
ಪಾರ್ವತಿ ಐತಾಳ್
ಜನರಲ್ಲಿ ಸ್ತ್ರೀಪರ ಚಿಂತನೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರೂಪಿಸಲಾದ ಏಕವ್ಯಕ್ತಿ ನಾಟಕ ‘ಹಕ್ಕಿ ಮತ್ತು ಅವಳು’ (ರಚನೆ ಪರಿಕಲ್ಪನೆ ಮತ್ತು ವಿನ್ಯಾಸ : ಡಾ.ಶ್ರೀಪಾದ ಭಟ್. ನಟನೆ : ಕಾವ್ಯಾ ಹಂದೆ. ಸಂಗೀತ : ಅನುಷ್ ಶೆಟ್ಟಿ ಮತ್ತು ಮುನ್ನಾ ಮೈಸೂರು, ಬೆಳಕು : ರಾಜು, ಮಣಿಪಾಲ. ಪ್ರಸ್ತುತಿ : ಸುವಿಕಾ ಕೋಟ). ಆಧುನಿಕ ಸಾಹಿತ್ಯ ಮತ್ತು ಪುರಾಣಗಳಿಂದ ಆಯ್ದ ಕೆಲವು ಪ್ರಸಂಗಗಳನ್ನು ಜೋಡಿಸಿ ನಿರ್ಮಿಸಿದ ಈ ನಾಟಕವು ಕಾವ್ಯಾ ಅವರ ಮನಮುಟ್ಟುವ ಪ್ರೌಢ ಅಭಿನಯದಿಂದಾಗಿ ಒಂದು ರೋಮಾಂಚನಗೊಳಿಸುವ ದೃಶ್ಯ ಕಾವ್ಯವಾಗಿ ಹೊರ ಹೊಮ್ಮಿತು.
ನಟಿ-ನಿರೂಪಕಿ ಮೊದಲು ಕಾಣಿಸಿಕೊಂಡು ಲಾಗಾಯ್ತಿನಿಂದ ಹೆಣ್ಣು ಮಕ್ಕಳು ತಮಗೆ ಅರಿವಿಲ್ಲದೆಯೇ ಶೋಷಣೆಗೆ ಒಳಗಾಗುತ್ತ ಮನೆಯೊಳಗೆ ಕಳೆದ ಕತ್ತಲು ದಿನಗಳ ಬಗ್ಗೆ ಮಾತನಾಡುತ್ತಾಳೆ. ಅರಮನೆಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರು ಇದಕ್ಕೆ ಹೊರತಲ್ಲ. ಪಿತೃಪ್ರಧಾನ ಸಮಾಜದಲ್ಲಿ ಜಗತ್ತಿನ ಎಲ್ಲೆಡೆ ಹೆಣ್ಣು ಒಂದಿಲ್ಲೊಂದು ರೀತಿಯಲ್ಲಿ ಶೋಷಿತಳೇ. ಅದಕ್ಕೆ ನೈಜೀರಿಯಾ ದ ಹೆಣ್ಣೊಬ್ಬಳು ತನಗೆ ಹುಟ್ಟುವ ಹೆಣ್ಣು ಮಗುವನ್ನು ಹೇಗೆ ಬೆಳೆಸಬೇಕು ಎಂಬ ಪ್ರಶ್ನೆಗೆ ಉತ್ತರವಾಗಿ ಎಲ್ಲಾ ದೃಷ್ಟಿಯಿಂದಲೂ ಸ್ವಾತಂತ್ರ್ಯ ಪಡೆಯುವ ಮತ್ತು ಈ ಜಗತ್ತಿನಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಶಕ್ತಿಗಳಾಗ. ಬಲ್ಲ ಒಬ್ಬ ಹೆಣ್ಣಿನ ಗುಣಗಳು ದೀರ್ಘ ಪಟ್ಟಿ ಹುಟ್ಟಿಕೊಳ್ಳುತ್ತದೆ. ಆದರೆ ಅಲ್ಲಿ ಸ್ತ್ರೀ ಪುರುಷರು ಸಮಾನ ನೆಲೆಯಲ್ಲಿ ಬದುಕುವ ಒಂದು ಜಗತ್ತು ಇದೆ.ಆದ್ದರಿಂದ .’ಎಲ್ಲ ಸ್ತ್ರೀಯರು ಸ್ತ್ರೀ ವಾದಿಗಳಲ್ಲ.ಮತ್ತು ಎಲ್ಲ ಪುರುಷರು ಸ್ತ್ರೀ ದ್ವೇಷಿಗಳಲ್ಲ’ ಎಂದು ಆಕೆ ಹೇಳುವಾಗ ಕಥನ ಒಂದು ಸಮನ್ವಯದೆಡೆಗೆ ಸಾಗುವ ಸೂಚನೆ ಸಿಗುತ್ತದೆ.

ಮುಂದೆ ಬರುವ ಸೀತೆಯ ಕರುಣ ಕಥೆ ಕಣ್ಣುಗಳನ್ನು ಒದ್ದೆಯಾಗಿಸುತ್ತದೆ. ಎಳೆಯ ಹುಡುಗಿಯಾಗಿದ್ದಾಗ ಬುದ್ಧಿವಂತಳೂ ಶಾರೀರಿಕ ಬಲವಿದ್ದವಳೂ ಆದ ಸೀತೆಯು ಪುರುಷ ಪ್ರಾಧಾನ್ಯದ ಮುಂದೆ ನಲುಗುವ ಪರಿಸ್ಥಿತಿ ಆಕೆಗೆ ಬಂತು. ರಾವಣರ ಅಟ್ಟಹಾಸದ ಮುಂದೆ ಆಕೆಗೆ ಈ ಭೂಮಿಯ ಮೇಲಿನ ಬದುಕೇ ಬೇಡವೆನ್ನಿಸಿತು. ಅದಕ್ಕೆ ಆಕೆ ತನ್ನ ಹುಟ್ಟಿನ ಮೂಲವನ್ನರಸಿ ಕೊಂಡು ಒಂಟಿಯಾಗಿ ಹೋಗುತ್ತಾಳೆ.
ಇತಿಹಾಸದ ಉದ್ದಕ್ಕೂ ಹೆಣ್ಣು ನಡೆದು ಬಂದ ದಾರಿಯೇ ಕಲ್ಲು ಮುಳ್ಳಿನದ್ದು. ಏನೇನೂ ಸೌಕರ್ಯವಿರದ ಹಳೆಯ ಕಾಲದ ಅಡುಗೆ ಮನೆಯೊಳಗೆ ಉಸಿರು ಬಿಗಿ ಹಿಡಿದು ಗಾಣದೆತ್ತಿನಂತೆ ಕೆಲಸ ಮಾಡುವ ಆಕೆಗೆ ಹೊರಗೆ ಏನಾಗುತ್ತಿದೆ ಅನ್ನುವುದನ್ನು ತಿಳಿಯುವುದಕ್ಕೆ ಕೂಡಾ ಅವಕಾಶವಿಲ್ಲ. ಇಡೀ ದಿನ ಹೊರಗಿನ ಶಬ್ದಗಳನ್ನು ಮಾತ್ರ ಅವಳು ಕೇಳುತ್ತಾಳೆ. ಹೊರಗೆ ಹೋಗಿ ಎಲ್ಲರೊಂದಿಗೆ ಸೇರಬೇಕು ಅನ್ನುವ ಆಸೆ ಆಕೆಗೆ ಇದೆ.ಆದರೆ ಅವಕಾಶವೆಲ್ಲಿ?
ಮುಂದೆ ನಟಿ ಎಲ್ಲ ಸೌಕರ್ಯಗಳಿರುವ ಆಧುನಿಕ ಅಡುಗೆ ಮನೆಗೆ ಬರುತ್ತಾಳೆ. ಅಲ್ಲಾದರೂ ಹೆಣ್ಣು ಸುಖವಾಗಿದ್ದಾಳೆಯೆ? ಆಕೆ ತಾನು ಸುಖಿ ಎಂಬ ಭ್ರಮೆಯಲ್ಲಿ ಅಷ್ಟೇ ಇದ್ದಾಳೆ. ಕಿಟಿಕಿಯ ಹೊರಗೆ ಹಾರಿ ಬಂದು ಕುಳಿತುಕೊಳ್ಳುವ ಹಕ್ಕಿಯನ್ನು ನೋಡಿದಾಗ ಅವಳ ಒಳ ಮನಸ್ಸು ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಆ ಹಕ್ಕಿ ಎಲ್ಲೆಲ್ಲಿ ಹೋಗುತ್ತದೆ, ಏನು ನೋಡುತ್ತದೆ, ಏನು ಮಾಡುತ್ತಿದೆ ಎಂದು ತಿಳಿಯುವ ಕುತೂಹಲ ಅವಳಿಗೆ. ಹಕ್ಕಿಯೊಂದಿಗೆ ಗೆಳೆತನ ಬೆಳೆಸಿ ಆಕೆ ಈ ಪ್ರಶ್ನೆಗಳನ್ನು ಕೇಳುತ್ತಾಳೆ. ತೆರೆದ ಬಯಲಲ್ಲೂ ಆಕಾಶದ ಹಾದಿಯಲ್ಲೂ ತಾನು ನೋಡಿದ ಸುಂದರ ದೃಶ್ಯಗಳನ್ನು ಹಕ್ಕಿ ವರ್ಣಿಸಿದಾಗ ತನಗೆ ಆ ಅವಕಾಶ ಇಲ್ಲವಲ್ಲಾ ಎಂದು ಆಕೆಗೆ ಕಳವಳವಾಗುತ್ತದೆ.

ಆದರೆ ಹಕ್ಕಿ ಅವಳನ್ನು ಜೊತೆಗೆ ಬಾ ಎಂದು ಕರೆದರೆ ಅವಳು ಹೋಗಲು ಒಲ್ಲಳು. ಯಾಕೆಂದರೆ ತಾನು ಪ್ರೀತಿಯ ಬಂಧನದಲ್ಲಿ ಇದ್ದೇನೆ ಎಂದು ಆಕೆ ಹೇಳುತ್ತಾಳೆ. ‘ಪ್ರೀತಿ ಎಂದೂ ಬಂಧನವಾಗಲಾರದು, ಬಂಧನವಾದರೆ ಅದು ಪ್ರೀತಿಯಲ್ಲ’ ಅನ್ನುತ್ತದೆ ಹಕ್ಕಿ. ಆದರೆ ಶತಶತಮಾನಗಳಿಂದ ದಾಸ್ಯವನ್ನು ರೂಢಿಸಿಕೊಂಡು ಬಂದು ಪರಂಪರೆಯನ್ನು ಕಟ್ಟಿದವಳಿಗೆ ಕರಾಳ ವಾಸ್ತವದ ಅರಿವೇ ಇಲ್ಲದಿರುವುದು ವಿಷಾದನೀಯ.
ದೇವರ ಮನೆಯಲ್ಲಿಯೂ ಅಷ್ಟೆ. ದೇವಿಯನ್ನು ಪ್ರತಿಷ್ಠಾಪಿಸಿ ಅಲಂಕರಿಸಿ ಪೂಜೆ ಮಾಡುತ್ತಾರಷ್ಟೆ ಹೊರತು ವ್ಯಾವಹಾರಿಕ ಬದುಕಿನಲ್ಲಿ ದೇವಿಯ ಪ್ರತಿರೂಪವಾದ ಹೆಣ್ಣಿನ ಜುಟ್ಟಿಗೆ ಕೈಯಿಕ್ಕಿ ಅಧಿಕಾರ ಚಲಾಯಿಸುವ ಪುರುಷ ಪ್ರಧಾನ ಸಮಾಜ.
ದಕ್ಷನ ಮಗಳು ದಾಕ್ಷಾಯಿಣಿಯ ಕಥೆಯೂ ಒಂದು ದುರಂತವೇ. ತಾನು ಅಪಾರವಾಗಿ ಪ್ರೀತಿಸುವ ತವರು ಮನೆಯಲ್ಲಿ ತನಗಾದ ಘೋರ ಅಪಮಾನವನ್ನು ಸಹಿಸಲಾಗದೆ ಬೆಂಕಿಗೆ ಹಾರಿ ಬದುಕಿಗೆ ವಿದಾಯ ಹೇಳುವ ಅವಳದ್ದು ಕರುಳಿರಿಯುವ ಕಥೆ. ಆದರೆ ಅವಳ ಛಲ ಎಷ್ಟಿದೆ ಅಂದರೆ ಅವಳು ಮತ್ತೆ ಗಿರಿರಾಜನ ಮಗಳಾಗಿ ಹುಟ್ಟಿ ಅರ್ಧನಾರೀಶ್ವರನ ಮಡದಿಯಾಗಿ ಹೆಣ್ಣಿನ ಬೆಲೆಯನ್ನು ಹೆಚ್ಚಿಸುತ್ತಾಳೆ. ಹೆಣ್ಣಿಗೊಂದು ಅಸ್ಮಿತೆಯನ್ನು ಸಮಾನತೆಯನ್ನೂ ದೊರಕಿಸಿ ಕೊಡುತ್ತಾಳೆ.
ಜಗತ್ತಿನ ಎಲ್ಲ ಸ್ತ್ರೀ -ಪುರುಷರೂ ದಾಂಪತ್ಯದಲ್ಲಿ ಅರ್ಧನಾರೀಶ್ವರರಾಗಬೇಕೆಂಬ ಸಂದೇಶದೊಂದಿಗೆ ನಾಟಕ ಕೊನೆಯ ಹಂತಕ್ಕೆ ಬರುತ್ತದೆ. ಎಲ್ಲ ಹೆಣ್ಣುಮಕ್ಕಳು ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿ ಅರ್ಥ ಮಾಡಿಕೊಂಡು ಅಸ್ಮಿತೆಯನ್ನು ಸ್ಥಾಪಿಸಿಕೊಳ್ಳುವ ದೃಢ ನಿರ್ಧಾರ ಮಾಡಿದ ಹೊರತು ಪರಿಸ್ಥಿತಿ ಬದಲಾಗಲಾರದು ಅನ್ನುತ್ತಾ ಪರದೆಯನ್ನು ಇಳಿಸುತ್ತದೆ. ಹೀಗೆ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಗೂ ಮನೆಯೊಳಗೆ ದಿಗ್ಬಂಧನಕ್ಕೆ ಒಳಗಾಗಿರುವ ಹೆಣ್ಣಿಗೂ ಇರುವ ಅಜಗಜಾಂತರವನ್ನು ಹೇಳುತ್ತಲೇ ಆ ಅಂತರವನ್ನು ನಿವಾರಿಸುವ ನಿಟ್ಟಿನಲ್ಲಿ ನಾವು ಮಾಡಬೇಕಾದ ಕರ್ತವ್ಯವನ್ನು ನೆನಪಿಸುತ್ತದೆ.

ಕಾವ್ಯಾ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆಯವರ ಮಗಳು. ಯಕ್ಷಗಾನದೊಂದಿಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಗಮಕ ಕಲೆಗಳನ್ನೂ ಚೆನ್ನಾಗಿ ಮೈಗೂಡಿಸಿಕೊಂಡಿರುವ ಇವರು ನಾಟಕದುದ್ದಕ್ಕೂ ಲೀಲಾಜಾಲವಾಗಿ ಅಭಿನಯಿಸಿದರು. ಹೇಳಿದಂತೆ ಬಾಗಿ ಬಳುಕುವ ಮೈ ಮತ್ತು ಅಂಗಾಂಗಗಳು, ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಮುಖಭಾವ ಮತ್ತು ಅಭಿನಯ, ಧ್ವನಿಯ ಸಮರ್ಥವಾದ ಏರಿಳಿತ ಮತ್ತು ಸಂಭಾಷಣೆಗಳ ನಿರ್ವಹಣೆಗಳು ನಾಟಕದ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾದವು.
ಸರಳವಾದ ರಂಗಸಜ್ಜಿಕೆಯಲ್ಲಿ ಮುಖ್ಯವಾಗಿ ಸಂದರ್ಭಕ್ಕೆ ಹೊಂದಿಕೊಳ್ಳುವ ಅರ್ಥಪೂರ್ಣ ಚಿತ್ರಗಳಿದ್ದವು. ಹೆಣ್ಣಿನ ಸ್ಥಿತಿಯನ್ನು ಮತ್ತೆ ಮತ್ತೆ ನೆನಪಿಸಲೆಂ ಬಂತೆ ಅಲೆ ಅಲೆಯಾಗಿ ಹಬ್ಬುವ ಮಂಜು ಮುಸುಕಿದ ವಾತಾವರಣವನ್ನು ಸೃಷ್ಟಿಸಲು ಹಿನ್ನೆಲೆಯಲ್ಲಿ ಪ್ರಯತ್ನ ನಡೆಯುತ್ತಿತ್ತು. ಪ್ರಖರವಾದ ಬೆಳಕನ್ನು ಇದೇ ಉದ್ದೇಶದಿಂದ ಎಲ್ಲೂ ಕೊಟ್ಟಿರಲಿಲ್ಲ. ನಟಿಯೊಂದಿಗೆ ಮಾತನಾಡುವ ಅಗತ್ಯ ಬಂದಾಗ ಹಿನ್ನೆಲೆಯಿಂದ ಮೂಡಿಬರುತ್ತಿದ್ದ ಧ್ವನಿಗಳು ಪರಿಣಾಮಕಾರಿಯಾಗಿದ್ದವು. ಇಂಪಾಗಿ ಮೂಡಿ ಬಂದ ಸಂಗೀತವು ನಾಟಕದ ಅರ್ಥಕ್ಕೆ ಪೂರಕವಾಗಿತ್ತು.






0 Comments