ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾರಿನ ಜೊತೆಗೆ ಅಪ್ಪನೂ..

ಒಂದು ಕಥೆ

~ಎಸ್.ಜಿ.ಶಿವಶಂಕರ್

ಡಿಸೆಂಬರ್ ತಿಂಗಳ ಕೊನೆಯ ದಿನಗಳ ಒಂದು ರಾತ್ರಿ. ರಾತ್ರಿ ಎಂದರೆ ಅತ್ತ ರಾತ್ರಿಯೂ ಅಲ್ಲ ಇತ್ತ ಬೆಳಗೂ ಅಲ್ಲ. ರಾತ್ರಿ ನಿಧಾನವಾಗಿ ಬೆಳಗಿಗೆ ದಾರಿ ಮಾಡಿಕೊಡುತ್ತಿತ್ತು.
ಯಶವಂತರಾಯರಿಗೆ ಬೆಳಗಿನ ನಾಲ್ಕಕ್ಕೇ ಎಚ್ಚರವಾಗಿಬಿಟ್ಟಿತ್ತು. ಎದ್ದು ಜಲಭಾಧೆ ತೀರಿಸಿಕೊಂಡು ಬಂದವರಿಗೆ ನಿದ್ರೆ ದೂರ ಸರಿಯಿತು. ನಿದ್ರೆ ಎಂಬ ಮಾಯಾವಿ ಮಂತ್ರದಂಡದಿಂದ ಮಾಯಮಾಡಿದ್ದ ಚಿಂತೆಗಳೆಲ್ಲಾ ಯಶವಂತರಾಯರನ್ನು ಎಚ್ಚರವಾಗುತ್ತಲೇ ಅಮರಿಕೊಂಡವು. ಅಷ್ಟೂ ಚಿಂತೆಗಳ ನಡುವೆ ಕಾರಿನ ಚಿಂತೆಯೇ ದೊಡ್ಡದಾಗಿ ಮನಸ್ಸನ್ನು ಪೂರಾ ಆವರಿಸಿಕೊಂಡುಬಿಟ್ಟಿತು.
ಒಂದು ಕಾಲಕ್ಕೆ ಹೆಮ್ಮೆಯ ಪ್ರತೀಕವಾಗಿದ್ದ ತನ್ನ ಅಂಬಾಸಿಡರ್ ಕಾರು ಈ ಪರಿಯ ಸಮಸ್ಯೆಯಾಗಿ ಕಾಡಬಹುದೆಂದು ಅವರು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ! ಯಕಶ್ಚಿತ್ ಒಂದು ಕಾರು ದೊಡ್ಡ ಸಮಸ್ಯೆಯಾಗಿರುವುದು ಒಂದು ವಿಚಿತ್ರವೇ ಸರಿ ಎನ್ನಿಸಿತು ಅವರಿಗೆ!
ಖಾದರ್ನ ಇವತ್ತು ಸುಮ್ಮನೆ ಬಿಡಬಾರದು. ಬಾಯಿಗೆ ಬಂದಂತೆ ಬೈದುಬಿಡಬೇಕು. ಅವನು ಮಾಡುತ್ತಿರುವುದು ಸರಿಯೆ? ಇಂದು ನಾಳೆಯೆಂದು ಬರೋಬ್ಬರಿ ಎರಡು ವರ್ಷ ತಳ್ಳಿಬಿಟ್ಟಿದ್ದಾನೆ ಭೂಪ! ಅವನನ್ನು ಬಿಟ್ಟರೆ ತನ್ನ ಕಾರು ರಿಪೇರಿ ಮಾಡುವವರು ಈ ಊರಿನಲ್ಲೇ ಯಾರೂ ಇಲ್ಲ! ಇದೆಂತ ಪರಿಸ್ಥಿತಿ?! ಕಳೆದ ಮೂವತ್ತು ವರ್ಷ ಅದನ್ನು ನೋಡಿಕೊಂಡವನು ಈಗ ಅಸಡ್ಡೆ ತೋರಿಸುತ್ತಿದ್ದಾನೆ. ಹಿಂದೆಂದೂ ಹೀಗೆ ಮಾಡದವನು ಈಗೇಕೆ ಹೀಗೆ ಮಾಡುತ್ತಿದ್ದಾನೆ ಎಂಬುದು ಯಶವಂತರಾಯರಿಗೆ ಅರ್ಥವಾಗುತ್ತಿಲ್ಲ!
ಮೂರು ವರ್ಷ ರಿಟೈರ್ ಆಗುವವರೆಗೂ ಚೆನ್ನಾಗಿದ್ದ ಕಾರು ಉಪಯೋಗಿಸದೆ ಕ್ರಮೇಣ ಕೆಟ್ಟು ಗ್ಯಾರೇಜಿನಿಂದ ಹೊರಬರಲಾರದ ಸ್ಥಿತಿಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ, ಗ್ಯಾರೇಜಿನಾಚೆ ನಿಲ್ಲುವ ಮಕ್ಕಳ ಎರಡು ಕಾರುಗಳು. ಯಾವಾಗ ತನ್ನ ಅಂಬಾಸಿಡರ್ ತೆಗೆಯಬೇಕೆಂದರೂ ಅದರ ಮುಂದೆ ಅಡ್ಡಕ್ಕೆ ಒಂದಾದರೂ ಕಾರು ನಿಂತಿರುತ್ತದೆ. ಹೀಗಾಗಿ ತನ್ನ ಅಂಬಾಸಿಡರ್ ಗ್ಯಾರೇಜಿನಲ್ಲಿ ಉಸಿರು ಕಟ್ಟಿ ಶವವಾಗಿದೆ. ಹೋಗಲಿ ಮಕ್ಕಳ ಕಾರುಗಳನ್ನು ತಾನೇ ತೆಗೆಯ ಹೋದರೆ ಅವರ ಅಸಹನೆಗೆ ಗುರಿಯಾಗಬೇಕಾಗುತ್ತದೆ! ಅವರವು ದುಬಾರಿ ಬೆಲೆಯ ಕಾರುಗಳು. ತನಗೆ ಅವನ್ನು ಡ್ರೈವ್ ಮಾಡಲು ಬರುವುದಿಲ್ಲವಂತೆ?! ವಿಷಾದದ ನಗೆ ಅವರ ಮುಖದಲ್ಲಿ ಮೂಡಿತು. ಅವರೆಲ್ಲರಿಗೂ ಅಂಬಾಸಿಡರ್ ಕಾರಿನಲ್ಲಿ ಸ್ವತಃ ತಾನೇ ಕಾರು ಡ್ರೈವಿಂಗ್ ಕಲಿಸಿದ್ದು! ಈಗ ತನ್ನ ಡ್ರೈವಿಂಗ್ ಬಗೆಗೆ ಅವರಿಗೆ ನಂಬಿಕೆಯಿಲ್ಲ.
ಮೊದಲ ಮಗ ವಿವೇಕನ ಸ್ಯಾಂಟ್ರೋ ಕಾರಿನದು ಸಮಸ್ಯೆಯಲ್ಲ. ಅವನು ಫ್ಯಾಕ್ಟರಿಗೆ ಹೋಗುವುದರಿಂದ ಬೆಳಿಗ್ಗೆ ಏಳೂವರೆಯ ಹೊತ್ತಿಗೆ ಅವನ ಕಾರು ಕಾಂಪೊಂಡಿನಿಂದಾಚೆ ಹೋಗಿರುತ್ತದೆ. ಸಮಸ್ಯೆ ಇರುವುದು ಸತೀಶನ ಹೋಂಡಾ ಕಾರಿನದು. ಅವನು ಸ್ವಯಂ ಉದ್ಯೋಗಿ. ನಾಲ್ಕಾರು ಅಡ್ವಟೈಸಿಂಗ್ ಕಂಪನಿಗಳಿಗೆ ಸಲಹೆಗಾರ. ಲಹರಿ ಬಂದಾಗ ಹೋಗುವನು. ಅವನನ್ನು ಕಾರು ತೆಗೆ ಎಂದರೆ, ‘ಆ ಕಾರನ್ನ ಯಾಕೆ ಉಪಯೋಗಿಸ್ತೀರಿ ? ಮಾರಬಾರದೆ..? ಅದೊಂದು ತಲೆನೋವಲ್ಲವೆ?’ ಎನ್ನುತ್ತಾನೆ!
ಕೊನೆಗೊಮ್ಮೆ ಕಾರನ್ನು ಮಾರಿಬಿಡೋಣ ಎಂದು ಯೋಚಿಸಿದ್ದೂ ಉಂಟು. ಅದನ್ನು ಮಾರಿದರೆ ಬರುವ ಬೆಲೆ ಕೇಳಿ ಎದೆ ಒಡೆಯುವಂತಾಗಿತ್ತು! ಅದಕ್ಕೀಗ ಬರುವುದು ಗುಜರಿಯ ಬೆಲೆಯಂತೆ! ತೂಕದ ಲೆಕ್ಕದಲ್ಲಿ! ಛೆ..ಕಾಲ ಹೇಗೆ ಬದಲಾಗಿ ಹೋಯಿತು? ಇಷ್ಟು ವರ್ಷ ಈ ಮನೆಯ ಎಲ್ಲಾ ಸಂದರ್ಭಗಳಲ್ಲಿಯೂ ಭಾಗಿಯಾಗಿದ್ದ ಕಾರನ್ನು ಗುಜರಿಗೆ ಹಾಕುವುದಕ್ಕೆ ಹೇಗೆ ಮನಸ್ಸಾದೀತು? ಮೂವತ್ತು ವರ್ಷ ಸತತವಾಗಿ ಉಪಯೋಗಿಸಿದ ಕಾರು! ಆಫೀಸು, ಮನೆ, ಪ್ರವಾಸ, ಆಸ್ಪತ್ರೆ, ಮದುವೆ-ಹೀಗೆ ಲಕ್ಷಕ್ಕೂ ಮೀರಿದ ಕಿಲೋಮೀಟರನ್ನು ಕ್ರಮಿಸಿದ ಕಾರು ಅದು! ಇಂದು ಅದು ಮನೆಯವರಿಗೆ ಬೇಡದ ವಸ್ತು! ಅದನ್ನು ತಾನಾದರೂ ಹೇಗೆ ಮಾರುವುದು? ಅದರೊಂದಿಗಿನ ತನ್ನ ಸಂಬಂಧ ಮನೆಯವರ ಕಲ್ಪನೆಗೂ ಸಿಗದು.
ಬಲಭಾಗದ ಸೊಂಟದಲ್ಲಿ ನೋವು ಕಾಣಿಸಿತು ಜೊತೆಗೆ ಎಡಗಾಲಿನ ಪಾದದಲ್ಲಿ ಜೋಮು ಕೂಡ. ಇನ್ನು ನಿದ್ರೆ ಸಾಧ್ಯವಿಲ್ಲ ಎನಿಸಿ ಎದ್ದು ಡ್ರಾಯಿಂಗ್ ರೂಮಿಗೆ ಬಂದರು. ಲೈಟು ಹಾಕುವ ಗೋಜಿಗೆ ಹೋಗದೆ ಸೋಫಾದಲ್ಲಿ ಕೂತು ಧ್ಯಾನ ಮಾಡಲು ಪ್ರಯತ್ನಿಸಿದರು. ಬೆನ್ನು ನೇರ ಮಾಡಿ ಕೂತು, ಚಿನ್ಮುದ್ರೆ ಹಾಕಿ ಉಸಿರಾಟದ ಕಡೆ ಗಮನ ಹರಿಸಿದರು. ಮೂಗಿನ ತುದಿಯಲ್ಲಿ ಒಳಕ್ಕೆ ಹರಿವ ಶೀತಲ ಗಾಳಿ, ಹೊರಕ್ಕೆ ಹೋಗುವ ಬಿಸಿ ಗಾಳಿಯನ್ನು ಗಮನಿಸುತ್ತಿರುವಾಗಲೇ ಆರು ತಿಂಗಳ ಹಿಂದೆ ವಿಧಿವಶಳಾದ ಮಡದಿಯ ಮಾತುಗಳು ಮನಸ್ಸಿನಲ್ಲಿ ಹರಿದವು.
‘ಇನ್ನು ನಿಮಗೆ ಆ ಕಾರು ಯಾಕೆ ಬೇಕು? ಅಷ್ಟು ಹಳೆಯದನ್ನು ಇಟ್ಕೊಂಡು ಈ ಯಾತನೆ ಯಾಕೆ? ಗ್ಯಾರೇಜೂ ಖಾಲಿಯಾಗುತ್ತೆ, ಮಕ್ಕಳಿಗೂ ನೆಮ್ಮದಿಯಾಗುತ್ತೆ. ಎಲ್ಲಿಗಾದರೂ ಹೋಗ್ಬೇಕೂಂದ್ರೆ ಮಕ್ಕಳಿಲ್ಲವೆ? ಬೇಡ..ಆಟೋಗಳಿಲ್ಲವೆ? ಗಟ್ಟಿ ಮನಸ್ಸು ಮಾಡಿ ಮಾರಿಬಿಡಿ’
ಬದುಕಿರುವ ಕೊನೆಯ ದಿನಗಳಲ್ಲಿ ಹಲವಾರು ಸಲ ವಸು ಹೇಳಿದ್ದಳು. ಅವಳು ಹೇಳಿದ್ದು ಅಕ್ಷರಶಃ ಸತ್ಯ! ಆ ಕಾರನ್ನು ಸುಸ್ಥಿತಿಯಲ್ಲಿಡುವುದು ಯಾತನೆಯೇ ಸರಿ! ಆದರೆ ಅದರೊಂದಿಗಿನ ಸಂಬಂಧ? ತನ್ನ ಸವೀ9ಸಿನ ಕೊನೆಯ ದಿನಗಳಲ್ಲಿ ಖಾದರ್ ಕಾರಿನ ಬಗ್ಗೆ ಅಸಡ್ಡೆ ತೋರಿಸಲು ಶುರು ಮಾಡಿದ್ದ. ಒಂದಲ್ಲ ಒಂದು ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿದ್ದಾನೆ! ಬಹಳ ಸಲ ಅವನು ಹೇಳುತ್ತಿದ್ದ ‘ಈಗ ಇಂತಾ ಕಾರು ರಿಪೇರಿ ಮಾಡೋದು ಕಷ್ಟ ಸಾರ್, ಸ್ಪೇರ ಪಾಟು9ಗಳು ಸಿಗೋದಿಲ್ಲ, ಈಗಿನ ಹುಡುಗರಿಗೆ ಈ ಕಾರುಗಳನ್ನ ರಿಪೇರಿ ಮಾಡೋಕೂ ಬರೊಲ್ಲ! ನಾನೇ ನಿಂತ್ಕೋಬೇಕು. ಹೊಸ ಮಾಡಲ್ ಕಾರುಗಳ ಕೆಲಸ ಸುಲಭ. ಅವನ್ನ ರಿಪೇರಿ ಮಾಡೋದೇ ಇಲ್ಲ! ಹಳೆ ಪಾಟು9 ಎಸೆಯೋದು ಹೊಸದು ಫಿಟ್ ಮಾಡೋದು-ಸುಲಭದ ಕೆಲಸ’.
ವೈದ್ಯಕೀಯ ವಲಯದಲ್ಲೂ ಹೀಗೇ ಮಾಡ್ತಾರೆ ಅಂತ ಸತೀಶ ಹೇಳಿದ್ದ-ಹಲವಾರು ಸಲ. ಅದೂ ತನ್ನ ಕಾರಿನ ವಿಷಯ ಬಂದಾಗಲೇ ಇಂತ ಉದಾಹರಣೆಗಳು ಉಲ್ಲೇಖವಾಗುತ್ತಿದ್ದವು!
ತಾನಿನ್ನು ಅಂಬಾಸಿಡರ್ ಕಾರು ಮುಟ್ಟೊಲ್ಲ ಅನ್ನೋದರ ಬದಲಿಗೆ ಖಾದರ್ ಹೀಗೆ ಅವಾಯ್ಡ್ ಮಾಡುತ್ತಿರಬಹುದು. ಆದರೆ ಈ ಸಲ ಖಾದರ್ನ ಸುಮ್ಮನೆ ಬಿಡುವುದಿಲ್ಲ. ಇಷ್ಟು ದಿನ ತಾನು ಮೃದು ದೋರಣೆ ತೋರಿಸಿದ್ದೇ ತಪ್ಪಾಯಿತು. ಇದರಿಂದಲೇ ಅವನು ಕಾರನ್ನು ಅಸಡ್ಡೆ ಮಾಡಲು ಕಾರಣ. ಜೋರು ಮಾಡಿ ನೋಡುತ್ತೇನೆ. ಅದ್ಹೇಗೆ ತನ್ನ ಕಾರನ್ನು ರಿಪೇರಿ ಮಾಡುವುದಿಲ್ಲ?! ಒಂದು ಕಾಲದಲ್ಲಿ ಮನೆಮನೆಗೆ ಹೋಗಿ ಕಾರು ತೊಳೆಯುತ್ತಿದ್ದ ಖಾದರ್ ಒಂದು ಗ್ಯಾರೇಜು ಶುರು ಮಾಡಲು ಕಾರಣ ತಾನೇ ಅಲ್ಲವೆ? ಆಗೊಂದಿಷ್ಟು ಹಣ ಸಹಾಯ ಮಾಡಿದ್ದೆ. ಸ್ನೇಹಿತರನ್ನೆಲ್ಲಾ ಅವರ ಕಾರುಗಳನ್ನು ಖಾದರ್ ಗ್ಯಾರೇಜಿನಲ್ಲೇ ರಿಪೇರಿ ಮಾಡಿಸುವಂತೆ ಶಿಫಾರಸು ಮಾಡಿದ್ದೆ. ಅದನ್ನೆಲ್ಲಾ ಖಾದರ್ ಮರೆತೇಬಿಟ್ಟನೆ? ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ? ಇದು ನಿಜ ಯಾರಾದರೂ ಹಾಗೇ ಮಾಡುತ್ತಿದ್ದರು. ಖಾದರ್ ಇದಕ್ಕೆ ಹೊರತಲ್ಲ; ಅವನೂ ಮನುಷ್ಯನೇ!
ವಸು ಹೋದ ಮೇಲೆ ಬದುಕೇ ಬದಲಾಗಿಬಿಟ್ಟಿದೆ. ತನ್ನೆಲ್ಲಾ ಬೇಕು-ಬೇಡಗಳನ್ನು ಪೂರೈಸುತ್ತಿದ್ದಳು. ಮಕ್ಕಳು, ಸೊಸೆಯರು ಮತ್ತು ಮೊಮ್ಮಕ್ಕಳ ನಡುವಿನ ಸಂಪರ್ಕ ಕೊಂಡಿಯಾಗಿದ್ದಳು. ಅವಳಿರುವಷ್ಟು ಕಾಲ ತನಗಾಗಿ ಇಷ್ಟೊಂದು ಕೆಲಸಗಳನ್ನು ಅವಳು ಮಾಡುತ್ತಿದ್ದಾಳೆ ಎಂದು ಅನ್ನಿಸಿಯೇ ಇರಲಿಲ್ಲ! ಈಗ ಕೈಕಾಲು ಮುರಿದಂತಾಗಿದೆ.
ಬೆಳಿಗ್ಗೆ ಕಾಫಿ ಕೊಡುವುದರಿಂದ ಹಿಡಿದು ರಾತ್ರಿ ಮಲಗುವಾಗ ಮಾತ್ರೆಗಳನ್ನು ತೆಗೆದುಕ್ಕೊಳ್ಳುವವರೆಗೂ ತನ್ನನ್ನು ನೋಡಿಕ್ಕೊಳ್ಳುತ್ತಿದ್ದಳು. ಈಗ ಎಲ್ಲವೂ ಸೂತ್ರ ಕಿತ್ತ ಗಾಳಿಪಟದಂತೆ! ನೆನೆಪಾದರೆ ಮಾತ್ರೆ ತೆಗೆದುಕ್ಕೊಳ್ಳುವೆ. ತೆಗೆದುಕೊಳ್ಳದಿದ್ದರೆ ಯಾರೂ ಕೇಳುವುದಿಲ್ಲ! ಆರೋಗ್ಯದಲ್ಲಿ ಏರುಪೇರಾದರೆ ಯಾರಿಗೆ ಹೇಳಿಕ್ಕೊಳ್ಳುವುದು? ಕೇಳುವವರಾದರೂ ಯಾರು? ಬೆಳಿಗ್ಗೆ ಸ್ನಾನ ಮಾಡಿ ಬಂದರೆ ಯಾರಾದರೊಬ್ಬರು ಕಾಫಿ ಕೊಡುತ್ತಾರೆ. ಅದಕ್ಕೆ ನಿಯಮಿತವಾದ ಕಾಲವೇನೂ ಇಲ್ಲ. ಒಂಬತ್ತೂವರೆಯ ಸಮಯಕ್ಕೆ ಎಲ್ಲ ಧಾವಂತದಿಂದ ಹೊರಟುಬಿಡುತ್ತಾರೆ. ಆಮೇಲೆ ತಾನು ಹೋಗಿ ಡೈನಿಂಗ್ ಟೇಬಲ್ ಮೇಲಿದ್ದರೆ ತಿಂಡಿ ಹಾಕಿಕೊಂಡು ತಿನ್ನಬೇಕು, ಇಲ್ಲದಿದ್ದರೆ ಮಾಡಿಕ್ಕೊಳ್ಳಬೇಕೂ ಅದಕ್ಕೂ ಮನಸ್ಸು ಬಾರದಿದ್ದರೆ ಸಮೀಪದಲ್ಲಿರುವ ಹೋಟೆಲಿಗೆ ಹೋಗಬೇಕು. ವಸು ಇಲ್ಲದ್ದಕ್ಕೆ ಎಷ್ಟೊಂದು ತೊಂದರೆಗಳು? ಎಷ್ಟೊಂದು ಬದಲಾವಣೆಗಳು?
ಯಾರನ್ನೂ ದೂಷಿಸುವಂತಿಲ್ಲ! ಎಲ್ಲರೂ ಆಧುನಿಕ ವೇಗದ ಬದುಕಿನ ಸ್ಪರ್ಧೆಗಳು! ತಡ ಮಾಡಿದರೆ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ!
ಇಬ್ಬರು ಗಂಡು ಮಕ್ಕಳೂ ಮತ್ತವರ ಪತ್ನಿಯರೂ ಉದ್ಯೋಗಸ್ಥರು. ಇವತ್ತಿನ ದಿನಗಳು ಹೀಗೆಯೇ! ಇಬ್ಬರು ದುಡಿದರೇ ಸಂಸಾರಕ್ಕೆ ಬೇಕಾಗುವಷ್ಟು ಸಂಪಾದನೆಯಂತೆ! ಆದರೆ ತಾನು ಒಬ್ಬನ ಸಂಪಾದನೆಯಲ್ಲೇ ಇಬ್ಬರು ಮಕ್ಕಳನ್ನು ಓದಿಸಿ ವಿಧ್ಯಾವಂತರನ್ನಾಗಿ ಮಾಡಿದ್ದೇನೆ, ಮದುವೆ ಮಾಡಿದ್ದೇನೆ. ಇವರುಗಳಿಗೆ ಅದೇಕೆ ಸಾಧ್ಯವಾಗುತ್ತಿಲ್ಲ..? ವಸು ಬದುಕಿರುವಾಗ ಇವೆಲ್ಲಾ ಎಂದೂ ಸಮಸ್ಯೆ ಎನಿಸಿಯೇ ಇರಲಿಲ್ಲ! ಒಮ್ಮೊಮ್ಮೆ ವಸು ಹೇಳುತ್ತಿದ್ದಳು, ‘ಇಂತಾ ಮಾತು ನಾನು ಹೇಳಬಾರದು! ಆದರಿದು ಸತ್ಯ..ನಾನಿಲ್ಲದಿದ್ದರೆ ನಿಮಗೆ ತುಂಬಾ ಕಷ್ಟವಾಗುತ್ತೆ! ಅದಕ್ಕೇ ನಾನು ಬದುಕಿರುವಾಗಲೇ ನೀವು ಸತ್ತರೆ ಒಳ್ಳೆಯದು’. ಅವಳ ಮಾತು ಅದೆಷ್ಟು ಕಟು ವಾಸ್ತವ ಎನ್ನುವುದೀಗ ಅಥ9ವಾಗುತ್ತಿದೆ. ಅವಳ ಮಾತನ್ನು ಹುಚ್ಚುತನ ಎಂದು ಗದರಿಸುತ್ತಿದ್ದೆ.
ಬೆಳಿಗ್ಗೆ ಒಂಬತ್ತೂವರೆಗೆ ಮನೆ ಅಕ್ಷರಶಃ ನಿಜ9ನವಾಗಿಬಿಡುತ್ತದೆ. ಒಮ್ಮೊಮ್ಮೆ ಸತೀಶ ಉಳಿದರೂ ಅವನು ತನ್ನ ಪಾಡಿಗೆ ತಾನು ಇರುವವನು. ಅವನೆಂದೂ ತನ್ನ ಬಗೆಗೆ ಎಂದೂ ಕಾಳಜಿವಹಿಸಿದವನೇ ಅಲ್ಲ!
‘ಅಪ್ಪಾ ಹುಷಾರು’, ‘ಮಾವ ಹುಷಾರು ಎಂದು ಎಚ್ಚರಿಸುತ್ತಾ ಎಲ್ಲ ಗಡಿಬಿಡಿಯಿಂದ ಹೊರಟುಬಿಡುತ್ತಿದ್ದರು.
ಸೆಕೆಯೆನಿಸಿತು. ಕಿಟಿಕಿಗಳನ್ನು ತೆರೆದು ಕೂತರು ಯಶವಂತರಾಯರು. ತಂಪಾದ ಗಾಳಿ ಬೀಸಿ ಹಾಯೆನಿಸಿತು. ಒಂದೆರಡು ನಿಮಿಷ ನಿಶ್ಚಲರಾಗಿ ಕೂತು ನಾಸಿಕದ ಮೂಲಕ ನಡೆಯುತ್ತಿದ್ದ ಉಸಿರಾಟವನ್ನು ಗಮಸಿದರು. ಮನಸ್ಸಿಗೆ ನೆಮ್ಮದಿ ಎನಿಸಿತು.
ಯಾವುದೋ ನೆನಪು ಸ್ಮರಣೆಗೆ ಬರಲು ಪ್ರಯತ್ನಿಸುತ್ತಿತ್ತು. ಆದರೆ ಅದೇನೆಂದು ಗೊತ್ತಾಗುತ್ತಿಲಲ. ಕಳೆದ ಮೂರು ದಿನಗಳಿಂದಲೂ ಇದೇ ಕಾಡುತ್ತಿತ್ತು. ಯಾವುದೋ ಗೋಪ್ಯವಾದದ್ದು! ಏನೋ ಅಸಂಬದ್ದ ದೃಶ್ಯಗಳು! ಯಾವೊದೋ ಮನೆ! ಅಲ್ಲಿನ ಜನರೆಲ್ಲ ಹೆಚ್ಚೂಕಮ್ಮಿ ತನ್ನ ವಯಸ್ಸಿನವರು! ಕೆಲವರು ಮಲಗಿದ್ದು, ಕೆಲವರು ಏನೋ ಅಸಂಬದ್ದ ಪ್ರಲಾಪಗಳಲ್ಲಿ ತೊಡಗಿದ್ದಂತೆ! ಕೆಲವೊಮ್ಮೆ ಕನಸಿನಲ್ಲೂ ಇಂತ ಸನ್ನಿವೇಶಗಳು! ಅಲ್ಲಿ..ಅವರಲ್ಲಿ ತಾನು ವಸುವನ್ನು ಹುಡುಕಲು ಯತ್ನಿಸುತಿದ್ದಂತೆ! ಇಷ್ಟೇ ಅಲ್ಲದೆ ಇನ್ನೂ ಏನೋ ಇದೆ ಎನ್ನುವ ಭಾವ! ವಸು ಒಮ್ಮೊಮ್ಮೆ ಮಂಜಿನ ತೆರೆಯಂತೆ ತನ್ನೆದುರು ಬಂದಂತೆ! ಅದೇನು..ಹಾಗಾದರೆ ವಸು ಪ್ರೇತವೆ..? ಅದರಿಂದ ತನಗೆ ಹೆದರಿಕೆಯಾಗಿರಲಿಲ್ಲ! ವಸು ತನ್ನ ಬದುಕನ್ನು ಪೂಣ9ಗೊಳಿಸಿದವಳು! ಬದುಕಿನ ಪ್ರತಿಕ್ಷಣವನ್ನೂ ಅರ್ಥಪೂರ್ಣವಾಗಿ  ಬದುಕಿದವಳು, ಅವಳು ಪ್ರೇತವಾಗಿರುವುದು ಸಾಧ್ಯವೇ ಇಲ್ಲ!
ವಸು ಗತಿಸುವ ಆರು ತಿಂಗಳ ಹಿಂದೆ ಬಲಗೈನ ಬೆರಳುಗಳ ಸ್ವಾಧೀನ ಕಮ್ಮಿಯಾದೆಂತೆನಿಸಿ ನ್ಯೂರಾಲಜಿಸ್ಟ್ ಹತ್ತಿರ ಹೋಗಿದ್ದು ನೆನಪಿತ್ತು. ಏನೋ ಮೆದುಳಿನ ತೊಂದರೆ ಎಂದಿದ್ದರು. ಆಗಿನಿಂದ ವಸು ತನ್ನ ಬಗ್ಗೆ ಇನ್ನೂ ಹೆಚ್ಚು ಕಾಳಜಿ ವಹಿಸಿದ್ದಳು. ಆಗಿನಿಂದ ತನಗೆ ಏನೋ ಗಂಭೀರವಾದ ತೊಂದರೆ ಇರಬಹುದೆಂಬ ಅನುಮಾನ ಕಾಡತೊಡಗಿತ್ತು. ಅದು ನೆನಪಿಗೆ ಸಂಬಂದಿಸಿದ್ದು ಇರಬಹುದೆ..? ಅದರಿಂದಲೇ ಏನೇನೋ ಮನಸ್ಸಿನಲ್ಲಿ ಮೂಡುವುದೆ..? ವಸು ಎದುರು ಕಾಣಿಸಿಕ್ಕೊಳ್ಳುವುದೂ ಅದಕ್ಕೆ ಸಂಬಂದಿಸಿದ್ದೇ ಇರಬಹುದೆ..?
ಧ್ಯಾನ ಮಾಡಲು ಸಾಧ್ಯವಿಲ್ಲವೆನಿಸಿ ಹಿಂದಿನ ದಿನದ ಪೇಪರನ್ನು ಓದಲೆ ಎನ್ನಿಸಿದರೂ ಮನಸ್ಸು ಬರಲಿಲ್ಲ. ಮನಸ್ಸು ಮಾತ್ರ ನೆನಪಿನ ಹಗ್ಗ ಹೊಸೆಯುತ್ತಿತ್ತು!
ಇವತ್ತೇನಾದರೂ ಸರಿಯೇ ಖಾದರ್ ಗ್ಯಾರೇಜಿಗಾದರೂ ಹೋಗಿ ಅವನ್ನು ಎಳೆದು ತರಬೇಕು. ಹೇಗೂ ಹತ್ತು ಗಂಟೆಗೆ ಮನೆ ಖಾಲಿಯಾಗುತ್ತೆ, ಬೀಗ ಹಾಕಿಕೊಂಡು ಹೋದರಾಯಿತು. ಒಂದು ವೇಳೆ ಸತೀಶ ಉಳಿದರೂ ಅವನು ತನ್ನನ್ನೇನೂ ಕೇಳುವುದೂ ಇಲ್ಲ ಹೇಳುವುದೂ ಇಲ್ಲ. ಹೋಗಿ ಬಂದಿದ್ದು ಯಾರಿಗೂ ಗೊತ್ತಾಗುವುದಿಲ್ಲ. ಗೊತ್ತಾದರೆ ಮನೆಯಲ್ಲಿ ರಾದ್ಧಾಂತವಾಗುತ್ತದೆ. ವಸೂ ಸತ್ತ ನಂತರ ತನ್ನ ಎಲ್ಲಾ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಿದೆ. ತಾನು ಹೊರಗೆ ಹೋಗಬಾರದೆಂದು ಎಲ್ಲರೂ ಒತ್ತಾಯಿಸುತ್ತಾರೆ-ಕಾರಣ ತನಗೆ ತಿಳಿದಿಲ್ಲ. ಬೆಳಿಗ್ಗೆ ಆರೂವರೆಗೆ ಎದ್ದು, ಏಳರ ಸಮಯಕ್ಕೆ ಎದ್ದು ಪಕ್ಕದಲ್ಲಿನ ಪಾಕರ್ಿನಲ್ಲಿ ಒಂದೆರಡು ಸುತ್ತು ನಡೆಯಬಹುದಂತೆ. ಅದಕ್ಕೂ ಜೊತೆಯಲ್ಲಿ ಮೊಮ್ಮಕ್ಕಳಲ್ಲಿ ಒಬ್ಬರು ಯಾರಾದರೂ ಬರುತ್ತಾರೆ. ತಾನು ಪಾಕರ್ು ಸೇರಿದನಂತರ ಅವರು ಮನೆಗೆ ಹೋಗುತ್ತಾರೆ. ಯಾಕೆ ಈ ರೀತಿಯ ಧಿಗ್ಭಂದನ ಎಂದು ಅರ್ಥವಾಗುತ್ತಿಲ್ಲ. ಅದಕ್ಕೆ ಯಾರೂ ಉತ್ತರ ಕೊಡುತ್ತಿಲ್ಲ.

ಡ್ರಾಯಿಂಗ್ ರೂಮಿಗೆ ಯಾರೋ ಬಂದು ಲೈಟು ಹಾಕಿದರು. ಬಂದಿದ್ದು ಮೊದಲ ಮಗ ವಿವೇಕ.
ಯಾಕಪ್ಪ..? ನಿದ್ರೆ ಬರಲಿಲ್ಲವೆ? ಇಷ್ಟೊತ್ತಿಗೆ ಯಾಕೆ ಎದ್ರಿ..? ರೂಮಲ್ಲಿ ಹೋಗಿ ಮಲಗಿ. ಕಿಟಿಕಿ ಬೇರೆ ತೆಗೆದಿದ್ದೀರ..? ಕಳೆದ ವಾರ ಹಿಂದಿನ ಬೀದೀಲಿ ಡಕಾಯಿತಿ ಆಗಿದ್ದು ಗೊತ್ತಿಲ್ವಾ..? ಅದೂ ಈ ಸಮಯದಲ್ಲೇ ಆಗಿದ್ದು. ಮೊದಲು ಕಿಟಿಕಿ ಮುಚ್ಚಿ ರೂಮಿಗೆ ಹೋಗಿ ಮಲಗಿ ಎಂದವನು ಉತ್ತರಕ್ಕೂ ಕಾಯದೆ ಹಿಂತಿರುಗಿದ.
ಯಶವಂತರಾಯರು ಲೈಟು ಆರಿಸಿ ತಮ್ಮ ರೂಮಿಗೆ ಮರಳಿದರು.
ಏನೋ ಆಗುತ್ತಿದೆ! ಏನೋ ಬದಲಾವಣೆಯಾಗುತ್ತಿದೆ. ಮನಸ್ಸಿನಲ್ಲಿ ಏನೋ ತಳಮಳ. ಕಾರಣ ಗೊತ್ತಾಗುತ್ತಿಲ್ಲ. ಗೋಡೆ ಗಡಿಯಾರ ಐದೂವರೆ ತೋರಿಸಿತು. ಇನ್ನೊಂದು ಗಂಟೆ ಕಳೆದರೆ ಪಾರ್ಕ್ನಲ್ಲಿ ವಾಕಿಂಗಿಗೆ ಹೋಗಬಹುದು ಎನಿಸಿ ಸಮಾಧಾನವಾಯಿತು. ಹಾಸಿಗೆಯಲ್ಲಿ ಉರುಳಿದರು. ಸೆಕೆಯೆನಿಸಿತು. ಕಿಟಿಕಿ ತೆಗೆಯದಂತೆ ವಿವೇಕ ಎಚ್ಚರಿಸಿದ್ದ. ಫ್ಯಾನು ಹಾಕಿಕೊಂಡರು. ಮೆಲ್ಲಗೆ ಗರಗರ ಶಬ್ದ ಮಾಡುತ್ತಾ ಫ್ಯಾನು ತಿರುಗತೊಡಗಿತು. ಕರೆಂಟು ಹೋಗಿದ್ದರಿಂದ ಫ್ಯಾನು ಯೂಪಿಎಸ್ಸಿನಿಂದ ಓಡುತ್ತಿತ್ತು. ಅದು ಬೀಸುವ ಗಾಳಿಗಿಂತ ಅದರ ಶಬ್ದವೇ ಕರ್ಕಶವೆನಿ ಸ್ವಿಚ್ ಆಫ್ ಮಾಡಿದರು.
ಕಿವಿಯ ಬಳಿ ಸೊಳ್ಳೆಯೊಂದು ಸಂಭ್ರಮದಿಂದ ಗುಂಯ್ಗುಟ್ಟಿತು! ಕೈಯಿಂದ ಕಿವಿಯ ಮೇಲೆ ಅಪ್ಪಳಿಸಿದರು. ಕಿವಿಗೆ ನೋವಾಯಿತು. ಸೊಳ್ಳೆ ಸತ್ತಿತೋ ಇಲ್ಲವೋ ತಿಳಿಯಲಿಲ್ಲ! ಲೈಟು ಹಾಕಿ ನೋಡಿದರು. ತಲೆಯ ಮೇಲೆ ಸೊಳ್ಳೆ ಹಾರುತ್ತಿತ್ತು. ಮತ್ತೆ ಕೈಯಿಂದ ಬಡಿದು ಸಾಯಿಸಲು ಪ್ರಯತ್ನಿಸಿದರು. ಅದು ಕೈಗೆ ಸಿಗದೆ ಅಸಹನೆಯನ್ನು ತುಂಬಿತು.
ಸತೀಶ ರೂಮಿನ ಬಾಗಿಲಲ್ಲಿ ಕಾಣಿಸಿದ.
ಏನಪ್ಪಾ ಅದು..? ಲೈಟು ಹಾಕ್ತೀರ, ಆಫ್ ಮಾಡ್ತೀರ, ಎದ್ದು ಓಡಾಡ್ತೀರ..ಏನಿದು..? ಸುಮ್ಮನೆ ಮಲಗಬಾರದೆ..? ಆಕ್ಷೇಪಿಸಿ ಹಿಂತಿರುಗಿದ. ಪಕ್ಕದ ರೂಮಿನಲ್ಲಿ ಅವನು ಮಲಗುವುದೆಂದು ಯಶವಂತರಾಯರು ನೆನಪು ಮಾಡಿಕೊಂಡರು. ತುಂಬಾ ಪ್ರಯಾಸದಿಂದ ಸಮಯವನ್ನು ಕರಗಿಸತೊಡಗಿದರು.
ಎಂಟು ಗಂಟೆ ಸರಿಯಾದ ಸಮಯ. ಖಾದರ್ ಮನೆಯಲ್ಲೇ ಇರುತ್ತಾನೆ. ಫೋನ್ ಮಾಡಿದರೆ ಸಿಗುತ್ತಾನೆ. ಕಾರು ಸ್ಟಾರ್ಟ್ ಆಗದಿರುವುದರಿಂದ ಅದನ್ನು ಸರಪಳಿಯಿಂದ ಇನ್ನೊಂದು ಕಾರಿಗೆ ಕಟ್ಟಿ ಗ್ಯಾರೇಜಿನಿಂದ ಈಚೆ ತೆಗೆಯಬೇಕು. ಜೊತೆಗೆ ಬಹಳ ಕಾಲ ನಿಂತಲ್ಲೇ ನಿಂತಿದ್ದರಿಂದ ಟೈರುಗಳಲ್ಲಿ ಗಾಳಿ ಇರುವುದೂ ಅನುಮಾನವೇ! ಹಾಗೆ ‘ಟೋ’ ಮಾಡಿಕೊಂಡು ತನ್ನ ಗ್ಯಾರೇಜಿಗೆ ಒಯ್ಯುತ್ತೇನೆ ಎಂದು ಬಹಳ ದಿನದಿಂದಲೂ ಹೇಳುತ್ತಲೇ ಕಾಲ ತಳ್ಳಿದ್ದಾನೆೆ. ಇವತ್ತು ಏನಾದರೂ ಸರಿ ಕಾರು ಗ್ಯಾರೇಜಿನಿಂದ ಈಚೆ ಬರಲೇಬೇಕು. ಯಶವಂತರಾಯರು ನಿರ್ಧಾರ ಮಾಡಿಬಿಟ್ಟರು.
ತನ್ನ ಅಂಬಾಸಿಡರ್ ಕಾರು ಈಚೆ ಬಂದರೆ ಮಕ್ಕಳಲ್ಲಿ ಒಬ್ಬರ ಕಾರಿಗೆ ಗ್ಯಾರೇಜಿನಲ್ಲಿ ಜಾಗವಾಗುತ್ತದೆ. ಅದು ಸತೀಶನಿಗೇ ಹೆಚ್ಚು ಸೂಕ್ತ. ವಿವೇಕನಾದರೆ ಬೆಳಿಗ್ಗೆ ಏಳೂವರೆಗೇ ಫ್ಯಾಕ್ಟರಿಗೆ ಹೋಗುವವನು. ಸತೀಶ ಹೋದರೆ ಹೋದ ಇಲ್ಲದಿದ್ದರೆ ಮನೆಯಲ್ಲೇ ಲ್ಯಾಪ್ಟಾಪ್ ಹಿಡಿದು ಕೂರುವನು.
ಈ ಲೆಕ್ಕಾಚಾರವೇನೋ ಸರಿ. ಖಾದರ್ ತನ್ನ ಕಾರನ್ನು ರಿಪೇರಿ ಮಾಡಿದ ನಂತರ ತನ್ನ ಕಾರಿಗೆ ಜಾಗ..? ಅದನ್ನು ಕ್ಯಾನೊಪಿಯ ಕೆಳಗೆ ಬಿಟ್ಟರೆ ಮತ್ತೆ ಉಳಿದಿಬ್ಬರು ಮಕ್ಕಳಿಗೆ ಕಾರು ತೆಗೆಯಲು ಆಗವುದಿಲ್ಲ! ಅರೆ ಈ ಸಮಸ್ಯೆ ತನ್ನ ತಲೆಗೇ ಹೋಗಿರಲಿಲ್ಲವಲ್ಲ..? ಆಗೇನು ಮಾಡುವುದು..? ಸಮಸ್ಯೆಗೆ ಉತ್ತರ ಹೊಳೆಯದೆ ಯಶವಂತರಾಯರು ಹೈರಾಣಾದರು!
ಮನೆಗೆ ಸೊಸೆಯರು ಬಂದನಂತರ ದೈನಂದಿನ ಚಟುವಟಿಕೆಗಳು ಬದಲಾಗಿವೆ. ಈ ಬದಲಾವಣೆಗಳು ಕಳೆದ ಆರು ವರ್ಷಗಳಿಂದ ಹಲವಾರು ರೀತಿಯಲ್ಲಿ ಆಗಿವೆ. ಯಶವಂತರಾಯರಿಗೆ ಕ್ರಮೇಣ..ಕ್ರಮೇಣ ಮನೆ ತನ್ನದೆನ್ನಿಸದಂತಾಗಿದೆ. ವಸು ಇರುವವರೆಗೂ ಒಂದು ರೀತಿಯಲ್ಲಿ ಈ ಮನೆಗೂ ತನಗೂ ಒಂದು ಸಂಬಂಧವಿದೆ ಅನ್ನಿಸುತ್ತಿತ್ತು. ಈ ಮನೆ ತನ್ನದೆನಿಸುತ್ತಿತ್ತು. ಈಗದು ಪೂರ್ಣ ಇಲ್ಲದಂತಾಗಿ ತಾನಿಲ್ಲಿ ಅಪರಿಚಿತ ಎನ್ನುವಂತಾಗಿದೆ. ಇದು ಬೇರೆ ಯಾರದೋ ಮನೆ. ತಾನು ಇರುವುದರಿಂದ ಅವರಿಗೆ ತೊಂದರೆಯಾಗುತ್ತಿದೆ ಎನಿಸತೊಡಗಿತ್ತು. ತಾನು ಈ ಮನೆಯ ಜವಾಬ್ದಾರಿ ಹೊತ್ತಿರುವವರೆಗೂ ರಾತ್ರಿ ಹತ್ತೂವರೆಗೆ ಎಲ್ಲ ಮಲಗುತ್ತಿದ್ದರು. ಬೆಳಿಗ್ಗೆ ಐದರಿಂದ ಐದೂವರೆಗೆ ಎಲ್ಲ ಏಳುತ್ತಿದ್ದರು. ಈಗೆಲ್ಲಾ ಬದಲಾಗಿದೆ. ಸೊಸೆಯರು, ಮಕ್ಕಳು ಎಲ್ಲಾ ಮಲಗುವುದು ಸುಮಾರು ಹನ್ನೆರಡಕ್ಕೆ! ರಾತ್ರಿ ಊಟ ಹನ್ನೊಂದಕ್ಕೆ! ವಸೂ ಇರುವಷ್ಟು ಕಾಲ ತನಗೆ ಮಾತ್ರ ರಾತ್ರಿ ಒಂಬತ್ತಕ್ಕೆ ಊಟವಾಗುತ್ತಿತ್ತು. ಈಗದು ಹತ್ತಕ್ಕೇರಿದೆ. ಈಗ ಬೆಳಿಗ್ಗೆ ಎಲ್ಲ ಏಳುವುದು ಏಳರ ನಂತರವೇ! ಮಕ್ಕಳು, ಸೊಸೆಯರು ಮನೆಗೆ ಬರುವುದರಲ್ಲಿ ಸಂಜೆ ಏಳಾಗಿರುತ್ತದೆ. ಎಲ್ಲರೂ ಒಟ್ಟಿಗೆ ನಾಲ್ಕಾರು ಗಂಟೆ ಸಮಯ ಒಟ್ಟಿಗೆ ಕಳೆಯಬೇಕೆಂದರೆ ಈ ರೀತಿಯ ಸಮಯ ಪಾಲನೆ ಅನಿವಾರ್ಯವೇನೋ..? ತನ್ನ ಕಾಲವೇ ಬೇರೆಯಿತ್ತು! ತಾನೊಬ್ಬನೇ ಮನೆಯಲ್ಲಿ ದುಡಿಯುವವ! ಇಬ್ಬರು ಮಕ್ಕಳು ಓದುತ್ತಿದ್ದವರು. ಇನ್ನುಳಿದವಳು ವಸು; ಮನೆಯ ಎಲ್ಲ ಜವಾಬ್ದಾರಿ ಅವಳದು. ಆಗ ಅದು ಸರಿಯಿತ್ತು! ಈಗ ಇದು ಅನಿವಾರ್ಯ! ತಾನಿದನ್ನು ಒಪ್ಪಲೇಬೇಕು! ಒಪ್ಪದಿದ್ದರೂ ತನ್ನ ಒಪ್ಪಿಗೆಯನ್ನಂತೂ ಯಾರೂ ನಿರೀಕ್ಷಿಸಿಯೂ ಇಲ್ಲ!
ಇಂದೇನೋ ಬದಲಾವಣೆಯಾಗುತ್ತಿರುವಂತೆ ಕಂಡಿತು ಯಶವಂತರಾಯರಿಗೆ. ಐದೂವರೆಗೇ ಮನೆಯಲ್ಲಿ ಚಟುವಟಿಕೆಗಳು ಕಂಡವು! ಬಹುಶಃ ಎಲ್ಲರೂ ಯಾವುದಾದರೊಂದು ಸಮಾರಂಭಕ್ಕೆ ಹೋಗುವುದಿರಬೇಕು ಎನ್ನಿಸಿತು. ಎಂದಿನಂತೆ ತನ್ನನ್ನು ಮನೆಯಲ್ಲಿ ಬಿಟ್ಟು ಹೊಗುತ್ತಾರೆ. ವಸೂ ಇರುವವರೆಗೂ ಎಲ್ಲರೂ ಒಟ್ಟಿಗೆ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಸೊಸೆಯರು ಬಂದನಂತರ ಮಕ್ಕಳು ಮತ್ತು ಸೊಸೆಯರು ಹೋಗುತ್ತಿದ್ದರು. ತಾನು ವಸು ನಂತರ ಹೋಗುತ್ತಿದ್ದೆವು. ಅಪರೂಪಕ್ಕೆ ಅವರೊಟ್ಟಿಗೆ ತಮ್ಮನ್ನೂ ಕರೆದೊಯ್ದಿದ್ದೂ ಇದೆ. ವಸು ಇದ್ದಾಗ ಇವೆಲ್ಲವೂ ತನ್ನ ಗಮನಕ್ಕೇ ಬಂದಿರಲೇ ಇಲ್ಲ! ಇವೆಲ್ಲವೂ ಸಮಸ್ಯೆಗಳು ಎನ್ನಿಸಿಯೇ ಇರಲಿಲ್ಲ! ಅವೆಂದೂ ತನ್ನ ಮನಸ್ಸಿನೊಳಗೆ ಹೋಗಿಯೇ ಇರಲಿಲ್ಲ!
ಬದಲಾದ ವ್ಯವಸ್ಥೆಗೆ ತಾನೆಂದೂ ವಿರೋಧ ವ್ಯಕ್ತಪಡಿಸಿರಲಿಲ್ಲ! ಆದರೆ ವಸು ಕೊರಗುತ್ತಿದ್ದಳು. ಈ ಬದಲಾವಣೆ ಒಳ್ಳೆಯದಕ್ಕಲ್ಲ ಎನ್ನುತ್ತಿದ್ದಳು. ರಿಟೈರ್ ಆಗುವ ಮುಂಚೆಯಿಂದಲೂ ಮದುವೆ, ನಾಮಕರಣ, ಹುಟ್ಟಿದ ಹಬ್ಬ, ತಿಥಿ-ಮುಂತಾದ ಯಾವ ಕಾರ್ಯಗಳಲ್ಲೂ ತನಗೆ ಹೆಚ್ಚಿನ ಅಸ್ತೆಯಿರಲಿಲ್ಲ. ಮೊದಲಿನಿಂದಲೂ ತಾನು ಏಕಾಂತಪ್ರಿಯನೇ! ಬದುಕಿನಲ್ಲಿ ಮಕ್ಕಳ ಮದುವೆ, ಮೊಮ್ಮಕ್ಕಳ ಜನನ, ನಾಮಕರಣ, ಅವರ ಹುಟ್ಟುಹಬ್ಬ-ಇಂತಾ ಎಲ್ಲ ಸಂದರ್ಭಗಳಲ್ಲಿ ತಾನು ಭಾಗವಹಿಸಿದ್ದರೂ ಅಲ್ಲಿಯೂ ತಾನು ಏಕಾಂಗಿಯಾಗೇ ಇರುತ್ತಿದ್ದೆ. ಇದರಿಂದ ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಈಗ ತನ್ನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಹೋದರೂ ಮನಸ್ಸಿಗೇನೂ ನೋವಿಲ್ಲ! ಮೊದಲಿಗೆ ಹೋಗುವ ಮುಂಚೆ ತನಗಾಗಿ ಎಲ್ಲ ಮಾಡಿಟ್ಟು ಹೊಗುತ್ತಿದ್ದ ಸೊಸೆಯರು ಒಂದೆರಡು ಸಲ ಗೊಣಗಿದಾಗ ತಾನಾಗಿಯೇ, ‘ನೀವು ನನಗಾಗಿ ಮಾಡುವುದೇನು ಬೇಡ. ನಿಮ್ಮ ಪಾಡಿಗೆ ನೀವು ಹೋಗಿ. ನನಗೆ ಬೇಕಾದಷ್ಟು ಸಮಯ ಇರುತ್ತದೆ. ನಾನೇ ಏನಾದರೂ ಮಾಡಿಕ್ಕೊಳ್ಳುತ್ತೇನೆ’ ಎಂದಿದ್ದೆ. ತಮಗೆ ಅವಮಾನವಾದಂತೆ ತನ್ನ ಮಾತಿನಲ್ಲಿ ವ್ಯಂಗ್ಯ, ನೋವು ಹುಡುಕಲೆತ್ನಿಸಿದ್ದರು. ತಾನೇ ಅವರನ್ನು ಸಮಾಧನಪಡಿಸಿದಾಗ ಒಪ್ಪದಂತೆ ಮಾತಾಡಿ ಕೊನೆಗೆ ಒಪ್ಪಿದ್ದರು. ಕೆಲವು ಸಲ ಏನಾದರೂ ಮಾಡಿಕ್ಕೊಳ್ಳುತ್ತಿದ್ದೆ. ಕೆಲ ಸಮಯದ ನಂತರ ತಾನು ಉಪಯೋಗಿಸಿದ ಪಾತ್ರೆಗಳನ್ನು ತೊಳೆಯಲು ಅವರು ಬೇಸರ ವ್ಯಕ್ತಪಡಿಸಿದಾಗ ಹತ್ತಿರದ ಹೋಟೆಲಿನಲ್ಲಿ ಹೋಗಿ ತಿನ್ನುವುದನ್ನು ರೂಢಿಸಿಕೊಂಡಿದ್ದೆ. ಆಗವರ ಗೊಣಗಾಟ ನಿಂತಿತ್ತು. ಅವರಿಗೂ ಇದು ಸರಿ ಎನ್ನಿಸಿದ್ದಿರಬೇಕು.
ಎಲ್ಲ ಯೋಚನೆಗಳ ನಡುವೆಯೇ ಯಾವಾಗಲೋ ಜೋಂಪು! ಸತೀಶ ಬಂದು ಎಚ್ಚರಿಸಿದಾಗ ಸಮಯ ಏಳಾಗಿತ್ತು. ಸಾಮಾನ್ಯವಾಗಿ ಆರೂವರೆಗೆ ಏಳುತ್ತಿದ್ದ ಯಶವಂತರಾಯರು ಇಂದು ಅರ್ಧ ಗಂಟೆ ತಡವಾಗಿ ಎದ್ದಿದ್ದರು.
ಇವತ್ತೇನಾದರೂ ವಿಶೇಷ ಇದೆಯಾ..? ಎಲ್ಲ ಬೇಗ ಎದ್ದಿರೋ ಹಾಗಿದೆ? ಮಗನನ್ನು ಕೇಳಿದರು.
ಏನಂತಾದಿಲ್ಲ. ನೀವು ಒಂದರ್ಧ ಗಂಟೇಲಿ ಸ್ನಾನ ಮಾಡಿ, ಪೂಜೆ ಮುಗಿಸಿ ಬನ್ನಿ
ಯಾಕೆ? ಏನು? ಎಂದು ಕೇಳದೆ ಅರ್ಧ ಗಂಟೆಯಲ್ಲಿ ಸ್ನಾನ, ಪೂಜೆಯನ್ನೂ ಮುಗಿಸಿದರು. ಎಂಟಕ್ಕೆ ಖಾದರ್ಗೆ ಫೋನು ಮಾಡಬೇಕೆನ್ನುವ ಯೋಚನೆ ಮನಸ್ಸಿನಲ್ಲಿ ಗಟ್ಟಿಯಾಗಿತ್ತು. ಅಕಸ್ಮಾತ್ ಅವನ ಮೊಬೈಲು ಆಫ್ ಆಗಿದ್ದರೆ ಅವನ ಗ್ಯಾರೇಜಿಗೇ ಹೋಗುವುದೆಂದು ಸಂಕಲ್ಪ ಮಾಡಿಬಿಟ್ಟಿದ್ದರು.
ಯಶವಂತರಾಯರು ಡೈನಿಂಗ್ ಹಾಲಿಗೆ ಬಂದಾಗ ವಿವೇಕ ಮತ್ತು ಸತೀಶನನ್ನು ಬಿಟ್ಟು ಉಳಿದವರು ಎಲ್ಲಿಗೋ ಹೊರಡಲು ಸಿದ್ಧರಾಗಿದ್ದರು.
ಅಪ್ಪಾ ಬಂದ್ರು ಸತೀಶ ಉಳಿದವರಿಗೆ ಕೇಳುವಂತೆ ಹೇಳಿದ.
ಮರೆತಿದ್ದೆ, ಒಂದು ಪೋನು ಮಾಡಿ ಬರ್ತಿನಿ ಎಂದು ಯಶವಂತರಾಯರು ಡ್ರಾಯಿಂಗ್ ರೂಮಿಗೆ ಹೋದರು. ಖಾದರ್ ಗೆ ಫೋನು ಮಾಡಿದರು. ಎಂದೂ ಸಿಗದ ಖಾದರ್ ಪುಣ್ಯಕ್ಕೆ ಫೋನು ಎತ್ತಿಕೊಂಡ. ಮತ್ತೆ ಹಲವು ಕಾರಣಗಳನ್ನು ಹೇಳಿದರೂ ಕೊನೆ ಹತ್ತೂವರೆಗೆ ಮನೆಗೆ ಬಂದು ಕಾರನ್ನು ‘ಟೋ’ ಮಾಡಿಕೊಂಡು ಹೋಗುವುದಾಗಿಯೂ, ವಾರದೊಳಗೆ ಅದನ್ನು ರಿಪೇರಿ ಮಾಡಕೊಡುವ ಭರವಸೆಯನ್ನೂ ಕೊಟ್ಟ. ಯಶವಂತರಾಯರಿಗೆ ದೊಡ್ಡ ಸಮಸ್ಯೆ ಬಗೆಹರಿದಂತೆ ಸಮಾಧಾನವಾಗಿತ್ತು.
ಡ್ರಾಯಿಂಗ್ ರೂಮಿಗೆ ಸತೀಶ ಮತ್ತು ವಿವೇಕ ಬಂದರು. ಅವರಿಬ್ಬರೂ ಒಟ್ಟಿಗೆ ಬಂದಿದ್ದು ನೋಡಿದರೆ, ಯಾವುದೋ ಮುಖ್ಯವಾದ ವಿಷಯವನ್ನು ಮಾತಾಡಲು ಬಂದವರಂತೆ ಕಂಡಿತು.
ಏನೆ ವಿಷಯ..? ಏನಾದರೂ ದುಡ್ಡು ಬೇಕಾಗಿತ್ತಾ..?
ಯಶವಂತರಾಯರೇ ಕೇಳಿದರು. ಹಣದ ವಿಷಯದಲ್ಲಿ ಯಶವಂತರಾಯರು ತುಂಬಾ ಹುಷಾರು. ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿಯೂ, ಅವರ ಬ್ಯಾಂಕ್ ಖಾತೆಯಲ್ಲಿ ಹತ್ತು ಲಕ್ಷಕ್ಕೂ ಮೀರಿ ಕ್ಯಾಷ್ ಇತ್ತು.
ಇಲ್ಲ..ಹಣದ್ದು ಸಮಸ್ಯೆಯಲ್ಲ..
ಆದ್ರೂ ಒಂದು ವಿಷಯ ಇದೆ. ಅದೇನು ಅಂತಾ ಮುಖ್ಯವಾದುದಲ್ಲ, ಆದ್ರೆ ಕಿರಿಕಿರಿಯಾಗೋ ವಿಷಯ..
ಸತೀಶ ಮಾತಾಡಲು ಸಂಕೋಚಪಡುತ್ತಿರುವಂತೆ ಕಂಡಿತು ಯಶವಂತರಾಯರಿಗೆ.
ನಾನು ನೆನ್ನೆ ರಾತ್ರಿ ನಿದ್ರೆ ಬರದೆ ಕೊಂಚ ಓಡಾಡಿದೆ ಅದೇನಾದ್ರೂ..
ಛೆ..ಅದೂ ಅಲ್ಲಪ್ಪಾ..ಅಮ್ಮ ಇದ್ದಾಗ ನಿಮ್ಮ ಹತ್ರ ನಾವು ಯಾವ ವಿಷಯವನ್ನೂ ನಿಮಗೆ ಬೇಜಾರಾಗೋ ರೀತಿನಲ್ಲಿ ಹೇಳ್ತಿರಲಿಲ್ಲ. ಅಮ್ಮನಿಗೆ ನಿಮಗೆ ಯಾವ ವಿಷಯಾನ ಯಾವ ಸಮಯದಲ್ಲಿ ಹೇಗೆ ಹೇಳ್ಬೇಕೂನ್ನೋದು ಚೆನ್ನಾಗಿ ಗೊತ್ತಿತ್ತು. ನಮಗೆ ನಿಮ್ಮ ಹತ್ರ ಮಾತಾಡೋದು ಕಷ್ಟವಾಗ್ತಿದೆ… ನಿಮಗೆ ಬೇಜಾರಾಗಬಹುದು ಅಂತ ಬಹಳ ದಿನದಿಂದ ಒಂದು ವಿಷಯ ಮಾತಾಡಿರಲಿಲ್ಲ..ಆದ್ರೆ ಈಗ..? ಸತೀಶ ಮಾತಾಡಲು ಸಾಧ್ಯವಾಗದೆ ಪ್ರಶ್ನೆಯಲ್ಲಿ ನಿಲ್ಲಿಸಿದ.
ನಿಮ್ಮ ಕಾರು ಗ್ಯಾರೇಜಲ್ಲಿ ನಿಂತು ಎರಡು ವರ್ಷವಾಗ್ತಾ ಬಂತು..ಅದರಿಂದ.. ವಿವೇಕ ಮಾತು ಮುಂದುವರಿಸಿದರೂ, ಅರ್ಧಕ್ಕೆ ನಿಲ್ಲಿಸಿದ.
ಓ..ಆ ಕಾರಿಂದ..? ಅದರ ವಿಷಯ ನಾನಾಗಲೇ ಇತ್ಯರ್ಥ ಮಾಡ್ಬಿಟ್ಟಿದ್ದೀನಿ. ಖಾದರ್ ಹತ್ತೂವರೆಗೆ ಬರ್ತಾನೆ..
ಯಶವಂತರಾಯರಿಗೆ ಅವರಿಬ್ಬರ ಮನಸ್ಸಿನಲ್ಲಿದ್ದುದು ತಿಳಿದಿತ್ತು. ತಾವಾಗೇ ಹೇಳಿದರು.
ಅಂತೂ ಮಾರೋ ಮನಸ್ಸು ಕೊನೆಗೂ ಮಾಡಿಬಿಟ್ರಲ್ಲ..? ಇಬ್ಬರ ಮುಖದಲ್ಲೂ ಸಂತೋಷ ಕಂಡಿತು.
ಮಾರೊಲ್ಲ..ಅದು ರಿಪೇರಿ ಮಾಡಿಸ್ತೀನಿ
ಅದಕ್ಕೆ ಯಾಕಿನ್ನು ರಿಪೇರಿ..? ಈ ಸಲ ಕನಿಷ್ಟ ಇಪ್ಪತ್ತು ಸಾವಿರವಾದರೂ ಆಗುತ್ತೆ.! ನಿಮಗೆ ಕಾರು ಯಾಕೆ ಬೇಕು ಹೇಳಿ! ಅದನ್ನ ಒಂದೇ ಸಲ ಗುಜರಿಗೆ ಹಾಕಿಬಿಡೋಣ..
ಅವರ ಮಾತಿಗೆ ಯಶವಂತರಾಯರು ಮೂಕರಾದರು.
ಆ ಮೌನದಿಂದ ಮಕ್ಕಳು ಕೊಂಚ ಅಧೀರರಾದರು.
ಇವತ್ತೇ ಆಗ್ಬೇಕೂಂತೇನಿಲ್ಲ..ಒಟ್ಟಿನಲ್ಲಿ ಆ ಕಾರು ಗುಜರಿಗೆ ಹೊದರಾಯಿತು ಸತೀಶ ಸಮಧಾನ ಮಾಡುವವನಂತೆ ಹೇಳಿದ.
ನೀವೆಲ್ಲಿ ಓಡಾಡ್ಬೇಕೂಂತ ಅದನ್ನ ಉಳಿಸಿಕೋಬೇಕು ಹೇಳಿ..?
ಅದು ಗುಜರಿಗೆ ಹೋಗೊಲ್ಲ.. ಯಶವಂತರಾಯರ ಮಾತಿನಲ್ಲಿ ಹಿಂದೆಂದೂ ಇಲ್ಲದ ಗಟ್ಟಿತನವಿತ್ತು.
ಮತ್ತೆ..?
ರಿಪೇರಿಗೆ ಹೋಗಿ ಮತ್ತೆ ವಾಪಸ್ಸು ಬರುತ್ತೆ..! ಅಚಲ ನಿರ್ಧಾರವಿತ್ತು.
ಮತ್ತೆ ಸಮಸ್ಯೆ ಅಲ್ಲೇ ಉಳೀತಲ್ಲ..?
ನಿಮಗೆ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಲ್ಲವೆ..? ಯಶವಂತರಾಯರು ಕೇಳಿದರು.
ಆ ಹಳೆ ಕಾರಿನ ವಿಷಯಕ್ಕೆ ನೀವಿಷ್ಟೊಂದು ಮೊಂಡಾಟ ಮಾಡಬಾರದು
ಇದು ಬರೀ ಕಾರಿನ ವಿಷಯವಲ್ಲ, ಇಲ್ಲಿ ನನ್ನ ಪ್ರಶ್ನೆ ಕೂಡ ಸೇರಿದೆ ತಮ್ಮ ಅಸಹನೆ ತೋರಬಾರದೆಂದರೂ ಅದು ಮಾತಿನ ಮೂಲಕ ಈಚೆ ಬಂದಿತ್ತು.
ನೋಡಿ, ನಾವು ಏನೋ ಹೇಳಿದರೆ ನೀವು ಬೇರೇನೋ ಯೋಚಿಸ್ತಿದ್ದೀರಿ..
ಬೇಡ, ಈಗ ಮಾತಿನಿಂದ ಮನಸ್ಸು ಕೆಡಿಸಿಕ್ಕೊಳ್ಳೋದು ಬೇಡ, ಈ ಮನೆಗೆ ಆ ಹಳೆಯ ಕಾರಿನಿಂದ ಮುಕ್ತಿ ಬೇಕಲ್ಲವೆ..?
ದೊಡ್ಡ ಮಾತುಗಳಾಡಬೇಡಿ, ಉಪಯೋಗವಿಲ್ಲದೆ ಗ್ಯಾರೇಜಿನಲ್ಲಿ ಕೂತು ತೊಂದರೆಯಾಗಿರೋ ಕಾರು ಗುಜರಿಗೆ ಹಾಕಿ ಅಂತ ನಾವು ಹೇಳ್ತಿರೋದು ಅಷ್ಟೆ
ಆಯ್ತು, ಕಾರನ್ನ ಮನೆಯಿಂದಾಚೆ ಹಾಕೋದು ನನ್ನ ಕೆಲಸ. ಅದನ್ನ ಹೇಗೆ? ಏನು ಮಾಡ್ತೀನಿ ಅನ್ನೋ ಚಿಂತೆ ನಿಮಗೆ ಬೇಡ! ಕೊನೆಯ ಮಾತಿನಂತೆ ಯಶವಂತರಾಯರು ಹೇಳಿದರು.
ಸರಿಯಪ್ಪ, ನಿಮಗೆ ತೋಚಿದ ಹಾಗೆ ಮಾಡಿ, ಆದರೆ ಮನಸ್ಸಿಗೆ ನೋವು ಮಾಡ್ಕೋಬೇಡಿ…ವಾಸ್ತವ ವಿಷಯ ನಾವು ಹೇಳ್ತಿರೋದು, ಕಾರಿನ ಬಗ್ಗೆ ಅಷ್ಟೊಂದು ಭಾವನಾತ್ಮಕ ಸಂಬಂಧ ಬೇಡ..ಅದು ನಿರ್ಜೀವ ವಸ್ತು
ವಿವೇಕ ಅಪ್ಪನ ಮನಸ್ಸು ತಿಳಿಗೊಳಿಸಲು ಯತ್ನಿಸಿದ.
ನೀವಿಬ್ಬರೂ ಅಲ್ಲೇ ಸೆಟ್ಲ್ ಆಗಿಬಿಟ್ರಾ..? ಹೊರಡೋದಿಲ್ಲವೆ..?
ಒಳಗಿನಿಂದ ಕೂಗು ಬಂತು. ಸತೀಶ ಮತ್ತು ವಿವೇಕ ಪರಸ್ಪರ ದೃಷ್ಟಿ ವಿನಿಮಯ ಮಾಡಿಕೊಂಡರು.
ನೀವು ನಿಮ್ಮ ಕೆಲಸ ನೋಡಿಕ್ಕೊಳ್ಳಿ, ಕಾರಿನ ವಿಷಯ ಮರೆತುಬಿಡಿ, ಅದರ ಸಮಸ್ಯೆ ನಿಮಗಿನ್ನು ಬೇಡ
ಸರಿಯಪ್ಪ..ಇದು ಬಲವಂತ ಅಂತ ಮಾತ್ರ ತಿಳ್ಕೊಳ್ಳಬೇಡಿ
ಕೊನೆಯ ಮಾತಿನೊಂದಿಗೆ ಇಬ್ಬರೂ ಡ್ರಾಯಿಂಗ್ ರೂಮಿನಿಂದ ಆಚೆ ಹೋದರು. ಯಶವಂತರಾಯರು ಪೇಪರ್ ಕೈಗೆತ್ತಿಕೊಂಡರು.
ಕೆಲ ಸಮಯದ ನಂತರ ಮೊದಲ ಸೊಸೆ ಬಾಗಿಲಲ್ಲಿ ಇಣುಕಿದಳು.
ತಿಂಡಿ ಮಾಡಿ ಡೈನಿಂಗ್ ಟೇಬಲ್ ಮೇಲಿಟ್ಟಿದೆ. ಮಧ್ಯಾನ್ಹ ಊಟಕ್ಕೆ ಒಂದಿಷ್ಟು ಅನ್ನ ಮಾಡ್ಕೊಂಡ್ರೆ ಸಾಕು, ಫ್ರಿಜ್ನಲ್ಲಿ ಮೊಸರಿದೆ
ಅಪ್ಪಾ ಮನೆ ಕಡೆ ಹುಷಾರು
ಬೈಬೈ ತಾತ
ಅಚೆ ಬಾಗಿಲಿಗೆ ಡೋರ್ ಲಾಕ್ ಬಿತ್ತು.
ಎರಡೂ ಕಾರುಗಳು ಕಾಂಪೌಂಡಿನಿಂದಾಚೆ ಹೋದ ಸದ್ದು.
ಯಶವಂತರಾಯರು ಖಾದರ್ ಕಾಯುತ್ತಾ ಕೂತರು. ಅವರ ಎಲ್ಲ ಲೆಕ್ಕಾಚಾರ ಮುಗಿದಿತ್ತು.
ಸಾಮಾನ್ಯವಾಗಿ ನಾಲ್ಕರ ಸಮಯಕ್ಕೆ ಮಕ್ಕಳು, ಐದರ ಸಮಯಕ್ಕೆ ವಿವೇಕ ನಂತರ ಮನೆಯ ಸೊಸೆಯರು, ಕೊನೆಯಲ್ಲಿ ಸತೀಶ ಬರುತ್ತಿದ್ದರು. ವಿವೇಕ ಬಂದಾಗ ಮನೆಯ ವಾತಾವರಣದಲ್ಲಿ ಏನೋ ಬದಲಾವಣೆ ಎನ್ನಿಸಿತು.
ಒಳಗೆ ಕಾಲಿಡುವಾಗ ಮಕ್ಕಳು ಟಿವಿ ಆಫ್ ಮಾಡಿ ಹೋಂವರ್ಕ್ ಮಾಡುವ ನಟನೆಯಲ್ಲಿ ತೊಡಗಿದ್ದರು.
ತಾತ ಇಲ್ಲವೇನ್ರೋ..?
ಇಲ್ಲ ಎಂದ ವಿವೇಕನ ಕಿರಿಯ ಮಗ.
ವಿವೇಕ ಕೆಳಗಿಳಿದು ಹೋಗಿ ಗ್ಯಾರೇಜಿನ ಬೀಗ, ಬಾಗಿಲು ತೆರೆದು ನೋಡಿದ. ಅಂಬಾಸಿಡರ್ ಮಾಯವಾಗಿತ್ತು! ಅಬ್ಬಾ..ಅಂತೂ ತುಕ್ಕು ಹಿಡಿದ ಆ ಕಾರು ತೊಲಗಿತು ಎಂದುಕೊಂಡ.
ಒಳಗೆ ಬಂದವನು ಸೀದಾ ಯಶವಂತರಾಯರ ರೂಮಿಗೆ ಹೋದ. ಅವನೇನು ಅಂದುಕೊಂಡಿದ್ದನೋ ಅದೇ ಆಗಿತ್ತು! ಯಶವಂತರಾಯರು ಅಲ್ಲಿರಲಿಲ್ಲ! ಅವರ ಬಟ್ಟೆ ಬರೆಗಳೂ ಇರಲಿಲ್ಲ!
ವಿವೇಕ ತಮ್ಮನಿಗೆ ಫೋನು ಮಾಡಿದ.
ಅಂಬಾಸಿಡರ್ ಆಚೆ ಹೋಯ್ತು
ಗುಡ್ ನ್ಯೂಸ್! ಒಂದು ಸಮಸ್ಯೆ ಬಗೆ ಹರೀತು
ಇನ್ನೊಂದು ಸಮಸ್ಯೆ ಹುಟ್ಟಿಕೊಂಡಿತು
ಏನದು..?
ಕಾರಿನ ಜೊತೆಗೆ ಅಪ್ಪನೂ..
ಗುಜರಿಗೆ..? ತುಟಿಮೀರಿ ಬಂದ ಮಾತಿಗೆ, ಅದು ಕೊಟ್ಟ ಅರ್ಥಕ್ಕೆ ಸತೀಶ್ ತುಟಿಕಚ್ಚಿಕೊಂಡ!
 

‍ಲೇಖಕರು G

10 January, 2013

4 Comments

  1. Vasuki

    ತುಂಬಾ ಚನ್ನಾಗಿ ಬರೆದಿದ್ದೀರ ಸರ್! ಕಾರ್ ಅನ್ನು ಐಡೆಂಟಿಟೀ ಗೆ ಹೋಲಿಸಿ ಬರೆದಿರುವ ರೀತಿ ಸೂಪರ್!

  2. ಶಿವಶಂಕರ್ ಎಸ್.ಜಿ

    ಕತೆಯನ್ನು ಮೆಚ್ಚಿಕೊಂಡಿದಕ್ಕೆ ಧನ್ಯವಾದಗಳು

  3. Santhoshkumar LM

    ಶಿವಶಂಕರ್ ಸರ್,
    ಓದುತ್ತಾ ಹೋದಂತೆ ಕಣ್ಣಲ್ಲಿ ನೀರುಕ್ಕಿತು.
    ಮನುಷ್ಯನ ಮತ್ತು ಕಾರಿನ ಬದುಕನ್ನು ರೂಪಕವಾಗಿ ಹೇಳುತ್ತಾ, ಒಬ್ಬ ಹಿರಿಯ ಜೀವದ ಮನಸ್ಸಿನ ತಲ್ಲಣಗಳನ್ನು ಹೇಳಿದ್ದೀರ.
    ಮೊನ್ನೆ ಓದಲಾಗದಿದ್ದ ಈ ಕತೆಯನ್ನು ಓದಿ “ಅಯ್ಯೋ, ಮಿಸ್ ಮಾಡಿಕೊಳ್ಳುತ್ತಿದ್ದೆನಲ್ಲ” ಅನ್ನಿಸಿತು.
    ನಿಮ್ಮ ಬರೆಯುವ ಶೈಲಿಯನ್ನು ನಮಗೂ ಹೇಳಿಕೊಡಿ!!

    • shivashnkar sg

      athmeeya santhosh
      thanks for your appreciation
      katheya shaili thaanaage baruthhade, shraddeyinda bareyutta hogi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading