ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂಟೆತ್ತಿಗೆ ಮಪ್ಪುರಿದಂತೆ..!

ರಾಜೇಶ್ವರಿ ಹುಲ್ಲೇನಹಳ್ಳಿ

ಗಣಪನ ವಾಹನ ಇಲಿಯಂತೆ, ಸಬ್ರಹ್ಮಣ್ಯನಿಗೆ ನವಿಲು, ಶಿವನಿಗೆ ನಂದಿ, ವಿಷ್ಣುವಿಗೆ ಗರುಡ, ಬ್ರಹ್ಮನಿಗೆ ಹಂಸ, ಇಂದ್ರನಿಗೆ ಐರಾವತ, ಅಯ್ಯಪ್ಪನಿಗೆ ಹುಲಿ, ಶನಿ ದೇವನಿಗೆ ಕಾಗೆ, ಯಮಧರ್ಮನಿಗೆ ಕೋಣ! ಇನ್ನು ನಮ್ಮ ಲೇಡಿ ದೇವತೆಗಳಾದ ಪಾರ್ವತಿ, ಚಾಮುಂಡೇಶ್ವರಿಗೆ ಸಿಂಹ, ಸರಸ್ವತಿಗೆ ಹಂಸ, ಲಕ್ಷ್ಮಿಗೆ ಗೂಬೆ, ಹೀಗೆ ಒಬ್ಬೊಬ್ಬರು ಅವರವರಿಗೆ ಇಷ್ಟವಾದ ಒಂದೊಂದು, Model ನ two wheeler, four wheeler (ಎರಡು ಕಾಲಿನ ನಾಲ್ಕು ಕಾಲಿನ)own vehicle ಇಟ್ಕೊಂಡಿದ್ದರೂ ದೇವಾನುದೇವತೆಗಳು ಅವುಗಳನ್ನೇನು ಕಷ್ಟಪಟ್ಟು driving ಕಲಿತು ಓಡಿಸುತ್ತಿರಲಿಲ್ಲ ಬದಲಿಗೆ ಅವರ ವಾಹನಗಳೇ ಅವರನ್ನು ಅವರು ಬೇಕೆಂದೆಡೆಗೆ ಹೊತ್ತೊಯ್ಯುತ್ತಿದ್ದವು!. ಪೆಟ್ರೋಲ್ ಕೊಳ್ಳುವಂತಿಲ್ಲ ಡೀಸೆಲ್ ಹಾಕಿಸುವಂತಿಲ್ಲ ಅಕ್ಸಿಡೆಂಟ್ ಇಲ್ಲವೇ ಇಲ್ಲ!. ನಮಗೂ ಹಾಗಿದ್ದಿದ್ದರೆ ಎಷ್ಟು ಚಂದವಿರುತ್ತಿತ್ತು! ಅಂದ್ರೆ ಅವೆಲ್ಲ ಜೀವಂತ ವಾಹನಗಳು ಅದಕ್ಕೆ ಅವೇ ಓಡುತ್ತಿದ್ದವು ಅಂತೀರಾ? ಹೌದು ನೀವು ಹೇಳೋದೂ ಸರೀನೇ. ಈಗ ನಾವು ಜೀವಂತ ವಾಹನಗಳನ್ನು ಕೊಳ್ಳಲಾಗದು. ಮಾನವರು ಅದಕ್ಕೆಂದೇ ದಾರಿ ಕ್ರಮಿಸಲು ಈಗ ಇಂಧನ ಚಾಲಿತ ವಾಹನಗಳನ್ನು ಖರೀದಿಸುವುದರ ಜೊತೆಗೆ ಅವುಗಳನ್ನು ಓಡಿಸುವುದನ್ನು ಕೂಡ ಕಲಿಯಬೇಕು. ಆ vehicle riding, driving , ಕಲಿಯುವುದೇ ಒಂದು ದುಸ್ತರವೆನಿಸಿತ್ತು ನನಗೆ.

ಅವು ತೊಂಬತ್ತರ ದಶಕದ ಅಂತಿಮ ವರುಷಗಳು. ನನಗಾಗ ಅಂದಿಗೆ ನಗರದ ಹೊರ ವಲಯವೆನ್ನುವಂತಹ ಸ್ಥಳದಲ್ಲಿದ್ದ ಹಾಸನ ಡೇರಿಯಲ್ಲಿ ಆಗಷ್ಟೇ ಕೆಲಸ ಸಿಕ್ಕಿತ್ತು. ನಾವು ವಾಸಿಸುತ್ತಿದ್ದ ಕುವೆಂಪುನಗರದಿಂದ ಒಳ ಹಾದಿಯಲ್ಲಿ ಹೋದರೆ ತುಸು ಹತ್ತಿರವೇ ಇದ್ದು ಕಾಲು ನಡಿಗೆಯಲ್ಲಿ ಸಾಗಬಹುದಿತ್ತು ಆದರೆ ಒಳ ಹಾದಿ ಅಷ್ಟು ಸುರಕ್ಷಿತವಾಗಿಲ್ಲರಲಿಲ್ಲ ಆದ್ದರಿಂದ, ದೂರವಾದರೂ ಮುಖ್ಯ ರಸ್ತೆಯಲ್ಲಿ ಹೋಗುವುದೇ ಸೂಕ್ತವಾಗಿತ್ತು. ಕಛೇರಿಗೆ ಪ್ರತಿದಿನ ಅಪ್ಪ ತನ್ನ Two wheeler ಮಿನಿ ಬುಲೆಟ್ ಎನಿಸಿಕೊಂಡಿದ್ದ Crusader ನಲ್ಲಿ ನನ್ನನ್ನು ಡ್ರಾಪ್ ಮಾಡುತ್ತಿದ್ದರು. ಆ ಕಾಲದಲ್ಲಿ ಮನೆಯಲ್ಲೊಂದು ದ್ವಿಚಕ್ರ ವಾಹನ ಇದೆಯೆಂದರೆ ಮನೆಯ ಗಂಡು ಮಕ್ಕಳಿಗೆ ಸಮಯ ಸಿಕ್ಕರೆ ಸಾಕು, ಕಾರಣ ಸಿಕ್ಕರೆ ಸಾಕು, ಒಂದಲ್ಲಾ ಒಂದು ನೆಪದಲ್ಲಿ ಗಾಡಿ ಓಡಿಸುವ ಅವಕಾಶಕ್ಕಾಗಿ ಕಾಯುತ್ತಿದ್ದರು. ಒಮ್ಮೊಮ್ಮೆ ಅಪ್ಪ ನನ್ನ ತಮ್ಮನಿಗೆ ನನ್ನನ್ನು ಡ್ರಾಪ್ ಮಾಡಲು ಹೇಳುತ್ತಿದ್ದರು. ಅದನ್ನು ಕಂಡ ನನ್ನ ತಮ್ಮನ ಗೆಳೆಯರೆಲ್ಲ ಬೆಳ್ಳಂಬೆಳಗ್ಗೆ ಮನೆಗೆ ಬಂದು ಅಪ್ಪನನ್ನು , ನಾವು “ಅಣ್ಣಾ” ಎಂದು ಕರೆಯುವಂತೆ ಅವರೂ ಕೂಡ ಅಣ್ಣಾ ರಾಜಕ್ಕನ್ನ ಆಫೀಸಿಗೆ ನಾನು ಡ್ರಾಪ್ ಮಾಡ್ತೀನಿ, ನಾನು ಡ್ರಾಪ್ ಮಾಡ್ತೀನಿ ಎಂದು ಪೈಪೋಟಿಯಲ್ಲಿ ಕಾಯುತ್ತಿದ್ದರು. ಈ ಹುಡುಗರಿಗೋ ನನ್ನನ್ನು office ಗೆ ಡ್ರಾಪ್ ಮಾಡುವುದಕ್ಕಿಂತ ಹೆಚ್ಚಾಗಿ ಗುಡು ಗುಡು ಎಂದು ಸದ್ದು ಮಾಡುವ mini bullet ಗಾಡಿಯಲ್ಲಿ ನನ್ನನ್ನು ಡ್ರಾಪ್ ಮಾಡಿದ ನಂತರ AVK ಕಾಲೇಜು ರಸ್ತೆಯಲ್ಲಿ ಒಂದು ಸುತ್ತು ಬರುವಾಗ ಹುಡುಗಿಯರು ತಿರುಗಿ ನೋಡುವರೆಂಬ ಬಯಕೆ!. ಆ ಬಯಕೆಯ ಈಡೇರಿಕೆಗಾಗಿ ನನ್ನನ್ನು ಆಫೀಸಿಗೆ ಡ್ರಾಪ್ ಮಾಡುವ ನೆಪವಷ್ಟೇ!.

ಅಣ್ಣ ಊರಿನಲ್ಲಿರುವಾಗ ಪ್ರತಿ ದಿನ ಡ್ರಾಪ್ ಮಾಡ್ತಿದ್ರು ಆದರೆ ಅವರಿಲ್ಲದಾಗ ಕುವೆಂಪು ನಗರದಿಂದ ಕಾಲು ಹಾದಿಯಲ್ಲಿ ನಡೆದುಕೊಂಡು ಆಡುವಳ್ಳಿ ಮಾರ್ಗವಾಗಿ K.S.R.T.C. ಕ್ವಾರ್ಟಸ್ ಕಟ್ಟಡ ಕೆಲಸ ನಡೆಯುವ ಹಾದಿಯಿಂದ ಕಿಂಕೋ ಕ್ವಾರ್ಟಸ್ ಮೂಲಕ ರೇಷ್ಮೆ ಇಲಾಖೆಯ ಮುಂದಿನಿಂದ ಬಿ.ಎಂ.ರಸ್ತೆಯಲ್ಲಿದ್ದ ಡೈರಿ ತಲುಪುತ್ತಿದ್ದೆ. ಅಗಷ್ಟೇ ಕಟ್ಟುತ್ತಿದ್ದ K.S.R.T.C. ಕ್ವಾರ್ಟಸ್ ಜಾಗ ಮಾತ್ರ ನಿರ್ಜನ ಪ್ರದೇಶವಾಗಿದ್ದು ಅಲ್ಲಿ ಓಡಾಡಲು ತುಸು ಭಯವೆನಿಸುತ್ತಿತ್ತು. ಹೀಗಿರುವಾಗ ಅಣ್ಣ “Two wheeler ಓಡಿಸುವುದನ್ನು ಕಲಿತುಬಿಡು ಒಂದು ಮೊಪೆಡ್ (ಲೂನಾ) ಕೊಡಿಸುವೆ” ಎಂದರು. ಸರಿ ಅದುವರೆಗೆ ಎಂದೂ ಸೈಕಲ್ ಕೂಡ ಓಡಿಸಿರದ ನನಗೆ “ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ” ಭಯವಾಯ್ತು, ಆದರೂ ತೋರಿಸಿಕೊಳ್ಳದೆ ಆಗಲಿ ಎಂದೆ. ಮನೆಯಲ್ಲಿ ಅಪ್ಪನ ಗಾಡಿಯಲ್ಲಿ ಹಿಂದೆ ಕೂರಲು ಸಹ ಹೆದರುತ್ತಿದ್ದ ನಾನು ನೆರಮನೆಯ ಕೂರ್ಗಿ ಆಂಟಿ ದೇಚಮ್ಮನವರು ಬೈದು “ನೀನೆಂಥ ಗ್ರ್ಯಾಜುಯೇಟ್ ಸಿಟಿಯಲ್ಲಿ ಹುಟ್ಟಿ ಬೆಳೆದು ವಿದ್ಯಾವಂತಳಾಗಿ Two wheeler ನಲ್ಲಿ ಹಿಂದೆ ಕೂರಲು ಹೆದರುತ್ತಿರುವಿಯಲ್ಲ!?.” ಎಂದು ರೇಗಿಸಿದಾಗ ವಿಧಿಯಿಲ್ಲದೆ ಮೊದಲ ಬಾರಿಗೆ ಅಪ್ಪನ ಗಾಡಿಯಲ್ಲಿ ಕುಳಿತು ಡೈರಿಗೆ ಇಂಟರ್ವ್ಯೂಗೆ ಹೋದವಳು ನಾನು!. ಇನ್ನು ನಾನೇ ಗಾಡಿ ಓಡಿಸುವುದನ್ನು ಕಲಿಯುವುದೆಂದರೆ?! ನೆನೆಸಿಕೊಂಡರೇ ಭಯವೆನಿಸಿತು.

ನನ್ನ ಗೆಳತಿಯ ತಮ್ಮನ ಬಳಿ ಇದ್ದ ಲೂನಾ ತಂದು ಅದರಲ್ಲಿ ಕಲಿಯುವುದೆಂದು ತೀರ್ಮಾನಿಸಿ ಈಗಿನ ಕುವೆಂಪು ನಗರದ ಎರಡನೇ ಹಂತ ನಿರ್ಮಾಣವಾಗದೇ ಖಾಲಿ ಇದ್ದ ಕೆರೆಯ ಅಂಗಳಕ್ಕೆ (field ) ಹೋದೆವು ಜೊತೆಯಲ್ಲಿ ನಮ್ಮಮ್ಮನೂ ಕೂಡ. ಸುನಿ ಗಾಡಿ ಕಿಕ್ ಮಾಡಿ ಸ್ಟಾರ್ಟ್ ಮಾಡಿ ಗಾಡಿಯಲ್ಲಿ ಕೂರುವುದು ಎಕ್ಸಲೇಟರ್ ಕೊಡುವುದು ಎಲ್ಲವನ್ನೂ ವಿವರಿಸಿ ಮೊದಲಿಗೆ ಗಾಡಿಯನ್ನು ತಳ್ಳಲು ಹೇಳಿದಾಗ ಗಾಡಿಯನ್ನು ಮುಟ್ಟಲೇ ಹೆದರಿದ ನಾನು ಗಾಡಿಯನ್ನು ತುಸುವೇ ದೂರ ತಳ್ಳುವಷ್ಟರಲ್ಲಿ ಬೆವೆತು ಹೋಗಿದ್ದೆ. ಅವ ಗಾಡಿ ಕಿಕ್ ಮಾಡಿ ನನ್ನನ್ನು ಕೂರಲು ಹೇಳುತ್ತಿದ್ದಂತೆಯೇ ನನ್ನ ಅವಸ್ಥೆಯನ್ನು ಕಂಡು ಎಲ್ಲಿತ್ತೋ ನಮ್ಮಮ್ಮನ ಭಯ. “ಅಯ್ಯೋ ಬೇಡಾ ಬೇಡಾ ಲೂನಾನೂ ಬೇಡಾ ಕೈಕಾಲು ಊನಾ ಗೀನಾ ಆಗೋದೂ ಬೇಡ. ಊನಾ ಗೀನಾ ಆದ್ರೆ ಮದ್ವೆ ಮುಂಜಿ ಮಾಡೋದೆಂಗೆ” ಅಂತ ಇಳಿಸಿಯೇ ಬಿಟ್ಟರು. ಮೊದಲೇ ಹೆದರಿ ಬೆವರಿದ್ದ ನಾನು ‌”ಬೆದರಿದವರ ಮೇಲೆ ಹುಲ್ಲುಕಡ್ಡಿ ಎಸೆದರೂ ಹಾವೆನಿಸುವಂತೆ” ಗಾಡಿಯ ಮೇಲೆ ಕೂರಲೇ ಇಲ್ಲ ಭಯಭೀತಳಾದೆ. ಸಧ್ಯ ನಮ್ಮಮ್ಮ ಬೇಡವೆಂದಾಗ “ಕುಂಟೆತ್ತಿಗೆ ಮಪ್ಪರಿದಂತಾಗಿತ್ತು ನನ್ನ ಕಥೆ!.” ಅಲ್ಲಿಗೆ ನನ್ನ Two Wheeler ರೈಡಿಂಗ್ ಕಲಿಯುವ ಕಥೆಯ ಮೊದಲ ಅಧ್ಯಾಯ ಮುಕ್ತಾಯವಾಯ್ತು.

ಕೆಲ ವರ್ಷಗಳು ಕಳೆದ ನಂತರ ನೀನೇನೂ ಪ್ರಯೋಜನವಿಲ್ಲ ಇಷ್ಟೆಲ್ಲಾಮಾತಾಡ್ತಿಯಾ ಒಂದು Two wheeler ಓಡಿಸಲು ಕಲಿತಿಲ್ಲ ಎಂದು ಸಂಬಂಧಿಕರು , ಗೆಳತಿಯರು, ಸಹೋದ್ಯೋಗಿಗಳು ಎಲ್ಲರೂ ಅಣಕಿಸುವಾಗ ಏನಾದರಾಗಲಿ ಕಲಿಯೋಣವೆಂದು ತೀರ್ಮಾನಿಸಿ ಒಂದೆರಡು ದಿನ TVS Xl Super ಗಾಡಿಯನ್ನು ತಳ್ಳಾಡಿದೆ. ಏನೇ ಆದರೂ ಗಾಡಿಯ ಮೇಲೆ ಕೂರುವ ಭಯ ಮಾತ್ರ ಬೆನ್ನು ಬಿಡದ ಭೂತದಂತೆ ಕಾಡುತ್ತಿತ್ತು!. ಕೆಲವು ವರ್ಷಗಳ ನಂತರ ನನ್ನ ತಂಗಿ Scooty ಕಲಿಯಲು ಹೋದಾಗ ನಾನೂ ಕೂಡ ಕಲಿಯೋಣವೆಂದು ಮರಳಿ ಯತ್ನವ ಮಾಡ ಹೊರಟೆ. ಮನೆಯ ಮುಂದೆ ರಾತ್ರಿ ಸಮಯದಲ್ಲಿ “ಮೊದಲು ಗಾಡಿಯನ್ನು ತಳ್ಳುವುದನ್ನು ಕಲಿ” ಎಂಬ ಕೆಲವರ ಸಲಹೆಯಂತೆ ಗಾಡಿ ತಳ್ಳಲು ಯತ್ನಿಸಿದೆ ಆದರೆ ತುಸು ಮುಂದೆ ಹೋಗಿ ತಳ್ಳಿಕೊಂಡು ಹೋಗುವುದೇ ಕಷ್ಟವಾಗಿ ಬೀಳಿಸಿಬಿಟ್ಟೆ. ನನ್ನ ಫಜೀತಿಯನ್ನು ನೋಡಿದ ನೆರೆ ಹೊರೆಯವರು ಒಬ್ಬೊಬ್ಬರು ಒಂದೊಂದು ಸಲಹೆ ನೀಡಿದರು.

ನಾನುಗಾಡಿ ಬೀಳಿಸಿದ್ದನ್ನು ಕಂಡ ಹಾದಿಯಲ್ಲಿ ಹೋಗುವವರು ಇರಲಿ ಹೆದರಬೇಡಿ “ಗಾಡಿ ಕಲಿಯುವಾಗ ಎದ್ದು ಬಿದ್ದು ಕಲಿತರೇ ನಿಜವಾಗಿ ಗಾಡಿ ಓಡಿಸಲು ಬರೋದು” ಎಂದೊಡನೆ ಇನ್ನೂ ಭಯ ಆವರಿಸಿತು

ನೆರೆಮನೆಯವರು “ನಿಮಗೆ ಧೈರ್ಯ ಇಲ್ಲಬಿಡಿ” ಎಷ್ಟೆಲ್ಲ ಮಾತಾಡ್ತೀರಾ ಗಾಡಿ ಕಲಿಯೋಕೆ ಭಯ ಪಡ್ತೀರಲ್ರೀ” ಎಂದರೆ, ಸ್ವಲ್ಪ ಭಯಬಿಟ್ಟು ಕಲೀರಿ. ಏನೋ ಹೇಳ್ತಾರಲ್ಲಾ “ಕಲಿಯೋತನಕ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ” ಅಂತ ಹಾಗೆ ಎಂದರು.

ಮತ್ತಲವರು “ಅಯ್ಯೋ ಬಿಡಿ ಏನಿದ್ದರೂ ಚಿಕ್ಕ ವಯಸ್ಸಿನಲ್ಲಿಯೇ ಕಲಿತರೆ ಕಲಿತಂತೆ ದೊಡ್ಡವರಾದ ಮೇಲೆ ಕಷ್ಟ “ಎಂದರೆ ಇನ್ನೊಬ್ಬರು “ಇದು ಗಾಡಿ ಕಲಿಯುವ ವಯಸ್ಸಾ!? ಈ ವಯಸ್ಸಿನಲ್ಲಿ ಆಗಲ್ಲ ಬಿಡಿ” ಎಂದು ಸೋ ರಾಗ ಎಳೆದರು. ಮತ್ತೋರ್ವರು “ಒಂದು ಕೆಲಸ ಮಾಡಿ ಗಾಡಿ ಕಲಿಯಲು ಸೈಕಲ್ ಬ್ಯಾಲೆನ್ಸ್ ಬೇಕು . ಸೈಕಲ್ ಕಲಿತಿಲ್ಲವಾ ? ಅದಕ್ಕೇ ಬ್ಯಾಲೆನ್ಸ್ ಸಿಗ್ತಾ ಇಲ್ಲ. ಮೊದಲು ಸೈಕಲ್ ಕಲಿಯಿರಿ ಬ್ಯಾಲೆನ್ಸ್ ಸಿಗುತ್ತದೆ” ಎಂದು ಸಲಹೆಯಿತ್ತರು ನನ್ನ ನಲವತ್ತೆಂಟನೇ ವಯಸ್ಸಿನಲ್ಲಿ!.

ಇವರೆಲ್ಲರ ಸಲಹೆಯಿಂದ ನನ್ನ ಕೈಯಲ್ಲಿ ಇದು ಅಸಾಧ್ಯವೆಂದೂ ಈ..ಗ…. ಸೈಕಲ್ ಕಲಿಯ ಹೋದರೆ ಜನ ಮತ್ತಷ್ಟು ನಕ್ಕಾರು ಎಂದೂ ಮತ್ತೊಮ್ಮೆ ಸುಮ್ಮನಾದೆ. ಇಲ್ಲಿಗೆ ಎರಡನೆಯ ಅಧ್ಯಾಯದ ಮುಕ್ತಾಯ!.

ಒಮ್ಮೆ ನನ್ನ ತಂಗಿಯ ತೋಟದ ಮನೆಯಲ್ಲಿದ್ದಾಗ ತಂಗಿಯ ಮಗನ ಸೈಕಲ್ ನೋಡಿದೊಡನೆ. ಸೈಕಲ್ ಬ್ಯಾಲೆನ್ಸ್ ಇದ್ದರೆ ಗಾಡಿ ಓಡಿಸುವುದು ಸುಲಭ ಎಂದವರ ಮಾತುಗಳು ನೆನಪಾಗಿ ಒಂದು ಯೋಚನೆ ಮೂಡಿತು ಹೇಗೂ ಸೈಕಲ್ ಇದೆ, ಇದು ಊರಿನಿಂದ ಹೊರಗಿರುವ ಮನೆ ಹೆಚ್ಚು ಜನರ ಓಡಾಟವಿಲ್ಲ, ಯಾರೂ ಪರಿಚಿತರಿಲ್ಲ ಒಮ್ಮೆ ಪ್ರಯತ್ನಿಸಿಯೇ ಬಿಡೋಣವೆಂದು ತೀರ್ಮಾನಿಸಿಯೇ ಬಿಟ್ಟೆ. ಮಕ್ಕಳನ್ನೆಲ್ಲ ಕರೆದು ನನಗೆ ಸೈಕಲ್ ಕಲಸಿಕೊಡಿ ಎಂದೆ. ಮಕ್ಕಳೆಲ್ಲ ಬಹಳ ಹುಮ್ಮಸ್ಸಿನಿಂದ ಒಪ್ಪಿದರು “ದೊಡ್ಡಮ್ಮನಿಗೆ ಸೈಕಲ್ ಕಲಿಸೋಣ ಬನ್ನಿ” ಎಂದು ರೆಡಿಯಾಗೇ ಬಿಟ್ಟರು. ನಾನು “ಸಂಜೆ ಮಬ್ಬುಗತ್ತಲಾಗಲಿ ಯಾರಾದರೂ ನೋಡಿದರೆ ನಕ್ಕಾರು” ಎಂದೆ. ತುಸು ಕತ್ತಲಾದಂತೆ ಮಕ್ಕಳೆಲ್ಲ ಸೇರಿ ನನ್ನನ್ನು ಸೈಕಲ್ ಮೇಲೆ ಕೂರಿಸಿ ಪೆಡಲ್ ಮಾಡಿ ಎಂದರು ಆಗಲಿಲ್ಲ ಬೀಳುವಂತಾಯ್ತು. ಕೂಡಲೇ ಮಕ್ಕಳು ಅತ್ತಿತ್ತ ಒಬ್ಬೊಬ್ಬರಂತೆ ಹಿಡಿದುಕೊಂಡು “ನೀವು ಪೆಡಲ್ ಮಾಡಿ ನಾವು ಹಿಡ್ಕೋತಿವಿ” ಎಂದರು.

ನಾನು ಪೆಡಲ್ ಮಾಡುತ್ತಾ ಮಾಡುತ್ತಾ ಭಯದಿಂದ ಸೈಕಲ್ ಹ್ಯಾಂಡಲ್ ಕೆಳಗಿದ್ದ ಬ್ರೇಕನ್ನು ಗಟ್ಟಿಯಾಗಿ ಹಿಡಿದೆ ಮುಗ್ಗರಿಸುವಂತಾಯ್ತು. ಮಕ್ಕಳು “ಅಯ್ಯೋ ದೊಡ್ಡಮ್ಮ ಅದು ಬ್ರೇಕ್ ಅದನ್ಯಾಕೆ ಹಿಡಿದಿರಿ ಅದನ್ನು ಬಿಡಿ “ಎಂದು ಬರೇ ಹ್ಯಾಂಡಲ್ ಹಿಡಿಯಲು ಹೇಳಿದರು. ಆ ಹ್ಯಾಂಡಲ್ ಹಿಡಿದು ಪೆಡಲ್ ಮಾಡುತ್ತಾ ಓರೆಯಾಗಿ ತಿರುಗಿಸುತ್ತಿದ್ದೆ. ಸೈಕಲ್ ಓರೆಯಾಗಿ ರಸ್ತೆಯ ಪಕ್ಕದ ಬೇಲಿ ಅಥವಾ ಚರಂಡಿಯ ಕಡೆಗೇ ನುಗ್ಗುತ್ತಿತ್ತು.

ಮಕ್ಕಳು ಏನೇನೋ ಸಲಹೆಗಳನ್ನು ಕೊಟ್ಟರೂ ನನಗೆ ನೇರವಾಗಿ ಹೋಗಲು ಆಗಲೇ ಇಲ್ಲ ‌ಸೈಕಲ್ ಬ್ಯಾಲೆನ್ಸ್ ಕಲಿಯಲೂ ಆಗಲಿಲ್ಲ. ಮಕ್ಕಳಿಗೆ “ಅಯ್ಯೋ ನನ್ನ ಕೈಲಾಗಲ್ಲ ಬಿಡಿ ನಿಲ್ಲಿಸಿ ಇಳಿದು ಬಿಡುತ್ತೇನೆ” ಎಂದು ಇಳಿದು ನಿಡಿದಾದ ಉಸಿರು ಬಿಟ್ಟು ನಡೆದುಕೊಂಡು ಮನೆಗೆ ಬಂದೆ.ಮನೆಗೆ ಬಂದ ಮಕ್ಜಳು ನನ್ನ ಸೈಕಲ್ ಫಜೀತಿಯನ್ನು ಮನೆಯವರೆಲ್ಲರ ಮುಂದೆ ವಿವರಿಸಿದಾಗ ಎಲ್ಲರೆದಿರು ನಗೆಪಾಟಲಿಗೀಡಾದೆ. ಇಲ್ಲಿಗೆ ನನ್ನ ಮೊಪೆಡ್ ರೈಡಿಂಗ್ ಕಲಿಕೆಯ ಮೂರನೆಯ ಅಧ್ಯಾಯ ಮುಕ್ತಾಯವಾಯ್ತು!.

ಅಪ್ಪ ಎಷ್ಟೋ ಬಾರಿ “ಅಲ್ಲಾ ಎಂತೆಂಥಾ ಚಿಕ್ಕ ಚಿಕ್ಕ ಹೆಣ್ಷು ಮಕ್ಕಳೆಲ್ಲಾ ಗಾಡಿನ ಹೇಗೆ ಹಾರಿಸ್ಕೊಂಡು ಹೋಗ್ತಾರೆ ನಿನ್ನ ಕೈಲಾಗಲಿಲ್ಲವಲ್ಲಾ” ಎನ್ನುವಾಗ Two wheeler lady trainer ಬಳಿ ಕಲಿಯೋಣವೆಂದುಕೊಳ್ಳುವಷ್ಟರಲ್ಲಿ ಎಲ್ಲತ್ತೋ ನೋಡಿ ಬೆನ್ನು ಮೂಳೆ ನೋವಿನ ಸಮಸ್ಯೆ ಇಣುಕಿತು!. ಆ ಕಾರಣದಿಂದ ಅದನ್ನೂ ಕೈಬಿಟ್ಟೆ!. “ವಿಘ್ನೇಶ್ವರನ ಮದುವೆಗೆ ನೂರೆಂಟು ವಿಘ್ಞ!”. ಎನ್ನುವಂತಾಗಿ ಇಲ್ಲಿಗೆ ನನ್ನ Two wheeler ಕಲಿಕೆಯ ಕಥೆಯ ನಾಲ್ಕನೆಯ ಅಧ್ಯಾಯವೂ ಮುಕ್ತಾಯವಾಯ್ತು!.

ಮೊಪೆಡ್ ಓಡಿಸುವ ನನ್ನ ಕನಸಂತೂ ಪಕನಸಾಗಿಯೇ ಉಳಿಯಿತು. ಇತ್ತೀಚೆಗೊಮ್ಮೆ ಕನಸಿನಲ್ಲಿ ಮೊಪೆಡ್ ನ್ನು ಲೀಲಾಜಾಲವಾಗಿ ಓಡಿಸುತ್ತಿದ್ದಾಗ ಮನೆಯವರೆಲ್ಲರೂ ಅಚ್ಚರಿಯಿಂದ ಕೂಗಿದಂತಾಗಿ ಎಚ್ಚರವಾಯ್ತು!. ಹಾಸಿಗೆಯ ಮೇಲಿದ್ದೆ!. ಕನಸಲ್ಲಿ ಬಿಟ್ಟು ಇಂದಿಗೂ ನಾನು ಮೊಪೆಡ್ ರೈಡರ್ ಆಗದೆ ಬ್ಯಾಕ್ ಸೀಟರ್ ಆಗಿಯೇ ಉಳಿದಿರುವೆ!. ಎಲ್ಲರ ಅಣಕಕ್ಕೆ ಸಿಲುಕಿರುವೆ!.

ಮತ್ತೊಂದು ಸಂಗತಿಯೆಂದರೆ, ನಾನು ಆಫೀಸಿಗೆ ಹಲವು ಬಾರಿ ಕಾಲ್ನಡಿಗೆಯಲ್ಲಿ ಹಾದು ಹೋಗುತ್ತಿರುವಾಗ ನಮ್ಮ ಸಂಸ್ಥೆಗೆ ಹೊಸದಾಗಿ ಸೇರಿದ ಹಲವು ಸಹೋದ್ಯೋಗಿ ಗಂಡು ಮಕ್ಕಳು ಹೆಣ್ಣು ಮಕ್ಕಳು ನನ್ನನ್ನು ಬನ್ನಿ ಮೇಡಂ, ಬನ್ನಿ ಆಂಟಿ, ಎಂದು ಆಫೀಸಿಗೆ ಕರೆದುಕೊಂಡು ಹೋಗಿದ್ದಾರೆ. ಹಾಗೇ ನನ್ನ ಅಣ್ಣನ ಮಗಳು ಮೇಘ ಹಲವು ವರುಷ ಪ್ರತಿ ದಿನ ಬೆಳಗ್ಗೆ ಪಿಕಪ್ ಮಾಡಿ ಸಂಜೆ ಮನೆಯ ಬಳಿ ಡ್ರಾಪ್ ಕೂಡ ಮಾಡಿದ್ದಾಳೆ. ಅವರೆಲ್ಲರ ಬ್ಯಾಕ್ ಸೀಟರ್ ಆದ ನಾನು ಅವರೆಲ್ಲರಿಗೂ ನನ್ನ ನಿವೃತ್ತಿಯ ದಿನ ಒಟ್ಟಾರೆಯಾಗಿ ಧನ್ಯವಾದಗಳನ್ನು ತಿಳಿಸಿದೆ.

ಯಾವುದಾದರೂ function ಗೆ ಹೋದರೆ ಗೆಳತಿಯರು ಅಥವಾ ಸಂಬಂಧಿಕರುಗಳು ಲೋಕಾಭಿರಾಮವಾಗಿ ಗಾಡಿಯಲ್ಲಿ ಬಂದಿರುವೆಯಾ ? ಎಂದೊಡನೆ ನಾನು ತಟ್ಟನೆ “No ಗಾಡಿ only ಬಾಡಿ!” ಎನ್ನುತ್ತಿದ್ದೆ.! “ಹಿಂದಿನ ಸಾಲಿನ ಹುಡುಗರು , ಎಂದರೆ ನಮಗೆಂದೆಂದೂ ಭಯವಿಲ್ಲ” ಎನ್ನುವ ಕೆ.ಎಸ್ .ನರಸಿಂಹಸ್ವಾಮಿಯವರ ಕವಿತೆಯ ಸಾಲಿನಂತೆ ಹಿಂದಿನ ಸೀಟಿನ ಪಯಣಿಗಳಾಗಿಯೇ ಉಳಿದೆ.

ಮುಂದೆ ಕುಳಿತು ಮೊಪೆಡ್ ಓಡಿಸುವ ಕನಸು ಕನಸಾಗಿಯೇ ಉಳಿಯಿತು ನನ್ನ ಭಯದ ಮನಸ್ಥಿತಿಯಿಂದ!. ನಂತರ ನನ್ನ ಮೊಪೆಡ್ ರೈಡಿಂಗ್ ಕತೆಯನ್ನು ಕೇಳಿದವರೆಲ್ಲ ಹೊಸದೊಂದು ಸಲಹೆ ಕೊಟ್ಟರು ಅದುವೆ Car Driving!. ನಿಮಗೆ Two wheeler ಕಲಿಯಲು ಭಯವಾದರೆ Car ,Driving ಕಲಿಯಿರಿ ಎಂಬುದು. ಇದೇನೋ ಒಪ್ಪಬಹುದೆನಿಸಿತು. ಆದರೆ Driving school ಸಮಯ ಬೆಳಗ್ಗೆ ಏಳರಿಂದ ಸಂಜೆ ಆರರವರೆಗೆ. ಬೆಳಗ್ಗೆ ಆಫೀಸಿಗೆ ಹೋಗುವ ತರಾತುರಿ ಸಂಜೆ ಆಫೀಸಿನಿಂದ ಬರುವುದೇ ಆರು ಗಂಟೆ . ಅಷ್ಟರಲ್ಲಿ Driving school ಸಮಯ close. ಇನ್ನು ಕಲಿಯಲು ಸಮಯವೆಲ್ಲಿ ಎನಿಸಿತು. ಇರಲಿ ಸಮಯ ಮಾಡಿಕೊಂಡು ಹೇಗೋ ಬೆಳಗ್ಗೆಯೇ ಹೋಗೋಣವೆಂದುಕೊಂಡೆ. ಓಹ್ ಈಗ ಮಳೆಗಾಲ, ಇರಲಿ ಮಳೆ ಕಳೆದ ಮೇಲೆ ಹೋಗೋಣವೆಂದುಕೊಂಡೆ. ಮಳೆಗಾಲ ಕಳೆದ ಮೇಲೆ ಚಳಿಗಾಲ. ಆಯ್ಯೋ ಈ ಚಳಿಯಲ್ಲಿ ಹಿಮದ ಗಾಳಿಗೆ ಮೂಗು ಕಟ್ಟುವುದೆಂದು ಬೇಸಿಗೆಯಲ್ಲಿ ಹೋಗೋಣವೆಂದು ಮುಂದೂಡಿದೆ.

“ಚಳಿಗಾಲ ಬಂದಾಗ ” ಎಷ್ಟು ಚಳಿ !ಎಂದರು”
ಬಂತಲ್ಲ ಬೇಸಿಗೆ “ಕೆಟ್ಟ ಬಿಸಿಲೆಂದರು’,
ಮಳೆ ಬಿತ್ತೋ, “ಬಿಡದಲ್ಲ ಶನಿ!” ಎಂಬ ಟೀಕೆ . ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ”! ಎಂಬ. ಕೆ‌.ಎಸ್. ನರಸಿಂಹ ಸ್ವಾಮಿಯವರ ಕವಿತೆಯ ಸಾಲುಗಳಂತೆ driving class join ಆಗಲು ಕಾಲಗಳನ್ನು ದೂರುತ್ತಾ ಕಾಲವನ್ನು ದೂಡುತ್ತಾ, ಮುಂದೂಡಿದೆ!. ಸಹೋದ್ಯೋಗಿಗಳೆಲ್ಲರೂ “ಮೇಡಂ ಅರವತ್ತು ವರ್ಷಕ್ಕೆ ಮೊದಲು ಕಲಿತು ಬಿಡಿ ಇಲ್ಲದಿದ್ದರೆ driving license ಪಡೆಯಲು medical test ಮಾಡಿಸಬೇಕಾಗುತ್ತೆ” ಎಂದಂತೆ ಏನೋ ಹೋಗಲಿ ಎಲ್ಲರ ಸಲಹೆ, ಇಚ್ಛೆಯಂತೆ ಕಲಿತೇ ಬಿಡೋಣವೆಂದು Driving Class ಸೇರುವ ಮನಸು ಮಾಡಿ ಒಂದೆರಡು ಕಡೆ ವಿಚಾರಿಸಿ ಇನ್ನೇನು ಸೇರಬೇಕು ಅಷ್ಟರಲ್ಲಿ ಬಂತು ನೋಡಿ ಮತ್ತೂ ಒಂದು ಕಂಟಕ! ಅದೇನು ಗೊತ್ತಾ? ಜಗತ್ತನ್ನೇ ನಡುಗಿಸಿದ ಕೊರೋನಾ! ಆ ಸಮಯದಲ್ಲಿ ಇಡೀ ವಿಶ್ವವೇ ಲಾಕ್ ಡೌನ್ ಆದಾಗ ಇನ್ನು ನಮ್ಮ Driving school ಇರಲು ಸಾಧ್ಯವೇ,? ನಾನು Drivng ಕಲಿಯಲು ಸಾಧ್ಯವೇ? ಇಲ್ಲವೇ ಇಲ್ಲ ಬಿಡಿ!. ಈ ಕೊರೋನಾ ಕೂಡ ನನ್ನ car driving ಕಲಿಕೆಗೆ ಕಲ್ಲು ಹಾಕಿದ್ದರಿಂದ ಅಂತೂ ಇಂತೂ ನನ್ನ Car Driving ಕಲಿಕೆಗೆ ಎಳ್ಳು ನೀರು ಬಿಟ್ಟಂತಾಯ್ತು ಇಂತು ನನ್ನ Two wheeler ಹಾಗೂ Four wheeler ಕಲಿಕೆಯ ಐದನೆಯ ಹಾಗೂ ಅಂತಿಮ ಅಧ್ಯಾಯ ಮಕ್ತಾಯವಾಯ್ತು!.

ಇದನ್ನು ಯಾರು ಶ್ರವಣ, ಪಠಣ ಮಾಡುವರೋ ಅವರಿಗೆ ಈ ಜನ್ಮದಲ್ಲಿ Driving ಸಿದ್ಧಿಸದೆಂದು ಈ driving ಪುರಾಣ ದಲ್ಲಿ ಹೇಳಲ್ಪಟ್ಟ vehicle riding, driving ವೃತ ಕಥೆಯು ಇಲ್ಲಿಗೆ ಸಂಪೂರ್ಣವಾಯಿತು!

ಈಗಲೂ ಯಾವುದಾದರೂ function Attend ಮಾಡಿ ಹೊರಡುವಾಗ ನನ್ನ Driving ಪುರಾಣ ತಿಳಿಯದ ಸಂಬಂಧಿಕರೋ ಸ್ನೇಹಿತೆಯರೋ ಕಾರ್ ತಂದಿರುವಿರಾ ಎಂದರೆ,ಇಲ್ಲಪ್ಪಾ “No ಕಾರು Only ಕಾಲು” ಎಂದು ತಮಾಷೆ ಮಾಡುತ್ತಾ “ನಾನು ಕಾರು ತರಬೇಕೆಂದರೆ ಕಾರು ಎಳೆದುಕೊಂಡು ಬರಲು ನೀವೇ ಒಂದು ಕಬ್ಬಿಣದ ಚೈನ್ ಕೊಡಿಸಬೇಕಷ್ಟೆ” ಎಂದು ನನ್ನನ್ನ ನಾನೇ ಅಣಕಿಸಿಕೊಳ್ಳುತ್ತೇನೆ!! ಒಮ್ಮೊಮ್ಮೆ ನಮ್ಮನ್ನು ನಾವು ಅಣಕಿಸಿಕೊಳ್ಳುವ ಪರಿಯೂ ಸೊಗಸಾಗಿರುತ್ತದೆಯಲ್ಲವೇ!?.

‍ಲೇಖಕರು Admin

24 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading