ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾನೂನು ಕಲಿಕೆಯಲ್ಲಿ ಸಾರ್ವಜನಿಕ ನೀತಿ ಶಿಕ್ಷಣದ ಅಗತ್ಯತೆ

ಪ್ರನುಷಾ ಕುಲಕರ್ಣಿ,

ಪಿ.ಎಚ್.ಡಿ. ವಿದ್ಯಾರ್ಥಿನಿ (ಸಾರ್ವಜನಿಕ ನೀತಿ), ಐಐಎಂ ಅಹಮದಾಬಾದ್

ಭಾರತದಲ್ಲಿ ಸಾವಿರಾರು ಕಾನೂನು ಮಹಾವಿದ್ಯಾಲಯಗಳಿವೆ. ನಮ್ಮ ಕರ್ನಾಟಕದಲ್ಲಿ ಮಾತ್ರವೇ ನೂರಕ್ಕೂ ಹೆಚ್ಚು ಕಾನೂನು ಮಹಾವಿದ್ಯಾಲಯಗಳಿವೆ. ಈ ನಿಯತಕಾಲಿಕೆ ಓದುವವರಲ್ಲಿ ನಿಮ್ಮಂತಹ ಬಹುತೇಕ ಜನ ಈ ಮಹಾವಿದ್ಯಾಲಯಗಳಲ್ಲೇ ಅಧ್ಯಯನ ಮಾಡಿದ್ದವರಾಗಿದ್ದೀರಿ, ಅಥವಾ ಇನ್ನೂ ಕಾನೂನು ವ್ಯಾಸಂಗ ಮಾಡುತ್ತಿರುವವರಾಗಿದ್ದೀರಿ. ನಿಮ್ಮೆಲ್ಲರಿಗೂ ನಾನು ಕೇಳುವ ಪ್ರಶ್ನೆ: ನಿಮ್ಮಲ್ಲಿ ಎಷ್ಟು ಜನರಿಗೆ ಸಾರ್ವಜನಿಕ ನೀತಿಯ ಬಗ್ಗೆ ಆಳವಾದ ತಿಳುವಳಿಕೆ ಇದೆ?

“ಸಾರ್ವಜನಿಕ ನೀತಿ” ಎಂಬ ಪದಸಮುಚ್ಚಯವನ್ನು ನಾವು ಕಾನೂನು ಮಹಾವಿದ್ಯಾಲಯಗಳಲ್ಲಿ ಬಹಳಷ್ಟು ಬಾರಿ, ಆ ಪದದ ಹಿನ್ನೆಲೆಯ ಅರಿವಿಲ್ಲದೆ, ಉಪಯೋಗಿಸುತ್ತೇವೆ ಎಂದು ನೀವು ಗಮನಿಸಿರಬಹುದು. ಆದರೆ, ಈ  ಪದಸಮುಚ್ಛಯದ ತಿರುಳು ಎಷ್ಟು ಕಾನೂನು ಪದವೀಧರರಿಗೆ ತಿಳಿದಿದೆ?

ನನ್ನ ಅನುಭವದ ಪ್ರಕಾರ, ಬಹುಪಾಲು ಕಾನೂನು ವಿದ್ಯಾರ್ಥಿಗಳು ಹಾಗು ವಕೀಲರ ಬಳಿ ಸಾರ್ವಜನಿಕ ನೀತಿಯ ಬಗ್ಗೆ, ಸಾರ್ವಜನಿಕ ನೀತಿ ಶಿಕ್ಷಣ ಹಾಗು ವೃತ್ತಿ ಅವಕಾಶಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನನ್ನ ಕಾನೂನು ಕಲಿಕೆಯ ದಿನಗಳಲ್ಲಿ, ಹಾಗು ನಾನು ಕಾನೂನು ಅಧ್ಯಾಪಕಿಯಾಗಿದ್ದಾಗಲೂ ಸಹ   ಸಹ, “ಸಾರ್ವಜನಿಕ ನೀತಿ”ಯ ನಿಜವಾದ ಅರ್ಥ ನನಗೆ ತಿಳಿದಿರಲಿಲ್ಲ.

ಐಐಎಂ ಅಹಮದಾಬಾದ್ನಲ್ಲಿ “ಸಾರ್ವಜನಿಕ ನೀತಿ”ಯಲ್ಲಿ ಪಿ.ಎಚ್.ಡಿ. ಪದವಿ ಪಡೆಯಲು ಸೇರಿದಾಗಲೇ ನನಗೆ ಈ  ವಿಷಯದ ಕುರಿತು ಸಮಗ್ರವಾದ ಮಾಹಿತಿ ದೊರಕಿದ್ದು. ಈ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಎದ್ದ ಪ್ರಶ್ನೆ: ಭಾರತದಲ್ಲಿ ಪದವಿಪೂರ್ವ ಕಾನೂನು ಕಲಿಕೆಯ ಅಂಗವಾಗಿ ಯಾಕೆ ವಿಷಯವನ್ನು ಕಾನೂನು ವಿದ್ಯಾರ್ಥಿಗಳಿಗೆ ಕಲಿಸಲ್ಪಡುವುದಿಲ್ಲ?

ಈ ಲೇಖನದ ಮೂಲಕ, ನಾನು ಮಂಡಿಸುವ ವಾದ – ಸಾರ್ವಜನಿಕ ನೀತಿ ಶಿಕ್ಷಣ, ಕಾನೂನು ವಿದ್ಯಾರ್ಥಿಗಳಿಗೆ ಕಡ್ಡಾಯ/ಆಯ್ಕೆ ವಿಷಯವಾಗಿ ಅರ್ಪಿಸಬೇಕು. ಇದರಿಂದ, ನಮ್ಮ ದೇಶದ ವಕೀಲರ ಹಾಗು ನ್ಯಾಯಾಧೀಶರ ಸಮಗ್ರ ಕೌಶಲ್ಯ ಅಭಿವೃದ್ಧಿಯಾಗುತ್ತದೆ, ಹಾಗು, ಸಮಾಜ ಸುಧಾರಣೆಯ ನಮ್ಮ ಮಹತ್ತರ ಗುರಿಯನ್ನು ನಾವು ಕಾನೂನಿನ ಮುಖಾಂತರ ಸರಳವಾಗಿ ಮುಟ್ಟಬಹುದು. ಹೇಗೆ ಇದು ಸಾಧ್ಯ? ಬನ್ನಿ ನೋಡೋಣ. 

ಸಾರ್ವಜನಿಕ ನೀತಿ” ಎಂದರೇನು?

ಈ ಪ್ರಶ್ನೆಗೆ ಹಲವಾರು ಉತ್ತರಗಳಿವೆ. ಜಗತ್ತಿನಾದ್ಯಂತ ಈ ವಿಷಯದ ಮೇಲೆ ಬಹಳಷ್ಟು ವಿದ್ವಾಂಸರು ಸಂಶೋಧನಾ ಬರಹಗಳನ್ನು ಬರೆದಿದ್ದಾರೆ. ಇವೆಲ್ಲ ವ್ಯಾಖ್ಯಾನಗಳಲ್ಲಿ ಬ್ರೂನೋ ಡೆಂಟೆ (೨೦೧೪) ಅವರ ವಿವರಣೆ, ಸರಳವೂ, ಸಮಗ್ರವೂ ಆಗಿದೆ. ಡೆಂಟೆ ಅವರ ಪ್ರಕಾರ: “ಯಾವುದೇ ನೀತಿ ಸಮಸ್ಯೆಯನ್ನು ಪರಿಹರಿಸಲು ಮಾಡುವ ಸಾಮೂಹಿಕ ಕ್ರಿಯೆಗಳ ಗುಂಪನ್ನು ಸಾಮಾಜಿಕ ನೀತಿ ಎನ್ನಬಹುದು”.

ಈ ವ್ಯಾಖ್ಯಾನದ ಅರ್ಥವೇನು? ಜಗತ್ತಿನಾದ್ಯಂತ ಸರ್ಕಾರಗಳು ಹಲವಾರು ನೀತಿ ನಿರ್ಧಾರಗಳನ್ನು ಮಾಡುತ್ತವೆ. ಉದಾಹರಣೆಗೆ, ಕೋವಿಡ್ ಲಸಿಕೆ ನೀತಿ, ಆರೋಗ್ಯ ನೀತಿ, ಶಿಕ್ಷಣ ನೀತಿ, ಇತ್ಯಾದಿ. ಈ ನೀತಿಗಳು ಶಾಸನಗಳಾಗಿರಬಹುದು, ಕಾರ್ಯನಿರ್ವಾಹಕ ಆದೇಶಗಳಾಗಿರಬಹುದು, ನ್ಯಾಯಾಂಗ ನಿರ್ಧಾರಗಳಾಗಿರಬಹುದು, ಅಥವಾ ಕೇವಲ ನೀತಿ ಪತ್ರಗಳಾಗಿರಬಹುದು. ಇನ್ನೂ ಸರಳವಾಗಿ ಹೇಳಬೇಕೆಂದರೆ ಒಂದು ಸಾರ್ವಜನಿಕ ವಿಚಾರದಲ್ಲಿ ಒಂದು ಆಡಳಿತ ತೆಗೆದುಕೊಳ್ಳುವ ನಿಲುವನ್ನು ಸಾರ್ವಜನಿಕ ನೀತಿ ಎನ್ನಬಹುದು. ಆ ನಿಲುವುಗಳು, ಹಲವು ರೂಪಗಳಲ್ಲಿ ಅಭಿವ್ಯಕ್ತಿಯಾಗುತ್ತವೆ, ಕಾನೂನು, ನಿಯಮಗಳು, ಸುತ್ತೋಲೆಗಳು ಹೀಗೆ.

ಬರೀ ಈ ಮೇಲೆ ತಿಳಿಸಿದ ಸರ್ಕಾರೀ ನೀತಿ ಪರಿಕರಗಳು ಯಾವುದೇ ಒಂದು ನೀತಿ ಸಮಸ್ಯೆಯನ್ನು ಪರಿಹರಿಸಲು ಸಾಕಾಗುವುದಿಲ್ಲ. ಸರ್ಕಾರಕ್ಕೆ, ಹಲವಾರು ಸಮ್ಮಿಶ್ರ ಗುಂಪುಗಳ, ವಿದ್ವಾಂಸರ, ಸರ್ಕಾರೇತರ ಸಂಸ್ಥೆಗಳ, ವಿಚಾರ ವೇದಿಕಗಳ ನೆರವು, ಬೇಕಾಗುತ್ತದೆ. ಈ ಎಲ್ಲ ಮಧ್ಯಸ್ಥಗಾರರು, ನೀತಿ ಸಮಸ್ಯೆಯನ್ನು ಪರಿಹರಿಸಲು ಕೈಗೊಳ್ಳುವ ಸಾಮೂಹಿಕ ಕ್ರಿಯೆಗಳಿಗೆ, “ಸಾಮಾಜಿಕ ನೀತಿ” ಎನ್ನಬಹುದಾಗಿದೆ.

ಇಂತಹ ಸಾಮೂಹಿಕ ಕ್ರಿಯೆಗಳು ಯಾವುವು? ಅವು ಜಾಗೃತಿ ಕಾರ್ಯಕ್ರಮಗಳಾಗಿರಬಹುದು, ವ್ಯಾಜ್ಯ ಹೂಡುವುದು, ಸಂಶೋಧನೆ ಮಾಡುವುದು, ಲಾಬಿ ಮಾಡುವುದು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಅಥವಾ ಇತರೆ ರೀತಿಯ ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳನ್ನು ಸಂಘಟಿಸುವುದು ಆಗಿರಬಹುದು – ಇವೆಲ್ಲ ಸಾಮಾಜಿಕ ಕ್ರಿಯೆಗಳು  ಯಾವಾಗ ಮೇಲೆ ತಿಳಿಸಿದ ಸರ್ಕಾರೀ ಪ್ರಕ್ರಿಯೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತವೋ, ಅವಾಗ ನೀತಿ ಸಮಸ್ಯೆಗಳಿಗೆ ಪರಿಹಾರಗಳು ಖಚಿತವಾಗಿ ದೊರೆಯುತ್ತವೆ.

ಈ ಸಂಕೀರ್ಣವಾದ ನೀತಿ ರಚನೆ ಮತ್ತು ಅನುಷ್ಠಾನ ಪ್ರಕ್ರಿಯೆಯನ್ನು ತಿಳಿಯಲು, ಕೋವಿಡ್ ದುರಂತವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ದುರಂತಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಮುಂದೆ ಎದುರಾದ ಪ್ರಶ್ನೆಗಳು ಕೆಳಕಂಡಂತಿವೆ:

೧) ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಯಾವ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು? ಈ ಕ್ರಮಗಳನ್ನು ಯಾರು ಜಾರಿಗೊಳಿಸಬೇಕು? ಕೇಂದ್ರ ಸರ್ಕಾರ? ರಾಜ್ಯ ಸರ್ಕಾರ? ಜಿಲ್ಲಾಡಳಿತ? ಅಥವಾ ಸರ್ಕಾರೇತರ ಸಂಸ್ಥೆಗಳು? 

೨) ಕೋವಿಡ್ ಲಸಿಕೆಗಳನ್ನು ಎಲ್ಲಿಂದ, ಎಷ್ಟು ಮತ್ತು ಯಾರು ಕೊಂಡುಕೊಳ್ಳಬೇಕು? ಈ ಲಸಿಕೆಗಳ ಬೆಲೆ ಹೇಗೆ ನಿರ್ಧರಿಸಬೇಕು – ಮಾರುಕಟ್ಟೆ ಶಕ್ತಿಗಳು ನಿರ್ಧರಿಸುತ್ತವೆಯೇ, ಅಥವಾ, ಸರ್ಕಾರವು ಗರಿಷ್ಟ ದರ ನಿರ್ಧರಿಸುತ್ತದೆಯೇ? ಭಾರತದ ಎಲ್ಲ ಜನರಿಗೆ, ಮೇಲು-ಕೀಳೆಂಬದೇ ಉಚಿತವಾಗಿ ಲಸಿಕೆ ಹಾಕಬೇಕೆ? ಅಥವಾ, ಆದಾಯದ ಆಧಾರದ ಮೇಲೆ ಜನರನ್ನು ವಿಂಗಡಿಸಿ, ಅತ್ಯಂತ ಕೆಳ ವರ್ಗದವರಿಗೆ ಮಾತ್ರ ಲಸಿಕೆಯನ್ನು ಉಚಿತವಾಗಿ ಹಾಕಬೇಕೆ?

೩) ಕಾಂಟಾಕ್ಟ್ ಟ್ರೇಸಿಂಗ್ ಮಾಡಲು, ಸರ್ಕಾರೇತರ ಸಂಸ್ಥೆಗಳ ನೆರವು ಸರ್ಕಾರ ತೆಗೆದುಕೊಳ್ಳಬೇಕೇ? ಕೋವಿಡ್ ಸೋಂಕಿತರನ್ನು ಕ್ವಾರಂಟೈನ್ ಮಾಡಲು ಕೋವಿಡ್ ಸೆಂಟರ್ಗಳನ್ನು ಎಲ್ಲಿ ಸ್ಥಾಪಿಸಬೇಕು? ಹೊಸ ಆಸ್ಪತ್ರೆಗಳನ್ನು ಕಟ್ಟಬೇಕೇ? ಹೌದಂದಲ್ಲಿ, ಎಷ್ಟು ಆಸ್ಪತ್ರೆಗಳನ್ನು ಕಟ್ಟಬೇಕು? ಇದಕ್ಕೆ, ಬಜೆಟ್ನಿಂದ ಎಷ್ಟು ಹಣ ಯಾವ ವಲಯದಿಂದ ವರ್ಗಾವಣೆ ಮಾಡಬೇಕು?

೪) ಕಡಿಮೆ ಬೆಲೆಗೆ ಅತ್ಯುನ್ನತ ಲಸಿಕೆ ಆವಿಷ್ಕರಿಸಲು, ಸರ್ಕಾರ ವೈಜ್ಞಾನಿಕ ಸಂಶೋಧನೆಗೆ, ಎಷ್ಟು ಹಣ ನಿಗದಿ ಮಾಡಬೇಕು? ವೈಜ್ಞಾನಿಕ ಸಲಹೆಯನ್ನು ಯಾವ ವಿಜ್ಞಾನಿಯಿಂದ ತೆಗೆದುಕೊಳ್ಳಬೇಕು? 

 ಈ ಯಾವ ಪ್ರಶ್ನೆಗಳಿಗೂ ನೇರವಾದ ಅಥವಾ ಸರಳವಾದ ಉತ್ತರಗಳಿಲ್ಲ. ಮತ್ತು ಸರ್ಕಾರದ ಬಳಿ, ಇಂತಹ ಪ್ರಶ್ನೆಗಳನ್ನು ಉತ್ತರಿಸಲು ಸಂಪನ್ಮೂಲಗಳೂ ಇರುವುದಿಲ್ಲ. ಆದ್ದರಿಂದ, ಸರ್ಕಾರಕ್ಕೆ, ಸಮ್ಮಿಶ್ರ ಗುಂಪುಗಳ, ವಿದ್ವಾಂಸರ, ಸರ್ಕಾರೇತರ ಸಂಸ್ಥೆಗಳ, ಮತ್ತು ವಿಚಾರ ವೇದಿಕಗಳ ನೆರವು, ಖಚಿತವಾಗಿ ಬೇಕಾಗುತ್ತದೆ.

ಇದಾಗಿಯೂ, ಯಾವುದೇ ಯಶಸ್ವೀ ಸಾರ್ವಜನಿಕ ನೀತಿಯ ಹಿಂದಿನ ಗುಟ್ಟು – ಮೇಲೆ ತಿಳಿಸಿದ ಎಲ್ಲ ಮಧ್ಯಸ್ಥಗಾರರ ಗುರಿಗಳ ಈಡೇರಿಕೆ ಮತ್ತು ಸಂಯೋಜಿತ ಕ್ರಿಯೆ. ಜಗತ್ತಿನ ಬಹುತೇಕ ಸಮಾಜಗಳು, ಬಹು-ಸಾಂಸ್ಕೃತಿಕವಾಗಿರುವುದರಿಂದ, ಎಲ್ಲ ಮಧ್ಯಸ್ಥಗಾರರ ಗುರಿಗಳು, ಆಸಕ್ತಿಗಳು, ಒಂದೇ ಆಗಿರಿವುದು ಕಷ್ಟಸಾಧ್ಯ. ಈ ಕಾರಣಕ್ಕಾಗಿಯೇ ನಮ್ಮ ಸಮಾಜದಲ್ಲಿ, ಹಲವಾರು ಸಾರ್ವಜನಿಕ ನೀತಿಗಳು ಸಾಮಾಜಿಕ ಅಭಿವೃದ್ಧಿಯ ಗುರಿಯನ್ನು ಮುಟ್ಟುವಲ್ಲಿ ಅನುತ್ತೀರ್ಣಗೊಳ್ಳುತ್ತವೆ.

ಕಾನೂನು ವಿದ್ಯಾರ್ಥಿಗಳಿಗೆ ಸಾರ್ವಜನಿಕ ನೀತಿ ಶಿಕ್ಷಣ: ಯಾಕೆ, ಹೇಗೆ, ಎಲ್ಲಿ?

ನಾವು ಮೇಲೆ ನೋಡಿದ ಹಾಗೆ, ಸಾರ್ವಜನಿಕ ನೀತಿ ಕ್ಷೇತ್ರದಲ್ಲಿ, ಸಾಮಾಜಿಕ ಬದಲಾವಣೆಯ ಮಹತ್ತರ ಆಕಾಂಕ್ಷೆ ಇದೆ. ಇದೆ ಗುರಿ, ಕಾನೂನಿಗೂ ಇದೆ. ಹೆಸರಾಂತ ಕಾನೂನು ವಿದ್ವಾಂಸರಾದ ರೊಸ್ಕೋ ಪೌಂಡ್ ರವರು ಹೇಳಿದ ಹಾಗೆ, ಕಾನೂನು ಸಾಮಾಜಿಕ ಬದಲಾವಣೆಯ ಸಾಧನವಾಗಬಹುದು.

ನ್ಯಾಯಾಲಯದಲ್ಲಿ ಕೆಲಸ ಮಾಡುವ ವಕೀಲರು ಹಾಗು ನ್ಯಾಯಾಧೀಶರಿಗೂ ಸಹ, ಸಾರ್ವಜನಿಕ ನೀತಿಯ ಜ್ಞಾನ ಉಚ್ಚತರ  ವಾದಗಳನ್ನು ಮಂಡಿಸಲು, ಹಾಗು ವಿಶ್ಲೇಷಿಸಲು ಸಹಾಯವಾಗುತ್ತದೆ. ಸಾಂವಿಧಾನಿಕ ಕಾನೂನು, ಆಡಳಿತಾತ್ಮಕ ಕಾನೂನು, ಪರಿಸರ ಕಾನೂನು, ಹಾಗು ಇತ್ಯಾದಿ ಸಾರ್ವಜನಿಕ ಕಾನೂನಿಗೆ ಸಂಬಂಧಿತ ಪ್ರಕರಣಗಳಲ್ಲಿ, ಸಾರ್ವಜನಿಕ ನೀತಿ ಜ್ಞಾನದ ಉಪಯುಕ್ತತೆ ಮಹತ್ತರವಾಗಿದೆ. ಆದ್ದರಿಂದ, ಕಾನೂನು ಮಹಾವಿದ್ಯಾಲಯಗಳ ಪಠ್ಯಕ್ರಮದಲ್ಲಿ, ಸಾರ್ವಜನಿಕ ನೀತಿ ವಿಷಯವನ್ನು ಅಳವಡಿಸಿದರೆ, ನಮ್ಮ ದೇಶದ ವಕೀಲರ, ಹಾಗು ನ್ಯಾಯಾಧೀಶರ ಗುಣಮಟ್ಟ ಇನ್ನೂ ಹೆಚ್ಚಾಗುತ್ತದೆ ಎಂದು ನನ್ನ ಅಭಿಪ್ರಾಯ.

ಇದಲ್ಲದೆ, ಕಾನೂನು ವಿದ್ಯಾರ್ಥಿಗಳಿಗೆ, ವಕೀಲಿ ವೃತ್ತಿ ಹಾಗು ನ್ಯಾಯಾಂಗ ಸೇವೆಯಲ್ಲದೆ, ಬೇರೆ ಸಮಾಜ-ಮುಖಿ ವೃತ್ತಿ ಅವಕಾಶಗಳ ಬಗ್ಗೆ ಅರಿವು ಮೂಡುತ್ತದೆ, ಕೌಶಲ್ಯ ಅಭಿವೃದ್ಧಿಯಾಗುತ್ತದೆ. ನಮ್ಮ ದೇಶದ ಕಾನೂನು ಪದವೀಧರರು, ಸಮಾಜ ಸೇವೆ ಹಾಗು ಸಮಾಜ ಬದಲಾವಣೆಯನ್ನು  ಅತ್ತ್ಯುನ್ನತ ಮಟ್ಟದಲ್ಲಿ, ಹಲವಾರು ಕ್ಷೇತ್ರಗಳಲ್ಲಿ, ಕೈಗೊಳ್ಳಬಹುದು.

ಸಾರ್ವಜನಿಕ ನೀತಿ ಕ್ಷೇತ್ರದಲ್ಲಿರುವ ಕೆಲವು ವೃತ್ತಿ ಅವಕಾಶಗಳು: ನೀತಿ ಸಲಹಾ ಅಧಿಕಾರಿ (ರಾಷ್ಟೀಯ ಸರ್ಕಾರ/ಯು.ಏನ್.ಓ.), ನೀತಿ ವಿಶ್ಲೇಷಣೆ , ನಾಗರೀಕ ಸೇವೆಗಳಲ್ಲಿ ಪಾರ್ಶ್ವ ಪ್ರವೇಶ, ಸಾಮಾಜಿಕ ಉದ್ಯಮಿ, ಇತ್ಯಾದಿ. ಭಾರತದಲ್ಲಿ ಹಲವಾರು ವಿಶ್ವವಿದ್ಯಾಲಯಗಳು ಸಾರ್ವಜನಿಕ ನೀತಿಯಲ್ಲಿ ಪದವಿ, ಡಿಪ್ಲೋಮ, ಹಾಗು ಸರ್ಟಿಫಿಕೇಟ್ ಕೋರ್ಸ್ಗಳನ್ನು ರಚಿಸಿವೆ. ದೇಶದ ಖ್ಯಾತ ಕಾನೂನು ಶಾಲೆಯಾದ ಏನ್.ಎಲ್.ಎಸ.ಆಯಿ.ಯು. ಕೂಡ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾಮಾಣಿಸುತ್ತಿದೆ.

ಹೀಗಿರುವಾಗ, ನಾವು, ಕನಿಷ್ಠ, ನಮ್ಮ ಕಾನೂನು ವಿದ್ಯಾರ್ಥಿಗಳಿಗೆ, ಒಂದು ವಿಷಯವಾಗಿ, ಸಾರ್ವಜನಿಕ ನೀತಿಯನ್ನು ಕಲಿಸಬಹುದಲ್ಲದೆ?

ಸಾರ್ವಜನಿಕ ನೀತಿ ವಿಷಯದಲ್ಲಿ ಏನು ಕಲಿಸಲಾಗುತ್ತದೆ?

ಸಾರ್ವಜನಿಕ ನೀತಿ ವಿಷಯವು ಅಂತಶ್ಯಾಸ್ತ್ರೀಯವಾಗಿದೆ. ಅಂದರೆ ಎರಡು ಮೂರು ಶಾಸ್ತ್ರ/ ವಿಷಯಗಳ ನಡುವಿನ ಸಂಬಂಧ, ಹೇಗೆ ಅವು ಒಂದಕ್ಕೊಂದು ಪರಿಣಾಮ ಬೀರುತ್ತವೆ ಎಂಬ ಒಟ್ಟಾರೆ ಅಧ್ಯಯನ. ಆದ್ದರಿಂದ, ವಿದ್ಯಾರ್ಥಿಗಳಿಗೆ, ಸಂಖ್ಯಾ ಶಾಸ್ತ್ರ, ಸಮಾಜ ಶಸ್ತ್ರ, ಪರಿಮಾಣಾತ್ಮಕ ಸಂಶೋಧನೆ, ಗುಣಾತ್ಮಕ ಸಂಶೋಧನೆ, ಮನೋವಿಜ್ಞಾನ, ಅರ್ಥಶಾಸ್ತ್ರ, ರಾಜಕೀಯ ಮತ್ತು ನೀತಿಶಾಸ್ತ್ರಗಳಂತಹ ವೈವಿಧ್ಯಮಯ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಇಂತಹ ಪಠ್ಯಕ್ರಮದ ಉಪಯುಕ್ತತೆ? ನಾವು ಮೇಲೆ ಕೋವಿಡ್ ನೀತಿಯ ಉದಾಹರಣೆಯ ಮುಖಾಂತರ  ನೋಡಿದಂತೆ,  ನೀತಿ ನಿರೂಪಣೆ, ವಿಶ್ಲೇಷಣೆ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳನ್ನು ಮಾಡಲು, ಇವೆಲ್ಲ ವಿಷಯಗಳ ಜ್ಞಾನ ಕಡ್ಡಾಯ. “ವಾಸ್ತವವು ಗೊಂದಲಮಯವಾಗಿದೆ” ಎಂಬ ಹೇಳಿಕೆ, ಸಮಾಜ ಶಾಸ್ತ್ರದಲ್ಲಿದೆ. ಇದು ಸಾರ್ವಜನಿಕ ನೀತಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅತ್ಯಂತ ಪ್ರಸ್ತುತ.

ನ್ಯಾಯಾಂಗ ನೀತಿ ನಿರೂಪಣೆ ಸಾಂವಿಧಾನಿಕವೇ?: ಕೆಲವು ಸಮಾರೋಪಕ ಅವಲೋಕನಗಳು

“ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ ವಿಭಾಗ ನೀತಿ ನಿರೂಪಣೆ ಮಾಡುತ್ತದೆಯೇ?” ಎಂಬ ಪ್ರಶ್ನೆ ಹಲವಾರು ಸಾಂವಿಧಾನಿಕ ಕಾನೂನು ವಿದ್ವಾಂಸರನ್ನು ಯುಗದಿಂದಲೂ ಕಾಡಿದೆ. ಇನ್ನೊಂದು ಸಂಬಂಧಿತ ಪ್ರಶ್ನೆ: ಕಾನೂನು ಹಾಗು ಸಾರ್ವಜನಿಕ ನೀತಿಯ ಮಧ್ಯದ ಸಂಬಂಧ ಏನು? ಇವೆರಡೂ ಪ್ರಶ್ನೆಗಳ ಉತ್ತರ ನಮ್ಮ ಸಂವಿಧಾನದಲ್ಲೇ ಇದೆ.

ಕಲಮು ೧೪೧ ರ ಪ್ರಕಾರ ನಮ್ಮ ಸರ್ವೋಚ್ಚ ನ್ಯಾಯಾಲಯ ನಿರ್ಣಯಿಸುವ ಎಲ್ಲ ನಿರ್ಧಾರಗಳು ಭಾರತದ ಕಾನೂನು ಎಂದು ಘೋಷಿಸಲಾಗಿದೆ. ಅಂದರೆ, ನಮ್ಮ ಸರ್ಕಾರದ ಕಾರ್ಯನಿರ್ವಾಹಕ ವಿಭಾಗವೂ ಕೂಡ, ಈ ಕಾನೂನಿನ ಕಟ್ಟಳೆಯನ್ನು ದಾಟುವಂತಿಲ್ಲ. ಆದ್ದರಿಂದ, ಸಾಮಾಜಿಕ ನೀತಿಯ ಒಂದು ಗಮನಾರ್ಹ ಮಿತಿಯಾಗಿದೆ, ನ್ಯಾಯಾಂಗ ಘೋಷಿಸುವ  ಕಾನೂನು.

ಇದಲ್ಲದೆ, ನ್ಯಾಯಾಂಗ ಘೋಷಿಸುವ ಕಾನೂನು ಸಹ ಒಂದು ತರಹದ ಸಾಮಾಜಿಕ ನೀತಿ. ಏಕೆಂದರೆ, ನ್ಯಾಯಾಂಗ ಹಾಗು ವಕೀಲರು ಕೂಡ ಸಾರ್ವಜನಿಕ ನೀತಿ ರಚಿಸುವ ಮಧ್ಯಸ್ಥಗಾರರು.

ಈ ಎಲ್ಲ ಕಾರಣಗಳಿಂದಾಗಿ, ನನ್ನ ಮುಕ್ತಾಯದ ಮನವಿ ಕರ್ನಾಟಕದ ಕಾನೂನು ಮಹಾವಿದ್ಯಾಲಯಗಳ ಪ್ರಾಂಶುಪಾಲರಲ್ಲಿ, ಸಾರ್ವಜನಿಕ ನೀತಿ ವಿಷಯವನ್ನು, ಕನಿಷ್ಠ ಆಯ್ಕೆ ವಿಷಯವಾಗಿ ಕಾನೂನು ವಿದ್ಯಾರ್ಥಿಗಳಿಗೆ ಅವಕಶಿಸಿದರೆ, ಅವರ ವೃತ್ತಿಪರ ತರಬೇತಿ ಸುರಚಿತವಾಗುತ್ತದೆ. ಬನ್ನಿ, ಎಲ್ಲರೂ ಸೇರಿ, ಕಾನೂನು ಕಲಿಕೆಯನ್ನು ಉತ್ತಮಗೊಳಿಸೋಣ.

ಉಲ್ಲೇಖಗಳು:

Dente, B. (2014). Understanding Policy Decisions. PoliMI SpringerBriefs in Applied Sciences & Technology.

‍ಲೇಖಕರು avadhi

17 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading