
ಕೆಲವಾರು ತಿಂಗಳಿಂದ ಬರೀ ರಾಜಕಾರಣದ ವ್ಯರ್ಥ ಅಬ್ಬರ, ಭರಾಟೆಯೆ ಆಯಿತು. ಪ್ರಜಾಸತ್ತೆಯ ಮೂಲ ಪರಿಕಲ್ಪನೆಯೇ ಮರೆತು ದ್ವೇಷ, ಕೋಮು ದಳ್ಳುರಿಗೆ ಪ್ರೇರೇಪಿಸುವ ರಾಜಕಾರಣ.
ಇಂಥ ಗೌಜು, ಗದ್ದಲದಲ್ಲಿ ಅಭಿವೃದ್ದಿ, ಜನರ ಹಿತಾಸಕ್ತಿಗಳೇ ಮರೆತು ಹೋಗುವಷ್ಟು ರಾದ್ದಾಂತ. ಈ ರಂಪದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಹತ್ವದ ವಿಚಾರ ಮುಖ್ಯ ನೆಲೆಗೆ ಬರದೆ ಕೇವಲ ”ಅಂದಿನ ಒಂದು ಸುದ್ದಿಯಾಗಿ“ ಮರೆಯಾಗುವ ಪರಿಸ್ಥಿತಿ ಬಂತಲ್ಲ ಎನ್ನುವ ಬೇಸರದಿಂದ ಇದನ್ನು ಬರೆಯುತ್ತಿದ್ದೇನೆ.
ಈ ವಿಚಾರ ಬೇರೆ ಯಾವುದೂ ಅಲ್ಲ ಕಾವೇರಿ ನದಿ ನೀರಿನ ಹಂಚಿಕೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು, ರಾಜ್ಯದಲ್ಲಿ ಬಿಜೆಪಿ ಚಾರಿತ್ರಿಕ ಜಯ ಸಾಧಿಸಿದ ಕೇವಲ ಐದು ದಿನಗಳ ಬಳಿಕ ಅಂದರೆ ಮೇ 28 ರಂದು ಪ್ರಕಟಗೊಂಡ ಈ ಆದೇಶ ಮತ್ತೊಮ್ಮೆ ರಾಜ್ಯದ ಕಾವೇರಿ ಕೊಳ್ಳದ ಜನರಿಗೆ ಮರ್ಮಾಘಾತ ನೀಡುವಷ್ಟು ಪ್ರಖರವಾಗಿದೆ ಆದರೂ , ರಾಜಕೀಯದ ವಿಜೃಂಬಣೆಯ ಮುಂದೆ ಇದು ಮರೆಯಾಗಿಬಿಟ್ಟಿತು.
ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಅನುಸಾರ, ರಾಜ್ಯದಿಂದ ತಮಿಳುನಾಡಿಗೆ 9.19 ಟಿ ಎಂ ಸಿ ಗಳಷ್ಟು ಭಾರಿ ಪ್ರಮಾಣದ ನೀರನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕಟ್ಟಾಜ್ಞೆ ನೀಡಿದ್ದು, ಭಾರಿ ಪ್ರತಿಭಟನೆಯ ಕಿಚ್ಚು ಹೊತ್ತಿಸಬೇಕಿದ್ದ ಇಂಥದ್ದೊಂದು ಮಹತ್ವದ ಆದೇಶ ರಾಜಕೀಯ ಸಮೂಹ ಸನ್ನಿಯ ಮುಂದೆ ಮಂಕಾದದ್ದು ಆಚ್ಚರಿಗೂ ಕಾರಣವಾಗಿದೆ.
ಅಷ್ಟೇ ಅಲ್ಲ ಜನಸಾಮಾನ್ಯರ ಆಲೋಚನೆ ರೀತಿ ರಿವಾಜು, ಆದ್ಯತೆಗಳು ಬದಲಾಗುತ್ತಿವೆಯೆ ಎಂಬ ಅನುಮಾನಕ್ಕೂ ಇದು ಕಾರಣವಾಯಿತು.
ಒಂದು ರೀತಿಯ ಶೂನ್ಯ ಸ್ಥಿತಿಯಲ್ಲಿ ಇದನ್ನು ದಾಖಲಿಸುತ್ತಿದ್ದೇನೆ. ದೂರದ ದಿಲ್ಲಿ ದರ್ಬಾರಿನ ಹುಚ್ಚಾಟಗಳಲ್ಲಿ ರಾಜ್ಯದ ಪರ ಗಟ್ಟಿ ಧ್ವನಿಯಲ್ಲಿ ಹೋರಾಟ ನಡೆಸಲು ಅಲ್ಲಿ ”ನಮ್ಮ ಹೆಮ್ಮೆಯ “ ದೇವೆಗೌಡರು ಇಲ್ಲ. ಆಡಳಿತ ಪಕ್ಷಕ್ಕೆ ದಬಾಯಿಸಿ ಕೆಲಸ ಮಾಡಿಸಿಕೊಳ್ಳಲು “ನಮ್ಮವರೇ ಆದ ಧೀಮಂತ ನಾಯಕ “ ಮಲ್ಲಿಕಾರ್ಜುನ ಖರ್ಗೆ ಇಲ್ಲ.
ನೀರು ಬಿಡಿ ಎಂದು ಕೇಂದ್ರದ ಪ್ರಾಧಿಕಾರ ಆದೇಶ ನೀಡಿದ್ದರೂ ಈವರೆಗೂ ತಮಗೂ ಅದಕ್ಕೂ ಸಂಬಂಧವೇ ಇಲ್ಲವೇ ಇಲ್ಲ ಎಂಬಂತೆ ತುಟಿಕ್ ಪಿಟಿಕ್ ಅನ್ನದ ನಮ್ಮ 25 ಬಿಜೆಪಿ ಸಂಸದರನ್ನು ಹೇಗೆ ನಂಬುವುದು ಎನ್ನುವ ಪ್ರಶ್ನೆ.
ಹೀಗಾಗಿ ನೇರವಾಗಿ ರಾಜ್ಯದ ಜಲ ಸಂಪನ್ಮೂಲ ಮಂತ್ರಿ ಡಿ. ಕೆ. ಶಿವಕುಮಾರ್ ಅವರ ಹೊಣೆಗಾರಿಕೆ ಬಿಟ್ಟರೆ ಗತಿ ಇಲ್ಲ ಎಂಬಂತಹ ಧಾರುಣ ಪರಿಸ್ಥಿತಿ ರಾಜ್ಯದ್ದು. ಯಾರು ಪ್ರತಿಭಟನೆ ಮಾಡಲಿ ಬಿಡಲಿ, ದಿಲ್ಲಿಯಲ್ಲಿ ಯಾರು ಇರಲಿ ಬಿಡಲಿ ರಾಜ್ಯದ ಪರ ಹೋರಾಟ ನಡೆಸಿ, ಹಿತಾಸಕ್ತಿ ರಕ್ಷಿಸಲೇಬೇಕಾದ ಒತ್ತಡ ಜಲ ಸಂಪನ್ಮೂಲ ಸಚಿವರ ಮೇಲಿದೆ.
ಇದೊಂದು ಸಾಧಾರಣ ಸನ್ನಿವೇಶ ಎಂದು ಯಾರೂ ಭಾವಿಸಬಾರದು. ರಾಜ್ಯದ ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ ನೋಡಿದರೆ ಇದರ ಗಂಭೀರತೆ ಅರ್ಥವಾಗುತ್ತದೆ.
ನಾಲ್ಕೂ ಜಲಾಶಯಗಳಲ್ಲಿ ಲಭ್ಯವಿರುವ ಒಟ್ಟು ನೀರಿನ ಪ್ರಮಾಣ 14.14 ಟಿ ಎಂ. ಸಿ. ದಾಟುವುದಿಲ್ಲ.
ಕೆ.ಆರ್.ಎಸ್ ನ ಒಟ್ಟು ಸಾಮರ್ಥ್ಯ 45.05 ಟಿ ಎಂ ಸಿ ಇದ್ದರೆ ಲಭ್ಯವಿರುವ ನೀರು ಬರೀ 6.97 ಟಿ ಎಂ ಸಿ, 15.67 ಟಿ. ಎಂ.ಸಿ. ಸಾಮರ್ಥ್ಯದ ಕಬಿನಿಯಲ್ಲಿ 2.99 ಟಿ ಎಂ ಸಿ , 35.76 ಟಿ ಎಂ ಸಿ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ 5. 51 ಟಿ ಎಂ ಸಿ, ಮತ್ತು ಬರೀ 8.07 ಸಾಮರ್ಥ್ಯ ದ ಹಾರಂಗಿಯಲ್ಲಿ 1.44 ಟಿ ಎಂ ಸಿ ನೀರಿದೆ.
ಇರುವ 14 ಟಿ ಎಂ ಸಿ ನೀರಲ್ಲಿ , ಅದೂ ಮಳೆ ಇಲ್ಲದ ಬರಗಾಲದಲ್ಲಿ ಒಂದೇ ತಿಂಗಳಿಗೆ 9 ಟಿ ಎಂ ಸಿ ನೀರು ತಮಿಳುನಾಡಿಗೆ ಬಿಟ್ಟರೆ ರಾಜ್ಯದ ಗತಿ ಏನು? ರೈತರ ಪಾಡೇನು?
ಕೃಷಿ ಮಾತು ಹಾಗಿರಲಿ, ಕುಡಿಯಲೂ ಕೂಡಾ ನೀರಿಲ್ಲದೆ ಜನ ಜಾನುವಾರು ಏನು ಮಾಡಬೇಕು? ಮುಂದೆ ಕಾಲಕಾಲಕ್ಕೆ ಮಳೆ ಸರಿಯಾಗಿ ಬಂದೆ ಬರುತ್ತದೆ ಎನ್ನುವುದಕ್ಕೆ ಏನು ಗ್ಯಾರಂಟಿ? ಇದು ರಾಜ್ಯದ ಕಾವೇರಿ ಕೊಳ್ಳದ ದೈನೇಸಿ ಪರಿಸ್ಥಿತಿ.
ಬೆಂಗಳೂರು, ಮೈಸೂರು ಸೇರಿ ಸರಿ ಸುಮಾರು 50 ಪಟ್ಟಣ , 632 ಕ್ಕೂ ಹೆಚ್ಚು ಹಳ್ಳಿಗಳಿಗೆ ಈ ಕೆ ಅರ್ ಎಸ್ ನಿಂದ ನೀರು ಸರಬರಾಜು ಮಾಡಬೇಕು. ಈ ಕುಡಿಯುವ ಉದ್ದೇಶದ ನೀರಿನ ಪ್ರಮಾಣವೇ ತಿಂಗಳಿಗೆ ಸುಮಾರು 4.5 ರಿಂದ 5 ಟಿ ಎಂ ಸಿ ಆಗುತ್ತೆ. ಅಂದ್ರೆ ಬರೀ ಒಂದು ತಿಂಗಳು ಕುಡಿಯಲು ಬೇಕಾದಷ್ಟು ನೀರು ಮಾತ್ರ ಇಲ್ಲಿದೆ. ಇನ್ನು ಬರೋಬ್ಬರಿ ಒಂಬತ್ತು ಟಿ ಎಂ.ಸಿ ಬಿಡುವುದು ಎಲ್ಲಿಂದ?
ಇಲ್ಲಿ ಒಂದು ಮುಖ್ಯ ಅಂಶ ದಾಖಲಾರ್ಹ.
ಈವರೆಗಿನ ಕಾವೇರಿ ಹೋರಾಟ ಅಥವಾ ನ್ಯಾಯಾಂಗ ಕದನ ಒಂದು ಭಾಗ ಆದರೆ, ಮುಂದುವರೆದ ಮತ್ತೊಂದು ಘಟ್ಟದಲ್ಲಿ ನಾವಿದ್ದೇವೆ. ಅಂದರೆ ಜಲ ಸಂಕಷ್ಟ ಸೂತ್ರದ ರಚನೆಯೇ ಈ ಮಹತ್ವದ ಘಟ್ಟ.
ಕಾವೇರಿ ನ್ಯಾಯಾಧಿಕರಣದ ಆದೇಶದಲ್ಲಿ ಇಲ್ಲವೇ ಸುಪ್ರೀಂಕೋರ್ಟ್ ಆದೇಶದಲ್ಲಿ ಜಲ ಸಂಕಷ್ಟ ಸೂತ್ರದ ಪ್ರಸ್ತಾಪ ಇದೆಯೇ ಹೊರತು ಅದರ ವೈಜ್ಞಾನಿಕ ರಚನೆಯ ರೂಪುರೇಷೆ, ಮಾನದಂಡ ಇಲ್ಲ.
ಈವರೆಗೆ ಕಾವೇರಿ ಕೊಳ್ಳದ ರಾಜ್ಯಗಳು, ಅದರಲ್ಲಿ ಪ್ರಮುಖವಾಗಿ ಕರ್ನಾಟಕ ಬಲವಾಗಿ ಜಲ ಸಂಕಷ್ಟ ಸೂತ್ರದ ಬಗ್ಗೆ ಮಾತನಾಡುತ್ತ ಬಂದಿದೆಯೇ ಹೊರತು, ಈ ಸೂತ್ರದ ಜಾರಿಗಾಗಿ ಗಂಭೀರ ಚರ್ಚೆ ಆಡಳಿತಾತ್ಮಕವಾಗಿ ನಡೆದಿಲ್ಲ. ಕೇಂದ್ರದ ಮಟ್ಟದಲ್ಲಿ, ಇಲ್ಲವೇ ಪ್ರಾಧಿಕಾರದ ಅಥವಾ ನಿಯಂತ್ರಣ ಸಮಿತಿಯ ಮಟ್ಟದಲ್ಲಿ ಜಲ ಸಂಕಷ್ಟ ಸೂತ್ರ ಪ್ರಸ್ತಾಪಕ್ಕೆ ಬಂದಿಲ್ಲ.
ಆಯಾ ಸಂದರ್ಭಕ್ಕೆ ಅನುಗುಣವಾಗಿ ಕೆಲವೊಮ್ಮೆ ಒತ್ತಡದಿಂದ, ಮತ್ತೆ ಕೆಲವೊಮ್ಮೆ ರಾಜೀ ಕಬೂಲಿಯಿಂದ ನೀರು ಹಂಚಿಕೆ ಆಗಿದೆಯೇ ಹೊರತು ಅದಕ್ಕೆ ಆಧಾರ ಏನು ಇಲ್ಲ. ಜಲ ಸಂಕಷ್ಟ ಸೂತ್ರ ರಚನೆಯ ಪ್ರತಿಪಾದನೆಗೆ ಪ್ರತ್ಯೇಕ ಸರ್ವ ಪಕ್ಷಗಳ ನಾಯಕರ ಸಭೆಗಳೆ ನಡೆದಿಲ್ಲ. ಆದ್ದರಿಂದಲೇ ವೈಜ್ಞಾನಿಕವಾಗಿ ಜಲ ಸಂಕಷ್ಟ ಸೂತ್ರ ರೂಪಿಸಿ, ನೀರು ಹಂಚಿಕೆ ಸಮಸ್ಯೆಯನ್ನು ಸಮರ್ಪಕವಾಗಿ ಬಗೆ ಹರಿಸಲು ಇಡೀ ಸಕಾಲ.
ಇದೂ ಕಾವೇರಿ ನೀರು ವಿವಾದ ಇತ್ಯರ್ಥದ ಮತ್ತೊಂದು ಚಾರಿತ್ರಿಕ ಘಟ್ಟವಾಗಿದೆ. ಇದನ್ನು ತನ್ನ ಚಾಣಾಕ್ಷತೆ ಯಿಂದ ರಾಜ್ಯಕ್ಕೆ ಅನ್ಯಾಯ ಆಗದಂತೆ ಕೇಂದ್ರದ ಮೇಲೆ ಒತ್ತಡ ಹೇರಿ ಬಗೆ ಹರಿಸುವ ಮಹತ್ತರ ಜವಾಬ್ದಾರಿ ಇದೀಗ ಮಂತ್ರಿ ಶಿವಕುಮಾರ್ ಮೇಲಿದೆ.
ಇಲ್ಲಿಯವರೆಗೆ ರಾಜಕೀಯ ಜಟಿಲ ಪರಿಸ್ಥಿತಿ ಬಂದಾಗ ತನ್ನ ಜಾಣ್ಮೆ ಮೂಲಕ ಅದನ್ನು ಬಗೆಹರಿಸುವ ಬುದ್ದಿವಂತಿಕೆ ತೋರುತ್ತಿದ್ದ ಡಿಕೆಶಿ, ಇದೀಗ ಕಾವೇರಿ ವಿಚಾರದಲ್ಲೂ ಅಂತಹ ಬದ್ಧತೆಯನ್ನು ತೋರುವ ಮೂಲಕ “ಟ್ರಬಲ್ ಷೂಟರ್ “ ಶಕ್ತಿಯನ್ನು ಇನ್ನೊಮ್ಮೆ ವಿಭಿನ್ನ ರೀತಿಯಲ್ಲಿ ತೋರುವ ಕಾಲ ಬಂದಿದೆ.
ಆಯಾ ಕಾಲಘಟ್ಟದಲ್ಲಿ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಕಾವೇರಿ ನ್ಯಾಯಾಧಿಕರಣದ ಆದೇಶ ಪ್ರಮಾಣ, ನೀರಿನ ಕೊರತೆ, ಮಳೆ ನೀರಿನ ಅಸ್ಥಿರತೆ, ಬಳಕೆಯ ಅಗತ್ಯತೆ ಎಲ್ಲವನ್ನೂ ಶೇಕಡಾವಾರು ಪ್ರಮಾಣದಲ್ಲಿ ಕೊರತೆಯನ್ನೂ ಪರಿಗಣಿಸಿ, ಪ್ರಾಧಿಕಾರದ ಆದೇಶ ಪಕ್ಕಕ್ಕಿಟ್ಟು, ನೀರು ಹಂಚಿಕೆಯ ಸೂತ್ರ ಇಂದಿನ ತುರ್ತು ಅಗತ್ಯ. ಇದೊಂದು ಚಾರಿತ್ರಿಕ ಕೆಲಸವೂ ಹೌದು.
ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪಾಂಡಿಚೇರಿ ನಾಲ್ಕು ರಾಜ್ಯಗಳು, ಕೇಂದ್ರದ ಸಮ್ಮುಖದಲ್ಲಿ ಕುಳಿತು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರೂಪಿಸಬೇಕಾದ ಸೂತ್ರ. ಇದು ಸಚಿವರ ಮೇಲಿರುವ ಒಂದು ಜವಾಬ್ದಾರಿಯಾಗಿದ್ದು, ಇದರಲ್ಲಿ ಶಿವಕುಮಾರ್ ಯಶಸ್ಸು ಕಂಡರೆ ಅದೊಂದು ದಾಖಲೆಯೇ.
ಈ ಜವಾಬ್ದಾರಿಯ ಬಗ್ಗೆ ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಇನ್ನಷ್ಟು ಖಚಿತತೆ ಜೊತೆ ಹೇಳುತ್ತಾರೆ. ನೀರಾವರಿ ಕಾನೂನು ಸಮರದಲ್ಲಿ ರಾಜ್ಯಕ್ಕೆ ರಾಜಾರಾವ್ ನೀಡಿರುವ ಕೊಡುಗೆ ಅಭೂತಪೂರ್ವ. ಅವರು ಈ ವಿವಾದದ ಮತ್ತೊಂದು ಮುಖವನ್ನು ತೆರೆದಿದುತ್ತಾರೆ.
‘ತಮಿಳುನಾಡಿಗೆ ನೀರು ಬಿಡುವುದರ ಬಗ್ಗೆ ಮಾತ್ರ ಎಲ್ಲರೂ ಮಾತನಾಡುತ್ತಾರೆ. ನ್ಯಾಯಾಧಿಕರಣದ ರೀತಿ ಅದು ಸರಿ. ಆದರೆ ಅದೇ ನ್ಯಾಯಾಧಿಕರಣದ ಆದೇಶದಲ್ಲಿ ಕರ್ನಾಟಕದ ಹಕ್ಕಿನ ಬಗ್ಗೆಯೂ ಪ್ರಸ್ತಾಪವಿದೆ. ನಮ್ಮ ಹಕ್ಕಿನ ನೀರು ಬಳಕೆಯ ಬಗ್ಗೆಯೂ ಪ್ರಾಧಿಕಾರದ ಮುಂದೆ ಬಲವಾಗಿ ವಾದ ಮಂಡಿಸಬೇಕು. ಈ ಬಗ್ಗೆ ಯಾರೂ ಸಮರ್ಪಕವಾಗಿ ಮಾತನಾಡುವುದಿಲ್ಲ ಏಕೆ ” ಎನ್ನುತ್ತಾರೆ ರಾಜಾರಾವ್.
ಜೂನ್ ತಿಂಗಳಲ್ಲಿ ಮೂರು ಕಂತುಗಳಲ್ಲಿ 9.19 ಟಿ ಎಂ.ಸಿ ನೀರು ಬಿಡುಗಡೆಗೆ ಪ್ರಾಧಿಕಾರ ಆದೇಶ ನೀಡಿದ್ದು ,.ಈ ಪ್ರಾಧಿಕಾರಕ್ಕೆ ಬರೀ ಕರ್ನಾಟಕದ ಮೇಲೆ ನಿಗಾ ಇಡುವುದು ಅಷ್ಟೆ ಅಲ್ಲ ಎನ್ನುವುದನ್ನು ರಾಜ್ಯ ಸರ್ಕಾರ ಮುಲಾಜಿಲ್ಲದೆ ಹೇಳಬೇಕು.
ತಮಿಳುನಾಡಿನ ನೀರು ಬಳಕೆ ವಿಧಾನ, ಪದ್ಧತಿ, ಬೆಳೆಗಳ ವಿವರವನ್ನು ಈ ಪ್ರಾಧಿಕಾರ ಪಡೆಯಲಿ. ತಮಿಳುನಾಡಿಗೂ ನಿರ್ಬಂಧ ವಿಧಿಸಲಿ. ಬೆಳೆಗಳ ಮೇಲೆ ಲಗಾಮು ಹಾಕಲಿ ಎನ್ನುವುದೇ ಇಲ್ಲಿಯ ಮುಖ್ಯ ಆಗ್ರಹ.
ಇದೇ ಮೊದಲ ಬಾರಿಗೆ ಜಲ ಸಂಪನ್ಮೂಲ ಖಾತೆಯ ಹೊಣೆ ಹೊತ್ತಿರುವ ಡಿಕೆ ಶಿವಕುಮಾರ್ ಈ ಬಗ್ಗೆ ತಕ್ಷಣ ಅಧಿಕಾರಿಗಳಿಗೆ ಸ್ಪಷ್ಟ ತಾಕೀತು ಮಾಡಲಿ.
ಮಳೆ ಇರಲಿ ಬಿಡಲಿ ಕಿಂಚಿತ್ತೂ ಹಿಂದೆ ಮುಂದೆ ನೋಡದೇ ತಮಿಳುನಾಡು ಮೂರು ಭತ್ತದ ಬೆಳೆ ಬೆಳೆಯುತ್ತದೆ.
ಕುರುವೈ, ಸಾಂಬಾ ….ಹೀಗೆ ವಿವೇಚನೆ, ದೂರದೃಷ್ಟಿ ಇಲ್ಲದೆ ಬೆಳೆದು, ನಂತರ ನೀರಿಗಾಗಿ ಜಗಳಕ್ಕೆ ನಿಲ್ಲುವ ಮನಸ್ಥಿತಿಗೆ ಲಗಾಮು ಹಾಕುವುದು ಯಾವಾಗ?
ಕರ್ನಾಟಕ ಸರಕಾರವಂತೂ ಬೇಸಿಗೆ ಕಾಲಕ್ಕೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಉದ್ದೇಶಕ್ಕೆ ನೀರು ಬಿಡಲ್ಲ ಎಂದು ಅಧಿಕೃತವಾಗಿ ಘೋಷಿಸಿ, ಇರುವ ನೀರನ್ನು ಕೇವಲ, ಕುಡಿಯುವ ಉದ್ದೇಶಕ್ಕೆ ಮೀಸಲಿಡುತ್ತದೆ. ಅಂತಹ ಪರಿಸ್ಥಿತಿ ತಮಿಳುನಾಡಿನಲ್ಲಿ ಇಲ್ಲ.
ಆದ್ದರಿಂದ ನಿರ್ಬಂಧ ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲ ಅದು ತಮಿಳುನಾಡಿಗೂ ಅನ್ವಯ ಆಗಬೇಕು . ಪ್ರಾಧಿಕಾರದ ಅಧಿಕಾರಿಗಳು ಅಲ್ಲಿಯ ನೀರು ಸರಬರಾಜು ವ್ಯವಸ್ಥೆಯ ಮೇಲೂ ಕಣ್ಗಾವಲು ಹಾಕಬೇಕು ಎನ್ನುವುದನ್ನು ಪ್ರಾಧಿಕಾರದ ಮುಂದೆ ಬಲವಾಗಿ ಪ್ರತಿಪಾದಿಸುವ ಕೆಲಸ ಮಾಡಬೇಕಾಗಿದೆ.
ಕಾನೂನು ಮತ್ತು ನೀರಾವರಿ ತಜ್ಞರ ಮತ್ತೊಂದು ಅಭಿಪ್ರಾಯದಂತೆ ನ್ಯಾಯಾಧಿಕರಣದ ಅಂತಿಮ ಆದೇಶದಲ್ಲಿ ಇರುವ ಕೆಲವು ಅಂಶಗಳನ್ನು ರಾಜ್ಯದ ಪರ ವಾದಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು.
ಅದೇನೆಂದರೆ ನ್ಯಾಯಾಧಿಕರಣದ ಆದೇಶದಲ್ಲಿ ನೀರು ಬಳಕೆ ವ್ಯಾಪ್ತಿಯನ್ನು ನಿರ್ಧರಿಸುವಾಗ ಕೆ ಆರ್ ಎಸ್ ಮತ್ತು ಕಬಿನಿ ಜಲಾಶಯಗಳ ನೀರನ್ನು ರಾಜ್ಯದ ನೀರಾವರಿ ಮತ್ತು ಕುಡಿಯುವ ಉದ್ದೇಶಕ್ಕೆ ಮೀಸಲಿಡಲಾಗಿದೆ.
ಹಾಗೆಯೇ ಕೆ ಆರ್ ಎಸ್, ಕಬಿನಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿನ ನೀರು ತಮಿಳುನಾಡಿಗೆ ಎಂದು ಸೂಚ್ಯವಾಗಿ ಹೇಳಲಾಗಿದೆ.
ಈ ಭಾಗದಲ್ಲಿ ಮಳೆ ಬಾರದೆ ನೀರು ಬೀಳದಿದ್ದರೆ ಕರ್ನಾಟಕ ಏನು ತಾನೇ ಮಾಡಲು ಸಾಧ್ಯ ಎಂಬ ಅಂಶವನ್ನು ಪ್ರಾಧಿಕಾರದ ಮುಂದೆ ಅಧಿಕಾರಿಗಳು ಬಲವಾಗಿ ಮಂಡಿಸಿದರೆ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ.
ಈ ಎಲ್ಲ ಸಂಗತಿಗಳು ರಾಜ್ಯಕ್ಕೆ ನ್ಯಾಯ ದಕ್ಕಿಸಿಕೊಡುವಲ್ಲಿ, ರೈತರ ಹಿತಾಸಕ್ತಿ ಕಾಪಾಡುವಲ್ಲಿ ಮುಖ್ಯವಾಗುತ್ತವೆ.
ಇವೆಲ್ಲಕ್ಕಿಂತ ಹೆಚ್ಚಾಗಿ ರಾಜ್ಯಕ್ಕೆ ಅನುಕೂಲವಾಗುವ ಜಲ ಸಂಕಷ್ಟ ಸೂತ್ರ ರೂಪಿಸುವಲ್ಲಿ ನೆರವಾಗಲಿದೆ.
ಇಂಥ ವಿಚಾರದಲ್ಲಿ ರಾಜ್ಯದ ಪರ ಅಭಿಪ್ರಾಯ ರೂಪಿಸುವಲ್ಲಿ ಸಂಸದರ ನಿಲುವುಗಳು ಕೆಲವೊಮ್ಮೆ ಮುಖ್ಯವಾಗಿದ್ದು, ರಾಜ್ಯದಲ್ಲಿ ದಕ್ಕಿರುವ ದೈತ್ಯ ಬೆಂಬಲವನ್ನು ಬಿಜೆಪಿ ಸದಸ್ಯರು ಹೇಗೆ ರಾಜ್ಯದ ಪರ ಬಳಸುತ್ತರೆಂಬುದೂ ಮುಖ್ಯವಾಗಲಿದೆ.
ದಕ್ಷಿಣ ಕರ್ನಾಟಕದಲ್ಲಿ ಅಂದರೆ ಕಾವೇರಿ ಕೊಳ್ಳದಲ್ಲಿ ತನ್ನ ನಾಯಕತ್ವದ ಛಾಪು ಒತ್ತುವ ಮೂಲಕ ತಮ್ಮ ವರ್ಚಸ್ಸು ಹಿಗ್ಗಿಸಿಕೊಳ್ಳಲು ಸಚಿವ ಡಿಕೆ ಗೆ ಈ ಎಲ್ಲಾ ಆಡಳಿತಾತ್ಮಕ ಅಂಶಗಳು ನೆರವಾಗಲಿದೆ. ಇದಕ್ಕೆ ದಿಟ್ಟತನ, ರಾಜಕೀಯವನ್ನು ಮೀರಿದ ಆಡಳಿತಾತ್ಮಕ ಚಾಕಚಕ್ಯತೆ ಅಗತ್ಯ.
ವಿವಾದ ಇತ್ಯರ್ಥಕ್ಕೆ ನೀರಿನ ಕೊರತೆ ಆಧಾರದಲ್ಲಿ ರಾಜ್ಯಕ್ಕೆ ನೆರವಾಗುವಂತೆ ಜಲ ಸಂಕಷ್ಟ ಸೂತ್ರ ರಚನೆ, ಮೇಕೆದಾಟು ಯೋಜನೆ, ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೆರೆಗಳ ಹೂಳೆತ್ತುವ ಯೋಜನೆಗಳನ್ನು ತನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತರುವಲ್ಲಿ ಶಿವಕುಮಾರ್ ಯಶಸ್ವಿ ಆದರೆ ಅವರು ಹೆಸರು ಚರಿತ್ರೆಯಲ್ಲಿ ದಾಖಲಾಗುವುದು ನಿಶ್ಚಿತ.
'ಕಾವೇರಿ' ಮರೆಯಾಗಿ ಹೋಯಿತೇ..??
ನಿಮಗೆ ಇವೂ ಇಷ್ಟವಾಗಬಹುದು…





ವಿಶ್ಲೇಷಣಾತ್ಮಕ ಲೇಖನ. ಚೆನ್ನಾಗಿದೆ