ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಕಾಲಂ : 'ಪಂಪಣ್ಣನ ಗರ್ವಭಂಗ'

ನನ್ನಂಥ ಘನತ್ಯಾಜ್ಯ ವಸ್ತುಗಳನ್ನು ತನ್ನ ಕಡೆ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಆ ಫ್ಯಾನ್ಸಿಸ್ಟೋರಿಗೆ ಆ ಹೆಸರನ್ನಿಟ್ಟಿದ್ದು ಮಾರುತಿ ಮಂದಿರಕ್ಕೆ ಅಭಿಮುಖವಾಗಿದ್ದ ಕಾರಣಕ್ಕೆ. ಅದರ ಮಾಲಕ ಒಂದು ಕಾಲದಲ್ಲಿ ನನ್ನ ಸಹಪಾಠಿಯಾದ ರಾಜಣ್ಣ. ಜನ್ಮದಾರಾಭ್ಯ ತನ್ನ ನಾಮವಾಚಕದ ಪೂರ್ವದಲ್ಲಿದ್ದ ತೂಲಹಳ್ಳಿ ಎಂಬ ಪದ ಪಲ್ಲಟಗೊಂಡದ್ದು ಕೊಟ್ಟೂರಲ್ಲಿ ರೈತರ ಅಸಹಕಾರ ಚಳವಳಿ ನಡೆದ ಸಂದರ್ಭದಲ್ಲಿ, ಅದೂ ಬೆಳೆಗಳಿಗೆ ಸೂಕ್ತಬೆಲೆಗೆ ಒತ್ತಾಯಿಸಿ. ವಿನಾಕಾರಣ ಒಂದುನೂರಾನಲವತ್ನಾಲ್ಕು, ಅದಕ್ಕೂ ರೈತರು ಕೇರ್ ಮಾಡದಿದ್ದಾಗ ಕರ್ಫ್ಯೂ, ಅದೂ ಕೆಲಸಕ್ಕೆ ಬಾರದಿದ್ದಾಗ ಎಸ್ಪಿ ದೇವರಮನಿ ಗೋಲಿಬಾರ್ ಘೋಷಿಸಿದ, ನಿರುಪದ್ರವಿ ನಮ್ಮೂರಿನ ಜನರು ಆ ಹೆಸರನ್ನು ಕೇಳಿದ್ದರು, ಆದರೆ ಖುದ್ದ ನೋಡಿರಲಿಲ್ಲ, ಯಾರೂ ಹೊರಗಡೆ ಬರಬೇಡಿರಿ ಎಂದು ಪೋಲಿಸ್ ವ್ಯಾನುಗಳು ಗಸ್ತು ಹೊಡೆಯುತ್ತ ಹೇಳಿದರೂ ಕೇಳಿಸಿಕೊಳ್ಳುವವರು ಯಾರು? ಅದನ್ನು ಒಂದು ಕೈನೋಡಿಯೇ ಬಿಡುವುದು ಎಂದು ಭಾವಿಸಿದ ಕೆಲವರು ತಮ್ಮತಮ್ಮ ಅಂಗಡಿಗಳ ಮುಂದೆ ತಮ್ಮ ಗೆಳೆಯರೊಂದಿಗೆ ಜಮಾವಣೆಗೊಂಡರು, ಕುತೂಹಲದಿಂದ. ಅಂಥವರಲ್ಲಿ ತೂಲಹಳ್ಳಿ ರಾಜಣ್ಣನೂ ಒಬ್ಬ. ತನ್ನೆದೆಗಳಿಗೆ ಕೈಕಟ್ಟಿ ಪರಮವಿಧೇಯತೆಯಿಂದ ಸಿನೆಮಾಗಳನ್ನು ನೆನಪಿಸಿಕೊಳ್ಳುತ್ತ ನೋಡುತ್ತಿದ್ದ, ಸ್ವಲ್ಪ ಹೊತ್ತಿಗೆ ತಮಗೆ ಅನತಿ ದೂರದಲ್ಲಿ ಶ್ಯಾಮಲವರ್ಣದ ವ್ಯಾನೊಂದು ಬಂದು ನಿಂತಿತು, ಅದರಲ್ಲಿರುವ ಸಶಸ್ತ್ರಧಾರಿ ತನ್ನ ಸಹಪಾಠಿ, ಏಯ್ ನಾಗ್ರಾಜ್ ಎಂದು ಕೂಗಿದ್ದ, ಆತ ಅದನ್ನು ಕೇಳಿಸಿಕೊಂಡನೋ ಇಲ್ಲವೋ, ನೋಡಿದನೋ ಇಲ್ಲವೋ! ತನ್ನ ಹೆಗಲಲ್ಲಿ ಜೋತಾಡುತ್ತಿದ್ದ ಕೋವಿಯನ್ನು ತೆಗೆದುಕೊಂಡು ಅವರತ್ತ ಗುರಿ ಇರಿಸಿದ, ಪ್ರಾಕ್ಟಿಕಲ್ಲಾಗಿ ತೋರಿಸಲು ತನ್ನ ಗೆಳೆಯ ಪ್ರಯತ್ನಿಸುತ್ತಿರಬಹುದೆಂದು ಈ ಗೆಳೆಯ ಭಾವಿಸಿದ. ಅವನ ಪತ್ನಿ ರತ್ನಮ್ಮ ತನ್ನ ಅಂಗಡಿಯಲ್ಲಿ ಮಾಡಿರುವ ಉದ್ರಿಯನ್ನೂ ನೆನಪು ಮಾಡಿಕೊಂಡ. ಹಲವು ಸಲ ಕೇಳಿದ್ದ, ಆಕೆ ತನ್ನ ಗಂಡನ ಕಡೆ ಬೆರಳು ಮಾಡಿದ್ದಳು, ಆದರೆ ಆತ ಸಂಬಳ ಬರಲಿ ಎಂದು ಹೇಳಿದ್ದ. ಆ ವಿಷಯಕ್ಕೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ತುಸು ಖಾರಯುಕ್ತ ಮಾತುಕತೆ ನಡೆದಿತ್ತೋ ಏನೋ! ಆದರೆ ಅದೆಲ್ಲ ಹಳೆಯ ಸಂಗತಿ. ಅವನು ಬಾಕಿಯನ್ನು ಇನ್ನೊಂದು ತಿಂಗಳ ಬಳಿಕ ಕೊಟ್ಟರಾಯಿತು. ತನ್ನ ಅದೃಷ್ಟವೋ ಎಂಬಂತೆ ತನ್ನ ಕಡೆ ಕೋವಿಯನ್ನು ಗುರಿ ಇಟ್ಟಿರುವನಲ್ಲ, ಅಷ್ಟು ಸಾಕು ಎಂದು ಮಾನಸಿಕವಾಗಿ ಅಂದುಕೊಂಡನೇನೋ! ಅಷ್ಟರಲ್ಲಿ ನಾಗ್ರಾಜ ತನ್ನ ಕೋವಿಯನ್ನು ಉಪಸಂಹರಿಸಿ ಪುನಃ ಹೆಗಲಿಗಿಳಿಬಿಟ್ಟುಕೊಂಡು ಕೂತ ವ್ಯಾನು ವಿಲಕ್ಷಣ ಸದ್ದು ಮಾಡುತ್ತ ಅಲ್ಲಿಂದ ಮಾಯವಾಯಿತು.

ಆದರೆ ಅದರ ಪರಿಣಾಮ ಅರಿವಿಗೆ ಬಂದದ್ದು ತನ್ನ ಪ್ಯಾಂಟಿನ ನಿಗೂಢ ಜಾಗದಲ್ಲಿ ಏನೋ ತಣ್ಣಗೆ ಹರಿಯಲಾರಂಭಿಸಿದಾಗ. ತಾನು ಪರಾವರ್ತಿತ ಪ್ರತಿಕ್ರಿಯೆಗೆ ಒಳಪಟ್ಟು ಮೂತ್ರ ವಿಸರ್ಜಿಸಿಕೊಂಡಿರಬಹುದೆ ಎಂದು ಅನ್ಯಥಾ ಭಾವಿಸಿದ, ಹರಿಯುತ್ತಿರುವ ದ್ರವ ಏನಿರಬಹುದೆಂದು ಬೆರಳುಗಳಿಂದ ಮುಟ್ಟಿ ನೋಡಿಕೊಂಡ, ಕೆಂಪಗೆ ಕಾಣಿಸಿತು, ಭಯಗೊಂಡ. ನಾಗ್ರಾಜನ ಕೋವಿಯಿಂದ ಉಡ್ಡಯನಗೊಂಡಿದ್ದ ಬುಲೆಟ್ ಆತನ ತೊಡೆಯನ್ನೊಂದೇ ಅಲ್ಲದೆ ತನ್ನ ಹಿಂದೆ ನಿಂತಿದ್ದ ಹೋಟೆಲ್ ತಿಪ್ಪೇಸ್ವಾಮಿಯ ತೊಡೆಯಲ್ಲೂ ರಂದ್ರ ಕೊರೆದಿತ್ತು. ರೋಧನ ಮುಗಿಲಿಗೆ ಮುಟ್ಟಿತು, ಆದರೆ ಅದು ಸಂಬಂಧಿಸಿದ ಇಲಾಖೆಯ ಕಿವಿಗೆ ಮುಟ್ಟಲಿಲ್ಲ, ತನ್ನ ಡ್ಯೂಟಿ ತಾನು ಮಾಡಿರುವುದಾಗಿ ಅದು ಸಮರ್ಥಿಸಿಕೊಂಡಿತು. ಅವರಿಬ್ವರು ದಾವಣಗೆರೆಯ ಬಾಪೂಜಿ ಹಾಸ್ಪಿಟಲ್ಲಿಗೆ ದಾಖಲಾದರು, ತಿಂಗಳುಗಳ ಕಾಲ ಚಿಕಿತ್ಸೆ ನಡೆಯಿತು, ಹೋಟಲ್ ಬಿಕರಿಯಾದರೂ ತಿಪ್ಪೇಸ್ವಾಮಿ ಅಲ್ಲಿಯೇ ಕೊನೆಯುಸಿರೆಳೆದ, ಆದರೆ ಅಂಥ ದುಬಾರಿ ಕಾಲದಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷ ಖರ್ಚಾದ ಬಳಿಕ ರಾಜಣ್ಣ ಬದುಕುಳಿದ, ಆದರೆ ತನ್ನೆರಡು ಕಾಲುಗಳ ಪೈಕಿ ಒಂದು ಊನಗೊಂಡಿತು. ಊರ ಜನರು ಆತನನ್ನು ವೀರೋಚಿತವಾಗಿ ಸ್ವಾಗತಿಸುವ ಬದಲು ಬುಲೆಟ್ ಪ್ರೂಫ್ ಎಂಬ ಬಿರುದು ನೀಡಿದರು.

ಹೀಗಾಗಿ ಆತ ಬುಲೆಟ್ ಪ್ರೂಫ್ ರಾಜಣ್ಣನೆಂದು ಸಾರ್ವಜನಿಕವಾಗಿ ಕರೆಸಿಕೊಳ್ಳಲಾರಂಭಿಸಿದ್ದು. ಅದೊಂದೇ ಅಲ್ಲದೆ ಆತನ ಸ್ಟೋರಿನ ಪೂರ್ವಪದ ಈ ಮೊದಲು ಮಾರುತಿ ಇದ್ದದ್ದು ಬುಲೆಟ್ ಪ್ರೂಫ್ ಎಂದು ಬದಲಾಯಿತು, ವ್ಯವಹಾರದ ದೃಷ್ಟಿಯಿಂದ ಆತ ಉಪಾಧಿಯನ್ನು ವಿನಯಪೂರ್ವಕವಾಗಿ ಸ್ವೀಕರಿಸಿದ, ಆದರೂ ವ್ಯಾಪಾರ ಸಾಧಾರಣವಾಯಿತು, ಅಂಗಡಿಯ ಶೋಕೇಸುಗಳು ಸಾಮಾನುಗಳಿಲ್ಲದೆ ಬಣಗುಟ್ಟಲಾರಂಭಿಸಿದವು. ಆದರೂ ತಾನು ಎದೆಗುಂದದೆ ಹೊತ್ತಿಗೆ ಸರಿಯಾಗಿ ಅಂಗಡಿಗೆ ಬರುವುದು ಹೋಗುವುದು ಮಾಡಲಾರಂಭಿಸಿದ, ಕಾಲಕ್ಷೇಪಕ್ಕೋ ಲಾಭದಾಸೆಗೋ ತನ್ನ ಅಂಗಡಿಯ ಹಿಂಬದಿಯ ಪಾಳುಕಟ್ಟಡದಲ್ಲಿ ಮಾರುತಿ ರಿಕ್ರಿಯೇಷನ್ ಕ್ಲಬ್ಬನ್ನು ಆರಂಭಿಸಿದ, ಕ್ಲಬ್ಬೆಂದ ಮೇಲೆ ಮಾಮೂಲಿ ಜನರು ಬಂದು ಹೋಗುವುದು ಸಾಧ್ಯವೆ! ಅಲ್ಲಿಗೆ ಬರುತ್ತಿದ್ದವರೆಲ್ಲ ಚಿಕ್ಕಪುಟ್ಟ ಪುಡಾರಿಗಳು, ನಿವೃತ್ತ ಸರ್ಕಾರಿ ನೌಕರರು, ಸ್ಟ್ರೀಟ್ ರೌಡಿಗಳು. ಅವರ ಉಪಟಳದಿಂದ ಇವರನ್ನು ರಕ್ಷಿಸಲು ಇವರ ಉಪಟಳದಿಂದ ಅವರನ್ನು ರಕ್ಷಿಸಲು ಎಲ್ಲಾ ಜಾಯಮಾನದ ವ್ಯಕ್ತಿಗಳು ಇಲ್ಲದಿದ್ದರಾಗುವುದೆ! ಕ್ಲಬ್ಬಿನಲ್ಲಿ ಸೋತವರು ಗೆದ್ದವರು ತಮ್ಮತಮ್ಮ ಸೊಂಟಗಳನ್ನು ಸುಧಾರಿಸಿಕೊಳ್ಳಲು ವಿಶ್ರಮಿಸುತ್ತಿದ್ದುದು ಮುಂಭಾಗದ ಸ್ಟೋರಿನ ಪಡಸಾಲೆಯಲ್ಲಿ. ಅವರ ಸಣ್ಣಪುಟ್ಟ ವಿಜ್ಞಾಪನೆಗಳನ್ನು ತಣಿಸುವ ಸಲುವಾಗಿ ರಾಜಣ್ಣ ಸಿಗರೇಟು ಬೀಡಿ ಗುಟುಕಾ ಇತ್ಯಾದಿ ವಸ್ತುಗಳನ್ನು ಮಾರಲಾರಂಭಿಸಿದ. ನಮ್ಮ ರಾಜಣ್ಣ ಸ್ವಲ್ಪ ಸದಭಿರುಚಿ ವ್ಯಕ್ತಿ, ಸಾಹಿತ್ಯವನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳ ಕುರಿತು ಚರ್ಚಿಸುತ್ತಿದ್ದ, ಪೋಲಿಸ್ ಇಲಾಖೆಗೆ ಸಂಬಂಧಿಸಿದ ಚರ್ಚೆಗಳು ಬಂದಾಗ ಮೌನವಹಿಸುತ್ತಿದ್ದ, ಶತ್ರು ಯಾವ ರೂಪದಲ್ಲಿರುವನೋ ಎಂಬ ಕಾರಣಕ್ಕಾಗಿ. ಆ ಕಾಲಘಟ್ಟದಲ್ಲಿ ಅರೆಕಾಲಿಕ ಸಾಹಿತಿಯೂ ಪ್ರಸಿದ್ದ ನಿರುದ್ಯೋಗಿಯೂ ಆಗಿದ್ದ ನಾನು ಸಹ ಅನುಕಂಪದ ದೃಷ್ಟಿಯಿಂದ ವಿರಾಮವೇಳೆಯನ್ನು ಅಲ್ಲಿ ಕಳೆಯುತ್ತಿದ್ದೆ, ಆತನ ಕಷ್ಟಸುಖ ವಿಚಾರಿಸುತ್ತಿದ್ದೆ. ಅಲ್ಲಿಗೆ ಬರುತ್ತಿದ್ದವರು ಎಂಥವರೆಂದರೆ ಅಂಥವರು. ರೋಗಿಗಳ ಅಭಾವದಿಂದ ನಿತ್ರಾಣಗೊಂಡಿದ್ದ ಡಾಕ್ಟರ್ ಜವಳಿ, ಕಕ್ಷಿದಾರರಿಲ್ಲದೆ ಕೊರಗುತ್ತಿದ್ದ ವಕೀಲ ಸಿದ್ದಪ್ಪ, ಎರಡು ಮೂರು ಸಲ ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಸ್ಪರ್ಧಿಸಿ ಆರ್ಥಿಕವಾಗಿ ಬಸವಳಿದಿದ್ದ ಪಂಪಣ್ಣ ಬೋವಿ, ಬೀದಿ ರಾಜಕಾರಣಿಗಳೆನ್ನಿಸಿದ್ದ ದೊಡ್ಡರಾಮಣ್ಣ, ಸಣ್ಣರಾಮಣ್ಣ ಹೀಗೆ ಹತ್ತುಹಲವರು.

ಆ ದಿವಸ ಮಾರುತಿ ರಿಕ್ರಿಯೇಷನ್ ಕ್ಲಬ್ಬಿಗೆ ರಜೆ ಘೋಷಿಸಿದ್ದರಿಂದ ಸ್ಟೋರಿನಲ್ಲಿ ಹೆಚ್ಚು ಜನರಿರಲಿಲ್ಲ, ಹಳೆಪೇಪರನ್ನೋದುತ್ತ ಕುಳಿತಿದ್ದ ರಾಜಣ್ಣ ತಲುಪಿದ ನನ್ನನ್ನು ಸ್ವಾಗತಿಸಿದ, ಗಾಚಾರ್ ಗಾಂಡ್ ಮಾರೇತೋ ಖುದಾ ಕ್ಯಾಕರೇಗ ಎಂದು ಕೇಳಿ ನಿಟ್ಟುಸಿರುಬಿಟ್ಟ, ಆತನನ್ನು ಸಂತೈಸಲು ಸೂಕ್ತಪದಗಳಿಗಾಗಿ ತಡಕಾಡಿದೆ. ಆದಿತ್ಯವಾರ ಎಂಬ ಕಾರಣಕ್ಕೆ ಒಂದಿಬ್ಬರು ಭಿಕ್ಷುಕರ ವೇಷದಲ್ಲಿದ್ದ ಜೋಗಮ್ಮಂದಿರು ಬಂದು ತಲಾ ನಾಲ್ಕಾಣೆ ಪಡೆದು ಮರಳಿದರು. ವೈನ್ ಶಾಪಿಗೆ ಲೈಸೆನ್ಸು ಪಡೆಯಲು ತಾನು ಉದ್ದೇಶಿಸಿರುವುದಾಗಿ ತಿಳಿಸಿದ, ಯಾರಾದರೂ ಎಕ್ಸೈಜ್ ಡಿಪಾಟರ್ುಮೆಂಟಿನಲ್ಲಿ ಯಾರ ಪರಿಚಯವಾದರೂ ಇದೆಯೇ ಎಂದು ಕೇಳಿದ, ಇಲ್ಲವೆಂದು ತಲೆ ಅಲ್ಲಾಡಿಸಿದೆ, ಬೋವಿ ಪಂಪಣ್ಣ ಇದಕ್ಕೆ ಸೂಕ್ತ ಎಂದು ಹೇಳುವುದಕ್ಕೂ ಆತ ಕಾಣಿಸಿಕೊಂಡು ಸ್ಟೋರನ್ನು ಪ್ರವೇಶಿಸುವುದಕ್ಕೂ ಸರಿ ಹೋಯಿತು. ಅದೂ ತನ್ನ ಕಂಕುಳಲ್ಲಿದ್ದ ದಿನಪತ್ರಿಕೆಯಿಂದ ಗಾಳಿ ಬೀಸಿಕೊಳ್ಳುತ್ತ. ಸ್ಟೂಲಿನ ಮೇಲೆ ಕುಳಿತುಕೊಂಡ ಸ್ವಲ್ಪ ಹೊತ್ತಿಗೆ ಜವಳಿ ಡಾಕ್ಟರ್ ಮತ್ತು ವಕೀಲ ಸಿದ್ದಪ್ಪ ಆಗಮಿಸಿ ತಮ್ಮತಮ್ಮ ಅಂತಸ್ತಿಗನುಸಾರವಾಗಿ ಕುಳಿತುಕೊಂಡರು.

ಮೇಸ್ಟ್ರು ಇವತ್ತು ನಮಗೆ ಪಾರ್ಟಿ ಕೊಡಬೇಕೆಂದು ನನ್ನನ್ನುದ್ದೇಶಿಸಿ ಕೇಳಿದ, ಇನ್ನೂ ಮೇಸ್ಟ್ರಾಗಿರದಿದ್ದರೂ ಮೇಸ್ಟ್ರು ಎಂಬ ಉಪಾದಿ ನನಗೆ ಪ್ರಾಪ್ತವಾಗಿತ್ತು, ಅದಕ್ಕೆ ಸಹಸದಸ್ಯರು ಅಡ್ಡಡ್ಡ ತಲೆ ಅಲ್ಲಾಡಿಸಿ ಯಾಕೆ ಏನು ವಿಶೇಷ ಎಂದು ಕುತೂಹಲ ತಳೆದರು. ಅದಕ್ಕೆ ಸಾಕ್ಷಿ ರೂಪದಲ್ಲಿ ಪಂಪಣ್ಣ ಅವತ್ತಿನ ಪೇಪರನ್ನು ಎಲ್ಲರ ಸಮಕ್ಷಮ ಹರಡಿ ಪ್ರದರ್ಶಿಸಿದ, ಆಶ್ಚರ್ಯವೆಂದರೆ ನನ್ನ ಕಥೆ ಪರವಣಿ ವಿಭಾಗದಲ್ಲಿ ಪ್ರಕಟಗೊಂಡಿತ್ತು, ಸಂಭ್ರಮ ಪಡುವ ಸ್ಥಿತಿಯಲ್ಲಿ ನಾನಿರಲಿಲ್ಲ, ಕಾರಣ ಸುಸ್ಪಷ್ಟ, ಜೇಬಿನಲ್ಲಿ ಒಂದೂಕಾಲಿಗಿಂತ ಹೆಚ್ಚು ಹಣವಿರಲಿಲ್ಲ. ಎಲ್ಲರೂ ಅದರ ಮೇಲೆ ಕಣ್ಣಾಡಿಸಿ ನನ್ನ ಕಡೆ ಹೆಮ್ಮೆಯಿಂದ ನೋಡಿದರು.

ಎಲ್ಲರ ಬಗ್ಗೆ ಕಥೆ ಬರಿತಿರೇನೋ ಸರಿ, ಆದರೆ ಈ ಹುಚ್ಚರ ಬಗ್ಗೆ ಯಾವಾಗ ಬರೀತೀರಿ? ಎಂದು ಪಂಪಣ್ಣ ಕೇಳಿದ. ಅದಕ್ಕೆ ಎಲ್ಲರೂ ಹೌದೌದೆಂದು ದನಿಗೂಡಿಸಿದರು. ಅರೆ ಹೌದಲ್ಲ ಎಂದು ಕಣ್ಣುಗಳನ್ನರಳಿಸಿದೆ, ಅದಕ್ಕೆ ಕಾರಣ ಕೊಟ್ಟೂರಲ್ಲಿ ಹುಚ್ಚರ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಿತ್ತು. ಅರೆಕಾಲಿಕ ಹುಚ್ಚರು ಅವರವರ ಮನೆಗಳಲ್ಲಿದ್ದರೆ ಪೂರ್ಣಕಾಲಿಕ ಹುಚ್ಚರು ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಜನರನ್ನು ತಮ್ಮ ವಿಚಿತ್ರ ಹಾವಭಾವಗಳಿಂದ ರಂಜಿಸುತ್ತಿದ್ದರು, ರಂಜನೆಗೆ ಪ್ರತಿಯಾಗಿ ಎಲುಗನಂಥ ಹುಚ್ಚರು ನಾಲ್ಕಾಣೆಯಷ್ಟು ಗೌರವಧನ ಪಡೆಯುತ್ತಿದ್ದರು, ಕೌಶಲ್ಯಪೂರ್ಣವಾಗಿ ಜನರನ್ನು ರಂಜಿಸುತ್ತಿದ್ದ ಎಲುಗನ ಬಗ್ಗೆ ಕಥೆ ಬರೆಯಬೇಕೆಂದು ಹಲವು ಸಲ ಪ್ರಯತ್ನಿಸಿ ವಿಫಲನಾಗಿದ್ದೆ, ಕಾರಣ ಅವನ ಬಾಡಿಲ್ಯಾಂಗ್ವೇಜು ವಿಲಕ್ಷಣವಾಗಿತ್ತು, ಅವನು ಓತೋಪ್ರೋತವಾಗಿ ಪ್ರಯೋಗಿಸುತ್ತಿದ್ದ ಅಶ್ಲೀಲ ಬಯ್ಗಳಂತೂ ಸೃಜನಶೀಲವಾಗಿದ್ದವು, ಸಂಭಾವನೆ ವಿಷಯದಲ್ಲಿ ಅವನು ಕೆಲವರಿಂದ ದಿನಕ್ಕೊಂದು ಸಲವಾದರೂ ಹಲ್ಲೆಗೊಳಗಾಗುತ್ತಿದ್ದ, ಕೆಲವರು ತಮಗಾಗದವರ ಮೇಲೆ ಸೇಡು ತೀರಿಸಿಕೊಳ್ಳಲು ಅವನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಇಂಥ ಸಂಕೀರ್ಣ ವ್ಯಕ್ತಿತ್ವದ ಎಲುಗನ ಕುರಿತು ಕಥೆ ಬರೆಯಬೇಕೆಂದು ನಿರ್ಧರಿಸಿದೆ.

ರಾಜಕಾರಣ, ಜಾರಿಯಲ್ಲಿದ್ದ ತುರ್ತುಪರಿಸ್ಥಿತಿ, ಇಂದಿರಾಗಾಂಧಿ ಕುರಿತಂತೆ ಪರವಿರೋಧ, ದಿನಬಳಕೆ ವಸ್ತುಗಳ ಬೆಲೆ ಇತ್ಯಾದಿ ವಿಷಯಗಳ ಕುರಿತಂತೆ ಚರ್ಚಿಸಿದ ಬಳಿಕ ಪಂಪಣ್ಣ ಪುನಃ ಹುಚ್ಚರಿಗೆ ಸಂಬಂಧಿಸಿದ ಟಾಪಿಕ್ಕನ್ನು ಬಾಯಿಗೆತ್ತಿಕೊಂಡ. ಪರಸ್ಥಳದ ಹುಚ್ಚರಿಗಿಂತ ಸ್ಥಳೀಯ ಹುಚ್ಚರು ಅಗ್ರೆಸಿವ್ ಎಂದು ವಕೀಲ ಸಿದ್ದಪ್ಪ ಅಭಿಪ್ರಾಯ ವ್ಯಕ್ತಪಡಿಸಿದ, ಆ ನಂತರ ಬಂದಿಳಿದಿದ್ದ ಪ್ರಭಾಕರ ಹುಚ್ಚರಿಗೆ ಇಂಜೆಕ್ಷನ್ ಕೊಟ್ಟು ಢಮಾರ್ ಅನ್ನಿಸಿದರೆ ಹೇಗೆ ಎಂದು ಹೇಳಿ ತನ್ನಷ್ಟಕ್ಕೆ ತಾನು ನಗಾಡಿ ಜವಳಿ ಡಾಕ್ಟರ್ ಕಡೆ ಪ್ರಶ್ನಾರ್ಥಕ ನೋಟ ಬೀರಿದ, ಕೇಳಿಸಿಕೊಂಡ ಚೈನ್ ಸ್ಮೋಕರ್ರು ಜವಳಿ ಗಂಭೀರವದನರಾದರು. ಭೂತದಯೆಯನ್ನು ಆಗಾಗ್ಗೆ ಪ್ರಕಟಿಸುವುದರಲ್ಲಿ ನಿಸ್ಸೀಮನಿದ್ದ ಪಂಪಣ್ಣ ಪ್ರಭಾಕರ ಅವರೂ ನಮ್ಮಂಗ ಮನುಶ್ಯರಲೇ ತಮ್ಮ ಎಂದು ಹೇಳುತ್ತಲೇ ಜವಳಿ ಕಡೆ ತಿರುಗಿ ಡಾಕ್ಟರ್ರೆ, ಆ ಸೂಜೀನ ಇವ್ನೀಗೆ ಮಾಡ್ರಿ ಮೊದ್ಲು, ಕೇಸಾದ್ರೆ ನಮ್ಮ ಸಿದ್ದಪ್ಪ ನೋಡ್ಕೊಂತಾನೆ ಎಂದು ಹೇಳಿ ತಮಾಷೆ ಎಂಬಂತೆ ನಗಾಡಿದ, ಅದನ್ನು ಅಪಮಾನವೆಂದು ಭಾವಿಸಿ ಹೊರಡಲಿದ್ದ ಪ್ರಭಾಕರನನ್ನು ಸಿದ್ದಪ್ಪ ಅದಕ್ಯಾಕ ಹಂಗ ಸೆಟಗೊಂಡೋತಿ, ಇದೆಲ್ಲ ಜೋಕಲೆ ಎಂದು ರೆಟ್ಟೆ ಹಿಡಿದು ಕೂಡ್ರಿಸಿದ. ಅದೇ ಹೊತ್ತಿಗೆ ಸರಿಯಾಗಿ..

ಏನ್ರಿ ತಂದೆಗಳಿರಾ, ಚೆನ್ನಾಗಿರುವಿರಾ! ಎಂಬ ಧ್ವನಿ ಎಲ್ಲರ ಕಿವಿಗೆ ಅಪ್ಪಳಿಸಿತು, ಅದಕ್ಕೆ ಕಾರಣ ತಮ್ಮೆಲ್ಲರ ಕ್ಷೇಮಸಮಾಚಾರ ವಿಚಾರಿಸಿದ್ದು ಬೇರೆ ಯಾರೂ ಅಲ್ಲ, ಗವುಡ! ಅದೇ ಮೊದಲ ಸಲವೆಂಬಂತೆ ಎಲ್ಲರೂ ಅವನ ಕಡೆ ದೃಷ್ಟಿ ಬೀರಿದರು. ಗವುಡ ಎಂಬುದು ನಾಮವಾಚಕ ಸ್ವಂತದ್ದೋ, ಇನ್ನಿತರರು ನಾಮಕರಣ ಮಾಡಿದ್ದೋ! ಕೆಲವು ತಿಂಗಳುಗಳಿಂದ ಎಲ್ಲಿಂದಲೋ ಬಂದು ಊರಲ್ಲಿ ಬೀಡುಬಿಟ್ಟಿರುವ ಅವನೆಂದರೆ ಎಲ್ಲರಿಗೂ ವಿಲಕ್ಷಣ ಭಯ, ಅದಕ್ಕೆ ಕಾರಣ ಅವನು ಕ್ಷೇಮಲಾಭ ವಿಚಾರಿಸಿದರೆ ಅಶುಭ, ಇದು ಊರಲ್ಲಿ ಹಬ್ಬಿದ್ದ ವದಂತಿ. ನನಗೆ ಅವನೆಂದರೆ ಇಷ್ಟ, ಅದಕ್ಕೆ ಕಾರಣಗಳು ಹಲವು, ಅವನ ವೇಷಭೂಷಣವೋ, ಪೆಪ್ಪರ್ಮೆಂಟಿನ ತರಾವರಿ ಬಣ್ಣದ ಬ್ಯಾಗಡಿಗಳನ್ನು ತನ್ನ ಕೊರಳಲ್ಲಿ ಅಲಂಕರಿಸಿರುವ ರೀತಿಯೋ! ಗ್ರಾಂಥಿಕವಾಗಿ ಭಾಷೆಯನ್ನು ಪ್ರಯೋಗಿಸುವ ಕಲೆಯೋ! ವೃತ್ತಪತ್ರಿಕೆಗಳನ್ನು ತಲೆಕೆಳಗೆ ಮಾಡಿ ಓದುವುದೋ! ಭಿಕ್ಷಾಟನೆಯಿಂದ ಗಳಿಸಿದ ಹಣದಿಂದ ಹೊಸಸಿಗರೇಟು ಸೇದುತ್ತಿದ್ದುದೋ!

ಮೆಟ್ಟಿಲನ್ನೇ ಶೂನ್ಯಸಿಂಹಾಸನವೆಂದು ಭಾವಿಸಿ ಕಾಲ ಮೇಲೆ ಕಾಲು ಹಾಕಿ ಕುಳಿತ ಗವುಡ ನಮ್ಮೆಲ್ಲರತ್ತ ಸಿಂಹಾವಲೋಕನ ಮಾಡಿದ, ಅದು ಮುಖ್ಯವಾಗಿ ಅತೃಪ್ತ ರಾಜಕಾರಣಿ ಪಂಪಣ್ಣಗೆ ಹಿಡಿಸಲಿಲ್ಲ. ನಮ್ಮನ್ನು ನೋಡಿದರೆ ನಿನ್ಗೆ ಹೆಂಗನ್ನಿಸ್ತತಲೇ ಗವುಡಾ! ಎಂದಿನಂತೆ ಅವಾಜು ಹಾಕಿದ, ಅಂದ ಮಾತ್ರಕ್ಕೆ ತನಗೆ ಅವನ ಮೇಲೆ ಪ್ರೀತಿ ಇರಲಿಲ್ಲವೆಂದರ್ಥವಲ್ಲ. ರಾಜಕಾರಣಿ ಎಂದ ಮೇಲೆ ಅಷ್ಟು ಬಿಗುಮಾನ ತೋರಿಸದಿದ್ದರೆ! ಪುನಃ ಗವುಡ ಪಂಪಣ್ಣನ ಮುಖವನ್ನು ದಿಟ್ಟಿಸಿದ ಅವಧೂತನಂತೆ, ನೋಡಿದರೆ ಚೆನ್ನಾಗಿರುವಿರೇನೋ ಸರಿ, ಆದರೆ? ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸಿದ, ಆದರೆ ಎಂಬ ಪದ ರಾಜಕಾರಣಿಗೆ ಸರಿ ಕಾಣಲಿಲ್ಲ, ನಿನ್ನ ಕೆಲಸ ಮುಗಿಸ್ಕೊಂಡು ಜಾಗ ಖಾಲಿ ಮಾಡು ಎಂದ ಅದೇ ಗತ್ತಿನಿಂದ. ಶಿವಶಿವಾ ಎನ್ನುತ್ತ ಮೆಲ್ಲಗೆ ಎದ್ದು ನಿಂತ ಗವುಡ ಹೊರಡುವೆ, ಒಂದು ರುಪಾಯಿ ಕೊಡಿ ಎಂದು ಕೇಳಿದ, ಅದು ಆತನ ಮೌಲ್ಯ. ಯಾರಿಂದಲೂ ಅದಕ್ಕಿಂತ ತಾನು ಕಡಿಮೆ ಪಡೆಯುತ್ತಿರಲಿಲ್ಲ. ಅದನ್ನು ಕೇಳಿದೊಡನೆ ಪಂಪಣ್ಣ ನಗಾಡಿದಾದ ಬಳಿಕ ನಮಗೇ ಚಾ ಕುಡಿಯೋಕೆ ರೊಕ್ಕಿಲ್ಲ, ನಿನ್ಗೆ ಎಲ್ಲಿಂದ ತರ್ಲಲೇ ಎಂದು ಪುನಃ ನಗಾಡಿದ. ಓಹೋ ಹಾಗೋ ಎನ್ನುತ್ತ ಗವುಡ ಅಲ್ಲಿಂದ ಹೊರಟು ಹೋದ.

ಪುನಃ ನಮ್ಮ ಮಾತುಕತೆ ಶುರುವಾಯಿತು. ವೈನ್ ಶಾಪ್ ಲೈಸೆನ್ಸು ಕುರಿತಂತೆ, ಗೋಲಿಬಾರ್ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಇನ್ನೂ ಬರದಿರುವ ಬಗ್ಗೆ. ಬುಲೆಟ್ ಪ್ರೂಫ್ ರಾಜಣ್ಣ ಅದರ ಬಗ್ಗೆ ವಾಚಕರವಾಣಿಗೆ ಬರೆಯುವಂತೆ ಕೇಳಿಕೊಂಡೆ, ಅದಕ್ಕೆ ಸಮ್ಮತಿ ಸೂಚಿಸಿದೆ, ಸುಮಾರು ಕಾಲುಗಂಟೆ ಬಳಿಕ ಶ್ರೀಕೃಷ್ಣಭವನದಿಂದ ಕ್ಲೀನರ್ ಆನೆಮರಿ (ಅವನು ದೈಹಿಕವಾಗಿ ಸಣಕಲ ಇದ್ದ ಕಾರಣಕ್ಕೆ) ಆಗಮಿಸಿದನಲ್ಲದೆ ಟ್ರೇಯಲ್ಲಿದ್ದ ಚಹಾ ಕಪ್ಪುಗಳನ್ನು ನಮ್ಮೆಲ್ಲರಿಗೂ ವಿತರಿಸಿದ, ಯಾರು ಕಳಿಸಿದರೆಂದು ನಾವ್ಯಾರು ಕೇಳುವ ಉಸಾಬರಿಗೆ ಹೋಗದೆ ಚಹಾ ಸೇವಿಸಿ ಎಂಜಲುಕಪ್ಪುಗಳನ್ನು ಮರಳಿಸಿದೆವು. ಆನೆಮರಿ ಹೋದ ಸ್ವಲ್ಪ ಹೊತ್ತಿಗೆ ಅದೇ ಹೋಟಲ್ಲಿಂದ ಗವುಡ ಪುನಃ ಸ್ಟೋರಿಗೆ ಬಂದು ತನ್ನ ಸ್ಥಾನದಲ್ಲಿ ವಿರಾಜಮಾನಗೊಂಡ, ರಾಜಣ್ಣನಿಂದ ಹನಿಡ್ಯೂ ಸಿಗರೇಟನ್ನು ಖರೀದಿಸಿ ಹೊಗೆ ಬಿಡಲಾರಂಭಿಸಿದ,

ಚಹಾ ಸೇವನೆ ಮುಗಿಯಿತೇನ್ರಪ್ಪಾ! ಎಂದು ಕೇಳಿದ, ಅದಕ್ಕೆ ಪಂಪಣ್ಣ ಕುಡಿದೆವಪ್ಪಾ, ಯಾರೋ ದೊಡ್ಡಮನುಷ್ಯರು ಕಳಿಸಿದ್ದರು ಎಂದು ಹೇಳಿದ ತಾನೂ ಸಿಗರೇಟು ಹಚ್ಚಿಕೊಳ್ಳುತ್ತ. ಅದಕ್ಕೆ ಮೀಸೆ ಕೆಳಗಿನಿಂದ ನಗುತ್ತ ಗವುಡ ಅಂತೂ ನನ್ನನ್ನು ದೊಡ್ಡಮನುಷ್ಯ ಎಂದಿರಲ್ಲ, ಅಷ್ಟೇ ಸಾಕು ಎಂದೊಡನೆ ಪಂಪಣ್ಣ ನಖಶಿಖಾಂತ ಕಂಪಿಸದೆ ಇರಲಿಲ್ಲ, ಹ್ಹಾ ನೀನು ಕಳಿಸಿದ್ದಾ! ಎಷ್ಟು ಪೊಗರಲೇ ಗವುಡಾ ಎಂದು ವಾಂತಿ ಮಾಡಿಕೊಳ್ಳಲಿರುವನೆಂಬಂತೆ ಮುಖವನ್ನು ಬಿಗಿದ, ಅದಕ್ಕೆ ಪ್ರತಿಯಾಗಿ ಗವುಡನೆಂಬ ಹುಚ್ಚ ಚಹಾ ಕುಡಿಯಲಿಕ್ಕೆ ರೊಕ್ಕಿಲ್ಲ ಎಂದಿರಲ್ಲ, ಅದಕ್ಕೆ ಕಳಿಸಿದ್ದು ಎಂದು ಬಿಡುವುದೆ!

‍ಲೇಖಕರು avadhi

28 March, 2013

7 Comments

  1. ಹರಿ

    ಪ್ರತೀ ವಾರ ನಿಮ್ಮ ಕಾಲಂಗೆ ಕಾಯವುದೇ ಒಂದು ಖುಷಿ…ಓದಿ ಮುಗಿಸಿದಾಗಲೇ ಸಮಾಧಾನ…ಓದಲು ಆರಂಭಿಸಿ ಮುಗಿಸುವ ತನಕ ಬೇರೊಂದೇ ಲೋಕ…
    ಧನ್ಯವಾದಗಳು ಕುಂವೀಯವರೆ
    ಧನ್ಯವಾದಗಳು ಅವಧಿ

  2. pravara

    ನಮ್ಮ ಜನಗಳ ಜೇಬು ಹಗುರಿದ್ದರೂ ಗತ್ತಿನಲ್ಲಿ ತುಂಬಾ ಭಾರವೇ ಎನ್ನಿ…. ಎಂದಿನಂತೆ ತುಂಬಾ ಇಷ್ಟವಾಯ್ತು

  3. GURURAJ KATHRIGUPPE

    I dont know, still how many stories are left in ‘kumvee’, great, unique,style , carryon sir, dont stop.because only you can write such stories

  4. Ganesh Nempe

    ಎಂದಿನಂತೆ ಅದ್ಭುತ!! ಅಂದಹಾಗೆ ಈ ಪೋಲಿಸ್ ಅಂದ್ರೆ ಯಾರು? ಪೋಲಿಗಳ? 🙂 ಅದು ಪೊಲೀಸ್ ಆಗಬೇಕು ಅನ್ಸತ್ತೆ.

  5. Sowmya

    Nice! Chenda ide. Thank you Avadhi

  6. kum.veerabhadrappa

    ganesh, nannadoo sari, nimmadoo sari,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading