
ಡಾ ಎಸ್ ಬಿ ಜೋಗುರ
ಕಪ್ಪು ಕಾವ್ಯ ಮತ್ತು ಸೊಗಸಾದ ಅನುವಾದ

ಕಪ್ಪು ಕವಿತೆ
ಆಫ್ರಿಕನ್ ಕವಿತೆಗಳು
ಅನುವಾದ-ಎಚ್.ಎಸ್.ರಾಘವೇಂದ್ರರಾವ್
ಅಭಿನವ ಪ್ರಕಾಶನ
ಬೆಲೆ-200 ರೂ
ಅನುವಾದ ಎನ್ನುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ನಮ್ಮದಲ್ಲದ ಭಾಷೆ ಮತ್ತು ದೂರದ ಪ್ರದೇಶದಿಂದ ಕೃತಿಯೊಂದನ್ನು ಎರವಲು ಪಡೆದು, ಅನುವಾದಿಸುವಾಗ ಅನುವಾದಕ ತುಂಬಾ ಜಾಗೃತನಾಗಿರಬೇಕಾಗುತ್ತದೆ. ಅನ್ಯ ಭಾಷೆಯ ಲೇಖಕನ ಉಡುಪು ಧರಿಸುವಾಗ ಥೇಟ್ ಅವನ ಹಾಗೆಯೇ ಕಾಣದಿದ್ದರೂ ನೋಡುಗರಿಗೆ ಅಸಹನೀಯವಾಗಿ ಕಾಣದಿದ್ದರೂ ಸಾಕು. ಕೆಲಬಾರಿ ಅನುವಾದಕರು ಮಕ್ಕಿಕಾ ಮಕ್ಕಿ ಅನುವಾದ ಮಾಡಹೊರಟು, ಅಲ್ಲಿಯದೇ ಭಾಷೆಯ ನುಡಿಗಟ್ಟನ್ನು ಕಟ್ ಆಂಡ್ ಪೇಸ್ಟ್ ಮಾಡುವದರಿಂದ ಓದುಗನಿಗೆ ಆ ಪ್ಯಾರಾದಲ್ಲಿ ಯಥಾವತ್ತಾಗಿ ಬಳಕೆಯಾಗಿರಬಹುದಾದ ತಾಂತ್ರಿಕ ಪದ, ಸರಾಗವಾದ ರಸ್ತೆಯ ನಡುವೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಂಪ್ ಥರಾ ಫೇಲ್ ಆಗುತ್ತದೆ.
ಈಚೆಗೆ ನಾನು ಓದಿದ ಎಚ್.ಎಸ್.ರಾಘವೇಂದ್ರರಾವ್ ಅನುವಾದಿಸಿರುವ ‘ಕಪ್ಪು ಕವಿತೆ’ ಎನ್ನುವ ಆಫ್ರಿರಿಕನ್ ಕವಿತೆಗಳನ್ನು ಕುರಿತಾದ ಕೃತಿಯ ಬಗ್ಗೆ ಹೇಳುವದಾದರೆ, ಇಲ್ಲಿರುವ ಬಹುತೇಕ ಕವಿತೆಗಳು ನಮ್ಮ ನೆಲದ ಸಂವೇದನೆಗಳಿಂದ ದೂರ ಇವೆ ಎಂತೆನಿಸುವದಿಲ್ಲ. ಅದೇ ವೇಳೆಗೆ ಇವುಗಳನ್ನು ಓದುವಾಗಲೆಲ್ಲಾ ಬಿಕ್ಕುವ, ಎದೆ ಭಾರವಾಗುವ ಅನುಭವ ಬರುತ್ತದೆ. ತುಂಬಾ ಸೊಗಸಾದ ರೀತಿಯಲ್ಲಿ ಇಲ್ಲಿಯ ಅನುವಾದವಿದೆ. ಸಮಾಜಶಾಸ್ತ್ರದ ವಿದ್ಯಾರ್ಥಿಯಾದ ನನ್ನಂಥವನಿಗೆ ಈ ಕೃತಿ ಏಕಕಾಲಕ್ಕೆ ಮಾನವಶಾಸ್ತ್ರ ದ ಸಾಂಸ್ಕೃತಿಕ ಅಧ್ಯಯನದ ಜೊತೆಜೊತೆಗೆ ಸಮಾಜಶಾಸ್ತ್ರದ ಕೌಟುಂಬಿಕ ಮತ್ತು ಸಾಮುದಾಯಿಕ ಮನೋಭಾವಗಳ ದಟ್ಟ ಪರಿಚಯವಾದಂತಾಯಿತು. ಈ ಕೃತಿಯ ಅನುವಾದಕರೇ ಹೇಳಿಕೊಂಡಂತೆ ‘ಇಲ್ಲಿನ ಬಹುಪಾಲು ಕವಿತೆಗಳು ವೈಯಕ್ತಿಕ ಚಹರೆಯನ್ನು ಉಳಿಸಿಕೊಂಡರೂ ಸಮುದಾಯಗಳ ಹಾಡಾ ಪಾಡುಗಳನ್ನು ಒಳಗು ಮಾಡಿಕೊಂಡಿವೆ. ನನ್ನ ಮಾತುಗಳು ಕೇವಲ ಕವಿತೆಯ ಆಶಯಗಳಿಗೆ ಸಂಬಂಧ ಪಟ್ಟಿಲ್ಲ. ಆಕೃತಿಗಳ ನೆಲೆಯಲ್ಲಿಯೂ ಇಲ್ಲಿನ ಅನೇಕ ಕವಿತೆಗಳು ಮುಖ್ಯ. ಇಂತಹ ರಾಚನಿಕ ಸೂಕ್ಷ್ಮಗಳನ್ನು ಅಧ್ಯಯನ ಮಾಡುವದರಿಂದ ಕನ್ನಡಕ್ಕೆ ಬಹಳ ಪ್ರಯೋಜನವಾಗುವದೆಂದು ನಾನು ತಿಳಿದಿದ್ದೇನೆ.’ ಎನ್ನುತ್ತಾರೆ. ಕೇವಲ ಕನ್ನಡ ಮಾತ್ರವಲ್ಲದೇ ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರದಂತಹ ಶಿಸ್ತಿನವರ ಅಧ್ಯಯನಕ್ಕೂ ಈ ಅನುವಾದ ನೆರವಾಗಲಿದೆ. ಹಾಗಾಗಿ ಎಚ್.ಎಸ್.ಆರ್. ಅವರ ಅನುವಾದ ಎರಡು ಮೂರು ರೀತಿಯಲ್ಲಿ ಸಾರ್ಥಕವಾದಂತಿದೆ.

ಯಾವುದೇ ದೇಶ ಭಾಷೆಯ ಬರಹಗಳಿದ್ದರೂ ಸಹಜವಾಗಿ ಅಲ್ಲಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಪ್ರಭಾವಳಿ ಇದ್ದೇ ಇರುತ್ತದೆ. ಇನ್ನು ಕವಿತೆಗಳಾಗಿದ್ದರೆ ಅಲ್ಲೊಂದು ಧ್ವನಿ, ರಸ, ವಕ್ರೋಕ್ತಿಗಳು ಇದ್ದೇ ಇರುತ್ತವೆ. ಅನುವಾದಕನೊಬ್ಬ ಈ ಎಲ್ಲ ಭಾವಗಳಿಗೆ ಧಕ್ಕೆ ಬರದಂತೆ ಎಚ್ಚರಿಕೆಯನ್ನು ವಹಿಸಬೇಕಾಗುವುದು. ‘ಕೊನೆಗೂ ಇವುಗಳನ್ನು ಕನ್ನಡದ ಕವಿತೆಗಳೆಂದೇ ಓದಬೇಕು ಇಲ್ಲದಿದ್ದರೆ ಅನಾಥಭಾವನೆ ಕಾಡತೊಡಗುತ್ತದೆ’ ಎನ್ನುವ ಎಚ್ಚರಿಕೆಯಿಂದ ಅನುವಾದಕ ಇಲ್ಲಿಯ ಕವಿತೆಗಳನ್ನು ಅನುವಾದಿಸಿರುವದರಿಂದ ಓದುಗರ ಕಾವ್ಯಸ್ವಾದಕ್ಕೆ ಚ್ಯುತಿಯಂತೂ ಬರುವದಿಲ್ಲ.ಇಲ್ಲಿರುವ ಬಹುತೇಕ ಕವಿತೆಗಳು ವಸಾಹತುಶಾಹಿ ಧೋರಣೆ, ಶ್ರಮ ಸಂಸ್ಕೃತಿ, ಶೋಷಣೆ, ಜನಾಂಗೀಯ ತಾರತಮ್ಯ, ಗುಲಾಮಗಿರಿ, ಹಸಿವು, ಬಡತನ, ಆಶಾವಾದ ಹೀಗೆ ಬದುಕಿನ ಹತ್ತಾರು ಬವಣೆಗಳನ್ನು ಕುರಿತು ಇಲ್ಲಿಯ ಕವಿತೆಗಳು ಆಪ್ತವಾಗಿ ಮಾತನಾಡುತ್ತವೆ. ತೀವ್ರವಾದ ಅನುಭವ ಸ್ಪರ್ಷ ಇಡೀ ಸಂಕಲನದ ಉದ್ದಕ್ಕೂ ಇವೆ. ಇಲ್ಲಿ ಬಹುತೇಕ ಕವಿತೆಗಳು ಮೇಲೆ ಹೇಳಲಾದ ಭಾವಗಳನ್ನಾಧರಿಸಿಯೇ ರಚಿತವಾಗಿವೆ. ಸವರ್ಾಧಿಕಾರಿಗಳ ಅಟ್ಟಹಾಸದ ನಡುವೆಯೂ ತಮ್ಮ ಗಟ್ಟಿತನವನ್ನು ಸಾರಿ ಸಾರಿ ಹೇಳುವ ಸಂವೇದನೆಯ ಈ ಕವಿತೆಯ ಸಾಲುಗಳನ್ನು ನೋಡಿ
‘ಅವರು ನಮ್ಮನ್ನು ಹತ್ತಿಯಾಳು, ಕಾಫಿಯಾಳು,ಎಣ್ಣೆ ತೆಗೆವ ಕರಿಯ ಬಾಳು
ಎಂದು ಕರೆಯುತ್ತಾರೆ
ಸಾವಿನ ಸಂಗಡಿಗರೆಂದು ಕರೆಯುತ್ತಾರೆ
ಆದರೆ ನಾವು ಕುಣಿ ಕುಣಿಯುವ ಜನ
ಗಟ್ಟಿನೆಲದಿ ಕುಣಿವ ಕಾಲು ಗಟ್ಟಿ ನಮ್ಮ ತನುಮನ’
[ಮುಖವಾಡಗಳಿಗೊಂದು ಪ್ರಾರ್ಥನೆ ಲಿಯೋಪಲ್ಡ್ ಸೆಂಘಾರ್-ಪುಟ 38]
ಇದೇ ಕವಿಯ ‘ನ್ಯೂಯಾರ್ಕ್’ ಎನ್ನುವ ಕವಿತೆಯಲ್ಲಿ ನಗರ ಬದುಕಿನ ನರಕಯಾತನೆಯನ್ನು ಅತ್ಯಂತ ಮನೋಜ್ಞವಾಗಿ ಅನುವಾದಿಸಲಾಗಿದೆ. ಆ ಗಗನಚುಂಬಿ ಕಟ್ಟಡಗಳ ನಡುವೆ ಮನುಷ್ಯರನ್ನು ಹುಡುಕುತ್ತಿರುವವನಂತೆ ಕವಿತೆ ಬರೆಯುವ ಈ ಕವಿ ಹೀಗೆ ಹಾಡುತ್ತಾನೆ.
‘ಮೃದುವಾದ ಮಾತುಗಳಿಲ್ಲ, ಏಕೆಂದರೆ ತುಟಿಗಳೇ ಇಲ್ಲ.
ಗರಿಗರಿ ನೊಟು ಕೊಟ್ಟುಕೊಂಡ ಕೃತಕ ಹೃದಯಗಳು
ತಿಳುವಳಿಕೆಯನ್ನು ಪಡೆಯಬಹುದಾದ ಪುಸ್ತಗಳಂತೂ ಮೊದಲೇ ಇಲ್ಲ’ ಎಂದು ಹಲಬುವ ಕವಿ ಕೊನೆಕೊನೆಗೆ ‘ಈಗ ಚಿಂತನೆಯು ಕ್ರಿಯೆಯನ್ನು ಕೂಡಿಕೊಂಡಿದೆ. ಕಿವಿಯು ಹೃದಯವನ್ನು, ಸಂಕೇತವು ಅರ್ಥವನ್ನು ಮರಳಿ ಸೇರಿದೆ’ ಎನ್ನುವ ವಿಶ್ವಾಸವನ್ನು ಹೊರಹಾಕುತ್ತಾನೆ.
[ನ್ಯೂಯಾರ್ಕ್ ಪುಟ 39,41]
‘ನಾನು ಒಂಟಿ’ ಎನ್ನ್ನುವ ಕವಿತೆಯಲ್ಲಿ ಹತಾಶೆಯ ಭಾವ ಬಂಧಗಳಿಗೆ ಸಿಲುಕಿದ ಕವಿ ಅತ್ಯಂತ ಆರ್ತವಾಗಿ ಹೀಗೆ ಹಾಡುತ್ತಾನೆ
‘ಬಯಲು ಸೀಮೆಯಲ್ಲಿ ಒಂಟಿಯಾಗಿದ್ದೇನೆ
ಇರುಳು ಕತ್ತಲೆಯಲ್ಲಿ ಖಾಲಿಯಾಗಿ.
ಹತಾಶವಾಗಿ ಹೊಯ್ದಾಡುತಿವೆ
ಎಲೆಕಳೆದುಕೊಂಡ ಮರಗಳ ಮೂಳೆಪಂಜರ’
[ನಾನು ಒಂಟಿ- ಪು46]
ಹೇಳಲಾಗದ ಭಾವಗಳನ್ನು ಒತ್ತಿ ಹಿಡಿಯುವ ಮೂಲಕ ಅನುಭವಿಸಬಹುದಾದ ಯಾತನೆಯನ್ನು, ತಳಮಳವನ್ನು ಕುರಿತು ಕವಿಯೋರ್ವ ಹೀಗೆ ಹೇಳುತ್ತಾನೆ.
‘ಎಷ್ಟೋ ಸಲ ದೇಹವಾಗಿರುವದರಿಂದಲೇ
ನಾನು ಬದುಕಿದ್ದೇನೆ
ಬದುಕುತ್ತಿದ್ದೇನೆ’
–
ಇನ್ನೆಷ್ಟೋ ಸಲ ನಾನು
ನೆಲೆಯೇ ಇಲ್ಲದ ಯಾವುದೋ ಬಿಂದುವಿನಿಂದ
ಈ ದೇಹ ಇದ ಬಿಟ್ಟು ದೂರ ನಿಲ್ಲುತ್ತೇನೆ’
[ಬದಿಗೆ ಸರಿಯುವದು- ಆಂದ್ರೀ ಚೆದಿದ್ ಪು-54] ‘ಗಾಳಿ ತುಂಬಿದ ಗುಂಗು’ ಎನ್ನುವ ಕವಿತೆಯಲ್ಲಿ ಬಂಧನದ ಬೇಗೆಯಲ್ಲಿ ಬೆಂದು ತಹತಹಿಸಿ, ಮುಕ್ತತೆಯನ್ನು ಹಂಬಲಿಸಿ ಕೋರಿಕೊಳ್ಳುವ ಕೋರಿಕೆಯ ಪರಿಯನ್ನು ಕವಿ ಗ್ಯಾಬ್ರಿಯಲ್ ಓಕಾರಾ ಹೀಗೆ ಹೇಳುತ್ತಾನೆ.
‘ಕಪ್ಪುಚರ್ಮದಲಿ,ಸುಟ್ಟ ಕೂದಲಲಿ
ಅನುದಿನವು ಈ ಹಂಸ ಸೆರೆಯಾಗಿದೆ
ಬಿಡುಗಡೆಯು ಬೇಕೆಂದು ಮೊರೆಯಿಟ್ಟಿದೆ’
[ಗಾಳಿ ತುಂಬಿದ ಗುಂಗು- ಗ್ಯಾಬ್ರಿಯಲ್ ಒಕಾರಾ ಪು-57]
ಕವಿ ಎಚ್.ಎಸ್.ಆರ್. ಅನುವಾದದ ತನ್ಮಯತೆಯನ್ನು ಈ ಸಂಕಲನ ಸಾಬೀತು ಮಾಡುತ್ತದೆ. ಈ ಕೆಳಗಿನ ಕವಿತೆಯನ್ನು ನೋಡಿ. ಇಂಥಾ ಬೇಕಾದಷ್ಟು ಸೊಗಸಾದ ಅನುವಾದದ ತುಣುಕುಗಳು ಇಲ್ಲಿವೆ. ‘ವಿದಾಯ’ ಎನ್ನುವ ಕವಿತೆಯ ಈ ಸಾಲುಗಳನ್ನೇ ನೋಡಿ
‘ಸಂಜಾಲದ ಪೊದೆಗಳಲ್ಲಿ ಬೆತ್ತಲೆ ಬೆಳೆದವರು ನಾವು
ಬಿಸಿಲ ಬಯಲ ಹರಹಿನಲ್ಲಿ ಬಟ್ಟೆ ಚಂಡು ಆಟದಲ್ಲಿ
ಓದು ಬರದೇ ಬರೆಹ ಬರದೆ ಬೆಳೆದವರೇ ನಾವು’
[ವಿದಾಯ-ಅಗಸ್ಟಿನೋ ನೇಟೋ ಪು-62]
ಏನು ಮಾಡಿದರೂ ದಣಿಯ ತಣಿಸಲಾಗದು. ಅವರ ಸೇವೆಯೇ ತಮ್ಮ ಬದುಕಿನ ಭಾಗ್ಯವಾದ ಬಗ್ಗೆ ಬೇಸರಿಸುವ ಈ ಕಪ್ಪು ಜನರ ಗೋಳನ್ನು ಬಿಂಬಿಸುವ ‘ಮೋನಾಂಗಾಬಿ’ ಎನ್ನುವ ಕವಿತೆಯಲ್ಲಿಯ ಈ ಸಾಲುಗಳು ಅವರ ನೋವು ಮತ್ತು ಮಾನಸಿಕ ತೊಳಲಾಟವನ್ನು ಪರಿಚಯಿಸುತ್ತದೆ.
‘ಅಯ್ಯೋ, ಹೋಗಲಿ ಬಿಡಿ
ಕೊನೆಯ ಪಕ್ಷ ನನಗೆ ನೀವು ತಾಳೆಯ ಮರ ಹತ್ತಬಿಡಿ
ತಾಳೆಹೆಂಡ ಕುಡಿಯಬಿಡಿ.ಅಮಲಿನಲ್ಲಿ
ತೊದಲಿನಲ್ಲಿ ಎಲ್ಲ ಮರೆತು ಸಾಯ ಬಿಡಿ’
[ಮೋನಾಂಗಾಂಬಿ-ಆಂತೋನಿಯೋ ಜಸಿಂತೊ ಪು 72]
‘ನಾನು ಯಾರು ಬಲ್ಲೆಯೇನು?’, ‘ದಿಕ್ಕೆಟ್ಟ ಹೆಂಗಸು ಮತ್ತು ಅವಳ ಮಗು’, ‘ವಿಮಾನ ದಾಳಿ’, ‘ಹೊಸ ವರ್ಷದ ದಿನ’, ‘ನಾಗರಿಕತೆ, ಆಹಾ!’, ‘ಗೀಜಗನ ಹಕ್ಕಿ’, ‘ಮೂ ಮರದಲ್ಲಿ ಚಿರತೆ ಇದೆ’, ‘ಚಂದ್ರಬಿಂಬದ ಹಳದಿ ರಸ’, ‘ ಸೂರ್ಯನ ಹಿಂಬದಿ’, ‘ ಮನೆಯೊಡೆಯ’, ‘ಕವಿತೆ’, ‘ನಿಗ್ರೋ ಹಲ್ಲುಗಳು ಮಾತನಾಡಿದಾಗ’, ‘ಅರೆಹೊಟ್ಟೆ ಊಟ’, ‘ಮನೆಕಡೆಯ ಸುದಿ’್ಧ ಹೀಗೆ ಇಡೀ ಸಂಕಲನದಲ್ಲಿ ಹೆಸರಿಸಬಹುದಾದ ಸಾಕಷ್ಟು ಕವಿತೆಗಳಿವೆ. ಕೆಲವಂತೂ ಕೆಲ ಹೊತ್ತು ಹೇಳು ನೀನು ಮನುಷ್ಯನೇ..? ಎಂದು ಕೆಳುತ್ತಾ ಓದುಗನನ್ನು ಹಿಡಿದು ಅಲ್ಲಾಡಿಸುವಂತಿವೆ. ಉದಾಹರಣೆಗೆ ಈ ಕೆಳಗಿನ ‘ಅಮೃತ ಎನ್ನುವ ಕವಿತೆಯನ್ನು ನೋಡಬಹುದು
‘ಮಕ್ಕಳು ಹಸಿವಿನಿಂದ ಚೀರಿದರು
ಸೋಮಾರಿ ತಾಯಂದಿರು ಕ್ಯೂನಿಂತು ನುಗ್ಗಿದರು.
ಹಗಲಿರುಳು ದುಡಿದಿದ್ದ
ತಾಯಂದಿರೂ ಕೂಡಾ
ಮುಳುಗಿ ಹೋದರು ಸಂತೆಗದ್ದಲದಲ್ಲಿ
ಸ್ವಲ್ಪ ಸಮಯದ ನಂತರ,
ಅಮೃತ ವಿಮಾನ ಆಕಾಶವನ್ನು ಮರಳಿ ಸೇರಿತು
ಹಸಿದ ದೇಶಿಯರು ನಿಟ್ಟಿಸಿದರು ಆಕಾಶ ಮಾರ್ಗವನ್ನು.
ಅಲ್ಲಿ ಕಂಡದ್ದೇನು?
ಕಾಮನಬಿಲ್ಲು ಮತ್ತು ಅದು ನೀಡಿದ ಭರವಸೆ.
ಏಳು ದಿವಸಗಳಲ್ಲಿ ಹಸಿವು ಗ್ಯಾರಂಟಿ
ಏಳು ರೀತಿಗಳಲ್ಲಿ ಸಾವು ಗ್ಯಾರಂಟಿ’
[ ಅಮೃತ- ಯಾರೇದ್ ಅಂಗೀರ ಪು-186-187]
‘ನಮ್ಮ ಭೂಮಿ ಸಾಯುವದಿಲ್ಲ’ ಎನ್ನುವ ಅಧ್ಬುತವಾದ ಕವಿತೆಯೊಂದಿದೆ. ಆಕ್ರಮಣಶೀಲ ಗುಣದವರೇ ನೀವು ಏನು ಮಾಡಿದರೂ ನಮ್ಮ ಭೂಮಿ ತಾಯಿ ಸಾಯುವದಿಲ್ಲ ಎಂದು ಆಹ್ವಾನವೊಡ್ಡುವ ಮೂಲಕವೇ ಪ್ರತಿಭಟಿಸುವ ಧ್ವನಿಯನ್ನು ಗುನುಗುವ ಈ ಕವಿತೆಯಲ್ಲಿ ಭರವಸೆಯ ಬೆಳಕಿನ ಉತ್ಕರ್ಷವಿದೆ. ‘ಅದು ಅಪರಾಧವಲ್ಲ’ ಎನ್ನುವ ಪದ್ಯ ವ್ಯವಸ್ಥೆ ಇಲ್ಲವೇ ಪ್ರಭುತ್ವ ತಾನು ಮಾಡುವದನ್ನೆಲ್ಲವನ್ನೂ ಸರಿಯೆಂದೇ ಸಮರ್ಥಿಸಿಕೊಳ್ಳುವ ರೀತಿಯ ಬಗ್ಗೆ ಈ ಕವಿತೆ ವ್ಯಂಗ್ಯವಾಗಿ ಧ್ವನಿಸುತ್ತದೆ.
‘ಮನುಷ್ಯರನ್ನು
ಮನೆಯೊಳಗೆ
ಕೂಡಿ ಹಾಕಿ,
ಆಮೇಲೆ ಅದಕ್ಕೆ
ಬಾಂಬು ಹಾಕುವುದು
ಅಪರಾಧವಲ್ಲ
——-
ಪ್ರತಿಭಟನೆಯ ಘೋಷದೊಡನೆ
ಸಿಡಿದೆದ್ದಾಗ,
ಅದು ಅಪರಾಧ’
[ಅದು ಅಪರಾಧವಲ್ಲ-ಅಮೀನ ಕಸ್ಸಂ ಪು205]
ಹೀಗೆ ಇಡಿಯಾಗಿ ಈ ‘ಕಪ್ಪು ಕವಿತೆ’ ದಮನಿತರ ಧ್ವನಿಯಾಗಿ, ದವಡೆಯ ಸಿಟ್ಟಾಗಿ, ಹಸಿವು ಮತ್ತು ಬಡತನದ ತಾಪವಾಗಿ ಮೂಡಿಬಂದುದು. ಹೀಗಾಗಿ ಇಲ್ಲಿ ಚೆಂದನೆಯ ಲಯ, ಬಂಧಗಳ ಕೊರತೆ ಅನುವಾದಕರ ಗಮನಕ್ಕೆ ಬಂದಂತೆ ಕೆಲವೊಮ್ಮೆ ಓದುಗನ ಅನುಭವಕ್ಕೂ ಬರಬಹುದು. ಆದರೆ ಕವಿತೆಯೊಂದರ ಗೇಯತೆಯ ಗುಣದ ಹಿನ್ನೆಲೆಯಲ್ಲಿ ಆ ಗದ್ಯಲಯದ ಗೌಣತೆಯನ್ನು ಸೈರಿಸಬಹುದು. ಎಚ್.ಎಸ್.ರಾಘವೇಂದ್ರರಾವ್ ಕನ್ನಡ ಸಾರಸ್ವತ ಲೋಕದಲ್ಲಿ ಒಳ್ಳೆಯ ವಿಮರ್ಶಕರೆಂದೇ ಗುರುತಿಸಿಕೊಂಡವರು. ಈ ಬಗೆಯ ಕವಿತೆಗಳ ಅನುವಾದ ಅವರನ್ನು ಒಬ್ಬ ಉತ್ತಮ ಅನುವಾದಕನ ಸಾಲಲ್ಲಿ ನಿಲ್ಲಿಸಿದೆ. ಕೆಲವು ಕವಿತೆಗಳು ಓದಿನ ಆರಂಭದಲ್ಲಿಯೇ ಇದು ಇನ್ನಷ್ಟು ತಾಳ್ಮೆಮತ್ತು ತನ್ಮಯತೆಯನ್ನು ಬಯಸುವಂಥದ್ದು ಎನಿಸುವದೂ ಇದೆ. ತೀರಾ ಸಣ್ಣ ಪುಟ್ಟ ಕೊರತೆಗಳನ್ನು ಒಟ್ಟು ಸಂಕಲನದ ಗುಣಗೌರವದ ಹಿನ್ನೆಲೆಯಲ್ಲಿ ಮರೆಯಬಹುದಾಗಿದೆ.





ondu uttama anuvaadvannu kottiddre ..naanu oodiddene i kruti ..nimma lekana kooda gamanaarha.