(ಭಾಗ ೧)
ಆ ಹಳ್ಳಿಗೂ ಬಿಸಿಲಿಗೂ ಬಾದರಾಯಣ ಸಂಬಂಧ. ವೈಶಾಖ ಮಾಸ. ಮಟಮಟ ಮಧ್ಯಾಹ್ನ ಬೇರೆ. ದೃಷ್ಟಿ ದೋಷ ಉಳ್ಳವರು ಇವರನ್ನು ಅವರೆಂದೋ, ಅವರನ್ನು ಇವರೆಂದೋ ಗುರುತಿಸುವುದು, ನಗೆಪಾಟಲಿಗೀಡಾಗುವುದು ಮಾಮೂಲು. ಶಾಲೆಗೆ ಕೈಯಳತೆ ದೂರದಲ್ಲಿದ್ದ ಈಶ್ವರ ದೇವರ ಗುಡಿಯಲ್ಲಿ ಕಳೆದ ಕೆಲವು ದಿವಸಗಳಿಂದ ಸಿದ್ಧಾರೂಢ ಪುರಾಣ ಪುಣ್ಯಶ್ರವಣವಿದ್ದುದರಿಂದ ತರಗತಿಗಳು ಭಣಗುಟ್ಟುತ್ತಿದ್ದವು, ಮಕ್ಕಳ ಪೈಕಿ ಕೆಲವು ಕಿಟಿಕಿಯಿಂದ ತೂರಿ ಬಾಗಿಲಾಚೆ ಮರೆಯಾಗುತ್ತಿದ್ದರೆ ಇನ್ನೂ ಕೆಲವು ಬಾಗಿಲಿಂದ ತೂರಿ ಕಿಟಿಕಿಯಾಚೆ ಮರೆಯಾಗುತ್ತಿದ್ದವು. ಇನ್ನೂ ಕೆಲವು ಮಕ್ಕಳು ತರಗತಿಗಳಲ್ಲೋ, ಪ್ರಹರಿಗೋಡೆಗಳಲ್ಲಿ ಸೊಂಪಾಗಿ ಬೆಳೆದಿದ್ದ ಬಾದಾಮಿ ಬೇವಿನ ಮರಗಳ ನೆರಳಲ್ಲೋ ಗುಂಪುಗುಂಪಾಗಿ ಕುಳಿತು ತಮ್ಮತಮ್ಮ ಮನೆಗಳಿಗೆ ಬಂದಿರುವ ಬೀಗರುಬಿಜ್ಜರ ಬಗ್ಗೆ, ಮಾಡುವ ಅಡುಗೆ ಬಗ್ಗೆ ತಾವ್ಯಾವ ತಿಂಡಿತೀರ್ಥಗಳನ್ನು ಸವಿದೆವು ಎಂಬ ಬಗ್ಗೆ ವಿಚಾರ ವಿನಿಮಯ ಕಾರ್ಯನಡೆಸಿದ್ದವು.
ಅವುಗಳನ್ನು ಅವುಗಳಪಾಡಿಗೆ ಬಿಟ್ಟು ಶಿಕ್ಷಕರ ಪೈಕಿ ಕೆಲವರು ಗೋಡೆಗೆ ಒರಗಿ ನಿದ್ದೆಯನ್ನು ಅಭಿನಯಿಸುತ್ತಿದ್ದರೆ, ಇನ್ನೂ ಕೆಲವರು ಲೆಸೆನ್ ಪ್ಲಾನುಗಳನ್ನೇ ಬೀಸಣಿಕೆಗಳನ್ನಾಗಿ ಪರಿವತರ್ಿಸಿಕೊಂಡು ಗಾಳಿ ಬೀಸಿಕೊಳ್ಳುತ್ತಿದ್ದರು, ಅವರ ಕಾಲಕ್ಷೇಪಕ್ಕೆ ಕಾರಣ ಮಧ್ಯಾಹ್ನದ ಬಿಸಿಯೂಟವನ್ನು ಸರಬರಾಜು ಮಾಡುವ ಹರೆರಾಮ ಹರೆಕೃಷ್ಣದ ನೀಲಿವರ್ಣದ ವ್ಯಾನು ಬಳ್ಳಾರಿಯಿಂದ ಇನ್ನೂ ಆಗಮಿಸಿರಲಿಲ್ಲ, ಹನ್ನೆರಡಕ್ಕೆ ಬಂದು ಆಹಾರ ಬಟವಾಡೆ ಮಾಡಬೇಕಿತ್ತು, ಒಂದು ದಾಟಿದರೂ ಅದರ ಸುಳಿವಿಲ್ಲ. ಖಾಲಿ ತಟ್ಟೆ ಲೋಟಗಳ ಪಾರದರ್ಶಕ ಮೈಯಲ್ಲಿ ತಮ್ಮತಮ್ಮ ಪ್ರತಿಬಿಂಬಗಳನ್ನು ನೋಡಿಕೊಳ್ಳುತ್ತಲೂ ಲಯಬದ್ದವಾಗಿ ಬಡಿಯುತ್ತಲೂ ನಡುನಡುವೆ ಜಯಾನಂಪಾರತಿಪತಿ ಅರ ಅರ ಮಾದ್ಯಾವೋ ಎಂದು ಕೂಗುತ್ತಲೂ ವ್ಯಾನಿನ ನಿರೀಕ್ಷೆಯಲ್ಲಿರುವ ಮಕ್ಕಳು ತಮ್ಮ ಸೈರಣೆಯನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿದ್ದವು, ಜಠರಗಳ ರಣೋತ್ಸಾಹಕ್ಕೆ ಕಾರಣ ಊರಲ್ಲಿ ಕೆಲವು ದಿವಸಗಳಿಂದ ಸಿದ್ಧಾರೂಢರ ಪುರಾಣ ಆರಂಭಗೊಂಡಿರುವುದು, ಅದೂ ಶಾಲೆಗೆ ಕಾಲಳತೆ ದೂರದಲ್ಲಿದ್ದ ಈಶ್ವರ ದೇವರ ಗುಡಿಯಲ್ಲಿ, ಅದೂ ವೈಶಾಖ ಮಾಸದಲ್ಲಿ, ಅದೂ ಇಪ್ಪತ್ತೈದು ವರ್ಷಗಳ ಬಳಿಕ, ಅದೂ ಬರ ನೀಗಲಿ ಎಂಬ ಕಾರಣಕ್ಕೆ, ಅದೂ ಕೆಟ್ಟವರು ಒಳ್ಳೆಯವರಾಗಲಿ ಎಂಬ ಸದುದ್ದೇಶದಿಂದ.
ಕಳೆದ ವರ್ಷ ನಡೆದ ಚುನಾವಣೆಯೇ ಇದಕ್ಕೆ ಶ್ರೀಕಾರ ಹಾಕಿದ್ದು, ವಿಶ್ವಸಂಸ್ಥೆ ರಾಯಲಸೀಮೆಯನ್ನು ಶಾಶ್ವತ ಬರಪೀಡಿತಜಿಲ್ಲೆಯೆಂದು ಘೋಷಿಸದಿದ್ದಲ್ಲಿ, ಅದರ ಸರ್ವಾಂಗೀಣ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ಮುಂಜೂರು ಮಾಡದಿದ್ದಲ್ಲಿ, ರಾಜ್ಯ ಮಟ್ಟದೊಂದೇ ಅಲ್ಲದೆ ದೇಶಮಟ್ಟದ ರಾಜಕಾರಣಿಗಳು ಆಸಕ್ತಿವಹಿಸದಿದ್ದಲ್ಲಿ ಮಂಡಲ ಪಂಚಾಯತ್ ಚುನಾವಣೆ ರಂಗೇರುತ್ತಿರಲಿಲ್ಲ. ತೆಲುಗುದೇಶಂ ಸೋಲದಿದ್ದಲ್ಲಿ ಸ್ಥಳೀಯ ಕಾಂಗ್ರೇಸ್ ಮುಖಂಡ ಕೇಶವ ಪುರಾಣದಗೊಡವೆಗೆ ಹೋಗುತ್ತಿರಲಿಲ್ಲ, ಸ್ಥಳಿಯರೊಂದೇ ಅಲ್ಲದೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಿದ್ಧಾರೂಢರ ಭಕ್ತರು, ಅನುಯಾಯಿಗಳು ಅಧಿಕ. ಗ್ರಾಮದ ಪ್ರತಿಯೊಂದು ಮನೆಯಲ್ಲಿ ಸಿದ್ದ, ಸಿದ್ಧಾರೂಢ, ಸಣ್ಣಸಿದ್ದ, ದೊಡ್ಡಸಿದ್ದ, ಗಿಡ್ಡಸಿದ್ದ ಇಂಥ ನಾಮವಾಚಕಗಳುಂಟು. ಅವರ ಭಕ್ತಿ, ನಂಬಿಕೆಯನ್ನು ನಗದಾಗಿ ಪರಿವರ್ತಿಸಿಕೊಳ್ಳುವ ಯೋಜನೆ ರೂಪಿಸಿದ.
ಪುರಾಣ ಪುಣ್ಯಶ್ರವಣ, ದಾಸೋಹ, ಹಗಲಿರುಳು ಭಜನೆ, ಸಾಧುಸಂತರಿಗೆ ತಂಬೂಕು ಪೂರೈಕೆ, ಅದೂ ತಿಂಗಳಪರ್ಯಂತರ. ಲಕ್ಷಾಂತರ ಖರ್ಚು. ಇದೆಲ್ಲ ತನ್ನೊಬ್ಬನಿಂದ ಸಾಧ್ಯವೆ! ಆ ದಿವಸದ ಸಮಾವೇಶದಲ್ಲಿ ತನ್ನ ಯೋಜನೆಯನ್ನು ಪ್ರಕಟಿಸಿದ, ಅದು ಪಕ್ಷಾತೀತ ಸಮಾವೇಶ. ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾಂಗ್ರೇಸ್ ಕಾರ್ಯಕರ್ತರೇನೋ ಚಪ್ಪಾಳೆ ತಟ್ಟಿ ಸ್ವಾಗತಿಸಿದರು, ಆದರೆ ತೆಲುಗುದೇಶಂ ಬೆಂಬಲಿಗರು ಉಭಯ ಸಂಕಟವನ್ನು ಅನುಭವಿಸಿದರು, ಅದಕ್ಕಿದ್ದ ಕಾರಣ ಹಲವು, ಒಂದನೆದಾಗಿ ತಮ್ಮಲ್ಲಿ ಬಹುಸಂಖ್ಯಾತರು ಸಿದ್ಧಾರೂಢರ ಅನುಯಾಯಿಗಳು, ಎರಡನೆದಾಗಿ ಕಮ್ಮಾ ಕೋಮಿಗೆ ಸೇರಿದವನು ಆರೂಢರ ಪುರಾಣದ ನೇತೃತ್ವ ವಹಿಸುವುದೆಂದರೆ! ಸಭೆಯಲ್ಲಿದ್ದ ಟಿಡಿಪಿ ಮುಖಂಡ ತಕರಾರೆತ್ತಿದ, ಅದಕ್ಕೆ ಕೇಶವ ಮಲ್ಲಣ್ಣ ಮಾಮಾ, ನಾನು ಕಮ್ಮಾ ಜಾತಿಯವನೇನೋ ಸರಿ, ಆದರೆ ನನ್ನ ಹೆಂಡತಿ ಗಿರಿಜಾ ನಿನ್ನ ಒಡಹುಟ್ಟಿದ ತಂಗಿಯಲ್ಲವೆ! ಅಲ್ಲದೆ ಸಿದ್ಧಾರೂಢರು ಜಾತ್ಯಾತೀತರು ತಾನೆ! ಎಂದು ಹೇಳುವುದರ ಮೂಲಕ ಹಳೆಯ ಗಾಯಗಳನ್ನು ಅನಾವರಣಗೊಳಿಸಿದ.
ಕೇಶವನ ಪೂರ್ವಜರು ಗುಂಟೂರು ಕಡೆಯಿಂದ ಹಿರೇಹಾಳಿಗೆ ವಲಸೆ ಬಂದವರು. ಮಲ್ಲಣ್ಣನ ಪೂರ್ವಜರ ನೂರಾರೆಕರೆ ಜಮೀನನ್ನು ಹಣಗುತ್ತಿಗೆಗೆ ಹಿಡಿದು ಉಳುಮೆ ಮಾಡುತ್ತಿದ್ದವರು, ಇಂದಿರಾಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ ಭೂಸುಧಾರಣೆ ಕಾನೂನಿನ ಸಹಾಯದಿಂದ ಸಾಗುವಳಿ ಮಾಡುತ್ತಿದ್ದ ಭೂಮಿಗೇ ಒಡೆಯರಾದವರು. ಅದೆಲ್ಲ ಆ ಕಾಲದ ಮಹಿಮೆಯೇನೋ ಸರಿ, ಇನ್ನುಮುಂದೆ ಅಂಥ ಅಚಾತುರ್ಯ ಸಂಭವಿಸಲಾರದೆಂದೇ ಎಲ್ಲರೂ ನಂಬಿದ್ದರು, ಆದರೆ ಕೃಷಿಯ ಪದವೀಧರ ಕೇಶವ ದಾಣಿಂಬೆ, ಪರಂಗಿ ಬೆಳೆದು ಸಾಲವಂದಿಗನಾದ. ನಾಯ್ಡುರವರ ಕೃಪೆಗೆ ಪಾತ್ರನಾಗಿ ರಾಜಕೀಯ ಪ್ರವೇಶಿಸಿ ಸಾಲವನ್ನು ತೀರಿಸಿದ್ದೂ ಅಲ್ಲದೆ ಅವರಿವರಿಗೆ ಕೈಗಡ ನೀಡುವಷ್ಟರಮಟ್ಟಿಗೆ ಶ್ರೀಮಂತನಾದ. ಮಲ್ಲಣ್ಣನನ್ನು ನಂಬಿಸಿ ಆತನ ತಂಗಿ ಗಿರಿಜಾಳನ್ನು ಮಹಿಳಾಮೋರ್ಚದ ಅಧ್ಯಕ್ಷೆಯನ್ನಾಗಿಸಿದ, ಆಕೆಯೊಂದಿಗೆ ಹೈದರಾಬಾದು ವಿಜಯವಾಡ ಗುಂಟೂರೇ ಮೊದಲಾದ ಪಟ್ಟಣಗಳಾದ್ಯಂತ ತಿರುಗಾಡಿಸಿದ, ಆಕೆಗೆ ಅಲ್ಲಿನ ರಾಜಕಾರಣಿಗಳನ್ನೂ ಪರಿಚಯಿಸುವುದರ ಮೂಲಕ ಇನ್ನೂ ಶ್ರೀಮಂತನಾದ. ಇನ್ನೇನು ಟಿಡಿಪಿಗೆ ಭವಿಷ್ಯವಿಲ್ಲವೆಂದರಿತು ರೆಡ್ಡಿ ಪಾದಯಾತ್ರೆ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷವನ್ನು ಸೇರಿಕೊಂಡ, ಅಚಾನಕ್ ಗರ್ಭಿಣಿಯಾದ ಗಿರಿಜಾಳನ್ನು ತಿರುಪತಿಗೆ ಕರೆದೊಯ್ದು ಮದುವೆಯಾಗಿ ಊರಿಗೆ ಮರಳಿದ. ಆತನಿಂದ ಎರಡು ಲಕ್ಷ ಸಾಲ ಪಡೆದಿದ್ದ ಮಲ್ಲಣ್ಣ ಅಷ್ಟೊತ್ತಿಗಾಗಲೇ ಇಪ್ಪತ್ತು ಸಾವಿರ ಮುಂಗಡ ಪಡೆದಿದ್ದ ಸುಪಾರಿ ಕೊಲೆಗಾರ ಓಬಲೇಶನನ್ನು ಕಪ್ಪಟ್ರಾಳಿಗೆ ಮರಳಿ ಕಳಿಸಿದ. ಬಡ್ಡಿಗೆ ಬಡ್ಡಿ ಸೇರಿ ಆಗಿರುವ ಐದುಲಕ್ಷ ತೀರಿಸಲಾಗದ ಅಸಹಾಯಕತೆಯಿಂದ ಒದ್ದಾಡುತ್ತಿರುವ ಮಲ್ಲಣ್ಣ ಬಾಯಿ ಮುಚ್ಚಿಕೊಳ್ಳದೆ ಇರಲಾಗಲಿಲ್ಲ.
ಸಿದ್ಧಾರೂಢರ ಮೇಲಿನ ಭಕ್ತಿಯಿಂದಾಗಿಯೋ, ಋಣ ಸಂಬಂಧೀ ದೋರಣೆಯಿಂದಾಗಿಯೋ, ತಂಗಿ ಮೇಲಿನ ಪ್ರೀತಿಯಿಂದಾಗಿಯೋ, ಜನಪ್ರಿಯತೆಯನ್ನು ಪುನಃ ಸಂಪಾದಿಸಬೇಕೆಂಬ ದೂರದೃಷ್ಟಿಯಿಂದಾಗಿಯೋ, ಟಿಡಿಪಿ ಕಾರ್ಯಕರ್ತರ ಎದ್ದ ಎತ್ತಿನ ಬಾಲ ಹಿಡಿಯುವ ಧೋರಣೆಯಿಂದಾಗಿಯೋ ಮಲ್ಲಣ್ಣ ಹೆಗಲ ಮೇಲಿನ ವಲ್ಲಿಯಿಂದ ಮುಖದ ಮೇಲಿನ ಬೆವರನ್ನೊರಿಸಿಕೊಳ್ಳುವುದರ ಮೂಲಕ ಕೇಶವನ ಯೋಜನೆಯನ್ನು ಬೆಂಬಲಿಸುವುದು ಅನಿವಾರ್ಯವಾಯಿತು. ಪರಸ್ಪರ ಯಾಮಾರಿಸುವುದರಲ್ಲಿ ಅವರಿಬ್ಬರೂ ಚಾಣಾಕ್ಷರೆ. ಈ ಕೆಲಸಕ್ಕೆ ತಮ್ಮತಮ್ಮ ಜೇಬಿನಿಂದ ದುಡ್ಡು ಹಾಕುವಷ್ಟು ದಡ್ಡರಾಗಿರಲಿಲ್ಲ ಅವರು. ಟಿಡಿಪಿ ಬ್ಯಾನರ್ ಹಿಡಿದುಕೊಂಡು ಮಲ್ಲಣ್ಣನ ಕಡೆಯವರೂ, ಕಾಂಗ್ರೆಸಿನ ಬ್ಯಾನರ್ ಹಿಡಿದುಕೊಂಡು ಕೇಶವನ ಕಡೆಯವರೂ, ಸಿದ್ಧಾರೂಢ ಭಕ್ತಮಂಡಳಿ ಎಂಬ ಬ್ಯಾನರ್ ಹಿಡಿದುಕೊಂಡು ಅಂಗಡಿ ಸಿದ್ದಣ್ಣನ ಕಡೆಯವರೂ ವಸೂಲಿಗಿಳಿದರು. ಮೊದಲೇ ಅದು ಅವಧೂತರ ಪುರಾಣವೆಂದ ಮೇಲೆ ಕಾರ್ಯಕರ್ತರಿಗೆ ಅಮಲು ಮುಖ್ಯ ತಾನೆ! ಕೆಲವರು ಚಂದಾ ಹಣದಲ್ಲಿ ಬೆಳೆಬೆಳೆಗ್ಗೆ ಕುಡಿದು ವಾಲಾಡಲಾರಂಭಿಸಿದರೆ ಇನ್ನೂ ಕೆಲವರು ಗಾಂಜಾ ಸೇವನೆಗೈದು ವಾಲಾಡಲಾರಂಭಿಸಿದರು, ಮತ್ತೂ ಕೆಲವರು ಕ್ವಾರ್ಟರ್ ಬಾಟಲಿ, ಗುಡುಗುಡಿ ಚಿಲುಮೆಯನ್ನು ಸಂಗಡ ಇಟ್ಟುಕೊಂಡೇ ಚಂದಾ ವಸೂಲಿಗಿಳಿದರು. ಊರೆಂದ ಮೇಲೆ ಒಳ್ಳೆಯವರಿರದಿದ್ದರಾಗುವುದೆ!
ಏನ್ರಯ್ಯಾ ಎಂದು ಕೇಳಿದವರಿಗೆ ಅಮಲಲ್ಲಿದ್ದರೇನೇ ಅವಧೂತರಾತ್ಮಕ್ಕೆ ಶಾಂತಿ ಎಂದು ಜವಾಬು ನೀಡತೊಡಗಿದರು. ಕೆಲವು ಕಡೆ ಜಗಳ ಸಂಭವಿಸಿದರೆ ಇನ್ನೂ ಕೆಲವು ಕಡೆ ಹೊಡೆದಾಟಗಳೂ ಸಂಭವಿಸಿದವು. ಅವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರೊಬ್ಬರಿಗೂ, ನಿಜ ಹೇಳಬೇಕೆಂದರೆ ಕೇಶವನಿಗಾಗಲೀ, ಮಲ್ಲಣ್ಣನಿಗಾಗಲೀ, ಸಿದ್ದಣ್ಣನಿಗಾಗಲೀ ಇರಲಿಲ್ಲ. ಲಕ್ಷಗಟ್ಟಲೆ ಹಣ ವಸೂಲಿಯಾಗಿರುವುದೇನೋ ನಿಜ, ಆದರೆ ಲೆಕ್ಕಕ್ಕೆ ಸಿಕ್ಕಿರುವುದು ಜುಜುಬಿ ಮಾತ್ರ. ಎಲ್ಲಾ ಸಿದ್ದಾರೂಢರ ಮಹಿಮೆ. ಎಲ್ಲಾ ಭಾರವನ್ನು ಅವಧೂತರ ಮೇಲೆ ಹಾಕಿ ಕೆಲಸ ಮುಂದುವರಿಸುವುದು ಮುಖ್ಯ.
ಹ್ಹಾಂ ಅಂದಹಾಗೆ ಇನ್ನೊಂದು ಮುಖ್ಯ ಸಂಗತಿ ಎಂದರೆ, ಹಿರೇಹಾಳಿರುವುದು ನುಂಕೇಮಲೆಗುಡ್ಡ, ಸುಗ್ಲಮ್ಮನ ಗುಡ್ಡ, ಸಂಡೂರು ಗುಡ್ಡಗಳ ನಡುವೆ. ಆ ಎಲ್ಲಾ ಗುಡ್ಡಗಳು ಕಬ್ಬಿಣದ ಅದಿರಿಗೆ ಹೆಸರಾಗಿದ್ದವಷ್ಟೆ, ಅಲ್ಲೆಲ್ಲಾ ರೆಡ್ಡಿ, ಬಲ್ಡೋಟಾ, ಹಿರೇಮಠ, ಖಾರಪುಡಿ, ಸ್ವಸ್ತಿಕುಗಳಂಥ ಗಣಿಕುಳಗಳು ಆ ಗುಡ್ಡಗಳ ಅದಿರನ್ನು ಗುತ್ತಿಗೆ ಹಿಡಿದು ಅಗರ್ಭಶ್ರೀಮಂತರಾಗಿದ್ದರಷ್ಟೆ, ಅವರ ಗಣಿ ದಂಧೆ ಸುಸೂತ್ರವಾಗಿ ನಡೆಯಲು ಹಿರೇಹಾಳು, ಓಬುಳಾಪುರಂ, ತಾಂಡಾಗಳಂಥ ಹಳ್ಳಿಗಳ ಸಹಾಯ-ಸಹಕಾರವಿರದಿದ್ದರಾದೀತೆ! ಅದಕ್ಕೆಂದೇ ಗಣಿಕುಳಗಳು ಆಯಾ ಹಳ್ಳಿಗಳ ಶಾಲೆಗಳಿಗೆ ನೋಟುಪುಸ್ತಕ, ಪೆನ್ನು, ಹಲಗೆ ಬಳಪಗಳಂಥ ಸಾಮಾಗ್ರಿಗಳನ್ನು ವರ್ಷಕ್ಕೊಮ್ಮೆ ವಿತರಿಸುತ್ತಿದ್ದರು. ಮದುವೆಮುಂಜಿಗಳಿಗೆ ಹಣಕಾಸನ್ನೂ, ಹಬ್ಬಹರಿದಿನಗಳಿಗೆ ಕುರಿಮೇಕೆಗಳನ್ನೂ ಭಿಕ್ಷೆರೂಪದಲ್ಲಿ ವಿತರಿಸುತ್ತ ಆಯಾ ಹಳ್ಳಿಗಳ ಬಾಯಿಗೆ ಬೀಗ ಹಾಕಿದ್ದರಷ್ಟೆ, ಸ್ಥಳೀಯ ಪುಡಾರಿಗಳಿಗೊಂದೇ ಅಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕಾರಣಿಗಳಿಗೆ ಮೆವು ಸರಬರಾಜು ಮಾಡುತ್ತ ತಮ್ಮ ದಂಧೆ ಸುಗುಮವಾಗಿ ನಡೆಯುವಂತೆ ನಿಗಾವಹಿಸಿದ್ದರಷ್ಟೆ. ಅವರಿರುವಾಗ ತಾವ್ಯಾಕೆ ಜುಜುಬಿ ಕೆಲವು ಲಕ್ಷಗಳಿಗೆ ತಲೆಕೆಡಿಸಿಕೊಳ್ಳುವುದು!
ಆ ಮುವ್ವರೂ ಸೇರಿ ತ್ರಿಮೂರ್ತಿಗಳಾಗಿ ಅವರಿರುವಲ್ಲಿಗೆ ತಮ್ಮತಮ್ಮ ಪಕ್ಷಗಳ ಬ್ಯಾನರುಗಳೊಂದಿಗೆ ಹೋಗಿ ವಿನಂತಿಸಿಕೊಂಡರು. ರೆಡ್ಡಿ ಎರಡು ಕೊಡುವಲ್ಲಿ ಒಂದು ಕೊಟ್ಟರೆ ಬಲ್ಡೋಟಾ ಮೂರು ಕೊಡುವಲ್ಲಿ ಎರಡು ಕೊಟ್ಟನು. ಮೆಹಬೂಬುಸಾಬು ಸ್ವಸ್ತಿಕ್ ಕಾರಪುಡಿಗಳಂಥ ಪರಾವಲಂಭಿಕುಳಗಳು ಒಂದು ಕೊಡುವಲ್ಲಿ ಹತ್ತೋ ಇಪ್ಪತ್ತೋ ಕೊಟ್ಟು ಭಕ್ತಿ ಮೆರೆದರು. ಕಲೆಕ್ಟಾಗಿದ್ದು ಎಷ್ಟೋ! ಪರಸ್ಪರ ಶಾಮೀಲಾಗಿ ಹಂಚಿಕೊಂಡಿದ್ದೆಷ್ಟೋ! ಇಷ್ಟರಲ್ಲಿ ಹೇಗಪ್ಪಾ ಪುರಾಣವನ್ನು ಆರಂಭಿಸುವುದು ಎಂದು ಕೊರಗುತ್ತಲೇ ಪುರಾಣಿಕ ಎರ್ರಂಗಳಿ ಶಿವಣ್ಣನವರನ್ನೂ, ಅವರಿಗೆ ಹಾರ್ಮೋನಿಂ ಸಾಥ್ ನೀಡಲು ಕುರೇಕುಂಪೆ ಪಂಪಣ್ಣನನ್ನೂ, ತಬಲಾ ವಾದನಕ್ಕೆ ದಾರದ ಮಿಲ್ ಶರಭಣ್ಣನನ್ನೂ ಗೊತ್ತು ಮಾಡಿದ್ದಾಯಿತು. ನಿಗದಿತ ದಿವಸದಂದು ಪುರಾಣವನ್ನು ಈಶ್ವರದೇವರ ಗುಡಿಯ ಪ್ರಾಂಗಣದಲ್ಲಿ ಆರಂಭಿಸಿದ್ದೂ ಆಯಿತು.
ಪುರಾಣವೆಂದರೆ ಮಕ್ಕಳ ಹಾಜರಿ ಸಡಗರ ಇರದಿದ್ದರೆ ಪುಣ್ಯಶ್ರವಣ ಸಾಂಗೋಪಾಂಗವಾಗಿ ನಡೆದೀತೆ! ಅವು ಶಿಕ್ಷಕರು ಕೊರೆದ ಲಕ್ಷ್ಮಣರೇಖೆಯನ್ನು ಸಲೀಸಾಗಿ ಉಲ್ಲಂಘಿಸಲಾರಂಭಿಸಿದವು, ಸ್ನಾನ ಮಾಡದಿದ್ದರೂ ತಮ್ಮತಮ್ಮ ನೊಸಲುಗಳಿಗೆ ವಿಭೂತಿಪಟ್ಟೆಗಳನ್ನೋ, ಕುಂಕುಮತಿಲಕವನ್ನೋ ಧರಿಸಿ ಪುರಾಣಿಕ ಎರ್ರಂಗಳಿ ಶಿವಣ್ಣನ ಮುಂದೆ ಹಾಜರಾಗಲಾರಂಭಿಸಿದವು, ಪ್ರತಿ ಚರಣಕ್ಕೂ ಜಯನಮೋ ಪಾರೋತಿ ಪತಿ ಅರಅರ ಮಾದೇವೋ ಎಂದು ಒಕ್ಕೊರನಿಂದ ಪಲ್ಲವಿಸುವುದರ ಮೂಲಕ ಪ್ರೌಢರ ಹಾಗೂ ವೃದ್ದರ ಪ್ರೀತ್ಯಾದರ ಕೊಳ್ಳೆ ಹೊಡೆಯಲಾರಂಭಿಸಿದವು, ಅದೂ ಪುರಾಣದ ಅಂತ್ಯದಲ್ಲಿ ವಿತರಿಸುವ ಕೊಬ್ಬರಿಚೂರಿನ ಮಹದಾಸೆಯಿಂದ. ಆದರೆ ಅವುಗಳು ನಿರಾಸೆಯನ್ನು ಅನುಭವಿಸಲಾರಂಭಿಸಿದ್ದು ದಾಸೋಹದ ಸಂದರ್ಭದಲ್ಲಿ. ಮೊದಲೆರಡು ಮೂರುದಿವಸಗಳಲ್ಲಿ ಹುಗ್ಗಿ ಬಡಿಸುತ್ತಿದ್ದವರು ಕ್ರಮೇಣ ಅದನ್ನೂ, ಅನ್ನಸಾರಾದರೂ! ಹ್ಹುಹ್ಹು ಇಲ್ಲವೇ ಇಲ್ಲ.

ಕೊನೆಗೆ ಹುಡುಗರನ್ನು ಕತ್ತು ಹಿಡಿದು ಹೊರಗೆ ನೂಕಲಾರಂಭಿಸಿದೊಡನೆ ಅವುಗಳ ಆಕ್ರಂದನ ಅರಣ್ಯರೋಧನ ಕೋಪವಾಗಿ ಪರಿವತರ್ಿತಗೊಂಡಿತು. ಕೆಲವು ಕಲ್ಲು ತೂರಿ ಉಗ್ರಗಾಮಿಗಳೆನ್ನಿಸಿಕೊಂಡವು, ಇನ್ನೂ ಕೆಲವು ಹುಗ್ಗಿಯನ್ನೋ ಲಾಡನ್ನೋ ಕದ್ದು ಕಳ್ಳರೆನ್ನಿಸಿಕೊಂಡವು. ಇನ್ನೂ ಕೆಲವು ಬಡಿಸುವವರನ್ನು ಬಯ್ಯುವುದರ ಮೂಲಕ ಮಾನಮಯರ್ಾದೆ ಇಲ್ಲದವು ಎಂಬ ಉಪಾಧಿಯನ್ನು ಹೊತ್ತವು. ಈ ಎಲ್ಲಾ ಹಿಂಸೆಗಳಿಗೆ ತುತ್ತಾದ ಮಕ್ಕಳನ್ನು ಹೆತ್ತವರು ಪೋಷಕರು ಸುಮ್ಮನಿದ್ದಾರೆಯೆ! ಅವರೆಲ್ಲ ಪುರಾಣ ನಡೆವಲ್ಲಿಗೆ ಬಂದು ಪ್ರಾಯೋಜಕರನ್ನೂ, ಕಾರ್ಯಕರ್ತರನ್ನೂ ವಾಚಾಮಾಗೋಚರ ಬಯ್ಯಲಾರಂಭಿಸಿದರು. ಈ ಪ್ರಕಾರವಾಗಿ ಮೌಖಿಕ ಹಲ್ಲೆಗೆ ತುತ್ತಾದ ಪ್ರಾಯೋಜಕರು ಸುಮ್ಮನಿದ್ದಾರೆಯೆ!
ಅವರೆಲ್ಲ ಸ್ಕೂಲಿನ ದುರ್ಬಲ ಪ್ರಹರಿಗೋಡೆಯನ್ನು ಪ್ರವೇಶಿಸಿ ಹುಡುಗರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳದಿದ್ದರೆ ನೀವೆಲ್ಲ ಯಾವ ಸೀಮೆ ಮೇಸ್ಟ್ರು, ಇದು ಯಾವ ಸೀಮೆ ಇಸ್ಕೂಲು ಎಂದು ತರಾಟೆ ತೆಗೆದುಕೊಳ್ಳಲಾರಂಭಿಸಿದರು. ಇದರಿಂದ ಹೆಡ್ಮಾಸ್ಟರ್ ಸಹೋದ್ಯೋಗಿಗಳ ತುರ್ತು ಸಭೆ ಕರೆದು ತಲೆತಲೆ ಚಚ್ಚಿಕೊಂಡರಲ್ಲದೆ ನೀವೆಲ್ಲ ಸ್ಟೂಡೆಂಟ್ಸನ್ನು ಕಂಟ್ರೋಲ್ ಮಾಡದಿದ್ದ ಪಕ್ಷದಲ್ಲಿ ನನಗೆ ಲಕ್ವಾ ಹೊಡೆಯೋದಂತೂ ಗ್ಯಾರಂಟಿ, ಮೊದಲೇ ಬೀಪಿ ಪೇಶೆಂಟದೀನಿ ಎಂದು ತಮ್ಮ ಅನುವಂಶಿಕ ವ್ಯಾಧಿಯನ್ನು ಬಹಿರಂಗಪಡಿಸಿದರು. ದಿನವಿಡೀ ಹಸಿವೆಯೆಂಬ ರೋಗದಿಂದ ನರಳುತ್ತಿರುವ ಶಾಲೆಯ ಮಕ್ಕಳು! ಸಾವಿರಾರು ಮಂದಿ ದಾಸೋಹದಲ್ಲಿ ತಿಂದುತೇಗಿ ಹೋಗುತ್ತಿರುವರು, ಅದರಲ್ಲಿ ತಮ್ಮ ಶಾಲೆಯ ಒಂದೆರಡು ನೂರು ಮಕ್ಕಳು ಊಟ ಮಾಡಿದರೆ ಇವರ ಗಂಟೇನು ಹೋಗುವುದು. ಹೀಗಂತ ಹೋಗಿ ಕೇಳಿದ್ದಕ್ಕೆ ಕೇಶವ ಅಲ್ರೀ ಮೇಸ್ಟ್ರೆ, ನೀವೆಲ್ರೂ ಒಂದು ತಿಂಗಳ ಪಗಾರಾನ ಪುರಾಣದ ಖರ್ಚಿಗೆ ಕೊಟ್ಟರೆ ಊಟ ಹಾಕ್ತೀವಿ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಶಿಕ್ಷಕ ಬೃಂದವನ್ನು ಮರಳಿ ಕಳಿಸಿದನು. ಆ ಬಳಿಕವೇ ಶಾಲೆಯ ಶಿಕ್ಷಕರು ಅಕ್ಷರ ದಾಸೋಹದ ಹರೆ ರಾಮ ಹರೆ ಕೃಷ್ಣಾ ಮುಖಂಡ ಕೃಷ್ಣಾನಂದರನ್ನು ಸಂಪಕರ್ಿಸಿದ್ದು, ಈ ಒಂದು ತಿಂಗಳಮಟ್ಟಿಗೆ ದಿನಕ್ಕೊಪ್ಪತ್ತು ಏನಾದರೊಂದು ಸಿಹಿ ಊಟ ಸರಬರಾಜು ಮಾಡಿ ಪುಣ್ಯಕಟ್ಟಿಕೊಳ್ಳಿರೆಂದು ವಿನಂತಿಸಿಕೊಂಡದ್ದು. ನಮ್ಮ ಮನವಿಯನ್ನು ಆ ಮಹಾನುಭಾವ ಪುರಸ್ಕರಿಸಿದರಲ್ಲದೆ ಕೆಲವು ದಿವಸಗಳಿಂದ ತಪ್ಪದೆ ಒಂದಲ್ಲಾ ಒಂದು ಸಿಹಿ ಊಟವನ್ನು ಸರಬರಾಜು ಮಾಡುತ್ತಿರುವರು.
ಶಾಲಾವಿದ್ಯಾರ್ಥಿಗಳ ಪೈಕಿ ರೌಡಿಗಳೆಂದೇ ಹೆಸರಾಗಿದ್ದ ಏಳನೆ ತರಗತಿಯ ಜನಾರ್ಧನ, ಶ್ರೀರಾಮ, ಕರುಣಾಕರ, ಸುಷ್ಮಾ (ಇವೆಲ್ಲ ಫಲಾನುಭವಿಗಳಾದ ಅಭಿಮಾನಿಗಳಾದ ಆಯಾ ಮಕ್ಕಳನ್ನು ಹೆತ್ತವರು ಅಭಿಮಾನಪೂರ್ವಕವಾಗಿ ಮಾಡಿದ್ದ ನಾಮವಾಚಕಗಳು) ಇವರೆಲ್ಲ ಸೇರಿ ನಿನ್ನೆ ದಿವಸ ವ್ಯಾನಿನ ಡ್ರೈವರ್ ಮಂಜನ ಕೊರಳಪಟ್ಟಿ ಹಿಡಿದು ಜೋತಾಡುತ್ತ ನಾಳೆ ದಿವಸ ಏನ್ತರ್ತೀಯಣ್ಣಾ ಎಂದು ವಿನಂತಿಸಿಕೊಂಡಿದ್ದವು, ಅದಕ್ಕೆ ಅವನು ಲಡ್ಡು ಎಂದು ಹೇಳಿ ಬಾಯಿ ತೊಳೆದುಕೊಂಡಿದ್ದನು. ಕೇಳಿಸಿಕೊಂಡಾದ ಬಳಿಕ ಅವು ಸುಮ್ಮನಿದ್ದಾವೆಯೆ! ನಾಳೆ ಲಡ್ರಲೇ ಎಂದು ಡಂಗೂರ ಸಾರಿದ್ದವು. ಅದರ ಪರಿಣಾಮವಾಗಿ ಶಾಲೆಯ ಏಳೂ ತರಗತಿಗಳ ಮುನ್ನೂರೈವತ್ತು ಮಂದಿ ವಿದ್ಯಾಥರ್ಿಗಳು ಲಡ್ಡು ಲಡ್ಡು ಎಂದು ಕನವರಿಸುತ್ತಿದ್ದವಲ್ಲದೆ ಅದನ್ನು ಪುಷ್ಕಳವಾಗಿ ಲಗಾಯಿಸಲು ಮಾನಸಿಕವಾಗಿಯೂ ದೈಹಿಕವಾಗಿಯೂ ಸಂಸಿದ್ದಗೊಂಡು ಹಾಜರಾಗಿದ್ದವು, ಅದೂ ಸಿಲವಾರ ತಟ್ಟೆಗಳೆಂಬ ಆಯುಧ ವಾದ್ಯಗಳೊಂದಿಗೆ. ಹೀಗಾಗಿ ಆ ದಿವಸ ಶಾಲೆಯಲ್ಲಿ ಮಕ್ಕಳ ಹಾಜರಿ ಸೆಂಟ್ಪರ್ಸೆಂಟಿತ್ತಲ್ಲದೆ ತಾಳಮದ್ದಳೆ ಕಛೇರಿಯನ್ನು ಮೀರಿಸುವಂತಿತ್ತು.
ಸೈರಣೆ ಕಳೆದುಕೊಂಡಿದ್ದ ಕೆಲವು ಹುಡುಗರು ಹೇಳದೆ ಕೇಳದೆ ಬೀದಿಗೆ ಓಡಿ ಮಸೀದಿ ಬೀದಿ ಕಡೆ ನೋಡಿ ಬರುತ್ತಿದ್ದರೆ ಇನ್ನೂ ಕೆಲವು ಹುಡುಗರು ನಿದ್ರಾಮಂಪರಿನಲ್ಲಿ ತಮ್ಮ ಹೊಟ್ಟೆಗಳನ್ನು ಕೆರೆದುಕೊಳ್ಳುತ್ತಿದ್ದರು, ನಿತ್ರಾಣಗೊಂಡಿದ್ದ ಬಹುಪಾಲು ಹುಡುಗರು ಕೂತಲ್ಲಿಯೇ ನಿದ್ದೆ ಹೋಗಿದ್ದರು. ಶಿಕ್ಷಕರ ಪರಿಸ್ಥಿತಿಯೂ ಅವರೆಲ್ಲರದಕ್ಕಿಂತ ಭಿನ್ನವಿರಲಿಲ್ಲ. ಎಲ್ಲರೂ ಬಿಸಿಯೂಟ ಸವಿಯುವ ನಿರೀಕ್ಷೆಯಲ್ಲಿದ್ದವರೆ. ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಮೇಸ್ಟ್ರು ಸುಗ್ಲಪ್ಪನೂ, ಬೀಪಿ ಖಾಯಿಲೆಯಿಂದ ನರಳುತ್ತಿದ್ದ ರಾಘಣ್ಣನೂ ಕರವಸ್ತ್ರಗಳಿಂದ ಮುಖದ ಬೆವರನ್ನೊರೆಸಿಕೊಳ್ಳುತ್ತ ಮೆಲ್ಲಗೆ ಜಾಗ ಖಾಲಿ ಮಾಡುವುದಕ್ಕೂ, ಕುರುಬರೋಣಿಯಲ್ಲಿದ್ದ ಶಾಲೆಯ ಮೇಸ್ಟ್ರು ಚಂದ್ರಕಾಂತ ಬರುವುದಕ್ಕೂ ಸರಿ ಹೋಯಿತು, ನೂರಾರು ಮೈಲು ಪಾದಯಾತ್ರೆ ಮಾಡಿರುವಂತೆ ಬಳಲಿದ್ದ ಆತ ಹಲಕುಂದಿ ಹತ್ರ ಮೈನ್ಸ್ ಲಾರಿಗಳ ನಡುವೆ ದಾಸೋಹದ ವ್ಯಾನು ಸಿಕ್ಕಾಕೊಂಡಿದೆಯಂತೆ, ಅದು ಬರೋ ಲಕ್ಷಣ ಇಲ್ವಂತೆ! ಎಂದು ಹೇಳಿದ ಮೇಲೆ!
***
ವಿದ್ಯಾರ್ಥಿ ಬಡಕಲ ಸಿದ್ಧಾರೂಢನ ತಂದೆತಾಯಿ ಕುಶಲ ನೇಕಾರರೆಂದು ತಿಳಿದದ್ದು ಹೆಂಡತಿಯ ಕಾರಣದಿಂದ, ವೈವಾಹಿಕ ಜೀವನದ ಬೆಳ್ಳಿಹಬ್ಬ ಮುಂದಿನ ತಿಂಗಳಲ್ಲಿ, ಅದರ ನೆನಪಿಗೆ ರೇಶ್ಮೆಸೀರೆಯನ್ನು ಆಪೇಕ್ಷಿಸಿದಳು, ನಿರೀಕ್ಷೆಯಲ್ಲಿದ್ದ ಅರಿಯರ್ಸ್ ಕೈಗೆ ಬಂತು, ಮೊಳಕಾಲ್ಮೂರು ರಾಯದುರ್ಗಗಳಲ್ಲಿರುವಂತೆ ಹಿರೇಹಾಳಿನಲ್ಲೂ ರೇಶ್ಮೆ ನೇಕಾರರಿಗೆ ಬರವಿರಲಿಲ್ಲ. ಪ್ರಸ್ತಾಪಿಸಿದೊಡನೆ ಸಿದ್ದ ತಮ್ಮ ಮನೆಯಲ್ಲೂ ಬೇಕಾದಂಥ ಸೀರೆಗಳಿರುವುದಾಗಿ ತಿಳಿಸಿದ, ಆಶ್ಚರ್ಯವಾಯಿತು, ಅವನೋ ಅವನ ದೇಹವೋ! ಅವನ ಸಣಕಲು ದೇಹವನ್ನು ಮರೆಮಾಚಲು ಎಣೆಮೀರಿ ಪ್ರಯತ್ನಿಸುತ್ತಿರುವ ಚಿಂದಿ ಉಡುಪೋ! ಕುತೂಹಲದಿಂದ ತಲುಪಿದ ಮನೆಯೆಂದರೆ ಮನೆ! ಕುಟುಂಬದ ಸದಸ್ಯರೆಂದರೆ ಸದಸ್ಯರು! ಬಡತನದೊಂದಿಗೆ ತಳಕು ಹಾಕಿರುವ ರಕ್ತಹೀನತೆ, ಎರಡೂ ಕೈಮಗ್ಗಗಳಲ್ಲಿ ಝಗಮಗಿಸುತ್ತಿದ್ದ ರೇಶ್ಮೆನೂಲು, ಪ್ರೀತಿ ಸಂಕೋಚದಿಂದ ಬರಮಾಡಿಕೊಂಡರಲ್ಲದೆ ಹಳೆಯ ಕಪಾಟಿನಲ್ಲಿ ಒಟ್ಟರಿಸಿದ್ದ ಪೀತಾಂಬರ ಸೀರೆಗಳನ್ನು ಅನಾವರಣಗೊಳಿಸಿದರು. ಅವು ಒಂದಕ್ಕಿಂತ ಒಂದು ಮಿಗಿಲಿದ್ದವು. ಅವರು ಹೇಳಿದ ಬೆಲೆಗೆ ಸೀರೆಯೊಂದನ್ನು ಖರೀದಿಸಿ ಮನೆಗೆ ಮರಳಿದೆ.
ರೇಶ್ಮೆಸೀರೆ ಕುರಿತೋ ಅದನ್ನು ನೇಯ್ದವರ ಕುರಿತೋ ಯೋಚಿಸುತ್ತ ಮೈಮರೆತಿದ್ದಾಗ ಬಾಗಿಲಲ್ಲಿ ಕಾಣಿಸಿಕೊಂಡ ವ್ಯಕ್ತಿ ಪುರಾಣಿಕ ಎರ್ರಂಗಳಿ ಶಿವಣ್ಣ ಆಗಿದ್ದರು. ಗದಗದ ಪಂಚಾಕ್ಷರಿ ನಾಟಕ ಕಂಪನಿಯ ಬಹುತೇಕ ನಾಟಕಗಳಲ್ಲಿ ಶ್ರೀಯುತರು ಸ್ತ್ರೀ ಪಾತ್ರಗಳನ್ನು ಅಭಿನಯಿಸುತ್ತಿದ್ದರು. ಅವರ ನಾಟಕಗಳನ್ನು ನೋಡುತ್ತ ಕಳೆದ ಬಾಲ್ಯವನ್ನು ನೆನಪಿಸಿಕೊಳ್ಳುತ್ತಲೇ ಸ್ವಾಗತಿಸಿದೆ. ಕುಶಲೋಪರಿಯಾದ ಬಳಿಕ ಅವರು ಅಂತೂ ನೆನಪಿಟ್ಟುಕೊಂಡಿರುವಿರಲ್ಲ ಅದೇ ನನ್ನ ಪುಣ್ಯ ಎಂದು ಕಣ್ಣುಗಳನ್ನು ಒದ್ದೆ ಮಾಡಿಕೊಂಡರು. ಪುನಃ ಅವರೇ ನಾಟಕಗಳಲ್ಲಿ ಅಭಿನಯಿಸೋದು ಬಿಟ್ಟು ತುಂಬಾ ಕಾಲವಾಯಿತು ಮೇಸ್ಟ್ರೇ, ಹೊಟ್ಟೆಪಾಡಿಗೆ ಪುರಾಣಿಕನಾಗಿದ್ದೀನಿ, ಹ್ಹಾಂ ಅಂದ ಹಾಗೆ ಈ ದಿವಸ ಸಿದ್ಧಾರೂಢರ ಜನನ ಹಾಗೂ ತೊಟ್ಟಿಲುಕಾರ್ಯದ ಪ್ರಸಂಗ, ನೀವು ದಯವಿಟ್ಟು ಬಿಡುವು ಮಾಡಿಕೊಂಡು ಬರಬೇಕು ಎಂದು ವಿನಂತಿಸಿಕೊಂಡರು. ನನಗೂ ಕುತೂಹಲ, ತಪ್ಪದೆ ಬರುವುದಾಗಿ ತಿಳಿಸಿ ಬೀಳ್ಕೊಟ್ಟೆ.
ಸಂಜೆಯಾದೊಡನೆ ಸಿದ್ಧಾರೂಢರ ಭಕ್ತರಾಗಿದ್ದ ಒಂದಿಬ್ಬರು ಸಹೋದ್ಯೋಗಿಗಳ ಸಂಗಡ ಈಶ್ವರದೇವರ ಪ್ರಾಂಗಣ ತಲುಪಿದೆ, ಹಿರೇಹಾಳಿನವರೊಂದೇ ಅಲ್ಲದೆ ನೆರೆಹೊರೆಯ ಗ್ರಾಮಗಳಿಂದ ನೂರಾರು ಭಕ್ತಾದಿಗಳು ನೆರೆದಿದ್ದರು. ಆಶ್ಚರ್ಯ! ನೀವು ಪುರಾಣ ಕೇಳಲು ಬಂದಿರುವಿರೆಂದರೆ ನಾಳೆ ಸೂರ್ಯ ಪಶ್ಚಿಮದಲ್ಲಿ ಹುಟ್ಟುವುದು ಗ್ಯಾರಂಟಿ ಎಂದು ಔಪಚಾರಿಕವಾಗಿ ಸ್ವಾಗತಿಸಿದ ಕೇಶವ ನನಗೆ ಪರಿಚಿತ ಮಾತ್ರ, ಆದರೆ ಕಷ್ಟಸುಖ ಹಂಚಿಕೊಳ್ಳುವಷ್ಟು ಸ್ನೇಹಿತನಲ್ಲ. ತೀರಾ ಮುಂದೆ ಗಣ್ಯರಿಗೆಂದೇ ಕಾಯ್ದಿರಿಸಿಟ್ಟಿದ್ದ ಕುರ್ಚಿಗಳೋ! ತುಕ್ಕುಹಿಡಿದಿದ್ದವು, ಎರಡೇ ಎರಡು ಕುರ್ಚಿಗಳ ಮೇಲೆ ನಾವು ಮುವ್ವರು ಅಡ್ಜಸ್ಟ್ ಮಾಡಿಕೊಂಡು ಕುಳಿತುಕೊಂಡೆವು. ಕಣ್ಣಾಯಿಸಿದೆ, ವೇದಿಕೆ ಹಿಂಬದಿಯಲ್ಲಿ ಆಳೆತ್ತರದ ಪ್ಲೆಕ್ಸ್ ಬೋರ್ಡ್ನಲ್ಲಿ ಅವಧೂತರು ತಮ್ಮ ಮೊಣಕಾಲುಗಳಿಗೆ ತಮ್ಮೆರಡೂ ಕೈಗಳನ್ನು ಹಚ್ಚಿದ್ದರು. ಅದು ಜನಪ್ರಿಯಭಂಗಿಯಾಗಿರದಿದ್ದರೂ ಆಕರ್ಷಕವಾಗಿತ್ತು. ತಬಲ ಹಾರ್ಮೋನಿಯಂಗಳೊಡನೆ ಅವುಗಳ ವಾದಕರು ಬಂದರಲ್ಲದೆ ಶೃತಿ ಸರಿಪಡಿಸಿಕೊಳ್ಳಲಾರಂಭಿಸಿದರು. ಆ ಬಳಿಕ ಆಗಮಿಸಿದ ಪುರಾಣಿಕ ಶಿವಣ್ಣ ದೃಷ್ಟಿ ಹಾಯಿಸಿ ನಮ್ಮ ಹಾಜರಿಯನ್ನು ಖಚಿತಪಡಿಸಿಕೊಂಡು ಕಣ್ಣುಗಳ ಮೂಲಕ ಕೃತಜ್ಞತೆಗಳನ್ನರ್ಪಿಸಿದರು. ಗೆದ್ದಲು ಹಿಡಿಯಲಿದ್ದ ಕೃತಿಯ ನಡುವೆ ಸಿಕ್ಕಿಸಿದ್ದ ನವಿಲುಗರಿಯನ್ನು ಮೆಲ್ಲಗೆ ತೆಗೆದು ಸಾಂಪ್ರತು ಪುರಾಣವನ್ನು ಆರಂಭಿಸಿದರು, ಸಿದ್ಧಾರೂಢ ಮಾರಾಜ್ಕೂ ಜೈ! ಜಯನಮ್ಮಪಾರೊತಿ ಪತಿಅರಅರ ಮಾದೇವ! ಘೋಷಣೆ ಮುಗಿಲುಮುಟ್ಟಿತು.
ಸಿದ್ಧಾರೂಢರನ್ನು ಹೆತ್ತವರು ಯಾರೆಂಬುದು ಸ್ಪಷ್ಟವಾಗಲಿಲ್ಲ, ಕಾರಣ ನಾವು ಆರಂಭದಿಂದ ಕೇಳಿಸಿಕೊಂಡಿರಲಿಲ್ಲ, ಅಲ್ಲದೆ ನಡುನಡುವೆ ಆಗಮಿಸಿ ನಿರ್ಗಮಿಸುತ್ತಿದ್ದ ಗಣ್ಯರ ಮತ್ತವರ ಬೆಂಬಲಿಗರ ಗಲಾಟೆಯಿಂದಾಗಿಯೋ, ತನಗೆ ಮಾಮೂಲು ಸಂದಾಯವಾಗಿಲ್ಲವೆಂದು ಲೈನ್ಮ್ಯಾನಿನ ಅಸಹಕಾರದಿಂದಾಗಿ ಕರೆಂಟು ಆಗಾಗ್ಗೆ ಕೈಕೊಡುತ್ತಿದ್ದ ಕಾರಣದಿಂದಾಗಿಯೋ, ಜನರೇಟರಿನಲ್ಲಿ ಡಿಸ್ಟಿಲ್ಡ್ ವಾಟರಿನ ಕೊರತೆಯಿಂದಾಗಿಯೋ, ಅಥವಾ ಲೌಡ್ಸ್ಪೀಕರಿನಲ್ಲಿ ಕೆಲವು ಕಿರಿಕಿರಿ ಸಂಬಂಧೀ ಕೀಟಗಳು ತೂರಿಕೊಂಡಿದ್ದ ಕಾರಣದಿಂದಾಗಿಯೋ, ಕೆಲವೇ ದಿವಸಗಳಲ್ಲಿ ಅನೀಮಿಕ್ಕಾಗಿದ್ದ ಪುರಾಣಿಕರ ಕಂಠ ಕೆಟ್ಟಿದ್ದರಿಂದಾಗಿಯೋ! ಶ್ರೋತೃಗಳ ಪೈಕಿ ಹೆಚ್ಚಿನವರು ಕುಡಿದಿದ್ದರಲ್ಲವೆ! ಗಾಂಜಾ ಅಮಲಿನಲ್ಲಿದ್ದರಲ್ಲವೆ! ಅಂಥವರು ಅನಾವಶ್ಯಕವಾಗಿ ಸಿದ್ಧಾರೂಢ ಮಾರಾಜ್ಕೂ ಜೈ ಎಂದು ಕೂಗುತ್ತಿದ್ದರಿಂದಾಗಿಯೋ! ಗ್ರಾಮದ ಸಮಸ್ತ ಶುನಕಗಳು ಹೋ ಎಂದು ಅರಚುತ್ತ ತಮ್ಮ ಜಠರಾಕ್ರಂದನವನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಿದ್ದ ಕಾರಣದಿಂದಾಗಿಯೋ ಅವಧೂತರ ಪೂವರ್ಾಪರವನ್ನು ಖಚಿತವಾಗಿ ತಿಳಿದುಕೊಳ್ಳಲಾಗಲಿಲ್ಲ. ಆದರೂ ಒಂದು ಚರಣದಲ್ಲಿ ತಾಯಿಯೋರ್ವಳು ಗರ್ಭಧರಿಸಿದ್ದೂ ಆಯಿತು, ಮರುಚರಣದಲ್ಲಿ ಆಕೆ ಗಂಡುಮಗುವನ್ನು ಪ್ರಸವಿಸಿದ್ದೂ ಆಯಿತು, ಮೂರನೆ ಚರಣದಲ್ಲಿ ಅದರ ತೊಟ್ಟಿಲುಕಾರ್ಯ, ನಾಮಕರಣ ಮಹೋತ್ಸವದ ಸೂಚನೆಯನ್ನು ನೀಡುವುದರ ಮೂಲಕ ಕ್ಲೈಮ್ಯಾಕ್ಸಿಗೆ ಚಾಲನೆ ನೀಡಿದ್ದೂ ಆಯಿತು.
ಪುರಾಣಿಕರು ಪುರಾಣವನ್ನು ತಾತ್ಕಾಲಿಕವಾಗಿ ಮುಗುಚಿಟ್ಟು ಸಭಿಕರನ್ನುದ್ದೇಶಿಸಿ ತೊಟ್ಟಿಲುಕಾರ್ಯದ ಮಹತ್ವವನ್ನು ಹೇಳಲಾರಂಭಿಸಿದರು, ಅದೂ ಅಲ್ಲಿದ್ದ ತೊಟ್ಟಿಲನ್ನು ಸಾರ್ವಜನಿಕವಾಗಿ ತೋರಿಸುತ್ತ! ಯಾರು ಈ ಪವಿತ್ರ ತೊಟ್ಟಿಲನ್ನು ಮನೆಗೆ ಒಯ್ದು ತೂಗುವರೋ ಅಂಥವರ ಸಂತಾನ ಸಾವಿರವಾಗುವುದು, ಅಂಥವರ ಮನೆಯಲ್ಲಿ ಚಿನ್ನದ ಹೊಗೆಯಾಡುವುದೆಂದು ಅವರು ಹೇಳಿದೊಡನೆ ಸಭಿಕರು ಜಯನಮ್ಮ ಪಾರೋತಿ ಪತಿಅರಅರ ಮಾದೇವ, ಸಿದ್ಧಾರೂಢ ಮಾರಾಜ್ಕೂ ಜೈ ಎಂದು ನಿನಾದ ಮಾಡಿದರು. ಎಡಮಗ್ಗುಲಿಂದ ಟಿಡಿಪಿ ಮುಖಂಡ ಮಲ್ಲಣ್ಣನೂ, ಬಲಮಗ್ಗುಲಿಂದ ಕಾಂಗ್ರೇಸ್ ಮುಖಂಡ ಕೇಶವನೂ, ನಟ್ಟನಡುವೆಯಿಂದ ಕುಪ್ಪಳಿಸಿ ಎಗರುವುದರ ಮೂಲಕ ಅವಧೂತ ಭಕ್ತ ಮಂಡಳಿ ಅಧ್ಯಕ್ಷ ಅಂಗಡಿ ಸಿದ್ದಣ್ಣನೂ ಪ್ರವೇಶಿಸುವುದರ ಮೂಲಕ ವೇದಿಕೆಯನ್ನು ಆಕ್ರಮಿಸಿದರು. ಅವರವರ ಅಭಿಮಾನಿ ಬಳಗದವರು ಎಲ್ಲೆಲ್ಲಿದ್ದರೋ ಅಲ್ಲಲ್ಲಿಂದ ಮುನ್ನುಗ್ಗಿದವರೇ ಮುಂದಿದ್ದವರನ್ನು ಹಿಂದುಳಿದವರನ್ನಾಗಿಸಿದರು. ಆಯಾ ಪಕ್ಷಗಳ ಬೆಂಬಲಿತ ಶುನಕಗಳು ವೇದಿಕೆಗೆ ತೀರಹತ್ತಿರ ಆಗಮಿಸಿ ಬೊವ್ವೋ ಎಂದು ಬೊಗಳತೊಡಗಿದವು.
(ಮುಂದುವರೆಯುವುದು…)




“kumvee” – nimma style-styloo !! kate huttisuva reeti, niroopaneya shaili, vyanga-bharita vivaragalu, vidambaneya chaati yetu innoo maasilla – heege munduvariyali !!