

ಕುಂಟಾಡಿ ನಿತೇಶ್
ಸಮಾಜಮುಖಿ ಮಿಡಿತವಿರುವ ಚಿಂತಕ ತನ್ನ ಸಮಾಜದ ಏರಿಳಿತಗಳನ್ನ ಗಮನಿಸುತ್ತಾ ಅದು ಸಾಗುತ್ತಿರುವ ದಿಕ್ಕನ್ನು ಹೇಳಬಲ್ಲ . ಅದು ಸಾಮಾನ್ಯನಿಗೆ ತಕ್ಷಣಕ್ಕೆ ಉತ್ಪ್ರೇಕ್ಷೆ ಅನಿಸಿದರೂ ಕಾಲಾಂತರದಲ್ಲಿ ಅದು ಮುನ್ನಲೆಗೆ ಬರುತ್ತದೆ ಅನಂತಮೂರ್ತಿಗಳು ಮೋದಿಯೆಂಬ ಆಕೃತಿಯನ್ನು ಒಡೆದು ಆಗಿದ್ದೂ ಇದೇ . ಲೋಹಿಯಾವಾದ ನೆಹರೂ ಆಡಳಿತ ಶೈಲಿಯನ್ನು ಅತ್ಯುಗ್ರವಾಗಿ ಟೀಕಿಸಿದಾಗಲೂ ಪ್ರತಿಯಾಗಿ ವಯಕ್ತಿಕ ಮಟ್ಟದ ಟೀಕೆಗಳನ್ನೆದುರಿಸಬೇಕಾಗಿರಲಿಲ್ಲ .
ಆದರೆ ಇಂದು ಹಾಗಿಲ್ಲ . ಯಾರೊಬ್ಬರು ನಮ್ಮ ನಂಬಿಕೆಗಳನ್ನು ಅಲುಗಾಡಿಸಿದರೆ ತಡೆದುಕೊಳ್ಳುವುದು ಬಿಡಿ , ಕೇಳುವ ವ್ಯವಧಾನವೂ ನಮ್ಮಲ್ಲಿಲ್ಲ . ನನ್ನ ದೇಶದಲ್ಲಿಂದು ಅಸಹನೀಯ ಪರಿಸ್ತಿತಿಯೊಂದು ನಿರ್ಮಾಣವಾಗಿರುವಾಗ ಪ್ರತಿಭಟನೆಯ ರೂಪದಲ್ಲಿ ಕೆಲವು ಮಂದಿ ಪ್ರತಿಭಟನೆಯ ರೂಪದಲ್ಲಿ ಪ್ರಶಸ್ತಿಯನ್ನು ಹಿಂದಿರುಗಿಸಿದಾಗ ಕೆಲವರು ಗೇಲಿ ಮಾಡಿಕೊಂಡು ನಕ್ಕವರಿದ್ದಾರೆ .
ಆದರೆ ಅವರ್ಯಾರಿಗೂ ಗೊತ್ತಿಲ್ಲವೇನೋ ಪ್ರಶಸ್ತಿ ಹಿಂದಿರುಗಿಸುವುದು ಇವತ್ತು ಹುಟ್ಟಿಕೊಂಡ ಪ್ರತಿಭಟನೆಯ ದಾರಿಯಲ್ಲವೆಂದು . ಜಲಿಯನ್ ವಾಲಾಭಾಗ್ ಹತ್ಯಾಕಾಂಡವನ್ನು ವಿರೋಧಿಸಿ ಟಾಗೋರ್ 1915ರಲ್ಲಿ ನೀಡಲಾದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂದಿರುಗಿಸಿದರು . ನಮ್ಮ ಕಾರಂತರೂ ಕೂಡ ತುರ್ತು ಪರಿಸ್ತಿತಿಯ ಹೇರಿಕೆಯನ್ನು ವಿರೋಧಿಸಿ ಪದ್ಮ ಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುತ್ತಾರೆ .
ಆ ಬಗ್ಗೆ ಮೈಸೂರು ಆಕಾಶವಾಣಿಗೆ ನಡೆಸಿಕೊಟ್ಟ ಸಂದರ್ಶನದಲ್ಲಿ ಅನಂತಮೂರ್ತಿಗಳು ಈ ಕುರಿತು ಕಾರಂತರನ್ನ ಪ್ರಶ್ನಿಸುತ್ತಾರೆ .
ಯು ಆರ್ ಎ : ಸರ್ ನಿಮ್ಮ ಬಗ್ಗೆ ನನಗಿರುವ ಗೌರವ ಮತ್ತಷ್ಟು ಹೆಚ್ಚಾಗಿದ್ದು , ನೀವು “ಪದ್ಮ ಭೂಷಣ ” ಬಿರುದು ಬಿಟ್ಟಾಗ . ಇದಕ್ಕೂ ನಿಮ್ಮ ಬರವಣಿಗೆಗೂ ಸಂಬಂಧವಿದೆ ಅಂತ ನನಗನಿಸುತ್ತೆ . ಯಾಕಂದ್ರೆ ನಮ್ಮ ಲೇಖಕರೆಲ್ಲಲ್ಲಾ , ನಿಮ್ಮ ಪೀಳಿಗೆಯಲ್ಲಿ, ನೀವು ಬಹಳ ಮುಖ್ಯವಾಗಿ , ಮನಸ್ಸಿನ ಸ್ವಾತಂತ್ರ್ಯ ಮತ್ತು ಅದನ್ನು ಶುದ್ಧವಾಗಿಟ್ಟುಕೊಳ್ಳೋದು, ನಿಮಗೆ ಅನ್ನಿಸದೆ ಇರೋದನ್ನ ಹೇಳದೆ ಇರೋದು, ಪ್ರಾಮಮಾಣಿಕವಾಗಿರೋದು ನಿಮ್ಮ ಬರವಣಿಗೆಗೆ ಅತ್ಯಂತ ಅಗತ್ಯ ಅನ್ನೋ ರೀತಿಯಲ್ಲಿ ನೀವು ನಡೆದುಕೊಂಡು ಬಂದಿದ್ದೀರಿ .
ಕಾರಂತ : ನಾನು ಬಿರುದನ್ನು ಬಿಟ್ಟಿದ್ದು ಒಂದು ಬಹಳ ದೊಡ್ಡ ವಿಷಯ ಎಂದು ನನಗೆ ಅನ್ನಿಸೋದೇ ಇಲ್ಲ . ನಾನು ಶಾಲೆ ಬಿಟ್ಟುಕೊಂಡು ಹೋದದ್ದೇ ಈ ದೇಶದ ಪ್ರಶ್ನೆಯ ಮೇಲೆ . ನನ್ನ ತಂದೆ – ತಾಯಿಗಳ ಅಭಿಪ್ರಾಯಕ್ಕೆ ವಿರುದ್ದವಾಗಿ ಹೊರಟುಹೋದೆ . ಆಮೇಲೆ ನನ್ನ ಬದುಕಿನಲ್ಲಿ ಸಾಂಪ್ರದಾಯಿಕ ನಂಬಿಕೆಗಳನ್ನು ಕಾಲ ಬಂತು – ಇನ್ನೊಬ್ಬರ ಪ್ರೇರಣೆಯಿಂದ – ಗಾಂಧೀಜಿ ಪ್ರೇರಣೆಯಿಂದ . ಮುಂದೆ ಅವರು ಹೇಳಿದ ನಂಬಿಕೆಗಳನ್ನೇ ಕಣ್ಣುಮುಚ್ಚಿ ನಂಬಿಕೊಂಡು ಕೂತಾಗ , ನನ್ನ ಜೀವನದಲ್ಲಿ ತಿಳುವಳಿಕೆಯಲ್ಲಿ , ಅನುಭವದಲ್ಲಿ ಅವು ಸಮ್ಮತವಲ್ಲ ಅಂತ ಕಂಡುಬಂದವು . ಆವಾಗಿನಿಂದ ನಾನು ನನ್ನ ಸ್ವತಂತ್ರ ವಿಚಾರ ಶಕ್ತಿಯನ್ನೇ ಬೆಳೆಸಿಕೊಳ್ಳುತ್ತಾ ಬಂದಿದ್ದೇನೆ .
ಸ್ವಾತಂತ್ರ್ಯದ ಪ್ರಶ್ನೆ ಬಂದ ಕಾಲದಲ್ಲಿ – ಈ ಆಪತ್ತು ಮೂವತ್ತು ವರ್ಷಗಳ ಮೇಲೆ ಮರುಕಳಿಸುವ ಸಂಧರ್ಭದಲ್ಲಿ – ನನಗೆ ಬದುಕು , ಆ ಒಂದು ಮೌಲ್ಯ ಏನಿದೆ , ಏನಿರಲಾರದು ಅಂತ ಅನ್ನಿಸಿತು . ಆದರೆ ನಾನು ನೇರವಾಗಿ ಇಂತಾದ್ದು ಯಾವುದಕ್ಕಾದ್ರೂ ಧುಮುಕಬಲ್ಲೆನೆ ಅಂತ ಕೇಳಿದ್ರೆ ನನ್ನ ಇತಿ ಮಿತಿ ನನಗೆ ಗೊತ್ತಿದೆ . ನನ್ನ ಪ್ರಶ್ನೆ ಆವಾಗ ಉಳಿದದ್ದು – ನನ್ನ ಆತ್ಮಸಾಕ್ಷಿಗೂ ತಣಿವು ಕೊಡುವಂತಾದ್ದು ನಾನು ಮಾಡಬೇಕು . ಆ ತೃಪ್ತಿಗೋಸ್ಕರ ಹಾಗೆ ಮಾಡ್ದೆ . ಅದೊಂದು ಮಹಾಕೆಲಸ ಅಂತ ಅನ್ನಿಸಲೇ ಇಲ್ಲ ನನಗೆ . ಯಾಕಂದ್ರೆ ನನಗೆ ಯಾವುದು ನ್ಯಾಯ ಅಂತ ಕಾಣುತ್ತೋ ಅದನ್ನು ಮಾಡತಕ್ಕದ್ದು . ಆದಷ್ಟು ಮಟ್ಟಿಗೆ ನನ್ನ ಬದುಕಿನಲ್ಲಿ ಪ್ರಾಮಾಣಿಕವಾಗಿ ಬದುಕಬೇಕು ಅಂತ ಎಲ್ಲ ವಿಚಾದಲ್ಲಿಯೂ ಪ್ರಯತ್ನ ಮಾಡ್ತಾ ಬಂದಿದ್ರಿಂದ . ಇದೂ ಒಂದು ಅದರ ಸಾಲಿಗೆ ಸೇರಿದ ವಿಷವಾಯ್ತು ಅಷ್ಟೇ .

ಹಾಗೆಯೇ ಇನ್ನೊಂದು ಪ್ರಶ್ನೆಯೂ ಚೆನ್ನಿದೆ .
ಯು ಆರ್ ಎ : ನೀವು ಕಾದಂಬರಿಕಾರರಾಗಿರೋದಕ್ಕೂ ದೇಶದಲ್ಲಿ ಪ್ರಜಾತಂತ್ರ ಅತ್ಯಂತ ಅಗತ್ಯ ಅಂತ ನಿಮಗೆ ಅನ್ನಿಸೋದಕ್ಕೂ ಏನು ಸಂಬಂದ ಇರಬಹುದು ?
ಕಾರಂತ : ನಾನು ಕಾದಂಬರಿಕಾರ ಅಂದ ಕೂಡ್ಲೆ ಒಂದು ಬೇರೆ ಜಾತಿಗೆ ಸೇರೋದಿಲ್ಲ . ಬರಹಗಾರ ಅಂತ ತಕೊಂಡ್ರೆ ಆಗಬಹುದು . ಬರಹಗಾರ ದೇಶದಲ್ಲೇ ಬದುಕೋ ಒಂದು ವ್ಯಕ್ತಿ . ಮ್ ಆ ಬದುಕೇ ನನ್ನ ಅನುಭವದ ಸಾಮಗ್ರಿ . ಅದರ ಮೇಲೆ ಆಗೋ ಪರಿಣಾಮ ನನ್ನ ಮೇಲೆ ಆಗುತ್ತೆ . ಅದರ ಸುಖ- ದು:ಖ, ಎಲ್ಲ ನನ್ನನ್ನ ಭಾದಿಸುತ್ತೆ. ಆದ್ದ್ದರಿಂದ ಆ ಸುಖ -ದು:ಖಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನೇ ನಾನು ಸೃಷ್ಟಿಸುತ್ತೇನಾದ್ದರಿಂದ ಮೂಲಭೂತವಾಗಿ ಅದಕ್ಕೇನು ಬೇಕೋ ಅದು ನನಗೂ ಬೇಕು . ಅದಕ್ಕೆ ಬಂದ ವಿಪತ್ತು ನನ್ನ ಪಾಲಿಗೂ ವಿಪತ್ತು . ನಾನು ಅದರಿಂದ ಹೊರಗುಳಿದು ಯಾವ ಸೃಷ್ಟಿಯನ್ನು ಮಾಡಲು ಸಾದ್ಯವಿಲ್ಲ .
ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿ ಬಾಳಿ , ನನ್ನಂತೆ ಎಷ್ಟೋ ಜನರನ್ನ ಪ್ರಭಾವಿಸಿ ಹೋದ ಕಡಲ ತೀರದ ಭಾರ್ಗವನಿಗೊಂದು ನಮಸ್ಕಾರ .





0 Comments