ಎಂಟರ್ ದಿ ಡ್ರಾಗನ್ ಸಿನೆಮಾ ನೋಡಿದ್ದು ಟೈಂಪಾಸು ಮಾಡಲೆಂದು. ಹನ್ನೆರಡೂವರೆಗೆ ಬಿಡಬಹುದೆಂದು ಭಾವಿಸಿದ್ದೆ, ಆದರೆ ಅದು ಬಿಟ್ಟಿದ್ದು ಒಂದು ಗಂಟೆ ಮುಂಚಿತವಾಗಿ. ಮಧ್ಯರಾತ್ರಿ ಕಾಲಕಳೆಯುವುದು ದುಸ್ತರ ಬೇರೆ, ಕಾರಣ ಹುಬ್ಬಳ್ಳಿಗೆ ಹೊರಡುವ ಬಸ್ಸು ಇರುವುದು ಒಂದು ಗಂಟೆಗೆ. ಬ್ರೂಸ್ಲೀಯ ಕರಾಟೆ ಕುಂಗ್ಫುಗಳನ್ನು ಮನಸ್ಸಿನಲ್ಲಿ ಮೆಲುಕು ಹಾಕುತ್ತ ಹೆಜ್ಜೆ ಹಾಕಿದೆ. ಬಸ್ಸು ನಿಲ್ದಾಣ ನಟರಾಜ ಚಿತ್ರಮಂದಿರಕ್ಕೆ ದೂರವಿರಲಿಲ್ಲ, ಅಲ್ಲಿ ಕೂಗಿದರೆ ಇಲ್ಲಿ ಕೇಳಿಸುವಷ್ಟು, ಇಲ್ಲಿ ಕೂಗಿದರೆ ಅಲ್ಲಿ ಕೇಳಿಸುವಷ್ಟು, ಅಂದರೆ ಕೂಗಳತೆ ದೂರದಲ್ಲಿ. ಅಂತೂ ನಿರಾಯಾಸವಾಗಿ ತಲುಪಿದೆ. ಅಲ್ಲಲ್ಲಿ ವಿದ್ಯುದ್ದೀಪಗಳಿದ್ದವು, ಆದರೆ ಅವು ನಿರೀಕ್ಷಿತ ಪ್ರಮಾಣದ ಬೆಳಕು ಚೆಲ್ಲುತ್ತಿರಲಿಲ್ಲ. ಕೆಲವು ಉರಿಯುತ್ತಿದ್ದರೆ ಇನ್ನೂ ಕೆಲವು ಹೋಗುವುದು ಬರುವುದು ಮಾಡುತ್ತಿದ್ದವು. ಮತ್ತೂ ಕೆಲವು ಸೆಲ್ಸಿಲ್ಲದ ಬ್ಯಾಟರಿಗಳಂತೆ ನಿಸ್ತೇಜಗೊಂಡು ಅಜ್ಜಿಕಥೆಗಳಲ್ಲಿನ ದೆವ್ವ ಬೇತಾಳಗಳಂತಿದ್ದವು. ಹಗಲಿರುಳು ಪ್ರಯಾಣಿಕರ ಹಾಗೂ ದಾರಿಹೋಕರ ಅವ್ಯಾಹತ ಮೂತ್ರವಿಸರ್ಜನಾ ಗಧಾ ಪ್ರಹಾರದಿಂದಾಗಿ ಪ್ರಹರಿಗೋಡೆ ದುರ್ಬಲಗೊಂಡಿತ್ತು, ಅಲ್ಲದೆ ಮುಂಬರುವ ದಿವಸಗಳಲ್ಲಿ ನೆಲಕಚ್ಚುವ ಸ್ಥಿತಿಯಲ್ಲಿತ್ತು.
ಎಲ್ಲಾ ಅವಲಕ್ಷಣಗಳನ್ನು ಅಲಂಕರಿಸಿಕೊಂಡಿದ್ದರೂ ಅಲ್ಲಿನ ಬಸ್ಸು ನಿಲ್ದಾಣ ನನ್ನ ಪಾಲಿಗೆ ವಿಶ್ವವಿದ್ಯಾಲಯವೇ ಸರಿ. ಅದಕ್ಕಿದ್ದ ಕಾರಣಗಳ ಯಾದಿ ತಯಾರಿಸುವುದು ಸುಲಭ ಸಂಗತಿಯಲ್ಲ. ನಿಲ್ದಾಣದ ಪ್ರಾಂಗಣದ ಹಲವೆಡೆ ತೂಗುತ್ತಿರುವ ಕುಖ್ಯಾತರ ಅಸಂಖ್ಯಾತ ಪಾಸ್ಪೋರ್ಟ್ ಸೈಜಿನ ಮುಖಾರವಿಂದಗಳನ್ನು ನೋಡುವುದೇ ಒಂದು ಚಂದ, ಅವರ ಪೈಕಿ ಹಲವರು ನನ್ನಂಥ ಸಾರ್ವಜನಿಕರಿಗೆ ಚಿರಪರಿಚಿತರು. (ಎರಡು ಮೂರು ದಶಕಗಳ ಬಳಿಕ ಅವರಲ್ಲಿ ಒಂದಿಬ್ಬರು ಶಾಸಕರಾಗಿ ಇನ್ನೂ ಕೆಲವರು ನಗರಸಭಾ ಸದಸ್ಯರಾಗಿ ಸೃಜನಶೀಲ ಭವಿಷ್ಯವಾಣಿಯನ್ನು ನಿಜವಾಗಿಸಿರುವರು, ಚುನಾವಣೆ ಎಂಬ ನೌಟಂಕಿಯ ಪ್ರಜಾಪ್ರಭುತ್ವದಲ್ಲಿ ಕತ್ತೆ ಕುದುರೆಯಾಗುವುದು, ಕುದುರೆ ಕತ್ತೆಯಾಗುವುದು ಸಾಧ್ಯವೆಂದು ತೋರಿಸಿರುವರು) ವಾಸಿಯಾಗದ ರೋಗಿಗಳು, ಭಿಕ್ಷುಕರೂ, ಉದಯೋನ್ಮುಖ ಕಳ್ಳರು, ತಮ್ಮ ಕರುಳಕುಡಿಗಳ ದಿವ್ಯನಿರ್ಲಕ್ಷೆಗೆ ತುತ್ತಾಗಿರುವವರು, ವೇಶ್ಯಾವಾಟಿಕಾ ಪರಿಣಿತರು, ಕುಡುಕರು, ಹುಚ್ಚರು, ಸಾಧು ಸನ್ಯಾಸಿಗಳು! ಇಂಥವರಿಂದಾಗಿ ಅದೊಂದು ಸಮಾಜದ ತಿರಸ್ಕೃತ ಮನುಷ್ಯರ ವಸ್ತು ಸಂಗ್ರಹಾಲಯವೇ ಸರಿ. ಇನ್ನೊಂದು ಮಹತ್ವದ ಸಂಗತಿಯೆಂದರೆ ಕಣ್ಣಳತೆಯಲ್ಲಿರುವ ವೇಶ್ಯಾವಾಟಿಕೆ, ಅವರಿಗೆ ಸಂಬಂಧಿಸಿದ ಅಗಣಿತ ಝೋಪಡಿಗಳು. ವೇಶ್ಯೆಯರ ಲೈಂಗಿಕ ದಲ್ಲಾಳಿಗಳ ವ್ಯವಹಾರದ ಷೇರ್ ಮಾರ್ಕೆಟ್ ಎಂದರೆ ನಿಲ್ದಾಣ. ಇವರವರೊಂದೇ ಅಲ್ಲದೆ ಅಲ್ಲಲ್ಲಿ ಕೂತು ತೂಕಡಿಸುವ ಪ್ಯಾದೆಗಳೂ, ನಿರುಪದ್ರವಿ ಪ್ರಯಾಣಿಕರೂ, ಆಗೊಮ್ಮೆ ಈಗೊಮ್ಮೆ ಹೀಗೆ ಬಂದು ಹೋಗುವ ಬಸ್ಸುಗಳೂ
ಪ್ರವೇಶಿಸಿದೊಡನೆ ಅವರೆಲ್ಲರೊಂದಿಗೆ ನಾನೂ ಸೇರ್ಪಡೆಗೊಂಡೆನು. ಬಿದ್ದೊಡನೆ ಶಾಯಿಯ ಹನಿ ಬಕೆಟ್ಟಿನ ನೀರಿನಲ್ಲಿ ವಿಸ್ತಾರಗೊಳ್ಳುವಂತೆ ಪಂಚೇಂದ್ರಿಯಗಳನ್ನು ಕೂತಲ್ಲಿಂದಲೇ ತುಡುಗು ಬಿಟ್ಟೆನು. ಪ್ರಹರಿಗೋಡೆಯ ಪಕ್ಕ ಅಂದರೆ ಕಕ್ಕಸು ಸಂಕೀರ್ಣದ ಅಂಗಳದಲ್ಲಿ ಹೆಂಗಳೆಯರ ಗುಂಪೊಂದು ಹರಟೆಯಲ್ಲಿ ತೊಡಗಿತ್ತು, ಅವರ ನಡುವೆ ಉರಿಯುತ್ತಿದ್ದ ಬೆಂಕಿ ಚಿತೆಯೋಪಾದಿಯಲ್ಲಿ ಉರಿಯುತ್ತಿದ್ದ ಬೆಂಕಿಯ ಜ್ವಾಲೆಗಳಿಗೆ ಅವರು ತಮ್ಮೆಲ್ಲ ಹಸ್ತಗಳನ್ನು ಚಾಚಿದ್ದರು. ಧನರೇಖೆ ಆಯುಷ್ಯರೇಖೆಗಳಿಗೆ ಸಾಣೆ ಹಿಡಿಯಲೆಂದೋ! ಆಗೊಮ್ಮೆ ಬಸ್ಸುಗಳು ಬಂದು ಹೋಗುತ್ತಿದ್ದವು, ಅವುಗಳಿಂದ ಪ್ರಯಾಣಿಕರ ಪೈಕಿ ಕೆಲವರು ಉದುರಿದೊಡನೆ ಇದ್ಯಾವ ಊರು ಎಂಬಂತೆ ನೋಡುತ್ತಿದ್ದರಲ್ಲದೆ ಮೈಮುರಿದು ಆಕಳಿಸುತ್ತಿದ್ದುದು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕೆಲವರು ನಿಧಾನವಾಗಿ ನಡೆದು ಮಾಯವಾದರೆ ಇನ್ನೂ ಕೆಲವರು ತಮ್ಮ ಲಗೇಜನ್ನು ಅವುಚಿಕೊಂಡು ಅಲ್ಲಲ್ಲಿ ಕೂಡ್ರುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
ಎಡ ಮುಂಗೈಯನ್ನು ಕಣ್ಣಳತೆ ತಂದುಕೊಂಡೆ, ಮಬ್ಬುಬೆಳಕಲ್ಲಿ ಅದರ ಮುಳ್ಳುಗಳು ಖಚಿತವಾಗಿ ಗೋಚರಿಸಲಿಲ್ಲ, ಸಮಯ ತಿಳಿದುಕೊಳ್ಳಲೆಂದು ಉರಿಯುತ್ತಿದ್ದ ದೀಪಸ್ತಂಭದ ಕಡೆ ಹೋಗುವುದಕ್ಕೂ ಬಸ್ಸೊಂದು ಸರ್ರಂತ ಹಿಂದೆ ಬರುವುದಕ್ಕೂ ಸರಿ ಹೋಯಿತು. ಗಾಬರಿಯಿಂದಾಗಿ ಬೀಳಲಿದ್ದವನು ಹಾಗೆ ಚೇತರಿಸಿಕೊಂಡೆ, ಅದರ ಮುಖಾರವಿಂದ ಕಡೆ ಕಣ್ಣಾಯಿಸಿದೆ. ರಾಯಲಸೀಮೆಯ ಯಾವುದೋ ಮೂಲೆಯಿಂದ ಬಂದಿತ್ತದು. ಅದರಿಂದ ಇಳಿಯಲಾರಂಭಿಸಿದವರು ಸರಿಸುಮಾರು ಜನ. ಸಾಮೂಹಿಕ ಬೆವರ ಪರಿಮಳ ನಿಲ್ದಾಣದಾದ್ಯಂತ ವ್ಯಾಪಿಸಿತು. ಅವರ್ಯಾರೂ ಸ್ನಾನದ ಗೊಡವೆಗೆ ಹೋಗಿಲ್ಲವೆಂದು ಅರ್ಥಮಾಡಿಕೊಂಡೆ. ಕುಡಿಯುವ ಬೊಗಸೆ ನೀರಿಗೂ ತತ್ವಾರ ಅನುಭವಿಸುವ ರಾಯಲಸೀಮೆಯ ಪ್ರಜಾನಿಕ ತಮ್ಮ ಮೈಗೆ ನೀರನ್ನು ಸಿಂಪರಿಸಿಕೊಳ್ಳುವುದೆಲ್ಲಿ ಸಾಧ್ಯ! ರಾಯಲಸೀಮೆ ಕಾದುರಾ ಅದಿ ಗಾಯಾಲ ಸೀಮೆ ರಾ ಎಂದು ತೆಲುಗಿನ ಪ್ರಖ್ಯಾತ ಕವಿ ದಾಶರಥಿ ಬರೆದ ಕವಿತೆ ನೆನಪಾಯಿತು. ಆ ಪ್ರದೇಶವೇನೂ ನನಗೆ ಅಪರಿಚಿತವಲ್ಲ, ಒಂದು ಗುಟುಕು ನೀರಿರದಿದ್ದರೂ, ಒಂದು ತುತ್ತು ಕೂಳಿರದಿದ್ದರೂ ಅಲ್ಲಿನ ಜನ ನಾಡಬಾಂಬುಗಳನ್ನು ತಯಾರಿಸುವುದರಲ್ಲಿ ನಿಷ್ಣಾತರು. ಒಂದು ಹೊತ್ತಿನ ಊಟ ಒಂದು ಕ್ವಾರ್ಟರ್ ಬಾಟಲಿ ದಯಪಾಲಿಸಿದವರು ಹೇಳುವ ಯಾವುದೇ ಕಾನೂನುಬಾಹಿರ ಕೆಲಸವನ್ನು ತ್ರಿಕರಣಪೂರ್ವಕವಾಗಿ ಮಾಡಿಮುಗಿಸುವಂಥವರು.
ಸೇರ್ಪಡೆಗೊಂಡ ಹೊಸ ಪ್ರಯಾಣಿಕರಿಂದಾಗಿ ನಿಲ್ದಾಣ ಕಳೆಗಟ್ಟಿತು. ಅವರಲ್ಲಿ ಗಂಡಸರ್ಯಾರೋ ಹೆಂಗಸ್ಯಾರೋ! ವಾಗ್ವೈಖರಿಯಿಂದ ತಿಳಿಯದಾಯಿತು. ನನ್ನ ಕುಲಬಾಂದವರೆಂದರೆ ಪುಳಕಗೊಳ್ಳದೆ ಇರಲಾದೀತೆ! ಹತ್ತಿರದಿಂದ ನೋಡಲೆಂದು ಎದ್ದು ಹೊರಟೆ, ಒಬ್ಬೊಬ್ಬರ ಮೈಯೊಳಗೆ ಹತ್ತಾರು ಜನರಿದ್ದರು. ಸಾಮಾನು ಸರಂಜಾಮಗಳಂತೂ ಅಸಂಖ್ಯಾತ. ಕೂಸುಕುನ್ನಿಗಳು ಇಲಿಬುಡಕಗಳೋಪಾದಿಯಲ್ಲಿ ಹರಿದಾಡುತ್ತಿದ್ದವಲ್ಲದೆ ರೊಯ್ಯೋ ಎಂದು ಅಳುತ್ತಿದ್ದವು, ಅವುಗಳನ್ನು ಸಂತೈಸುವ ಬದಲು ತಾಯಂದಿರು ಅವುಗಳ ಬೆನ್ನ ಮೇಲೆ ಬಾರಿಸುತ್ತ ಬಾಸುಂಡೆಗಳನ್ನು ಮೂಡಿಸುತ್ತಿದ್ದರು. ಅವರೆಲ್ಲ ವಿನಾಕಾರಣ ಕಲಕಲ ಮಾತಾಡುತ್ತಿದ್ದರು. ಚುಟ್ಟಾ ಚಿಲುಮೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದವರ ನಡುವೆ ಲಿಂಗತಾರತಮ್ಯವಿರಲಿಲ್ಲ. ನವರಂದ್ರಗಳಿಂದ ಹೊಗೆ ಉಗುಳುತ್ತಲೂ ತನ್ನ ಇನ್ನೊಂದು ಕೈಯಿಂದ ಮೀಸೆಯನ್ನು ಹುರಿಗೊಳಿಸಿಕೊಳ್ಳುತ್ತಲೂ ಇದ್ದ ವ್ಯಕ್ತಿಯೋರ್ವ ತೆಲುಗಿನಲ್ಲಿ ಮಾತಾಡಿಸಿದೊಡನೆ ಕಾಲ ಮೇಲೆ ಕಾಲು ಹಾಕಿ ರಾಜಗಾಂಭೀರ್ಯ ಪ್ರಕಟಿಸಿದ. ಎರಡೇ ಎರಡು ಪ್ರಶ್ನೆಗಳಿಗೆ ಸಾವಿರ ಪುಟಗಳಿಗಾಗುವಷ್ಟು ಉತ್ತರಿಸಿದ. ಆತನ ಮಾತಿನ ಓಘದಲ್ಲಿ ರಾಯಲಸೀಮೆಯ ವರ್ತಮಾನ ಅನಾವರಣಗೊಂಡಿತು. ಚಿಕ್ಕಮಗಳೂರಿಗೆ ನೀಎಕ್ಕ ಎಂದೂ, ಹಾಸನಕ್ಕೆ ಗಾಡಿದಿ ಎಂದೂ, ಮಗಳೂರು ಮೂಡಿಗೆರೆಗೆ ಲಂಜಾಕೊಡುಕಾ ಎಂದೂ ಮರುನಾಮಕರಣ ಮಾಡಿದ. ತಮ್ಮನ್ನಿಲ್ಲಿಗೆ ಬರಲು ಹೇಳಿ ನಾಪತ್ತೆಯಾಗಿರುವ ಮಾನವ ಕಳ್ಳಸಾಗಣಿಕೆದಾರ ಪೋತರಾಜುನನ್ನು ವಾಚಾಮಗೋಚರವಾಗಿ ಶಪಿಸಿ ನನ್ನ ಬಯ್ಗಳ ತಿಳವಳಿಕೆಯನ್ನು ತಿದ್ದಿದ, ಶ್ರೀಮಂತಗೊಳಿಸಿದ. ಆ ಅವನು ಬಾರದಿದ್ದಲ್ಲಿ, ಬಂದು ತಮ್ಮನ್ನು ನಿಗಧಿತ ಸ್ಥಳಕ್ಕೆ ಸೇರಿಸದಿದ್ದಲ್ಲಿ ಅವನನ್ನು ಹಾಡುಹಗಲೇ ಕಗ್ಗೊಲೆ ಮಾಡಿ ಬಳ್ಳಾರಿ ಸೆಂಟ್ರಲ್ ಜೈಲು ಸೇರುವುದಾಗಿ ಶಪಥ ಮಾಡಿದ. ಅಲ್ಲೆಲ್ಲ ಬದುಕಲು ಸಂಸಾರ ಸಮೇತ ಗುಳೇ ಹೊರಟಿರುವ ತನಗೆ ಆ ಊರುಗಳೆಲ್ಲಿವೆ ಎಂಬುದಾಗಲೀ, ಅಲ್ಲಿಗೆ ಸಾಗಿಸುವ ಬಸ್ಸುಗಳ ಮಾಹಿತಿ ಸಹ ತನಗೆ ತಿಳಿಯದು. ಆದ್ದರಿಂದ ಕೋಪದ ಪರಾಕಾಷ್ಠೆ ತಲುಪಿದ್ದು ಸಹಜವಾಗಿತ್ತು. ಏನನ್ನು ಎಷ್ಟು ಪ್ರಮಾಣದಲ್ಲಿ ಹೇಳಬೇಕೋ ಅಷ್ಟು ಹೇಳಿ ಬೇವಿನಮರದ ಕಟ್ಟೆ ಕಡೆ ವಾಪಸ್ಸಾದೆ.
ರಾತ್ರಿ ಒಂದೂವರೆಯಾಗಿದ್ದರೂ ಮಂತ್ರಾಲಯದಿಂದ ಹುಬ್ಬಳ್ಳಿ ಕಡೆ ಹೊರಡಬೇಕಿದ್ದ ಬಸ್ಸಿನ ಸುಳಿವು ಇರಲಿಲ್ಲ, ಅಲ್ಲಿಗೆ ಹೋಗುವುದೋ ಗೂಳ್ಯಂಗೆ ಮರಳುವುದೋ! ದ್ವಂದ್ವ ಆರಂಭಗೊಂಡಿತು. ಹಾಗೆಯೇ ಸ್ವಲ್ಪ ಎಡಕ್ಕೆ ಹೊರಳಿ ಚೀಲದ ಮೇಲೆ ತಲೆ ಇರಿಸಿದೊಡನೆ ನಿದ್ದೆ ಆವರಿಸುತ್ತಿರುವ ಅನುಭವ ಬೇರೆ. ಗಾಢ ನಿದ್ರೆಯ ಪಂಥಾಹ್ವಾನವನ್ನು ಇನ್ನೇನು ಸ್ವೀಕರಿಸಿಬಿಟ್ಟೆನೆನ್ನುವಷ್ಟರಲ್ಲಿ ಸುಗಂಧಯುಕ್ತ ಪರಿಮಳ ನಾಸಿಕಾಗ್ರಕ್ಕೆ ತಾಕಿ ಎಚ್ಚರಿಸಿತು, ತಿರುಗಿ ನೋಡಿದೆ. ಆರಡಿ ಎತ್ತರದ ಶುಭ್ರವಸ್ತ್ರಧಾರಿ ಸಮೀಪದಲ್ಲಿ ಸುಳಿದಾಡುತ್ತಿರುವುದು ಗಮನಕ್ಕೆ ಬಂದಿತು. ಆತನೆರಡೂ ಕೈಗಳು ಖಾಲಿ ಇದ್ದವು, ಆದರೆ ಹಸ್ತದ ಕೆಲವು ಬೆರಳುಗಳಿಗೆ ಚಿನ್ನದ ಉಂಗುರಗಳಿದ್ದವಲ್ಲದೆ ಕೊರಳಲ್ಲಿ ಚಿನ್ನದ ಸರವೂ ಇತ್ತು. ಇಷ್ಟು ಸಾಕಲ್ಲವೆ ತಾನು ಶ್ರೀಮಂತನೆಂಬುದಕ್ಕೆ. ತಾನು ಕಾಲಕ್ಷೇಪಕ್ಕೆ ವಾಯುವಿಹಾರಕ್ಕೆ ಬಂದಿರಲೂಬಹುದು, ತಾನು ಸುಸಂಸ್ಕೃತ ಸಭ್ಯನಾಗರಿಕ ಎಂಬುದಕ್ಕೆ ತಾನು ಪೂಸಿಕೊಂಡಿರುವ ಪರಿಮಳವೇ ಸಾಕ್ಷಿ, ಆ ಅಪರಿಚಿತನ ಆಕರ್ಷಕ ನಿಲುವು ನನ್ನ ನಿದ್ದೆಯನ್ನು ಅಪಹರಿಸಿತು. ಸುಮಾರು ಅರವತ್ತೈದು ಎಪ್ಪತ್ತರ ಪ್ರಾಯದ ಆ ಹಿರಿಯ ನಾಗರಿಕನ ನಡೆದಾಟಕ್ಕೆ ಗೊತ್ತುಗುರಿ ಇರಲಿಲ್ಲ. ಪಂಪ ಮಹಾಕವಿಯ ಪಿಡಿದಡಬಡಿಸಿ ಎಂಬ ಕಂದಪದ್ಯವನ್ನು ಬಾಯಿಪಾಠ ಮಾಡುತ್ತಲೇ ಆತನ ಚಲನವಲನದ ಕಡೆ ನಿಗಾ ಇರಿಸಿದೆ. ಆತ ರಾಯಲಸೀಮೆಯ ಜನರ ನಡುವೆ ಕಾಣೆಯಾದೊಡನೆ ಪಂಪನ ಸ್ಥಾನವನ್ನು ಬ್ರೂಸ್ಲೀ ಆಕ್ರಮಿಸತೊಡಗಿದ, ಅವನೊಳಗೆ ಇವನೋ ಇವನೊಳಗೆ ಅವನೋ! ಅಥವಾ ಅವರಿಬ್ಬರೂ ನನ್ನೊಳಗೋ!
ನಾಳೆ ಧಾರವಾಡದಲ್ಲಿ ಒಂದು ಕೆಲಸವಿದ್ದರೆ ಹುಬ್ಬಳ್ಳಿಯಲ್ಲೂ ಇನ್ನೊಂದು ಕೆಲಸ, ಅವುಗಳಲ್ಲಿ ಒಂದು ಸಾಹಿತ್ಯಕ್ಕೆ ಸಂಬಂಧಿಸಿದ್ದಾರೆ ಇನ್ನೊಂದು ಕೋಟರ್ಿಗೆ ಸಂಬಂಧಿಸಿದ್ದು. ಅವೆರಡೂ ಮುಖ್ಯ. ದರಿದ್ರ ಬಸ್ಸು ಬಂದಿದ್ದರೆ ಈ ಹೊತ್ತಿಗೆ ಹೊಸಪೇಟೆ ದಾಟಿರುತ್ತಿದ್ದೆನೇನೊ! ಅದು ಬರುವುದೋ ಇಲ್ಲವೋ! ಯಕ್ಷಪ್ರಶ್ನೆ. ನನಗರಿವಿಲ್ಲದಂತೆ ತೂಕಡಿಸಲಾರಂಭಿಸಿದೆ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಲಂಜಾಕೊಡ್ಕಾ ಎಂದು ಮಹಿಳೆಯೋರ್ವಳು ಅಬ್ಬರಿಸುವುದು ಕಿವಿಗೆ ಬಿದ್ದೊಡನೆ ದಿಗ್ಗನೆ ಎಚ್ಚರಗೊಂಡೆ. ಕತ್ತೊರಳಿಸಿ ನೋಡುತ್ತೇನೆ ಪ್ರಹರಿಗೋಡೆಯ ಪಕ್ಕ ಆಕೆ ಓರ್ವ ವ್ಯಕ್ತಿಯ ಕೊರಳಪಟ್ಟಿ ಹಿಡಿದು ಎಳೆದಾಡುತ್ತಿರುವುದು ಮಸುಕುಮಸುಕಾಗಿ ಗೋಚರಿಸಿತು, ಎವಡ್ರಾ, ಏಮಿ, ತನ್ನು, ನರಕು, ನೀಎಮ್ಮ ಎಂದು ಕೂಗುತ್ತ ಘಟನೆಯೆಡೆ ಓಡುತ್ತಿರುವ ಹತ್ತಾರು ಮಂದಿ. ಬಲಿಪಶು ಯಾರೆಂಬುದು ಕೂಡಲೆ ತಿಳಿಯಲಿಲ್ಲ, ಆದರೂ ಅತ್ತ ದಾಪುಗಾಲು ಹಾಕಿದೆ. ಹೋಗಿ ನೋಡುತ್ತೇನೆ ಆಕೆ ಬಲಿಗೊಳ್ಳಲು ಪ್ರಯತ್ನಿಸುತ್ತಿರುವುದು ಪರಿಮಳಯುಕ್ತ ಆ ಹಿರಿಯ ನಾಗರಿಕನನ್ನು! ತಲುಪಿದ ಅರೆಕ್ಷಣದಲ್ಲಿ ತಿಳಿದ್ದೆಂದರೆ..
ಗುಳೆ ಹೊರಟಿದ್ದ ರಾಯಲಸೀಮೆಯ ಗುಂಪಿನ ಸದಸ್ಯೆಯಾದ ಆಕೆ ಅರವತ್ತರ ವೃದ್ದೆ, ಮೂತ್ರವಿಸರ್ಜನೆಗೆಂದು ಹಿಂಡನಗಲಿದ ಆಕೆಯನ್ನು ಠಾಕುಠೀಕು ವ್ಯಕ್ತಿ ಗುಟ್ಟಾಗಿ ಹಿಂಬಾಲಿಸಿದನಂತೆ! ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಗಮನಿಸುತ್ತ ಸಮೀಪಿಸಿದನಂತೆ! ಆಕೆಯ ಮುಂಗೈ ಹಿಡಿದು ಐವತ್ತು ರೂಪಾಯಿ ಕೊಡ್ತೀನಿ ಬರ್ತೀಯಾ ಎಂದು ಕೇಳಿದನಂತೆ! ಬೆಚ್ಚಿದ್ದರ ನಡುವೆ ಕೆರಳಿದ ಆಕೆ ನನ್ನೇನು ಸೂಳೆ ಎಂದ್ಕೊಂಡೀಯೇನಲೋ ಬಾಡ್ಯಾ ಎಂದು ಮುಂತಾಗಿ.
ಬಾರದಿರುವ ಬಸ್ಸಿನ ಮೇಲಣ ಕೋಪ, ತಮ್ಮನ್ನು ಅತಂತ್ರರನ್ನಾಗಿಸಿರುವ ಮಾನವಕಳ್ಳಸಾಗಾಣಿಕೆದಾರನ ಮೇಲಣ ಕೋಪ, ತಾವು ತಲುಪಬೇಕಿರುವ ಗುರಿಗಳ ಮೇಲಣ ಕೋಪ! ಈ ಎಲ್ಲಾ ಅಷ್ಟಾದಶ ಕೋಪಗಳಿಗೆ, ದ್ವಾದಶ ಹಲ್ಲೆಗಳಿಗೆ ಆರಡಿ ಎತ್ತರಕ್ಕಿದ್ದ ಆ ವೃದ್ದ ಹ್ರಸ್ವಗೊಂಡು ಆರಿಂಚಿಗಿಳಿದ, ಕೈಮುಗಿದು ಅಂಗಲಾಚಿದ, ತನ್ನ ಕೊರಳಲ್ಲಿದ್ದ ಚೈನನ್ನೂ, ಬೆರಳಲ್ಲಿದ್ದ ಉಂಗುರವನ್ನೂ ಅಂಗೈಯಲ್ಲಿ ಹಿಡಿದು ಕ್ಷಮಿಸುವಂತೆ ಪ್ರಾರ್ಥಿಸಿದ. ಆಶ್ಚರ್ಯ ಸಂಗತಿಯೆಂದರೆ ಒಂದು ಹೊತ್ತಿನ ಕೂಳಿಗೆ ಪರದಾಡುತ್ತಿದ್ದ ರಾಯಲಸೀಮೆಯ ಜನ ಆ ಅಮೂಲ್ಯ ವಸ್ತುಗಳನ್ನು ಮುಟ್ಟಲಿಲ್ಲ. ನನ್ನನ್ನು ದಿಗ್ಬ್ರಮೆಗೀಡು ಮಾಡಿದ ಇನ್ನೊಂದು ಸಂಗತಿಯೊಂದು ಘಟಿಸಿತು. ಕೊಂದೇಬಿಡುವುದಾಗಿ ಹಿರಿಯನೊಬ್ಬ ಬಡಿಗೆಯನ್ನು ಮೇಲೆತ್ತಿದೊಡನೆ ಆ ಮುದುಕಿ ಆತನ ಮೇಲೆ ಬಿದ್ದು ರಕ್ಷಾಕವಚವನ್ನು ನಿರ್ಮಿಸಿತು. ತಿಳೀದೆ ಹೇಲ್ತಿನ್ನೋ ಕೆಲ್ಸ ಮಾಡ್ಯಾನಂದ ಮಾತ್ರಕ್ಕೆ ಕೊಂದುಬಿಡುವಿ ಏನು? ಕೊಲ್ಲೋದಿದ್ರ ಮೊದ್ಲು ನನ್ನ ಕೊಂದು ಸೇಡು ತೀರಿಸ್ಕೋ ಎಂದು ಹೇಳಿತು. ಬಳಿಕ ಅವರೆಲ್ಲ ಅಲ್ಲಿಂದ ಚದುರಿ ಹೋದರು.
ಆ ವೃದ್ದ ನನ್ನ ಕೈ ಹಿಡಿದು ಮೇಲಕ್ಕೆದ್ದ, ಮೆಲ್ಲಗೆ ಬೇವಿನಮರದ ಕಡೆ ಕರೆದೊಯ್ದೆ, ಹೆಸರು ಕೇಳಿದೆ, ಅಮೃತಲಾಲ್ ಎಂದು ಹೇಳಿದ, ನಗರದ ಪ್ರಸಿದ್ದ ಜವಳಿ ಅಂಗಡಿಯ ಮಾಲಕ, ರಾಜಸ್ಥಾನ ಮೂಲದವ. ಮನೆ ತುಂಬ ಮಕ್ಕಳು ಮೊಮ್ಮಕ್ಕಳು, ತನಗೂ ಹೆಂಡತಿ ಇರುವಳೆಂದು ಹೇಳುತ್ತ ನಿಟ್ಟುಸಿರುಬಿಟ್ಟಾಗ ಹುಬ್ಬಳ್ಳಿಯ ಬಸ್ಸು ಅದೇ ತಾನೆ ಬಂದು ನಿಂತಿತು. ನಾನು ಹೊರಡಲಿಲ್ಲ, ಕಾರಣ ವೃದ್ದ ನನ್ನ ಕೈ ಹಿಡಿದಿದ್ದ.
ಕುಂ ವೀ ಕಾಲಂ : 'ಎಂಟರ್ ದಿ ಡ್ರಾಗನ್'!
ನಿಮಗೆ ಇವೂ ಇಷ್ಟವಾಗಬಹುದು…


ನಿಜವಾದ ಸೃಜನಶೀಲತೆ ಅಂದರೆ ಕೊನೆ-ಮೊದಲಿಲ್ಲದ ದೈವ ಸೃಷ್ಟಿಯೇ…ಎಷ್ಟೊಂದು ಪಾತ್ರಗಳು…ಅಬ್ಬ!!!
ಇನ್ನೂ ಆ ವೃದ್ದನ ಕೈ ಹಿಡಿದು ನಮ್ಮನ್ನು ಗೊಂದಲಕ್ಕೀಡುಮಾಡುತ್ತೀರಿ……ನಿಮ್ಮ ಗ್ರಹಿಕೆಯ ಶಕ್ತಿ ಅಸೂಯೆ ಮೂಡಿಸುತ್ತದೆ.
ಕುಂವೀ…
ನಿಮ್ಮ ಒಡಲಾಳದಿಂದ ಹರಿದು ಬರುವ ಆ ನಿಮ್ಮ ಕಥೆಯ ಶೈಲಿ .ಅದರ ಭೋರ್ಗರೆಯುವ ರಸಾನುಭವ ,ಕಥೆ ಕಟ್ಟಿಕೊಡುವ ಒಂದು ಮೌನ ಚಿತ್ರಣ , ನನಗೆ ತುಂಬಾ ಇಸ್ತವಾಯ್ತು… ಯುಗಾದಿ ಶುಭಾಶಯಗಳು
ರವಿ ವರ್ಮ .ಡಿ
” ತನ್ನ ಕೊರಳಲ್ಲಿದ್ದ ಚೈನನ್ನೂ, ಬೆರಳಲ್ಲಿದ್ದ ಉಂಗುರವನ್ನೂ ಅಂಗೈಯಲ್ಲಿ ಹಿಡಿದು ಕ್ಷಮಿಸುವಂತೆ ಪ್ರಾರ್ಥಿಸಿದ. ಆಶ್ಚರ್ಯ ಸಂಗತಿಯೆಂದರೆ ಒಂದು ಹೊತ್ತಿನ ಕೂಳಿಗೆ ಪರದಾಡುತ್ತಿದ್ದ ರಾಯಲಸೀಮೆಯ ಜನ ಆ ಅಮೂಲ್ಯ ವಸ್ತುಗಳನ್ನು ಮುಟ್ಟಲಿಲ್ಲ…” ಕಥೆಯಲ್ಲಿನ ಸಾಲುಗಳು ಬಡ ಜನರ ಸ್ವಾಭಿಮಾನದ ಸಾಲುಗಳಾಗಿ ನಿಂತಿವೆ.
kumvee sir tuumba chennagide … paathra chitrana andre heegirabeku …
ಇಡೀ ಚಿತ್ರಣವನ್ನ ಅಚ್ಚುಕಟ್ಟಾಗಿ ಕಣ್ಮುಂದೆ ಕಟ್ಟಿಕೊಟ್ಟಿರಿ (ವಾಸನೆ ಸಹಿತ!)…
ನಿಮ್ಮ ಬರವಣಿಗೆಯ ಶೈಲಿಗೆ ಶರಣು ಸಾರ್ ಶರಣು…!
🙂
Nice sir, vrudhana mundina kathe
ನಾಡಬಾಂಬನ್ನು ಕ್ಷಣಮಾತ್ರದಲ್ಲಿ ಮಾಡುವವರು….. ಅವರೆದೆಯಲ್ಲಿಯೂ ಹರಿಯುತ್ತಿದೆ ಅಮೃತವಾಹಿನಿ.
ಅದ್ಭುತವಾದ ಅನುಭವಾಮೃತಕ್ಕೆ-
ಧನ್ಯವಾದಗಳು ಕುಂವೀ ಸರ್.
tumba chennagide boss
sooper narration…was very interesting guruve
priya kum.vee
Icege nimma yaavude kathe Odidaroo gandhiclass nenapige barutte…yAke ?