ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಮಿನಿಯೂ.. ಚಿಕನ್‌ ಬಿರ್ಯಾನಿಯೂ..

ಟಿ.ಎಸ್.ಶ್ರವಣಕುಮಾರಿ

ಇಂದು ಹೊತ್ತು ಮುಳುಗುವುದಕ್ಕೂ ಸ್ವಲ್ಪ ಮುಂಚಿನಿಂದಲೇ ಕಾಮಿನಿ ಪಾರ್ಕಿನ ಹೊರಗೆ ಠಳಾಯಿಸುತ್ತಿದ್ದಳು. ತುಸು ಹೆಚ್ಚೇ ಎನ್ನಿಸುವ ಮೇಕಪ್‌ನಿಂದ ತನ್ನ ವಯಸ್ಸನ್ನು ಕಡಿಮೆಗೊಳಿಸುವ ಸಾಹಸ ಮಾಡಿದ್ದಳು.

ರಕ್ತ ಕೆಂಪು ವರ್ಣದ ಮೇಲೆ ಟಿಕಳಿ ಕಸೂತಿಯಿರುವ ತೆಳುವಾದ ಜಾರ್ಜೆಟ್‌ ಸೀರೆ, ಅದೇ ಬಣ್ಣದ ಡಿಸೈನರ್‌ ಬ್ಲೌಸು, ಶಾಂಪೂ ಮಾಡಿದ ಹಾರಾಡಲು ಬಿಟ್ಟ ಕೂದಲು, ಲಕಲಕಿಸುತ್ತಿರುವ ಕಾಲಿನ ಹೈಹೀಲ್ಡ್‌ ಸ್ಯಾಂಡಲ್ಸ್‌, ಕಣ್ಣನ್ನು ಆಕರ್ಷಕವಾಗಿ ಮಾಡಿದ ಕಾಡಿಗೆ, ಐ ಲೈನರ್‌. ಕೆನ್ನೆಗೆ ತೆಳು ಗುಲಾಬಿ ಬಣ್ಣ, ರಕ್ತಕೆಂಪಿನ ತುಟಿ… ಇವತ್ತು ಯಾವುದಾದರೂ ಮಿಕ ಬೀಳಲೇ ಬೇಕು. ವಾರವಾಗಿದೆ ಅವಳಿಗೆ ಸರಿಯಾದ ಬಿಸಿನೆಸ್‌ ಇಲ್ಲದೆ. ಇಂದು ಬೆಳಗಿನಿಂದಲೇ ಉಪವಾಸವಾಗಿದೆ.

ಈಗ ದುಡಿಯದಿದ್ದರೆ ರಾತ್ರಿಯ ಊಟಕ್ಕೂ ಇಲ್ಲ. ಬಿರಿಯಾನಿ ಮನೆಯ ಮುಂದಿನಿಂದ ಹಾದು ಇಲ್ಲಿಗೆ ಬರುವಾಗ ಮೂಗನ್ನು ಅರಳಿಸಿದ್ದ ಘಮಲು, ಇಂದು ಹೇಗಾದರೂ ಒಂದು ಚಿಕನ್‌ ಬಿರಿಯಾನಿಯನ್ನು ತಿಂದೇ ಬಿಡಬೇಕು ಎನ್ನಿಸಿದೆ. ಆದರೆ, ಸರಿಯಾದ ಗಿರಾಕಿ ಸಿಗಬೇಕಲ್ಲ…ದೇವ್ರೇ.. ಇವತ್ತೊಬ್ಬ ಕೈಬಿಚ್ಚಿ ಕೊಡೋಂತ ಒಳ್ಳೇ ಗಿರಾಕೀನ ಕೊಡು.. ಎಂದು ಘಳಿಗೆ ಘಳಿಗೆಗೂ ದೇವರನ್ನು ಬೇಡಿಕೊಳ್ಳುತ್ತಾ ಅತ್ತಿಂದಿತ್ತ ಓಡಾಡತೊಡಗಿದಳು.

ಯಾರ ಹಸಿದ ಕಂಗಳೂ ಇನ್ನೂ ಇವಳ ಮೇಲೆ ಬೀಳಲಿಲ್ಲ… ಇನ್ನೂ ಸ್ವಲ್ಪ ಹೊತ್ತಾಗಬೇಕು. ಕತ್ತಲಿಗೆ ತಿರುಗಿ ಬೀದಿ ದೀಪಗಳು ಹೊತ್ತಿಕೊಳ್ಳಬೇಕು… ಆಫೀಸಿನಿಂದ ಜನ ಮನೆ ಸೇರುವ ಹೊತ್ತಾಗಬೇಕು… ಬಸ್‌ ಸ್ಟಾಪಿನ ಅನತಿ ದೂರದಲ್ಲಿದ್ದ ದೊಡ್ಡ ಮರವೊಂದನ್ನು ಒರಗಿ, ಮೈಸಿರಿಯೆಲ್ಲಾ ಕಾಣುವಂತೆ ಸೆರಗನ್ನು ನೆಪಮಾತ್ರಕ್ಕೆ ಹೊದ್ದು ಅತ್ತಿತ್ತ ಕಣ್ಣಾಡಿಸತೊಡಗಿದಳು.

 

ಏನಿವತ್ತು ಈಪಾಟಿ ಸಿಂಗಾರ… ಇನ್ನೂ ಯಾವ ಹಕ್ಕೀನೂ ಬೀಳ್ಳಿಲ್ವೆ?! ಕೆಣಕುವ ನಗೆಯನ್ನು ಬೀರುತ್ತಾ ಹತ್ತಿರ ಬಂದು ನಿಂತ ವೆಂಕಯ್ಯನನ್ನು ಸುಟ್ಟುಬಿಡುವಂತೆ ನೋಡಿ, ನಿಂಗ್ಯಾಕೆ ನನ್ನ ಉಸಾಬರಿ. ನಿನ್ನ ಕೇಮೆ ನೀನು ನೋಡ್ಕೋ. ನನ್ತಂಟೆಗೆ ಬರ್ಬೇಡಾ.. ಸಿಡುಕಿದಳು ಕಾಮಿನಿ. ಅಯ್ಯೋ.. ಏನೋ ರೋಷ್ಟು ಎಲ್ಪ್‌ ಮಾಡೋಣ್ವಾ ಅಂತ ಬಂದೆ ಅಷ್ಟೇಯಾ. ನಿಂಗ್‌ ಬ್ಯಾಡ್ದಿದ್ರೆ ಬುಡು ಎಂದವನೇ ಹೆಗಲ ಮೇಲಿದ್ದ ಟವಲನ್ನು ಒಮ್ಮೆ ಝಾಡಿಸಿ ಮತ್ತೆ ಹೊದ್ದುಕೊಂಡು ಸರ್ಕಲ್ಲಿನ ಕಡೆಗೆ ಹೊರಟುಹೋದ.

ದರಿದ್ರದೋನು, ನಾನು ಮಾರ್ಕೊಂಡು ದುಡಿಯೋದು, ಕಮೀಸನ್‌ ಅಂತ ಅದ್ರಲ್ಲಿಷ್ಟು ಇವ್ನಿಗೆ ಕಕ್ಬೇಕಾ. ಒಬ್ಬ ಗಿರಾಕೀನ ತಂಕೊಟ್ರೆ ನೂರು, ಇನ್ನೂರು ರುಪಾಯಿ ಮಡ್ಗು ಅಂತಾನೆ. ಸಾವ್ರ ದುಡುದ್ರೆ ಅವ್ನು ಕೇಳ್ದಷ್ಟು ಇಕ್ಬೋದು. ಬರ್ತಾ ಬರ್ತಾ ಐನೂರು ರೂಪಾಯಿ ಸಿಕ್ಕೋದು ಕಷ್ಟವಾಗೈತೆ. ಅದ್ರಾಗಿಷ್ಟು ಕೊಡಾಕಾಯ್ತದಾ… ಏನಾರಾ ಆಗ್ಲಿ ಇವತ್ತು ನಾನೇ ಗಿರಾಕೀನ ಉಡುಕ್ಕೋ ಬೇಕು.

ಇಸ್ಟು ಅಲಂಕಾರ ಮಾಡ್ಕೊಂಡು ಬಂದಿರೋಕಾದ್ರೂ ಒಂದು ಚಿಕನ್‌ ಬಿರ್ಯಾನಿ ಮೇಲೆ ಐದು ನೋಟಾದ್ರೂ ಎಣಿಸ್ಕೋಬೇಕು… ಅವ್ನಿಗೆ ನಾನೇನೂ ಅಂತ ತೋರಿಸ್ಬೇಕು… ತುಟಿಯನ್ನೊಮ್ಮೆ ಕಚ್ಚಿ ಮರದ ಆ ಬದಿಯಲ್ಲಿದ್ದ ಕಲ್ಲುಬೆಂಚೊಂದರ ಮೇಲೆ ವೈಯ್ಯಾರವಾಗಿ ಕುಳಿತು ಬರುಹೋಗುವವರ ಕಡೆಗೆ ಕಣ್ಣಿಟ್ಟಳು…

ದಾರಿಯಲ್ಲಿ ಗುಡುಗುಡು ಎಂದು ಓಡಾಡುತ್ತಿದ್ದ ಬೈಕುಗಳನ್ನು ನೋಡಿದಾಗ ಒಂದಪಾನಾದ್ರೂ ಇಂಥದೊಂದು ಜಬರ್ದಸ್ತಿ ಗಾಡಿ ಮೇಲೆ ಕುಂತು ಮುಂದೆ ಕೂತೋನ ಸೊಂಟ ಇಡ್ಕಂಡು, ಬೆನ್ನಿಗೆ ಮುಖ ಒತ್ತಿ ಕೂತು ನೂರು ಮೈಲಿ ಸ್ಪೀಡಿನಲ್ಲಿ ಹಾರೋಗ್ತಿದ್ರೆ… ಎನ್ನುವ ಸವಿಗನಸನ್ನು ಕಾಣುತ್ತಿರುವಾಗಲೇ ಅವಳ ಪಕ್ಕದಲ್ಲೇ ಅಂತಹ ಬೈಕೊಂದು ನಿಂತೇ ಬಿಡಬೇಕೆ! ಇನ್ನೂ ಮೂವತ್ತು ಮೂವತ್ತೈದರ ತರುಣ. ಕಟ್ಟುಮಸ್ತಾಗಿದ್ದ.

ಗಾಡಿಯ ಮೇಲೆ ಕೂತಂತೆಯೇ ಎಷ್ಟು ಎನ್ನುವಂತೆ ಹುಬ್ಬು ಹಾರಿಸಿದ. ಎಂಟು ಬೆಟ್ಟನ್ನು ತೋರಿದಳು. ತುಟಿ ಸೊಟ್ಟಮಾಡಿ ತಲೆಯಲುಗಿಸಿದ. ಗಂಟೆಯಿಂದ ಕಾದದ್ದಕ್ಕೆ ಒಂದು ಮಿಕವಾದ್ರೂ ಸಿಕ್ಕಿದೆ. ಬಿಟ್ರೆ ಹಾಗೇ ಹಾರಿ ಹೋಗತ್ತೆ ಎನ್ನುವ ಅರಿವಿನಿಂದ ಎದ್ದು ಸನಿಹಕ್ಕೆ ಬಂದು ನಿಂತು ಎಷ್ಟು ಕೊಡ್ತಿ? ಕೇಳಿದಳು. ಐದು ಮುಗುಮ್ಮಾಗಿ ಹೇಳಿದ. ಮೇಲೊಂದು ಚಿಕನ್‌ ಬಿರ್ಯಾನಿ ಇವಳು ಕೇಳಿದಳು. ಆಗ್ಬಹುದು ಎನ್ನುವಂತೆ ತಲೆಯಾಡಿಸಿದ.

ಚಿಕನ್‌ ಬಿರ್ಯಾನಿ ಪಾರ್ಸಲ್‌ ತೊಗೊಂಬಾ. ಇಲ್ಲೇ ನಿಂತಿರ್ತೀನಿ ಅಂದಳು. ಕೆಲ್ಸ ಮುಗುದ್ಮೇಲೆ ಒಟ್ಗೇ ಸೆಟಲ್ಮೆಂಟು. ಗಾಡಿ ಹತ್ತು ಅಂದ. ಇದುವರೆಗೂ ಯಾರೂ ಅವಳನ್ನು ಹೀಗೆ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿರಲಿಲ್ಲ. ಏನಿದ್ದರೂ ಅವಳ ವಿಳಾಸ ತೆಗೆದುಕೊಂಡು ಬರುತ್ತಿದ್ದರು; ಇಲ್ಲವೇ ತಮ್ಮ ವಿಳಾಸ ಕೊಟ್ಟು ಬರಹೇಳುತ್ತಿದ್ದರು. ಈಗ ಅವಳಿಗೆ ನಂಬಲೇ ಆಗಲಿಲ್ಲ. ಕನಸಲ್ಲ ತಾನೆ ಎಂದು ಕೈ ಚಿವುಟಿಕೊಂಡಳು.

ಈಗಿನ್ನೂ ಕನಸು ಕಾಣುತ್ತಿದ್ದದ್ದು ಇಷ್ಟು ಬೇಗ ನನಸಾಗಿ ಹೋಯಿತೇ ಎಂದು ಖುಷಿಯಾಗಿ ಬೈಕನ್ನು ಹತ್ತಿ ಅವನನ್ನು ಬಳಸಿ ಹಿಡಿದುಕೊಂಡು ತನ್ನ ಅಂತಃಪುರದ ದಾರಿ ಹೇಳಿ ಅವನ ಬೆನ್ನಿಗೆ ಮುಖವನ್ನು ಒತ್ತಿಯೇ ಬಿಟ್ಟಳು… ಅವನೂ ಬೇಡವೆನ್ನಲಿಲ್ಲ…

ಸರ್ಕಲ್ಲಲ್ಲಿ ನಿಂತಿದ್ದ ವೆಂಕಯ್ಯನನ್ನು ನೋಡಿ ಇವಳಿಗೆ ಇನ್ನಷ್ಟು ಖುಷಿಯಾಗಿ ಜಂಬದಿಂದ ಮತ್ತಿಷ್ಟು ಒರಗಿಕೊಂಡು ನೀನಿಲ್ದಿದ್ರೆ ನಂಗೆ ಗಿರಾಕೀನೇ ಸಿಗಲ್ವ, ನೋಡು ಎಂಥಾ ಹಕ್ಕೀನ ಹಿಡ್ದಿದೀನಿ. ನೀನು ತೋರ್ಸೋ ಅಂತ ಜೋಬದ್ರಗಳಲ್ಲ ಎನ್ನುವಂತೆ ಅವನೆಡೆಗೆ ವ್ಯಂಗ್ಯವಾಗಿ ನೋಡಿದಳು. ಬೈಕು ಸ್ಪೀಡಾಗಿ ಓಡುತ್ತಿದ್ದರೆ ಸ್ವರ್ಗದಲ್ಲಿರುವಷ್ಟು ಸಂತೋಷ ಪಟ್ಟು ಕಣ್ಣು ಮುಚ್ಚಿಕೊಂಡಳು.

ತನ್ನ ಕನಸನ್ನು ತಕ್ಷಣವೇ ನನಸು ಮಾಡಿದವ ಕಾಮಿನಿಗೆ ತುಂಬಾ ಇಷ್ಟವಾಗಿಬಿಟ್ಟ. ಯಾವುದೇ ಚೌಕಾಸಿಯಿಲ್ಲದೆ ಅವನು ದೋಚಿಕೊಂಡಷ್ಟನ್ನೂ ಕೊಟ್ಟಳು. ಅವನನ್ನು ಸುಖದ ಅಮಲಲ್ಲಿ ತೇಲಿಸಿಬಿಟ್ಟಳು. ಇಂದಿನವರೆಗೂ ಇಂತ ಸುಖ ಕಾಣಲಿಲ್ಲ. ದಿನಾ ಬರ್ಲಾ ಎಂದು ಅವನು ಮತ್ತೆ ಮತ್ತೆ ತೊದಲಿದ. ಸುಖದಿಂದ ಮುಲುಗುತ್ತಾ ಇವಳೂ ಸರಿಯೆನ್ನುವ ಹಾಗೆ ತಲೆಯಾಡಿಸಿದಳು.

ಇದು ತನ್ನ ಮಾಮೂಲಿ ವ್ಯವಹಾರಕ್ಕಿಂತ ಸ್ವಲ್ಪ ಹೆಚ್ಚಿನದೇ; ತಾನೂ ಈ ರೀತಿ ಮನಸಾರೆ ತೊಡಗಿಕೊಂಡು ಎಷ್ಟು ವರ್ಷಗಳಾಗಿದ್ದವೋ ಅನ್ನಿಸಿಬಿಟ್ಟಿತು. ಎಷ್ಟೋ ಕಾಲದವರೆಗೆ ಕಾಲ ಅವರ ಮುಂದೋಡಲೇ ಇಲ್ಲ… ಸುಸ್ತಾಗಿಬಿಟ್ಟಳು ಕಾಮಿನಿ… ಕಡೆಗೊಮ್ಮೆ ಎಚ್ಚರಗೊಂಡು ಅವನು ವಾಚಿನ ಕಡೆ ನೋಡಿದ. ಒಂಭತ್ತು ದಾಟುತ್ತಿತ್ತು.

 

ಹೊರಡೋಣ ಇನ್ನು ಲೇಟಾಗತ್ತೆ ಎನ್ನುತ್ತಾ ಅವಳನ್ನು ಎಬ್ಬಿಸಿದ. ಮಾಮೂಲಿನಂತೆ ಕೈ ಮುಂದೆ ಚಾಚಿದಳು. ಒಟ್ಟಿಗೆ ಕೂತು ಬಿರ್ಯಾನಿ ತಿನ್ನೋಣ. ಅಲ್ಲಿಂದ ಹೊರಡುವ ಮುಂಚೆ ಕೊಡ್ತೀನಿ. ಅಬ್ಬಾ! ಇಂದಿನ ಅದೃಷ್ಟವೇ. ತಾನೇ ಹೋಗಿ ಕೊಂಡು ತರ್ಬೇಕಾದ ಕಷ್ಟವೂ ಇಲ್ಲ. ಇವನ ಜೊತೆಯಲ್ಲೇ ಹೊಟೆಲ್ಲಿನಲ್ಲಿ ಕೂತು ತಿನ್ನುವ ಯೋಗ.

ದೇವ್ರೇ ದಿನವೂ ಇವ್ನೇ ಅಥ್ವಾ ಇಂಥಾ ಗಿರಾಕಿಗಳೇ ಸಿಗೋ ಹಾಗೆ ಮಾಡಪ್ಪ ಎಂದು ಎಲ್ಲೋ ಇರುವ ಆ ದೇವರಿಗೆ ಮನದಲ್ಲೇ ಕೈ ಮುಗಿದು, ಎದ್ದು ಮುಖ ತೊಳೆದು ತಲೆ ಬಾಚಿ ಕ್ಲಿಪ್ಪಿನಿಂದ ಕಟ್ಟಿ, ಮೇಕಪ್ಪನ್ನು, ಸೀರೆಯನ್ನು ಸರಿಮಾಡಿಕೊಂಡು ಹೊರಟು ಬೈಕಿನ ಹಿಂದಿನ ಸೀಟಿನಲ್ಲಿ ಅವನ ಸೊಂಟವನ್ನು ಮೊದಲಿನಂತೆಯೇ ಬಳಸಿ ಒರಗಿಕೊಂಡು ಕುಳಿತು ಕಣ್ಮುಚ್ಚಿದಳು.

ಭರ್ರೋ ಎಂದು ಓಡಿದ ವಾಹನ ಸರ್ಕಲ್ಲಿನ ಹತ್ತಿರದ ಸಿಗ್ನಲ್‌ಗಾಗಿ ನಿಂತುಕೊಂಡಿತು. ಇನ್ನೂ ನೂರಿಪ್ಪತ್ತು ಸೆಕೆಂಡು ತೋರಿಸುತ್ತಿತ್ತು. ಸೊಂಟವನ್ನು ಬಳಸಿದ ಕೈಯನ್ನು ಒಂದು ಕ್ಷಣ ತೆಗೆದು ಹಾರುತ್ತಿದ್ದ ಸೆರಗನ್ನು ಸಿಕ್ಕಿಸಿಕೊಳ್ಳಲು ಮುಂದಾದಳು. ಹಾಗೆ ಸಿಕ್ಕಿಸಿಕೊಂಡು ತಿರುಗುವಾಗಲೇ ಸಿಗ್ನಲ್‌ ಬಿತ್ತು. ಇವಳು ಮತ್ತೆ ಸೊಂಟವನ್ನು ಬಳಸಿಕೊಳ್ಳಲು ಕೈಯನ್ನು ಮುಂದೆ ತಂದಳು.

ತಕ್ಷಣವೇ ತಿರುಗಿದ ಅವನು ಪಕ್ಕನೇ ಬಲವಾಗಿ ಅವಳನ್ನು ಫುಟ್ಪಾತಿನೆಡೆಗೆ ನೂಕಿ, ತಿರುಗಿಯೂ ನೋಡದೆ ಗುಡುಗುಡು ಎಂದು ಗಾಡಿಯನ್ನು ಓಡಿಸಿಕೊಂಡು ಹೊರಟೇ ಹೋದ… ಇವಳು ಏ… ಏ… ನಿಲ್ಲೋ… ನಿಲ್ಲೋ… ನನ್ಯಾಕೆ ದಬ್ಬಿ ಹೋಗ್ತಿದೀಯಾ… ನಿಲ್ಲೋ ರಂಡೇಗಂಡಾ… ಕಿರುಚುತ್ತಲೇ ಇದ್ದಳು… ಕ್ಷಣಾರ್ಧದಲ್ಲಿ ಅವನ ಬೈಕು ಕತ್ತಲಲ್ಲಿ ಮಾಯವಾಯಿತು.

ಕೆಳಗೆ ಬಿದ್ದವಳ ತಲೆ ಫುಟ್ಪಾತಿನ ಕಲ್ಲಿಗೆ ಬಡಿದು ಗಾಯವಾಗಿ ರಕ್ತ ಸೋರತೊಡಗಿತ್ತು. ಒಂದು ಕ್ಷಣ ಏನಾಯಿತೆಂದೇ ಅವಳಿಗೆ ಅರ್ಥವಾಗಲಿಲ್ಲ. ಸಾವರಿಸಿಕೊಂಡು ಎದ್ದು ಕೂರುವಷ್ಟರಲ್ಲಿ ಮತ್ತೆ ಕೆಂಪು ದೀಪ ಹೊತ್ತಿಕೊಂಡು ವಾಹನಗಳು ಅವಳ ಹಿಂದೆ ಮುಂದೆ ಅಕ್ಕ ಪಕ್ಕ ಎಲ್ಲಾ ಜಮಾಯಿಸಿ ಹಾರ್ನ್‌ ಮಾಡತೊಡಗಿದವು.

ಅವಳಿಗೆ ಏಳಲೂ ಸಾಧ್ಯವಾಗುತ್ತಿಲ್ಲ; ಯಾರೂ ಕೈಹಿಡಿದು ಅವಳಿಗೆ ಸಹಾಯ ಮಾಡುತ್ತಲೂ ಇಲ್ಲ. ಎಲ್ಲರೂ ಎದ್ದು ಆ ಕಡೆ ಹೋಗಿ ಫುಟ್ಪಾತ್‌ ಮೇಲೆ ಕೂತ್ಕೋ ಅನ್ನುವವರೆ. ಅದುವರೆಗೂ ಒಂದು ಶಾಕ್‌ನಲ್ಲಿದ್ದ ಅವಳು ಈಗ ಭೋರೆಂದು ಅಳತೊಡಗಿದಳು. ಅಷ್ಟರೊಳಗೆ ಇವೆಲ್ಲವುಗಳ ಮಧ್ಯೆ ತೂರಿ ಜಾಗ ಮಾಡಿಕೊಂಡು ಬಂದ ವೆಂಕಯ್ಯ ಕೈಯಿನ ಆಸರೆ ಕೊಟ್ಟು ಅವಳನ್ನು ಎಬ್ಬಿಸಿ ನಿಲ್ಲಿಸಿದ.

ಹಾಗೆಯೇ ತನ್ನ ಹೆಗಲಿಗೆ ಅವಳನ್ನು ಒರಗಿಸಿಕೊಂಡು ಅವಳನ್ನು ಬಳಸಿ ಹಿಡಿದುಕೊಂಡು ಫುಟ್ಪಾತಿಗೆ ಕರೆದುಕೊಂಡು ಬಂದು ಸನಿಹದಲ್ಲೇ ಇದ್ದ ಕಲ್ಲು ಬೆಂಚೊಂದರ ಮೇಲೆ ಅವಳನ್ನು ಕೂರಿಸಿ ಸರ್ಕಲ್ಲಿನ ಬಳಿ ಇದ್ದ ತನ್ನ ಮಾಮೂಲಿ ಜಾಗಕ್ಕೆ ಓಡಿ ಚೀಲದಲ್ಲಿಟ್ಟುಕೊಂಡಿದ್ದ ನೀರಿನ ಬಾಟಲನ್ನು ತಂದ. ಸ್ವಲ್ಪ ನೀರಿನಿಂದ ಗಾಯವಾಗಿದ್ದ ಜಾಗವನ್ನು ತೊಳೆದು ತನ್ನ ಟವೆಲಿನಿಂದ ಒರೆಸಿ ಬೆಳಕಿಗೆ ಮುಖ ಹಿಡಿದು ನೋಡಿದ. ಪುಣ್ಯ, ಶಾನೆ ಏನೂ ಪೆಟ್ಟಾಗಿಲ್ಲ. ಏನಾದ್ರೂ ಒಂಚೂರು ತಿಂದು ನೋವಿನ ಮಾತ್ರೆ ತಗಂಡು ಮಲಿಕ್ಕೋ. ಸ್ವಲ್ಪ ಊದ್ಕಂಡದೆ. ನಾಳೆ ಒತಾರೆ ಬೇಕಾದ್ರೆ ದಾಕುಟ್ರತ್ರ ತೋರಿಸ್ಕೋವಂತೆ ಅಂದ.

ತಿನ್ನಕ್ಕೆ ಮನೇಲೇನೂ ಇಲ್ಲ ವೆಂಕಯ್ಯ… ಸೋತು ಬಿಕ್ಕಿದಳು ಕಾಮಿನಿ. ಬೈಕ್‌ ಮ್ಯಾಗೆ ಕುಂದ್ರುಸ್ಕೊಂಡು ಓದ್ನಲ್ಲ, ಅವ್ನೇನೂ ಕೊಡ್ನಿಲ್ವೆ ಅಚ್ಚರಿಯಿಂದ ಕೇಳಿದ. ಎಲ್ಲಾ ಮುಗುದ್ಮ್ಯಾಕೆ ಒಟ್ಗೇ ಕುಂತ್ಕೊಂಡು ಚಿಕನ್‌ ಬಿರ್ಯಾನಿ ತಿನ್ನೋಣ. ಆಮ್ಯಾಕೆ ದುಡ್ಡು ಕೊಟ್ಟು ನಾ ಆಕಡೆ ನೀ ಈಕಡೆ ಅಂತ ಕರ್ಕಬಂದ. ಎಲ್ಲಾ ದೋಚ್ಕಂಡು ಈಗ್ ನನ್ನ ತಳ್ಳಿ ಓದ್ನಲ್ಲ ರಂಡೇ ಗಂಡ ಎದೆ ಬಡಿದುಕೊಂಡು ಅತ್ತಳು.

ಅಯ್ಯೋ… ನೀನು ಝುಮ್ಮಂತ ಗಾಡಿನಾಗ ಅವ್ನನ್ನ ಆತ್ಕಂಡು ಕುಂತ್ಕಂಡು ಓಗ್ತಿದ್ರೆ ಛಾನ್ಸ್‌ ಒಡದ್ಲು ಲೌಡಿ, ಒಳ್ಳೇ ಮಿಕಾನೇ ಇಡ್ದವ್ಳೆ ಅನ್ಕಂಡ್ನಲ್ಲವ್ವ. ಕತೆ ಈಗಾ… ವಸಿ ಇರು. ಬರ್ತೀನೀಗ ಎನ್ನುತ್ತಾ ಎದ್ದು ಹೋಗಿ ಮೂಲೆಯಲ್ಲಿದ್ದ ಗಾಡಿಯಲ್ಲಿ ಮಾರುತ್ತಿದ್ದ ಬಿರ್ಯಾನಿಯನ್ನು ಕಟ್ಟಿಸಿಕೊಂಡು ಬಂದ. ತಗೋ… ನಿಧಾನಕ್ಕುಣ್ಣು… ನನ್ನ ಬ್ಯಾಗ್ನಾಗೇ ನೋವಿನ ಗುಳಿಗೆ ಅದೆ. ಅಮೇಕದನ್ನು ನುಂಗೀವಂತೆ ಎನ್ನುತ್ತಾ ಪೊಟ್ಟಣ ಬಿಚ್ಚಿದ.

ಬೆಳಗಿನಿಂದ ಊಟವಿಲ್ಲದ ಕಾಮಿನಿ ಅದನ್ನು ಗಬಕ್ಕನೆ ಎಳೆದುಕೊಂಡು ಗಬಗಬ ನಾಲ್ಕು ತುತ್ತು ತಿಂದಮೇಲೆ ಇಹಕ್ಕೆ ಬಂದು ನೀನೂ ವಸಿ ಉಣ್ಣು ಅಂದೇನೇ ಉಂಡುಬಿಟ್ನಲ್ಲ. ಎಂಜ್ಲೂ ಅನ್ನೋ ಭಾದೆ ಇಲ್ದಿದ್ರೆ ನೀನೂ ಇದ್ರಾಗ ಒಂದು ಕೈಆಕು ಎಂದು ಎಲೆಯನ್ನು ಅವನ ಮುಂದೆ ಹಿಡಿದಳು. ನಿನ್ನಂತೋರ ಎಂಜ್ಲು ತಿಂದೇ ಬಾಳ್ವೆ ಮಾಡ್ತಿರೋನಲ್ವ ನಾನು. ನಂಗ್ಯಾವ ಭಾದೆ.. ನೀನು ಅಸಿದಿದ್ದೀ… ದಣಿದಿದ್ದೀ… ಉಣ್ಣವ್ವ. ನಾನು ಆಮೇಕೆ ಏನಾರ ಈಸ್ಕೊಂಡು ಉಣ್ತೀನಿ. ಉಣ್ಣು ಉಣ್ಣು ಎನ್ನುತ್ತಾ ತಲೆತಗ್ಗಿಸಿ ಕುಳಿತುಕೊಂಡ.

ಹೆಚ್ಚು ಒತ್ತಾಯಿಸಿಕೊಳ್ಳದೆ ತಿಂದು ಮುಗಿಸಿದಳು. ಕೊಟ್ಟ ಮಾತ್ರೆಯನ್ನೂ ನುಂಗಿ ಸ್ವಲ್ಪ ಹೊತ್ತು ಸುಮ್ಮನೆ ಕೂತಳು. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾ ಅವನೂ ಸುಮ್ಮನೇ ಕುಳಿತ.

ಇನ್ನು ಓಕ್ತೀನ್‌ ಕಣಣ್ಣ ಎನ್ನುತ್ತಾ ಕಷ್ಟಪಟ್ಟು ಏಳಲು ಹೊರಟವಳ ಭುಜ ಹಿಡಿದು ಕೂರಿಸಿದ. ನಿಲ್ಲೋಸ್ಟು ಸಕ್ತಿ ಐತೇನವ್ವ ಈಗ ನಿಂತಾವ. ನಿಂಗಿಂತ ವಯಸ್ನಾಗೆ, ಅನುಭೋದಾಗೆ ನಾನು ದೊಡ್ಡೋನು. ಒಂದ್ಮಾತು ಏಳ್ತೀನಿ. ತೆಪ್ಪು ತಿಳೀಬ್ಯಾಡ. ಎಲ್ಲಾ ವೆವಾರ್ದಂಗೆ ಇದೂ ಒಂದು ವೆವಾರ. ಬೇಕಾದ್ಕಿಂತ ಜಾಸ್ತಿ ಅಚ್ಛೆ ತೋರ್ಸುದ್ರೆ ನಂಬಿಡಬಾರ್ದು. ಅವರ್ಜೊತೆ ಕೂರುಸ್ಕಂಡು ಓಗೋ ಸೂಳೇರ ಅಂತಸ್ತೇ ಬ್ಯಾರೆ ಕಣವ್ವ.

ಬೀದೀಲ್ನಿಂತು ಮಿಂಡಂಗೆ ಕಾಯೋರ ಅಣೇಬರ್ದಲ್ಲಿ ಅವೆಲ್ಲಾ ಬರ್ದಿರಲ್ಲ. ಸಿಕ್ಕೋ ಗಿರಾಕಿಗೆ ಮೊದ್ಲು ದುಡ್ಡು ಇಕ್ಕು, ಆಮೇಕೆ ಮಿಕ್ಕಿದ್ದು ಅನ್ಬೇಕು. ನಿಂಗೇನೂ ವಸ್ತಾಗಿ ಏಳ್ಕೊಡ್ಬೇಕಿಲ್ಲ. ಆದ್ರೂ ಇವತ್ನಂಗೆ ಆಗ್ದಿರ್ಲಿ ಅಂತ ಏಳ್ತಿದೀನಿ ಕಣವ್ವ ಎಂದು ಸ್ವಲ್ಪ ದುಡ್ಡನ್ನು ಅವಳ ಕೈಯಲ್ಲಿ ತುರುಕಿ ನನ್ನತ್ರ ಇವತ್ತು ಇಸ್ಟೇ ಕೊಡಾಕಾಗೋದು ಕಣವ್ವ. ಸ್ವಲೂಪ ಸುಧಾರಿಸ್ಕಂಡು ಆಮೇಕೆ ಒರಕ್ ಬಾವ್ವ ಎನ್ನುತ್ತಾ ಎದ್ದು ಖಾಲಿ ಹೋಗುತ್ತಿದ್ದ ಆಟೋ ಹಿಡಿದು ಅವಳನ್ನು ಹತ್ತಿಸಿದ. ಅವನ ಎರಡೂ ಕೈಯನ್ನು ಹಿಡಿದುಕೊಂಡು ನೀರು ತುಂಬಿದ ಕಣ್ಣುಗಳಿಗೆ ಒತ್ತಿಕೊಂಡಳು. ತಲೆ ನೇವರಿಸಿ ಭುಜ ತಟ್ಟಿದ. ಕತ್ತಲನ್ನು ಸೀಳುತ್ತಾ ಆಟೋ ಮುನ್ನುಗ್ಗಿತು.

‍ಲೇಖಕರು avadhi

31 October, 2019

2 Comments

  1. Vijayasridhara

    ಅಂತಃಕರಣಿಗಳು ಎಂಥಾ ಕಸುಬಿನಲ್ಲೂ ಎಂಥಾ ಕಡೆಯಲ್ಲೂ ಸಿಗುತ್ತಾರೆ ,ವೆಂಕಯ್ಯನೇ ಸಾಕ್ಷಿ. ಕಥೆ ಮನಮುಟ್ಟುವಂತಿದೆ.

    • ಶೈಲಜಾ ಹಾಸನ

      ಕಟು ವಾಸ್ತವವನ್ನು ನಿರ್ದಾಕ್ಷಣ್ಯವಾಗಿ ತೆರೆದಿಟ್ಟ ಮನಕಲಕುವ ಕಥೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading