ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂವೀ ಕಾಲಂ : ಮಸ್ತಾನ್ ಎಂಬ 'ಆಂಧ್ರ ಫುಲ್ ಮೀಲ್ಸ್'

 

ಈಗ ಸ್ವಲ್ಪ ಹೊತ್ತಿನ ಹಿಂದೆ ಬಂದ ಫೋನ್ ಯಾರದ್ದೆಂದುಕೊಂಡಿರುವಿರಿ! ಪತ್ತಿಕೊಂಡ ಎಂಬ ಗ್ರಾಮವಾಚಕವಾಗಲೀ, ಅಲ್ಲಿನ ಲಕ್ಷ್ಮಣ ಎಂಬ ನಾಮವಾಚಕವಾಗಲೀ ನಿಮಗೆ ತಿಳಿದಿರಲಿಕ್ಕಿಲ್ಲ. ಆತ ನನ್ನ ದೂರದ ಸಂಬಂಧಿ. ಒಂದು ರೀತಿಯಲ್ಲಿ ತಮ್ಮ, ಇನ್ನೊಂದು ರೀತಿಯಲ್ಲಿ ಅಳಿಯ. ಅಲ್ಲಿ ಆತ ವಕೀಲ, ಅದೂ ಅರೆಕಾಲಿಕ ವೃತ್ತಿ. ಸ್ಥಿರಾಸ್ತಿಗಿಂತ ಚರಾಸ್ತಿಯೇ ಹೆಚ್ಚು. ಅದೂ ಖಜಾನೆಯ ಅಧಿಕಾರಿಯಾಗಿದ್ದ ತನ್ನ ತಂದೆ ಸಂಪಾದಿಸಿದ್ದು. ಅದೂ ಅಲ್ಲದೆ ಕೌಶಲ್ಯಪೂರ್ಣ ಬಡ್ಡಿವ್ಯಾಪಾರ ಸಹ ತನ್ನ ತಂದೆಯಿಂದ ಬಂದ ಬಳುವಳಿ ಬೇರೆ. ಕೋರ್ಟ್‍ಗೆ ಹೋಗುವುದು ತನ್ನ ಆಸಾಮಿಗಳ ಖಟ್ಲೆಗಳಿದ್ದಾಗ ಮಾತ್ರ. ಅದಕ್ಕೆ ಕಾರಣ ತಾನೇಳೆಂಟು ವರ್ಷಗಳ ಕಾಲ ಪ್ರಾಕ್ಟೀಸ್ ಮಾಡಿದ್ದು ಪ್ಯಾಪಿಲಿ ಶೇಷಗಿರಿರಾಯರ ಬಳಿ. ಅವರೋ! ಅಲ್ಲಿ ಸುವಿಖ್ಯಾತ ಕ್ರಿಮಿನಲ್ ಲಾಯರ್ರಾಗಿದ್ದವರು. ಅವರ ಕಕ್ಷಿದಾರರು ಒಬ್ಬರಿಗಿಂತ ಒಬ್ಬರು ಕುಖ್ಯಾತರಾಗಿದ್ದವರೆ. ತೆರನೆಕಲ್ ದಶರಥರೆಡ್ಡಿಯ ಮೇಲೆ ಇಪ್ಪತ್ತು ಕೇಸುಗಳಿದ್ದರೆ ಗೊನೆಗೊಂಡ್ಲ ಮಾದನ್ನನ ಮೇಲೆ ಬರೋಬ್ಬರಿ ಮುವ್ವತ್ತೆರಡು ಕೇಸುಗಳು. ಕಪ್ಪಟ್ರಾಳ ವೆಂಕಪ್ಪನಾಯ್ಡು, ತುಗ್ಗಲಿ ವೆಂಕಟೇಶುಲುಗಳಂಥ ಫ್ಯಾಕ್ಷನಿಷ್ಟುಗಳ ಮೇಲೆ ದಿನಕ್ಕೊಂದು ಕೇಸು. ಇವತ್ತು ಆರೆಸ್ಟು, ನಾಳೆ ಜಾಮೀನಿನ ಮೇಲೆ ರಿಲೀಜು, ಹೀಗಾಗಿ ಎದುರಾಳಿಗಳ ಕೆಂಗಣ್ಣಿಗೆ ಗುರಿಯಾಗದಿರಲು ಸಾಧ್ಯವೆ! ಲಾಯರ್ರು ರಾಯರ ಕಳೇಬರ ಮುಂದೊಂದು ದಿವಸ ಥಾಮಸ್ ಮನ್ರೋ ನಿರ್ಮಿಸಿದ್ದೆನ್ನಲಾದ ಬಾವಿಯಲ್ಲಿ ಕಾಣಿಸಿಕೊಂಡಿದ್ದೇ ನಮ್ಮ ಸಂಬಂಧಿ ಲಕ್ಷ್ಮಣನ ವೃತ್ತಿಗೆ ಸಂಬಂಧಿಸಿದ ಶುಕ್ರದೆಶೆ ತಿರುಗಿತು. ಕುಖ್ಯಾತ ಕಕ್ಷಿದಾರರೆಲ್ಲ ಆತನ ಕಡೆ ತಿರುಗಿದರು. ಚಿಕ್ಕವಯಸ್ಸಿನಲ್ಲಿ ತಾನೂ ಅಲ್ಲೆಲ್ಲ ಪ್ರಸಿದ್ಧ ಕ್ರಿಮಿನಲ್ ಲಾಯರ್ರೆಂದು ಹೆಸರು ಗಳಿಸಿದ.

ಅದೇ ಟೈಮಿಗೆ ಸರಿಯಾಗಿ ನಾನೂ ಸಹ ಪತ್ತಿಕೊಂಡ ಸಮೀಪದ ವಾಗಿಲಿಯಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದೆನಷ್ಟೆ, ಅದೂ ಅಲ್ಲದೆ ಜಮೀನ್ದಾರಿ ವ್ಯವಸ್ಥೆ ಕುರಿತಂತೆ ರಕ್ತಗತ ಕುತೂಹಲ ತಳೆದಿದ್ದೆನಷ್ಟೆ, ಅವರಿಗೆ ಸಂಬಂಧಿಸಿದಂತೆ ಕಥೆ ಕಾದಂಬರಿಗಳನ್ನು ಬರೆಯಲೆಂದೋ, ಬರೆಯದಿರಲೆಂದೋ ಬಿಡುವು ದೊರಕಿದಾಗಲೆಲ್ಲ ಅಲ್ಲಿಗೆ ಹೋಗುತ್ತಿದ್ದೆ, ಒಂದನೆ ತರಗತಿ ವಿದ್ಯಾರ್ಥಿಯಂತೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದೆ, ನನ್ನ ಪ್ರತಿಯೊಂದೂ ಪ್ರಶ್ನೆಗೂ ಆತ ಸೃಜನಶೀಲ ಸಮಾಧಾನಗಳನ್ನು ನೀಡುತ್ತಿದ್ದ, ಮೈತುಂಬಾ ಕಿವಿ ಮುಡಿದು ಆಲಿಸುತ್ತಿದ್ದೆ, ನಿಮಿರಿದ ರೋಮಗಳು ಕೆಳಗಿಳಿಯುವ ಮುನ್ನವೇ ಚಿಕ್ಕಪುಟ್ಟ ಕಥೆಗಳನ್ನು ಬರೆದು ಕನ್ನಡದ ಪತ್ರಿಕೆಗಳಿಗೆ ಕಳಿಸುವುದನ್ನು ರೂಢಿ ಮಾಡಿಕೊಂಡಿದ್ದೆ. ನಾನು ಅಲ್ಲಿದ್ದಾಗಲೇ ತೆರ್ನೆಕಲ್ ದಶರಥರೆಡ್ಡಿ ಗೊನೆಗೊಂಡ್ಲದಲ್ಲಿ ಒನಕೆ ಓಬವ್ವರಂಥ ವೀರವನಿತೆಯರ ಕೈಯಲ್ಲಿ ಕಗ್ಗೊಲೆಯಾದರೆ ಕಪ್ಪಟ್ರಾಳ್ ವೆಂಕಪ್ಪನಾಯ್ಡು ಮೊನ್ನೆಮೊನ್ನೆ ತನ್ನ ಪ್ರತಿಸ್ಪರ್ಧಿ ವಾರಾಲ ಪದ್ಮಕ್ಕಳ ಸಂಚಿನಿಂದ ಚೆಲ್ಲೆಲಚೆಲಿಮಲ ಕ್ರಾಸಿನಲ್ಲಿ ಅಪಘಾತಕ್ಕೀಡಾಗಿ ಅಸುನೀಗಿದ.
ವಾಗಿಲಿ ಗೂಳ್ಯಂಗಳಂಥ ಕುಖ್ಯಾತ ಗ್ರಾಮಗಳಲ್ಲಿದ್ದಷ್ಟು ಕಾಲ ನಾನು ಉಸಿರಾಡಿದ್ದು ಕಡಿಮೆ. ಕೊಟ್ಟೂರನ್ನು ಸೇರಿಕೊಂಡಂದಿನಿಂದ ಸರಾಗವಾಗಿ ಉಸಿರಾಡುತ್ತಿರುವೆ. ಆದರೂ ಆಂಧ್ರಪ್ರದೇಶ ನನ್ನ ಕುತೂಹಲವನ್ನು ಹ್ರಸ್ವಗೊಳಿಸುವ ಗೋಜಿಗೆ ಹೋಗಿಲ್ಲ. ಇಂಟರ್ನೆಟ್ಟಿನಲ್ಲೋ, ಅವರಿವರಿಂದಲೋ ರಾಯಲಸೀಮೆ ವಿದ್ಯಾಮಾನಗಳು ಕುರಿತಂತೆ ನೋಡುತ್ತಿರುವೆನು, ಚರ್ಚಿಸುತ್ತಿರುವೆನು. ಅದೂ ಅಲ್ಲದೆ ಒಂದೆರಡು ದಶಕಗಳಾದವು ನನ್ನ ಪ್ರಿಯ ಬಾತ್ಮೀದಾರ ವಕೀಲ ಲಕ್ಷ್ಮಣನನ್ನು ಖುದ್ದ ಭೆಟ್ಟಿ ಮಾಡದೆ. ಆದರೆ ಇದ್ದಕ್ಕಿದ್ದಂತೆ ಆ ಸಹೋದರ ಫೋನ್ ಮಾಡುವುದೆಂದರೆ!
ಎರಡನೆ ಸಲ ಫೋನ್ ಬಂದಾಗ ಏನೆಂದು ಕೇಳಿದೆ, ಅದಕ್ಕಿದ್ದು ತಾನು, ಅಣ್ಣಾ ಕೊಟ್ಟೂರಲ್ಲಿ ಮಸ್ತಾನ್ ಎಂಬ ವ್ಯಕ್ತಿ ಆಂಧ್ರಾಮೀಲ್ಸ್ ಎಂಬ ಹೋಟಲ್ಲಿಟ್ಟಿರುವುದು ನಿಜವೇನು! ಎಂದು ಕೇಳಿದೆ. ಅದಕ್ಕೆ ಏನೆಂದು ಹೇಳುವುದು! ಹೊಳೆಯಲಿಲ್ಲ, ಕಾರಣ ಕೊಟ್ಟೂರು ವಾಗಿಲಿ ಗೂಳ್ಯಂ ಪ್ರಮಾಣದ ಊರಲ್ಲ, ಇಲ್ಲಿ ನೂರಾರು ಹೋಟಲ್ಲುಗಳುಂಟು. ಅದೂ ಅಲ್ಲದೆ ಹೋಟಲ್ಲುಗಳ ಪರಿಚಯವಿರುವುದು ಒತ್ತಟ್ಟಿಗಿರಲಿ, ಮನೆ ಬಿಟ್ಟು ಬೀದಿಗಿಳಿಯುವುದು ತುಂಬಾ ಅಪರೂಪ.
 
ಗೊತ್ತಿಲ್ವಲ್ಲ ಲಕ್ಷ್ಮಣ್! ಎಂದು ಹೇಳಿ ರಿಸೀವರನ್ನು ಕೆಳಗಿಡಲು ಪ್ರಯತ್ನಿಸಿದೆ, ಆದರೆ ಅದಕ್ಕೆ ಮನಸ್ಸು ಒಪ್ಪಲಿಲ್ಲ. ಪುನಃ ಇದ್ರೂ ಇರಭೌದು, ಏನ್ಸಮಾಚಾರ, ಅವನಿಂದೇನಾದ್ರು? ಎಂದು ಸಂದೇಹ ವ್ಯಕ್ತಪಡಿಸಿದೆ. ಅದಕ್ಕೆ ತಾನು ಅಲ್ಲಿಂದಲೇ ಇಲ್ಲಿ ನನ್ನ ಕ್ಲೈಂಟ್ ಓಬಲೇಸುಗೆ ಅವನು ಐವತ್ಸಾವ್ರ ಕೊಡಬೇಕಿತ್ತು, ತಿಂಗಳು ತಿಂಗಳಿಗೆ ಬಡ್ಡಿ ಕಟ್ತಿದ್ದ, ಆದರೆ ಅವನು ಪತ್ತಿಕೊಂಡದಿಂದ ನಾಪತ್ತೆಯಾಗಿ ಆರ್ತಿಂಗಳಾಯ್ತು, ವಾರೆಂಟ್ ಜಾರಿಯಾಗಿದೆ, ನೀವು ಪತ್ತೆಹಚ್ಚಿ ತಿಳಿಸಿದ್ರೆ ನಾವು ಪೋಲಿಸ್ರನ್ನ ಕರ್ಕೊಂಡು ಸೀದ ಕೊಟ್ಟೂರಿಗೆ ಬರ್ತೀನಣ್ಣ ಪ್ಲೀಜ್ ಎಂದು ಅಲವತ್ತುಕೊಂಡ. ಅದನ್ನು ಕೇಳಿ ನನ್ನ ಮನಸ್ಸು ಚುರುಗುಟ್ಟಿತು. ಮಸ್ತಾನ್ ಬಗ್ಗೆ ಸಿಟ್ಟೂ ಬಂತು. ಅದೂ ಅಲ್ಲದೆ ಲಕ್ಷ್ಮಣನ ಋಣ ಸಂದಾಯ ಮಾಡಲು ಇದು ಸಕಾಲವೆಂದು ಭಾವಿಸಿದೆ, ಒಪ್ಪಿದೆ. ಅಷ್ಟು ಮಾಡಣ್ಣ ಪುಣ್ಯ ಬರ್ತದೆ. ಪಾಪ ನನ್ನ ಕ್ಲೈಂಟು ಬಡವ ಎಂದು ನಿಡುಸುಯ್ದು ಮಾತು ಮುಗಿಸಿದ.
ಆ ದಿವಸದಿಂದ ನಾನು ಮಾನಸಿಕವಾಗಿ ತುಸು ಅಸ್ವಸ್ತಗೊಂಡೆ, ಒಂದು ಕಡೆಯಿಂದ ಲಕ್ಷ್ಮಣ ಬಡವನೆಂದು ಪ್ರಮಾಣೀಕರಿಸಿರುವ ಓಬಲೇಸು, ಇನ್ನೊಂದು ಕಡೆಯಿಂದ ಇಲ್ಲೆಲ್ಲೋ ಇರಬಹುದಾದ ಮಸ್ತಾನ್! ಇವರಿಬ್ಬರೂ ವಿಚಿತ್ರ ರೀತಿಯಲ್ಲಿ ಕಾಡಲಾರಂಭಿಸಿದ್ದೇ ಅದಕ್ಕೆ ಕಾರಣ. ಅದೂ ಅಲ್ಲದೆ ನನ್ನೂರಿಗೆ ನಾನು ಅಪರಿಚಿತ, ಹೋಟಲ್ಲುಗಳೆಲ್ಲಿವೆಯೋ, ಯಾವ ಹೋಟಲ್ ದಗಲ್ಬಾಜಿಯದೋ! ಹೋಟಲ್ಲುಗಳನ್ನೇ ತಮ್ಮ ಬೀಗರಮನೆಯೆಂದು ಭಾವಿಸಿದ್ದ ಕೆಲವರನ್ನು ವಿಚಾರಣೆಗೊಳಪಡಿಸಿದೆ, ಆದರೂ ತಿಲಮಾತ್ರ ಪ್ರಯೋಜನವಾಗಲಿಲ್ಲ, ಎಲ್ಲರೂ ಅಡ್ಡಗೋಡೆ ಮೇಲೆ ದೀಪವಿರಿಸಿದಂತೆ ಅಸ್ಪಷ್ಟ ಉತ್ತರ ನೀಡುವವರೆ! ಈ ತಲೆನೋವನ್ನು ನಿವಾರಿಸಿಕೊಳ್ಳೋಣವೆಂದರೆ ಪತ್ತಿಕೊಂಡದಿಂದ ಮೇಲಿಂದ ಮೇಲೆ ದೂರವಾಣಿ ಕರೆಗಳು. ಇಂಥ ಸಮಯದಲ್ಲಿ ನೀವಲ್ಲದೆ ಇನ್ಯಾರು ಸಹಾಯ ಮಾಡಲು ಸಾಧ್ಯ! ಎಂದು ವಕೀಲ ತುಸು ಖಾರವಾಗಿ ಹೇಳಿದ, ಪಾನ್ ಬ್ರೋಕರ್ ಸಹಾಯ ಮಾಡಿರಣ್ಣ ಪುಣ್ಯ ಬರ್ತದೆ ಎಂದು ಓಬಲೇಸು ಅಲ್ಲಿಂದಲೇ ಅಶ್ರುಧಾರೆ ಸುರಿಸಿದ. ಅದೂ ಅಲ್ಲದೆ ಮನೆಯಲ್ಲಿ ಪತ್ನಿ ಅನ್ನಪೂರ್ಣ ಏನ್ರಿ ಅವ್ರು ಅಷ್ಟು ಕೇಳಿಕೊಂಡರೂ ನಿಮ್ಮ ಮನಸ್ಸು ಕರಗ್ತಿಲ್ವಲ್ಲ! ಈ ನೆಪದಲ್ಲಾದ್ರೂ ಮನೆಯಿಂದ ಹೊರಟು ಸುತ್ತಾಡಿಕೊಂಡು ಬನ್ರಿ ಎಂದು ಫತ್ವಾ ಹೊರಡಿಸಿದಳು. ಸವಾಲು ಸ್ವೀಕರಿಸುವಂತೆ ನನ್ನೂರ ಬೀದಿಗಳು ಒತ್ತಾಯಿಸಲಾರಂಭಿಸಿದವು. ಅದರಿಂದ ಮನಸ್ಸು ಗಲಿಬಿಲಿಗೊಂಡಿತು.
ಈಗಿರುವಂತೆ ಆ ದಿನಗಳಲ್ಲಿ ಮೋಟಾರು ಬೈಕೊತ್ತಟ್ಟಿಗಿರಲಿ ಅದನ್ನು ಚಲಾಯಿಸುವುದೂ ತಿಳಿದಿರಲಿಲ್ಲ. ಮನೆಯಿಂದ ಹೊರಟಾಗ ನನ್ನ ಸ್ಥಿತಿ ಯುದ್ದಕ್ಕೆ ಹೊರಟ ಅಂಜುಬುರುಕ ಯೋಧನಂತಿತ್ತು. ದಾರಿಯುದ್ದಕ್ಕೂ ಎದುರಾದ ಪ್ರತಿಯೊಬ್ಬರೂ ಮಸ್ತಾನನಂತೆ ಗೋಚರಿಸಲಾರಂಭಿಸಿದರು. ಆಂಜನೇಯ ದೇವಸ್ಥಾನಕ್ಕಂಟಿಗೊಂಡಂತಿರುವ ಶ್ರೀಕೃಷ್ಣ ಭವನ್, ಚಾವಡಿಯ ಪ್ರಹರಿ ಗೋಡೆಯೊಳಗಿರುವ ವೀರಶೈವ ಟೀಕಾಫಿ ಕ್ಲಬ್ ಹೀಗೆ ಒಂದೇ ಎರಡೇ. ಅವುಗಳ್ಯಾವುವೂ ಮಸ್ತಾನನದ್ದಲ್ಲವೇ ಅಲ್ಲ ಎಂದ ಊಹಿಸುತ್ತ ಎಪಿಎಂಸಿ ಯಾರ್ಡನ್ನು ಸಮೀಪಿಸಿದೆ. ಅದರ ಎದರು ಅಂದರೆ ರಾಜ್ಯಹೆದ್ದಾರಿಯ ಬಲಮಗ್ಗುಲು ಎರಡಕ್ಕಿಂತ ಹೆಚ್ಚು ಆಂಧ್ರಾಫುಲ್ ಮೀಲ್ಸ್ ಹೆಸರಿನ ಹೋಟಲುಗಳಿದ್ದು ಗೊಂದಲಕ್ಕೆಡೆ ಮಾಡಿಕೊಟ್ಟವು. ಧೈರ್ಯವಹಿಸಿ ಒಂದರೊಳಕ್ಕೆ ನುಗ್ಗಿದೆ, ಅಲ್ಲಿ ಬೆಳಕಿನ ಅಭಾವ ಅಸಹನೀಯವೆನ್ನಿಸಿತು. ನೆರಕೆಗಂಟಿಕೊಂಡಂತೆ ಕಡಪಾ ಕಲ್ಲುಗಳನ್ನು ಮೇಜು ಖುರ್ಚಿಗಳಂತೆ ಜೋಡಿಸಿಡಲಾಗಿತ್ತು. ಅಡುಗೆ ಮಾಡುತ್ತಿದ್ದರೋ ಏನೋ, ಕೊಕ್ ಕೊಕ್ ಕೆಮ್ಮುತ್ತಿರುವ ವ್ಯಕ್ತಿ ಮಹಿಳೆ ಇರಬಹುದೆಂದು ಊಹಿಸಿದೆ. ಕುಳಿತು ನನ್ನೆರಡೂ ಕೈಗಳನ್ನು ಟೇಬಲ್ ಮೇಲೂರಿದೆ, ಸ್ವಲ್ಪ ಹೊತ್ತಲ್ಲಿ ಹೋಟಲ್ಲಿನ ಒಳಾವರಣ ನಿಚ್ಚಳಗೊಂಡಿತು. ತುಟಿಗಳ ನಡುವೆ ಬೀಡಿ ಸಿಕ್ಕಿಸಿಕೊಂಡಿದ್ದ ವ್ಯಕ್ತಿಯೋರ್ವ ತಾನಿರುವ ಸ್ಥಿತಿಯಲ್ಲಿಂದಲೇ ಇನ್ನೊಂದರ್ಧ ಗಂಟೆ ಲೇಟೆಂದು ಕೂಗಿ ಹೇಳಿದ, ನನಗೆ ಬೇಕಾಗಿದ್ದೂ ಅದೆ! ಅಪಾದಮಸ್ತಕ ದಿಟ್ಟಿಸಿದೆ. ಮಸ್ತಾನ್! ಹೆಸರೇ ಸೂಚಿಸುತ್ತದೆ ಮುಸ್ಲಿಮನೆಂದು! ಆದರೆ ಆತನ ಮೈಮೇಲೆ ಮುಸ್ಲಿಂ ಲಾಂಛನಗಳಾಗಲೀ ಕುರುಹುಗಳಾಗಲೀ ಗೋಚರಿಸಲಿಲ್ಲ. ಏನೆಂದು ವಿಚಾರಿಸುವುದು! ಆಂಧ್ರಫುಲ್ ಮೀಲ್ಸೆಂದರೆ ತೆಲುಗು ತಾನೆ!

ಇಕ್ಕಡ ಮನ ಆಂಧ್ರವಾಳ್ಳೆವರೋ ಹೋಟಲ್ ಪೆಟ್ಟಿನಾರಂಟಾ! ಎಂದೆ, ಓಹ್! ಮೀರೂ ತೆಲುಗುವಾಳ್ಳ! ಎಂದು ತಾನು ಪುಳಗೊಂಡ. ಸ್ವಲ್ಪ ಯೋಚಿಸಿದ ಬಳಿಕ ತಾನು ವೀರೇಂದ್ರಬ್ರಹ್ಮೈಂಗಾರಾಣೆಯಾಗೂ ಆಂಧ್ರದವನಲ್ಲವೆಂದೂ ಬಳ್ಳಾರಿ ಸೀಮೆಯವನೆಂದೂ ಆಣೆಪ್ರಮಾಣ ಮಾಡಿದ. ಕನ್ನಡೇತರ ಭಾಷೆ ನಮ್ಮಿಬ್ಬರನ್ನು ಆತ್ಮೀಯವಾಗಿಸಿತು. ಟೀ ನೀಡಿ ಸತ್ಕರಿಸಿದ. ಬಳಿಕ ನನ್ನೊಂದಿಗೆ ಅಂಗಳಕ್ಕೆ ನಡೆದು ತೋರುಬೆರಳು ಚಾಚಿ ಅಗೋ ಅಕ್ಕಡ ಎಂದು ತೋರಿಸಿದ. ಹೊರಟೆ ಅಲ್ಲಿಗೆ.
ಅದಿದ್ದದು ಎಪಿಎಂಸಿ ವರ್ತಕರು ಸ್ವಖರ್ಚಿನಿಂದ ನಿರ್ಮಿಸಿದ್ದ ಗಜಾನನ ದೇವಸ್ಥಾನದ ಎದುರಲ್ಲಿ. ಅದಕ್ಕೆ ನಾನೇ ಹತ್ತಿರವಾದೆನೋ, ಅದೇ ನನ್ನ ಹತ್ತಿರಕ್ಕೆ ಬಂದಿತೋ! ಪರಿಮಳ ಆಸ್ವಾದಿಸಿದ ಪರಿಣಾಮವಾಗಿ ಅದು ಸಸ್ಯಾಹಾರಿಯೂ ಮಾಂಸಹಾರಿಯೂ ಎಂದು ಗುರುತಿಸಿದೆ, ಆದರೆ ಅಂಗಳದಲ್ಲಿ ನಿಂತೊಡನೆ ಕಾಲುಗಳು ತನ್ನಷ್ಟಕ್ಕೆ ತಾನೆ ನಡುಗಲಾರಂಭಿಸಿದವು. ಬಾಯಿ ಒಣಗುತ್ತಿರುವ ಅನುಭವ ಬೇರೆ! ಓಹ್ ದೇವರೇ ಅವನು ಇವನಲ್ಲದಿರಲಿ! ಅಥವಾ ಇವನೇ ಅವನಾಗಿರಲಿ!
ಮೆಲ್ಲಗೆ ಒಳಪ್ರವೇಶಿಸಿದೆ. ಒಳವಿನ್ಯಾಸಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಆ ಹೋಟಲ್ಲಿಗೂ ಈ ಹೋಟಲ್ಲಿಗೂ ನಡುವೆ ವ್ಯತ್ಯಾಸವಿರಲಿಲ್ಲ. ಅಷ್ಟೊತ್ತಿಗಾಗಲೇ ಎದುರಗಡೆ ಕಲ್ಲುಬೆಂಚಿಯ ಮೇಲೆ ಒಂದಿಬ್ಬರು ತಮ್ಮ ಜೇಬಿನಿಂದ ಕ್ವಾರ್ಟರ್ ಬಾಟಲಿಯನ್ನು ತೆಗೆದು ಸಿಲವಾರ ಲೋಟಕ್ಕೆ ಸುರಿದು ಅದಕ್ಕೆ ಗಂಗಾಜಲವನ್ನು ಮಿಶ್ರಣ ಮಾಡುತ್ತಲೇ ನನ್ನತ್ತ ಪ್ರಶ್ನಾರ್ಥಕ ನೋಟ ಬೀರಿದರು. ಅವರ ಮುಂದೆ ಬೋಟೆ ಫ್ರೈ ಸಪಾಲೈ ಮಾಡಿದ ವ್ಯಕ್ತಿಯೊಬ್ಬ ನನ್ನೆದುರು ನಿಂತು ತನ್ನ ಒದ್ದೆ ಕೈಗಳನ್ನು ಟವಲ್ಲಿಗೆ ಒರೆಸಿಕೊಂಡ. ಪರವಶಗೊಳಿಸಲೆಂದು ತೆಲುಗಿನಲ್ಲಿ ಮಾತಾಡಿದೆ. ಆದರೆ ಆತ ಪುಳಕಗೊಳ್ಳುವ ಬದಲು ಗಾಬರಿಯಾದಂತೆ ಗೋಚರಿಸಿದ. ನಖಶಿಖಾಂತ ದಿಟ್ಟಿಸಿದೆ, ಎಂದಿನಂತೆ ತೆಲುಗಿನಲ್ಲಿ ಮಾತಾಡಿದೆ, ಪುಳಕಗೊಂಡ, ಇಪ್ಪತ್ತೆರಡು ವರ್ಷದ ವಯೋಮಾನ, ಸಹಾಯಕನಿದ್ದಿರಬಹುದು. ಅವನು ಇವನಾಗಿರಲಿಕ್ಕಿಲ್ಲ, ಮಸ್ತಾನಂಟೆ ಎವರು?, ಕೇಳಿದೊಡನೆ ಅರೆ ಹೋ ಮಸ್ತಾನ್ ಭಾಯ್ ಎಂದು ಅವನು ಕೂಗಿದ.
ಒಳಗೆ ಮಸಾಲೆ ರುಬ್ಬುವುದು ನಿಧನಿಧಾನವಾಗಿ ಸದ್ದಡಗಿತು, ಮಲಿನಗೊಂಡಿದ್ದ ಬಾಗಿಲ ತೆರೆ ನಿಧಾನವಾಗಿ ತೆರೆದುಕೊಂಡಿತು, ಗೋಚರಿಸಿದ ವ್ಯಕ್ತಿಯನ್ನು ಬಾಗಿಲ ಬೆಳಕಲ್ಲಿ ದಿಟ್ಟಿಸಿದೆ, ಸಣಕಲು ಹಾಗೂ ಎತ್ತರನೆ ದೇಹಿ, ಕುರುಚಲು ಗಡ್ಡದಲ್ಲಡಗಿದ್ದ ಮುಖ ಸ್ಪಷ್ಟವಾಗಿ ಗೋಚರಿಸಲಿಲ್ಲ, ಮಲಿನ ಅರೆದೋಳಿನ ಮೈಯಂಗು ಲುಂಗಿ ಧರಿಸಿದ್ದ, ಕಪ್ಪುತುಟಿಗಳ ನಡುವೆ ಚುಟ್ಟಾ ಕಚ್ಚಿ ಹಿಡಿದಿದ್ದ, ಮೂಗಿನ ಹೊಳ್ಳೆಗಳಿಂದ ಹೊಗೆ ಚೆಲ್ಲುತ್ತ ನನ್ನನ್ನು ಸಮೀಪಿಸಿದ. ರಂಡಿ ಮಸ್ತಾನ್ ಕೂಚಂಡಿ ಎಂದು ಪಕ್ಕಕ್ಕೆ ಸರಿದೆ, ಆದರೆ ಆತ ಕೂಡ್ರದೆ ನನ್ನೆದುರು ನಿಂತು ತುಟಿಗಳ ನಡುವೆ ಇದ್ದ ಕೊರೆಚುಟ್ಟವನ್ನು ಬಾಗಿಲ ಕಡೆ ಕೌಶಲ್ಯಪೂರ್ಣವಾಗಿ ಚಿಮ್ಮಿದ. ಊರು ತೆಲುಗು ಇತ್ಯಾದಿ ಮಾತುಕತೆ, ನಮ್ಮಿಬ್ಬರ ನಡುವೆ ಆತ್ಮೀಯತೆಯನ್ನು ತುಸುಮಟ್ಟಿಗೆ ಬೆಸೆಯಿತು. ಪತ್ತಿಕೊಂಡ ಎಂಬ ನಗರವಾಚಕದ ಹೆಸರೆತ್ತಿದೊಡನೆ ಬೆದರಿದಂತೆ ಕಂಡು ಬಂದ, ತನಗೂ ಆ ಊರಿಗೂ ಯಾವುದೇ ಸಂಬಂಧವಿಲ್ಲವೆಂದು ಸಾಬೀತುಪಡಿಸಲು ಪ್ರಯತ್ನಿಸಿದನಾದರೂ ಪ್ರಯೋಜನವಾಗಲಿಲ್ಲ. ನಾನು ಲಕ್ಷ್ಮಣ, ಓಬಲೇಸು ಎಂಬ ನಾಮವಾಚಕಗಳ ಸಹಾಯದಿಂದ ಹಿಡಿತವನ್ನು ಬಲಗೊಳಿಸಿದೆ, ಆತನ ಕಣ್ಣುಗಳಲ್ಲಿ ನೀರು ಕಾಣಿಸಿಕೊಂಡಿತು, ಒಂಚೂರು ಬೆಳಕಿನಲ್ಲಿ ಮಿರಿಮಿರಿ ಮಿಂಚಲಾರಂಭಿಸಿತು, ಅದೇ ಸಮಯಕ್ಕೆ ಸರಿಯಾಗಿ ಅಡುಗೆ ಮನೆಯೊಳಗಿಂದ ಒಂದಿಬ್ಬರು ಹೆಣ್ಣುಮಕ್ಕಳು ಬಾಗಿಲ ತೆರೆಮರೆಯಲ್ಲಿ ಕಾಣಿಸಿದರಲ್ಲದೆ ನಮ್ಮ ಕಡೆ ಇಣುಕಿ ಮರೆಯಾದರು. ಮಾಡಿರುವ ಸಾಲ ಇತ್ಯಾದಿ ಪ್ರಸ್ತಾಪಿಸಿದೆ, ಲಕ್ಷ್ಮಣಗೆ ಹೇಳಿ ಬಡ್ಡಿ ಮಾಫ್ ಮಾಡಿಸುವುದಾಗಿ ಹೇಳಿದೆ,
ಅದಕ್ಕೆ ಪ್ರತಿಯಾಗಿ ನನ್ನೆರಡೂ ಕೈಗಳನ್ನು ತನ್ನೆರಡೂ ಕೈಗಳಿಂದ ಹಿಡಿದು ಒದ್ದೆ ಮಾಡಿದ. ಕೈಮುಗಿದು ತೆಲುಗಿನಲ್ಲಿ ಸಾಹೇಬರೇ ಹಾಗೆ ಮಾಡಬೇಡಿರಿ, ಒಂದು ತುತ್ತು ಅನ್ನ ಕೊಟ್ಟಿರುವ ಕೊಟ್ಟೂರಿನವರು ನೀವು ನನಗೆ ದೇವರಿದ್ದಂತೆ ಎಂದು ಹೇಳಿದ, ಆತನ ಮಾತುಗಳು ಭಯದಿಂದ ತೊದಲುತ್ತಿದ್ದವು. ಆತನ ಮಾತುಗಳು ನನ್ನಲ್ಲಿ ದಯದಾಕ್ಷಿಣ್ಯ ಹುಟ್ಟಿಸಲಿಲ್ಲ, ತುಸು ಕಾಠಿಣ್ಯಗೊಳಿಸಿದವು.
ಅದೆಲ್ಲ ಇರ್ಲಿ ಮಸ್ತಾನ್, ಲಾಯರ್ ಲಕ್ಷ್ಮಣ್ ಅವರಿಂದ ಇವತ್ತು ಸಂಜೆ ಹೊತ್ತಿಗೆ ಫೋನ್ ಬರ್ತದೆ, ನೀನಿಲ್ಲಿರೋ ಸಂಗತೀನ ತಿಳಿಸ್ತೀನಿ ಎಂದು ಹೇಳಿದೆ. ಅಷ್ಟು ಹೊತ್ತಿಗೆ ಎದುರಿದ್ದ ಟೇಬಲ್ ಮೇಲೆ ಅದೂ ಬಾಗಿಲ ಮರೆಯಲ್ಲಿ ಎಣ್ಣೆ ಹಾಕುತ್ತಿದ್ದ ಅವರಿಬ್ಬರು ಹೊರಟು ಹೋಗಿದ್ದುದರಿಂದ ಕಾಠಿಣ್ಯತೆ ವೃದ್ಧಿಸಿತ್ತು. ನನ್ನ ಮಾತು ಆತನನ್ನು ಕಂಗಾಲಾಗಿಸಿತಲ್ಲದೆ ಭಯಭೀತನನ್ನಾಗಿಸಿತು. ತನ್ನ ಅಜಾನುವ್ಯಕ್ತಿತ್ವವನ್ನು ಹ್ರಸ್ವಗೊಳಿಸಿತು, ತೀರಾ ಕುಬ್ಜನಾದಂತೆ ಗೋಚರಿಸಿದ. ಕೈಜೋಡಿಸಿ ಹೇಳಿದ್ದೇನೆಂದರೆ..
ಹೇಳಿ ಬಡವನ ಹೊಟ್ಟೆ ಮೇಲೆ ಕಲ್ಲುಚಪ್ಪಡೀನ ಎಳಿಬ್ಯಾಡಿ ಸಾಹೇಬರೆ, ಸಾಲ ಕುಯ್ದಿರೋದು ಲಚ್ಮಣ್ಣ ವಕೀಲರತ್ರ, ಎಷ್ಟು ತಗೊಂಡೀನೋ ಅದಕ್ಕಿಂತ ಡಬ್ಬಲ್ ಬಡ್ಡಿ ಕಟ್ಟಿದ್ದೀನಿ, ನನ್ನ ಅವರ ಸಂಬಂಧ ನಿನ್ನೆ ಮೊನ್ನೆಯದ್ದಲ್ಲ ಸಾರ್, ತಲೆತಲಾಂತರದಿಂದ ಬಂದಿರೋದು. ನಮ್ಮಪ್ಪನೂ ಬಡ್ಡೀನ ತೀರಿಸಲಿಕ್ಕಾಗದೆ ಸತ್ತ, ನನ್ನದೂ ಅದೇ ಕಥೆಯಾಗಿದೆ ಸಾರ್ ಎಂದು ನಿಡುಸುಯ್ದ, ಅದೂ ನನ್ನೆದೆಗೆ ತಾಕುವಂತೆ.
ನನ್ನ ತಂದೆಯದ್ದೂ ಅದೇ ಕಥೆ, ಆತನೂ ಮಳೆಬೆಳೆ ಕೈಕೊಟ್ಟ ಪರಿಣಾಮವಾಗಿ ದಲ್ಲಾಳಿಗಳ ಕಾಟದಿಂದ ನವೆನವೆದು ಅಲ್ಸರ್ ಕಾಯಿಲೆಗೆ ತುತ್ತಾಗಿ ಅಕಾಲ ಮರಣಕ್ಕೆ ತುತ್ತಾದನ್ನು ನೆನಪಿಸಿಕೊಂಡು ನಾನೂ ನಿಡುಸುಯ್ದೆ. ಪುನಃ ಆತನ ಮುಖವನ್ನು ನೋಡಿದೆ, ಪ್ರಾಮಾಣಿಕತೆ, ಅಸಹಾಯಕತೆ ಅಲ್ಲಿ ದಟೈಸಿತ್ತು.
ಹೋಟಲ್ ವ್ಯಾಪಾರ ಚೆನ್ನಾಗಿ ನಡೀತಿರಲಿಲ್ವೆ! ಎಂದು ಕೇಳಿದೆ.
ಸಾರ್ ಹೋಟಲ್ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು, ಇಲ್ಲವೆಂದು ಹೇಳಿ ನಾನ್ಯಾವ ನರಕಕ್ಕೆ ಹೋಗ್ಲಿ, ಆದರೆ ಎಮ್ಮೆಲ್ಲೆ ಎಲೆಕ್ಷನ್ ನನ್ನನ್ನು ಹಾಳು ಮಾಡಿಬಿಟ್ತು ಸಾರ್ ಎಂದು ಪುನಃ ತನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡ. ಪುನಃ ತಾನೆ ಹೀಗೆಂದು ಹೇಳಿದ, ಅದೆಂದರೆ..
ಪತ್ತಿಕೊಂಡದಲ್ಲಿ ಮಸ್ತಾನ್ ಹೋಟಲ್ಲಿನ ಚಿಕನ್ ಕಬಾಬ್, ಬಿರಿಯಾನಿ ಅಂದರೆ ಭಾರಿ ಫೇಮೋಸಾಗಿತ್ತು, ಅದನ್ನು ತಿನ್ನುವ ಸಲುವಾಗಿ ಕಪ್ಪಟ್ರಾಳು ದೇವನಕೊಂಡ ತುಗ್ಗಲಿ ಪೆರವಿಲಿ ಕಡೆಯಿಂದ ಗಿರಾಕಿಗಳು ಬರುತ್ತಿದ್ದರು. ದೊಡ್ಡದೊಡ್ಡ ಗೌಡರು ರೆಡ್ಡಿ ನಾಯ್ಡುಗಳು ತಾವಿರುವಲ್ಲಿಗೆ ಪಾರ್ಸಲ್ಲ್ ಒಯ್ಯುತ್ತಿದ್ದರೆಂದರೆ ನೀವೇ ಲೆಕ್ಕಹಾಕಿ ಸ್ವಾಮಿ, ಅವರನ್ನು ನಾವು ದೇವರೆಂದು ಭಾವಿಸಿದ್ದೆವು, ನಮ್ಮ ಅದೃಷ್ಟವೋ ದುರಾದೃಷ್ಟವೋ! ಎಮ್ಮೆಲ್ಲೆ ಎಲೆಕ್ಷನ್ ಬಂತು. ಅದು ಮುಗಿಯುವುದರೊಳಗೆ ನಾಲ್ಕು ಕಾಸು ಸಂಪಾದನೆ ಮಾಡಬೇಕೆಂದು ಯೋಚಿಸಿದೆವು. ಸಾಲಕ್ಕಾಗಿ ಲಕ್ಷ್ಮಣ ವಕೀಲರ ಹತ್ತಿರ ಹೋದೆ. ಅವರು ಯಾವತ್ತೂ ನನ್ನನ್ನು ಬರಿಗೈಯಲ್ಲಿ ಕಳಿಸಿದವರೇ ಅಲ್ಲ, ಕೇಳಿದೊಡನೆ ಕೊಟ್ಟರೇನೋ ಸರಿ, ಅದೂ ಶೇಕಡಾ ನಾಲ್ಕರ ಬಡ್ಡಿಯಂತೆ, ಒಂದು ತಿಂಗಳ ಬಡ್ಡಿಯನ್ನು ಮುರಿದು ಕೊಟ್ಟರು. ಮಾರನೆ ದಿವಸವೇ ಕರ್ನೂಲಿಗೆ ಹೋಗಿ ಸಾಮಾನು ಸರಂಜಾಮವನ್ನು ಖರೀದಿಸಿ ತಂದೆ. ಎಲೆಕ್ಷನ್ನಿನಲ್ಲಿ ಮದ್ದೂರು ಸುಬ್ಬಾರರೆಡ್ಡಿ ತೆಲುಗುದೇಶಂ ಪಕ್ಷದ ಪರವಾಗಿ, ತುಗ್ಗಲಿ ತಿಮ್ಮಾರೆಡ್ಡಿ ಕಾಂಗ್ರೇಸ್ ಪಕ್ಷದ ಪರವಾಗಿ ಮತ್ತು ವಸಂತಗುಪ್ತ ಕಮ್ಯುನಿಷ್ಟ್ ಪಕ್ಷದ ಪರವಾಗಿ ಸ್ಪರ್ಧಿಸಿದರು. ಆಯಾ ಪಕ್ಷದವರು ತಮ್ಮ ಕಾರ್ಯಕರ್ತರಿಗೆ ಉದ್ರಿ ಊಟ ಕೊಡಬೇಕೆಂದರು, ಅಡ್ವಾನ್ಸ್ ಕೇಳಿದೆ, ಅದಕ್ಕೆ ಅವರು ನೀನು ಪತ್ತಿಕೊಂಡದಲ್ಲಿ ಇರಬೇಕೋ ಬೇಡವೋ! ಎಲೆಕ್ಷನ್ ಮುಗಿದ ಬಳಿಕ ಲೆಕ್ಕ ಚುಕ್ತಾ ಮಾಡ್ತೀವಿ, ಹೆದರಬೇಡ ಎಂದು ಗತ್ತುಹಾಕಿದರು. ಬಿಟ್ಟಿ ಊಟ ಮಾಡುವುದರಲ್ಲಿ ಪಾರ್ಟಿ ಕಾರ್ಯಕರ್ತರು ಬಕಾಸುರರಿಗಿಂತ ಕಡಿಮೆ ಇಲ್ಲವೆಂದು ದಿನಗಳೆದಂತೆ ಅರ್ಥವಾಯಿತು. ನಮ್ಮ ಹೋಟಲ್ಲಿನಲ್ಲಿ ಕುಡಿಯುತ್ತಿದ್ದರಲ್ಲದೆ ಅಮಲಿನಲ್ಲಿ ಪರಸ್ಪರ ಹೊಡೆದಾಡುತ್ತಿದ್ದರು. ನಾನೂ ಕೆಲವೊಂದು ಸಲ ಅವರ ಕೈಯಲ್ಲಿ ಒದೆ ತಿಂದಿರುವುದೂ ಉಂಟು. ಎಲೆಕ್ಷನ್ ಮುಗಿಯಲೆಂದು ತುಟಿ ಕಚ್ಚಿ ಸಹಿಸಿಕೊಂಡಿದ್ದೆವು, ಅದು ಮುಗಿದೊಡನೆ ನೆಮ್ಮದಿಯ ಉಸಿರುಬಿಟ್ಟೆ, ಕೌಂಟಿಂಗ್ ದಿವಸ ಯಾವ್ಯಾವ ಪಕ್ಷದವರು ಎಷ್ಟೆಷ್ಟು ಬಾಕಿ ಇರುವರೆಂದು ಲೆಕ್ಕಹಾಕಿದೆ. ಒಟ್ಟು ಒಂದು ಲಕ್ಷದಾ ಇಪ್ಪತ್ತೆರಡು ಸಾವಿರ ಬರಬೇಕಿತ್ತು. ಆದರೆ ಗೆದ್ದ ತೆಲುಗುದೇಶಂ ಎಮ್ಮೆಲ್ಲೆ ಮದ್ದೂರು ಸುಬ್ಬಾರೆಡ್ಡಿ ನಲವತ್ತು ಸಾವಿರದ ಪೈಕಿ ಇಪ್ಪತ್ತು ಸಾವಿರ ಕೊಟ್ಟರು, ಆದರೆ ಸೋತ ಅಭ್ಯರ್ಥಿಗಳ ಪೈಕಿ ಯಾರೊಬ್ಬರೂ ಕೊಡಲಿಲ್ಲ, ಕೊಡದಿದ್ದರೆ ಬೀದಿಪಾಲಾಗ್ತೀನಿ ಎಂದು ಅಂಗಲಾಚಿದ ನನ್ನನ್ನು ನಾಯಿಗೆ ಹೊಡೆಯುವಂತೆ ಹೊಡೆದು ಓಡಿಸಿದರು ಸ್ವಾಮಿ. ಸಾಲ ಕೊಟ್ಟಿದ್ದ ಲಕ್ಷ್ಮಣ ವಕೀಲರು ಸಹ ಕನಸಿನಲ್ಲಿ ಬಂದು ಕಾಡಲಾರಂಭಿಸಿದರು. ಅದಾದ ಬಳಿಕ ಕೆಲವು ತಿಂಗಳುಗಳ ಕಾಲ ಹಾಗೂ ಹೀಗೂ ಹೋಟಲ್ ನಡೆಸಿದೆ, ವಕೀಲರ ಕಡೆಯವರು ಬಂದು ಪುಕ್ಕಟೆ ಊಟ ಮಾಡುತ್ತಿದ್ದರಲ್ಲದೆ ಬಲವಂತದಿಂದ ಬಡ್ಡಿ ವಸೂಲಿ ಮಾಡಿಕೊಂಡು ಹೋಗುತ್ತಿದ್ದರು. ಕ್ರಮೇಣ ಬಂಡವಾಳವಿಲ್ಲದ ಕಾರಣಕ್ಕೆ ಹೋಟಲ್ ಮುಚ್ಚುವುದು ಅನಿವಾರ್ಯವಾಯಿತು. ಹೆಂಡತಿ ಮಕ್ಕಳು ಕೂಲಿನಾಲಿಗೆ ಹೋಗುತ್ತಿದ್ದರೆ ನಾನು ಹೋಟಲ್ ದಸ್ ನಂಬರಿಯಲ್ಲಿ ಕುಕ್ಕಾಗಿ ಕೆಲಸ ಮಾಡುತ್ತಿದ್ದೆ. ನಮ್ಮೆಲ್ಲರ ಮಜ್ದೂರಿಯಲ್ಲಿ ಬಡ್ಡಿ ಕಟ್ಟುವುದಾಗಲಿಲ್ಲ, ಹೊಟ್ಟೆತುಂಬ ಊಟ ಕಣ್ತುಂಬ ನಿದ್ದೆ ಎಲ್ಲಿ ಸಾಧ್ಯ! ಯಾರಿಗೂ ಹೇಳದೆ ಕೇಳದೆ ಸಂಸಾರ ಸಮೇತ ಪತ್ತಿಕೊಂಡ ಬಿಟ್ಟುಬಂದೆವು, ಈಗ ನಿಮ್ಮೂರು ನನ್ನ ಕುಟುಂಬಕ್ಕೆ ಆಸರೆ ನೀಡಿದೆ ಸ್ವಾಮಿ. ಕೈಯಲ್ಲಿ ಕಾಸು ಕೂಡಿದೊಡನೆ ಪತ್ತಿಕೊಂಡಕ್ಕೆ ಹೋಗಿ ಲಕ್ಷ್ಮಣ ವಕೀಲರ ಋಣ ತೀರಿಸುವೆ, ಅಲ್ಲಿಯವರೆಗೂ.. ಎಂದು ನನ್ನ ಕಡೆ ದೈನ್ಯತೆಯ ನೋಟಬೀರಿದ, ಆತನ ಕಣ್ಣುಗಳಿಂದ ಉರುಳಿದ್ದ ಹನಿಗಳು ಆತನ ಕಪ್ಪು ಹಾಗು ಕೆನ್ನೆಯ ಗುಳಿಗಳಲ್ಲಿ ಸಂಗ್ರಹಗೊಂಡು ದುಃಖದ ಶೋಭೆಯನ್ನು ಹೆಚ್ಚಿಸಿದ್ದವು.
ಮಸ್ತಾನನೂ ಜಮೀನ್ದಾರಿ ವ್ಯವಸ್ಥೆಯೂ! ಅದರ ಅಪಾದಮಸ್ತಕ ತಿಳಿದಿದ್ದ ನನಗೆ ಆತನ ವಿವರಣೆಯಿಂದ ಆಶ್ಚರ್ಯ, ದುಃಖ ಆಗಲಿಲ್ಲ. ಆತನ ಎರಡೂ ಕೈಗಳನ್ನು ಅಪ್ಯಾಯತೆಯಿಂದ ಅದುಮಿ ಅಲ್ಲಿಂದ ಬಂದೆ. ಎರಡು ದಿವಸಗಳ ಬಳಿಕ ಎಂದಿನಂತೆ ಸೋದರ ಸಂಬಂಧಿ ಲಕ್ಷ್ಮಣ ವಕೀಲರಿಂದ ದೂರವಾಣಿ ಕರೆ ಬಂತು. ಕ್ಷೇಮಲಾಭ ವಿಚಾರಿಸಿದಾದ ಬಳಿಕ ಮಸ್ತಾನ್ ಸುಳಿವು ಕುರಿತಂತೆ ಪ್ರಸ್ತಾಪಿಸಿದ, ಇಲ್ಲವೆಂದು ಹೇಳಿ ರಿಸೀವರನ್ನು ಕೆಳಕ್ಕಿರಿಸಿದೆ.
 

‍ಲೇಖಕರು avadhi

21 March, 2013

11 Comments

  1. bharathi

    entha adbhuthavaagi padagalannu heneyutteeri neevu ….

  2. ಸುಧಾ ಚಿದಾನಂದಗೌಡ

    ಇಂಥವೆಷ್ಟು ಕಣ್ಣೀರ ಕಥೆಗಳು ಜಮೀನ್ದಾರಿ ಪದ್ಧತಿ, ನವಚುನಾವಣಾ ಪದ್ಧತಿಯಲ್ಲಿ ಮುಚ್ಚಿಹೋಗಿವೆಯೋ..!

  3. samyuktha

    manamuttuvantide!! tumba ishtavaytu!

  4. ಪ್ರಸಾದ್.ಡಿ.ವಿ.

    ಸರ್ ನಿಮ್ಮ ಅನುಭವದ ಮೂಸೆಯಲ್ಲಿ ಇನ್ನೆಷ್ಟೆಷ್ಟು ಕಥೆಗಳಿವೆಯೋ. ನಿಮ್ಮ ನಿರೂಪಣಾ ತಂತ್ರಗಾರಿಕೆ ನನ್ನನ್ನು ಮೂಕವಾಗಿಸಿರುವುದು ಇದು ಮೊದಲೇನಲ್ಲ. ಜಮೀನ್ದಾರೀ ಪದ್ಧತಿ, ಬಡತನ ಅವುಗಳಿಗಂಟಿಕೊಂಡ ಸಂದರ್ಭಗಳ ಮೂಲಕ ಮಾನವೀಯ ಮೌಲ್ಯಗಳನ್ನು ಶೋಧಿಸಿದೆ ಈ ಕಥೆ. ಬಹಳ ಹಿಡಿಸಿತು.
    – ಪ್ರಸಾದ್.ಡಿ.ವಿ.

  5. ಸುಗುಣ ಮಹೇಶ್

    ಆಪ್ತವಾಗಿದೆ ಬರಹ ಸರ್… ಈ ಎಲೆಕ್ಷನ್ ಹೆಸರಿನಲ್ಲಿ ಎಷ್ಟೋ ಜನರ ಜೀವನ ಬೀದಿಪಾಲಾಗುತ್ತೆ…

  6. Arpitha

    Manamuttuva Kathe. Thumba hidisitu sir……..

  7. sunil Rao

    baravanigeyalli naavu allalle padagaLu sigalaarade tipparalaaga hakteevi….
    this seems not only a story but wonderful vocabulary

  8. ajay

    nannuru hirevaderahalli kannu kattuvanthe ethu nimma kathana shaili evattu e reethi suligegalu nadeyuthave rajakiyadavaru yenadru madthare bidi sir

  9. ಆರ್.ಜಿ. ಹಳ್ಳಿ ನಾಗರಾಜ

    ಪ್ರಿಯ ಕುಂ.ವೀ,
    ಕತೆ ಹೇಳುವ ಶೈಲಿ ನಿಮಗೆ ಕರಗತವಾಗಿದೆ. ಕಂಡುಂಡ ವಸ್ತುವನ್ನು ನೀವು ನೆಪ್ಪಿಟ್ಟುಕೊಂಡು ದಾಖಲಿಸಿದಂತೆ ಬೇರೆ ಲೇಖಕರು ಮಾಡಿದ್ದು ಕಡಿಮೆ!
    ನಿಮ್ಮ ಮಸ್ತಾನ್‌ ಘಟನೆ ಓದಿ, ಒಂದು ಕ್ಷಣ ಅವನ ಬಗ್ಗೆ ಮಾನವೀಯ ಅನುಕಂಪ ಬಂತು. ಶೋಷಣೆಗೆ ಬಲಿಪಶು ಅವನು. ತನ್ನ ಅಪ್ಪ, ತಾನು ದುಡಿದು ಉಳ್ಳವರ ಜಗಲಿಗೆ ಜೀವಕೊಟ್ಟ ಘಟನೆಯಿಂದ ಜಮೀನ್ದಾರಿ ಚಿತ್ರಣ ಕಣ್ಣಮುಂದೆ ಸುಳಿಯಿತು.
    ಮಸ್ತಾನ್‌ನನ್ನು ರಕ್ಷಿಸುವ ಕೆಲಸ ಮುಂದೆಯೂ ನಿಮ್ಮದೇ… ಸೋದರ ಸಂಬಂಧಿ ಲಕ್ಷ್ಮಣ್‌ ವಕೀಲ ಮಸ್ತಾನ್‌ನ್ನು ಹೊತ್ತೊಯ್ದರೂ ಆಶ್ಚರ್ಯ ಇಲ್ಲ. ಹೀಗಾಗದಿರಲಿ.
    ಆರ್.ಜಿ. ಹಳ್ಳಿ ನಾಗರಾಜ

  10. Raveendra VK

    Sir nimma anubhavagalalli innu adeshtu intaha kategalive ellavannu bareyiri

  11. ನೆಂಪೆ ದೇವರಾಜ್

    ಻ಅದ್ಭುತ. ಸರ್.ಕಣ್ಣಿಗೆ ಕಟ್ಟಿಸುತ್ತೀರಿ.ಮತ್ತೆ ಹೊಸ ಹೊಳಹುಗಳು ಕತೆ ನೆನಪಿಸಿಕೊಂಡಂತೆ.ನಮ್ಮ ಕಡೆ ಭೂಸುಧಾರಣೆ ಬಂದ ನಂತರ ಜಮೀನುದಾರಿ ವ್ಯವಸ್ಥೆ ಇಲ್ಲವೆನ್ನಬಹುದು. ಈ ಬಡ್ಡಿ ವ್ಯವಹಾರ ಿದೆ. ಊರು ಬಿಟ್ಟು ತಲೆ ಮರೆಸಿಕೊಂಡು ಊರಿನ ವಿಷಯಗಳ ಬಗ್ಗೆ ಅವರಿವರ ಹತ್ತಿರ ಕೇಳಿ ತಿಳಿದುಕೋಳ್ಲುವವರೂ ಇದ್ಧಾರಂತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading