ಒಂದು ದೇಶದ ಪ್ರಧಾನ ಮಂತ್ರಿ ಪಾದಪೂಜೆಯಂತಹ ಸಂಪ್ರದಾಯವನ್ನು ಘಂಟಾಘೋಷವಾಗಿ ಪ್ರತಿಪಾದಿಸುವುದಲ್ಲದೇ ಅದೊಂದು ದೊಡ್ಡ ಮಹತ್ಸಾಧನೆ ಎನ್ನುವಂತೆ ಅವರ ಭಕ್ತರೆಲ್ಲರೂ ಉಘೇ ಉಘೇ ಎಂದು ಹೊಡೆದುಕೊಳ್ಳುತ್ತಿರುವುದು ನೋಡಿ ದಿಗ್ಭ್ರಮೆ ಆಗಿದೆ.
ಪ್ರತಿಭಾ ನಂದಕುಮಾರ್
ಕೆ ಎಸ್ ನರಸಿಂಹಸ್ವಾಮಿ ಅವರ ಒಂದು ಕವಿತೆಯಲ್ಲಿ ಹೀಗಿದೆ:
ಹೋಗಿ ಬರುವೆವು ನಮ್ಮ ನೆನಪಿರಲಿ,
ನಿಮ್ಮ ಪಾದ ಧೂಳಿ ನಮ್ಮ ತಲೆ ಮೇಲಿರಲಿ,
ಕಣ್ಣೊಳಗೆ ಮಾತ್ರ ಅದು ಬೀಳದಿರಲಿ.
ಹಿರಿಯರ ಕಾಲಿಗೆ ಬಾಗಿ ತಲೆ ಇಟ್ಟು ನಮಸ್ಕರಿಸುವುದು ಒಂದು ಸಂಪ್ರದಾಯವೆಂದು ಸ್ವೀಕರಿಸಿದರೆ, ಅವರ ಪಾದ ಧೂಳಿ ಆಗ ನಮ್ಮ ತಲೆಗೆ ತಗಲುತ್ತದೆಂದು ಭಾವಿಸಿದರೆ, ಅದು ನಮ್ಮ ಕಣ್ಣಿನೊಳಗೆ ಬೀಳಬಾರದು ಅಂದರೆ ಹಳೆಯ ಸಂಪ್ರದಾಯಗಳೆಲ್ಲ ನಮ್ಮ ಕಣ್ಣು ಚುಚ್ಚುವ ಮೂಢ ನಂಬಿಕೆಯಾಗಬಾರದು ಎನ್ನುವ ಆಶಯದ ಸಾಲುಗಳಿವು.
ಮೇಲು ಜಾತಿ (?) ಯವರು ಉಂಡ ಎಲೆಯ ಎಂಜಲಿನ ಮೇಲೆ ಹೊರಳಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ಮೂಢನಂಬಿಕೆಯನ್ನು ತೊಡೆದು ಹಾಕಲು ಪ್ರಸ್ತುತ ಪಡುತ್ತಿರುವ ಪಾಡು ಎಲ್ಲರಿಗೂ ಗೊತ್ತು. ಹಾಗೆಯೇ ಸ್ವಾಮಿಗಳ ಪಾದಪೂಜೆಯ ನಾಟಕ ಕೂಡಾ. ಸ್ವಾಮಿಗಳನ್ನು ಕರೆಸಿ ಅವರ ಪಾದಪೂಜೆ ಮಾಡಿ ಕೆಲವರು ಅದನ್ನು ಸೇವಿಸಿ ಆ ನೀರನ್ನು ಕೆಲವರು ತಲೆಗೆ ಪ್ರೋಕ್ಷಣೆ ಮಾಡಿಕೊಂಡು ಧನ್ಯತೆಯ ನಾಟಕ ಮಾಡುತ್ತಾರೆ. ಅದರ ಮುಂದುವರಿಕೆಯಾಗಿ ಕೆಲವು ಪಂಥಗಳು ತಮ್ಮ ತಲೆಯ ಮೇಲೆ ಸ್ವಾಮಿಗಳ ಪಾದವನ್ನು ಇಟ್ಟುಕೊಂಡು ಅದರ ಮೇಲೆ ನೀರು ಹೊಯ್ಯುವುದು, ಕೆಲವು ಸ್ವಾಮಿಗಳು ಸ್ವತಃ ಲಿಂಗದ ಮೇಲೆಯೇ ಕಾಲಿಟ್ಟು ಪಾದ ಅಭಿಷೇಕ ಮಾಡಿಕೊಳ್ಳುವುದು ಮುಂತಾದ ಅಸಹ್ಯ ಆಚರಣೆಗಳನ್ನೆಲ್ಲ ಒಪ್ಪಿತ ಮಾಡಿಸಿ ಜನರ ಕಣ್ಣಿಗೆ (ಜೊತೆಗೆ ಬುದ್ಧಿಗೂ) ಮಂಕುಬೂದಿ ಎರಚುತ್ತಿದ್ದಾರೆ.
ಅಂತಹ ಸಂದರ್ಭದಲ್ಲಿ ಒಂದು ದೇಶದ ಪ್ರಧಾನ ಮಂತ್ರಿ ಪಾದಪೂಜೆಯಂತಹ ಸಂಪ್ರದಾಯವನ್ನು ಘಂಟಾಘೋಷವಾಗಿ ಪ್ರತಿಪಾದಿಸುವುದಲ್ಲದೇ ಅದೊಂದು ದೊಡ್ಡ ಮಹತ್ಸಾಧನೆ ಎನ್ನುವಂತೆ ಅವರ ಭಕ್ತರೆಲ್ಲರೂ ಉಘೇ ಉಘೇ ಎಂದು ಹೊಡೆದುಕೊಳ್ಳುತ್ತಿರುವುದು ನೋಡಿ ದಿಗ್ಭ್ರಮೆ ಆಗಿದೆ.
ನಿಜವಾಗಿ ನೋಡಿದರೆ ಯಾರ ಪಾದವನ್ನೂ ಯಾರೂ ತೊಳೆದು ಅದಕ್ಕೊಂದು ರೊಮಾಂಟಿಕ್ ಸ್ಪರ್ಶ ಕೊಡಬೇಕಿಲ್ಲ. ಪಾದಪೂಜೆ ಪಾದಸ್ಪರ್ಶ ಪದತಲ ಪಾದಾರವಿಂದ ಇತ್ಯಾದಿಗಳೆಲ್ಲವೂ ಸೊ ಕಾಲ್ಡ್ ಮೇಲು ಜಾತಿಯವರು ಹುಟ್ಟುಹಾಕಿದ ಪರಿಕಲ್ಪನೆಗಳು. ವೈಯಕ್ತಿಕ ನೆಲೆಯಲ್ಲಿ ಈಗಲೂ ತಾವು ತುಂಬಾ ಗೌರವಿಸುವವರ ಕಾಲಿಗೆ ನಮಸ್ಕರಿಸಿ ಅದನ್ನು ಪ್ರದರ್ಶಿಸುವುದು ಮುಂದುವರೆದಿದೆ.
ದಕ್ಷಿಣದಲ್ಲಿ ಜನರು ನಿಜವಾಗಿ ಮಂಡಿಯೂರಿ ನಮಸ್ಕರಿಸಿದರೆ ಉತ್ತರದಲ್ಲಿ ಒಂಥರಾ ಅರ್ಧ ಬಾಗಿ ಕಾಲಿನ ಕಡೆಗೆ ಕೈ ಚಾಚಿದಂತೆ ಮಾಡಿ “ಪಾಯ್ ಲಾಗು” ಎಂದು ಬಾಯಲ್ಲಿ ಹೇಳಿ ಮುಗಿಸುತ್ತಾರೆ. ಕಾಲಿಗೆ “ಬೀಳುವುದು” ಅವರವರ ನಂಬಿಕೆಗೆ ಬಿಟ್ಟ ಪ್ರಶ್ನೆ ಎನ್ನುವ ಜಾಣತನದ ವಾದಗಳೂ ಜಾರಿಯಲ್ಲಿವೆ.
ನಿಜಕ್ಕೂ ಇದು ವೈಯಕ್ತಿಕ ಪ್ರಶ್ನೆಯೇ ಸರಿ. ಆದರೆ ಒಂದು ದೇಶದ ಪ್ರಧಾನ ಮಂತ್ರಿ ಒಂದು ರಾಜಕೀಯ ಆಟವಾಗಿ ಕೆಲವು ಪೌರಕಾರ್ಮಿಕರ ಪಾದವನ್ನು ತೊಳೆಯುವ ನಾಟಕ ಮಾಡಿ ಅದನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಿಕೊಳ್ಳುವುದು ಮೂಢನಂಬಿಕೆಯನ್ನು ಮಾತ್ರವಲ್ಲ ತಮ್ಮ ಅವೈಚಾರಿಕ ಬೌದ್ಧಿಕ ನೆಲೆಯನ್ನೂ ಜಗತ್ತಿಗೆ ತೋರಿಸಿಕೊಳ್ಳುತ್ತಿದ್ದಾರೆ.
ಹಿಂದೆ ಎನ್ ಟಿ ಆರ್ ಗೆ ಯಾರೋ ಮಂತ್ರವಾದಿ ಹನ್ನೆರಡು ವರ್ಷದ ಬಾಲೆಯನ್ನು ಮದುವೆಯಾದರೆ ಮುಖ್ಯಮಂತ್ರಿ ಪದವಿ ಖಚಿತ ಎಂದು ಹೇಳಿದ್ದಕ್ಕೆ ಆತ ಅದನ್ನು ಮಾಡಿತೋರಿಸಿದ್ದರು. ಅದೆಷ್ಟು ಹೀನವೋ ಹಾಗೆಯೇ ಈ ಜಾತಿಯಲ್ಲಿ “ಕೀಳು” ಎಂದು ಗುರುತಿಸಿ, ಅಂತಹವರನ್ನು ಬರೀ ಜಾತಿಯ ಆಧಾರದ ಮೇಲೆಯೇ ಆರಿಸಿ ಅವರ ಪಾದಪೂಜೆ ಮಾಡುವಂತಹ “ಹೀನ” ಸಂಸ್ಕೃತಿಯನ್ನು ಪ್ರದರ್ಶಿಸಿದ ಪ್ರಧಾನಮಂತ್ರಿ ಸಂವಿಧಾನಿಕ ರೀತಿಯಲ್ಲೂ ಖಂಡನಾರ್ಹ. ಅಂಬೇಡ್ಕರ್ ಅವರೇ ಇದನ್ನು ಒಪ್ಪುತ್ತಿರಲಿಲ್ಲ.






ಖಂಡಿತವಾಗಿ ಖಂಡನಾರ್ಹ. ಸಂವಿಧಾನದ ಆಶಯಕ್ಕೆ ಮಾರಕ ನಡವಳಿಕೆ
ಆರ್ಷ ವಿಚಾರಗಳ ಹಿಂದಿನ ವಿಜ್ಞಾನದ ಬಗ್ಗೆ ನಿಮಗೆಷ್ಟು ಗೊತ್ತು?
ಈ ವಿಚಾರಗಳನ್ನು ನೀವು ಎಷ್ಟು ವರ್ಷ ಅಧ್ಯಯನ ಮಾಡಿದ್ದೀರಿ?
ನಿಮ್ಮ ಮನಸ್ಸಿಗೆ ಕಂಡಂತೆ ಎಲ್ಲವೂ ಸರಿ ಎಂದು ಹೇಗೆ ಹೇಳುವಿರಿ?
“ತಲೆ ತಗ್ಗಿಸಿ ದೇಶ ವಾಸಿ”
ಇಲ್ಲಿ ನಡೆಯುತ್ತಿರುವುದು ಓಟಿಗಾಗಿ ನಾಟಕ ಎನ್ನುವುದು ಎಷ್ಟು ಸತ್ಯವೋ, ವ್ಯಕ್ತಿ ಎಷ್ಟೇ ಉನ್ನತ ಸ್ಥಿತಿ ತಲುಪಿದರೂ, ಎಷ್ಟೇ ಬೌದ್ಧಿಕತೆ ಬೆಳೆಸಿಕೊಂಡರೂ, ಪದವಿ, ಅಧಿಕಾರ, ಕೈಬಿಡಬಾರದೆಂಬ ಆಸೆಯ ಬಲೆಯ ಸಿಕ್ಕಿಗೆ ಸಿಲುಕಿ ಮೌಢ್ಯದ ಮೊರೆ ಹೋಗುವವರ ಹಾದಿಯಲ್ಲಿ ಈ ದೇಶದ ರಾಜಕಾರಿಣಿಗಳು ಯಾರೂ ಹೊರತಲ್ಲ ಎಂಬುದಕ್ಕೆ ನಮ್ಮ ಪ್ರಧಾನಿಯವರ ಈ ನಡೆ ಜ್ವಲಂತ ದುರಂತ ಎನ್ನಬಹುದು. ಕಾಲು ತೊಳೆಸಿಕೊಳ್ಳುತ್ತಿರುವ ಸಫಾಯಿ ಕರ್ಮಚಾರಿಗಳು ಮತ ಬ್ಯಾಂಕಿನ ಪ್ರತಿನಿಧಿಗಳು, ಅಶಿಕ್ಷಿತರು, ಅವರ ಸಮೂಹ ಬಹು ದೊಡ್ಡದಿದೆ, ಆದರೆ ಮೀಸಲಾತಿಯ ನಿರೀಕ್ಷಿಗಳಲ್ಲ. ಇದು ಪ್ರೋಟೊಕಾಲ್ನೊಳಗಿರುವಂತಹದ್ದು.
ಅಲ್ಲಿ ಒಂದು ಕಡೆ ಸುಪ್ರೀಮ್ ಕೋರ್ಟ್ ಆದೇಶದ ಮೂಲಕ ಅಸ್ಪೃಶ್ಯರ ಮೀಸಲಾತಿ ಹಿಂಬಡ್ತಿ, ಹಿಂದುಳಿದ ಮೀಸಲಾತಿ ಮುಂಬಡ್ತಿ ನಾಟಕ, ಮತ್ತೊಂದು ಕಡೆ ಸಾಮಾನ್ಯ ವರ್ಗದೊಳಗೆ ಮೀಸಲಾತಿಯ ಸೃಷ್ಟಿಯ ನಾಟಕ. ಮೀಸಲಾತಿ ಪಡೆದು ಎತ್ತರಕ್ಕೆ ಏರಿದವರ ನಡುವೆ ಪರಸ್ಪರ ವಿರೋದಾಭಾಸ ಸೃಷ್ಟಿಸಿ, ಕೊನೆಗೆ ಮೀಸಲಾತಿಯನ್ನೇ ತೆಗೆದು ಹಾಕುವ ಹುನ್ನಾರ ಪರೋಕ್ಷವಾಗಿ ಸಂವಿದಾನದ ಮೂಲ ಆಶಯದ ಬದಲಾವಣೆ. ಇವರು ಸುಶಿಕ್ಷಿತರು, ಸಮೂಹ ಚಿಕ್ಕದು, ಮತ ಚಲಾಯಿಸಲು ಹೋಗದವರು, ಪೀಳಿಗೆಗೂ ಮೀಸಲಾತಿ ಬಳಸುತ್ತಿರುವವರು, ಪ್ರೋಟೋಕಾಲ್ನೊಳಗೆ ಇರದವರು.
ಮಡೆಸ್ನಾನದ (ಹಳೆ) ಪದ್ದತಿಗೆ ಕಾರಣ ಏನೇ ಕೊಡಲಿ, ಅಲ್ಲಿರುವುದು ಬ್ರಾಹ್ಮಣ ಊಟ ಮಾಡುವ ಸ್ಥಳದವರೆಗೆ ಅಶ್ಪೃಶ್ಯರ ಪ್ರವೇಶಕ್ಕೆ ಅವಕಾಶ, ಶರತ್ತುಬದ್ಧವಾಗಿ ಉಂಡೆಲೆಯ ಮೇಲೆ ಹೊರಳುವುದಾದರೆ, ಪರಿಹಾರ ಚರ್ಮರೋಗ ನಿವಾರಣೆ, ಕಾಕತಾಳೀಯವಾಗಿ ಒಂದೆರಡು ಸಾಬೀತಾಗಿ ಕಾಲಕ್ರಮೇಣ ಸಮೂಹ ಸನ್ನಿಯಂತಾಗಿರಬಹುದು.(ಆದರೆ ಸಹಪಂಕ್ತಿ ಭೋಜನವಿಲ್ಲ) ಮಲೆಯರು(ಗಿರಿಜನರು) ಹೊರುವ ಹರಕೆಯ ಕಾಣಿಕೆ, ಕಾಳು ಕಡ್ಡಿಗಳು ಬ್ರಾಹ್ಮಣರ ಹೊಟ್ಟೆಪಾಡಾದರೆ,(ಆಗ ಬಡ ಬ್ರಾಹ್ಮಣ) ಅದು ಅವರ ನಡುವಿನ ಪರಸ್ಪರ ಅವಲಂಬನೆ, ಕ್ರಮೇಣ ಅಲಿಖಿತ ಸ್ಥಳೀಯ ಶಾಸನವಾಗಿ ಶೋಷಣೆ ಅತಿರೇಕವಾಗಿ ಮೀಸಲಾತಿಯ ವಿದ್ಯಾವಂತರಿಂದ ಮೌಢ್ಯಾಚರಣೆ ಎನ್ನಿಸಿಕೊಂಡು ಸಂಘರ್ಷಕ್ಕೆ ಹಾದಿಯಾಯಿತು. ಪ್ರಸ್ತುತ ಒಂದು ಗುಂಪು ಮೌಢ್ಯಾಚರಣೆಯ ವಿರುದ್ಧವಾದರೆ ಮತ್ತೊಂದು ಗುಂಪು ಮೀಸಲಾತಿಯ ವಿರುದ್ದ – ಇಬ್ಬರೂ ಸಾಮಾಜಿಕ ನ್ಯಾಯಕ್ಕಾಗಿ ಅಂತಾರೆ.
ಪಾದಪೂಜೆಯ (ಹೊಸ) ಪದ್ದತಿಗೆ ಕಾರಣ ಓಟು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾದರೂ, ಕಾಲು ತೊಳೆಯುವವರೂ ಶೂದ್ರರು(ಸುಶಿಕ್ಷಿತ), ತೊಳೆಸಿಕೊಳ್ಳುವವರೂ ಶೂದ್ರರು(ಅಶಿಕ್ಷಿತ) ಇಲ್ಲಿ ಅಶ್ಪೃಶ್ಯತೆಯ ಪ್ರಶ್ನೆಯೆ ಇಲ್ಲ. ಆದರೆ ಇದು ಹೊಟ್ಟೆ ಪಾಡಿಗಾಗಿ ಅಲ್ಲ, ಕುರ್ಚಿಪಾಡಿಗಾಗಿ, ಇಲ್ಲಿ ಪ್ರೋಟೋಕಾಲ್ ಕೊಡುವವರು ಮಾತ್ರ ಸ್ಪೃಶ್ಯರು(ಐಎಎಸ್) ಅನ್ನೋದು ಸತ್ಯ. (ಇಲ್ಲಿಯೂ ಸಹಪಂಕ್ತಿ ಬೋಜನವಿಲ್ಲ). ಇದು ಅಸ್ಪೃಶ್ಯತೆಯ ವಿರುದ್ದದ ಹೋರಾಟವೂ ಅಲ್ಲ, ಮೀಸಲಾತಿಯ ಪರವಾದ ಹೋರಾಟವೂ ಅಲ್ಲ ಅನ್ನೋದು ನಿಜ.
ನಾನು ಯಾವುದೇ ಪಕ್ಷ, ವ್ಯಕ್ತಿಯ ಪರವಾಗಿ ಇರದೇ ಇದ್ದರೂ ಸಹ ನಾಲ್ಕೂಮುಕ್ಕಾಲು ವರ್ಷ ತಲೆ ಎತ್ತಿ, ಎದೆಯುಬ್ಬಿಸಿ ನಿಂತ ವ್ಯಕ್ತಿ ಕುರ್ಚುಗಾಗಿ, ಅಧಿಕಾರಕ್ಕಾಗಿ ದೇಶವೇ ತಲೆತಗ್ಗಿಸುವಂತಹ ಮೌಢ್ಯಾಚರಣೆಗೆ ಬಲಿಯಾದರೆ ಎಂದು ಖೇದವಾಗುತ್ತದೆ.
ಗೋವಿಂದ್ ಚಂದ್ರ ಶೇಖರ್.
ದಿನಾಂಕ:೨೫-೦೨-೨೦೧೯
ರಾಮಾ! ನಮ್ಮಲ್ಲಿ ಮದುವೆಲಿ ವರನ ಪಾದ ತೊಳಿತಾರೆ, ಇಲ್ಲಿ ಮುಂಬಯಿನಲ್ಲಿ ಸುಮಂಗಲಿಯರನ್ನು ಮನೆಗೆ ಕರೆದು ಪಾದ ತೊಳಿಯಲಾಗುತ್ತದೆ. ಅಪ್ಪ ಅಮ್ಮನ್ನ ಪಾದ ತೊಳಿದು ಪೂಜೆ ಮಾಡೊ ಕ್ರಮ ಇದೆ. ನಂಗೆ ಈಗೀಗ ಮೂಢನಂಬಿಕೆ ಏನು ಅಂತನೇ ದಿಗಿಲಾಗ್ತಿದೆ! ದೇಶದ ನಾಯಕನಾದವನು ಕೈನಲ್ಲಿ ಪೊರಕೆ ಹಿಡಿದು ಸ್ವಚ್ಛ ಮಾಡುತ್ತಿರುವ ದೃಶ್ಯ ಮತ್ತು ನಿನ್ನೆಯ ಪೌರ ಕಾರ್ಮಿಕರ ಪಾದ ತೊಳೆಯುವ ದೃಶ್ಯ “ಸ್ವಚ್ಛ ಭಾರತ ” ಏಷ್ಟು ಮುಖ್ಯವಾದದ್ದು ಅನ್ನೊದನ್ನು ತಿಳಿಸುತ್ತೆ. ಇಲ್ಲಿರೊ ನವಿ ಮುಂಬಯಿ ಹೋಗ್ತಾ ಇದ್ದ ಹಾಗೇ ಏನ್ ಚೆನ್ನಾಗಿ ಅನ್ನಿಸುತ್ತೆ ಗೊತ್ತಾ? ಸರಕಾರ ಮನಸ್ಸು ಮಾಡಿದ್ರೆ ಏನೆಲ್ಲಾ ಸಾಧ್ಯ ಅಂತ.