ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಸು ಕುಡಿಕೆ: ‘ಸತ್ಯಂ ವಧ, ಅಧರ್ಮಂ ಚರ. . . . . . .’

ಕಾಸು ಕುಡಿಕೆ -೧೧


ಜಯದೇವಪ್ರಸಾದ ಮೊಳೆಯಾರ
ಟೋಪಿವಿದ್ಯೆಯ ಮೂರು ಮುಖಗಳು-



In modern business, it is not the crook who is to be feared the most,
It is the honest man who doesn’t know what he is doing-  William Wordsworth
ಆಧುನಿಕ ಉದ್ದಿಮೆಯಲ್ಲಿ ಅತಿ ಹೆಚ್ಚು ಹೆದರಬೇಕಾದ್ದು ಠಕ್ಕರಿಗಲ್ಲ,
ತಾನೇನು ಮಾಡುತ್ತಿದ್ದೇನೆಂಬ ಅರಿವಿಲ್ಲದ ಪ್ರಾಮಾಣಿಕನಿಗೆ-  ವಿಲಿಯಮ್ ವರ್ಡ್ಸ್‌ವರ್ಥ್.

ಕಳೆದೆರಡು ವಾರಗಳಿಂದ ಅನಾವರಣಗೊಳ್ಳುತ್ತಿರುವ ಟೋಪಿ ವಿದ್ಯೆಯ ಎರಡು ಮುಖಗಳ ಪರಿಚಯ ಮಾಡಿಕೊಂಡ ಹಲವರಿಗೆ ಮೂರನೆಯ ಮುಖದ ಬಗ್ಗೆ ಅದಮ್ಯ ಕುತೂಹಲ. ನನಗೆ ಬಂದ ದೂರವಾಣಿ ಕರೆಗಳಲ್ಲಿ ಹೆಚ್ಚಿನವರು ಈ ಮೂರನೆಯ ಮುಖ ಯಾವುದೆಂಬ ಪ್ರಶ್ನೆಯನ್ನು ಕೇಳದಿರಲಿಲ್ಲ. ಆದರೆ ನಾನು ಯಾರಿಗೂ ಸತ್ಯವನ್ನು ಹೇಳದೆ ಬಾಯಿಗೆ ಬಂದ ಸುಳ್ಳು ಹೇಳಿದ್ದೇನೆ. ಯಾಕೆಂದರೆ ಮಾರ್ಕೆಟ್ನಲ್ಲಿ ಸುಳ್ಳು ಹೇಳಿ ದುಡ್ಡು ಮಾಡುವುದೇ ಈ ವಿದ್ಯೆಯ ಮೂರನೆಯ ಮುಖ!
ಆಂಧ್ರದ ಭೀಮಾವರಂ ಸಮೀಪದ ಒಂದು ಪುಟ್ಟ ಹಳ್ಳಿಯಿಂದ ಬಂದ ರಾಮಲಿಂಗ ರಾಜು ಅದ್ಯಾವ ಘಳಿಗೆಯಲ್ಲಿ ತನ್ನ ಸಾಫ್ಟ್‌ವೇರ್ ಕಂಪೆನಿಯನ್ನು ಹುಟ್ಟುಹಾಕಿದನೋ ದೇವರೇ ಬಲ್ಲ; ಅದಕ್ಕೆ ‘ಸತ್ಯಂ’ ಎಂದು ನಾಮಕರಣ ಕೂಡಾ ಮಾಡಿದ. ಆ ಕಂಪೆನಿಯು ದಿನದಿಂದ ದಿನಕ್ಕೆ ಬೆಳೆದುಕೊಂಡು ಹೋಗಿ ನಾಲ್ಕನೇ ಅತಿ ದೊಡ್ಡ ಹಾಗೂ ಭಾರತದ ಅತಿ ಪ್ರತಿಷ್ಟಿತ ಸಾಫ್ಟ್‌ವೇರ್ ಕಂಪೆನಿಗಳಲ್ಲೊಂದಾಗಿ ವಿಜೃಂಭಿಸತೊಡಗಿತು. ಶೇರು ಬಜಾರಿನಲ್ಲೂ ಉತ್ತಮ ಬೇಡಿಕೆಯೊಂದಿಗೆ ಬಿಕರಿಯಾಗುತ್ತಿತ್ತು. ಎಲ್ಲಾ ಫಂಡ್ ಹೌಸ್ ಹಾಗೂ ಹೂಡಿಕೆ-ಧುರೀಣರ ಖಾತೆಯಲ್ಲಿ ಸತ್ಯಂ ಶೇರು ಇದ್ದೇ ಇರುತ್ತಿತ್ತು. ಎಲ್ಲಾ ಟಿ.ವಿಯ ಅನಲಿಸ್ಟ್‌ಗಳೂ ಕೂಡಾ ಅದನ್ನು ಕೊಳ್ಳಲು ರೆಕಮಂಡ್ ಮಾಡುತ್ತಲೇ ಇದ್ದರು. ಆಂಧ್ರದ ಮಂತ್ರಿ ಮಂಡಲಕ್ಕೂ ಅತಿ ನಿಕಟವರ್ತಿಯಾಗಿದ್ದ ರಾಜು, ಒಬ್ಬ ಉತ್ತಮ ಬಿಸಿನೆಸ್‌ಮನ್ ಎಂದು ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದಿದ್ದ.
ವಿಷಯ ಹಾಗಿರುವಾಗ ಒಂದು ಫೈನ್ ಡೇ; to be precise, ಜನವರಿ ೭, ೧೯೯೯ ರ ಬೆಳಗ್ಗೆ ಕಂಪೆನಿಯ ಚೇರ್ಮನ್ ರಾಮಲಿಂಗ ರಾಜು “ನಾನು ತಪ್ಪಿತಸ್ಥ, ತಪ್ಪು ಎಸಗಿದ್ದೇನೆ, ಈ ಕಂಪೆನಿಯ ಆದಾಯ, ಲಾಭದ ಅಂಕಿ ಸಂಖ್ಯೆಗಳೆಲ್ಲಾ ಬರೇ ಸುಳ್ಳು, ಸುಳ್ಳಿನ ಮೇಲೆ ಸುಳ್ಳು ಪೋಣಿಸುತ್ತಾ ಈ ಸಂಸ್ಥೆಯನ್ನು ನಡೆಸುತ್ತಾ ಬಂದಿದ್ದೇನೆ. ಈ ಕಂಪೆನಿಯ ಆಡಳಿತ ಎಂದರೆ ನನಗೆ ಹುಲಿಸವಾರಿ ಮಾಡಿದಂತೆ ಅನುಭವವಾಗಿದೆ. ಕೆಳಕ್ಕೆ ಇಳಿಯುವಂತಿಲ್ಲ. ಇಳಿದರೆ ಹುಲಿ ತಿಂದೇ ಹಾಕೀತು ಎಂಬ ಭಯ.” ಎಂದೆಲ್ಲ ತನ್ನ ಸುಳ್ಳು ಲೆಕ್ಕವನ್ನು ಸವಿವರವಾಗಿ ೪ ಪುಟದ  ಒಂದು ಪತ್ರದಲ್ಲಿ ವಿವರಿಸಿ, ತನ್ನ ಸಹಿ ಹಾಕಿ ಕಂಪೆನಿಯ ಬೋರ್ಡಿಗೆ ಸಬ್ಮಿಟ್ ಮಾಡಿ ಸಾರ್ವಜನಿಕವಾಗಿಯೂ ಪ್ರತಿಯನ್ನು ರಿಲೀಸ್ ಮಾಡುತ್ತಾನೆ. “ಈಗ ಇದಕ್ಕೆಲ್ಲ ಇತಿಶ್ರೀ ಹಾಡಬಯಸುತ್ತೇನೆ. ತಪ್ಪೊಪ್ಪಿಕೊಂಡು ನಾನು ಈಗ ಕಾನೂನಿನ ಕ್ರಮಗಳನ್ನು ಎದುರಿಸಲು ತಯಾರಾಗಿದ್ದೇನೆ” ಎಂದು ಹೇಳಿ ಪೋಲೀಸರಿಗೆ ಶರಣಾದ ರಾಜು.
ಆತ ಮಾಡಿದ್ದಾದರೂ ಏನು?
ಕೆಲವು ವರ್ಷಗಳಿಂದ ಸುಳ್ಳು ಆದಾಯ ಸುಳ್ಳು ವೆಚ್ಚಗಳನ್ನು ತೋರಿಸಿ ಸುಮಾರು ೭೧೩೬ ಕೋಟಿ ರೂಪಾಯಿಗಳ ಹೆಚ್ಚುವರಿ ಸುಳ್ಳು ಲಾಭಾಂಶ ತೋರಿಸಿ ತನ್ನ ಶೇರು ಬೆಲೆ ಅನಾವಶ್ಯಕ ಮೇಲೇರುವಂತೆ ಮಾಡಿದ್ದು ಆತನ ಮುಖ್ಯ ಅಪರಾಧ. ವಾಸ್ತವದಲ್ಲಿ ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯಲ್ಲಿ ಈ ರೀತಿಯ ದುರ್ವ್ಯವಹಾರ ಒಂದು ನಾಲ್ಕು ಜನರ ಅರಿವು ಮತ್ತು ಸಹಕಾರ ಇಲ್ಲದೆ ಯಾರಿಗೂ ಒಬ್ಬಂಟಿಯಾಗಿ ಮಾಡಲು ಸಾಧ್ಯವೇ ಇಲ್ಲ. (ಆದರೂ ರಾಜು ಈ ಕೆಲಸದಲ್ಲಿ ಬೇರಾರೂ ಸೇರಿಲ್ಲ ಎಂಬ ಹೇಳಿಕೆ ನೀಡಿದ್ದಾನೆ). ಅತ್ಯಂತ ಸರಳ ಹಾಗೂ ಮೂಲಭೂತ ಲೆಕ್ಕ ಪರಿಶೋಧನೆಯಲ್ಲೇ ಇಂತಹ ತಪ್ಪುಗಳು ಸಿಕ್ಕಿ ಬೀಳಲೇ ಬೇಕು. ಯಾಕೆಂದರೆ ಅಂತಹ ಸಂದರ್ಭಗಳಲ್ಲಿ ಲೆಕ್ಕಪತ್ರಕ್ಕೂ ಬ್ಯಾಂಕಿನಲ್ಲಿರುವ ದುಡ್ಡಿಗೂ ತಾಳೆಯಾಗಲಾರದು. ಇದೊಂದು ಹಲವು ಕೈಗಳು ಸೇರಿ ರಚಿಸಿದ ವ್ಯವಸ್ಥಿತ ಷಡ್ಯಂತ್ರ. ರಾಜು ಇಂದಿಗೂ ಸಿ.ಬಿ.ಐ ವಿಚಾರಣೆ ಎದುರಿಸುತ್ತಾ ಜೈಲಿನಲ್ಲಿ ಕುಳಿತಿದ್ದಾನೆ. ಜೊತೆಗೆ ಸಹೋದರ ರಾಮ ರಾಜು, ಕಂಪೆನಿಯ ಫೈನಾನ್ಸ್ ಮುಖ್ಯಸ್ಥ, ಆಡಿಟ್ ಕಂಪೆನಿ ಮುಖ್ಯಸ್ಥ ಕೂಡಾ ಬಂಧನದಲ್ಲಿದ್ದಾರೆ.
ಈ ರೀತಿ ಸುಳ್ಳು ಲೆಕ್ಕದ ಆದಾಯ ಲಾಭಂಶಗಳನ್ನು ತೋರಿಸುವುದರಿಂದ ಸಹಜವಾಗಿ ಸತ್ಯಂನ ಮಾರುಕಟ್ಟೆ ಬೆಲೆ ಮೇರೇರುತ್ತಾ ಹೋಗುತ್ತದೆ. ಆವಾಗ ರಾಜು, ಭಾರೀ ಪ್ರಮಾಣದಲ್ಲಿ ತನ್ನ ಒಡೆತನದ ಶೇರುಗಳನ್ನು ಉತ್ತಮ ಬೆಲೆಯಲ್ಲಿ ಮಾರಿದ್ದಲ್ಲದೆ ಸ್ವಲ್ಪ ಶೇರುಗಳನ್ನು ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲವನ್ನು ಕೂಡಾ ಪಡೆದು ಆ ಧನದಿಂದ ಹೇರಳ ಜಮೀನನ್ನು ಖರೀದಿಸಿ ಆಂಧ್ರದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಚೆಲ್ಲಾಟವಾಡತೊಡಗಿದನು. ಈ ಭೂಮಿ ಖರೀದಿಯನ್ನು ತನ್ನ ಮಗಂದಿರ ನಿಯಂತ್ರಿತ ಮಯ್ತಾಸ್ ಇನ್ಫ್ರಾ ಮತ್ತು ಮಯ್ತಾಸ್ ಪ್ರೋಪರ್ಟೀಸ್  (SATYAM ನ ಉಲ್ಟಾ ರೂಪ, MAYTAS !!) ಎಂಬ ಬೇರೆ ಎರಡು ಕಂಪೆನಿಗಳ ಹೆಸರಿನಲ್ಲಿ ಮಾಡಿದ್ದನು.
ಈಗಾಗಲೇ ರಾಜುವಿನ ‘ಹುಲಿ ಸವಾರಿ’ ಆರಂಭವಾಗಿತ್ತು. ತಾನು ತೋಡಿದ ರೂ ೭೧೩೬ ಕೋಟಿಯ ಹೊಂಡವನ್ನು ಮುಚ್ಚುವ ದಾರಿ ತೋರದೆ ತೀವ್ರ ಆತಂಕಕ್ಕೆ ಒಳಗಾದ. ಈ ಸಮಯದಲ್ಲಿ ಹುಲಿಯ ಮೇಲಿನಿಂದ ಕೆಳಗಿಳಿಯಬೇಕೆಂದರೂ ಇಳಿಯಲಾರ. ಇಳಿದರೆ ಹುಲಿ ತಿಂದು ಹಾಕೀತೆಂಬ ಭಯ. ಜೀವದ ಪ್ರಶ್ನೆ! ಏನು ಮಾಡುವುದು?. ಸರಿ, ಸವಾರಿ ಜಾರಿಯಲ್ಲಿ ಇಟ್ಟಿರಲು ನಿರ್ಧರಿಸಿದ. ಹಾಗೂ ಸತ್ಯಂನಲ್ಲಿರುವ ಎಲ್ಲಾ ದುಡ್ಡನ್ನು ಬಾಚಿ ತೆಗೆದು ೭೬೮೦ ಕೋಟಿ ರೂಪಾಯಿಗಳ ಬೆಲೆಯಲ್ಲಿ ಅದರ ಅರೆವಾಶಿಯೂ ಬೆಲೆಯಿರದ ತನ್ನ ಮಗಂದಿರ ಎರಡು ಮಯ್ತಾಸ್ ಕಂಪೆನಿಗಳನ್ನು ಖರೀದಿಸುವ ಗಂಡಾಂತರದ ಐಡಿಯದ ಸ್ಕೆಚ್ ಹಾಕಿದ. ಹಾಗೆಯೇ ಮಾಡಲು ಕಾರ್ಯೋನ್ಮುಖವಾದನು. ಅದಕ್ಕೆ ಬೇಕಾದ ಎಲ್ಲಾ ಕಾನೂನೀ ಕಾರವಾಹಿಗಳನ್ನೂ ಮಾಡಿ  ಬೋರ್ಡ್ ಅಪ್ರೋವಲ್ ಅನ್ನೂ ಪಡೆದುಕೊಂಡ. ಆದರೆ ಆತನ ಈ ಹೆಜ್ಜೆ ಸಾರ್ವಜನಿಕವಾಗುತ್ತಲೇ ಕಂಪೆನಿಯ ಇತರ ಹೂಡಿಕೆದಾರರು ಸಾಕಷ್ಟು ಗದ್ದಲ ಎಬ್ಬಿಸಿದರು. ಹೀಗೆ ಮಾಡುವುದರಿಂದ ಸತ್ಯಂನಲ್ಲಿರುವ ದುಡ್ಡೆಲ್ಲ ಅನ್ಯಾಯವಾಗಿ ಆತನ ಮಗಂದಿರ ಕೈಸೇರುತ್ತದೆ. ಒಬ್ಬ ಸಾಮಾನ್ಯ ಸತ್ಯಂ ಶೇರುದಾರ ದಿವಾಳಿಯಾಗುತ್ತಾನೆ. ಹಾಗೆ ರಾಜುವಿನ ಪ್ರಾಮಾಣಿಕತೆಯ ಬಗ್ಗೆಯೇ ಬಹಳ ದೊಡ್ಡ ಗಲಾಟೆ ಎದ್ದಿತು. ಕೊನೆಗೊಮ್ಮೆ ಸಾರ್ವಜನಿಕರ ವಿರೋಧಕ್ಕೆ ಮಣಿದು ಈ ಅಂತಿಮ ದರೋಡೆಯ ಸಂಚನ್ನು ಕೈಬಿಡಬೇಕಾಗಿ ಬಂತು.
ಕೊನೆಗೂ, ತಾನು ಸಿಕ್ಕಿ ಬೀಳುವ ದಿನ ಸನ್ನಿಹಿತವಾದ ಅನುಭವ ಆಗತೊಡಗಿತು ರಾಜುವಿಗೆ. ಕಟ್ಟ ಕಡೆಗೆ, ಜನವರಿ ೭ ರಂದು ಬೇರೇನೂ ದಾರಿ ಕಾಣದೆ ತನ್ನ ‘ಹುಲಿ ಸವಾರಿ’ ಯನ್ನು ಕೊನೆಗೊಳಿಸಿ ತಪ್ಪೊಪ್ಪಿಗೆ ಪತ್ರ ಬರೆದು ಸಹಿ ಹಾಕಿ ಪೋಲೀಸರಿಗೆ ಶರಣಾದನು. ಈ ಹಗರಣದಲ್ಲಿ ಸಿಕ್ಕಿ ಹಾಕಿಕೊಳ್ಳುವುದಕ್ಕಿಂತ ತಾನೇ ಸರೆಂಡರ್ ಆದರೆ ಪಬ್ಲಿಕ್ ಸಿಂಪೆಥಿಯಾದರೂ ಸಿಕ್ಕೀತು ಎಂಬುದು ಆತನ ಲೆಕ್ಕಾಚಾರವಾಗಿದ್ದೀತು. ಸುಮಾರು ೨೦೦ ರೂ ಗಳ ಆಸುಪಾಸಿನಲ್ಲಿ ನಲಿಯುತ್ತಿದ್ದ ಸತ್ಯಂ ಶೇರು ಸುದ್ದಿ ಹೊರಬರುತ್ತಲೇ ಗುಂಡು ತಾಗಿದ ಹಕ್ಕಿಯಂತೆ ಆರೇಳು ರುಪಾಯಿಗಳಿಗೆ ಢಮಾರನೆ ಇಳಿದು ಬಿದ್ದಿತು. ಹಲವಾರು ಕುಟುಂಬಗಳು ಸರ್ವಸ್ವಗಳನ್ನೂ ಕಳೆದುಕೊಂಡರು.
ದುಡ್ಡು ಮಾಡಲು ಸುಳ್ಳು ಹೇಳುವುದು ಕಂಪೆನಿಯ ಲಾಭ-ನಷ್ಟಗಳ ಬಗ್ಗೆ ಮಾತ್ರವೇ ಆಗಬೇಕೆಂದಿಲ್ಲ. ಕಂಪೆನಿಯ ಆಗು ಹೋಗುಗಳ ಬಗ್ಗೆ, ಮುಂಬರಲಿರುವ ಸುಗ್ಗಿಯ ದಿನಗಳ ಬಗ್ಗೆ, ಜಾರಿಗೆ ಬರಲಿರುವ ಹೊಸ ಕಾನೂನುಗಳ ಬಗ್ಗೆ, ಇತ್ಯಾದಿ ಕಂಪೆನಿಯ ಶೇರು ಬೆಲೆಯನ್ನು ಬಾಧಿಸಬಹುದಾದ ಯಾವುದೇ ಮಾಹಿತಿಯ ಬಗ್ಗೆ ಸುಳ್ಳು ಹೇಳಿ, ಪ್ರೊಮೋಟರ್ಸ್ ಹಾಗೂ ರಾಜಕಾರಣಿಗಳು ಕೂಡಾ ಸಾಕಷ್ಟು ದುಡ್ಡನ್ನು ಮಾರುಕಟ್ಟೆಯಿಂದ ಬಾಚುತ್ತಾರೆ. ಈ ಬಗ್ಗೆ ನನ್ನ ಅನುಭವಕ್ಕೆ ಬಂದ ರೋಚಕ ಕತೆಗಳನ್ನು ಇನ್ನೊಮ್ಮೆ ಯಾವತ್ತಾದರೂ ನೆನಪಿಟ್ಟು ಹೇಳುತ್ತೇನೆ. ಇವತ್ತು ಬೇಡ.
ಉಪಸಂಹಾರ:
ಕಂಪೆನಿಯ ಬೆಲೆ ಏರಿಳಿಯುವ ವಿದ್ಯಮಾನಗಳ ಸ್ಪಷ್ಟ ಅರಿವು ಮೊದಲೇ ಇರುವ ‘ಒಳಕೈ’ ಗಳು ನಡೆಸುವ ಇನ್ಸೈಡರ್ ಟ್ರೇಡಿಂಗ್ ಒಂದನೆಯ ಮುಖವಾದರೆ, ಮಾರುಕಟ್ಟೆಯಲ್ಲಿ ಶೇರುಬೆಲೆಗಳನ್ನು ದುರುದ್ದೇಶಪೂರ್ವಕವಾಗಿ ಏರಿಳಿಸುವ ‘ರಿಗ್ಗಿಂಗ್ ವ್ಯವಹಾರ’ ಎರಡನೆಯ ಮುಖ. ಹಾಗೂ, ಬರೇ ಸುಳ್ಳು ಸುಳ್ಳೇ ಮಾಹಿತಿಯನ್ನು ಮಾರುಕಟ್ಟೆಗೆ ನೀಡಿ ಬೆಲೆಗಳನ್ನು ಬೇಕೆನಿಸಿದಂತೆ ಏರಿಳಿಸುವ ಅತಿಸುಲಭದ ತಂತ್ರಗಾರಿಕೆ ಮೂರನೆಯ ಮುಖ. ಬಹುತೇಕ, ಹೆಚ್ಚಿನ ಶೇರು ಹಗರಣಗಳು ಈ ಮೂರು ಜನಪ್ರಿಯ ತಂತ್ರಗಳಲ್ಲಿ ಒಂದನ್ನು ಅನುಸರಿಸುತ್ತವೆ. ಬೇರೆ ರೀತಿಗಳು ಇಲ್ಲವೇ ಇಲ್ಲ ಎಂದೇನೂ ಅಲ್ಲ. ಈ ಮೂರು ಮಾತ್ರ ಸಮಯಸಿದ್ಧ ಶ್ಯೂರ್ ತರೀಖಾಗಳು. ಈ ಮೂರೂ ತಂತ್ರಗಳ ಅಥವ ಕುತಂತ್ರಗಳ ಮೂಲಕ ಮಾಡರ್ನ್ ವಿತ್ತಾಸುರರು ನಿರಂತರವಾಗಿ, ನಿರಾತಂಕವಾಗಿ ಶೇರು ಬಜಾರಿನಲ್ಲಿ ಅಮಾಯಕರ ದುಡ್ಡನ್ನು ದೋಚುತ್ತಲೇ ಇರುತ್ತಾರೆ. ಇಲ್ಲಿ ಕೊಟ್ಟ ದೃಷ್ಠಾಂತಗಳು ಕೆಲವು ಉದಾಹರಣೆಗಳಷ್ಟೆ.
ಫಂಡ್ ಹೌಸ್‌ಗಳೂ ಜೊತೆಗೆ ವಿತ್ತಮಂತ್ರಾಲಯವೂ ನಿರಂತರವಾಗಿ ಎಲ್ಲರನ್ನೂ ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವಂತೆ ಪ್ರಚೋದಿಸುತ್ತಿರುವ ಒಂದು ಅತ್ಯಂತ ಅಪಾಯಕಾರಿ ವ್ಯವಸ್ಥೆ ಇಂದು ಅಮಲಿನಲ್ಲಿ ಇದೆ. ಇದರ ಅಮಲಿನಲ್ಲಿ ಪ್ರಾಮಾಣಿಕ ಜನಸಾಮಾನ್ಯ ಸತ್ಯಂನಂತಹ ಮಿಥ್ಯಂನ ಹಿಂದೆ ಹೋಗಿ ಹೆಜ್ಜೆ ತಪ್ಪಿ ಜಾರಿಬೀಳುವ ರಿಸ್ಕ್ ಇದೆ. ಅಂತಹ ಪ್ರಾಮಾಣಿಕರ ಬಗ್ಗೆ ನಮಗೆ ಹೆದರಿಕೆ ಇದೆ. ಹದಿನೆಂಟನೇ ಶತಮಾನದಲ್ಲೇ ವರ್ಡ್ಸ್‌ವರ್ಥ್ ಈ ಮಾತನ್ನು ಹೇಳಿರುವುದೂ ಹಾಗೂ ಅದು ಇಂದಿಗೂ ಪ್ರಸ್ತುತವಾಗಿರುವುದೂ ಅಚ್ಚರಿಯನ್ನು ನೀಡುತ್ತದೆ. ಈ ವಿಷಯಗಳ ಜ್ಞಾನ, ಅರಿವು ಇಟ್ಟುಕೊಂಡೇ ಶೇರು ವ್ಯವಹಾರಕ್ಕೆ ಜಾಗರೂಕರಾಗಿ ಕೈ ಹಾಕಬೇಕೆಂಬುದೇ ನಮ್ಮ ಆಶಯ. ಶೇರು ವ್ಯವಸ್ಥೆಗೆ ತನ್ನದೇ ಆದ ಹಿರಿಮೆಗಳಿವೆ. ಶೇರುಗಳ ಬಗ್ಗೆ ವೃಥಾ ಟೀಕೆ ಮಾಡುವುದೂ, ಭೀತಿ ಹುಟ್ಟಿಸುವುದೂ ಈ ಲೇಖನಗಳ ಉದ್ಧೇಶ ಖಂಡಿತಾ ಅಲ್ಲ.
ಈ ರೀತಿ ಶೇರು ಮಾರುಕಟ್ಟೆಯಲ್ಲಿ ಟೋಪಿ ಹೊಲಿಯುವ ತಂತ್ರಗಾರಿಕೆಯ ಮೂರು ಕಂತುಗಳ ಈ ಮಾಲಿಕೆ ಇಲ್ಲಿಗೆ ಸಮಾಪ್ತವಾಗುತ್ತದೆ. ಪ್ರತಿಕ್ರಿಯಿಸಿದವರಿಗೆಲ್ಲರಿಗೂ ಧನ್ಯವಾದಗಳು.
ಶುಭಮಸ್ತು!
ಸರ್ವೇ ಜನಾಃ ಸುಖಿನೋ ಭವಂತು!

‍ಲೇಖಕರು avadhi

23 May, 2010

3 Comments

  1. Rajesh

    Very informative. Looking forward to more articles.
    Thanks. Rajesh

    • jayadev

      Thanks.
      Every week there will be one here on ‘personal Finance’
      jayadev

  2. Muralidhar bhat

    ನಿಮ್ಮ ಎಚ್ಚರಿಕೆಗಳಿಗೆ ಧನ್ಯವಾದಗಳು ಸ್ವಾಮಿ,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading