ಕೈಲಾಸಂ ಕೀಚಕ

ದಿನಾಂಕ: 30 ನವೆಂಬರ್ 2012
ಸಂಜೆ 7ಕ್ಕೆ
ಸ್ಥಳ: ರವೀಂದ್ರ ಕಲಾಕ್ಷೇತ್ರ
ಹೆಚ್ಚಿನ ವಿವರಗಳಿಗೆ: 88843 45569
ನಾಟಕದ ಬಗ್ಗೆ:
ಕೀಚಕ-ಕೈಲಾಸಂ ಕಲ್ಪಿಸಿದ ನಾಟಕ, ಬಿ.ಎಸ್.ರಾಮರಾಯರ ಮೂಲಕ ಜಿ.ಪಿ.ರಾಜರತ್ನಂ ಬರೆದದ್ದು, ಹೀಗಾಗಿ ಇದು ಕೈಲಾಸಂ ಕೀಚಕ. ಕೈಲಾಸಂ ಕಲ್ಪಿಸಿರುವ ಕೀಚಕ,ಮಹಾಭಾರತದ ಕಾಮಿ ಕೀಚಕನಲ್ಲ. ಇವನು ಮದುವೆಯಾಗಲು ಮನಸ್ಸಿಲ್ಲದವನು ಅದಕ್ಕೆ ಕಾರಣ ವಿರಾಟ ಪರ್ವದ ಕಾಲಕ್ಕೆ ೨೫ ವರ್ಷಗಳ ಹಿಂದೆ ದ್ರೌಪದಿಯ ಸ್ವಯಂವರ ನಡೆಯುತ್ತದೆ. ಆಗ ಕೀಚಕನೂ ಅಲ್ಲಿಗೆ ಹೋಗಿರುತ್ತಾನೆ. ದ್ರೌಪದಿಯನ್ನು ಕಂಡು ಅನುರಕ್ತನಾಗುತ್ತಾನೆ. ದ್ರೌಪದಿಯು ತನ್ನೆಡೆಗೆ ಒಲಿದಳೆಂದು ಕೇಳಿ ತಿಳಿಯುತ್ತಾನೆ. ಆದರೆ ದನುರ್ವಿದ್ಯೆಯಲ್ಲಿ ಅಪ್ರತಿಮನಾದವನಿಗೆ ಮಾತ್ರ ಆ ಹೆಣ್ಣು ಎಂದು ಪಣವಿದ್ದ ಕಾರಣ, ಗದಾಯುದ್ಧದಲ್ಲಿ ನಿಪುಣನಾದ ಕೀಚಕನು ಭಗ್ನ ಮನೋರಥನಾಗಿ ಹಿಂದಿರುಗುತ್ತಾನೆ. ಅಂದಿನಿಂದ ಆ ಪ್ರಣಯ ಭಂಗದ ಯಾತನೆಯನ್ನು ಮರೆಯುವುದಕ್ಕಾಗಿ ಪ್ರತೀ ವರ್ಷವೂ ದಿಗ್ವಿಜಯ ಕೈಗೊಳ್ಳುತ್ತಿರುತ್ತಾನೆ. ಹೀಗೆ ಹಿಂದೆ ದ್ರೌಪದಿಗೆ ಒಲಿದ ಮನಸ್ಸು ಮತ್ಯಾವ ಹೆಣ್ಣಿನ ಕಡೆಗೂ ತಿರುಗದೆ ಹಾಗೇ ನಿಲ್ಲುತ್ತದೆ. ಅವಿಚಲವಾದ ಪ್ರಣಯಕ್ಕೆ ತನ್ನನ್ನು ಅರ್ಪಿಸಿಕೊಂಡ ಈ ಕೀಚಕ ಅಜ್ಞಾತವೇಷದ ಸೈರಂಧ್ರಿಯನ್ನು ಕಂಡು ದ್ರೌಪದಿಯ ನೆನಪಾಗಿ ರೋಮಾಂಚನಗೊಳ್ಳುತ್ತಾನೆ.ಅನಾಥೆಯಾದ ಸೈರಂಧ್ರಿಯ ದುಸ್ಥಿತಿಗೆ ಮರುಕಗೊಂಡು ಅವಳಿಗೊಂದು ನೆಲೆಕಲ್ಪಿಸಬೇಕೆಂದು ಬಯಸುವ ಕೀಚಕ ತನ್ನ ತಂಗಿ ಸುದೇಷ್ಣೆಯ ಬಲವಂತಕ್ಕೆ ಮತ್ತು ತನ್ನಲ್ಲಿ ಸೈರಂಧ್ರಿ ಕೆರಳಿಸಿದ ದ್ರೌಪದಿಯ ನೆನಪಿಗೂ ಕಟ್ಟುಬಿದ್ದು ಒಪ್ಪಿ ಮಹಾಭಾರತದ ಕೀಚಕನಂತೆಯೇ ಭೀಮನ ಕೈಯಲ್ಲಿ ಹತನಾಗುತ್ತಾನೆ.
ಮಹಾಭಾರತದ ಆ ಕೀಚಕ ದ್ರೌಪದಿಯ ಮೇಲಿನ ಕಾಮದಿಂದ ಹತನಾದರೆ ಕೈಲಾಸಂ ಕೀಚಕ ದ್ರೌಪದಿಯ ಮೇಲಿನ ಪ್ರೇಮದಿಂದ ಹತನಾಗುತ್ತಾನೆ. ಕೈಲಾಸಂ ಕಂಡ ವಿರಾಟನಗರದಲ್ಲಿ ಪರಪುರುಷ, ಪರಸ್ತ್ರೀ ಪರಸ್ಪರದಲ್ಲಿ ತಪ್ಪಿನಡೆದರೆ ತಲೆದಂಡ. ಇಂತಹ ಶಾಸನವನ್ನು ಏರ್ಪಡಿಸಿದ ಸರದಾರ ಸಹೋದರನಾದ ಕೀಚಕನ ಕಣ್ಣಳತೆಯಲ್ಲೇ ಸೈರಂಧ್ರಿಯೂ ವಲಲನೂ ಸಂಧಿಸಿದಾಗ ಕೀಚಕ ಅವರನ್ನು ಪರಸ್ತ್ರೀ, ಪರಪುರುಷ ಎಂದು ಭಾವಿಸಿದುದರಿಂದ ಇಬ್ಬರ ನಡುವೆಯೂ ಮಲ್ಲಯುದ್ಧವಾಗುತ್ತದೆ.
ದಿಗ್ವಿಜಯದಿಂದ ಹಿಂದಿರುಗಿಬಂದ ಹೊತ್ತಿನಿಂದ ತಾನು ಭೀಮನ ಮೃತ್ಯುಬಂಧದಲ್ಲಿ ದೇಹವನ್ನು ಒಪ್ಪಿಸುವವರೆಗೂ ಹೆಜ್ಜೆ ಹೆಜ್ಜೆಗೂ ಕೀಚಕ ತಾನು ಪಡೆಯದೇಹೋದ ದ್ರೌಪದಿಯನ್ನು ನೆನಪಿಸಿಕೊಂಡು ವಿರಹದಿಂದ ಪರಿತಪಿಸುತ್ತಾನೆ. ಒಂದುಕಡೆ ಸಹಿಸಲಾರದ ತನ್ನ ಪ್ರಣಯದ ನೆನಪು ಇನ್ನೊಂದೆಡೆ ತನಗೆ ನೆಮ್ಮದಿಕೊಡಲು ಬಾರದಿರುವ ಸಾವು- ಈ ಎರಡರ ನಡುವೆ ಚಿತ್ತ ವಿಫಲನಾದುದರಿಂದಲೇ, ಅಜ್ಞಾತವೇಷದ ಪಾಂಡವರನ್ನು ಕಂಡು ಅವನಿಗೆ ಪಾಂಡವರ ನೆನಪಾದರೂ ಅವರನ್ನು ಪಾಂಡವರೆಂದು ಗುರುತಿಸಲಾಗದೆ ಅದನ್ನು ತನ್ನ ಚಿತ್ತ ವಿಭ್ರಮಣೆ ಎಂದುಕೊಳ್ಳುತ್ತಾನೆ, ಇಂತಹ ಸ್ಥಿತಿಯಲ್ಲಿ ಅವನ ನೆರವಿಗೆ ಬರಬಹುದಾದದ್ದು ಒಂದೇ-ಸಾವು. ಅದು ಬಂದು ಕೀಚಕನ ಬದುಕಿಗೆ ಮುಕ್ತಾಯ ಹಾಡುತ್ತದೆ.





0 Comments