ಕಾಡಿದ ‘ಗೆಲಿಲಿಯೋ’

ಉದಯ ಗಾಂವಕರ್

ಬರ್ಟೋಲ್ಟ್ ಬ್ರೆಕ್ಟ್ ರವರ ಮಹೋನ್ನತ ರಂಗಕೃತಿ ‘ಗೆಲಿಲಿಯೋನ ಜೀವನ’ ನಾಟಕದಲ್ಲಿ ಗೆಲಿಲಿಯೋ ಆಡುವ ಮಾತಿದು. ಪಟ್ಲದ ಭೂಮಿಗೀತ ತಂಡಕ್ಕಾಗಿ ಸಂತೋಷ್ ನಾಯಕ್ ನಿರ್ದೇಶಿಸಿದ ಗೆಲಿಲಿಯೋ ನಾಟಕದ ಪ್ರತಿಯೊಂದು ದೃಶ್ಯವೂ ಯೋಚಿಸಿದಂತೆ ಹೊಸ ಹೊಸ ಅರ್ಥಗಳನ್ನು ಸ್ಫುರಿಸುತ್ತಾ ಮೇಲಿನ ಮಾತನ್ನು ಅನ್ವರ್ಥಕಗೊಳಿಸುತ್ತದೆ.

ಎಮ್.ಜಿ.ಎಮ್  ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ಮುರಾರಿ ಬಲ್ಲಾಳ ರಂಗೋತ್ಸವದ ಅಂತಿಮ ದಿನದಂದು ಪ್ರದರ್ಶನ ಕಂಡ ಗೆಲಿಲಿಯೋ ನಾಟಕವು ಅನೇಕ ಕಾರಣಕ್ಕಾಗಿ ಮಹತ್ವದ ರಂಗಪ್ರಯೋಗ ಎನಿಸುತ್ತದೆ. ಈ  ನಾಟಕವನ್ನು ಮೊದಲಬಾರಿ ಪ್ರಕಟಿಸಿದ ನಂತರ ಬ್ರೆಕ್ಟ್ ಅನೇಕ ಬಾರಿ ಮತ್ತೆ ಮತ್ತೆ ತಿದ್ದಿ ತೀಡಿ ಮರು ರಚಿಸಿದರು.

ತೀವ್ರವಾಗಿ ಮತ್ತು ಕ್ಷಿಪ್ರವಾಗಿ ಬದಲಾಗುತ್ತಿದ್ದ ಇಪ್ಪತ್ತನೇ ಶತಮಾನದ ಮಧ್ಯಭಾಗದ ರಾಜಕೀಯ ವಿದ್ಯಮಾನಗಳು, ಸಾಮಾಜಿಕ ಸಂರಚನೆ ಮತ್ತು ಮಾನವ ವರ್ತನೆಗಳನ್ನು ಪ್ರಭಾವಿಸಿದ ಧಾರ್ಮಿಕ-ರಾಜಕೀಯ ನಡೆಗಳು ಈ ನಾಟಕವನ್ನು ಬ್ರೆಕ್ಟ್ ಮತ್ತೆ ಮತ್ತೆ ವಿಮರ್ಶೆಗೊಳಪಡಿಸಲು ಕಾರಣವಾಗಿರಬಹುದು. ಆದರೆ, ಮನುಷ್ಯನ ಖಾಸಗಿ ಬದುಕು ಮತ್ತು ಸಾಮಾಜಿಕ ಪರಿಸರವನ್ನು ನಿರ್ವಹಿಸುವ ನವಿರಾದ ಮಾನವ ಸಂಬಂಧಗಳ ಸಂಘಟನೆಯಲ್ಲಿ ಧರ್ಮವು ತನ್ನಿಷ್ಟದಂತೆ ಮಧ್ಯಪ್ರವೇಶಿಸುವ ಪ್ರಸ್ತುತ ಸಂದರ್ಭವನ್ನೂ ಸಹ ನಾಟಕವು ಅಷ್ಟೇ ಸಶಕ್ತವಾಗಿ ಪ್ರತಿಫಲಿಸುತ್ತದೆ ಮಾತ್ರವಲ್ಲ, ತೀಕ್ಷ್ಣವಾಗಿ ಪರಾಮರ್ಶಿಸುತ್ತದೆ ಕೂಡ. 

ಭೂಮಿಯೇ ವಿಶ್ವದ ಕೇಂದ್ರವೆಂಬ ಟಾಲೆಮಿಯ ಮಾದರಿಯು ಚರ್ಚಿನ ನಂಬಿಕೆಗೆ ಅನುಗುಣವಾಗಿ ಇರುವುದರಿಂದ ಅದಕ್ಕೆ ಸಾರ್ವತ್ರಿಕ ಮನ್ನಣೆ ದೊರೆತಿರುವುದಾದರೂ ಧಾರ್ಮಿಕ ಕಟ್ಟುಪಾಡುಗಳು ಮನುಷ್ಯನ ಯೋಚನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದನ್ನು ಪಾದ್ರಿಯಾಗಿದ್ದ ಕೋಪರ್ನಿಕಸ್ ಸೌರಕೇಂದ್ರ ಸಿದ್ಧಾಂತವನ್ನು ಪ್ರತಿಪಾದಿಸುವ ಮೂಲಕ ತೋರಿಸಿದರು. ಅದಾಗಲೇ ಸಾಂಸ್ಥೀಕರಣಗೊಂಡಿದ್ದ ಧರ್ಮವು ತನ್ನ ಯಜಮಾನಿಕೆಯನ್ನು ಮುಂದುವರಿಸಲು ಉಂಟಾಗಬಹುದಾದ ಯಾವುದೇ ಅಡೆತಡೆಗಳನ್ನು ಪ್ರಭುತ್ವದ ಬೆಂಬಲದೊಂದಿಗೆ ನಿವಾರಿಸಿಕೊಳ್ಳಬಲ್ಲದು ಎಂಬುದು ಅದಾಗಲೆ ಜನರ ಅನುಭವಕ್ಕೆ ಬಂದಿತ್ತು. 

ಸೌರಕೇಂದ್ರ ಸಿದ್ಧಾಂತದ ಪರವಾಗಿ ಮಾತನಾಡಿದ ಬ್ರೂನೋನನ್ನು ಪಾಷಂಡಿ ಎಂದು ತೀರ್ಮಾನಿಸಿ ಜೀವಂತ ಸುಡುವ ಮೂಲಕ ಎಲ್ಲರೂ ತಮ್ಮ ಯೋಚನೆ ಮತ್ತು ಅಭಿವ್ಯಕ್ತಿಯಲ್ಲಿ ಧರ್ಮ ನಿಷ್ಠರಾಗಿ ಇರುವ ಒತ್ತಡ ನಿರ್ಮಾಣವಾಗಿತ್ರು. ಈ ಹಿನ್ನೆಲೆಯಲ್ಲಿಯೇ  ಗೆಲಿಲಿಯೋ ನಾಟಕವನ್ನು ಬ್ರೆಕ್ಟ್ ಕಟ್ಟಿದ್ದರು.

ಮನುಷ್ಯನ ಯೋಚನಾ ಸಾಮರ್ಥ್ಯವನ್ನು ಪ್ರತಿನಿಧಿಸುವ ಗೆಲಿಲಿಯೋ ಮತ್ತು ಮನುಷ್ಯ ಸಹಜವಾದ ಕುತೂಹಲವನ್ನು ಪ್ರತಿನಿಧಿಸುವ ಗೆಲಿಲಿಯೋನ ಮನೆಗೆಲಸದವಳ ಮಗನಾದ ಅಂಡ್ರಿಯಾ ನಡುವಿನ ಸಂಭಾಷಣೆಯ ಮೂಲಕ ನಾಟಕ ತೆರೆದುಕೊಳ್ಳುತ್ತದೆ. ಕುತೂಹಲ, ಅನುಮಾನ, ಊಹೆಗಳು ಮತ್ತು ಅವುಗಳ ವಿಶ್ಲೇಷಣೆಗಳಿಂದ ತೀರ್ಮಾನಕ್ಕೆ ಬರುವ  ವಿಜ್ಞಾನದ ನಿಜಪಥವು ಮನುಷ್ಯನ ಬೆರಗು ಮತ್ತು ಬಿಡುಗಡೆಯ ದಾರಿಯಾಗುವುದನ್ನು ದೃಶ್ಯಗಳ ಮೂಲಕ ಕಟ್ಟುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಸೇಬು ಹಣ್ಣಿನ ಸಹಾಯದಿಂದ ಸೌರಕೇಂದ್ರ ಸಿದ್ಧಾಂತವನ್ನು ಸುಲಭವಾಗಿ ವಿವರಿಸುವ ಗೆಲಿಲಿಯೋ ಅದೇ ಕ್ಷಣದಲ್ಲಿ ಆಂಡ್ರಿಯಾ ಕೇಳುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಹೆಣಗುತ್ತಾನೆ. ಗೆಲಿಲಿಯೋ ಕೂಡಾ ಪ್ರಶ್ನೆಗಳ ಎದುರು ಕುಬ್ಜನಾಗುವ ಘಟನೆಗಳನ್ನು ಕಟ್ಟಿಕೊಳ್ಳುತ್ತಾ ನಾಟಕವು ಸಾವಯವಗೊಳ್ಳುತ್ತದೆ. 

ತಾನೇ ಕಂಡುಹಿಡಿದಿರುವುದಾಗಿ ಗೆಲಿಲಿಯೋ ಹೇಳಿಕೊಳ್ಳುವ ಟೆಲಿಸ್ಕೋಪ್ ನ ಪ್ರಾತ್ಯಕ್ಷಿಕೆಯನ್ನು ವಿಶ್ವವಿದ್ಯಾನಿಲಯದಲ್ಲಿ ನೀಡುವಾಗ ಗೆಲಿಲಿಯೋ ‘ಇವರಿಗೆ ಇದರ ಬೆಲೆ ಗೊತ್ತಿಲ್ಲ’ ಎನ್ನುತ್ತಾನೆ. ಈ ಮಾತಿನೊಂದಿಗೆ ಬ್ರೆಕ್ಟ್ ನಾಟಕದ ಮುನ್ಸೂಚನೆಗಳನ್ನು ನೀಡುತ್ತಾರೆ ಕೂಡ. ಟೆಲಿಸ್ಕೋಪ್ ನ ಮೂಲಕ ತಾನು ಕಾಣುವ ದೃಶ್ಯಗಳಿಗಾಗಿ ಗೆಲಿಲಿಯೋ ವೈಯಕ್ತಿಕವಾಗಿ ತೆರುವ ಬೆಲೆ ದೊಡ್ಡದು. ಅದೇ ಸಮಯದಲ್ಲಿ, ಮನುಷ್ಯನ ಯೋಚನೆಯ ಕ್ರಮವನ್ನು ಮತ್ತು ವೇಗವನ್ನು ಬದಲಿಸಿದ ಕಾರಣಕ್ಕಾಗಿಯೂ ಟೆಲಿಸ್ಕೋಪ್ ಬಹಳ ಬೆಲೆಬಾಳುವ ಉಪಕರಣ. ತಮ್ಮ ಇಂದ್ರಿಯಾನುಭವಗಳನ್ನು ಒಪ್ಪಿಕೊಳ್ಳದಿರಲು ಸಾಧ್ಯವಿಲ್ಲವೆಂಬ ಅಚಲ ವಿಶ್ವಾಸವನ್ನು ಗೆಲಿಲಿಯೋ ಹೊಂದಿರುತ್ತಾನೆ. 

ಟೆಲಿಸ್ಕೋಪನ್ನು ಚಂದ್ರನ ಕಡೆ ಮತ್ತು ಗುರುಗ್ರಹದ ಕಡೆ ತಿರುಗಿಸಿ ಮಾಹಿತಿಗಳನ್ನು ಕಲೆಹಾಕುವ ಗೆಲಿಲಿಯೋ ಗೆಳೆಯ ಸೆಗ್ರೆಡೋ ಜೊತೆ ಆ ಮಾಹಿತಿಗಳನ್ನು ಹಂಚಿಕೊಳ್ಳುತ್ತಾ ವಿಶ್ಲೇಷಿಸುವ ದೃಶ್ಯವು ಇಂದ್ರಿಯಾನುಭವಗಳನ್ನು ತರ್ಕದ ಮೂಸೆಯಲ್ಲಿ ಪರೀಕ್ಷಿಸುವ ವಿಜ್ಞಾನದ ವಿಧಾನವನ್ನು ಜೀವನ ವಿಧಾನವಾಗಿ ಚಿತ್ರಿಸುತ್ತದೆ.

ಟೆಲಿಸ್ಕೋಪ್ ನ ಮೂಲಕ ಕಂಡುಕೊಂಡ ಸಂಗತಿಗಳು ಚರ್ಚಿನ ಅಸಮಾಧಾನಕ್ಕೆ ಕಾರಣವಾಗಬಲ್ಲದು ಎಂಬ ಆತಂಕವನ್ನು ಸೆಗ್ರಡೋ ವ್ಯಕ್ತಪಡಿಸಿದಾಗ ‘ನಿನಗೆ ಖಗೋಳವಿಜ್ಞಾನ ಇಷ್ಟವಲ್ಲವೇ?’ ಎಂದು ಗೆಲಲಿಯೋ ಅತನಲ್ಲಿ ಕೇಳುತ್ತಾನೆ. ಅದಕ್ಕೆ ಸೆಗ್ರೆಡೋ ‘ನನಗೆ ಖಗೋಳವಿಜ್ಞಾನ ಇಷ್ಟ. ಆದರೆ, ಅದಕ್ಕಿಂತ ನೀನು ಇಷ್ಟ’ ಎನ್ನುತ್ತಾನೆ. ಪ್ರಖರ ವೈಚಾರಿಕ ಚಿಂತನೆಗಳನ್ನು ಮಾನವೀಯ ನಿಲುವುಗಳಲ್ಲಿ ಅದ್ದಿ ತೆಗೆಯುವಂತಹ ಇಂತಹ ದೃಶ್ಯಗಳನ್ನು ನಟ ನಟಿಯರು ಪರಿಣಾಮಕಾರಿಯಾಗಿ ರಂಗದ ಮೇಲೆ ತರಲಾಗಿದೆ.

ವಾಸ್ತವದೊಡನೆ ಮುಖಾಮುಖಿಯಾಗಲು ನಿರಾಕರಿಸುವ ಅಂಧಭಕ್ತರನ್ನು ನಾಟಕದುದ್ದಕ್ಕೂ ಗೆಲಿಲಿಯೋನ ಒರಟು ನಗು ಮತ್ತು ಮೊನಚು ವ್ಯಂಗ್ಯದ ಮೂಲಕ ಗೇಲಿಮಾಡಲಾಗುತ್ತದೆ. ಮಾನವ ವರ್ತನೆಗಳಲ್ಲಿರುವ ವಿಕ್ಷಿಪ್ತತೆಗಳೆಲ್ಲವನ್ನೂ ಇಲ್ಲಿನ ಪ್ರಮುಖ ಪಾತ್ರಗಳಲ್ಲಿ ನೋಡಬಹುದಾಗಿದೆ.

ದುಡ್ಡಿಗಾಗಿ ಆಸೆಪಡುವ ಗೆಲಿಲಿಯೋ ತನ್ನದಲ್ಲದ ಸಂಶೋಧನೆಯನ್ನೂ ತನ್ನದೇ ಎಂದು ಸುಳ್ಳು ಹೇಳಬಲ್ಲವನಾಗಿದ್ದನು. ಗೆಲಿಲಿಯೋನನ್ನು ಚೆನ್ನಾಗಿ ನೋಡಿಕೊಳ್ಳದ ಮನೆಕೆಲಸದಾಕೆ  ಪ್ಲೇಗ್ ನಡುವೆ ಆತನೊಬ್ಬನನ್ನೇ ಬಿಟ್ಟುಹೋಗಲು ಮನಸ್ಸಾಗದೆ ಕೊನೆಕ್ಷಣದಲ್ಲಿ ಮರಳಿಬರುತ್ತಾಳೆ. ಭೌತಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಕಾರ್ಡಿನಲ್ ಬಾರ್ಬರೋನಿಯು ಪೋಪ್ ಆದೊಡನೆಯೇ ಯಥಾಸ್ಥಿತಿವಾದಿಯಾಗುತ್ತಾನೆ. ಹೀಗೆ, ಪರಿಸ್ಥಿತಿಗೆ  ಅನುಗುಣವಾಗಿ ವ್ಯಕ್ತಿತ್ವವು ಪ್ರಕಟಗೊಳ್ಳುತ್ತಾ ಹೋಗುತ್ತದೆ. 

ಸ್ವತಃ ಗೆಲಿಲಿಯೋನ ಪಾತ್ರ ನಿರ್ವಹಿಸಿರುವ ಸಂತೋಷ ನಾಯಕರು ನಾಟಕದ ಜೀವಾಳ. ಎರಡೂಕಾಲು ಗಂಟೆಗಳ ಅವಧಿಯ ಈ ನಾಟಕದ ಬಹುತೇಕ ಎಲ್ಲ ದೃಶ್ಯಗಳಲ್ಲೂ ಕಾಣಿಸಿಕೊಳ್ಳುವ ಪಾತ್ರವಾಗಿ ಅವರ ಅಭಿನಯ ಮತ್ತು ಚೈತನ್ಯ ಚೇತೋಹಾರಿಯಾಗಿದೆ. ಅಂಡ್ರಿಯಾ ಪಾತ್ರಧಾರಿ ಸಹನಾ ಮೊದಲರ್ಧದಲ್ಲಿ ಲವಲವಿಕೆಯ ಅಭಿನಯ ನೀಡಿದ್ದಾರೆ. ಮಿಸೆಸ್ ಸಾರ್ಥಿಯೂ ಸೇರಿದಂತೆ ಪ್ರೌಢ ವಯಸ್ಸಿನ ಪಾತ್ರಗಳನ್ನು ಹೈಸ್ಕೂಲು ವಿದ್ಯಾರ್ಥಿಗಳು ನಿರ್ವಹಿಸಿರುವುದರಿಂದ ಸ್ವಾಭಾವಿಕವಾಗಿಯೇ ಧ್ವನಿಹೊಂದಾಣಿಕೆ ಆಗಿಲ್ಲ. ಆದರೆ, ಅವರನ್ನು ಗೆಲಿಲಿಯೋದಂತಹ ಶ್ರೇಷ್ಟ ನಾಟಕದ ಭಾಗವಾಗಿಸಿ ರಂಗಭೂಮಿಗೆ ಪರಿಚಯಿಸಿದ್ದಕ್ಕಾಗಿ ಭೂಮಿಗೀತ ತಂಡಕ್ಕೆ ಅಭಿನಂದನೆ ಸಲ್ಲಬೇಕು.  ಅಭಿನಯ ಮತ್ತು  ಧ್ವನಿ ವಿನ್ಯಾಸಗಳನ್ನು  ಪರಿಣಾಮಕಾರಿಯಾಗಿಸಲು ಇನ್ನಷ್ಟು ತಾಲೀಮು ಅವಶ್ಯಕ.

ಹೊಸತನ್ನು ಸಂಶೋಧಿಸುವುದೇ ವಿಜ್ಞಾನದ ಉದ್ಧೇಶವಲ್ಲ; ಮಾನವನ ಕಷ್ಟ ಕಾರ್ಪಣ್ಯಗಳಿಗೆ ಒದಗಿಬರುವುದು ಮಾತ್ರ ವಿಜ್ಞಾನದ ಗುರಿ ಎಂದು ಗೆಲಿಲಿಯೋನ ಬಾಯಿಂದ ಆಡಿಸಿ ಬ್ರೆಕ್ಟ್ ಧರ್ಮದ ಉದ್ಧೇಶವನ್ನು ಪ್ರಶ್ನಿಸುವಂತೆ ವೀಕ್ಷಕರನ್ನು ಪ್ರಭಾವಿಸುತ್ತಾರೆ. ಭೂಮಿಯು ವಿಶ್ವದ ಕೇಂದ್ರದಲ್ಲಿಲ್ಲವೆಂದ ಮೇಲೆ ದೇವರು ಎಲ್ಲಿರುತ್ತಾನೆ ಎಂದು ಪಾದ್ರಿ ಪ್ರಶ್ನಿಸಿದಾಗ ‘ಇದ್ದರೆ ನಮ್ಮೊಳಗೆ ಇರಬೇಕು, ಇಲ್ಲಾಂದ್ರೆ ಎಲ್ಲೂ ಇರಲಾರ’ ಎಂಬ ಗೆಲಿಲಿಯೋನ ಮಾತು ನಾಟಕ ಮುಗಿದ ಮೇಲೂ ಅನುರಣಿಸುತ್ತದೆ.

ಅನೇಕ ಕೊರತೆಗಳ ಹೊರತಾಗಿಯೂ ಇದೊಂದು ಗಮನಾರ್ಹ ಮತ್ತು ಮಹತ್ವದ ರಂಗಪ್ರಯೋಗ ಎನ್ನುವುದರಲ್ಲಿ ಅನುಮಾನವಿಲ್ಲ.

‍ಲೇಖಕರು Avadhi

April 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: