ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಕಾಲಂ : ಎಣ್ಣೆ ಎಣ್ಣೇನೆ.. ತುಪ್ಪ ತುಪ್ಪಾನೆ!

ಕುಂ ವೀರಭದ್ರಪ್ಪ

ಹಿತಕರವೋ ಅಹಿತಕರವೋ! ಕೆಲವು ಘಟನೆಗಳನ್ನಂತೂ ಮರೆಯಲಾಗುವುದಿಲ್ಲ, ಅವುಗಳ ಪೈಕಿ ಒಂದೆಂದರೆ. ಊರ ದನ ಕಾಯ್ದು ದೊಡ್ಡ ಬೋರ ಅನ್ನಿಸಿಕೊಳ್ಳುವುದು ನಮ್ಮ ತಂದೆಯಿಂದ ಬಂದ ಬಳವಳಿ. ನಮ್ಮ ತಂದೆ ತನ್ನ ಬದುಕಿನುದ್ದಕ್ಕೂ ಮಾಡಿದ್ದು ಅದೇ ಕೆಲಸವನ್ನು, ಅದಕ್ಕಾಗಿ ತನ್ನ ಸ್ಥಿರ-ಚರಾಸ್ತಿಯನ್ನು ಕಳೆದುಕೊಂಡಿದ್ದೂ ಅಲ್ಲದೆ ಸಾಕಷ್ಟು ಸಾಲಸೋಲ ಮಾಡಿದ, ಅದರ ಬಡ್ಡಿ ತೀರಿಸುವುದರಲ್ಲಿಯೇ ತನ್ನ ಶೇಷಾಯುಷ್ಯವನ್ನು ಕಳೆದದ್ದೂ ಅಲ್ಲದೆ ವಾಧ್ರ್ಯಕ್ಯದ ಹೊಸ್ತಿಲಲ್ಲಿ ಅಸ್ತಂಗತನಾದ. ತಂದೆ ಮಾಡಿದ ಸಾಲವನ್ನು ಚುಕ್ತಾ ಮಾಡಿದಷ್ಟು ಸುಲಭವಲ್ಲ ಆ ಮಹಾನುಭಾವನ ಆಶೋತ್ತರಗಳಿಗೆ ಸ್ಪಂದಿಸುವುದು. ಅವರಿವರ ಗೊಡವೆಗೆ ಹೋಗಬೇಡಿ ಎಂದು ಪತ್ನಿ ಆಗಾಗ್ಗೆ ಲಗಾಮು ಹಾಕದಿದ್ದಲ್ಲಿ ನಾನು ಸಹ ದುಡಿಮೆಗಿಂತ ಹೆಚ್ಚು ಸಾಲವಂದಿಗನಾಗಿರುತ್ತಿದ್ದೆನೇನೊ! ಆದರೂ ಕೆಲವು ಉಸಾಬರಿಗಳಲ್ಲಿ ತಲೆದೂರಿಸದೆ ಇರಲಾಗಲೇ ಇಲ್ಲ. ಅಂಥ ಘಟನೆಗಳು ಹಲವು, ಅವುಗಳ ಪೈಕಿ ಇನ್ನೂ ನೆನಪಿನಲ್ಲಿದ್ದು ಗಾಯ ಮಾಡುತ್ತಿರುವುದೆಂದರೆ ಅದೆಂದರೆ ಅದು.
ಅವು ತಿಂಗಳ ಕೊನೆಯ ತತ್ವಾರದ ದಿವಸಗಳು. ಕಡ್ಡಿಗಿದ್ದರೆ ಬೀಡಿಗಿರಲಿಲ್ಲ, ಬೀಡಿಗಿದ್ದರೆ ಕಡ್ಡಿಗಿರಲಿಲ್ಲ. ಹಾಸಿಗೆಗನುಗುಣವಾಗಿ ನಾವು ನಮ್ಮ ದೇಹಗಳನ್ನು ಹ್ರಸ್ವಗೊಳಿಸಿಕೊಂಡು ದಿನಗಳನ್ನು ದೂಡುವುದು ಅನಿವಾರ್ಯವಾಗಿತ್ತು. ಇದು ಕೇವಲ ನನ್ನೊಬ್ಬನ ಸಮಸ್ಯೆಯಾಗಿರಲಿಲ್ಲ, ಇಡೀ ದೇಶದ ಸಮಸ್ಯೆಯಾಗಿತ್ತು. ಅಂಥ ಸಂದರ್ಭದಲ್ಲಿ ಫೋನ್ ಕರ್ಕಶ ರೀತಿಯಲ್ಲಿ ಬಡಿದುಕೊಳ್ಳಲಾರಂಭಿಸಿತು. ರಿಸೀವರನ್ನು ಎತ್ತಿಕೊಂಡು ಹಲೋ ಎಂದೆ. ನಾನು ಸಾರ್ ಗೋಪಾಲಶೆಟ್ಟಿ ನಿಮ್ಮ ಓಲ್ಡ್ ಸ್ಟೂಡೆಂಟು ಎನ್ನುವ ಧ್ವನಿ ಕೇಳಿಸಿತು. ಆ ಹೆಸರಿನ ವಿದ್ಯಾರ್ಥಿಗಳ ಪೈಕಿ ಒಬ್ಬೊಬ್ಬರನ್ನು ನೆನಪಿಸಿಕೊಂಡೆನಾದರೂ ಪತ್ತೆ ಹಚ್ಚಲಾಗಲಿಲ್ಲ. ಏಕೆಂದರೆ ಆ ಹೆಸರಿನ ವಿದ್ಯಾರ್ಥಿಗಳು ಹತ್ತಕ್ಕಿಂತ ಹೆಚ್ಚು ಜನರಿದ್ದರು, ಅವರಲ್ಲಿ ಕೆಲವರು ನೆನಪಿನಲ್ಲಿ ಉಳಿದಿದ್ದರೆ ಇನ್ನು ಕೆಲವರು ನೆನಪಿನಲ್ಲಿ ಉಳಿದಿರಲಿಲ್ಲ. ನನ್ನ ಸಂದಿಗ್ದತೆಯನ್ನು ತಾನಲ್ಲಿಂದಲೇ ಅರ್ಥಮಾಡಿಕೊಂಡ ಆ ನನ್ನ ಹಳೆ ವಿದ್ಯಾರ್ಥಿ ತನ್ನ ಪ್ರವರವನ್ನು ಸಾದ್ಯಂತ ವಿವರಿಸಿದ. ಪತ್ನಿ ಅನ್ನಪೂರ್ಣ ಓಹ್ ಅವನೇ ಕಣ್ರಿ ಎಂದು ಖೂನಗುರುತು ವಿವರಿಸಿದಳು. ಕಾರಣ ಆಕೆ ನನ್ನ ವಿದ್ಯಾರ್ಥಿಗಳ ಪೈಕಿ ಹಲವರಿಗೆ ಅನ್ನ ಬೇಯಿಸಿ ಹಾಕಿದ್ದಳು. ಆಗ ನೆನಪಾಯಿತು ಇವನೇ ಅವನೆಂದು. ಎನ್ಸಮಾಚಾರ ಎಂದು ಕೇಳಿದೆ. ಅದಕ್ಕೆ ಅಲ್ಲಿಂದಲೇ ಅವನು ತಾನೊಂದು ಫಜೀತಿಯಲ್ಲಿ ಸಿಕ್ಕಿ ಹಾಕಿಕೊಂಡಿರುವುದಾಗಿ ತಿಳಿಸುತ್ತಲೇ ಗದ್ಗದಿತನಾದ. ಏನು ಸಮಸ್ಯೆ ಹೇಳಪ್ಪಾ ಎಂದು ಅಲವತ್ತುಕೊಂಡೆ. ಅದಕ್ಕೆ ಅವನು ತನ್ನ ತಂದೆ ಅದೇ ದಿವಸ ಬೆಳೆಗ್ಗೆ ಸತ್ತಿರುವುದಾಗಿಯೂ, ಹೆಣ ಸಂಸ್ಕಾರಕ್ಕೆ ಊರಿನ ಯಾರೊಬ್ಬರೂ ಸಹಕರಿಸುತ್ತಿಲ್ಲವೆಂದು ತಿಳಿಸಿದ್ದೂ ಅಲ್ಲದೆ ಕೂಡಲೆ ಹೊರಟು ಬರಬೇಕೆಂದು ಫತ್ವಾ ಹೊರಡಿಸಿದ. ಕೇಳಿಸಿಕೊಂಡೊಡನೆ ನನ್ನ ಕರುಳು ಚುರುಕ್ಕೆನ್ನದೆ ಇರಲಿಲ್ಲ. ಹಣಕಾಸಿನ ಸಮಸ್ಯೆ ಏನಪ್ಪಾ ಎಂದು ಕೇಳಿದ್ದಕ್ಕೆ ಅವನು ಅದೊಂದೇ ಅಲ್ಲಸಾ, ಎದುರಾಗಿರುವುದು ಅದಕ್ಕಿಂತ ದೊಡ್ಡ ಸಮಸ್ಯೆ, ನೀವು ಬಿಟ್ರೆ ನನಗ್ಯಾರೂ ಇಲ್ಲ, ಬಂದಿರೆಂದರೆ ನಿಮಗೇ ತಿಳೀತೈತೆ ಸಾ ಎಂದು ಬಿಕ್ಕಳಿಸಿದ. ಶವಗಳೂ ಸಮಸ್ಯೆಗಳನ್ನು ಎದುರಿಸಬಹುದೆಂದು ತಿಳಿದಿರಲಿಲ್ಲ, ಹೊರಡುವುದೋ ಬಿಡುವುದೋ!
ಹೆಂಡತಿಯತ್ತ ಪ್ರಶ್ನಾರ್ಥಕ ನೋಟ ಬೀರಿದೆ. ಶವಸಂಸ್ಕಾರ ಕ್ರಿಯೆಯಲ್ಲಿ ಭಾಗವಹಿಸುವುದರೆ ಪುಣ್ಯ ಲಭಿಸುವುದೆಂದು ಲೆಕ್ಕ ಹಾಕುತ್ತಲೇ ಜೀರಿಗೆ ಡಬ್ಬದಿಂದ ನೋಟುಗಳನ್ನು ತೆಗೆದು ನನ್ನ ಕೈಗಿಟ್ಟಳು. ಎಣೆಸದೆ ಹಾಗೆಯೇ ಜೇಬಿನಲ್ಲಿ ತುರುಕಿಕೊಂಡೆ, ಲಗುಬಗೆಯಿಂದ ಹೊರಟು ನಿಲ್ದಾಣ ತಲುಪಿದೆ. ಆದೋನಿ ಕಡೆ ಅದೇ ತಾನೆ ಹೊರಟಿದ್ದ ಬಸ್ಸನ್ನು ಹತ್ತಿ ಕುಳಿತುಕೊಂಡೆ. ಹೆಣಕ್ಕೆ ಮಣ್ಣು ಕಾಣಿಸಲೆಂದು ಹೊರಟಿರಬಹುದೆಂದು ತಮ್ಮ ಆರನೇ ಇಂದ್ರಿಯ ಮೂಲಕ ಗುರುತಿಸಿರುವಂತೆ ಭಾಸವಾದ ಸಹಪ್ರಯಾಣಿಕರ ಪೈಕಿ ಕೆಲವರು ನನ್ನ ಕಡೆ ನೋಡಿದರೆಲ್ಲಿ ತಮ್ಮ ಕಣ್ಣುಗಳು ಮೈಲಿಗೆಯಾಗುವವೋ ಎಂಬಂತೆ ನೋಡಿದರು. ಕಾರಣ ನನ್ನ ವಸ್ತ್ರವಿಲಾಸ ಹಾಗಿತ್ತು. ಪ್ರಯಾಣದುದ್ದಕ್ಕೂ ಹೆಣಕ್ಕೆ ಸಂಬಂಧಿಸಿದಂತೆ ಏನೇನೋ ಲೆಕ್ಕಾಚಾರಗಳು. ನನಗೆ ತಿಳಿದಮಟ್ಟಿಗೆ ಪ್ರಿಯಶಿಷ್ಯ ಗೋಪಾಲಶೆಟ್ಟಿಯ ಊರು ಆಲೂರಾಗಿರದೆ ಹೊಳಗುಂದಿ ಸಮೀಪದ ಸುಳುವಾಯಿಯಾಗಿತ್ತು. ಆತನ ತಂದೆಯೂ ನನಗೆ ಚಿರಪರಿಚಿತ ವ್ಯಕ್ತಿ, ತನ್ನ ಮಗನನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ನನ್ನನ್ನು ಭೆಟ್ಟಿಯಾಗಿದ್ದ, ತನ್ನ ಕಷ್ಟಕೋಟಲೆಗಳನ್ನು ಹೃದಯವಿದ್ರಾವಕವಾಗಿ ಹೇಳಿಕೊಂಡಿದ್ದ, ಸುಳುವಾಯಿಗೆ ಬಂದು ಪಳಾರದಂಗಡಿಯ ವಿಠಪ್ಪಶೆಟ್ಟಿ ಎಂದು ಯಾರನ್ನು ಕೇಳಿದರೂ ಹೇಳುತ್ತಾರೆ ಎಂದು ತನ್ನ ಜನಪ್ರಿಯತೆಯನ್ನು ಪ್ರದರ್ಶಿಸಿದ್ದ. ಅಂಥ ತಾನು ಸುಳುವಾಯಿಯಿಂದ ಆಲೂರಿಗೆ ಹೋಗಿ ಸತ್ತಿರುವುದೆಂದರೇನು! ಅದೂ ಅಲ್ಲದೆ ಬಹಳ ದಿವಸಗಳಿಂದ ಶಿಷ್ಯ ಗೋಪಾಲಶೆಟ್ಟಿಯನ್ನೂ ನಾನು ನೋಡಿರಲಿಲ್ಲ, ಅದಲ್ಲದೆ ಅವನ ನೆನಪು ಮನಸ್ಸಿನ ಸಂಪುಟದಲ್ಲಿ ಸ್ಪಷ್ಟವಾಗಿಲ್ಲ, ಹತ್ತನೆ ತರಗತಿಯನ್ನು ಫೇಲಾಗಿದ್ದ ಆ ಮಗನನ್ನು ಆ ತಂದೆ ನನ್ನೆದುರು ತಂದು ನಿಲ್ಲಿಸಿದ್ದ, ನಾನೂ ಕಷ್ಟಪಟ್ಟೆ, ನೀವೂ ಕಷ್ಟಪಟ್ಟಿರಿ, ಆದರೆ ನಮ್ಮಂಥ ಕೋಟಮಟಿಗರ ಮಕ್ಕಳ ತಲೆಗೆ ವಿದ್ಯೆ ಹತ್ತುವುದಿಲ್ಲ ಸಾರ್, ಹೊಟ್ಟೆಬಟ್ಟೆ ಕಟ್ಟಿ ಓದಿಸಿದರೂ ಇವನು ತಗೊಂಡಿರೋ ಮಾರ್ಕ್ಸ್ ನೋಡಿದರೆ ಇವನನ್ನು ಕುತ್ತಿಗೆ ಹಿಚುಗಿ ಸಾಯುಸುವಷ್ಟು ಸಿಟ್ಟು ಬರ್ತದೆ ಸಾರ್, ಏನು ಮಾಡಲಿ! ನನ್ನ ಹೆಣಕ್ಕೆ ಕೊಳ್ಳಿ ಹಚ್ಚಲಿಕ್ಕೆ ಇರೋದು ಇವನೊಬ್ಬನೆ ಎಂದು ತನ್ನ ಪುತ್ರವಾತ್ರಲ್ಯ ಪ್ರದರ್ಶಿಸಿದ್ದ. ನಖಶಿಖಾಂತ ದಿಟ್ಟಿಸಿದ್ದೆ, ಕಪ್ಪುವರ್ಣದ ಸಣಕಲು ದೇಹ, ಕೆದರುತಲೆ, ಗುಳಿಬಿದ್ದ ಕಣ್ಣುಗಳು. ಅದೆಲ್ಲ ಹಲವು ವರ್ಷಗಳ ಹಿಂದಿನ ಮಾತು. ಈಗಾಗಲೆ ಅವನು ಬೆಳೆದು ದೊಡ್ಡವನಾಗಿರಬಹುದು. ಮದುವೆಯನ್ನೂ ಮಾಡಿಕೊಂಡಿರಬಹದಲ್ಲದೆ ಒಂದಿಬ್ಬರು ಮಕ್ಕಳ ತಂದೆಯಾಗಿರಲೂಬಹುದು ನನ್ನ ಹಳೆಯ ವಿದ್ಯಾರ್ಥಿ. ಅವನನ್ನು ಗುರುತಿಸುವ ಬಗೆ ಯಾವುದೆಂದು ಹೊಳೆಯಲಿಲ್ಲ.

ಪ್ರಯಾಣಿಸುತ್ತಿದ್ದ ಸರ್ಕಾರಿ ವಾಹನ ನಿಗಧಿತ ವೇಳೆಗೂ ಮುಂಚಿತವಾಗಿ ಆಲೂರು ಬಸ್ಸುನಿಲ್ದಾಣವನ್ನು ಸೇರಿಕೊಂಡಿತು. ಅದು ಸಂತೆ ದಿವಸವಾಗಿದ್ದರಿಂದಾಗಿ ನಿಲ್ದಾಣದ ತುಂಬೆಲ್ಲ ರೈತಾಪಿ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಅವರ ಪೈಕಿ ಹಲವರು ಪರಿಚಿತರಿಲ್ಲದಿರಲಿಲ್ಲ. ಆದರೆ ಅವರಲ್ಲಿ ನನ್ನ ಹಳೆಯ ಶಿಷ್ಯನಾಗಲೀ, ಅವನ ಸಂಬಂಧಿಕರಾಗಲೀ ಕಣ್ಣಳತೆಯಲ್ಲಿ ಗೋಚರಿಸಲಿಲ್ಲ. ತೋಡಿಕೊಳ್ಳುವ ಅವಸರದಲ್ಲಿ ಅವನು ನಿರ್ದಿಷ್ಟ ವಿಳಾಸ ನೀಡುವುದನ್ನು ಮರೆತಿದ್ದ. ಎಷ್ಟಿದ್ದರೂ ಅವನು ನನ್ನ ಶಿಷ್ಯನಲ್ಲವೆ!
ಕೋಮಟಿಗರು ಕೋಮಟಿಗರ ಓಣಿಯಲ್ಲಿ ವಾಸಿಸದೆ ಶೂದ್ರರ ಓಣಿಯಲ್ಲಿ ವಾಸಿಸುವುದು ಸಾಧ್ಯವೆ! ಬಸ್ಸ್ ನಿಲ್ದಾಣದ ಇನ್ನೊಂದು ಮಗ್ಗುಲಲ್ಲಿದ್ದ ಕಿರಾಣಿ ದುಖಾನಿನ ಗಾದಿಲಿಂಗಪ್ಪಶೆಟ್ಟಿ ಕೇಳಿದೊಡನೆ ಓಹ್ ಸುಳುವಾಯಿ ವಿಟ್ಟಪ್ಪಶೆಟ್ಟಿನ ಹುಡುಕಿಕೊಂಡು ಬಂದಿರುವಿರಾ! ಎಂದು ಉದ್ಗರಿಸಿದ್ದೂ ಅಲ್ಲದೆ ಸೀದ ನಗರೇಶ್ವರ ದೇವಸ್ಥಾನ ಕಡೆ ಹೋಗಿರೆಂದು ಸಲಹೆ ನೀಡಿದ. ಆಲೂರಿನ ಗಲ್ಲಿಗಲ್ಲಿ ಪರಿಚಿತವಿದ್ದುದರಿಂದ ಹುಡುಕುವುದು ಕಷ್ಟವೆನಿಸಲಿಲ್ಲ. ದೇವಸ್ಥಾನದ ಇಕ್ಕೆಲದುದ್ದಕ್ಕೂ ಕೋಮಟಿಗರ ತರಹೇವಾರಿ ಮನೆಗಳು ಸಾಲುಸಾಲಾಗಿದ್ದವು. ದಿನನಿತ್ಯ ಗಿಜಿಗಜಿಗುಟ್ಟುತ್ತಿದ್ದ ಓಣೆಯ ತುಂಬೆಲ್ಲ ಸ್ಮಶಾನ ಮೌನ ಆವರಿಸಿತ್ತು. ಅವರಿವರೆಲ್ಲ ಅವರವರ ಮನೆಗಳಲ್ಲಿದ್ದುದು ಅದಕ್ಕೆ ಕಾರಣ. ಯಾರನ್ನಾದರೂ ತರುಬಿ ಕೇಳಬೇಕೆಂದು ಯೋಚಿಸಿದೆನಾದರೂ ಕೇಳುವ ಧೈರ್ಯ ಲಭಿಸಲಿಲ್ಲ, ಅಷ್ಟರಲ್ಲಿ ನನ್ನತ್ತ ಅಭಿಮುಖವಾಗಿ ವ್ಯಕ್ತಿಯೋರ್ವ ದೌಡಾಯಿಸುತ್ತಲೇ ಸಮೀಪಿಸಿದ. ಕಪ್ಪುವರ್ಣೀಯನಿದ್ದ ಎತ್ತರಕ್ಕಿಂತ ಅಗಲವಿದ್ದ, ಅಸ್ತವ್ಯಸ್ತ ಬಟ್ಟಿಬರೆ ಧರಿಸಿದ್ದನಲ್ಲದೆ ಕಣ್ಣಂಚಿನ ಶಿಳ್ಳನ್ನು ತೆಗೆದಿರದೆ ಮಾಸಲು ಮೈವೆತ್ತಂತಿದ್ದ. ಅಕಾಲಿಕ ವೃದ್ಯಾಪ್ಯ ಆಹವಹಿಸಿಕೊಂಡಿದ್ದ, ಬಹುವಿಸ್ತೀರ್ಣದ ಹೊಳ್ಳೆಗಳ ಮೂಗಿರದಿದ್ದಲ್ಲಿ ಆತನನ್ನು ಗೋಪಾಲಶೆಟ್ಟಿ ಎಂದು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲವೇನೊ! ಆದರೆ ನನ್ನನ್ನು ಸುಲಭವಾಗಿ ಗುರುತಿಸಿದ ತಾನು ನನ್ನನ್ನು ಆಪದ್ಬಾಂಧವನಿಗೆ ಹೋಲಿಸಿದ್ದೂ ಅಲ್ಲದೆ ತನ್ನ ಮನೆ ಕಡೆ ಕರೆದೊಯ್ಯುವ ಸಲುವಾಗಿ ಹೆಜ್ಜೆ ಹಾಕಿದ. ಪ್ರತಿ ಹೆಜ್ಜೆಗೆ ನಿವೇದಿಸಿಕೊಳ್ಳುತ್ತಿದ್ದ ತನ್ನೊಂದೂ ಮಾತು ನನಗೆ ಅರ್ಥವಾಗಲಿಲ್ಲ, ಕಾರಣ ತೆಲುಗು ಕನ್ನಡ ಭಾಷೆಗಳನ್ನು ವಿಲೋಮ ಪ್ರಮಾಣದಲ್ಲಿ ಮಿಶ್ರಣ ಮಾಡುತ್ತ ಮಾತಾಡುತ್ತಿದ್ದುದು.
ನಾವಿಬ್ಬರು ನಿರ್ದಿಷ್ಟ ಮನೆ ತಲುಪುವಷ್ಟರಲ್ಲಿ ಇಕ್ಕೆಲ ನಿವಾಸಿಗಳ ಪೈಕಿ ಹಲವರು ನಮ್ಮನ್ನು ಗಮನಿಸುತ್ತಿದ್ದುದನ್ನೂ, ಗುಸಗುಸು ಮಾತಾಡಿಕೊಳ್ಳುತ್ತಿದ್ದುದನ್ನೂ ನಾನು ಅನುಮಾನಿಸದೆ ಇರಲಿಲ್ಲ. ತಲುಪುವಷ್ಟರೊಳಗೆ ಆ ಮನೆಯ ಸೂತಕ ಸಾಂಕ್ರಾಮಿಕವಾಗಿ ಅಂಗಳದ ತುಂಬೆಲ್ಲ ಹರಡಿತ್ತು. ಊದುಬತ್ತಿಯ ಪರಿಮಳವನ್ನು ಅಗತ್ಯಕ್ಕಿಂತ ಹೆಚ್ಚು ಆಸ್ವಾದಿಸಿದರೆಲ್ಲಿ ವಾಕರಿಕೆ ಬರವುದೋ ಎಂದು ಹೆದರಿದೆ, ಆದರೆ ಅಸಹ್ಯಿಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಕಲ್ಲು ಹೃದಯಗಳನ್ನೂ ಆದ್ರ್ರಗೊಳಿಸವಂಥ ವಾತಾವರಣದಲ್ಲಿ ಬಂಧಿಯಾಗಿದ್ದು ಅದೇ ಮೊದಲ ಸಲ. ಕಳೇಬರವನ್ನು ಮನೆಯ ಮುಂದಿದ್ದ ಕಟ್ಟೆಯ ಮೇಲೆ ಉದ್ದಕ್ಕೆ ಮಲಗಿಸಲಾಗಿತ್ತು. ಬಿಕ್ಕಳಿಸುವುದನ್ನು ಆರಂಭಿಸಿದ ಗೋಪಾಲನ ಸುತ್ತ ನೆರೆದ ಚಿಕ್ಕಮಕ್ಕಳಾದ ಮುವ್ವರೂ ಗತಿಸಿರುವ ವಿಠಪ್ಪಶೆಟ್ಟಿಯ ಮೊಮ್ಮಕ್ಕಳಿರಬಹುದೆಂದು ಊಹಿಸಿದೆ. ಹಾಗೆಯೇ ಒಂದು ಪಕ್ಕದಲ್ಲಿ ಅಸಹಜ ರೀತಿಯಲ್ಲಿ ಕೂತು ಕಳೇಬರದ ಮುಖಕ್ಕೆ ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದ ಗೃಹಿಣಿ ಅವನ ಪತ್ನಿ ಇರಬಹುದು. ಅವಸರದಿಂದಾಗಿ ಹೂವಿನಹಾರ ತಂದಿರದಿದ್ದುದನ್ನು ಗಮನಿಸಿ ಶೆಟ್ಟಿ ಸಾರ್ ನೀವು ಬಂದಿರೋದೆ ಹೆಚ್ಚು, ನಮ್ಮ ತಂದೆಯ ಹೆಣ ಸಾಗಿಸಲು ಯಾರೊಬ್ಬರೂ ಮುಂದೆ ಬರ್ತಾ ಇಲ್ಲ, ನೀವೆ ಅದಕ್ಕೆ ಒಂದು ದಾರಿ ತೋರಿಸಬೇಕು ಎನ್ನುತ್ತ ಕೈಗಳನ್ನು ಜೋಡಿಸಿ ಅಂಜಲೀಬದ್ದನಾದ.
ವಿಷಯ ಕ್ರಮೇಣ ಮನವರಿಕೆಯಾಯಿತು. ಅದೆಂದರೆ ಸತ್ತಿರುವುದು ಮಾಮೂಲಿ ಶೂದ್ರನಲ್ಲ, ವೈಶ್ಯ ಸಂಜಾತ. ಶವಸಂಸ್ಕಾರಕ್ಕೆ ಸಹಜಾತಿಯವರು, ಬ್ರಾಹ್ಮಣರು ಸಹಕರಿಸುವುದು ಮುಖ್ಯ. ಹೆಣವನ್ನು ಸಾಗಿಸಲು ಕನಿಷ್ಟಪಕ್ಷ ನಾಲ್ಕು ಮಂದಿಯ ಅವಶ್ಯಕತೆಯಿರುವುದು. ವಿಚಿತ್ರವೆಂದರೆ ಓಣಿಯಲ್ಲಿ ಕೋಮಟಿಗರು ಅಪಾರಸಂಖ್ಯೆಯಲ್ಲಿರುವುದು ಎಷ್ಟು ನಿಜವೋ, ಅವರು ತಮ್ಮತಮ್ಮ ಮನೆಯಲ್ಲಿ ಮಗುಮ್ಮಾಗಿರುವುದು ಅಷ್ಟೇ ನಿಜ. ಕೋಮಟಿಗರು ಕೋಮಟಿಗರಿಗೆ ಸಹಕರಿಸದಿದ್ದರೆ ಹೇಗೆ! ಅದೂ ಶವಸಂಸ್ಕಾರದ ಸಂದರ್ಭದಲ್ಲಿ! ಆದರೆ ಅದರ ನೇಪಥ್ಯದಲ್ಲಿರುವ ಕಾರಣಗಳ ಇತಿವೃತ್ತ ತಿಳಿಯುತ್ತಿಲ್ಲ. ಇದು ನನಗೆ ಯಕ್ಷಪ್ರಶ್ನೆ ಎನಿಸಿತು. ಸ್ವಲ್ಪ ಹೊತ್ತಿನ ಬಳಿಕ ಶೆಟ್ಟಿ ನಾನು ಸಹಬಾಂಧವರ ಕಾಲು ಹಿಡಿದು ಕೇಳಿದ್ದಾಯಿತು, ಆದರೂ ಅವರ ಹೃದಯ ಕರಗಲಿಲ್ಲ. ನೀವೇ ಅವರನ್ನು ಒಂದು ಮಾತು ಕೇಳಿ ನೋಡಿ ಸಾರ್ ಎಂದು ಗದ್ಗದಿತನಾದ. ಅವರಿಗೂ ನಿಮಗೂ ಏನಾದರೂ ವೈಷಮ್ಯ ಮನಸ್ತಾಪ ಎಂದು ಮರುಪ್ರಶ್ನೆ ಹಾಕಿದ್ದಕ್ಕೆ ಅವನು ಅಂಥದ್ದೇನೂ ಇಲ್ಲ ಸಾರ್, ನಿನ್ನೆವರೆಗೆ ಅವರೆಲ್ಲ ನಮ್ಮೊಂದಿಗೆ ಚೆನ್ನಾಗಿಯೇ ಇದ್ದರು, ಎದೆನೋವು ಕಾಣಿಸಿಕೊಂಡೊಡನೆ ನಮ್ಮ ತಂದೆಯವರನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದೂ ಅವರೆ, ದುಡ್ಡು ಖರ್ಚು ಮಾಡಿ ಸೂಕ್ತ ಚಿಕಿತ್ಸೆ ಕೊಡಿಸಿದ್ದೂ ಅವರೆ ಸಾರ್, ಆದರೆ ಅವರು ದೂರವಾಗಿರೋದು ನಮ್ಮ ತಂದೆ ಪ್ರಾಣಬಿಟ್ಟ ಬಳಿಕ ಎಂದು ಹೇಳಿದ್ದು ಕೇಳಿ ಆಶ್ಚರ್ಯಗೊಂಡೆ.
ನನಗೆ ತಿಳಿದಿರುವ ಮಾಹಿತಿಯಂತೆ ಆಲೂರಿನ ಶೆಟ್ಟರು ಸುಶಿಕ್ಷಿತರು, ಸುಸಂಸ್ಕೃತರು. ಅಂಥವರು ಸಹಕರಿಸದೆ ದೂರ ಉಳಿದಿರುವುದೆಂದರೇನು! ಅವರ ಪೈಕಿ ವಕೀಲರಾಗಿರುವ ಕೃಷ್ಣಮೂರ್ತಿಶೆಟ್ಟಿ, ಕಂದಾಯ ಇಲಾಖೆಯಲ್ಲಿ ಎಫ್ಡಿಸಿಯಾಗಿರುವ ತಿಮ್ಮಯ್ಯಶೆಟ್ಟಿ, ಜೊಹರಾಪುರಂನ ಹೈಸ್ಕೂಲ್ ಹೆಡ್ಮಾಸ್ಟರ್ ಅರುಣಾಚಲಶೆಟ್ಟಿ ಇವರೆಲ್ಲ ನನಗೆ ಚಿರಪರಿಚಿತರೆ. ಆ ದಿವಸ ಸರ್ಕಾರಿ ರಜೆ, ಮೇಲಾಗಿ ವೈಶಾಖದ ಮಧ್ಯಾಹ್ನ. ಅವರೆಲ್ಲ ತಮ್ಮ ಮನೆಗಳಲ್ಲಿ ಇಲ್ಲದೆ ಇರಲಾರರು. ಹೋಗಿ ಕೇಳುವುದರಲ್ಲಿ ತಪ್ಪೇನು? ಶೆಟ್ಟಿಯ ಬೆನ್ನನ್ನು ಸವರಿ ಹೊರಟೆ ಎದುರಿಗಿದ್ದ ಮನೆ ಕಡೆ.

