ವಿಜಯಶ್ರೀ ಹಾಲಾಡಿ ಅವರ ಕಥಾಸಂಕಲನ ‘ಉಮ್ಮಲ್ತಿ ಗುಡಿಯ ಸಾಕ್ಷಿ’
‘ಅಕ್ಷರ ಮಂಟಪ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕಥಾಸಂಕಲನದ ಕುರಿತು ಸುಚಿತ್ರಾ ಆರ್ ಶೆಟ್ಟಿ ಅವರ ಅನಿಸಿಕೆ ಇಲ್ಲಿದೆ.
–ಸುಚಿತ್ರಾ ಆರ್ ಶೆಟ್ಟಿ
ನಮಸ್ತೆ ವಿಜಯಶ್ರೀ ಮೇಡಂ ನಿಮ್ಮ “ಉಮ್ಮಲ್ತಿ ಗುಡಿಯ ಸಾಕ್ಷಿ “ಕಥಾಸಂಕಲನ ಕೈಗೆತ್ತಿಕೊಂಡವಳು ಓದಿ ಮುಗಿಸದೆ ಕೆಳಗಿಡಲಾಗದಂತೆ ನನ್ನಾವರಿಸಿತ್ತು.
13 ಕಥೆಗಳನ್ನ ಒಳಗೊಂಡ ಈ ಕಥಾ ಸಂಕಲನದಲ್ಲಿ ಯಾವುದಾದರೂ ಒಂದು ಉತ್ತಮ ಕಥೆಯನ್ನು ಆರಿಸಿ ಅಂದ್ರೆ ಆಯ್ಕೆ ಮಾಡುವುದು ಕಷ್ಟ. ಯಾಕೆಂದರೆ ಎಲ್ಲ ಕಥೆಗಳು ಒಂದಕ್ಕೊಂದು ಒಂದಕ್ಕಿಂತ ಒಂದು ವಿಚಾರದಲ್ಲಿ ಮತ್ತು ನಿರೂಪಣಾ ಶೈಲಿಯಲ್ಲಿ ಮನಮುಟ್ಟುವಂಥದ್ದು. “ಕೆಮ್ಮಣ್ಣು” ಕತೆ ಹೊರತುಪಡಿಸಿ ಎಲ್ಲ ಕಥೆಗಳು ಸ್ತ್ರೀ ಪ್ರಧಾನವಾದದ್ದು ಎನ್ನುವುದು ವಿಶೇಷ. ಸ್ತ್ರೀಯನ್ನು ವೈಭವಿಕರಿಸದೆ ಅವಳ ಇತಿಮಿತಿಯೊಳಗೆ ಕಥೆಗಳನ್ನು ಕಟ್ಟಿದ್ದು ನಿಮ್ಮ ಕಥಾ ಕೌಶಲ್ಯ. ಹೆಚ್ಚಿನ ಎಲ್ಲಾ ಕಥೆಗಳು ಕುಂದಾಪುರದ ಪರಿಸರವನ್ನು, ಸಂಭಾಷಣೆಯಲ್ಲಿ ಮಿಳಿತವಾದ ಕುಂದಗನ್ನಡದ ಗಾದೆ, ಆಡು ಮಾತುಗಳು ಓದುವ ಮನಸ್ಸನ್ನು ಕುಂದಾಪುರಕ್ಕೆ ತಂದು ನಿಲ್ಲಿಸುತ್ತದೆ.

ಕಥಾ ಸಂಕಲನ ಓದಿ ಮುಗಿಸಿದ ಮೇಲೂ ಉಮ್ಮಲ್ತಿ ಗುಡಿಯ ಸಾಕ್ಷಿಯ ಭಾಗಿಯತ್ತೆ, ಕೆಮ್ಮಣ್ಣು ಕಥೆಯಲ್ಲಿ ಬರುವ ಸಂಜೀವಣ್ಣನ ಕೊನೆ ಕ್ಷಣದ ಆ ಚಂಡೆಕೋಲಿನ ಸಪ್ಪಳ,ಗರಡಿ ಬೆಟ್ಟಿನ ದೊಂದಿ ಬೆಳಕಲ್ಲಿ ಕಥೆಯ ದೇವಿ ಸಂಘದ ಸದಸ್ಯರ ನವದುರ್ಗಾವತರ, ಚನ್ನೆಮಣೆ ಕಥೆಯಲ್ಲಿ ಬರುವ ವಸಂತಿ,ಸೌಮ್ಯ, ಮಿಣ್ಕು ಹಾಂಡ್ತಿ, ಮತ್ತು ಸೀತಕ್ಕ ಈ ನಾಲ್ಕು ಹೆಣ್ಣುಗಳ ಪಾತ್ರದಲ್ಲಿ ನೀವು ಕಟ್ಟಿಕೊಟ್ಟ ಹೆಣ್ಣಿನ ಬೇರೆ ಬೇರೆ ಭಾವಗಳು ಒಂದೇ ನೋವುಗಳು…
ಇತ್ತೀಚಿಗೆ ಗಂಡು, ಹೆಣ್ಣೆಂಬ ಭೇದವಿಲ್ಲದೆ ಬರಹಗಾರರ ಬರಹದ ಮೂಸೆಯಲ್ಲಿ ಈ ಮುಟ್ಟಿನ ಹೊಳೆ ಅಕ್ಷರ ರೂಪದಲ್ಲಿ ಹರಿಯುತ್ತಿದೆ. ಆದರೆ ಈ ಹೊಳೆ ಎನ್ನುವ ಕಥೆಯಲ್ಲಿ ನಂದಿನಿಯ ಕಡುಗೆಂಪು ಚೈತನ್ಯದಾಯಕವೆನಿಸುವ ಕ್ಷಣದ ಬಗ್ಗೆ, ಏಕತಂತುವಿನಲ್ಲಿ ನನ್ನಂಥ ಪ್ರಾಣಿ ಪ್ರಿಯರು ಅಥವಾ ಬೆಕ್ಕನ್ನ ಪ್ರೀತಿಸುವವರ, ಬೆಕ್ಕನ್ನು ಕೂಡ ನಮ್ಮಂತೆ ಭಾವಿಸಿದಾಗ ಆಗುವ ಅನುಭವ ಭಾವಪೂರ್ಣವಾಗಿತ್ತು.
ವಕ್ರ ಕೋಡಿನ ಬಸವ ಕತೆಯಲ್ಲಿ ಮದುವೆ ಬೇಡವೆನ್ನುವ ವಂದನಾಳಂತಹ ಎಷ್ಟೊ ಹೆಣ್ಣುಗಳ ಮನದೊಳಗೆ ಇರುವ ಪುರುಷ ದ್ವೇಷದ ಕಾರಣಗಳು, ಪಾರ್ತಿಚಿಕ್ಕಿಯ ಇಡೀ ಬದುಕು, ದೇವಮ್ಮಕ್ಕದಲ್ಲಿ ಬರುವ ದೇವಮ್ಮಕ್ಕಳಂತಹವರು ಜಗತ್ತಿಗೆ ಬೇರೆಯದೇ ಬಣ್ಣವಾಗಿ ಕಾಣುವ ಬಗೆ, ಬುತ್ಯನ ಬೆಂಗಳೂರು ಪಯಣ ದಲ್ಲಿ ಬದಲಾದ ಹಳ್ಳಿಗಳಲ್ಲಿ ಇನ್ನೂ ಅದೇ ಹಳೆಯ ತಲೆ ಮಾರಿನಲ್ಲಿ ಬದುಕುತ್ತಿರುವ ಬುಡ್ಡಿಬಾಯಿ ಅಂತವರು, ಅಜಗಜಾಂತರ ಎನ್ನುವಷ್ಟು ಕೆಲವೇ ವರ್ಷಗಳಲ್ಲಿ ಬದಲಾದ ಹಳ್ಳಿ ಪರಿಸರ, ಮಾಣಿಕ್ಯ ಬಾಯಿ ಎನ್ನುವ ಗಟ್ಟಿಗಿತ್ತಿ ಹೆಂಗಸರ ಒಡಲೊಳಗಿರುವ ಅದೆಷ್ಟೋ ಗುಟ್ಟುಗಳು, ಗೆಜ್ಜೆ ಕತೆಯ ಗೆಜ್ಜೆಯನ್ನು ಮುಚ್ಚಿಟ್ಟು ಬದುಕ ನಡೆಸುವ ಅವಶ್ಯಕತೆ ಇಲ್ಲ ಎನ್ನುವಂತೆ ಶಕುಜ್ಜಿಯ ಗೆಜ್ಜೆಯನ್ನ ಬುದ್ಧನ ಮೂರ್ತಿಯ ಸ್ಥಾನಕ್ಕೇರಿಸಿದ ಮೊಮ್ಮಗಳು ದೀಪಿಕಾ; ಮಹಾಪ್ರಸ್ಥಾನದಲ್ಲಿ ಕರೋನ ಕಾಲದ ಕಠೋರ ಕ್ಷಣಗಳನ್ನು ಮತ್ತು ಚೈತ್ರಾಳ ಬರಿದಾದ ಮಡಿಲ ಬೆಂಕಿಗೆ ತಣ್ಣನೆಯ ಭರವಸೆಯ ನೀರು ಸುರಿದು ನಂದಿಸುವ ಮಾತುಕತೆ ಆಡುವ ಮೂವರು ಹೆಣ್ಣು ಮಕ್ಕಳ ಗುಟ್ಟಿನ ಮಾತುಗಳು…
ಎಲ್ಲಾ ಪಾತ್ರಗಳು ಎಲ್ಲ ಕಥೆಯಲ್ಲೂ ಬರುವ ಎಲ್ಲಾ ಸನ್ನಿವೇಶಗಳು ಓದಿ ಮುಗಿದರೂ ಕಾಡುತ್ತಲೇ ಇರುತ್ತದೆ. ಚಂದದ ಕಥಾ ಸಂಕಲನ ಎಲ್ಲರ ಮನೆಯಲ್ಲಿರಲಿ ಮನಸ್ಸಿಗೂ ತಲುಪಲಿ. ಓದುಗಳಷ್ಟೇ ಆಗಿರುವ ನನಗೆ ಬರಹದ ಮೇಲೆ ಅಂತಹ ಹಿಡಿತವಿಲ್ಲ. ನನಗನಿಸಿದ್ದನ್ನಷ್ಟೇ ದಾಖಲಿಸಿರುವೆ.






0 Comments