ಗೌಳೇರ ಪೋತರಾಜು ಹಿಂದಿನ ದಿವಸ ಮುಖ್ಯಮಂತ್ರಿ ಕಛೇರಿಯಿಂದ ಬಂದಿದ್ದ ಷೋಕಾಸ್ ನೋಟೀಸು ಕುರಿತಂತೆ ಕಮ್ಯುನಿಷ್ಟ್ ಪಕ್ಷದ ಚೌಗಲೆ ಮತ್ತು ಎಮ್ಮೆಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ತಳವಾರ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ, ಜೊತೆಗೆ ಮಾಧ್ಯಮದವರಿಗೆ ಮಾಹಿತಿಯನ್ನೂ ನೀಡದೆ ಇರಲಿಲ್ಲ. ತಮಗಂಟಿಕೊಂಡು ಕೂತಿದ್ದ ನಗರದ ಪ್ರಸಿದ್ದ ನ್ಯಾಯಾವಾದಿ ಬೋನಾಲ ಶಂಕರ್ ಸೆಕೆ ತಾಳಲಾರದೆ ಕೋಟ್ ಕಳಚಿ ಪೋತಣ್ಣೋರಾಗ್ಲಿ, ಅವರ ಮಹಿಷಾಸುರನಾಗ್ಲೀ ಕಾನೂನು ಬಾಹಿರವಾಗಿ ನಡೆದುಕೊಂಡಿಲ್ಲ. ಸೆಕ್ಸಾಗ್ಲೀ, ಲವ್ವಾಗ್ಲೀ ಪ್ರತಿಯೊಂದು ಜೀವಿಯ ಬೇಸಿಕ್ ಇನ್ಸ್ಟಿಕ್ಟು.. ಇದರಲ್ಲಿ ಪವಿತ್ರತೆ, ಅಪವಿತ್ರತೆಯ ಪ್ರಶ್ನೆಯೇ ಬರೊಲ್ಲ.. ಅವನನ್ನು ಎಗರಿಸಿಕೊಂಡು ಹೋಗಿರೋ ಪುಣ್ಯಕೋಟಿ ಮಠದ ರಾಧೆಯ ಮೇಲೆ ನಾನೇ ಒಂದು ಕೌಂಟರ್ ಕೇಸ್ನ ಫೈಲ್ ಮಾಡ್ತೀನಿಎಂದೊಡನೆ ಎಫ್ ಟೀವಿ ಬಾತ್ಮೀದಾರ ಇನ್ಡೈರೆಕ್ಟಾಗಿ ಮಠದ ಮೇಲೆ ಕೇಸಾಕ್ತಿದಂತಾಗೊಲ್ವೇ?ಎಂದು ಪ್ರಶ್ನೆ ಹಾಕಿಬಿಡುವುದೇ.. ಯಾಕೆ ಹಾಕಬಾರ್ದು.. ಅಂಥೋಣಿ.. ಅವರಿಗವರ ಪ್ರಾಣಿಗಳ ಹಿತರಕ್ಷಣೆ ಮುಖ್ಯ.. ಸೆಗಣಿ, ಗಂಜಳ ಬಳಿಯೋರ ಮೇಲೆ ಸರ್ಕಾರಿ ವಕೀಲರು ಖಟ್ಲೆ ಹಾಕಿರುವಾಗ, ಕನಸು ಮನಸಿನಲ್ಲೂ ಬಳಿಯದಿರೋರ್ಯಾಕ ಹಾಜರಾಗಬಾರ್ದು..
ವೈಜ್ಞಾನಿಕವಾಗಿ ನೋಡಿದ್ರೆ ಹಸೂಗಿಂತ ಎಮ್ಮೆನೇ ಗ್ರೇಟು ಕಣ್ರೀ..ಎಂದೊಡನೆ ಎಲ್ಲರೂ ನಕ್ಕರು. ಪ್ರತಿಧ್ವನಿ ದೈನಿಕದ ವರದಿಗಾರ ದಯಾನಿಧಿ ನಗರದ ಹೃದಯ ಭಾಗದಲ್ಲಿದ್ದು ಸಾರ್ವಜನಿಕರಿಗೆ ಕಿರಿಕಿರಿ ಮಾಡ್ತಿದೇಂತ ಗೌಳೇರ ಹಟ್ಟೀನ ವಕ್ಕಲೆಬ್ಬಿಸಲಿಕ್ಕೆ ಸರ್ಕಾರ ಯೋಚಿಸ್ತಿದೆಯಲ್ಲ.. ಇದ್ಕೆ ಏನು ಹೇಳ್ತೀರಿ?ಎಂದು ಕೇಳಿದ, ಅದಕ್ಕೆ ವಕೀಲರು ಗುರುಗುಂಟೇಪಾಳ್ಯದಲ್ಲಿ ನೂರಾರೆಕರೆ ಬೇನಾಮಿ ಆಸ್ತಿ ಮಾಡ್ಕೊಂಡಿರೋ ಮೇಸ್ತ್ರಿ ಪರಂಧಾಮಯ್ಯನವ್ರೀಗೆ ಇದೇ ರೀತಿ ನೋಟೀಸು ಕೊಡ್ಲಿ ಮೊದ್ಲು.. ಅವರಿಗೆ ಹೇಗೆ ದಿವಾನ್ ಚಕ್ರಧರ ಪಟ್ಟಾ ಕೊಟ್ಟಿರುವರೋ ಹಾಗೆಯೇ ದಿವಾನ್ ವೆಂಕಟಾಚಲಯ್ಯನೋರು ನಮ್ಮ ಪೋತ್ರಾಜಣ್ಣೋರ ಪೂರ್ವಜರಿಗೆ ಪಟ್ಟಾ ಕೊಟ್ಟಿದ್ದಾರ್ರೀ, ಅದೂ ಮಹರಾಜ್ರ ಆದೇಶದ ಮೇರೆಗೆ.. ಜೇಪಿನಗರಗಳ ಕಿಚನ್ಗಾರ್ಡನ್ಗಳಿಗೆ ಇವರ ಸೆಗಣಿ, ಗಂಜಳ ಬೇಕು, ಅವರ ಬೆಡ್ಕಾಫಿಗೆ ಇವರ ಹಾಲುಹೈನ ಬೇಕು.. ಆದರಿಂಥೋರ್ನ ಜೇಪಿ ನಗರದಿಂದ ಒಕ್ಕಲೆಬ್ಬಿಸುವುದೆಂದರೆ ಹುಡುಗಾಟಾನ.. ಕಾನೂನು ಕಣ್ಣು ಮುಚ್ಚಿಕೊಂಡು ಹಾಲು ಕುಡಿತೀಲ್ಲ.. ನೆನಪಿಡಿಎನ್ನುತ್ತಲೇ ಬೀಪಿ ಮಾತ್ರೆ ಸೇವಿಸಿದರು.
ಹೌದು!.. ವಕೀಲರು ಹೇಳಿದ್ದು ಸರಿ. ಎರಡು ನೂರುವರ್ಷಗಳ ಹಿಂದೆ ಆಂಧ್ರದ ನೆಲ್ಲೂರಿನಿಂದ ಪೋತರಾಜುರವರ ಹಿರಿಯರು ತಮ್ಮ ಪಶುಸಂಪತ್ತಿನೊಂದಿಗೆ ವಲಸೆ ಬಂದು ಅರಮನೆಗೆ ಕ್ಷೀರೋತ್ಪನ್ನ ಸರಬರಾಜು ಮಾಡಿ ಮಹಾರಾಜರ ಪ್ರೀತಿ ಸಂಪಾದಿಸಿದರು. ಕ್ಷೀರಸಾಗರ ಎಂಬ ಬಿರುದನ್ನೂ, ನಗರಕ್ಕಂಟಿಕೊಂಡಂತಿದ್ದ ಕುಂಬಳಗುಂಟೆಯಲ್ಲಿ ಎರಡೆಕರೆ ಜಾಗವನ್ನೂ ದಾನದ ರೂಪದಲ್ಲಿ ನೀಡಿದರು. ಅದೇ ಜೇಪಿನಗರದ ಆರನೆಯ ಮತ್ತು ಏಳನೆಯ ವಾರ್ಡ್ ಗಳ ನಡುವೆಯಿರುವ ಗೌಳೇರಪಾಳ್ಯವು. ಅಲ್ಲಿನ ಪ್ರತಿಯೊಂದು ಮನೆಯ ಜೀವನಾಧಾರ ಎಮ್ಮೆ, ಕೋಣಗಳು, ಆದರೆ ಎಲ್ಲರಿಗಿಂತ ಅತಿ ಹೆಚ್ಚು ಮಹಿಷ, ಮಹಿಷೆಗಳಿರುವುದು ಪೋತರಾಜನ ಎರಡು ಮೂರೆಕರೆ ವಿಸ್ತೀರ್ಣದ ಕೊಟ್ಟಿಗೆಯಲ್ಲಿ. ಕೋಣಗಳ ನಿರ್ವಿರಾಮ ರತಿಕೃಷಿಯಿಂದಾಗಿ ವರ್ಷದಿಂದ ವರ್ಷಕ್ಕೆ ಪಶುಸಂಪತ್ತು ವೃದ್ಧಿಸುತ್ತಲೇ ಇರುವುದು. ಹೆಚ್ಚುವರಿ ರಾಸುಗಳನ್ನು ನಾಡಿನ ಹಲವು ಕಡೆ ಸಾಗಿಸಿ ಮಾರಾಟ ಮಾಡುತ್ತಿದ್ದರೂ ಪಶು ಸಂಖ್ಯೆ ಕ್ಷೀಣಿಸಿಲ್ಲ, ‘ಗೋಸೇವಾ ದುರಂಧರ’ ಎಂಬ ಬಿರುದನ್ನು ಕಳೆದ ವರ್ಷವಷ್ಟೆ ಗಳಿಸಿರುವ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಶಾಸಕರ ಮನೆಗಳ ಹಿತ್ತಲೊಳಗೆ ಮಂದನೆಯ ಹಾಲು ಹಿಂಡುತ್ತಿರುವವು ಪೋತರಾಜ ಕೃಪಾಪೋಷಿತ ಎಮ್ಮೆಗಳೇ.. ಎಮ್ಮೆಗಳ ಲಾಲನೆ-ಪಾಲನೆ ವಿಷಯದಲ್ಲಿ ಪೋತರಾಜು ಕಟ್ಟುನಿಟ್ಟು, ಪಶುಸಂಗೋಪನಾ ಮಂತ್ರಿಗಳು ಸೇರಿದಂತೆ ಪಶು ವಿಶ್ವವಿದ್ಯಾಲಯದ ಕುಲಪತಿ, ಪ್ರಾಧ್ಯಾಪಕರೆಲ್ಲ ಗೌಳೇರಪಾಳ್ಯಕ್ಕೆ ಖುದ್ದ ಆಗಮಿಸಿ ಪೋತರಾಜನಿಂದ ಸಲಹೆ ಸೂಚನೆ ಪಡೆದು ಹೋಗುತ್ತಿರುವುದುಂಟು. ಆತನನ್ನು ತಮ್ಮ ಯುನಿವರ್ಸಿಟಿಗಳಿಗೆ ಬರಮಾಡಿಕೊಂಡು ಸತ್ಕರಿಸಿರುವುದು ಸುಳ್ಳಲ್ಲ. ಅಂಥ ಪೋತರಾಜ ಒಡೆಯನಾಗಿರುವ ಗೌಳೇರಪಾಳ್ಯವನ್ನು ಒಕ್ಕಲೆಬ್ಬಿಸುವುದೆಂದರೇನು?
ಆತನ ಔರಸಪುತ್ರ ಮಹಿಷಾಸುರನನ್ನು ಗುಂಡಿಕ್ಕಿ ಕೊಲ್ಲುವಂತೆ ಆದೇಶ ನೀಡಿರುವುದೆಂದರೇನು?.. ಆತನಲ್ಲಿ ಕಳೆದೇಳೆಂಟು ವರ್ಷಗಳಿಂದ ತ್ರಿಕರಣಪೂರ್ವಕವಾಗಿ ಕೆಲಸ ಮಾಡುತ್ತಿರುವ ಹಾಲಪ್ಪನನ್ನು ಬಂಧಿಸುವ ಸಲುವಾಗಿ ಆರೆಸ್ಟ್ ವಾರೆಂಟ್ ಹೊರಡಿಸಿರುವುದೆಂದರೇನು?.. ಗೃಹಖಾತೆ ಹೇರಿದ್ದ ನಿರ್ಬಂಧಗಳನ್ನು ಲೆಕ್ಕಿಸದೆ ಗೋಹಿತರಕ್ಷಣಾ ಸಮಿತಿಯ ಸಾವಿರಾರು ಕಾರ್ಯಕರ್ತರು ಜೇಪಿ ನಗರದ ಎಂಟ್ರೆನ್ಸಿನಲ್ಲಿ ಪ್ರತಿಭಟಿಸುತ್ತಿದ್ದುದು ಕ್ಷೀಣವಾಗಿ ಕೇಳಿಬರುತಲಿತ್ತು. ಮೂಗುದಾರ, ಗುಣಿಕೆಗಳನ್ನು ಆಯುಧದೋಪಾದಿಯಲ್ಲಿ ಹಿಡಿದು ಕಾಯುತ್ತಿದ್ದ ನೂರಾರು ಗವುಳಿಗರಿರದಿದ್ದಲ್ಲಿ ಅವರೆಲ್ಲ ಪೋತರಾಜನ ಕೊಟ್ಟಿಗೆಯನ್ನು ಮುತ್ತಿ ದಾಂಧಲೆ ನಡೆಸದೆ ಇರುತ್ತಿರಲಿಲ್ಲ.
ಮಾಧ್ಯಮದವರು ಹಾಲಪ್ಪನ ಸಂದರ್ಶನ ಪಡೆಯುವುದಾಗಿ ಪಟ್ಟು ಹಿಡಿದರು. ಏನು ನಡೆಯಿತೆಂಬುದು ಸಮಸ್ತ ನಾಗರಿಕರಿಗೆ ತಿಳಿಯದಿದ್ದರೆ ಹೇಗೆ?.. ಪೋತರಾಜು ಓಯ್ ಹಾಲಪ್ಪೋ.. ಎಂದುಕು ಭಯಪಡ್ತಾವು.. ರಾ.. ನಾನ್ನ ರಾಎಂದು ಕೂಗಿದ ಬಳಿಕವೇ ಹಾಲಪ್ಪ ಗಡಗಡ ನಡುಗುತ್ತ ಕಾವಲ ನಡುವೆ ಹೊರಬಂದು ಹಾಜರಾದನು. ಈ ಮಣಕನ ಮುಟ್ಟಿ ಪ್ರಮಾಣ ಮಾಡಿ ಹೇಳ್ತೀನ್ರೀ, ಇದರಲ್ಲಿ ನಮ್ಮ ಮಹಿಷಾಸುರಂದೇನು ತಪ್ಪಿಲ್ಲ..ಎಂದು ಪ್ರವರ ಆರಂಭಿಸಿದ. ಆತನ ಹೇಳಿಕೆಯಂತೆ..

****
ಶಾಲಾ ಕಾಲೇಜುಗಳು ಬೇರೆಯಲ್ಲ, ಪೋತರಾಜೂನ ದನದ ಕೊಟ್ಟಿಗೆಯೂ ಬೇರೆಯಲ್ಲ. ಇಂತಿಷ್ಟು ತರಗತಿಗಳು, ಇಂತಿಷ್ಟು ಲೀಡರುಗಳು. ಎಲ್ಲರಿಗಿಂತ ಏಕರಿಕೆ ದೇಕರಿಕೆ ವಿಷಯದಲ್ಲಿ ಹಾಲಪ್ಪ ಒಂದು ಕೈ ಮಿಗಿಲು. ತನ್ನ ತರಗತಿಯ ಚುತುಷ್ಪಾದಿಗಳಂತೂ ಶಿಸ್ತಿನ ಸಿಪಾಯಿಗಳೇ ಸರಿ. ಕಾರಣ ಅವನು ಅವಕ್ಕೆ ತೋರಿಸುತ್ತಿರುವ ಪ್ರೀತಿ. ತನ್ನ ಒಂದೊಂದು ಎಮ್ಮೆಗೂ ಅವನು ಸುಂಕಲಿ, ಚವುಡಿ, ಗವುರಿ, ಚಂಡಿ, ಚಾಮುಂಡಿ, ದುರುಗಿ ಎಂಬಿವೇ ಮೊದಲಾದ ಹೆಸರುಗಳನ್ನಿಟ್ಟಿರುವನು. ತಾನೆಂಥ ರಿಂಗ್ಮಾಸ್ತರನೆಂಬುದಕ್ಕೆ.. ಏಯ್ ದುರುಗಿ ಲೆಫ್ಟಿಗೆ ತಿರುಕ್ಕೋ ಎಂದರೆ ಅದು ಲೆಫ್ಟೇ.. ಏಯ್ ಚವುಡಿ ರೈಟಿಗೆ ಸರುಕ್ಕೋ ಎಂದರೆ ರೈಟಿಗೆ ಸರಿದುಕೊಳ್ಳಲೇ ಬೇಕು.. ಆ ದಿವಸವೇನೋ ತಾನು ಎಂದಿನಂತೆ ತನ್ನ ಆಜ್ಞಾನುವರ್ತಿಗಳನ್ನು ಬನ್ನೇರುಘಟ್ಟದ ಕೊನೆಯಲ್ಲಿರುವ ಬಿಬಿಎಂಪಿ ಗ್ರೌಂಡಿಗೆ ಡ್ರೈವ್ ಮಾಡಿಕೊಂಡೊಯ್ದು ಮೇಯಿಸಿಕೊಂಡು ಬರಬೇಕೆಂದುಕೊಂಡಿದ್ದನು. ಆದರೆ ಅವು ಇನ್ಫೋಸಿಸ್ ಪ್ರಹರಿ ಗೋಡೆಯೊಳಗಿದ್ದ ಜರ್ಮನ್ ತಳಿಯ ಲಾನ್ ನೋಡಿ ಜೊಲ್ಲು ಸುರಿಸಲಾರಂಭಿಸಿದ್ದೂ ಅಲ್ಲದೆ ಒಳ ನುಗ್ಗಲೆತ್ನಿಸಿ ದೊಡ್ಡ ರಂಪಾಟಕ್ಕೆ ಕಾರಣವಾದವು. ವಾಚ್ಮನ್ನ ಕೈಯಲ್ಲಿದ್ದ ಕೋವಿಗೂ ಕೇರ್ ಮಾಡದೆ ಅವು ಅತಿಕ್ರಮಣ ಮಾಡಲಿದ್ದಾಗ ನೂರಾರು ಸಾಫ್ಟ್ವೇರ್, ಹಾರ್ಡ್ವೇರ್ ತರುಣರು ಜಮಾಯಿಸಿ ಇಂಗ್ಲೀಷಿನಲ್ಲಿ ಠಸ್ಸಾಪುಸ್ಸಾ ಎಂದು ಗಲಾಟೆ ಮಾಡದಿದ್ದಲ್ಲಿ ಅವೆಲ್ಲ ನುಗ್ಗಿ ಏನೇನು ಧಾಂಧಲೆ ನಡೆಸುತ್ತಿದ್ದವೇನೊ.. ಮಹಿಷಾಸುರ ಡುರುಕಿ ಹಾಕಿ ಎಚ್ಚರಿಸದಿದ್ದಲ್ಲಿ ಅವು ಹಿಂದಕ್ಕೆ ತಿರುಗಿಕೊಳ್ಳುತ್ತಿರಲಿಲ್ಲವೇನೋ.. ನಿನ್ನೆ ವಿಪ್ರೋ, ಮೊನ್ನೆ ಡೆಲ್ಲು, ಇವತ್ತು ಇನ್ಫೋಸಿಸ್ಸೂ.. ಈ ಕಂಪನಿಗಳು ತಾವು ಬೆಳೆಸುವ ಹುಲ್ಲನ್ನು ತಾವೂ ತಿನ್ನಂಗಿಲ್ಲ, ಮೂಕ ಪ್ರಾಣಿಗಳಿಗೆ ತಿನ್ನಲಿಕ್ಕೂ ಬಿಡೋದಿಲ್ಲ, ತನ್ನ ತಲೆ ಮೊಸರುಗಡಿಗೆಯಾಗದೆ ಇರಲಿಲ್ಲ.
ಅವು ಹಿಂದಕ್ಕೆ ತಿರುಗಿ ಸರ್ಕಲ್ಲಿಗೆ ಬಂದೊಡನೆ ತಾನು ಸ್ಟಾಪ್..ಲೆಫ್ಟ್ ಟರ್ನ್ ಎಂದು ಆಜ್ಞೆ ಮಾಡಿದನಾದರೂ ಪ್ರಯೋಜನವಾಗಲಿಲ್ಲ. ಮಹಿಷಾಸುರ ತನ್ನ ಅನುಮತಿಗಾಗಿ ಕಾಯದೆ ಅವುಗಳನ್ನು ವಿಲ್ಸನ್ಗಾರ್ಡನ್ ಕಡೆ ಡ್ರೈವ್ ಮಾಡಿಕೊಂಡು ಹೊರಟುಬಿಡುವುದೆ.. ನಿಮಾನ್ಸ್ವರೆಗೆ ಅವು ಶಿಸ್ತುಬದ್ದವಾಗಿ ನಡೆದವೇನೋ ಸರಿ, ಆದರೆ ಅಲ್ಲಲ್ಲಿ ಟ್ರಾಫಿಕ್ಜಾಂ ಸಂಭವಿಸದೆ ಇರಲಿಲ್ಲ. ದುಬಾರಿ ವಾಹನಗಳೊಳಗಿನ ಕಿಮ್ಮತ್ತಿನ ಮಂದಿಯೂ, ಅವರ ಮಕ್ಕಳೂ.. ಓಹೋ ಬಫೆಲೋ.. ಹ್ಹಾಹ್ಹಾ ಬೈಜನ್ನೂ.. ಉದ್ಗಾರಗಳೋ ಉದ್ಗಾರಗಳು.. ಕಾರಣ ಅದೇ ಮೊದಲ ಸಲ ಅವು ಗಗನಚುಂಬಿ ಕಟ್ಟಡಗಳನ್ನು ನೋಡಿ ವಿಸ್ಮಯಗೊಳ್ಳುತ್ತಿರುವುದು, ಕಾರ್ಪೋರೇಟ್ ಮಂದಿಯ ಪೈಕಿ ಬಹಳಷ್ಟು ಮಂದಿ ಅದೇ ಮೊದಲ ಸಲ ಅವುಗಳನ್ನು ಕಣ್ಣಾರೆ ನೋಡುತ್ತಿರುವುದು!.. ತನಗೂ ಇದು ತಾಜಾ ಅನುಭವ.. ಕಾರಣ ತಾನ್ಯಾವತ್ತು ಸಿಟಿಯ ಅಂತರಂಗವನ್ನು ಪ್ರವೇಶಿಸಿರಲಿಲ್ಲ. ತಮ್ಮ ಕಮ್ಯಾಂಡೆಂಟ್ ಹಾಲಪ್ಪನನ್ನು ಮುಂದ ಮುಂದಕ್ಕೆ ನಡೆಸಿಕೊಂಡೊಯ್ದವು. ಡಬ್ಬಲ್ರೋಡು, ರಿಚಮಂಡ್ಸರ್ಕಲ್ಲು, ಕ್ವೀನ್ಸ್ರೋಡಿವೇ ಮೊದಲಾದ ಕಡೆ ಸಾಗೀ ಸಾಗಿ ಅವೆಲ್ಲ ತಲುಪಿದ್ದ ಸ್ಯಾಂಕಿ ಕೆರೆಯನ್ನು.

ಮೊದಲೇ ತಾವೆಲ್ಲ ಮಹಿಷೆ, ಮಹಿಷಗಳು, ಅಷ್ಟೊಂದು ನೀರು ಕಂಡರೆ ಸುಮ್ಮನಿರಲಾಗುವುದೇ, ಅಷ್ಟೊಂದು ಹಚ್ಚಹಸಿರ ಹುಲ್ಲು ಕಂಡರೆ ಸುಮ್ಮನಿರಲಾಗುವುದೇ.. ಜಲಕ್ರೀಡೆ, ರತಿಕ್ರೀಡೆ ಬಳಿಕ ಕೆಲವು ನೀರೊಳಗೂ, ಕೆಲವು ಹಸಿರ ಮೆತ್ತೆಯ ಮೇಲೂ.. ವಾಯುವಿಹಾರಕ್ಕೋ, ಮಧುಚಂದ್ರಕ್ಕೋ, ಕಾಲಕ್ಷೇಪಕ್ಕೋ ಅಗಮಿಸಿದ್ದ ಅನೇಕರು ಅವುಗಳ ಲೀಲಾವಿನೋದದಿಂದ ಅಪಾರ ಮನರಂಜನೆ ಪಡೆಯುತ್ತಾ ಪಡೆಯುತ್ತ ಅಂತಿಮವಾಗಿ ಪರಿಸರ ನಾಶವಾಗುತ್ತಿರುವುದೆಂದು ಕನಲತೊಡಗಿದರು. ಅಲ್ಲದೆ ಹೊತ್ತು ಇಳಿಮುಖವಾಗಲಾರಂಭಿಸಿತ್ತು. ತಾವಿರುವ ದಿಕ್ಕೇ ಬೇರೆ, ತಾವು ತಲುಪಬೇಕಿರುವ ದಿಕ್ಕೇ ಬೇರೆ.. ಉಂಡ ಬುತ್ತಿಯ ಬಟ್ಟಲನ್ನು ಕೆರೆಯ ನೀರಲ್ಲಿ ತೊಳೆದುಕೊಂಡ ಬಳಿಕ ಹಾಲಪ್ಪ ಮಹಿಸಾಸುರ.. ಹೊತ್ತಾತು, ಎಲ್ಲಾರು ಸಜ್ಜಾಗಿ ಹೊಂಡ್ರಿ..ಎಂದು ಮನವಿ ಮಾಡಿಕೊಂಡೊಡನೆ ಎಲ್ಲ ಚತುಷ್ಪಾದಿಗಳು ಸುತ್ತಮುತ್ತಲಿಂದ ಆಗಮಿಸಿ ಸಜ್ಜಾಗಿ ಗುಂಪು ಸೇರಿದವು.
ಮಹಿಷನ ಸುಂದರ ಕಪ್ಪು ಮೂತಿ ನೇವರಿಸುತ್ತ ನಂಗೆ ದಾರಿ ತಿಳಿಯಾಕಿಲ್ಲ ಕಣಯ್ಯಾ.. ಏಳು ಗಂಟೆ ಹೊತ್ಗೆ ನೀನೆ ಉತ್ತಿ ಮುಟ್ಸಿ ಪುಣ್ಯಕಟ್ಕೊಳ್ಳಯ್ಯಾ..ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಳ್ಳದೆ ಇರಲಿಲ್ಲ. ಅದಕ್ಕೆ ಪ್ರತಿಯಾಗಿ ಅದು ತಲೆಯನ್ನಲ್ಲಾಡಿಸಿ ನೀನೊಂದೆ ತಿಕಬಾಯಿ ಮುಚ್ಕೊಂಡು ಹಿಂದೆ ಬಾ ಕಣಣ್ಣಾ.. ನಾನೆಲ್ಲ ಕರ್ಕೊಂಡೋಯ್ತೀನಿ..ಎಂದು ತನ್ನ ಭಾಷೆಯಲ್ಲಿ ಸಮಾದಾನ ನೀಡಿತು, ಜೊತೆಗೆ ಹಿಂಬಾಲಕರಿಗೆ ಟ್ರಾಫಿಕ್ನ ನೀತಿನಿಯಮಾವಳಿ ಕುರಿತಂತೆ ಕೆಲವು ಸಲಹೆ ಸೂಚನೆಗಳನ್ನು ತಾನು ನೀಡದೆ ಇರಲಿಲ್ಲ. ಡುರುಕೊ ಡುರುಕೋ ಎಂದು ಸ್ಯಾಂಕಿ ಕೆರೆಗೆ ಅಲ್ವಿದಾ ಹೇಳಿ ಅವು ರಸ್ತೆಯಂಚಿಗೆ ಬಂದು ದಕ್ಷಿಣಾಭಿಮುಖವಾಗಿ ಹೆಜ್ಜೆ ಹಾಕಲಾರಂಭಿಸಿದವು. ಲಿಡೋ ಚಿತ್ರಮಂದಿರದ ಅವಶೇಷ ದಾಟಿ ಎಂಜಿ ರಸ್ತೆಯನ್ನು ತಲುಪಿದವೋ ಇಲ್ಲವೋ..
ದೂರದಲ್ಲೆಲ್ಲೋ ನುಡಿಯುತ್ತಿರುವ ಹತ್ತಾರು ವಾದ್ಯಗಳ ಸದ್ದು, ರಸ್ತೆಯ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಖುದ್ದ ಪೋಲಿಸ್ ಕಮಿಷನರ್ ಸಾಹೇಬರೇ ನೂರಾರು ಮಂದಿ ಪೋಲಿಸರ ನೆರವಿನೊಂದಿಗೆ ಸುರಕ್ಷತೆಯನ್ನು ಪರಿವೇಕ್ಷಿಸುತ್ತಿದ್ದರು. ಸರ್ಕಲ್ನಲ್ಲಿದ್ದ ಟ್ರಾಫಿಕ್ಪೋಲಿಸ್ ಎಷ್ಟೇ ಕೈ ತೋರಿಸಿದರೂ, ಸೀಟಿ ಬಜಾಯಿಸಿದರೂ ಲೆಕ್ಕಿಸದೆ ಚತುಷ್ಪಾದಿಗಳು ಒಂದೇಟಿಗೆ ನುಗ್ಗಿ ಕಮಿಷನರ್ ಗಮನ ಸೆಳೆದವು. ಅವರು ಅವುಗಳನ್ನು ನಿಯಂತ್ರಿಸುವ ಸಲುವಾಗಿ ಐದಾರು ಮಂದಿ ಕನಿಷ್ಠಬಿಲ್ಲೆಗಳೊಂದಿಗೆ ಅಬಡಾದಬಡಾ ನುಗ್ಗಿದರೂ ಪ್ರಯೋಜನವಾಗಲಿಲ್ಲ. ಎಮ್ಮೆಗಳ ನಡುವೆ ಅವಿತುಕೊಂಡು ಹೆಜ್ಜೆ ಹಾಕುತ್ತಿದ್ದ ಹಾಲಪ್ಪನನ್ನು ಎಳೆದು ತಂದು ಪೋಲಿಸನೊಬ್ಬ ಹಾಜರುಪಡಿಸಿದ. ಸಾಹೇಬರು ಅವನ ಮುಖವನ್ನು ದಿಟ್ಟಿಸಿ ನೋಡಿ ಬಾಸ್ಟರ್ಡ್ , ಕೌಹಾರ್ಡ್ ಎಂಬಿವೇ ಮೊದಲಾದ ಬಯ್ಗಳಿಂದ ಥಳಿಸಿ ಭೋಸೂಡ್ಕೆ.. ಈ ಬಫೆಲೋಸ್ನೆಲ್ಲ ಮರ್ಯಾದೆಯಿಂದ ಹೊಡಕೊಂಡು ಹಿಂದಕ್ಕೆ ಹೋಗಲಿಲ್ಲಾಂದ್ರೆ ಒದ್ದು ಒಳಗಾಕಿಬಿಡ್ತೀನಿಎಂದು ರೋಫ್ ಹಾಕಿದರು. ನಿಕ್ಕರನ್ನು ಒದ್ದೆ ಮಾಡಿಕೊಂಡಿದ್ದ ಅವನಲ್ಲಿ ಮರು ಜವಾಬಿರಲಿಲ್ಲ. ತಲೆಯನ್ನಲ್ಲಾಡಿಸಿ ಅವನು ಮಹಿಷನ ಕಿವಿಯೊಳಗೆ ಅಲವತ್ತುಕೊಳ್ಳದೆ ಇರಲಿಲ್ಲ, ಅರ್ಥ ಮಾಡಿಕೊಂಡ ಅದು ತನ್ನ ಭಾಷೆಯಲ್ಲಿ ಏನು ಹೇಳಿತೆಂಬುದು ತಿಳಿಯದು, ಆದರೆ ಅವೆಲ್ಲ ಹಾದಿಬದಿಯಲ್ಲಿ ಸಾಲಾಗಿ ನಿಂತು ಟ್ರಾಫಿಕ್ಕಿಗೆ ಸಹಕರಿಸಿದವು. ಅವೆಲ್ಲವುಗಳ ಮುಂದೆ ನಿಂತುಕೊಂಡ ಮಹಿಷವು ಪರಿಸ್ಥಿತಿಯನ್ನು ಕೂಲಂಕಷ ಪರಿಶೀಲಿಸಲಾರಂಭಿಸಿತು, ಜೊತೆಗೆ ಗೋವಳಿಗ ಮೈಸಿರಿಯ ಹಾಲಪ್ಪನೂ ಸಹ..
ಅಲ್ಲಲ್ಲಿ ಪುಣ್ಯಕೋಟಿ ಮಠಕ್ಕೆ ಸಂಬಂಧಿಸಿದ ಆಕರ್ಷಕ ಜಾಹಿರಾತುಗಳು ಬೇರೆ, ಒಂದರ ಹಿಂದೊಂದರಂತೆ ಕಾರುಗಳು ಒಂದೇ ಎರಡೇ.. ಅವುಗಳಿಂದ ಇಳಿದು ಬರುತ್ತಿದ್ದ ಗಂಡಸರೋ, ಹೆಂಗಸರೋ, ಅವರೆಲ್ಲರ ಕೈಗಳಲ್ಲಿದ್ದ ಪೂಜಾ ಸಾಮಾಗ್ರಿಗಳೋ, ಹೂವಿನ ಹಾರಗಳೋ, ತಮ್ಮಂಥ ವಿಐಪಿಗಳು ಯಕ:ಶ್ಚಿತ್ ಎಮ್ಮೆ, ಕೋಣಗಳ ನಡುವೆ ನಿಲ್ಲುವುದೆಂದರೇನು!.. ಅವರಿಗೂ, ಪೋಲಿಸರ ನಡುವೆ ನಡೆದ ಮಾತಿನ ಚಕಮಕಿ ಚತುಷ್ಪಾದಿಗಳಿಗೆ ಅರ್ಥವಾಗದೆ ಇರಲಿಲ್ಲ. ನಾವು ಕರೆಯುವ ಹಾಲು ಹೈನ ಉಂಡು ನಮ್ಮನ್ನೇ ಬಯ್ಯುತ್ತಿರುವರಲ್ಲಾ.. ಅವೆಲ್ಲ ಒಳಗೊಳಗೆ ಕುದಿಯದೆ ಇರಲಿಲ್ಲ. ‘ಕಾಲದ ಮಹಿಮೆ, ಅನ್ನೋದನ್ನು ಅನ್ನಿಸಿಕೊಂಡು ತೆಪ್ಪಗಿರಿ, ಇಲ್ದಿದ್ರೆ ನಮ್ಮ ಹಾಲಪ್ಪಗೆ ಪೋಲಿಸರ ಕೈಯಿಂದ ಒದೆ ಬೀಳೋದಂತು ಗ್ಯಾರಂಟಿ’ಎಂದು ಮಹಿಷ ಕಣ್ಸನ್ನೆ ಮೂಲಕ ಸೂಚನೆ ನೀಡದಿದ್ದಲ್ಲಿ ಅವುಗಳೆಲ್ಲ ಸಾಂಘಿಕವಾಗಿ ಪ್ರತಿಭಟಿಸದೆ ಇರುತ್ತಿರಲಿಲ್ಲ.
ವಿಷಮ ಪರಿಸ್ಥಿತಿ ನಡುವೆಯೂ ಕೆಲವರು ತಮ್ಮ ಕಂಕುಳಲ್ಲಿದ್ದ ಮಕ್ಕಳಿಗೆ ಅವುಗಳನ್ನು ತೋರಿಸುತ್ತ ‘ದಟೀಜ್ ಬಫೆಲೋ, ದಿಸೀಜ್ ಬೈಜನ್ನೂ’ ಎಂದು ಹೇಳಿಕೊಡುವುದರ ಜೊತೆಗೆ ಅವುಗಳನ್ನು ಮುಟ್ಟಿ ರೋಮಾಂಚನಗೊಳಿಸುತ್ತಿದ್ದರೂ ಸಹ. ಈ ಎಲ್ಲಾ ಮನರಂಜನೆ ನಡುವೆ ಅಲ್ಲಲ್ಲಿ ಕೆಲವರು ಪುಣ್ಯಕೋಟಿ ಮಠದ ಶ್ರೀಗಳ ಮತ್ತು ಮೆರವಣಿಗೆಯ ಕೇಂದ್ರಬಿಂದು ರಾಧೆ ಎಂಬ ಹದಿಹರೆಯದ ಪವಿತ್ರ ಹಸು ಕುರಿತಂತೆ ಕೆಲವು ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತ ತಮ್ಮೊಳಗಿನ ಅಗಾಧ ಪಾಂಡಿತ್ಯವನ್ನು ಮೌಖಿಕವಾಗಿ ಪ್ರದರ್ಶನಕ್ಕಿರಿಸಿದ್ದುದು ಸೋಜಿಗದ ಸಂಗತಿಯಾಗಿತ್ತು, ಹೌದು.. ಅವರೆಲ್ಲರ ಮಾತುಕತೆಯೊಳಗೆ ವಾಸ್ತವ ಅತಿರಂಜನೀಯವಾಗಿತ್ತು.
*****
ಕೂಡ್ಲಿಗಿ ಮತ್ತು ಗುಡೇಕೋಟೆ ವಳಿತದಲ್ಲಿನ ಕುದುರೆಡವು, ಗೊಲ್ಲರಹಟ್ಟಿ, ನರಸಿಂಹಗಿರಿ, ಲಾಡಕನಬಾವಿಯೇ ಮೊದಲಾದ ಹಳ್ಳಿಗಳು ಹಲವು ಶತಮಾನಗಳಿಂದ ಅಸ್ಥಿತ್ವದಲ್ಲಿದ್ದವಷ್ಟೆ, ಅಲ್ಲಿನ ಯಾವತ್ತೂ ಮಂದಿಯು ದನಕರುಗಳನ್ನು ಕಟ್ಟಿಕೊಂಡು ಅನಾದಿಕಾಲದಿಂದ ಜೀವನ ಸಾಗಿಸುತಲಿದ್ದರಷ್ಟೆ, ಆದರೆ ಕಳೆದ ದಶಕದ ಹಿಂದೆ ಸನ್ಯಾಸಿಯೊಬ್ಬರು ತಪಸ್ಸು ಮಾಡುವ ಸಲುವಾಗಿ ಅಲ್ಲಿಗೆ ಬಂದರು, ಬಡೇಲಡಕು ಗ್ರಾಮಸ್ಥರು ಅವರಿಗೊಂದು ಗುಡಿಸಲು ನಿರ್ಮಿಸಿಕೊಟ್ಟಿದ್ದೂ ಅಲ್ಲದೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟರು, ಕೆಲವು ದಿವಸಗಳ ಕಾಲ ತಪಸ್ಸು ಮಾಡಿದ ಆ ಸನ್ಯಾಸಿಯು ಹಳ್ಳಿಗರ ಸಭೆ ಕರೆದು ತಪಶ್ಚರ್ಯೆಯಿಂದ ತಮಗಾದ ತಾಜಾ ಅನುಭವವನ್ನು ಹಂಚಿಕೊಂಡರು, ದ್ವಾಪರ ಭೀಕರ ಬರದಿಂದ ತತ್ತರಿಸಿದಾಗ ಶ್ರೀಕೃಷ್ಣ ತನ್ನ ಸಾವಿರಾರು ಗೋವುಗಳು, ಗೋಪಿಕಾಸ್ತ್ರೀಯರೊಂದಿಗೆ ಬಡೇಲಡಕುಗೆ ವಲಸೆ ಬಂದಿಲ್ಲಿಯೇ ಹಲವು ವರ್ಷಗಳ ಕಾಲ ಇದ್ದನಂತೆ.. ಅದನ್ನು ಕೇಳಿದ ಆ ಮುಗ್ದರು ಪುಳಕಿತರಾಗದಿರಲಿಲ್ಲ, ಅಲ್ಲದೆ ಅವರಿಗೆ ಎಲ್ಲಾ ಸವಲತ್ತುಗಳನ್ನು ಕಲ್ಪಿಸದೆ ಇರಲಿಲ್ಲ, ಕಾಲಚಕ್ರ ಉರುಳಿದಂತೆ ಸ್ವಾಮೀಜಿಯವರ ಆಶ್ರಮ ವಿಸ್ತಾರಗೊಳ್ಳುತ್ತ ಹೋಯಿತು, ಎಲ್ಲೆಲ್ಲಿಂದಲೋ ಸಾವಿರಾರು ಮಂದಿ ಬಂದು ಬಿಡಾರ ಹೂಡತೊಡಗಿದ ಪರಿಣಾಮವಾಗಿ.. ಬಡೇಲಡುಕು, ನರಸಿಂಹಗಿರಿಗೂ, ನರಸಿಂಹಗಿರಿಯು ಗೊಲ್ಲರಹಟ್ಟಿಗೂ, ಗೊಲ್ಲರಹಟ್ಟಿಯು ಲಾಡಕನಬಾವಿಗೂ.. ಲಾಡಕನಬಾವಿಯು ಇನ್ನೆಲ್ಲಿಗೋ..
ಅಷ್ಟೊತ್ತಿಗಾಗಲೇ ಸದರಿ ಆಶ್ರಮವು ಪುಣ್ಯಕೋಟಿ ಮಠವೆಂದು ಪ್ರಖ್ಯಾತವಾಯಿತಷ್ಟೆ, ಅದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗೋವುಗಳೋ, ಹೈಟೆಕ್ ಜೀವನ ಶೈಲಿಯನ್ನು ಅರಗಿಸಿಕೊಳ್ಳಲಾಗದೆ ಅವುಗಳು ‘ಅಂಬಾ ಅಂಬಾ’ ಎಂದು ಅರಚುತ್ತಿದ್ದುದೋ, ಅದನ್ನು ಕೇಳಿ ವಿಐಪಿಗಳು ಆನಂದಿಸುತ್ತಿದ್ದುದೋ..
ಪುಣ್ಯಕೋಟಿ ಆಶ್ರಮದಲ್ಲಿನ ಜಾಗತಿಕಮಟ್ಟದ ಬಯೋಟೆಕ್ ವಿಜ್ಞಾನಿಗಳು ಗೋವುಗಳ ಸೆಗಣಿ, ಗಂಜಳ, ಮೂತ್ರ ಕುರಿತಂತೆ ಸಂಶೋಧನೆ ನಡೆಸಿ ಅವುಗಳಲ್ಲಿ ಸಂಜೀವನಿ ಗುಣವಿರುವುದಾಗಿ ಸಾರಲು ಹಿಂದೆ ಮುಂದೆ ನೋಡಲಿಲ್ಲ, ಅದರ ಪರಿಣಾಮವಾಗಿ ಚತುಷ್ಪಾದಿಗಳು ವಿಸರ್ಜಿಸುವ ಘನ, ದ್ರವಗಳಂಥ ವಿಸರ್ಜಿತ ವಸ್ತುಗಳಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಿಮ್ಮತ್ತು ಪ್ರಾಪ್ತಿಯಾಯಿತು, ವಿಜ್ಞಾನಿಗಳಿಗಿಂತ ತಾವೇನು ಕಡಿಮೆ ಎಂದು ಭಾವಿಸಿದವರಾದ ಅಲ್ಲಿನ ಕೆಲ ದೈವಾಂಶ ಸಂಭೂತರು, ಮೂಲಭೂತವಾದಿಗಳು ಹಸುವಿನ ಯಾವ್ಯಾವ ಅಂಗದಲ್ಲಿ ಎಷ್ಟೆಷ್ಟು ದೈವಿಕ ಶಕ್ತಿಯಿರುವುದೆಂಬುದರ ಬಗ್ಗೆ ಹಲವು ಕಥೆಗಳನ್ನು ಕಟ್ಟಿ ಪ್ರಚಾರ ಮಾಡಿದ ಪರಿಣಾಮವಾಗಿ.. ಹರಿದುಬಂದ ಕಾರ್ಪೊರೇಟ್ ಮಂದಿಯ ಪೈಕಿ ಎಮ್ಮೆಲ್ಲೆ, ಎಂಪಿ, ಮಂತ್ರಿ, ಮುಖ್ಯಮಂತ್ರಿಗಳಿಲ್ಲದಿರಲಿಲ್ಲ. ಸೆಗಣಿ, ಗಂಜಳ, ಮೂತ್ರಕ್ಕೆ ಚಿನ್ನದ ಬೆಲೆ ಪ್ರಾಪ್ತವಾಯಿತಲ್ಲದೆ ಹಸುಗಳ ಅಂಗಾಂಗಗಳನ್ನು ಮುಟ್ಟಿ ಪಾವನಗೊಳ್ಳುವ ಸಲುವಾಗಿ ಕೋಟ್ಯಾಧಿಪತಿಗಳು ಸಾಲುಗಟ್ಟಿ ನಿಲ್ಲದಿರಲಿಲ್ಲ. ಹಾಗೆಯೇ ಸ್ವಾಮೀಜಿಯವರಿಗೆ ಅಮೇರಿಕಾ, ಜರ್ಮನ್, ಲಂಡನ್ ಮತ್ತಿತರ ಕಡೆಲಿಂದ ಆಮಂತ್ರಣಗಳು ಒಂದರ ಹಿಂದೊಂದರಂತೆ ಬಂದ ಪರಿಣಾಮವಾಗಿ..
ಅದರಿಂದ ಸ್ವಾಮೀಜಿಯವರ ಕನಸುಗಳು ಸಹ ಉತ್ತೇಜನಗೊಳ್ಳದೆ ಇರಲಿಲ್ಲ. ಮಾತೃ ವಾತ್ಸಲ್ಯ ವಿಹೀನ ಬಾಲಕೃಷ್ಣನಿಗೆ ಮೊಲೆಯುಣ್ಣಿಸಿದ ಹಸು ಶ್ರೀಗಳ ಕನಸಿನಲ್ಲಿ ಕಾಣಿಸಿಕೊಂಡು ಭಕ್ತಾ.. ನನ್ನ ವಂಶದ ಕುಡಿಯೊಂದು ಈ ಕುಂತಳ ಪ್ರಾಂತದಲ್ಲೆಲ್ಲೋ ಇರುವುದು, ಅದನ್ನು ಪತ್ತೆ ಹಚ್ಚಿ ಕರೆ ತಂದು ಅದನ್ನು ನಿನ್ನ ಉತ್ತರಾಧಿಕಾರಿಯನ್ನಾಗಿಸಿಕೊ…ಎಂದು ಕೇಳಿಕೊಂಡಿತೆಂದೂ, ಅದರಿಂದ ಪುಳಕಿತರಾದ ಶ್ರೀಗಳು ಪತ್ತೆ ಮಾಡುವ ಸಲುವಾಗಿ ಅದರ ಮೇಲ್ಮ್ಯೆ ಲಕ್ಷಣಗಳನ್ನು ತಿಳಿಸಿಕೊಡು ತಾಯಿಎಂದು ಅಂಗಲಾಚಿದರಂತೆ, ಅದಕ್ಕೆ ಗೋಮಾತೆಯು ಶಂಖ, ಚಕ್ರ, ಗಧೆ ಮತ್ತಿತರ ಕುರುಹುಗಳನ್ನು ವಿವರಿಸಿತಂತೆ.. ಮಾರನೆ ದಿವಸವೇ ಶ್ರೀಗಳ ಆದೇಶದ ಮೇರೆಗೆ ದ್ವಾಪರಯುಗದ ಪುಣ್ಯಶಾಲಿಯ ಅನ್ವೇಷಣಾ ಕಾರ್ಯ ಆರಂಭಗೊಂಡು ಹಲವು ಮಾಸಗಳ ಪರ್ಯಂತ ನಡೆಸಿತಂತೆ, ಕೊನೆಗೆ ಅಂಥದ್ದೊಂದು ಚಿಹ್ನೆಗಳನ್ನು ಮೈಮೇಲೆ ಮುಡಿದುಕೊಂಡಿದ್ದ ಕರು ಪತ್ತೆಯಾದದ್ದು.. ಕೇಳಿದೊಡನೆ ಮಾಲಕ ಮಾಂಸದ ವ್ಯಾಪಾರಿ ಬಷೀರ್ಅಹ್ಮದ್ ಏ ಮೇರಾ ಬಚ್ಚೀ ಹೈ ಸಾಬ್.. ಮೈ ನಹಿಂ ದೇತೂಎಂದು ಹಠ ಮಾಡಿದ, ಕೊನೆಗೆ ಮುಖ್ಯಮಂತ್ರಿಗಳು ಮಾಡಿಕೊಂಡ ಮನವಿ ಮೇರೆಗೆ..
ಬದರಿ, ಕೇದಾರ, ಪುರಿ ಮತ್ತಿತರ ಕಡೆಯ ಪೀಠಾಧಿಪತಿಗಳ, ಪ್ರಮುಖ ಉದ್ದಿಮೆದಾರರ, ದೇಶವಿದೇಶಗಳ ಗಣ್ಯ ಅತಿಥಿಗಳ, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರುಗಳ ಸಮಕ್ಷಮದಲ್ಲಿ ಕರುವಿಗೆ ರಾಧೆ ಎಂದು ವಿದ್ಯುಕ್ತವಾಗಿ ನಾಮಕರಣ ಮಾಡಲಾಯಿತು. ಖರ್ಜೂರ, ಉತ್ತುತ್ತಿ, ದ್ರಾಕ್ಷಿ, ಬಾದಾಮಿ, ಕಲ್ಲು ಸಕ್ಕರೆಯೇ ಮೊದಲಾದ ಷೋಡಸೋಪಚಾರದಿಂದಾಗಿ ಕರು ಹರೆಯಕ್ಕೆ ಬಂದದ್ದಾಗಲೀ, ಋತುಮತಿಯಾದದ್ದಾಗಲೀ, ಅದು ‘ನನಗೂ ಒಂದು ಗಂಡು ನೋಡಿ ಮದುವೆ ಮಾಡಿರೋ’ ಎಂದು ಅಲವತ್ತಕೊಳ್ಳಲಾರಂಭಿಸಿದ್ದಾಲೀ. ರೋಮ್ಯಾಂಟಿಕ್ ಎನ್ನಬಹುದಾದ ಕನಸುಗಳನ್ನು ಕಾಣತೊಡಗಿದ್ದಾಗಲೀ..
ಯಾವುದಾದರು ಜವಾರಿ ಹೋರಿ ಹಾರಿ ಅಪವಿತ್ರಗೊಳಿಸಿದರೇನು ಗತಿ ಎಂದು ಯೋಚಿಸಿ ಆಶ್ರಮದ ಆಡಳಿತಾಧಿಕಾರಿಗಳು ಭದ್ರ ಕಾವಲಿರಿಸಿ ಅದರ ಲೈಂಗಿಕ ಸ್ವಾತಂತ್ರ್ಯವನ್ನು ಮೊಟಕುಗೊಳಸಿದರು. ದೈವಿಕ ಲಕ್ಷಣಗಳುಳ್ಳ ಹೋರಿಗಾಗಿ ಹುಡುಕಾಟ ಆರಂಭಿಸಿದರು. ಆದರೆ ಆ ಸಲ್ಲಕ್ಷಣ ಹೋರಿಯು ಈ ನಶ್ವರ ಪ್ರಪಂಚದಲ್ಲಿರಬೇಕಲ್ಲ!..
ಸರ್ಕಾರದ ಆಸ್ಥಾನ ಜ್ಯೋತಿಷಿ ಅಳಸಿಂಗಾಚಾರ್ಯರು ಪ್ರಭುತ್ವದ, ಪ್ರಜೆಗಳ ಸುಭಿಕ್ಷತೆ ದೃಷ್ಟಿಯಿಂದ ರಾಧೆಯನ್ನು ರಾಜ್ಯದಾದ್ಯಂತ ಮೆರವಣಿಗೆ ಮಾಡಿಸಿದರೊಳಿತೆಂದು ಸರ್ಕಾರಕ್ಕೆ ಸಲಹೆ ನೀಡಿದರು. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಸಚಿವ ಸಂಪುಟ ಹಲವು ಕೋಟಿಗಳನ್ನು ಅದಕ್ಕೆ ಮೀಸಲಿರಿಸಿತಲ್ಲದೆ ರಾಧೆಯನ್ನು ಮೆರವಣಿಗೆ ಮಾಡಿಸಲು ನಿರ್ಧರಿಸಿತು ಐತಿಹಾಸಿಕವಾಗಿ. ಅದರಂತೆ ನೆಲಮಂಗಲದಿಂದ ಆರಂಭಗೊಂಡ ಮೆರವಣಿಗೆಯು ಎಂಜಿ ರಸ್ತೆಯನ್ನು ಪ್ರವೇಶಿಸಿದಾಗ ಅದೇ ತಾನೆ ಮಧ್ಯಾಹ್ನ ದಾಟಿತ್ತು.
*****
ಜನವೋ ಜನ, ಹತ್ತಾರು ಜಾನಪದ ಕಲಾತಂಡಗಳು, ನೂರಾರು ಋತ್ವಿಕ್ಕುಗಳು, ರಾಧಮ್ಮಳ ದರ್ಶನ ಪಡೆದವರಿಗೆ ಯಾವ್ಯಾವ ಪುಣ್ಯಗಳು ಲಭಿಸುವವು ಎಂಬ ವಿವರಗಳನ್ನು ಸಾರುವ ಧ್ವನಿವರ್ಧಕಗಳು ಅಲ್ಲಲ್ಲಿ, ಭಕ್ತಿಪೂರ್ವಕವಾಗಿ ನೃತ್ಯ ಮಾಡುತ್ತಿರುವ ಮಿಲಿಯೇರ್ಸ್ ಕುಟುಂಬದ ಸ್ತ್ರೀರತ್ನಗಳು.. ದಾರಿಯುದ್ದಕ್ಕೂ ಹಾಸುತ್ತಿರುವ ಕಂಚಿ, ದರ್ಮಾವರಂನ ಪೀತಾಂಬರ ಸೀರೆಗಳು, ರಾಧೆಯ ಬಲಬದಿಯಲ್ಲಿ ಮುಖ್ಯಮಂತ್ರಿಗಳು, ಎಡಬದಿಯಲ್ಲಿ ಧರ್ಮಾದಾಯ ಶಾಖೆಯ ಆಮಾತ್ಯರು, ಅಲ್ಲಲ್ಲಿ ಆಡಳಿತಾರೂಢ ಪಕ್ಷದ ಮುಖಂಡರುಗಳು.. ಅದೆಲ್ಲವನ್ನೂ ನೇರಪ್ರಸಾರ ಮಾಡಲು ಎರಡು ಕೋಟಿಗೆ ಗುತ್ತಿಗೆ ಹಿಡಿದಿರುವ ಎಫ್ಟೀವಿಯ ಕ್ಯಾಮೆರಾಮನ್ನುಗಳು.. ರಸ್ತೆ ಇಕ್ಕೆಲದಲ್ಲಿ ‘ಭೋಲೋ ರಾಧಮ್ಮಾಕೂ ಜೈ’ ಎಂಬ ಹರ್ಷೋದ್ಗಾರಗಳು.. ಅಲ್ಲದೆ ಅಲ್ಲಲ್ಲಿ ಸುರಿಯುತ್ತಿರುವ ಹೂವಿನ ಮಳೆಯು.. ಆದರೆ ರಾಧೆಯ ಮುಖದಲ್ಲಿ ಗೆಲುವಿರಲಿಲ್ಲ, ಆದರೆ ಅದು ಆಸೆಗಣ್ಣುಗಳಿಂದ ಸುತ್ತಮುತ್ತ…
ನಿಧ ನಿಧಾನವಾಗಿ ಚಲಿಸುತ್ತಾ.. ಚಲಿಸುತ್ತಾ ಮೆರವಣಿಗೆ ಸಿಂಫೋನಿ ದಾಟಿತು, ಸಿಂಹಸದೃಶರೀತಿಯ ಡುರುಕಿಯೊಂದು ಕೇಳಿಸಿದೊಡನೆ ರಾಧೆ ಕತ್ತು ತಿರುಗಿಸಿ ಹುಡುಕಾಡಿತು, ಅಲ್ಲಿಯೇ ಎಡಬದಿಯಲ್ಲಿ ನಿಂತಿದ್ದ ಮಹಿಷಾಸುರ ಅದರತ್ತ ನೋಡಿ ಮತ್ತೊಮ್ಮೆ ಡುರುಕಿ ಹಾಕಿ ಅದರ ಗಮನವನ್ನು ತನ್ನತ್ತ ಸೆಳೆದ. ನೋಡುತ್ತದೆ, ಶ್ಯಾಮಲವರ್ಣದ, ಸದೃಡ ಶರೀರದ ಅಜಾನುಬಾಹು..ಬಿದಿಗೆ ಚಂದ್ರಾಮನನ್ನು ಹೋಲುತ್ತಿರುವಂಥ ಸಮಪ್ರಮಾಣದ ಜೋಡಿ ಕೊಂಬುಗಳು ಬೇರೆ.. ನೋಡಿದೊಡನೆ ತನ್ನೊಳಗೆ ಸಾವಿರ ರೆಕ್ಕೆಗಳನ್ನು ಮುಡಿದ ಸ್ತ್ರೀತನ, ಸರ್ರಂತ ಸ್ಖಲಿಸುತ್ತಿರುವ ತನ್ನ.. ಇನ್ನು ಸುಮ್ಮನಿರಕೂಡದು ತಾನು..
ಹತ್ತಿರ ಬಂದೊಡನೆ ರಾಧೆ ರಥದ ಮೇಲಿಂದ ಠಣ್ಣನೆ ಜಿಗಿದದ್ದಾಗಲೀ, ಅವರೆಡೂ ಜಿಕ್ಕೋತ.. ಜಿಕ್ಕೋತ ಓಡಿ ಮರೆಯಾಗಿದ್ದಾಗಲೀ..
****
ಕೇಳಿದೊಡನೆ ಪೋತರಾಜು ಶಹಬ್ಬಾಷ್ ಮಹಿಷಾಸುರ ಎಂದು ಉದ್ಗರಿಸದೆ ಇರಲಿಲ್ಲ. ಹಾಗೆಯೇ ಇಡೀ ಸರ್ಕಾರ ನನಗೆ ಎದರು ಬಿದ್ದರೂ ಚಿಂತೆಯಿಲ್ಲ, ನಾನವರಿಬ್ಬರನ್ನು ಹುಡುಕಿಸಿ ಮದುವೆ ಮಾಡಿ ಮನೇನ ತುಂಬಿಸಿಕೊಳ್ತೀನಿ.. ಬಂದದ್ದು ಬರಲಿಎಂದು ಶಪಥ ಮಾಡುವುದನ್ನು ಮರೆಯಲಿಲ್ಲ.


ಹಹ… ಇದು ಅತ್ಯಂತ ಹರಿತ ವ್ಯಂಗ್ಯ….
ಗೋವು ಮತ್ತು ಅದರ ’ಉತ್ಪನ್ನ’ಗಳ ಪೇಟೇಂಟ್ ಹಿಡಿದು ಅದರ ಕಾಪಿರೈಟೂ, ಬಿಸಿನೆಸ್ಸೂ ತನ್ನದೇ ಎಂದು ಹಾರಾಡುವ ಮಠ ಮತ್ತು ಅದರ ಭಕ್ತವರ್ಗದಲ್ಲಿನ ರಾಜಕಾರಣಿಗಳೂ….. ಇರುವದನ್ನೆಲ್ಲಾ ನಿರವಯವ(Inorganic)ಗೊಳಿಸಿ, ಎಲ್ಲವನ್ನೂ ಕೃತ್ರಿಮಗೊಳಿಸುತ್ತಿರುವ ವ್ಯವಸ್ಥೆಯೂ….
ಬಿತ್ತುವ ಬೀಜದಿಂದ ಮೊದಲುಗೊಂಡು ತಿನ್ನುವ ಆಹಾರದವರೆಗೆ; ಕಾಯಿ ಹಣ್ಣಾಗುವ, ಮೊಟ್ಟೆ ಮರಿಯಾಗುವ, ಎಲ್ಲ ಬಗೆಯ ಪ್ರಾಣಿಗಳೂ ಹುಟ್ಟುವ, ಬೆಳೆಯುವ, ತಮಗಿಷ್ಟವಾದವರೊಡನೆ ’ಕೂಡು’ವ, ಕೊನೇಪಕ್ಷ ನೆಮ್ಮದಿಯಿಂದ ಸಾಯುವ ಎಲ್ಲ ಅವಕಾಶಗಳನ್ನೂ ಈ ಮನುಷ್ಯನೆಂಬ ಪ್ರಾಣಿ ಕಿತ್ತುಕೊಂಡಿದ್ದಾನೆ…
ಕಥೆಯಲ್ಲಿ ಬರುವ ರಾಧೆ ಮತ್ತು ಅವಳ ಮೆರವಣಿಗೆಯ ವಿವರಗಳನ್ನು ಓದುತ್ತ ಓದುತ್ತ, ಭೈರಪ್ಪನವರ ’ಜಲಪಾತ’ ಕಾದಂಬರಿಯಲ್ಲಿ ಬರುವ ಮುಂಬೈನ ಬಾಂದ್ರಾ ಕಸಾಯಿಖಾನೆಯೆ ವಿವರಗಳೂ ಆಯಾಚಿತವಾಗಿ ನೆನಪಿಗೆ ಬರುತ್ತವೆ…
nice story
ಕುಂವಿಯವರ ಕತ್ತರಿಸಿ ಕೊಯ್ಯೂವ ಮೊನಚು, ಅನೇಕ ಆಯಾಮಗಳ ಕಥೆ -ಅದರ editing ನಿಂದಾಗಿ ಪದರು ಪದರಾಗಿ ಬಿಚ್ಚಿಕೊಳ್ಳುತ್ತಾ ,ವಿಡಂಬನೆಯಿಂದ ವಿಜ್ರಂಭಿಸುತ್ತ ಉದ್ಯಾನನಗರಿಯಲ್ಲಿ ವಿಹರಿಸಿದೆ -ಮಹಿಷಾರಾಧನೆ ಎಂಬ ಹೊಸ ಹಬ್ಬ ಶುರು ಮಾಡಬಹುದು ಆ ಪವಿತ್ರ ದಿನದಿಂದ.
-ಅನಿಲ ತಾಳಿಕೋಟಿ