ನನ್ನ ನಿರೀಕ್ಷೆಯಂತೆ ವಕೀಲರು ಮನೆಯಲ್ಲಿದ್ದರು, ಅದೂ ಖಟ್ಲೆಯೊಂದರ ಫೈಲನ್ನು ಪರಿಶೀಲಿಸುತ್ತ. ಕಿಟಿಕಿಯ ಸರಳುಗಳ ಹಿಂದಿನಿಂದ ನೋಡಿದವರೆ ಎದ್ದು ಬಾಗಿಲವರೆಗೆ ಬಂದು ಅಪಾದಮಸ್ತಕ ದಿಟ್ಟಿಸಿ ಓಹ್ ಅಯ್ಯವಾರು ಎಂದು ಉದ್ಗರಿಸಿದರು. ಪ್ರವರ ಹೇಳಿದಾದ ಬಳಿಕ ವಿಷಯ ಪ್ರಸ್ತಾಪಿಸಿದೊಡನೆ ಮುಖ ಸಿಂಡರಿಸಿಕೊಂಡರು. ಕಾಮನ್ಸೆನ್ಸಿಲ್ಲವೆಂಬಂತೆ ನೋಡಿದರು. ನಮಗೇನು ಅವರು ಶತ್ರುಗಳೇನ್ರಿ! ವಿಠಪ್ಪ ಸಾಯಬಹುದೆಂದು ಮೊದಲೇ ತಿಳಿದಿದ್ದಲ್ಲಿ ನಮ್ಮ ಓಣಿಯಲ್ಲಿ ಇಟ್ಟುಕೊಳ್ಳುತ್ತಲೇ ಇರಲಿಲ್ಲ ಮೇಸ್ಟ್ರೆ! ನಮ್ಮೋಣಿಯಲ್ಲಿ ಸಾಯಬೇಕೆಂದು ಆ ಬ್ರಹ್ಮ ಆತನ ಹಣೆಯಲ್ಲಿ ಬರೆದಿದ್ದನೇನೊ! ಸತ್ತ, ಆದರೆ ಆತನ ಶವಸಂಸ್ಕಾರದ ವಿಷಯದಲ್ಲಿ ಮಾತ್ರ ಸಹಕರಿಸುವುದಿಲ್ಲ ಎಂದು ಮುಖಕ್ಕೆ ರಾಚಿದಂತೆ ಹೇಳಿದರು, ಕಾರಣ ಕೇಳಿದ್ದಕ್ಕೆ ಆ ಮಹಾಶಯ ಇದನ್ನು ನೀವು ಕೇಳಲೂಬಾರದು ನಾವು ಹೇಳಲೂಬಾರದು, ದಯವಿಟ್ಟು ಒತ್ತಾಯಿಸಬೇಡಿ ಎನ್ನುತ್ತ ಒಳಗೆ ಹೋಗಿದ್ದೂ ಅಲ್ಲದೆ ಮುಂಬಾಗಿಲನ್ನು ದಢಾರೆಂದು ಮುಚ್ಚಿಕೊಂಡರು. ನನಗಿನ್ನೂ ವಿಚಿತ್ರವೆನ್ನಿಸಿತು. ಅವರಲ್ಲದಿದ್ದರೆ ಇನ್ನೊಬ್ಬರು ತಾನೆ!
ತಿಮ್ಮಯ್ಯಶೆಟ್ಟಿಯೂ ಇದೇ ಮಾತನ್ನು ಆಡಿದ. ಆದರೆ ಅರುಣಾಚಲಶೆಟ್ಟಿ ಮಾತ್ರ ಇದು ನಿಮಗೆ ಅಷ್ಟು ಸುಲಭವಾಗಿ ಅರ್ಥವಾಗೋದಿಲ್ಲ. ಅವರೂ ನಾವೂ ಕೋಮಟಿಗರೇನೋ ನಿಜ, ಜಾತಿ ಎಂದ ಮೇಲೆ ಒಳಪಂಗಡಗಳಿರ್ತಾವೆ ನೋಡಿ. ಸತ್ತಿರುವ ವಿಠಪ್ಪಶೆಟ್ಟಿ ಮಾತ್ರ ಎಣ್ಣೆ ಶೆಟ್ರು, ಆಲೂರಿನಲ್ಲಿರುವ ನಾವೆಲ್ಲ ತುಪ್ಪದ ಕೋಮಟಿಗರು, ಎಣ್ಣೆ ಎಣ್ಣೇನೆ, ತುಪ್ಪ ತುಪ್ಪಾನೆ! ಎಂದು ಜಾತಿಯ ಅಂತರ್ಗತ ಸಮಸ್ಯೆಯನ್ನು ಎರಡೇ ಮಾತುಗಳಲ್ಲಿ ವಿವರಿಸಿ ತಮ್ಮ ಮನೆಯನ್ನು ಸೇರಿಕೊಂಡರು. ಅವರಾಡಿದ ಮಾತುಗಳನ್ನು ಕೇಳಿದೊಡನೆ ಬರಸಿಡಿಲಿಗೆ ತುತ್ತಾದ ಅನುಭವವಾಯಿತು.
ಥೂ ಈ ಜಾತಿವ್ಯವಸ್ಥೆಗೆ ಬೆಂಕಿ ಬೀಳಲಿ ಎಂದು ನನ್ನ ಪಾಡಿಗೆ ನಾನು ಶಪಿಸುತ್ತ ಹೆಣವಿದ್ದ ಮನೆಯ ಅಂಗಳ ಪ್ರವೇಶಿಸಿದೆ.

‍ಲೇಖಕರು avadhi

14 March, 2013

22 Comments

  1. Nalini

    ಎಣ್ಣೆ ಎಣ್ಣೇನೇ, ತುಪ್ಪ ತುಪ್ಪಾನೇ!!! ಈ ಜಾತಿ ಪದ್ಧತಿ ತೊಳೆಯೋ ಸೀಗೇ ಕಾಯಿ ಮಾತ್ರ ಇನ್ನೂ ಸಿಕ್ಕಿಲ್ಲ! ಚೆನ್ನಾಗಿದೆ! ಮುಂದಿನ ಲೇಖನಗಳನ್ನು ಎದುರು ನೋಡುತ್ತಾ ಇರ್ತೀನಿ.

  2. ಹರಿ

    ಕುವೆಂಪು ಹೇಳಿದರು.”ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ” ಅಂತ…ಎಂದು ಆಗುವೆವೋ ನಾವು ವಿಶ್ವಮಾನವರು? ಎಂದು ಆಗುವೆವೋ ನಾವು ಮುಕ್ತ…ಮುಕ್ತ…ಮುಕ್ತ?

  3. Gopaal Wajapeyi

    ಆಲೂರಿನ ಆ ಬೀದಿಗಳು… ವಿಟ್ಟಪ್ಪಶೆಟ್ಟಿಯ ಆ ಹೆಣ ಎಲ್ಲ ಕಣ್ಣ ಮುಂದೆ ನಿಂತವು ಕುಂ.ವೀ. ನಿಟ್ಟುಸಿರಿನೊಂದಿಗೆ ಹಾಗೆಯೇ ಕಣ್ಣು ಮಂಜಾದವು.

  4. narayan raichur

    ” sattaroo ee deshadinda jaati-paddhati hogodilla” anno haage ee jaati-Roga “amara” anta kaanutte!!
    “samskaara”vantaru ee paddhatige adastu sheeghra ee paddathi-ge “samskaara” maadali yendu prerepisuvantide
    “KUM-VEE” avara aarambhada ankana!!

  5. ಸತ್ಯನಾರಾಯಣ

    ಸರ್ ನಿಮ್ಮ ಸ್ವಾನುಭವ ಕಥನ ಅದ್ಭುತವಾಗಿದೆ. ಅದನ್ನು ಹೇಳಿ ಸಂಭ್ರಮಿಸಬೇಕೋ ಅಥವಾ ನಮ್ಮ ದೇಶದ ೀ ಜಾತಿ ವ್ಯವಸ್ಥೆಯ ಅವಾಂತರಗಳನ್ನು ಕಂಡು ವಿಷಾದ ಪಡೆಯಬೇಕೊ ತಿಳಿಯುತ್ತಲ್ಲ.

  6. Raghunandan K

    ಅವಧಿಯಲ್ಲಿ ನಿಮ್ಮ ಅಂಕಣ ನೋಡಿ ಖುಷಿಯಾಯಿತು.
    ಮನುಷ್ಯ ಜಾತಿಯೊಳಗಿನ ಅಸಂಖ್ಯ ಜಾತಿಗಳ ತೊಳೆಯಲು ಯಾರೆಲ್ಲ ಪ್ರಯತ್ನಿಸಿದರೂ ಅದು ಉಳಿದಿದೆ. ಜಾತಿ ಮೀರಿದ ಮನುಷ್ಯತ್ವ ಬೆಳೆಯುವ ದಿನಗಳಿಗಾಗಿ ಸಮಾಜ ಕಾದಿದೆ…
    ಮುಂದಿನ ನಿಮ್ಮ ಬರಹಗಳ ನಿರೀಕ್ಷೆಯಲ್ಲಿ…

  7. na.damodara shetty

    naranappana saavigintha katina ii nimma vitappana saavu. alli naaranappa jaatikettava. illi vitappa jaatiyalle idduu enne-tuppa vyatyaasakke guriyaadava. uddhaaravaagolla!

  8. chalapathy

    ಜಾತಿಯ ಬಗೆಗಿನ ಬೆಂಕಿಯ ಕುರಿತು ಚನ್ನಾಗಿ ಬರೆದಿದ್ದಾರೆ ಕುಂ.ವಿಯವರು

  9. samyuktha

    ಇದಕ್ಕೆ ನಿಮ್ಮ ಮುಂದಿನ ನಡೆ ನಿರ್ಧಾರ ಏನಾಗಿತ್ತು ಎಂದು ಅರಿಯುವ ಕುತೂಹಲ. ತುಂಬಾ ಚೆನ್ನಾಗಿದೆ ಸರ್ ಲೇಖನ!

  10. G Venkatesha

    Thumba maarmikavaada prakarana.PralayavE AgabEkenO E Jaati paddati todeyalui:-(:-(:-(

  11. Paresh Saraf

    ಉತ್ತಮ ಲೇಖನ. ಮೊದಲು ಮಾನವರಾಗಬೇಕಾಗಿದೆ

  12. ಪ್ರಸಾದ್.ಡಿ.ವಿ.

    ಕುಂ ವೀ ಯವರ ಕಾಲಂ ಅವಧಿಯಲ್ಲಿ ಪ್ರಾರಂಭವಾಗಿದ್ದು ಸಂತಸದ ವಿಚಾರ. ಅಭಿನಂದನೆಗಳು ಇಬ್ಬರಿಗೂ. ಸರ್, ನಿಮ್ಮ ಬರವಣಿಗೆ ವಿಶಿಷ್ಟವಾದ ಅನುಭವ ಕೊಡುತ್ತದೆ. ಸಮಾನತೆಯ ಸಮಷ್ಟಿ ಸಮಾಜ ಸೃಷ್ಠಿಯ ಪರಿಕಲ್ಪನೆ ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ ಈ ಲೇಖನ. ಜಾತಿ, ಧರ್ಮಗಳಲ್ಲಿನ ಅಂಧಕಾರವೇ ದೊಡ್ಡ ತಲೆನೋವಾಗಿರುವಾಗ, ಜಾತಿಗಳೊಳಗಿನ ಒಳ ಪಂಗಡಗಳೂ ಸಮಾಜದುಪದ್ರವಿಗಳಾಗಬಲ್ಲವು ಎಂಬ ಸಾಧ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ ಬರಹ.
    – ಪ್ರಸಾದ್.ಡಿ.ವಿ.

  13. Mohan V Kollegal

    ಜಾತಿಯೆಂಬ ಪೆಡಂಬೂತ ಜಾತಿಯೊಳಗೂ ಇದೆ. ಕುವೆಂಪು ರವರು ‘ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ’ ಎಂದರು, ಆದರೆ ದುರದೃಷ್ಟಕ್ಕೆ ಪ್ರೀತಿಯನ್ನು ಸುಡೋ ಕಿಡಿ ಜಾತಿಯಾಗಿದೆ. ವಿದ್ಯಾವಂತರೇ ಈ ರೀತಿಯಾಗಿ ಮಾಡಿದರೆ ಇನ್ನು ಮೌಢ್ಯವನ್ನೇ ಆತುಕೊಂಡಿರುವವರ ಪಾಡೇನು. ಎಲ್ಲಾ ಕಟ್ಟಳೆಗಳನ್ನು ಮರೆತು ನಾವೆಲ್ಲಾ ಒಂದೇ ಎಂದುಕೊಳ್ಳುವ ಕಾಲ ಕನಸೇನೋ… ಕುಂ.ವೀ ಯವರ ಅಂಕಣವನ್ನು ಪ್ರಾರಂಭಿಸಿ ಅವರ ವಿಚಾರಗಳನ್ನು ನಮಗೆ ಮುಟ್ಟಿಸುತ್ತಿರುವ ಅವಧಿಗೆ ವಂದನೆಗಳು… 🙂

  14. kumararaitha

    ಅಬ್ಬಾ ಜಾತಿ ವ್ಯವಸ್ಥೆಯೇ…. ಇದನ್ನೆಲ್ಲ ಓದಿದ್ರೆ ಅನುಭವಿಸಿದವರ ಪಾಡು ನೆನೆದು ದಿಗಿಲಾಗುತ್ತೆ… ಜಾತಿ ಕ್ರೂರತೆ, ಅದರ ಕಪಿಮುಷ್ಟಿ ಶವಸಂಸ್ಕಾರದ ಸಂದರ್ಭದಲ್ಲಿಯೂ ಹೇಗಿರುತ್ತೆ ಅನ್ನೋದನ್ನ ಮನತಟ್ಟುವ ಹಾಗೆ ವಿವರಿಸಿದ್ದೀರಿ….

  15. pravara

    ಜಾತಿ ವ್ಯವಸ್ಥೆಯ ಪೆಡಂಭೂತಕ್ಕೆ ಇದು ಒಂದು ಸಣ್ಣ ಉದಾಹರಣೆ ಅಷ್ಟೆ… ಈ ವ್ಯವಸ್ಥೆ ಎಷ್ಟೊ ಸಾವಿರ ವರ್ಷಗಳಿಂದ ಹಾಗೆ ಇದೆ ಕೆಡವಲು ಬಂದವರನ್ನೂ ನಲುಗುವಂತೆ ಮಾಡಿದೆ… ನಾನಂತೂ ತುಂಬಾ ಉತ್ಸುಕನಾಗಿದ್ದೇನೆ ಓದಲು.

  16. Anil Talikoti

    ಯಾಕೋ , ಏನೋ ಇದು ನಿಜವಾಗಿ ನಡೆದದ್ದು ಅಲ್ಲವೆನಿಸುತ್ತದೆ ನನಗೆ. ನನ್ನ ಸೀಮಿತ ಅನುಭವದ ಫಲವೂ ಇರಬಹುದು ಇ ಅಭಿಪ್ರಾಯ. ನನ್ನ ತೊಂದರೆ ಏನೆಂದರೆ ಇಲ್ಲದನ್ನು ವೈಭವಿಕರಿಸಿದರೆ ಮೂಲ ಸಮಸ್ಯೆಗೆ ಪರಿಹಾರ ಪಲಾಯನವಾಗುವ ಸಾಧ್ಯತೆ ಅಧಿಕ. ಇ ಘಟನೆ ಬರೀ ಕಥೆಯಾಗಿರಲಿ ಎಂಬ ಒಳ ಅಶೆಯೂ ಪ್ರಾಯಶ ಇದಕ್ಕೆ ಕಾರಣವೇನೋ?
    -ಅನಿಲ ತಾಳಿಕೋಟಿ

  17. kum.veerabhadrappa

    anil, nimma anumaana aatanka arthavaaguvudu, lekhandalli ooru, naamavaachkagalannu badalisiddene, aadare idu kaalpanikavalla. venugopalashetty (enne komatigaru) avarondige neevu maataaduvudaadare avara dooravaani nambar koduve
    kumvee

  18. sunil rao

    vichitra vishwa

  19. Lingaraju bs

    ಮೇಷ್ಟ್ರೇ, ನಿಮ್ಮ ಅನುಭವದ ಖಜಾನೆಯಿಂದ ಇನ್ನಷ್ಟು ಬರಲಿ. ಓದುವ ಮುನ್ನ ಕೆಲವರಿಗೆ ಕರವಸ್ತ್ರಬೇಕಾಗುತ್ತದೆ, ಮುಖ ಮುಚ್ಚಿಕೊಳ್ಳಲಿಕೆ

  20. Anil Talikoti

    ಕುಂ.ವೀ ಅವರೇ,
    ನಿಮ್ಮ ಉತ್ತರಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಲೇಖನವನ್ನು ಕೂಡಾ ಸಂದೇಹದಿಂದ ನೋಡುವಂತಾದದಕ್ಕೆ ನನಗೆ ಕಸಿವಿಸಿಯಾಗುತ್ತದೆ. ಇದಕ್ಕೆ ಕಾರಣ ಎರಡೂವರೆ ದಶಕ ಅಲ್ಲಿ(ಕನ್ನಡದ ನೆಲದಲ್ಲಿ), ಎರಡು ದಶಕ ಇಲ್ಲಿ (ಅಮೆರಿಕೆಯಲ್ಲಿ) ಎಂದು ನುಣಚಿಕೊಳ್ಳಲಾರೆ. ಯಾವದನ್ನು ಹೇಗೂ ಬರೆದು ಬಿಂಬಿಸಬಹುದು ಎಂಬ ಯುಗದಲ್ಲಿ ನಾವಿದ್ದೇವೆ ಎಂದು ಹೇಳಿ ಮುಗಚಿ ಹಾಕಲಾರೆ. ಇದು ನಿಜ ಎಂದಾದಮೇಲೆ ನನಗೆ ನಿಜವಾಗಿಯೂ ನಾವು ಏನನ್ನೂ ಸಾಧಿಸಿಲ್ಲ, ಬದಲಾಗಿಸಿಲ್ಲ ಎಂಬ ನೋವು,ಖೇದವಿದೆ. ಹಣದ ಮದ, ರಾಜಕೀಯದ, ಹೆಣ್ಣಿನ, ಹೆಂಡದ ಇನ್ನೂ ನೂರೆಂಟು ಸಮಸ್ಯೆ ಗಳನ್ನು ನಾವು ಮುಂದೊಮ್ಮೆ ಪರಿಹರಿಸಬಹುದು ಆದರೆ ಇ ಜಾತಿಯ ಸವಾಲು ನನಗೆ ತೀರಾ ಬಾಲಿಶವಾಗಿ ಕಾಣಿಸುತ್ತದೆ. ಬಾಲಿಶ -ಪದ ಪ್ರಯೋಗ ತಪ್ಪಿರಬಹುದೋ ಏನೋ? ಆದರೆ, ಬೇರೆಲ್ಲಾ ಸಮಸ್ಯೆಗಳಿಗಿಂತ ಜಾತೀಯತೆ ಸುಲಭವಾಗಿ ಬಗೆ ಹರಿಸಿಕೊಳ್ಳಬಹುದಾದ್ದಲ್ಲವೇ? ನಾನಿದನ್ನು ಅತೀ ಗಂಭೀರತೆಯಿಂದ ಕೇಳುತ್ತಿದ್ದೇನೆ. ಇದರ ಆಳ, ಹರವಿನ ವಿಸ್ತಾರದ ಅಂದಾಜು ನನಗಿದೆ. ಹೆಚ್ಚು ಕಮ್ಮಿ -ಒಂದು ಆರ್ಥಿಕ ಸಮಾನ ನೆಲೆ ಯಲ್ಲಿರುವ ಎಲ್ಲರೂ, ಜಾತಿಯ ಬಗ್ಗೆ ನಿರ್ಲಿಪ್ತವಾಗುತ್ತಾ ಹೋಗುತ್ತಾರೆ ಎಂದು ನನ್ನ ಅಂದಾಜು. ಎಣ್ಣೆ, ತುಪ್ಪ ಶೆಟ್ಟರನ್ನು ಬಿಡಿ , even ಬ್ರಾಹ್ಮಣರು, ವೀರಶೈವರು, ಗೌಡರು, ಮುಸ್ಲಿಮರು, ಕ್ರಿಶ್ಚಿಯನ್ನರೂ – ಬಿಳಿ, ಕರಿ ಬಣ್ಣದವರೂ ಒಂದಾಗುವ ಸಮಯ ಬೇಗ ಬರುತ್ತದೆ ಎಂದುಕೊಂಡಿದ್ದೆ ನಾನು. ಒಂದು ಸಾವಿನಲ್ಲೂ ಇಂತಹದು ಎದ್ದು, ಒಡೆದು ತೋರತ್ತದೆ ಎಂದಾದರೆ ಇದಕ್ಕಿಂತ ನೋವಿನ ಸಂಗತಿ ಇನ್ನೊಂದಿಲ್ಲ. ಆದರೂ, ಎಲ್ಲೋ , ಏನೋ ಒಂದು ಆಶೆ ಭೂಮಿ ಬಿರಿದು ಹೊರಬರುವದು ಸುಳ್ಳಲ್ಲ, ಅದು ನನ್ನಲ್ಲಿ ಇನ್ನೂ ಇರುವದರಿಂದ ಮತ್ತು ನಿಮ್ಮನ್ನು ನಾನು ನಂಬುವದರಿಂದ ನನಗೆ ಯಾವ ದೂರವಾಣಿಯ ಅಗತ್ಯವೂ ಕಾಣುತ್ತಲಿಲ್ಲ. ಇದನ್ನು ಬಗೆಹರಿಸುವ ಸಾಧ್ಯಸಾಧ್ಯತೆ ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿದುಕೊಳ್ಳುವ ಆಶೆ. ಸಾಧ್ಯವಾದರೆ ನಿಮ್ಮ email ತಿಳಿಸಿದರೆ ನಾನು ಉಪಕೃತ.
    -ಅನಿಲ ತಾಳಿಕೋಟಿ

  21. KARIBASAVA NAIK

    Nice article sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading