ಕಾವ್ಯಾ ಕಡಮೆ ಹೊಸ ಕಾದಂಬರಿ ‘ಮಿಥ್ಯಸುಖ’
ಜೀರುಂಡೆ ಪ್ರಕಾಶನದ ಈ ಕಾದಂಬರಿಯ ಒಂದು ಅಧ್ಯಾಯದ ಭಾಗ ಇಲ್ಲಿದೆ.
“ಅದ್ಹೇಗಮ್ಮಾ ಅಷ್ಟೆಲ್ಲ ಭಾಷೆ ಅರ್ಥ ಮಾಡಿಕೊಳ್ತೀ? ನಾನು ಬದುಕೆಲ್ಲಾ ಕಲಿತಿದ್ದೂ, ಮಾತಾಡಿದ್ದೂ ಇಂಗ್ಲೀಷ್ ಒಂದೇ ಆದರೂ ಅದರಲ್ಲೇ ಒಂದೊಂದು ಶಬ್ದ ತಿಳಿಯೋದಿಲ್ಲ ನಂಗೆ” ಅಂತ ಅಲವತ್ತುಕೋತಾಳೆ ಜ್ಯೂಲಿಯಾ.
ಅದಕ್ಕೆ ನಾನೆನ್ನುತ್ತೇನೆ- ಹುಚ್ಚೀ, ನನಗೆಲ್ಲಿ ಹತ್ತಾರು ಭಾಷೆ ಅರ್ಥವಾಗುತ್ತೆ? ನನಗೆ ತಿಳಿಯೋದು ಒಂದೇ ನುಡಿ. ಸರಿಯಾಗಿ ಹೇಳಬೇಕೆಂದರೆ ಒಂದೇ ನದಿಯ ಹತ್ತಾರು ಝರಿಗಳು ಇವೆಲ್ಲ.
‘ವೀ ನೋ’ ಸಂಸ್ಥೆಯಲ್ಲಿ ನನ್ನನ್ನು ನೇಮಕ ಮಾಡಿಕೊಂಡಿರುವುದೇ ದಕ್ಷಿಣ ಏಷ್ಯಾದ ಭಾಷೆಗಳೆಲ್ಲವನ್ನೂ ತಕ್ಕ ಮಟ್ಟಿಗೆ ಕಂಡು ಹಿಡಿಯುತ್ತೇನೆ, ಅರ್ಥಮಾಡಿಕೊಂಡು ಸಂವಹಿಸುತ್ತೇನೆ ಎಂಬುದಕ್ಕಾಗಿ.
“ನಮ್ಮನ್ನು ಸಂಪರ್ಕಿಸುವ ಹಲವು ಹೆಂಗಸರಿಗೆ ಇಂಗ್ಲೀಷ್ ಬರೋದಿಲ್ಲ. ಭಾರತದ ಉಪಖಂಡದಲ್ಲಿರೋ ಭಾಷೆಗಳ ಸಂಖ್ಯೆಯೇನು ಕಡಿಮೆಯೇ? ಹೀಗೆ ಮಾತನಾಡಲು ತಮ್ಮ ಥರದವರು ಅಂತ ಒಬ್ಬರಿದ್ದರೆ ಸಂತ್ರಸ್ತೆಯರಿಗೆ ನೋವನ್ನು ಹಂಚಿಕೊಳ್ಳುವುದು ಸುಲಭವಾಗುತ್ತದೆ” ಅಂದಿದ್ದಳು ಅಮ್ಯಾಂಡಾ ಸಂದರ್ಶನದ ದಿನ.
“ನ್ಯೂಯಾರ್ಕಿನಂಥ ನ್ಯೂಯಾರ್ಕಿನಲ್ಲೂ ಇಂಗ್ಲೀಷ್ ಬರದವರು ಇದ್ದಾರಾ?” ಅಂತ ಬೆರಗಾಗಿದ್ದೆ.
“ಓಹ್… ನೋಡುವಂತಿ ನೀನು” ಅಂತ ನಕ್ಕುಬಿಟ್ಟಿದ್ದಳು.
ಬಿ.ಎ ಓದುವಾಗ ಭಾಷಾಶಾಸ್ತ್ರವನ್ನು ಒಂದು ವಿಷಯವಾಗಿ ಬೇಕಂತಲೇ ಆರಿಸಿಕೊಂಡಿದ್ದಾಗಿರಲಿಲ್ಲ. ಪತ್ರಿಕೋದ್ಯಮದ ಜೊತೆ ಅದೊಂದೇ ಸಂಯೋಜನೆ ನಮ್ಮ ಕಾಲೇಜಿನಲ್ಲಿ ಉಪಲಬ್ಧವಿತ್ತು. ಪತ್ರಿಕೋದ್ಯಮ-ಭಾಷಾಶಾಸ್ತ್ರ-ಇಂಗ್ಲೀಷ್ ಸಾಹಿತ್ಯ. “ಬಾಯ್ ಒನ್ ಗೆಟ್ ಟೂ ಫ್ರೀ- ಅನ್ನೋ ಹಂಗ ಅದ ನೋಡು ಇದು” ಅಂತ ನಾವು ಜೆಎಲ್‍ಇ-ಲಿಟ್ ವಿದ್ಯಾರ್ಥಿನಿಯರೆಲ್ಲ ಖುಶಾಲು ಮಾಡಿಕೊಂಡು ನಕ್ಕಿದ್ದಿದೆ. ಜರ್ನಲಿಸಂ ಓದಿ ರಾಧಿಕಾ ರಾಣಿ ಥರ ಈಟೀವಿ ಕನ್ನಡನಾಡಿಯಲ್ಲಿ ನ್ಯೂಸು ಓದುವಂತಾಗಬೇಕು ಎಂಬುದು ನಮ್ಮೆಲ್ಲರಲ್ಲೂ ಆಗ ಸುಪ್ತವಾಗಿದ್ದ ಕನಸು. ಗ್ಯಾರೆಂಟಿ ಕೆಲಸ ಸಿಗುವ ಒಂದು ಸಬ್ಜೆಕ್ಟ್ ಜೊತೆ, ಯಾರೂ ತಿರುಗಿಯೂ ನೋಡದ ಎರಡು ವಿಷಯ- ಉಚಿತ, ಉಚಿತ.

ಭಾಷೆಯ ಬಗೆಗಿನ ಕೌತುಕ ಯಾರೂ ಹೇಳಿಕೊಟ್ಟು ಬರೋದಲ್ಲ. ಅದೊಂಥರಾ “ಸಾಹಿತ್ಯ ರಚಿಸೋದನ್ನ ಹೇಳಿಕೊಡ್ತೀವಿ ಬನ್ನಿ” ಅಂತ ಈ ವಿಶ್ವವಿದ್ಯಾಲಯಗಳು ಕ್ರಿಯೇಟಿವ್ ರೈಟಿಂಗ್ ಕೋರ್ಸುಗಳನ್ನು ಆಯೋಜಿಸ್ತವಲ್ಲ, ಹಾಗೆಯೇ ಹಾಸ್ಯಾಸ್ಪದ ಅಂತ ಒಮ್ಮೆ ಫೇಸ್‍ಬುಕ್ಕಿನಲ್ಲಿ ಕುಟ್ಟಿ ನಾನು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದೇನೆ. ಭಾಷಾಶಾಸ್ತ್ರದ ಅಧ್ಯಾಪಕರು ಗಂಭೀರ ಮುಖಮುದ್ರೆಯಲ್ಲಿ ಬಂದು ‘ಆರ್ಬಿಟ್ರರಿನೆಸ್ ಆಫ್ ಅ ಸೈನ್’ ಅಂತಲೂ, ‘ಡ್ಯುಯಾಲಿಟಿ ಆಫ್ ಪ್ಯಾಟರ್ನಿಂಗ್’ ಅಂತಲೂ ಶುರು ಮಾಡಿದಾಗ ನಾವು ಸ್ನೇಹಿತೆಯರೆಲ್ಲ ಬೆಂಚಿನ ಮೇಲೆಯೇ ನಿದ್ದೆ ಹೋಗಿಬಿಡುತ್ತಿದ್ದೆವು.
ಶಿಕ್ಷಣಶಾಸ್ತ್ರವೆಂಬೋ ಈ ಬೋಧನ ಕಲೆ ಧ್ವಂಸಗೊಳಿಸಿದಷ್ಟು ವಿದ್ಯಾಸಕ್ತಿಯನ್ನು ಪ್ರಪಂಚದ ಇನ್ನ್ಯಾವ ಮಾರ್ಗವೂ ಸಾಧಿಸಿ ತೋರಿಸಿಲ್ಲವೇನೋ. “ಸಬ್ಜೆಕ್ಟಿನ ಹೆಸರು ಕೇಳಿದರೇ ಜೀವ ಹೇಸಿದ ಅನುಭವವಾಗಬೇಕೇ? ದಯವಿಟ್ಟು ನಮ್ಮ ಭಾಷಾಶಾಸ್ತ್ರದ ತರಗತಿಯಲ್ಲಿ ಬಂದು ಕೂಡಿ” ಅಂತ ಬರೆದು ಕಾಲೇಜಿನ ನೋಟಿಸ್ ಬೋರ್ಡಿನ ಮೇಲೆ ಒಮ್ಮೆ ಅಂಟಿಸಿ ಬಂದಿದ್ದೆ.
ಒಂದು ಸಂಜೆ ಟ್ರೆವರ್‍ನ ಜೊತೆಯಲ್ಲಿ ಸೆಂಟ್ರಲ್ ಪಾರ್ಕಿನ ಸರೋವರದ ದಂಡೆಯ ಮೇಲೆ ನಿಂತು ರೋಯಿಂಗ್ ದೋಣಿಗಳನ್ನು ನೋಡುತ್ತ ಹೇಳಿದ್ದು ನೆನಪಿದೆ. “ಟ್ರೆವರ್, ಭಾಷೆಯನ್ನ ನಮಗೆ ಆ ದೋಣಿಯ ಹಾಗೆ ಕಾಣಿಸಿರ್ತಾರೆ ನೋಡು ಪಾಠ ಹೇಳಿಕೊಟ್ಟೋರು. ಆಗ ಆ ದೋಣಿಯ ಮೇಲಿರೋ ಕಪ್ಪು-ಕಂದು ಪಟ್ಟಿ, ನಡುವೆ ಎಳೆದಿರೋ ಆ ಗೆರೆ, ಅದರ ಮೇಲೆ ಬರೆದಿರೋ ಕಂಪನಿಯ ಹೆಸರು ಎಲ್ಲವೂ ಮುಖ್ಯವಾಗಿಬಿಡುತ್ತೆ. ಅವಿಲ್ಲ ಅಂದರೆ ಕಕ್ಕಾಬಿಕ್ಕಿ ಆಗೋ ಹಾಗೆ ಆಗಿಬಿಡುತ್ತೆ. ಆದ್ರೆ ನೋಡಲ್ಲಿ, ಭಾಷೆಯನ್ನ ದೋಣಿಯ ಹಾಗೆ ಕಾಣೋದಲ್ಲ. ಅದನ್ನ ಸುತ್ತುವರೆದ ನೀರಿನ ಹಾಗೆ ಕಾಣಬೇಕು. ಆಗ ನಾವು ಯಾವ ನುಡಿಗೂ ಹೆದರಬೇಕಾಗೇ ಇಲ್ಲ ಅಲ್ಲ?” ಅಂತ ಕೇಳಿದ್ದೆ.
ಟ್ರೆವರ್ ಅಂದು ಕಂದು ಬಣ್ಣದ ಫಾರ್ಮಲ್ ಶರ್ಟಿನ ಮೇಲಿದ್ದ. ಸ್ನೇಹಿತೆಯೊಬ್ಬಳ ಮದುವೆ ಪಾರ್ಟಿಗೆ ಹೋಗಿದ್ದನಂತೆ. ಇಸ್ತ್ರಿ ಹಾಕಿದ ಶರ್ಟಿಗೆ ಒಪ್ಪೋ ಹಾಗಿದ್ದ ಕೆಂಪು ಗುಂಡಿಗಳು, ಕಿಸೆಯಲ್ಲೊಂದು ಕೆಂಪು ಪೆನ್. ನೀಲಿ ಜೀನ್ಸ್. ನೀಟಾಗಿ ಶೇವ್ ಮಾಡಿದ ಥಳಥಳ ಹೊಳೆಯೋ ಕೆನ್ನೆ. ನಾನು ಮಾತನಾಡುವಾಗ ಹಣೆಯ ಮೇಲೆ ಒಂದು ಕೈಯಿಟ್ಟೇ ಕೇಳಿಸಿಕೊಳ್ಳುತ್ತಿದ್ದ.
“ಏನೋ ನೀನು ನೈಟ್ ಜರ್ನಿ ಮಾಡಿ ಬಂದಿರೋರ ಥರ?” ಅಂತ ಕಿಚಾಯಿಸಿದೆ.
“ಹೂಂ. ನನ್ನ ಮಾತೃಭಾಷೆ ಇಂಗ್ಲೀಷು, ನಿನ್ನದು ಕನ್ನಡ ಅಂದಮಾತ್ರಕ್ಕೆ ನಾವು ಎದೆ ತಟ್ಟಿಕೊಂಡು ನಮ್ಮ ಭಾಷೆಯೊಂದಾದ್ರೂ ನಮಗೆ ಸಂಪೂರ್ಣ ಗೊತ್ತಿದೆ ಅಂತ ಹೇಳೋಕಾಗುತ್ತಾ? ಎಷ್ಟೋ ಬಗೆಯ ಕನ್ನಡಗಳೂ, ಇಂಗ್ಲೀಷುಗಳೂ ಇವೆಯಲ್ಲ. ಹಾಗೆ ನೋಡಿದ್ರೆ ನಾವು ಯಾವ ಭಾಷೆಯವರೂ ಅಲ್ಲ…”
“ಇನ್ನೊಂದು ವ್ಯಾಖ್ಯಾನವಿದೆ. ಹೀಗೆ ನೋಡಿದ್ರೆ ನಾವು ಎಲ್ಲ ಭಾಷೆಯವರೂ ಹೌದು” ಅಂತ ಅವನ ವಾಕ್ಯವನ್ನು ಪೂರ್ಣಗೊಳಿಸಿದೆ. “ಬೇರೆಲ್ಲ ಅಹಂಕಾರಗಳ ಜೊತೆಗೆ ಭಾಷೆಯ ಅಹಂಕಾರವೂ ಜಬರದಸ್ತಾಗೇ ಇರತದೆ ನೋಡು ನಮಗೆ” ಅಂತ ಅದೆಷ್ಟೋ ಹೊತ್ತಿನ ಮೇಲೆ ನುಡಿದಿದ್ದ.
ಭಾಷೆಯೆಂಬುದು ಘನ ರೂಪದಲ್ಲಿರದೇ, ದ್ರವ ರೂಪದಲ್ಲಿದೆ ಎಂಬುದು ಮನವರಿಕೆಯಾದಾಗ ಲೋಕಕ್ಕೆಲ್ಲ ಇರುವುದು ಒಂದೇ ನುಡಿ ಎಂಬುದು ಗೋಚರವಾಗುತ್ತದೆ. ಅಲ್ಲಿ ಅಮಾನಾಳ ರೊಹಿಂಗಾಕ್ಕೆ ನನ್ನ ಕನ್ನಡ ಉತ್ತರವಾಗುತ್ತದೆ. ಮತ್ತು ಅಲ್ಲೆಲ್ಲೋ ಇರುವ ಸುಧಾ ಎಂಬ ಹೆಸರಿನ ಈತನ್ಯಾರೋ ಅಪರಿಚಿತ, ತನ್ನ ಕವಿತೆಯಲ್ಲಿ ಹಿಡಿದಿಟ್ಟ ಕ್ಷಣಗಳಿಂದ ನನ್ನ ಕಿವಿಯಲ್ಲಿ ನನ್ನೂರ ಪಿಕಳಾರಗಳ ಚಿಲಿಪಿಲಿ ಮಾರ್ದನಿಸುತ್ತದೆ.






0 Comments