ನಟರಾಜ್ ಹುಳಿಯಾರ್
ಕಿ.ರಂ ನಾಗರಾಜರ ಬರಹಗಳು, ಭಾಷಣಗಳು ಹಾಗೂ ನಾಟಕಗಳ
ಪ್ರಾತಿನಿಧಿಕ ಸಂಕಲನ ‘ತೆರೆದ ಪಠ್ಯ’ಕ್ಕೆ ಬರೆದ ಮುನ್ನುಡಿ

ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ಓದಿಗೆ ಹಲವು ಮಾರ್ಗಗಳನ್ನು ಕಂಡು, ಕಾಣಿಸಿದ ಕಿ.ರಂ. ನಾಗರಾಜ ಅವರ ಆಯ್ದ ಬರಹಗಳ ಈ ಪುಸ್ತಕ ಅವರು ತೀರಿಕೊಳ್ಳುವ ಎರಡು ವರ್ಷಗಳ ಮೊದಲೇ ಬರಬೇಕಾಗಿತ್ತು. ಈ ಪುಸ್ತಕ ಪ್ರಕಟಿಸಲು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಮಾತಿನಲ್ಲಿ ಒಪ್ಪಿಗೆ ಕೊಟ್ಟ ಕೀರಂ ತಮ್ಮ ತೀರ್ಮಾನವನ್ನು ಮುಂದೂಡುತ್ತಲೇ ಬಂದರು. ಹೀಗೆ ಮುಂದೂಡುವ ಕೆಲಸವನ್ನು ಅವರು ಹೆಚ್ಚು ಕಡಿಮೆ ತಮ್ಮ ಜೀವನದುದ್ದಕ್ಕೂ ಮಾಡಿಕೊಂಡು ಬಂದಂತಿದೆ.
ಆದರೆ ಅವರ ಓದುಗರಾದ ನಮ್ಮಂಥವರು ಅದನ್ನು ಮುಂದೂಡುವುದು ಸಾಧ್ಯವಿರಲಿಲ್ಲ.
ತಮ್ಮ ವಿಮರ್ಶಾಪ್ರಜ್ಞೆ, ಸಾಹಿತ್ಯಕ ನಂಬಿಕೆಗಳು ಹಾಗೂ ಸಾಹಿತ್ಯ ಕುರಿತು ತಾವೇ ರೂಪಿಸಿಕೊಂಡ ನೈತಿಕ ಪ್ರಶ್ನೆಗಳು ತೀಕ್ಷ್ಣವಾಗಿದ್ದ ಗಳಿಗೆಗಳಲ್ಲಿ ಯಾರನ್ನಾದರೂ, ಯಾವ ಸಿದ್ಧಾಂತವನ್ನಾದರೂ ಮುಖಾಮುಖಿಯಾಗಲು ಸಿದ್ಧವಿದ್ದ ಕೀರಂ ತಮ್ಮ ಮೂವತ್ತನೆಯ ವಯಸ್ಸಿನಲ್ಲಿ ಬರೆದ ಮೊದಲ ಪುಟ್ಟ ಪುಸ್ತಕ `ಪ್ರತಿಷ್ಠಿತ ಶಕ್ತಿ ಮತ್ತು ಕನ್ನಡ ಸಾಹಿತ್ಯ’. ಕನ್ನಡ ಸಾಹಿತ್ಯವು ಭಾಷೆ, ತಾತ್ವಿಕತೆ, ಸಾಹಿತ್ಯ ರಚನೆ ಮುಂತಾದ ವಲಯಗಳಲ್ಲಿ ಪ್ರತಿಷ್ಠಿತ ಶಕ್ತಿಗಳನ್ನು ಎದುರಿಸಿರುವ ರೀತಿಯನ್ನು ಶೋಧಿಸಲೆತ್ನಿಸುತ್ತದೆ. ಜೊತೆಗೆ, ಈ ಪುಸ್ತಕ ಕೀರಂ ಅವರ ಬೌದ್ಧಿಕ ಕಾಳಜಿಗಳು ಹಾಗೂ ಅವರು ಮುಂದೆ ಬೆಳೆಸಲೆತ್ನಿಸಿದ ವಿಶಾಲ ಅಕಡೆಮಿಕ್ ಪ್ರತಿಭಟನೆಗಳ ಮುನ್ಸೂಚನೆಯಂತೆಯೂ ಇದೆ. ಇಪ್ಪತ್ತನೆಯ ಶತಮಾನದ ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯವನ್ನು ಹಾಗೂ ಸಾಹಿತ್ಯಾಧ್ಯಯನವನ್ನು ನಿಯಂತ್ರಿಸಲೆತ್ನಿಸುತ್ತಿದ್ದ ಸೀಮಿತ ಗುರಿಗಳ ಅಕಡೆಮಿಕ್ ವಲಯಗಳು, ಮಾರ್ಕೆಟ್ ಶಕ್ತಿಗಳು, ಫಂಡಿಂಗ್ ಏಜೆನ್ಸಿಗಳು, ಜಾನಪದ ಹಾಗೂ ಭಾಷಾವಿಜ್ಞಾನಗಳ ಜಡ ಸ್ಥಾಪಿತ ಅಧ್ಯಯನ ಮಾರ್ಗಗಳು…ಮುಂತಾದ `ಪ್ರತಿಷ್ಠಿತ’ ನಿಯಂತ್ರಕ ಶಕ್ತಿಗಳನ್ನು ಅವರು ಇಲ್ಲಿ ಪ್ರಶ್ನಿಸುತ್ತಾರೆ. ‘ಜಾನಪದ ಅಭಿವ್ಯಕ್ತಿ ಎಂದರೆ ಒಂದು ಪ್ರತಿಷ್ಠಿತ ಶಕ್ತಿಯನ್ನು ಪ್ರತಿಭಟಿಸುವ ಶಕ್ತಿ ಎಂದು ಗುರುತಿಸಿಕೊಳ್ಳಬೇಕು’ಎಂದೂ ಅವರು ಅಂದೇ ಬರೆದಿದ್ದರು.
ಅವರ ಆ ನಂತರದ ಮಾತು, ಬರಹಗಳಲ್ಲಿ ಈ ಎಲ್ಲ ಪ್ರಶ್ನೆಗಳು ವ್ಯಾಪಕವಾಗಿ ಬೆಳೆದಿವೆ. ಸಂಸ್ಕೃತದ ಸಾಹಿತ್ಯದ ಯಜಮಾನಿಕೆಯನ್ನು ಬಹು ಹಿಂದೆಯೇ ಗ್ರಹಿಸಿದ ಕೀರಂ ಸಂಸ್ಕೃತ ಕಾವ್ಯಮೀಮಾಂಸೆಯ ಎದುರು ಕನ್ನಡ ಕಾವ್ಯ ಮೀಮಾಂಸೆಯನ್ನು ರೂಪಿಸುವ ಕೆಲಸವನ್ನು ಆಳವಾದ ತಾತ್ವಿಕ ಮಟ್ಟದಲ್ಲಿ ಮಾಡಿದ ಮೊದಲಿಗರಲ್ಲಿ ಒಬ್ಬರು. ಅವರು ‘ಕನ್ನಡ ಕವಿಗಳು ರೂಪಿಸಿದ ಕಾವ್ಯಮೀಮಾಂಸೆ’ ಎಂಬ ಪಠ್ಯಭಾಗವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ರೂಪಿಸಿ ಹಲವು ವರ್ಷ ಪಾಠ ಹೇಳಿದವರು. ಅವರ ಈ ಕನ್ನಡಪರ ತಾತ್ವಿಕ ನಿಲುವಿಗೂ ಮುಂದೆ ಅವರು 2009-10ರಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯ ವಿರುದ್ಧ ಬಹುಗಟ್ಟಿಯಾದ ತಾತ್ವಿಕ ದನಿಯನ್ನು ಎತ್ತಿದ್ದಕ್ಕೂ ಸಂಬಂಧವಿತ್ತು.
ಕನ್ನಡ ಸಾಹಿತ್ಯದ ಮೂಲಕವೇ ಜಗತ್ತನ್ನು ಕಾಣುವ ದೃಷ್ಟಿಯೊಂದನ್ನು ರೂಪಿಸಿಕೊಂಡ ತತ್ವಜ್ಞಾನಿಯಾಗಿದ್ದ ಕೀರಂ, 2006-07ರ ಸುಮಾರಿಗೆ ಇಂಗ್ಲಿಷ್ ಕಲಿಕೆಯ ವಿರುದ್ಧ ಕೆಲವು ಶಕ್ತಿಗಳು ಎತ್ತಿದ ಪ್ರಶ್ನೆಗಳನ್ನು ಕೂಡ ತಾತ್ವಿಕವಾಗಿ ಮುಖಾಮುಖಿಯಾದರು. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಆ ಚಳುವಳಿಯ ಮೂಲ ವಾದಗಳನ್ನು ವಿರೋಧಿಸಿದರು. ಕನ್ನಡ ಸಾಹಿತ್ಯ ಪರಿಸರದಲ್ಲಿ ಕಳಪೆ ಸಾಹಿತ್ಯ ಹಾಗೂ ಜನಪ್ರಿಯತೆಗಳ ಅಬ್ಬರ ಶುರುವಾದಾಗ ಸಾಹಿತ್ಯ ಕೃತಿಗಳ ಶ್ರೇಷ್ಠತೆಯ ಪ್ರಶ್ನೆಯನ್ನು ಕೇಂದ್ರಕ್ಕೆ ತಂದ ಜಾಗೃತ ಸಾಹಿತ್ಯ ಸಮಾವೇಶದ ಮುಂಚೂಣಿಯಲ್ಲಿದ್ದ ಡಿ.ಆರ್.ನಾಗರಾಜ್ ಹಾಗೂ ಲಂಕೇಶರ ಜೊತೆಗೆ ಕೀರಂ ಕೂಡ ಇದ್ದರು. ಅಂದರೆ ಪ್ರತಿಷ್ಠಿತ ಶಕ್ತಿಗಳ ವಿರುದ್ಧ ಕೀರಂ ಸದಾ ದನಿ ಎತ್ತುತ್ತಾ ಬಂದರು. ತಮ್ಮ ಹರೆಯದಲ್ಲಿ ಎಂ.ಡಿ.ನಂಜುಂಡಸ್ವಾಮಿಯವರ ಸಮಾಜವಾದಿ ಚಳುವಳಿಯಲ್ಲಿಯೂ ಪಳಗಿದ ಕೀರಂ ಸಮಾಜವಾದಿ ಚಿಂತನೆಯನ್ನು ತಮ್ಮ ಸಾಮಾಜಿಕ, ಸಾಹಿತ್ಯಕ ಗ್ರಹಿಕೆಗಳಲ್ಲೂ ಬದುಕಿನಲ್ಲೂ ತಂದರು. ಸಾಹಿತ್ಯ, ಜೀವನ, ಸಮಾಜ ಹಾಗೂ ಸಂಸ್ಕೃತಿಗಳನ್ನು ಗ್ರಹಿಸುವ ವಿಶಾಲ ಫಿಲಾಸಫಿಯ ಮೂಲಕ ಕೇವಲ ಸಾಹಿತ್ಯ ವಿಮರ್ಶಕರಾಗದೆ, ಸಾಹಿತ್ಯತತ್ವಜ್ಞಾನಿಯಾಗಿ, ಸಾಹಿತ್ಯ ಸಿದ್ಧಾಂತಿಯಾಗಿ ವಿಕಾಸಗೊಂಡರು.

ಸಿಜಿಕೆಯವರ ಒಡನಾಟದಲ್ಲಿ ಕೀರಂ ಬರೆದ ಎರಡು ನಾಟಕಗಳು ಅವರ ವ್ಯಕ್ತಿತ್ವಕ್ಕೆ ಹತ್ತಿರವಾಗಿದ್ದವು. ಕೀರಂ ಅವರ ಸಾಮಾಜಿಕ ಚಿಂತನೆಗಳಲ್ಲಿದ್ದ ವೈದಿಕತೆಯ ವಿರೋಧ ಅವರ `ಕಾಲಜ್ಞಾನಿ ಕನಕ’ ನಾಟಕದಲ್ಲಿದೆ. ಈ ನಾಟಕ ಬರೆಯುವ ಕಾಲದಲ್ಲಿ ಭಾರತದಲ್ಲಿ ವಿಕಾರವಾಗಿ ಹಬ್ಬುತ್ತಿದ್ದ ಮಂದಿರಕೇಂದ್ರಿತ ರಾಜಕೀಯದ ಬಗ್ಗೆ ಕೀರಂ ಅವರಿಗಿದ್ದ ವಿಮರ್ಶಾತ್ಮಕ ನಿಲುವುಗಳು, ಯುದ್ಧವಿರೋಧಿ ಚಿಂತನೆಗಳು, ಸಂಸ್ಕೃತ ಹಾಗೂ ಕನ್ನಡಗಳ ನಡುವಣ ಸಂಘರ್ಷಗಳು ಈ ನಾಟಕದ ತುಂಬಾ ಹಬ್ಬಿವೆ. ಎಪ್ಪತ್ತರ ದಶಕದ ಸಮುದಾಯ ನಾಟಕ ಚಳುವಳಿ, ದಲಿತಸಾಹಿತ್ಯ, ಬಂಡಾಯಸಾಹಿತ್ಯ, ಲಂಕೇಶ್ ಪತ್ರಿಕೆಗಳಲ್ಲಿ ರೂಪುಗೊಳ್ಳುತ್ತಿದ್ದ ಪ್ರಗತಿಪರ ದನಿಯೂ ಈ ನಾಟಕದ ಭಿತ್ತಿಯಲ್ಲಿದೆ.
ಆನಂತರ ಕೀರಂ ಬರೆದ `ನೀಗಿಕೊಂಡ ಸಂಸ’ ನಾಟಕ ಲೇಖಕನೊಬ್ಬನ ವ್ಯಕ್ತಿತ್ವವನ್ನು, ಖಾಸಗಿ ತಲ್ಲಣಗಳನ್ನು, ಅವನು ತನ್ನನ್ನು ತಾನು ನೀಗಿಕೊಳ್ಳಲು ಕಾರಣವಾದ ಶಕ್ತಿಗಳನ್ನು ಪರೀಕ್ಷಿಸುತ್ತದೆ; ಈ ಎಲ್ಲ ಅಂಶಗಳು ಸಂಸರ ಕೃತಿಗಳ ಜೊತೆಗೆ ಬೆರೆತು ನಾಟಕ ಪಠ್ಯವೊಂದು ಮೈದಾಳಿದೆ. ಅನಂತಮೂರ್ತಿಯವರು ಮಾತುಕತೆಯೊಂದರಲ್ಲಿ ಹೇಳಿದಂತೆ, ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಆ ಕಾಲದ `ಪಂಡಿತೋತ್ತಮರ’ ನಡುವೆ ಹಿನ್ನೆಲೆಗೆ ಸರಿದಂತಿದ್ದ `ಅಕಡೆಮಿಕ್’ ಅಲ್ಲದ ಬುದ್ಧಿಜೀವಿಗಳ ಬಗೆಗೆ ಕೀರಂ ಅವರಿಗಿದ್ದ ಗೌರವ, ಕಾಳಜಿ, ಆಕರ್ಷಣೆ ಕೂಡ ಸಂಸರನ್ನು ಕುರಿತ ಈ ನಾಟಕಕ್ಕೆ ಪ್ರೇರೇಪಣೆಯಾಗಿರಬಹುದು. ಜಡಪಂಡಿತರನ್ನು, ಅವರು ಚರಿತ್ರೆಯನ್ನು ಓದುವ ಹುಂಬ ರೀತಿಗಳನ್ನು ಸಂಸರ ಪಾತ್ರ ಗೇಲಿ ಮಾಡುತ್ತದೆ. ಒಂದು ಸಂದರ್ಭದಲ್ಲಿ ಸಂಸರ ಬಾಯಲ್ಲಿ ಬರುವ ಕವಿತೆಯ ಸ್ವರೂಪ ಕುರಿತ ಮಾತು ಕೀರಂ ತಮ್ಮ ವಿಮರ್ಶೆಯಲ್ಲಿ ಅನೇಕ ಸಲ ಮಾಡಿದ ಕಾವ್ಯ ವ್ಯಾಖ್ಯಾನದಂತೆಯೇ ಇದೆ : ‘ಕವಿತೆ! ಅದು ವಿವಿಧ ಸ್ವರಗಳಿಂದಾದ ಭಾಷೆ. ವಿವಿಧ ಪದಗಳಿಂದ ಆದ ಬೇರೆಯದೇ ಆದ ಭಾಷೆ, ಅದರ ವಿನ್ಯಾಸ, ಅದರ ಬಣ್ಣ… ಅದರ ಮೈಯಲ್ಲಿ ಸೇರಿರುವ ದೇಸಿ… ಶರೀರಕ್ಕೆ ಒಪ್ಪುವ ಚಲನೆ… ಜಗತ್ತಿನ ಪ್ರಕೃತಿಯನ್ನೇ ತೂಗಾಡಿಸುವ ಅದರ ಜೀವ… ಇಷ್ಟೇ ಅಲ್ಲದೆ… ಇನ್ನೂ ಯಾವ್ಯಾವುದೋ ಭಾಷೆ… ಅದೇ ಕವಿತೆಯ ಭಾಷೆ.’ ಅದರ ಜೊತೆಗೆ, ವಸಾಹತುಶಾಹಿ ಕುರಿತ ಪ್ರತಿಕ್ರಿಯೆಗಳನ್ನು ರಣಧೀರನ ಮಾತಿನ ಮೂಲಕ ಬೆಳೆಸಿರುವ ರೀತಿ ಕೂಡ ಕೀರಂ ಹಿಂದೆ `ಅನುಭಾವ ಸಾಹಿತ್ಯ’ ಕುರಿತು ಬರೆದ ಬರಹದಲ್ಲಿ ಆರಂಭಿಸಿದ ನಿರ್ವಸಾಹತೀಕರಣ ಚಿಂತನೆಗಳ ಭಾಗವಾಗಿಯೇ ಇದೆ. ಈ ಎರಡೂ ನಾಟಕಗಳಲ್ಲಿ ವಿಭಿನ್ನವಾದ ಪ್ರತಿಷ್ಠಿತ ಶಕ್ತಿಗಳನ್ನು ಎದುರಾಗುವ ಎರಡು ಕೇಂದ್ರ ಪಾತ್ರಗಳಿವೆ. ಕನಕ ಸಂಸ್ಕೃತ ಪಂಡಿತರನ್ನು, ದೇವಸ್ಥಾನವನ್ನು ಹಿಡಿತದಲ್ಲಿರಿಸಿಕೊಂಡ ಪುರೋಹಿತರನ್ನು ಎದುರಾದರೆ, ಸಂಸ, ತನ್ನ ಕಾಲದ ಸಾಹಿತ್ಯ ಸಂಸ್ಥೆಗಳು ಹಾಗೂ ಪೊಲೀಸ್ ಹಾಗೂ ವಸಾಹತು ಪ್ರಭುತ್ವವನ್ನು ಎದುರಾಗಲೆತ್ನಿಸುತ್ತಾನೆ
2
ಬಗೆಬಗೆಯ ಜ್ಞಾನಶಾಖೆಗಳ ಅರಿವು ಸಾಹಿತ್ಯ ಹಾಗೂ ಸಂಸ್ಕೃತಿಗಳ ಗ್ರಹಿಕೆಗೆ ಅತ್ಯಗತ್ಯ ಎಂಬುದನ್ನು ಕೀರಂ ತಮ್ಮೆಲ್ಲ ಮಂಡನೆಗಳಲ್ಲಿ ಸೂಚಿಸುತ್ತಿದ್ದರು. ಆದ್ದರಿಂದಲೇ ಕೀರಂ ಓದಿನಲ್ಲಿ ಒಂದು ಆಳವಾದ ಅಂತರ್ಪಠ್ಯೀಯ ಬೆಸುಗೆ ಕಾಣುತ್ತದೆ. ನಿರ್ಧಿಷ್ಟ ವಿಮರ್ಶಾ ಚೌಕಟ್ಟುಗಳ ಮೂಲಕ ಕೃತಿಯೊಂದನ್ನು ಓದುವ ಕ್ರಮದ ಜೊತೆಗೆ ವಿವಿಧ ಸಾಹಿತ್ಯ ಕೃತಿಗಳ ಹಿನ್ನೆಲೆಯಲ್ಲಿ ಇನ್ನಿತರ ಸಾಹಿತ್ಯ ಕೃತಿಗಳನ್ನು ಓದುವ ಕ್ರಮವೊಂದನ್ನು ಕೀರಂ ಕಲಿಸಿಕೊಟ್ಟರು. ಆದ್ದರಿಂದಲೇ ಅವರ ಓದಿನಲ್ಲಿ ಪ್ರಾಚೀನ, ಮಧ್ಯಕಾಲೀನ, ಆಧುನಿಕ ಎಂಬ ವಿಂಗಡಣೆಗಳು ಕರಗಿ ಹೋಗುತ್ತವೆ. ಒಂದು ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ಬಹುತೇಕ ಶ್ರೇಷ್ಠ ಕೃತಿಗಳ ಆಳವಾದ ತಿಳುವಳಿಕೆ ಅವರಿಗಿತ್ತು. ‘ಕವಿರಾಜಮಾರ್ಗ’ ಹಾಗೂ ‘ಶಬ್ದಮಣಿದರ್ಪಣ’ಗಳ ಹಾಗೆ ‘ವಿಕ್ರಮಾರ್ಜುನ ವಿಜಯ’ ಹಾಗೂ ‘ಕುಸುಮಬಾಲೆ’ ಕೃತಿಗಳನ್ನೂ ಅವರು ದಕ್ಷವಾಗಿ ಗ್ರಹಿಸಿದ್ದರು. ಜೊತೆಗೆ ಹೋಮರ್, ಎಲಿಯಟ್, ಟಾಲ್ಸ್ಟಾಯ್, ಕಾಳಿದಾಸರ ಕೃತಿಗಳನ್ನೂ ವ್ಯಾಖ್ಯಾನಿಸಬಲ್ಲವರಾಗಿದ್ದರು. ಜಾನಪದ ಛಂದಸ್ಸು, ಭಾಷಾಶಾಸ್ತ್ರ, ಶಾಸನಶಾಸ್ತ್ರಗಳಿಂದ ಹಿಡಿದು ಬಗೆಬಗೆಯ ಆಧ್ಯಯನ ಶಿಸ್ತುಗಳನ್ನು ಅವರು ಬಳಸಬಲ್ಲವರಾಗಿದ್ದರು. ಹಾಗೆಯೇ ಒಂದು ಪಠ್ಯದ ವಿಸ್ತರಣೆಗೆ ಎಲ್ಲಿಂದಲಾದರೂ ಒಳನೋಟಗಳನ್ನು, ಲೈಸನ್ಸುಗಳನ್ನು ಪಡೆಯಬಲ್ಲವರಾಗಿದ್ದರು. ಎರಿಕ್ ಆರ್ಬಾಕನ `ಒಡಿಸ್ಯೂಸ್ ಸ್ಕಾರ್’ ಎಂಬ ಬರಹದಲ್ಲಿರುವ ಮಹಾಕಾವ್ಯವನ್ನು ಓದುವ ಒಳನೋಟಗಳನ್ನು ಅವರು `ರಾಮಾಯಣದರ್ಶನಂ’ ಅಥವಾ `ಆದಿಪುರಾಣ’ವನ್ನು ಓದಲು ಬಳಸಬಲ್ಲವರಾಗಿದ್ದರು. ಆಲ್ಬರ್ಟ್ ಲಾರ್ಡ್ `ಸಿಂಗರ್ ಆಫ್ ದ ಟೇಲ್ಸ್’ ಕೃತಿಯಲ್ಲಿ ಮೌಖಿಕ ಪಠ್ಯಗಳು ಸೃಷ್ಟಿಯಾಗುವ ವೈವಿಧ್ಯವನ್ನು ಕುರಿತು ಕೊಡುವ ಒಳನೋಟಗಳ ಮೂಲಕ ಕನ್ನಡ ಜಾನಪದ ಗಾಯಕಿ ತಂಬೂರಿ ರಾಜಮ್ಮನವರು ಸೃಷ್ಟಿಸುವ ಮಂಟೇಸ್ವಾಮಿ ಮಹಾಕಾವ್ಯದ ಪಠ್ಯಗಳ ವೈವಿಧ್ಯಗಳನ್ನು ಗ್ರಹಿಸಬಲ್ಲವರಾಗಿದ್ದರು. ವಚನಸಾಹಿತ್ಯ ಪರಂಪರೆಯ ಭಿತ್ತಿಯಲ್ಲಿಯೂ ಮಂಟೇಸ್ವಾಮಿ ಹಾಗೂ ಮಲೆಮಹಾದೇಶ್ವರ ಕಾವ್ಯವನ್ನು ವಿವರಿಸಬಲ್ಲವರಾಗಿದ್ದರು. ಆ ಮೂಲಕ ಸಾಹಿತ್ಯಾಧ್ಯಯನದ ಒಂದು ಮುಖ್ಯ ಕ್ರಮವನ್ನು ಅವರು ರೂಪಿಸಿಕೊಟ್ಟರು. ಕಾವ್ಯಭಾಷೆಯ ಮೂಲಕ ಎಲ್ಲ ಜ್ಞಾನಶಾಖೆಗಳ ಭಾಷೆಗಳೂ ನಿರ್ಮಾಣವಾಗುವುದನ್ನು ಕವಿರಾಜಮಾರ್ಗ ಕುರಿತ ಚರ್ಚೆಯಲ್ಲಿ ಅವರು ತೋರಿಸಿಕೊಟ್ಟರು: ‘ಕಾವ್ಯಭಾಷೆಯ ನಿರ್ಮಾಣ ಅಂದರೆ, ಒಳ್ಳೆಯ ಕಾವ್ಯಭಾಷೆಯೊಂದು ಸಂಸ್ಕೃತಿಯಲ್ಲಿ ಬೇರೆ ಬೇರೆ ಜ್ಞಾನಶಾಖೆಗಳಿಗೆ ಕೂಡ ಹಾಯಬಲ್ಲದು ಎನ್ನುವ ಕಲ್ಪನೆ ಅವನಲ್ಲಿ ಇದ್ದ ಹಾಗೆ ತೋರುತ್ತೆ. ಇವತ್ತು ಕನ್ನಡ ಕವಿಗಳು ತುಂಬಾ ಸಮರ್ಥವಾಗಿ ಕಾವ್ಯಭಾಷೆಯನ್ನು ರೂಪಿಸ್ತಾ ಹೋದರೆ, ಅದು ಕಾವ್ಯಕ್ಕೆ ಮಾತ್ರ ಸೀಮಿತವಾಗಬೇಕಾದದ್ದಿಲ್ಲ. ಬೇರೆ ಜ್ಞಾನಶಾಖೆಗಳಿಗೂ ಕೂಡ ಕವಿಗಳು ರೂಪಿಸತಕ್ಕಂಥ ಭಾಷೆ ಬಳಕೆ ಆಗಬಹುದು. ಇಷ್ಟು ದೊಡ್ಡದಾದಂತಹ ಕಲ್ಪನೆ ಮಾರ್ಗಕಾರನಿಗೆ ಇದ್ದ ಹಾಗೆ ತೋರುತ್ತಿದೆ. ಆದ್ದರಿಂದ ಕಾವ್ಯದ ಭಾಷೆಯ ನಿರ್ಮಾಣ ಅಂದ ತಕ್ಷಣ, ಅದು ಕೇವಲ ಸೀಮಿತವಾದ ದೃಷ್ಟಿಯಲ್ಲಿ ಕಾವ್ಯಕ್ಕೆ ಮಾತ್ರ ಅನ್ವಯಗೊಳ್ಳುವ ಭಾಷೆ ಎಂದು ತಿಳಿಯಬೇಕಾಗಿಲ್ಲ’.
ಸಾಹಿತ್ಯ ಕೃತಿಯನ್ನು ಅಧ್ಯಯನ ಮಾಡುವುದು ಎಂದರೆ ಧಾರ್ಮಿಕ ಅಧ್ಯಯನದಂತೆ ಅಥವಾ ಸರಳ ಸಮಾಜಶಾಸ್ತ್ರೀಯ ಓದಿನ ಹಾಗೆ ಅರ್ಥವನ್ನು ನಿರ್ಧಿಷ್ಟಗೊಳಿಸುವುದಲ್ಲ; ಬದಲಿಗೆ ಅರ್ಥದ ಅನಂತ ಸಾಧ್ಯತೆಗಳನ್ನು ವಿಸ್ತರಿಸುತ್ತಾ ಹೋಗುವುದು. ಕವಿಯ ಹಾಗೆಯೇ ಓದುಗನೂ ಕೂಡ ಶಬ್ದದ ಜೊತೆ, ಶಬ್ದದ ಜೋಡಿಗಳ ಜೊತೆ ಆಟವಾಡುವನು. ಆಟ ಎನ್ನುವ ಶಬ್ದವೇ ಸೂಚಿಸುವಂತೆ ಸಾಹಿತ್ಯ ಸೃಷ್ಟಿಯಲ್ಲಿ ಕಾಮದ ಚಟುವಟಿಕೆಯ ಅಂಶಗಳಿರುವಂತೆ ಸಾಹಿತ್ಯದ ಓದಿನಲ್ಲೂ ಕಾಮದ ಚಟುವಟಿಕೆಯ ಅಂಶಗಳಿರುತ್ತವೆ.ಈ ಎಲ್ಲ ಅಂಶಗಳು ಕೀರಂ ಸಾಹಿತ್ಯಪಠ್ಯಗಳ ಜೊತೆ ನಡೆಸಿದ ಪ್ರಯೋಗಗಳಲ್ಲಿ ಕಾಣುತ್ತಿದ್ದವು. ಓದಿನ ಸಿದ್ಧ ಚೌಕಟ್ಟುಗಳ ಸೃಜನಶೀಲ ಉಲ್ಲಂಘನೆ ಕೀರಂ ಅವರ ಮಾತು, ಬರಹಗಳಲ್ಲಿ ಸದಾ ಕಾಣುತ್ತಿತ್ತು. ಆದ್ದರಿಂದಲೇ ಕೀರಂ ಮಾರ್ಗವನ್ನು ಗ್ರಹಿಸುವಾಗ ಮಾತು, ಬರಹಗಳ ನಡುವೆ ಗೆರೆ ಎಳೆಯುವುದು ಕಷ್ಟ. ಈ ಸಂಕಲನದಲ್ಲಿರುವ ಪಠ್ಯಗಳಲ್ಲಿ ಅವರ ಎರಡೂ ಬಗೆಯ ಮಂಡನೆಗಳಿವೆ. ಕೆಲವೆಡೆ ಕೀರಂ ಮಾತಿನ ಲಯಗಳನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದಲೇ ಇಲ್ಲಿನ ಅನೇಕ ಭಾಗಗಳು ಕೀರಂ ಇಲ್ಲೇ ನಿಂತು ಮಾತಾಡಿದಂತೆಯೂ ಕೇಳಿಸುತ್ತವೆ.
ಯಾಕೋ ಏನೋ, ಬರಹದ ಚೌಕಟ್ಟಿನ ಇಕ್ಕಟ್ಟು, ಬರಹದ ಮೂಲಕ ಚಿಂತಿಸುವ ರೀತಿ, ಅದರ ರಚನಾತರ್ಕಗಳು ಕೀರಂ ಸಂವೇದನೆಗೆ ಹೆಚ್ಚು ಒಗ್ಗಲಿಲ್ಲ, ನಿಜ. ಅಥವಾ ಬರಹಕ್ಕೆ ಬೇಕಾದ ತಿದ್ದುವ, ತೆಗೆದುಹಾಕುವ, ಎಡಿಟ್ ಮಾಡುವ ಶಿಸ್ತು ಅವರಿಗೆ ಒಗ್ಗಲಿಲ್ಲ. ‘ತೊಡೆಯಲಾಗದ ಲಿಪಿಯನು ಬರೆಯಬಾರದು’ ಎಂಬ ಅಲ್ಲಮನ ಮಾತನ್ನು ಡಿಆರ್.ನಾಗರಾಜ್ ತಾತ್ವಿಕ ಉದ್ಗಾರವಾಗಿ ಮಾತ್ರ ಬಳಸಿದ್ದರು; ಆದರೆ ಅದನ್ನು ಆಳವಾಗಿ ತಮ್ಮೊಳಗೆ ಇಳಿಸಿಕೊಂಡವರು ಕೀರಂ! ಅರ್ಜೆಂಟೀನಾ ಭಾಷೆಯಲ್ಲಿ ಬಳಕೆಯಲ್ಲಿರುವ `Spoken word flies; written word stays’ ಎಂಬ ಮಾತೊಂದನ್ನು ಲೇಖಕ ಬೋರೆಸ್ ಒಂದು ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾನೆ. ಈ ಮಾತಿನಲ್ಲಿ ‘stays’ ಎಂಬ ಪದಕ್ಕೆ ಉಳಿಯುತ್ತದೆ ಅಥವಾ ಉಳಿದು ಕೊಳೆಯುತ್ತದೆ ಎಂಬ ಅರ್ಥವೂ ಇದೆ. ಹಾಗೆಯೇ ‘flies’ ಎಂಬ ಪದಕ್ಕೆ ಹಾರುತ್ತಾ ಬೆಳೆಯುತ್ತದೆ ಎಂಬ ಅರ್ಥವೂ ಇದೆ. ಕೀರಂ ಮಾತು ಹೀಗೆ ಹಾರುತ್ತಾ ಬೆಳೆಯುತ್ತಿತ್ತು. ಬರಹವಾಗಿ ಒಂದೆಡೆ ಉಳಿಯಲು ಹಿಂಜರಿಯುತ್ತಿತ್ತು.
ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಕೀರಂ ಅವರ ಮಾತು, ಬರಹಗಳ ಈ ಪುಸ್ತಕಕ್ಕೆ ಹಲ ಬಗೆಯ ಹೆಸರುಗಳನ್ನು ಮಿತ್ರರ ಜೊತೆ ಚರ್ಚಿಸುತ್ತಾ, ಕೊನೆಗೆ, ಕೀರಂ ಓದಿನಲ್ಲಿರುವ ಓಪನ್ ಟೆಕ್ಸ್ಟ್ ಮಾದರಿಯನ್ನು ಸಾಕಷ್ಟು ಸರಿಯಾಗಿ ಸೂಚಿಸುವ ‘ತೆರೆದ ಪಠ್ಯ’ ಎಂಬ ಹೆಸರಿಗೆ ಬಂದು ನಿಂತೆ. ಡೆರೀಡಾ ಹೇಳಿದ ‘ಓದು ಎನ್ನುವುದು ಅರ್ಥದ ನಿರಂತರ ಮುಂದೂಡಿಕೆ’ ಎಂಬ ಗ್ರಹಿಕೆಯನ್ನು ಕೀರಂ ಪ್ರಾಯಶಃ ಡೆರೀಡಾಗಿಂತಲೂ ಮೊದಲೇ ಅರಿತಂತೆ ಕಾಣುತ್ತದೆ. ಬೆಡಗಿನ ವಚನಗಳನ್ನು ಕುರಿತು ಬರೆಯುವಾಗ, ಕೀರಂ ತಮ್ಮ ಈ ನಿಲುವನ್ನು ಮತ್ತೊಮ್ಮೆ ಹೇಳುತ್ತಾರೆ: ‘ಕವಿತೆಯಲ್ಲಿ ಇಂಥ ಕಡೆ ಅರ್ಥ ಇದೆ ಅಂತ ಹೇಳೋಕೆ ಬರೋಲ್ಲ. ಎಲ್ಲೋ ಒಂದು ಅರ್ಥ ಆದರೆ, ಅದು ಅಲ್ಲಿಗೆ ಅರ್ಥ; ಇನ್ನೊಂದು ಅರ್ಥ ಆದ ತಕ್ಷಣ ಮತ್ತೊಂದು… ಹೀಗಾಗಿ ಅರ್ಥ ಅನ್ನೋದು ಒಂದು ನಿರಂತರವಾದ ಪ್ರಕ್ರಿಯೆ; ಒಂದು ಸರಣಿ. ಆದ್ದರಿಂದ ಅರ್ಥ ಒಂದು ಕಡೆ ಇರೋಲ್ಲ. ಕವಿತೆಯಲ್ಲಿ ಅದು ಸರ್ವಾಂಗ ಲಿಂಗಮಯ ಇದ್ದ ಹಾಗೆ ಎಲ್ಲಾ ಕಡೆಯಲ್ಲೂ, ಎಲ್ಲೆಲ್ಲೋ ಸೇರಿದೆ. ಈ ಎಲ್ಲಾ ಕಡೆ ಸೇರಿರುವುದನ್ನು ಒಂದು ರೀತಿಯಾಗಿ ಸಂಘಟಿಸಿಕೊಳ್ಳತಕ್ಕಂಥ ಪ್ರಯತ್ನವನ್ನು ಓದುಗ ಮಾಡ್ತಾನೆ. ಅದು ಕೇವಲ ಆ ಓದುವ ಕಾಲಕ್ಕೇ ಆಗಬೇಕಾದ್ದಿಲ್ಲ.’ ಕೀರಂ ಅವರ ಈ ಮುಕ್ತ ಓದಿನಲ್ಲಿ ಒಂದೆಡೆ ‘ಮುಕ್ತಮುಕ್ತಾಯ’ವುಳ್ಳ ಪಠ್ಯಗಳು ಎಂಬ ವರ್ಣನೆಯೂ ಬರುತ್ತದೆ. ಬಸವಣ್ಣನನ್ನು ಕುರಿತ ತಮ್ಮ ಉಪನ್ಯಾಸದ ಕೊನೆಗೆ ಕೀರಂ ಹೇಳುತ್ತಾರೆ: ‘ಇದು ನಮ್ಮ ಸಂಸ್ಕೃತಿಯ ಮುಖ್ಯ ಸಂವಾದಕನಾದ ಬಸವಣ್ಣನ ಬಗ್ಗೆ 800 ವರ್ಷಗಳ ಬಳಿಕ, ಆಧುನಿಕರಾದ ನಮ್ಮಿಂದಾಗುವ ಹೊಸ ಓದಷ್ಟೇ. `ಓದು’ ಎಂದರೆ, ನನಗೆ ಬಸವಣ್ಣನನ್ನು interpret ಮಾಡಲು ಇಷ್ಟ. Over interpret ಮಾಡಲೂ ಇಷ್ಟ. ಇಲ್ಲಿ Overಎಂದರೆ ಹೆಚ್ಚು ಎಂದಷ್ಟೇ ಅರ್ಥ.’
ಕೀರಂ ವಿಮರ್ಶೆಯಲ್ಲಿ ವಿವಿಧ ಪಠ್ಯಗಳಿಂದ ಪಡೆಯುವ ಕ್ರಮವೂ ಒಂದಿತ್ತು. ಮಂಟೇಸ್ವಾಮಿ ಪರಂಪರೆ ಕುರಿತು ಮಾತಾಡುತ್ತಾ ಕೀರಂ ಹೇಳುತ್ತಾರೆ: ‘ಒಂದು ದಿನ ರಾಮನಗರದ ಹತ್ತಿರ ಒಬ್ಬ ಲಂಬಾಣಿ ಗಾಯಕ ಮಂಟೇಸ್ವಾಮಿ ಕಾವ್ಯವನ್ನು ಹಾಡ್ತಾ ಇದ್ದ. ಅವನು ಧರೆಗೆ ದೊಡ್ಡವರು ಅನ್ನೋ ಮಾತನ್ನು `ದೊರೆಗೆ ದೊಡ್ಡವರು’ ಎನ್ನುವ ಪಾಠವನ್ನಾಗಿ ಹೇಳಿದ. ಅದನ್ನು ನಾನು ರೆಕಾರ್ಡ್ ಮಾಡಿದ್ದೇನೆ. ಮಂಟೇಸ್ವಾಮಿಯವರನ್ನು `ಧರೆಗೆ ದೊಡ್ಡವರು’ಅಂತ ಕರೀತಾರೆ. ಆದರೆ, ಇದು ಕನ್ನಡದ ಮಾತಿನ ಓರೆಯೊ ಕೋರೆಯೊ ಗೊತ್ತಿಲ್ಲ- ಅವನು ‘ದೊರೆಗೆ ದೊಡ್ಡವರು’ ಅಂತ ಹಾಡ್ತಿದ್ದ. `ಧರೆ’ ಸಂಸ್ಕೃತ ಪದ, ` ದೊರೆ’ ಕನ್ನಡ ಪದ’. ಹೀಗೆ ಕೀರಂ ನವಪಠ್ಯಗಳನ್ನು ಪಡೆಯುತ್ತಿದ್ದರು; ಕೊಡುತ್ತಲೂ ಇದ್ದರು.

ಹೀಗೆ ಕೀರಂಗೆ ವಿಮರ್ಶೆ ಎನ್ನುವುದು ಒಂದು ಪ್ರಯಾಣವಾಗಿತ್ತು. ಇಂಗ್ಲಿಷ್ ಕವಿ ಕೋಲರಿಜ್ ಮತ್ತೊಂದು ಸಂದರ್ಭದಲ್ಲಿ ಹೇಳುವಂತೆ, ‘ಅದು ಹಿಂದಕ್ಕೂ ಮುಂದಕ್ಕೂ ಚಲಿಸುವ ಪ್ರಯಾಣ’; ಅಗತ್ಯವಿದ್ದಾಗ ಖಚಿತ ನಿಲುವನ್ನೂ ತಲುಪುವ ಪ್ರಯಾಣ. ಆದ್ದರಿಂದಲೇ ಅವರು ಆ ಪ್ರಯಾಣದಲ್ಲಿ ಅಲ್ಲಲ್ಲಿ ಸಿಕ್ಕಿದ್ದನ್ನು ಹಂಚಿ ಸಂಭ್ರಮಗೊಂಡು, ಶಿಥಿಲವಾದದ್ದನ್ನು ತಿರಸ್ಕರಿಸುತ್ತಿದ್ದರು. ಆ ಪ್ರಯಾಣದಲ್ಲಿ ಹಲವು ದಿಕ್ಕುಗಳಿಂದ ಓದಿನ ಮಾದರಿಗಳನ್ನು ಪಡೆಯುತ್ತಿದ್ದರು. ಎಲ್.ಬಸವರಾಜು, ಶಂಬಾ ಜೋಷಿಯವರ ಪಾಂಡಿತ್ಯದಿಂದ ಪಡೆದಂತೆ ಚಾಮ್ಸ್ಕಿಯ ಚಿಂತನೆ, ರೋಲಾ ಬಾರ್ತ್ ನ ಓದುಗ ಸ್ಪಂದನ, ಅಥವಾ ಅಂಬರ್ತೋ ಇಕೋನ ವಿಮರ್ಶೆಯಿಂದಲೂ ಪಡೆಯುತ್ತಿದ್ದರು. ಹಾಗೆಯೇ ಕೀರಂಗೆ ಒಂದು ಸಾಹಿತ್ಯ ಕೃತಿಯ ಓದು ಎಂದರೆ ಅದೊಂದೇ ಸಾಹಿತ್ಯ ಕೃತಿಯ ಓದು ಎಂದೇನಲ್ಲ. ಅಥವಾ ಆ ಕೃತಿಯನ್ನಷ್ಟೇ ವಿವರಿಸುವ ಕೆಲಸವೂ ಅಲ್ಲ. ಅದು ಅವರೊಳಗೇ ಅಲೆಯುತ್ತಿದ್ದ ಹಲವು ಪಠ್ಯಗಳು ಬೆರೆತ ಅಂತರ್ಪಠ್ಯೀಯ ಓದೂ ಆಗಿತ್ತು. ಜೊತೆಗೆ, ಕೀರಂಗೆ ಬೇಂದ್ರೆ ಅಥವಾ ಕುವೆಂಪು ಕಾವ್ಯದ ಓದು ಎಂದರೆ ಬಹು ಬಗೆಯ ತಾತ್ವಿಕತೆಗಳನ್ನು, ಪ್ರಶ್ನೆಗಳನ್ನು, ಪರಿಕಲ್ಪನೆಗಳನ್ನು ಗ್ರಹಿಸುವ ಹಾಗೂ ಕಾವ್ಯದ ಮೂಲಕ ದಿನದಿನದ ಪ್ರಶ್ನೆಗಳನ್ನು, ಜಾಗತಿಕ ಪ್ರಶ್ನೆಗಳನ್ನು ಅರಿಯುವ ಕ್ರಿಯೆಯೂ ಆಗಿತ್ತು. ಕಾವ್ಯವನ್ನು ಆಳವಾಗಿ ಗ್ರಹಿಸುವಾಗ ಹೆಚ್ಚು ಜಾಗೃತವಾಗುತ್ತಿದ್ದ ಈ ಅಪರೂಪದ ಶಕ್ತಿ ಅವರು ಎಲ್ಲ ಸಾಹಿತ್ಯ ಪ್ರಕಾರಗಳನ್ನು ಗ್ರಹಿಸುವಾಗ ಹಾಗೂ ಆ ಮೂಲಕ ಲೋಕವನ್ನು ಅರಿಯುವಾಗಲೂ ನೆರವಾಗಿದೆ.
ಹಲವು ಸಲ ಕೀರಂ ಓದಿನಲ್ಲಿ ಕಾಣಿಸುತ್ತಿದ್ದ ಜಿಗಿತಗಳು, ಮಾಡುತ್ತಿದ್ದ ಕನೆಕ್ಷನ್ಗಳು ನಮ್ಮನ್ನು ಬೆರಗಾಗಿಸುತ್ತಿದ್ದವು. ಕೆಲವೊಮ್ಮೆ ನಾವು ಅವನ್ನು ಒಪ್ಪದಿದ್ದಾಗ ಅವು ಸರಳವಾಗಿಯೂ ಕಾಣುತ್ತಿದ್ದವು. ಆದರೆ ಅವು ಯಾವುದೋ ಯೋಜಿತ ಓದಿನ ಸುಳ್ಳುಗಳಂತೆ ಎಂದೂ ಕಾಣುತ್ತಿರಲಿಲ್ಲ. ಸಾಹಿತ್ಯಾಧ್ಯಯನ, ಸಾಹಿತ್ಯ ಚರ್ಚೆಗಳು ನೈತಿಕ ಕ್ರಿಯೆಗಳು ಎಂಬ ನಂಬಿಕೆ ಕೀರಂ ಅವರ ಆಳದಲ್ಲಿತ್ತು. ಆದ್ದರಿಂದಲೇ ಜನಪ್ರಿಯ ಸಾಹಿತ್ಯಕ ನಿಲುವುಗಳಿಗೆ ವಿರುದ್ಧವಾದ ಅಪ್ರಿಯವಾದ ಸತ್ಯ ಹೇಳುವುದಕ್ಕೆ ಅವರು ಸಿದ್ಧರಿದ್ದರು. ಸಾಹಿತ್ಯಕ ಜಗಳಗಳಲ್ಲಿ ಅವರ ಗ್ರಹಿಕೆ ಇನ್ನಷ್ಟು ಚುರುಕಾಗಿ ಕೆಲಸ ಮಾಡುತ್ತಿತ್ತು. ಸಹಜಸ್ಫೂರ್ತಿಯಲ್ಲಿ ಕೀರಂ ಅವರ ಹಲ ಬಗೆಯ ಗ್ರಹಿಕೆಯ ಮಿಂಚುಗಳು ಮೂಡುತ್ತಿದ್ದವು. ಕನ್ನಡದ ಪ್ರಾಚೀನ ಕೃತಿಗಳನ್ನು ಕುರಿತ ಕೀರಂ ಅವರ ಇಂಥ ಮಿಂಚುಗಳನ್ನು ಕೆಲವೆಡೆ ಡಿ.ಆರ್.ನಾಗರಾಜ್ ಅವರು ಸೈದ್ಧಾಂತೀಕರಿಸಿ ಮಂಡಿಸಿದ ಉದಾಹರಣೆಗಳೂ ಇವೆ.
ಕೀರಂ ಅವರ ಸಾಹಿತ್ಯವಿಮರ್ಶೆಯ ಖಚಿತತೆ ಹಾಗೂ ತೀಕ್ಷ್ಣ ಒಳನೋಟಗಳು ಈ ಸಂಕಲನದಲ್ಲಿ ‘ಪುಸ್ತಕವಿಮರ್ಶೆ’ ಎಂಬ ತಲೆಬರಹದಡಿ ಪ್ರಕಟವಾಗಿರುವ ಮೂರು ವರ್ಷಗಳ ಕನ್ನಡ ವಿಮರ್ಶಾ ಸಂಕಲನಗಳ ವಿಮರ್ಶೆಯಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಆ ವರ್ಷಗಳ ಮುಖ್ಯ ವಿಮರ್ಶಾ ಕೃತಿಗಳಲ್ಲಿ ವ್ಯಕ್ತವಾಗಿರುವ ವಿಮರ್ಶೆಯ ಕ್ರಮಗಳು, ಧೋರಣೆಗಳು, ವಿಮರ್ಶಾ ನಿಲುವುಗಳು, ಬಳಸಲಾದ ಮಾನದಂಡಗಳು -ಇವೆಲ್ಲವನ್ನೂ ಕೀರಂ ಹತ್ತಿರದಿಂದ ಗಮನಿಸುತ್ತಾರೆ. ಪಾಶ್ಚಾತ್ಯ ಹಾಗೂ ಭಾರತೀಯ ಕಾವ್ಯಮೀಮಾಂಸೆ ಹಾಗೂ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ವಿವಿಧ ವಿಮರ್ಶಾ ಪರಿಕಲ್ಪನೆಗಳ ಆಳವಾದ ತಿಳುವಳಿಕೆಯಿಂದಾಗಿ ಕೀರಂ ಬರೆದಿರುವ ಈ ‘ವಿಮರ್ಶೆಯ ವಿಮರ್ಶೆ’ ಅತ್ಯಂತ ಚುರುಕಾಗಿದೆ. ಮುಂದೊಮ್ಮೆ ಲಂಕೇಶ್ ಹಾಗೂ ಡಿ.ಆರ್. ನಾಗರಾಜರ ಪುಸ್ತಕ ವಿಮರ್ಶೆಗಳಲ್ಲಿ ಕಂಡ ನಿಷ್ಠುರ ಆಯ್ಕೆಗಳು, ಲೀವಿಸ್ ಮಾದರಿಯ ವಿಮರ್ಶೆಯ ಆಳವಾದ ನೈತಿಕ ನಿಲುವುಗಳು ಎಪ್ಪತ್ತರ ದಶಕದ ಕೊನೆಯ ಭಾಗದ ಕೀರಂ ವಿಮರ್ಶೆಯಲ್ಲಾಗಲೇ ಗಟ್ಟಿಯಾಗಿ ಬೇರೂರಿದ್ದವು. ಸಾಹಿತ್ಯಪ್ರಭೇದಗಳ ವಿಶಿಷ್ಟ ಮನೋಧರ್ಮ, ಸಾಹಿತ್ಯ ವಿಮರ್ಶೆಯ ಜವಾಬ್ದಾರಿ, ತಾತ್ವಿಕ ಮಾರ್ಗಗಳು-ಇವೆಲ್ಲದರ ಬಗ್ಗೆ ಕೀರಂ ಅವರ ಆಳವಾದ ಪಾಂಡಿತ್ಯ ಕೂಡ ಅವರ ವಿಮರ್ಶೆಗೆ ಭದ್ರವಾದ ತಳಹದಿ ರೂಪಿಸಿದೆ.

ಈ ರೀತಿಯಲ್ಲಿ ಸುಮಾರು ಐವತ್ತು ವರ್ಷಗಳ ಕಾಲ ಸಾಹಿತ್ಯದ ಆತ್ಮೀಯ ಒಡನಾಟದಲ್ಲಿದ್ದ ಕೀರಂ ಬದುಕಿನ ಕೊನೆಯ ದಿನ ಒದಗಿ ಬಂದ ಬೇಂದ್ರೆಯ ‘ಜೋಗಿ’ ‘ಏಳು ಕನ್ನಿಕೆಯರು’, ‘ಪ್ರಳಯಸೃಷ್ಟಿ’ ಪದ್ಯಗಳು ಅವರು ಮತ್ತೆ ಮತ್ತೆ ಕರೆದುಕೊಳ್ಳುತ್ತಿದ್ದ ಪದ್ಯಗಳು. ಆದರೆ ಅವತ್ತು ತಮ್ಮ ಆವರೆಗಿನ ಓದುಗಳನ್ನು ಹಾಗೂ ಇತರರ ಓದುಗಳನ್ನು ‘ಈಗ ಮನಸ್ಸಿನಿಂದ ದೂರ ಇಟ್ಟರೆ ಏನಾಗುತ್ತದೆ ಎಂದು ನೋಡುತ್ತಿದ್ದೇನೆ’ ಎಂದು ಕೀರಂ ಹೊರಡುತ್ತಾರೆ. ಕವಿತೆಯ ಮೂಲಕ ಪ್ರಯಾಣ ಮಾಡುವುದು, ಒಂದು ಕವಿತೆಯ ಜೊತೆಗೆ ಹಲವು ಕವಿತೆಗಳನ್ನು ಜೊತೆಯಾಗಿಸಿ ಓದುವುದು, ಪ್ರತಿ ಕವಿತೆಯಲ್ಲೂ ಹುಟ್ಟುವ ಹೊಸ ಕಾವ್ಯಮೀಮಾಂಸೆಯನ್ನು ಕಾಣಲೆತ್ನಿಸುವುದು… ಇವೇ ಮುಂತಾಗಿ ಆತನಕ ಕೀರಂ ಆಡುತ್ತಾ ಬಂದ ಕಾವ್ಯಚಿನ್ನಾಟಗಳು, ಬೌದ್ಧಿಕ ಜಿಗಿತಗಳು, ಸೈದ್ಧಾಂತೀಕರಣಗಳು ಇಲ್ಲಿ ಒಟ್ಟಿಗೇ ಕಾಣಿಸಿಕೊಂಡಂತಿವೆ. ಕೀರಂ ತಮ್ಮ ಜೀವಮಾನದುದ್ದಕ್ಕೂ ಕಾವ್ಯ ಕುರಿತು ಆಡಿದ್ದು, ಯೋಚಿಸಿದ್ದು ಆ ಕೊನೆಯ ಗಳಿಗೆಗಳಲ್ಲಿ ಸಹಜವಾಗಿ ಉಕ್ಕಿದಂತೆಯೂ ಕಾಣುತ್ತದೆ. ಕೀರಂ ಪ್ರಾಣಪಕ್ಷಿ ಹಾರಿಹೋಗುವ ಆ ದಿನ ಅರ್ಥದ ಹಕ್ಕಿ ಎತ್ತೆಂದರತ್ತ ಹಾರಾಡುತ್ತಲೇ ಇತ್ತು.
ಎಂದೂ ಮುಗಿಯದ ಸಾಹಿತ್ಯಪಯಣದ ಹಲವು ಹಾದಿಗಳನ್ನು ಕಾಣಿಸಿ ಆ ಪಯಣವನ್ನು ಮುಂದುವರಿಸುವ ಅರ್ಥಪೂರ್ಣ ಕೆಲಸವನ್ನು ನಮ್ಮೆಲ್ಲರಿಗೆ ವಹಿಸಿಹೋಗಿರುವ ಕೀರಂಗೆ ಕನ್ನಡನಾಡು ಸದಾ ಕೃತಜ್ಞವಾಗಿರುತ್ತದೆ.








ಕೀ ರಂ ……ಬರೀ ಮೇಷ್ಟ್ರಲ್ಲ ಅವರೊಬ್ಬ ಕನ್ನಡದ ಪ್ರವಾದಿ………ಹುಳಿಯಾರ್ ಸರ್ ಉತ್ತಮ ಲೇಖನ.ಈ ಲೇಖನ ಮತ್ತೆ ಕೀ ರಂ ಅನ್ನುವ ಶಿಖರವನ್ನು ಅರ್ಥ ಮಾಡಿಕೊಳ್ಳಲು ಅನುವುಮಾಡಿಕೊಟ್ಟಿತು…….
ki rum sir avarannu hatthiradinda balla natraj huliyar sir avara edee vyakthithwava vannu samarthavagi hididittiddare. aadare kirum namma alathege meerida vyakthi aagiddaru annuvudu vismyakari sathya