ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದುಃಖದ ಕಡಲಲ್ಲಿ ಮುಳುಗಿದವರಿಗೆ ಹಾಯಿದೋಣಿ..

ಸುಧಾ ಆಡುಕಳ

**

ಹಿರಿಯ ಸಾಹಿತಿ ಗಿರಿಜಾ ಶಾಸ್ತ್ರಿ ಅವರ ಕವನ ಸಂಕಲನ ‘ಉರಿಯ ಉಯ್ಲು’.

ಈ ಕೃತಿಯ ಕುರಿತು ಪ್ರಸಿದ್ದ ಸಾಹಿತಿ ಸುಧಾ ಆಡುಕಳ ಅವರು ಬರೆದ ಬರಹ ಇಲ್ಲಿದೆ.

**

ಗಿರಿಜಾ ಶಾಸ್ತ್ರಿಯವರು ನನಗೆ ಪರಿಚಯವಾದದ್ದು ಅವರ ಅನುವಾದಿತ ಕೃತಿಯೊಂದರ ಮೂಲಕ. ಅವರು ಮರಾಠಿಯಿಂದ ಅನುವಾದಿಸಿದ ಪು.ಶಿ. ರೇಗೆಯವರ ‘ಸಾವಿತ್ರಿ’ ಎಂಬ ಪುಟ್ಟ ಕಾದಂಬರಿಯನ್ನು ಓದಿ ನಾನು ಮತ್ತು ಶ್ರೀಪಾದ ಭಟ್ ಅದನ್ನು ರಂಗಕ್ಕೆ ತರಲೇಬೇಕೆಂದು ತಹತಹಿಸುತ್ತಿದ್ದ ದಿನಗಳವು. ಅದರಲ್ಲಿ ಬರುವ ಅನೇಕ ವಿಷಯಗಳ ಬಗ್ಗೆ ನಿಖರತೆ ಪಡೆಯಲು ಒಂದೆರಡು ಬಾರಿ ಫೋನ್ ಸಂಭಾಷಣೆಯೂ ನಡೆಯಿತು. ಮತ್ತೆ ನನ್ನ ಪುಸ್ತಕ ‘ಗೀತಾಂಜಲಿ’ಯನ್ನು ಕಳಿಸಿದಾಗ ಅದರ ಬಗ್ಗೆ ಪ್ರೀತಿಯಿಂದ ದೀರ್ಘ ಟಿಪ್ಪಣಿಯನ್ನೂ ಬರೆದಿದ್ದರು.

ಕೊರೊನಾದ ಬಂಧನದಲ್ಲಿ ಒಮ್ಮೆ ಅವರ ಪೋಸ್ಟನಲ್ಲಿರುವ ಆತಂಕವನ್ನು ನೋಡಿ ಪೋನ್ ಮಾಡಿದ್ದೆ. ಯಾಕೋ ಆಗಲೇ ಸಾವಿನ ಬಗ್ಗೆ ಅವರು ಭಯಗೊಂಡಂತೆ ನನಗನಿಸಿತ್ತು. ಜೀವನವೆಂದರೆ ಹಾಗೇ ಅಲ್ಲವೆ? ರಕ್ತದ ಬಿಸಿಯಾರುವವರೆಗೆ ಎಲ್ಲವನ್ನೂ ಎದುರಿಸುವೆನೆಂಬ ಹುಂಬತನ, ಮತ್ತೆ ಎಲ್ಲದಕ್ಕೂ ಆತಂಕ. ಆದರೆ ಕೊರೊನಾ ಕಳೆದೊಡನೆ ಮೇಡಂ ಸಮಾಜದ ಒಡಕುಗಳಿಗೆ ಇಲಾಜು ಹುಡುಕುವಂತೆ ಅನೇಕರನ್ನು ಭೇಟಿಯಾಗಿ, ಮಾತನಾಡಿಸಿ ಎಷ್ಟೆಲ್ಲ ಪ್ರಬುದ್ಧ ಲೇಖನಗಳನ್ನು ಮೊಗಹೊತ್ತಿಗೆಯಲ್ಲಿ ಪ್ರಕಟಿಸಿದರು.

ಸಾವಿತ್ರಿ ಆನಂದಭಾವಿನಿಯಾಗಿ ರಂಗವೇರಿದಾಗ ಸಂಗಾತಿಯೊಂದಿಗೆ ಬಂದು, ನೋಡಿ ಖುಶಿಪಟ್ಟರು. ಹೀಗೆ ಸಾಗುತ್ತಿರುವ ವೇಳೆಯಲ್ಲಿ ಇದ್ದಕ್ಕಿದ್ದಂತೆ ಇಲ್ಲಿಂದ ಕಾಣೆಯಾದರು. ಯಾರು ಬಂದರೂ, ಹೋದರೂ ತಿಳಿಯದ ಮಾಯಕ ಜಗತ್ತು ಇದು. ಆದರೂ ಕೆಲವರ ಗೈರುಹಾಜರಿ ಗೊತ್ತಾಗುತ್ತದೆ. ಕಾದು, ಕಾದು ಒಂದಿನ ಮೆಸೇಜ್ ಮಾಡಿದೆ. ಮಗನ ಸಾವಿನ ಸುದ್ದಿ ತಿಳಿಸಿದರು. ಹೆಪ್ಪುಗೆಟ್ಟಿದಂತಾದೆ. ಇನ್ನೂ ಹರೆಯದ ಉತ್ತುಂಗದಲ್ಲಿರುವ ಮಗ, ಮಡಿಲಲ್ಲೊಂದು ಆಡುವ ಕೂಸು, ಹುಡುಗಾಟದ ಸುಖದ ವಯಸ್ಸು. ಹೇಗೆ ಸಮಾಧಾನಿಸುವುದು? ತಿಳಿಯದಾಯ್ತು. ನೀವು ಬರೆಯುತ್ತಿರಬೇಕು ಎಂದಷ್ಟೇ ಹೇಳಲು ಸಾಧ್ಯವಾಯ್ತು. ಆ ತಾಯಿ ಇದೀಗ ‘ಉರಿಯ ಉಯ್ಲನ್ನು’ ನಮ್ಮೆದುರು ಹಿಡಿದು ನಿಂತಿದ್ದಾರೆ. ಮುನ್ನುಡಿಯಲ್ಲಿ ಬರೆದ ಮುದುಕಿಯ ಕತೆಯನ್ನು ಓದಿಯೇ ಮರಗೆಟ್ಟು ಹೋಗಿರುವೆ. ಒಳಪುಟದಲ್ಲಿರುವ ೫೮ ಕವಿತೆಗಳಲ್ಲೂ ಚಂದ್ರಮತಿಯ ಮನದಾಳದ ಹುಯಿಲು. ಕರುಳ ಬಳ್ಳಿಯನ್ನು ತುಂಡರಿದ ಮೇಲೂ ಬೆಸೆದೇ ಇರುವ ಬಂಧದ ರೋದನವದು.

ಯಾರು, ಹೇಗೆ ಸಮಾಧಾನಿಸುವುದು? ಗಿರಿಜಾ ಮೇಡಂ ಅನುವಾದಿಸಿದ ಕಾದಂಬರಿಯ ನಾಯಕಿಯನ್ನು ಅವಳ ಗೆಳೆಯ ಕೇಳುತ್ತಾನೆ, “ಯಾಕೆ ನಿನಗೆ ಜಗತ್ತಿನಲ್ಲಿ ಒಳ್ಳೆಯವರೇ ಸಿಗುತ್ತಾರೆ? ಹೇಗೆ ನೀನು ಸದಾ ಆನಂದವಾಗಿರುವೆ?” ಅದಕ್ಕೆ ಅವಳು ನೀಡುವ ಉತ್ತರಗಳನ್ನು ಮೇಡಂ ಬಹಳ ಚೆನ್ನಾಗಿ ಬಲ್ಲರು. ಅವರ ಪತಿಯೇ ಹೇಳಿದಂತೆ ಒಂದು ಕ್ರೌಂಚದ ಸಾವು ವಾಲ್ಮೀಕಿಯಲ್ಲಿ ಇಡಿಯ ರಾಮಾಯಣದ ಪ್ರವಾಹವನ್ನು ಉಕ್ಕಿಸಿತು. ಅಕ್ಷರಗಳಿಗೆ ಸಾಂತ್ವನ ಶಕ್ತಿಯಿದೆಯೆಂಬುದನ್ನು ನಂಬುವ ಅಲ್ಪಸಂಖ್ಯಾತರು ನಾವು. ಅವರು ನಂಬಿದ ಅಕ್ಷರಗಳು ಅವರ ಬೇಗೆಗೆ ತಂಪೆರೆಯಲಿ, ವರ್ತಮಾನದಲ್ಲಿ ಮಾತ್ರ ಜೀವಿಸುವ ಸಾವಿತ್ರಿಯ ಸಿದ್ಧಿ ಅವರಿಗೆ ದಕ್ಕಲಿ. ಜತೆಯಲ್ಲಿ ಅವರನ್ನು ಪ್ರೀತಿಸುವ ಅನೇಕ ಜೀವಗಳಿವೆಯೆಂಬ ಸತ್ಯ ಸಾಂತ್ವನವಾಗಲಿ ಎಂದು ಹಾರೈಸುವೆ.

ಒಡಲ ಜೀವವನ್ನು ಧರೆಗಿತ್ತು ಕಣ್ಮುಚ್ಚಿದ ಕನ್ನಡ ಕಾವ್ಯಲೋಕದ ದ್ರುವತಾರೆ ವಿಭಾ ಬರೆದ ಕವಿತೆಗಳನ್ನು ಓದುವಾಗ, ಅವಳ ಕನವರಿಕೆಯಲ್ಲಿ ಕವಿತೆಯ ಕೈಹಿಡಿದ ಬಸೂ ಅವರು ಬರೆದ ಅಪೂರ್ಣದಹನ ಎಂಬ ಕವಿತೆಯನ್ನು ಓದುವಾಗಲೂ ಇದೇ ದುಗುಡದ ಮಹಾಪೂರ ತಿಂಗಳಾನುಗಟ್ಟಲೆ ಮನಸ್ಸನ್ನು ಕಾಡಿವೆ. ಹಾಗೆ ಕಾಡುವ ಕವಿತೆಗಳು ಇಲ್ಲಿವೆ. ಈ ಪ್ರಕಟಣೆ ದುಃಖವನ್ನು ನಗದೀಕರಿಸಿಕೊಳ್ಳುವ ಕ್ರಿಯೆಯಲ್ಲ, ಮುಂದೆಂದೋ ದುಃಖದ ಕಡಲಲ್ಲಿ ಮುಳುಗಿದವರಿಗೆ ಹಾಯಿದೋಣಿಯಾಗುವ ಸಾಧನವೂ ಹೌದು. ಯಾಕೆಂದರೆ ಕೆಲವು ಸಾವುಗಳು ನಮ್ಮ ಲೆಕ್ಕಾಚಾರಕ್ಕೆ ನಿಲುಕುವುದಿಲ್ಲ. ಕವಿತೆ, ಬರಹ, ಸಂದರ್ಶನ, ಸಾಂಗತ್ಯ ಅವರ ನೋವ ನೀಗಲಿ. ಈ ಸಂಕಲನ ಕನ್ನಡ ಕಾವ್ಯಲೋಕದಲ್ಲೊಂದು ಅಪರೂಪದ ದಾಖಲೆ.

‍ಲೇಖಕರು Admin MM

3 July, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading