ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಾಗಜ಼್ ಕೆ ಫೂಲ್ ಹೀರೋ ಗುರುದತ್ ಅಲ್ಲ, ಮೂರ್ತಿ’ – ಸಂವರ್ಥಾ ಬರೆದಿದ್ದಾರೆ

ವಿ ಕೆ ಮೂರ್ತಿ ಸಿನಿಮಾದ ಹೀರೋ

ಸಂವರ್ಥಾ ‘ಸಾಹಿಲ್’

ಹಲವಾರು ವರ್ಷಗಳಿಂದ ಕಾಡುವ ದೃಶ್ಯ ರೂಪಕಗಳು, ಇನ್ನೆಷ್ಟೋ ವರ್ಷಗಳ ತನಕ ಕಾಡುವ ದೃಶ್ಯ ರೂಪಕಗಳು. ಇಂಥಾ ರೂಪಕಗಳ ಮೂಲಕ ಸಾವಿರಾರು ಪದ ನುಡಿದ ಸೃಜನಶೀಲ ವ್ಯಕ್ತಿಗೆ ಪದಗಳ ಮೂಲಕ ಶ್ರದ್ದಾಂಜಲಿ ಸಲ್ಲಿಸುವುದು ಕಷ್ಟದ ಕೆಲಸ.
ವಿ.ಕೆ. ಮೂರ್ತಿ ಹೆಸರು ಹೇಳುತ್ತಿದ್ದಂತೆಯೇ ಎರಡು ದೃಶ್ಯಗಳು ಕಣ್ಣಮುಂದೆ ಎದ್ದು ನಿಲ್ಲುತ್ತದೆ. ಒಂದು ಸಭಾಂಗಣ, ಅದರ ಬಾಗಿಲ ಬಳಿ ಶಿಲುಬೆಗೇರಿಸಿದ ಕ್ರಿಸ್ತನಂತೆ ನಿಂತಿರುವ ಗುರುದತ್. ಇನ್ನೊಂದು ಒಬ್ಬರಿಂದೊಬ್ಬರು ಸ್ವಲ್ಪ ದೂರದಲ್ಲಿ ಕೂತಿರುವ ಗುರುದತ್ ಮತ್ತು ವಹೀದ ರೆಹಮಾನ್ ಅವರ ಆತ್ಮ (ಅಥವಾ ಆಕಾಂಕ್ಷೆ) ಒಬ್ಬರನ್ನೊಬ್ಬರು ಸಂಧಿಸುವುದು ಮತ್ತು ಅವರ ಸಂಧಿಸುವ ಸ್ಥಳದಲ್ಲಿ ಭೋರ್ಗರೆಯುವ ಬೆಳಕಿನ ಕಿರಣ.

‘ಪ್ಯಾಸ’ ಸಿನಿಮಾದಲ್ಲಿ ಸಭಾಂಗಣದ ಬಾಗಿಲಿನಲ್ಲಿ ಶಿಲುಬೆಗೇರಿಸಿದ ಕ್ರಿಸ್ತನಂತೆ ನಿಂತ ಗುರುದತ್ ನಮ್ಮ ನಡುವಿನ ಮತ್ತೊಬ್ಬ ಸೂಕ್ಷ್ಮ ಸಂವೇದನೆಯ ಸಿನೆಮಾಟೊಗ್ರಫರ್ ಜಿ. ಎಸ್ ಭಾಸ್ಕರ್ ಅವರು ಹೇಳುವಂತೆ “ಐಡಿಯಲ್ ಕಾಮ್ಪೋಸೀಶನ್”. ಮೂರ್ತಿ ಅವರು ಈ ಶಾಟ್ ಕಂಪೋಸ್ ಮಾಡಿದಾಗ ಗುರುದತ್ ಹಿಂಗಡೆಯಿಂದ ಬರುವ ಬೆಳಕಿಗೆ ಗುರುದತ್ ಮುಖ ಕಾಣದಾಗಿ ಆತ ಕೇವಲ ಒಂದು ನೆರಳಾಗಿ, ಆಕಾರವಾಗಿ ಮಾರ್ಪಡುತ್ತಾನೆ. ಇದನ್ನು ಹಲವಾರು ಮಂದಿ ಟೀಕಿಸಿದರಂತೆ. ಯಾಕೆಂದರೆ ಹೀರೋನ ಮುಖ, ಅವನ ಭಾವನೆ ಅವನ ಎಕ್ಸ್ಪ್ರೆಶನ್ ಏನೇನೂ ಕಾಣುವುದಿಲ್ಲ. ಅದೂ ಸಿನಿಮಾದ ಮುಖ್ಯವಾದ ಒಂದು ಸನ್ನಿವೇಶದಲ್ಲಿ. ಎಲ್ಲ ಟೀಕಾಪ್ರಹಾರಗಳಿಗೆ ಮೂರ್ತಿ ಅವರು “ಅವನ ಮುಖದ ಮೇಲೆ ಬೆಳಕಿರಲು ಹೇಗೆ ಸಾಧ್ಯ?” ಅನ್ನುವ ಪ್ರಶ್ನೆಯ ಮೂಲಕ ಉತ್ತರಿಸಿದರು.
ಮೂರ್ತಿ ಅವರ ಪ್ರಕಾರ ಸಿನಿಮಾದ ಕತೆ ವಿಜಯ್ ನಿಗೆ ಏನನ್ನಿಸಿತು ಹೇಗಾಯಿತು ಅನ್ನುವುದಕ್ಕಿಂತ ಮಿಗಿಲಾಗಿ ವಿಜಯ್ ಗೆ ಏನಾಯಿತು ಅನ್ನುವ ಕತೆ. ಹಾಗಾಗಿ ಅವನ ಎಕ್ಸ್ಪ್ರೆಶನ್ ಕಿಂತ ಹೆಚ್ಚಾಗಿ ಅವನನ್ನು ಶಿಲುಬೆಗಿರಿಸಲ್ಪಟ್ಟಂತೆ ತೋರಿಸುವುದು ಅಗತ್ಯ, ಅವಶ್ಯ. ಅಷ್ಟೂ ಅಲ್ಲದೆ ಪ್ಯಾಸ ಸಿನಿಮಾದ ಕತೆ ಕೇವಲ ವಿಜಯ್ ನ ಕತೆಯಲ್ಲ. ಅದು ಹೊಸದಾಗಿ ಸ್ವತಂತ್ರ್ಯಗೊಂಡ ದೇಶದಲ್ಲಿ ನೆಹರು ಕಂಡ ಸಮಾಜವಾದದ ಕುಸಿತ ಮತ್ತು ಅದರ ದುಃಖದ ಕತೆಯೂ ಹೌದು. ಈ ಸೂಕ್ಷ್ಮ ಒಳನೋಟ ಮೂರ್ತಿ ಅವರಿಗಿತ್ತು. ಹಾಗಾಗಿ ವಿಜಯ್ ಅನ್ನು ಮೀರಿದ ಇಮೇಜ್ ಸೃಷ್ಟಿಸುವುದು ಜರೂರಿ ಅನ್ನುವ ಅರಿವು ಅವರಿಗಿತ್ತು. ಹಾಗಾಗಿ ಕೇವಲ ಸಭಾಂಗಣದ ಸನ್ನಿವೇಶದಲ್ಲಿ ಮಾತ್ರ ಅಲ್ಲ ವಿಜಯ್ ನ ತಾಯಿ ತೀರಿ ಹೋದ ಸಂದರ್ಭದಲ್ಲೂ ಮೂರ್ತಿ ವಿಜಯ್ ಅನ್ನು ಕೇವಲ ಆಕಾರವಾಗಿತೋರಿಸುತ್ತಾರೆ. ಅದರಿಂದಾಗಿ ಕತೆ ವಿಜಯ್ ನ ಕತೆಯಾಗಿ ಉಳಿಯದೆ ತನ್ನ ಪಾತ್ರಗಳನ್ನೇ  ಮೀರಿದ ಕತೆಯನ್ನೂ ಹೇಳತೊಡಗುತ್ತದೆ.

ಮೇಲೆ ಹೇಳಿದ ಮತ್ತೊಂದು ಇಮೇಜ್ ಕಾಗಜ್ ಕೆ ಫೂಲ್ ಸಿನಿಮಾದ್ದು. ಅದು ಭಾರತದ ಮೊದಲ ಸಿನೆಮಾಸ್ಕೋಪ್ ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಸಿನಿಮಾ. ಶಾಂತಿ (ವಹೀದ ರೆಹಮಾನ್) ಮತ್ತು ಸುರೇಶ (ಗುರು ದತ್) ಒಬ್ಬರನ್ನೊಬ್ಬರು ಕೆಲ ಸಮಯದಿಂದ ಬಲ್ಲರು ಮತ್ತು ಈಗ ಅವರ ನಡುವೆ ಪ್ರೇಮಾಂಕುರವಾಗುತ್ತಿದೆ. “ವಕ಼್ತ್ ನೆ ಕಿಯಾ ಕ್ಯಾ ಹಸೀ ಸಿತಮ್” ಹಾಡು ಆರಂಭವಾಗುತದೆ, “ತುಮ್ ರಹೇ ನ ತುಮ್ ಹಮ್ ರಹೇ ನ ಹಮ್….” ಅಂದರೆ ನೀನು ನೀನಾಗಿ ಉಳಿಯಲಿಲ್ಲ, ನಾನು ನಾನಾಗಿ ಉಳಿಯಲಿಲ್ಲ ಎನ್ನುತ್ತಿದ್ದಂತೆ ಸುರೇಶ ಮತ್ತು ಶಾಂತಿಯ ಆತ್ಮ (ಅಥವಾ ಆಕಾಂಕ್ಷೆ) ಅವರ ದೇಹದಿಂದ ಜಿಗಿದು ನಡೆಯುತ್ತವೆ. ಆಗ ಮೂರ್ತಿ ಬೀಮ್ ಎಂದೇ ಗುರ್ತಿಸಲ್ಪಡುವ ಬೆಳಕಿನ ಕಿರಣ ಭೋರ್ಗರೆಯುತ್ತದೆ. ಆ ಬೆಳಕಿನಲ್ಲಿ ಈ ಎರಡು ಆತ್ಮ ಕರಗಿಹೋಗುತ್ತದೆ. ಕೈಫಿ ಆಜ್ಮಿ ಅವರ ಪದಗಳು ಹೇಳುವುದನ್ನ ಮೂರ್ತಿ ಬಿಂಬದ ಮೂಲಕ ಕಟ್ಟಿ ಕೊಡುತ್ತಾರೆ.
ಒಮ್ಮೆ ಮೂರ್ತಿ ಅವರಿಗೂ ಮತ್ತು ಗೀತ ರಚನಾಕಾರ ಸಾಹಿರ್ ಲುಧಿಯಾನ್ವಿ ಅವರಿಗೂ ಒಂದು ವಾಗ್ವಾದ ನಡೆಯಿತಂತೆ. ಹಾಡಿಗೆ ಸಂಗೀತ ಮುಖ್ಯವೋ ಇಲ್ಲ ಲಿರಿಕ್ಸ್ ಮುಖ್ಯವೋ ಎಂಬುದರ ಕುರಿತು ನಡೆದ ಈ ವಾಗ್ವಾದದಲ್ಲಿ ಸಾಹಿರ್ ಹಾಡಿಗೆ ಗೀತೆಯೇ ಮುಖ್ಯ ಎಂದರೆ ಮೂರ್ತಿ ಸಂಗೀತವೇ ಮುಖ್ಯ ಎಂದು ವಾದಿಸಿದರಂತೆ. ಮೂರ್ತಿ ಅವರ ಈ ನಿಲುವಿನಿಂದ ಎರಡು ವಿಷಯಗಳು ಗಮನಕ್ಕೆ ಬರುತ್ತವೆ. ಒಂದು, ಸ್ವತಃ ಸಂಗೀತಕಾರರಾಗಿದ್ದ ಮೂರ್ತಿ ಛಾಯಾಗ್ರಾಹಕರಾಗಿ ಸೃಷ್ಟಿಸಿದ ಲಯ ಯಾವ ಮಣ್ಣಿನಲ್ಲಿ ಬೇರು ಬಿಟ್ಟಿದೆ ಮತ್ತು ಪದಗಳನ್ನ ಮೀರಿದ ಮತ್ತು ಪದಗಳಿಗೆ ಪರ್ಯಾಯವಾಗಿ ಅಥವಾ ಪೂರಕವಾಗಿ ಭಾವಲೋಕವನ್ನು ದೃಶ್ಯದ ಮುಖಾಂತರ, ಸಂಗೀತದ ಮುಖಾಂತರ ಸಾಧಿಸಲು ಸಾಧ್ಯ ಎಂದು. ಇದನ್ನು ಅವರು ನಂಬಿದ್ದರು ಮತ್ತು ಸಾಧಿಸಿದ್ದರು. ಆದರೆ ಪದಗಳನ್ನೇ ನೇರಾನೇರವಾಗಿ ಅವರು ಬಿಂಬಗಳನ್ನಾಗಿ ಪರಿವರ್ತಿಸಲಿಲ್ಲ. ಪದಗಳಲ್ಲಿ ಅಡಗಿರುವ ಅರ್ಥ ಭಾವವನ್ನು ಬಿಂಬಗಳ ಮುಖಾಂತರವೇ ಸೃಷ್ಟಿಸಿದರು.
ಪ್ಯಾಸ ಸಿನಿಮಾದ ಮತ್ತೊಂದು ಹಾಡನ್ನು ಇಲ್ಲಿ ಸ್ಮರಿಸಿಕೊಳ್ಳಲೆ ಬೇಕು. ‘ಜಾನೆ ವೋ ಕೈಸೆ ಲೋಗ್ ಥೇ’ ಎನ್ನುವ ಹಾಡಿನಲ್ಲಿ ಕ್ಯಾಮೆರಾ ಭಾರವಾದ ಹೆಜ್ಜೆ ಹಾಕುತ್ತ ಒಮ್ಮೆ ಗುರುದತ್ ಬಳಿ ಮತ್ತೊಮ್ಮೆ ಮಾಲ ಸಿಂಹ ಬಳಿ ಮತ್ತೆ ಗುರುದತ್ ರಿಂದ ದೂರ ಮತ್ತೊಮ್ಮೆ ಮಾಲ ಸಿನ್ಹಾರಿಂದ ದೂರ ಚಲಿಸುತ್ತದೆ. ತನ್ನ ವಿಷಾದ ಭರಿತ ಚಲನೆ ತನ್ನ ಭಾರವಾದ ಹೆಜ್ಜೆ ಮತ್ತು ಹಿಂದೂ ಮುಂದು ಸಾಗುವ ತೊಯ್ದಾಟದ ಮುಖಾಂತರ ಇಬ್ಬರ ನಡುವೆ ಇರುವ ದೂರವನ್ನು ಮತ್ತ ಅದರ ಕುರಿತು ಇರುವ ವಿಷಾದವನ್ನು ಮೂರ್ತಿ ಅವರ ಕ್ಯಾಮೆರಾ ಸೃಷ್ಟಿಸುತ್ತದೆ. ಮತ್ತು ನಮ್ಮನ್ನು ಆ ಭಾವಲೋಕಕ್ಕೆ ಎಳೆದುಕೊಳ್ಳುತ್ತದೆ, ಆ ವಿಷಾದದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ.
ಇದೇ ಸಿನಿಮಾದ ಇನ್ನೊಂದು ಹಾಡು ‘ಆಜ್ ಸಾಜನ್ ಮೋಹೆ ಅಂಗ್ ಲಗಾ ಲೋ..’ ಇಲ್ಲಿ ಮೂರ್ತಿ ಅವರ ಕ್ಯಾಮೆರಾ ಒಮ್ಮೆ ವಹೀದ ರೆಹಮಾನ್ ಮತ್ತು ಗುರುದತ್ ನಡುವಿನ ದೂರವನ್ನು ಸ್ಥಾಪಿಸಿ ಮತ್ತೆ ತಕ್ಷಣ ವಹೀದ ಅವರ ಆಕಾಕ್ಷೆಯ ಹೆಜ್ಜೆ ಹಿಡಿದು ಗುರುದತ್ ಹತ್ತಿರ ಹತ್ತಿರ ಸಾಗುತ್ತದೆ. ಒಮ್ಮೆ ದೂರ, ಒಮ್ಮೆ ಸಮೀಪವಾಗುವ ಮೂಲಕ ವಹೀದ ಮತ್ತು ಗುರುದತ್ ನಡುವಿನ ದೂರ ಮತ್ತು ಆ ದೂರ ದಾಟಬೇಕು ಅನ್ನುವ ಅವಳ ಹಂಬಲವನ್ನು ಕಟ್ಟಿಕೊಡುತ್ತದೆ. ‘ಜಾನೆ ವೋ ಕೈಸೆ..’ ಹಾಡಿನಲ್ಲಿ ಇಲ್ಲದ ಈ ಆಕಾಂಕ್ಷೆಯ ಚಲನೆ ಮತ್ತು ಈ ಹಾಡಿನಲ್ಲಿ ಕ್ಯಾಮರಾಕ್ಕೆ ಇಲ್ಲದ ಭಾರದ ಹೆಜ್ಜೆ ಈ ಎರಡು ಸಂಬಂಧಗಳ ಭಿನ್ನತೆಯನ್ನು ತೋರ್ಪಡಿಸುತ್ತದೆ.
ತಮ್ಮ ಬಿಂಬಸೃಷ್ಟಿಯ ಆಚೆಯೂ ಮೂರ್ತಿ ಭಾರತೀಯ ಸಿನಿಮಾ ಮತ್ತು ಛಾಯಾಗ್ರಹಣಕ್ಕೆ ಕೊಡುಗೆ ನೀಡಿದ್ದಾರೆ. ಛಾಯಾಗ್ರಹಣಕ್ಕೆ ಬೇಕಾದ ಹಲವು ನೂತನ ಮಾರ್ಗೋಪಾಯ, ನೂತನ ಸಾಮಗ್ರಿ ಇವೆಲ್ಲ ಅವರ ಕೊಡುಗೆಯೇ. ಅದನ್ನೆಲ್ಲ ಉಮಾರಾವ್ ಅವರು ಬರೆದ ಮೂರ್ತಿ ಅವರ ಆತ್ಮ ಚರಿತ್ರೆಯಲ್ಲಿ ಸವಿವರವಾಗಿ ತಿಳಿಯಬಹುದು. ಅವರ ಶಿಷ್ಯವರ್ಗವೂ ಅವರು ಭಾರತೀಯ ಸಿನಿಮಾಕ್ಕೆ ನೀಡಿದ ಕೊಡುಗೆಯೇ.
ಕಾಗಜ್ ಕೆ ಫೂಲ್ ಸಿನಿಮಾದ ಪ್ರಿವ್ಯೂ ಬಾಂಬೆಯ ಮರಾಠ ಮಂದಿರದಲ್ಲಿ ಏರ್ಪಡಿಸಿದ್ದರು. ಮಧ್ಯಂತರದಲ್ಲಿ ಹುಚ್ಚೆದ್ದು ಕುಣಿಯುತ್ತ ಹೊರ ಬಂದು ಶಮ್ಮಿ ಕಪೂರ್ ಕೇಳುತಾನೆ, “ಈ ಸಿನಿಮಾದ ಹೀರೋ ಎಲ್ಲಿ?” ಯಾರೋ ಗುರುದತ್ ನಿಂತಿರುವತ್ತ ಬೊಟ್ಟು ಮಾಡಿ ತೋರಿಸುತ್ತಾರೆ. ಅತ್ತ ನೋಡಿ ಶಮ್ಮಿ ಹೇಳುತ್ತಾನೆ, “ಅವನಲ್ಲ. ಮೂರ್ತಿ ಎಲ್ಲಿ? ಮೂರ್ತಿ ಈ ಸಿನಿಮಾದ ಹೀರೋ.”
ಸಿನಿಮಾ ಲೋಕದ ಅಪರೂಪದ ಹೀರೋ ಮೂರ್ತಿ ಇನ್ನಿಲ್ಲ.
ಮೂರ್ತಿಗೆ ಬಹಳ ಆಪ್ತವಾಗಿದ್ದ ಗುರುದತ್ ತೀರಿಕೊಂಡಾಗ ಮೂರ್ತಿ, “ನಾನು ಅವನಿಗಿಂತ ಹೆಚ್ಚಾಗಿ ನನಗಾಗಿಯೇ ಕಣ್ಣೇರಿಟ್ಟೆ” ಎಂದಿದ್ದರು. ಇಂದು ಭಾರತೀಯ ಸಿನಿಮಾ ತನಗಾಗಿಯೇ ಕಣ್ಣೀರು ಸುರಿಸುತ್ತಿದೆ, ಸಿನಿಮಾ ಪ್ರಿಯರು ತಮಗಾಗಿಯೇ ಕಣ್ಣೀರು ಸುರಿಸುತ್ತಿದ್ದಾರೆ.

‍ಲೇಖಕರು G

10 April, 2014

1 Comment

  1. SUSHEELA GOPAL

    You Have Expressewd Your Condolence Through These Lines Very Well. Really Heart Touching

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading