ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡು ಸೇರಿದ ಪ್ರೇಮಿಗಳ ಕಥೆ ’ಮಲೆಗಳಲ್ಲಿ ಮದುಮಗಳು’

ಕಾಡು ಸೇರಿದ ಪ್ರೇಮಿಗಳು ಮತ್ತೆ ಪ್ರತ್ಯಕ್ಷವಾಗಿದ್ದೇ ’ಮಲೆಗಳಲ್ಲಿ ಮದುಮಗಳು’

ಡಾ ಬಿ ಆರ್ ಸತ್ಯನಾರಾಯಣ

ಚಿತ್ರಗಳು : ಸುರೇಶ್ ಕುಮಾರ್

ಇಪ್ಪತ್ತನೆಯ ಶತಮಾನದ ಅತ್ಯಂತ ಮಹತ್ವದ ಕಾದಂಬರಿಗಳಲ್ಲಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಸರ್ವೋದಯ ತತ್ವವನ್ನು ಪ್ರತಿಪಾದಿಸುವ, ಈ ಕಾದಂಬರಿಯಲ್ಲಿ, ಕವಿಯೇ ಮೊದಲ ಮಾತಿನಲ್ಲಿ ಹೇಳುವಂತೆ ’ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ’. ಇನ್ನೊಂದು ಕಡೆ, ೩೧.೩.೧೯೬೪ರಂದು ಬರೆದ ಚುಟುಕವೊಂದರಲ್ಲಿ ಕಾದಂಬರಿಯ ಮಹತ್ವವನ್ನು ಹೀಗೆ ಪ್ರತಿಪಾದಿಸಿದ್ದಾರೆ. ಅದರ ಶೀರ್ಷಿಕೆ ’ಪೂರ್ಣದೃಷ್ಟಿಯ ಮಹಾಕಾದಂಬರಿ’
ಸರಸ್ವತಿಯ ಸಹಸ್ರ ಬಾಹು;
ಸರಸ್ವತಿಯ ಸಹಸ್ರಪಾದ
ಸರಸ್ವತಿಯ ಸಹಸ್ರವದನ:
ನಾಟ್ಯಮಾನ ದೇವಿಗೆ
ಪೂರ್ಣದೃಷ್ಟಿಯೀ
ಕಾದಂಬರಿಯೆ ಮಹಾಸದನ!

ಕಾದಂಬರಿಯನ್ನು ’ಕರತಲ ರಂಗಭೂಮಿ’ ಎಂದು ಕರೆಯಲಾಗುತ್ತದೆ. ಈ ಮಾತಿಗೆ ಅತ್ಯಂತ ಉತ್ತಮ ಉದಾಹರಣೆ ಮಲೆಗಳಲ್ಲಿ ಮದುಮಗಳು. ತನ್ನ ಒಡಲಲ್ಲಿ, ಅಸಂಖ್ಯಾಂತ ಉಪಕತೆಗಳನ್ನು, ನಾಟಕೀಯ ಅಂಶಗಳನ್ನು ಅಡಗಿಸಿಟ್ಟುಕೊಂಡಿರುವ ಈ ಬೃಹತ್ ಕಾದಂಬರಿ, ಇಂದು ರಂಗಭೂಮಿಯ ಮೇಲೂ ದಾಖಲೆ ಪ್ರದರ್ಶನ ಕಾಣುತ್ತಿರುವುದು ಸರಿಯಷ್ಟೆ. ಈ ಹಿನ್ನೆಲೆಯಲ್ಲಿ ಈ ಕಾದಂಬರಿಯ ಒಂದು ಪ್ರಮುಖ ಘಟನೆಯ ಬಗ್ಗೆ ಒಂದೆರಡು ಸಾಲು ಬರೆಯುವ ಅನ್ನಿಸುತ್ತಿದೆ. ಕಾರಣ ಇಷ್ಟೆ. ಸಾಹಿತ್ಯವನ್ನು ಜೀವನದ ಪ್ರತಿಕೃತಿ ಅನ್ನುತ್ತಾರೆ. ಲೋಕರಂಗದಲ್ಲಿ ಸಲ್ಲಬಹುದಾದದ್ದು, ಸಲ್ಲದಿರಬಹುದಾದದ್ದು ಎಲ್ಲವೂ ಕಲಾರಂಗದಲ್ಲಿ ಸಲ್ಲುತ್ತದೆ. ಆದರೂ ’ಜೀವನಕ್ಕೆ ಹತ್ತಿರವಾದ ಕಲೆ ದೀರ್ಘಾಯುಷಿ!’
ಮುಕುಂದಯ್ಯ ಮತ್ತು ಚಿನ್ನಮ್ಮ – ಮದುಮಗಳು ಕಾದಂಬರಿಯ ಅತ್ಯಂತ ಮಹತ್ವದ ಘಟನೆಯ ಪ್ರಮುಖ ಪಾತ್ರದಾರಿಗಳು. ಈ ಪಾತ್ರಗಳ ಮುಖಾಂತರವೇ ಕಾದಂಬರಿಯ ಅದ್ಯಾತ್ಮಿಕ ಮುಖದ ಅನಾವರಣವಾಗುವುದು. ಇವರಿಬ್ಬರ ಸಹಯೋಗದ ಫಲವಾಗಿ ಮುಂದೆ ಜನಿಸಲಿರುವ ಹೆಣ್ಣು ಶಿಶುವೊಂದರ ಉದರದಲ್ಲಿ ಜನಿಸುವ ವ್ಯಕ್ತಿಯೊಬ್ಬ ಮಹಾಪುರುಷನಾಗುತ್ತಾನೆ – ಎಂದು ಕಲ್ಲೂರಿನಲ್ಲಿ ಗಡ್ಡದಯ್ಯ ಮುಕುಂದಯ್ಯನಿಗೆ ಮಾತ್ರ ತಿಳಿಯುವಂತೆ ಭವಿಷ್ಯ ಹೇಳಿರುತ್ತಾನೆ. ಗಡ್ದಯ್ಯನ ಮುಖಾಂತರ ಮಂತ್ರವೇನೋ ಸಿದ್ಧವಾಗುತ್ತದೆ. ಆದರೆ ಯಂತ್ರ-ತಂತ್ರ ಎಲ್ಲವೂ ಲೋಕರಂಗದ ಮಾನವ ಪ್ರಯತ್ನದ ಮುಖಾಂತರವೇ ಆಗಬೇಕಿರುತ್ತದೆ. ಅದಕ್ಕೆ ಪೂರಕವಾಗಿ ಮುಕುಂದಯ್ಯನ ಶ್ರೇಯೋಭಿಲಾಷಿಗಳು, ಮಿತ್ರರು, ಶತ್ರುಗಳು ಕೊನೆಗೆ ಪ್ರಕೃತಿಯೂ ಕೈ ಜೋಡಿಸುತ್ತದೆ.
ರೋಗಪೀಡಿತನೂ ಮಧ್ಯವಯಸ್ಕನೂ ಆದ ಸಿಂಭಾವಿ ಮನೆಯ ಯಜಮಾನ ಹಾಗೂ ಸಾಹುಕಾರ ಭರಮೈ ಹೆಗ್ಗಡೆ ಎರಡನೆಯ ಮದುವೆಗೆ ಸಿದ್ಧನಾಗಿರುತ್ತಾನೆ. ಹಳೆಮನೆ ಸುಬ್ಬಣ್ಣಹೆಗ್ಗಡೆಯವರ ಕಿರಿಯ ಮಗಳು ಮಂಜಮ್ಮ (ಬುಚ್ಚಿ) ಆತನಿಗೆ ಹೆಂಡತಿಯಾಗಿ ಬರುವುದು, ಭರಮೈ ಹೆಗ್ಗಡೆಯ ತಂಗಿ ಲಕ್ಕಮ್ಮ, ಮಂಜಮ್ಮಳ ಅಣ್ಣ ತಿಮ್ಮಪ್ಪ ಹೆಗ್ಗಡೆಯ ಹೆಂಡತಿಯಾಗಿ ಹೋಗುವುದು – ಹೀಗೆ ಕೊಟ್ಟು ತರುವುದರ ಒಪ್ಪಂದವೂ ಆಗಿರುತ್ತದೆ. ಆದರೆ ಭರಮೈ ಹೆಗ್ಗಡೆಯ ಮೊದಲನೆಯ ಹೆಂಡತಿ ಜುಟ್ಟಮ್ಮ ಹಳೆಮನೆಯ ಮಗಳೇ ಆಗಿರುತ್ತಾಳೆ. ತನ್ನ ಸವತಿಯಾಗಿ ತನ್ನ ಚಿಕ್ಕಪ್ಪನ ಮಗಳೇ ಬರುವುದು ಅವಳಿಗೆ ಇಷ್ಟವಿಲ್ಲ. ಇನ್ನೂ ಹಲವಾರು ಕಾರಣಗಳಿಂದ ಮದುವೆ ಮುರಿದುಬೀಳುತ್ತದೆ. ಹಳೆಮನೆಯವರ ಹಠದ ಮೇಲೆ, ಹೂವಳ್ಳಿ ವೆಂಕಟಣ್ಣನಾಯಕ ಮಗಳ ಚಿನ್ನಮ್ಮಳನ್ನು ಮದುವೆಯಾಗುವ ಸಿದ್ಧತೆ ನೆಡೆಯುತ್ತದೆ. ಭರಮೈ ಹೆಗ್ಗಡೆಯ ಸಾಲಗಾರನಾಗಿದ್ದ, ಹೂವಳ್ಳಿ ನಾಯಕರು ವಿಧಿಯಿಲ್ಲದೆ ತಮ್ಮ ಮಗಳನ್ನು, ಆತನ ಅಪ್ಪನ ವಯಸ್ಸಿನ ಭರಮೈ ಹೆಗ್ಗಡೆಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿಬಿಡುತ್ತಾನೆ.

ಇತ್ತ ಗಡ್ಡದಯ್ಯ ಕೊಟ್ಟ ಮಂತ್ರಕ್ಕೆ ಯಂತ್ರ-ತಂತ್ರ, ಯತ್ನ-ಪ್ರಯತ್ನಗಳು ಅತ್ಯಂತ ತ್ವರಿತವಾಗಿ ಸಾಗುತ್ತವೆ. ಮುಕುಂದಯ್ಯ ತನ್ನ ಮನದನ್ನೆ ಚಿನ್ನಮ್ಮಳನ್ನು ಆಕೆಯ ಬದುಕಿನ ಪರಮಸಂಕಷ್ಟದಿಂದ ಪಾರುಮಾಡಲು ಗಟ್ಟಿ ನಿರ್ಧಾರ ಮಾಡುತ್ತಾನೆ. ಐತ, ಪೀಂಚಲು ಮೊದಲಾದವರು ಮುಕುಂದಯ್ಯನ ಮೇಲಿನ ಗೌರವದಿಂದ ಆತನ ಸಹಾಯಕ್ಕೆ ನಿಲ್ಲುತ್ತಾರೆ. ಗುತ್ತಿ, ತಿಮ್ಮಿಯರು ತಮಗೆ ಒದಗಿದ್ದ ಸಂಕಷ್ಟದಿಂದ ಪಾರಾಗುವ ಅನಿವಾರ್ಯತೆಯಿಂದಲೂ ಮುಕುಂದಯ್ಯನ ಮೇಲಿನ ಸ್ನೇಹಭಾವದಿಂದಲೂ ಆ ಶಕ್ರೀಕಾರ್ಯಕ್ಕೆ ಕೈಜೋಡಿಸುತ್ತಾರೆ. ದೇವಯ್ಯಗೌಡರು (ಗುತ್ತಿ ತಮ್ಮ ಆಳು ತಿಮ್ಮಿಯನ್ನು ಅಪಹರಿಸಲು ಕಾರಣನಾದ) ಭರಮೈ ಹೆಗ್ಗಡೆಯ ಮೇಲಿನ ದ್ವೇಷದಿಂದ ಮುಕುಂದಯ್ಯನ ಮದುಮಗಳನ್ನು ಅಪಹರಿಸುವ ಪ್ರಯತ್ನಕ್ಕೆ ಪ್ರೋತ್ಸಾಹದ ನೀರೆರೆಯುತ್ತಾನೆ. ಇತ್ತ ತಿಮ್ಮಪ್ಪಹೆಗ್ಗಡೆ, ಚಿನ್ನಮ್ಮಳ ಜೊತೆಗಿನ ಮದುವೆ ನಿಂತು, ಭರಮೈ ಹೆಗ್ಗಡೆ ಮತ್ತೆ ತನ್ನ ತಂಗಿ ಮಂಜಮ್ಮಳನ್ನೇ ಮದುವೆಯಾಗುವಂತಾದರೆ, ತಾನು ಭರಮೈ ಹೆಗ್ಗಡೆಯ ತಂಗಿ ಲಕ್ಕಮ್ಮಳನ್ನು ಮದುವೆಯಾಗುವ ಹಾದಿ ಸುಲಭವಾಗುತ್ತದೆ ಎಂಬ ಕಾರಣಕ್ಕೆ ಬೆಂಬಲಕ್ಕೆ ನಿಲ್ಲುತ್ತಾನೆ. ಅವರೆಲ್ಲರಿಗಿಂತ ಪ್ರಕೃತಿ ಮಳೆಯ ರೂಪದಲ್ಲಿ, ಮಳೆಗಾಲದ ಕಗ್ಗತ್ತಲಿನ ರೂಪದಲ್ಲಿ ಅವರ ಸಹಾಯಕ್ಕೆ ಬರುತ್ತದೆ. ಅತ್ತ ದೂರದ ದಕ್ಷಿಣೇಶ್ವರದಲ್ಲಿ ಯುವ ಸಾಧುವೊಬ್ಬ ಹುಲಿಕ್ಕಲ್ಲು ನೆತ್ತಿಯಲ್ಲಿನ ಇವರ ಪ್ರಯತ್ನಕ್ಕೆ ಯಶಸ್ಸನ್ನು ಹಾರೈಸಿ ಚಿತ್ತಪೋಮಂಗಳದ ಶ್ರೀರಕ್ಷೆಯನ್ನು ಕಟ್ಟುತ್ತಾನೆ.
ಮದುಮಗಳು ಮಲೆ ಸೇರಿ ಮಲೆಗಳಲ್ಲಿ ಮದುಮಗಳಾಗುತ್ತಾಳೆ. ತನ್ನ ಪ್ರೇಮದ ಮೂರ್ತಿಯನ್ನು ಸೇರುತ್ತಾಳೆ. ನಿರ್ಮಲವಾದ ಪ್ರೇಮ ಗೆಲ್ಲುತ್ತದೆ.

ಈ ಕಾದಂಬರಿಯ ಕಾಲ ಸರಿಸುಮಾರು ಹತ್ತೊಂಬತ್ತನೆಯ ಮಧ್ಯಭಾಗ. ಕವಿ ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಕುಳಿತು ಕಾದಂಬರಿ ಬರೆಯುತ್ತಿದ್ದಾರೆ. ಆ ಬೃಹತ್ ಕಾದಂಬರಿಯ ಬಹು ಪ್ರಮುಖ ಘಟ್ಟವಾದ ಈ ಸನ್ನಿವೇಶವನ್ನು ಸೃಷ್ಟಿಸುವಲ್ಲಿ ಕವಿಗೆ ನೆರವಾದ ಸನ್ನಿವೇಶ ಯಾವುದು? ಘಟನೆ ಯಾವುದು? ಪ್ರಶ್ನೆಗಳಿಗೆ ಉತ್ತರ ’ನೆನಪಿನ ದೋಣಿಯಲ್ಲಿ’ ಸಿಗುತ್ತದೆ. ಇದಕ್ಕೆ ಪ್ರೇರಕವಾದ ಸನ್ನಿವೇಶ ನಡೆದದ್ದು ಅದೇ ಮಲೆನಾಡಿನ ಪ್ರದೇಶದಲ್ಲಿ. ಆದರೆ ೧೯೩೪ನೆ ಇಸವಿಯ ಆಸುಪಾಸಿನಲ್ಲಿ. ಅಂದರೆ ಕಾದಂಬರಿಯ ಕಾಲದ ಒಂದು ಶತಮಾನದ ನಂತರ! ಸಾಮಾನ್ಯವಾಗಿ ಲೋಕರಂಗದ ಘಟನೆಗಳು ಕಾಲಾನಂತರ ಕಲಾರಂಗ ಸೇರುತ್ತವೆ. ಆದರೆ, ’ಕುವೆಂಪು’ ಎಂಬ ದೇಶ-ಕಾಲಗಳನ್ನು ಮೀರಿದ ಅದ್ವೈತ ಪ್ರತಿಭೆ ಅದನ್ನೆಲ್ಲವನ್ನೂ ಮೀರಿ ನಿಲ್ಲುತ್ತದೆ. ತನಗಿಂತ ಹಿಂದಿನ ನೂರು ವರ್ಷಗಳ ಹಿಂದಿನ ಕತೆಯಾಗಿ ಆ ಘಟನೆ ಕಲಾರೂಪ ತಾಳುತ್ತದೆ.
ಮೇಗರವಳ್ಳಿಯ ಶಾಲೆಯಲ್ಲಿ ಓದುತ್ತಿದ್ದ ಒಬ್ಬ ಹುಡುಗ ಗಂಗೆ ಎಂಬುವಳಲ್ಲಿ ಅನುರಕ್ತನಾಗಿದ್ದ. ಗಂಗೆಯೂ ಅಷ್ಟೆ; ಆತನನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದಳು. ಆದರೆ ಮನೆಯಲ್ಲಿ ಬಡತನ. ೧೯೩೦ರ ದಶಕದಲ್ಲಿ ಪ್ರೀತಿ ಪ್ರೇಮ ಎಂದು ಹುಡುಗಿಯೊಬ್ಬಳು ಯೋಚಿಸದ ಕಾಲವದು. ಮಲೆನಾಡಿನ ಶ್ರೀಮತರ ಮನೆಯ ಹೆಣ್ಣುಮಕ್ಕಳೂ ಸಹ, ಕೆಲಸದವರಿಗಿಂತ ಬೇರೆಯಲ್ಲದ ಬದುಕನ್ನು ಬದುಕುತ್ತಿದ್ದಂತಹ ಕಾಲ. ಸ್ತ್ರೀ ಸಮಾನತೆ, ಸ್ತ್ರೀ ಸ್ವಾತಂತ್ರ, ಮಹಿಳಾ ಸಂವೇದನೆ ಎಂಬುದೆಲ್ಲಾ ಇನ್ನೂ ಭ್ರೂಣಾವಸ್ಥೆಯಲ್ಲಿದ್ದ ಕಾಲ. ಆ ಸಂದರ್ಭದಲ್ಲಿ ಗಂಗೆ ಏನು ಮಾಡಬೇಕು?
ಆಕೆಯ ತಂದೆ, ಹನುಮೈಗೌಡ ಎಂಬ ವೃದ್ಧನೊಂದಿಗೆ ಆಕೆಯ ಮದುವೆಯನ್ನು ನಿರ್ಧರಿಸಿಬಿಡುತ್ತಾನೆ. ಹನುಮೈಗೌಡ ಧನವಂತ. ಗಂಗೆಯ ಅಪ್ಪನಿಗೆ ಸಾಕಷ್ಟು ದುಡ್ಡಿನ ಆಸೆಯನ್ನೂ ತೋರಿಸಿ, ತಾನು ರೋಗಿಷ್ಟ, ವೃದ್ಧ ಎಂಬುದನ್ನು ಮುಚ್ಚಿಡುತ್ತಾನೆ. ಗಂಗೆ ವಿರೋಧಿಸುತ್ತಾಳೆ. ಆದರೂ ಬಲತ್ಕಾರದಿಂದ ಮದುವೆ ನಡೆದುಹೋಗುತ್ತದೆ. ಗಂಗೆ ಪಟೇಲರಿಗೆ, ಪೊಲೀಸರಿಗೆ ’ಬಲವಂತದ ಮದುವೆ’ಯನ್ನು ನಾನು ಒಲ್ಲೆ ಎಂದು ದೂರು ನೀಡುತ್ತಾಳೆ. ಹನುಮೈಗೌಡನ ಹಣದ ಮುಂದೆ ಅವು ನಿಲ್ಲುವುದಿಲ್ಲ. ಹುಡುಗಿಯೊಬ್ಬಳ ಈ ಪರಿ ದಿಟ್ಟತನವನ್ನು ಕಂಡಿರದ, ಕೇಳಿರದ, ಊಹಿಸಿಯೂ ಇರದ ಆಕೆಯ ಬಂಧುಗಳು, ಮತಸ್ಥರು ಸನಾತನ ಪದ್ಧತಿಗೆ ಶರಣಾಗಿ ಆಕೆಯ ವಿರುದ್ಧವೇ ನಿಲ್ಲುತ್ತಾರೆ! ಆದರೆ ಅಷ್ಟಕ್ಕೆ ಹೆದರದ ಗಂಗೆ, ತಾನು ಪ್ರೀತಿಸಿದ ಹುಡುಗನನ್ನು ಕರೆದುಕೊಂಡು ಕಾಡು ಸೇರಿಬಿಡುತ್ತಾಳೆ! (ತಿಮ್ಮಿ ಗುತ್ತಿಯೊಂದಿಗೆ ಕಾಡು ಸೇರಿದಂತೆ! ಚಿನ್ನಮ್ಮ ಮುಕುಂದಯ್ಯನೊಂದಿಗೆ ಹುಲಿಕಲ್ಲು ನೆತ್ತಿಯನ್ನು ಸೇರಿದಂತೆ!)
ದಿನ ಕಳೆಯುವುದರಲ್ಲಿ, ಅವರಿಬ್ಬರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು, ಸತ್ತೇ ಹೋದರೆಂದು ಸುದ್ದಿಗಳು ಹಬ್ಬಿಬಿಡುತ್ತವೆ. ಅತ್ತ ಹನುಮೈಗೌಡ ವಸೂಲಿ ಸಾಬರನ್ನು, ಪೊಲೀಸರನ್ನು, ತನ್ನ ಕಡೆಯ ಜನರನ್ನು ಸೇರಿಸಿ ಅವರಿಬ್ಬರನ್ನು ಹುಡುಕಿಸಲು ಪ್ರಯತ್ನಿಸುತ್ತಾನೆ. ಹುಡುಗಿಯ ತಂದೆ-ತಾಯಿಯರು ಭಯದಿಂದ ಮಲೆನಾಡು ಯುವಕರ ಸಂಘವನ್ನು ಆಶ್ರಯಿಸಿ ತಮ್ಮನ್ನು ತಮ್ಮ ಮಗಳನ್ನು ಕಾಪಾಡಬೇಕೆಂದು ಬೇಡಿಕೊಳ್ಳುತ್ತಾರೆ.
ಆ ಸಮಯದಲ್ಲಿ ಸಂಘದ ಅಧ್ಯಕ್ಷರಾಗಿದ್ದವರು ಹೆಚ್.ಎಸ್. ಮಂಜಪ್ಪಗೌಡರು. ಕುವೆಂಪು ಅವರ ಬಂಧುಗಳೂ ಹೌದು. (ತುಂಬಾ ಹಿಂದೆ, ಬಾಲಕ ಪುಟ್ಟಪ್ಪನಿಗೆ ಕೇವಲ ಹತ್ತೊ ಹನ್ನೊಂದೊ ವರ್ಷಗಳಿದ್ದಾಗ, ಕಾಡಿನ ನಡುವೆ ’ಲಾಂಗ್ ಫೆಲೊ’ ಕವಿಯ ’ದಿ ಸಾಮ್ ಆಫ್ ಲೈಫ್’ ಕವಿತೆಯನ್ನು ಹೇಳಿ, ಕವಿಯಾತ್ಮಕ್ಕೆ ಚೈತನ್ಯಪೂರ್ಣವಾದ ಮಂತ್ರದೀಕ್ಷೆಯನ್ನು ಇತ್ತವರು) ಅವರು ತಮ್ಮ ಕಡೆಯ ಜನರನ್ನು, ಸಂಘದ ಸದಸ್ಯರನ್ನು ಸೇರಿಸಿ ಗಂಗೆ ಮತ್ತು ಆಕೆಯ ಪ್ರಿಯತಮನನ್ನು ಹುಡುಕಿಸಿ, ಹಿಂದೂ ಲಾ, ಪೊಲೀಸು, ಹಿರಿಯರು ಎಲ್ಲರನ್ನೂ ನಿರ್ಲಕ್ಷಿಸಿ ಅವರಿಬ್ಬರಿಗೂ ಮದುವೆ ಮಾಡಿಸಿಬಿಡುತ್ತಾರೆ. ಮಂಜಪ್ಪಗೌಡರ ವಿರುದ್ಧವೂ ಹಲವರು ಕೆಲಸ ಮಾಡುತ್ತಾರೆ. ಪತ್ರಿಕೆಗಳಲ್ಲಿ ಅವರ ವಿರುದ್ಧ ಸುದ್ದಿಗಳು ಬರುತ್ತವೆ. ಅಂತಹ ಸುದ್ದಿಯೊಂದರ ಪತ್ರಿಕೆಯ ತುಣುಕೊಂದನ್ನು ಕಿಡಿಗೇಡಿಯೊಬ್ಬ ಕುವೆಂಪು ಅವರಿಗೆ ಕಳುಹಿಸಿ, Siಡಿ, soಡಿಡಿಥಿ ಜಿoಡಿ ಣhe ಛಿoಟಿಜiಣioಟಿ oಜಿ ಣhe Pಡಿesiಜeಟಿಣ oಜಿ ಣhe ಒಚಿಟಟಿಚಿಜ ಗಿoಞಞಚಿಟigಚಿಡಿಚಿ ಙuvಚಿರಿಚಿಟಿಚಿ Sಟಿghಚಿ viz ಊ.S. ಒಚಿಟಿರಿಚಿಠಿಠಿಚಿ ಉoತಿಜಚಿ ಎಂದು ಬರೆದಿದ್ದನಂತೆ. ಕುವೆಂಪು ಅವರಿಗೆ ಅದರ ಹಿಂದೆ ಮುಂದೆ ಗೊತ್ತಿರಲಿಲ್ಲ. ಅದಕ್ಕೆ ಅವರು ನೇರವಾಗಿ ಮಂಜಪ್ಪಗೌಡರಿಗೆ ಪತ್ರ ಬರೆದು ಪೂರ್ಣ ವಿಷಯ ತಿಳಿದುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿ ನಡೆದ ಸಂಘದ ವಾರ್ಷಿಕ ಸಭೆಯನ್ನು ಮೇಗರವಳ್ಳಿಯಲ್ಲೇ ನಡೆಸುತ್ತಾರೆ. ಅಧ್ಯಕ್ಷರಾಗಿ ಹೋಗಬೇಕಿದ್ದ ಕುವೆಂಪು ಹೋಗಲಾಗಲಿಲ್ಲ. ಆದರೆ, ಕೃಷ್ಣಗಿರಿ ಕೃಷ್ಣರಾಯ ಎಂಬುವವರನ್ನು ಭಾರತವಾಚನ ಮಾಡಲು ಕಳುಹಿಸಿ, ರುಕ್ಮಿಣೀ ಕಲ್ಯಾಣದ ಭಾಗವನ್ನು ವಾಚನ ಮಾಡಿ, ಶ್ರೀಕೃಷ್ಣನು ಮಾಡಿದ ಸಾಹಸವನ್ನು ಸ್ವಾರಸ್ಯವಾಗಿ ವಿವರಿಸಬೇಕೆಂದೂ, ನಿಜವಾದ ಪ್ರೇಮವೆ ಮದುವೆಗೆ ಕಾರಣವಾಗಬೇಕೆಂದೂ ಹಣವಾಗಲಿ ಬಲತ್ಕಾರವಾಗಲಿ ಆಗಬಾರದು ಎಂಬುದನ್ನು ಎಲ್ಲರಿಗೂ ಮನಸ್ಸಿಗೆ ಹಿಡಿಯುವಂತೆ ಮಾಡಬೇಕೆಂದು ಸೂಚನೆ ಕೊಟ್ಟಿದ್ದರಂತೆ. ಮಂಜಪ್ಪಗೌಡರ ವಿರೋಧಿಗಳಿಗೆ ಇವರ ಒಳ ಉದ್ದೇಶ ಯಾವುದೂ ಅರ್ಥವಾಗದೆ, ಶ್ರೀಕೃಷ್ಣನ ರುಕ್ಮಿಣೀ ಅಪಹರಣದ ಕಥೆ ಕೇಳಿ, ಗಂಗೆಯ ಸಾಹಸವನ್ನು ಮನ್ನಿಸಿರಲೂಬಹುದು! ಆ ಕಥೆ ಮಲೆನಾಡಿನಲ್ಲಿ ಬಹಳ ದಿನಗಳ ಕಾಲ ಜನರ ಮಾತುಗಳ ನಡುವೆ ಪ್ರಸ್ತಾಪವಾಗುತ್ತಿತ್ತಂತೆ!
ಅಂದು ದಿನಚರಿಯಲ್ಲಿ ಹೀಗೆ ಬರೆಯುತ್ತಾರೆ.
ಇಂತಹ ಪ್ರಸಂಗ ಮಲೆನಾಡಿನಲ್ಲಿ ನಡೆದದ್ದು ಇದೇ ಮೊದಲನೆಯದು. ಪ್ರೇಮದ ವಿಜಯವಾದಂತಿದೆ. ಇದು ಕಾದಂಬರಿಗಾಗಲಿ ನಾಟಕಕ್ಕಾಗಲಿ ಚೆನ್ನಾದ ವಸ್ತುವಾಗಿದೆ. ಗುರುಕೃಪೆಯಿಂದ ಎಂದಾದರೂ ಕೈಕೊಳ್ಳುತ್ತೇನೆ.
ಘಟನೆ ನಡೆದ ಸುಮಾರು ಮೂವತ್ತು ವರ್ಷಗಳ ನಂತರ, ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಒಂದು ಪ್ರಮುಖ ಘಟ್ಟವಾಗಿ ಆ ಸಂದರ್ಭ ಬಳಕೆಯಾಗಿದೆ. ಅದೂ ನೂರು ವರ್ಷಗಳ ಹಿಂದೆ ನಡೆದಂತೆ! ’ನೆನಪಿನ ದೋಣಿಯಲ್ಲಿ’ ಬರೆಯುವ ಹೊತ್ತಿಗೆ ಮಲೆಗಳಲ್ಲಿ ಮದುಮಗಳು ಪ್ರಕಟವಾಗಿತ್ತು. ಅದರ ಬಗ್ಗೆ ನೆನಪಿನ ದೋಣಿಯಲ್ಲಿ ನಾನು ಅಂದು ಡೈರಿಯಲ್ಲಿ ಬರೆದಂತೆ ಆ ನಡೆದ ಸಂಗತಿ ವ್ಯರ್ಥವಾಗಲಿಲ್ಲ. ಮುಂದೆ ಅನೇಕ ವರ್ಷಗಳ ಮೇಲೆ ನಾನು ಬರೆದ ’ಮಲೆಗಳಲ್ಲಿ ಮದುಮಗಳು’ ಎಂಬ ಕಾದಂಬರಿಯಲ್ಲಿ ಓದುಗರು ಅದರ ಛಾಯೆಯನ್ನು ಚಿನ್ನಮ್ಮ-ಮುಕುಂದಯ್ಯರ ಪಾತ್ರಗಳಲ್ಲಿ ಪ್ರಭಾವರೂಪವಾಗಿ ಗುರುತಿಸಬಹುದು ಎಂದು ಬರೆದಿದ್ದಾರೆ.
ಷೇಕ್ಸಪಿಯರನದೊ ಯಾರದೊ ಒಂದು ಸಾನೆಟ್ಟು ನನಗೆ ಬಿಎಸ್ಸಿಯಲ್ಲಿ ಟೆಕ್ಸ್ಟ್ ಆಗಿತ್ತು. ’ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಆದರೆ ನಾನು ಯಾವುದನ್ನೂ ಬೇಕಾದರೂ ಶಾಶ್ವತಗೊಳಿಸಬಲ್ಲೆ, ನನ್ನ ಕವಿತೆಯಲ್ಲಿ’ ಎಂದು ಹೇಳಿದಂತೆ ನನಗೆ ನೆನಪು. ಅಂದು ಕಾಡು ಸೇರಿ, ಪ್ರೇಮವಿಜಯಕ್ಕೆ ಕಾರಣರಾಗಿದ್ದ ಗಂಗೆ ಮತ್ತು ಆಕೆಯ ಪ್ರೀತಿಯ ಗಂಡ ಇಂದು ಬದುಕಿದ್ದಾರೊ ಇಲ್ಲವೊ. ಆದರೆ ಅವರ ಬದುಕು ಮಾತ್ರ ಕಲಾರಂಗದಲ್ಲಿ ಶಾಶ್ವತವಾಗಿ ನಿಂತುಬಿಟ್ಟಿದೆ.!

‍ಲೇಖಕರು avadhi

24 April, 2013

2 Comments

  1. Sharada.m

    good

  2. G Venkatesha

    Kuvempuravara Malegalalli madhumagalige prerakavaada sandarbavannu tilisiddirei. Dhanyavaadagalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading