲಿ ಊಳಿಗದವರು ಹಿಂದಕ್ಕೆ ನಡೆಯುತ್ತ ಹೋಗುವರಲ್ಲ ಹಾಗೆ ತುಸುದೂರ ಹೋಗಿ ಬಳಿಕ ಮರೆಯಾದ. ಆ ಬಳಿಕ ಅನ್ನಪೂರ್ಣ ಅವನೀ ವಯಸ್ಸಿಗೆ ಪಿಯುಸಿಯಲ್ಲಿರಬೇಕಾಗಿತ್ತಲ್ವೆ! ಎಂದು ಕೇಳಿದಳು.
ಹೌದು, ಹದಿನಾರು ಹದಿನೇಳರ ವಯಸ್ಸಿನ ಅವನು ಅಲ್ಲಿರಬೇಕಿತ್ತು, ಬಳ್ಳಾರಿ ಹತ್ತಿರವಿರುವುದೆನ್ನುವ ಕಾರಣಕ್ಕೆ ಆ ಊರಿಗೆ ವರ್ಗಮಾಡಿಸಿಕೊಂಡಿದ್ದೆ, ಶಿಕ್ಷಕರ ನಿರಾಸಕ್ತಿಯಿಂದಾಗಿಯೋ, ತೀವ್ರ ಬಡತನದ ಕಾರಣದಿಂದಾಗಿಯೋ ಅಲ್ಲಿನ ಅನೇಕ ವಿದ್ಯಾರ್ಥಿಗಳು ಪಾಸಾಗಿಯೋ ಫೇಲಾಗಿಯೋ ಶಾಲೆಯಿಂದ ದೂರ ಉಳಿದಿದ್ದರು, ಕೂಲಿನಾಲಿಗೆ ಹೋಗುತ್ತಿದ್ದರು. ಶಾಲೆಯ ಅಸ್ತಿತ್ವವನ್ನು ರಕ್ಷಿಸಲೆಂದೋ, ಬೇರೆ ಇನ್ಯಾವುದೇ ಕಾರಣಕ್ಕಾಗಿಯೋ ಹತ್ತಾರು ಡ್ರಾಪ್ ಔಟ್ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲು ಮಾಡಿಕೊಂಡಿದ್ದೆ. ಅದೂ ಜಿಲ್ಲಾ ಶಿಕ್ಷಣಾಧಿಕಾರಿಗಳ ಸಹಕಾರದಿಂದ. ಅಂಥವರಲ್ಲಿ ಶಿವಲಿಂಗನೂ ಒಬ್ಬ, ನನ್ನಲ್ಲಿ ತನಗೆ ಆಸಕ್ತಿ ಕೆರಳಿತೋ, ಅವನಲ್ಲಿ ನನಗೆ ಆಸಕ್ತಿ ಕೆರಳಿತೋ! ಒಂದೇ ಮಾತಿಗೆ ಒಪ್ಪಿ ಶಾಲೆಗೆ ಸೇರಿಕೊಂಡ. ಉಳಿದೆಲ್ಲ ಸಹಶಿಕ್ಷಕರು ಅದಕ್ಕೆ ಸಹಕರಿಸಿದರು. ಅವನ ವಿಧೇಯತೆ ಅವರಿಗೆಲ್ಲ ಹಿಡಿಸಿತು. ಅವರು ಅವನಿಗೆ ಸಹಾಯ ಮಾಡಲು ಸಿದ್ದರಿದ್ದರು, ಆದರೆ ಸ್ವಾಭಿಮಾನಿ ಶಿವಲಿಂಗ ಒಪ್ಪಲಿಲ್ಲ, ರಜೆ ದಿವಸಗಳಲ್ಲಿ ಕೂಲಿಕೆಲಸಕ್ಕೆ ಹೋಗುತ್ತಿದ್ದ, ಮಜ್ದೂರಿಯ ಪಾವಲಿ ಭಾಗವನ್ನು ತನ್ನ ಶಿಕ್ಷಣದ ಖರ್ಚಿಗೆ ವಿನಿಯೋಗಿಸುತ್ತಿದ್ದ, ಉಳಿದ ಮುಕ್ಕಾಲು ಭಾಗವನ್ನು ತನ್ನ ಸಂಸಾರ ನಿರ್ವಹಣೆಗೆ ಖರ್ಚು ಮಾಡುತ್ತಿದ್ದ. ಶಿಕ್ಷಣದಷ್ಟೆ ದುಡಿಮೆಯೂ ಮುಖ್ಯ ತಾನೆ! ವಾರಕ್ಕೆರಡು ಸಲವಾದರೂ ಅವನ ಗೈರುಹಾಜರಿಯನ್ನು ಅನಧಿಕೃತವಾಗಿ ಅನುಮೋದಿಸುತ್ತಿದ್ದೆ, ನಮಗೂ ಸಹಾಯಕರ ಆಸರೆಯ ಅವಶ್ಯಕತೆ ಇತ್ತು, ದಿನಗಳೆದಂತೆ ಮನೆಯ ವಾತಾವರಣಕ್ಕೆ ಹೊಂದಿಕೊಂಡ, ಮನೆಯ ಮಗನಂತಾದ. ಅವನ ತಾಯಿ ಗೌರಮ್ಮ ಸಹ ದಿನಕ್ಕೊಂದು ಸಲವಾದರೂ ಮನೆಗೆ ಬಂದು ಪತ್ನಿಯ ಸಂಗಡ ಕೆಲಕಾಲ ಇದ್ದು ಹೋಗಲಾರಂಭಿಸಿದಳು, ಅವರಿಬ್ಬರ ನಡುವೆ ಕಷ್ಟ ಸುಖಗಳ ವಿನಿಮಯ ಸಾಂಗೋಪಾಂಗವಾಗಿ, ಅನ್ನಪೂರ್ಣ ಒಮ್ಮೆ ಅವರೂ ಒಂದು ಕಾಲದಲ್ಲಿ ಶ್ರೀಮಂತರಿದ್ದರಂತೆ, ನೂರಾರೆಕರೆ ಜಮೀನಿತ್ತಂತೆ ಪಾಪ ಎಂದು ಉದ್ಗರಿಸಿದಳು. ಆಕೆ ಹೇಳಿದ್ದರಲ್ಲಿ ಸುಳ್ಳಿರಲಿಲ್ಲ, ಗೌರಮ್ಮನ ಗಂಡ ಬಸವೇಗೌಡ ಗಡಿಭಾಗದ ಹಳ್ಳಿಯಾದ ಮೋಕಾದಲ್ಲಿ ಸ್ಥಿತಿವಂತನಿದ್ದ, ಇಸ್ಪೀಟ್ ಖಯಾಲಿಯಿಂದಾಗಿಯೋ ಕೋರ್ಟು ಖಟ್ಲೆಗಳಿಂದಾಗಿಯೇ ಸ್ಥಿರಚರಾಸ್ತಿ ಕಳೆದುಕೊಂಡು ಬರಿಗೈಯಾಗಿದ್ದ, ಸಾಲ ಕೊಟ್ಟವರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದ. ವಿಧವೆ ಗೌರಮ್ಮ ತನ್ನ ಮಕ್ಕಳನ್ನು ತೆಕ್ಕೆಯಲ್ಲಿ ಅವುಚಿಕೊಂಡು ಗೂಳ್ಯಂ ಸೇರಿಕೊಂಡಿದ್ದಳು.

ಹೆಂಡತಿ ನಿಮ್ಮವು ಯಾವುದಾದ್ರು ಹಳೆ ಪ್ಯಾಂಟು ಶರಟಿದ್ರೆ ಶಿವಲಿಂಗಗೆ ಕೊಡ್ರಿ ಎಂದು ಆ ದಿವಸ ಸಲಹೆ ನೀಡಿದಳು, ಕೊಡಬಹುದು, ಆದರೆ ನನ್ನ ಸೈಜೇ ಬೇರೆ! ಅವನ ಸೈಜೇ ಬೇರೆ! ಕಟ್ ಮಾಡಿಸಿಕೊಂಡು ಹೊಲಿಸಿಕೊಳ್ಳಬೇಕು, ಆಲ್ಟರ್ ಕೆಲಸವನ್ನು ಕುಶಲ ಟೈಲರನಿಗೆ ವಹಿಸಬೇಕು. ಹ್ಹಾಂ! ವಿಶೇಷ ಸಂಗತಿ ಪ್ರಸ್ತಾಪಿಸುವುದನ್ನು ಮರೆತಿದ್ದೆ, ಶಿವಲಿಂಗ ಸಹ ಹಿಂದ್ಯಾವತ್ತೋ ಯಾರ ಬಳಿಯೋ ಟೈಲರಿಂಗ್ ಕೆಲಸ ಕಲಿಯುತ್ತಿದ್ದನಂತೆ! ತನಗೆ ಬೇಕಾದ ಅಳತೆಯಲ್ಲಿ ಹೊಲಿಸಿಕೊಳ್ಳಲಿ, ಮಜ್ದೂರಿ ನೀಡಿದರಾಯಿತು, ಬಾದರಾಯಣ ಕಾಲದ ಟ್ರಂಕ್ ತೆರೆದೆ, ಅದರ ತುಂಬೆಲ್ಲಾ ವಸ್ತ್ರವಿಲಾಸ. ಹೆಂಡತಿಯವು, ಎಲ್ಲೋ ಕಲಿಯುತ್ತಿರುವ ಚಿಕ್ಕಚಿಕ್ಕ ಮಕ್ಕಳವು. ಕೊಡೋದು ಕೊಟ್ತೀರಿ, ಒಳ್ಳೇದೆ ಕೊಡಿರಿ ಎಂದು ಹೇಳುತ್ತ ತಾನಿದ್ದಲ್ಲಿಂದಲೇ ಎದ್ದು ಬಂದಳು, ಒಂದು ಜೊತೆಯನ್ನು ಕೈಲಿ ಹಿಡಿದು ಇದನ್ನು ಕೊಡಿ ನೆನೆಸಿಕೊಳ್ತಾನೆ ಎಂದು ಸಲಹೆ ನೀಡಿದಳು. ನನಗಿದ್ದ ಎರಡು ಜೊತೆಗಳ ಪೈಕಿ ಅದೂ ಒಂದು, ಅದು ತನಗೂ ಗೊತ್ತು. ಅದಲ್ಲದೆ ತಿಂಗಳ ಹಿಂದೆ ಹೊಲಿಸಿದ್ದು, ಹೇಗೋ ಅರಿಯರ್ಸು ಬರ್ತದಲ್ಲ, ಹೊಲಿಸಿಕೊಳ್ಳುವಿರಂತೆ ಎಂದಳು, ನಿರಾಕರಿಸುವುದಾಗಲಿಲ್ಲ. ಕೈಯಲ್ಲಿ ಹಿಡಿದುಕೊಳ್ಳುವುದಕ್ಕೂ ಅವನು ಬರುವುದಕ್ಕೂ ಸರಿ ಹೋಯಿತು. ಹೊಲಿಸಿಕೊಳ್ಳೋ ಎಂದು ನೀಡಿದೆ, ತನಗರಿವಿಲ್ಲದಂತೆ ಇಸಿದುಕೊಂಡ, ಅಳತೆ ನೋಡಲೆಂದು ಎತ್ತಿ ಹಿಡಿದ, ಅದರ ಹಿಂದೆ ಅಗೋಚರವಾದ, ಪುನಃ ಅನಾವರಣಗೊಂಡ, ಅರಗಿಸಿಕೊಳ್ಳಲಾಗದ ಭಾವನೆಗಳನ್ನು ವ್ಯಕ್ತಪಡಿಸಿದ. ಮಫತ್ಲಾಲ್ ಪ್ಯಾಂಟೂ, ಸೂರತ್ ಮಿಲ್ಲಿನ ಅಂಗಿಯೂ! ಜೊತೆಗೆ ಹತ್ತು ರೂಪಾಯಿ ಬೇರೆ! ನಿರಾಕರಿಸುತ್ತಿದ್ದನೇನೋ! ಆದರೆ ಬಡತನ ತಡೆಯಿತು. ಅವನ್ನೆಲ್ಲ ಕಂಕುಳಲ್ಲಿರಿಸಿಕೊಂಡ, ವಿಚಿತ್ರ ಗಾಂಭೀರ್ಯ ಪ್ರಕಟಿಸಿದ, ಹೊರಟು ಮರೆಯಾದ. ಅಂತೂ ತಮ್ಮ ಮರ್ಯಾದೆ ಉಳಿಸಿದನಲ್ಲ, ನೆಮ್ಮದಿಯ ಉಸಿರುಬಿಡುತ್ತ ಹೆಂಡತಿಯ ಮುಖ ನೋಡಿದೆ.
ಬಡವರ ತುಟಿಗಳ ನಡುವಿನ ಮುಗುಳ್ನಗೆಗಿಂತ ಶ್ರೇಷ್ಟ ಕವಿತೆ ಪ್ರಪಂಚದಲ್ಲಿ ಇನ್ನೊಂದಿರಲಾರದು, ಅದನ್ನು ಸೃಷ್ಠಿಸುವುದೇ ನೈಜಸೃಜನಶೀಲತೆ. ಶಿಷ್ಯ ಠಾಕುಠೀಕಾಗಿ ಬಂದ ಬಳಿಕ ಇದು ಅರ್ಥವಾಯಿತು. ನಮ್ಮೆದರು ವಧುವಿನಂತೆ ನಾಚಿದ, ನಾವಿಬ್ಬರೂ ಅವನ ಭುಜಗಳನ್ನು ಸ್ಪರ್ಶಿಸಿ ಅಭಿನಂದಿಸಿದೆವು. ಆದರೆ ನಮ್ಮ ಕವಿತೆ ಚಿರಾಯುವಲ್ಲವೆಂದು ಎರಡು ದಿವಸಗಳ ಬಳಿಕ ಅರ್ಥವಾಯಿತು. ಬಂದಾಗ ಎಂದಿನಂತೆ ಹಳೆಯ ಬಟ್ಟೆಗಳನ್ನು ಧರಿಸಿದ್ದ, ತನ್ನ ಕಂಕುಳ ಸುರಳಿಯಲ್ಲಿದ್ದ ದಿರಿಸುಗಳನ್ನು ನಮ್ಮೆದರು ಹರಡಿದ, ನಮ್ಮಮ್ಮ ನಿಮ್ಮಂಥೋರತ್ರ ಇಸ್ಕೋಬಾರದೆಂದು ಬಯ್ದಳು ಸಾರ್ ಎಂದು ಸಂತೋಷದ ಮೇಲೆ ಬರೆ ಎಳೆದ. ಸಂದರ್ಭ ಸ್ವಾರಸ್ಯ ವಿವರಿಸದೆ ಮೌನವಾಗಿ ಮರಳಿದ. ನಮಗಾದ ಆಘಾತದ ಗಾಯ ಮಾಸುವ ಮೊದಲೇ ಅಚಾನಕ್ ಭೆಟ್ಟಿಯಾದ ಕಾರೆಕಲ್ ಗೌಡರು ಅಂಥೋರಿಗ್ಯಾಕ ಕೊಡೋಕೆ ಹೋದ್ರಿ ಸಾರ್ ಎಂದೇ ಮಾತನ್ನಾರಂಭಿಸಿದರು. ಅವರ ಮಾತಿನಂತೆ..
ವಿಷಯ ತಿಳಿದ ಮಾತೋಶ್ರಿ ಗೌರಮ್ಮ ಇವುಗಳ್ನ ಮೊದ್ಲು ಕೊಟ್ಬಂದು ಮನಿ ಹೊಸ್ತಿಲು ತುಳಿಯಲೋ ಬಾಡ್ಯಾ, ಬಣಜಿಗರಾದ ನಾವು ಆ ಕುಂಬಾರ್ ಮೇಸ್ಟ್ರು ಉಟ್ಟುಬಿಟ್ಟ ಬಟ್ಟೆಬರೇನ ತೊಟ್ಕೊಳ್ಳೋದಂದ್ರೇನು! ಎಂದು ಕ್ಲಾಸ್ ತೆಗೆದುಕೊಂಡಳಂತೆ! ವಿಷಯ ತಿಳಿದು ಆಶ್ಚರ್ಯ, ದುಃಖವಾಗಲಿಲ್ಲ, ಬದಲಿಗೆ ಆವರಿಸಿದ ವಿಷಾದದ ವೃಣ ವಾಸಿಯಾಗಲೇ ಇಲ್ಲ. ಬಟ್ಟೆಪ್ರಕರಣದ ಬಳಿಕ ಶಿವಲಿಂಗ ನಮ್ಮಿಂದ ದೈಹಿಕವಾಗಿ ದೂರವಾದ. ತನಗಿಂತ ಉತ್ತಮ ಕುಲಸಂಜಾತರ ಎಂಜಲ ಹರಕಲು ಬಟ್ಟೆ ಧರಿಸಿ ನಮ್ಮೆದುರು ಹೆಮ್ಮೆಯಿಂದ ಬೀಗತೊಡಗಿದ. ಈ ಘಟನೆಯ ಗುನೇಗಾರರ್ಯಾರು? ನೀವಾದರೂ ಹೇಳಿ.
ಕುಂ ವೀ ಕಾಲಂ: ಬಟ್ಟೆಹೀನನ ಮನೆಯ…
ನಿಮಗೆ ಇವೂ ಇಷ್ಟವಾಗಬಹುದು…


ಗುನೇಗಾರರು….ಗೊತ್ತಿಲ್ಲ ಸಾರ್…
ಅವಿದ್ಯಾವಂತರೆಂಬ ಕಾರಣಕ್ಕಾದರೂ ಒಂದು ಪಕ್ಷ ನೀವೂ ಸಹ ಅವರನ್ನು ಮನ್ನಿಸ ಬಹುದೇನೋ?
ಆದರೆ..ಇಂದೂ ಸಹ…ಅತೀ ವಿದ್ಯಾವಂತರೂ ಎಸಗುತ್ತಿರುವ ಮತೀಯ ಮೋಹ-ದ್ರೋಹಗಳಿಗೆ ಏನನ್ನೋಣ?
ನಾವು ಬದುಕಿರುವಾಗಲೇ ಈ ಜಾತೀಯತೆ ಅಂತ್ಯ ಕಾಣಬಹುದೇ?
ಕುವೆಂಪು ಕಾಣಬಯಸಿದ “ಮನುಜ ಮತ-ವಿಶ್ವ ಪಥ” ಸಾಕಾರವಾಗ ಬಲ್ಲದೇ?
“ಬಡವರ ತುಟಿಗಳ ನಡುವಿನ ಮುಗುಳ್ನಗೆಗಿಂತ ಶ್ರೇಷ್ಟ ಕವಿತೆ ಪ್ರಪಂಚದಲ್ಲಿ ಇನ್ನೊಂದಿರಲಾರದು” ಎಂಬಲ್ಲಿಗೆ ನನ್ನ ಮುಖದ ಮೇಲೂ ಮೂಡಿದ ಒಂದು ಮುಗುಳ್ನಗೆ ಮುಂದಿನ ಸಾಲುಗಳನ್ನು ಓದುವಲ್ಲಿಗೆ ಮಾಯವಾಗಿತ್ತು. ಪ್ರಶ್ನೆ ಉಳಿದೇ ಇದೆ, ಈ ಘಟನೆಯ ಗುನೇಗಾರರ್ಯಾರು?…….!
ಬಟ್ಟೆ ತೊಡಲಿಲ್ಲ ವಾದ್ರೆ ಅಡ್ಡಿಯಿಲ್ಲ ಹೊಟ್ಟೆ ತುಂಬ ಊಟನಾದ್ರೂ ಮಾಡಿದನಲ್ಲ. ನನಗೆ ಅಷ್ಟೆ ಸಮಾಧಾನ.
ಮಾಲತಿ ಎಸ್.
ಅಬ್ಬಾ..!! ಬಡತನದಲ್ಲೂ ಮೇಲು-ಕೀಳು ಜಾತಿ ಮಂತ್ರಗಳು.. ಒಂದು ಗಾದೆ ನೆನಪಾಯಿತು ಈ ಕಥೆ ಓದಿದ ಮೇಲೆ “ಬಿದ್ದಿದ್ದೋನಿಗೆ ಬಿಸೆ ಹಿಟ್ಟು ಕೊಟ್ಟಿದ್ದಕ್ಕೆ ಎದ್ದುಬಂದು ಎದೆಗೊದ್ದನಂತೆ” 🙁
“ಬಡವರ ತುಟಿಗಳ ನಡುವಿನ ಮುಗುಳ್ನಗೆಗಿಂತ ಶ್ರೇಷ್ಟ ಕವಿತೆ ಪ್ರಪಂಚದಲ್ಲಿ ಇನ್ನೊಂದಿರಲಾರದು” ನಿಜ ಸರ್ ನಿಮ್ಮ ಮಾತು.
ಇದಕ್ಕೆ ಗುನೇಗಾರರನ್ನು ಹುಡುಕಲು ಸಾಧ್ಯವೇ ಇಲ್ಲವೇನೋ? ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದುಬಿಡುತ್ತವೆ.
ಓದುತ್ತಾ ಓದುತ್ತಾ ಕಣ್ಣೀರಾಗಿದ್ದ ನಾನು, ರಪ್ಪನೇ ರಾಚಿದ ವಾಸ್ತವದ ಇನ್ನೊಂದು ಮಗ್ಗುಲಕ್ಕೆ (ಇಂಥ ಸತ್ಯ ಹಳ್ಳಿಗಳಲ್ಲಿ ಈಗಲೂ ಸಾಮಾನ್ಯವೆಂಬುದು ಗೊತ್ತಿದ್ದೂ) ಹತಾಶಳಾದೆ.
chenagide sir!
“ಬಡವರ ತುಟಿಗಳ ನಡುವಿನ ಮುಗುಳ್ನಗೆಗಿಂತ ಶ್ರೇಷ್ಟ ಕವಿತೆ ಪ್ರಪಂಚದಲ್ಲಿ ಇನ್ನೊಂದಿರಲಾರದು, ಅದನ್ನು ಸೃಷ್ಠಿಸುವುದೇ ನೈಜಸೃಜನಶೀಲತೆ”
wonderful!!!
ಮೇಷ್ಟ್ರೇ, ಬಡವರ ತುಟಿಗಳ ನಡುವೆ ಅರಳುವ ಮುಗುಳ್ನಗೆ ಎಲ್ಲಾ ಕವಿತೆಗಳಿಗಿಂತ ಶ್ರೇಷ್ಠ ಎನ್ನುವುದೇನೋ ನಿಜ.
ಜಾತಿ ಎಂಬುದು ಆ ಮುಗುಳ್ನಗೆಯನ್ನು ಒಂದು ಆಹ್ಲಾದಕರ ನಗುವಾಗಲು ಬಿಡಲೊಲ್ಲದು ಅಲ್ಲವಾ. ಹಸಿದ ಹೊಟ್ಟೆಗೆ ಅನ್ನ ನೀಡದ ಆ ಜಾತಿ, ಕಾಣುವ ತಿಕವನ್ನು ಮುಚ್ಚಿಕೊಳ್ಳಲು ಸಿಕ್ಕಿದ ಬಟ್ಟೆಯನ್ನು ಸ್ವೀಕರಿಸಲು ನಿರಾಕರಿಸುವಂತೆ ಮಾಡಿದ ಆ ಗುನೇಕಾರ ಮುಂದೆ ಆ ಶಿವಲಿಂಗುವಿನ ಕಿಚ್ಚಿಗೆ ಖಂಡಿತ ಬಲಿಯಾಗಿರುತ್ತಾನೆ.
ಏನೇ ಇರಲಿ, ಪ್ರೀತಿಯಿಂದ ಕೊಡೋದ್ಡನ್ನು ಭಕ್ತಿಯಿಂದ ಸ್ವೀಕರಿಸವ ಔದಾರ್ಯ ಗೊತ್ತಿಲ್ಲ ಜಾತಿಯಂತು ಖರೇ
ಅವರಿವರ ಬಳಿ ಬೇಡಿ ತಂದ ಹಳೆಯ ಪ್ಯಾಂಟು ಶರ್ಟುಗಳನ್ನು ನಮ್ಮವ್ವ ತಾನೇ ಕೂತು, ಅಳತೆಗೆ ತಕ್ಕಂತೆ ಕತ್ತರಿಸಿ ಹೊಲಿದು ನನಗೆ ಕೊಡುತ್ತಿದ್ದ ದಿನಗಳ ನೆನಪು ಬಂತು ಕುಂ.ವೀ. ಕಣ್ಣು ಒದ್ದೆಯಾಯಿತು, ಜತೆಗೆ ಆ ‘ದುರಭಿಮಾನ’ಕ್ಕೆ ಸಿಟ್ಟೂ ಬಂತು.
ಹೊಟ್ಟೆಗೆ ಊಟ ಸಿಕ್ಕಾಗ ಇರದ ಜಾತಿ ನೀವ್ ಬಟ್ಟೆ ಕೊಟ್ಟಾಗ ಬಂತಾ ?? ವಿಪರ್ಯಾಸ…
ನಿಮ್ಮ ಒಂದೊಂದು ಅನುಭವಸಾರದ ಅಂಕಣಗಳು ಪ್ರಥಮ ನಿರೂಪಣೆಯಲ್ಲಿ ಸಾಗುವ ಸಣ್ಣ ಕಥೆಗಳನ್ನೆ ಹೋಲುತ್ತವೆ. ಜಾತಿ ಅನ್ನೋ ವಿಷಬೀಜ ನಮ್ಮೊಳಗಿನ ಮಾನವೀಯತೆಯನ್ನೆ ಅಲುಗಾಡಿಸಿ ಬಿಡುತ್ತಿದೆ ಅನಿಸುತ್ತೆ.
“ayyooo krura vaastava” jaati bhaava
duravaagalu innu saavira varsha beekeeno
ಬಡವರ ತುಟಿಗಳ ನಡುವಿನ ಮುಗುಳ್ನಗೆಗಿಂತ ಶ್ರೇಷ್ಟ ಕವಿತೆ ಇನ್ನೊಂದು ಇರಲಾರದು ಎಂಬುದು ಎಷ್ಟು ನಿಜವೋ, ಈ ಜಾತಿ ವ್ಯವಸ್ಥೆ ಆ ಕವಿತೆಯ ಚಿಗುರನ್ನೇ ಚಿವುಟಿ ಆಕುತ್ತದೆ ಎಂಬುದು ಅಷ್ಟೇ ಸತ್ಯ. ನಿಮ್ಮ ಅನುಭವದ ಬುತ್ತಿ, ನಿಮ್ಮ ಬರವಣಿಗೆ ಇಷ್ಟವಾಯ್ತು ಸಾರ್….ನಿಮ್ಮ ಅನುಭವ ನಮಗೆ ದಾರಿಧೀಪವಾಗಲಿ.
ಕಥೆ ಚೆನ್ನಾಗಿದೆ ಸಾರ್, ಧನ್ಯವಾದಗಳು
ಜಾತಿಯ ಭೂತ ಮನುಷ್ಯ್ ತ್ವವನ್ನೂ ಮೀರಿ ಬೆಳೆದಿದೆ. ಕಾಲವೇ ಉತ್ತರಿಸಬೇಕು ಸರ್..