ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂವೀ ಬರೆದ ಸಣ್ಣ ಕಥೆ ’ಅತಿಥಿ’

ಕುಂ ವೀರಭದ್ರಪ್ಪ

ವೈಶಾಖದ ಮಾಸದ ಮಟಮಟ ಮಧ್ಯಾಹ್ನ ಬೇರೆ, ಬಿರುಬಿಸಿಲನ್ನು ಲೆಕ್ಕಿಸುವ ಸ್ಥಿತಿಯಲ್ಲಿ ಉಂಡವರು ಇರಲಿಲ್ಲ, ತನ್ನ ಹತ್ತಂಕಣದ ಮನೆಯಿಂದ ಓಂಕಾರರೆಡ್ಡಿ ನೈರುತ್ಯ ದಿಕ್ಕಿನಿಂದಲೂ, ಹದಿನೈದಂಕಣದ ಮನೆಯಿಂದ ತಿಮ್ಮಾರೆಡ್ಡಿಯು ಇಂದ್ರದಿಕ್ಕಿನಿಂದಲೂ ಶಾಲೆಗೆ ಅಭಿಮುಖವಾಗಿ ಕಾಣಿಸಿಕೊಂಡರು. ಮೂಲಿಮನಿ ವೆಂಕಟರೆಡ್ಡಿಯ ಕಟ್ಟೆಯ ಕಡೆ ಎಂದಿನಂತೆ ಹೆಜ್ಜೆ ಹಾಕಿದರು. ಸಮೀಪಿಸಿದೊಡನೆ ತಮ್ಮ ಥಳಥಳ ಹೊಳೆಯುವ ದೋತರಗಳನ್ನು ಎಷ್ಟು ಸಾಧ್ಯವೋ ಅಷ್ಟು ಮೇಲೆತ್ತಿ ಕಟ್ಟಿಕೊಂಡರು. ಹಾಗೆಯೇ ಇಸ್ಕೂಲು ನಡೆಯುತ್ತಿದ್ದ ವೀರಭದ್ರದೇವರ ಗುಡಿ ಕಡೆ ವಾರೆಗಣ್ಣಿನಿಂದ ನೋಡುವುದನ್ನು ಮರೆಯಲಿಲ್ಲ, ನಮ್ಮ ಶಾಲೆಯೋ ಸಮ್ಮಿಶ್ರ ಸರಕಾರವನ್ನು ಹೋಲುತಿತ್ತು, ಒಂದರಿಂದ ಐದನೇ ತರಗತಿವರೆಗೆ ಎಲ್ಲಾ ಸಬ್ಜಕ್ಟುಗಳನ್ನು ಬೋಧಿಸುತ್ತಿದ್ದೆ, ಜವಾನ ಸ್ವೀಪರ್ ಇತ್ಯಾದಿ ಕಾರ್ಯಕರ್ಮಗಳನ್ನು ತ್ರಿಕರಣಪೂರ್ವಕವಾಗಿ ನಿರ್ವಹಿಸುತ್ತಿದ್ದೆ, ಪುರುಸೊತ್ತಿರದಿದ್ದರೂ ಆ ರೆಡ್ಡಿಗಳೀರ್ವರ ಮಾತುಕತೆಯನ್ನು ಕಥೆಗಾರನಾಗಿ ಕೇಳಿಸುತ್ತಿದ್ದೆ, ಓಂಕಾರೆಡ್ಡಿ ತುರ್ತುಪರಿಸ್ಥಿತಿ ಬಗೆಗೂ, ತಿಮ್ಮಾರೆಡ್ಡಿ ಇಂದಿರಾಗಾಂಧಿ ಜಾರಿಗೊಳಿಸಿದ್ದ ಇಪ್ಪತ್ತಂಶ ಕಾರ್ಯಕ್ರಮ ಬಗೆಗೂ ಏರುದನಿಯಲ್ಲಿ ಚರ್ಚಿಸಲಾರಂಭಿಸಿದರು. ಕೊನೆಗೆ ಅವರಿಬ್ಬರು ಅಂದಿನ ಪ್ರಧಾನಿಯನ್ನು ವಾಚಾಮಗೋಚರವಾಗಿ ನಿಂದಿಸಲಾರಂಭಿಸಿದರು. ಅದೇ ಸಮಯಕ್ಕೆ ಸರಿಯಾಗಿ ಶಿವಯ್ಯನ ಚಾದಂಗಡಿಯ ಮೂಲೆಯಲ್ಲಿ ಕಾಣಿಸಿಕೊಂಡ ಗುರುವಪ್ಪ ಮಾತುಗಳನ್ನು ಕೇಳಿಸಿಕೊಳ್ಳುತ್ತ ಸಮೀಪಿಸಿದ, ಆಯಮ್ಮನ ಯಾಕ ಬಯ್ತೀರಿ ಗೌಡಾ, ಆಕೇನ್ ಮಾಡ್ಯಾಳ ನಿಮ್ಗೆ” ಎಂದು ತಕಾರೆತ್ತಿದ್ದು ನನಗೆ ಬಂಡಾಯ ಕವಿತೆಯಂತೆ ಕೇಳಿಸಿತು.
ಅವರೊಟ್ಟಿಗಿದ್ದ ಮೂರನೆ ವ್ಯಕ್ತಿ ಮೇಲಗಿರಿ ನರಸಿಂಹ ಎದೆ ಸೀಳಿದ್ರೂ ಎರಡಕ್ಸರ ಇಲ್ಲದ ನಾವು ತಿಕಬಾಯಿ ಮುಚ್ಕೊಂಡ್ ಕೇಳಿಸ್ಕಾಬೇಕು ಗುರವ, ದೊಡ್ಡೋರ ಉಸಾಬರಿ ನಮಗ್ಯಾಕ ಎಂದು ತಿದಿಯೊತ್ತಿದ. ಅವರ ಕಡೆ ತೀಕ್ಷ್ಣನೋಟ ಬೀರಿದ ಆತ ಮೆಲ್ಲಗೆ ನಡೆಯುತ್ತ ನಮ್ಮ ಶಾಲೆಯನ್ನು ಸಮೀಪಿಸಿದ. ಅಪರಿಚಿತನೆಂಬಂತೆ ನೋಡಿದ, ಒಳಕ್ಕೆ ಬರಲೇ ಎಂದು ನೋಟದಿಂದ ಅಂಗಲಾಚಿದ, ತಲೆಗಂಟಿದ್ದ ವಲ್ಲಿಯನ್ನು ತೆಗೆದು ಕಂಕುಳಲ್ಲಿರಿಸಿಕೊಂಡ, ಬಾಯಿಯಲ್ಲಿದ್ದ ಹೊಗೆಯನ್ನು ಅಂಗೈಯ ಮರೆಯಲ್ಲಿ ಹೊರನೂಕಿದ, ಮೆಲ್ಲಗೆ ಕೆಮ್ಮಿ ಗಂಟಲು ಸರಿಪಡಿಸಿಕೊಂಡ, ಹೌದೋ ಅಲ್ಲವೋ ಎಂಬಂತೆ ಹೆಜ್ಜೆಯನ್ನಿರಿಸುತ್ತ ಒಳಗಡೆ ಪ್ರವೇಶಿಸಿದ, ಗರ್ಭಗುಡಿಯಲ್ಲಿರದಿದ್ದ ದೇವರನ್ನು ಕಲ್ಪಿಸಿಕೊಂಡು ಕರಜೋಡಿಸಿ ಭಕ್ತಿಪೂರ್ವಕವಾಗಿ ನಮಸ್ಕರಿಸಿದ, ಬಳಿಕ ತನ್ನಿಂದ ಅಚಾತುರ್ಯ ಸಂಭವಿಸಿದರೆ ಮಾಪ್ ಮಾಡುವಂತೆ ಮುಖಮಾಡಿ ನನ್ನ ಕಡೆ ನೋಡಿದ, ಬಳಿಕ..
ನನ್ನಪಕ್ಕ ಅಂದರೆ ಹಲವು ಕಡೆ ಸೀಳಿದ್ದ ಗೋಡೆಗಾತು ಪದ್ಮಾಸನಸ್ಥನಾದ. ಕರೆದು ಪರಾಂಬರಿಸಲಿಕ್ಕೆ ಆತನೇನು ಹೊಸಬನಲ್ಲ, ತನ್ನ ಮನೆಯ ಒಂದು ಭಾಗವನ್ನು ಬಾಡಿಗೆ ನೀಡಿರುವ ಆಶ್ರಯದಾತ, ವಾರಕ್ಕೊಮ್ಮೆಯಾದರೂ ಕರೆಯದಿದ್ದರೂ ಶಾಲೆಗೆ ಬರುವುದು, ಕೆಲವೊಮ್ಮೆ ತಕ್ಕಮಟ್ಟಿಗೆ ಅಕ್ಷರ ಬಲ್ಲವನಾದ ತಾನೇ ಶಿಕ್ಷಕನ ಪಾತ್ರವಹಿಸುವುದು, ಮಕ್ಕಳಿಗೆ ಚಿಕ್ಕಚಿಕ್ಕ ಕಥೆಗಳನ್ನು ಹೇಳುವುದು, ವಿಶೇಷದ ಸಂದರ್ಭಗಳಲ್ಲಿ ಮಕ್ಕಳಿಗೆ ಕಡಲೆಮಿಠಾಯಿ ಹಂಚುವುದು ಇತ್ಯಾದಿ ಇತ್ಯಾದಿ..

ಇಷ್ಟೆಲ್ಲಾ ವಿನಯ ತೋರಿಸಿದನೆಂದ ಮಾತ್ರಕ್ಕೆ ತಾನೇನು ಸಭ್ಯ ನಾಗರಿಕನಲ್ಲ, ನಾನೂ ಸಭ್ಯ ನಾಗರಿಕನಾಗಿರಲಿಲ್ಲ, ಮಾನಸಿಕವಾಗಿ. ಮೂರನೆ ಕೊಲೆ ಮಾಡಿದ ಕಾರಣಕ್ಕೆ ಕಡಪ ಸೆರೆಮನೆಯಲ್ಲಿ ಐದಾರು ವರ್ಷ ಕಠಿಣಸಜೆ ಅನುಭವಿಸಿದ್ದ, ಜೈಲಿದ್ದ ಅವಧಿಯಲ್ಲಿ ಸಹಖೈದಿಗಳ ನೆರವಿನಿಂದ ತಕ್ಕ ಮಟ್ಟಿಗೆ ಅಕ್ಷರ ಕಲಿತಿದ್ದ, ಕಥೆಗಳನ್ನು ಆಲಿಸಿದ್ದ, ಕಳೆದೆರಡು ವರ್ಷಗಳಿಂದ ಸಭ್ಯನಾಗರಿಕನೆಂದು ವಾಗಿಲಿಯಲ್ಲಿ ಹೆಸರು ಮಾಡಿದ್ದರೂ..
ಊರ ರೆಡ್ಡಿ ಗೌಡ ಮಂದಿಗೆ ಆತನೆಂದರೆ ಒಳಗೊಳಗೆ ಅಳುಕು, ಯಾರ ತಂಟೆಗೆ ಹೋದರೂ ಆತನ ತಂಟೆಗೆ ಎಂಥ ಜಮೀನ್ದಾರನೂ ಹೋಗುತ್ತಿರಲಿಲ್ಲ, ಆತನ ಮನೆಯಲ್ಲಿ ಬಾಡಿಗೆ ಇರುವ ಕಾರಣಕ್ಕೆ ಅವರು ಯಾರೂ ನನ್ನ ಗೊಡವೆಗೆ ಬರುತ್ತಿರಲಿಲ್ಲ, ನನ್ನ ಸಹವಾಸದಿಂದಾಗಿ ಆತ ಬದಲಾಗಿರುವನೋ, ಆತನ ಸಹವಾಸದಿಂದಾಗಿ ನಾನೇ ಬದಲಾಗಿರುವೆನೋ! ಕಾಡು ಮತ್ತು ಹುಲಿ ಪರಸ್ಪರ ಹೇಗೆ ಅನ್ಯೋನ್ಯವಾಗಿರುವವೋ ರಕ್ಷಿಸಿಕೊಳ್ಳುವವೋ ಹಾಗೆ!
ಮಕ್ಕಳ ಚಡಪಡಿಕೆ ಮಧ್ಯಾಹ್ನ ಮೂರು ಗಂಟೆ ಎಂದು ಸೂಚಿಸಿತು. ಬುಟ್ಟುಬುಡರೀ ಅಯ್ನೋರೆ, ಹುಡ್ರು ಸೆಕೆಗೆ ಒದ್ದಾಡಲಾಕಹತ್ಯಾವ ಎಂದು ಹೇಳಿದ, ಅದ್ದಕ್ಕೆ ಸಮ್ಮತಿಸಿದೆ, ತಾನೇ ಎದ್ದು ಹೋಗಿ ಭಾರಿಸಿದ ಗಂಟೆ ಇದೇ ಓಂಕಾರರೆಡ್ಡಿ ಹಿಂದೆ ಕೊಟ್ಟಿದ್ದ ಕಾಣಿಕೆ. ಮಕ್ಕಳೆಲ್ಲರ ಹುರುಪು ಯಾವುದೇ ಸ್ವಾತಂತ್ರ್ಯಕ್ಕಿಂತ ಕಡಿಮೆ ಇರಲಿಲ್ಲ, ನೂರು ಅಡಿ ಚದರ ವಿಸ್ತೀರ್ಣದ ಶಾಲೆ ಆವರಣದಲ್ಲಿ ನಾವಿಬ್ಬರೆ, ಎದುರಿದ್ದ ಕಟ್ಟೆ ಮೇಲೆ ನಮ್ಮ ನಡೆನುಡಿಯ ಮೇಲೆ ನಿಗಾ ಇರಿಸಿದ್ದ ಮಕ್ಕಳ ಪೋಷಕರ ಪೈಕಿ ಕೆಲವರು ನಮ್ಮೀರ್ವರ ಮಾತುಕತೆಯನ್ನು ಕಲ್ಪಿಸಿಕೊಳ್ಳಲಾರಂಭಿಸಿದ್ದರು. ಸ್ವಲ್ಪ ಹೊತ್ತಾದ ಬಳಿಕ ಆತ
“ನಮ್ಮಾತ ಒಬ್ಬ ಅದಾನ ಅಯ್ನೋರೆ, ಒಂದೆಲ್ಡು ತಿಂಗಳ ಮಟ್ಟಿಗೆ ನಿನ್ನ ಒಡವುಟ್ಟಿದವನಿದ್ದಂಗ ಇರತಾನ, ಆತನ್ನ ನೀನು ಸದ್ಯ ಅಣ್ಣಂತಾರ ತಿಳಕ, ಸದ್ಯ ತಮ್ಮಂತಾರ ತಿಳಕ, ಅವನಿಗೂ ಓದೋದು ಗೊತ್ತು, ಬರೆಯೋದೂ ಗೊತ್ತು, ನಸೀಬ ನೆಟ್ಟಗ ಇದ್ದಿದ್ದರ ಅವನೂ ನಿನ್ನಂಗ ಗೋರಮೆಂಟ್ ಸಂಬಳ ತಿಂಬಂಗಾತಿದ್ದ, ನೀನೂಹು ಅಂದರ ಸಾಲ್ಯಾಗ ನಿಮ್ಮಂಗ ಅಯ್ನೋರೂ ಆಕ್ಕಾನ, ಮನ್ಯಾಗ ಕೂಳನು ಕುಚ್ತಾನ, ನೀರುನಿಡಿ ತಂದು ಆಸರೆ ಆಗ್ತಾನ, ನಿನಗ ಕಥಿಗಳನ ಹೇಳ್ತಾನ” ಎಂದು ಹೇಳಿದ, ಅಡ್ಡಗೋಡೆ ಮೇಲೆ ದೀಪವಿರಿಸಿದಂತೆ. ಯಾರೋ ಏನ್ಕಥೆಯೋ! ಆತ ಹೇಳಿದ್ದನ್ನು ನಿರಾಕರಿಸುವ ದೈರ್ಯ ಸಾಲಲಿಲ್ಲ.
“ಹೆಸರೇನು ಊರು ಯಾವ್ದು?”
“ಹೆಸರನ ತಗಂಡೇನು ಮಾಡುತಿ? ಊರನ ತಗಂಡೇನು ಮಾಡತಿ? ಅವೆಲ್ಡು ಇದ್ದಿದ್ದರ ಇಲ್ಲೀ ತಂಕ ಯಾಕ ಬರತಿದ್ದ ನೀನೇ ಯ್ಯೋಳು! ನೀನೇ ಏನಾದ್ರು ಹೆಸರಿಡುವಂತಿ ಮುಂದ”
ನಿಗೂಢ ಅನ್ನಿಸಿತು, ಕುತೂಹಲ ಕೆರಳಿತು.
“ಆಯ್ತು ಗುರುವಣ್ಣ, ನೀನೇಳಿದ ಮ್ಯಾಲ.. ಆತ ಎಲ್ಲದಾನ, ನಿಮ್ಮನ್ಯಾಗ ಅದಾನೇನು?”
ಅರಳಿದ ಮುಖದ ಮೇಲೆ ವಲ್ಲಿಯನ್ನಾಡಿಸಿದಾದ ಬಳಿಕ.
“ಸದ್ಯದ ಪರಿಸ್ತಿತೀಲಿ ಆತನ್ನ ಮನೇಲಿಟ್ಕೊಳ್ಳುವಂತಿಲ್ಲ ಸಾರೂ, ಇಲ್ಲೆಲ್ಲೋ ಒಂದ್ ಕಡೀಕೆ ಅದಾನ, ಚಂಜೀ ಮುಂದುಗಡೆ ಕರಕೊಂಡು ಬಂದು ನಿಮಗೊಪ್ಪಿಸ್ತೀನಿ” ಎಂದು ಹೇಳಿ ಮೇಲೆದ್ದ, ಎರಡು ಹೆಜ್ಜೆ ಮುಂದೆ ಹೋಗಿ ಪುನಃ ಮರಳಿ ಬಂದು..
“ಒಂದ್ ಮಾತು, ಆತನ ಗುಟ್ಟು ಬಿಟ್ಟುಕೊಟ್ರೆ ನಿನ್ ಜೀವಕ್ಕ ಅಪಾಯ ಸಾರೂ, ಎಲ್ಲಾನೂ ಎದೇಲಿಟ್ಕೊ, ಆದರ ಈ ಗವುಡಿಕೆ ಮಂದಿಗೆ ಮಾತ್ರ ಗ್ವತ್ತಾಗಬಾರದು” ಎಂದು ಮೆಲ್ಲಗೆ ಹೇಳಿದ.
ಮರೆಯಾದ ಬಳಿಕವೂ ಗುರುವಪ್ಪ ಗೋಚರಿಸುತ್ತಲೇ ಇದ್ದ, ನಿಗಿನಿಗಿ ಕೆಂಡವನ್ನು ಬೊಗಸೆಗೆ ಸುರಿಯುತ್ತಿರುವನೆಂದೆನ್ನಿಸಿತು. ಮುಖದ ಬೆವರನ್ನೊರೆಸಿಕೊಂಡೆ.
ಆತನ ಸೂಚನೆಯಂತೆ ಅವತ್ತಿನ ಮನೆಪಾಠವನ್ನು ಬರಕಾಸ್ತು ಮಾಡಿದೆ. ಅಪೂರ್ಣವಾಗಿದ್ದ ಕಪ್ಪು ಕಾದಂಬರಿಯ ಮೂರನೆ ಅಧ್ಯಾಯವನ್ನು ಆರಂಭಿಸುವುದು ಬಾಕಿಯಿತ್ತು, ಲಾಂದ್ರದ ಕುಡಿಯನ್ನು ತುಸು ಎತ್ತರಿಸಿದೆ. ಕಪ್ಪು ಹೊಗೆಯಿಂದಾಗಿ ಬೆಳಕು ಸಾಲದೆನ್ನಿಸಿತು, ಅತಿಥಿಯ ನಿರೀಕ್ಷೆಯಲ್ಲಿದ್ದುದರಿಂದ ಹಾಳೆಯ ಮೇಲೆ ಮೂಡುತ್ತಿದ್ದ ಅಕ್ಷರಗಳು ಅಸ್ಪಷ್ಟವಾಗಿ ಮೂಡಿದವು, ವಾಕ್ಯಗಳಲ್ಲಿನ ಕತೃಕರ್ಮ ಕ್ರಿಯಾಪದಗಳು ಅದಲುಬದಲಾಗದೆ ಇರಲಿಲ್ಲ, ವಿಲಕ್ಷಣ ಅತಿಥಿಯ ಒಡನಾಟದ ಅನುಭವಗಳನ್ನಾಧರಿಸಿ ಕಾದಂಬರಿಯನ್ನು ಮುಂದುವರಿಸಿದರೆ ಹೇಗೆ? ಅಪರಿಚಿತ ಹೆಜ್ಜೆ ಸದ್ದಿನಾಗಮನದ ನಿರೀಕ್ಷೆ ಅಸಹನೀಯವೆನ್ನಿಸಿತು, ಕುತೂಹಲ ಗಡಿದಾಟಿತು.

ನನ್ನೆದೆಯ ಸದ್ದಿನ ಹೊರತು ಇನ್ನೊಂದು ಸದ್ದಿರಲಿಲ್ಲ. ಮುರುಕು ಕಪಾಟಿನಲ್ಲಿದ್ದ ಮರ್ಫಿಯಲ್ಲಿ ಸಣ್ಣಗೆ ಎವರೋ ವಸ್ತಾರನಿ ಏದೋ ಚೇಸ್ತಾರನಿ ನಿಜಮು ಮರಚಿ ನಿದುರ ಪೋದುಮಾ! ಶ್ರೀಶ್ರೀ ರಚಿತ ಗೀತೆಯನ್ನು ಘಂಟಸಾಲ ಹಾಡುತ್ತಿದ್ದರು. ಎಲ್ಲೋ ನಾಯಿ ಬೊಗುಳುತ್ತಿರುವ ಸದ್ದು ಮೂಡಿಸಿದ ಹಾದಿಯಲ್ಲಿ..
ಬರಿಗಾಲಿನಲ್ಲಿ ಬಂದ ಗುರುವಪ್ಪ ಮನೆಯ ಒಳ ಆವರಣವನ್ನು ನೋಟದಿಂದ ಪರೀಶೀಲಿಸಿದ. ಕರೀಲಾ ಅಂದ, ಕರೀ ಅಂದೆ. ಹಿಂತಿರುಗಿ ಕೆಮ್ಮಿದ, ಆ ಕೆಮ್ಮಿನ ಸದ್ದು ಪೂರ್ಣಗೊಳ್ಳುವ ಮೊದಲೆ ವ್ಯಕ್ತಿಯೋರ್ವ ಕಪ್ಪಗೆ ಹೊಸ್ತಿಲ ಬಳಿ ಕಾಣಿಸಿಕೊಂಡ, ನವವಧು ಗಂಡನ ಮನೆ ಪ್ರವೇಶಿಸುವಂತೆ ಅದು ನಿಧಾನವಾಗಿ ಹೆಜ್ಜೆಯನ್ನು ಒಳಗಿರಿಸಿದ, ಅಪಾದಮಸ್ತಕ ದಿಟ್ಟಿಸಿದ ಅವಧೂತನಂತೆ ಇದ್ದ ಒಂದು ಬೊಗಸೆ ಬೆಳಕಿನಲ್ಲಿ! ಕಣ್ಣಗಲಿಸಿಕೊಂಡು ನೋಡಿದೆ. ಸ್ಪಷ್ಟವಾಗಿ ಗೋಚರಿಸಿದ. ಆತ ಎತ್ತರವೂ ಇರಲಿಲ್ಲ, ಗಿಡ್ಡ ಆಸಾಮಿಯೂ ಆಗಿರಲಿಲ್ಲ. ಅಚ್ಚ ಬಿಳಿ ಬಣ್ಣದ ದೋತರ, ತುಂಬುದೋಳಿನ ಅಂಗಿ ಧರಿಸಿದ್ದ, ತಲೆಗೆ ನೀಟಾಗಿ ಸುತ್ತಿದ್ದ ವಲ್ಲಿಯೂ ಬಿಳಿಬಣ್ಣದ್ದಾಗಿತ್ತು. ತನ್ನೆರಡೂ ಕಿವಿಗಳಲ್ಲಿದ್ದ ಓಲೆಗಳು ಕೋರೈಸಿದವು, ನೀಳನಾಸಿಕದ ಕೆಳಗೆ ಕುಡಿಮೀಸೆ, ತುಟಿಗಳ ನಡುವೆ ಅಲೌಕಿಕ ಮಂದಹಾಸ, ನೊಸಲನ್ನಲಂಕರಿಸಿದ್ದ ವಿಭೂತಿ ಗೆರೆಗಳು, ಭ್ರೂಮಧ್ಯೆ ಕುಂಕುಮ ತಿಲಕ ಬೇರೆ! ಉಂಡು ಉಪವಾಸಿಯೋ ಬಳಸಿ ಬ್ರಹ್ಮಚಾರಿಯೋ! ಶಿರಿಬಿ ಜಾತ್ರೆಯಲ್ಲಿ ಕಣ್ಮರೆಯಾಗಿದ್ದ ತಮ್ಮನೇ ಇಪ್ಪತ್ತು ವರ್ಷಗಳ ನಂತರ ಮರಳಿ ಬಂದು ನನ್ನೆದುರಿಗೆ ನಿಂತಿರುವಂತೆ ಭಾಸವಾಯಿತು. ವೀರಣ್ಣ ಎಂದು ಉದ್ಗರಿಸಿ ಅಪ್ಪಿಕೊಂಡು ಸ್ವಾಗತಿಸಬೇಕೆನ್ನಿಸಿತು.
ಅದುವರೆಗೆ ತನ್ನೆರಡೂ ನೀಳದೋಳುಗಳನ್ನು ಬೆಸೆದು ನಿಂತಿದ್ದ ಆತನನ್ನುದ್ದೇಶಿಸಿ ಗುರುವಪ್ಪ “ಕುಂತ್ಗ ತಮ್ಮಾ, ನಮ್ಮ ಅಯ್ನೋರನ ನೀನು ಅಣ್ಣಂತಾರ ತಿಳಕ, ತಮ್ಮಂತಾರ ತಿಳಕ, ಈ ಮನಿ ಆತಂದಲ್ಲ, ನಿಂದೇ ಅಂತ ತಿಳಕಂಡು ಕಾಲ ಹಾಕು” ಎಂದು ಸಲಹೆ ನೀಡಿದ, ಆಕರ್ಷಕ ಅತಿಥಿ ಮೂರು ಹೆಜ್ಜೆಗಳನ್ನು ಕ್ರಮಿಸಿ ಪಾದಾಭಿವಂದನೆ ಸಲ್ಲಿಸಲು ದಾವಿಸಿದ, ಸರ್ರನೆ ಹಿಂದೆ ಸರಿದು ನಿಂತೆ, ಗುರುವಪ್ಪ ಸಣಮಾಡಿಸಿಗ ಸಾರೂ, ನಸೀಬ ನೆಟ್ಟಗಿಲ್ಲದೀತನ ಮ್ಯಾಲ ನಿನ್ನಂಥ ಒಳ್ಯೋರ ಆಸೀರುವಾದ ಬೇಕು ಎಂದು ಶಿಫಾರಸ್ಸು ಮಾಡಿದ. ಗೋಡೆಯನ್ನು ಹಿಂದಕ್ಕೆ ತಳ್ಳದ ಸ್ಥಿತಿಯಲ್ಲಿದ್ದ ನಾನು ನಿಂತಲ್ಲೇ ನಿಂತೆ, ಪರಮವಿಧೇಯತೆಯಿಂದ ಬಾಗಿದನಲ್ಲದೆ ಪಾದಗಳನ್ನು ಸ್ಪರ್ಶಿಸಿದ, ತನ್ನೆರಡೂ ಕೈಗಳನ್ನು ಕಣ್ಣಿಗೊತ್ತಿಕೊಳ್ಳುತ್ತ ಎದ್ದು ನಿಂತು ಸ್ವಸ್ಥಾನ ತಲುಪಿದ. ಮಜುಗರ ಸಂಕೋಚದ ನಡುವೆ ನಿನ್ ಹೆಸರೇನಪ್ಪಾಎಂದು ಕೇಳಿದೆ, ಅದಕ್ಕೆ ತಾನು ಏನಾರ ಕರಕಳ್ಳಿರಿ ಎಂದ, ಈರಣ್ಣ ಎಂದೆ, ಅದಕ್ಕೆ ತಾನು ಉರುಕುಂದಿ ಈರಣ್ಣ ನಮ್ಮ ಮಂದೇವರು ಸಾ ಎಂದು ಸಮ್ಮತಿಸಿದ.

***

ಅಕ್ಷರಗಳು ವಾಕ್ಯಗಳಿಗೆ ಹೊಂದಿಕೊಳ್ಳುವಂತೆ, ವಾಕ್ಯಗಳು ವಿಷಯಕ್ಕೆ ಹೊಂದಿಕೊಳ್ಳುವಂತೆ, ಸಕ್ಕರೆ ಹಾಲಿಗೆ ಹೊಂದಿಕೊಳ್ಳುವಂತೆ ಈರಣ್ಣ ಹೊಂದಿಕೊಂಡ, ದೈಹಿಕ ಲಕ್ಷಣಗಳಿಗೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಅಂಥ ಫರಕು ಇರಲಿಲ್ಲ, ನನ್ನೊಳಗೆ ಅದ್ದಿ ತೆಗೆದಂತೆ ಆತನಿದ್ದ, ಆತನೊಳಗೆ ಅದ್ದಿ ತೆಗೆದಂತೆ ನಾನಿದ್ದೆ. ಆತನ ನಡೆನುಡಿಯಲ್ಲಿ ನಾಜೂಕಿತ್ತು. ಸ್ಥಳೀಯರಿಗಿಂತ ಭಿನ್ನವಾಗಿ, ಆಕರ್ಷಕವಾಗಿ ಮಾತನಾಡುತ್ತಿದ್ದ, ಮಾತಿನಲ್ಲಿ ಬಹುವಚನವನ್ನು ಧಾರಳವಾಗಿ ಉಪಯೋಗಿಸುತ್ತಿದ್ದ, ಎಲ್ಲರ ಸಂಗಡ ಸೌಜನ್ಯಯುತವಾಗಿ ನಡೆದುಕೊಳ್ಳುತ್ತಿದ್ದ. ಈ ಕಾರಣದಿಂದಾಗಿ ಮೊದಲ ದಿವಸವೇ ನೆರೆಹೊರೆಯವರ ಮನಸ್ಸನ್ನು ಗೆದ್ದ. ಕೇಳಿದವರಿಗೆ ನನ್ನ ತಮ್ಮ ಈರಣ್ಣನೆಂದೇ ಪರಿಚಯಿಸಿದೆ. ಎಲ್ಲಿ ಹೇಗೆ ಯಾರು ಏನು ಎಂದು ಆತನ ಪೂರ್ವಾಪರ ಕೆದಕುತ್ತಿದ್ದವರಿಗೇನು ಬರವಿರಲಿಲ್ಲ, ನನ್ನದು ಅದೇ ಆಸೆ ಇತ್ತು. ಆದರೆ ಒಂದೆರಡು ತಿಂಗಳು ಆತನನ್ನು ಹೇಗೋ ನಿಭಾಯಿಸಿದರಾಯಿತೆಂದು ನಿರ್ಧರಿಸಿದೆ. ಆತನ ದಿನಚರಿ ನನಗೆ ಮಾದರಿಯಾಯಿತು.
ಆತ ನಾಲ್ಕೂವರೆ ಐದಕ್ಕೆ ಎಚ್ಚರಗೊಳ್ಳುತ್ತಿದ್ದ, ಅಂಗೈಗಳೆರಡನ್ನೂ ನೋಡಿಕೊಳ್ಳುತ್ತ ಕರಾಗ್ರೇ ವಸತಿ ಲಕ್ಷ್ಮಿ ಎಂದೇನನ್ನೋ ಗುನುಗುತ್ತಿದ್ದ, ಕಸಗೂಡಿಸಿ ಒಂದೆರಡು ಒರಟುಒರಟಾದ ರಂಗವಲ್ಲಿಗಳನ್ನು ಬಾಗಿಲ ಮುಂದೆ ರಚಿಸುತ್ತಿದ್ದ, ದೂರದ ಕಾಲುವೆಯಿಂದ ನೀರು ತರುತ್ತಿದ್ದ, ನೀರು ಕಾಯಿಸುತ್ತಿದ್ದ, ಸ್ನಾನ ಒಂದೇ ಅಲ್ಲದೆ ಪೂಜೆ ಮಾಡುವಂತೆಯೂ ನನ್ನನ್ನು ಒತ್ತಾಯಿಸುತ್ತಿದ್ದ. ತಾನು ಮಾಡಿರುತ್ತಿದ್ದ ತಿಂಡಿಯನ್ನು ಬಡಿಸುತ್ತಿದ್ದ, ನನಗಿಂತಲೂ ನೀಟಾಗಿ ಶಾಲೆಗೆ ಬರುತ್ತಿದ್ದ, ನುರಿತ ಶಿಕ್ಷಕನಂತೆ ಮಕ್ಕಳಿಗೆ ಪಾಠಪ್ರವಚನ ಮಾಡುತ್ತಿದ್ದ, ಅವರೊಂದಿಗೆ ನಾನಾ ಆಟಗಳಲ್ಲಿ ಭಾಗವಹಿಸುತ್ತಿದ್ದ, ಇಂಥ ತನ್ನ ವರ್ತನೆಯಿಂದಾಗಿ ಪೋಷಕರ, ನೆರೆಹೊರೆಯವರ, ಕೆಲವು ದಿವಸಗಳಲ್ಲಿ ವಾಗಿಲಿ ಗ್ರಾಮಸ್ತರ ಮೆಚ್ಚುಗೆಗೆ ಪಾತ್ರನಾದ. ಆಶ್ಚರ್ಯವೆಂದರೆ ಆತ ಸೂಚಿಸಿದ ಕೆಲವು ನಂಬರುಗಳಿಗೆ ಜಾಕ್ ಪಾಟ್ ಹೊಡೆಯಿತಂತೆ, ಮಟಕಾ ಅಭ್ಯಾಸವಿದ್ದವರು ಖಚಿತ ಸಂಖ್ಯೆಗಳನ್ನು ಹೇಳುವಂತೆ ಆತನನ್ನು ಪೀಡಿಸಲಾರಂಭಿಸಿದರು. ಆತ ತುಂಬಾ ಚಾಣಾಕ್ಷನಿದ್ದ, ವಿಚಿತ್ರವೆಂದರೆ ಜ್ಯೋತಿಷಿಯಾಗಿಯೂ, ವಾಸ್ತುಶಾಸ್ತ್ರಜ್ಞನಾಗಿಯೂ ವಾಗಿಲಿಯಲ್ಲಿ ಹೆಸರು ಮಾಡಿದ. ಕೇವಲ ಒಂದೇಒಂದು ತಿಂಗಳಲ್ಲಿ ನನ್ನನ್ನು ಓವರ್ ಟೇಕ್ ಮಾಡಿದನಲ್ಲದೆ ಗ್ರಾಮದ ಜಮೀನ್ದಾರರ ಪ್ರೀತಿಪಾತ್ರನಾದ, ಎಜುಕೇಟೆಡ್ಸ್ ಪೈಕಿ ಕೆಲವರು ನಿಮ್ ಬ್ರದರ್ ನಿಮಗಿಂತ ಬ್ರೀಲಿಯಂಟದಾನ್ರಿ ಎಂದು ಹೊಗಳಿದ್ದೂ ಉಂಟು. ಆದರೆ ಗುರುವಪ್ಪ ಮಾತ್ರ!
ವಾರದಲ್ಲಿ ಒಂದೆರಡು ಸಲವಾದರೂ ಯಾರೋ ಬರುತ್ತಿದ್ದರು, ಅವರೊಂದಿಗೆ ಮೋಡಿಭಾಷೆಯಲ್ಲಿ ಮಾತಾಡುತ್ತಿದ್ದ ಈರಣ್ಣನ ಮುಖ ವಿವರ್ಣವಾಗುತ್ತಿದ್ದುದನ್ನು ಗಮನಿಸುತ್ತಿದ್ದೆ, ಅವರ ನಡುವೆ ದೋತರದ ಮರೆಯಲ್ಲಿ ವಸ್ತುಗಳ ವಿನಿಮಯವೂ ನಡೆಯುತ್ತಿತ್ತು, ಅಂಥ ವಸ್ತುಗಳನ್ನು ಮನೆಯ ಮೂಲೆಯಲ್ಲಿ ಬಚ್ಚಿಡುತ್ತಿದ್ದ, ನಾನು ನೋಡಿಲಲ್ಲವೆಂದು ಭಾವಿಸುತ್ತಿದ್ದ, ಕದ್ದುಮುಚ್ಚಿ ನೋಡುವ ಸ್ವಭಾವ ಇರದಿದ್ದರೂ..
ಒಮ್ಮೆ ಕೇಳಿದ್ದಕ್ಕೆ ಗುರುವಪ್ಪ ಎಲ್ಡು ಮೂರು ವಾರ ನೋಡೀ ನೋಡದವರಂಗೆ, ಕೇಳೀ ಕೇಳದವರಂಗೆ ಇದ್ದುಬುಡು, ಆವನು ಮೊದಲೇ ಹಗರಿ ಸೀಮೆಯೋನು ಎಂದು ಹೇಳಿ ಕುತೂಹಲಕ್ಕೆ ಪ್ರಭಾವಳಿ ಮುಡಿಸಿದ, ಹಗರಿಸಾಲಿನವನಾದ ಮಾತ್ರಕ್ಕೆ! ಜೀವ ಬಿಗಿ ಹಿಡಿದು ತೀರ್ಮಾನಿಸಲೂ ಸಮಯ ಹಿಡಿಯಿತು. ಕೊನೆಗೂ
ಮೊದಮೊದಲಿಗೆ ಅರ್ಥವಾಗಲಿಲ್ಲ ತರಕಾರಿಯನ್ನು ಹೋಲುತ್ತಿದ್ದ ಅವು ನಾಡಬಾಂಬುಗಳೆಂದು, ಅವುಗಳೊಂದೇ ಅಲ್ಲದೆ ಚಿಕ್ಕಪುಟ್ಟ ಆಯುಧಗಳು,! ಅವುಗಳೊಂದಿಗೆ ಕಂತೆಕಂತೆ ನೋಟುಗಳೂ ಇದ್ದವು! ನೋಡಿದ ಕಣ್ಣುಗಳನ್ನು, ಮುಟ್ಟಿದ ಕೈಗಳನ್ನೂ ತೊಳೆದುಕೊಂಡೆ. ಆ ಒಂದೇ ಒಂದು ರಾತ್ರಿಯಲ್ಲಿ ಕಪ್ಪು ಕಾದಂಬರಿ ನಾಗಾಲೋಟದಿಂದ ಸಾಗಿತೆನ್ನುವುದೇ ತೃಪ್ತಿ!
ಅದಾಧ ಕೆಲವು ದಿವಸಗಳ ಬಳಿಕ..
ನಾಡಿದ್ದು ಹೊರಡ್ತೀನಣ್ಣಾ ಎಂದು ಹೇಳಬಹುದೆಂದು ನಿರೀಕ್ಷಿಸಿರಲಿಲ್ಲ, ಎರಡು ದಶಕಗಳ ಬಳಿಕ ದೊರಕಿದ್ದ ತಮ್ಮ ಪುನಃ ಪಂಚೇಂದ್ರಿಯಗಳಿಂದ ದೂರವಾಗುವುದೆಂದರೆ! ಆಘಾತವಾಯಿತು. ಏನೋ ಕೇಳಲೆಂದು ತೆರೆದ ಬಾಯಿಯನ್ನು ಗಮನಿಸಿದ ಗುರುವಪ್ಪ ಹೊಳೆಯಂಥ ಇವನನ್ನು ತರುಬಿಟ್ಟುಕೊಳ್ಳೋಕೆ ನೀನೇನು ಡ್ಯಾಮಾ ಅಯ್ನೋರೆ, ಹರಕೋತ ಹೋಗ್ಲಿ ಬುಡು ಎನ್ನುತ್ತ ನಿಡುಸುಯ್ದ,
ಮಾರನೆ ದಿವಸ ಜಂಗಮರ ಗಂಗವ್ವನ್ನ ಕರೆದದ್ದೂ ತಡಾಗಲಿಲ್ಲ, ಹೋಳಿಗೆ ಮಾಡಿಸಿದ್ದೂ ತಡಾಗಲಿಲ್ಲ, ಶಾಲಾ ಮಕ್ಕಳಿಗೊಂದೇ ಅಲ್ಲದೆ!

ನೂರರ ನೋಟುಗಳನ್ನು ಮಕ್ಕಳಿಗೆಲ್ಲ ಹಂಚಿದ, ಕೆಲವು ಅಂಗವಿಕಲ ಮಕ್ಕಳನ್ನು ಅಪ್ಪಿಕೊಂಡು ಕಣ್ಣಲ್ಲಿ ನೀರು ತಂದುಕೊಂಡ. ಮಕ್ಕಳ ಕಣ್ಣಂಚಿನ ನೀರನ್ನು ಒರೆಸಿದ,
ಅಯ್ನೋರ ತಮ್ಮ ಬಂಗಾರದಂತ ಮನುಶ್ಯ, ಜನ ಮಾತಾಡಿಕೊಂಡರು.
ಅವತ್ತು ರಾತ್ರಿ ನಮ್ಮ ಸಂಗಡ ಇದ್ದ ಗುರುವಪ್ಪ ಕುಡಿದಿದ್ದ ಸೆರೆಯ ದೈರ್ಯದಿಂದಾಗಿ..
“ಜೀವ ತೆಗೆಯೋರು ಯಾರೂ ಉದ್ದಾರಾಗಿಲ್ಲ ತಮ್ಮ, ಕತ್ತಿ ಬಾಂಬುಗಳ ಸಾವಾಸ ಬುಟ್ಟು ಹೆಂಡ್ತಿ ಕಟ್ಕೊಂಡು ಸುಕ್ವಾಗಿರು, ಏಸೋ ಮಂದಿ ಕಟುಕರನ್ನ ನೋಡೀನಿ, ಆದ್ರೆ ಹೆಸರಿನಂಗೆ ನೀನ್ ಬಂಗಾರದಂಥೋನು, ಈಗ್ ನಾನೆಂಗದೀನಿ ತಿಳ್ಕಾ” ಎಂದು ಕಣ್ಣಲ್ಲಿ ನೀರು ತರುಬಿಕೊಂಡ.
ನನ್ನ ಊಹೆ ನಿಜವಾಗುತ್ತಿರುವ ಕಾರಣಕ್ಕೆ ಸಂತೋಷಪಡುವುದೋ, ದುಃಖಪಡುವುದೋ!
ತನ್ನ ಕಣ್ಣಲ್ಲಿ ಮೂಡಿ ಮರೆಯಾದ ನೀರನ್ನು ಜ್ಞಾಪಿಸಿಕೊಳ್ಳುತ್ತ ಈರಣ್ಣ ಆಲಿಯಾಸ್ ಬಂಗಾರಪ್ಪ
“ಇಂಥ ಅಯ್ನೋರ ಸಾವಾಸಾನ ಇದ್ಕೂ ಮೊದಲೆ ಯಾಕ ಕೊಡಲಿಲ್ಲ ದೇವ್ರೆ” ಎಂದನಕಂತ ಗದ್ಗದಿತನಾದ, ಪುನಃ ಚೇತರಿಸಿಕೊಂಡು “ನಿನ್ನ ಪಾದದ ಮೇಲೆ ಆಣೆ ಮಾಡಿ ಹೇಳ್ತೀನಿ ಮಾವ, ಇದೇ ಲಾಸ್ಟ್, ಇಲ್ಲಿಂದ ಹೋದ ಮ್ಯಾಲ ಮದುವೆ ಮಾಡ್ಕೊಂಡು ನಿಮ್ಮೆಲ್ಲರಂಗೆ ನ್ಯಾಯಯುತವಾಗಿ ಸಂಸಾರ ನಡೆಸಿಕೊಂಡೋಗ್ತೀನಿ” ಎಂದು ಹೇಳಿದ.
ಮುಖ ಅರಳಿಸಿಕೊಂಡ ಗುರುವಪ್ಪ ಕೇಳಿದ
“ಹಂಗಿದ್ರೆ ಯಾವ್ದಾರ ಪಿಳ್ಳೇನ ನೋಡ್ಕೊಂಡಿ ಏನು?”
“ಮುಖವನ್ನು ಮೇಲೆತ್ತಿ ಮಾಡಿನ ಕಡೆ ನೋಡುತ್ತ
“ಆಲೂರು ಸಬ್ ಇನ್ಸಪೆಕ್ಟರ್ ರಮಣಯ್ಯನ ಮಗಳು ರುಕ್ಮಿಣಿಗೆ ಮಾತು ಕೊಟ್ಟೀನಿ” ಎಂದು ಆಕೆಯನ್ನು ಕಲ್ಪಿಸಿಕೊಂಡ.
ಕುಖ್ಯಾತ ಸುಪಾರಿ ಕಿಲ್ಲರ್ ಪೋಲಿಸ್ ಅಧಿಕಾರಿಯ ಮಗಳನ್ನು ವರಿಸುವುದೆಂದರೇನು? ಆಶ್ಚರ್ಯವಾಯಿತು.
ನಿನ್ನಂಥೋರಿಗೆ ತನ್ನ ಮಗಳನ್ನು!
‘ನನ್ನ ಗುಂಡಿಟ್ಟು ಸಾಯಿಸೋಕೆ ಪ್ರಯತ್ನಿಸುತ್ತಿರೋ ಆತ ಒಪ್ಪುವನೇನು?”
ಅಂದ್ರೆ ನೀವಿಬ್ರೂ!
“ಲವ್ ಮಾಡೀವಿ, ಕದ್ರಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮುಂದಿನ ವಾರ ನಮ್ಮಿಬ್ಬರ ಮದುವೆ, ನೀವಿಬ್ರು ಬಂದು ಆಸೀರ್ವಾದ ಮಾಡಬೇಕು”
“ಆಯ್ತು ಬರ್ತೀವಿ, ಆದ್ರೆ ನಿನ್ನೆಂಗ ಆಯಮ್ಮ ಭೆಟ್ಟಿಯಾದ್ಳು, ಆಯಮ್ಮನ್ನ ನೀನೆಂಗ ಭೆಟ್ಟಿಯಾದೀಂತ”
“ನಾನ್ ಜೈಲಿನಲ್ಲಿದ್ದಾಗ ತನ್ನ ಹುಟ್ಟುಹಬ್ಬಕ್ಕಂತ ಸಿಹಿ ಹಂಚೋದ್ಕೆ ಬಂದಿದ್ಳು”
“ರಿಣಾನುಬಂಧ, ತಪ್ಪಿಸೋದ್ಕೆ ಯಾರಿಂದ್ಲೂ ಸಾಧ್ಯವಿಲ್ಲ ಬಂಗಾರಪ್ಪ” ಎಂದು ಗುರುವಪ್ಪ ಸಮಾಧಾನದ ಉಸಿರುಬಿಟ್ಟ.
ಬಂಗಾರಪ್ಪ ಸ್ವಲ್ಪ ಹೊತ್ತಿನ ಬಳಿಕ
“ನಾಳೇನೆ ಹೊಂಡ್ತೀನಿ” ಮಾವ ಎಂದು ಹೇಳಿದ.
“ಹರಿವಾಣದ ತನಕ ಬಿಡಾಕೆ ನಿನ್ ಜೋಡಿ ಬರಲೇನು” ಎಂದು ಗುರುವಪ್ಪ ಕೇಳಿದ,
“”ಬ್ಯಾಡ ಮಾವ, ಕಡದಮ್ಮನ ಹಳ್ಳದಲ್ಲಿ ಲಿಂಗದಳ್ಳಿ ತಿಮ್ಮ, ಕಪ್ಪಟ್ರಾಳ್ ರಾಮ ನನಗಾಗಿ ಕಾಯ್ತಿರ್ತಾರೆ” ಎಂದು ಹೇಳಿದ ಬಳಿಕ ನನ್ನ ಕಡೆ ತಿರುಗಿ
“ಮುಂದಿನ ಜನ್ಮದಲ್ಲಿ ನಾವಿಬ್ರೂ ಒಂದೇ ತಾಯಿ ಹೊಟ್ಟೇಲಿ ಹುಟ್ಟೋಣ ಸಾರೂ, ಈ ಜನ್ಮದಲ್ಲಂತೂ ನಿಮ್ ರಿಣಾ ತೀರಿಸಲಿಕ್ಕಾಗೊಲ್ಲ” ಎಂದು ಕೈಮುಗಿದ.

***

ಬಂಗಾರಪ್ಪ ಸದ್ದಾಗದ ರೀತಿಯಲ್ಲಿ ಊರುಬಿಟ್ಟು ಹೋದ, ಹೆಜ್ಜೆ ಗುರುತುಗಳು ಮೂಡದ ರೀತಿಯಲ್ಲಿ, ನೆರೆಹೊರೆಯವರು ಎಲ್ಲಿ ಅಯ್ನೋರೆ ನಿಮ್ಮ ತಮ್ಮ ಎಂದು ವಿಚಾರಿಸಿದರು. ನಾಳೆ ಬರುವನೆಂದು ಎಲ್ಲರಿಗೂ ಹೇಳಿದೆ.
ಆದರೆ ಅದೇ ದಿವಸ ಸಂಜೆ ಬಂದ ವರ್ತಮಾನ ಬರಸಿಡಿಲಿನಂತೆರಗಿತು.
ದೇಶನೂರು ಶುಗರ್ ಫ್ಯಾಕ್ಟರಿ ಸಮೀಪದ ಕಬ್ಬಿನಗದ್ದೆಯಲ್ಲಿ ಆತ ಕಗ್ಗೊಲೆಯಾಗಿ ಹೋದ,
ಕೊಲೆಯಾದವನು ದುರುಳನೋ? ಕೊಲೆ ಮಾಡಿದವರು ದುರುಳರೋ?
 
 

‍ಲೇಖಕರು G

27 March, 2015

4 Comments

  1. ತಿರುಪತಿ ಭಂಗಿ

    ಅತಿಥಿ ಅದ್ಭುತವಾಗಿದೆ ಸರ್.ನನ್ನೂರು ಸೀಮೆಯ ಬದುಕು- ಬವಣೆ, ದರ್ಪ,ದೌರ್ಜನ್ಯ ಅನೇಕಾನೇಕ ಭಾವಾನುಭೂತಿಯಾಯಿತು.

  2. ಜೆ.ವಿ.ಕಾರ್ಲೊ

    ‘..ಅಕ್ಷರಗಳು ವಾಕ್ಯಗಳಿಗೆ ಹೊಂದಿಕೊಳ್ಳುವಂತೆ, ವಾಕ್ಯಗಳು ವಿಷಯಕ್ಕೆ ಹೊಂದಿಕೊಳ್ಳುವಂತೆ, ಸಕ್ಕರೆ ಹಾಲಿಗೆ ಹೊಂದಿಕೊಳ್ಳುವಂತೆ ಈರಣ್ಣ ಹೊಂದಿಕೊಂಡ!..’ ವ್ಹಾಹ್ ಕುಂ.ವಿ.ಯವರೇ..!

  3. Krishna

    ಕುಂವೀ ಎಂಬ ಕಥೆಗಾರನೂ – ಈತನೇ ಆತನಾದ ಈರಣ್ಣನೂ!

  4. siddharoodh kattimani

    super

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading