ಕಾಲಿಗೆ ಬೀಳ್ತಿನಿ ಬಿಟ್ ಬಿಡು ಎಂದರು ಬಿಡದ ಮಳೆರಾಯ

(ಇಲ್ಲಿಯವರೆಗೆ…)

ಮರುದಿನ ಅಂದರೆ ಆಗಸ್ಟ್ ೧೦ ಶುಕ್ರವಾರ, ಬೆಳಿಗ್ಗೆ 5 ಗಂಟೆಯಷ್ಟರಲ್ಲಿ ನಾವು ನಾಲ್ಕೂ ಜನ ಮೂಡಿಗೆರೆಯ ಐಬಿಯಿಂದ ಹೊರಬಿದ್ದು ಮುಂಜಾವದ ಮೂಡಿಗೆರೆಯನ್ನು, ಜನಜೀವನವನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಅಂದಿನ ದಿನವನ್ನು ಪ್ರಾರಂಭಿಸಿದ್ದೆವು. ಮೂಡಿಗೆರೆಯ ಮೇಲೆ ರಾತ್ರಿಯಿಡಿ ಒಂದೇ ಸಮ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಬೆಳಿಗ್ಗೆ ಹಾಸಿಗೆ ಬಿಟ್ಟು ಏಳಲೇಬಾರದು ಅನ್ನಿಸುವಷ್ಟು ಮೈಕೊರೆಯುವ ಚಳಿ ಮೂಡಿಗೆರೆಯನ್ನು ಅಪ್ಪಿಹಿಡಿದಿತ್ತು. ಇಂಥಹ ಪರಿಸ್ಥಿತಿಯಲ್ಲಿ ಹಾಸಿಗೆ ಬಿಟ್ಟು ಎದ್ದದ್ದೇ ಒಂದು ದೊಡ್ಡ ಪವಾಡ ಅನ್ನಿಸುತ್ತಿದ್ದರಿಂದ ಹಲ್ಲುಜ್ಜುವ, ಮುಖ ತೊಳೆಯುವ, ಸ್ನಾನ ಮಾಡುವ ನಾಗರೀಕ ಪ್ರಪಂಚದ ನಿಯಮಗಳೆಲ್ಲವೂ ಆ ಸಂದರ್ಭದಲ್ಲಿ ನಮಗೆಕಾನೂನು ಬಾಹಿರ ನಿಯಮಗಳಂತೆ ಅನ್ನಿಸಿ ನಮ್ಮ ನಾಲ್ಕು ಜನರಲ್ಲಿ ಯಾರೊಬ್ಬರೂ ಈ ನಿಯಮಗಳನ್ನು ಪಾಲಿಸುವ ಅಧಿಕಪ್ರಸಂಗತನಕ್ಕೆ ಕೈ ಹಾಕದೆ ಹಾಸಿಗೆಯಿಂದ ಎದ್ದವರೆ ಕ್ಯಾಮೆರ ಎತ್ತಿಕೊಂಡು ಚಿತ್ರೀಕರಣದ ನಮ್ಮ ಕೆಲಸವನ್ನು ಪ್ರಾರಂಭಿಸಿದ್ದೆವು.
ಅಂದು ಬೆಳಿಗ್ಗೆ 9 ಗಂಟೆಯ ನಂತರ ತೇಜಸ್ವಿಯವರ ದೀರ್ಘಕಾಲದ ಒಡನಾಡಿ ಬಾಪು ದಿನೇಶ್ ‘ಸಿಗ್ತೇನೆ ‘ಎಂದು ಹೇಳಿದ್ದರು. ಅವರನ್ನು ಭೇಟಿಯಾಗಲು ಇನ್ನೂ ತುಂಬಾ ಸಮಯವಿದ್ದಿದ್ದರಿಂದ ಅಷ್ಟರಲ್ಲಿ ಸಾಧ್ಯವಾದಷ್ಟು ಮೂಡಿಗೆರೆ ಹಾಗು ಅಲ್ಲಿನ ಜನಜೀವನಕ್ಕೆ ಸಂಬಂಧಪಟ್ಟ ಶಾಟ್ಸ್ ತೆಗೆದುಕೊಳ್ಳಬೇಕೆಂದು ಬೆಳಿಗ್ಗೆ 5 ಗಂಟೆಗೆಲ್ಲ ಕ್ಯಾಮೆರದೊಂದಿಗೆ ಹೊರಬಿದ್ದಿದ್ದೆವು. ಬೆಳಿಗ್ಗೆ ಎದ್ದಾಗ ಮಳೆ ನಿಂತಿತ್ತು. ರಾತ್ರಿಯಿಡೀ ಸುರಿದ ಮಳೆಯಲ್ಲಿ ತೋಯ್ಸಿಕೊಂಡ ಮೂಡಿಗೆರೆ, ಆಸೆ ಹತ್ತಿಕ್ಕಲಾರದೆ ಬೇಕಂತಲೆ ಮಳೆಯಲ್ಲಿ ಆಡಿ ತೋಯ್ಸಿಕೊಂಡು ಬಂದು ಅಮ್ಮನ ಬೈಗುಳದಮುಂದೆ ಮೌನಿಯಾಗಿ ನಿಲ್ಲುವ ಹದಿನೆಂಟರ ಹುಡುಗಿಯಂತೆಮುದ್ದಾದ ಮೌನಕ್ಕೆ ಶರಣಾಗಿತ್ತು. ಅನಗತ್ಯ ವೇಗ, ಧಾವಂತ, ಗಡಿಬಿಡಿಗಳಿಲ್ಲದ ಮೂಡಿಗೆರೆಯ ಜನಜೀವನ ಎಂದಿನಂತೆ ನಿಧಾನವಾಗಿ ಬಿಚ್ಚಿಕೊಳ್ಳುತ್ತಿತ್ತು. ನಾವು 5 ಗಂಟೆಯ ಮುಂಜಾವಿನ ಕತ್ತಲೂ ಅಲ್ಲದ ಬೆಳಕೂ ಅಲ್ಲದ ಬೆಳಕಿನಲ್ಲಿ ಕಾಣುತ್ತಿದ್ದ ಮೂಡಿಗೆರೆಯ ಬಸ್ ಸ್ಟಾಂಡು, ಬಸ್ಸ್ಟಾಂಡ್ ಸರ್ಕಲ್ಲು, ಸಂತೆ ಮೈದಾನ, ಕೆ.ಎಂ ರಸ್ತೆ, ಸಂತೆ ಮೈದಾನದ ರಸ್ತೆಯಲ್ಲಿರುವ ಶಾಲೆ, ಇವನ್ನೆಲ್ಲಾ ಚಿತ್ರಿಸಿಕೊಳ್ಳುತ್ತಿದ್ದಾಗಲೇ ಮೂಡಿಗೆರೆಯಮೇಲೆಮಳೆರಾಯ ಮತ್ತೆವಕ್ಕರಿಸಿದ.
ಆದರೆ ನಾವು ಮಳೆಯನ್ನೆದುರಿಸಲು ಸರ್ವಸನ್ನದ್ದರಾಗಿ ಬಂದಿದ್ದರಿಂದ ಅಷ್ಟಕ್ಕೆಲ್ಲ ಹೆದರಿ ಕೈಕಟ್ಟಿ ಕೂರುವ ಪ್ರಶ್ನೆಉದ್ಬವಿಸಲಿಲ್ಲ. (ನಮ್ಮ ೧೨ ದಿನಗಳ ಚಿತ್ರೀಕರಣದ ಅವಧಿಯಲ್ಲಿ (ಮೊದಲ ಹಂತ) ಸುಮಾರು ಎಂಟರಿಂದ ಹತ್ತು ದಿವಸ ಮಳೆಯಲ್ಲೇ ಚಿತ್ರೀಕರಿಸಬೇಕಾಯಿತು. ಈ ಸಂದರ್ಭದಲ್ಲಿ ನನ್ನ ತಂಡ ಎನ್ನುವುದಕ್ಕಿಂತಲೂ ನನ್ನ ಮೂರೂ ಜನ ಸ್ನೇಹಿತರು ಚಿತ್ರೀಕರಣಕ್ಕೆ ಸಹಕರಿಸಿದ ರೀತಿ ಮಾತ್ರ ಎಂದಿಗೂ ಮರೆಯದಂತಹದ್ದು). ನಮ್ಮ ನಿತಿನ್ ಇಡೀ ೧೨ ದಿವಸ ವ್ಯಾನ್ ಚಲಾಯಿಸುವ ಸಮಯ ಹೊರತುಪಡಿಸಿ ಉಳಿದ ಸಮಯದಲೆಲ್ಲಾ ಒಂದು ಕೈಯಲ್ಲಿ ಟಾರ್ಪಲು ಮತ್ತೊಂದು ಕೈಯಲ್ಲಿ ಛತ್ರಿ ಹಿಡಿದುಕೊಂಡೇ ನಮ್ಮ ಹಿಂದೆ ಇರುತ್ತಿದ್ದ. ಹೇಮಂತ ಸಹ ಬಲಗೈಯಲ್ಲಿ ಸ್ಟಿಲ್ ಕ್ಯಾಮೆರ ಎಡಗೈನಲ್ಲಿ ಇನ್ನೊಂದು ಛತ್ರಿ ಹಿಡಿದುಕೊಂಡೇ ಇರುತ್ತಿದ್ದ.
ಕ್ಯಾಮೆರಾದ ಟ್ರೈಪಾಡ್ (ಅಂದರೆ ಕ್ಯಾಮೆರ ಸ್ಟ್ಯಾಂಡು) ಜವಾಬ್ದಾರಿ ಸಂಪೂರ್ಣ ನನ್ನದಾಗಿತ್ತು. ದರ್ಶನ್ ಇಡೀ ೧೨ ದಿನಗಳ ಚಿತ್ರೀಕರಣದ ಸಮಯದಲ್ಲಿ ಕ್ಯಾಮೆರವನ್ನು ಕೆಳಗಡೆ ಇಟ್ಟದ್ದೇ ಅಪರೂಪ. ತಮ್ಮ ಸ್ವಂತ ಮಗುವಿನಂತೆ ಕ್ಯಾಮೆರಾವನ್ನು ಅಪ್ಪಿಕೊಂಡೆ ಓಡಾಡುತ್ತಿದ್ದ ಅವರನ್ನು ಕಂಡು ನಮ್ಮ ನಿತಿನ್ ‘ಏನ್ರಿ ನಿಮ್ ಮಗುಗೆ ಎಷ್ಟ್ ತಿಂಗಳು?’ ಅಂತೆಲ್ಲಾ ಕಿಚಾಯಿಸಿ ಮಜಾ ತೆಗೆದುಕೊಳ್ಳುತ್ತಿದ್ದ. ಸ್ವಭಾತಃ ಮೌನಿಯಾದ ದರ್ಶನ್ ಅವನ ಚೇಷ್ಟೆಗಳಿಗೆಲ್ಲ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸದ ಕಡೆ ಗಮನ ಹರಿಸುತ್ತಿದ್ದರು.
ಮಳೆ ಪ್ರಾರಂಭವಾದ ತಕ್ಷಣ ತುರ್ತು ಮುಂಗಾರು ಅಧಿವೇಶನ ಕರೆದು ನಾವು ನಿರ್ಣಯಿಸಿಕೊಂಡಿದ್ದೆಂದರೆ ‘ಮೊದಲು ಕ್ಯಾಮೆರವನ್ನು ನೀರು ಬೀಳದ ಹಾಗೆ ರಕ್ಷಿಸಿಕೊಳ್ಳಬೇಕು ನಂತರ ನಾವುಗಳು ಮಳೆಯಲ್ಲಿ ನೆನೆಯದ ಹಾಗೆ ಹುಶಾರಾಗಿ ಕೆಲಸ ಮಾಡಬೇಕು’ ಎಂದು. ಮೊದಮೊದಲು ನಮ್ಮ ಈ ನಿರ್ಣಯದಂತೆ ಸ್ವಲ್ಪ ಹೊತ್ತು ಸುರಿಯುತ್ತಿದ್ದ ಮಳೆಯಲ್ಲಿ ನಾವೂ ನೆನೆಯದೆ, ಕ್ಯಾಮೆರವನ್ನೂ ನೆನೆಸದೆ ಸರ್ಕಸ್ ಮಾಡಿದಂತೆ ಚಿತ್ರೀಕರಣ ಮಾಡಲು ಯತ್ನಿಸಿದೆವು. ಅದರೆ ಈ ನಿರ್ಣಯ ತೆಗೆದುಕೊಂಡಷ್ಟೇ ಬೇಗ ನಮಗೆ ಮನವರಿಕೆಯಾಗಿದ್ದೆಂದರೆ ಎಡೆಬಿಡದೆ ಸುರಿಯುವ ಮಲೆನಾಡಿನ ಮಳೆಯಲ್ಲಿ ನಾವೂ ನೆನೆಯದೆ, ಕ್ಯಾಮೆರವನ್ನೂ ನೆನೆಸದೆ ಚಿತ್ರೀಕರಣ ಮಾಡಿದ್ದೇ ಆದರೆ ಈ ಸಾಕ್ಷ್ಯಚಿತ್ರದ ಚಿತ್ರೀಕರಣ ಮುಗಿಸುವಷ್ಟರಲ್ಲಿ ನಾವೆಲ್ಲರು ವೃದ್ದಾಶ್ರಮ ವಾಸಿಗಳಾಗುವಷ್ಟು ಸಮಯ ಬೇಕಾಗುತ್ತದೆ ಎಂಬುದು. ಹಾಗಾಗಿ ನಿಂತ ಜಾಗದಲ್ಲೆ ಮತ್ತೊಂದು ತುರ್ತು ಅಧಿವೇಶನ ಕರೆದು ‘ಮಳೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ’ ಯೋಚನೆಯನ್ನು ತತ್ ಕ್ಷಣದಲ್ಲಿ ಜಾರಿಗೆ ಬರುವಂತೆ ಕೈಬಿಟ್ಟು ‘ಕೇವಲ ಕ್ಯಾಮೆರ ರಕ್ಷಣೆಗೆ ಮಾತ್ರ ಗಮನ ಕೊಡಬೇಕು’ ಎಂದು ಮರುನಿರ್ಣಯ ಕೈಗೊಂಡು ಅಲ್ಲಿಯವರೆಗು ಮಳೆಯಿಂದ ರಕ್ಷಿಸಿಕೊಳ್ಳಲೆಂದು ಧರಿಸಿದ್ದ ರೈನ್ ಕೋಟು, ರೈನ್ ಪ್ಯಾಂಟು, ಹೆಡ್ ಕ್ಯಾಪು, ಜರ್ಕಿನ್ನು ಇನ್ನು ಎಂತೆತಹವೋ ಮಳೆರಕ್ಷಕ ವಸ್ತ್ರಗಳನ್ನು ಕಿತ್ತೆಸೆದು ಚಿತ್ರೀಕರಣ ಮುಂದುವರೆಸಿದೆವು.
“ಬಣಕಲ್ ರಸ್ತೆಯ ಕಾಫಿ ಕಾರ್ನರ್ ಮುಂದೆ”
ಅಂದುಕೊಂಡಂತೆ 9 ಗಂಟೆಯ ಹೊತ್ತಿಗೆ ಈ ಭಾಗದ ಚಿತ್ರೀಕರಣ ಮುಗಿಸಿಕೊಂಡು ನಾವು ಕೊಟ್ಟಿಗೆಹಾರ ರಸ್ತೆಯಲ್ಲಿ ಬಣಕಲ್ ಬಳಿ ಇರುವ ಕಾಫಿ ಕಾರ್ನರ್ಕಡೆ ಹೊರಟೆವು. ಬಾಪು ದಿನೇಶ್ ರವರು 9ಗಂಟೆಯ ನಂತರ ಆ ಕಾಫಿ ಕಾರ್ನರ್ಬಳಿ ಸಿಗೋಣವೆಂದು ಹೇಳಿದ್ದರು. ಮೂಡಿಗೆರೆಯಿಂದ ಹೊರಟ 15 ನಿಮಿಷದಲ್ಲಿ ನಾವು ಆ ಕಾಫಿ ಕಾರ್ನರ್ಮುಂದಿದ್ದೆವು. ಆ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯರೊಬ್ಬರು ಕೊಟ್ಟಿಗೆಹಾರಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ನಡೆಸುತ್ತಿರುವ ಕಾಫಿಶಾಪ್ ಅದು. ನಾವು ಆ ಕಾಫಿ ಶಾಪ್ ತಲುಪಿದ ಹತ್ತು ನಿಮಿಷದ ನಂತರ ಬಾಪು ದಿನೇಶ್ ಅಲ್ಲಿಗೆ ಬಂದರು. ಉಭಯಕುಶಲೋಪರಿಯೆಲ್ಲ ಮುಗಿದ ನಂತರ ನಾನು ಅವರಿಗೆ ದರ್ಶನ್ ಹಾಗು ನಿತಿನ್ ರನ್ನು ಪರಿಚಯಿಸಿದೆ. ಹೇಮಂತನ ಪರಿಚಯ ಅವರಿಗೆ ಹಿಂದಿನ ಸಲ ಮೂಡಿಗೆರೆಗೆ ಬಂದಾಗಲೇ ಆಗಿತ್ತು. ನಂತರ ತಡ ಮಾಡದೆ ಬಾಪು ದಿನೇಶ್ ರೊಂದಿಗೆ ತೇಜಸ್ವಿಯ ಹೆಜ್ಜೆಗುರುತುಗಳನ್ನು ಶೋಧಿಸುವ ನಮ್ಮ ಕೆಲಸವನ್ನು ಪ್ರಾರಂಭಿಸಿದೆವು. ಅಂದಿನ ಇಡೀ ದಿನದ ಚಿತ್ರೀಕರಣದ ಯೋಜನೆ ಅದಾಗಲೇ ಸಿದ್ದವಾಗಿತ್ತಾದರೂ ಬಾಪುರವರೊಂದಿಗೆ ಮತ್ತೊಮ್ಮೆ ಚರ್ಚಿಸಿ ತೇಜಸ್ವಿಯವರು ಓಡಾಡಿದ ಜಾಗಗಳ ಬಗ್ಗೆ ಮತ್ತೊಮ್ಮೆ ಖಚಿತಪಡಿಸಿಕೊಂಡು ಅಂದಿನ ಹುಡುಕಾಟ ಪ್ರಾರಂಭಿಸಿದೆವು.
“ಯಾರೋ ದೊಡ್ ಮನುಶ್ರು ಮಗ ಅಂತೆ”
ಬಾಪುರೊಂದಿಗಿನ ತೇಜಸ್ವಿಯ ಹುಡುಕಾಟ ಪ್ರಾರಂಭವಾಗಿದ್ದು ಮೂಡಿಗೆರೆಯಿಂದ ಕೊಟ್ಟಿಗೆಹಾರದ ಕಡೆ ಹೊರಟರೆ ಕೊಟ್ಟಿಗೆಹಾರ ಸಿಗುವುದಕ್ಕೆ ೫ ಕಿಲೋಮೀಟರ್ ಮೊದಲು ಸಿಗುವ ಬಂಕೇನಹಳ್ಳಿ ಎಂಬ ಊರಿನ ಬಳಿ ಹರಿಯುತ್ತಿರುವ ಹೇಮಾವತಿ ನದಿ ದಡದಿಂದ.ಬಾಳೂರು ದಟ್ಟ ಅರಣ್ಯದ ಕಡೆಯಿಂದ ಹರಿದು ಹೇಮಾವತಿ ನದಿ ಈ ಬಂಕೇನಹಳ್ಳಿ ಎಂಬ ಊರಿನ ಬಳಿ ಹರಿದು ಹೋಗುತ್ತದೆ. ತೇಜಸ್ವಿಯವರಿಗು ಆ ಜಾಗಕ್ಕು ಇದ್ದ ಸಂಬಂಧದ ಬಗ್ಗೆ ಬಾಪು ದಿನೇಶ್ ವಿವರಿಸಿದನ್ನು ಅವರ ಬಾಯಿಯಿಂದಲೇ ಕೇಳೋಣ. ಓವರ್ ಟು ಬಾಪು; “ಇದು ಬಾಳೂರಿನ ಕಡೆಯಿಂದ ಹರಿದು ಬರ್ತಾ ಇರೊ
ಹೇಮಾವತಿ ನದಿ. ಈ ಜಾಗಕ್ಕೆ 1980ರ ಸಮಯದಲ್ಲಿ ತೇಜಸ್ವಿಯವ್ರು ಫಿಶಿಂಗಿಗೆ ಅಂತ ಬರ್ತಾ ಇದ್ರು. ಆಗ ಈ ಸೇತುವೆ ಇರಲಿಲ್ಲ. ಹಾಗಾಗಿ ಜನರ ಓಡಾಟ ಕಡಿಮೆ ಇತ್ತು. ಮಳೆಗಾಲದಲ್ಲಿ ಈ ಹೇಮಾವತಿ ನದಿ ತುಂಬಿ ಹರಿಯುತ್ತೆ. ಆದ್ರೆ ಅಕ್ಟೋಬರ್-ನವೆಂಬರ್ ಹೊತ್ತಿಗೆ ಸ್ವಲ್ಪ ನೀರು ಕಡಿಯಾಗಿರುತ್ತೆ. ಆಗ ಇಲ್ಲಿ ತುಂಬಾ ಗುಂಡಿಗಳಿದ್ವು. ಬಾಳೆ ಮೀನು, ಅವ್ಲ್ ಮೀನು ಮುಂತಾದ ಹಲವಾರು ತರದ ಮೀನುಗಳು ಈ ಗುಂಡಿಗಳಲ್ಲಿ ಯಥೇಚ್ಚವಾಗಿರ್ತಿದ್ವು. ಹಾಗಾಗಿ ಇದು ಫಿಶಿಂಗಿಗೆತುಂಬಾ ಒಳ್ಳೆ ಜಾಗ ಆಗಿತ್ತು. ಇದೇ ಕಾರಣಕ್ಕೆ ತೇಜಸ್ವಿಯವ್ರು ಈ ಜಾಗ ಮೀನು ಹಿಡಿಯೋಕೆ ಪ್ರಶಸ್ತವಾಗಿದೆ ಅಂತೇಳಿ ಇಲ್ಲಿಗೆ ಆಗಾಗ ಬರ್ತಾ ಇರೋರು. 1980 ರಿಂದ 1989ರವರೆಗೆ ಅವ್ರು ಬಂಕೇನಹಳ್ಳಿ ಹತ್ತಿರ ಹರಿಯುವ ಈ ಹೇಮಾವತಿ ನದೀಲಿ ಫಿಶಿಂಗ್ಮಾಡಿದಾರೆ”
‘ಅಮೇಲೆ ಇಲ್ಲಿಗೆ ಬರೋದು ಯಾಕ್ ಬಿಟ್ರು?’ ನಾನು ಪ್ರಶ್ನಿಸಿದೆ.
ಓವರ್ ಟು ಬಾಪು ಅಗೈನ್; “ಕ್ರಮೇಣ ಏನಾಯ್ತುಅಂದ್ರೆ, ಇಲ್ಲಿ ಸೇತುವೆ ಇರ್ಲಿಲ್ಲ ಅಂತ ಹೇಳಿದ್ನಲ್ಲ. ಕೆಲವು ವರ್ಷದ ನಂತರ ಈ ಹೊಳೆಗೆ ಸೇತುವೆ ಬಂತು. ಅಮೇಲೆ ತುಂಬಾ ಜನ ಓಡಾಡೋಕೆ ಶುರು ಮಾಡಿದ್ರು. ಓಡಾದೋ ಜನಗಳೆಲ್ಲ ಯಾರ ತಂಟೆಗೂ ಹೋಗ್ದೆ ಮೌನವಾಗಿ ಕೂತು ಮೀನು ಹಿಡೀತಿದ್ದ ತೇಜಸ್ವಿಯವ್ರನ್ನ ಮಾತಾಡ್ಸೊಕೆ ಶುರು ಮಾಡಿದ್ರು. ಇದ್ರಿಂದ ಅವ್ರಿಗೆ ತುಂಬಾ ಕಿರಿಕಿರಿ ಆಗೋಕೆ ಶುರುವಾಯ್ತು. ಒಂದ್ಸಲ ಅಂತು ಬಂಕೇನಹಳ್ಳಿ ಜನಗಳೆಲ್ಲ ‘ತೇಜಸ್ವಿ ಅಂತೆ, ಕುವೆಂಪು ಮಗ ಅಂತೆ, ಇಲ್ಲಿ ಬಂದು ಮೀನು ಹಿಡೀತಾ ಕೂತಿದಾರಂತೆ, ನೋಡೋಣ ಬನ್ನಿ ಅಂತ ಗುಂಪಾಗಿ ಬಂದು ಅವರನ್ನ ಮಾತಾಡ್ಸಿ ತುಂಬಾ ಡಿಸ್ಟರ್ಬ್ ಮಾಡಿಬಿಟ್ರು. ಹಾಗಾಗಿ ಇಲ್ಲಿಗೆ ಬಂದ್ರೆ ಫಿಶಿಂಗಿಗೆಬೇಕಾದ ಏಕಾಂತ ಸಿಗೊಲ್ಲ ಅಂತ ಹೇಳಿ ತೇಜಸ್ವಿ ಇಲ್ಲಿಗೆ ಬರೋದು ನಿಲ್ಸಿದ್ರು. ಇನ್ನೊಂದು ಮುಖ್ಯವಾದ ಕಾರಣ ಅಂತಂದ್ರೆ ಸೇತುವೆ ಆದ್ಮೇಲೆ ಇಲ್ಲಿ ಮರಳು ತೆಗೆಯೋರ ಕಾಟ ಜಾಸ್ತಿ ಆಯ್ತು. ಜೀಪಲ್ಲಿ, ಟ್ರಾಕ್ಟರುಗಳಲ್ಲಿ, ಲಾರಿಗಳಲ್ಲಿ ಬಂದು ಮರಳು ತೆಗೆಯೋರು. ಆಗ ಇಲ್ಲಿದ್ದ ಗುಂಡಿಗಳೆಲ್ಲ ಮುಚ್ಚಿಹೋದ್ವು. ಈ ಕಾಟಗಳನ್ನೆಲ್ಲ ತಡೆಯೋಕೆ ಆಗ್ದೆ ಅವ್ರು ಇಲ್ಲಿಗೆ ಬರೋದೆ ನಿಲ್ಲಿಸಿಬಿಟ್ರು”. ಎಂದು ಹೇಳಿ ಮಾತು ಮುಗಿಸಿದರು ಬಾಪು. ‘ಅವ್ರು ಇಲ್ಲಿಗೆ ಬರ್ತಿದ್ದಾಗ ನೀವು ಅವ್ರನ್ನ ನೋಡಿದ್ರ, ಮಾತಾಡ್ಸಿದ್ರ?’ ನಾನು ಮತ್ತೆ ಪ್ರಶ್ನಿಸಿದೆ.
“ನೋಡೋದೇನು ತುಂಬಾ ಸಲ ಅವರ ಜೊತೆ ಫಿಶಿಂಗಿಗೆಕಂಪನಿ ಕೊಟ್ಟಿದ್ದೀನಿ ಇಲ್ಲಿ. ನಾನು ಇದೇ ಬಂಕೇನಹಳ್ಳಿಯವನು” ಎಂದರು ಬಾಪು. ನಾನು ಅವರಿಗೆ ಮತ್ತೇನು ಪ್ರಶ್ನೆ ಕೇಳಲಿಲ್ಲ. ಸ್ವಲ್ಪ ಹೊತ್ತು ಬಾಪು “ತೇಜಸ್ವಿ ಗಾಳ ಹಿಡ್ಕೊಂಡು ಕೂರ್ತಿದ ಜಾಗ ಇದು” ಎಂದು ತೋರಿಸಿದ ಸೇತುವೆ ಕೆಳಗಿನ ಜಾಗವನ್ನೇ ನೋಡುತ್ತಾ ತೇಜಸ್ವಿ ಅಲ್ಲಿ ಕುಳಿತಂತೆ ಕಲ್ಪಿಸಿಕೊಳ್ಳುತ್ತಿದ್ದೆ. ಮಳೆಗಾಲವಾಗಿದ್ದರಿಂದ ಹೇಮಾವತಿ ಕೆಂಪಾಗಿ ತುಂಬಿ ಹರಿಯುತ್ತಿದ್ದಳು. ನಮ್ಮ ಹುಡುಗರು ನದಿಯ ಹಾಗು ಸುತ್ತಮುತ್ತಲಿನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು.
“ಬೆಚ್ಚಿಬೀಳಿಸುವ ವಿಸ್ತಾರದ ಭದ್ರೆ”
’ಮುಂದೆ ಯಾವ್ ಕಡೆ ಕರ್ಕೊಂಡ್ ಹೋಗ್ತಿರಿ ಸಾರ್?’ ಸ್ವಲ್ಪ ಹೊತ್ತಿನ ನಂತರ ಬಾಪುರವರಿಗೆ ಕೇಳಿದೆ. “ಮುಂದೆ ನಾವು ಹೋಗೋ ಜಾಗದ ಹೆಸರು ಮಾಗುಂಡಿ ಅಂತ. ಕೊಟ್ಟಿಗೆಹಾರದಿಂದ ಬಾಳೆಹೊನ್ನೂರಿಗೆ ಹೋಗೊ ದಾರೀಲಿ ಮಾಗುಂಡಿ ಅಂತ ಒಂದು ಜಾಗ ಸಿಗುತ್ತೆ. ಅಲ್ಲಿ ಭದ್ರಾ ನದಿ ಹರಿಯುತ್ತೆ. ಅಲ್ಲಿಗೆ ಹೋಗೋಣ ಬನ್ನಿ” ಎಂದರು ಬಾಪು. ’ತೇಜಸ್ವಿ ಅಲ್ಲಿಗೂ ಹೋಗ್ತಿದ್ರ ಸಾರ್’ ಎಂದು ಹೇಮಂತನ ಕಡೆಯಿಂದ ಪ್ರಶ್ನೆ. ’ಅಲ್ಲಿನ ವಿಷಯವನ್ನ ಅಲ್ಲೇ ಕೇಳೋರಂತೆ ಬನ್ನಿ’ ಎಂದು ಹೇಳಿದ ಬಾಪುರವರ ಮಾತಿಗೆ ನಾವೆಲ್ಲರು ನಗುತ್ತಾ ವ್ಯಾನ್ ಏರಿದೆವು. ಕೊಟ್ಟಿಗೆಹಾರ ಹತ್ತಿರ ಬಂದಾಗ ಕಳೆದ ಬಾರಿ ಅಲ್ಲಿ ತಿಂದಿದ್ದ ನೀರು ದೋಸೆ, ಕೋಳಿ ಸಾರು ನೆನಪಿಗೆ ಬಂದು ಸ್ವಲ್ಪ ಹೊತ್ತು ಅಲ್ಲಿ ಗಾಡಿ ನಿಲ್ಲಿಸಿ ಬಾಯಿ ಚಪ್ಪರಿಸಿ ನೀರು ದೋಸೆ, ಕೋಳಿ ಸಾರು ತಿಂದು ಮಾಗುಂಡಿ ಕಡೆ ಪ್ರಯಾಣ ಮುಂದುವರೆಸಿದೆವು. ದರ್ಶನ್ ನೀರು ದೋಸೆ, ಚಟ್ನಿಗೆ ತೃಪ್ತರಾದರು. ಬಾಪು ಮಾರ್ಗದರ್ಶಕರಾಗಿ ಗಾಡಿ ಚಲಾಯಿಸುತ್ತಿದ್ದ ನಿತಿನ್ ಪಕ್ಕ ಕುಳಿತು ದಾರಿ ನಿರ್ದೇಶಿಸುತ್ತಿದ್ದರು. ನಮ್ಮ ವ್ಯಾನು ಕೊಟ್ಟಿಗೆಹಾರ, ಬಾಳೂರು ಮಾರ್ಗವಾಗಿ ಹಲವು ಖಾಸಗಿ ಕಾಫಿ ತೋಟಗಳು, ಸರ್ಕಾರಿ ಕಾಡು ದಾಟಿ ಕಿರಿದಾದ ಅಂಕೊಡೊಂಕು ರಸ್ತೆಯಲ್ಲಿ ಮುಂದೆ ಮುಂದೆ ಸಾಗುತ್ತಿತ್ತು. ಸುಮಾರು ಮುಕ್ಕಾಲು ಗಂಟೆ ಕ್ರಮಿಸಿದ್ದೇವೇನೊ ಆಗ ಬಾಪು ‘ಗಾಡಿ ಇಲ್ಲಿ ಸ್ವಲ್ಪ ಸೈಡಿಗ್ ಹಾಕಿ’ ಎಂದರು. ನಿತಿನ್ ವ್ಯಾನನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ. ನಮ್ಮನ್ನು ಇಳಿಯುವಂತೆ ಹೇಳಿ ಮುಂದೆ ಹೋದರು ಬಾಪು. ನಾವು ಕ್ಯಾಮೆರಸಮೇತರಾಗಿ ಅವರನ್ನು ಹಿಂಬಾಲಿಸಿದೆವು. ನಮ್ಮೆದುರಿಗೆ ತುಂಬಾ ಹಳೆಯದರಂತೆ ಕಾಣುತ್ತಿದ್ದ ಸೇತುವೆಯೊಂದು ಕಾಣುತಿತ್ತು. ಬಾಪು ಆ ಸೇತುವೆ ಕಟ್ಟೆಯ ಮೇಲೆ ಎರಡೂ ಕೈಊರಿ ನಿಂತು ದಿಗಂತವನ್ನು ದಿಟ್ಟಿಸುತ್ತಿದ್ದರು. ಏನಿರಬಹುದೆಂದು ಯೋಚಿಸುತ್ತಾ ಸೇತುವೆಯ ಮೇಲಕ್ಕೆ ಬಂದು ನೋಡಿದರೆ ಒಂದು ಕ್ಷಣ ಎದೆ ಝಲ್ಲೆನಿಸುವ ದೃಶ್ಯ. ನಾವು ನಿಂತಿದ್ದ ಸೇತುವೆಯ ಕೆಳಗೆ ತುಂಬಿ ಭೋರ್ಗರೆದು ಕೆಂಪಾಗಿ ಹರಿಯುತ್ತಿದ್ದ ಭದ್ರಾ ನದಿ. ಅಷ್ಟು ಹತ್ತಿರ ಬರುವವರೆಗೂ ನಮಗ್ಯಾರಿಗೂ ಅಲ್ಲಿ ನದಿ ಹರಿಯುತ್ತಿರುವ ಸದ್ದೇ ಕೇಳಿಸಿರಲಿಲ್ಲ.
ಬಿರು ಮಳೆಗಾಲವಾದ್ದರಿಂದ ತುಂಬಿ ಗಂಭೀರವಾಗಿ ಹರಿಯುತ್ತಿತ್ತು ಭದ್ರಾ ನದಿ. ಎಂತಹ ಎದೆಗಾರಿಕೆಯುಳ್ಳವರಿಗೇ ಆಗಲಿ ಅಷ್ಟು ವಿಸ್ತಾರವಾಗಿ, ಅಷ್ಟು ಗಂಭೀರವಾಗಿ ಹರಿಯುತ್ತಿದ್ದ ಆ ನದಿಯನ್ನು ಮೊದಲ ಸಲ ನೋಡಿದಾಗ ಸಣ್ಣದಾಗಿಯಾದರೂ ಎದೆಯಲ್ಲಿ ಭೀತಿ ಕಾಡದೇ ಇರುವುದಿಲ್ಲ. ’ಏನ್ ಸಾರ್, ನೋಡೋಕೆ ಭಯ ಆಗೋ ಹಾಗೆ ಇದ್ಯಲ್ಲ ಇದು. ಇಲ್ಲಿ ಬಂದು ಫಿಶಿಂಗ್ ಮಾಡ್ತಿದ್ರ ತೇಜಸ್ವಿ?’ ಎಂದು ಬಾಪುರವರನ್ನು ಕೇಳಿದೆ. ಬಾಪು ನಗುತ್ತಾ ’ಹಹ…ಹೌದು! ಆದ್ರೆ ಮಳೆಗಾಲದಲಲ್ಲ. ನವೆಂಬರ್-ಡಿಸೆಂಬರ್ ಟೈಮಲ್ಲಿ. ಬನ್ನಿ ಅವತ್ತಿನ ದಿನಗಳ ಬಗ್ಗೆ ಹೇಳ್ತೀನಿ’ ಎಂದರು. ಎಲ್ಲರು ಮತ್ತೆ ವ್ಯಾನ್ ಏರಿದೆವು. ವ್ಯಾನು ಅಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿ ದಟ್ಟ ಕಾಡಿನ ಮಧ್ಯದಲ್ಲಿದ್ದ ತೇಜಸ್ವಿಯವರ ಫೇವರೆಟ್ ಫಿಶಿಂಗ್ ಸ್ಪಾಟಿನ ಕಡೆ ಹೊರಟಿತ್ತು. ಮಾರ್ಗ ಮಧ್ಯದಲ್ಲಿ ಭದ್ರಾ ನದಿಯ ಆ ಸೇತುವೆ ಸುಮಾರು ೧೨೦ ವರ್ಷಗಳ ಹಿಂದೆ ಬ್ರಿಟೀಷರು ಭದ್ರಾ ನದಿಗೆ ನಿರ್ಮಿಸಿದ ಸೇತುವೆಯೆಂದು ಬಾಪು ನಮಗೆ ತಿಳಿಸಿದರು.
“ನಡೆದಾಡುವ ಫಿಶಿಂಗ್ ಯೂನಿವರ್ಸಿಟಿ”
ಕಾಡಿನ ತಿರುವು ಮುರುವಿನ ರಸ್ತೆಯಲ್ಲಿ ನಮ್ಮ ವ್ಯಾನು ನಿಂತಿತು. “ಇಳೀರಿ ಬೇಗ, ಇದು ಮಾಗುಂಡಿ ಅಂತ ಪ್ಲೇಸು. ಹುಶಾರಾಗಿ ಬನ್ನಿ, ಹಾವುಗಳಿರ್ತವೆ! ಪ್ಯಾಂಟೆಲ್ಲ ಮೇಲಕ್ಕೆ ಮಡಚಿಕೊಳ್ಳಿ. ಜಿಗಣೆ ಇರ್ತಾವೆ, ಮೈಗೆಲ್ಲ ಹತ್ತಿಕೊಂಡು ಬಿಡ್ತಾವೆ. ಜೋಪಾನವಾಗಿ ಬನ್ನಿ” ಎಂದು ನಮ್ಮನ್ನು ನಿರ್ದೇಶಿಸುತ್ತಾ ಬಾಪು ಕಾಡಿನ ಜಿಗ್ಗಿನ ಮಧ್ಯೆ ದಾರಿ ಮಾಡಿಕೊಂಡು ಕೆಳಗೆ ಇಳಿಯುತ್ತಾ ಹೋಗುತ್ತಿದ್ದರು. ನಾವು ನಾಲ್ಕೂ ಜನ ಅವರನ್ನು ಅನುಸರಿಸುತ್ತಿದ್ದೆವು. ಅವರು ಹಾವಿರ್ತವೆ, ಜಿಗಣೆ ಇರ್ತವೆ ಅಂತ ಹೇಳದೇ ಇದ್ದರೆ ಚೆನ್ನಾಗಿತ್ತು. ಆದರೆ ಈಗ ನಮ್ಮ ನಾಲ್ಕೂ ಜನಕ್ಕೂ ದೂರದಲ್ಲಿ ಕಪ್ಪಗೆ ಕೊಳೆತು ಬಿದ್ದಿರುವ ಮರದ ಕೊಂಬೆಗಳೆಲ್ಲ ನಮ್ಮನ್ನು ಕಚ್ಚಿ ಸ್ವಾಗತಿಸಲು ಕಾದಿರುವ ಹಾವುಗಳಂತೆಯೇ ಕಾಣತೊಡಗಿದವು. ಆ ಭಯದಲ್ಲೇ ಹಿಂದೆ ಮುಂದೆ ನೋಡುತ್ತಾ ಕೆಳಗಿಳಿದು ಬರುತ್ತಿದ್ದಂತೆ ಕಾಡಿನ ಮಧ್ಯೆ ಕೆಂಪಾಗಿ ಭೋರ್ಗರೆದು ಹರಿಯುತ್ತಿದ್ದ ಭದ್ರಾ ನದಿ ಕಾಣಿಸುತ್ತಿತ್ತು. ಎಲ್ಲರೂ ಬಾಪುರನ್ನು ಹಿಂಬಾಲಿಸಿ ಕೆಳಗಿಳಿದು ಬಂದು ನದಿಯ ದಂಡೆಯ ಮೇಲೆ ನಿಂತೆವು.
ಬಾಪು ಹೇಳುತ್ತಾ ಹೋದರು “ಇದು ಭದ್ರಾ ನದಿ. ಕುದುರೆಮುಖದ ಕಡೆಯಿಂದ ಹರಿದು ಬರುತ್ತೆ. ಈಗ ಮಳೆಗಾಲ ಆಗಿರೋದ್ರಿಂದ ನೀರು ಹೀಗೆ ತುಂಬಾ ಫೋರ್ಸಾಗಿತುಂಬಿ ಹರಿಯುತ್ತೆ. ಆದ್ರೆ ನವೆಂಬರ್-ಡಿಸೆಂಬರ್ ಟೈಮಲ್ಲಿ ನೀರು ಇಷ್ಟು ಫೋರ್ಸ್ ಇರೊಲ್ಲ. ಆಗ ತೇಜಸ್ವಿಯವ್ರ ಜೊತೆ ನಾನು ಮತ್ತೆ ರಾಘವೇಂದ್ರ ಅಂದ್ರೆ ರಘು ಅಣ್ಣ ಅಂತಾರಲ್ಲ ಇಬ್ರು ಬರ್ತಿದ್ವಿ. ಇಲ್ಲಿವರ್ಗು ಒಟ್ಟಿಗೆ ಬರ್ತಿದ್ವಿ. ಇಲ್ಲಿಗೆ ಬಂದ್ಮೇಲೆ ಎಲ್ರೂ ದೂರ ದೂರ ಹೋಗಿ ಕೂತು ಮೀನು ಹಿಡೀತಿದ್ವಿ. ಅಲ್ ನೋಡಿ ಅಲ್ಲಿ ದೂರದಲ್ಲಿ ಒಂದು ದೊಡ್ಡ ಬಂಡೆ ಕಾಣ್ತಿದ್ಯಲ್ಲ…ಅದು ತೇಜಸ್ವಿಯವ್ರ ಫೇವರೆಟ್ ಸ್ಪಾಟು. ಅವ್ರು ಇಲ್ಲಿಗೆ ಬಂದಾಗಲೆಲ್ಲ ಆ ಬಂಡೆ ಮೇಲೆ ಕೂತು ಫಿಶಿಂಗ್ಮಾಡ್ತಿದ್ರು. ಬಿಗಿನಿಂಗ್ ನಲ್ಲಿ ನನಗೂ ಒಂದು ಗಾಳ ಕೊಟ್ಟು ಅವ್ರೇ ಗಾಳ ಹೇಗೆ ಹಾಕ್ಬೇಕು, ಮೀನು ಗಾಳ ಕಚ್ಚಿದಾಗ ಹೇಗೆ ಉಪಾಯವಾಗಿ ದಾರ ಎಳ್ಕೋಬೇಕು ಅಂತೆಲ್ಲ ಹೇಳಿಕೊಟ್ಟಿದ್ರು. ಅದೇ ಪ್ರಕಾರ ನಾನು ಮೀನು ಹಿಡೀತಾ ಇರ್ತಿದ್ದೆ” ಎಂದು ಮಾತಿಗೆ ಅಲ್ಪ ವಿರಾಮ ಕೊಟ್ತರು ಬಾಪು.
’ಅದೇ ಬಂಡೆ ಮೇಲೆ ಯಾಕ್ ಕೂರ್ತಿದ್ರು ಅವ್ರು?’ ಹೇಮಂತನ ಕಡೆಯಿಂದ ಪ್ರಶ್ನೆ. ’ತೇಜಸ್ವಿಗೆ ಅವ್ಲ್ ಮೀನು ಅಂದ್ರೆ ತುಂಬಾ ಇಷ್ಟ. ಈ ಅವ್ಲ್ ಮೀನುಗಳು ಸಾಮಾನ್ಯವಾಗಿ ಬಂಡೆ ಕೆಳಗೆ ವಾಸ ಮಾಡ್ತವೆ. ಅದಕ್ಕೇ ಇರ್ಬೇಕು ಅನ್ಸುತ್ತೆ ತೇಜಸ್ವಿಯವ್ರು ಆ ಬಂಡೆ ಮೇಲೆ ಕೂರ್ತಾ ಇದ್ದಿದು” ಎಂದು ಹೇಮಂತನ ಪ್ರಶ್ನೆಗೆ ಉತ್ತರಿಸಿದರು.
’ಅವ್ಲ್ ಮೀನು ಅಂದ್ರಲ್ಲ ಇಲ್ಲಿ ಇನ್ನು ಬೇರೆ ಯಾವ್ ಯಾವ್ ತರದ ಮೀನುಗಳಿದ್ದಾವೆ ಅಂತ ಹೇಳ್ತೀರ’ ಎಂದು ಬಾಪುರವರನ್ನು ಕೇಳಿದೆ.
ಈ ನದೀಲಿ ಅವ್ಲ್ ಮೀನು, ಬಾಳೆ ಮೀನು, ಹದ್ದಿನ ಮೀನು, ಹಾವು ಮೀನು ಇದಾವೆ. ಎಲ್ಲಾ ಮೀನುಗಳಿಗು ಒಂದೇ ಮೆಥಡ್ ಫಾಲೋಮಾಡಕ್ ಆಗಲ್ಲ. ಒಂದೊಂದು ಜಾತಿ ಮೀನಿಗೆ ಒಂದೊಂದು ಮಂತ್ರ ಹಾಕ್ಬೇಕಾಗುತ್ತೆ. ಅವ್ಲ್ ಮೀನು ನಾನ್ ಆಗ್ಲೆ ಹೇಳಿದ್ನಲ್ಲ ಬಂಡೆ ಸಂದಿ ಇರ್ತಾವೆ ಅಂತ, ಅವನ್ನ ಸಣ್ಣ ಮೀನು ಹಾಕಿ ಹಿಡಿಯೋಕ್ ಆಗಲ್ಲ. ಅವಕ್ಕೇನಿದ್ರು ಸ್ಪಿನರ್ ಹಾಕೇ ಹಿಡೀಬೇಕು. ಸ್ಪಿನ್ನರ್ ಅಂದ್ರೆ ಅದೊಂದು ರೀತಿ ಫಳ ಫಳ ಅಂತ ಹೊಳೆಯೊ ಎರಡ್ಮೂರು ಮಣಿಗಳಿರೊ ಗಾಳ ಅದು. ಈ ಮಣಿಗಳ ಮಧ್ಯದಲ್ಲಿ ಚೂಪು ಗಾಳ ಇರುತ್ತೆ. ನಾವು ಫಿಶಿಂಗ್ಮಾಡೋರು ಆ ಸ್ಪಿನ್ನರನ್ನು ನೀರಿಗೆ ಹಾಕಿ ಕೈಯಲ್ಲಿರೊ ರಾಡಿನ ವ್ಹೀಲ್ ತಿರುಗಿಸುತ್ತಾ ಇದ್ರೆ ನೀರಿಗೆ ಹಾಕಿರೊ ಅ ಬಣ್ಣದ ಮಣಿಗಳು ತಿರುಗ್ತಾ ಇರ್ತವೆ. ಆಗ ಈ ಅವ್ಲ್ ಮೀನುಗಳು ಇದ್ಯಾವುದೋ ಹುಳ ಇರ್ಬೇಕು ಅಂದ್ಕೊಂಡು ಬಂದು ಆ ಸ್ಪಿನ್ನರಿಗೆ ಬಾಯಿ ಹಾಕ್ತವೆ. ಆಗ ಆ ಮೀನಿನ ಬಾಯಿಗೆ ಚೂಪು ಗಾಳ ಸಿಕಾಕೊಳ್ಳುತ್ತೆ. ಅಮೇಲೆ ನಾವು ಅದನ್ನ ಎಳೆದು ಹಾಕೋತೀವಿ. ಇದು ಅವ್ಲ್ ಮೀನು ಆಯ್ತು. ಹದ್ದಿನ ಮೀನು ಅಂತ ಒಂದಿದೆ. ಅದು ಒಳ್ಳೆ ಸಿಮೆಂಟ್ ಮೂಟೆ ಇದ್ದ ಹಾಗೆ ದಪ್ಪ ಇರುತ್ತೆ. ಅದರ ಕಣ್ಣುಗಳು ಹದ್ದಿಗೆ ಇದ್ದ ಹಾಗೆ ಮೆಲಕ್ಕಿರಿತ್ವೆ. ಅದಕ್ಕೆ ಅದನ್ನ ಹದ್ದಿನ ಮೀನು ಅಂತ ಕರೀತಾರೆ. ಅದಕ್ಕೆ ಈ ಕಲ್ಲೇಡಿ (ಏಡಿಕಾಯಿ) ಅಂದ್ರೆ ತುಂಬಾ ಇಷ್ಟ. ಹಂಗಾಗಿ ಹದ್ದಿನ್ ಮೀನ್ ಹಿಡಿಬೇಕು
ಅಂದಾಗ ನಾವು ತೇಜಸ್ವಿಯವ್ರ ತೋಟದಲ್ಲೆ ಹುಡುಕಾಡಿ ಒಂದಷ್ಟು ಕಲ್ಲೇಡಿಗಳನ್ನ ಹಿಡ್ಕೊಂಡ್ ಬರ್ತಿದ್ವಿ. ಆ ಕಲ್ಲೇಡಿಗಳನ್ನ ಗಾಳಕ್ಕೆ ಚುಚ್ಚಿ ನೀರಿಗೆ ಹಾಕಿ ಕಾಯ್ತ ಕೂರ್ತಿದ್ವಿ. ಹದ್ದಿನ ಮೀನು ಕಚ್ಚಿದ ಕೂಡ್ಲೆ ಅದನ್ನ ಎಳೆದು ಹಾಕ್ತಿದ್ವಿ. ಅಮೇಲೆ ಈ ಹದ್ದಿನ ಮೀನು ಇದ್ಯಲ್ಲ ಅದು ಗಾಳಕ್ಕೆ ಬಿದ್ದಾಗ ಮೇಲಕ್ಕೆಳೆಯೋದು ಒಂದು ಕಲೆ. ಯಾಕೆ ಅಂದ್ರೆ ಈ ಹದ್ದಿನ್ ಮೀನು ಗಾಳಕ್ಕೆ ಸಿಕಾಕೊಂಡ ಕೂಡ್ಲೇ ಗಾಳದ ಸಮೇತ ಹೋಗಿ ಬಂಡೆ ಸಂದಿ ಸೇರಿಕೊಂಡು ಬಂಡೆಗೆ ತಲೆ ಕೊಟ್ಟು ಕೂತ್ಬಿಡುತ್ತೆ. ನೀವು ಎಷ್ಟ್ ಎಳೆದ್ರು ಜಗ್ಗೋದೆ ಇಲ್ಲ. ತುಂಬಾ ಬಲವಂತ ಮಾಡಿ ಜಗ್ಗಿದರೆ ಗಾಳ ತುಂಡಾಗಿ ಬರಿ ದಾರ ಹಿಂದಕ್ ಬರುತ್ತೆ. ಅದಕ್ಕೆ ಏನ್ ಮಾಡ್ತಿದ್ವಿ ಹದ್ದಿನ್ ಮೀನು ಗಾಳ ಕಚ್ಚಿದ್ ಕೂಡ್ಲೇ ರೀಲಿನಲ್ಲಿರೊ ದಾರನೆಲ್ಲ ನೀರಿಗೆ ಬಿಡ್ತಾಬರ್ತಿದ್ವಿ. ಮೀನು ದಾರ ಲೂಸಾದಗೆಲ್ಲ ತಪ್ಪಿಸ್ಕೊಳ್ಳೊಕೆ ಅಂತ ದೂರ ಹೋಗ್ತಾ ಹೋಗುತ್ತೆ. ತುಂಬಾ ದೂರಕ್ ಅದನ್ನ ಕಳಿಸಿ ಮತ್ತೆ ದಾರ ಸುತ್ತಿಕೋತ ಅದನ್ನ ಹಿಂದಕ್ಕೆ ಎಳಿತೀವಿ. ಮತ್ತೆ ದಾರ ಲೂಸ್ ಬಿಟ್ಟು ಮುಂದಕ್ಕೆ ಕಳಿಸ್ತೀವಿ. ಹೀಗೆ ಹಿಂದೆ ಮುಂದೆ ಕಳಿಸ್ತಾ ಗಾಳಕ್ಕೆ ಸಿಕ್ಕಿರೊ ಆ ಮೀನನ್ನ ಸುಸ್ತ್ ಮಾಡಿ ಸೋಲ್ಸಿ ಅಮೇಲೆ ಅದನ್ನ ದಡಕ್ಕೆ ಎಳಿತೀವಿ. ಆಗ ಆ ಮೀನು ಎಷ್ಟೇ ದೊಡ್ಡದಾಗಿದ್ರು ಸೋತು ಶರಣಾಗಿ ನಮ್ ಕೈಗೆ ಸಿಕ್ಕಿ ಬೀಳುತ್ತೆ. ಇದನೆಲ್ಲ ತೇಜಸ್ವಿಯವ್ರೆ ನಮಗೆ ಹೇಳಿಳೊಟ್ಟಿದ್ರು. ಅವ್ರು ಒಂದ್ಸಲ ಹೇಳಿ ಕೊಡೋರು. ನಾವು ಅವ್ರು ಹೇಳಿಕೊಟ್ಟ ಹಾಗೆ ಮಾಡ್ತಾ ಇದ್ವಿ. ಅವ್ರು ಹೇಳ್ಕೊಟ್
ಮೇಲು ಮತ್ತೆ ಮತ್ತೆ ಕೇಳ್ತಾ ಇದ್ರೆ ’ಏನಯ್ಯ ನಿನ್ಗೆ ದಿನಾ ಪಾಠ ಮಾಡ್ಬೇಕೇನಯ್ಯ? ಒಂದ್ಸಲ ಹೇಳಿದ್ರೆ ತಿಳ್ಕೊಳ್ಳಕ್ಕಾಗಲ್ವ?’ ಅಂತ ಜೋರು ಮಾಡೋರು.
ಮತ್ತೊಂದಿದೆ ಬಾಳೆ ಮೀನು ಅಂತ. ಅದು ಹದ್ದಿನ ಮೀನಿನ ಹಾಗೆ. ಆದ್ರೆ ಅದಕ್ಕೆ ಕಲ್ಲೇಡಿ ಬದ್ಲು ಸಣ್ ಸಣ್ ಮೀನ್ ಗಾಳಕ್ ಹಾಕಿ ಹಿಡೀತಿದ್ವಿ.
ಇನ್ನೊಂದಿದೆ ಹಾವು ಮೀನು ಅಂತ. ಅದಕ್ಕೆ ಈ ಎರೆಹುಳ ಅಂದ್ರೆ ಪ್ರಾಣ. ಅದನ್ನು ನಾವು ತೇಜಸ್ವಿಯವರ ತೋಟದಲ್ಲೇ ನೆಲ ಅಗೆದು ಹಿಡಿಕೊಂಡು ಬಂದು ಗಾಳಕ್ಕೆ ಹಾಕಿ ನದಿಗೆ ಹಾಕಿ ಕಾಯ್ತಿದ್ವಿ. ಈ ಹಾವಿನ ಮೀನು ಇದ್ಯಲ್ಲ ಇದು ಒಂತರ ಸೈಲೆಂಟ್ ಮೀನು. ಇದು ಗಾಳಕ್ಕೆ ಸಿಕ್ಕಾಕೊಂಡ್ರೆ ಗೊತ್ತೆ ಆಗೋದಿಲ್ಲ. ಅದು ಗಾಳದ ಸಮೇತ ಎರೆಹುಳಾನ ಹೊಟ್ಟೆ ತನಕ ನುಂಗಿ ಗಲಾಟೆ ಮಾಡ್ದೆ ನೀರಲ್ಲೆ ಇದ್ದುಬಿಡುತ್ತೆ. ತುಂಬಾ ಹೊತ್ತಾದ್ ಮೇಲೆ ’ಯಾಕೋ ಟೈಮ್ ಸರಿ ಇಲ್ಲ ಇವತ್ತು’ ಅಂತ ಗಾಳಾನ ಮೇಲೆ ಎಳ್ಕೊಳ್ತಾ ಹೋದ್ರೆ ದೊಡ್ಡದೊಂದು ಹಾವಿನ್ ಮೀನ್ ಬಂದಿರೋದು. ಅದು ಗಾಳಾನ ಹೊಟ್ಟೆವರ್ಗೂ ನುಂಗಿಬಿಟ್ಟಿರೋದ್ರಿಂದ ಒಂದೊ ಆ ಮೀನಿನ ಹೊಟ್ಟೆ ಕತ್ತರಿಸಿ ಗಾಳ ಬಿಡ್ಸ್ಕೋತಿದ್ವಿ. ಇಲ್ಲಾಂದ್ರೆ ಗಾಳಾನ ಹೊಟ್ಟೆಯಲ್ಲೇ ಬಿಟ್ಟು ದಾರ ಕಟ್ ಮಾಡ್ತಿದ್ವಿ. ಅವಾಗೆಲ್ಲ ತೇಜಸ್ವಿಯವ್ರೆ ನಮ್ಗೆ ಗುರು ಇದ್ದಾಗೆ. ತುಂಬಾ ಜನ ಫಿಶಿಂಗ್ ಅಂತಂದ್ರೆ ಸೋಮಾರಿಗಳು ಸುಮ್ನೆ ಗಾಳ ಹಾಕ್ಕೊಂಡು ಕೂತ್ಕೋಂಡು ಮೀನ್ ಹಿಡಿಯೋದು ಅಂತ ತಿಳ್ಕೊಂಡಿದಾರೆ. ಆದ್ರೆ ಫಿಶಿಂಗ್ಅಂದ್ರೆ ಸುಮ್ನೆ ಅಲ್ಲ. ಅದು ಒಂದು ಸೈನ್ಸು. ಯಾವ್ ಮೀನಿಗ್ ಯಾವ್ ಗಾಳ ಹಾಕ್ಬೇಕು? ಗಾಳ ಹೇಗ್ ಹಾಕ್ಬೇಕು? ಗಾಳ ಹಾಕಿದ್ಮೇಲೆ ಏನೇನ್ ಮಾಡ್ಬೇಕು? ಇಂತವೆಲ್ಲ ಹತ್ತಾರು ವಿಷಯಗಳಿದ್ದಾವೆ ಅದ್ರಲ್ಲಿ. ನೋಡೋರ್ಗೆ ಸಿಂಪಲ್ ಅನ್ಸುತ್ತೆ. ಮಾಡಿ ನೋಡಿದ್ರೆ ಗೊತ್ತಾಗುತ್ತೆ ಅದ್ರ ಕಷ್ಟ” ಬಾಪುರವರ ಮಾತಿಗೆ ಅಲ್ಪವಿರಾಮ.
“ನೀರ್ ಖಾಲಿ ಮಾಡಿದ್ರೆ ಮೀನ್ ಪಾಲು”
ಬಾಪು ಹೇಳುತ್ತಿದ್ದುದ್ದೆಲ್ಲವೂ ದರ್ಶನ್ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದರು. ಮಳೆ ಮತ್ತೆ ಸಣ್ಣಗೆ ಆರಂಭವಾಯಿತು. ನಮ್ಮ ಛತ್ರಿ, ಟಾರ್ಪಾಲು ಮುಂತಾದ ಮಳೆರಕ್ಷಕ ಸಾಮಾಗ್ರಿಗಳು ಹೊರಬಂದವು. ಬಾಪು ಕೆಲನಿಮಿಷಗಳ ನಂತರ ಮತ್ತೆ ತೇಜಸ್ವಿಯವರೊಂದಿಗಿನ ಫಿಶಿಂಗ್ಅನುಭವಗಳ ಮೂಟೆ ಬಿಚ್ಚಿತೊಡಗಿದರು.
“ಅಮೇಲೆ ತೇಜಸ್ವಿಯವ್ರ ಮುಂದೆ ಚಿಕ್ಕ ಮೀನು ಹಿಡಿಯೋ ಹಂಗಿರ್ಲಿಲ್ಲ. ನಾವೇನಾದ್ರು ಅಪ್ಪಿತಪ್ಪಿ ಚಿಕ್ಕಮೀನ್ ಹಿಡಿದ್ರೆ ಸಿಟ್ ಮಾಡ್ಕೊಂಡ್ ಬೈಯೋರು. ಒಂದ್ಸಲ ಏನಾಯ್ತು ಅಂದ್ರೆ ನಾನು ಅದೇ ಫಸ್ಟ್ ಟೈಮ್ ತೇಜಸ್ವಿಯವ್ರ ಜೊತೆ ಮೀನು ಹಿಡಿಯೋಕೆ ಅಂತ ಇಲ್ಲಿಗೆ ಬಂದಿದ್ದೆ. ಅವ್ರು ನನಗೆ ಒಂದು ಗಾಳ ಕೊಟ್ಟು ಹೇಗೆ ಮೀನು ಹಿಡಿಯೋದು ಅಂತೆಲ್ಲಾ ತೋರಿಸಿಕೊಟ್ಟು ದೂರ ಹೋಗಿ ಕೂತ್ಕೊಂಡ್ರು. ನಾನು ಅವ್ರು ಹೇಳಿದ ಹಾಗೆ ಗಾಳ ಹಾಕ್ಕೊಂಡು ಕೂತಿದ್ದೆ. ಸ್ವಲ್ಪ ಹೊತ್ತಲ್ಲೇ ನನ್ ಕೈಲಿದ್ದ ದಾರ ಅಲುಗಾಡೋಕೆ ಶುರುವಾಯ್ತು. ಮೀನು ಗಾಳಕ್ಕೆ ಸಿಕ್ಕಿತ್ತು. ಮೊದಲ್ನೆ ಸಲಾನೇ ಮೀನ್ ಹಿಡಿದ್ಬಿಟ್ನಲ್ಲ ತೇಜಸ್ವಿಯವ್ರಿಗೆ ತೋರಿಸಿ ಭೇಷ್ ಅನ್ನಿಸ್ಕೊಬೇಕು ಅಂತ ಆ ಮೀನನ್ನ ಕೈಯಲಿಟ್ಕೊಂಡು ಅವ್ರು ಕೂತಿದ್ದ ಕಡೆ ಹೋಗ್ತಿದ್ದೆ. ದೂರದಿಂದಾನೆ ನನ್ನ ಕೈಲಿದ್ದ ಮೀನ್ ನೋಡಿ “ಏ ಅಯೋಗ್ಯಆ ಮೀನು ಯಾಕ್ ಹಿಡ್ಕೊಂಡ್ ಬರ್ತಿದ್ದೀಯಯ್ಯ? ಅಷ್ಟು ಚಿಕ್ಕ ಮೀನ್ ಹಿಡಿಯೋಕೆ ಭದ್ರಾ ನದಿವರೆಗು ಬರಬೇಕ. ಮೊದ್ಲು ಅದನ್ನ ನದಿಗೆ ಹಾಕು. ನಾವು ಮೀನ್ ಹಿಡಿದ್ರೆ ಕಮ್ಮಿ ಅಂದ್ರು ೨ ಕೆಜಿ ಇರ್ಬೇಕು. ಅದಕ್ಕಿಂತ ಕಡಿಮೆ ಇದ್ರೆ ಗಾಳ ಬಿಡಿಸಿ ಅದನ್ನ ನೀರಿಗೆ ಬಿಟ್ಬಿಡ್ಬೇಕು. ದಡ್ಡ ಕಣಯ್ಯ ನೀನು” ಅಂತೆಲ್ಲ ಸರಿಯಾಗಿ ಬೈದ್ರು. ನಾನೇನೊ ಮೀನ್ ಹಿಡ್ಬಿಟ್ಟಿದ್ದೀನಿ ತೋರ್ಸೋಣ ಅಂತ ಸ್ಟೈಲಾಗ್ ಹೋಗಿ ಬೈಸ್ಕೊಂಡ್ ಬಂದೆ. ಅವತ್ತೆ ಲಾಸ್ಟು ನಾವು ಚಿಕ್ಕ ಮೀನು ಹಿಡೀಲೆ ಇಲ್ಲ” ಎಂದು ಅಂದಿನ ಸ್ವಾರಸ್ಯಕರ ಘಟನೆಯೊಂದನ್ನು ಬಾಪು ನಮಗೆ ವಿವರಿಸಿದರು.
’ಈ ನದೀಲಿ ತುಂಬಾ ದೊಡ್ಡದು ಅಂದ್ರೆ ಎಷ್ಟ್ ಕೆಜಿ ಮೀನು ಹಿಡಿದಿದ್ದೀರ ನೀವು?’ ಹೇಮಂತನ ಪ್ರಶ್ನೆ.”ಈ ಜಾಗದಲ್ಲಿ ಒಂದ್ಸಲ ೧೮ ಕೆಜಿ ಮೀನು ಹಿಡಿದಿದ್ವಿ” ಬಾಪು ಉತ್ತರಿಸಿದರು. ೧೮ ಕೆಜಿ ಮೀನು ಎಂದು ಕೇಳಿದ ತಕ್ಷಣ ಏನನ್ನಿಸಿತೊ ಏನೋ ನಮ್ಮ ನಿತಿನ್ ’೧೮ಕೆಜಿ ಮೀನಿನ ಮಾಂಸ!!. ಅಷ್ಟ್ ದೊಡ್ ಮೀನು ತಗೊಂಡ್ ಹೋಗಿ ಏನ್ ಮಾಡಿದ್ರಿ?’ ಎಂದು ಕುತೂಹಲದ ಪ್ರಶ್ನೆಯೊಂದನ್ನು ಮುಂದಿಟ್ಟ. “ಅದನ್ನ ತಗೊಂಡೋಗಿ ಅವ್ರ್ ಮನೇಲೆ ತರಾವರಿ ಅಡಿಗೆ ಮಾಡ್ಕೊಂಡ್ ತಿಂದ್ವಿ. ತೇಜಸ್ವಿನೆ ತುಂಬಾ ಚೆನ್ನಾಗಿ ಮೀನಿನ್ ಐಟಮ್ ಮಾಡೋರು. ಫ್ರೈ, ಸಾರು ಏನೇನೋ ಐಟಮ್ ಮಾಡಿ ಕೊಡೋರು. ನಮಗಂತು ಮೂರ್ ಹೊತ್ತು ಮೀನ್ ತಿಂದು ತಿಂದು ಬೋರಾಗ್ಬಿಡೋದು. ಏನೇ ಆಗ್ಲಿಒಟ್ನಲ್ಲಿ ಮೀನು ಉಳಿಸಿ ವೇಸ್ಟ್ ಅಂತು ಮಾಡ್ತಿರ್ಲಿಲ್ಲ” ನಿತಿನನ ಕುತೂಹಲಕ್ಕೆ ತೆರೆ ಎಳೆದರು ಬಾಪು.
ಹಾಗೂ ಒಂದ್ ವೇಳೆ ತುಂಬಾ ಮೀನುಗಳು ಸಿಕ್ಕು ಅವಷ್ಟೂ ಮೀನುಗಳನ್ನ ತಿನ್ನೋಕ್ ಆಗಲ್ಲ ಅಂತ ಅನ್ಸಿದ್ರೆ ತಿನ್ನೋಕೆ ಎಷ್ಟ್ ಬೇಕೊ ಅಷ್ಟ್ ಮೀನ್ ಇಟ್ಕೊಂಡು ಉಳಿದ ಮೀನುಗಳನ್ನ ತಗೊಂಡೋಗಿ ಅವ್ರ ತೋಟದಲ್ಲಿರೊ ಕೆರೆಗೆ ಬಿಡ್ತಿದ್ರು. ಹಾಗೆ ಹೆಚ್ಚಿಗೆ ಹಿಡ್ಕೊಂಡ್ ಬಂದ ಮೀನುಗಳನ್ನ ಕೆರೆಗೆ ಬಿಟ್ಟು ಬಿಟ್ಟು ಕೆರೆ ತುಂಬಾ ತರಾವರಿ ಮೀನುಗಳು ತುಂಬಿಹೋಗಿದ್ವು. ತೇಜಸ್ವಿಯವ್ರೆ ಒಂದ್ಸಲ ನಂಗೆ ಹೇಳಿದ್ದಿದು, ಇಲ್ಲಿ ಹೇಮಾವತಿ ಹೊಳೆ ಹತ್ರ ಬೂದಿಗುಂಡಿ ಅಂತ ಒಂದು ಗುಂಡಿ ಇತ್ತು. ಅದ್ರಲ್ಲಿ ಯಾವಾಗ್ಲೂ ಒಳ್ಳೊಳ್ಳೆ ಮೀನುಗಳು ಗುಂಡಿ ತುಂಬಾ ತುಂಬಿಕೊಂಡಿರೊವು. ಅಲ್ಲಿಗೆ ಇವ್ರು ಆಗಾಗ ಫಿಶಿಂಗಿಗೆ ಅಂತಾ ಹೋಗ್ತಾ ಇರ್ತಿದ್ರು. ಅವತ್ತು ಹಾಗೆ ಒಬ್ರೆ ಹೋಗಿ ಫಿಶಿಂಗಿಗೆ ಕೂತಿದಾರೆ. ಆ ಗುಂಡೀಲಿ ಅವ್ಲ್ ಮೀನುಗಳು ಜಾಸ್ತಿ. ಇವ್ರೇನ್ ಮಾಡಿದಾರೆ ಸ್ಪಿನ್ನರ್ ಹಾಕೋದು (ನೀರಿನೊಳಗೆ ತಿರುಗುವ ಹೊಳೆಯುವ ಬಣ್ಣದ ಮಣಿಗಳಿಂದ ಮುಚ್ಚಿದ ಗಾಳ) ಎಳೆಯೋದು ಮಾಡ್ತಾ ಇದ್ರಂತೆ. ಸ್ವಲ್ಪ ಹೊತ್ತಾದ್ಮೇಲೆ ಇವ್ರು ಗಾಳ ಹಾಕೋದು ಅವ್ಲ್ ಮೀನು ಎಳೆಯೋದು ಗಾಳ ಹಾಕೋದು ಅವ್ಲ್ ಮೀನು ಎಳೆಯೋದು, ಹೀಗೆ ಮಾಡ್ತಾ ಐದಾರು ಮೀನು ಎಳೆದ್ರಂತೆ. ಆಗ ಇದ್ದಕ್ಕಿದ ಹಾಗೆ ಇವರ ತಲೆ ಮೇಲಿಂದ ಯಾರೋ ಕೂಗ್ತಾ ಇರೋದು ಕೇಳಿಸ್ತಂತೆ!! ಇವ್ರು ಯಾರು ಹೀಗೆ ಕಿರುಚ್ತಾರಲ್ಲ ಅಂತ ನೋಡಿದ್ರೆ ಗೌಡ್ರೊಬ್ರು ಕೈಯಲ್ಲಿ ಕೋವಿ ಹಿಡ್ಕೊಂಡು ಮರ ಇಳಿದು ಕೆಳಗಡೆ ಬರ್ತಿದ್ರಂತೆ. ಕೆಳಗೆ ಬಂದು ’ಏನ್ ಸಾರ್ ನಾನು ಬೆಳಿಗ್ಗಿಂದ ನಾಯಿ ಕಾದಂಗೆ ಇಲ್ಲಿ ಮರದ ಮೇಲೆ ಹತ್ತಿ ಅವ್ಲ್ ಮೀನು ಮೇಲೆಬರ್ಲಿ ಕೋವಿಲಿ ಹೊಡೆಯೋಣ ಅಂತ ಕಾಯ್ತಿದ್ದೀನಿ. ನೀವ್ ನೋಡಿದ್ರೆ ಸ್ಪಿನ್ನರ್ ಹಾಕಿ ಇರೊಬರೊ ಮೀನೆಲ್ಲ ಹಿಡ್ದಾಕ್ತಿದ್ದೀರಲ್ಲ. ಹೋಗಿ ಸಾರ್….’ ಎಂದು ಅಸಹನೆ ವ್ಯಕ್ತ ಪಡಿಸಿದರಂತೆ. ಆಗ ತೇಜಸ್ವಿಯವ್ರೆ ಆ ಗೌಡ್ರಿಗೆ ಮೂರು ಮೀನು ಕೊಟ್ಟು ಉಳಿದ ಮೀನುಗಳನ್ನ ತಂದು ಕೆರೆಗೆ ಬಿಟ್ಟ್ರಂತೆ. ಇದನ್ನ ತೇಜಸ್ವಿನೆ ನನಗೆ ಹೇಳಿದ್ರು’ ಎಂದು ಹಳೆಯ ಘಟನೆಯೊಂದನ್ನು ವಿವರಿಸಿದರು ಬಾಪು. ’ಹಾಗಾದ್ರೆ ಅವ್ರ ತೋಟದ ಕೆರೇಲಿ ಈಗ್ಲೂ ಅವ್ರು ಬಿಟ್ಟಿರೊ ಮೀನು ಇದಾವ ಸಾರ್?’ ಬಾಪುರವರಿಗೆ ನನ್ನ ಪ್ರಶ್ನೆ.
“ಈಗಿಲ್ಲ. ಒಂದ್ಸಲ ಏನಾಯ್ತು (ಪ್ರತಿ ಸಲ ಕತೆ ಹೇಳುವಾಗಲೂ ಬಾಪು ಪ್ರಾರಂಭಿಸುತ್ತಿದ್ದದ್ದು ಹೀಗೆ) ಅವ್ರ ತೋಟದಲ್ಲಿರೊ ಕೆರೆ ನೀರು ಖಾಲಿ ಮಾಡಬೇಕಾದ ಸಂದರ್ಭ ಬಂತು. ಆಗವರು ನನ್ನ, ರಘು ಅಣ್ಣನ್ನ (ಪುಸ್ತಕ ಪ್ರಕಾಶನದ ರಾಘವೇಂದ್ರರವರು), ಅವ್ರ ಬೇರೆ ಕೆಲವು ಗೆಳೆಯರನ್ನ ಎಲ್ರುನ್ನು ನೀರು ಖಾಲಿ ಮಾಡ್ಬೇಕು ಬನ್ನಿ ಅಂತ ಕರ್ದಿದ್ರು. ಕೆಲ್ಸ ಮಾಡೋಕೆ ಹುಮ್ಮಸ್ಸು ಬರ್ಲಿ ಅಂತ ’ನೀರು ಖಾಲಿಯಾದಾಗ ಕೆರೇಲಿ ಇರೊ ಮೀನನ್ನೆಲ್ಲಾ ಎಲ್ರು ಸಮ ಪಾಲು ಮಾಡ್ಕೊಂಡು ಬಿಡಾಣ ಕಣ್ರಯ್ಯ’ ಅಂತ ಆಸೆ ಹುಟ್ಸಿದ್ರು. ನಾವು ಹುಮ್ಮಸ್ಸಿನಿಂದ ಬೇಗ ಬೇಗ ಕೆರೆ ನೀರು ಖಾಲಿ ಮಾಡಿದ್ವಿ. ನೋಡ್ತಿವಿ ಕೆರೆತುಂಬಾ ತರಾವರಿ ಮೀನುಗಳು ರಾಶಿ ರಾಶಿ ಬಿದ್ದು ಒದಾಡ್ತಿದ್ವು. ಅಲ್ಲಿವರ್ಗೂ ನಮಗ್ಯಾರಿಗೂ ಆ ಕೆರೇಲಿ ಅಷ್ಟೊಂದು ಮೀನುಗಳಿರಬಹ್ದು ಅಂತ ಅಂದಾಜೆ ಇರಲಿಲ್ಲ. ಸುಮಾರು ಮೀನುಗಳು. ಎಲ್ರಿಗು ಸಾಕು ಸಾಕು ಅನ್ನೊವಷ್ಟು ಮೀನುಗಳು ಸಿಕ್ವು. ಅವತ್ತೆಲ್ರು ಮನೇಲು ಬರಿ ಮೀನು ವಾಸ್ನೆನೇ!!! ತರಾವರಿ ಅಡಿಗೆ ಮಾಡಿ ಬೇಜಾರಾಗೊವರ್ಗೂ ತಿಂದಿದ್ದೆ, ಹೆಹೆಹೆಹೆ……ಎಂದು ತಮ್ಮದೇ ವಿಚಿತ್ರವಾದ ಶೈಲಿಯಲ್ಲಿ ನಕ್ಕು ನಾಲಿಗೆ ಚಪ್ಪರಿಸಿ ಬಾಯಿ ಒರೆಸಿಕೊಂಡರು ಬಾಪು.
ದರ್ಶನ್ ಒಬ್ಬರನ್ನು ಬಿಟ್ಟು ಉಳಿದ ನಮ್ಮ ಹುಡುಗರೆಲ್ಲ (ನನ್ನನ್ನೂ ಸೇರಿಸಿ) ಕಾಡಿನ ಮಧ್ಯದಲ್ಲಿ ಬಾಪು ಹೇಳಿದ ಮೀನಿನ ರುಚಿರುಚಿಯಾದ ಬಗೆಬಗೆಯ ಭಕ್ಷಗಳನ್ನು ನೆನೆಸಿಕೊಂಡು ಬಾಯಿಬಾಯಿ ಬಿಟ್ಟು ಅವರ ಮಾತು ಕೇಳುತ್ತಿದ್ದರು. ನಮ್ಮ ದರ್ಶನ್ ಮಾತ್ರ ’ಥು!!! ಇವ್ರೆಲ್ಲ ಮನುಷ್ಯರ ಇಲ್ಲ ಕಾಡುಪ್ರಾಣಿಗಳ’ ಎಂಬಂತೆ ಎಲ್ಲರ ಕಡೆ ಲುಕ್ ಕೊಡುತ್ತಾ ಬಾಪು ಹೇಳುತ್ತಿದ್ದದ್ದನ್ನ ಕ್ಯಾಮೆರದಲ್ಲಿ ಸೆರೆಹಿಡಿದುಕೊಳ್ಳುತ್ತಿದ್ದರು.
“ಇವ್ನ್ ಹಾಳಾಗೋದಲ್ದೆ ಪಾಪ ಆ ಹುಡುಗ್ರನ್ನೂ…..”
ಅವರ ಮಾತು ಮುಗಿದದ್ದೆ ಎಲ್ಲರೂ ಸ್ವಲ್ಪ ರಿಲ್ಯಾಕ್ ಆಗಲೆಂದು ಚಿತ್ರೀಕರಣವನ್ನು ಒಂದೈದು ನಿಮಿಷಗಳ ಮಟ್ಟಿಗೆ ನಿಲ್ಲಿಸಿ ಕಾಡಿನ ಮಧ್ಯದಲ್ಲಿ ಒಂದು ಕಮರ್ಷಿಯಲ್ ಬ್ರೇಕ್ ಘೋಷಿಸಿದೆ. ತಕ್ಷಣ ನಮ್ಮ ಹುಡುಗರೆಲ್ಲ ತುಂಬಿಹರಿಯುತ್ತಿದ್ದ ಭದ್ರಾನದಿಯೊಳಕ್ಕೆ ಸಾಮೂಹಿಕ ಮೂತ್ರವಿಸರ್ಜನಾ ಯೋಜನೆ ಕೈಗೊಂಡು ಜೀವಮಾನದಲ್ಲಿ ಮತ್ತೆಂದು ಸಿಗಲಾರದ ಅಂತಹ ಅಪರೂಪದ ಅನುಭವವನ್ನು ಆಸ್ವಾದಿಸುತ್ತಿದ್ದರು.
ಈ ಬ್ರೇಕ್ ಮುಗಿಯುವಷ್ಟರಲ್ಲಿ ಬಾಪುರವರಿಗೆ ನನ್ನ ಹೊಸ ಪ್ರಶ್ನೆಗಳು ಸಿದ್ದವಿದ್ದವು.
ಕ್ಯಾಮೆರ ವಾಸ್ ರೋಲಿಂಗ್. ’ಸಾರ್ ನನಗೆ ಒಂದು ವಿಷ್ಯ ಅರ್ಥ ಆಗ್ತಿಲ್ಲ. ಮೂಡಿಗೆರೆಯಿಂದ ಈ ಜಾಗ ಸುಮಾರು ನಲವತ್ತು ಕಿಲೋಮೀಟರ್ ಆಗುತ್ತೆ. ರಸ್ತೆ ಕೂಡ ಸರಿಯಿಲ್ಲ. ಅಂತಾದ್ರಲ್ಲಿ ತೇಜಸ್ವಿ ಇಷ್ಟು ದೂರ, ಅಷ್ಟ್ ಕಷ್ಟಪಟ್ಕೊಂಡು ಬಂದು ಮೀನು ಹಿಡೀತ ಕೂರ್ತಿದ್ರಲ್ಲ ಯಾಕ್ ಸಾರ್? ಅವ್ರಿಗೆ ಮೀನು ತಿನ್ಬೇಕು ಅಂತ ಅನ್ಸಿದ್ರೆ ಇಷ್ಟು ದೂರ ಬರೊ ಖರ್ಚಿನಲ್ಲಿ ಮೂಡಿಗೆರೇಲೆ ಮೀನು ತಗೊಂಡು ತಿನ್ಬಹುದಿತ್ತಲ್ವ. ನನ್ನ ಊಹೆ ಪ್ರಕಾರ ಅವ್ರು ಫಿಶಿಂಗಿಗೆ ಬರ್ತಾ ಇದ್ದ ಕಾರಣ ಬೇರೆ ಏನೋ ಇರ್ಬೇಕು. ನಿಮಗೇನಾದ್ರು ಗೊತ್ತ ಸಾರ್ ಅದು?’ ಎಂದು ಅವರನ್ನು ಪ್ರಸ್ನಿಸಿದೆ.ಬಾಪು ಎಂದಿನ ತಮ್ಮ ಶೈಲಿಯಲ್ಲಿ ನಗುತ್ತಾ “ತೇಜಸ್ವಿಯವ್ರ ಮೀನು ಹಿಡ್ಯೊ ಅಭ್ಯಾಸ ನೋಡಿ ಆಗತುಂಬಾ ಜನ ’ಇವ್ನಿಗೆ ಮಾಡೋಕೆ ಕೆಲ್ಸ ಇಲ್ಲ. ಸುಮ್ನೆ ಆ ಹಳೆ ಸ್ಕೂಟರ್ ಹತ್ಕೊಂಡು ಕಾಡುಮೇಡು ಸುತ್ಕೊಂಡು ಮೀನು ಮೊಸ್ಳೆ ಹಿಡ್ಕೊಂಡು ಅಲಿತಾನೆ. ಇವ್ನೊಬ್ಬ ಹಾಳಾಗೋದಲ್ದೆ ಪಾಪ ಆ ಹುಡುಗ್ರನ್ನು ಹಾಳ್ ಮಾಡ್ತಾನೆ’ ಅಂತ ತೇಜಸ್ವಿ ಬೆನ್ ಹಿಂದೆ ಬಾಯಿಗ್ ಬಂದ ಹಾಗ್ ಮಾತಾಡೋರು. ಆದ್ರೆ ಅದು ಶುದ್ದ ತಪ್ಪುನಂಬಿಕೆ. ತೇಜಸ್ವಿಯವ್ರು ತಿನ್ನೊ ಚಪಲಕ್ಕೆ ಅಷ್ಟ್ ದೂರದಿಂದ ಇಲ್ಲಿವರ್ಗೂ ಬಂದು ಮೀನ್ ಹಿಡೀತಾ ಕೂರ್ತಿರ್ಲಿಲ್ಲ. ಅದರ ಹಿಂದೆ ತುಂಬಾ ವಿಷಯಗಳಿವೆ.
ತೇಜಸ್ವಿ ಇಲ್ಲಿ ಬಂದು ಸುಮ್ನೆ ಮೀನು ಹಿಡೀತಾ ಇರ್ಲಿಲ್ಲ. ಅವ್ರು ಹಿಡಿದ ಮೀನುಗಳನ್ನ ಸ್ಟಡಿ ಮಾಡೋರು. ಅವು ಯಾವ್ ಗುಂಪಿಗೆ ಸೇರೋ ಮೀನು, ಅದರ ಗುಣಲಕ್ಷಣಗಳೇನು, ಅದರ ಬದುಕಿನ ಕ್ರಮ ಹೇಗೆ, ಇದನೆಲ್ಲಾ ಮೀನು ಹಿಡೀತಾ ಅಭ್ಯಾಸ ಮಾಡೋರು. ಅದನ್ನೆಲ್ಲ ತುಂಬಾ ಸಲ ನಮ್ಗೂ ಹೇಳೋರು. ಅಷ್ಟೇ ಅಲ್ಲ ಅವ್ರು ಮೀನುಗಳಿಗೆ ಎಷ್ಟ್ ವಯಸ್ಸಾಗಿದೆ ಅಂತೆಲ್ಲ ಲೆಕ್ಕ ಹಾಕಿ ನಮಗೆ ಹೇಳ್ತಿದ್ರು”. ’ಮೀನುಗಳ ಏಜ್ ಲೆಕ್ಕ ಹಾಕ್ತಿದ್ರ? ಹ್ಯಾಗೆ’ ಹೇಮಂತನ ಪ್ರಶ್ನೆ. ಬಾಪು ವಿವರಿಸಿದರು, “ಅದು ಮೀನುಗಳ ತಲೆ ಹತ್ರ ಒಪನ್ ಆಗುತ್ತಲ್ಲ ಅಲ್ಲಿ ತೆಗೆದು ನೋಡಿ ಕಿವಿರು ಏಣಿಸಿ ಈ ಮೀನಿಗೆ ಇಷ್ಟೇ ವಯಸಾಗಿದೆ ಅಂತ ಲೆಕ್ಕ ಹಾಕೋರು. ಅಷ್ಟ್ ಮಾತ್ರ ಅಲ್ಲ ಫಿಶಿಂಗಿಗೆ ಕೂತಾಗ ತುಂಬಾ ಸೈಲೆನ್ಸ್ ಸಿಗುತ್ತೆ. ಆಗ ಅವ್ರು ತುಂಬಾ ವಿಷಯಗಳ ಬಗ್ಗೆ ಯೋಚ್ನೆ ಮಾಡ್ತಿದ್ರು. ಪರಿಸರ ಪ್ರಕೃತಿ ಬಗ್ಗೆ, ಜನರ ಬದುಕಿನ ಕ್ರಮದ ಬಗ್ಗೆ, ಸೈನ್ಸ್ ಬಗ್ಗೆ, ಪ್ರಪಂಚದ ಹೊಸ ಹೊಸ ಸಂಶೋಧನೆಗಳ, ಅಚ್ಚರಿಗಳ ಬಗ್ಗೆ ಈ ಕಾಡಿನ ಮಧ್ಯೆ ಒಬ್ರೆ ಕೂತು ಆಳವಾಗಿ ಯೋಚ್ನೆ ಮಾಡೋರು. ನಮ್ಗೂ ತುಂಬಾ ಸಲ ಅನೇಕ ಹೊಸ ಹೊಸ ವಿಚಾರಗಳನ್ನ ಫಿಶಿಂಗಿಗೆ ಬಂದಾಗ ಹೇಳ್ತಿದ್ರು. ಎಷ್ಟೋ ವಿಷಯಗಳು ನಮ್ಮ ಕಲ್ಪನೆಗೆ ಮೀರಿರ್ತಿದ್ವು.
ಒಂದ್ಸಲ ವರ್ಷ ಪೂರ್ತಿ ಕೆಂಪಾಗಿ ಹರಿಯೊ ಈ ಭದ್ರಾ ನದಿ ನೋಡಿ “ಈ ಕುದ್ರೆಮುಖ ಗಣಿಗಾರಿಕೆ ಶುರುವಾದ್ಮೇಲೆ ಅಷ್ಟು ಚೆನ್ನಾಗಿ ಹರೀತಿದ್ದ ಭದ್ರಾ ನದಿ ಹಾಳಾಯ್ತು. ಗಣಿಗಾರಿಕೆ ಮಾಡೋರು ಬೇಡದ್ದನೆಲ್ಲ ತಂದು ನದಿಗೆ ಸುರೀತಾರೆ. ಹೀಗೆ ಇನ್ನು ಕೆಲವು ವರ್ಷ ಹೋದ್ರೆ ಇಲ್ಲಿ ಒಂದು ನದಿ ಇತ್ತು ಅಂತಲೆ ಯಾರಿಗೂ ಅನುಮಾನ ಬರದ ಹಾಗೆ ನದಿ ಮುಚ್ಚಿಹಾಕಿಬಿಡ್ತಾರೆ” ಅಂತ ತುಂಬಾ ಬೇಜಾರ್ನಿಂದ ನಮಗೆಲ್ಲ ಹೇಳ್ತಿದ್ರು. ಆದ್ರೆ ಈಗ ಅವರ ಕನಸಿನಂತೆ ಕುದ್ರೆಮುಖ ಗಣಿಗಾರಿಕೆ ನಿಂತ್ ಮೇಲೆ ಈ ಭದ್ರಾ ನದಿ ಶುದ್ದವಾಗಿ ಹರಿಯುತ್ತೆ. ಆಗೆಲ್ಲ ತೇಜಸ್ವಿ ನೆನಪು ತುಂಬಾ ಕಾಡುತ್ತೆ’ ಎಂದು ಬಾಪು ತೇಜಸ್ವಿಯ ನೆನಪುಗಳಿಗೆ ಜಾರಿದರು.
ಸ್ವಲ್ಪ ಹೊತ್ತಿನ ನಂತರ ಬಾಪು ’ಈ ಜಾಗದಲ್ಲಿ ಇಷ್ಟ್ ಸಾಕು ಅನ್ಸುತ್ತೆ. ಬನ್ನಿ ಇದಕ್ಕಿಂತಲೂ ತುಂಬಾ ಚೆನಾಗಿರೊ ಜಾಗಕ್ಕ್ ಹೋಗೋಣ. ಅದಂತು ತೇಜಸ್ವಿಯವ್ರ ಪಾಲಿಗೆ ತಪಸ್ಸು ಮಾಡೋ ಜಾಗ ಇದ್ದಾಗೆ. ಬನ್ನಿ ಹೋಗೋಣ. ಅಲ್ಲಿನ ತೇಜಸ್ವಿಯವರ ಜೊತೆಗಿನ ನೆನಪುಗಳಂತೂ ನಾನ್ಯಾವತ್ತೂ ಮರೆಯೊ ಹಾಗಿಲ್ಲ’ ಎನ್ನುತ್ತಾ ಬಾಪು ಮುನ್ನಡೆಯತೊಡಗಿದರು. ನಾನು ನಮ್ಮ ಹುಡುಗರು ಕ್ಯಾಮೆರ, ಛತ್ರಿಗಳು, ಟಾರ್ಪಾಲ್ ಮುಂತಾದ ಚಿತ್ರೀಕರಣದಸರ್ವ ಸಾಮಾಗ್ರಿಗಳನ್ನು ಹಿಡಿದುಕೊಂಡು ಬಂದ ಹಾದಿಯಲ್ಲೇ ಮೇಲೇರಿ ಕಾಡಿನ ಮಧ್ಯದ ತಿರುವುಮುರುವಿನ ರಸ್ತೆಯಲ್ಲಿ ನಿಲ್ಲಿಸಿದ ನಮ್ಮ ವ್ಯಾನಿನ ಬಳಿ ಬಂದೆವು. ಬಾಪು ಅವರ ಕಾಲಿಗೆ ಹತ್ತಿದ್ದ ಜಿಗಣೆಗಳನ್ನು ಕಿತ್ತು ತೆಗೆಯುತ್ತಿದ್ದರು. ನಾವು ಸಹ ನಮ್ಮ ಕಾಲುಗಳಿಗೆ ಹತ್ತಿ ತಮ್ಮ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದ ಜಿಗಣೆಗಳನ್ನು ಕಿತ್ತು ತೆಗೆಯುತ್ತಲೇ ಕುತೂಹಲ ತಡೆಯಲಾರದೆ ಬಾಪುರವರನ್ನು ಮುಂದೆ ನಾವೀಗ ಹೋಗಲಿರುವ ಆ ಜಾಗದ ಬಗ್ಗೆ ವಿಚಾರಿಸಿದೆವು. ಬಾಪು ಬನ್ನಿ ಕಾರಲ್ಲಿ ಹೋಗ್ತಾ ಹೇಳ್ತಿನಿ. ತುಂಬಾ ವಿಷಯ ಇದೆ ಹೇಳೋಕೆ ಎಂದು ವ್ಯಾನ್ ಹತ್ತಿ ಕುಳಿತರು. ಮಾಗುಂಡಿ ಸಮೀಪದ ಕಾಡಿನ ಮಧ್ಯದ ಆ ಅಂಕುಡೊಂಕು ರಸ್ತೆಯಲ್ಲಿ ಬಹಳ ಅಪರೂಪಕ್ಕೊಂದು ವಾಹನಗಳು ನಿಧಾನವಾಗಿ ಹಾದುಹೋಗುತ್ತಿದ್ದವು. ನಿತಿನ್ ಗಾಡಿಯನ್ನು ಯುಟರ್ನ್ ಮಾಡಿ ಜೋರಾಗಿ ಆಕ್ಸಿಲೇಟರ್ ಒತ್ತುತ್ತಾ ಆ ದಿಣ್ಣೆ ರಸ್ತೆಯನ್ನು ದಾಟಿಸುವ ಪ್ರಯತ್ನ ಮಾಡುತ್ತಿದ್ದಾಗ ಬಾಪು ನಾವೀಗ ಹೋಗುತ್ತಿದ್ದ ತೇಜಸ್ವಿಯವರ ತಪೋಭೂಮಿಯಂತಿದ್ದ ಆ ಜಾಗದ ಬಗ್ಗೆ ಹೇಳಿದರು…
(…ಮುಂದುವರೆಯುವುದು)

ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402

 

‍ಲೇಖಕರು avadhi

August 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: