’ಕಾಪಿ ನ? ಮರ್……..ತೇ ಬಿಟ್ಟೆ!’ – ಈರಣ್ಣನ ನೆನಪಿನಲ್ಲಿ ಗೋಪಾಲ ವಾಜಪೇಯಿ

ಎ ಎಸ್ ಮೂರ್ತಿಯವರ ವ್ಯಕ್ತಿತ್ವವನ್ನು ನಮ್ಮ ನಡುವಿನ ಮತ್ತೊಬ್ಬರು ರಂಗಭೂಮಿ ಸಾಧಕರಾದ ಗೋಪಾಲ ವಾಜಪೇಯಿ ಅವರು ಅವಧಿ ಗಾಗಿ ಕಟ್ಟಿಕೊಟ್ಟಿದ್ದು ಹೀಗೆ :

– ಗೋಪಾಲ ವಾಜಪೇಯಿ

ನಿಷ್ಕ್ರಮಣಗೈದ ನಾಟಕಕಾರ…

ಹಿರಿಯ ನಾಟಕಕಾರ, ರಂಗ ಚಿಂತಕ, ಪತ್ರಕರ್ತ ಎ. ಎಸ್. ಮೂರ್ತಿ ಬದುಕಿನ ರಂಗದಿಂದ ನಿಷ್ಕ್ರಮಣಗೈದಿದ್ದಾರೆ… ಒಂದು ಸುದೀರ್ಘ ಪಾತ್ರವನ್ನು ಆಡಿ ಮುಗಿಸಿ ವಿಶ್ರಮಿಸಿದ್ದಾರೆ. ಹೌದು, ಒಂದು ಸುದೀರ್ಘ ಪಾತ್ರ…

ತಮ್ಮ ವಿಶಿಷ್ಟ ದನಿಯಿಂದಾಗಿ, ತಮ್ಮ ವಿಚಿತ್ರ ದಿರಿಸುಗಳಿಂದಾಗಿ, ತಮ್ಮ ವಿಭಿನ್ನ ಶೈಲಿಯ ಬರವಣಿಗೆಯಿಂದಾಗಿ ಎ. ಎಸ್. ಮೂರ್ತಿಯವರು ಹೆಸರು ಮಾಡಿದವರು.

ನೆನಪು ನಲವತ್ತು ವರ್ಷಗಳ ಹಿಂದೆ ಓಡುತ್ತದೆ…

ತಮ್ಮ ತಂದೆ ಅ.ನ. ಸುಬ್ಬರಾಯರು ಮತ್ತು ಮಡದಿ, ಮಕ್ಕಳೊಂದಿಗೆ ಎ.ಎಸ್. ಮೂರ್ತಿ.

ಆಗೆಲ್ಲ ನಮಗೆ ಆಕಾಶವಾಣಿಯೇ ಮನರಂಜಕ ಮಿತ್ರ, ಜ್ಞಾನದಾನಿ ಗುರು ಮತ್ತು ಮಾರ್ಗದರ್ಶಕ… ಅಲ್ಲಿಯ ‘ದನಿ’ಗಳೆಲ್ಲ ನಮ್ಮನ್ನು ಬಹುವಾಗಿ ಕಾಡುತ್ತಿದ್ದ ಕಾಲ ಅದು. ಆ ದನಿಗಳ ಒಡೆಯರ ಮುಖಗಳನ್ನು ನೋಡುವ ಕುತೂಹಲ ಹೆಚ್ಚುತ್ತಲೇ ಇರುತ್ತಿತ್ತು. ನಾನಿನ್ನೂ ಆಗ ಪತ್ರಿಕೋದ್ಯಮದ ಹೊಸ್ತಿಲಲ್ಲಿ ನಿಂತ ಎಳೆಯ. 1970ರಲ್ಲೊಮ್ಮೆ ಬೆಂಗಳೂರಿನ ‘ಸಂಯುಕ್ತ ಕರ್ನಾಟಕ’ ಪತ್ರಿಕಾಲಯದೊಳಗೆ ಕಾಲಿರಿಸುತ್ತಿದ್ದಂತೆಯೇ ಒಂದು ಫಟಫಟಿ (=ಮೋಟರ್ ಬೈಕ್. ಅದು ‘ರಾಜ್ ದೂತ್’ ಅಥವಾ ‘ಯೆಜ್ಡಿ’ ಇರಬಹುದು…) ರೆಸಿಡೆನ್ಸಿ ರಸ್ತೆಯ ಇನ್ನೊಂದು ತುದಿಯಿಂದ ಅಬ್ಬರಿಸುತ್ತ ಬಂದು ನನಗಿಂತ ಮುಂದೆ ಹೋಗಿ ಪತ್ರಿಕಾಲಯದ ಆವರಣದಲ್ಲಿ ನಿಂತಿತು. ಅದರ ಹೊಗೆ ಮತ್ತು ಅದನ್ನೇರಿ ಬಂದ ವ್ಯಕ್ತಿಯ ಬಾಯಿಂದ ಹೊರಬಿದ್ದ ಹೊಗೆಗಳೆರಡೂ ಬಂದು ನನ್ನ ಮೂಗನ್ನಡರಿದವು. ಆ ಮಹಾಶಯ ಬೈಕಿನ ಸ್ಟ್ಯಾಂಡ್ ಹಾಕಿ ನಿಲ್ಲಿಸುತ್ತಿದ್ದಂತೆಯೇ ”ಓ… ಬರಬೇಕು ಎ. ಎಸ್. ಮೂರ್ತಿ ಸಾಹೇಬರು… ಆಕಾಶವಾಣಿ ಈರಣ್ಣನವರು…” ಅಂತ ಒಬ್ಬ ಹಿರಿಯರು ಕೈಕುಲುಕಿದರು.

ಎ ಎಸ್ ಮೂರ್ತಿ ದಂಪತಿ

ಆಗ ನೋಡಿದ ಆ ಮುಖ ಮತ್ತು ಆ ನಗುವನ್ನು ಇನ್ನಷ್ಟು ಹತ್ತಿರದಿಂದ ನೋಡಲು ಸಾಧ್ಯವಾದದ್ದು ನನ್ನ ಸೋದರಮಾವ ಜಿ. ಎಂ. ಸದರಜೋಶಿಯವರೊಂದಿಗೆ ಬೆಂಗಳೂರಿನ ಆಕಾಶವಾಣಿ ನಿಲಯಕ್ಕೆ ಹೋದಾಗ. ನನ್ನ ಸೋದರಮಾವ ಆಕಾಶವಾಣಿ ನಾಟಕಗಳ ಕಲಾವಿದ ಮತ್ತು ಅನೇಕ ಬಾನುಲಿ ನಾಟಕಗಳನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದವರು. ಅದೊಂದು ಬಾನುಲಿ ನಾಟಕದ ತಾಲೀಮು. ಆಗ ಮೂರ್ತಿಯವರೂ ಅಲ್ಲಿ ಕೂತಿದ್ದರು. ಅದಷ್ಟೇ ಅವರು ಪ್ರೇಂ ದಿನಕರ್ ಎಂಬ ಒಬ್ಬ ಕಲಾವಿದನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರೆಂದು ತೋರುತ್ತದೆ.

ಹೀಗೆ ಶುರುವಾದ ಅವರ ಬಗೆಗಿನ ಅಭಿಮಾನ ಇನ್ನಷ್ಟು ಹೆಚ್ಚಾದದ್ದು 1974ರ ಸುಮಾರಿಗೆ. ಆಗ ನಾನು ಹುಬ್ಬಳ್ಳಿಯಲ್ಲಿ ಅವರ ‘ಹುಚ್ಹ’ ಎಂಬ ಏಕಾಂಕ ನಾಟಕವನ್ನು ನಿರ್ದೇಶಿಸಿ, ಮುಖ್ಯ ಪಾತ್ರ ವಹಿಸಿದ್ದೆ. ‘ಹುಚ್ಹ’ ನಾಟಕದ ಹತ್ತಾರು ಪ್ರಯೋಗಗಳಾದವು. ಹಿರಿಯ ನಾಟಕಕಾರ ಆರ್. ಡಿ. ಕಾಮತರು ಆ ನಾಟಕದ ಅಭಿನಯವನ್ನು ನೋಡಿ ನನ್ನನ್ನು ಹತ್ತಿರದವನನ್ನಾಗಿ ಮಾಡಿಕೊಂಡರು.

ಮೂರ್ತಿಯವರು ಒಬ್ಬ ನಾಟಕಕಾರ ಹೇಗೋ ಹಾಗೆಯೇ ಒಬ್ಬ ಬಂಡಾಯಗಾರನೂ ಹೌದು. ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಧಿಕ್ಕಾರರೂಪದಲ್ಲಿ ಆಕಾಶವಾಣಿಯ ಕೆಲಸವನ್ನು ಬಿಟ್ಟು ಬಂದ ಖಂಡಿತವಾದಿ ಅವರು. ಆಮೇಲಾಮೇಲೆ ಬೀದಿ ನಾಟಕದ ಮೂಲಕ ಜನಜಾಗೃತಿಯ ಕೆಲಸಕ್ಕೆ ನಿಂತ ಅವರು ನಾಡೆಲ್ಲ ಸುತ್ತಿದರು. ತಮ್ಮ ತಂದೆ ಅ.ನ. ಸುಬ್ಬರಾಯರು ಆರಂಭಿಸಿದ ‘ಕಲಾಮಂದಿರ’ದ ಕರ್ಣಧಾರತ್ವವನ್ನು ವಹಿಸಿಕೊಂಡು, ಅಲ್ಲಿ ಚಿತ್ರಕಲೆಯ ಜೊತೆಗೆ ಅಭಿನಯ ಕಲೆಯನ್ನೂ ಕಲಿಸಿಕೊಡುವ ಕಾಯಕ ಮುಂದುವರಿಸಿದರು.

ಮೂರ್ತಿ ಛಲದಂಕಮಲ್ಲ. ಅಂದುಕೊಂಡದ್ದನ್ನು ಆಗುಮಾಡದೆ ಬಿಡುತ್ತಿರಲಿಲ್ಲ. ಅದಕ್ಕೆ ಅವರು ಅನುಸರಿಸುತ್ತಿದ್ದ ಮಾರ್ಗಗಳು ಇತರರಿಗೆ ಇಷ್ಟವಾಗಿರದೆ ಇರಲಿಕ್ಕೂ ಸಾಕು. ಆದರೆ ಅಂಥದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಸಂಕಲ್ಪಿದ್ದನ್ನು ಸಾಧಿಸಿ ತೋರುವಲ್ಲಿ ಮೂರ್ತಿ ಎತ್ತಿದ ಕೈ. ಹಾಗಾಗದೆ ಇದ್ದಾರೆ ಕಲಾಮಂದಿರ ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ.

ಮೂರ್ತಿಯವರ ಇನ್ನೊಂದು ಕೊಡುಗೆ ಸೂತ್ರದ ಬೊಂಬೆ ಆಟವನ್ನು ಪುನರುಜ್ಜೀವನಗೊಳಿಸಿದ್ದು. ಬೆಂಗಳೂರಿನಂತಹ ಊರಿನಲ್ಲಿ, ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ರಂಗಭೂಮಿ ಮತ್ತು ಸೂತ್ರದ ಗೊಂಬೆ ಎರಡನ್ನೂ ಸಮೀಕರಿಸಿ ಅದನ್ನು ಜನಪ್ರಿಯಗೊಳಿಸಿದ್ದು ಇವರೇ.

ನಾನು ನಾಟಕಗಳನ್ನು ಬರೆಯತೊಡಗಿದ ಮೇಲೆ ಎ. ಎಸ್. ಮೂರ್ತಿಯವರನ್ನು ಭೇಟಿಯಾಗುವ ಅನೇಕ ಸಂದರ್ಭಗಳು ನನಗೆ ಒದಗಿಬಂದವು. ನನ್ನ ‘ದೊಡ್ಡಪ್ಪ’ ನಾಟಕವನ್ನು ಬಹುವಾಗಿ ಮೆಚ್ಚಿಕೊಂಡವರು ಮೂರ್ತಿ. ನಾನು ಶಂಕರ್ ನಾಗ್ ನಿರ್ದೇಶನದ ‘ನಾಗಮಂಡಲ’ ನಾಟಕ ಪ್ರಯೋಗಕ್ಕೆ ಹಾಡುಗಳನ್ನು ಬರೆದಾಗ ಅವರು ಬೆನ್ನು ತಟ್ಟಿದರಲ್ಲ… ಆ ಬೆನ್ನು ಚಪ್ಪರಿಸುವಿಕೆಯ ಹಿಂದಿದ್ದ ಆತ್ಮೀಯತೆಯನ್ನು ನಾನೀಗಲೂ ಮರೆತಿಲ್ಲ. ಹಾಗೆಯೇ ‘ನಾಗಮಂಡಲ,’ ಭೂಮಿಗೀತ’ ಚಿತ್ರಗಳ ನನ್ನ ಗೀತೆಗಳನ್ನು ತುಂಬಾ ಇಷ್ಟಪಟ್ಟು, ”ಮುಂಡೆಗಂಡ ಎಷ್ಟ್ ಚೆನ್ನಾಗಿ ಬರದಿದಾನೆ,” ಎಂದು ಬೇರೊಬ್ಬರೆದುರು ಹೇಳುತ್ತಿದ್ದುದು ಕಿವಿಗೆ ಬಿದ್ದಾಗ ಆದ ಆನಂದವನ್ನು ವರ್ಣಿಸುವುದು ಅಸಾಧ್ಯ.

ಹೈದರಾಬಾದಿನ ಹನ್ನೊಂದು ವರ್ಷಗಳ ದೀರ್ಘ ವಾಸದ ನಂತರ, 2011ರ ಫೆಬ್ರವರಿಯಲ್ಲಿ ಬೆಂಗಳೂರಿಗೆ ಬಂದು ನೆಲೆಸತೊಡಗಿದ ಮೇಲೆ ನಾನು ಮಾಡಿದ ಮೊದಲ ಕೆಲಸವೆಂದರೆ ಎ. ಎಸ್. ಮೂರ್ತಿಯವರನ್ನು ಭೆಟ್ಟಿಯಾದದ್ದು. ಆ ನಂತರ ಕಲಾಮಂದಿರದ ಸಂಬಂಧ ನಿರಂತರವಾಯಿತು.

ನಾನು ಹೋದಾಗಲೆಲ್ಲ ಮೂರ್ತಿಯವರು ಏನಾದರೊಂದು ಬರವಣಿಗೆಯಲ್ಲಿ ತೊಡಗಿರಬೇಕು, ಇಲ್ಲವೇ ಯಾವುದೋ ಪುಸ್ತಕವನ್ನು ಓದುತ್ತಿರಬೇಕು ಅಥವಾ ನಾಟಕದ ತಾಲೀಮು ವೀಕ್ಷಿಸುತ್ತಿರಬೇಕು… ಹೀಗೆ ತಮ್ಮನ್ನು ತಾವು ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದುದು ಮೂರ್ತಿಗಳ ವೈಶಿಷ್ಟ್ಯ.

ಕವಿಮನ’ ಕಾರ್ಯಕ್ರಮದಲ್ಲಿ…

ಕವಿಗಳನ್ನು ಆಹ್ವಾನಿಸಿ ‘ಕವಿಮನ’ ಎಂಬ ಕಾರ್ಯಕ್ರಮದ ಮೂಲಕ ಕಾವ್ಯವಾಚನ ಏರ್ಪಡಿಸುವ ಕಲಾಮಂದಿರದ ಇನ್ನೊಂದು ಮಹತ್ತರ ಕಾರ್ಯಕ್ರಮ. ಈ ಪರಿಕಲ್ಪನೆಯ ಹಿಂದೆ ಖಂಡಿತವಾಗಿ ಮೂರ್ತಿಗಳ ಕಾವ್ಯಪ್ರೇಮ ಕೆಲಸ ಮಾಡಿದೆ ಎಂಬುದು ನನ್ನ ಬಲವಾದ ನಂಬಿಕೆ. ‘ಕವಿಮನ’ ಕಾರ್ಯಕ್ರಮದಲ್ಲಿ ಮೂರ್ತಿಯವರು ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದರು. ತಾವೂ ಒಂದು ಕವನ ವಾಚನ ಮಾಡುತ್ತಿದ್ದರು. ಮೊನ್ನೆ ಮೊನ್ನೆ 2012ರ ಮಾರ್ಚ್ ತಿಂಗಳಲ್ಲಿ ‘ಕವಿಮನ’ದಲ್ಲಿ ಎ. ಎಸ್. ಮೂರ್ತಿಗಳೆದುರು ‘ಕನ್ನಡ ಗೀತಾಂಜಲಿ’ಯ ಕವನಗಳನ್ನು ಓದಿ, ಚರ್ಚಿಸುವ ಸುವರ್ಣಾವಕಾಶ ನನ್ನದಾಯಿತು. 2012ರ ಜೂನ್ ತಿಂಗಳಲ್ಲಿ ‘ಅಭಿನಯತರಂಗ’ದ ವಿದ್ಯಾರ್ಥಿಗಳು ನಾನು ರೂಪಾಂತರಿಸಿದ ‘ತಾಮ್ರಪತ್ರ’ ನಾಟಕವನ್ನು ಪ್ರಯೋಗಿಸಿದರು. ಆಗ ಈ ಹಿರಿಯ ನಾಟಕಕಾರನ ಜೊತೆ ಕೂತು ನಾಟಕವನ್ನು ನೋಡುವ ಸೌಭಾಗ್ಯ ನನಗೆ ಪ್ರಾಪ್ತವಾಗಿತ್ತು.

ಮೂರ್ತಿಯವರದು ದೊಡ್ಡ ಕುಟುಂಬ. ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಹೀಗೆ ಎಲ್ಲರೂ ಒಂದಿಲ್ಲೊಂದು ಕಲಾಪ್ರಕಾರದಲ್ಲಿ ಹೆಸರು ಮಾಡಿದವರೇ. ಅಷ್ಟೇ ಅಲ್ಲ,

ಇಂದು ಕನ್ನಡದ ರಂಗಭೂಮಿ, ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟರಾಗಿ, ನಿರ್ದೇಶಕರಾಗಿ ಹೆಸರು ಮಾಡಿದವರಲ್ಲಿ ಬಹುತೇಕರು ಕಲಾಮಂದಿರದ ಅಂಗಳದಲ್ಲಿ ಆಡಿ, ಮೂರ್ತಿಯವರ ಆಶೀರ್ವಾದ ಪಡೆದವರೇ.

ಹನುಮಂತನಗರದ ನಾಲ್ಕನೆಯ ಮುಖ್ಯರಸ್ತೆ ಎ. ಎಸ್. ಮೂರ್ತಿಯವರಿಂದಾಗಿ ಚಟುವಟಿಕೆಯಿಂದ ಕೂಡಿತ್ತು. ನಾನು ಮತ್ತೆ ಮತ್ತೆ ಅಲ್ಲಿಗೆ ಹೋಗುತ್ತಿದ್ದುದು ಆ ಅನುಭವ ಮೂರ್ತಿಯ ದರ್ಶನಕ್ಕಾಗಿಯೇ. ಮೂರ್ತಿಯವರು ತಮ್ಮ ಇಲ್ಲಿಯ ಕೆಲಸ ಮುಗಿಯಿತು ಎಂಬಂತೆ ಇಂದು ಬೆಳಿಗ್ಗೆ ಬೆಳಿಗ್ಗೆಯೇ ಎದ್ದು ಹೋಗಿದ್ದಾರೆ.

ಇನ್ನು ಆ ರಸ್ತೆಗೆ ಹೋದರೆ ನಮಗಾಗುವುದು ಆ ಚೇತನದ ಅನುಭವ ಮಾತ್ರ…

‍ಲೇಖಕರು G

December 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಡಿ ಎಸ್ ರಾಮಸ್ವಾಮಿ

    ಮೂರ್ತಿಯವರು ಆಕಾಶವಾಣಿ ಈರಣ್ಣನ ಮೂಲಕ ತಮಗನಿಸಿದ್ದನ್ನು ನಿರ್ಭಢೆಯಿಂದ ಹೇಳಿದ್ದಲ್ಲದೇ ಪಟ್ಟಭದ್ರಹಿತಾಸಕ್ತಿಗಳ ಕೆಂಗಣ್ಗೆ ಗುರಿಯಾಗಿಯೇ ತಮ್ಮ ಹುದ್ದೆಯನ್ನು ಕಳೆದುಕೊಂಡರೂ, ನ್ಯಾಯಾಲಯದಲ್ಲಿ ಜಯಗಳಿಸಿ ಅದೂ ನಿವೃತ್ತಿಯ ನಂತರ ಪಿಂಚಣಿ ಇತ್ಯಾದಿ ಪಡೆದರೆಂದು ಓದಿದ ನೆನಪು.
    ಅಂಥ ಮಹಾಚೇತನಕ್ಕೆ ತಕ್ಕುದಾದ ಅಬಿಚುಯರಿ

    ಪ್ರತಿಕ್ರಿಯೆ
  2. ಪಂಡಿತಾರಾಧ್ಯ ಮೈಸೂರು

    ಆಕಾಶವಾಣಿಯಲ್ಲಿ ಮನೆಮಾತಿನ ಈರಣ್ಣನ ಮಾತು ಕೇಳುವಾಗ ಕೊನೆಯಲ್ಲಿ ಅಮ್ಮೋರು ಈರಣ್ಣನಿಗೆ ಕಾಪಿ ಕೊಡದೆ ಕಳಿಸದಿರುವುದನ್ನು ಕೇಳಿದಾಗಲೆಲ್ಲ,
    ಆಕಾಶವಾಣಿಯರು ಕಾರ್ಯಕ್ರಮದ ಕೊನೆಯಲ್ಲಿ ನಿಜವಾಗಿಯೂ ಈರಣ್ಗನಿಗೆ ಕಾಪಿ ಕೊಡುತ್ತಿದ್ದಿರಬಹುದು; ಇಲ್ಲದಿದ್ದರೆ ಕೊಡಬೇಕು ಎಂದು ಹಾರೈಸುತ್ತಿದ್ದವರಲ್ಲಿ ನಾನೂ ಒಬ್ಬ.
    ದೀರ್ಘಕಾಲದ ರಂಗಭೂಮಿ,ಆಕಾಶವಾಣಿ,ಪತ್ರಿಕೆಗಳಲ್ಲಿ ದುಡಿದು ನಮ್ಮ ಅಭಿರುಚಿ ಬೆಳೆಸಿದ ಎ ಎಸ್ ಮೂರ್ತಿಯವರ ನಿಷ್ಕ್ರಮಣ ಸುದ್ದಿ ಕೇಳಿ ಮನಸ್ಸು ಭಾರವಾಯಿತು.
    ಅವರಿಗೆ ನುಡಿ ನಮನ.

    ಪ್ರತಿಕ್ರಿಯೆ
  3. Sushma

    nana karanagalinda face book hagoo avadhi nodalu sadyavagiralilla indu nodide sri vajpayeegale thumba chenngi moodi bandide nimma nenapugalu.murthy vykthithavada bagge neevu kattikottiruva lekhna photogalu nenapugalu marikalisuthide.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: