ಕಿರಣ ಭಟ್
ಮಂಗಳೂರು ಪುರಭವನದಲ್ಲಿ ‘ಅರೆಹೊಳೆ ನಾಟಕೋತ್ಸವ’ ದಲ್ಲಿ ಸಂಪೂರ್ಣ ನಿಶ:ಬ್ದದ ಆ ನೂರಿಪ್ಪತ್ತು ನಿವಿಷéಗಳು!
ಈ ನಾಟಕದ ಒಂದು ಹಂತದಲ್ಲಿ ಒಂದು ಮಾತು ಬರುತ್ತದೆ. ಅದು ಟಾಯ್ಲೆಟ್ ಪ್ರಕರಣದ ಹೊತ್ತಿಗೆ. ಗಂಡಾಗಿ ಹುಟ್ಟಿದ ಜೀವವೊಂದು ತನ್ನ ಅಂತರಂಗದ ತುಡಿತದಿಂದಾಗಿ ಹೆಣ್ಣಾಗಿದೆ. ಆದರೆ ಸುತ್ತಲಿನ ಸಮಾಜ ಇದಕ್ಕೆ ಸ್ಪಂದಿಸುತ್ತಿಲ್ಲ. ದೈನಂದಿನ ಹತ್ತಾರು ಜಂಜಡಗಳ ನಡುವೆ ದೇಹಬಾಧೆ ತೀರಿಸಿಕೊಳ್ಳಲೂ ಕಷ್ಟವೆನಿಸುವ ಸ್ಥಿತಿ. ಆ ಕಡೆಯ ಟಾಯಲೆಟ್ ಗೂ ಹೋಗೋ ಹಾಗಿಲ್ಲ ಈ ಕಡೆಯದಕ್ಕೂ ಇಲ್ಲ. ಇಂಥ ನೋವಿನ ಸ್ಥಿತಿಯಲ್ಲಿ ಅಕ್ಕಯ್ ಒಂದು ಮಾತು ಹೇಳುತ್ತಾರೆ.
ನಮಗಾಗಿ ಬೇರೆ ಟಾಯ್ಲೆಟ್ ನ್ನಾದ್ರೂ ಕಟ್ಟಿಸಿ. ಟಾಯ್ಲೆಟ್ ಕಟ್ಟಿಸದಿದ್ರೂ ಬೇಡ. ಕಡೇ ಪಕ್ಷ ನಮ್ಮನ್ನು ಮನುಷ್ಯರನ್ನಾಗಿಯಾದರೂ ನೋಡಿ.
ಹೀಗೆ ತಮ್ಮನ್ನು ಮನುಷ್ಯರನ್ನಾಗಿಯೂ ನೋಡದ ಸಮಾಜದಲ್ಲಿ ಬದುಕುತ್ತ, ಅದರ ಮಧ್ಯೆಯೇ ತನ್ನತನ ಕಂಡುಕೊಂಡು, ತನ್ನಂಥವರಿಗಾಗಿ, ತನ್ನ ಸಮುದಾಯದವರಿಗಾಗಿ ಆಂತರಂಗದಲ್ಲಿ ಘಟ್ಟಿಯಾಗುತ್ತ ಹೋರಾಟ ನಡೆಸುವದಿದೆಯಲ್ಲ, ಅದೇನು ಸುಲಭದ ಮಾತಲ್ಲ.
ಹೀಗೆ, ಜಗದೀಶನೆಂಬ ಒಬ್ಬ ಸಂಕೋಚದ ಹುಡುಗ, ‘ಅಕ್ಕಯ್ ಪದ್ಮಶಾಲಿ’ ಯಾಗುವ, ತನ್ನ ಸಮುದಾಯಕ್ಕಾಗಿ ಹೋರಾಟಕ್ಕಿಳಿಯುವ, ತನ್ನ ಸಮುದಾಯಕ್ಕೊಂದು ಸಮಾನತೆ, ಘನತೆ, ಗೌರವ ತಂದುಕೊಡುವಲ್ಲಿ ಯಶಸ್ವಿಯಾಗುವ ಕಥೆಯೇ ‘ಅಕ್ಕಯ್’
‘ಬಹುರೂಪಿ’ ಯಿಂದ ಪ್ರಕಟವಾದ ಅಕ್ಕಯ್ ಪದ್ಮಶಾಲಿ ಯವರ ಆತ್ಮಕಥೆ ‘ ಅಕ್ಕಯ್’ ನ ರಂಗರೂಪ.

ಅದೊಂದು ವಿಶಿಷ್ಟ ಬದುಕಿನ ಭಿತ್ತಿ. ಭಿತ್ತಿಯ ತುಂಬ ಕತ್ತಲ ಛಾಯೆಯ ಕಡು ಬಣ್ಣಗಳೇ. ನೋವು, ಅವಮಾನ, ಹತಾಷೆ, ಹಿಂಸೆ..ಹೀಗೆ. ನೋವಿನ ಚಿತ್ರಿಕೆಗಳು. ಮಧ್ಯೆ ಮಧ್ಯೆ ಅಲ್ಲಲ್ಲಿ ಮಾತ್ರ ಕಾಣುವ ಬೆಳ್ಳಿಯ ಸೆಳಕುಗಳು. ಆಶಾವಾದದ ಹೊಳಪುಗಳು. ಇಂಥ ಚಿತ್ರಿಕೆಗಳನ್ನೆಲ್ಲ ಒಂದಾಗಿ ಹೆಣೆದು ಬೇಲೂರು ರಘುನಂದನ್ ‘ಅಕ್ಕಯ್’ ಏಕವ್ಯಕ್ತಿ ಪ್ರದರ್ಶನವೊಂದನ್ನು ಕಟ್ಟಿಕೊಡುತ್ತಾರೆ. ಇಂಥದೊಂದು ಹೆಣಿಗೆಗಾಗಿ ಅಕ್ಕಯ್ ಪಾತ್ರಧಾರಿ ನಯನಾ ಸೂಡ ರ ಕೈಯಲ್ಲಿ ಬಣ್ಣದ ಬಟ್ಟೆಯ ಹೆಣಿಗೆಯೊಂದನ್ನು ಕೊಟ್ಟುಬಿಡುತ್ತಾರೆ.
ಒಂದು ರೀತಿಯಲ್ಲಿ ಒಂದರಲ್ಲೊಂದು ಬೆರೆತು ಹೋಗಿರುವ ಮೂಲ ಪಾತ್ರದ ಮನಸ್ಥಿತಿಯನ್ನ ಸಾಂಕೇತಿಸುತ್ತಿದೆಯೋ ಎಂಬಂಥ ಗಟ್ಟಿ ಹೆಣಿಗೆಯಿದು. ಇದೇ ಹೆಣಿಗೆ ಮುಂದೆ ನಯನಾರ ಕೈಯಲ್ಲಿ ಹಲವು ರೂಪಗಳನ್ನು ಪಡೆದುಕೊಳ್ಳುತ್ತ ಪಾತ್ರಗಳಾಗುತ್ತ, ರೂಪಕವಾಗುತ್ತ, ಕಥೆ ಹೇಳಲು ಅವರಿಗೆ ಸಾಥಿಯಾಗುತ್ತದೆ.
ಸರಳವಾದ, ಹಲವಾರು ಬಣ್ಣದ ಇಂಥ ಬಟ್ಟೆಗಳ ಹಗ್ಗದಂಥ ರಚನೆಗಳನ್ನ ಇಳಿದು ಬಿಟ್ಟ ರಂಗಸ್ಥಳದಲ್ಲಿ ‘ಅಕ್ಕಯ್’ ಕಥೆ ಶುರುವಾಗುತ್ತದೆ. ಮುಂದೆ ನೂರಿಪ್ಪತ್ತು ನಿಮಿಷಗಳ ಕಾಲದ ನಿರಂತರ ಪಯಣ. ಅಕ್ಕಯ್ ಜೊತೆಗಿನ ಪ್ರೇಕ್ಷಕರ ಪಯಣ. ಇಷ್ಟೂ ಕಾಲ ನಾವು ಅದರ ಕುರಿತು ಒಂಚೂರೂ ತಿಳಿಯದೇ ಇದ್ದ ಅಂಥದೊಂದು ಬದುಕಿಗೆ ನಾವೂ ಸಾಕ್ಷಿಯಾಗಿ ಇದ್ದೇವೇನೋ ಎನಿಸುವ ಮಟ್ಟಿಗೆ ನಯನಾ ನಮ್ಮನ್ನೂ ಜೊತೆ ಜೊತೆಗೇ ಕರೆದೊಯ್ಯುತ್ತಾರೆ.
ಮೊದಲ ಕೆಲ ನಿಮಿಷ ವಾರ್ಮ್ ಅಪ್ ಸ್ಥಿತಿಯಲ್ಲಿದ್ದ ನಾಟಕ ನಿಧಾನವಾಗಿ ಕಸುವು ಪಡೆಯುತ್ತ ಹೋಗುತ್ತದೆ. ಇಡಿಯ ನಾಟಕದುದ್ದಕ್ಕೂ ವಿಶಿಷ್ಟವಾದ ದೇಹಭಾಷೆಯನ್ನು ಹಾಗೇ ಕಾಪಿಟ್ಟುಕೊಂಡು ಚಕ ಚಕನೆ ಬೇರೆ ಬೇರೆ ಪಾತ್ರಗಳೊಳಗೆ ಇಳಿಯುತ್ತ, ವಿವಿಧ ಭಾವಗಳನ್ನು ಆಂಗಿಕವಾಗಿಯೂ, ವಾಚಿಕವಾಗಿಯೂ ಅಭಿವ್ಯಕ್ತಿಸುವದಿದೆಯಲ್ಲ, ಅದೇನು ಆಂಥ ಸುಲಭವಾದದ್ದಲ್ಲ. ಅದ್ಭುತವಾದ ಕಸುವನ್ನು ನಾಟಕದುದ್ದಕ್ಕೂ ಕಾಪಾಡಿಕೊಂಡು ಆತ್ಮಕಥೆಯನ್ನು ಪ್ರಭಾವಶಾಲಿಯಾಗಿ ನಯನಾ ದಾಟಿಸುತ್ತಾರೆ.
ಅಂತೆಯೇ ಪೌರಾಣಿಕ ಪಾತ್ರಳನ್ನೆತ್ತಿಕೊಂಡು ಅವುಗಳನ್ನು ವ್ಯಾಖ್ಯಾನಿಸುತ್ತ, ಪ್ರಸ್ತುತ ಸಂದರ್ಭಕ್ಕೆ ಸಮೀಕರಿಸುತ್ತ ಏಕವ್ಯಕ್ತಿ ಪ್ರದರ್ಶನವೊಂದನ್ನು ಕಟ್ಟುವದಕ್ಕೂ, ಈಗ ನಮ್ಮನಡುವೆ ಬದುಕುತ್ತಿರುವ ವ್ಯಕ್ತಿಯೊಬ್ಬರ ಬದುಕನ್ನು ರಂಗಕ್ಕೆ ತರುಯವದಕ್ಕೂ ತುಂಬ ವ್ಯತ್ಯಾಸವಿದೆ. ಇದು ಹೆಚ್ಚು ಸವಾಲಿನದು ಮತ್ತು ಜಾಗ್ರತೆ ಬೇಡುವಂಥದ್ದು. ಇಂಥ ಸವಾಲಿನಲ್ಲಿ ನಲ್ಲಿ ಲೇಖಕ, ನಿರ್ದೇಶಕ ಬೇಲೂರು ರಘುನಂದನ್ ಬಹುಮಟ್ಟಿಗೆ ಯಶಸ್ವಿಯಾಗುತ್ತಾರೆ.

ನೋವುಗಳೇ ತುಂಬಿದುವ ಬದುಕು ಇದು. ರಂಗದಲ್ಲಿ ಅಂಥ ಘಟನೆಗಳು ಬರುವದು ಅನಿವಾರ್ಯವೇ. ಆದರೂ ಕೆಲವು ಘಟನೆಗಳನ್ನು ಕಡಿಮೆ ತೀವ್ರತೆಯಂದಿಗೆ ಹೇಳಬಹುದಿತ್ತೇನೋ ಎನಿಸದಿರದು. ಹಾಗಾದಾಗ ಅದು ಇಡಿಯ ನಾಟಕದ ಏಕತಾನತೆಯನ್ನ ಕಡಿಮೆ ಮಾಡಬಹುದೇನೋ. ಇಂಥ ಪಾಥೋಸ್ ನಿಂದ ಬ್ರೇಕ್ ಕೊಡಲೋ ಎಂಬಂತೆ ನಿರ್ದೇಶಕರು ನಾಟಕದ ಮಧ್ಯೆ ಕಲ್ಪನಾರ ಹಾಡು ಹಾಕಿ ಅವರ ನೆನಪನ್ನೂ ಮಾಡಿಕೊಳ್ಳುತ್ತಾರೆ.
ಕಥೆಯೊಂದಿಗೆ ಕರೆದೊಯ್ಯುವಂಥ ಲೈವ್ ಮತ್ತು ರೆಕಾರ್ಡೆಡ್ ಸಂಗೀತವಿದೆ. ನಾಟಕದ ಮೂಡ್ ಗೆ ಲೈವ್ ಸಂಗೀತದ ತೀವ್ರತೆ ಸ್ವಲ್ಪ ಹೆಚ್ಚಾಯಿತೇನೋ ಎನಿಸದಿರದು. ಹಾಡುಗಳು ಸ್ವಲ್ಪ ವಾಚ್ಯವಾದಂತಿವೆ. ನಾಟಕದ ಕೊನೆ ಇಡಿಯ ಬದುಕಿನ ಹೋರಾಟದ ಯಶಸ್ಸನ್ನು ಸೂಚಿಸಬಹುದಿತ್ತೇನೋ. ಇವೆಲ್ಲ ಸಣ್ಣ ಪುಟ್ಟ ಅನಿಸಿಕೆಗಳು ಅಷ್ಟೇ.
ಇಂಥದೊಂದು ಆತ್ಮಕಥೆಯನ್ನೆತ್ತಿಕೊಂಡು ನಾಟಕವಾಗಿಸಿದ್ದಕ್ಕೆ ಬೇಲೂರು ರಘುನಂದನ್ ರಿಗೆ, ‘ಅಕ್ಕಯ್’ಯಾಗಿಯೇ ರಂಗದ ಮೇಲೆ ಬದುಕುತ್ತ ನಮ್ಮನ್ನೂ ಜೊತೆಗೆ ಬದುಕುವಂತೆ ಮಾಡಿದ ನಯನ ಸೂಡರಿಗೆ ಅಭಿನಂದನೆಗಳು.
ನಾಟಕ ತೋರಿಸಿದ ‘ಅರೆಹೊಳೆ ಪ್ರತಿಷ್ಠಾನ’ ಕ್ಕೂ ಅರೆಹೊಳೆ ಸದಾಶಿವರಾಯರಿಗೂ ಧನ್ಯವಾದಗಳು.
ನಾಟಕ: ಅಕ್ಕಯ್
ಅಭಿನಯ: ನಯನ ಸೂಡ
ರಂಗರೂಪ, ನಿರ್ದೇಶನ: ಬೇಲೂರು ರಘುನಂದನ್
ಸಂಗೀತ: ರಾಜು ಹೊಸಕೋಟೆ









ಥ್ಯಾಂಕ್ಯೂ ಅವಧಿ
ಒಳ್ಳೆಯ ವೀಕ್ಷಣೆ