ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲದ ಹನಿಗಳು ಜಾರಿ ಹೋಗುವ ಸದ್ದು..

ಎನ್ ಎಸ್ ಶ್ರೀಧರ ಮೂರ್ತಿ

‘ಕಾಲದೊಂದೊಂದೇ ಹನಿ..’ ಇತ್ತೀಚೆಗೆ ಬಿಡುಗಡೆಯಾಗಿರುವ ಖ್ಯಾತ ಬರಹಗಾರ ಸುಬ್ರಾಯ ಚೊಕ್ಕಾಡಿಯವರ ಅನುಭವ ಕಥನ. ಇದನ್ನು ಆತ್ಮಕಥೆ ಎಂದು ಕರೆಯದೆ ಅನುಭವ ಕಥನ ಎಂದೇ ಕರೆದಿರುವಲ್ಲಿಯೇ ವಿಭಿನ್ನತೆ ಇರುವುದನ್ನು ಗಮನಿಸಬಹುದು. ಈ ಕೃತಿಯ ಚೌಕಟ್ಟು ನೆನಪುಗಳ ದಾಖಲಾತಿಯಷ್ಟೇ ಅಲ್ಲದೆ ಅದರ ತೀವ್ರತೆಯನ್ನೂ ಹಿಡಿದಿಡುತ್ತದೆ. ಆದರೆ ಎಲ್ಲಿಯೂ ಆತ್ಮಪ್ರತ್ಯಯವಿಲ್ಲದೆ.

ಬರಹಗಾರ ಕೇಂದ್ರವಾಗದೆ ಅನುಭವದ ದಾಖಲಾತಿಯಾಗುವ ಕ್ರಮದಲ್ಲಿಯೇ ವ್ಯಕ್ತಿಯಿಂದ ಸಂಸ್ಕೃತಿಯ ಕಡೆಗೆ ಚಲಿಸುವ ವಿಶಿಷ್ಟ ಪ್ರಯೋಗವಾಗಿಯೂ ಇದು ಗಮನ ಸೆಳೆಯುತ್ತದೆ. ಇದು ಅಂಜನಾ ಹೆಗಡೆ ಅವರಿಗೆ ಹೇಳಿ ಬರೆಸಿದ ಕೃತಿಯಾದ್ದರಿಂದ ನೆನಪುಗಳು ಒಟ್ಟೊಟ್ಟಾಗಿ ದಾಖಲಾಗಿವೆ. ಸಹಜವಾಗಿ ಇರಬೇಕಾದ ಸೃಜನಾತ್ಮಕ ಅಂತರ ಕೆಲವು ಕಡೆ ಇಲ್ಲದೆ ಇರುವುದರಿಂದ ಅಲ್ಲಲ್ಲಿ ಗಹನತೆ ಚದುರಿ ಹೋಗಿರುವುದನ್ನೂ ಕೂಡ ಗಮನಿಸ ಬಹುದು.

ಕೃತಿಯ ಬಹಳ ಮುಖ್ಯವಾದ ಶಕ್ತಿ ಎಂದರೆ ಚೊಕ್ಕಾಡಿಯವರ ಪ್ರಾಮಾಣಿಕತೆ. ಅವರು ಇಲ್ಲಿಯೂ ಇಮೇಜ್ ಸೃಷ್ಟಿಸಿ ಕೊಳ್ಳುವ ಆ ಮೂಲಕ ಸಾಂಸ್ಕೃತಿಕ ಮಹತ್ವವನ್ನೋ ಪ್ರಭಾವಳಿಯನ್ನೋ ರೂಪಿಸಿ ಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಸಮಕಾಲೀನ ಕನ್ನಡ ಸಾಹಿತ್ಯಲೋಕದಲ್ಲಂತೂ ಇದು ವಿರಳ ಗುಣವಾದ್ದರಿಂದ ಕೃತಿಯ ಮಹತ್ವ ಆ ಮಟ್ಟಿಗೆ ಇನ್ನಷ್ಟು ಹೆಚ್ಚಿದೆ.

ಇನ್ನೊಂದು ಮೆಚ್ಚಿಗೆಯಾಗವ ಗುಣ ಎಂದರೆ ನೆನಪುಗಳ ದಾಖಲಾತಿಯಲ್ಲಿ ಕೂಡ ಚೊಕ್ಕಾಡಿಯವರು ಪ್ರಸಿದ್ದ, ಸಾಮಾನ್ಯ, ಪ್ರಿಯ-ಅಪ್ರಿಯ ಇಂತಹ ಬೇಧಗಳನ್ನು ಮಾಡುವುದಿಲ್ಲ. ಅವರು ಮಾಸ್ತಿ-ಕಾರಂತ ಮೊದಲಾದವರ ಕುರಿತು ಎಷ್ಟು ಉತ್ಸಾಹದಿಂದ ಬರೆಯುತ್ತಾರೆಯೋ ಅಷ್ಟೇ ಉತ್ಸಾಹದಿಂದ ತಮಗೆ ಕೃಷಿಯಲ್ಲಿ ಸಹಾಯ ಮಾಡಿದ ನದಿಯನ್ನೇ ತಿರುಗಿಸಿದ ಭಗೀರಥ ಪ್ರಯತ್ನದಲ್ಲಿ ನೆರವಾದ ಶಿವಪ್ಪನ ಕುರಿತೂ ಬರೆಯುತ್ತಾರೆ. ಅವನ ಪತನವನ್ನು ತೇಲಿಸಿ ಅವನು ಮಾಡಿದ ಸಹಾಯ ದೊಡ್ಡದು ಎನ್ನುವುದನ್ನು ಒತ್ತಿ ಬರೆಯುತ್ತಾರೆ (ಪುಟ 185). ಇದರಂತೆ ಶಿಕ್ಷಕರಾಗಿದ್ದಾಗ ಅವರ ಜೊತೆ ಶೀತಲ ಸಮರವನ್ನೇ ಸಾರಿದ್ದ ಬೆಂಕಿ ನವಾಬ ಶ್ರೀನಿವಾಸ ಶೆಟ್ಟಿಯವರ ಕುರಿತೂ ಕಹಿ ಇಲ್ಲದೆ ನಿರುದ್ವಿಗ್ನವಾಗಿ ದಾಖಲಿಸುತ್ತಾರೆ.

ಸ್ವಂತ ತಮ್ಮಂದಿರೇ ಪಾಲಿನ ವಿಷಯವನ್ನು ಎತ್ತಿದಾಗ. ತಮ್ಮ ನೋವನ್ನು ಬಿಚ್ಚಿಟ್ಟರೂ ಅದರಲ್ಲಿ ಕೂಡ ನಂಜಿಲ್ಲ ಒಂದು ರೀತಿಯಲ್ಲಿ ಕೂಡು ಕುಟಂಬ ಮುರಿಯುತ್ತಿದೆಯಲ್ಲ ಎಂಬ ಅಸಹಾಯಕತೆ ಕಾಣುತ್ತದೆ. ಈ ನೆಲೆಯಲ್ಲಿ ಇದೊಂದು ಅಪ್ಪಟ ಮಾನವೀಯ ಕಥನ. ಸುಳ್ಯ ಭಾಗದ ಸಾಂಸ್ಕೃತಿಕ ನೆಲೆಗಳು ಮರು ಪಲ್ಲಟ ಪಡೆಯುತ್ತಿರುವ ಕಥನ ಕೂಡ ಹೌದು. ಶಿಕ್ಷಣ ವ್ಯವಸ್ಥೆ ಬದಲಾಗುತ್ತಿರುವ ಕುರಿತೂ ಇಂತಹ ಅಸಹಾಯಕತೆಯ ಚಿತ್ರಣವೇ ಕೃತಿಯಲ್ಲಿ ಸಿಕ್ಕುತ್ತದೆ.

ದೇವರಕಾನ ಎಂಬ ಹೆಸರೇ ಕೇಳಿಲ್ಲದ ಕಾಡಿನೊಳಗಿನ ಶಾಲೆಯನ್ನು ಹುಡುಕಿ ಕೊಂಡು ಹೋಗಿ ಕಟ್ಟಡವಾಗಲಿ, ಬೇಕಾದ ಸಾಮಗ್ರಿಯಾಗಲಿ ಇಲ್ಲದ ಕಡೆ ಶಿಕ್ಷಕ ವೃತ್ತಿ ಆರಂಭಿಸಿದ ಚೊಕ್ಕಾಡಿಯವರಿಗೆ ಬದಲಾದ ಶಿಕ್ಷಣ ವ್ಯವಸ್ಥೆ ನಿರಾಶೆ ತಂದಿರುವುದು ಸಹಜವೇ ಆಗಿದೆ. ಆದರೆ ಅವರು ಅಲ್ಲಿ ಕೂಡ ಕಹಿಯನ್ನು ಮುಂದು ಮಾಡದೆ ‘ಒಬ್ಬೊರನ್ನೊಬ್ಬರು ಪರಸ್ಪರ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ಊರಿಗೆ ಬಂದೊದಗಿದೆ. ಹಾಗಾಗಿ ನಿಜವಾಗಿ ನಮ್ಮಲ್ಲಿ ಬದಲಾವಣೆ ಆಗಿದೆ ಎನ್ನುವುದು ನನ್ನ ಭ್ರಮೆಯೋ ಅಥವಾ ವಾಸ್ತವವೋ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ’ (ಪು 343) ಎನ್ನುವುದು ಇಡೀ ಕೃತಿಯ ಜೀವ ವಾಕ್ಯದಂತೆ ಮಿಡಿಯುತ್ತದೆ.

ಕೃತಿಯಲ್ಲಿ ಶಿಥಿಲವಾಗಿಯಾದರೂ ಮೂರು ತಲೆಮಾರುಗಳ ಕಥೆ ಇದೆ. ಇದನ್ನು ಕೊಂಚ ವಿಸ್ತರಿಸಿದರೆ ನಾಲ್ಕು ತಲೆಮಾರು ಎಂದೂ ಕೂಡ ಕರೆಯ ಬಹುದು. ನಮ್ಮ ವಂಶದ ಕಥೆಯೂ ಒಂದು ವಿಶಿಷ್ಟವಾದ ಕಥೆ. ಚರಿತ್ರೆ ಹೇಗೆ ಚಕ್ರಗತಿಯಲ್ಲಿ ತಿರುಗುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿಯೂ ಇದನ್ನು ಹೇಳ ಬಹುದು ಎನ್ನುತ್ತಾರೆ ಚೊಕ್ಕಾಡಿ. ಇದಕ್ಕೆ ಇರುವ ಕಾರಣವೆಂದರೆ ಅವರ ಅಜ್ಜನ ಅಪ್ಪ ಗಣಪಯ್ಯನವರ ಬಳಿ ಗ್ರಾಮದ ಬಹುತೇಕ ಭೂಮಿ ಇತ್ತು. ಅಜ್ಜ ಯಕ್ಷಗಾನದಲ್ಲಿ ಆಸಕ್ತಿ ಇರುವವರು ಸ್ವತಃ ಮದ್ದಳೆ ನುಡಿಸುತ್ತಿದ್ದವರು.

ಭಾಗವತಿಕೆ ಕೂಡ ಮಾಡುತ್ತಿದ್ದರು. ಅವರ ವಿಲಾಸಿ ಬದುಕಿನಿಂದ ಆಸ್ತಿ ಕರಗುತ್ತಾ ಹೋಗುತ್ತದೆ. ಚೊಕ್ಕಾಡಿಯವರ ತಂದೆಯವರೂ ಭಾಗವತರು. ಆದರೆ ಕಷ್ಟಗಳ ಬಿರುಮಳೆಯಿಂದ ಮಾನಸಿಕ ಖಿನ್ನತೆಗೆ ಗುರಿಯಾದರು. ಹೀಗಾಗಿ ಎಳೆಯ ವಯಸ್ಸಿನಲ್ಲಿಯೇ ಚೊಕ್ಕಾಡಿಯವರ ಹೆಗಲಿನ ಮೇಲೆ ಸಂಸಾರದ ನೊಗ ಬೀಳುತ್ತದೆ.

ಮಹತ್ವದ ಸಂಗತಿ ಎಂದರೆ ಅದಕ್ಕಾಗಿ ಅವರು ವಿಷಾದಿಸುವುದಿಲ್ಲ. ತಮ್ಮ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಲು ಗಮನ ಕೊಡುತ್ತಾರೆ. ತಮ್ಮ ಸಂಸಾರವನ್ನು ಸರಿಯಾದ ಹಳಿಗಳ ಮೇಲೆ ತರುವುದರ ಜೊತಗೆ ತಮ್ಮಂದಿರ ಸಂಸಾರವನ್ನೂ ಅವರು ಸುಗಮವಾಗಿಸ ಬೇಕಾಗುತ್ತದೆ. ಆದರೆ ತಮ್ಮಂದಿರು ರೆಕ್ಕೆ ಬಲಿತ ಮೇಲೆ ಪಾಲಿನ ಮಾತನ್ನಾಡುತ್ತಾರೆ. ಇದನ್ನೂ ಅವರು ಕಾಲದ ಕ್ರಮವಾಗಿಯೇ ನೋಡುತ್ತಲೇ ಮುರಿದ ಮನಸ್ಸುಗಳ ಕಥನವನ್ನಾಗಿ ಮಾರ್ಪಡಿಸುತ್ತಾರೆ. ಇಲ್ಲಿ ಚೊಕ್ಕಾಡಿ ಹೃದಯವಂತ ಕವಿಯಾಗಿ ಗೋಚರಿಸುತ್ತಾರೆ. ಇದು ಮೂರು ತಲೆಮಾರಿನ ಕಥೆ ಎಂದು ಗ್ರಹಿಸಿದರೆ ನಾಲ್ಕನೇ ತಲೆಮಾರು ಎಂದು ಕರೆಯ ಬಹುದಾದ ಚೊಕ್ಕಾಡಿಯವರ ಮಕ್ಕಳ ಪ್ರಸ್ತಾಪವೂ ಕಥನದಲ್ಲಿದೆ. ಆದರೆ ಅದು ಉಲ್ಲೇಖಗಳಿಗಿಂತ ವಿಸ್ತಾರವಾಗಿಲ್ಲ.

ಇದು ಒಂದು ರೀತಿಯಲ್ಲಿ ಪ್ರಜ್ಞಾಪೂರ್ವಕ ಆಯ್ಕೆಯಾದಂತೆ ಭಾಸವಾಗುತ್ತದೆ. ಕುತೂಹಲದ ಸಂಗತಿ ಎಂದರೆ ‘ನನ್ನ ತಮ್ಮಂದಿರಿಗಾಗಲಿ ಮಕ್ಕಳಿಗಾಗಲಿ ನಾನು ಹುಡುಗ ಹುಡುಗಿಯನ್ನು ಆಯ್ಕೆ ಮಾಡಲಿಲ್ಲ. ನಿಮ್ಮ ಬಾಳ ಸಂಗಾತಿಯನ್ನು ನೀವೇ ಆಯ್ಕೆ ಮಾಡಿ ಕೊಳ್ಳಿ, ಮದುವೆ ಮಾಡುವ ಜವಾಬ್ದಾರಿ ನನ್ನದು’ ಎಂದು ಹೇಳುತ್ತಾರೆ (ಪುಟ 231). ಅದು ವ್ಯಕ್ತಿ ಸ್ವಾತಂತ್ರ್ಯದ ಕುರಿತ ಅವರ ನಂಬಿಕೆಯಾದಂತೆ ಬದಲಾದ ಸಾಮಾಜಿಕ ಸಂದರ್ಭವನ್ನು ಅವರು ಸ್ವೀಕರಿಸಿದ ರೀತಿಯಂತೆಯೂ ನೋಡ ಬಹುದು.

ಕೃತಿಯ ಇನ್ನೊಂದು ಮಹತ್ವದ ನೆಲೆ ಸಾಹಿತ್ಯವನ್ನು ಕುರಿತಾದದ್ದು. ಬದುಕಿನ ಅನಿವಾರ್ಯತೆಗಳ ನಡುವೆ ಚೊಕ್ಕಾಡಿಯವರ ಮನಸ್ಸು ಸಾಹಿತ್ಯದ ಕಡೆ ಚಲಿಸುತ್ತದೆ. ಪ್ರಕೃತಿಯೇ ಅವರ ಬರವಣಿಗೆಗೆ ಆರಂಭಿಕ ಪ್ರೇರಣೆಯನ್ನು ನೀಡುತ್ತದೆ. ಅಡಿಗರ ‘ಚಂಡೆ ಮದ್ದಳೆ’ ನವ್ಯತೆಯ ಕಡೆಗಿನ ತುಡಿತವನ್ನು ಹುಟ್ಟಿಸುತ್ತದೆ. ಅವರ ಬರಹದ ಹಾದಿಯಲ್ಲಿ ಸಿಗುವ ಹಲವು ನೆನಪುಗಳನ್ನು ಅವರು ಜತನದಿಂದ ಜೋಡಿಸಿರುವ ಕ್ರಮ ಅಚ್ಚರಿ ಹುಟ್ಟಿಸುತ್ತದೆ.

ಎಂಬತ್ತು ದಾಟಿದ ವಯಸ್ಸಿನಲ್ಲಿಯೂ ಸ್ಪುಟವಾಗಿರುವ ಅವರ ಜ್ಞಾಪಕ ಶಕ್ತಿಯ ಕುರಿತು ಒಂದು ದೊಡ್ಡ ಮೆಚ್ಚಿಗೆಯನ್ನು ವ್ಯಕ್ತ ಪಡಿಸಲೇ ಬೇಕು. ಅವರ ದಾಖಲಾತಿಯಲ್ಲಿ ಶಿವರಾಮ ಕಾರಂತರು, ಮಾಸ್ತಿ, ಅಡಿಗರು ಪ್ರತ್ಯೇಕ ಅಧ್ಯಾಯಗಳಾಗಿ ಪ್ರಸ್ತಾಪಿಸಲ್ಪಟ್ಟಿದ್ದಾರೆ. ಇದರಲ್ಲಿ ಕಾರಂತರ ಕುರಿತ ಅಧ್ಯಾಯ ಸ್ವಾರಸ್ಯಕರವಾಗಿದ್ದು ಅವರ ವ್ಯಕ್ತಿತ್ವವನ್ನು ಸೊಗಸಾಗಿ ಪರಿಚಯಿಸುತ್ತದೆ. ಆದರೆ ಇದೇ ಮಾತನ್ನು ಮಾಸ್ತಿ ಮತ್ತು ಅಡಿಗರ ಕುರಿತು ಹೇಳುವುದು ಕಷ್ಟ.

ಮಾಸ್ತಿಯವರ ಕುರಿತ ಅಧ್ಯಾಯವಂತೂ ಸರಳವಾದ ಪ್ರಸಂಗದಲ್ಲಿ ಮುಗಿದು ಹೋಗಿದ್ದು ಅದರಲ್ಲಯೂ ಬಹುಭಾಗ ವರ್ಧಮಾನ ಪ್ರಶಸ್ತಿ ಕುರಿತ ವಿವಾದ ಆಕ್ರಮಿಸಿ ಕೊಂಡಿದೆ. ಅಡಿಗರ ಕುರಿತ ಅಧ್ಯಾಯದಲ್ಲಿ ಹೇಳ ಬೇಕಾದ್ದನ್ನು ಚೊಕ್ಕಾಡಿಯವರು ಉದ್ದೇಶಪೂರ್ವಕವಾಗಿ ಬಿಟ್ಟಿರ ಬಹುದು ಎಂಬ ಊಹೆಗೆ ಕಾರಣವಾಗುವಂತಹ ಸಂರಚನೆ ಇದೆ. ಆದರೆ ಪ್ರತ್ಯೇಕ ಅಧ್ಯಾಯವಾಗದೆ ಕೃತಿಯಲ್ಲಿ ಉಲ್ಲೇಖವಾಗಿ ಬಂದಿರುವ ಯಶವಂತ ಚಿತ್ತಾಲ, ಪೂರ್ಣಚಂದ್ರ ತೇಜಸ್ವಿ, ಕೆ.ವಿ.ತಿರುಮಲೇಶ್ ಮೊದಲಾದವರ ಕುರಿತ ಪ್ರಸಂಗಗಳು ಮಹತ್ವದ್ದಾಗಿದ್ದು ಇದನ್ನು ಚೊಕ್ಕಾಡಿಯವರು ವಿಸ್ತರಿಸ ಬೇಕಿತ್ತು ಎನ್ನಿಸುತ್ತದೆ.

ಹತ್ತು ನಿಮಿಷಕ್ಕೆ ನಿಗಧಿಯಾಗಿದ್ದ ಗಂಗಾಧರ ಚಿತ್ತಾಲರ ಜೊತೆಗಿನ ಭೇಟಿ ಒಂದೂವರೆ ಗಂಟೆಗಳವರೆಗೆ ನಡೆಯಿತು ಎಂದಷ್ಟೇ ದಾಖಲಿಸುವ ಚೊಕ್ಕಾಡಿ ಅದಕ್ಕೆ ಕಾರಣ.. ಅಲ್ಲಿ ನಡೆದ ಚರ್ಚೆ ಎಲ್ಲವನ್ನೂ ಓದುಗರ ಊಹೆಗೆ ಬಿಡುತ್ತಾರೆ. (ಪುಟ 100) ಕೃತಿಯಲ್ಲಿ ಇಂತಹ ಅತೃಪ್ತಿ ಹಲವು ಕಡೆ ಉಂಟಾಗುತ್ತದೆ. ಬಹುಷಃ ಮುರು ಮುದ್ರಣದಲ್ಲಿ ಚೊಕ್ಕಾಡಿ ಈ ಫಿಲ್ಲಿಂಗ್‍ ದ ಬ್ಲಾಂಕ್‍ ಅನ್ನು ತುಂಬುತ್ತಾರೆ ಎಂದು ನಾನು ವಿಶ್ವಾಸವಿರಿಸಿದ್ದೇನೆ. ಚೊಕ್ಕಾಡಿಯವರು ದಾಖಲಿಸಲೇ ಬೇಕಿದ್ದ ಆದರೆ ಇದೇ ರೀತಿಯಲ್ಲಿ ಅಲ್ಪ ದಾಖಲಾತಿಯಲ್ಲಿ ಮುಗಿದು ಹೋಗಿರುವ ಇಬ್ಬರು ವಿಶಿಷ್ಟ ವ್ಯಕ್ತಿಗಳೆಂದರೆ ಎಂ.ವ್ಯಾಸ ಮತ್ತು ರಾಮಚಂದ್ರ ದೇವ. ಅವರಿಬ್ಬರ ಕುರಿತ ಕಹಿಯನ್ನೂ ಬಿಟ್ಟು ಕೂಡ ವಿಕ್ಷಿಪ್ತತೆಯ ಅಳದ ಕೆಲವು ಹೊಳಹುಗಳನ್ನು ನೀಡುವುದು ಅವರಿಗೆ ಸಾಧ್ಯವಿತ್ತು. ಇದೂ ಕೂಡ ಮರುಮುದ್ರಣದಲ್ಲಿ ಸಾಧ್ಯವಾಗುತ್ತದೆ ಎನ್ನುವುದು ನನ್ನ ವಿಶ್ವಾಸ.

ಸ್ವಂತ ಪತ್ರಿಕೆ ರೂಪಿಸಿದ,ಪ್ರಕಾಶನವನ್ನು ಕಟ್ಟಿದ, ಮನೆ ಮನೆಗೆ ಪುಸ್ತಕಗಳನ್ನು ಮಾರಿದ ನಿಜವಾದ ಕನ್ನಡದ ಪರಿಚಾರಿಕೆಯನ್ನು ಚೊಕ್ಕಾಡಿಯವರು ಮಾಡಿದ್ದಾರೆ. ಅದರ ಉಲ್ಲೇಖಗಳು ಸಾಂಸ್ಕೃತಿಕವಾಗಿ ಕೂಡ ಬಹಳ ಮುಖ್ಯವಾದದ್ದಾಗಿವೆ. ಅವರ ಅಧ್ಯಯನದ ಆಸಕ್ತಿ ರಂಗಭೂಮಿಯ ಕಡೆಗಿನ ತುಡಿತ ಎಲ್ಲವೂ ಮಹತ್ವದ ಸಂಗತಿಗಳೇ ಆಗಿವೆ. ‘ಪ್ರಗತಿ ಪಂಥ’ ಕುರಿತ ಅಧ್ಯಾಯದಲ್ಲಿ ನಿರಂಜನರ ಕುರಿತ ಪ್ರಸಂಗವೊಂದರ ಉಲ್ಲೇಖವಿದೆ. ಅಲ್ಲಿ ಪ್ರಗತಿ ಪಂಥದ ಮಹಾಕಾರ್ಯದರ್ಶಿಯಾದವರು ‘ಸಂಘ ಒಪ್ಪಿದರೆ ಮಾತ್ರ ಸಾಹಿತಿಗಳಾಗಿ ಮಾನ್ಯತೆ ಪಡೆಯುತ್ತಾರೆ’ ಎಂಬ ಮಾತನ್ನು ಆಡಿದ್ದನ್ನು ಚೊಕ್ಕಾಡಿ ಕೇಳಿಸಿ ಕೊಂಡ ಉಲ್ಲೇಖವಿದೆ. (ಪುಟ 93). ಇದು ಚಾರಿತ್ರಿಕವಾಗಿ ಕೂಡ ಮಹತ್ವದ ಸಂಗತಿಯಾದ್ದರಿಂದ ಉಲ್ಲೇಖದಲ್ಲಿಯೇ ಮುಗಿದು ಹೋಗಿರುವುದು ಅತೃಪ್ತಿ ಮೂಡಿಸುತ್ತದೆ.

ಈ ಕುರಿತು ನಿರಂಜನರ ಅಭಿಪ್ರಾಯ ಏನಿತ್ತು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಸಾಹಿತ್ಯದ ಕುರಿತು ಬರಹಗಾರರ ಕುರಿತೂ ಮೊದಲಿದಲೂ ಖಚಿತವಾದ ಧೊರಣೆಗಳನ್ನು ಇಟ್ಟು ಕೊಂಡು ಬಂದಿರುವ ಚೊಕ್ಕಾಡಿಯವರು ಡಿಜಿಟಲ್ ಯುಗಕ್ಕೆ ಬಂದ ಕೂಡಲೇ ಉದಾರವಾಗಿ ಬಿಡುವುದು ಕುತೂಹಲಕರವಾಗಿದೆ. ಎರಡು ವಾಟ್ಸಪ್ ಗ್ರೂಪ್‍ಗಳ ಕುರಿತು ಅವರ ತೋರಿರುವ ಅತಿ ಉತ್ಸಾಹ ಕೂಡ ಅಚ್ಚರಿ ಮೂಡಿಸುತ್ತದೆ. ಈ ಬೆಳವಣಿಗೆಯ ಕುರಿತೂ ಅವರು ತಮ್ಮ ಎಂದಿನ ನಿರುದ್ವಿಗ್ನ ಶೈಲಿಯಲ್ಲಯೇ ಚರ್ಚಿಸಿದ್ದರೆ ಚೆನ್ನಾಗಿತ್ತು ಎಂದು ನನಗೆ ತೀವ್ರವಾಗಿ ಅನ್ನಿಸಿತು.

ಭಾವಗೀತೆಯನ್ನೂ ಬರೆದಿರುವ ಚೊಕ್ಕಾಡಿಯವರು ಈ ಕುರಿತ ತಮ್ಮ ಅನುಭವಗಳನ್ನು ಕುತೂಹಲಕರವಾಗಿ ದಾಖಲಿಸಿದ್ದಾರೆ. ಸಹಜವಾಗಿಯೇ ಇಲ್ಲಿ ಸಿ.ಅಶ್ವತ್ಥ್ ಅವರ ಚಿತ್ರಣ ಗಮನ ಸೆಳೆಯುತ್ತದೆ. ‘ನನ್ನ ಹಲವು ಮಹತ್ವದ ಕವಿತೆಗಳ ಬದಲು ಮುನಿಸು ತರವೇಯನ್ನೇ ಎಲ್ಲರೂ ಉಲ್ಲೇಖಿಸುತ್ತಾರೆ’ ಎಂಬ ಅಳಲನ್ನು ಅಲ್ಲಲ್ಲಿ ಚೊಕ್ಕಾಡಿ ದಾಖಲಿಸಿದ್ದಾರೆ. ಇಲ್ಲಿಯೇ ಭಾವಗೀತೆಯ ಕ್ಷೇತ್ರದ ಮಿತಿ ಕೂಡ ಬಿಂಬಿತವಾಗಿದೆ. ಚಿತ್ರಗೀತೆಗಳನ್ನು ಬರೆಯುವ ಕುರಿತೂ ಅವರ ಅನುಭವ ಸೊಗಸಾಗಿ ಮೂಡಿ ಬಂದಿದೆ.

ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ವಿಪುಲ ಬರವಣಿಗೆ ಮಾಡಿರುವ ಚೊಕ್ಕಾಡಿ ಭಾವಗೀತೆ ಮತ್ತು ಚಿತ್ರಗೀತೆ ಬರವಣಿಗೆಯಲ್ಲಿ ತಮಗೆ ಆದ ಅನುಭವವನ್ನು ತೌಲನಿಕವಾಗಿ ನೋಡುವ ಪ್ರಯತ್ನ ಮಾಡಿರುವ ಭಾಗ ಮಹತ್ವದ್ದಾಗಿದೆ. ಮಹತ್ವದ ಸಾಂಸ್ಕೃತಿಕ ಚರ್ಚೆಯನ್ನು ಕೂಡ ಅದು ಹುಟ್ಟು ಹಾಕ ಬಲ್ಲದಾಗಿದೆ. ಚೊಕ್ಕಾಡಿಯವರ ಅನುಭವ ಕಥನದಲ್ಲಿ ಬಂಟಮಲೆ ಎನ್ನುವುದು ಒಂದು ರೂಪಕ. ‘ಅದು ಈಗ ನನಗೆ ಕಾಣುತ್ತಿಲ್ಲ ನನ್ನ ಮನೆಯ ಎದುರು ಈಗ ತೋಟ ಬೆಳೆದು ಕೊಂಡಿದೆ. ಆದರೆ ನನ್ನ ಮನಸ್ಸಿನ ಒಳಗೆ ಮಾತ್ರ ಬಂಟಮಲೆ ಸ್ಥಿರ ಚಿತ್ರ ಹಾಗೆ ಉಳಿದು ಕೊಂಡು ಬಿಟ್ಟಿದೆ’ (ಪುಟ 345) ಎನ್ನುವುದೂ ಕೂಡ ರೂಪಕದಂತೆಯೇ ಗೋಚರಿಸುತ್ತದೆ.

ಕೃತಿಯ ಸಾರ್ಥಕತೆ ಇರುವುದೇ ಹೀಗೆ ಮನಸ್ಸಿನಲ್ಲಿ ಉಳಿದ ರೂಪಕವನ್ನು ವಾಸ್ತವದ ನೆಲೆಯಲ್ಲಿಯೂ ಕೂಡ ಅಚ್ಚಳಿಯದಂತೆ ದಾಖಲಿಸಿರುವಲ್ಲಿ. ಈ ಹಿನ್ನೆಲೆಯಲ್ಲಿ ಅನುಭವ ಕ್ರಮೇಣ ಅನುಭಾವದ ಎತ್ತರ ಪಡೆಯುವ ಚಮತ್ಕಾರವನ್ನೂ ಈ ಕೃತಿಯಲ್ಲಿ ನೋಡ ಬಹುದು. ಈ ಕಾರಣದಿಂದಲೇ ನಾನು ಇದನ್ನು ಇತ್ತೀಚಿನ ದಿನಗಳಲ್ಲಿ ಬಂದಿರುವ ಅತ್ಯಂತ ಮಹತ್ವದ ಕೃತಿ ಎಂದು ಭಾವಿಸುತ್ತೇನೆ.

‍ಲೇಖಕರು Avadhi

9 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading