ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಕಾಲಂ : 'ಅವನು ಮತ್ತು ಅವಳು'

ನಿಗದಿತ ವೇಳೆಗೆ ಸರಿಯಾಗಿ ಡ್ರೈವರ್ ಹಾರ್ನ್ ಮಾಡಿ ಎಚ್ಚರಿಸುವುದಕ್ಕೂ ತಾನು ಟೈಕಟ್ಟಿಕೊಳ್ಳುವುದಕ್ಕೂ ಸರಿ ಹೋಯಿತು. ರಿಸ್ಟ್ ವಾಚ್ ನೋಡಿಕೊಂಡ, ಆಗಲೇ ಸಂಜೆ, ಐದೂವರೆ ಬೇರೆ. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಹೆಂಡತಿ ತನ್ನನ್ನು ವಿನಾಕಾರಣ ತಡೆದಳು, ಆಕೆಯ ಹಾಗೂ ಮಕ್ಕಳ ಬೇಡಿಕೆಗಳನ್ನು ಪೂರೈಸಿದ. ಮರೆತಿದ್ದ ಕೆಲಸಗಳನ್ನು ಲಗುಬಗೆಯಿಂದ ಮಾಡಿ ಮುಗಿಸಿದ, ಆದರೂ ಕೆಲವು ಬಾಕಿ ಉಳಿದವು. ಮರಳಿದ ಬಳಿಕ ಅವುಗಳ ಕಡೆಗೆ ಗಮನ ಹರಿಸಿದರಾಯಿತು, ಅವಸರದಿಂದ ಪಾಯಿಂಟ್ ಶೂಗಳನ್ನು ಧರಿಸಿದ, ಆದರೆ ಕ್ರಾಪು ಸರಿಪಡಿಸಿಕೊಳ್ಳಲೆಂದು ಜೇಬಿನಿಂದ ಬಾಚಣಿಕೆ ತೆಗೆದನಾದರೂ ಅದಕ್ಕೆ ಪುರುಸೊತ್ತು ಸಿಕ್ಕಲಿಲ್ಲ.
ಮೀಟಿಂಗಿಗೆ ಸಂಬಂಧಿಸಿದ ಕಡತಗಳಿದ್ದ ಬ್ರಿಫ್ಕೇಸನ್ನು ಕೈಗೆತ್ತಿಕೊಂಡು ಬಾಗಿಲು ದಾಟಿದ. ಬೀಳ್ಕೊಡಲೆಂದು ಗೋಚರಿಸಿದ ಪತ್ನಿ ಮತ್ತು ಮಕ್ಕಳ ಕಡೆಗೆ ಬಲಗೈಯನ್ನೆತ್ತಿ ಅಲುಗಾಡಿಸುತ್ತಲೇ ತನ್ನ ನಿರೀಕ್ಷೆಯಲ್ಲಿದ್ದ ಕಾರನ್ನು ಪ್ರವೇಶಿಸಿದ. ಎರಡೂವರೆ ಕಿಲೋಮೀಟರ್ ದೂರವನ್ನು ಕೇವಲ ಐದೇ ನಿಮಿಷಗಳಲ್ಲಿ ಕ್ರಮಿಸಿ ತಲುಪುತ್ತಿದ್ದಂತೆಯೇ ಎಕ್ಸ್ಪ್ರೆಸ್ ಗಾಡಿ ಕರ್ಕಶ ಸದ್ದು ಮಾಡುತ್ತ ನಿಲ್ದಾಣವನ್ನು ತಲುಪಿತು. ಸರತಿಸಾಲು ಉದ್ದಕ್ಕಿದ್ದುದರಿಂದ ಟಿಕೆಟ್ ಖರೀದಿಸುವುದು ವಿಳಂಬವಾಯಿತು.
ತಾನು ಪ್ಲಾಟ್ಫಾರಂ ಪ್ರವೇಶಿಸುತ್ತಿದ್ದಂತೆ ಗಾಡಿ ಚಲನೆಯನ್ನಾರಂಭಿಸಿತು. ಸಹಪ್ರಯಾಣಿಕರ ಪೈಕಿ ಕೆಲವರು ನಿರಾಸೆಯಿಂದ ಮರಳಿದರು, ಆದರೆ ವಿದ್ಯಾರ್ಥಿ ದೆಸೆಯಲ್ಲಿ ತಾನು ಕಾಲೇಜಿನ ಅತ್ಯುತ್ತಮ ಕ್ರೀಡಾಪಟುವಾಗಿದ್ದರಿಂದ ಯಾವುದೋ ಒಂದು ಬೋಗಿಯನ್ನು ಪ್ರವೇಶಿಸುವುದು ಸಾಧ್ಯವಾಯಿತು. ಬಾಗಿಲ ಬಳಿ ನಿಂತು ಮುಖದ ಬೆವರನ್ನೊರೆಸಿಕೊಳ್ಳಲು ಜೇಬಿನಿಂದ ಕರವಸ್ತ್ರ ತೆಗೆದು ಕೈಯಲ್ಲಿ ಹಿಡಿದುಕೊಂಡ. ರೈಲು ವೇಗವಾಗಿ ಸ್ಟೇಷನ್ ದಾಟಿತು.
ಅಷ್ಟರಲ್ಲಿ ಅದುವರೆಗೆ ಉರಿಯುತ್ತಿದ್ದ ದೀಪಗಳೆಲ್ಲ ಆಫಾದವು, ಕತ್ತಲೆ ಆವರಿಸಿತು. ಬೋಗಿಯಲ್ಲಿ ವಿಚಿತ್ರ ಮೌನ ಬೇರೆ. ಸಹಪ್ರಯಾಣಿಕರು ಇರುವರೋ ಇಲ್ಲವೋ! ಹಾಗೆಯೇ ಎಚ್ಚರಿಕೆಯಿಂದ ಒಂದೊಂದೆ ಹೆಜ್ಜೆ ಇಡಲಾರಂಭಿಸಿದ, ಕಿಟಿಕಿ ಮೂಲಕ ನುಸುಳುತ್ತಿದ್ದ ಬೆಳಕು ಬೆಳಕಾಗಿರಲಿಲ್ಲ. ಆದರೂ ಅದು ಸಹರಿಸಿತು. ಒಂದೆರಡು ನಿಮಿಷಗಳ ಬಳಿಕ ಬೋಗಿಯಲ್ಲಿ ಯಾರೊಬ್ಬರಿಲ್ಲದಿರುವುದನ್ನು ಖಚಿತಪಡಿಸಿಕೊಂಡ. ಇಡೀ ಬೋಗಿಯಲ್ಲಿ ತಾನೊಬ್ಬನೆ! ಒಂದುಕ್ಷಣ ಭಯಪಟ್ಟ, ಪುನಃ ಚೇತರಿಸಿಕೊಂಡ. ತಡವರಿಸುತ್ತ ಹೆಜ್ಜೆ ಹಾಕುತ್ತ ತಾನು ತಲುಪಿದ ಜಾಗ ಕಿಟಿಕಿ ಪಕ್ಕದಲ್ಲಿತ್ತು, ಬ್ರಿಫ್ಕೇಸನ್ನು ಮೇಲಿಟ್ಟು ಕುಳಿತು ದೀರ್ಘವಾಗಿ ಉಸಿರೆಳೆದುಕೊಂಡ.
ಹೊತ್ತಿಗೆ ಸರಿಯಾಗಿ ತಿಂದುಬಿಡಿ ಎಂದು ಹೇಳಿದ ತನ್ನ ಸುಂದರಪತ್ನಿಯನ್ನು ನೆನಪಿಸಿಕೊಂಡ, ಹಾಗೆ ತನ್ನ ಜಾಣಮಕ್ಕಳನ್ನೂ. ತನ್ನ ಆಫೀಸು. ನಾಳೆ ಬೆಳೆಗ್ಗೆ ಒಬೆರಾಯ್ ಹೋಟೆಲ್ಲಿನಲ್ಲಿ ನಡೆಯಲಿರುವ ಮೀಟಿಂಗನ್ನೂ, ಕೊರಿಯಾ ಜಪಾನ್ಗಳಿಂದ ಆಗಮಿಸಲಿರುವ ಗಣ್ಯಾತಿಗಣ್ಯರನ್ನೂ ನೆನಪಿಸಿಕೊಳ್ಳುತ್ತ ಹೋದ, ಹಾಗೆ ಅಲ್ಲಿ ತನ್ನ ನಿಣರ್ಾಯಕಪಾತ್ರ ಮತ್ತು ಸಂಭಾಷಣಾ ಕೌಶಲ್ಯವನ್ನೂ. ಒಂಟಿತನದ ಬೇಗುದಿ ವಿಲಕ್ಷಣ ಭಯವನ್ನು ನಿವಾರಿಸಿಕೊಳ್ಳಲೆಂದು ಅದನ್ನೆಲ್ಲ ಮಾನಸಿಕವಾಗಿ ಅಭಿನಯಿಸಲಾರಂಭಿಸಿದ. ಅಷ್ಟರಲ್ಲಿ ತೀರ ಸನಿಹದಲ್ಲಿ ದುಬಾರಿ ಪ್ರಸಾದನದ ಪರಿಮಳ ಹರಿಯತೊಡಗಿ ತನ್ನ ಘ್ರಾಣೇಂದ್ರಿಯನ್ನು ಪುಳಕಿತಗೊಳಿಸಿತು, ಭಯವಾಯಿತು. ಕತ್ತೊರಳಿಸಲೆತ್ನಿಸಿದನಾದರೂ ಸಾಧ್ಯವಾಗಲಿಲ್ಲ.
ಹತ್ತಿರದಲ್ಲೆಲ್ಲೋ ಪ್ರಸಾದನೋತ್ಪಾದನಾ ಘಟಕ ಹಾದುಹೋಗಿರಬೇಕೆಂದು ಭಾವಿಸಿದ, ಆದರೆ ಅದು ದಟ್ಟವಾಗುತ್ತ ಹೋಯಿತು. ಸ್ವಲ್ಪ ಹೊತ್ತಾದನಂತರ ಕೈಬಳೆಗಳ ಸದ್ದೂ ಕೇಳಿಸಿತು, ನಖಶಿಖಾಂತ ಬೆವರಲಾರಂಭಿಸಿದ. ತನಗೆ ದೇವರು ದೆವ್ವಗಳಲ್ಲಿ ನಂಬಿಕೆ ಇಲ್ಲ, ಅದರೂ! ಒಂದೆರಡು ನಿಮಿಷಗಳ ಬಳಿಕ ಪರಿಮಳಯುಕ್ತ ವ್ಯಕ್ತಿ ತನಗೆ ಹತ್ತಿರ ಸರಿಯುತ್ತಿರುವಂತೆ ಭಾಸವಾಯಿತು, ಅದರಿಂದ ದೂರ ಸರಿಯಲು ಪ್ರಯತ್ನಿಸಿದ, ಸರಿದ. ಇನ್ನು ಅದು ಸಾಧ್ಯವಿಲ್ಲ, ಕಾರಣ ತಾನಿರುವುದು ಕಿಟಿಕಿಗೆ ಅಂಟಿಕೊಂಡಂತೆ. ಅಪರಿಚಿತ ವ್ಯಕ್ತಿ ಸ್ತ್ರೀ ಎನ್ನುವುದರಲ್ಲಿ ಸಂದೇಹವಿಲ್ಲ, ಆದರೆ ಆಕೆ ಯಾರು! ದೆವ್ವವೋ ಸಜೀವ ವ್ಯಕ್ತಿಯೋ! ತಿರುಗಿ ನೋಡಲಿಕ್ಕಾಗಲಿಲ್ಲ, ಯಾರೆಂದು ಪ್ರಶ್ನಿಸಲಿಕ್ಕಾಗಲಿಲ್ಲ.
ಗಾಡಿ ತನ್ನಷ್ಟಕ್ಕೆ ತಾನು ವೇಗವಾಗಿ ಓಡುತ್ತಲೇ ಇರುವುದು. ಆ ಅಪರಿಚಿತ ಹಾಗೂ ನಿಗೂಢ ವ್ಯಕ್ತಿಯ ದೀರ್ಘ ಉಸಿರಾಟ ಸ್ಪಷ್ಟವಾಗಿ ಕೇಳಿಸಲಾರಂಭಿಸಿತು, ಮೆಲ್ಲಗೆ ಕತ್ತೊರಳಿಸಿದ, ಅಂಜುತ್ತ ಅಳುಕುತ್ತ ನೋಡಿದ. ಕಿಟಿಕಿಯ ಮಬ್ಬು ಬೆಳಕಿನಲ್ಲಿ ಅದು ಸ್ಪಷ್ಟವಾಗಿ ಗೋಚರಿಸಲಿಲ್ಲ, ಅದರೂ ಆಕೆ ಸುಂದರಿ ಎನ್ನುವುದರಲ್ಲಿ ಸಂದೇಹವಿಲ್ಲ, ಆಕೆ ತನ್ನ ಎಡಗೈಯನ್ನು ತನ್ನ ತೊಡೆ ಮೇಲಿರಿಸಿದಳಲ್ಲದೆ ಅಪ್ಯಾಯತೆಯಿಂದ ಸ್ಪರ್ಶಿಸಿದಳು, ಅದನ್ನು ತಳ್ಳಲೆತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಅಲ್ಲಿಯೇ ಕೈಗೆ ಕೈ ಅಂಟಿಕೊಂಡಿತು, ಒಂದು ಇನ್ನೊಂದನ್ನು ನೇವರಿಸಲಾರಂಭಿಸಿತು. ವರ್ತಮಾನ ರತಿಕಿರೀಟ ಧರಿಸಿತು, ಭೋಗಿಯ ಮೌನ ಅವರೀರ್ವರ ಸಮ್ಮಿಲನಕ್ಕೆ ಸಹಕರಿಸಿತು. ಹಂತಹಂತವಾಗಿ ಆರಂಭಗೊಂಡ ಕ್ರೀಡೆ ಪರಾಕಾಷ್ಠೆ ತಲುಪಿತು, ಅವರಿಬ್ಬರೂ ಹ್ಹಾಂ ಎಂದು ಸುಖದ ಪಲ್ಲವಿ ನುಡಿಸಿದರು, ಕಣ್ಣುಗಳನ್ನು ಅರೆಗಳಿಗೆ ಮುಚ್ಚಿದರೋ ಇಲ್ಲವೋ!

ಅಷ್ಟರಲ್ಲಿ ಇದ್ದಕ್ಕಿದ್ದಂತೆ ಬೋಗಿಯಲ್ಲಿದ್ದ ಸಮಸ್ತ ದೀಪಗಳು ಬೆಳಗಲಾರಂಭಿಸಿದವು. ರೆಪ್ಪೆಗಳು ಮುಚ್ಚಿಕೊಂಡೇ ಬೆಳಕನ್ನು ಆಸ್ವಾದಿಸಿದ, ರತಿಸುಖವನ್ನು ಕರುಣಿಸಿದ ಉಣಬಡಿಸಿದ ಆ ಅಪರಿಚಿತ ಸುಂದರಿಯನ್ನು ಮೊಟ್ಟಮೊದಲ ಸಲ ನೋಡವ ಬಯಕೆ ಮೂಡಿತು ತನ್ನಲ್ಲಿ. ನಿಧನಿಧಾನವಾಗಿ ಕಣ್ಣುಗಳನ್ನು ತೆರೆದು ಆಕೆಯತ್ತ ದೃಷ್ಟಿ ಹರಿಸಿ ನೋಡುತ್ತಾನೆ, ಕುಷ್ಠರೋಗಪೀಡಿತ ಕುರೂಪ ಮುಖ. ಹ್ಹಾಂ ಎಂದು ಚೀರಿದ, ಒಂದು ಕ್ಷಣ ಮೂರ್ಚೆ ಹೋದ, ಭಯದ ಬೆವರಿನಿಂದ ಅಡಿಯಿಂದ ಮುಡಿವರೆಗೆ ಒದ್ದೆಯಾದ. ಚೇತರಿಸಿಕೊಳ್ಳುವಷ್ಟರಲ್ಲಿ ಯಾವುದೋ ಒಂದು ನಿಲ್ದಾಣ. ಗಾಡಿ ತನ್ನ ಚಲನೆಯನ್ನು ಹ್ರಸ್ವಗೊಳಿಸುತ್ತಿದ್ದಂತೆಯೇ ಆ ಕುಷ್ಠರೋಗಿ ತನ್ನ ವ್ಯಾನಿಟ್ ಬ್ಯಾಗನ್ನು ಮುಂಗೈಯಲ್ಲಿ ಧರಿಸಿ ನಿಧಾನವಾಗಿ ನಡೆದು ಮಾಯವಾದಳು.
ಅವನು ವಾರಕ್ಕೆ ಬದಲು ಕೇವಲ ಮೂರನೆ ದಿವಸವೇ ಮನೆಗೆ ಮರಳಿದ, ಆಫೀಸಿಗೆ ದೀರ್ಘಾವಧಿ ರಜೆ ಸಲ್ಲಿಸಿ ಮನೆಯಲ್ಲುಳಿದ, ತನ್ನನ್ನು ಮುಟ್ಟಿದವರಿಗೆಲ್ಲಿ ಕುಷ್ಠ ವ್ಯಾಧಿ ಸಾಂಕ್ರಾಮಿಸುವುದೋ ಎಂದು ಹೆದರಿದ, ಹೆಂಡತಿ ಮಕ್ಕಳನ್ನು ಹತ್ತಿರ ಬಿಟ್ಟುಕೊಳ್ಳದೆ ಕೋಣೆಯನ್ನು ಸೇರಿಕೊಂಡ, ಒಂಟಿಯಾಗಿ ಕಾಲಕಳೆಯತೊಡಗಿದ, ತನ್ನ ಮೈಮೇಲಿನ ಅಭಿಜಾತ ಮಚ್ಚೆಗಳನ್ನು ಕುಷ್ಠರೋಗದ ಕುರುಹುಗಳೆಂದು ಭ್ರಮಿಸಲಾರಂಭಿಸಿದ, ಕನ್ನಡಿಗಳನ್ನು ಒಡೆದು ದ್ವಂಸಗೊಳಿಸಿದ, ಹೀಗೆ ಹಲವು ದಿವಸಗಳ ಕಾಲ ಮಾನಸಿಕವಾಗಿ ನರಳಿ ಕೊನೆಗೊಂದು ದಿವಸ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ.
ಆ ಘಟನೆ ಸಂಭವಿಸಿದ ದಿವಸ ರೈಲಿನಿಂದ ಇಳಿದ ಕುಷ್ಠರೋಗಿಷ್ಟೆ ಸ್ಟೇಷನ್ನಿನ್ನಿಂದ ಹೊರನಡೆದಳು, ಅಲ್ಲಿ ತನ್ನ ನಿರೀಕ್ಷೆಯಲ್ಲಿದ್ದ ಬೆಂಜ್ಕಾರನ್ನು ಹತ್ತಿದಳು, ಆ ಕಾರು ಸುಮಾರು ಹೊತ್ತಿನ ಬಳಿಕ ಸಮೀಪಿಸಿದ್ದು ಅರಮನೆ ಸದೃಶ ಬಂಗಲೆಯನ್ನು. ಅದರಿಂದ ಇಳಿದವಳೆ ನೇರವಾಗಿ ತನ್ನ ಖಾಸಗಿ ಕೋಣೆಯನ್ನು ಪ್ರವೇಶಿಸಿದಳು, ನಿಲುಗನ್ನಡಿಯ ಸಮಕ್ಷಮ ನಿಂತು ತನ್ನನ್ನು ತಾನು ನೋಡಿಕೊಂಡು ನಸುನಕ್ಕಳು, ತನ್ನೆರಡೂ ಕೈಗಳನ್ನು ನಿಧಾನವಾಗಿ ಎತ್ತಿ ಮುಖದ ಬಳಿಗೆ ಕೊಂಡೊಯ್ದಳು, ತನ್ನ ಮುಖವನ್ನಲಂಕರಿಸಿದ್ದ ಕುಷ್ಠರೋಗದ ಮುಖವಾಡವನ್ನು ಕಳಚಿದಳು. ತನ್ನ ಪ್ರತಿಬಿಂಬವನ್ನು ತಾನು ಮೋಹಿಸುತ್ತ ಓಹ್! ತಾನು ವಿಶ್ವಸುಂದರಿ ಎಂದು ಉದ್ಗರಿಸಿದಳು. ಖಂಡಿತ ಆಕೆ ಅಪರೂಪದ ಸೌಂದರ್ಯವತಿಯೇ ಆಗಿದ್ದಳು.
(ವಾಚಕರಲ್ಲಿ ಮನವಿ- ಹಲವು ದಶಕಗಳ ಹಿಂದೆ ಓದಿದ್ದ ಇಂಗ್ಲೀಷ್ ಕಥೆಯ ಭಾವಾನುವಾದ. ಕಥೆಯ ಲೇಖಕನಾಗಲೀ, ಕಥೆಯ ಶಿಷರ್ಿಕೆಯಾಗಲೀ ನೆನಪಿಲ್ಲ, ನಿಮ್ಮಲ್ಲಿ ಯಾರಿಗಾದರೂ ನೆನಪಾದರೆ ದಯವಿಟ್ಟು ತಿಳಿಸಿ)

‍ಲೇಖಕರು avadhi

2 May, 2013

8 Comments

  1. keshavreddy handrala

    KUM VEE ANNA EE KATHE TELUGU MOOLADA HALEYA KATHE. AANEKA VARSHAGALA HINDE MAYURADALLI EEKATHEYANNU YAARO TRANSLATE MADIDDARU.1985RALLI ODIDA NENAPU

  2. kum.veerabhadrappa

    ಕೇಶವರೆಡ್ಡಿಯವರೆ, ನನಗೆ ನೆನಪಿರುವಂತೆ ಇದರ ಮೂಲಕಥೆಗಾರ ಸಾಮರ್ ಸೆಟ್ ಮಾಮ್,

  3. mahantesh navalkal

    sir
    kumvi kathegaligintha different story
    mahantesh navalkal

  4. N.VENKATESH

    neemmadeyada kathegalu beku boss

  5. hgopalakrishna

    kathe ello odiruva nenapu..Adaroo kum.vi.touch !

  6. G

    ಪ್ರಿಯ ಕುಂವೀ:
    ನಿಮ್ಮ ಅಂಕಣವನ್ನು ಓದುವ ನೂರಾರು ಅಭಿಮಾನಗಳಲ್ಲಿ ನಾನೂ ಒಬ್ಬ. ನಿಮ್ಮ ಕಥೆಯನಂತರ ನೀವು ಎತ್ತಿರುವ ಪ್ರಶ್ನೆಯ ಬಗ್ಗೆ ನನ್ನ ನೆನಪಿನಿಂದ ಈ ಪ್ರತಿಕ್ರಿಯೆ.
    ಪ್ರಾಯಃ ನಿಮ್ಮ ಕಥೆಯ ಒಂದು ವಿನ್ಯಾಸ (ತೊನ್ನು ಬಂದಿರುವ ಯುವತಿಯನ್ನು ಅದು ಗೊತ್ತಿಲ್ಲದೆ ಭೋಗಿಸುವ ತರುಣನ ಕಥೆ) ಆರ್ಜೆಂಟೀನಾದ ಪ್ರಸಿದ್ಧ ಕಥೆಗಾರ ಜಾರ್ಜ್ ಬೋರ್ಹೆಸ್ (Jorge Borges) ನ ಕಥಾ ಸಂಕಲನ (’Labyrinths’) ದಲ್ಲಿದೆ. ಕಥೆಯ ಹೆಸರು ಮರೆತಿದೆ; ಆದರೆ ಇದನ್ನು ಸುಮಾರು ಮೂರು ದಶಕಗಳ ಹಿಂದೆ ಓದಿದ ನೆನಪು -ಆ ಕಥೆಯ ವೇಧಕ ವ್ಯಂಗ್ಯ -ಹಸಿರಾಗಿದೆ. ಆ ಕಥೆಯಲ್ಲಿ, ತನ್ನ ಅಂಗಸೌಷ್ಟವದ ಬಗ್ಗೆ ಹಾಗೂ ತನ್ನ ’ಪುರುಷತ್ವ’ದ ಬಗ್ಗೆ ಅಸಾಧಾರಣ ಗರ್ವವಿರುವ ಶ್ರೀಮಂತ ತರುಣನೊಬ್ಬ ಒಮ್ಮೆ ಕಾರಿನಲ್ಲಿ ಹೋಗುತ್ತಿದ್ದಾಗ ಆ ಕಾರು ಕೆಟ್ಟು ಮರಳುಗಾಡಿನ ಮಧ್ಯ ನಿಲ್ಲುತ್ತದೆ; ಆ ತರುಣ ದಾರಿ ತಪ್ಪಿ ಅಲೆದಾಡುತ್ತಾ, ಕೊನೆಗೆ (ಸಂಧ್ಯಾಕಾಲದ ವೇಳೆಗೆ) ಒಂದು ಭವ್ಯ ಮಹಲ್ಲನ್ನು ತಲಪುತ್ತಾನೆ. ಆ ಮನೆಯ ಶ್ರೀಮಂತ ಮಾಲೀಕ ಇವನನ್ನು ತನ್ನ ಮನೆಗೆ ತುಂಬಾ ಪ್ರೀತಿ-ಗೌರವಗಳಿಂದ ಬರಮಾಡಿಕೊಂಡು, ಅತಿಥಿ ಸತ್ಕಾರಕ್ಕಾಗಿ ಅತ್ಯಂತ ಸುಂದರ ತರುಣಿಯಾದ ತನ್ನ ಮಗಳನ್ನೇ ಅವನ ಸೇವೆಗೆ ನೇಮಿಸುತ್ತಾನೆ. ಅವಳೂ ಇವನ ರೂಪಿಗೆ ಮರುಳಾದವಳಂತೆ ಕಾಣುತ್ತಾಳೆ ಮತ್ತು ರಾತ್ರಿ ಅವನಲ್ಲಿಗೆ ಬರುತ್ತೇನೆಂದು ಸನ್ನೆ ಮಾಡುತ್ತಾಳೆ. ರಾತ್ರಿ ಅವಳು ಬಂದು ಅವನ ಜೊತೆಯಲ್ಲಿ ಸ್ವಲ್ಪ ಹೊತ್ತು ಸರಸ ಸಲ್ಲಾಪವಾಡಿ, ಅನಂತರ ಅವನನ್ನು ಕೂಡುವ ಸಮಯದಲ್ಲಿ ಬೆಳಕಿರಬಾರದೆಂದು ಸ್ವಿಚ್ ಆರಿಸಲು ಎದ್ದು ಹೊರಗೆ ಹೋಗುತ್ತಾಳೆ. ಅನಂತರ ಕತ್ತಲೆಯಲ್ಲಿ ಅವನ ಬಳಿಗೆ ಬಂದು ಅವನಿಗೆ ಇನ್ನಿಲ್ಲದ ಸುಖ-ಸಂತೋಷಗಳನ್ನು ಕೊಟ್ಟು, ತಾನೂ ಸುಖಿಸುತ್ತಾಳೆ. ಬೆಳಗಾದನಂತರ, ಅವನ ಬೆಳಗಿನ ಉಪಹಾರದನಂತರ, ಅವಳೇ ಕಾರಿನಲ್ಲಿ ಅವನನ್ನು ಅವನ ಕಾರಿನ ಬಳಿಗೆ ಕರೆದೊಯ್ಯುತ್ತಾಳೆ. ದಾರಿಯಲ್ಲಿ, ಅವನು ಮತ್ತೆ ಮತ್ತೆ ಅವಳಿಗೆ ರಾತ್ರಿಯ ಸುಖವನ್ನು ನೆನಪಿಸುವಾಗ ಅವಳು ಹೀಗೆ ಉತ್ತರಿಸುತ್ತಾಳೆ: “ಸಂತೋಷ; ಆದರೆ ನಿಮ್ಮ ಜೊತೆ ಮಲಗಿದವಳು ನಾನಲ್ಲ, ನನ್ನ ಅಕ್ಕ. ಅವಳು ಕುಷ್ಠರೋಗದಿಂದ ಪೀಡಿತಳಾಗಿರುವುದರಿಂದ ಅವಳಿಗೆ ವಿವಾಹವಾಗುವ ಅವಕಾಶವಿಲ್ಲ. ಆದುದರಿಂದ, ಆಗಾಗ್ಗೆ, ನಿನ್ನಂತೆ ದಾರಿ ತಪ್ಪಿ ಮನೆಗೆ ಬರುವ ತರುಣರೊಡನೆ ಅವಳು ಸುಖಿಸುವಂತೆ ನಾವು ಮಾಡುತ್ತೇವೆ.” ಈ ಮಾತಿನಿಂದ ಕಥೆ ಕೊನೆಯಾಗುತ್ತದೆ ಎಂದು ನನ್ನ ನೆನಪು.
    ಈ ಕಥೆ ಅನೇಕ ನೆಲೆಗಳಲ್ಲಿ ಅರ್ಥಪೂರ್ಣವಾಗಿದೆ: ಮೊದಲನೆಯದು ವಿಡಂಬನೆ; ತನ್ನ ’ಗಂಡಸುತನ’ದ ಬಗ್ಗೆ ಕೊಬ್ಬಿರುವ ತರುಣನ ವಿಡಂಬನೆ. ಇನ್ನೂ ಮುಖ್ಯವಾಗಿ, ಲೇಖಕನು ಇಲ್ಲಿ ತೋರಿಸಿರುವುದು, ’ಅಕ್ಕತಂಗಿಯರಲ್ಲಿ ಏನೂ ಭಿನ್ನತೆ ಕಾಣದಿದ್ದಾಗ, ಅವಳು ಯಾರು ಎಂಬುದು ಮುಖ್ಯವೆ? ಎಂದರೆ, ನಮ್ಮ ಅನುಭವದಲ್ಲಿ ಭ್ರಮೆ ಹಾಗೂ ವಾಸ್ತವಗಳನ್ನು ಗುರುತಿಸುವುದು ಹೇಗೆ? ಯಾವುದು ಸತ್ಯ –ಅನುಭವವೆ ಅಥವಾ ಅದಕ್ಕಿಂತ ಹೊರತಾದ ನಮ್ಮ ಮಸ್ತಿಷ್ಕಜನ್ಯ ಗ್ರಹಿಕೆಯೆ (ಇವಳು ಕುಷ್ಠ ಪೀಡಿತೆ-ಇವಳು ಆರೋಗ್ಯವಂತೆ, ಇತ್ಯಾದಿ)?
    ದ. ಅಮೆರಿಕಾದ ಸಾಹಿತಿಗಳ ಬಗ್ಗೆ ಅಗಾಧ ಪಾಂಡಿತ್ಯವಿರುವ ಶ್ರೀ ದಿವಾಕರ್ ಅವರು ನನ್ನ ಈ ನೆನಪು ಸರಿಯಿದೆಯೆ ಇಲ್ಲವೆ ಎಂದು ಹೇಳಲು ಶಕ್ತರು.
    ನಿಮ್ಮ ಅಭಿಮಾನಿ,
    ಸಿ ಎನ್ ರಾಮಚಂದ್ರನ್

  7. kum.veerabhadrappa

    ಸರ್ ನಿಮ್ಮ ಹೆಸರು ಅಪೂರ್ಣವಾಗಿದೆ, ನಿಮ್ಮ ಒಕ್ಕಣಿಕೆ ಆಧಾರದಿಂದ ನೀವು ನಮ್ಮೆಲ್ಲರ ಪ್ರೀತಿಯ ಲೇಖಕರಾದ ಸಿಎನ್ನಾರ್ ಎಂದು ನಿರ್ಧಾರವಾಯಿತು, ನೀವು ನನ್ನ ಬರಹಗಳನ್ನು ಓದುತ್ತಿರುವುದು ಹೆಮ್ಮೆಯ ಸಂಗತಿ, ಧನ್ಯವಾದಗಳು, ನೀವು ಪ್ರತಿಕ್ರಿಯೆಯಲ್ಲಿ ಪ್ರಸ್ತಾಪಿಸಿರುವ ಕಥೆಗಾರನ ಕಥೆಯನ್ನು ದಯವಿಟ್ಟು ಕನ್ನಡಕ್ಕೆ ಅನುವಾದಿಸಿ. ಅಂಥ ಹಲವು ಕಥೆಗಳನ್ನು ಕನ್ನಡ ವಾಚಕರಿಗೆ ಪರಿಚಯಿಸಿ ಕೊಡಿ, ಈಗಾಗಲೆ ಶೋಧ ದಂಥ ಕಾದಂಬರಿಯನ್ನೂ, ಕಸಾಂದ್ರದಲ್ಲಿನ ಅಪರೂಪದ ಕಥೆಗಳನ್ನು, ನೆರಳುಗಳ ಬೆನ್ನು ಹತ್ತಿ ಎಂಬ ಒಳ್ಳೆಯ ಆತ್ಮಕಥೆಯನ್ನು ಸಾರಸ್ವತಲೋಕಕ್ಕೆ ಕೊಡಮಾಡಿರುವ ನೀವು ನಿಮ್ಮ ಗಮನಸೆಳೆದ ವಿದೇಶಿಭಾಷೆಯಲ್ಲಿನ ಒಳ್ಳೆಯ ಕಥೆಗಳನ್ನು ಅನುವಾದದ ಮೂಲಕ ಕನ್ನಡದ ಕಥಾಲೋಕದ ಕ್ಲೀಷೆಯನ್ನು ಹೋಗಲಾಡಿಸಿ, ಇದು ನನ್ನ ಎಲ್ಲರ ಪರವಾದ ವಿನಂತಿ,
    ಕುಂವೀ

  8. Badarinath Palavalli

    ಸಾರ್, ತಮ್ಮ ಕಥನ ಶೈಲಿ ಎಂದರೆ ಒಂದನೇ ಪುಟದಲ್ಲಿ ಪ್ಯಾರಾ ಶುರುವಾಗಿ ಹತ್ತನೇ ಪೇಜಲ್ಲಿ ಮುಗಿಯುವುದು! ಅದೇ ಕುಂವೀ ಅವರ ವಿಭಿನ್ನತೆ.
    ಪಾತ್ರಗಳ ಮೂಲಕ ಕತನವನ್ನು ಕಣ್ಣಿಗೆ ಕಟ್ಟುವಂತೆ ಸಾದೃಶ್ಯಗೊಳಿಸುವ ನಿಮ್ಮ ಪರಿ ಇಲ್ಲೂ ಮುಂದುವರೆದಿದೆ. ನಿಮ್ಮ ಕಾಲದಲ್ಲಿ ನಾವೂ ಇದ್ದೇವೆ ಎನ್ನುವುದೇ ನಮ್ಮ ಸಂತೋಷದ ವಿಚಾರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading