ಸಿದ್ದನಿಗೆ ಆಶ್ಚರ್ಯ!! ಜೊತೆಗೆ ಗಾಬರಿ! ತನಗೆ ಶರೀರವೇ ಇಲ್ಲ ಎಂದು ತಿಳಿದಾಗ ! ಅಷ್ಟೊಂದು ಹಗುರವಾಗಿದ್ದ ! ತಾನೂ ಗಾಳಿಯೂ ಒಂದೇ ಎನ್ನುವಂತೆ! ಗಾಳಿಯಲ್ಲೇ ಕರಗಿ ಹೋಗಿರುವೆ ಎನಿಸಿತು! ಎಲಾ..? ಇದೇನು ಇಚಿತ್ರ? ತನ್ನ ಮೈಗೇನಾಯಿತು? ಕೈಕಾಲುಗಳನ್ನು ಆಡಿಸಿ ನೋಡಿದ! ನಗು ಬಂತು! ಕೈಕಾಲುಗಳು ಇದ್ದರೆ ತಾನೆ ಆಡಿಸುವುದು..? ಅವು ಇಲ್ಲವೇ ಇಲ್ಲವಲ್ಲ..? ಹೀಗೇ ಅದೆಷ್ಟೋ ಹೊತ್ತಿನಿಂದ ಇರುವೆ ಎನಿಸಿತು! ಅದೆಷ್ಟು ಹೊತ್ತು..? ಸಮಯದ ಪರಿಗಣನೆ ಬರಲೇ ಇಲ್ಲ! ಅಂದರೆ ಏನು..? ನಿದ್ರೆಯೇ..? ನಿದ್ರೆಯಲ್ಲಿ ಕೂಡ ಶರೀರದ ಅರಿವು ಇರುತ್ತದೆ! ಅಂದರೆ ತನಗೇನಾಗಿದೆ..? ಏನೋ ಆಗಿರುವುದಂತೂ ನಿಜ! ಇದು…ಹೊಸ ಅನುಭವ..! ಇಂತಾ ಅನುಭವ ಸ್ವಲ್ಪ ಮಟ್ಟಿಗೆ ಕಳ್ಳು ಕುಡಿದಾಗ ಆಗುತ್ತಲ್ಲವೆ..? ಆದರೆ ಕಳ್ಳು ಕುಡಿದ ನೆಪ್ಪೇ ಇಲ್ಲವಲ್ಲ..?
‘ಸಿದ್ದಾ..? ಏನು ಮಾಡ್ಕೊಂಡೆಯೋ ಮಗಾ..?’ ಯಾರೋ ಕೂಗುತ್ತಲೂ ಇದ್ದಾರೆ! ಅಲೆಲೆ..ಅದು ಅವ್ವಾ ಅಲ್ವಾ..? ಅದ್ಯಾಕಂಗಳ್ತಾ ಅವ್ಳೆ..? ಎಲಾ..? ಶಬ್ದ ಕೇಳ್ತಾ ಐತೆ ಅವ್ವ ಕಾಣ್ತಿಲ್ವಲ್ಲ..?
‘ಯಾಕವ್ವ ಅಳ್ತೀಯಾ..? ಎಲ್ಲಿದ್ದೀಯಾ..ನೀನು..?’
ಎಲಾಎಲಾ..? ಮಾತಾಡಿದ್ರೂ ಶಬುದಾನೇ ಬಾಯಿಂದ ಬತ್ತಾ ಇಲ್ವಲ್ಲ..? ಏನಾಗೈತೆ ನಂಗೆ..? ಈಗ ಅವ್ವಂಗೆ ಎಂಗೇಳ್ಲಿ..? ಅವಳೆಲ್ಲವ್ಳೆ..? ಅವ್ಳು ಅಳ್ತಿದ್ರೆ ನಂಗೆ ತಡ್ಕಳ್ಳಾಕಾಗಾಕಿಲ್ಲ. ಅಲೆಲೆ..ಜೊತೀಗೆ ಮಂಗಳಾನೂ ಅಳ್ತಿರೋ ಅಂಗೈತೆ..?
‘ಅವ್ವಾ..ಅವ್ವಾ…?’
‘ಸಿದ್ದ ಎಚ್ಚರವಾದ’
ಸಿದ್ದ ಕನವರಿಸಿದಾಗ ಅವ್ವ ಸಂಭ್ರಮದಿಂದ ಕೂಗಿದಳು!
ಸಿದ್ದನ ಕಣ್ಣಿಗೆ ಅವ್ವ ಕಂಡಳು! ತಂಗಿ ಮಂಗಳ ಕಂಡಳು! ಗುಡಿಸಲು ತುಂಬಾ ಜನ! ಅದರ ಜೊತೆಗೇ ಇಡೀ ಮೈನೇ ಗಾಣಕ್ಕೆ ಕಟ್ಟಿ ಎಳೆದಂಗೆ ನೋವು! ಶರೀರಾನೇ ಇಲ್ಲದಂಗೆ ಇದ್ದಿದ್ದು ಈಗ ಒಂದೇ ಸಮ ಎಲ್ಲ್ಲಾ ಕಡೆಯಿಂದಲೂ ನೋವು! ಯಾಕೆ ಈ ನೋವು..?
‘ಅಯ್ಯಾ..ಅಣ್ಣಾ ನನ್ನ ಸಿದ್ದನ್ನ ಉಳಿಸಿಕೊಡ್ರಣ್ಣಾ..ನಿಂಗೆ ಪುಣ್ಯಾ ಬರುತ್ತೆ..’
ನೆರೆದಿದ್ದ ಜನಕ್ಕೆ ಸಿದ್ದನ ಅವ್ವ ದ್ಯಾವೇರಿ ಕೈಮುಗಿದು ಕೇಳಿಕೊಂಡಳು.
‘ಗಾಡೀಗೆ ಪೋನು ಹಚ್ಚೀದೀವಿ..ಇನ್ನೇನು ಬರ್ತೈತೆ..ಅಸ್ಪತ್ರೆಗೆ ಕಕರ್ೊಂಡು ಹೋಗಾನ ಅದೃಷ್ಟ ಇದ್ರೆ ಬದ್ಕೋತಾನೆ’
‘ಅಂಗನ್ಬ್ಯಾಡ್ರಪ್ಪಾ..! ನಿಮ್ಮ ದಮ್ಮಯ್ಯ..ಏನಾರ ಮಾಡಿ ನನ್ನ ಸಿದ್ದನ್ನ ಉಳಿಸ್ಕೊಡ್ರಿ’
‘ಅವ್ವಾ..? ನಂಗೇನಾಗೈತೆ..?’ ಪ್ರಯಾಸದಿಂದ ಕೇಳಿದ ಸಿದ್ದ.
‘ನಿಂಗೆ ಸಾವಿರ ಕಿತ ಹೇಳ್ದೆ..ಅವರ ಸವಾಸ ಬ್ಯಾಡಾಂತ..’ ದ್ಯಾವೇರಿ ಸೆರಗಿಂದ ಕಣ್ಣೊರಿಸಕೊಂಡಳು.
ಸಿದ್ದನಿಗೆ ಆಶ್ಚರ್ಯ! ಅವ್ವ ಯಾವ ವಿಷಯ ಹೇಳ್ತಿದ್ದಾಳೆ..? ಯಾರ ಸವಾಸ..?
ಕಾಲಿನಿಂದ ಕಾಣಿಸಿದ ನೋವು ಕ್ರಮೇಣ ಎಲ್ಲಾ ಕಡೆಗೂ ಹರಡಿತು! ನೋವಿನಿಂದ ಮುಖ ಕಿವುಚಿದ ಸಿದ್ದ.
‘ಮತ್ತೆ ಗ್ಯಾನ ತಪ್ತೂಂತ ಕಾಣ್ಸುತ್ತೆ..’
ಪಕ್ಕದ ಹಾಡಿಯಿಂದ ಬಂದಿದ್ದ ನಾಟಿ ವೈದ್ಯ ಶರಬಣ್ಣ ಹೇಳಿದ. ಬೂದಿಯನ್ನು ತೆಗೆದುಕೊಂಡು ಸಿದ್ದನ ಕೈಕಾಲುಗಳಿಗೆ ಉಜ್ಜಲು ಅನುವಾದ.
0 0 0 0 0 0
ಬೆಳಗಾನ ಬೆಳಿಗ್ಗೆ ಟಿವಿಎಸ್ ಹಾಕ್ಕೊಂಡು ಹಾಡಿಗೆ ಬಂದ ಭೈರ ಗುಡ್ಲುಗಳ ಕದ ಬಡಿದಿದ್ದ. ಇನ್ನೂ ಮಾರೀನೇ ತೊಳೀದಿದ್ದ ಹಾಡಿ ಜನಕ್ಕೆ ಅದೊಂದು ಸೋಜಿಗದಂಗೆ ಕಂಡಿತು. ಎಲೆಕ್ಷನ್ನು ಮುಗಿದು ಆಗಲೇ ಮೂರು ತಿಂಗಳು ಕಳೆದಿತ್ತು. ಸಾರಾಯಿ ವಾಸನೆ, ಖಂಡ ತಿಂದ ರುಚಿ ಎಲ್ಲಾ ಮರೆತಿತ್ತು. ಹಾಡಿ ಜನ ಎಲ್ಲಾ ತಂತಮ್ಮ ಕೆಲಸಕ್ಕೆ ನಿಧಾನಕ್ಕೆ ಹೊಂದಿಕೊಳ್ತಾ ಇದ್ದರು.
ಹಾಡಿ ಜನಕ್ಕೂ ಹೊರಗಿನ ಜಗತ್ತಿಗೂ ಇದ್ದ ಏಕೈಕ ಸಂಪರ್ಕ ಸೇತು ಭೈರನಾಯ್ಕ. ಅವನೇ ಇಡೀ ಹಾಡಿ ಜನರ ಗುತ್ತಿಗೆದಾರನಂತಿದ್ದ. ಹಾಡಿ ಜನ ಇದನ್ನು ಒಪ್ಪಿಕೊಂಡು ಅವನು ತಮ್ಮ ಪಾಲಿನ ಕಾಮಧೇನು ಎಂದೇ ನಂಬಿದ್ದರು.
ಭೈರನಾಯ್ಕ ಹಾಡಿಯ ಹರೇದ ಹುಡುಗ್ರಿಗೆಲ್ಲಾ ಮೈನವಿರೇಳೋ ಅಂತಾ ಸುದ್ದಿ ತಂದಿದ್ದ. ಟಿವಿಯೋರು ಬತರ್ಾರೆ, ಇಪ್ಪತ್ತರಿಂದ ಇಪ್ಪತ್ತೈದರ ಹರೇದ ಹುಡುಗ್ರೆಲ್ಲಾ ಒಂಬತ್ತು ಗಂಟೇ ಒಳಗೆ ರೆಡಿಯಾಗಿ ಸಂತೆ ಮಾಳಕ್ಕೆ ಬಬರ್ೇಕೂಂತ. ಹಾಡಿ ಹೈಕಳಲ್ಲಿ ಆಯ್ಕೆ ಮಾಡ್ಕೊಂಡವ್ರಿಗೆ ಟಿವೀಲಿ ಆಕ್ಟಿಂಗ ಮಾಡಿಸ್ತಾರಂತೆ ಸುದ್ದಿ ಹಾಡೀಲಿ ಕಳ್ಳಿನ ಅಮಲನ್ನೇ ಹರಡಿತ್ತು! ಹಾಡಿ ಹೈದರಿಗೆ ಛಳುಕು ಹೊಡೆದಂಗಾಗಿತ್ತು! ಒಳಗೊಳಗೇ ಸುಖದಲ್ಲಿ ನರಳಿದರು. ಬೇಗಬೇಗ ಮಾರಿ ತೊಳೆದು ಅವ್ವದಿರು ಬೇಸಿದ ಅಂಬಲೀನು ಕುಡೀದೆ ಸಂತೆ ಮಾಳದಲ್ಲಿ ಜಮಾಯಿಸಿದ್ದರು.
ಸಂತೆ ಮಾಳದಲ್ಲಿ ಅದೇನು ಸಂಭ್ರಮ ಇತ್ತೂಂದ್ರೆ ನೋಡೋಕೆ ಎರಡು ಕಣ್ಣೂ ಸಾಲದು ಅನ್ನೋ ಹಂಗಿತ್ತು! ಬೆಂಗ್ಳೂರಿಂದ ಬಂದಿದ್ದ ಟಿವಿಯೋರು ಕಾಡಿನ ಜನರನ್ನೇ ಉಪಯೋಗಿಸ್ಕೊಂಡು ಸೀರಿಯಲ್ ಮಾಡ್ತಾರೆ, ಅವರ ಕಣ್ಣಿಗೆ ಸರಿ ಬಂದೋರನ್ನ ಬೆಂಗ್ಳೂರಿಗೆ ಕಕರ್ೊಂಡು ಹೋಗ್ತಾರೆ! ಕೈತುಂಬಾ ಕಾಸು ಸಿಗುತ್ತೆ! ಅದೃಷ್ಟ ಇದ್ರೆ ಸಿನಿಮಾದ ಚಾನ್ಸೂ ಉಂಟು ಅಂದಾಗ ಸಿದ್ದನ ಕನಸುಗಳಿಗೆ ರೆಕ್ಕೆ ಬಂದಿದ್ದೊ!
ಎಲ್ಲರ ಕೈಲೂ ಏನೇನೋ ಮಾಡ್ಸಿದರು. ಸಿದ್ದನಂತೂ ಎಲ್ಲಾನೂ ಮನಸ್ಸು ಕೊಟ್ಟೇ ಮಾಡಿದ್ದ!
‘ಸಿದ್ದ ನಮ್ಮ ಪ್ರೋಗ್ರಾಮಿಗೆ ನೀನು ಸೆಲೆಕ್ಟ್ ಆಗಿದೀಯ’ ಈ ಮಾತು ಅವರು ಹೇಳಿದಾಗ ಸಿದ್ದ ಹಿಗ್ಗಿ ಹೀರೇಕಾಯಿಯಾಗಿದ್ದ! ತನ್ನ ಭಾಗ್ಯದ ಬಾಗಿಲು ತೆರೆಯಿತು!! ಇನ್ನು ಈ ಹಾಡಿಯಲ್ಲಿ ವಾಸ ಮಾಡಬೇಕಾಗಿಲ್ಲ! ಬೆಂಗ್ಳೂರಲ್ಲಿ ಮನೆ! ಕಾರು..ಸಿನೀಮಾ..ತಾನು ಹೀರೋ ಆಗ್ತೀನಿ!
‘ಸಿದ್ದ ನಿನ್ನ ಅದೃಷ್ಟ ಖುಲಾಯಿಸ್ತು! ನನ್ನ ಮರೀಬ್ಯಾಡ..” ಭೈರನಾಯಕನ ಮಾತಿಗೆ ಸಿದ್ದ ಗಾಳಿ ತುಂಬಿದ ಬೆಲೂನಾಗಿ ಆಕಾಶದಲ್ಲಿ ಹಾರಾಡಿದ್ದ!!
0 0 0 0 0 0
ಇದೆಂತಾ ನೋವು..? ನರನಾಡಿಗಳೆಲ್ಲಾ ಚೀರುತ್ತಿದ್ದವು! ನೋವು! ನೋವು!! ಸಿದ್ದ ನರಳಿದ. ನರಳುವಿಕೆ ನೂರಾರು ವಿಚಿತ್ರ ಶಬ್ದಗಳಾದುವು! ಅವುಗಳ ನಡುವೆಯೇ ‘ಅವ್ವಾ..ಅವ್ವಾ..’ಕನಲಿದ.
‘ಇಲ್ಲೇ ಇವ್ನಿ ಮಗಾ..ಇನ್ಸೊಲ್ಪ ತಡ್ಕೋ ಮಗಾ…ಇನ್ನೇನು ಆಸ್ಪತ್ರೆ ಬಂದ್ಬಿಡ್ತೈತೆ..’
ದ್ಯಾವೀರಿ ಮಗನಿಗೆ ಸಮಾಧಾನ ಹೇಳಿದಳು. ಹತ್ತಿಪ್ಪತ್ತು ನಿಮಿಷಗಳಿಗೊಮ್ಮೆ ಸಿದ್ದನ ಪ್ರಜ್ಙೆ ಬಂದು ಹೋಗುತ್ತಿತ್ತು!
ಆಂಬುಲೆನ್ಸು ಹಳ್ಳಿಯ ರಸ್ತೆಗಳಲ್ಲಿ ಕುಲುಕುತ್ತಾ, ಮುಲುಗುತ್ತಾ, ನರಳುತ್ತಾ ಓಡುತ್ತಿತ್ತು!
‘ನಾನು ನೂರು ಕಿತ ಹೇಳ್ದೆ, ಅದು ನಮಗಲ್ಲ ಅಂತಾ! ಅವರ ಸಮಕ್ಕೆ ನಾವು ಹೋಗಕಾದೀತ..? ನನ್ನ ಮಾತು ಇವನು ಕೇಳಲೇ ಇಲ್ಲ’
ಅವ್ವ ಯಾರಿಗೋ ಹೇಳುತ್ತಿದ್ದುದು ಸಿದ್ದನ ಕಿವಿಗೆ ಬಿತ್ತು!
ಅವ್ವ ಹೇಳಿದ್ದು ಕೇಳಿದ್ದರೆ ತಾನು ಇಂತಾ ಸ್ಥಿತಿಗೆ ಬತರ್ಿರಲಿಲ್ಲ! ಹೌದು, ಅವರ ಸಮಕ್ಕೆ ನಾವು ಹೋಗಕಾಗಲ್ಲ! ಅದು ನನಗೆ ಯಾಕೆ ತಿಳೀಲಿಲ್ಲ..?
ಇದ್ದಕ್ಕಿದ್ದಂತೆ ಸಿದ್ದ ಜಾರತೊಡಗಿದ. ಮೆಲ್ಲನೆ ಮೆಲ್ಲನೆ ಜಾರುತ್ತಾ ಕೊನೆಗೊಮ್ಮೆ ನಿಂತ!
0 0 0 0 0 0
ಕನ್ನಡಿಯಲ್ಲಿ ಇನ್ನೊಮ್ಮೆ ಮುಖ ನೋಡಿಕೊಂಡ! ನಾನು ಇಷ್ಟೊಂದು ಪಸಂದಾಗಿ ಕಾಣ್ತೀನೀಂತ ಅಂದ್ಕೊಂಡೇ ಇರಲಿಲ್ಲ! ಬಣ್ಣ ಹಚ್ಕೊಂಡಿದ್ಕೆ ಥೇಟ ರಾಜಕುಮಾರನಂಗೆ ಕಾಣ್ತಿದ್ದೀನಲ್ವಾ..? ಅವ್ವ ಇದ್ದಿದ್ರೆ ಸತವಾಗಲೂ ನಂಗೆ ಮೆಣಸಿನ್ ಕಾಯಿ ಉಪ್ಪು ನೀವಳಿಸಿ, ಪೊರಕೆ ಸುಟ್ಟು ‘ಕಾಗೆ ಕಣ್ಣು, ಗೂಬೆ ಕಣ್ಣು ಬೀಳ್ದಿರಲೀ’ ಅಂತ ಪಿಟಿಪಿಟಿ ಏನೇನೋ ಹೇಳಿರಾಳು!
‘ವಾಹ ಸಿದ್ದ! ಸೂಪರ್ ಆಗಿ ಕಾಣ್ತಿದ್ದೀಯ..ಲಿಷಾ..ನೋಡು ಇವನೇ ನಿನ್ನ ಜೊತೆ ಆಕ್ಟ ಮಾಡೋ ಕಾಡಿನ ಹುಡುಗ’
ಸೆಟ್ನಲ್ಲಿ ಡೈರೆಕ್ಟರ್ ಆ ಪ್ಯಾಟೆಯ ಸುಂದರಿಗೆ ಹೇಳಿದಾಗ ಸಿದ್ದ ಉಬ್ಬಿಬಿಟ್ಟಿದ್ದ!
‘ಎಲ್ಲಿಂದ ಹಿಡ್ಕಂಡು ಬಂದ್ರಿ ಸಾರ ಇವನ್ನ..?’ ಅಕೆ ನಕ್ಕಾಗ ಸಿದ್ದನ ಕರಿ ಮುಖ ಕೆಂಪಗಾಗಿದ್ದು ಅಲ್ಲಿಯವರಿಗೆ ಕಾಣಿಸುವಂತಿರಲಿಲ್ಲ!
ಅದಕ್ಕೆ ಆ ಡೈರೆಕ್ಟರೂ ನಗಬೇಕೆ..? ಏನು ಹಿಡ್ಕಂಡು ಬರಾಕೆ ನಾನೇನು ಕಾಡು ಪ್ರಾಣೀನಾ..?
ಅವಳನ್ನ ಮತ್ತೆಮತ್ತೆ ನೋಡಬೇಕೂನ್ನಿಸ್ತಾ ಇತ್ತು! ಅದೇನು ಮೈ ಬಣ್ಣ! ಇವಳೇನು ಹಾಲಿನಾಗೆ ಸಾನ ಮಾಡ್ತಾಳೋ ಏನೋ..?
ಟೆಂಟು ಸಿನೀಮಾದಲ್ಲಿ ನೋಡಿದ ಸಿನಿಮಾಗಳಡಲ್ಲಾ ಸಿದ್ದನ ನೆನಪಿಗೆ ಬಂದುವು. ತಾನು ಹೀರೋ ಮತ್ತು ಇವಳು ನಾಯಕಿ. ಆ ಸಿನಿಮಾದಾಗ ಹಾಡೇಳಾದು, ತಬ್ಬಿಕೊಳ್ಳಾದು ಎಲ್ಲಾ ಇತ್ತು! ಇಲ್ಲೂ ಅಂತಾವೆಲ್ಲಾ ಇರಬೈದು! ಅವ್ಳನ್ನ ಮುಟ್ಟೋಕೂ ಹೆದ್ರಿಕೆಯಾಗುತ್ತೆ! ಇನ್ನ ಇವ್ಳನ್ನ ತಬ್ಬಿಕೊಂಡು ಹಾಡೇಳಾಕಾಗ್ತದ..? ಸಿದ್ದನಿಗೆ ಮೈಯೆಲ್ಲಾ ಝಂ ಎಂದಿತು! ಜ್ವಾರಾನೇ ಬಂದಂಗಾಯಿತು.
‘ಚೆನ್ನಾಗಿ ಸ್ನಾನ ಮಾಡಿಸಿ ಸಾರ್..ಇದೇ ಲಾಸ್ಟ್ ಇನ್ನು ಇಂತಾವಕ್ಕೆ ನನ್ನ ಕರೀಬೇಡಿ”
ಆಕೆ ಹೇಳಿದಕ್ಕೆ ಸಿದ್ದನಿಗೆ ಮುಜುಗರವೇನೂ ಆಗಲಿಲ್ಲ! ‘ಇನ್ನ ನಾಕು ದಿನ ನೋಡಮ್ಮಿ ನಾನು ಹೆಂಗಿತರ್ೀನೀಂತ’ ಮನಸ್ಸಿನಲ್ಲೇ ಹೇಳಿಕೊಂಡ!
ಅವತ್ತೇ ಡೈರೆಕ್ಟರಿಗೆ ದುಂಬಾಲು ಬಿದ್ದ ತನಗೆ ಇಂಗ್ಲೀಷು ಕಲಿಸಬೇಕೂಂತ! ಬೇರೆ ರೂಮು ಬೇಕೂಂತ.
‘ಸಿದ್ದ ಎಲ್ಲಾ ಒಂದೊಂದಾಗಿ ಮಾಡ್ಕೊಳ್ಳೂವಂತೆ..ಎಲ್ಲಾ ಒಂದೇ ಸಲ ಆಗುತ್ತಾ..? ಸ್ವಲ್ಪ ತಡ್ಕೋ.. ಈಗ ಮೊದ್ಲು ಹೇಳ್ಕೊಟ್ಟಿರಾದು ಮಾಡು..’
‘ಲೈಟ್ಸ್, ಕ್ಯಾಮರಾ..ಆಕ್ಷನ್”
‘ಪರ್ವಾಗಿಲ್ಲ ಸಾರ್ ಹುಡುಗ..’ ಲಿಷಾ ಮೆಚ್ಚಿದ್ದು ಸಿದ್ದನಿಗೆ ಸ್ವಗರ್ಾನೇ ಕೈಗೆ ಸಿಕ್ಕಂಗಾಗಿತ್ತು!
‘ಸೋಮವಾರದಿಂದ ಟಿವೀಲಿ ಇವತ್ತು ಷೂಟ್ ಮಾಡಿದ್ದು ಬರುತ್ತೆ. ನಿಮ್ಮ ಹಾಡೀ ಜನಕ್ಕೆ ಹೇಳು’
ಸೀರಿಯಲ್ ಪ್ರಡ್ಯೂಸರ್ ಹೇಳಿದಾಗ ಸಿದ್ದ ಫೋನಿಗೆ ದುಂಬಾಲು ಬಿದ್ದ!
0 0 0 0 0 0

‘ನನ್ನ ಸಿನೀಮಾಕ್ಕೆ ನೀನೇ ಹೀರೋ..! ನಿನ್ನ ಸೀರಿಯಲ್ ನೋಡಿದೆ. ನಿಂಗೆ ಟ್ಯಾಲೆಂಟ ಇದೆ, ಅದರೆ ಅದಕ್ಕೆ ಸರಿಯಾದ ಗೈಡೆನ್ಸ್ ಬೇಕು..’
‘ಕತೆ ಅದೇನು ಹೇಳಿ ಸಾರ್..’
‘ಎಲಾ ಕತೆ ಕೇಳಿ ಸಿನಿಮಾ ಒಪ್ಪೋ ಹಂತಕ್ಕೆ ಬಂದಿದೀಯ ಸಂತೋಷ. ಇದು ಕಾಡಲ್ಲಿ ನಡಿಯೋ ಕತೆ…’
‘ನಂಗೆ ಕಾಡಲ್ಲಿ ನಡಿಯೋ ಕತೆ ಬೇಡ ಸಾರ್..ಸಿಟೀಲಿ ನಡೆಯೋ ಕತೆ ಬೇಕು. ನಾನು ಸೂಟು ಬೂಟು ಹಾಕೊಂಡು ಓಡಾಡೋ ಸಿನೀಮಾ ಬೇಕು..’
‘ನೋಡು, ನೀನು ಸಹಜವಾಗಿ ಕಾಡಿನಲ್ಲಿ ನಟಿಸಬಲ್ಲೆ. ಆದ್ರೆ ಸಿಟೀಲಿ ಏನು ಮಾಡಬಲ್ಲೆ..ಕಾಡಲ್ಲಿ ನೀನು ಹೀರೋ ಆದ್ರೆ ಇಲ್ಲಿ ನೀನು ಜೀರೋ..’
‘ಹೀರೋಯಿನ್ ಯಾರು ಸಾರ್..?’
‘ಟ್ವಿಂಕಲ್’
‘ಲಿಷಾ ಹಾಕೋತ್ತೀರಾ..?’
‘ಎಲಾ..? ಅವಳೇನು ನಿನ್ನ ಹೆಂಡತಿ ಅಂತ ಅಂದ್ಕೊಂಡಿದ್ದೀಯೇನಯ್ಯ..?’
ಅವಳು ನನ್ನ ಹೆಂಡತಿಯಾಗಲಾರಳೆ..?
0 0 0 0 0 0
“ಒಂದೈದುನಿಮಿಷ ಫೋನ್ ಕೊಡಿ ಸಾರ್ ನಮ್ಮವ್ವಂಗೆ ಹೇಳಿಬಿಡ್ತೀನಿ’
ಎಮರ್ಜನ್ಸಿ ರೂಮಿಗೆ ಡಾಕ್ಟರು ಬಂದಾಗ ಅಸ್ಪಷ್ಟವಾಗಿ ಸಿದ್ದ ಕನವರಿಸಿದ.
ರೋಗಿಯ ಮಾತಿನಲ್ಲಿ ಕಸುವಿಲ್ಲದಿರುವುದು ಡಾಕ್ಟರಿಗೆ ಅರಿವಾಯಿತು! ಶರೀರದ ಸ್ಥಿತಿ ಕುಸಿಯುತ್ತಿರುವುದು ಅವರಿಗೆ ಆಗಲೇ ಅರಿವಾಗಿತ್ತು.
‘ಹಿ ಹ್ಯಾಸ್ ಲಾಸ್ಟ್ ಕಾನ್ಷಸ್ನೆಸ್’
‘ಡಾಕ್ಡರ್..ಇವನು ಕಾಡಿನ ಮಂದಿ ನಾಡಿನಲ್ಲಿ ಸೀರಿಯಲ್ ಹುಡುಗ..’
ನಸರ್್ ಬಂದ ರೋಗಿಯನ್ನು ನೋಡುತ್ತಾ ಹೇಳಿದಾಗಲೇ ಡಾಕ್ಟರು ಅವನ ಮುಖವನ್ನು ಗಮನಿಸಿದ್ದು. ಅವರಿಗೂ ಸಿದ್ದನ ಗುರುತು ಸಿಕ್ಕಿತು. ಒಂದೆರಡು ಸಲ ಆ ಸೀರಿಯಲ್ ನೋಡಿದ್ದು ನೆನಪಾಯಿತು.
‘ಇದ್ಯಾಕೆ ಇಂತಾ ಸ್ಥಿತೀಗೆ ಇಳಿದ..? ತುಂಬಾ ಬ್ಲೀಡಿಂಗ್ ಆಗಿದೆ! ಇನ್ಟಸ್ಟೈನ್ಸ ಪಂಕ್ಚರ್ ಆಗಿದೆ. ಎಮರ್ಜನ್ಸಿ! ಆಪರೇಷನ್ ಥಿಯೇಟರ್ಗೆ ಮೂವ್ ಮಾಡಿ! ಅವನ ಕಡೆಯವರು ಯಾಯರ್ಾರು ಬಂದಿದ್ದಾರೆ..? ಅಜರ್ೆಂಟು ಐದಾರು ಬಾಟಲ್ ಬ್ಲಡ್ ಅರೇಂಜ್ ಮಾಡೋಕೆ ಹೇಳಿ..’ ಡಾಕ್ಟರ್ ನಸರ್್ಗೆ ಹೇಳಿ ಆಪರೇಷನ್ ಥಿಯೇಟರಿನತ್ತ ನಡೆದರು’
0 0 0 0 0 0
ರಾತ್ರಿ ಒಂದು ಗಂಟೆಯ ನೀರವ ಸಮಯದಲ್ಲಿ ಫೋನಿಗೆ ಬಂದ ಕರೆ ಕರ್ಕಶ ಶಬವಾಗಿ ಕೇಳಿತು ವೆಂಕಟೇಶಲು ಬಹಳ ಹೊತ್ತು ಹೊರಳಾಡಿ ಆಗ ತಾನೆ ನಿದ್ರೆಗೆ ಜಾರಿದ್ದರು. ಸಿನೀಮಾ ಮತ್ತು ಟಿವಿ ಸೀರಿಯಲ್ ನಿರ್ಮಾಪಕ ವೆಂಕಟೇಶಲುವಿಗೆ ಆ ಫೋನಿನಿಂದ ನಿದ್ರೆ ಹಾರಿಹೋಗಿ ಕೋಪ ಬಂದಿತು.
‘ಯಾರ್ರೀ ಅದು..? ನಿಮಗೆ ಫೋನು ಮಾಡೋಕೆ ಹೊತ್ತು ಗೊತ್ತು ಇಲ್ಲವೆ..?’
‘ನಾನು ಸ್ವಾಮಿ ಭೈರನಾಯಕ’
‘ಬೆಳಿಗ್ಗೆ ಮಾಡಿದ್ದರೆ ನಿನ್ನ ಗಂಟೇನು ಹೋಗ್ತಿತ್ತು..? ಅದೇನು ಪ್ರಾಣ ಹೋಗೋ ಅಂತಾ ವಿಷಯ..?’
‘ಸ್ವಾಮಿ ಸಿದ್ದ.. ಏಳ್ಗಂಟೆ ಟೈಂನಾಗೆ ಚಾಕೂಲಿ ತಿವಿಕೊಂಡಬಿಟ್ಟಿದಾನೆ?”
‘ಯಾವ ಸಿದ್ದ..?’
‘ನಿಮ್ಮ ಸೀರಿಯಲ್ ಸಿದ್ದ..!’
‘ಸತ್ತನೋ..? ಇಲ್ಲಾ ಇನ್ನೂ ಬದ್ಕಿದಾನೋ..?’
‘ಆಸ್ಪತ್ರೇಲೌನೆ..ಸೀರಿಯಸ್ಸಾಗಿದೆ’
‘ಸರಿ ನನಗೆ ಯಾಕೆ ಪೋನು ಮಾಡಿದೆ? ನನ್ನ ಸೀರಿಯಲ್ ಮುಗೀತು..ಅವನಿಗೆ ಕೊಡಬೇಕಾದದ್ದೆಲ್ಲಾ ಕೊಟ್ಟಾಗಿದೆ..’
‘ಸ್ವಲ್ಪ ಸಹಾಯ ಈ ಸಮಯದಾಗೆ ಬೇಕಾಗಿತ್ತು’
‘ಅದ್ಕೆ ಡಾಕ್ಟರಿದ್ದಾರೆ..ಫೋನಿಡು’
0 0 0 0 0 0
‘ಬ್ರೇಕಿಂಗ್ ನ್ಯೂಸ್..ಕಾಡಿನ ಜನ ನಾಡಿನಲ್ಲಿ ಹೀರೋ ಸಿದ್ದೇಶ ಆತ್ಮಹತ್ಯೆಯ ಪ್ರಯತ್ನ! ತಡ ರಾತ್ರಿ ಹಾಡಿಯ ತನ್ನ ಗುಡಿಸಿಲಿನಲ್ಲಿ ಚಾಕುವಿನಿಂದ ಇರಿದುಕೊಂಡ ಸುದ್ದಿ! ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ’
ಬೆಳಗಿನ ಏಳಕ್ಕೇ ಟಿವಿ ಮಾಧ್ಯಮಗಳು ಸಿದ್ದನ ಆತ್ಮಹತ್ಯೆ ಪ್ರಕರಣವನ್ನು ಪ್ರಸಾರ ಮಾಡಲು ಶುರು ಮಾಡಿದ್ದವು!
ವಾಕಿಂಗಿಗೆ ಹೊರಡಲು ಸಿದ್ದವಾಗಿದ್ದ ಕಳೆದ ಇಲೆಕ್ಷನ್ನಿನಲ್ಲಿ ಶಾಸಕ ಸ್ಥಾನಕ್ಕೆ ನಿಂತು ಸೋತಿದ್ದ ರಾಜಣ್ಣ ಒಂದು ಕ್ಷಣ ಆಸಕ್ತಿಯಿಂದ ಸುದ್ದಿ ಕೇಳಿದರು. ಮನಸ್ಸಿನಲ್ಲೇ ಲೆಕ್ಕಾಚಾರ ಹಾಕತೊಡಗಿದರು
0 0 0 0 0 0
‘ಟಿವಿ ನೋಡ್ತಾ ಇದ್ದೀರಾ ವಿಮಲಾ..?’
ಪಾಮರ್ ಸಾಮಾಜಿಕ ಸೇವಾ ಸಂಸ್ಥೆಯೆ ಅಧ್ಯಕ್ಷ ವಿಶ್ವಾಸ್ ಕೇಳಿದರು.
‘ಇನ್ನೂ ಟಿವೀನೇ ಆನ್ ಮಾಡಿಲ್ಲ’ ಕಾರ್ಯದರ್ಶಿ ಉತ್ತರಿಸಿದರು.
‘ಬೇಗ ಬಿ2 ಚಾನಲ್ ಆನ್ ಮಾಡಿ ನೋಡಿ, ಹಾಗೇ ಹತ್ಗಂಟೇಗೆ ಎಮರ್ಜನ್ಸಿ ಮೀಟಿಂಗ್ ಕರೀರಿ’
0 0 0 0 0 0
ಸಿದ್ದನಿಗೆ ಒಂದು ಕ್ಷಣ ಏನೋ ವಿಚಿತ್ರ ನಡೆಯುತ್ತಿದೆ ಎನ್ನಿಸಿತು. ಬುದ್ದಿ ಬಂದಾಗಿನಿಂದ ನೆನಪಿನಲ್ಲಿದ್ದ ಎಲ್ಲಾ ಘಟನೆಗಳೂ ಒಂದರ ಮೇಲೋಂದರಂತೆ ವೇಗವಾಗಿ ಮನಸಸಿನಲ್ಲಿ ಮೂಡಿ ಮರೆಯಾಗತೊಡಗಿದವು.
ಗೆಳೆಯರೊಂದಿಗೆ ಆಡಿದ್ದು, ತಂಗಿಯೊಂದಿಗೆ ಜಗಳವಾಡಿದ್ದು, ಅವ್ವ ತನಗೆ ಕೈತುತ್ತು ತಿನ್ನಿಸಿದ್ದು! ಅಯ್ಯ ಕುಡಿದು ಬಂದು ತೋರಾಡುತ್ತಿದ್ದುದು! ಅವ್ವ-ಅಯ್ಯ ಬಡಿದಾಡಿದ್ದು! ಯಾರೋ ತಮ್ಮ ಗುಡಿಸಿಲಿಗೆ ಬೆಂಕಿ ಹಚ್ಚಿದ್ದು! ಕದ್ದು ಬೀಡಿ ಸೇದಿದ್ದು! ಓರೆಗೆಯವರೊಂದಿಗೆ ಬಡಿದಾಡಿದ್ದು! ಸೀರಿಯಲ್ ಷೂಟಿಂಗು! ಲಿಷಾ ಜೊತೆ ಹಾಡಿದ್ದು, ಕುಣಿದದ್ದು! ತಬ್ಬಿಕೊಂಡಾಗ ಅವಳ ಒರಟ ಎಂದು ಬೈದದ್ದು! ಸಿನೀಮಾ ಷೂಟಿಂಗು..!
‘ನಂಗೆ ನಿನ್ನ ಸಿನಿಮಾದಲ್ಲಿ ಚಾನ್ಸ್ ಕೊಡಿಸಿದ್ದಕ್ಕೆ ತ್ಯಾಂಕ್ಸ್’ ಎಂದು ಲಿಷಾ ಹೇಳಿದ್ದು! ಅವಳಿಗಾಗಿ ತಾನು ನಿದ್ರೆಗೆಟ್ಟಿದ್ದು! ಕೊನೆಗೆ ಅವಳನ್ನು ಮದುವೆಯಾಗಲು ಕೇಳಿದ್ದು! ಅವಳು ರೇಗಿ ‘ಮೈಮೇಲೆ ಪ್ರಜ್ಞೆ ಇದೆಯಾ?’ ಎಂದು ಬೈದದ್ದು! ಆಗಲೇ ತಾನು ಸಾಯಲು ನಿಧರ್ಾರ ಮಾಡಿದ್ದು!
ಉಡುಗಿಹೋಗಿದ್ದ ಶಕ್ತಿ ಒಮ್ಮೆಲೇ ಮೂರು ಪಟ್ಟು ಹೆಚ್ಚಾಗಿ ಬಂದಿತ್ತು! ಶರೀರವನ್ನು ಹಿಂಡುತ್ತಿದ್ದ ನೋವು ಅಚ್ಚರಿ ಎನ್ನುವಂತೆ ಮಾಯವಾಗಿತ್ತು. ಮೈ ಹಗುರವಾಗಿತ್ತು. ತಾನು ಗಾಳಿಯಲ್ಲಿ ತೇಲುತ್ತದ್ದೆ! ಅವ್ವ, ತಂಗಿ ಮತ್ತು ಹಾಡಿಯ ಜನ ನುಗ್ಗಿ ತನ್ನತ್ತ ಬಂದಿದ್ದು! ಅವ್ವ ಎದೆ ಬಡಿದುಕ್ಕೊಳ್ಳುತ್ತಿದ್ದಳು. ಎಲ್ಲರೂ ಅಳುತ್ತಿದ್ದರು! ಆದರೆ ಯಾಕೆ..? ತಾನು ಚೆನ್ನಾಗಿದ್ದೀನಲ್ಲ..?
0 0 0 0 0 0
ಬಿ2 ಟಿವಿಚಾನಲ್ಲಿನ ಕಾನ್ಫರೆನ್ಸ್ ರೂಮಿನಲ್ಲಿ ಕಾಡಿನ ಮಂದಿ ಪ್ಯಾಟೇಲಿ ಸೀರಿಯಲ್ಲಿನ ನಾಯದ ಸಿದ್ದೇಶನ ಸಾವಿನ ಬಗೆಗೆ ವಿಷೇಶ ಕಾರ್ಯಕ್ರಮ ಬಿತ್ತರವಾಗುತ್ತಿತ್ತು.
‘ಅಮಾಯಕ ಯುವಕನೊಬ್ಬನಿಗೆ ತೀರಲಾರದ ಆಸೆಯ ಕಿಚ್ಚು ಹತ್ತಿಸಿ ಅವನನ್ನು ಈ ಸ್ಥಿತಿಗೆ ತಂದಿದ್ದು ಘೋರ ಅಪರಾಧ. ಇದೊಂದು ಸಾಮಾಜಿಕ ಅಪರಾದ. ಇದಕ್ಕೆ ಯಾರು ಕಾರಣವೋ ಅವರಿಗೆ ಶಿಕ್ಷೆಯಾಗಬೇಕು’
ಪಾಮರ್ ಸಂಸ್ಥೆಯ ಅಧ್ಯಕ್ಷರು ದನಿ ಎತ್ತರಿಸಿ ಹೇಳಿದರು.
‘ಇಲ್ಲಿ ಆಡಳಿತಾರೂಢ ಸಕರ್ಾರದ ಬೇಜವಾಬ್ದಾರಿತನವನ್ನ ತೋರಿಸುತ್ತಾ ಇದೆ. ಇಂತಾ ಕಾರ್ಯಕ್ರಮ ನಿಯಂತ್ರಿಸುವಲ್ಲಿ ಸಕರ್ಾರ ಸೋತಿದೆ’
ಮಾಜಿ ಶಾಸಕ ರಾಜಣ್ಣ ಹೇಳಿದರು.
‘ಒಂದು ನಿಮಿಷ ಟಿವಿ ಸೀರಿಯಲ್ ನಿಮರ್ಾಪಕ ವೆಂಕಟೇಶಲು ಅವರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರ ಅಭಿಪ್ರಾಯವನ್ನು ಕೇಳೋಣ”
ಕಾರ್ಯಕ್ರಮದ ನಿರ್ವಾಹಕಿ ಎಲ್ಲರ ಬಾಯನ್ನೂ ಕೆಲಕ್ಷಣ ಮುಚ್ಚಿಸಿದಳು.
‘ ವೆಂಕಟೇಶಲು ಅವರೆ ನಿಮ್ಮ ಇತ್ತೀಚಿನ ಜನಪ್ರಿಯ ಸೀರಿಯಲ್ ನಾಯಕ ಸಿದ್ದ ಆಲಿಯಾಸ ಸಿದ್ದೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇದರ ಬಗೆಗೆ ನಿಮ್ಮ ಅಭಿಪ್ರಾಯವೇನು?’
ಸಿದ್ದೇಶ್ ಬುದ್ದಿವಂತ, ನನ್ನ ಸೀರಿಯಲ್ ಮಾಡುವ ಸುಮಾರು ಆರು ತಿಂಗಳ ಕಾಲ ಅವನಿಗೆ ಒಳ್ಳೆಯ ತರಬೇತಿ ಕೊಟ್ಟಿದ್ದೆವು! ಈ ಅವಧಿಯಲ್ಲಿ ಸಾಕಷ್ಟು ಪ್ರಬುದ್ಧನಾಗಿ ಬೆಳೆದ. ಅವನು ಆತ್ಮಹತ್ಯೆ ಮಾಡಿಕೊಂಡಿರೋದು ನನಗೆ ನಂಬೋಕೆ ಆಗ್ತಿಲ್ಲ..ನಾನು ಒಳ್ಳೆಯ ಅವಕಾಶ ಕೊಟ್ಟೆ. ಒಳ್ಳೆಯ ಸಂಭಾವನೆ ಕೊಟ್ಟೆ! ಅದಾದ ಮೇಲೆ ಅವನು ಎರಡು ಸಿನಿಮಾದಲ್ಲಿ ನಟಿಸುತ್ತಿದ್ದ. ಯಾಕೆ ಆತ್ಮಹತ್ಯೆ ಮಾಡಿಕೊಂಡಾಂತ ನನಗಿನ್ನೂ ಅರ್ಥವಾಗ್ತಿಲ್ಲ..’
‘ವೀಕ್ಷಕರೇ ಇದೀಗ ನಮ್ಮ ತಂಡ ಆಸ್ಪತ್ರೆಯಲ್ಲಿದೆ. ಅಲ್ಲಿ ಸಿದ್ದೇಶನ ಮೃತ ಶರೀರವಿದೆ ಮತ್ತು ಅವನ ಹಾಡಿಯ ಜನರಿದ್ದಾರೆ ಆ ದೃಷ್ಯಗಳನ್ನ ನಿಮಗೆ ಈಗ ತೋರಿಸ್ತೇವೆ..ನಂತರ ಈ ಚಚರ್ೆ ಮುಂದುವರಿಯುತ್ತೆ.. ಈಗ ಒಂದು ಸಣ್ಣ ಬ್ರೇಕ್..’
ಸಿದ್ದನ ಬದುಕು ಸಮಾಜದ ವಿವಿಧ ಸ್ತರದ ಜನರಿಗೆ ವಿವಿಧ ರೀತಿಯಲ್ಲಿ ಕಾಣುತ್ತಿತ್ತು. ಸುದ್ದಿಗೆ ಅವನ ಬದುಕು ಗ್ರಾಹ್ಯವಾಗಿತ್ತು! ಗ್ರಾಸವಾಗಿತ್ತು! ನಾಲಿಗೆಗಳಿಗೆ ಜಗಿಯಲು ಚ್ಯೂಯಿಂಗ್ ಗಮ್ ಸಿಕ್ಕಿತ್ತು! ಅಕ್ಷರಗಳಿಗೆ ಹೊಸ ಆಟ ಸಿಕ್ಕಿತ್ತು!
ಇದಾವುದರ ಪರಿವೆಯಿಲ್ಲದೆ ಕಾಡು ಹಕ್ಕಿಯೊಂದರ ಹಾರಾಟ ನಿಂತಿತ್ತು! ಕೊರಳು ಸ್ಥಬ್ದವಾಗಿ ಹಾಡು ನಿಂತಿತ್ತು!







0 Comments