ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾದಂಬರಿ ಕೇಳಿದೆ..

ಇಂದ್ರಕುಮಾರ್ ಎಚ್ ಬಿ

ಓಡು-ಹಿಡಿ-ದುಡಿ ಎಂಬ ಮಂತ್ರದಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಧಾವಂತದಿಂದ ಬದುಕುತ್ತಿರುವುದರ ನಡುವೆ ಮನಸ್ಸು ಇನ್ನಿಲ್ಲದಂತೆ ವಿರಾಮಕ್ಕೆ ಹಾತೊರೆಯುತ್ತಿರುತ್ತದೆ. ಆ ವಿರಾಮದಲ್ಲಿ ನಿದ್ರೆಯೊಂದೇ ಮುಖ್ಯವಲ್ಲದೇ ಸಂಗೀತ ಕೇಳುವುದು, ಪುಸ್ತಕ ಓದುವುದು, ಪ್ರವಾಸ ಮಾಡುವುದು, ಮತ್ತು ಇನ್ನೇನೋ ಆಗಿರಬಹುದು..

ನಮ್ಮನ್ನು ನಮ್ಮತನದೊಳಗೆ ಮತ್ತೆ ಕರೆದೊಯ್ಯುತ್ತ ಕ್ಷಣಿಕ ಸಮಯದೊಳಗೆ ಮತ್ತೊಂದು ತಿಂಗಳಿನ ಮಾನಸಿಕ-ದೈಹಿಕ ಒತ್ತಡದ ದಣಿವನ್ನು ಸಹಿಸಿಕೊಳ್ಳಲುವ ಶಕ್ತಿ ಕೊಡುತ್ತದೆ. ನಮ್ಮಿಷ್ಟದ ಪುಸ್ತಕ ಓದಲು ‘ತೀರಾ ಖಾಸಗಿಯಾದ’ ಸಮಯವೇ ಬೇಕು, ನಮ್ಮಿಷ್ಟದ ರೀತಿಯೇ (ಪಕ್ಕದಲ್ಲಿ ಕಾಫಿ ಬಯಸುವವರು, ಕುರಕಲು ತಿಂಡಿ ಬಯಸುವವರು, ಕಿಟಕಿಯ ಸಾಮಿಪ್ಯ, ಮಳೆಯ ಸಾಂಗತ್ಯ.. ಹೀಗೇ) ಆಗಬೇಕು..

ಎಲ್ಲದಕ್ಕಿಂತ ಮುಖ್ಯ ನಮ್ಮಿಷ್ಟದ ಆ ಪುಸ್ತಕ ನಮ್ಮ ಕೈಯಲ್ಲಿರಬೇಕು.. ಐ ಲೈಕ್ ರೀಡಿಂಗ್ ಅಂತ ಯಾರೂ ಕೇಳದಿದ್ದರೂ ಹೇಳಿಕೊಳ್ಳುವುದು ಒಂದೆಡೆಯಾದರೆ, ಖರೀದಿಸಿದ ಪುಸ್ತಕಗಳ ರಾಶಿಯನ್ನು ವಾಟ್ಸ್ ಆಪ್ ಸ್ಟೇಟಸ್ ಗೆ ಹಾಕಿಬಿಟ್ಟದ್ದೇ ಬಂತು..

ಪುಸ್ತಕ ತೆರೆಯಲೂ ಸಮಯವಿಲ್ಲ! ಮನೆಯಲ್ಲಿ ಓದದ ನೂರಾರು ಪುಸ್ತಕಗಳಿದ್ದರೂ ಪುಸ್ತಕದಂಗಡಿ ಕಂಡದ್ದೇ ಐದಾರು ಸಾವಿರದ ಪುಸ್ತಕ ಖರೀದಿಯಾಗಲೇಬೇಕು.. ಈ ನಡುವೆ ಈ ಛೋಟಾ ವಿರಾಮದೊಳಗೆ ಪುಸ್ತಕದ ಓದನ್ನು ಬದಲಿ ಆಸಕ್ತಿಗಳು ಸಾಯಿಸಲು ಹವಣಿಸುತ್ತಿರುತ್ತವೆ. ಅಂತೂ ನಿತ್ಯ ಗಂಟೆಯೊಂದನ್ನು ವಾಕಿಂಗ್ ಗೆ ಅಂತ ತೆಗೆದಿಟ್ಟಾಗ ಮ್ಯೂಸಿಕ್ ಕೇಳತೊಡಗಿದೆ..

ನನ್ನಿಷ್ಟದ ಎಲ್ಲಾ ಜಾನ್ರಾಗಳೂ ಮುಗಿದವು.. ಪರ್ಸನಾಲಿಟಿ ಡೆವಲಪ್ ಮೆಂಟ್ ಆಡಿಯೋ ಸೀರೀಸ್ ಗಳು ಮುಗಿದವು.. ಬಿಬಿಸಿ ಐ ಪ್ಲೇಯರ್ ನಲ್ಲಿ ನೂರಕ್ಕೂ ಹೆಚ್ಚು ಲಿಟರಲಿ ಟಾಕ್ ಗಳು ಕೇಳಿಯಾಯಿತು.. ಕಾದಂಬರಿ ಓದನ್ನು ಈ ವಾಕ್ ಮತ್ತು ಮ್ಯೂಸಿಕ್ ಕಸಿದುಕೊಂಡ ಗಿಲ್ಟ್ ನಲ್ಲಿರುವಾಗಲೇ ಆಡಿಬಲ್ ನಲ್ಲಿ ಕ್ಲೇರ್ ಫುಲ್ಲರ್ Claire Fuller ಎಂಬ ಹೊಸ ಕಾದಂಬರಿಗಾರ್ತಿಯ Our Endless Numbered Days ಸ್ಯಾಂಪಲ್ ಕೇಳಿದೆ.. ತಕ್ಷಣ ಖರೀದಿಸಿದೆ..

ಒಂಭತ್ತು ಗಂಟೆಗಳ ಆ ಆಡಿಯೋ ಕಾದಂಬರಿ ಒಂದೊಳ್ಳೆ ಕೇಳುವ ಅನುಭವ ನೀಡಿತಲ್ಲದೇ ಕಾದಂಬರಿ ಓದಿನ ಸಂದರ್ಭದಲ್ಲಾಗುವ ಸುಖದ ಅನುಭವವನ್ನು ತನ್ನ ಮಿತಿಯೊಳಗೇ ಉಣಬಡಿಸಿತು. ಪಠ್ಯವನ್ನು ಶ್ರವ್ಯ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ವಾಚಕಿ Eilidh L. Beaton ಯನ್ನೂ ಇಲ್ಲಿ ಸ್ಮರಿಸಬೇಕು..

ವಸ್ತು-ವಿಷಯ ನಿರೂಪಣೆಯಲ್ಲಿ ಕಟ್ಟಿಹಾಕುವ ಈ ಹೊಸ ಕಾದಂಬರಿಗಾರ್ತಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಪುರಸ್ಕಾರ (Winner of the 2015 Desmond Elliott Prize) ಗಳು ಸಿಕ್ಕಿವೆ. ಬಿಡುವು-ಆಸಕ್ತಿ ಸಿಕ್ಕಾಗ ನೀವೂ ಕೇಳಿ ನೋಡಿ.. ಯಾ ಗಂಟೆಗಟ್ಟಲೆ ಪ್ರಯಾಣದ, ಕಾಯುವಿಕೆಯ ಸಂದರ್ಭದಲ್ಲಿ ಇದು ಉಪಯುಕ್ತವಾದೀತು.

‍ಲೇಖಕರು Admin

29 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading