ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಕಥೆ : 'ನ್ಯೂ ಭಾರತ್ ಟಾಕೀಸ್'


ನಿಲುಗನ್ನಡಿ ನಾಲ್ಕು ಅಡಿಗಿಂತ ಹೆಚ್ಚು ದೂರವಿರಲಿಲ್ಲ, ವೃದ್ಯಾಪ್ಯದಿಂದಾಗಿಯೋ, ಪಾದರಸದ ಅಲ್ಲಲ್ಲಿ ಅಳಿಸಿರುವ ಕಾರಣಕ್ಕೋ ‘ನ್ಯೂ ಭಾರತ್ ಟಾಕೀಸ್’ ಚಿತ್ರಮಂದಿರದ ಪ್ರತಿಬಿಂಬ ಅಸ್ಪಷ್ಟವಾಗಿರುವುದು. ವಿವಿಧ ಅಂತರದಿಂದ ನೋಡಿದರು, ಆದರೂ ಹೆಚ್ಚು ಸ್ಪಷ್ಟವಾಗಿ ಗೋಚರಿಸಲಿಲ್ಲ. ಕಣ್ಣುಗಳು ದಣಿದವು, ಅವುಗಳನ್ನು ಮುಚ್ಚಿ ಪುನಃ ಮೆಲ್ಲಗೆ ತೆರೆದರು. ತಮ್ಮ ಸ್ಮರಣೀಯ ಕಟ್ಟಡವನ್ನು ನೋಡಿದರೇನೆ ಸಮಾಧಾನ. ಪುನಃ ನೋಡಲು ಪ್ರಯತ್ನಿಸಿದರು. ಅದು ಇರುವುದೇ ಒಂದು, ಗೋಚರಿಸುತ್ತಿರುವುದೇ ಇನ್ರ್ನೆಂದು. ಪ್ರತಿಬಿಂಬಕ್ಕೆ ಸಂಬಂಧಿಸಿದಂತೆ ಅದು ತನ್ನ ಕ್ರಿಯಾಕಲಾಪ ಕಳೆದುಕೊಂಡಿತ್ತು.
ತಮ್ಮ ದುರಾಸೆಯ ಮಕ್ಕಳೆಲ್ಲಿ ಅದನ್ನು ಜೆಸಿಬಿ ಯಂತ್ರಗಳಿಂದ ವಿರೋಪಗೊಳಿಸಿರುವರೋ! ಆತಂಕಕ್ಕೊಳಗಾದರು. ಕಣ್ಣುಗಳ ದಣಿವು ದೇಹದಾದ್ಯಂತ ಸಾಂಕ್ರಾಮಿಕಗೊಂಡಿತು. ತಲೆ ಸುತ್ತುತ್ತಿರುವಂಥ ಅನುಭವ. ಏಳಲು ಕೈಕಾಲುಗಳಲ್ಲಿ ಶಕ್ತಿ ಇಲ್ಲ, ತಾವೆಲ್ಲಿ ಬೀಳುವೆವೋ! ಇಚ್ಛಾಶಕ್ತಿಯಿಂದ ಅನತಿದೂರದಲ್ಲಿದ್ದ ಕುರ್ಚಿಯನ್ನು ಪ್ರಯಾಸಪಟ್ಟು ಸಮೀಪಿಸಿದರು, ಅದರ ಮೇಲ್ತುದಿಯನ್ನು ಅಂತೂ ಹಿಡಿದರು, ಉಸಿರನ್ನು ದೀರ್ಘವಾಗಿ ಎಳೆದುಕೊಂಡು ಶಕ್ತಿಯನ್ನು ಸಂಚಯಿಸಿಕೊಂಡರು.
ಮಗ ತಮಗೆ ವಾಸ್ತವ್ಯ ಕಲ್ಪಿಸಿರುವುದು ಮಹಡಿಯ ಎರಡನೇ ಕೋಣೆಯಲ್ಲಿ, ಅದೂ ಚಿತ್ರಮಂದಿರಕ್ಕೆ ಅಭಿಮುಖವಾಗಿ. ರೆಪ್ಪೆಗಳ ಸಹಾಯದಿಂದ ಕಣ್ಣೀರನ್ನು ಮರೆಮಾಚಿ ಇಷ್ಟಾದರೂ ಮಾಡಿರೋ ಎಂದು ಕೇಳಿಕ್ಕೊಂಡಿದ್ದಕ್ಕೆ. ನಿಧಾನವಾಗಿ ಸಾವರಿಸಿಕೊಂಡು ನಡೆದು ಮಂಚವನ್ನು ಸಮೀಪಿಸಿದರು. ತಮ್ಮೆರಡೂ ದುರ್ಬಲ ಕೈಗಳನ್ನು ಊರುಗೋಲಾಗಿ ಪರಿವತರ್ಿಸಿ ಊರಿ ಅದರ ಮೇಲೆ ಒರಗಿದರು. ಬಸವಳಿದಿದ್ದ ಮುಖವನ್ನು ಎದೆಯ ಭಾಗಕ್ಕೆ ತಗ್ಗಿಸಿ ತುಸು ಮೇಲೆತ್ತಿದರು. ಸಂಧ್ಯಾಸಮಯದ ಸೂರ್ಯನ ಕಿರಣಗಳು ಪಶ್ಚಿಮ ದಿಕ್ಕಲ್ಲಿದ್ದ ಕಿಟಿಕಿ ಮೂಲಕ ನೇರವಾಗಿ ನಿಲುಗನ್ನಡಿ ಮೇಲೆ ಬಿದ್ದು ತಮ್ಮ ಮುಖದ ಮೇಲೆ ಪ್ರತಿಫಲಿಸಿದ್ದವು. ತಮ್ಮ ಇಳಿಗಣ್ಣುಗಳಿಗೆ ಆ ಬೆಳಕನ್ನು ಸಹಿಸುವ ಶಕ್ತಿ ಇರಲಿಲ್ಲ.
ಸಂಜೆಯ ಸೂರ್ಯ ಕನ್ನಡಿಯಲ್ಲಿ ಕಾಣಿಸಿಕೊಂಡಿದ್ದ, ಅದೂ ತನ್ನ ಮೂಲಸ್ವರೂಪ ಕಳೆದುಕೊಂಡು. ತಮ್ಮ ವೃದ್ಯಾಪ್ಯಕ್ಕೆ, ಅಸಹಾಯಕತೆಗೆ ಹೊಸವ್ಯಾಖ್ಯಾನ ಬರೆದಿದ್ದ, ತುಸು ಸಮಯದ ಬಳಿಕ ನಿಧಾನವಾಗಿ ಕ್ಷೀಣಿಸಿದ. ಮಬ್ಬುಮಿಶ್ರಿತ ಬೆಳಕು ತಮಗೆ ಕಾರಿರುಳಂತೆ ಭಾಸವಾಯಿತು. ರೆಪ್ಪೆಗಳು ಪರಸ್ಪರ ಅಂಟಿಕೊಂಡವು. ಹಿಂದಕ್ಕೊರಗಿ ಎದೆ ಮೇಲೆ ತಮ್ಮೆರಡೂ ಕೈಗಳನ್ನಿರಿಸಿ ನಿದ್ದೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸಿದರು, ಆದರೆ ಸಾಧ್ಯವಾಗಲಿಲ್ಲ. ಗತಕಾಲದ ನೆನಪುಗಳು ತಮ್ಮನ್ನು ನೆಮ್ಮದಿಯಿಂದ ನಿದ್ದೆಮಾಡಲು ಬಿಟ್ಟರೆ ತಾನೆ!
ರೆಪ್ಪೆಗಳ ನಿರ್ಬಂಧ ಲೆಕ್ಕಿಸದೆ ಹನಿಗಳು ಒಂದರ ಹಿಂದೊಂದರಂತೆ ಉರುಳಿ ಗುಳಿಗಲ್ಲದ ಸುಕ್ಕುಗಳಲ್ಲಿ ನೆಲೆಗೊಂಡವು, ಅದರ ಪರಿವು ತಮಗಿರಲಿಲ್ಲ, ಕೈಮಗ್ಗದ ಹೆಗಲ ವಸ್ತ್ರದಿಂದ ಅದನ್ನು ಒರೆಸಿಕೊಂಡು ನಿಚ್ಚಳವಾಗಲು ತಾವು ಪ್ರಯತ್ನಿಸಲಿಲ್ಲ. ಗದ್ಗತಿದರಾದರು, ಇನ್ನೇನು ಬಿಕ್ಕಳಿಸಲು ಸನ್ನದ್ಧರಾದರು. ಅಷ್ಟರಲ್ಲಿ ಸ್ಟೇರ್ ಕೇಸಿನ ಮೇಲೆ ಯಾರೋ ಬರುತ್ತಿರುವಂಥ ಸದ್ದು! ಅವರು ಯಾರಿರಬಹುದು! ಆತಂಕಗೊಂಡರು. ಬರುವ ವ್ಯಕ್ತಿ ತಮ್ಮನ್ನು ದುರ್ಬಲ ಎಂದು ಭಾವಿಸಿದರೆ! ಪುನಃ ಪ್ರಯಾಸಪಟ್ಟು ಎದ್ದು ಮಂಚದಿಂದ ಆರಾಂಛೇರ್ ಕಡೆ ಸ್ಥಳಾಂತರಗೊಂಡರು. ಅದು ಸೊಸೆಯದ್ದಾಗಿದ್ದರೆ ಗೆಜ್ಜೆಯ ಸದ್ದು ಕೇಳಿಸಬೇಕಿತ್ತು! ಮಗನದ್ದಾಗಿದ್ದರೆ ನಡೆಗೆಗೆ ಯೌವನ ಸಹಜ ವೇಗವಿರಬೇಕಿತ್ತು! ಅವರಿಬ್ಬರು ತಮ್ಮ ಕ್ಷೇಮಲಾಭ ವಿಚಾರಿಸದೆ ಎಷ್ಟು ಕಾಲವಾಯಿತೋ! ಆದರೆ ಮೇಲೆ ಬರುತ್ತಿರುವ ವ್ಯಕ್ತಿ ತನ್ನ ಪ್ರತಿಯೊಂದು ಹೆಜ್ಜೆಯನ್ನು ತಡವರಿಸುತ್ತ, ಎಲ್ಲಿ ಬೀಳುವೆನೋ ಎಂದು ಅಂಜುತ್ತ ನಡೆಯುತ್ತಿರುವಂತಿದೆ. ಪ್ರಾಯಶಃ ಆತ ತನ್ನ ಅನುಗಾಲದ ಗೆಳೆಯ ಗಫೂರ್ ಇರಬಹುದೆ!
ಸದ್ದನ್ನು ಆಲಿಸುತ್ತಿದ್ದಂತೆ, ನೋಡುನೋಡುತ್ತಿದ್ದಂತೆ ಬಾಗಿಲಿಂದೀಚೆ ಅಸ್ಪಷ್ಟ ನೆರಳು ಕಾಣಿಸಿಕೊಂಡಿತು. ಬಳಿಕ ದೇಹ ನಿಚ್ಚಳಗೊಂಡು ಗಫೂರ್ ಒಡಮೂಡಿದ. ತುಸುಬಾಗಿದ ತನ್ನಷ್ಟೆ ಎತ್ತರನೆ ದೇಹ, ಹಲವು ಗೆರೆಗಳಿಂದಲಂಕೃತ ವಿಶಾಲ ನೊಸಲು, ಪೊದೆಹುಬ್ಬುಗಳ ಕೆಳಗಿರುವ ಕಣ್ಣುಗಳು, ನೀಳನಾಸಿಕ, ಜೋಲು ಎದೆಯನ್ನು ಮರೆಮಾಚುವಲ್ಲಿ ವಿಫಲವಾಗಿರುವ ನಿಲುವಂಗಿ, ಮೊಣಕಾಲವರೆಗಿನ ನೀಳದೋಳುಗಳು ಈ ಸಲ್ಲಕ್ಷಣಗಳನ್ನು ಗುರುತಿಸಿ ನೆಮ್ಮದಿಯ ಉಸಿರುಬಿಟ್ಟರು. ಗಫೂರ್ ಏನನ್ನೋ ಗೊಣಗುತ್ತ ತನ್ನ ಚೀಲದಿಂದ ಉಪಯುಕ್ತ ದಿನಿಸುಗಳನ್ನು ಒಂದೊಂದಾಗಿ ತೆಗೆದು ಟೇಬಲ್ ಮೇಲೆ ಹರವಿದರು. ಬಾಡಿದ್ದ ಮೊಸುಂಬಿ ಹಣ್ಣನ್ನು ಕೈಯಲ್ಲಿ ಹಿಡಿದುಕೊಳ್ಳುತ್ತ ವಾಸುದೇವರಾವ್ ಕಡೆಗೆ ನೋಡಿದರು. ಸ್ಥೂಲದೇಹವನ್ನು ಸಹಿಸುವ ಶಕ್ತಿ ಅವರು ಕೂತಿರುವ ಆರಾಂಛೇರಿಗೆ ಇದೆಯೋ ಇಲ್ಲವೋ! ಸಂದೇಹ ತಾಳಿದರು. ರಾಯರ ದೇಹದ ಎಡಭಾಗ ನಿಷ್ಕ್ರಿಯಗೊಳ್ಳದೇ ಇದ್ದಲ್ಲಿ ತಾವು ಆರಾಂಛೇರಿನ ಕಾರ್ಯಕ್ಷಮತೆ ಕುರಿತು ಯೋಚಿಸುತ್ತಿರಲಿಲ್ಲ. ಅವರು ಕೂತಿರುವರೇನೋ ನಿಜ!
ಸಕ್ಕರೆಖಾಯಿಲೆಯೊಂದಿಗೆ ರಕ್ತದೊತ್ತಡ, ದೇಹದ ಎಡಭಾಗ ಲಘುಪಾಶ್ರ್ವವಾಯುವಿಗೆ ತುತ್ತಾಗಿರುವುದು ಬೇರೆ. ಅಗತ್ಯಕ್ಕಿಂತ ವೇಗವಾಗಿ ಕೃಶಗೊಂಡಿರುವ ಶರೀರ. ಬಿದ್ದಲ್ಲಿ ದುರ್ಬಲ ಎಲುಬುಗಳು ಮುರಿಯುವ ಸಂಭವ ಹೆಚ್ಚು, ಆದಷ್ಟು ಬೀಳದಂತೆ ನೋಡಿಕೊಳ್ಳುವುದೊಳಿತೆಂದು ಡಾ. ನರಹರಿ ಹೇಳಿದ್ದರು ನಿಟ್ಟುಸಿರುಬಿಡುತ್ತ, ತಮ್ಮ ಮುಂಗೈಯ ಗಡಿಯಾರ ನೋಡಿಕೊಳ್ಳುತ್ತ. ತಮ್ಮನ್ನು ಪ್ರತ್ಯೇಕವಾಗಿ ಮೂಲೆಗೆ ಕರೆದೊಯ್ದು ರಾಯರು ಸದಾ ಪ್ರಸನ್ನಚಿತ್ತರಾಗಿರುವಂತೆ ನೋಡಿಕೊಳ್ಳಬೇಕೆಂದೂ, ಅವರ ಮನಸ್ಸಿನಿಂದ ಆದಷ್ಟು ಚಿತ್ರ ಮಂದಿರ ತೊಲಗಿದರೆ ಒಳಿತೆಂದೂ ಹೇಳಿದ್ದರು. ತಮ್ಮೆಲ್ಲರಿಗೂ ತಿಳಿದಿರುವಂತೆ ಆದು ಕಷ್ಟಸಾಧ್ಯ. ಆದರೆ ಪತ್ನಿ ವಸುಂಧರಮ್ಮರ ಮಗನೆದೆಯಲ್ಲಿ (ನ್ಯಾಯಾಲಯ ನೀಡಿದ ತೀರ್ಪಿನ ಪರಿಣಾಮವಾಗಿ ತಮ್ಮ ಆಪ್ತವಲಯದಲ್ಲಿ ಜರಾಸಂಧನೆಂದೇ ಜನಪ್ರಿಯವಾಗಿರುವನು) ಪಿತೃವಾತ್ಸಲ್ಯ ಕಿಂಚಿತ್ತಾದರೂ ಇದ್ದಲ್ಲಿ ತಮ್ಮ ರಾಯರು ಶರಶಯ್ಯೆಯ ಪಾಲಾಗುತ್ತಿರಲಿಲ್ಲ. ತಮಗೆ ನೆನಪಿರುವಂತೆ…
ಆ ದಿವಸ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಹಲವರು ಆತನನ್ನು ಭೆಟ್ಟಿಯಾಗಿದ್ದರು. ಅಯ್ಯಾ ಗೋಪಾಲ, ಅವರು ಬೇರೆಯವರೇನೊ! ನಿನ್ನ ಹೆತ್ತ ತಂದೆ ಕಣಯ್ಯಾ, ಅವರು ಬದುಕಿರೋವರೆಗೂ ಚಿತ್ರಮಂದಿರದ ಗೊಡವೆ ಹೋಗಬೇಡವೋ! ಎಂದು ಕೇಳಿದ್ದರು. ಅದಕ್ಕೆ ಅವನು ಕಪಾಟಿನಿಂದ ಕಡತವನ್ನು ತೆಗೆದು ಅವರ ಮುಂದೆ ಹರಡಿದ್ದ, ಇದಕ್ಕೆ ಏನಂತೀರಿ? ಎಂದು ಪ್ರಶ್ನಿಸಿದ್ದ. ರಾಯರು ತಾವು ಗತಿಸಿದ ಬಳಿಕ ತಮ್ಮ ಯಾವತ್ತೂ ಸ್ಥಿರಾಸ್ತಿ ಸರ್ವೋದಯ ಸಂಘಕ್ಕೆ ಸೇರತಕ್ಕದ್ದೆಂದು ಬರೆದ ವಿಲ್ ಅದಾಗಿತ್ತು. ಸಂಘದ ಸದಸ್ಯರು ಪರಸ್ಪರ ಮುಖ ನೋಡಿಕೊಂಡು ನಿಟ್ಟುಸಿರುಬಿಟ್ಟಿದ್ದರು. ಸಂಘದ ಇನ್ನೋರ್ವ ಸದಸ್ಯನೂ, ಗಾಂಧೀಜಿಯ ನಿಕಟವರ್ತಿಯೂ ಆದಂಥ ವಟ್ಟಂ ಸುಬ್ಬಣ್ಣ ಸ್ವಾತಂತ್ರ್ಯ ಹೋರಾಟಗಾರರಾದವರಿಗೆ ಇಷ್ಟು ಸ್ವಾತಂತ್ರ್ಯವಿಲ್ಲವೇನಯ್ಯಾ! ಅವರ ಆಸ್ತಿ ಅವರ ಇಷ್ಟ, ವಿಲ್ ಬರೆಯುವ ಹಕ್ಕು ಅವರಿಗಿದೆ, ಬರೆದಿದ್ದಾರೆ ಅದರಲ್ಲಿ ತಪ್ಪೇನು? ಎಂದು ಅವರು ಮಾತು ಮುಗಿಸುತ್ತಿದ್ದಂತೆ ಅವರ ಎಡಬದಿಯಲ್ಲಿದ್ದ ಫಾ.ಅಂಥೋಣಿ ಚಿತ್ರಮಂದಿರ ಕೇವಲ ಕಟ್ಟಡವಲ್ಲವೋ ಗೋಪಾಲ, ಅದರಲ್ಲಿಯೇ ಅವರ ಪ್ರಾಣವಿರೋದು ಎಂದು ಒತ್ತಿ ಹೇಳಿದರು.
ಆ ಗಣ್ಯರೀರ್ವರೂ ತನಗೆ ತೀರ್ಥರೂಪ ಸಮಾನರೆ. ಸ್ವಾತಂತ್ರ್ಯ ಹೋರಾಟಗಾರರಾದ ಅವರು ಸ್ವಾತಂತ್ರ್ಯೋತ್ತರ ರಾಜಕೀಯರಂಗವನ್ನು ಪ್ರವೇಶಿಸಿ ಎರಡುಮೂರು ತಲೆಮಾರುಗಳು ಕುಳಿತುಂಡರೂ ಸವೆದಷ್ಟು ಸ್ಥಿರಾಸ್ತಿ ಚರಾಸ್ತಿ ಸಂಪಾದಿಸಿರುವಂಥವರೆ. ಆದರೆ ಅವರಲ್ಲಿ ಯಾರೊಬ್ಬರೂ ತಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ವಿನಿಯೋಗಿಸಿದವರಲ್ಲವೇ ಅಲ್ಲ, ಅವರಿಗೆ ಹೋಲಿಸಿದರೆ ತಮ್ಮ ತಂದೆ ಎಷ್ಟೋ ವಾಸಿ. ಯೋಚಿಸಿದಾದ ಬಳಿಕ ಗೋಪಾಲ ಚಿತ್ರಮಂದಿರವಿರುವ ಕಟ್ಟಡ ಅವರ ಸ್ವಯಾರ್ಜಿತ, ಅದನ್ನು ಅವರು ತೆಗೆದುಕೊಳ್ಳಲಿ, ಆದರೆ ಅದಿರುವ ಜಮೀನು ನಮ್ಮ ತಾತ ವೆಂಕೋಬರಾಯರಿಗೆ ಸೇರಿದ್ದು ತಾನೆ! ಅದಕ್ಕೆ ನಾನು ಹಕ್ಕುದಾರ ಎಂದು ಕಾನೂನು ರೀತ್ಯಾ ಹೇಳಿದ. ಅದನ್ನು ಕೇಳಿ ಅವರೆಲ್ಲ ತುಟಿಯ ಮೇಲೆ ಬೆರಳಿರಿಸಿಕೊಂಡರು. ಮೌನ ಆವರಿಸಿತು. ಅದಕ್ಕೆ ಏನು ಹೇಳುವುದು! ಒಬ್ಬರಿಗೂ ತಿಳಿಯಲಿಲ್ಲ. ಸಂಘದ ಇನ್ನೋರ್ವ ಹಿರಿಯ ಸದಸ್ಯರೂ, ಜ್ಯೋತಿಷ್ಯ ಶಾಸ್ತ್ರವಿದ್ಯಾಪಾರಂಗತರೂ ಆದ ರಾಘಣ್ಣ ನೀನು ಹೇಳೋದೇನೋ ಸರಿ ಗೋಪಾಲ, ಆದರೆ ನಿಮ್ಮ ತಂದೆಯವರು ಬದುಕಿರುವರಿಗಾದರೂ! ಮಾತನ್ನು ಅರ್ಧಕ್ಕೆ ನುಂಗಿದರು.
ರಾಯರ ಜಾತಕವನ್ನು ಸಾಂದರ್ಭಿಕವಾಗಿ ಪರಿಶೀಲಿಸಿರುವ ತಮಗೆ ಅವರು ಶತಾಯುಷಿಗಳೆಂದು ತಿಳಿದಿರುವ ಕಾರಣಕ್ಕೆ. ಗೋಪಾಲ ಯೋಚಿಸಿದ, ಅದು ಅವರಿಗೂ ತಿಳಿದಿರುವಂತೆ ತನಗೂ ಗೊತ್ತು, ಮೊನ್ನೆ ತಾನೆ ಸಹಸ್ರಚಂದ್ರದರ್ಶನ ಪೂರೈಸಿರುವರು. ದೈಹಿಕವಾಗಿ ಮಾನಸಿಕವಾಗಿ ಸುಸ್ಥಿತಿಯಲ್ಲಿರುವವರು, ಅವರ ಧರ್ಮಪತ್ನಿ ಆರ್ಥಾತ್ ತನ್ನ ಹೆತ್ತತಾಯಿ ಗತಿಸಿದ್ದೂ ಅವರ ಆರೋಗ್ಯವನ್ನು ಕಂಗೆಡಿಸಲಿಲ್ಲವೆಲ್ಲವೆಂದರೆ ಗಟ್ಟಿಜೀವ. ಕರ್ಮಣ್ಯೇವಾಧಿಕಾರಸ್ಥೆ ಎಂದೂ ಎಲ್ಲಾ ದೈವೇಚ್ಛೆ ಎಂದರೇ ಹೊರತು ಒಂದೇಒಂದು ಹನಿ ಕಣ್ಣೀರು ಸುರಿಸಲಿಲ್ಲ. ತಮ್ಮ ತಂದೆ ಮಾನವರೂಪಿ ವಜ್ರವೇ ಸರಿ. ಅವರು ಶತಾಯುಷ್ಯವನ್ನು ಯಶಸ್ವಿಯಾಗಿ ಪೂರೈಸುವುದೊಂದೇ ಅಲ್ಲ, ಅದಕ್ಕಿಂತ ಮುವ್ವತ್ತು ನಲ್ವತ್ತು ವರ್ಷ ಹೆಚ್ಚು ಬದುಕಿರುವುದರಲ್ಲಿ ಸಂದೇಹವಿಲ್ಲ. ಅಷ್ಟರೊಳಗೆ ಜಾಗತಿಕ ಮಾರುಕಟ್ಟೆಯಲ್ಲಿ ಏರುಪೇರಾದರೆ ತನ್ನ ವಾಣೀಜ್ಯೀಕೃತ ಕನಸುಗಳು ಏನಾಗಬೇಡ! ಎಂದು ಮುಂತಾಗಿ ಯೋಚಿಸಿದ ಗೋಪಾಲ..
ಅಯ್ಯೋ ಸ್ವಾತಂತ್ರ್ಯ ಹೋರಾಟಗಾರರಾಗಿರುವ ನೀವೆಲ್ಲ ಇರೋದು ಯಾವಕಾಲದಲ್ಲೋ! ಸ್ವಾತಂತ್ರ್ಯೋತ್ತರ ಪ್ರಥಮ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಹುಟ್ಟಿರುವ ನನ್ನಂಥವರ ಕನಸುಗಳು, ಆಸೆಆಕಾಂಕ್ಷೆಗಳು ನಿಮಗೆ ಅರ್ಥಗೋದಿಲ್ಲ. ಅವುಗಳನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವೂ ನಿಮಗಿಲ್ಲ ಎಂದು ಅವರೆಲ್ಲರ ಪುರಾತನ ಮುಖಗಳನ್ನು ಒಂದು ಕ್ಷಣ ದಿಟ್ಟಿಸಿ ನೋಡಿದಾದ ಬಳಿಕ ನಿಟ್ಟುಸಿರುಬಿಟ್ಟು ಪುನಃ ಹೇಳಿದ..
ಈಗ ಕೊಟ್ಟೂರು ಕೊಟ್ಟೂರಾಗಿ ಉಳಿದಿಲ್ಲ, ಸಿಟಿಯಾಗಿದೆ. ಈ ಮೊದಲು ಊರ ಹೊರಗಿದ್ದ ನಮ್ಮ ಟಾಕೀಸು ನಗರದ ಮಧ್ಯಭಾಗದಲ್ಲಿದೆ. ಪ್ರತಿಯೊಬ್ಬರ ಮನೆಗಳಲ್ಲಿ ಎಲ್ಸೀಡೀ ಎಲ್ಲೀಡಿ ಟೀವಿಗಳಿವೆ, ಟಾಕೀಸಿಗೆ ಬಂದು ಸಿನೆಮಾ ನೋಡಲಿಕ್ಕೆ ಯಾರೊಬ್ಬರಿಗೂ ಪುರುಸೊತ್ತು ಸಿಕ್ಕುತ್ತಿಲ್ಲ, ಒಂದೊಂದು ಶೋಗೆ ಇನ್ನೂರು ಕಲೆಕ್ಷನ್ನಾದರೆ ಹೆಚ್ಚು, ನೂರು ಕಲೆಕ್ಷನ್ನಾದರೆ ಕಡಿಮೆ. ಅದಲ್ಲದೆ ಜಾಗತಿಕ ಮಾರುಕಟ್ಟೆ ವೇಗವಾಗಿ ಬೆಳೀತಿದೆ, ಅದಕ್ಕೆ ಹೊಂದಿಕೊಳ್ಳದಿದ್ದರೆ, ಎನ್ಕ್ಯಾಷ್ ಮಾಡಿಕೊಳ್ಳದಿದ್ದರೆ ಅಮೇರಿಕಾದಲ್ಲಿ ಎಂಬೀಎ ಮಾಡೇನು ಸಾರ್ಥಕ! ಅದಲ್ಲದೆ ಹುಟ್ಟಿದ ಊರಿನ ಋಣ ತೀರಿಸೋದು ಬೇಡವೆ! ಈಗಾಗಲೆ ಅದೇ ಜಾಗದಲ್ಲಿ ಹೈಟೆಕ್ಮಾಲ್ ಕಟ್ಟಿಸಲಿಕ್ಕೆ ಎಲ್ಲಾ ತಯ್ಯಾರಿ ನಡೆಸಿದ್ದೀನಿ, ಸರ್ಕಾರ ಕೂಡ ಲೈಸೆನ್ಸ್ ಕೊಟ್ಟಿದೆ, ಲಕ್ಷಗಟ್ಟಲೆ ಖರ್ಚು ಮಾಡಿದ್ದೀನಿ, ಅದೂ ಡಾಲರ್ ಲೆಕ್ಕದಲ್ಲಿ! ನಿಮ್ಮ ಮಾತಿನಂತೆ ಯೋಜನೆ ಕೈಬಿಟ್ಟ ಪಕ್ಷದಲ್ಲಿ ಕೋಟಿಗಳ ಲೆಕ್ಕದಲ್ಲಿ ಸಾಲಗಾರನಾಗ್ತೀನಿ, ಅದಕ್ಕೆ ಯಾರು ಹೊಣೆ! ನಾನು ಆರ್ಥಿಕವಾಗಿ ದಿವಾಳಿಯಾಗುವುದು ನಿಮಗೆ ಸಮ್ಮತವಾ? ಎಂದು ತನ್ನ ಎಡಗೈಯಲ್ಲಿದ್ದ ಕರವಸ್ತ್ರದಿಂದ ಮುಖದ ಬೆವರೊರೆಸಿಕೊಂಡನು.
ಒಂದುಕ್ಷಣ ಮೌನ ಆವರಿಸಿತು, ಪರಸ್ಪರ ಮುಖ ನೋಡಿಕೊಂಡರು, ಕಣ್ಣುಗಳಿಂದ ನಿರರ್ಥಕ ಸಂಜ್ಞೆ ವಿನಿಮಯ ನಡೆಸಿದರು. ತಲಾ ಒಂದೊಂದು ನಿಟ್ಟುಸಿರುಬಿಟ್ಟರು. ಆತನ ಸುದೀರ್ಘವಿವರಣೆಯ ಸಾಧಕ ಬಾಧಕಗಳನ್ನು ಮನಸ್ಸಿನಲ್ಲಿಯೇ ಪರಿಶೀಲಿಸಿದರು. ತಮ್ಮ ಮಾತಿಗೆ ಗೌರವ ಕೊಡುವನು, ನೀವು ನಿಶ್ಚಿಂತೆಯಿಂದಿರಿ ಎಂದು ರಾಯರಿಗೆ ತಾವು ಒಕ್ಕೊರಲಿನಿಂದ ನೀಡಿದ ವಾಗ್ದಾನ ನೆನಪಿಸಿಕೊಂಡರು. ಆದರೆ ಪುರುಷಪ್ರಮಾಣ ಆಕರ್ಷಕ ನಿಲುವಿನ ಗೋಪಾಲ ತನ್ನ ಮಾತಿನ ಕೊನೆಗೆ ಇರಿಸಿದ ಪ್ರಶ್ನಾರ್ಥಕ ಚಿಹ್ನೆ ತಮ್ಮನ್ನು ಉಭಯಸಂಕಟಕ್ಕೀಡು ಮಾಡಿತು. ಎಷ್ಟಿದ್ದರೂ ಅವನು ತಮ್ಮೆಲ್ಲರ ಹೆಗಲ ಮೇಲೆ ಆಡಿ ಬೆಳೆದಿರುವ ಹುಡುಗ!
ಮಾಲೂ ಗೀಲೂ ಇವೆಲ್ಲ ನಮ್ಮಂಥ ವೃದ್ದರಿಗೆ ಅರ್ಥಗೋದಿಲ್ಲ ಗೋಪಾಲ, ಆದರೆ ಚಿತ್ರಮಂದಿರದ ಗತಿ ಏನಪ್ಪಾ? ಎಂದು ವೈಕುಂಠಂ ಶ್ರೀರಾಮುಲು ಕೇಳಿದರು.
ಕಾಲಕ್ಕೆ ತಕ್ಕಂತೆ ಸಮಾಜದ ಜೀವನ ಶೈಲಿ ಬದಲಾಗಿದೆ ಚಿಕ್ಕಪ್ಪ, ಅದಕ್ಕೆ ನಾವೆಲ್ಲ ಹೊಂದಿಕೊಳ್ಳುವುದು ಅನಿವಾರ್ಯ. ಚಿತ್ರಮಂದಿರದ ಬಗ್ಗೆ ನನಗೂ ಕಾಳಜಿ ಇದೆ, ಮಾಲ್ನ ಎರಡನೇ ಮಹಡಿಯಲ್ಲಿ ಮಲ್ಟಿಫ್ಲೆಕ್ಸ್ ನಿರ್ಮಿಸ್ಥಿದ್ದೀನಿ
ಅದಕ್ಕೆ ಇದೇ ಹೆಸರನ್ನಿಡುವಿ ತಾನೆ!
ಮಲ್ಟಿಫ್ಲೆಕ್ಸಂದರೆ ಮಲ್ಟಿಫ್ಲೆಕ್ಸು ಚಾಚಾಜಿ, ಭಾರತ ಇಂಡಿಯಾ ಇದೆಲ್ಲ ನಿಮ್ಮ ಕಾಲಕ್ಕೆ, ನಮ್ಮ ಜನರೇಷನ್ನದೇನಿದ್ದರೂ ಅಮೇರಿಕಾ ಎಂದು ರೋಲೆಕ್ಸ್ ಇದ್ದ ಮುಂಗೈಯನ್ನು ಕಣ್ಣ ಮುಂದೆ ತಂದುಕೊಂಡ. ಅದೇ ಹೊತ್ತಿಗೆ ಬೆಂಜ್ ಕಾರ್ ಎಲ್ಲಿಂದಲೋ ಆಗಮಿಸಿ ಅಲ್ಲೆಲ್ಲೋ ಪಾರ್ಕಾಯಿತು.
ಒಂದಕ್ಕಿಂತ ಹೆಚ್ಚು ಸುಳ್ಳು ಹೇಳಿದರೆ ಆಯುಷ್ಯಕ್ಕೆ ಚ್ಯುತಿ ಇಲ್ಲವೆಂಬುದು ಸಂಘದ ಬಹುಪಾಲು ಸದಸ್ಯರ ದೃಢ ನಂಬಿಕೆ. ಸುಳ್ಳು ಕಲೋಪಲಕಲ್ಪಿತ ಸಂಗತಿಗಳಿಗೆ ವೃದ್ಯಾಪ್ಯವನ್ನು ಚೇತೋಹಾರಿಯಾಗಿಸುವ ಶಕ್ತಿ ಇದೆ ಎಂದು ಮೊದಲು ಪ್ರತಿಪಾದಿಸಿದ್ದು ಕೀಶೇ ರಾಘವೇಂದ್ರರಾಯರು. ಅದನ್ನು ಉಳಿದವರೆಲ್ಲ ಕಾಯಾ ವಾಚಾ ಮನಸಾ ನಂಬಿದರು, ಅದೂ ಪರರಿಗೆ ನೋವಾಗದ ರೀತಿಯಲ್ಲಿ. ಆದರೆ ರಾಯರಿಗೆ ವರದಿವಾಚನ ಮಾಡುವಾಗ ಯಾವುದೇ ಸುಳ್ಳು ನುಸುಳದಂತೆ ಜಾಗ್ರತೆವಹಿಸಿದರು. ತಂದೆ ಮಕ್ಕಳ ಸಂಬಂಧವನ್ನು ಬೆಸೆಯುವಂಥ ಮಾತುಳನ್ನಾಡಿದರು. ಎರಡು ತಲೆಮಾರುಗಳ ನಡುವೆ ತದ್ಯಾತ್ಮೀಯತೆ, ಹೊಂದಾಣಿಕೆ ಮುಖ್ಯ. ಕರುಳುಬಳ್ಳಿಯ ಗೌರವಕ್ಕೆ ಚ್ಯುತಿ ತರುವ ಆಸ್ತಿ ಪರಿಕಲ್ಪನೆಯನ್ನು ದಿಕ್ಕರಿಸಿ ದೂರದ ಔರಂಗಬಾದಿನ ಹೊರವಲಯದಲ್ಲಿರುವ ಗಾಂಧೀ ವೃದ್ಯಾಶ್ರಮ ಸೇರಿ ಶೇಷಾಯುಷ್ಯ ಕಳೆದರೆ ತಪ್ಪೇನು! ಹೀಗೆ ಅವರೆಲ್ಲ ಒಂದೊಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಯರು ಅವರ ಮಾತುಗಳನ್ನು ಮೌನದಿಂದ ಆಲಿಸಿದರು, ಏನನ್ನೂ ಪ್ರತಿಕ್ರಿಯಿಸಲಿಲ್ಲ, ತಮ್ಮ ಮೂಲನಿರ್ಧಾರ ಬದಲಿಸಲಿಲ್ಲ. ನಿಟ್ಟುಸಿರನ್ನು ಬಿಡುವ ಮೂಲಕ ಅವರೆಲ್ಲರನ್ನೂ ಬೀಳ್ಕೊಟ್ಟರು.

***


ರಾಯರ ಅಭಿಮಾನಿ ಬಳಗದಲ್ಲಿ ಬಹುಪಾಲು ಮಂದಿ ನ್ಯಾಯವಾದಿಗಳಿದ್ದರು. ಅವರ ಪೈಕಿ ಹಲವರು ಕತ್ತೆಯನ್ನು ಕುದುರೆಯನ್ನಾಗಿಯೂ ಕುದುರೆಯನ್ನು ಕತ್ತೆಯನ್ನಾಗಿಯೂ ಪರಿವತರ್ಿಸುವಂಥ ನಿಷ್ಣಾತರಿದ್ದರು. ಯೋಚಿಸಿ ಒಂದೆರಡು ದಿವಸಗಳ ಬಳಿಕ ರಾಯರು ತಮ್ಮ ಹಳೆಯ ಫೋರ್ಡನ್ನೇರಿ ರಾಜಧಾನಿಯನ್ನು ತಲುಪಿದರು. ಸರ್ವೋದಯ ಸಂಘದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದರು. ಸಂಜೆ ಜೇನುವಿಶ್ರಿತ ಲಿಂಬುಪಾನೀಯ ಸೇವಿಸಿ ಫಲಾನುಭವಿ ಶ್ರೀಹಯವದನರಾವ್ ಅವರನ್ನು ನೆನಪಿಸಿಕೊಂಡರು, ನೀವೇ ಇಲ್ಲಿಗೆ ಬರುವಿರೋ, ನಾವೇ ಅಲ್ಲಿಗೆ ಬರುವುದೋ ಎಂದು ಅವರಿಗೆ ಹೇಳಿಕಳಿಸಿದರು.
ಶ್ರೀಯುತ ಹಯವದನರಾವ್ ಸಹ ತಾವು ಬಿಸಿರಕ್ತದ ಯುವಕರಾಗಿದ್ದಾಗ ಅರೆಕಾಲಿಕ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಂಥವರೆ, ರಾಯರೊಂದಿಗೆ ಯರವಾಡ ಸೆರೆಮನೆಯಲ್ಲಿದ್ದು ಅವರಿಂದ ಭಗವದ್ಗೀತಾ ಪ್ರವಚನ ಆಲಿಸಿ ಪ್ರಭಾವಿತರಾಗಿದ್ದಂಥವರೆ, ತಮ್ಮ ತೀರ್ಥರೂಪರು ಬ್ರಿಟಿಶರಿಗೆ ತಮ್ಮ ಸುಪುತ್ರ ತಪ್ಪು ಮಾಡಿರುವನೆಂದು ಮುಚ್ಚಳಿಕೆ ಬರೆದುಕೊಟ್ಟ ಪರಿಣಾಮವಾಗಿ ಆರನೆ ದಿನದಲ್ಲಿ ಸೆರೆಮನೆಯಿಂದ ಮುಕ್ತಿ ಪಡೆದಿದ್ದಂಥವರೆ, ಇಂಡಿಯಾದ ಫಗ್ಯರ್ೂಸನ್ ಲಾ ಕಾಲೇಜಿನಲ್ಲೂ, ವಿದೇಶದ ಆಕ್ಸ್ಫಡರ್ ಲಾ ಕಾಲೇಜಿನಲ್ಲೂ ಹಲವು ವರ್ಷಗಳ ಕಾಲ ವ್ಯಾಸಂಗ ಪೂರೈಸಿ ಸ್ವದೇಶಕ್ಕೆ ಮರಳಿ ಲಾಪ್ರಾಕ್ಟೀಸ್ ಆರಂಭಿಸಿ ದೇಶದ ಸುವಿಖ್ಯಾತ ಅಗರ್ಭಶ್ರೀಮಂತರ, ಪ್ರತಿಷ್ಠಿತ ರಾಜಕಾರಣಿಗಳ ಕಣ್ಮಣಿಯಾದಂಥವರೆ, ಸೆಕೆಂಡಿನ ಲೆಕ್ಕದಲ್ಲಿ ಲಕ್ಷಗಳನ್ನು ಎಣೆಸುತ್ತ ಸಿರಿವಂತ ವಕೀಲರೆಂದು ಹೆಸರು ಗಳಿಸಿರುವಂಥವರೆ!
ರಾಯರ ಕರೆ ಬಂದ ಸಂದರ್ಭದಲ್ಲಿ ಶ್ರೀಯುತರು ಪೆರೋಲ್ ಮೇಲೆ ಸೆರೆಮನೆಯಿಂದ ಬಿಡುಗಡೆ ಪಡೆದಿದ್ದ ಮಾಜಿ ಕೇಂದ್ರ ಆರೋಗ್ಯ ಸಚಿವ ಡಾ. ಚೆಂಗಲರೆಡ್ಡಿ ಅವರೊಂದಿಗೆ ಭ್ರಷ್ಟಾಚಾರ ಕುರಿತಂತೆ ಚರ್ಚಿಸುತ್ತಿದ್ದರು. ಅವರ ಆಪ್ತಕಾರ್ಯದರ್ಶಿ ಗೊಗೋಯ್ ಕಡತವನ್ನು ಬ್ರಿಫ್ಕೇಸಿನಿಂದ ಹೊರತೆಗೆಯಬೇಕೆನ್ನುವಷ್ಟರಲ್ಲಿ ಶ್ರೀಯುತರು ಪುಳಕಿತರಾದರು, ಅಲ್ಲದೆ ಮುಖದ ಬೆವರನ್ನೊರೆಸಿಕೊಳ್ಳುತ್ತ ಚರ್ಚೆಯನ್ನು ಬರಕಾಸ್ತು ಮಾಡಿ ಎದ್ದು ಹೊರಟೇಬಿಟ್ಟರು.
ಅಂಜಲೀಬದ್ದರಾಗಿ ಬಾಗಿಲನ್ನು ಪ್ರವೇಶಿಸಿ ಗೋಚರಿಸಿದ ಅವರನ್ನು ರಾಯರು ಅಪಾದಮಸ್ತಕ ದಿಟ್ಟಿಸಿದರು, ಕುಳಿತುಕೊಳ್ಳುವಂತೆ ಕಣ್ಣಿನಿಂದ ಸಂಜ್ಞೆ ಮಾಡಿದರು, ಆದರೆ ಅವರು ಜೋಡಿಸಿದ್ದ ಕರಗಳನ್ನು ಮಡಚಿ ಎದೆಯ ಮುಂಭಾಗದಲ್ಲಿ ಕಟ್ಟಿಕೊಂಡರು, ಅಲ್ಲದೆ ಸೊಂಟವನ್ನು ತುಸು ಬಾಗಿಸಿದರು, ತಮ್ಮ ಸಮಕ್ಷಮ ನನ್ನಂಥ ಅಲ್ಪ ಸರಿಸಮನಾಗಿ ಕುಳಿತುಕೊಳ್ಳುವುದೆಂದರೆ ಎನ್ನುವ ಅರ್ಥ ಧ್ವನಿಸುವಂತೆ ನೋಡಿದರು. ಬಳಿಕ ಮಾತಿನಳತೆಯ ದೂರದಲ್ಲಿದ್ದ ಬೆತ್ತದ ಕುರ್ಚಿಯಲ್ಲಿ ನಿಧಾನವಾಗಿ ಕುಳಿತುಕೊಂಡರು, ವಿಧೇಯತೆಯೇ ಸಾಕಾರಗೊಂಡಂತೆ.
ಕ್ಷೇಮಲಾಭ ವಿನಿಮಯದಿಂದ ಆರಂಭಗೊಂಡ ಅವರೀರ್ವರ ಮಾತುಕತೆಯಲ್ಲಿ ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ದೇಶದ ಸ್ಥಿತಿಗತಿ, ಹಾಗೂ ಕಾಣೆಯಾಗುತ್ತಿರುವ ದೇಶೀಯತೆ, ದುರ್ಬಲಗೊಳ್ಳುತ್ತಿರುವ ಮಾನವೀಯತೆ ಕುರಿತಂತೆ ಇತ್ಯಾದಿ ಸುಳಿದು ಹೋದವು. ಆ ಬಳಿಕ ರಾಯರು ನಿಟ್ಟುಸಿರುಬಿಟ್ಟು ಹಿಂದಕ್ಕೊರಗಿ ತಮ್ಮ ಆಪ್ತಸಖ ಗಪೂರ್ ಕಡೆ ಕಣ್ಸನ್ನೆ ಮಾಡಿದರು. ಅದರ ನಿರೀಕ್ಷೆಯಲ್ಲಿದ್ದ ಅವರು ತಮ್ಮ ಕೈಯಲ್ಲಿದ್ದ ಕಡತವನ್ನು ನ್ಯಾಯವಾದಿಗಳ ಮುಂದಿದ್ದ ಸ್ಟೂಲಿನ ಮೇಲಿರಿಸಿದರು.
ಹಯವದನರಾವ್ ತಮ್ಮ ಕಿವಿಗಳಿಂದ ಕೊರಳುದಾಟಿ ಎದೆಯ ಮೇಲೆ ಇಳಿಬಿದ್ದು ರಾರಾಜಿಸುತ್ತಿದ್ದ ಚಿನ್ನದ ಫ್ರೇಮಿನ ಚಾಳೇಸನ್ನು ಕಣ್ಣುಗಳಿಗೇರಿಸಿಕೊಂಡು ಕಡತವನ್ನು ಪರಿಶೀಲಿಸಲು ತೆಗೆದುಕೊಂಡ ಸಮಯ ದೀರ್ಘವೇ ಆಗಿತ್ತು. ಅದಕ್ಕೆ ಪೂರಕವಾದ ಮಾಹಿತಿಯನ್ನು ರಾಯರೂ ಗಫೂರವರೂ ಪಾಳೆಗನುಸಾರ ವಿವರಿಸಿದರು, ಅಲ್ಲದೆ ಅಲ್ಲಲ್ಲಿ ಮಾರ್ಕ್ಕ ಮಾಡಿದ್ದ ಸಾಲುಗಳನ್ನು ತೋರಿಸಿದರು. ರಾವ್ ಕಡತವನ್ನು ಮಡಚಿಟ್ಟು ಅದರ ಮೇಲೆ ತನ್ನೆರಡೂ ಕೈಗಳಿಂದ ಮೆಲ್ಲಗೆ ಗುದ್ದಿದರು, ಕಣ್ಣುಗಳಿಂದ ಇಳಿಸಿ ಚಾಳೇಸಿನ ಗ್ಲಾಸುಗಳನ್ನು ಕರವಸ್ತ್ರದಿಂದ ಒರೆಸಿ ಮೌನಕ್ಕೆ ಶರಣಾದರು. ಕಡತದಲ್ಲಿನ ಸಾಕ್ಷಾಧಾರಗಳನ್ನು ಮನಸ್ಸಿನಲ್ಲಿ ಗುಣಿಸಿ ಭಾಗಿಸಿದ ಬಳಿಕ?
ಚಿತ್ರಮಂದಿರ ನಿರ್ಮಿಸುವ ಪೂರ್ವದಲ್ಲಿ ಸ್ಥಳವನ್ನು ಬೇರೆಯವರಿಗೆ ಮಾರಿ ಪುನಃ ಖರೀದಿಸಿ ಚಿತ್ರಮಂದಿರವನ್ನು ನಿರ್ಮಿಸಿದ್ದರೆ ಸ್ವಯಾರ್ಜಿತವಾಗುತ್ತಿತ್ತು, ಆದರೆ ರಾಯರು ಹಾಗೆ ಮಾಡದಿರುವುದಕ್ಕೆ ಕಾರಣ ತಮ್ಮ ಏಕೈಕ ಸುಪುತ್ರ ಜೀವನ ಪರ್ಯಂತ ತಮಗೆ ಅಡ್ಡಗಾಲು ಹಾಕಲಾರನೆಂಬ ವಿಶ್ವಾಸ ತಮಗಿದ್ದುದು. ಅದಲ್ಲದೆ ತಾವು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸಿದ ಕೊಟ್ಟೂರು ಸಚ್ಚರಿತರಾದ ತಮ್ಮ ಉದಾತ್ತ ಆಸೆಆಕಾಂಕ್ಷೆಗಳಿಗೆ ಮಣ್ಣೆರಚುವುದೆಂದು ತಾವು ಭಾವಿಸಿರಲಿಲ್ಲ. ಪಿತ್ರಾರ್ಜಿತ ಸ್ಥಳದಿಂದ ಸ್ವಯಾರ್ಜಿತ ಚಿತ್ರಮಂದಿರವನ್ನು ಬೇರ್ಪಡಿಸುವುದೆಂದರೆ!
ಅದನ್ನು ಇನ್ನೂ ಸ್ಪಷ್ಟಪಡಿಸುವ ರೀತಿಯಲ್ಲಿ ರಾವ್ ದೃಷ್ಟಾಂತ ಉದಾಹರಿಸಿದರು ನೋಡಿ ಖಾವಂದರೆ (ಫಲಾನುಭವಿಗಳು ಶ್ರೀಯುತರನ್ನು ಸಂಬೋಧಿಸುವ ಪೂರ್ವದಲ್ಲಿ ಬಳಸುತ್ತಿದ್ದ ವಿಶೇಷಣ) ಈ ನಶ್ವರಶರೀರವನ್ನೇ ತೆಗೆದುಕೊಳ್ಳಿ, ನೀರಮೇಲಿನ ಗುಳ್ಳೆಯಂಥ ದೇಹ ಸ್ಥಿರಾಸ್ತಿಯಾದರೆ ಆತ್ಮ ಚರಾಸ್ತಿ, ಆತ್ಮ ಹೇಗೆ ಚಂಚಲವೋ ಹಾಗೆ ಆಸ್ತಿಯೂ ಚಂಚಲ ಸ್ವಭಾವದ್ದು ಎಂದು ವೇದಾಂತಿಯಂತೆ ಹೇಳಿದ ಬಳಿಕ ಏನೋ ಯೋಚಿಸಿ ಮುಂದುವರಿದು ಹೇಳಿದರು.
ಈಗಲೂ ಕಾಲಮಿಂಚಿಲ್ಲ, ಕಲಹ ಹುಟ್ಟು ಹಾಕೋದು ಆಸ್ತಿಯ ಮೂಲಭೂತಗುಣ, ಮಿತ್ರರನ್ನು ವೈರಿಗಳನ್ನಾಗಿಯೂ ವೈರಿಗಳನ್ನು ಮಿತ್ರರನ್ನಾಗಿಯೂ ಪರಿವರ್ತಿಸಬಲ್ಲದು. ನ ಆಸ್ತಿ ಸಮಃ ಶತ್ರುಃ ಎಂದು ಚಾಣಕ್ಯನೇ ಹೇಳಿದ್ದಾನೆ, ಆದ್ದರಿಂದ ಮಗನ ಸಂಗಡ ಮಾತಾಡಿ ರಾಜಿ ಕುದುರಿಸಿಕೊಳ್ಳಿರಿ, ಹೇಗೋ ತಲೆಮಾರುಗಳು ಕೂತುತಿಂದರೂ ಸವೆದಷ್ಟು ಆಸ್ತಿ ಸಂಪಾದಿಸಿರುವಿರಿ ತಾನೆ! ಅದನ್ನೆಲ್ಲ ಮಗನಿಗೆ ಬಿಟ್ಟುಕೊಟ್ಟು ಇದನ್ನು ಉಳಿಸಿಕೊಳ್ಳಬಹುದಲ್ಲವೆ! ಹ್ಹಾಂ! ಅಂದಹಾಗೆ ಪ್ರತಿಯೊಂದು ಕಾಯಿದೆ ಪ್ರಕಾರ ನಡೆಯಬೇಕು ಖಾವಂದರೆ
ಅದನ್ನು ಕೇಳಿದೊಡನೆ ರಾಯರ ಮುಖ ಚಿಂತೆಯ ಭಾರದಿಂದ ಹ್ರಸ್ವಗೊಂಡಿತು. ತಮ್ಮ ಅನುಗಾಲದ ಗೆಳೆಯನ ಕಡೆ ಚಿಂತಾಕ್ರಾಂತರಾಗಿ ನೋಡಿದರು. ಗಫೂರ್ ಸಾಹೇಬರು ಸಹ ನಿಡುಸುಯ್ದರು, ಗೋಪಾಲ ವಿವಾಹಪೂರ್ವದಲ್ಲಿ ತಂದೆಗೆ ತಕ್ಕ ಮಗನಂತಿದ್ದ, ಸರಳ ಸೌಜನ್ಯತೆಯೇ ಮೈವೆತ್ತಂತಿದ್ದ. ಆದರೆ ಅವನಲ್ಲಿ ದುರಾಸೆಯನ್ನು ಹುಟ್ಟು ಹಾಕಿರುವುದಲ್ಲದೆ ತನ್ನ ಮೂಗಿನ ನೇರಕ್ಕೆ ಕುಣಿಸುತ್ತಿರುವುದು ತನ್ನ ಸೊಸೆ ರಜನಿ! ರಾಜಸ್ಥಾನದ ಮಾಜಿ ಗವರ್ನರ್ ಮಾದವರಾವ್ ಸೋಳಂಕಿ ಅವರ ಏಕೈಕ ಸುಪುತ್ರಿ! ಸೋಳಂಕಿಯವರೂ ತಮ್ಮ ಹಾಗೆ ಮಹಾತ್ಮರವರ ಅನುಯಾಯಿಯಾಗಿದ್ದವರು, ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರರು. ಸ್ವಾತಂತ್ರ್ಯೋತ್ತರವಾಗಿ ತಾವು ಎರಡನೆ ಅವಧಿಗೆ ಶಾಸಕರಾಗಿದ್ದೇ ಸಾಹಸ, ತಾವು ಹಾಕಿದ ಗೆರೆದಾಟದ ಹಲವರು ಪಕ್ಷದ ಹೈಕಮ್ಯಾಂಡಿನ ಸದಸ್ಯರಾಗಿದ್ದರು. ಅಂಥವರಲ್ಲಿ ಅವರೂ ಒಬ್ಬರು. ತಾವು ಸಕ್ರಿಯರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದಾಗ ಅವರೆಲ್ಲ ವಿರೋಧಿಸಿದರು, ರಾಜ್ಯಸಭಾ ಸದಸ್ಯರಾಗಿ ಪಕ್ಷಕ್ಕೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡಿ ಎಂದು ವಿನಂತಿಸಿದರು, ಆದರೆ ಅದನ್ನು ತಾವು ಸಮ್ಮತಿಸಲಿಲ್ಲ, ರಾಜ್ಯಪಾಲ ಹುದ್ದೆಯನ್ನಾದರೂ ಒಪ್ಪಿಕೊಳ್ಳಿ ಎಂದು ಪರಿಪರಿಯಿಂದ ಕೇಳಿಕೊಂಡರೂ ತಾವು ನಿರಾಕರಿಸಿದರು.
ರಾಜಕಾರಣದಲ್ಲಿದ್ದು ಪುನಃ ಪುನಃ ಪಾಪ ಮಾಡುವುದೆಂದರೆ! ಆತ್ಮಸಾಕ್ಷಿಯ ಕತ್ತುಹಿಚುಕಿ ರಾಜಕಾರಣದಲ್ಲಿರುವುದೆಂದರೆ! ಅದ್ಯಾವುದೂ ಬೇಡ, ಆದರೆ ತಮ್ಮ ಮಗಳು ರಜನಿಯನ್ನು ಮಗನಿಗಾದರೂ ತಂದುಕೊಳ್ಳಬಹುದಲ್ಲವೆ! ಸೋಳಂಕಿಯವರ ಮಾತನ್ನು ನಿರಾಕರಿಸುವುದಾಗಲಿಲ್ಲ, ಪ್ರಥಮನೋಟಕ್ಕೆ ರಜನಿ ತಮಗೆ ಇಷ್ಟವಾದಳು, ಖಾದಿಉಡುಪು ಧರಿಸಿದ್ದ ಆಕೆಯ ನಿರಾಡಂಬರ ಗುಣ ತಮಗೂ ತಮ್ಮ ಮಗನಿಗೂ ಹಿಡಿಸಿತು. ಮಗನೊಂದಿಗೆ ವಿವಾಹ ಸಾಬರಮತಿ ಆಶ್ರಮದಲ್ಲಿ ಅತ್ಯಂತ ಸರಳವಾಗಿ ಜರುಗಿತು, ಅದೂ ದೇಶದ ಗ್ಪಣ್ಯಾತಿಗಣ್ಯ ರಾಜಕಾರಣಿಗಳ, ವಿದೇಶಗಳ ರಾಯಭಾರಿಗಳ ಸಮ್ಮುಖದಲ್ಲಿ.
ರಾಜ್ಯಪಾಲರೂ ಜಾಗತಿಕ ಗಾಂಧಿ ಶಾಶ್ವತನಿಧಿ ಪ್ರತಿಷ್ಠಾನದ ಗೌರವಾಧ್ಯಕ್ಷರೂ, ಸನ್ಮಿತ್ರರೂ ಆದಂಥ ಸೋಳಂಕಿಯವರ ಮಗಳೆಂದರೆ ತಮ್ಮ ಮಗಳೂ ತಾನೆ! ಆ ಕೊರತೆಯನ್ನು ಆಕೆ ತುಂಬುವಳೆಂದೇ ತಾವು ನಂಬಿದರು. ಮನೆತುಂಬಿದ ಮೊದಮೊದಲು ಆಕೆ ಸಹ ಹಾಗೆ ಇದ್ದಳು. ತನ್ನ ಗಂಡನಿಗಿಂತ ಮುಖ್ಯವಾಗಿ ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದಳು, ತಮ್ಮನ್ನು ಅಪ್ಯಾಯತೆಯಿಂದ ಮರುಳು ಮಾಡಿದಳು, ಹಂತಹಂತವಾಗಿ ಚರಾಸ್ತಿ ಮೇಲೆ ಹತೋಟಿ ಸಾಧಿಸಿದಳು, ಕ್ರಮೇಣ ತಮ್ನನ್ನು ಸರ್ವಾರ್ಥದಲ್ಲಿ ಬರಿಗೈ ಮಾಡಿದಳು. ಮನೆಗೆ ಬಂದು ಹೋಗುವವರ ಆಸೆಆಕಾಂಕ್ಷೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುವುದು ತಮ್ಮ ಜಾಯಮಾನ, ಮೊದಲು ಅಷ್ಟೋ ಇಷ್ಟೋ ಕೊಡುತ್ತಿದ್ದ ಆಕೆ ನಂತರದ ದಿವಸಗಳಲ್ಲಿ ಗೊಣಗುವುದನ್ನು ಆರಂಭಿಸಿದಳು, ದೈನಂದಿನ ಖರ್ಚಿಗೆ ತಾವು ಪರದಾಡುವ ಸ್ಥಿತಿ ಬಂದಿತು. ಒಮ್ಮೆ ಕೇಳಿದ್ದಕ್ಕೆ ಸ್ವಾತಂತ್ರ್ಯಯೋಧರಿಗೆಂದೇ ಸರ್ಕಾರ ನೀಡುವ ಪಿಂಚಣಿಯನ್ನು ಯಾಕೆ ಪಡೆಯಬಾರದೆಂದು ಪ್ರಶ್ನಿಸಿದಳು. ಹೋರಾಡಿದ್ದಕ್ಕೆ ಪ್ರತಿಫಲ ರೂಪದಲ್ಲಿ ಪಿಂಚಣಿ ಪಡೆಯುವುದೆ! ತಮ್ಮ ಮನಸ್ಸು ಒಪ್ಪಲಿಲ್ಲ. ತಮ್ಮ ಸ್ಥಿತಿಯನ್ನು ಅರ್ಥಮಾಡಿಕೊಂಡು ಗಫೂರ್ ಪಿಂಚಣಿಯನ್ನು ಮಂಜೂರು ಮಾಡಿಸಿಕೊಂಡರು ಸರಿಹೋಯಿತು, ಇಲ್ಲದಿದ್ದರೆ ಮಹಾಸ್ವಾಭಿಮಾನಿಯದ ತಮ್ಮ ಗತಿ? ತೇಲಲೀಯದ ಮುಳಗಲೀಯದ ತಮ್ಮ ದುಃಸ್ಥಿತಿ ಕುರಿತಂತೆ ಯಾರೆದುರು ಹೇಳಿಕೊಳ್ಳುವುದು!
ರಾಯರು ತಮಗಷ್ಟೆ ಕೇಳಿಸುವಂತೆ ನಿಟ್ಟುಸಿರುಬಿಟ್ಟರು. ತಮ್ಮ ಪ್ರಾರಾಬ್ಧವನ್ನು ಮೌನದಲ್ಲಿಯೇ ಅಳೆದು ತೂಗಿದರು. ಆಯ್ತು ಎಂದು ಅಲ್ಲಿಂದ ಹೊರಟುಬಂದ ರಾಯರನ್ನು ರಜನಿ ಲಿಂಬೆಶರಬತ್ತು ನೀಡಿ ಸ್ವಾಗತಿಸಿದಳು. ಕೇಳಿದರೆ ನಿಸ್ಸಂಕೋಚವಾಗಿ ಸತ್ಯ ನುಡಿದಲ್ಲಿ ತನ್ನ ಗತಿ! ಹಯವದನರಾವ್ ಈಗ ತಾನೆ ಫೋನ್ ಮಾಡಿ ಎಲ್ಲ ತಿಳಿಸಿದರು ಮಾಮನವರೆ! ಎಂದು ಹೇಳಿ ಅವರ ಮುಖವನ್ನು ದಿಟ್ಟಿಸಿದಳು, ನ್ಯಾಯವಾದಿ ರಾವ್ ಆಕೆಯಿಂದ ಸಹಾಯ ಪಡೆದಿರಬಹುದು, ಅದನ್ನು ಕಿಂಚಿತ್ತಾದರೂ ತೀರಿಸಿಕೊಳ್ಳಲೆಂದು ಹೇಳಿರಲೂಬಹುದು! ಆಕೆಯ ಮಾತಿನಿಂದ ರಾಯರು ತಿಲಮಾತ್ರ ವಿಚಲಿತರಾಗಲಿಲ್ಲ, ಸೋಳಂಕಿಯವರಿಂದಲೂ ಆ ಮಹಾನುಭಾವ ಸಹಾಯ ಪಡೆದಿರಲೂಬಹುದು, ಮಾನಸಿಕವಾಗಿ ನುರಿತ ನ್ಯಾಯವಾದಿಗಳನ್ನು ಅಳಿಯಲಿಲ್ಲ. ಋಣದ ತಪ್ಪೇ ಹೊರತು ಅವನ ತಪ್ಪು ಎಳ್ಳಷ್ಟೂ ಇರಲಾರದು. ನಿಜಸಂಗತಿಯನ್ನು ಅರುಹಿದರು, ಸರ್ವಾಜಿತವನ್ನೂ ತಮ್ಮ ವಾರಸುದಾರರಿಗೆ ಧಾರೆ ಎರೆದಾಗಿದೆ, ಗಾಂಧೀಜಿ ಕೊಟ್ಟಿರುವುದನ್ನು ಮರಳಿಪಡೆಯಲು ಸಮ್ಮತಿಸಬಹುದು, ಆದರೆ ತಮ್ಮೊಳಗಿರುವ ಬುದ್ದ ಮಹಾವೀರರು ಅದಕ್ಕೆ ಸಮ್ಮತಿಸಲಾರರು. ಸಂದಿಗ್ಧತೆಯ ನಿರ್ಣಾಯಕ ವೇಳೆಯಲ್ಲಿ ಮಗನೂ ಬಂದು ತಮ್ಮ ಕ್ಷೇಮಲಾಭ ವಿಚಾರಿಸಿದ, ಅದೂ ಔಪಚಾರಿಕವಾಗಿ.
ಅದೇ ಮೊದಲ ಸಲವೆಂಬಂತೆ ತಮ್ಮ ಕಣ್ಣುಗಳನ್ನು ಹಿಗ್ಗಲಿಸಿ ನೋಡಿದರು, ಎಷ್ಟೆತ್ತರ ಬೆಳೆದಿರುವನಲ್ಲ! ತಮಗಿಂತ ಎರಡುಮೂರಿಂಚು ಎತ್ತರಕ್ಕೆ, ಥೇಟ್ ತನ್ನ ತಾಯಿಯ ಹಾಗೆ. ಆದರೆ ಗುಣ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸ. ನಿಟ್ಟುಸಿರುಬಿಡುತ್ತಲೇ ಮ್ಲಾನವದನರಾದರು, ಅವರ ಕಣ್ಣುಗಳು ಒಂದುಕ್ಷಣ ಒದ್ದೆಯಾದವು, ಎಲ್ಲಿ ಅದರೊಳಗಿನ ಆತಂಕ ಅವರಿಗೆ ಗೋಚರಿಸುವುದೋ ಎಂದು ಹೆದರಿ ಹಾಗೆ ಮುಚ್ಚಿ ಇಚ್ಛಾಶಕ್ತಿಯಿಂದ ಶುಷ್ಕವಾಗಿಸಿಕೊಂಡು ಪುನಃ ತೆರೆದು ನೋಡುತ್ತಾರೆ ತಮ್ಮ ಎದರಿಗಿರುವುದು ತನ್ನ ಮಗನಲ್ಲ, ತನ್ನ ಸೊಸೆಯಲ್ಲ, ಆ ರೂಪದಲ್ಲಿರುವ ನಿಗೂಢ ವೈರಿಗಳು!
ತಾವು ಮಾತಾಡುವುದೋ! ತಮ್ಮ ಪರವಾಗಿ ಮಾತಾಡುವಂತೆ ಗಫೂರರಲ್ಲಿ ವಿನಂತಿಸಿಕೊಳ್ಳುವುದೋ! ಸಂದಿಗ್ದಕ್ಕೆ ಸಿಲುಕಿದರು. ಯುವದಂಪತಿಗಳು ಪರಸ್ಪರ ಮುಖ ನೋಡಿಕೊಂಡರು. ಕಣ್ಣುಗಳ ಮೂಲಕ ಚರ್ಚಿಸಿದರು. ಸೊಸೆ ತನ್ನ ಮೆಳ್ಳೆಗಣ್ಣ ನೋಟದಿಂದ ಏನನ್ನೋ ಸೂಚಿಸಿದಳು. ಪರಮವಿಧೇಯ ಪತಿಯಾದ ಆತ ಮುಂಗೈಯನ್ನು ಆವರಿಸಿದ್ದ ರೋಲೆಕ್ಸನ್ನು ನೋಡಿ ಚಡಪಡಿಸಿದ. ಇನ್ನರ್ಧಗಂಟೆಯಲ್ಲಿ ಇಂಟರ್ ನ್ಯಾಷನಲ್ ಛೇಂಬರ್ಸ್ಸ ಆಫ್ ಕಾಮರ್ಸ್ಸ ಮೀಟಿಂಗ್ ಬೇರೆ ಇರುವುದು, ಡೈರೆಕ್ಟರಾಗಿರುವ ತಾನು ಸಭೆಯಲ್ಲಿ ಭಾಗವಹಿಸುವುದು ಅನಿವಾರ್ಯ, ಸರೆ ಮಾತಾಡಿಕೊಳ್ಳಿ ಎಂದು ಹೊರಡಲು ಸಿದ್ಧನಾದ, ಅಷ್ಟರಲ್ಲಿ ಗಫೂರ್ ಬೇಟಾ ನಿನ್ನ ತಂದೆಯವರ ಆಸೆಯನ್ನು ನೆರವೇರಿಸಪ್ಪಾ, ಅದೇನೆಂದರೆ! ಎಂದು ಆರಂಭಿಸಿದನೋ ಇಲ್ಲವೋ! ಗೋಪಾಲ ಕಸಿವಿಸಿ ಅನುಭವಿಸಿದ, ನಿಮ್ಮ ಮನಸ್ಸಿನಲ್ಲಿ ಏನಿದೇಂತ ಗೊತ್ತು ಚಾಚಾ! ಈ ಇಳಿವಯಸ್ಸಿಗೂ ನಿಮ್ಮ ಮಹತ್ವಾಕಾಂಕ್ಷೆಗೂ ತಾಳೆ ಆಗೋದಿಲ್ಲ, ಇನ್ನೂ ಕಾಲಕ್ಕೆ ತಕ್ಕಂತೆ ನೀವು ಬದಲಾಗಿಲ್ಲವಲ್ಲ! ಅದೇ ಬೇಸರ ಎಂದು ಹೇಳಿದ, ತನ್ನ ಮಾತಿನಲ್ಲಿ ಬೇಸರವಿತ್ತು. ಅದರಿಂದ ಗಫೂರ್ ವಿಚಲಿತರಾಗದೆ ನಿಮ್ಮ ತಂದೆಯವರು ಬದುಕಿರುವವರಿಗಾದರೂ ಎಂದು ಹೇಳಿ ಉಗುಳು ನುಂಗಿದರು. ಅಷ್ಟರಲ್ಲಿ…
ಕಪಾಟಿನಿಂದ ತಂದಿದ್ದ ಉಯಿಲಿನ ನಕಲನ್ನು ರಜನಿ ತನ್ನ ಗಂಡನಿಗೆ ಹಸ್ತಾಂತರಿಸಿದಳು. ಗೋಪಾಲ ಅದರಲ್ಲಿದ್ದ ನೂರೆಂಟು ವಾಕ್ಯಗಳನ್ನು ಒಂದೆರಡು ಸೆಕೆಂಡುಗಳಲ್ಲಿ ಓದಿಮುಗಿಸಿದ, ನಿಟ್ಟುಸಿರುಬಿಡುತ್ತ ಅದನ್ನು ಅವರ ಹಣ್ಣಾಗಿದ್ದ ಕೈಗೆ ವರ್ಗಾಯಿಸಿದ. ಓದುವ ಅಗತ್ಯವಿರದಿದ್ದರೂ ಅವರು ಕಣ್ಣಾಯಿಸಿದರು, ರಾಯರ ದುಗುಡ ತುಂಬಿದ್ದ ಮುಖವನ್ನು ನೋಡಿದರು. ತಮ್ಮ ಹಾಗೂ ನುರಿತ ವಕೀಲರ ಸಮಕ್ಷಮ ಅದನ್ನು ರಚಿಸಿ ಪೂರೈಸಲಾಗಿತ್ತು, ಅದರ ಫಲಾನುಭವಿಗಳಾದ ಸರ್ವೋದಯ ಸಂಘದ ಕಾರ್ಯಕಾರಿ ಸಮಿತಿ ತಮಗೆ ಗೋಪಾಲನ ಕಡೆ ವಕೀಲರು ನೀಡಿದ್ದ ಷೋಕಾಸ್ ನೋಟಿಸನ್ನು ತಿಂಗಳ ಹಿಂದೆಯೇ ರಾಯರಿಗೆ ಕಳಿಸಿ ಸ್ಪಷ್ಟೀಕರಣ ಆಪೇಕ್ಷಿಸಿದ್ದರು. ರಾಯರ ಸೂಕ್ಷ್ಮಪ್ರಕೃತಿ ಅದರಿಂದ ಘಾಸಿಗೊಂಡಿತ್ತು. ಗಫೂರ್ ಎಡಗೈಯಿಂದ ತಮ್ಮ ಸಖನ ಬಲಭುಜವನ್ನು ಅಪ್ಯಾಯತೆಯಿಂದ ಸ್ಪರ್ಶಿಸಿ ನಿನ್ನ ಮೇಲಿನ ನಂಬಿಕೆಯಿಂದ ಇವರು ಹಾಗೆ ಬರೆದಿರಬಹುದು, ಉಯಿಲು ಅನೂರ್ಜಿತಗೊಂಡರೆ ಇವರಿಗೆ ಅವಮಾನವಾಗೋದಿಲ್ಲವೆ! ನೀನು ವಿದ್ಯಾವಂತ, ಸ್ವಲ್ಪ ಯೋಚಿಸು, ಇವರಿಗೆ ಅವಮಾನವಾದರೆ ನಿನಗೆ ಸಂತೋಷವೇನು? ಎಲ್ಲದನ್ನೂ ಬಿಟ್ಟುಕೊಟ್ಟಿಲ್ಲವೆ! ಅದೊಂದನ್ನು ಮಾತ್ರಬಿಟ್ಟುಕೊಟ್ಟು ಪಿತೃಋಣ ತೀರಿಸಬಹುದಲ್ಲವೆ! ಎಂದು ತೂಗಿ ಮಾತಾಡಿದರು.
ಪಿತೃಋಣ! ಕೇಳಿದೊಡನೆ ಗೋಪಾಲನನ್ನು ಪಾಪಪ್ರಜ್ಞೆ ಕಾಡಿ ಮರುಕ್ಷಣ ನೇಪಥ್ಯಕ್ಕೆ ಸರಿಯಿತು. ಮನಸ್ಸಿನಲ್ಲಿಯೇ ಕೈಕೈಹಿಚುಗಿಕೊಂಡ, ತನ್ನ ಪತ್ನಿಕಡೆ ನೋಡಿ ಪುನಃ ಚೇತರಿಸಿಕೊಂಡ. ರಾಯರು ಸಹ ಪಿತೃಋಣಕ್ಕೂ ಆಸ್ತಿಗೂ ಹೋಲಿಸಬಾರದಿತ್ತೆಂದುಕೊಂಡರು. ಋಣ ನಾನ್ಸೆನ್ಸ್! ಅದು ಭಾವನಾತ್ಮಕ ಪದ. ಆದರೆ ಆಸ್ತಿ! ಮೆಲ್ಲಗೆ ತಲೆ ಎತ್ತಿ ನೋಡಿದ. ತನ್ನ ತಂದೆಯೊಳಗಿಂದ ನ್ಯೂ ಭಾರತ್ ಟಾಕೀಸ್ ಮೈಮುರಿದು ಹೊರಏಳುತ್ತಿರುವುದೋ! ನ್ಯೂಭಾರತ್ ಟಾಕೀಸಿನೊಳಗಿಂದ ತಮ್ಮ ತಂದೆಯ ರೂಪ ಕಾಣಿಸಿಕೊಳ್ಳುತ್ತಿರುವುದೋ! ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದುಕ್ಷಣ ಗಲಿಬಿಲಿಗೊಂಡ. ಆತ ನುಂಗಲಾಂಭಿಸಿದ ಉಗುಳ ಚಲನವಲನದ ಮೇಲೆ ನಿಗಾ ಇರಿಸಿದ್ದ ರಜನಿಯ ಆರನೆ ಇಂದ್ರಿಯ ಆ ಕೂಡಲೆ ಜಾಗೃತಗೊಂಡಿತು. ವಿಳಂಬ ಮಾಡಿದಲ್ಲಿ ತನ್ನ ಪತಿ ಪಿತೃಋಣ ಪಂಜರದ ಪಾಲಾಗುವುದರಲ್ಲಿ ಸಂದೇಹವಿಲ್ಲವೆಂದೆನಿಸಿತು. ತನ್ನ ಒಡತಿಯ ಅನುಮತಿಗೆ ಕಾಯದೆ ಚಂದ್ರನಾನಂದಾವಧೂತರು ಮಂತ್ರಿಸಿ ನೀಡಿದ್ದ ಹರಳುಂಗುರ ಧರಿಸಿದ್ದ ಆಕೆಯ ಎಡಗೈಯ ನೀಳಬೆರಳುಗಳು ಕಂಪಿಸಲಾರಂಭಿಸಿದವು, ಒಡನೆಯೇ ಆತನ ಬಲಗೈಯನ್ನು ಸ್ಪಶರ್ಿಸಿ ಸಂದೇಶವನ್ನು ರವಾನಿಸಿದವು. ಪುನಃ ಚೇತರಿಸಿಕೊಂಡ. ಕೂಡಲೆ ವಾಸ್ತವಕ್ಕೆ ಮರಳಿ ನಿಡಿದಾಗಿ ಉಸಿರುಬಿಟ್ಟ. ತನ್ನ ಗಂಡ ಅವರಿಬ್ಬರತ್ತ ತೀಕ್ಷ್ಣನೋಟಬೀರಿದ್ದು ತನ್ನ ಮಾಂಗಲ್ಯದ ಸೌಭಾಗ್ಯವೆಂದು ರಜನಿ ಭಾವಿಸುವಷ್ಟರಲ್ಲಿ ಗೋಪಾಲ ಚಾಚಾ ನಿಮಗಿವರು ಸ್ನೇಹಿತರು ಮಾತ್ರ, ಆದರೆ ಇವರು ನನ್ನ ತಂದೆ ಎನ್ನುವುದನ್ನು ಮರೆಯಬೇಡಿ, ಇದು ನಮ್ಮ ಕುಟುಂಬದ ವ್ಯವಹಾರ, ಇದರಲ್ಲಿ ನೀವು ದಯವಿಟ್ಟು ಕೈಹಾಕಬೇಡಿ ಎಂದು ಹೇಳಿದ. ಆ ಮಾತು ತಮ್ಮನ್ನು ವಜ್ರಾಯುಧದಂತೆ ಘಾಸಿಗೊಳಿಸಿತು. ತಾವು ಕುಟುಂಬದ ಅನ್ಯರೆ ಎಂದು ಗಫೂರ್ ಸಾಹೇಬರು ಯೋಚಿಸುವಷ್ಟರಲ್ಲಿ, ರಾಯರು ಏನನ್ನೋ ನುಡಿಯಲು ತಮ್ಮ ಹಣ್ಣಾಗಿದ್ದ ತುಟಿಗಳನ್ನು ಸರಿಪಡಿಸಿಕೊಳ್ಳುತ್ತಿರುವಷ್ಟರಲ್ಲಿ, ಅದೇ ಆಗ ಪ್ರವೇಶಿಸಿದ ಕಾರ್ ಡ್ರೈವರ್ ದೇವದಾನಂ ತನ್ನೆರಡೂ ಕೈಗಳನ್ನು ಕಿಪ್ಪೊಟ್ಟೆ ಬಳಿ ಜೋಡಿಸಿಕೊಳ್ಳುತ್ತಿರುವಷ್ಟರಲ್ಲಿ, ಪಿಂಕಿ ಹೆಸರಿನ ಪೊಮೇರಿಯನ್ ರಜನಿಯುಟ್ಟಿದ್ದ ಅಪ್ಪಟ ಖಾದಿಸೀರೆಯ ತುದಿಯನ್ನು ಕಚ್ಚಿ ಎಳೆಯಬೇಕೆನ್ನುವಷ್ಟರಲ್ಲಿ, ಗೋಡೆಮೇಲಿದ್ದ ರಾಯರೊಂದಿಗಿದ್ದ ಗಾಂಧೀಜಿಯವರ ತೈಲವರ್ಣ ಭಾವಚಿತ್ರದ ಮೇಲೆ ಹಲ್ಲಿಯೊಂದು ಜಿಗಿದು ಕೂರುವಷ್ಟರಲ್ಲಿ ಅದೇ ತಾನೆ ಪ್ರೌಢಾವಸ್ಥೆ ತಲುಪಿದ್ದ ದಂಪತಿಗಳೀರ್ವರು ಉತ್ತರವನ್ನು ಅಲಕ್ಷಿಸಿ ಅಲ್ಲಿಂದ ಹೊರಟು ಕಾಣೆಯಾದರು. ಏನೆಲ್ಲ ನೆನಪಿಸಿಕೊಂಡು ನಿಟ್ಟುಸಿರುಬಿಡುತ್ತ..

***

ಗಫೂರ್ ಸಾಹೇಬರು ಹರಸಾಹಸಪಟ್ಟು ಮೊಸುಂಬೆ ರಸವನ್ನು ಗ್ಲಾಸಿಗೆ ಬಗ್ಗಿಸಿದರು, ಕಿಟಿಕಿಯ ಬೆಳಕಿನಲ್ಲಿ ಅದರ ಪ್ರಮಾಣವನ್ನು ಬಣ್ಣದೊಂದಿಗೆ ಪರೀಕ್ಷಿಸಿದರು. ಆರು ಹಣ್ಣುಗಳನ್ನು ಸುಲಿದು ಹಿಂಡಿದರೂ ಅರ್ಧಗ್ಲಾಸಷ್ಟೇ ಇತ್ತು. ಒಂದು ಚಮಚೆ ಶುಗರ್ಫ್ರೀಪುಡಿಯನ್ನು ಬೆರೆಸಿದರೂ ಅದರಮಟ್ಟ ತುಸುವಾದರೂ ಮೇಲೇರಲಿಲ್ಲ, ಪರಿಣಾಮವಾಗಿ ಸ್ವಲ್ಪ ನೀರನ್ನು ಸೇರಿಸುವುದು ಅನಿವಾರ್ಯವಾಯಿತು. ನಿರಂತರ ಬಳಕೆಯಿಂದಾಗಿ ಸವೆದಿದ್ದ ತಳಿಗೆಯಲ್ಲಿ ಗ್ಲಾಸನ್ನಿರಿಸಿ ತಮ್ಮೆರಡೂ ಕೈಗಳಲ್ಲಿ ಹಡಿದುಕೊಂಡರು, ರಾಯರತ್ತ ಸ್ವಲ್ಪೇಸ್ವಲ್ಪ ತಗ್ಗಿಸಿದ್ದ ತಲೆಯ ನೊಸಲಲ್ಲಿದ್ದ ಕಣ್ಣುಗಳನ್ನು ತಿರುಗಿಸಿ ನೋಡಿದರು. ಸತತ ಸೋಲಿನಿಂದ ಕಂಗೆಟ್ಟಿರುವ ಮುಖ, ಅದನ್ನು ಮರೆಮಾಚಲೆಂದೇ ಬೆಳೆದು ಮಲನಗೊಂಡಿರುವ ಗಡ್ಡ ಮೀಸೆ, ಕಣ್ಣುಗಳ ಮೇಲಿಳಿಬಿದ್ದಿರುವ ಹುಬ್ಬು, ಕಣ್ಣೀರಿನ ಹೆಪ್ಪನ್ನು ಪೂಸಿಕೊಂಡಿರುವ ರೆಪ್ಪೆಗಳು, ಊರುಗೋಲಿನ ತುದಿಯ ಆಸರೆಯಲ್ಲಿರುವ ಸುಕ್ಕುಗಟ್ಟಿರುವ ಮುಖ! ಒಂದುಕಾಲದಲ್ಲಿ ಎಷ್ಟೋ ಆಕರ್ಷಕವಿದ್ದ ರಾಯರಿಗೆ ವರ್ತಮಾನದ ಪರಿವಿದ್ದಂತಿಲ್ಲ, ಬೆಳೆಗ್ಗೆ ನಾಡಿಬಡಿತ ಪರೀಕ್ಷಿಸಿದ ಬಳಿಕ ಡಾ. ನರಹರಿ ನೀಡಿರುವ ಮಾತ್ರೆಗಳ ಪೈಕಿ ಯಾವುದನ್ನು ಸೇವಿಸಿರುವರೋ! ಅಥವಾ ಸೇವಿಸಿಯೇ ಇಲ್ಲವೋ! ಸಂದಿಗ್ದತೆ ಎದುರಾಯಿತು. ಗ್ಲಾಸಿದ್ದ ತಳಿಗೆಯನ್ನು ಟೀಪಾಯ್ ಮೇಲಿರಿಸಿದರು, ಮಾತ್ರೆಗಳ ಲಕೋಟೆಯನ್ನು ತಮ್ಮ ನಡುಗುವ ಕೈಗಳಿಗೆತ್ತಿಕೊಂಡರು. ಅದರಲ್ಲಿ ಎರಡುಮೂರು ವಿಧದ ಮಾತ್ರೆಗಳು ಇಪ್ಪಕ್ಕಿಂತ ಹೆಚ್ಚಿದ್ದವು. ಅವುಗಳಲ್ಲಿ ಯಾವುದು ಯಾವಾಗ ಎಂಬುದು ತಮಗೆ ತಿಳಿಯದು. ನೋಡಲೆಂದು ಚಾಳೇಸಿನ ಒಂದುತುದಿಯ ದಾರವನ್ನು ಎಡಗೈಯಿಂದ ಬಲಗಿವಿಗೆ ಕಟ್ಟಿಕೊಂಡರು, ಕಣ್ಣ ತುದಿಗೆ ತಂದುಕೊಂಡು ಓದಲು ಪ್ರಯತ್ನಿಸಿದರು, ಇಂಗ್ಲೀಷಿನಲ್ಲಿದ್ದುದರಿಂದ ತಮಗೆ ಅರ್ಥವಾಗಲಿಲ್ಲ. ಪ್ರಯತ್ನದ ಫಲವಾಗಿ ಕಣ್ಣುಗಳು ನೀರುತುಂಬಿಕೊಂಡು ಮಂಜುಗವಿದವು, ಕ್ರಮೇಣ ಅಸ್ಪಷ್ಟಗೊಂಡು ಕಾಣೆಯಾದವು. ರಾಯರಿಗೇನಾದರೂ ತಿಳಿದಿದ್ದರೆ! ನೋಡಿದರು, ಆದರೆ ಅವರು ನಿರಾಸಕ್ತಿಯೇ ಮೈವೆತ್ತಂತೆ ಕುಳಿತಿದ್ದರು ಪರಿವಿಲ್ಲದೆ, ತಮ್ಮನ್ನು ತಾವು ಅಲಕ್ಷೆಗೀಡು ಮಾಡಿಕೊಂಡು. ಕೇಳಿದರೆ ಪ್ರಯೋಜನವಿಲ್ಲ, ಇನ್ನು ಕೇಳುವುದಿದ್ದರೆ ಡಾಕ್ಟರರನ್ನು, ಆದರೆ ಅವರು ಸಿಗುವರೋ ಇಲ್ಲವೋ! ತಮ್ಮ ಇಂಗರ್ಸೋಲ್ ಗಡಿಯಾರಕ್ಕಾಗಿ ತಡಕಾಡಿದರು, ಕೊನೆಗೂ ಸಿಕ್ಕಿತು, ಆದರೆ ತನ್ನ ಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಹೊತ್ತು ತಿಳಿಯಲೆಂದು ಪೂರ್ವದ ಕಿಟಿಕಿ ಕಡೆ ನೋಡಿದರು, ಬೆಳಕಿತ್ತು, ಆದರೆ ಸೂರ್ಯನಿರಲಿಲ್ಲ, ಅಲ್ಲದೆ ಅದುವರೆಗೆ ಇದ್ದ ಬಿಸಿಲಕೋಲುಗಳನ್ನು ಒಂದೊಂದಾಗಿ ಉಪಸಂಹರಿಸಿಕೊಂಡಿದ್ದ. ಹುಬ್ಬಿನ ಮೇಲೆ ಎಡಗೈಯಿರಿಸಿ ಹೊತ್ತನ್ನು ಊಹಿಸುತ್ತ ಫೋನ್ ಸಮೀಪಿಸಿದರು, ಕೈಗಳು ಸಹಕರಿಸದ ಕಾರಣಕ್ಕೆ ರಿಸೀವರನ್ನು ಎತ್ತಿ ಪಕ್ಕಕ್ಕಿಟ್ಟರು, ಮುಖವನ್ನು ತುಸುತಗ್ಗಿಸಿ ಸಂಖ್ಯೆಗಳನ್ನು ಖಚಿತಪಡಿಸಿಕೊಳ್ಳುತ್ತ ಒಂದೊಂದಾಗಿ ತಿರುವಿದರು, ಎರಡೂ ಕೈಗಳ ಸಹಾಯದಿಂದ ರಿಸೀವರನ್ನು ಎತ್ತಿ ಕಿವಿಗಂಟಿಸಿ ಕುತೂಹಲ ತಳೆದರು, ತಮ್ಮ ಪುಣ್ಯಕ್ಕೆ ರಿಂಗಾಯಿತು, ಪುಣ್ಯಕ್ಕೆ ಅವರೇ ಎತ್ತಿಕೊಂಡರು. ವಿವರಿಸಿದರು, ಆದರೆ ಆಕಡೆಯಿಂದ ನಿಟ್ಟುಸಿರು ಕೇಳಿಸಿತು, ಮಾತ್ರೆಗಳಿದ್ದ ಬ್ಯಾಗಡಿಯ ಬಣ್ಣಗಳೊಂದಿಗೆ ತಮ್ಮ ಸಂದಿಗ್ಧತೆಯನ್ನು ವಿವರಿಸಿದರು, ಕೇಳಿಸಿಕೊಂಡ ನರಹರಿ ಇನ್ನೊಂದು ನಿಟ್ಟುಸಿರಿಟ್ಟು ಸಾಹೇಬರೆ ನಿಮ್ಮ ಸಂಕಟ ಅಥರ್ಾಗ್ತದೆ, ಬಿಡುವು ಮಾಡಿಕೊಂಡು ಸಂಜೆ ಬರ್ತೀನಿ, ಸದ್ಯಕ್ಕೆ ಯಾವುದೇ ಮಾತ್ರೆ ಕೊಡೋದು ಬೇಡ, ರಾಯರು ತಮ್ಮ ಮನಸ್ಸಿನಿಂದ ಹಳೆಯ ಟಾಕೀಸನ್ನು ವಿಸಜರ್ಿಸದ ಹೊರತು ಮಾತ್ರೆಗಳಿಂದ ಪ್ರಯೋಜನವಿಲ್ಲ, ಹೇಗಾದರೂ ಮಾಡಿ ಅವರನ್ನೆಲ್ಲಾದರೂ ಕರೆದೊಯ್ದರೆ ಒಳ್ಳೆಯದು, ಸ್ಥಳ ಬದಲಾವಣೆಯಾದರೆ ಅವರ ಆರೋಗ್ಯ ಸುಧಾರಿಸಬಹುದು, ಅವರು ಮಾನಸಿಕವ್ಯಾಧಿಗ್ರಸ್ತರು ಎಂದು ಹೇಳುವ ಧೈರ್ಯ ನನಗಿಲ್ಲ ಎಂದು ಹೇಳಿದರು, ಅದಕ್ಕೆ ಧೈರ್ಯಸಾಲದೆ ಗಫೂರ್ ನಿರುತ್ತರರಾದರು. ಏನೋ ಹೇಳಬೇಕೆನ್ನುವಷ್ಟರಲ್ಲಿ ಅವರೇ ರಿಸೀವರನ್ನು ಕೆಳಗಿರಿಸಿದರು.
ಸ್ಥಳಾಂತರಗೊಳ್ಳದ ಹೊರತು ರಾಯರ ಆರೋಗ್ಯ ಸುಧಾರಿಸುವುದಿಲ್ಲ, ಹೌದು ನರಹರಿಯ ಮಾತು ಸಂಪೂರ್ಣ ನಿಜವಲ್ಲದಿದ್ದರೂ, ಸುಳ್ಳಂತೂ ಖಂಡಿತವಲ್ಲ. ತಾವು ಎಷ್ಟೋ ಹೇಳಿರುವುದುಂಟು, ಟಾಕೀಸನ್ನು ಮರೆತು ವೃದ್ಯಾಪ್ಯವನ್ನು ನಗುನಗುತ್ತ ಅನುಭವಿಸಿ ಎಂದು ಹೇಳಿರುವುದುಂಟು, ಆದರೆ ತಮ್ಮ ಮಾತು ಅವರಿಗೆ ಯಾವಲೆಕ್ಕ! ಹಲವು ರೋಗಗಳಿಂದ ಜರ್ಜರಿತವಾಗಿರುವುದು ಅವರೋ! ತಾವೋ! ತಾವಿಬ್ಬರೂ! ತಾವಿರುವ ಪರಿಸರವೋ! ಕೋಟರ್ಿನ ಹಲವು ಕಡತಗಳಿಂದ ಕಿಕ್ಕಿರಿದ್ದ ಮುಚ್ಚಿದ್ದ ಕಪಾಟಿನ ಕಡೆ ನೋಡಿದರು, ದೀರ್ಘಉಸಿರು ಹೊರಚೆಲ್ಲಿದರು, ತಮ್ಮ ದೇಹದ ಸಮಸ್ತ ಪ್ರಾಣವಾಯು ಹೊರಚೆಲ್ಲಿದಂತೆ ಒಂದು ಕ್ಷಣ ಬಸವಳಿದರು, ಪುನಃ ಅರೆ ಗಳಿಗೆಯಲ್ಲಿ ಚೇತರಿಸಿಕೊಂಡರು. ತಮ್ಮ ಶೇಷಾಯುಷ್ಯವನ್ನು ಧಾರೆ ಎರೆಯುವ ಶಕ್ತಿ ಇದ್ದಿದ್ದಲ್ಲಿ ಹಿಂದುಮುಂದು ನೋಡದೆ ಹಾಗೆಯೇ ಮಾಡಿ ಅಲ್ಲಾಹುನ ಪಾದವನ್ನು ಸೇರಬಹುದಿತ್ತು ತಾವು, ಕಾರಣ ತನ್ನವರೆನ್ನುವರು ಯಾರಿರುವರು! ಪತ್ನಿಯ ದೇಹಾಂತ್ಯವಾದ ಬಳಿಕ ಇದ್ದ ಇಬ್ಬರು ಮಕ್ಕಳ ಪೈಕಿ ಲಾಹೋರಿನಲ್ಲೂ ಇನ್ನೊಬ್ಬ ಮಗ ಕರಾಚಿಯಲ್ಲೂ! ಅದೂ ದೇಶ ವಿಭಜನೆಗೊಂಡ ಸಂದರ್ಭದಲ್ಲಿ. ರಾಯರ ಸಾಮಿಪ್ಯವಿರದಿದ್ದಲ್ಲಿ ತಾವೂ ಪಾಕಿಸ್ತಾನದ ಪಾಲಾಗದೆ ಇರುತ್ತಿರಲಿಲ್ಲವೇನೋ! ಇಕ್ಬಾಲ್! ನಜೀರ್! ತಮಗರಿವಿಲ್ಲದಂತೆ ತಮ್ಮ ತುಟಿಗಳು ಮಕ್ಕಳ ನಾಮವಾಚಕಗಳನ್ನು ಉಚ್ಚರಿಸಲು ಪ್ರಯತ್ನಿಸಿದವು, ಎಷ್ಟೋ ವರ್ಷಗಳ ಬಳಿಕ ತಾವು ತಮ್ಮ ಮಕ್ಕಳನ್ನು ನೆನಪಿಸಿಕೊಂಡಿದ್ದು, ಹಾಗೆಯೇ ಆ ಎರಡೂ ಕರುಳ ಕುಡಿಗಳ ಹೆಸರುಗಳನ್ನು ನುಂಗಿ ಅಂತರಂಗದ ಖಬರಸ್ತಾನದಲ್ಲಿ ದಫನ್ ಮಾಡಿದರು.
ಎಲ್ಲಿ ರಾಯರು ತಮ್ಮ ತುಟಿ ಚಲನೆಗಳನ್ನು ಗಮನಿಸುವುದರ ಮೂಲಕ ತಮ್ಮ ಅದೃಷ್ಟಹೀನ ಮಕ್ಕಳ ಹೆಸರುಗಳನ್ನು ಗ್ರಹಿಸಿದರೋ ಎಂಬ ಆತಂಕ ಅನುಭವಿಸುತ್ತಲೇ ಕಂದುವರ್ಣದ ಮೊಸುಂಬೆರಸ ತುಳುಕುತಲಿದ್ದ ಗ್ಲಾಸನ್ನು ತಮ್ಮೆರಡೂ ಕೈಗಳಲ್ಲಿ ಹಿಡಿದುಕೊಂಡು ಮೆಲ್ಲಗೆ ನಡೆದು ಸಮೀಪಿಸಿದರು. ಯಾವ ಪುರುಷಾರ್ಥಕ್ಕೆ ಇದೆಲ್ಲ ಎಂದು ಮಾಮೂಲಿನಂತೆ ನಿರಾಕರಿಸಲಿಲ್ಲ ರಾಯರು, ಅದೇ ಆಶ್ಚರ್ಯ! ಯಾಂತ್ರಿಕವಾಗಿ ನೋಡಿದರು, ನಿಟ್ಟುಸಿರುಬಿಡುವ ಚೈತನ್ಯವೂ ಇರಲಿಲ್ಲ, ಇವರು ಕಕ್ಕುಲಾತಿಯಿಂದ ಗ್ಲಾಸನ್ನು ತುಟಿಗಳ ಬಳಿಗೊಯ್ದು ಕುಡಿಸಿದರು, ನಿಧಾನದಿಂದ. ಅವರೂ ಅಷ್ಟೆ, ತ್ರಾಸು ಅನುಭವಿಸುತ್ತಲೇ ನಿಧನಿಧಾನವಾಗಿ ಹೀರಿದರು, ಅದರ ಬಹುಪಾಲು ತುಟಿಗಳ ಮಗ್ಗುಲ ಕೊರಕಲಿಂದ ಕುತ್ತಿಗೆಯಿಂದ ಹರಿದು ಖಾದಿಬನಿಯನ್ನಿನ ಮೇಲೆ ತೊಟ್ಟಿಕ್ಕಿ ಕಲೆ ಮೂಡಿಸಲಿತ್ತೇನೊ! ಗಫೂರ್ ಮುನ್ನೆಚ್ಚರಿಕೆಯಿಂದ ತಮ್ಮ ಹೆಗಲ ಮೇಲಿದ್ದ ಉತ್ತರೀಯದಿಂದ ತಡೆಯದಿದ್ದಲ್ಲಿ ಕಲೆಗಳ ಅಚಾತುರ್ಯ ಸಂಭವಿಸುತ್ತಿತ್ತು.
ಊರುಗೋಲ ತಲೆ ಮೇಲಿದ್ದ ಅವರ ಬಲ ಮುಂಗೈ ಕಂಪಿಸಲಾರಂಭಿಸಿತು, ಮೆಲ್ಲಗೆ ಚಲಿಸುತ್ತ ಅದು ತಮ್ಮ ಮುಂಗೈಯನ್ನು ಹಿತವಾಗಿ ಸ್ಪಶರ್ಿಸಿತು, ತಾವೂ ತಮ್ಮ ಇನ್ನೊಂದು ಕೈಯನ್ನು ಅದರ ಮೇಲಿರಿಸುತ್ತ ಆತಂಕದಿಂದ ನೋಡುವಷ್ಟರಲ್ಲಿ ರಾಯರು ಮುಚ್ಚಿ ತೆರೆದ ಕಣ್ಣುಗಳು ನೀರಿನಿಂದ ಒದ್ದೆಯಾಗಿದ್ದವು. ಆತಂಕ ಹೆಚ್ಚಿತು, ಮೇಲೇಳಲು ಪ್ರಯತ್ನಿಸಿದರು, ಸಾಧ್ಯವಾಗದೆ ಪುನಃ ಕುಸಿದರು, ತಮ್ಮ ಮುಖವನ್ನು ಅದೇ ಮೊದಲ ಸಲವೆನ್ನುವಂತೆ ದಿಟ್ಟಿಸಿದರು, ಅವರ ಕಣ್ಣುಗಳಲ್ಲಿ ಆತಂಕ ನೂರ್ಮಡಿಸಿತ್ತು, ಯಾಕೆ ಏನೆಂದು ಕೇಳಲು ಧೈರ್ಯ ಸಾಲಲಿಲ್ಲ, ಇಷ್ಟೊತ್ತಿಗಾಗಲೇ ಸುಪ್ರೀಂಕೋಟರ್ಿನಿಂದ ತೀಪರ್ು ಬರಬೇಕಿತ್ತಲ್ವಾ! ಎಂದು ಕೇಳಿದರು, ಅದೂ ಶಬ್ಧಗಳನ್ನು ಒಂದೊಂದಾಗಿ ಹೊಂದಿಸಿಕೊಂಡು, ಅದರ ಮೇಲೆಯೇ ತಮ್ಮ ಕುಟುಕು ಜೀವ ಅವಲಂಭಿಸಿರುವುದು ಎನ್ನುವಂತೆ. ಹೌದು! ಈ ವಾರದೊಳಗೆ ತೀಪರ್ು ಬರುವುದು ಖಂಡಿತವೆಂದು ದೆಹಲಿಯ ಪ್ರಸಿದ್ಧ ನ್ಯಾಯವಾದಿ ಪ್ರೊ. ಖುರಾನ ಹೇಳಿದ್ದರು, ತಮ್ಮ ಖಟ್ಲೆಯ ಕಡತವನ್ನು ಅವರು ಸ್ವೀಕರಿಸುವುದಕ್ಕೂ ಮೊದಲು..
ನಿಡುಸುಯ್ದು ತಮ್ಮತ್ತ ತೀಕ್ಷ್ಣವಾಗಿ ನೋಡಿದ್ದರು, ಅವರ ನೋಟದಲ್ಲಿಯೇ ನ್ಯಾಯಾಲಯದ ಸಂಭವನೀಯ ಪಲಿತಾಂಶದ ಮುನ್ಸೂಚನೆಯಿತ್ತು!

***

ಗಾಂಧಿಯ ಮಾಂತ್ರಿಕನೋಟವನ್ನು ಸವಿದವರೇ ಏನೇನೋ ಆಗಿರುವ ಈಹೊತ್ತಿನಲ್ಲಿ ಮಹಾತ್ಮರ ಜೊತೆ ಹಲವು ವರ್ಷಗಳ ಒಡನಾಡಿದ ರಾಯರ ಗತಕಾಲದ ಜೀವನವನ್ನು ಮೆಲಕು ಹಾಕುವುದು ರೋಮಾಂಚನದ ಸಂಗತಿ. ಮೈಲಾರ ಮಹಾದೇವಪ್ಪನವರ ನಂತರ ನಿಕಟವತರ್ಿಗಳಾಗಿದ್ದವರು ಇವರೇ, ನಲವತ್ತರ ದಶಕದಾದ್ಯಂತ ವೃತ್ತಪತ್ರಿಕೆಗಳಲ್ಲಿ ಇವರೇ ಇವರಾಗಿ ರಾರಾಜಿಸುತ್ತಿದ್ದರು, ಈವಾರ ದೆಹಲಿಯಲ್ಲಿದ್ದರೆ ಇನ್ನೊಂದು ವಾರ ಕಲಕತ್ತೆಯಲ್ಲಿ, ಎರಡುವರ್ಷ ಯರವಾಡ ಜೈಲಿದ್ದರೆ ಐದುವರ್ಷ ತಿಹಾರ ಜೈಲಿನಲ್ಲಿ, ಒಮ್ಮೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರೆ ಇನ್ನೊಮ್ಮೆ ಅಸಹಕಾರ ಚಳವಳಿಯಲ್ಲಿ ಭಾಗವಹಿಸುತ್ತಿದ್ದರು. ನಿಜ ಹೇಳುವುದಾದರೆ ಮಹಾತ್ಮ ಕೊಟ್ಟೂರಿಗೆ ಭೆಟ್ಟಿ ನೀಡಿದ್ದು, ರಾಯರ ಮನೆಯಲ್ಲಿಯೇ ಒಂದೂವರೆ ಹಗಲು ಒಂದು ಇರುಳು ತಂಗಿದ್ದು ಈ ಆತ್ಮೀಯತೆಯಿಂದಾಗಿಯೇ. ಈ ಬಿಡುವಿಲ್ಲದ ಅನ್ಯೋನ್ಯತೆ ಕಾರಣದಿಂದಾಗಿ ರಾಯರು ತಮ್ಮ ಗೃಹಕೃತ್ಯಗಳ ಕಡೆ ಗಮನ ಹರಿಸಿದ್ದು ವಿರಳ, ಅದರಲ್ಲೂ ಪತ್ನಿ ವಸುಂಧರಮ್ಮನವರ ಮುಖ ನೋಡಿದ್ದು ತೀರಾ ವಿರಳ. ಮುಂದೊಮ್ಮೆ ಈ ದೇಶಕ್ಕೆ ಸ್ವಾಂತಂತ್ರ್ಯ ಲಭಿಸಿದನಂತರವೂ, ಗಾಂಧೀಜಿ ಮತಾಂಧನ ಗುಂಡಿಗೆ ಬಲಿಯಾದ ಬಳಿಕವಾದರೂ! ಹ್ಹೂಂ ಹ್ಹು! ಇಲ್ಲವೇ ಇಲ್ಲ. ರಾಯರಿಗೇನೋ ತಮ್ಮ ಖಾಸಗಿ ಜೀವನವನ್ನು ಯಾದೃಚ್ಛಿಕವಾಗಿ ಅನುಭವಿಸುವ ಆಸೆಯಿತ್ತು, ಆದರೆ ಸ್ವಾತಂತ್ರ್ಯೋತ್ತರ ರಾಜಕಾರಣ ತಮಗೆ ಪುರುಸೊತ್ತು ನೀಡಿದರೆ ತಾನೆ!
ಗಾಂಧೀಜಿಯವರ ನಿಕಟವತರ್ಿಯಾದ ಅವರು ತಮ್ಮ ಆತ್ಮಸಾಕ್ಷಿ ನಿರ್ಲಕ್ಷಿಸಿ ಶಾಸಕರಾದರು, ಚಲಾವಣೆಯಲ್ಲಿರುವ ರಾಜಕೀಯಪಕ್ಷಗಳು ನೈತಿಕಮೌಲ್ಯಗಳನ್ನು ಗಾಳಿಗೆ ತೂರುತ್ತಿವೆ ಎಂದು ತಿಳಿದಿದ್ದರೂ ಕಾಂಗ್ರೇಸ್ ಪಕ್ಷವನ್ನು ಸಂಘಟಿಸಲು ದುಡಿದರು. ಅನಾಮಧೇಯ ಅಲಕ್ಷಿತ ಮುಖಗಳನ್ನು ರಾಜಕೀಯ ಮಾಯಾದರ್ಪಣದಲ್ಲಿ ಪ್ರತಿಬಿಂಭಿಸಿದರು, ಭ್ರಷ್ಟಾಚಾರದ ವಿರುದ್ಧ ಹೋರಾಡುವುದರ ಮೂಲಕ ತಾವೂ ಭ್ರಷ್ಟಾಚಾರದ ಕೆಸರನ್ನು ಮೈಗಂಟಿಸಿಕೊಂಡರು, ನಿಮ್ಮಂಥವರೇ ಹೀಗಾದರೆ ಹೇಗೆ ಸ್ವಾಮಿ ಎಂದು ಯಾರೋ ಕೇಳಿದ್ದಕ್ಕೆ ತಾಮ್ರ ಕಂಚು ಬಳಸದೆ ಚಿನ್ನದಿಂದ ಆಭರಣ ಮಾಡುವುದು ಸಾಧ್ಯವೆ ಎಂದು ತಿರುಗೇಟು ನೀಡಿದರು. ಭಗವದ್ಗೀತೆಯ ಕಂದೀಲು ಬೆಳಕಿನಾಶ್ರಯದಲ್ಲಿ ಬಿಡುವು ಮಾಡಿಕೊಂಡು ಅಸೇತುಹಿಮಾಚಲದುದ್ದಕ್ಕೂ ಇರುವ ಪುಣ್ಯಕ್ಷೇತ್ರಗಳನ್ನು ಪತ್ನಿ ಮತ್ತು ಚಿಕ್ಕಮಗು ಗೋಪಾಲನ ಸಂಗಡ ಸಂಚರಿಸಿದರು, ಚರಾಸ್ತಿಯ ಕಿಂಚಿತ್ ಭಾಗವನ್ನು ವಿನಿಯೋಗಿಸಿ ವೈಷ್ಣೋದೇವಿ, ಅಮರನಾಥ, ತಿರುಪತಿ, ಶ್ರೀಶೈಲ ರಾಮೇಶ್ವರ ಸೇರಿದಂತೆ ನೂರಾರು ದೇವರುದಿಂಡಿರುಗಳಿಗೆ ಹಲವು ರೀತಿಯ ಅಭಿಷೇಕಗಳನ್ನು ಮಾಡಿಸಿ ಪಾಪಪ್ರಜ್ಞೆ ನೀಗಿಸಿಕೊಂಡೆವೆಂದು ಬೀಗಿದರು.
ಸಮುದ್ರ ನೆಂಟಸ್ತನ ಉಪ್ಪಿಗೆ ಬಡತನ ಎಂಬ ಗಾದೆ ಕುರಿತಂತೆ ಕೊಟ್ಟೂರಿನ ಜನತೆ ಮಾತಾಡಿಕೊಳ್ಳುವುದು ರಾಯರ ಕರ್ಣಕುಂಡಲಗಳನ್ನು ಭೇದಿಸಿ ಕೇಳದೆ ಇರಲಿಲ್ಲ. ನಾನೇನು ಮಾಡಬೇಕರಪ್ಪ ಕೊಟ್ಟೂರಿಗೆ ಎಂದು ಕೇಳಿದ್ದಕ್ಕೆ ಸಾವಿರಾರು ಜನರ ಕೆಲ ಮುಖಂಡರು ಮನರಂಜನೆ ಕನಸಿನ ಮಾತಾಗಿದೆ ಸ್ವಾಮಿ, ಒಂದು ಸಿನೆಮಾ ನೊಡಲಿಕ್ಕೆ ಹತ್ತಾರು ಮೈಲು ದೂರದಲ್ಲಿರುವ ಕೂಡ್ಲಿಗಿ ಸಂಡೂರುಗಳಿಗೆ ಬಂಡಿ ಕಟ್ಟಿಕೊಂಡು ಹೋಗಿ ಬರ್ತಿದ್ದೀವಿ, ದಯಾಳುಗಳಾದ ತಾವು ನಮ್ಮೂರಲ್ಲಿ ಸಿನೆಮಾ ಟಾಕೀಸು ಕಟ್ಟಿಸಿರಿ ಸ್ವಾಮಿ ಎಂದು ಕೇಳುವುದೆ! ಅದಕ್ಕೆ ರಾಯರು ಮುಗುಳ್ನಕ್ಕು ನಾನೇನೋ ಅಂದ್ಕೊಂಡಿದ್ದೆ, ಅಷ್ಟೇನಾ, ವರ್ಷದೊಳಗೆ ಕಟ್ಟಿಸ್ತೀನಿಬಿಡ್ರಿ ಎಂದು ಸಮ್ಮತಿಸಿದರು.
ಹೇಗೋ ಊರ ಹೊರವಲಯದಲ್ಲಿ ಏಳೆಂಟೆಕರೆ ಸ್ಥಿರಾಸ್ತಿ! ಅದೂ ಪಿತ್ರಾಜರ್ಿತವಾಗಿ ಲಭಿಸಿದ್ದು ಇತ್ತಲ್ಲವೆ! ವರ್ಷ ಅವಧಿಯಲ್ಲಿ ಸುಸಜ್ಜಿತವಾದ ಹಿಂದು ಮುಸ್ಲಿಂ ವಾಸ್ತುಶೈಲಿಯ ಕಟ್ಟಡವನ್ನು ನಿಮರ್ಿಸಿದರು, ಅದಕ್ಕೆ ನ್ಯೂಭಾರತ್ ಚಿತ್ರಮಂದಿರವೆಂದು ನಾಮಕರಣ ಮಾಡಿದರು. ಅದರ ಉದ್ಘಾಟನೆಗೆ ತಾವು ಖುದ್ದ ದೆಹಲಿಗೆ ಹೋಗಿ ಅಂದಿನ ಪ್ರಧಾನಿ ನೆಹರುರವರನ್ನು ಆಮಂತ್ರಿಸಿದರು, ಅವರು ಚಕಾರವೆತ್ತದೆ ಆಗಮಿಸಿದರು, ತಮ್ಮ ಪ್ರಾರಂಭೋತ್ಸವದ ಭಾಷಣದಲ್ಲಿ ರಾಯರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು, ರಾಯರಂಥ ಅಭಿಜಾತ ರಾಜಕಾರಣಿಗಳಿರುವಲ್ಲಿ ಮನರಂಜನೆಗೆ ಕೊರತೆಯಿರುವುದಿಲ್ಲವೆಂದೂ ಹೇಳಿದರು. ಅಂದಿನಿಂದ ರಾಯರ ಭವಿಷ್ಯ ಹೊಸ ಆಯಾಮ ಪಡೆಯಿತು. ಕೊಟ್ಟೂರಿನ ಜನರೊಂದೇ ಅಲ್ಲದೆ ಸುತ್ತಮುತ್ತಲ ಹತ್ತಾರು ಊರುಗಳ ಜನರು ಅಲ್ಲಿಗೆ ಬಂದು ಸಿನೆಮಾ ನೋಡಲಾರಂಭಿಸಿದರು. ಹಾಕಿದ ಬಂಡವಾಳ ಒಂದೆರಡು ವರ್ಷಗಳಲ್ಲಿ ಮರಳಿತು, ಉತ್ತರೋತ್ತರವಾಗಿ ಕೀತರ್ಿಯೂ ಪ್ರಾಪ್ತವಾಯಿತು, ರಾಯರು ಕೊಟ್ಟೂರೊಂದೇ ಅಲ್ಲದೆ ಅದಿದ್ದ ಬಳ್ಳಾರಿ ಜಿಲ್ಲೆಯ ಸವರ್ಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ಆ ಜನಪ್ರಿಯತೆಯಿಂದಾಗಿಯೇ ರಾಯರು ಪುನಃ ಎರಡು ಸಲ ಶಾಸಕರಾದದ್ದು, ಹೋಬಳಿ ಮಟ್ಟದಲ್ಲಿದ್ದ ಕೊಟ್ಟೂರನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿ ಕಾಪರ್ೊರೇಷನ್ ಸ್ಥಾನಮಾನಕ್ಕೆ ತಂದು ನಿಲ್ಲಿಸಿದರು. ಅದರ ಪರಿಣಾಮವಾಗಿ ಊರಿಗೆ ಮೂರೂವರೆ ಮೈಲು ದೂರದಲ್ಲಿದ್ದ ನ್ಯೂ ಭಾರತ್ ಚಿತ್ರಮಂದಿರ ನಗರದ ಮಧ್ಯಭಾಗಕ್ಕೆ ಆಗಮಿಸಿತು, ಅದು ಹಾಗೆ ವಲಸೆ ಬರಬಹುದೆಂದು ತಮಗೆ ಮೊದಲೇ ತಿಳಿದಿದ್ದಲ್ಲಿ ತಾವು ಕೊಟ್ಟೂರನ್ನು ಅಭಿವೃದ್ಧಿಪಡಿಸುವ ಗೋಜಿಗೆ ಹೋಗುತ್ತಿರಲಿಲ್ಲವೇನೊ!
ರಾಯರು ತಮ್ಮ ತಲೆಯ ಎಡಭಾಗವನ್ನು ಹೊರಳಿಸಿದರು ಅತ್ಯಾಸಕ್ತಿಯಿಂದ. ಆದರೆ ಬೆಳಕಿನ ಅಭಾವದಿಂದಾಗಿಯೋ, ತಮ್ಮ ಕಣ್ಣುಗಳ ದೌರ್ಬಲ್ಯದಿಂದಾಗಿಯೋ ಟಾಕೀಸು ಗೋಚರಿಸಲಿಲ್ಲ. ಗಫೂರರ ಬಲಗೈಯನ್ನು ತಮ್ಮೆರಡೂ ಕೈಗಳಿಂದ ಅಪ್ಯಾಯತೆಯಿಂದ ಸ್ಪಶರ್ಿಸಿದರು, ಚಾಳೇಸನ್ನಾಪೇಕ್ಷಿಸಿ ಸಖನ ಸಹಾಯದಿಂದ ಧರಿಸಿದರು. ಅಪಾದಮಸ್ತಕ ದಿಟ್ಟಿಸಿದರು.
ಲಾಯರಿಗೆ ಫೋನ್ ಮಾಡಿದರೆ ಹೇಗೆ ಗಫೂರ್! ತುಂಬಾ ಪ್ರಯಾಸಪಟ್ಟು ಕೇಳಿದರು.
ಹಿಂದಿನ ದಿವಸವೇ ಸಾಹೇಬರು ಖುರಾನ ಅವರನ್ನು ದೂರವಾಣಿ ಮೂಲಕ ಸಂಪಕರ್ಿಸಿದ್ದರು. ಅವರು ತಮ್ಮ ಮನಸ್ಸಿನಲ್ಲಿದ್ದುದನ್ನೇ ಹೇಳಿದರು. ನ್ಯಾಯಮೂತರ್ಿಗಳು ಹಲವರಿದ್ದರೂ ಅವರದ್ದು ಒಂದೇ ಮನಸ್ಥಿತಿ ಇರುವುದಿಲ್ಲ, ಹಾಗೆ ನ್ಯಾಯವಿತರಣೆ ಸಹ. ತಮ್ಮ ಕರಿಯರ್ ದೃಷ್ಟಿಯಿಂದ ಇಂಥ ನಕಾರಾತ್ಮಕ ಖಟ್ಲೆಗಳನ್ನು ಹಿಡಿಯುವುದು ಅಪರೂಪ. ಕಕ್ಷಿದಾರರು ಸ್ವಾತಂತ್ರ್ಯಯೋಧರು, ಚಿರಪರಿಚಿತ ರಾಜಕಾರಣಿಗಳು ಎಂಬ ಕಾರಣ ಒಂದಾದರೆ ಇನ್ನೊಂದು ಕಾರಣವೆಂದರೆ ಮಾನವೀಯತೆ. ಎಪ್ಪತ್ತರ ಹೊಸ್ತಿಲಲ್ಲಿರುವ ತಮ್ಮ ಪರಿಸ್ಥಿತಿಯೂ ಅಷ್ಟಕಷ್ಟೆ, ಇರುವ ಇಬ್ಬರು ಮಕ್ಕಳ ಪೈಕಿ ಒಬ್ಬ ಆಸ್ಟ್ರೇಲಿಯಾದಲ್ಲೂ, ಇನ್ನೊಬ್ಬ ಮಗ ಕ್ಯಾಲಿಫೋನರ್ಿಯಾದಲ್ಲೂ ತಮ್ಮ ಪಾಡಿಗೆ ತಾವಿರುವರು. ಅವರವರ ಹೆಂಡಂದಿರೂ ರಜನಿಗಿಂತ ಭಿನ್ನರಲ್ಲ. ಹೆತ್ತವರ ಅಸಹಾಯಕತೆಯನ್ನು ಮಕ್ಕಳು ಸಕರ್ಾರ ನ್ಯಾಯಾಲಯ ಕಾನೂನು ಅರ್ಥಮಾಡಿಕೊಳ್ಳಬೇಕು. ನಿಡುಸುಯ್ದು ಖುರಾನ ಮುಂದುವರೆದು ಹೇಳಿದರು ಗಫೂರ್ ಸಾಹೇಬರೆ, ನಿಮ್ಮ ಹಾಗೂ ನಮ್ಮ ಕಕ್ಷಿದಾರರ ಸಂಕಟ ಅರ್ಥಆಗ್ತದೆ, ಆದರೆ ಏನು ಮಾಡೋದು, ಕಾನೂನಿನೆದುರು ನಾನು ಅಸಹಾಯಕ, ಮುಖ್ಯವಾಗಿ ರಾಯರ ಅದೃಷ್ಟದ ಮೇಲೆ ಎಲ್ಲಾ ಅವಲಂಭಿಸಿದೆ, ಕೋಟರ್್ ಮಾನವೀಯವಾಗಿ ಇತ್ಯರ್ಥ ಮಾಡಲೂಬಹುದು, ಯಾವುದಕ್ಕೂ ನಿರಾಶರಾಗಬೇಡಿ
ತಮ್ಮಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ರಾಯರಿಗೆ ವಿವರಿಸುವುದು ಹೇಗೆ? ಗಫೂರ್ ಉಭಯಸಂಕಟಕ್ಕೆ ಸಿಲುಕಿದರು, ಕತ್ತು ತಿರುಗಿಸದೆಯೆ ಕಣ್ಣೊರಳಿಸಿ ನೋಡಿದರು, ಪ್ರಶ್ನಾರ್ಥಕವಾಗಿ. ದಿನದಿಂದ ದಿನಕ್ಕೆ, ಅಲ್ಲ.. ಅಲ್ಲ, ಕ್ಷಣದಿಂದ ಕ್ಷಣಕ್ಕೆ ಕೃಶಗೊಳ್ಳುತ್ತಿರುವ, ತ್ಯಜಿಸಲೆಂದೇ ಇಹಲೋಕದ ಅಂಚಲ್ಲಿ ನಿಂತಿರುವ ಶರೀರ. ಆದರೂ ತನ್ನದಾಗಲೇಬೇಕೆಂಬ ಹಠ. ಇನ್ನೇನು ಹೊರಜಾರಲಿದ್ದ ನಿಟ್ಟುಸಿರನ್ನು ಹಾಗೆ ನಿಗ್ರಹಿಸಿದರು, ತಮ್ಮ ಸಖನಿಗೆ ಕೇಳಿಸೀತೆಂಬ ಮುಂಜಾಗ್ರತೆಯಿಂದ. ನುಂಗಿದ ನಿಟ್ಟುಸಿರು ಅಡಗುವ ಬದಲು ತಮ್ಮ ಅಂತರಂಗದಲ್ಲಿ ಚಂಡಮಾರುತ ಸೃಷ್ಠಿಸುತ್ತಿರುವಂಥ ನೋವು ಅಸಹಾಯಕತೆ ಮೊಳೆಯಿತು. ಕುಶಲೋಪರಿ ವಿಚಾರಿಸಲೆಂದಾದರೂ ಮಗ ಸೊಸೆ, ಅವರಿಬ್ಬರ ಪೈಕಿ ಯಾರಾದರೊಬ್ಬರು! ಹ್ಹೂಹ್ಹು! ಇಲ್ಲವೇ ಇಲ್ಲ. ತಂದೆಯನ್ನು ಮಾತನಾಡಿಸುವುದಕ್ಕೆ ಮಗನಿಗಾಗಲೀ, ಮಾಮನವರನ್ನು ಮಾತನಾಡಿಸುವುದಕ್ಕೆ ಸೊಸೆಗಾಗಲೀ ಪುರುಸೊತ್ತಿಲ್ಲ, ಅವರಿಗೆಷ್ಟು ಪುರುಸೊತ್ತಿಲ್ಲವೆಂದರೆ ಪರಸ್ಪರ ಮಾತಾಡುವುದೂ ಕಡಿಮೆಯೆ, ನೋಡಿಕೊಳ್ಳಲಿಕ್ಕಾಗದೆ ತಮ್ಮ ಇದ್ದೊಬ್ಬ ಮಗನನ್ನೂ ಊಟಿಯಲ್ಲಿನ ರೆಸಿಡೆನ್ಷಿಯಲ್ ಸ್ಕೂಲಿಗೆ ಸೇರಿಸಿರುವರೆಂದರೆ! ಜೀವ ಸೈರಿಸಲಾರದೆ ತಾವೇ ಒಮ್ಮೆ ಅಲ್ಲವಯ್ಯಾ ಗೋಪಾಲ ದಿನಕ್ಕೊಂದು ಸಲ ಬೇಡ, ವಾರಕ್ಕೊಮ್ಮೆಯಾದರೂ ಎಂದು ಕೇಳಿದ್ದಕ್ಕೆ ಅವನು ಟೈಂ ಎಲ್ಲಿದೆ ಚಾಚಾ, ನಿಜ ಹೇಳುವುದಾದರೆ ನನಗೆ ಊಟ ಮಾಡುವುದಕ್ಕೂ ಪುರುಸೊತ್ತು ಸಿಕ್ಕುತ್ತಿಲ್ಲ, ಹೇಗೋ ನೀವಿದ್ದೀರಲ್ಲವೆ! ಅದೂ ಅಲ್ಲದೆ ಅವರಿಗೆ ನಾನು ಕಡಿಮೆ ಮಾಡಿರುವುದಾದರೂ ಏನು ಹೇಳಿ ಎಂದು ಬಾಯಿ ಮುಚ್ಚಿಸಿದ್ದನು. ಅದಲ್ಲದೆ ವಯಸ್ಸಾಗಿರುವ ನಿಮ್ಮ ಕೈಲಾಗದಿದ್ದರೆ ಹೇಳಿ, ಒಳ್ಳೆಯ ವೃದ್ದಾಶ್ರಮಗಳಿಗೆ ಕೊರತೆಯಿಲ್ಲ, ಹೇಗೋ ಅವರೇ ಸ್ಥಾಪಿಸಿರುವ ವೃದ್ದಾಶ್ರಮವಿದೆ, ನಿಮ್ಮಿಬ್ಬರನ್ನೂ.. ಎಂದು ತನಗರಿವಿಲ್ಲದಂತೆ ಹೇಳಿ ತುಟಿ ಕಚ್ಚಿಕೊಂಡಿದ್ದನು.
ಹೌದು ರಾಯರೇ ಸ್ಥಾಪಿಸಿರುವ ವೃದ್ದಾಶ್ರಮಗಳಲ್ಲಿ ಮುಖ್ಯವಾದವುಗಳೆಂದರೆ ಜೀವನ ಸಂಧ್ಯಾ, ಜೀವನ ಚೈತ್ರ ಇವೇ ಮುಂತಾದವುಗಳು. ಕೆಲವು ವರ್ಷಗಳ ಹಿಂದಿನವರೆಗೆ ಅವರೇ ಅವುಗಳ ಮಹಾಪೋಷಕರೂ ಆಗಿದ್ದರು. ಬಿಡುವು ಮಾಡಿಕೊಂಡು ತಿಂಗಳಿಗೊಮ್ಮೆಯಾದರೂ ಅವುಗಳಿರುವಲ್ಲಿಗೆ ಹೋಗಿ ಅಲ್ಲಿರುವ ವೃದ್ದರ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಿದ್ದರು. ವೃದ್ದರ ಸಂಗಡ ತಾಸುಗಟ್ಟಲೆ ಕಳೆಯುತ್ತ ಅವರ ಕಷ್ಟಸುಖಗಳನ್ನು ವಿಚಾರಿಸುತ್ತಿದ್ದರು, ಇಂಥ ಮಕ್ಕಳು ಇದ್ದರೆಷ್ಟು ಇರದಿದ್ದರೆಷ್ಟು ಎಂದು ನಿಷ್ಠುರವಾಗಿ ನುಡಿಯುತ್ತಿದ್ದ ಅವರಿಗೆ ತಮ್ಮ ಮಗ ತಮ್ಮನ್ನು ಅನಾಥನಂತೆ ನಡೆಸಿಕೊಳ್ಳುವನು ಎಂದು ಭಾವಿಸಿರಲಾರರು. ಕೆಲವು ತಿಂಗಳುಗಳ ಹಿಂದೆ ನೋಡಲೆಂದೇ ಕೊಟ್ಟೂರಿಗೆ ಆಗಮಿಸಿದ್ದ ಸಾಬಮತಿ ಆಶ್ರಮದ ಮುಖ್ಯಸ್ಥ ಗೋಖಲೆ ತಮ್ಮೊಂದಿಗೆ ಬರುವಂತೆ ಕೇಳಿಕೊಂಡಿದ್ದರು, ಆದರೆ ರಾಯರು ಅದಕ್ಕೆ ಒಪ್ಪಿರಲಿಲ್ಲ, ಹೋದರೆಲ್ಲಿ ತಮ್ಮ ಮಗನಿಗೆ ಅವಮಾನವಾಗುವುದೋ! ತಮ್ಮ ಗೈರುಹಾಜರಿಯಲ್ಲಿ ತಮ್ಮ ಮಗ ತಮ್ಮ ಕಷ್ಟಾಜರ್ಿತ ಟಾಕೀಸನ್ನು ನೆಲಸಮ ಮಾಡಿದರೆ ಎಂಬ ಆತಂಕದಿಂದ. ಎಂದು ಭಾವಿಸಿ. ಅದಾದ ಬಳಿಕ ತಾವೇ ಎಲ್ಲಿಗೋ ಹೊರಟು ಹೋಗಲೆಂದು ಸಾಮಾನು ಸರಂಜಾಮು ಸಜ್ಜುಪಡಿಸಿಕೊಂಡಿದ್ದುಂಟು. ಉತ್ತರ ಭಾರತದಲ್ಲೆಲ್ಲಿಗೋ ರೈಲ್ವೇ ಟಿಕೆಟ್ಟುಗಳನ್ನು ಕಾಯ್ದಿರಿಸಿದ್ದುಂಟು, ಬಳಿಕ ಅವುಗಳನ್ನು ಕ್ಯಾನ್ಸಲ್ ಮಾಡಿಸಿದ್ದೂ ಉಂಟು. ಕೊಟ್ಟೂರಲ್ಲಿಯೇ ಇರುವುದೋ ಎಲ್ಲಿಗಾದರೂ ಹೊರಟು ಕಾಣೆಯಾಗುವುದೋ ಎಂದು ಚಿಂತಿಸುತ್ತಲೇ ಇದ್ದರು. ಈ ತೊಳಲಾಟವೇ ಅವರನ್ನು ಕೃಶರನ್ನಾಗಿಸಿರುವುದು! ಅವರ ಈ ದುಃಸ್ಥಿತಿಯೇ ತಮ್ಮನ್ನು ಇಲ್ಲಿ ಬಂಧಿಸಿರುವುದು. ಗಫೂರ್ ಸಾಹೇಬರು ಅವನತಮುಖರಾಗಿರುವ ರಾಯರ ಕಡೆಗೊಮ್ಮೆ ಬೀದಿದೀಪದ ಬೆಳಕಲ್ಲಿ ತನ್ನನ್ನು ತಾನು ಮರೆಮಾಚಿಕೊಂಡಿರುವ ನ್ಯೂಭಾರತ್ ಚಿತ್ರಮಂದಿರದ ಕಡೆಗೊಮ್ಮೆ ನೋಡುವಷ್ಟರಲ್ಲಿ!

***

ಆ ದಿವಸ ಏನು ನಡೆಯಿತೆಂದರೆ!
ಅಂಚೆಯವನು ಮೆಟ್ಟಿಲೇರುವ ಸದ್ದಿಗೆ ಸ್ವಲ್ಪ ಎಚ್ಚರಗೊಂಡ ರಾಯರು ಅವನು ಖಾವಂದರು ಇರುವರಾ ಎಂದು ಕೂಗಿದೊಡನೆ ಪೂರ್ಣ ಎಚ್ಚರಗೊಂಡರು. ಆದರೆ ತಾವು ಏಳುವ ಸ್ಥಿತಿಯಲ್ಲಿರಲಿಲ್ಲ, ಆದರೂ ಏಳಲು ಎರಡು ಹೆಜ್ಜೆ ನಡೆಯಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ತಮ್ಮ ದೇಹದ ಅಸಹಾಯಕತೆಯನ್ನು ಶಪಿಸುವುದೇಕೆ! ಹಾಗೆ ಪುನಃ ಒರಗಿಕೊಂಡರು, ಪೀನಮಸೂರದ ಮೂಲಕ ಅಂದಿನ ವೃತ್ತಪತ್ರಿಕೆಯ ದೊಡ್ಡ ಅಕ್ಷರಗಳ ಮೇಲೆ ಕಣ್ಣಾಡಿಸುತ್ತಿದ್ದ ಗಫೂರ್ ಸ್ವಲ್ಪ ಮಿಸುಕಿ ಕತ್ತೊರಳಿಸದಿದ್ದಲ್ಲಿ ತಾವೇ ಆ ಹೆಸರನ್ನು ಹಿಡಿದು ಕೂಗುತ್ತಿದ್ದರೇನೋ! ಆ ಸದ್ದನ್ನು ಕೇಳಿಯೂ ಕೇಳದವರ ಹಾಗೆ, ಗೆಳೆಯ ಆರಂಭಿಸಲಿರುವ ಚಟವಟಿಕೆಗಳನ್ನು ನೋಡಿಯೂ ನೋಡದವರ ಹಾಗೆ, ತಮ್ಮ ಬಗ್ಗೆ ತಮಗೇ ಅರಿವಿಲ್ಲದವರ ಹಾಗೆ ಮುಖವನ್ನು ದುಪ್ಪಟಿಯಲ್ಲಿ ಮರೆಮಾಚಿದರು. ತಮ್ಮ ಅಶಕ್ತ ಪಂಚೇಂದ್ರಿಯಗಳನ್ನು ಸಂಭವನೀಯ ಘಟನೆಯನ್ನು ಅವಲೋಕಿಸಲೆಂದು ಜಾಗೃತಗೊಳಿಸಿಟ್ಟುಕೊಂಡರು. ಗಫೂರ್ ಕಳೆದೆರಡು ದಿವಸಗಳಿಂದ ಅಂಚೆಯವನ ನಿರೀಕ್ಷೆಯಲ್ಲಿದ್ದರು, ಹೆಜ್ಜೆಯ ಸದ್ದನ್ನು ಅವನದ್ದೇ ಎಂದು ಭಾವಿಸಿ ಬೆಚ್ಚುತ್ತಿದ್ದರು, ತಮಗರಿವಿಲ್ಲದಂತೆ ಎದ್ದು ನಡೆದು ಬಾಗಿಲದೋಳಿಗೆ ತಮ್ಮೆರಡೂ ಕೈಗಳನ್ನು ಹಚ್ಚಿ ಇಣುಕುತ್ತಿದ್ದರು, ಅದೂ ಸಾಲದಾಗಿ ಮೆಲ್ಲಗೆ ಇಳಿದು ಟಾಕೀಸಿನ ತುಕ್ಕು ಹಿಡಿದ ಪ್ರಹರಿಗೋಡೆಯ ಬಾಗಿಲವರೆಗೆ ಹೋಗಿ ಅವರಿವರನ್ನು ನೋಡಿ ಅಂಚೆಯವನೆಂದು ಅಪಾರ್ಥ ಮಾಡಿಕೊಳ್ಳುತ್ತಿದ್ದರು, ನೀನು ಪೋಸ್ಟ್ಮ್ಯಾನ್ ರಾಮಣ್ಣ ಅಲ್ವೇ ಎಂದು ಅಲ್ಲದವರನ್ನು ಕೇಳಿದ್ದಕ್ಕೆ ಯಾರೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಆದರೂ ಅವನು ಬಂದೇಬರುವನು, ಬಂದ ಪಕ್ಷದಲ್ಲಿ ಅವನನ್ನು ದೂರದಲ್ಲಿಯೇ ತಡೆದು ಅವನು ಕೊಡಮಾಡುವ ರಿಜಿಸ್ಟಡರ್್ ಲಕೋಟೆಯನ್ನು ತಾವು ಸಹಿಮಾಡಿ ಪಡೆಯಬೇಕು, ಅದರಲ್ಲಿನ ಒಕ್ಕಣಿಕೆಯನ್ನು ತಮ್ಮಷ್ಟಕ್ಕೆ ತಾವು ಓದಿಕೊಳ್ಳಬೇಕು, ಸಂದೇಶ ಸಕಾರಾತ್ಮಕವಾಗಿದ್ದ ಪಕ್ಷದಲ್ಲಿ ರಾಯರಿಗೆ ತಿಳಿಸುವುದು, ಇಲ್ಲದಿದ್ದರೆ ಅದನ್ನು ಜೋಪಾನವಾಗಿ ಮರೆಮಾಚುವುದು, ಹೀಗಿತ್ತು ಅವರ ಲೆಕ್ಕಾಚಾರ. ಅವನು ಆಗಮಿಸುವ ವೇಳೆ ತಮಗೆ ಸ್ಪಷ್ಟವಾಗಿ ಗೊತ್ತು, ಅಪರಾಹ್ನ ಒಂದರಬಳಿಕವೇ ಅವನ ಆಗಮನ ಮಾಮೂಲು, ಆ ವಿಶ್ವಾಸದಿಂದಾಗಿಯೇ ಅವರು ಅಂದಿನ ವೃತ್ತಪತ್ರಿಕೆಯನ್ನು ಟೇಬಲ್ ಮೇಲೆ ಹರವಿ ಕಿಟಿಕಿಯ ಬೆಳಕಲ್ಲಿ ಅದನ್ನು ಓದುವ ಪ್ರಯತ್ನ ನಡೆಸಿದ್ದರು, ಅದೂ ಗಾಬರಿಯಿಂದ.
ಕಾರಣ ಕೊಟ್ಟೂರಲ್ಲಿನ ಕೆಲ ಹವ್ಯಾಸಿ ಬರಹಗಾರರೂ, ರಾಯರ ಅಭಿಮಾನಿಗಳೂ ಆಗಿದ್ದ ಕೆಲವರು ರಾಯರು ಅಸ್ತಂಗತರಾಗುವ ನಿರೀಕ್ಷೆಯಲ್ಲಿದ್ದರು, ಅದಕ್ಕೆ ಪೂರಕ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದರು, ಅವುಗಳ ಪೈಕಿ ಕಥೆ ಕವಿತೆಗಳಿಗಿಂತ ಮುಖ್ಯವಾಗಿ ಸಚಿತ್ರ ಲೇಖನಗಳಿದ್ದವು, ಅವುಗಳನ್ನು ಲಕೋಟೆಯಲ್ಲಿರಿಸಿದ್ದರಲ್ಲದೆ ಅವುಗಳ ಬಲಪಾಶ್ರ್ವದ ತುದಿಯಲ್ಲಿ ಅಗತ್ಯ ಸ್ಟಾಂಪುಗಳನ್ನೂ ಅಂಟಿಸಿದ್ದರು. ಈ ಕ್ಷಣ ರಾಯರು ವಿಧಿವಶರಾದರೆಂದರೆ ಮರುಕ್ಷಣ ಅವುಗಳನ್ನು ಅಂಚೆಡಬ್ಬಿಗೆ ತಾವು ಸುರಿಯುವುದೊಂದೇ ಬಾಕಿ. ಅವು ಪ್ರಕಟವಾಗುವುದು, ತಮ್ಮತಮ್ಮ ನಿಯತಕಾಲಿಕಗಳ ಸಂಪಾದಕರ ಕೃಪೆಯನ್ನು ಗಿಟ್ಟಿಸಿಕೊಳ್ಳುವುದು ಸಂಭವನೀಯ ಸಾವಿಗಿಂತ ತುಂಬಾ ಮುಖ್ಯ. ಅಂದ ಮಾತ್ರಕ್ಕೆ ತಾವು ಕ್ರೂರಿಗಳಲ್ಲ, ರಾಯರು ಶತಾಯುಷ್ಯ ಪೂರೈಸಲೆಂದು ಸದಾ ಆಶಿಸುತ್ತಿದ್ದಂಥವರೆ, ಆದರೆ ವಿಧಿಗಿಂತ ಮುಖ್ಯವಾಗಿ ಅವರ ಏಕೈಕ ಪುತ್ರನಿಗದು ಇಷ್ಟವಿಲ್ಲ,
ಅವರು ಸಂಗ್ರಹಿಸಿರುವ ಮಾಹಿತಿಯಂತೆ ಗೋಪಾಲ ತಮ್ಮ ತಂದೆಯವರ ಪವಿತ್ರ ಕಳೇಬರವನ್ನು ವೈಭವೋಪೇತವಾಗಿ ಮೆರವಣಿಗೆ ಮಾಡಲು, ದೇಶದ ನಾನಾ ಕಡೆಯಿಂದ ಆಗಮಿಸುವ ಗಣ್ಯಾತಿಗಣ್ಯ ಅತಿಥಿಗಳನ್ನು ಸ್ವಾಗತಿಸಲು, ಅವರವರ ಅಂತಸ್ತಿಗನುಸಾರವಾಗಿ ವಾಸ್ತವ್ಯ ಕಲ್ಪಿಸಲು ತೆರೆಮರೆಯಲ್ಲಿ ಬಿಡುವು ಇರದಿದ್ದರೂ ಶ್ರಮಿಸುತ್ತಿರುವನು. ಹ್ಹಾಂ! ಅಂದಹಾಗೆ ಇನ್ನೊಂದು ಗಮನಾರ್ಹ ಸಂಗತಿಯೆಂದರೆ ತಮ್ಮ ತಂದೆಯವರು ತಮ್ಮ ಮರಣಶಾಸನದಲ್ಲಿ ಬರೆಯದೇ ಇರುವ ಸಾಲುಗಳು ಎಂಟಕ್ಕಿಂತ ಹೆಚ್ಚಿರಲಾರವು. ತಮ್ಮ ಕಳೇಬರದ ಸಂಸ್ಕಾರ ತಮ್ಮ ಪ್ರೀತಿಯ ಕೊಟ್ಟೂರಲ್ಲೇ ನಡೆಯಬೇಕೆಂಬುದು ತಮ್ಮ ಅಂತಿಮೇಚ್ಛೆಯಾಗಿರುವುದು. ತಮ್ಮ ಕಳೇಬರದ ಅಸ್ಥಿಮಜ್ಜನ ಕಾರ್ಯ ಕೊಟ್ಟೂರಿನ ಅಕ್ಕಪಕ್ಕದಲ್ಲಿ ಸಣ್ಣಗೆ ಹರಿಯುವ ಹಳ್ಳದಲ್ಲಿ ನಡೆಯಬೇಕೆಂಬುದೂ ತಮ್ಮ ಅಂತಿಮೇಚ್ಛೆ. ತಮ್ಮ ಮನದಿಂಗಿತವನ್ನು ಗಫೂರ್ ಸೇರಿದಂತೆ ಕೆಲ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಸ್ತಾಪಿಸಿದ್ದರು. ಕೈಕಾಲು ಗಟ್ಟಿ ಇದ್ದಾಗ ವಾಯುವಿಹಾರದ ನೆಪದಲ್ಲಿ ಹೋಗಿ ಕೆಲ ಸ್ಥಳಗಳನ್ನು ಗುರುತಿಸಿ ತಮ್ಮ ಮನಸ್ಸಿನಲ್ಲಿಟ್ಟುಕೊಂಡಿದ್ದರು. ತಮ್ಮ ಅವಸಾನೋತ್ತರ ಆಪೇಕ್ಷೆಗೆ ಮರಣಶಾಸನದಲ್ಲಿ ಸ್ಥಾನಕಲ್ಪಿಸುವುದು ಸರಿಯೋ ತಪ್ಪೋ ಎಂದು ಗಫೂರ್ ಮತ್ತು ವಟ್ಟಂರವರ ಬಳಿ ಆಪ್ತವಾಗಿ ಚಚರ್ಿಸಿದ್ದರು. ಆದರೆ ಅದು ಚಚರ್ೆ ಹಂತದಲ್ಲಿತ್ತೇ ವಿನಃ ಕೊನೆಗೂ ಲಿಖಿತ ರೂಪಕ್ಕಿಳಿಯಲೇ ಇಲ್ಲ. ಆದರೆ ಈ ಸಂಗತಿ ಗುಟ್ಟಾಗಿರಲಿಲ್ಲ ಎಂದ ಮಾತ್ರಕ್ಕೆ ಸಾರ್ವಜನಿಕವಾಗಿ ತಿಳಿದಿರಲಿಲ್ಲ. ಗಫೂರ್ ಕೆಲ ಸ್ವಾತಂತ್ರ್ಯಹೋರಾಟಗಾರರಿಗೆ ಹೇಳಿದರೋ, ವಟ್ಟಂ ಮರಣ ಶಯ್ಯೆಯಲ್ಲಿದ್ದ ತಮ್ಮ ಪತ್ನಿಯ ಕರ್ಣಕುಂಡಲ ಕಿವಿಯಲ್ಲಿ ಅರುಹಿದರೋ, ಆಕೆ ಅದನ್ನು ತಮ್ಮ ಸೊಸೆಯ ಸಮಕ್ಷಮ ಬಡಬಡಿಸಿದಳೋ, ಆ ಸೊಸೆ ತಮ್ಮ ಮಹಿಳಾಸಂಘದ ಗೌರವಾಧ್ಯಕ್ಷೆ ಶ್ರೀಮತಿ ರಜನಿಯ ವಜ್ರದೋಲೆಗಳಿಂದಲಂಕೃತ ಕಿವಿಗಳಲ್ಲಿ ಉಸುರಿದಳೋ, ಆ ಚಾಣಾಕ್ಷ ಪತ್ನಿಯು ತನ್ನ ಗಂಡ ಗೋಪಾಲನ ಕಿವಿಯಲ್ಲಿ!
ಗಣ್ಯ ವಲಯಕ್ಕೆ ಮಾತ್ರ ತಿಳಿದಿದ್ದ ಈ ಊಹಾಪೋಹ ಸಾರ್ವಜನಿಕಗೊಳ್ಳದಂತೆ ಗೋಪಾಲ ನಿಗಾ ವಹಿಸಿದ. ಬದುಕಿರುವ ತಮ್ಮ ತಂದೆಗಿಂತ ಅವರ ಕಳೇಬರ ಹೆಚ್ಚು ಪ್ರಭಾವಶಾಲಿ ಎಂದು ಭಾವಿಸಿದ. ಹಾಗೆ ನೋಡಿದರೆ ಆತನು ತಮ್ಮ ತಂದೆಯವರ ಅಂತಿಮಾಪೇಕ್ಷೆಯನ್ನು ಪೂರೈಸುವವನೆ, ಆದರೆ ಗ್ರಾಮಪಂಚಾಯಿತಿಯಿಂದ ಪುರಸಭೆಗೆ, ಪುರಸಭೆಯಿಂದ ನಗರಸಭೆಗೆ ಬೆಳೆದಿರುವ ಕೊಟ್ಟೂರು ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಕಾಸ್ಮೋಪೊಲಿಟನ್ ನಗರವಾಗುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಕಾರಣ ಅಮೇರಿಕಾ ಮೂಲದ ಕೆಲ ಕಂಪನಿಗಳು ಕೊಟ್ಟೂರಿನ ಭೌಗೋಳಿಕ ಸಂದರ್ಭವನ್ನು, ಜಾಗತೀಕರಣ ಪ್ರಣೀತ ರಾಜಕಾರಣವನ್ನು ಅಹನರ್ಿಶಿ ಗಮನಿಸಲಾರಂಭಿಸಿರುವುದು. ಆ ವಿದೇಶಿ ಕಂಪನಿಗಳು ಆಸಕ್ತಿ ತಾಳಲು ಕಾರಣ ಕೊಟ್ಟೂರು ದೇಶದ ದಕ್ಷಿಣ ಮಧ್ಯಭಾಗದಲ್ಲಿರುವುದರಿಂದ ಉಗ್ರಗಾಮಿಗಳ ಉಪಟಳವಿಲ್ಲವೆಂಬುದು, ಹಾಗೆಯೇ ಕೊಟ್ಟೂರಿನ ಆಸುಪಾಸಿನ ಜನಾನಿಕ ಸಂಭಾವಿತ ಎಂಬುದು.
ಇನ್ನೊಂದು ಮುಖ್ಯಸಂಗತಿಯೆಂದರೆ ಕೊಟ್ಟೂರಿನ ಪಾಸಲೆಯಲ್ಲಿರುವ ಭೂಗರ್ಭದಲ್ಲಿ ಅಪರೂಪದ ಖನಿಜಗಳು ಒಟ್ಟರಿಸಿರುವುದು, ಹಾಗೆಯೇ ಪ್ರಭಾವಿ ಸ್ವಾತಂತ್ರ್ಯ ಹೋರಾಟಗಾರರ ಸುಪುತ್ರ, ಹಾಗೂ ದೇಶದ ಪ್ರತಿಷ್ಠಿತ ರಾಜಕಾರಣಿ ಸೋಲಂಕಿಯವರ ಅಳಿಯ ಗೋಪಾಲ ತಮ್ಮತ್ತ ನೆರವಿನ ಹಸ್ತಚಾಚಿರುವುದು. ಇಷ್ಟು ಸಾಕಲ್ಲವೆ ಏನೆಲ್ಲ ಬೆಳೆಸಲು! ದೂರದೃಷ್ಟಿಗೆ ಹೆಸರಾಗಿರುವ ಗೋಪಾಲ ತನ್ನ ಪತ್ನಿಯ ರಾಜಕೀಯ ಪ್ರಭಾವವನ್ನು ಯಥೇಚ್ಚ ಬಳಸಿ ಕೊಟ್ಟೂರಿನ ಸುತ್ತಮುತ್ತಲ ಪ್ರದೇಶದ ಮೇಲೆ ಹತೋಟಿ ಸಾಧಿಸಿರುವನು. ಅಪರೂಪದ ಖನಿಜವಿರುವ ಭೂಪ್ರದೇಶ ತನ್ನ ಹೆಸರಿಗೆ ಹಸ್ತಾಂತರಗೊಳ್ಳಲು ರಾಜ್ಯದ ಕೆಲ ಸಚಿವರು ಬೇನಾಮಿ ಪಾಲುದಾರಿಕೆ ನೀಡಿದರೆ ಸಮ್ಮತಿಸುವುದಾಗಿ ಮೌಖಿಕವಾಗಿ ಒಪ್ಪಿರುವರು. ಆದರೆ ಅವರೆಲ್ಲರಿಗೂ ಇನ್ನೂ ಜೀವಂತವಾಗಿರುವ ರಾಯರ ಭಯವಿಲ್ಲದಿಲ್ಲ. ಇವತ್ತು ರಾಯರು ಕಾಲವಶರಾದರೆಂದರೆ ನಾಳೆ ದಿವಸವೇ ಕಡತಗಳಿಗೆ ಸಹಿ ಮಾಡುವುದಾಗಿ ಮೌಖಿಕವಾಗಿ ಒಪ್ಪಿಗೆ ನೀಡಿರುವರು. ಆದರೆ ಅವರು ಕೊನೆಯುಸಿರೆಳೆಯಲು ಮೀನಮೇಷ ಎಣೆಸುತ್ತಿರುವುದು ತಮ್ಮೆಲ್ಲರ ದುರಾದೃಷ್ಟ.
ತಮ್ಮ ತಂದೆಯವರ ಮೌಖಿಕಾಪೇಕ್ಷೆಯಂತೆ ಅವರ ಕಳೇಬರವನ್ನು ಕೊಟ್ಟೂರಿನ ಹೊರವಲಯದಲ್ಲೇನಾದರೂ ದಹಿಸಿದ ಪಕ್ಷದಲ್ಲಿ ಆ ಭೂಪ್ರದೇಶ ಅವರ ಮರಣೋತ್ತರವಾಗಿ ಪ್ರೇಕ್ಷಣೀಯವಾಗುವುದರಲ್ಲಿ ಸಂದೇಹವಿಲ್ಲ, ಅವರ ಅಸ್ಥಿಮಜ್ಜನವನ್ನು ನಗರಪ್ರದೇಶದಲ್ಲಿರುವ ಹಳ್ಳತೊರೆಗಳಲ್ಲಿ ವಿಸಜರ್ಿಸಿದಲ್ಲಿ ಆ ಜಲಸ್ಥಾವರವೂ ಪವಿತ್ರವೆನಿಸುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಅವರ ಕಳೇಬರವನ್ನು ಕಾಶಿಗೆ ಸಾಗಿಸಿ ಅಲ್ಲೆಲ್ಲಾದರೂ ಅದಕ್ಕೆ ಮುಕ್ತಿ ಕಲ್ಪಿಸುವುದು, ಅಲ್ಲಿಯೇ ಅದರ ಅಸ್ಥಿನಿಮಜ್ಜನ ಕಾರ್ಯವನ್ನು ಪೂರೈಸಿ ಕೈತೊಳೆದುಕೊಳ್ಳುವುದು ಒಳ್ಳೆಯದು ಎಂದು ನಿರ್ಧರಿಸಿರುವ ಗೋಪಾಲ ಪೂರ್ವಭಾವಿಯಾಗಿ ಅಲ್ಲಲ್ಲಿ ಏಪರ್ಾಡು ಕಾರ್ಯಗಳನ್ನು ನಿರ್ವಹಿಸಿರುವನು. ತಮ್ಮ ಪ್ರೀತಿಯ ತಂದೆಯವರು ಕೊನೆಯುಸಿರೆಳೆಯಬೇಕೆಂದರೆ ಸವೋಚ್ಛನ್ಯಾಯಾಲಯ ತನ್ನ ಪರವಾಗಿ ತೀಪರ್ು ಬಟವಾಡೆ ಮಾಡುವುದು ಎಷ್ಟೋ ಮುಖ್ಯ. ಈಗಾಗಲೇ ದೈಹಿಕವಾಗಿ ಮಾನಸಿಕವಾಗಿ ಕೃಶರಾಗಿರುವ ತಮ್ಮ ತೀರ್ಥರೂಪರು ಆ ತೀಪರ್ು ಬಂದ ಬಳಿಕ ಅಬ್ಬಬ್ಬಾ ಎಂದರೆ ವಾರದಿನಮಾನ ಬದುಕಿರಬಹುದು. ನಿನ್ನಂಥ ಮಗನನ್ನು ಪಡೆಯುವುದಕ್ಕಿಂತ ನಿನ್ನ ತಾಯಿ ಬಂಜೆಯಾಗಿದ್ದಲ್ಲಿ ಎಷ್ಟೋ ಸಂತೋಷಪಡುತ್ತಿದ್ದೆನಲ್ಲೋ ಎಂದು ಅವರು ತನ್ನನ್ನು ಶಪಿಸಲೂಬಹುದು, ಅದೂ ತನಗೆ ಮಾತ್ರ ಕೇಳಿಸುವ ರೀತಿಯಲ್ಲಿ. ಆ ಕ್ಷಣ ತಾನು ತಡಮಾಡದೆ ದುಃಖ ತೋಡಿಕೊಂಡು ಕ್ಷಮಿಸಿ ಎಂದು ಅಂಗಲಾಚುವುದರ ಮೂಲಕ ಅವರನ್ನು ಸಾವಿನ ಪರಿಧಿಯೊಳಗೆ ನಿಲ್ಲಿಸಬೇಕು, ಇಲ್ಲಿ ಅವರ ಬಾಯಿಗೆ ಗಂಗಾಜಲ ಬಿಡುವ ಪೂರ್ವದಲ್ಲಿ ಸಚಿವಾಲಯಕ್ಕೆ ಸುದ್ದಿ ಮುಟ್ಟಿಸಬೇಕು!
ಹೀಗೆ ಮುಂತಾಗಿ ಯೋಚಿಸುತ್ತಿರುವ ರೋಮಾಂಚನಗೊಳ್ಳುತ್ತಿರುವ, ತನಗೆ ತಾನೇ ಆನಂದಿಸುತ್ತಿರುವ, ಈ ತನ್ನ ಭಾವನೆಗಳನ್ನು ಸಾರ್ವಜನಿಕರು ಕ್ರೂರವೆಂದು ಭಾವಿಸುವರೋ ಎಂದು ಅವುಗಳನ್ನು ಎಚ್ಚರಿಕೆಯಿಂದ ನಿಭಾಯಿಸುತ್ತಿರುವ, ಆಗಾಗ್ಗೆ ಮಾಧ್ಯಮದವರೊಂದಿಗೆ ದೇವಸ್ಥಾನಗಳನ್ನು ಸಂದಶರ್ಿಸುತ್ತ ಆಯಾ ದೇವರುಗಳನ್ನುದ್ದೇಶಿಸಿ ತೀಪರ್ು ತನ್ನ ತಂದೆಯವರ ಪರವಾಗಿ ಬರಲಿ, ತಮ್ಮ ತಂದೆಯವರು ಶತಾಯುಷ್ಯ ಪೂರೈಸಲಿ ಎಂದು ಬೇಡಿಕೊಳ್ಳುತ್ತಿರುವ, ಅಲ್ಲದೆ ವಾರಕ್ಕೊಮ್ಮೆಯಾದರೂ ಗಫೂರ್ ಸಾಹೇಬರನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡು ತನ್ನ ತಂದೆಯವರ ಯೋಗಕ್ಷೇಮ ವಿಚಾರಿಸುತ್ತಲೇ ತಾನು ದುರಾದೃಷ್ಟವಂತನೆಂದೂ, ತನ್ನಂಥವನು ಅಕಾಲಮರಣಕ್ಕೆ ತುತ್ತಾದಲ್ಲಿ ತನ್ನ ತಂದೆಯವರ ಆಯುಷ್ಯ ವೃದ್ಧಿಸುವುದೆಂದೂ ಸಾಭಿನಯಪೂರ್ವಕವಾಗಿ ಹೇಳಿಕೊಳ್ಳುತ್ತಿರುವ ಗೋಪಾಲ, ಅಯ್ಯೋ ಗೋಪಾಲ! ಔರಂಗಜೇಬನೆಲ್ಲಿ ಗೋಪಾಲ ರೂಪದಲ್ಲಿರುವನೋ!
ಇಂಥ ಘಟನೆಗಳ ಮರ್ಮ ಹಿತಕರವೋ ಅಹಿತಕರವೋ! ಗಫೂರ್ ಸಾಹೇಬರಿಗೆ ತಿಳಿಯದು, ಗೋಪಾಲನಂಥ ಸುಶಿಕ್ಷಿತರು ಅಮಾಯಕರನ್ನು ಮುಗ್ದರನ್ನು ಕ್ಷಮಿಸು ದೇವರೇ ಎಂದು ಬೇಡಿಕೊಳ್ಳುತ್ತಲೇ ಸಾಹೇಬರು ಅಂಚೆಯವನು ಅಪರಾಹ್ನದ ಬಳಿಕ ಬರಬಹುದೆಂದು ಊಹಿಸಿದ್ದರು. ಆದರೆ ಅವನು ಒಂದು ತಾಸಿಗೂ ಮೊದಲೇ ಬರಬಹುದೆಂದು ತಾವು ಭಾವಿಸಿರಲಿಲ್ಲ. ಮೆಟ್ಟಿಲುಗಳ ಮೇಲೆ ಒಡಮೂಡಿದ ಹೆಜ್ಜೆ ಸದ್ದು ಆರಂಭದಲ್ಲಿ ಕೇಳಿಸಿದಾಗ ವೃತ್ತಪತ್ರಿಕೆಯ ಮೂರನೆಪುಟದ ಕೊನೆಯಲ್ಲಿ ರಾಯರ ಅಸ್ವಸ್ಥತೆ ಕುರಿತಂತೆ ಪುಟ್ಟದೊಂದು ಸುದ್ದಿ ಇತ್ತಲ್ಲವೆ! ಅವರು ಅದನ್ನು ತ್ರಾಸುಪಟ್ಟು ಓದುತ್ತಿದ್ದರು, ಕೊನೆಯ ವಾಕ್ಯವೊಂದೇ ಬಾಕಿಯಿತ್ತು, ಅದರಲ್ಲಿ ಕೆಲವು ಪದಗಳು ಅಸ್ಪಷ್ಟ ಹಾಗೂ ತಪ್ಪುಗಳಿದ್ದುದರಿಂದಾಗಿ ಓದಲಾಗಲಿಲ್ಲ. ಅದನ್ನು ರವಾನಿಸಿರುವ ಪತ್ರಕರ್ತನನ್ನು ಕಲ್ಪಸಿಕೊಂಡರು, ಆತನ ಭಾಷಾಜ್ಞಾನ ನೆನೆದು ಅನುಕಂಪ ಹಾಗೂ ಉದಾಸೀನ ತಾಳಿದರು, ಆತ ಸ್ಥಳೀಯ, ಆದರೆ ಯಾರಿರಬಹುದು? ಯೋಚಿಸಿದರಾದರೂ ಹೊಳೆಯಲಿಲ್ಲ, ಇನ್ನೇನು ಹೆಸರು ಹೊಳೆಯಿತೆನ್ನುವಷ್ಟರಲ್ಲಿ..
ಹೆಜ್ಜೆಯ ಸದ್ದು ಕೇಳಿಸಿತು, ಚಿರಪರಿಚಿತ ಸದ್ದು, ಒಮ್ಮೆಗೆ ಬೆಚ್ಚಿಬಿದ್ದರು. ಇನ್ನೇನು ಸಾವರಿಸಿಕೊಂಡು ಏಳುತ್ತಲೇ ಕತ್ತೊರಳಿಸಿದರು, ಚಲನೆಯಲ್ಲಿದ್ದ ಪಾದಗಳು ಗೋಚರಿಸಿದವು, ಆತನ ಆನೆಗಾಲುಗಳು, ಸರಿಯಾಗಿ ಒಂದಕ್ಕೊಂದು ಕೂಡದಿದ್ದ ಪರಿಣಾಮವಾಗಿ ಚಪ್ಪಲಿಗಳು ಹರಿದಿದ್ದವು ಬೇರೆ, ಗಲೀಜು ಖಾಕಿ ಪ್ಯಾಂಟು ಸಹ, ಇನ್ನೇನು ಆ ಮಾನವಾಕೃತಿ ಸ್ಪಷ್ಟವಾಯಿತೆನ್ನುವಷ್ಟರಲ್ಲಿ, ಆತ ಖಾವಂದರೇ ಸ್ವಾಮಿ ಧಣಿ ಎಂಬ ವಿಶೇಷಣಗಳು, ಎಲ್ಲಿ ಕೇಳಿಸಿಕೊಂಡರೋ! ತಿರುಗಿ ನೋಡಿದರು, ಅವರು ನಿದ್ದೆ ಹೋಗಿರುವುದು ತಮ್ಮ ಅದೃಷ್ಟ, ಏಳುತ್ತ ಅಲ್ಲಿಯೇ ನಿಲ್ಲುವಂತೆ, ಮುಂದೊಂದು ಹೆಜ್ಜೆ ಇಟ್ಟೆಯಾದರೆ ಹುಷಾರ್ ಎಂಬ ಎಚ್ಚರಿಕೆಯನ್ನು ನೋಟದಿಂದ ರವಾನಿಸಿದರು. ತಲೆ ತಿರುಗಲಾರಂಭಿಸಿದ್ದನ್ನೂ ಲೆಕ್ಕಿಸದೆ ಧಾವಿಸಿದರಲ್ಲದೆ ಬಾಗಿಲು ತಲಪಿದರು, ಅದನ್ನು ದಾಟಿ ಎರಡು ಮೂರು ಮೆಟ್ಟಿಲುಗಳನ್ನು ಕ್ರಮಿಸಿ ಕೂಗಬೇಡವೋ ರಾಮಣ್ಣ, ಖಾವಂದರು ಮಲಗಿದ್ದಾರೆ, ಎಚ್ಚರಾದಾರು ಎನ್ನುತ್ತ ಎದೆಯಳೆತೆಯಲ್ಲಿ ನಿಂತು ದೀರ್ಘವಾಗಿ ಉಸಿರೆಳೆದುಕೊಂಡರು. ಅವನು ಕೊಡುವಾಗ ದಿಲ್ಲಿಯಿಂದ ಬಂದಿದೆ ಸಾಹೇಬರೆ ಎಂದು ಉದ್ಗರಿಸಿದ, ಅದರ ಮೇಲ್ಭಾಗದ ಮುದ್ರಿತ ಒಕ್ಕಣಿಕೆ ಮೇಲೆ ಕಣ್ಣಾಡಿಸಿ ಹಾತೊರೆಯುತ್ತಿದ್ದ ನಿಟ್ಟುಸಿರನ್ನು ಹಾಗೆ ಉಪಸಂಹರಿಸಿಕೊಂಡರು, ಜೇಬಿನಿಂದ ಹತ್ತರ ನೋಟನ್ನು ಹೊರ ತೆಗೆದು ಗೋಪಾಲಗೂ ಅಂಥದ್ದೇ ಲಕೋಟೆ ಬಂದಿರುವುದನ್ನೂ, ಅವನು ಕೊಟ್ಟಿಲ್ಲದಿರುವುದನ್ನೂ ಖಚಿತಪಡಿಸಿಕೊಂಡರು.
ಮೆಲ್ಲಗೆ ತಮ್ಮ ಬಾಯಿಯನ್ನು ಅವನ ಕಿವಿಯ ಹತ್ತಿರ ಒಯ್ದು ಖಾವಂದರ ಗೌರವಾರ್ಥ ಕೆಲವು ದಿವಸಗಳ ಬಳಿಕ ರಿಜಿಸ್ಟಡರ್್ ಅಂಚೆ ಬಟವಾಡೆ ಮಾಡು ಎಂದು ಹೇಳಿದರು, ಅಂಗಲಾಚಿದರು. ಅವನು ನೋಟನ್ನು ಮರಳಿಸುತ್ತ ಇಷ್ಟೇ ತಾನೆ ಎಂದು ತನ್ನ ಕಣ್ಣುಗಳನ್ನು ಒದ್ದೆ ಮಾಡಿಕೊಂಡ, ಅವರ ಕಡೆಗೊಮ್ಮೆ ಅವಸಾನದ ಅಂಚಿನಲ್ಲಿದ್ದ ಟಾಕೀಸಿನ ಕಡೆಗೊಮ್ಮೆ ನೋಡಿ ಆ ಪುಣ್ಯಾತ್ಮರು ನೂರ್ಕಾಲ ಸುಖವಾಗಿರಬೇಕು ಸಾಹೇಬರೆ ಎನ್ನುತ್ತ ಒಂದೆರಡು ಹೆಜ್ಜೆ ಕೆಳಕ್ಕಿಳಿದ, ಕಾರಣ ತನ್ನ ಎತ್ತರವನ್ನು ಹ್ರಸ್ವಗೊಳಿಸುವ ಸಲುವಾಗಿ. ಅಪಾದಮಸ್ತಕ ದಿಟ್ಟಿಸಿ ಮುಖವನ್ನು ತಗ್ಗಿಸಿ ನಿಧಾನವಾಗಿ ಕೆಳಕ್ಕಿಳಿದು ಕಾಣೆಯಾದ. ಲಕೋಟೆ ಬಟವಾಡೆ ಮಾಡುವ ನೆಪದಲ್ಲಿ ಖಾವಂದರನ್ನು ಕಣ್ತುಂಬ ನೋಡಲೆಂದು ಉತ್ಸಾಹದಿಂದ ಅಲ್ಲಿಗೆ ಬಂದಿದ್ದ, ಆದರೆ ತನ್ನ ಆಸೆ ಈಡೇರಲಿಲ್ಲ.
ಗಫೂರ್ ಲಕೋಟೆಯ ಮೇಲ್ಭಾಗವನ್ನು ಸೀಳಿ ಒಳಗಿದ್ದ ಕಾಗದವನ್ನು ನಡುಗುವ ಕೈಗಳಲ್ಲಿ ಹಿಡಿದುಕೊಂಡರು. ಮಧ್ಯಾಹ್ನದ ಬಿಸಿಲು ತಮ್ಮ ದೃಷ್ಟಿದೋಷವನ್ನು ತಕ್ಕಮಟ್ಟಿಗೆ ನಿವಾರಿಸಿತು. ದಪ್ಪಗೆ ಮದ್ರಿಸಲ್ಪಟ್ಟಿದ್ದ ಒಂದೆರಡು ವಾಕ್ಯಗಳನ್ನು ಓದುವುದು ತಮಗೆ ಸಾಧ್ಯವಾಯಿತು. ತಾವು ಏನಾಗಬಾರದೆಂದುಕೊಂಡಿದ್ದೆವೋ ಅದೇ ಅದರಲ್ಲಿತ್ತು, ಅದರ ನೇಪಥ್ಯದಲ್ಲಿದ್ದುದು ರಾಯರ ಮರಣಶಾಸನ. ಅದನ್ನು ಅವರು ಓದಿದರೆಂದರೆ, ಅದರ ಒಕ್ಕಣಿಕೆಯನ್ನು ತಾವು ತುಟಿಜಾರಿ ಹೇಳಿದ ಪಕ್ಷದಲ್ಲಿ ರಾಯರು ಕೊನೆಯುಸಿರೆಳೆಯುವುದು ಶತಃಸಿದ್ಧ. ಆದ್ದರಿಂದ ತಾವು ಅದನ್ನು ಎಲ್ಲಾದರೂ ಅಡಗಿಸಿಡುವುದು ಮುಖ್ಯ. ಬದುಕು ಅನಿಶ್ಚಿತ, ಆದರೆ ಇರುವಷ್ಟು ಕಾಲ ರಾಯರ ಪ್ರಾಣಪಕ್ಷಿಯನ್ನು ಬಂಧಿಸಿಡುವುದು ಗೆಳೆಯರಾದ ತಮ್ಮ ಕರ್ತವ್ಯ. ಟುವೆಲ್ಲಿನ ಮರೆಯಲ್ಲಿ ಅದನ್ನು ಅಡಗಿಸಿಟ್ಟುಕೊಂಡು ಒಳಗೆ ನಡೆದರು. ಬಾಗಿಲು ದಾಟಿದೊಡನೆ ರಾಯರ ಕಡೆಗೊಮ್ಮೆ ಹ್ರಸ್ವದೃಷ್ಟಿ ಹಾಯಿಸಿದರು. ಅವರು ಮಲಗಿರುವುದು ತಮ್ಮ ಪುಣ್ಯವೋ, ಅವರ ಪುಣ್ಯವೋ, ಕೊಟ್ಟೂರಿನ ಸಮಸ್ತ ಜನಸ್ತೋಮದ ಪುಣ್ಯವೋ, ಅಥವಾ! ಪುನಃ ಓದುವಂತೆ ಒತ್ತಾಯಿಸುತ್ತಿರುವ, ತಾನೇ ಹೇಳಿಬಿಡುವುದಾಗಿ ಹೆದರಿಸುತ್ತಿರುವ ಅದನ್ನು ಎಲ್ಲಿ ಅಡಗಿಸಿಡುವುದು! ಮೇಲೆ ಕೆಳಗೆ ನೋಡಿದರು, ಸದ್ದು ಸಂಭವಿಸದ ಹಾಗೆ ಆ ಪುಟ್ಟಕೋಣೆಯಲ್ಲಿ ಶತಪಥ ಹೆಜ್ಜೆ ಹಾಕಿದರು. ಯೋಚಿಸಿದರು, ರಾಯರಿಗೋ ಮೇಲೇಳಲು ತ್ರಾಣವಿಲ್ಲ, ಅಲ್ಲದೆ ಈ ಸೆರೆಮನೆಯಂಥ ಕೋಣೆಗೆ ಹೊರಗಿನವರು ಯಾರೊಬ್ಬರೂ ಬರುವುದಿಲ್ಲ. ನಿಧಾನವಾಗಿ ನಡೆದು ತಲುಪಿ ರಾಯರಿಗೆ ಅಭಿಮುಖವಿದ್ದ ಕಪಾಟನ್ನು ತಲುಪಿದರು, ಸದ್ದು ಮಾಡದಿರೆಂದು ಪ್ರಾಥರ್ಿಸಿದರೂ ಅದರ ಪುರಾತನ ಬಾಗಿಲು ಕೇಳಿಸಿಕೊಂಡರೆ ತಾನೆ! ಕಿರ್ರೆಂದು ಸದ್ದು ಮಾಡಿದವು. ತಮ್ಮ ಪುಣ್ಯಕ್ಕೆ ರಾಯರ ಶ್ರವಣೇಂದ್ರಿಯವೂ ತಮ್ಮ ಕಾರ್ಯಕ್ಷಮತೆ ಕಳೆದುಕೊಂಡಿವೆ. ಹಳೆಯ ಪೆಟ್ಟಿಗೆಯನ್ನು ಎಡಗೈಯಿಂದ ತುಸು ಅಂದರೆ ತುಸುವೇ ಮೇಲೆತ್ತಿ ಅದರ ಕೆಳಗೆ ಸರಿಸಿ ತಳದಲ್ಲಿರಿಸಿದರು. ಸಮಾಧಾನದ ಉಸಿರುಬಿಟ್ಟರು, ಪುನಃ ಬಾಗಿಲು ಮುಚ್ಚಿ ಭದ್ರಪಡಿಸುವುದನ್ನು ತಾವು ಮರೆಯಲಿಲ್ಲ.

***

ಆ ಬಳಿಕ ನಡೆದದ್ದೇನೆಂದರೆ..
ಹಣ್ಣಿನ ರಸವಿದ್ದ ಗ್ಲಾಸ್ ಹಿಡಿದಿದ್ದ ಗಫೂರ್ ಕಡೆಗೆ ರಾಯರು ದೃಷ್ಟಿ ಹಾಯಿಸಿದರು. ಅಗತ್ಯಕ್ಕಿಂತ ಹೆಚ್ಚು ಬಾಡಿರುವ ಮುಖ, ನಡುಗುವ ಕೈಗಳು, ಇರದಿದ್ದ ಉಗುಳು ನುಂಗಲು ತ್ರಾಸು ಅನುಭವಿಸುತ್ತಿರುವ ಕಂಠ. ಯಾಕಪ್ಪಾ ಸಪ್ಪಗಿರುವಿ, ಮೈಯಲ್ಲಿ ಹುಷಾರಿಲ್ಲವೇನು? ಎಂದು ಪರಾಂಬರಿಸಿದರು. ಅಲ್ಲದೆ ಗೆಳೆಯನ ಮುಂಗೈ ಹಿಡಿದು ನೋಡಿದರು ನಾಡಿ ಪರೀಕ್ಷಕನಂತೆ, ಜ್ವರ ಬಂದಿರುವಂತಿದೆಯಲ್ಲಪ್ಪಾ ಎಂದರಲ್ಲದೆ ಡಾಕ್ಟರಿರುವಲ್ಲಿಗೆ ಹೋಗಿ ಇಂಜೆಕ್ಷನ್ ಮಾಡಿಸಿಕೊಳ್ಳುವಂತೆ, ಮಾತ್ರೆ ತೆಗೆದುಕೊಳ್ಳುವಂತೆ ಸೂಚಿಸಿದರು. ರಾಯರು ಹಿಂದೆಂದೂ ಅಷ್ಟು ದೃಢವಾಗಿ ಮಾತಾಡಿದವರಲ್ಲ, ಖಚಿತವಾಗಿ ರೋಗ ಪತ್ತೆಹಚ್ಚಿ ಇಲಾಜಿಗೆ ತಮ್ಮನ್ನು ಒತ್ತಾಯಿಸಿದವರಲ್ಲ. ಅವರ ಮಾತಿಗೆ ಪ್ರತಿಯಾಗಿ ಏನು ನುಡಿಯುವುದು! ಒಂದೂ ತಿಳಿಯಲಿಲ್ಲ. ರಾಯರೇನಾದರೂ ತಮ್ಮ ಆತಂಕದ ಮೂಲ ಕೆದಕಬಹುದೆ! ಅಥವಾ ಸುಪ್ರೀಂಕೋಟರ್್ ನೀಡಿರುವ ತೀಪರ್ು ವಕೀಲರಿಂದೇನಾದರು ಅವರಿಗೆ ತಿಳಿದಿರಬಹುದೆ!
ಈ ಆತಂಕದಿಂದಾಗಿಯೇ ತಾವು ಎಲ್ಲೂ ಹೋಗದೆ ನಿಗಾವಹಿಸಿರುವುದು, ಈಗ ನೋಡಿದರೆ ರಾಯರು ತಮ್ಮನ್ನು ಹೊರಗೆ ಕಳಿಸುವ ಸಂಚನ್ನು ರೂಪಿಸುತ್ತಿರುವರು. ಏನು ಮಾಡುವುದು! ಅವರ ಮಾತಿಗೆ ಏನೇನೋ ಸಬೂಬು ಹೇಳಿದರಾದರೂ ಪ್ರಯೋಜನವಾಗಲಿಲ್ಲ. ಡಾ. ನರಹರಿಗೆ ಫೋನ್ ಮಾಡುವಂತೆ ಒತ್ತಾಯಿಸಿದರು. ಫೋನ್ ಮಾಡಿದ್ದಾಯಿತು, ಅವರು ಕೂಡಲೆ ಆಗಮಿಸಿದ್ದಾಯಿತು. ರಾಯರು ಎಂದಿಗಿಂತ ಹೆಚ್ಚು ಲವಲವಿಕೆಯಿಂದ ಇರುವುದನ್ನು ನೋಡಿ ತಮಗಾದ ದಿಗ್ಭ್ರಮೆಯನ್ನು ಪ್ರಕಟಿಸುವ ಗೋಜಿಗೆ ಹೋಗಲಿಲ್ಲ, ತಮಗೆ ಇಲಾಜು ಮಾಡಿದರಲ್ಲದೆ ರಾಯರ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿದರು, ಹಾಗೆ ರಕ್ತದೊತ್ತಡವನ್ನೂ. ಎಲ್ಲಾ ನಾರ್ಮಲ್ ಇರುವುದು ಆಶ್ಚರ್ಯ. ಇದೇ ಸ್ಥಿತಿ ಮುಂದುವರೆದರೆ ಅವರು ಪಾಶ್ರ್ವವಾಯುವಿನಿಂದ ಚೇತರಿಸಿಕೊಳ್ಳುವುದೂ ಖಚಿತ. ನೀನು ದೊಡ್ಡವನು ಎಂದು ಮನಸ್ಸಿನಲ್ಲಿಯೇ ದೇವರಿಗೆ ಕೃತಜ್ಞತೆಗಳನ್ನಪರ್ಿಸಿ ಅಲ್ಲಿಂದ ಹೊರಟು ಹೋದರೇನೋ ಸರಿ!
ಗಫೂರ್ ನಿನ್ನ ತೊಡೆ ಮೇಲೆ ತಲೆಯನ್ನಿಟ್ಟುಕೊಳ್ಳುವ ಆಸೆ, ದಯವಿಟ್ಟು ಇಲ್ಲೇ ಕೂತ್ಕೋ ಬಾರಪ್ಪಾ ಎಂದು ಆಪೇಕ್ಷಿಸಿದರು. ವಿಚಿತ್ರವೆನ್ನಿಸಿತು, ಅದೇ ಮೊದಲ ಸಲ ಅವರು ಅಂಥ ಆಸೆಯನ್ನು ವ್ಯಕ್ತಪಡಿಸುತ್ತಿರುವುದು. ನಿರಾಕರಿಸಲು ಮನಸ್ಸು ಒಪ್ಪಲಿಲ್ಲ, ಮಂಚದ ಮೇಲೆ ಪಕ್ಕದಲ್ಲೇ ಕಾಲುಗಳನ್ನು ನಿಡಿದಾಗಿ ಚಾಚಿ ಕುಳಿತರು. ರಾಯರು ಎಷ್ಟೋ ಖುಷಿಯಿಂದ ಗೆಳೆಯನ ತೊಡೆ ಮೇಲೆ ತಲೆಯಿರಿಸಿದರು. ಒಂದು ಕ್ಷಣ ಗಾಢ ನಿದ್ದೆ ಹೋದರೇನೋ ಸರಿ, ಮರುಕ್ಷಣ ದಿಢೀರನೆ ಎಚ್ಚತ್ತರಲ್ಲದೆ ತಮ್ಮ ಗತಿಸಿದ ತಾಯಿಯನ್ನು ನೆನಪಿಸಿಕೊಂಡು ಕಣ್ಣಲ್ಲಿ ನೀರುತಂದುಕೊಂಡರು. ಅರೆ ಮಂಪರಿನಲ್ಲಿಯೇ ವೃದ್ಯಾಪ್ಯ, ಸಾವು, ಮರಣೋತ್ತರದ ಜೀವನ ಕುರಿತಂತೆ ಮಾತಾಡಿದರು, ಅದಕ್ಕೆ ಪುಂಖಾನುಪುಂಖವಾಗಿ ಸಂಸ್ಕೃತಶ್ಲೋಕಗಳನ್ನು ಉದಾಹರಿಸಿದರು, ಕುರಾನಿನಲ್ಲಿ ಮರಣಪೂರ್ವ ಹಾಗೂ ಮರಣೋತ್ತರಕ್ಕೆ ಸಂಬಂಧಿಸಿದಂತೆ ಮಾಹಿತಿ ಇದೆಯೇ ಎಂದು ಕೇಳಿದರು, ಅದಕ್ಕೆ ಗಫೂರ್ ಮೌನವಹಿಸಿದರು. ಕಾರಣ ತಮಗೆ ಕುರಾನ್ ಬಗ್ಗೆ ತಿಳವಳಿಕೆ ಇದ್ದರೆ ತಾನೆ ಹೇಳಲಿಕ್ಕೆ ಸಾಧ್ಯ! ತಿಳಿದಿದ್ದರೂ ಹೇಳಲಾಗುತ್ತಿರಲಿಲ್ಲವೇನೋ! ಹಿಂದೆ ಯಾವತ್ತೂ ರಾಯರು ಹೀಗೆ ವತರ್ಿಸಿದವರಲ್ಲ. ಮರಣದ ಸಂದೂಕದ ಮುಚ್ಚಳವನ್ನು ತೆರೆಯುತ್ತಿರುವವರಂತೆ ತಮಗೆ ತಾವೇ ಬಡಬಡಿಸುತ್ತಿರುವರು. ಹೇಳುಹೇಳುತ್ತಿರುವಂತೆಯೇ ನಿದ್ದೆಯ ಗರಿಷ್ಠಮಟ್ಟವನ್ನು ಅನುಭವಿಸಲಾರಂಭಿಸಿದರು, ಅದೂ ಒಂದು ತಾಸಿನ ಪರ್ಯಂತರ,
ಇದ್ದಕ್ಕಿದ್ದಂತೆ ದಿಢೀರನೆ ಎಚ್ಚರಗೊಂಡರು. ಹಿಂದಕ್ಕೆ ಒರಗಿ ನಿದ್ದೆ ಹೋಗಿದ್ದ ತಮ್ಮ ಸಖನ ತಲೆಯನ್ನು ನೇವರಿಸಿದರು. ಮೆಲ್ಲಗೆ ತಟ್ಟಿ ಎಚ್ಚರಗೊಳಿಸಿದರು. ಗಫೂರ್ ನಡೆಯೋ ಮನೆಗೆ ಹೋಗಿ ಬರೋಣ, ಯಾಕೋ ಮಗ ಸೊಸೆಯರಿಬ್ಬರನ್ನೂ ನೋಡುವ ಆಸೆಯಾಗಿದೆ. ಅಲ್ಲದೆ ರಜನಿ ಮಾಡಿದ ಅಡುಗೆ ಊಟ ಮಾಡದೆ ವರ್ಷವೇ ಕಳೆದಿರಬಹುದಲ್ಲವೆ! ಹ್ಹಾಂ! ಅಂದ ಹಾಗೆ ನಮ್ಮ ಮೊಮ್ಮಗ ಇನ್ನೂ ಊಟಿಯಲ್ಲಿರುವನೋ, ಕೊಟ್ಟೂರಿಗೆ ಬಂದಿರುವನೋ! ಇರದಿದ್ದ ಪಕ್ಷದಲ್ಲಿ ಅವನ ಇತ್ತೀಚಿನ ಭಾವಚಿತ್ರವನ್ನಾದರೂ ನೋಡಿಕೊಂಡು ಬರೋಣ. ಎಷ್ಟಿದ್ದರೂ ಅವನು ವಂಶದ ಕುಡಿ ಅಲ್ಲವೆ! ಎಂದು ಕೇಳಿದಾದ ಬಳಿಕ ಮೌನಕ್ಕೆ ಶರಣಾದರು. ಪುನಃ ಕಾರಿದೆಯೋ ಅಥವಾ.. ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸಿದರು. ಎಷ್ಟು ದಿವಸಗಳಾದವೋ ತಾವಿಬ್ಬರು ಕಾರಿನಲ್ಲಿ ಸಂಚರಿಸದೆಯೆ! ಮನೆಗೆ ಹೋಗುವ ಮರ್ಮ ತಮಗೆ ಅರ್ಥವಾಗುತ್ತಿಲ್ಲ, ಅದು ರಾಯರ ಅಂತಿಮಾಪೇಕ್ಷೆಯೋ ಏನೋ! ಅದನ್ನು ಈಡೇರಿಸುವುದು ತಮ್ಮ ಕರ್ತವ್ಯ. ಸಾವರಿಸಿಕೊಳ್ಳತ್ತ ಮೆಲ್ಲಗೆ ಎದ್ದು ನಿಂತರು. ತಲೆ ಸುತ್ತಿದಂತಾಯಿತು, ಪುನಃ ಚೇತರಿಸಿಕೊಂಡು ಮೆಲ್ಲಗೆ ತೆರೆದಿದ್ದ ಬಾಗಿಲ ಕಡೆ ಹೆಜ್ಜೆ ಹಾಕಿದರು.
ಮೊದಲ ಮೆಟ್ಟಿಲು ಮೇಲೆ ನಿಂತೊಡನೆ ಹುಬ್ಬಿಗೆ ಕೈಹಚ್ಚಿ ದೃಷ್ಟಿ ಹಾಯಿಸಿದರು, ಟಾಕೀಸು ಅಸ್ಪಷ್ಟವಾಗಿ ಗೋಚರಿಸಿತು, ಆದರೆ ಅದು ಮಾತ್ರ ತಮ್ಮ ಮುಪ್ಪಡರಿದ್ದ ಕಣ್ಣಿಗೆ ತನ್ನ ಯಥಾಸ್ಥಿತಿಯನ್ನು ಮರೆಮಾಚಿತು. ಅದರಲ್ಲಿ ತಾವು ಸಂಚರಿಸದೆ ಎಷ್ಟು ವರ್ಷಗಳುರುಳಿವೆಯೋ! ಉಚ್ಚನ್ಯಾಯಾಲಯವಿರುವ ಬೆಂಗಳೂರಿಂದ ಮರಳಿದ ಬಳಿಕ ತಾವು ಕೊಟ್ಟೂರು ಗಡಿ ದಾಟಿಲ್ಲ, ಪ್ರಥಮ ಸ್ವಾಂತಂತ್ರ್ಯೋತ್ಸವ ಸಂದರ್ಭದಲ್ಲಿ ದೆಹಲಿಯ ಪ್ರಸಿದ್ಧ ಕೈಗಾರಿಕೋದ್ಯಮಿ ಭರೂಖ ಗಾಂಧೀಜಿಯವರ ನಿಕಟವತರ್ಿಗಳಿಗೆ ನೀಡಿದ ಕೊಡುಗೆಯೇ ಅದು. ಆತುರತೆಯಿಂದ ಇಳಿದು ಬಯಲು ತಲುಪುವಷ್ಟರಲ್ಲಿ ಗಫೂರರಿಗೆ ಸಾಕುಸಾಕಾಗಿ ಹೋಯಿತು. ಅಲ್ಲೆಲ್ಲಾ ಗಾಂದೀಜಿಯ ಆಳೆತ್ತರದ ಕಾಗೆಗುಬ್ಬಿಗಳ ಇಕ್ಕೆಪಿಕ್ಕೆ ಕೆಂಧೂಳಿನಿಂದ ಅಪಾದಮಸ್ತಕ ಮಲಿನಗೊಂಡಿರುವ ಗಾಂಧೀಜಿಯವರ ಆಳೆತ್ತರದ ವಿಗ್ರಹ, ಪ್ರಹರಿಗೋಡೆಯ ಮೂಲೆಯಲ್ಲಿ ವಿಶ್ರಾಂತಸ್ಥಿತಿಯಲ್ಲಿರುವ ಜೇಸಿಬಿ ಬುಲ್ಡೋಜರ್ ಯಂತ್ರಗಳು. ತಮ್ಮ ಕ್ಲುಪ್ತ ಗೈರುಹಾಜರಿಯಲ್ಲೇನಾದರೂ ರಾಯರು ಲಕೋಟೆಯನ್ನು ಬಿಚ್ಚಿ ನೋಡಿದರೆ, ಓದಿದರೆ, ತಮ್ಮ ನಂಬಿಕೆ ಕುರಿತಂತೆ ಅನುಮಾನ ತಾಳಿದರೆ, ಮೇಲೆ ಹೋಗಿ ತಲುಪುವಷ್ಟರಲ್ಲಿ ಅವರೇನಾದರೂ ಕೊನೆಯುಸಿರೆಳೆದರೆ! ಇಂಥ ಆತಂಕಗಳು ಒಂದೇ ಎರಡೆ! ಕೆಳಭಾಗವನ್ನು ತಲುಪಿದರೇನೋ ನಿಜ. ಟಾಕೀಸು ಯಾವ ಸ್ಥಿತಿಯಲ್ಲಿತ್ತೋ ಅದೇ ಸ್ಥಿತಿಯಲ್ಲಿ ಬೆಂಜ್ಕಾರೂ ಇತ್ತೆಂಬುದು ನಿಜ, ಅದರೆ ಚಾಲಕ ಕೆಲವು ತಿಂಗಳುಗಳ ಹಿಂದೆಯೇ ಈ ಗುಜರಿಕಾರನ್ನು ಓಡಿಸುವುದು ತನ್ನಿಂದಾಗದು ಎಂದು ಹೇಳಿ ಹೊರಟುಹೋಗಿರುವುದು ಸಹ ಅಷ್ಟೇ ನಿಜ!
ಜೀವಚ್ಛವದಂತಿದ್ದ ಅದನ್ನು ಸಮೀಪಿಸುವಾಗ ಅವರ ಕಾಲುಗಳು ಅಗತ್ಯಕ್ಕಿಂತ ಹೆಚ್ಚು ನಡುಗಿದವು, ಆವರಿಸಿದ್ದ ಬಟ್ಟೆಯ ಕವಚವನ್ನು ಸರಿಸುವಾಗ ಅವರ ಕೈಗಳೂ ಕಂಪಿಸದೆ ಇರಲಿಲ್ಲ. ಮೇಲ್ಭಾಗ ಮಾತ್ರವಲ್ಲದೆ ಒಳಗೆಲ್ಲ ಜೇಡ ಕಟ್ಟಿತ್ತು, ಸ್ಟೇರಿಂಗ್ ಸೇರಿದಂತೆ ಕೆಲವು ಭಾಗಗಳು ತುಕ್ಕಿಗೆ ಬಲಿಯಾಗಿದ್ದವು. ಗೋಪಾಲ ಅದನ್ನು ಗುಜರಿಯವರಿಗೆ ಮಾರಲು ಪ್ರಯತ್ನಿಸಿ ವಿಫಲನಾಗಿದ್ದ. ಟಾಕೀಸನ್ನು ನೆಲಸಮ ಮಾಡುವವರಿಗೆ ಅದನ್ನು ಗಿಫ್ಟ್ ರೂಪದಲ್ಲಿ ಕೊಡುವುದಾಗಿಯೂ ನಿರ್ಧರಿಸಿದ್ದ. ಗಫೂರ್ ಮರಳುವ ಮೊದಲು ಬಿಟ್ಟನಿಟ್ಟುಸಿರಿಗೆ ಅದರ ಮೈಮೇಲಿದ್ದ ಧೂಳು ಕಂಪಿಸಿತಲ್ಲದೆ ತಮ್ಮ ನಾಸಿಕಾಗ್ರವನ್ನು ಪ್ರವೇಶಿಸಿ ಕಿರಿಕಿರಿಯನ್ನುಂಟು ಮಾಡಿತು. ಶಕ್ತಿಗುಂದಿದ್ದ ಕಾಲುಗಳನ್ನು ಎಳೆದೆಳೆದು ಅಂತೂ ಪುನಃ ಮೆಟ್ಟಿಲೇರಿದರಲ್ಲದೆ ಕೋಣೆಯನ್ನು ಪ್ರವೇಶಿಸಿದರು, ರಾಯರು ಸ್ಥಿತಪ್ರಜ್ಞಸ್ಥಿತಿಯಲ್ಲಿರುವುದು ಕಂಡು ಸಮಾಧಾನದ ಉಸಿರು ಹೊರಚೆಲ್ಲಿದರು. ಕಾರು ಮತ್ತು ಚಾಲಕನ ಬಗ್ಗೆ ಅವರು ಕೇಳಲೂ ಇಲ್ಲ, ತಾವು ಹೇಳಲೂ ಇಲ್ಲ. ತಮ್ಮ ಮುಖದ ಮೇಲಿನ ಭಾವನೆಗಳೇ ವಸ್ತುಸ್ಥಿತಿ ವಿವರಿಸಿದ ಮೇಲೇ ಹೇಳುವುದೇನಿದೆ, ಕೇಳುವುದೇನಿದೆ!
ಆ ದಿವಸ ಸಂಭವಿಸಿದ ಬೆಳಗಿಗೂ ರಾಯರ ಮುಖದಲ್ಲಿನ ಪ್ರಸನ್ನತೆಗೂ ಅವಿನಾಭಾವ ಸಂಬಂಧವಿತ್ತು. ಎಂದಿಗಿಂತ ಹೆಚ್ಚು ಲವಲವಿಕೆಯಿಂದಲೇ ತಮ್ಮ ಪ್ರಾತಃವಿಧಿಗಳನ್ನು ಪೂರೈಸಿದರು. ಆ ಸಮಯದಲ್ಲಿ ಅವರ ತುಟಿಚಲನೆಯಲ್ಲಿದ್ದುದು ಮೃತ್ಯುಂಜಯಾಷ್ಠಕ. ಅಲ್ಲದೆ ಆ ದಿವಸ ಶುಭಶುಕ್ರವಾರ ಬೇರೆ, ನಮಾಜ್ ಮಾಡುವಂತೆ ಗಫೂರ್ ಸಾಹೇಬರಲ್ಲಿ ವಿನಂತಿಸಿಕೊಂಡರು, ಅವರ ಅವಸರದಲ್ಲಿ ಪ್ರಶ್ನೋತ್ತರಗಳಿಗೆ ಅವಕಾಶವಿರಲಿಲ್ಲ. ಹತ್ತರ ಸಮಯಕ್ಕೆ ಎಲ್ಲಿಂದಲೋ ಏಳೆಂಟು ಜನ ಪತ್ರಕರ್ತರು ಆಗಮಿಸಿದರು, ಅವರೊಂದಿಗೆ ಓರ್ವ ಅನುಭವೀ ವಕೀಲನೂ ಸಹ. ಪ್ರಾಯಶಃ ಅವರೇ ಹೇಳಿಕಳಿಸಿದ್ದರೋ, ಅದಕ್ಕೆ ಮೂರನೆ ವ್ಯಕ್ತಿಯ ಸಹಾಯವನ್ನು ಪಡೆದಿದ್ದರೋ! ಸರಿಯಾಗಿ ತಿಳಿಯದು. ಗಫೂರ್ ಸಾಹೇಬರನ್ನು ವಿನಂತಿಪೂರ್ವಕವಾಗಿ ಹೊರಗೆ ಕಳಿಸಿದ್ದು ಎಲ್ಲರಿಗೂ ವಿಚಿತ್ರವೆನ್ನಿಸದೆ ಇರಲಿಲ್ಲ. ಮಾಧ್ಯಮದವರ ಮತ್ತು ರಾಯರ ನಡುವೆ ಏನೇನು ಮಾತುಕತೆ ನಡೆಯಿತೆನ್ನುವುದು ನಿಗೂಢ. ಆ ಕುರಿತು ಸಾಹೇಬರು ಕೇಳಲೂ ಇಲ್ಲ, ಅವರು ಹೇಳಲೂ ಇಲ್ಲ. ಆದರೆ ಆ ರಾತ್ರಿ ರಾಯರು ತಾವಿದ್ದ ಕೋಣೆಯಿಂದ ಕಾಣೆಯಾದರು. ನಿದ್ರಾಮಂಪರಿನಲ್ಲಿದ್ದ ಗಫೂರ್ ಎಚ್ಚರಗೊಳ್ಳುವ ಹೊತ್ತಿಗೆ ಪುನಃ ಬೆಳಕು ಹರಿದಿತ್ತು. ಅವರೂ ಗಾಬರಿಯಿಂದ ಅಲ್ಲಿ ಇಲ್ಲಿ ಹುಡುಕಿದರು, ಸುದ್ದಿ ಮುಟ್ಟಿಸಲು ಪ್ರಯತ್ನಿಸಿದರಾದರೂ ರಾಯರ ಮಗ ಮತ್ತು ಸೊಸೆ ಊರಲ್ಲಿರಲಿಲ್ಲ. ಮನೆಯಲ್ಲಿ ಕೇಳಿದರೆ ಕೆಲವರು ಮಗನನ್ನು ನೋಡಲು ಊಟಿಗೆ ಹೋಗಿರಬಹುದೆಂದು ಹೇಳಿದರೆ ಇನ್ನೂ ಕೆಲವರು ಬೆಂಗಳೂರಿಗೆ ಹೋಗಿರಬಹುದೆಂದು ತಿಳಿಸಿದರು. ಆದರೆ ಬೆಳಕಿನ ಅಭಾವದಿಂದಾಗಿಯೋ, ತಮ್ಮ ವೃದ್ಯಾಪ್ಯದ ಅಸಹಾಯಕತೆಯಿಂದಾಗಿಯೋ ಹಲವು ಕಡೆ ಹುಡುಕುವುದು ಗಫೂರರಿಂದ ಸಾಧ್ಯವಾಗಲಿಲ್ಲ.
ಪೂರ್ವದಿಗಂತದಲ್ಲಿ ಬೆಳಕು ನಿಚ್ಚಳವಾಗಿ ಕಾಣಿಸಿಕೊಳ್ಳುವುದಕ್ಕೂ ವಾಚ್ಮ್ಯಾನ್ ಟಾಕೀಸಿನಿಂದ ಓಡೋಡಿ ಬಂದು ತಲುಪುವುದಕ್ಕೂ ಸರಿ ಹೋಯಿತು. ಅವನು ಗಾಬರಿಯಿಂದ ಕೂಗಿದ ಸಮಯದಲ್ಲಿ ಸಾಹೇಬರು ಪುನಃ ನಿದ್ದೆ ಹೋಗುವ ಸನ್ನಾಹದಲ್ಲಿದ್ದರು. ಎಚ್ಚರವಾದರಾದರೂ ಆತನನ್ನು ಇಂಥವನೇ ಎಂದು ಸರಿಯಾಗಿ ಗುರುತಿಸುವುದು ತಮ್ಮಿಂದ ಸಾಧ್ಯವಾಗಲಿಲ್ಲ. ಆ ಚಳಿಯಲ್ಲೂ ಅವನು ನಖಶಿಖಾಂತ ಬೆವರಿನಿಂದ ನೆನೆದಿದ್ದ, ಸ್ಪಷ್ಟವಾಗಿ ಉಚ್ಚರಿಸಲಾಗದೆ ತೊದಲುತ್ತಿದ್ದ, ಅಪರಾಧೀ ಭಾವದಿಂದ ಬಳಲಿದ್ದ. ಅಲ್ಲದೆ ಬೆಳಕಿಗೆ ಬೆನ್ನು ಮಾಡಿದ್ದುದರಿಂದಾಗಿ ಅವನ ದೇಹದ ಮುಂಭಾಗ ಸೈತಾನನ್ನು ಹೋಲುತ್ತಿತ್ತು, ನೋಡಿದೊಡನೆ ತಮ್ಮ ಸಾವಿನ ಪ್ರತಿಕೃತಿಯೇ ತಮ್ಮೆದುರಿಗೆ ನಿಂತಿರುವಂತೆ ಭಾಸವಾಯಿತು. ಚೇತರಿಸಿಕೊಂಡಾದ ಬಳಿಕ ಕಣ್ಣುಜ್ಜಿಕೊಂಡು ನೋಡಿ ಐಸಾಕನೆಂದು ಖಚಿತಪಡಿಸಿಕೊಂಡರು. ನೀನೇನಾದರೂ ರಾಯರನ್ನು ನೋಡಿದಿ ಏನೋ ಎಂದು ಅವರು ಕೇಳಬೇಕೆನ್ನುವಷ್ಟರಲ್ಲಿ ಅವನೇ ಖಾವಂದರು ಅನಾಹುತ ಮಾಡಿಕೊಂಡ್ಯಾರ ಎಂದು ಹೇಳುತ್ತ ಟಾಕೀಸಿನ ಕಡೆ ಕೈಚಾಚಿದ. ಗಾಬರಿಯ ಭಾವನೆ ಮೊಳೆಯುವ ಅವಧಿಯ ಪೂರ್ವದಲ್ಲಿಯೇ ಸಾಹೇಬರು ಲಗುಬಗೆಯಿಂದ ಎದ್ದು ಮಹಡಿಯಿಂದ ಕೆಳಕ್ಕಿಳಿದರು, ಅದೂ ವೇಗವಾಗಿ. ಮುಂಜಾವೇನೋ ನಿಜ, ಆದರೆ ಬೆಳಕಿನ ಅಭಾವ ಮಾತ್ರವಿರಲಿಲ್ಲ. ಅದರ ಆಸರೆಯಲ್ಲಿ ನೂರಾರು ಮಂದಿ ಅಲ್ಲಲ್ಲಿ ಜಮಾವಣೆಗೊಂಡಿದ್ದರಲ್ಲದೆ, ಇನ್ನೂ ಹಲವರು ಪ್ರಹರಿ ಗೋಡೆಯನ್ನು ಲೆಕ್ಕಿಸದೆ ಒಳಬರಲಾರಂಭಿಸಿದ್ದರು.
ಅವರನ್ನೆಲ್ಲ ಅಲ್ಲಿಗೆ ಆಗಮಿಸಲು ಪ್ರೇರೇಪಿಸಿದ್ದುದು ಅಂದಿನ ದೈನಿಕಗಳು. ಅವೆಲ್ಲ ಬಹುತೇಕ ಮಂದಿಯ ಕೈಯಲ್ಲಿದ್ದವು. ಗಫೂರರ ನಿರೀಕ್ಷೆಯಲ್ಲಿ ಅವರೆಲ್ಲ ಇದ್ದರೇನೋ! ಅವರೆಲ್ಲ ಅವರನ್ನು ಹಿಂಬಾಲಿಸಿದರು. ಹೋಗಿ ನೋಡುತ್ತಾರೆ! ಬಾಲ್ಕನಿಯ ಒಂದು ಕುಚರ್ಿಯಲ್ಲಿ ರಾಯರು ಒರಗಿದ್ದರು ಅವನತಮುಖರಾಗಿ, ಅದು ಆತ್ಮಹತ್ಯೆಯೋ, ಸಹಜ ಸಾವೋ, ಇವೆರಡೂ ಆಗಿರದಿದ್ದ ಪಕ್ಷದಲ್ಲಿ ಕಾನೂನಿನ ವ್ಯಾಪ್ತಿಗೆ ಬಾರದ ವ್ಯವಸ್ಥಿತ ಹಾಗೂ ದೀರ್ಘಕಾಲೀಯ ಕೊಲೆಯೋ! ಅದನ್ನು ಭೇದಿಸುವ ಗೋಜಿಗೆ ಪೋಲಿಸರಾಗಲೀ, ಮಧ್ಯಾಹ್ನದ ವೇಳೆಗೆ ಬೆಂಗಳೂರಿನಿಂದ ಆಗಮಿಸಿದ ಗೋಪಾಲ ದಂಪತಿಗಳಾಗಲೀ ಹೋಗಲಿಲ್ಲ. ಪೋಸ್ಟ್ಮ್ಯಾನ್ ರಾಮಣ್ಣ ದೆಹಲಿಯಿಂದ ಬಂದಿದ್ದ ಲಕೋಟೆಯನ್ನು ಬಟವಾಡೆ ಮಾಡದಿದ್ದಲ್ಲಿ ರಾಯರ ಶವಸಂಸ್ಕಾರ ಇನ್ನೂ ವಿಳಂಬವಾಗುತ್ತಿತ್ತೋ ಏನೋ!
 

‍ಲೇಖಕರು avadhi

29 August, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading