‘ಕಾಮರೂಪಿ’ ಮತ್ತೆ ಹಾಜರ್- ಈ ತಿಕ್ಕಲುತನಕ್ಕೆ ಮಾಫಿ ಮಾಡುವುದು..

‘ಕಾಮರೂಪಿ’ ಎಂದೇ ಹೆಸರಾದ ಎಂ ಎಸ್ ಪ್ರಭಾಕರ್ ಅವರು ಬ್ಲಾಗ್ ಲೋಕದ ಹಿರಿಯರು. ಬ್ಲಾಗ್ ಸಹವಾಸವೇ ಬೇಡ ಎಂಬಂತೆ ಒಂದಿಷ್ಟು ಕಾಲ ಬ್ಲಾಗ್ ಲೋಕದಿಂದ ದೂರ ಸರಿದಿದ್ದ ಇವರು ಮತ್ತೆ ಅದೇ ಅಂಗಳಕ್ಕೆ ಮರಳಿದ್ದಾರೆ. ಇದು ಸಂತಸದ ಸಂಗತಿ. ‘ಅವಧಿ’ ಈ ಹಿರಿಯರನ್ನು ಸ್ವಾಗತಿಸುತ್ತಿದೆ. ಅವರ ಒಂದು ಮಾತು ಹಾಗೂ ಬರಹವನ್ನು ನಿಮ್ಮ ಮುಂದಿರಿಸುತ್ತಾ…                                                                                                                             ಚಿತ್ರ: ಶಮ, ನಂದಿಬೆಟ್ಟ  

ಕೆಲವಾರು ವ್ಯಕ್ತಿಗತ ಕಾರಣಗಳಿಂದ ನನ್ನ ಬ್ಲಾಗನ್ನು ಕೆಲವು ವಾರಗಳ ಹಿಂದೆ ವಾಪಸು ತೆಗೆದುಕೊಂಡಿದ್ದೆ. ಈಗ ಆ ಬ್ಲಾಗನ್ನು ಮತ್ತೆ ತೆರೆದಿದ್ದೇನೆ. ಆ ಬರವಣಿಗೆಗಳನ್ನೂ ಕ್ರಮಶಃ ತುಂಬುತ್ತೇನೆ. ಈ ತಿಕ್ಕಲುತನಕ್ಕೆ ಮಾಫಿ ಮಾಡುವುದು…

 

ಒಂದು ಘಟನೆ, ಒಂದು ಕತೆ
 
ಇಸವಿ ೧೯೪೨-೪೩ ರ ಚಳಿಗಾಲ. ಒಬ್ಬ ಹುದುಗ, ವಯಸ್ಸು ಆರು ದಾಟಿತ್ತು. ಅವನು ಕುಂಟ. ಅವನಿಗೆ ತನ್ನ ಕಾಲು ನೆಟ್ಟಗಿದ್ದ ದಿನಗಳ ನೆನಪೇ ಇಲ್ಲ. ಹಸುಕೂಸಾಗಿದ್ದಾಗಲೇ ಕಚ್ಚಿಕೊಂಡಿದ್ದ ಪೋಲಿಯೋ ಜ್ವರದ ಉಡುಗೊರೆ ಸ್ವಲ್ಪ ಕ್ಷೀಣವಾಗಿದ್ದ ಬಲಗಾಲು. ಆ ಸೊಟ್ಟ ಕಾಲಿನ ಉದ್ದ ನೆಟ್ಟಗಿದ್ದ ಎಡಗಾಲಿಗಿಂತ ಒಂದು ಇಂಚು ಕಮ್ಮಿ.  ಅವನು ಹುಟ್ಟಿದ ದಿನಗಳು ಜೊನಾಸ್ ಸಾಲ್ಕ್ ಗಿಂತ ಬಹಳ ಹಿಂದಿನ ದಿನಗಳು.
 
ಆದರೂ ಅವನ ಕುಂಟತನ ಅವನಿಗೆ ಅಂತಹ ವಿಪರೀತ ಬಾಧೆ ಅಥವಾ ಅನಾನುಕೂಲ ಮಾಡಿರಲಿಲ್ಲ.  ನಡೆಯಲಿಕ್ಕೆ, ಓಟಕ್ಕೆ ಕ್ಷತಿ ಇರಲಿಲ್ಲ.  ಆರು ವರುಷಗಳ ಹುಡುಗುತನದ ಆಟ ತುಂಟಾಟಗಳು, ಜೂಟಾಟ, ಮರಕೋತಿ, ಊರಿನ ಹತ್ತಿರದ ಬೆಟ್ಟದಲ್ಲಿನ ದೇವಸ್ಥಾನ ಓಡಿ ಓಡಿ ಹತ್ತುವುದು, ಇವೆಲ್ಲದರಲ್ಲೂ ಅವನ ಜೊತೆಯ ಗೆಳೆಯರೊಡನೆ ಸರಿಸಮಾನವಾಗಿ ಸೇರಿಕೊಳ್ಳುತ್ತಿದ್ದ.  
 
ಮನೆಯಲ್ಲಿ ಇದ್ದವರು ಅವನ ಅಪ್ಪ, ಅಮ್ಮ, ಸೋದರತ್ತೆ, ಮೂವರು ಅಕ್ಕಂದಿರು. ಅಕ್ಕಂದಿರ ವಯಸ್ಸು ೧೩, ೧೧, ಒಂಬತ್ತು. ಮತ್ತಿಬ್ಬರು ಹಿರಿಯ ಅಕ್ಕಂದಿರು ಅವನು ಹುಟ್ಟುವ ಮುಂಚೆಯೇ ಅವರುಗಳ ಮದುವೆಗಳು ಆಗಿದ್ದರಿಂದ ತಮ್ಮ ತಮ್ಮ ಗಂಡಂದಿರ ಪರಿವಾರಗಳನ್ನು ಸೇರಿಕೊಂಡಿದ್ದರು.  ಇದ್ದ ಒಬ್ಬ ಅಣ್ಣ ತುಮಕೂರಿನ ಕಾಲೇಜಿನಲ್ಲಿ  ಓದುತ್ತಿದ್ದ. ಅಪ್ಪ ಎರಡು ಮೂರು ವರುಷಗಳ ಹಿಂದೆ ರೆಟೈರ್ ಆಗಿದ್ದ. 
 
ಅಮ್ಮ ಅಪ್ಪನಗಿಂತ ಹತ್ತು ವರುಷ ಸಣ್ಣವಳು; ಬಾಲವಿಧವೆ ಸೋದರತ್ತೆಯ ವಯಸ್ಸೂ ಹೆಚ್ಚು ಕಮ್ಮಿ ಅಷ್ಟೇ. 
 
ಅಂದು ಮುಂಜಾನೆ ಎಂದಿನಂತೆ ಅವನಿಗಿಂತ ಏಳು ವರುಷಗಳು ದೊಡ್ಡವಳಾಗಿದ್ದ ಅವನ ಅತಿ ಮೆಚ್ಚಿಗೆಯ ಅಕ್ಕ ಅವನನ್ನು ಎಬ್ಬಿಸಲಿಲ್ಲ. ಎಬ್ಬಿಸಿದವರು ಅವನ ಅಪ್ಪ ಮತ್ತು ಸೋದರತ್ತೆ. ಇನ್ನೂ ಕತ್ತಲು ಕತ್ತಲು. ಚಳಿ ಬೇರೆ. ಪಕ್ಕದಲ್ಲಿನ ಕೋಣೆಯ ಮುಚ್ಚಿದ್ದ ಬಾಗಿಲ ಹಿಂದೆ ಅಕ್ಕಂದಿರ
ಪಿಸುಮಾತುಗಳು, ಏನೋ ನುಂಗಿಕೊಂಡು ಅಳುತ್ತಿದ್ದ ಸದ್ದಿನಂತೆ. ಅವನನ್ನು ತಬ್ಬಿಕೊಂಡ ಅಮ್ಮನ ಅಳು.  ಅಪ್ಪನ ಗದರಿಕೆ.  ಮಾತನಾಡದಿದ್ದರೂ ಗಂಟು ಮುಖ ಮಾಡಿಕೊಂಡು ಅಮ್ಮನಿಂದ ಸ್ವಲ್ಪ
ದೂರವಾಗಿ ಅಪ್ಪನ ಪಕ್ಕದಲ್ಲಿ ನಿಂತಿದ್ದ ಸೋದರತ್ತೆ. “ಏಳು, ಕಕ್ಕಸು ಮಾಡಿಕೊಂಡು ಮಾಡಿಕೊಂಡು ಬೇಗ ಬಾ.”
 
ಏಕೆ, ಏನಾಗಿದೆ, ಏನೂ ಅರ್ಥವಾಗಲಿಲ್ಲ.  ಆದರೆ ಒಂದು ರೀತಿ ಅರ್ಥವಿಲ್ಲದ ಭಯ. ಆದರೂ ಹೇಳಿದ ಮಾತು ಕೇಳುವ ವಿಧೇಯತೆಯ ಅಭ್ಯಾಸ.
ಕಕ್ಕಸಿನ ಕೆಲಸ ಮುಗಿಸಿ ಹೊರಬಂದಾಗ ಅಮ್ಮ ಅವನನ್ನು ಮತ್ತೂ ಗಟ್ಟಿಯಾಗಿ ತಬ್ಬಿಕೊಂಡು ಅಳಲು ಶುರು ಮಾಡಿದಳು.  ಮತ್ತೆ ಅಪ್ಪನ ’ಸಾಕು, ಸಾಕು, ನಿಲ್ಲಿಸು’ ಅಂತ ಗದರಿಕೆ. ಅವನು ಅಮ್ಮನನ್ನು ಇನ್ನೂ
ಗಟ್ಟಿಯಾಗಿ ತಬ್ಬಿಕೊಂಡು ನಿಂತ.  ಅಪ್ಪ ಮತ್ತು ಸೋದರತ್ತೆ ಅವನ ಕೈಯನ್ನು ಹಿಡಿದು ಎಳೆದು ಅಮ್ಮನ ಅಪ್ಪಿಗೆಯಿಂದ ಹೊರತಂದಾಗ ಅಮ್ಮನ ಅಳು ಇನ್ನೂ ಜೋರಾಯಿತು. ಏನೂ ತಿಳಿಯದ್ದರೂ ಹುಡುಗನೂ
ಅಳಲು ಶುರು ಮಾಡಿದ.
 
ಆಚಿನ ಕೊಠಡಿಯ ಬಾಗಿಲು ಸದ್ದಾಯಿತು. ಆಗ ಅವನಿಗೆ ಇನ್ನೂ ಅರ್ಥವಾಗದ ಭಯ. ಇದು ಯಾರು ಆಚೆಯ ಕೊಠಡಿಯಲ್ಲಿದ್ದಾರೆ ಅಂತ.
ಏಕೆಂದರೆ ಮನೆಯಲ್ಲಿ ಹೊರಗಿನವರಾರೂ ಇರುತ್ತಿರಲಿಲ್ಲ. ರಾತ್ರೆಯಂತೂ
ಸುತರಾಂ ಇರುತ್ತಿರಲಿಲ್ಲ. ಒಬ್ಬ ಅಪರಿಚಿತ ಮನುಷ್ಯ ಒಳಗೆ ಬಂದು ಅಪ್ಪನ ಕೈಯಿಂದ ಅವನನ್ನು ಬಿಡಿಸಿ ಹೊರಗಿನ ಕೊಠಡಿಯ ಕಡೆ ಎಳೆದುಕೊಂಡು ಹೋದ.
 
ಕೋಣೆಯ ಬಾಗಿಲು ತೆರೆದಿತ್ತು. ಹೊಗೆಯ ವಾಸನೆ. ಹೊಸಲಿನ ಒಳಗೆ ಅವನನ್ನು ಎಳೆದು ನೂಕಿದಾಗ ಅವನ ಗಮನಕ್ಕೆ ಬಂದಿದ್ದು ಕೋಣೆಯ  
ಮಧ್ಯದಲ್ಲಿದ್ದ ಒಂದು ದೊಡ್ಡ ಬಾಣಲಿಯಲ್ಲಿ ಭಗಭಗನೆ ಉರಿಯುತ್ತಿದ್ದ ದೊಡ್ಡ ಕೆಂಡಗಳು.  ಆ ಕೆಂಡಗಳ ಮಧ್ಯೆ ಇದ್ದ ಕೆಲವಾರು ಬೇರೆ ಬೇರೆ ಉದ್ದನೆಯ
ಸಲಾಕಿಗಳು. ಇನ್ನಿಬ್ಬರು ಅಪರಿಚತರು. “ಅಯ್ಯೋ, ಬೇಡಾ” ಎಂದು ಕೂಗುತ್ತಾ ಹಿಡಿದಿದ್ದ ಕೈಯನ್ನು ಜಗ್ಗಿ ಒದರಿ ಅಲ್ಲಿಂದ ಓಟ ಕೀಳಲು ಯತ್ನಿಸಿದ. ಸಾಧ್ಯವಾಗಲಿಲ್ಲ. ಜಟ್ಟಿಯಂತಿದ್ದ ಆಳೊಬ್ಬ ಅತಿ ಸುಲಭವಾಗಿ
ಅವನನ್ನು ಮತ್ತೆ ಹಿಡಿದು ಚಡ್ಡಿ ಕಳಚಿ ತಣ್ಣಗಿದ್ದ ನೆಲದ ಮೇಲೆ ನೂಕಿ ಉರುಳಿಸಿದ. 
 
ಸೊಂಟದಿಂದ ಕೆಳಗೆ ಬಟ್ಟೆ ಇಲ್ಲ. ಹುಡುಗನ ಚೀರಾಟ, ಕೈಕಾಲುಗಳ ಒದರಾಟ ಕೆಲಸಕ್ಕೆ ಬರಲಿಲ್ಲ. ಹೊಟ್ಟೆಯ ಮೇಲೆ ತಿರುವಿಹಾಕಿ ಒಬ್ಬ ತಲೆಯ ಕಡೆ, ಮತ್ತೊಬ್ಬ  ಕಾಲುಗಳನ್ನು ಹಿಡಿದು ಸಮಾಧಾನ ಮಾಡಿದರು. ’ಏಕಪ್ಪಾ, ಗಾಬರಿ ಏಕೆ, ನಿನಗೆ ಏನೂ ಆಗೊಲ್ಲ, ಇದೆಲ್ಲ ನಿನ್ನ
ನಿನ್ನ ಒಳ್ಳೆಯದಕ್ಕೇ, ಸ್ವಲ್ಪ ಉರಿ ಆದರೂ ಒಂದು ವಾರದಲ್ಲಿ ನಿನ್ನ ಕುಂಟ
ಕಾಲು ಸರಿಹೋಗುತ್ತೆ’ ಅಂತ ಸಮಾಧಾನ ಮಾಡುತ್ತಿದ್ದಾಗಲೇ ಮೊದಲ ಬರೆ ಬಲಗಾಲಿನ ಪಿರ್ರೆಯ ಮೇಲೆ ಬಿತ್ತು. ಭಯಂಕರ ಬರೆ.  
 
ಪಿರ್ರೆಯ ಮೇಲೆ ಬರೆ ಹಾಕುತ್ತಿದ್ದಾಗಲೇ ಹುಡುಗನ ಜ್ನಾನ ಹೋಯಿತು. ಮುಂದಿನ ಮೂರು ಬರೆಗಳ ನೆನಪೇ ಇಲ್ಲ.  ಎರಡು ಬಲಮೊಣಕಾಲಿನ ಚಿಪ್ಪಿನ ಮೇಲ್ಭಾಗ ಕೆಳಭಾಗದಲ್ಲಿ. ಮೂರನೆಯದು ಆ ಸಣಕಲು ಕಾಲಿನ ಮೀನಖಂಡದ ಮಧ್ಯದಲ್ಲಿ.
ಸ್ವಲ್ಪ ಎಚ್ಚರ ಆಯಿತು. ಮತ್ತೆ ಜೋರಾಗಿ ಅಳು. ಕಣ್ಣುಗಳಲ್ಲಿ ನೀರು, ಮೂಗಿನಲ್ಲಿ ಸಿಂಬಳ, ನೆಲದಮೇಲೆ ಉಚ್ಚೆ. ಹಿಡಿದಿದ್ದ ಕೈಕಾಲುಗಳ ಬಿಗಿ ಸ್ವಲ್ಪ ಸಡಿಲವಾಗಿದ್ದರೂ ಆ ಆರು ವರುಷಗಳ ದೇಹದಲ್ಲಿ ತಾಖತ್ತೇ ಇಲ್ಲ. ನಾಲ್ಕನೇ ಬರೆ ಹಚ್ಚಿದಾಗ ಸ್ವಲ್ಪ ಪ್ರಜ್ನೆ ಇತ್ತು; ಆದರೆ ಅಲ್ಲಾಡುವ ಶಕ್ತಿ ಸಹ ಇರಲಿಲ್ಲ.
 
ಸುಡುಗಾಟದ ಉರಿ, ನೋವು ಮುಗಿಯಲಿಲ್ಲ. ಎಚ್ಚರದಲ್ಲೇ ಇನ್ನೂ ಎರಡು ಬರೆಗಳು.  ಐದನೆಯದು ಕಾಲಿನ ಹರಡಿನ ಸುತ್ತ.  ತಿರುವಬೇಕಲ್ಲ, ಆದಕಾರಣ ನಾಲ್ಕೈದು ಬಾರಿ ಸುಡಬೇಕಾಯಿತು. ಹುಡುಗನ
ಅವಸ್ಥೆಯಲ್ಲಿ ಬರೇ ಬಿಕ್ಕಿ ಬಿಕ್ಕಿ ಅಳಲು ಸಾಧ್ಯ. ಆ ಅಳುವಿಗೂ ಶಕ್ತಿ ಇಲ್ಲ. ಚೀರಾಟದ ಅಳುವೂ ಅಲ್ಲ. ಕೊನೆಯ, ಆರನೆಯ ಬರೆ ಕಾಲಿನ ಬೆರಳುಗಳ ಬುಡದಲ್ಲಿ ಒಂದು ಸಾಲು.  
   
ಇವೆಲ್ಲ ಒಂದು ಕಾಲದ ಘಟನೆಗಳು, ಒಂದು ಕತೆ.  ಅಡುಗೂಲಜ್ಜಿಯ ಕತೆ ಅಲ್ಲ. ಅಡುಗೂಲಜ್ಜಿ ಕತೆ ಕೊಡುತ್ತಿದ್ದ ಆನಂದ ಉತ್ಸಾಹಗಳ ಕತೆಯಂತೂ ಅಲ್ಲವೇ ಅಲ್ಲ.  ಗಾಯಗಳು ವಾಸಿ ಆದವು. ಗಾಯದ ಗುರುತು, ಮಚ್ಚೆಗಳು ಈಗಲೂ ಇವೆ. ಕೆಲವು ಬರೆಗಳ ಗುರುತುಗಳು ಮಂದವಾಗಿವೆ. ಆದರೆ ಪಿರ್ರೆಯ ಮೇಲಿನ ಗಾಯದ ಕಾಲು ಇಂಚು ಅಗಲ ಮೂರೂವರೆ ಇಂಚು ಉದ್ದ ಗುರುತು ಈಗಲೂ ಎದ್ದು ಕಾಣುತ್ತೆ.  ಈಜುವಾಗ, ಅಥವಾ ಹೆಣ್ಣೊಬ್ಬಳ ಜೊತೆಯಲ್ಲಿದ್ದಾಗ ಆ ಗುರುತನ್ನು ನೋಡಿ ಅಸಹ್ಯ ಪಟ್ಟಿಕೊಂಡವರ ನೆನಪು ಇದೆ. ಏನೂ ಅಸಹ್ಯ ಪಡದೆ ಆ ಕಡೆ ಹೆಚ್ಚು ಗಮನವೂ ಕೊಡದೆ ಒಪ್ಪಿಕೊಂಡವರ ನೆನಪೂ ಇದೆ.
 
ಹುಡುಗ ಉಳಿದುಕೊಂಡಕುಂಟತನವೂ ಉಳಿದುಕೊಂಡಿದೆ. ಹುಡುಗ ವಯಸ್ಸಿಗೆ ಬಂದ, ದೊಡ್ದವನಾದ.  ಯೌವನ ಎಂದೋ ತೀರಿತು. ಮಧ್ಯವಯಸ್ಸಿನ ದಿನಗಳೂ ತೀರಿದವು. ಆ ದಿನಗಳ ಪೂರೈಸಿಕೊಂಡ ಅಥವಾ ಪೂರೈಸಿಕೊಳ್ಳಲಾರದ ದೇಹಮನಸ್ಸುಗಳ ಆಸೆಆಕಾಂಕ್ಷೆಗಳೂ ಈಗ ಬರೀ ನೆನಪುಗಳೇ.  ಅವುಗಳ ಕೂಡ ಇಂದಿನ ಮುದಿತನದಲ್ಲಿ ನೆನಪಿನಲ್ಲಿರುವುದು ಮಾತ್ರ ಆ ಕಳೆದುಹೋದ ದಿನಗಳಲ್ಲಿನ ಕಷ್ಟ ಸುಖಗಳು, ಸಂತೋಷ ದುಃಖಗಳು, ಉತ್ಸಾಹ ಜಿಗುಪ್ಸೆಗಳ ಕ್ಷಣಗಳು.
ವಿಕೃತಿಗಳನ್ನು ನೋಡಿ ಅಸಹ್ಯ ಪಟ್ಟವರ, ಅಸಹ್ಯ ಪಡದೆ ಒಪ್ಪಿಕೊಂಡವರ ನೆನಪುಗಳು.
 
ಆದರೆ ಈಗ ಇವೆಲ್ಲವನ್ನೂ ಏಕೆ ನೆನಪಿಸಿಕೊಳ್ಳಬೇಕು?  ದಾಸರು ಹೇಳಿಲ್ಲವೇ, ಆದದ್ದೆಲ್ಲಾ ಒಳಿತೇ ಆಯಿತು, ಅಂತ. ಆದರೆ ಅಂತಹ ವೈರಾಗ್ಯ, ಪಟ್ಟ ಕಾಟಗಳನ್ನು, ಸಹಿಸಿಕೊಳ್ಳಲಾರದಂತಹ ನೋವುಗಳನ್ನು ಅವುಗಳೆಲ್ಲಾ ಆಗಿಹೋಯಿತು, ಆದಕಾರಣ ಅವುಗಳೆಲ್ಲಾ ಒಳ್ಳೆಯದಕ್ಕೇ ಆಯಿತು ಎಂದು ಒಪ್ಪಿಕೊಳ್ಳುವ ಸಹಿಷ್ಣುತೆ ಎಂದೋ ನಶಿಸಿಹೋದ ಅಂದಿನ ಹುಡುಗನಿಗೂ ಇರಲಿಲ್ಲ, ಅವುಗಳ ನೆನಪಿನಲ್ಲೇ ಬೆಳೆದ ಇಂದಿನ ಮುದುಕನಿಗೂ ಇಲ್ಲ.
 
ಆದದ್ದೆಲ್ಲಾ ಯಾವಾಗಲೂ ಒಳ್ಳೆಯದಕ್ಕೇ ಆಗುವುದಿಲ್ಲ.

‍ಲೇಖಕರು avadhi

February 11, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: