ಗಿರೀಶ್ ಕಾರ್ನಾಡ್
ಕನ್ನಡದ ಹೆಮ್ಮೆ
ಅರುಣ ಜೋಳದಕೂಡ್ಲಿಗಿ
ನಿನ್ನೆ ಕನ್ನಡ ವಿಶ್ವವಿದ್ಯಾಲಯ ಹಂಪಿಯ ದೂರಶಿಕ್ಷಣ ಕೇಂದ್ರದ ಕನ್ನಡ ಎಂ.ಎ ಅಂತಿಮದ ವಿದ್ಯಾರ್ಥಿಗಳಿಗೆ ಗಿರೀಶ್ ಕಾರ್ನಾಡರ ‘ಯಯಾತಿ’ ನಾಟಕವನ್ನು ಪಾಠ ಮಾಡಿದೆ.
ಮತ್ತೊಮ್ಮೆ ಯಯಾತಿ ಓದಿದಾಗ ಹೊಸ ಹೊಸ ಅರ್ಥಗಳನ್ನು ಹುಟ್ಟಿಸಿ ಬೆರಗಾದೆ. ಯಯಾತಿ ಹೇಳುವ ‘ಬೆಳಕಿಲ್ಲದ ದಾರಿಯಲ್ಲಿ ಹೋಗಬಹುದು ಪುರು, ಕನಸುಗಳಿಲ್ಲದ ದಾರಿಯಲ್ಲಿ ಹೇಗೆ ಹೋಗುವುದು? ಎನ್ನುವ ಮಾತು.. ಪುರು ವೃದ್ಧಾಪ್ಯ ಸ್ವೀಕರಿಸಿದ ನಂತರ ಆತನ ರಾಣಿ ಚಿತ್ರಲೇಖೆ ಯಯಾತಿಗೆ ‘ನನ್ನಂತಹ ವಿದ್ಯೆಯ ಪುತ್ತಳಿಯನ್ನು ಮನೆಗೆ ತಂದು, ನನ್ನ ಕಾಲಿಗೆ ಸನಾತನ ಶೃಂಖಲೆಗಳನ್ನು ತೊಡಿಸುವ ಆಟ ನಿಮ್ಮದು..’ ಎಂದು ಪುರುಷಾದಿಪತ್ಯವನ್ನು ಪ್ರಶ್ನಿಸುವುದು.. ಒಂದೊಂದು ಮಾತೂ ಕೂಡ ಧ್ವನಿಪೂರ್ಣವಾಗಿ ಮನಸ್ಸಿಗಿಳಿದು ಕಾಡುತ್ತವೆ.
ಕುತೂಹಲಕ್ಕೆ ‘ಶೋಧಗಂಗಾ’ ವೆಬ್ ಸೈಟಿನಲ್ಲಿ ಕಾರ್ನಾಡರ ಬಗ್ಗೆ ಎಷ್ಟು ರಿಸರ್ಚ್ ಆಗಿರಬಹುದು ಎಂದು ಹುಡುಕಿದರೆ ನಿಜಕ್ಕೂ ದಂಗಾದೆ. ಕಾರ್ನಾಡ ನಾಟಕಗಳ ಬಗ್ಗೆ ಭಾರತದ ಬಹುತೇಕ ಭಾಷೆಗಳಲ್ಲಿ 50 ಕ್ಕೂ ಹೆಚ್ಚು ಪಿಹೆಚ್ ಡಿ ಸಂಶೋಧನೆಗಳು ನಡೆದಿವೆ. ಹೊರದೇಶಗಳಲ್ಲಿ ನಡೆದ ಸಂಶೋಧನೆಗಳು ಈ ಪಟ್ಟಿಯಲ್ಲಿಲ್ಲ.
ಆಫ್ರಿಕಾದ ಓಲೇ ಶೋಯಾಂಕ ನಿಂದ ಹಿಡಿದು ಭಾರತದ ವಿಜಯ್ ತೆಂಡೊಲ್ಕರ್, ಬಾದಲ್ ಸರ್ಕಾರ್, ಮೊಹನ್ ರಾಕೇಶ್ ಮೊದಲಾದ ಪ್ರಸಿದ್ದ ನಾಟಕಕಾರರ ಜತೆ ತೌಲನಿಕ ಸಂಶೋಧನೆಗಳು ನಡೆದಿವೆ. ನನ್ನ ಸೀಮಿತ ತಿಳುವಳಿಕೆಯಲ್ಲಿ ಕರ್ನಾಟಕದಾಚೆ ಇಷ್ಟು ಸಂಶೋಧನೆಗಳಿಗೆ ವಸ್ತುವಾದ ಮತ್ತೊಬ್ಬ ಕನ್ನಡದ ಲೇಖಕರಿಲ್ಲ. ಹೀಗಾಗಿ ನಿಜಕ್ಕೂ ಕಾರ್ನಾಡ್ ಕನ್ನಡದ ಹೆಮ್ಮೆ ಅನ್ನಿಸಿತು.
ಹಿಂದೊಮ್ಮೆ ಬರೆದಿದ್ದ ಟಿಪ್ಪಣಿ






0 Comments