ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಫಿ ಕುಡಿದೆ.. ಡೌನ್ ಲೋಡೂ ಮಾಡಿದೆ..

ಮರುದಿನ ನಾಲ್ಕೂ ಮುಕ್ಕಾಲಿಗೆ ಎದ್ದು ಸಿದ್ಧವಾಗಿ ಆರೂವರೆಗೆ ತಿಂಡಿ ಮುಗಿಸುವುದರಲ್ಲಿ ಕುರುಚಲು ಗಡ್ಡದ, ತಾರುಣ್ಯ ಹಾಗೂ ಮಧ್ಯ ವಯಸ್ಸು ಎರಡಕ್ಕೂ ನಡುವಿನ ವಯಸ್ಸಿನ ಯೂಸುಫ್ ನಮಗಾಗಿ ಕಾಯುತ್ತಿದ್ದ.

ಪರಿಚಯ ಮಾಡಿಕೊಂಡ ನಂತರ ವ್ಯಾನ್ ಏರಿದೆವು.

ಎಂಟು ಜನ ಕೂರಬಹುದಾದ ವ್ಯಾನಿನಲ್ಲಿ ನಾಲ್ಕೇ ಜನ ಇದ್ದಿದ್ದರಿಂದ ಎಲ್ಲರೂ ಒಂದೊಂದು ಕಿಟಕಿ ಹಿಡಿದು ಕುಳಿತೆವು. ವ್ಯಾನ್ ಹೊರಟಿತು. ರಾತ್ರಿ ತಲುಪಿದಾಗ ಪೂರ್ತಿ ಕತ್ತಲಾಗಿದ್ದರಿಂದ ಅಮ್ಮಾನ್‌ ಹೇಗಿದೆ ಎನ್ನುವುದೇ ಗೊತ್ತಾಗಿರಲಿಲ್ಲ. ಈಗ ನೋಡುತ್ತಾ ಕುಳಿತೆ.

ಇಡೀ ಊರು ಎತ್ತಣಿಂದೆತ್ತ ನೋಡಿದರೂ ಕೆನೆಯಲ್ಲಿ ಅದ್ದಿದಂತಿತ್ತು. ಎಲ್ಲ ಮನೆಗಳೂ ಕೆನೆ ಬಣ್ಣ! ಈ ಏರಿಯಾದಲ್ಲಿ ಆ ಕಲರ್ ಎಲ್ಲರಿಗೂ ಜಾಸ್ತಿ ಇಷ್ಟ ಇರಬಹುದೋ ಅಥವಾ ಪಕ್ಕದ ಮನೆಯವರ ಜೊತೆ neighbour’s envyಯ ಕಾರಣಕ್ಕಾಗಿ ಅದೇ ಬಣ್ಣ ಹೊಡೆಸಿರಬಹುದು ಅಂದುಕೊಂಡೆ. ಆದರೆ ಏರುತಗ್ಗುಗಳಿದ್ದ ಅಮ್ಮಾನ್‌ನ ಬೀದಿಗಳಲ್ಲಿ ನಮ್ಮ ಗಾಡಿ ಸಾಗಿದ ಹಾಗೆ ಯಾವುದೋ ಒಂದು ಎತ್ತರದ ಪ್ರದೇಶದಲ್ಲಿ ನೂರಾರು ಮನೆಗಳಿದ್ದ ಒಂದಿಡೀ ಇಳಿಜಾರು ಪ್ರದೇಶ ಕಣ್ಣಿಗೆ ಬಿದ್ದಾಗ ನೋಡಿದರೆ ಇಡೀ ಊರಿಗೆ ಊರೇ ಕೆನೆಬಣ್ಣದ ಕಲ್ಲಿನ ಮನೆಗಳು!

ಯೂಸುಫ್‌ನನ್ನು ‘ಇದ್ಯಾಕೆ ಈ ರೀತಿ ಒಂದೇ ಬಣ್ಣ?’ ಎಂದು ವಿಚಾರಿಸಿದಾಗ ‘ಇದು ಇಲ್ಲಿನ ಸರ್ಕಾರದ ರೂಲ್. ಎಲ್ಲ ಮನೆಗಳೂ ಇದೇ ಬಣ್ಣದ ಸುಣ್ಣದ ಕಲ್ಲಿನಿಂದಲೇ ಕಟ್ಟಬೇಕು’ ಎಂದ. ‘ಇದೊಂಥರಾ ಒಳ್ಳೆಯದು ಅಲ್ಲವಾ … ಒಂಥರಾ ಯೂನಿಫಾರ್ಮಿಟಿ ಇರುತ್ತೆ’ ಅಂತ ಅಂದೆ. ಆದರೆ ನಮ್ಮ ವ್ಯಾನ್ ಅಮ್ಮಾನ್‌ನ ಬೀದಿಗಳಲ್ಲಿ ಸಾಗಿ, ಆ ನಂತರ ಮರುಭೂಮಿಯ ನಡುವಿನ ಹೈವೇಗೆ ಕಾಲಿಡುವುದರಲ್ಲಿ ಎತ್ತೆತ್ತ ನೋಡಿದರೂ ಅದೇ ಬಣ್ಣದ ಮನೆಗಳನ್ನು ನೋಡಿ ನೋಡಿ ಬದುಕು ನಿಸ್ಸಾರ ಎನ್ನಿಸತೊಡಗಿತು.

ಸುಮ್ಮನೆ ಯೋಚಿಸಿ … ನಾನು, ನೀವು, ಅವನು, ಅವಳು, ಇವನು, ಇವಳು ಎಲ್ಲರೂ ಒಂದೇ ಬಣ್ಣಕ್ಕಿದ್ದರೆ ಬದುಕು ಅದೆಷ್ಟು ರಸಹೀನ, ಏಕತಾನ ಅನ್ನಿಸುವುದಿಲ್ಲವೇ?! ನಮ್ಮಲ್ಲಿನ ವಿಶೇಷಗಳು, ವಿರೋಧಗಳು, ಸಾಮ್ಯತೆಗಳು, ವಿಕ್ಷಿಪ್ತತೆ ಎಲ್ಲ ಸೇರಿಯೇ ಮನುಷ್ಯ ಜಗತ್ತು ಇಷ್ಟು ನಿಗೂಢವಾಗಿಯೂ, ಆಸಕ್ತಿಕರವಾಗಿಯೂ ಇದೆಯಲ್ಲದೇ, ಎಲ್ಲವೂ ರೋಬಾಟಿನ ರೀತಿ ಒಂದೇ ಡಿಜ಼ೈನು, ಎತ್ತರ, ಗಾತ್ರ ಇದ್ದರೆ ಗತಿಯೇನು! ನಮ್ಮೂರಿನ ಒಂದಿಬ್ಬರು ಅರೆಬೆಂದ ವಾಸ್ತುಶಾಸ್ತ್ರಜ್ಞರನ್ನು ಇಲ್ಲಿಗೆ ಕಳಿಸಿ, ಯಾವುದೋ ಒಂದು ಬುರುಡೆ ಶಾಸ್ತ್ರ ಹೇಳಿಸಿ, ಈ ಕೆನೆ ಬಣ್ಣದ ಮನೆಗಳ ನಡುವೆ ಅಲ್ಲಲ್ಲಿ ಅಚ್ಚ ಕೇಸರಿ, ನೇರಳೆ, ಕೆಂಪು, ಹಳದಿಯ ಬಣ್ಣ ಢಾಳಾಗಿ ಹೊಡೆಸಿದರೆ ಇಡೀ ಊರು ಹೋಳಿ ಹಬ್ಬದ ದಿನ ಓಕುಳಿ ಎರಚಿದಂತೆ ಕಂಡು ಜೀವನೋತ್ಸಾಹ ಹರಿದಾಡಿದಂತೆನ್ನಿಸಬಹುದಾ ಅಂತ ತೀವ್ರವಾಗಿ ಅನ್ನಿಸಿತು!

ಮರುಭೂಮಿಯೆಂದರೆ ಬರಿ ಮರಳಲ್ಲ..

ಯೂಸುಫ್ ಒಳ್ಳೆಯ ಮಾತುಗಾರನಾಗಿದ್ದ.

ಅಮೆರಿಕೆಯಲ್ಲಿ ಸ್ವಲ್ಪ ವರ್ಷ ಇದ್ದನಂತೆ, ಹಾಗಾಗಿ ಅವನ ಇಂಗ್ಲೀಷ್ ಕೂಡಾ ಸಾಕಷ್ಟು ಚೆನ್ನಾಗಿಯೇ ಇತ್ತು. ಹಾಗಾಗಿ ಸುಲಭವಾಗಿ ಅರ್ಥವಾಗುತ್ತಿತ್ತು. ಹೊರಟ ಕೂಡಲೇ ಹೇಳಿದ ‘ಮಧ್ಯ ದಾರಿಯಲ್ಲಿ ಒಮ್ಮೆ ಮಾತ್ರ ನಿಲ್ಲಿಸುತ್ತೇನೆ. ಅಲ್ಲಿಯೇ ಕಾಫಿ, ನೀರು, ವಾಷ್ ರೂಮ್ ಎಲ್ಲ ಮುಗಿಸಿಕೊಳ್ಳಿ. ಮತ್ತೆ ಪೆಟ್ರಾದವರೆಗೂ ಸ್ಟಾಪ್ ಇಲ್ಲ’ ಎಂದು. ‘ಕಾಫಿ ನೀನು ಕೊಡಿಸುತ್ತೀಯಾ’ ಅಂತ ಮುಗ್ಧವಾಗಿ ಕೇಳಿದಾಗ ಅವನೂ ನಗುತ್ತಲೇ ‘ಕಾಫಿಯಿರಲಿ, ನೀರು ಕೂಡಾ ಪ್ಯಾಕೇಜಿನಲ್ಲಿ ಸೇರುವುದಿಲ್ಲ. ಅದೆಲ್ಲವೂ ನಿಮ್ಮದೇ ಜವಾಬ್ದಾರಿ. ನನ್ನ ಪ್ಯಾಕೇಜಿನಲ್ಲಿ ಇಲ್ಲಿಂದ ಹೋಗುವ ಖರ್ಚು, ಎಂಟ್ರಿ ಫೀ, ಗೈಡ್ ಫೀ ಮತ್ತು ಊಟ ಮಾತ್ರ ಸೇರುತ್ತದಷ್ಟೇ’ ಅಂತ ನಯವಾಗಿ, ಆದರೆ ಖಡಾಖಂಡಿತವಾಗಿ ಹೇಳಿದ.

ಹಾಗೆ ಹೇಳಿ ಹೊರಟವನು 130-140 ಕಿಲೋಮೀಟರ್ ಸ್ಪೀಡಿನಲ್ಲಿ ಹಗುರಾಗಿ ಒಂದೆರಡು ಬೆರಳಲ್ಲಿ ಸ್ಟಿಯರಿಂಗ್ ವೀಲ್ ಹಿಡಿದು ಗಾಡಿ ನಡೆಸತೊಡಗಿದ. ನಾಲ್ಕು ಲೇನ್‌‌ಗಳ ರಸ್ತೆಯಲ್ಲಿ ಅತೀ ವಿರಳವಾಗಿ ಆಗೊಮ್ಮೆ, ಈಗೊಮ್ಮೆ ಎದುರಾಗುತ್ತಿದ್ದ ಟ್ರಕ್, ಮಿನಿ ಬಸ್, ಕಾರು ಮುಂತಾದವನ್ನು ಬಿಟ್ಟರೆ ಹೆಚ್ಚಿನ ವಾಹನ ಸಂಚಾರವೇ ಇಲ್ಲ. ನೇರ ರಸ್ತೆಯಾದ್ದರಿಂದ ಕಿಲೋಮೀಟರ್‌ಗಟ್ಟಳೆ ದೂರದ ಹಾದಿಯೂ ಕಣ್ಣಿಗೆ ಗೋಚರಿಸುತ್ತಿತ್ತು. ಹಾಗಾಗಿ ಹೆಚ್ಚಿನ ಶ್ರಮವಿಲ್ಲದೇ ಡ್ರೈವ್ ಮಾಡುತ್ತಿದ್ದ.

ಹೈವೇಗೆ ಕಾಲಿಡುವವರೆಗೆ ಮರುಭೂಮಿಯೆಂದರೆ ಮರಳು ಅನ್ನುವ ಸಾಮಾನ್ಯಜ್ಞಾನ ನಿಮ್ಮಂತೆ ನನ್ನದೂ ಆಗಿತ್ತು. ಆದರೆ ಇದು ಕನಸುಗಾರ ಸಿನೆಮಾದ ರವಿಚಂದ್ರನ್ ಥರ ‘ಇದು ಮಂಚ, ಆದರೆ ಮಂಚ ಅಲ್ಲ’ ಎನ್ನುವ ಹಾಗೆ ‘ಇದು ಮರುಭೂಮಿಯೇ, ಆದರೆ ಮರುಭೂಮಿಯಲ್ಲ’ ಎನ್ನುವ ಹಾಗಿತ್ತು. ಎತ್ತ ನೋಡಿದರೂ ಒಂದೇ ಒಂದು ಮರಳು ಗುಡ್ಡವೂ ಗೋಚರಿಸದೇ ಸಪಾಟಾದ ಬೈತಲೆಯಂತ ರಸ್ತೆ. ದಾರಿಯುದ್ದಕ್ಕೂ ಕುರುಚಲು ಗಿಡಗಳನ್ನು ಬಿಟ್ಟರೆ ಹಸಿರು ಅನ್ನುವುದೇ ಇಲ್ಲ. ಆದರೆ ನಮ್ಮೂರಲ್ಲಿ ತೆಂಗಿನ ಮರಗಳಿದ್ದಂತೆ ಯಥೇಚ್ಛವಾಗಿ ಬೆಳೆದ ಖರ್ಜೂರದ ಮರಗಳು. ಜೊಂಪೆ ಜೊಂಪೆ ಜೋತು ಬಿದ್ದ ಹಣ್ಣಿನ ರಾಶಿ ಜೊಲ್ಲು ಸುರಿಸುವ ಹಾಗಿತ್ತು. ಅಮ್ಮಾನ್‌ನಿಂದ ಪೆಟ್ರಾವರೆಗಿನ 240 ಕಿಲೋಮೀಟರ್ ದೂರದುದ್ದಕ್ಕೂ ಇದೇ ದೃಶ್ಯ … ಅದೇ ಏಕತಾನತೆ ಕೂಡಾ.

ಅಮ್ಮಾನ್‌ನಿಂದ ಪೆಟ್ರಾಗೆ ಹೋಗಲು ಇನ್ನೂ ಆಸಕ್ತಿಕರವಾದ ರೂಟ್ ಇದೆ. ಡೆಡ್ ಸೀ ಮಾರ್ಗದ ಹೆದ್ದಾರಿ ಮತ್ತು ರಾಜನ ಹೆದ್ದಾರಿ (ಕಿಂಗ್ಸ್ ಹೈವೇ) ಈ ಮರುಭೂಮಿಯ ಹಾದಿಗಿಂತ ತುಂಬ ಚೆನ್ನಾಗಿದೆಯಂತೆ. ರಾಜನ ಹೆದ್ದಾರಿ ಜೋರ್ಡಾನಿನ ಅತ್ಯದ್ಭುತ ಕಣಿವೆಗಳ ಮತ್ತು ಪರ್ವತಗಳ ಹಾದಿಯಾಗಿದ್ದು, ಮಾರ್ಗದಲ್ಲಿ ಹಲವು ಶತಮಾನಗಳಷ್ಟು ಹಳೆಯದಾದ ಮತ್ತು ಬೈಬಲ್‌ನಲ್ಲಿ ಉಲ್ಲೇಖಿಸಲಾದ ಅನೇಕ ಜಾಗಗಳನ್ನು ನೋಡಬಹುದಂತೆ. ಅದಲ್ಲದೇ ಈ ಡೆಡ್ ಸೀ ದಾರಿಯಲ್ಲಿ ಹೋದರೆ ಅದು ಅತ್ಯಂತ ರೊಮ್ಯಾಂಟಿಕ್ ಆದ ಲಾಂಗ್ ಡ್ರೈವ್ ರೀತಿ ಇರುತ್ತದಂತೆ. ಅವೆರಡನ್ನೂ ಬಿಟ್ಟು ಉಳಿದ ಮರುಭೂಮಿಯ ಮಾರ್ಗ ಅತ್ಯಂತ ನೀರಸವಾದ ಪ್ರಯಾಣ ಆದರೆ ಜೊತೆಜೊತೆಗೇ ಅತ್ಯಂತ ಸುಖಪ್ರಯಾಣವೂ ಹೌದು! ಕುಡಿದ ನೀರು ಅಲ್ಲಾಡದಂಥ ಈ ಮರುಭೂಮಿಯ ರಸ್ತೆ, ಸಮಯ ಕಡಿಮೆ ಇರುವಾಗ ಅತ್ಯಂತ ಪ್ರಶಸ್ತವಾದ ರೂಟ್. ಒಂದರೆಕ್ಷಣ ಬದುಕಿಗೆ ಇದನ್ನು ಸಮೀಕರಿಸಿಕೊಂಡೆ!

ಅತ್ಯಂತ ಸುಖದ ರಸ್ತೆ ಅನುಕೂಲಕರವಾಗಿದ್ದು, ಹೆಚ್ಚು ಖರ್ಚಿಲ್ಲದೇ ತಲುಪಬಹುದಾದರೂ ಅತ್ಯಂತ ಬರಡಾಗಿ ಮತ್ತು ನೀರಸವಾಗಿ ಇರುತ್ತದೆ

ಅತ್ಯಂತ ರಮಣೀಯ ರಸ್ತೆ ಅಂಥ ಚೆಂದವೇನೂ ಇಲ್ಲದಿರುವುದರ ಜೊತೆಗೆ ಹೆಚ್ಚು ದೂರದ್ದಾಗಿರುವುದರಿಂದ ಕ್ರಮಿಸಲು ಹೆಚ್ಚು ಸಮಯ ಬೇಕಾಗುತ್ತದೆ

ಅತ್ಯಂತ ರೊಮ್ಯಾಂಟಿಕ್ ರಸ್ತೆ ದೂರದ ಲೆಕ್ಕದಲ್ಲಿ ಕಡಿಮೆಯಿದ್ದರೂ ವೆಚ್ಚದ ಲೆಕ್ಕದಲ್ಲಿ ಅತೀ ದುಬಾರಿ

ಆಯ್ಕೆಯ ಅವಕಾಶವೇ ಇಲ್ಲದ ನಾವು ಮರುಭೂಮಿಯ ಮಾರ್ಗವನ್ನೇ ಆಯ್ದುಕೊಂಡೆವು ಅಂತ ಬಿಡಿಸಿ ಹೇಳಬೇಕಿಲ್ಲ ಎಂದುಕೊಳ್ಳುತ್ತೇನೆ!

ಮರುಭೂಮಿಯ ಮಾರ್ಗಕ್ಕೆ ಸೇರಿದ ಮೇಲೆ ಯೂಸುಫ್ ಹೆಚ್ಚು ಮಾತನಾಡಲು ಶುರು ಮಾಡಿದ. ಅದೇನು ಬರುವ ಪ್ರವಾಸಿಗರ ಜೊತೆಯೆಲ್ಲ ಅಷ್ಟೇ ಮಾತಾಡುತ್ತಾನೋ ಅಥವಾ ನಾವು ಹೆಚ್ಚು ಕೇಳಲು ಸಿದ್ಧವಿದ್ದರಿಂದ ಹೆಚ್ಚು ಮಾತಾಡಿದನೋ ಗೊತ್ತಿಲ್ಲ. ಆದರೆ ಜನ್ಮಜನ್ಮಗಳ ಮಾತೆಲ್ಲ ಎದೆಯಲ್ಲೇ ಉಳಿದಿತ್ತೋ ಅನ್ನುವಂತೆ ಒಂದೇ ಸಮನೆ ಮಾತನಾಡಲು ತೊಡಗಿದ.

ಜೋರ್ಡಾನಿನ ಅರಬ್ ಆದ ಅವನಿಗೆ ಇಸ್ರೇಲಿನ ಮತ್ತು ಯಹೂದಿಯರ ಬಗ್ಗೆ ಅಸಹನೆ, ಅರಬ್ಬರ ನೆಲದ ಒಂದು ಭಾಗವನ್ನು ಕಿತ್ತುಕೊಂಡವರು ಎನ್ನುವ ಸಿಟ್ಟು, victim ಆದ ಪ್ಯಾಲೆಸ್ಟೈನಿನ (ಅವ ಕೊನೆಯವರೆಗೂ ನಾವು ಪ್ಯಾಲೆಸ್ಟೈನ್ ಅಂದಾಗೆಲ್ಲ ‘ಅದು ಪ್ಯಾಲೆಸ್ಟೈನ್ ಅಲ್ಲ, ಫ್ಯಾಲೆಸ್ಟೈನ್ ಅಂತ ತಿದ್ದುತ್ತಲೇ ಇದ್ದ) ಬಗ್ಗೆ ಕರುಣೆಯ ಮೂಲಸೆಲೆ, ಜೋರ್ಡಾನಿನಲ್ಲಿ ನೆಲೆಗೊಂಡಿರುವ ಸಿರಿಯನ್ನರ ಬಗ್ಗೆ ಕೂಡಾ ಸಣ್ಣ ಮಟ್ಟದ ಅಸಹನೆ ಎಲ್ಲವೂ ಇತ್ತು.

ಎಲ್ಲಿಂದಲೋ ಬಂದು ತಮ್ಮ ಮಧ್ಯೆ ನೆಲೆಗೊಂಡು ಶಕ್ತಿಶಾಲಿಯಾಗಿ ಬೆಳೆದುಬಿಟ್ಟ ಇಸ್ರೇಲಿನ ಯಹೂದಿಯರಿಗೆ ಅದೆಲ್ಲ ಸಿಕ್ಕಿದ್ದಾದರೂ ಹೇಗೆ ಅಂದರೆ ಜಗತ್ತಿನ 99% ವಜ್ರ ವ್ಯಾಪಾರವನ್ನು ತಮ್ಮ ವಜ್ರಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ, ಹಾಗೆಯೇ ಚಿನ್ನದ ವ್ಯಾಪಾರದ ಬಹುಭಾಗ, ಶಸ್ತ್ರಾಸ್ತ್ರಗಳ ವ್ಯಾಪಾರದ ಹೆಚ್ಚಿನ ಭಾಗ, ಟಿವಿ ಛಾನೆಲ್‌ಗಳು, ನ್ಯೂಸ್‌ ಪೇಪರ್‌ಗಳು, ಹಾಲಿವುಡ್, ಪೆಟ್ರೋಲಿಯಮ್ ಉತ್ಪನ್ನಗಳನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಂಡಿರುವುದರಿಂದ ಎಂದ.

ಇಂಗ್ಲೆಂಡಿನ ರಾಜಮನೆತನದ ಸಲಿಂಗಕಾಮದ ಗುಟ್ಟುಗಳು, ವಿವಾಹೇತರ ಸಂಬಂಧಗಳ ಗುಟ್ಟುಗಳೆಲ್ಲ ಈ ಯಹೂದಿ ಮೀಡಿಯಾ ಜಗತ್ತಿನ ಮುಷ್ಠಿಯಲ್ಲಿರುವುದರಿಂದ ಇಂಗ್ಲೆಂಡ್ ಮತ್ತು ಅಮೆರಿಕಾ ಬಹುಪಾಲು ವಹಿವಾಟನ್ನು ಯಹೂದಿಯರ ಕೈಗಿರಿಸಿ ತೆಪ್ಪಗಾಗಿವೆ ಎಂದು ಕಿಡಿಕಾರಿದ. ನಾವು ಆ ಮರುಭೂಮಿಯ ಮೌನದಲ್ಲಿ ಸುಮ್ಮನೆ ಅವನ ಮಾತು ಕೇಳುತ್ತಾ ಕುಳಿತೆವು.

ಅರಬ್ಬರ ದೃಷ್ಟಿಕೋನದಿಂದ ಮಾತನಾಡುವಾಗ ಯಹೂದಿಯರ ಬಗ್ಗೆ, ಇಸ್ರೇಲಿನ ಬಗ್ಗೆ ಆಕ್ರೋಶಗೊಂಡವ, ಜೋರ್ಡಾನಿನಲ್ಲಿರುವ ಪ್ಯಾಲೆಸ್ಟೈನ್ ಮತ್ತು ಸಿರಿಯನ್ ನಿರಾಶ್ರಿತರ ವಿಷಯಕ್ಕೆ ಬಂದಾಗ ಮಾತ್ರ ಅವರೂ ಅರಬ್ಬರೆನ್ನುವುದು ಮರೆತು, ಇವ ಅಪ್ಪಟ ಜೋರ್ಡಾನಿಯನ್ ಮಾತ್ರವಾಗಿ ಹೋಗಿ ಅವರನ್ನು ಬಯ್ಯಲು ಶುರು ಮಾಡಿದ! ‘ಈ ನಿರಾಶ್ರಿತರಿಗೆಲ್ಲರಿಗೂ ಚೆನ್ನಾಗಿ ಅಭಿವೃದ್ಧಿಯಾಗಿರುವ ಅಮ್ಮಾನ್ ಮತ್ತು ಅಕಾಬಾದಂಥ ಊರುಗಳೇ ಬೇಕು. ಯಾಕೆ ಈ ಕಿಲೋಮೀಟರ್‌ಗಟ್ಟಳೆ ಮರುಭೂಮಿಯಲ್ಲಿ ಅವರು ನೆಲೆಸಿ ಅದನ್ನು ಅಭಿವೃದ್ಧಿ ಮಾಡುವುದಿಲ್ಲ?’ ಎಂದು ಸಿಟ್ಟಾಗಿ ಕೇಳುತ್ತಿದ್ದ. ನಾವೇನು ಹೇಳುವುದು? ಜೋರ್ಡಾನಿನವನಾದ ಅವನ ಸಿಟ್ಟು ನ್ಯಾಯವೇ ಇತ್ತು…

ಈ ಜೋರ್ಡಾನ್ ದೇಶದ ಸಮಸ್ಯೆ ಕಡಿಮೆಯದ್ದಲ್ಲ ಪಾಪ. ಅದು ಶುರುವಾಗಿದ್ದು 1948ರಲ್ಲಿ ಪ್ಯಾಲೆಸ್ಟೀನ್ ಒಡೆದು ಇಸ್ರೇಲ್ ದೇಶ ಸ್ಥಾಪನೆಯಾದಾಗ. ಅಕ್ಕಪಕ್ಕದ ಅರಬ್ ದೇಶಗಳೆಲ್ಲ ಒಂದರೊಡನೆ ಒಂದು ಹೊಂದಿಕೊಂಡು ಹೇಗೋ ಸುಖವಾಗಿದ್ದಾಗ, ನಡುವಿನಲ್ಲಿ ಈ ಯಹೂದಿ ದೇಶವಾದ ಇಸ್ರೇಲ್ ಸ್ಥಾಪನೆಯಾಗಿ ಬಿಟ್ಟಿತು.

ಅದು ಅವರಿಗೆ ನ್ಯಾಯವಾಗಿ ಸೇರಬೇಕಾದ ದೇವರು ಕೊಟ್ಟ ಜಾಗ ಎನ್ನುವುದು ಅವರ ಅನಿಸಿಕೆ. ಆದರೆ ಇವರಿಗೆ ತಮ್ಮಿಂದ ಕಿತ್ತುಕೊಂಡರು ಅನ್ನುವ ಅಸಹನೆ. ಸುಮ್ಮನೆ ಊಹಿಸಿಕೊಳ್ಳಿ, ನಮ್ಮ ಮನೆಯ ಹಾಲಿನಲ್ಲಿ ಯಾರೋ ಅಪರಿಚಿತರು ಬೀಡುಬಿಟ್ಟರೆ ನಮ್ಮ ಪರಿಸ್ಥಿತಿ ಹೇಗಿರಬಹುದು! ಅದೇ ಸ್ಥಿತಿ ಇಸ್ರೇಲನ್ನು ಸುತ್ತುವರೆದ ಜೋರ್ಡಾನ್, ಸಿರಿಯಾ, ಈಜಿಪ್ಟ್, ಲೆಬನಾನ್ ಈ ನಾಲ್ಕೂ ಅರಬ್ ದೇಶಗಳದ್ದು.

ಇಸ್ರೇಲ್ ಆಕ್ರಮಿಸಿದ ಪ್ಯಾಲೆಸ್ಟೈನಿನ ಭಾಗದಲ್ಲಿ ನೆಲೆಸಿದ್ದ ಪ್ಯಾಲೆಸ್ಟೀನಿಯನ್ನರು ಮನೆಮಠ ಕಳೆದುಕೊಂಡು ನೆಲೆ ಇಲ್ಲದಂತಾದರು. ಈ ನಿರಾಶ್ರಿತ ಅರಬರಿಗೆ ಪಕ್ಕದ ಜೋರ್ಡಾನಿಗೆ ಹೋಗಿ ಬದುಕು ಕಟ್ಟಿಕೊಳ್ಳುವುದಲ್ಲದೇ ಅನ್ಯ ಮಾರ್ಗವಿರಲಿಲ್ಲ. ಪ್ಯಾಲೆಸ್ಟೈನಿನ ಸುಮಾರು 20 ಲಕ್ಷ ನಿರಾಶ್ರಿತರು ಜೋರ್ಡಾನಿನಲ್ಲಿ ನೆಲೆಗೊಂಡರು. ಜೋರ್ಡಾನ್ ಪ್ಯಾಲೆಸ್ಟೈನ್ ನಿರಾಶ್ರಿತರಿಗೆ ಪೌರತ್ವ ನೀಡುತ್ತದೆ. ಹಾಗಾಗಿ ಕೆಲವರು ಜೋರ್ಡಾನಿಯನ್ನರೇ ಆಗಿಹೋಗಿದ್ದಾರಾದರೂ, ಮತ್ತೆ ಕೆಲವರು ಎಂದಾದರೂ ತಮ್ಮ ತಾಯ್ನಾಡಿಗೆ ಹಿಂದಿರುಗುವ ಕನಸಲ್ಲಿ ಈಗಲೂ ಇಲ್ಲಿನ ‘ನಿರಾಶ್ರಿತರಾಗೇ’ ಉಳಿದಿದ್ದಾರೆ.

ಇದು ಸಾಲದು ಎನ್ನುವಂತೆ, ಮತ್ತೊಂದು ಕಡೆ ಸಿರಿಯಾದ ಸಮಸ್ಯೆಯೂ ಶುರುವಾಯಿತು. ಜೋರ್ಡಾನ್ ಉದಾರ ದೇಶ. ಹಾಗಾಗಿ ಸುತ್ತಲಿನ ಎಲ್ಲ ದೇಶಗಳ ನಿರಾಶ್ರಿತರನ್ನು ಬರಮಾಡಿಕೊಳ್ಳುತ್ತದೆ. ಹಾಗಾಗಿ ಹೆಚ್ಚುಕಡಿಮೆ 7 ಲಕ್ಷ ಸಿರಿಯಾದ ನಿರಾಶ್ರಿತರೂ ಇಲ್ಲಿ ನೆಲೆಸಿದ್ದಾರೆ. ಒಟ್ಟು ಜನಸಂಖ್ಯೆ 80 ಲಕ್ಷದಷ್ಟಿದ್ದರೆ, ಅದರಲ್ಲಿ ಶೇಕಡಾ 30ರಷ್ಟು ಈ ನಿರಾಶ್ರಿತರೇ ಇದ್ದಾರೆ!

ಈ ಪರಿಸ್ಥಿತಿ ಇರುವಾಗ ಯೂಸುಫ್‌ನ ಸಿಟ್ಟು ನ್ಯಾಯಸಮ್ಮತವೇ ಇತ್ತು. ಆದರೆ ಸರಕಾರ ಇಂತಿಲ್ಲಿಯೇ ಇರಬೇಕು ಅನ್ನುವ ಕಂಡೀಷನ್ ಹಾಕದೇ ಎಲ್ಲ ನಿರಾಶ್ರಿತರನ್ನು ಬರಮಾಡಿಕೊಳ್ಳುವಾಗ, ಯೂಸುಫ್‌ನಂತ ಸಾಮಾನ್ಯ ನಾಗರೀಕನ ಅಳಲನ್ನು ಕೇಳುವವರಾರು? ಇವತ್ತು ನಮ್ಮ ಕಿವಿ ಸಿಕ್ಕಿತ್ತು, ಪಾಪ ಹೇಳಿಕೊಂಡ.

ನಾವೂ ಸಮಾಧಾನ ಮಾಡುವವರ ಹಾಗೆ ‘ಎಲ್ಲೆಲ್ಲೋ ನೆಲೆಸಲು ನೀರು ಇರಬೇಕಲ್ಲ ಪಾಪ ಈ ಮರುಭೂಮಿಯಲ್ಲಿ’ ಎಂದೆವು. ಅವನು ಇನ್ನಿಷ್ಟು ಸಿಟ್ಟಾಗುತ್ತಾ ‘ಇದೊಳ್ಳೆ ಕತೆಯಾಯಿತು! ಎಲ್ಲವೂ ಸಿದ್ಧವಾಗಿಟ್ಟು ನಾವು ಅವರಿಗೆ ಉಣ್ಣಲು ಕೊಡಬೇಕೇ? ತಮ್ಮ ಬೆವರು ಹರಿಸಿ ಏನಾದರೂ ಮಾಡಬೇಕಲ್ಲವಾ? ಮತ್ತೊಂದು ದೇಶದಲ್ಲಿ ಆಶ್ರಯ ಪಡೆದವರೆಲ್ಲ ಅವರ ಅಭಿವೃದ್ಧಿಗೊಂಡ ಊರುಗಳಲ್ಲಿ ತುಂಬಿಕೊಂಡರೆ ಆ ಊರುಗಳು ಇವರ ಭಾರಕ್ಕೆ ಸ್ಫೋಟಗೊಳ್ಳುವುದಿಲ್ಲವೇ? ಅದರ ಬದಲು ಖಾಲಿ ಬಿದ್ದ ಈ ಮರುಭೂಮಿಯಿಲ್ಲವೇ? ಇದನ್ನು ಅಭಿವೃದ್ಧಿಪಡಿಸಿದರೆ, ಅವರ ಬದುಕೂ ಹಸನಾಗುತ್ತದೆ, ಜಾಗ ಕೊಟ್ಟಿದ್ದಕ್ಕೆ ನಮಗೂ ಬೇಸರ ಇರುವುದಿಲ್ಲ’ ಎಂದು ಸಿಟ್ಟಿನಲ್ಲಿ ಹೇಳಿ ಉಸಿರು ತೆಗೆದುಕೊಳ್ಳುವವನಂತೆ ಬಡಬಡಿಸಿ ತುಸು ಹೊತ್ತು ಮೌನವಾದ.

ಇದ್ದಕ್ಕಿದ್ದಂತೆ ಎದ್ದು ನಿಂತಿತು ಇಸ್ರೇಲ್.. ಪ್ಯಾಲೆಸ್ತೀನ್ ಕನಸು ಕೊಂದು..

ಆ ಕ್ಷಣದಲ್ಲಿ ಅವನ ಸಿಟ್ಟು ತಮಿಳರು ಮತ್ತು ಉತ್ತರ ಭಾರತದವರ ಬಗ್ಗೆಗಿನ ಬೆಂಗಳೂರಿಗರ ಸಿಟ್ಟಿನಂತೆ, ಪಾಕಿಸ್ತಾನದ ಬಗೆಗಿನ ಭಾರತೀಯರ ಅಸಹನೆಯಂತೆಯೇ ಕಂಡಿತು. ದೇಶ, ರಾಜ್ಯಗಳ ಹೆಸರು ಬದಲಾಗುತ್ತದಷ್ಟೇ ಹೊರತು ಸಮಸ್ಯೆ ಮಾತ್ರ ಅದದೇ. ದೇಶಗಳ ನಡುವಣ ಸರಹದ್ದು, ವಿವಾದಗಳು, ಸ್ಥಳೀಯರ ಮನಃಸ್ಥಿತಿ ….. ಬದುಕು ಆ ಕ್ಷಣಕ್ಕೆ ಅತೀ ಜಟಿಲವೆನ್ನಿಸಿಬಿಟ್ಟಿತು.

ದೇಶಗಳ ನಡುವಣ ಈಕ್ವೇಷನ್ ಬದಲಾಗುತ್ತಲೇ ಇರುವಾಗ ಅಲ್ಲಿನ ಜನಜೀವನ ಕೂಡಾ ಬದಲಾಗುತ್ತಲೇ ಇರುತ್ತದೆ. ಯಾವುದೋ ದೇಶ ದಾಳ ಉರುಳಿಸುತ್ತದೆ, ಮತ್ತೆಲ್ಲೋ ಯಾವುದೋ ದೇಶ ಕಾಯಾಗುತ್ತದೆ … ಹಣ್ಣಾಗುತ್ತದೆ … ಯಾವುದೋ ದೇಶ ಮತ್ಯಾವ ದೇಶದೊಡನೆಯೋ ಕೈ ಜೋಡಿಸುತ್ತದೆ, ಕೈ ಬಿಡುತ್ತದೆ … ಇದೆಲ್ಲದರ ನಡುವೆ ಸ್ಥಳೀಯರ ಮನಃಸ್ಥಿತಿ … ? ಯೋಚಿಸುತ್ತಾ ಮೌನದಲ್ಲಿ ರಸ್ತೆಯನ್ನೂ, ಆಗಾಗ ಎದುರಾಗುತ್ತಿದ್ದ ಕಂದು ಬಣ್ಣದ ಸೈನ್ ಬೋರ್ಡ್‌ಗಳನ್ನು ಓದುತ್ತಾ ಕುಳಿತೆ. ರಸ್ತೆಯುದ್ದಕ್ಕೂ ಬರಡು ಮರುಭೂಮಿಯ ಮಧ್ಯೆ ಮಧ್ಯೆ ಓಯಸಿಸ್ ಇರುವೆಡೆ ಕಟ್ಟಿಕೊಂಡ ಪುಟ್ಟಪುಟ್ಟ ಊರುಗಳು ಎದುರಾಗುತ್ತಿದ್ದವು. ಯಾವ ಊರೂ ಸಹ ಬೆಳೆದ ಊರಲ್ಲ. ಅಲ್ಲಿ ಇಲ್ಲಿ ವಿರಳವಾಗಿದ್ದ ಮನೆಗಳಷ್ಟೇ. ಜನಸಂಖ್ಯೆಯೂ ಹೆಚ್ಚು ಇರುವಂತ ಊರಲ್ಲ. ಕುರಿಗಳ ಗುಂಪನ್ನು ಹೊಡೆದುಕೊಂಡು ಹೋಗುತ್ತಿರುವ, ಬೆಳೆದ ತರಕಾರಿ-ಹಣ್ಣುಗಳನ್ನು ರಸ್ತೆ ಬದಿಯಲ್ಲಿಟ್ಟು ಪ್ರಯಾಣಿಕರ ಗಮನ ಸೆಳೆದು ವ್ಯಾಪಾರ ಮಾಡುವ ಸ್ಥಳೀಯರು ಆಗೀಗ ಕಾಣ ಸಿಗುತ್ತಿದ್ದರಷ್ಟೇ.

ಎರಡು ಘಂಟೆ ಪ್ರಯಾಣ ಮುಗಿಸುವುದರಲ್ಲಿ ಒಂದು ಕಡೆ ಕಾಫಿ ಬ್ರೇಕ್ ಎಂದು ನಿಲ್ಲಿಸಿದ ಯೂಸುಫ್.

ಹೊಟೇಲ್ ಹೊರಗಿನಿಂದ ನೋಡಲು ಸೆಂಟ್ರಲ್ ಜೈಲಿನ ಹಾಗೆ ಕಂಡಿತು. ಒಳಗೆ ತುಂಬ ವಿಶಾಲವಾಗಿತ್ತು. ಹೋಟೆಲ್ಲಿನ ಬಲಭಾಗದ ಅರ್ಧ ಪಿಂಗಾಣಿಯ ಕುಸುರಿ ವಸ್ತುಗಳು, ಮತ್ತಿತರ ಕರಕುಶಲ ವಸ್ತುಗಳಿಂದ ತುಂಬಿ ಹೋಗಿತ್ತು. ಕಾಫಿ ಬರುವುದರಲ್ಲಿ ಆ ಅಂಗಡಿಯಲ್ಲಿ ಕಣ್ಣು ಹಾಯಿಸಿ ಬರೋಣ ಎಂದು ಹೋದವಳಿಗೆ ಮುಂದಿನ ಮೂರು ನಿಮಿಷದಲ್ಲೇ ಇದು ಪ್ರವಾಸಿಗರಿಗೆ ಟೋಪಿ ಹಾಕಲೆಂದೇ ಇಟ್ಟಿರುವ ಅಂಗಡಿ ಎಂದು ಅರ್ಥವಾಗಿಹೋಗಿತ್ತು!

ಒಂದು ಕಣ್ಣಲ್ಲಿ ಅಳುತ್ತಾ ಡಾಲರಿಗೆ ಹೆಚ್ಚುಕಡಿಮೆ ಎಪ್ಪತ್ತು ರೂಪಾಯಿ ತೆತ್ತುಹೋದ ಭಾರತೀಯರಿಗೆ ಅಲ್ಲಿನ ವಾಸ್ತು ಆಗಿಬರುವುದಿಲ್ಲ ಎಂದು ಮನದಟ್ಟಾಗುತ್ತಲೇ ವಾಪಸ್ ಆದೆ. ಅಷ್ಟರಲ್ಲಿ ಕಿರುಬೆರಳುದ್ದದ ಪೇಪರ್ ಕಪ್‌ ಕಾಫಿ ಸಿದ್ಧವಾಗಿತ್ತು. ಅದಕ್ಕೆ ನಾಲ್ಕು ಡಾಲರ್ ಅಂತೆ! ಕುಡಿದು ವಾಷ್ ರೂಮಿಗೆ ಹೋದೆ. ಸಾಕಷ್ಟು ಕ್ಲೀನ್ ಆಗಿದ್ದ ಟಾಯ್ಲೆಟ್ಟಿನಲ್ಲಿ ಕೆಲಸ ಮುಗಿಸಿ ಹೊರಬರುವುದರಲ್ಲಿ ಅಲ್ಲಿದ್ದ ಅಂಗಡಿಯಲ್ಲಿ ಸೇಲ್ಸ್‌ಮನ್ ಆಗಿದ್ದವನೊಬ್ಬ ಟಾಯ್ಲೆಟ್ ದುಡ್ಡು ಪೀಕಿಸುವ ಏಜೆಂಟನಾಗಿ ಪರಿವರ್ತಿತನಾಗಿದ್ದ! ರಟ್ಟಿನ ಡಬ್ಬದಲ್ಲಿನ ಚಿಲ್ಲರೆ ತುಂಬಿಟ್ಟುಕೊಂಡು, ಎಲ್ಲರೂ ದುಡ್ಡು ಕೊಟ್ಟೇ ಉಚ್ಚೆ ಹೊಯ್ಯುತ್ತಾರೆ ಅಂತ ನಮ್ಮ ಮನಸ್ಸಿನಲ್ಲಿ ಸಾಕಷ್ಟು ಗಿಲ್ಟ್ ಮೂಡಿಸುವಲ್ಲಿ ಆತ ಯಶಸ್ವಿಯಾಗಿದ್ದ.

ಹೋಟೆಲ್ಲಿನ ಒಳಗಿನ ಟಾಯ್ಲೆಟ್ಟಿಗೂ ಹಣ ಪೀಕಿಸಬಹುದು ಅನ್ನುವ ಕಲ್ಪನೆಯಿಲ್ಲದ ನಾನು ಖಾಲಿ ಕೈನಲ್ಲಿ ಹೋಗಿದ್ದೆ. ಅವನು ತನ್ನ ಭಾಷೆಯಲ್ಲಿ ಏನೋ ಹೇಳಿ ಡಬ್ಬ ತೋರಿಸಿದ. ನಾನು ‘ಇರು ಹಣ ತರ್ತೀನಿ’ ಎಂದವಳೇ ರೆಸ್ಟೊರೆಂಟ್‌ನ ಜಾಗಕ್ಕೆ ಬಂದರೆ ಅಲ್ಲಿದ್ದ ನನ್ನ ಗಂಡ ಜಾಗ ಖಾಲಿ ಮಾಡಿಯಾಗಿತ್ತು. ಅಯ್ಯೋ ರಾಮನೇ, ಇದೊಳ್ಳೆ ಕಥೆಯಾಯಿತಲ್ಲ! ಈತ ಇನ್ನು ಜಗಳ ಮಾಡುತ್ತಾನೇನೋ ಎಂದು ಗಾಬರಿಗೊಳ್ಳುತ್ತಾ ‘ಇರು ಐದು ನಿಮಿಷ’ ಎಂದು ಸನ್ನೆ ಮಾಡಿ ಬಾಗಿಲಿನತ್ತ ಓಡಿದೆ.

ನನ್ನ ಗಂಡ ಆಗಲೇ ವ್ಯಾನ್ ಹತ್ತಲು ಸಿದ್ಧವಾಗಿದ್ದ. ಅವನ ಹತ್ತಿರ ‘ಟಾಯ್ಲೆಟ್ಟಿಗೆ ಹಣ ಕೊಡಬೇಕಂತೆ’ ಅಂದರೆ ಇವನು ನಿಸೂರಾಗಿ ‘ಹೋಗೇ ಅವ್ರದ್ದೇ ಅಂಗಡಿ, ಹೋಟೆಲ್ಲು, ಟಾಯ್ಲೆಟ್ ಎಲ್ಲ. ಕಾಫಿ ಕುಡಿದಿದ್ದಲ್ಲದೇ ಅನ್‌ಲೋಡಿಂಗ್‌ಗೂ ಕೊಡಬೇಕಂತಾ. ನಾ ಕೊಡಲ್ಲ’ ಅಂತ ಘೋಷಿಸಿಬಿಟ್ಟ. ನಾನು ‘ಅಯ್ಯೋ ಏನು ಗತಿ’ ಅನ್ನುತ್ತ ಹಿಂತಿರುಗಿ ನೋಡಿದರೆ ಒಳಗಿನಿಂದ ಆ ಮನುಷ್ಯ ಕೆಕ್ಕರಿಸಿ ನೋಡುತ್ತಲೇ ಇದ್ದಾನೆ! ಅಟ್ಟಿಸಿಕೊಂಡು ಬಂದು ಮಾನ ತೆಗೆಯುತ್ತಾನೇನೋ ಅಂತ ಅವಮಾನಗೊಂಡು ಹಿಂದಿಂದೆ ತಿರುಗಿ ನೋಡುವುದು ಮತ್ತು ಆ ಮನುಷ್ಯ ಕೂತಲ್ಲಿಂದಲೇ ಕತ್ತು ಉದ್ದಕ್ಕೆ ಮಾಡಿ ನನ್ನನ್ನೇ ನೋಡುವುದು …  ‘ಆಯಪ್ಪ ನೋಡ್ತಿದೆ. ಹಾಳಾಗೋಗ್ಲಿ ಕೊಡು ಅತ್ಲಾಗೆ’ ಅಂದರೆ ಇವನು ಕೊಡಲೊಲ್ಲ ಭಂಡ.

ಏನೇನೋ ಕದ್ದು ಬಚಾವಾಗುವ ಈ ಕಾಲದಲ್ಲಿ, ಉಚ್ಚೆ ಹೊಯ್ದದ್ದಕ್ಕೆ ಹೆದರಿದ್ದಾಯ್ತು! ಆಮೇಲೆ ‘ಬಹುಶಃ ನಿಜಕ್ಕೂ ದುಡ್ಡು ಕೊಡಬೇಕಾಗಿದ್ದಿದ್ದರೆ ಅವನು ವಸೂಲು ಮಾಡಿರುತ್ತಿದ್ದ. ಸುಮ್ನೆ ಎದ್ದೋಗೋ ಮಾತು ಬಿದ್ದೋಗ್ಲಿ ಅನ್ನೋ ಥರ ಒಂದು ಡಬ್ಬ ಇಟ್ಕೊಂಡು ಟೇಬಲ್ ಕೆಳಗಿನ ಮಾಮೂಲಿನಂತೆ ವಸೂಲಿ ಮಾಡುತ್ತಿದ್ದನೇನೋ’ ಅಂತ ಸಮಾಧಾನ ಮಾಡಿಕೊಂಡೆ. ಆದರೂ ನಮ್ಮ ವ್ಯಾನ್ ಹೊರಡುವವರೆಗೂ ಕಣ್ಣು ಬಾಗಿಲಿನತ್ತಲೇ ನೆಟ್ಟಿತ್ತು. ಸಧ್ಯ ಅವನು ಬರಲಿಲ್ಲ!

। ಇನ್ನು ನಾಳೆಗೆ ।

‍ಲೇಖಕರು avadhi

17 August, 2017

11 Comments

    • ಭಾರತಿ ಬಿ ವಿ

      ಥ್ಯಾಂಕ್ ಯೂ 🙂

  1. Malati Mudakavi

    ಅಗದೀ ಛಂದ ದ ನಿರೂಪಣೆ.,. ಉಸಿರು ಬಿಗಿ ಹಿಡಿದು ಓದಿದೆ. ನಾಳೆಗೆ ಓದಲು ಸಿದ್ಧಳಾಗಿದ್ದೇನೆ.,

    • ಭಾರತಿ ಬಿ ವಿ

      ಥ್ಯಾಂಕ್ಸ್ ಮ್ಯಾಡಮ್ … ಖುಷಿಯಾಯ್ತು

  2. Vijaykumar wadawadagi

    ತುಂಬ ಚೆಂದ ಬರ್ತಾ ಇದೆ ಪ್ರತಿದಿನ ಕಾಯುತಿರುವೆ ಓದಲು ನಮಗೂ ಜೋರ್ಡಾನ್ ಪ್ರವಾಸದ ಹುಚ್ಚು ಹಿಡಿತೀದೆ…

    • ಭಾರತಿ ಬಿ ವಿ

      ಥ್ಯಾಂಕ್ಸ್ ಸರ್

  3. Padmasri

    Vodtha vodtha nanne kaledhu KOndey

    • ಭಾರತಿ ಬಿ ವಿ

      ಥ್ಯಾಂಕ್ಸ್ ಪದ್ಮಶ್ರೀ

  4. Renuka

    ಅಡಿಯಿಂದ ಮುಡಿವರೆಗೆ ಚಂದ

    • ಭಾರತಿ ಬಿ ವಿ

      ಥ್ಯಾಂಕ್ ಯೂ 🙂

  5. ಹೇಮಾ ಸದಾನಂದ ಅಮೀನ್ ( ಸಚಿ)

    ಪ್ರವಾಸ ಕಥನ ಓದುವ ಹುಚ್ಚು ನನಗೆ ಸರಿಯಾದ ಔಷದಕೊಟ್ಟಿದೀರಿ ಗೆಳತಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading