’ಕಾಂಚನ್‌ಜುಂಗಾ ಡೈರಿ’ ಓದಿದ್ದೀರಾ?

ಮದನ್ ಗೋಪಾಲ್, ಐ ಎ ಎಸ್ ಬರೆದ ’ಕಾಂಚನ್‌ಜುಂಗಾ ಡೈರಿ’ ಪುಸ್ತಕ ಪರಿಚಯ ಮಾಡಿದ್ದಾರೆ ಫಣಿಕುಮಾರ್.ಟಿ.ಎಸ್

ಅರಿವಿನ ಯಾತ್ರೆಯ ಅನುಭವ ಕಥನ

ಫಣಿಕುಮಾರ್ ಟಿ ಎಸ್

ಎಫ್.ಎಸ್.ಸ್ಮಿತ್, ಅವನ ದಿ ಕಾಂಚನ್ಜುಂಗಾ ಅಡ್ವೆಂಚರ್ ಪುಸ್ತಕದಲ್ಲಿ ಹಿಮಶಿಖರ ಮೆಟ್ಟುವ ಸಾಹಸದ ತನ್ನ ಮೂಲ ಉದ್ದೇಶವನ್ನು ಒಂದು ಕಡೆ ವಿವರಿಸುತ್ತಾನೆ. ವಿಜ್ಞಾನಕ್ಕೆ ಉತ್ತರ ದಕ್ಕಿಸುವುದಷ್ಟೇ ನನ್ನ ಆರೋಹಣದ ಗಮ್ಯ ಅಲ್ಲ. ಬದಲಿಗೆ ಅದು ಪದಕ್ಕೆ ದಕ್ಕದ ಸಾಹಸ ಎನ್ನುವ; ಹಮ್ಮಿನ ಅನುಭೂತಿ ಎನ್ನುತ್ತಾನೆ. 1930ನೇ ಇಸವಿಯಲ್ಲಿ ಹೊರಬಂದ ಅವನ ಆ ಅನುಭವ ಕಥನದಲ್ಲಿ ಸ್ಮಿತ್ ಕಾಂಚನಗಂಗೆಯನ್ನು ಒಲಿಸಿಕೊಳ್ಳುವಲ್ಲಿ ವಿಫಲನಾಗುವುದು ಬೇರೆಯದೇ ಮಾತಾದರೂ, ತನ್ನ ಸಾಮರ್ಥ್ಯವನ್ನು ಮೀರಿ; ನಿಸರ್ಗವನ್ನು ಮಣಿಸುವ; ತೆಕ್ಕೆಗೆ ಎಳೆದುಕೊಂಡು ಅಹಂಭಾವದಿಂದ ಬೀಗುವ ಮನುಷ್ಯನ ಮಹತ್ವಾಕಾಂಕ್ಷೆಯ ನಿರಂತರ ಹಂಬಲವನ್ನು ಆ ಪುಸ್ತಕ ಸಮರ್ಥವಾಗಿ ನಿರೂಪಿಸುತ್ತದೆ. ಎಡ್ಮಂಡ್ ಹಿಲರಿಯೂ ಅಷ್ಟೆ. ಮೊದಲ ಬಾರಿ ಹಿಮಾಲಯವನ್ನು ಮಣಿಸಿ ಹಿಂತಿರುಗಿದಾಗ ತನ್ನ ಆತ್ಮೀಯ ಸ್ನೇಹಿತ ಜಾರ್ಜ್ ನಲ್ಲಿ ಉದ್ಘರಿಸಿದ ಮೊದಲ ಮಾತು “well George, we have knocked the bastard off!”! ಎಂದು.

ಆದರೆ, ಕೆಲವರಿಗೆ ಪರ್ವತಾರೋಹಣ ಎನ್ನುವುದು ಹಿಗ್ಗುವ ಅಹಂಭಾವದ ಉದ್ವೇಗ ಅಲ್ಲವೇ ಅಲ್ಲ. ಬದಲಿಗೆ ಆ ಭಾವವನ್ನು ಪ್ರಯತ್ನಾಪೂರ್ವಕವಾಗಿ ಕುಗ್ಗಿಸಿಕೊಳ್ಳುತ್ತಾ ತಮ್ಮೊಳಗಿನ ಮನುಷ್ಯನನ್ನು ನೇವರಿಸಿಕೊಳ್ಳುವ ತೀರ್ಥಯಾತ್ರೆ. ಏರು ಹಾದಿಯ ಪ್ರಯಾಸ ಎನ್ನುವುದು ತಮ್ಮ ಆಂತರ್ಯದಲ್ಲಿ ಹುದುಗಿದ ದ್ವಂದ್ವಗಳನ್ನು ನಿಗ್ರಹಿಸುವ ಸಮರ್ಥ ಭಾವ. ಅಂಥಹ ವ್ಯಕ್ತಿಗಳ ವಿಚಾರ ಭಾವಗಳು ಸಮಷ್ಟಿ ಪ್ರಜ್ಞೆಯಾಗಿ, ಓದುಗನಿಗೆ ತನ್ನದೇ ಒಳದನಿಯಾಗಿ, ಆಪ್ಯಾಯಮಾನವಾಗಿ ನಿಲ್ಲುತ್ತವೆ.

ಇತ್ತೀಚೆಗೆ ಬಿಡುಗಡೆಯಾದ ಹಿರಿಯ ಐ.ಎ.ಎಸ್ ಅಧಿಕಾರಿ ಮದನ್ಗೋಪಾಲ್ ತಮ್ಮ ಕಾಂಚನಗಂಗಾ ಆರೋಹಣದ ಕುರಿತು ಬರೆದಿರುವ ’ಕಾಂಚನ್‌ಜುಂಗಾ ಡೈರಿ’ ಅಂಥಹ ವಿಶಾಲ ಧ್ಯೇಯವೊಂದರ ಚಿಂತನೆಯಲ್ಲಿ ಸಾಗುವ ಅನುಭವ ಕಥನ. ಅದು ಅನುಭವ ಕಥನವಾಗಿಯಷ್ಟೇ ಮಿತಿಗೊಳ್ಳುವುದಿಲ್ಲ. ಅದರ ಚೌಕಟ್ಟಿನಿಂದ ಆಚೆ ಜಾರಿಯೇ ಅದೊಂದು ಕವಿತೆಯೂ ಆಗುತ್ತದೆ; ಕಥೆಯೂ ಆಗುತ್ತದೆ; ತಾತ್ವಿಕ ವಿಚಾರಲಹರಿಯನ್ನೂ ಪ್ರವಹಿಸುತ್ತದೆ. ಉತ್ಸಾಹಿ ಚಾರಣಿಗನಿಗನೊಬ್ಬನಿಗೆ ಅವನು ಕೈಗೆತ್ತಿಕೊಂಡ ಮಾರ್ಗದ, ಸೇರಬೇಕೆಂದುಕೊಂಡ ಗಮ್ಯದ ಕುರಿತಂತೆ ಸ್ಪಷ್ಟವಾದ ನೀಲನಕ್ಷೆಯನ್ನು ಹರವಿಸುತ್ತಲೇ ಆಸಕ್ತ ಹಾಗೂ ಸಾಮಾನ್ಯ ಓದುಗನ ತಾತ್ವಿಕ ಮನೋಧರ್ಮದ ಅರಿವಿನ ಮಾರ್ಗವನ್ನು ಪ್ರಖರಪಡಿಸುತ್ತಾ ಸಾಗುತ್ತದೆ.
ಹಿಮಾಲಯ ಎನ್ನುವುದು ಮದನ್ಗೋಪಾಲ್ರಿಗೆ ಮೂವತ್ತು ವರ್ಷಗಳನ್ನೂ ಮೀರಿದ ಜೀವಭಾವದ ನಂಟು. ಆದರೂ ಆ ಹಿಮಪರ್ವತದ ಅಗಾಧತೆಯೆಡೆಗೆ ನಿರಂತರವಾದ ಅಬೋಧ ಬೆರಗನ್ನು ಅಂತನಿರ್ಮಿಸಿಕೊಂಡ ವ್ಯಕ್ತಿ ಅವರು. ಅವರಿಗೆ ಕಾಂಚನಗಂಗೆ ಕೇವಲ ಭೌತಿಕ ವಿಲಾಸವಲ್ಲ. ಅಮೂರ್ತತೆಯೆಡೆಗಿನ ಗೌರವ ಭಾವವನ್ನು ಸೃಷ್ಟಿಸಿಕೊಳ್ಳಲು; ಮನುಷ್ಯನ ಕುಬ್ಜತೆಯನ್ನು ಅರಿಯಲು; ವಿಸ್ಮಯತೆಯನ್ನು ಆನಂದಿಸಲು ಅದು ಅವರಿಗೆ ಒಂದು ಸಾಧನ. ಅದರ ಆರೋಹಣದ ಹಾದಿ ಅವರ ಧಾರ್ಮಿಕ ನಂಬಿಕೆಗಳನ್ನು ಸಲಹುವ ಭವ್ಯವಾದ; ಪರಿಶುದ್ಧವಾದ ಆರಾಧನಾ ಮಾರ್ಗ. ಹೀಗಾಗಿ ಹಿಮಪರ್ವತವೇ ಅವರಿಗೆ ಒಂದು ಧರ್ಮ ಸಂಭವ.

ನಿರ್ಬಂಧತೆಯ ಕೊತ್ತಲುಗಳ ಆಚೆ ಪ್ರವಹಿಸಿ, ಪರಿತ್ಯಜಿಸಿ ನಿರ್ವಾಣರಾದ ರಮಣ ಮಹರ್ಷಿ, ಓಶೋ ರಜನೀಶ್, ಜಿಡ್ಡು ಕೃಷ್ಣಮೂರ್ತಿ, ತೆಲುಗು ಲೇಖಕ ಚಲಂರಂತಹವರು ಮದನ್ಗೋಪಾಲ್ರ ಆದರ್ಶ. ಅವರೆಲ್ಲರ ಪ್ರಭಾವವೆನ್ನುವಂತೆ ಅವರಲ್ಲಿ ಅತ್ಯಂತ ಸೂಕ್ಷ್ಮಗ್ರಾಹಿಯಾದ ತತ್ವಚಿಂತನೆಯ ಕವಿಯೊಬ್ಬನಿದ್ದಾನೆ. ಹೀಗಾಗಿ ಅವರ ಕೃತಿ ಕಾಂಚನಗಂಗೆಯನ್ನೇರುವ ಯತ್ನದ ಪರಾಕಾಷ್ಠೆಯಲ್ಲಿ ಒಡಮೂಡುವ ಸಾರ್ಥಕ್ಯ ಭಾವವನ್ನು ಮೀರಿ ಓದುಗನಲ್ಲಿ ಬೇರೆಯದೇ ವಿಶಿಷ್ಟ ಪರಿಣಾಮವನ್ನು ಬೀರುತ್ತದೆ.
ಈ ಕೃತಿಯಲ್ಲಿ ಅವರ ಕನಸು; ಕನವರಿಕೆಗಳ ನೇವರಿಕೆ ಇದೆ; ಸಾಧಾರಣತೆಯನ್ನು ಪ್ರಶಂಸಿಸುತ್ತಲೇ ಅಸಾಧಾರಣತೆಯನ್ನು ಅಪ್ಪಿಕೊಳ್ಳುವ ಪ್ರೇಮಭಾವವಿದೆ. ಅನಿವಾರ್ಯ ಏಕಾಂತದಲ್ಲಿ; ಶೂನ್ಯದ ಆವರಣದಲ್ಲಿ ತರ್ಕಾತೀತವಾದದ್ದೇನನ್ನೋ ಕಾಣುವ ಅಪೇಕ್ಷೆ ಇದೆ. ಅದಕ್ಕಾಗಿಯೇ ಅವರು ಕಾಂಚನಜುಂಗಾ ಶಿಖರದ ತುದಿಯನ್ನೇರುವ ಹಾದಿಯಲ್ಲಿ ಕಾಣುವ ಗಿಡಗಂಡೆಗಳಲ್ಲಿ; ನದಿ ತೊರೆಗಳಲ್ಲಿ; ಪ್ರಾಣಿಪಕ್ಷಿಗಳಲ್ಲಿ; ಗುಹೆಗಳಲ್ಲಿ ಅಸೀಮ ಚೈತನ್ಯದ ಒರತೆಯನ್ನು ಕಾಣುತ್ತಾರೆ. ಖಬೇಲಿ ಖೋಲಾ ನದಿಯ ಹರಿವಿನ ಸದ್ದಿನ ಸಾಂಗತ್ಯ ಅವರಿಗೆ ಅಪ್ಯಾಯಮಾನವಾದ ಸಂಗೀತವಾದರೆ, ಮಗ್ನೋಲಿಯಾ ಮರದಿಂದ ಇಣುಕಿದ ಕೆಂಪು ಕುಲಾವಿಯ ಹಕ್ಕಿ ಕ್ಯಾಮರಾ ಕಣ್ಣಿಗೆ ಸಿಗದೇ ಹಾರಿದಾಗ ಮಾನವನ ಮಿತಿಯ ಅರಿವು ಅವರಲ್ಲಿ ಚಂಚಲಿಸುತ್ತದೆ. ರೋಡೋಡೆಂಡ್ರನ್ ಗಿಡ ಆಕಾಶಕ್ಕೆ ಬೆಳಕು ತುಂಬಿದ ಹಾಗೆ ಕಂಡರೆ ಬಣ್ಣ ಬದಲಾಯಿಸುವ ಬೊಂಬಿನ ಧಮನಿಯಲ್ಲಿ ಚೈತನ್ಯದ ಹರಿವು ಪ್ರತಿಫಲಿಸುತ್ತದೆ. ಸಾವಿರಾರು ಮೀಟರುಗಳ ಎತ್ತರದಲ್ಲಿ ಹೆಪ್ಪುಗೊಂಡ ಕೊಳವೊಂದು ನಿರುದ್ವಿಗ್ನತೆಗೆ ನಿಶ್ಚಲದ ಅಪ್ಪುಗೆಯಾಗಿ ನೆಮ್ಮದಿಯನ್ನು ತೋರುವ ಕಲಾಭಿತ್ತಿಯಂತೆ ಗ್ರಾಹ್ಯವಾದರೆ, ತಮ್ಮ ಆತಂಕದ ಸಮಯದಲ್ಲಿ ತಿಳಿಗಾಳಿಯ ಹಾಗೆ ತಲೆಯ ಮೇಲೆ ಹಾರುತ್ತಾ ಹಾದು ಹೋಗುವ ಜೋಡಿ ಹಕ್ಕಿಗಳಲ್ಲಿ ಋಷಿ ದಂಪತಿಗಳ ಹಾರೈಕೆ ಅವರಿಗೆ ಕಾಣುತ್ತದೆ. ಹರಿಯುವ ನದಿ ಎರಡು ಹಿಮ ಪರ್ವತಗಳ ನಡುವಿನ ಆತ್ಮೀಯ ಸಂವಹನವಾಗಿ ಅವರಿಗೆ ತೋರುತ್ತದೆ.
ಬದಲಾಗುವ ಅನುಭವಗಳಿಗೆ ತಮ್ಮ ಆರೋಹಣದ ದಿನನಿತ್ಯದ ರಾತ್ರಿಗಳಲ್ಲಿ ಅವರು ಕಾಣುವ ಕನಸುಗಳನ್ನು ವರ್ಣಿಸುವಾಗ ತಮ್ಮ ವಿಶಿಷ್ಟ ಏಕತಾನತೆಯಿಂದ ಓದುಗನಲ್ಲಿ ನಿರಾಸಕ್ತಿಯನ್ನು ಮೂಡಿಸುತ್ತವೆ ಅನ್ನಿಸಿದ ಮರುಕ್ಷಣದಲ್ಲೇ ಭ್ರಮೆ; ಮೋಜುಗಳ ಪರಿಧಿಯಿಂದ ಆಚೆ ನಿಂತು ಅರಿವಿನ ಆಳದ ಪರಿಚಯ ಮಾಡುತ್ತಾ ಓದುಗನಲ್ಲಿ ವಿಶಿಷ್ಟವಾದ ಸಾರ್ಥಕ್ಯ ಭಾವವೊಂದನ್ನು ಜಾಗೃತ ಮಾಡುತ್ತಾರೆ.
ಕಾಂಚನಜುಂಗಾದ ಐದೂ ಶಿಖರಗಳು ಅಸೀಮ ಶಕ್ತಿಯನ್ನು ಹಾರೈಸುವ ಬೆರಳುಗಳಾಗಿ ಅವರಿಂದ ಪರಿಕಲ್ಪನೆಗೊಳ್ಳುತ್ತವೆ. ಪರ್ವತದ ತುತ್ತುದಿಯಲ್ಲಿ ನಿಂತಾಗಿನ ವರ್ತಮಾನದ ಪರಾಕಾಷ್ಠ ಭಾವದ ಘಳಿಗೆ ಅವರಿಗೆ ತಮ್ಮ ಅಸಿತ್ವದ ಹಿನ್ನೋಟಕ್ಕೆ; ಅಮೂರ್ತದ ಮುನ್ನೋಟಕ್ಕೆ; ಪ್ರೇಮಸತ್ವದ ಪ್ರಖರತೆಗೆ; ತರ್ಕಾತೀತವೆನಿಸುವ ಸಾರ್ಥಕ್ಯ ಭಾವಕ್ಕೆ ಸಾಕ್ಷಾತ್ಕಾರವಾಗಿ ನಿಲ್ಲುತ್ತದೆ.
ಜೊನಾಥನ್ ನೀಲ್ ಬರೆದ ‘Tigers in the snow’ ಎಂಬ ಪುಸ್ತಕವನ್ನು ಇಲ್ಲಿ ಸ್ಮರಿಸಬೇಕು. ಪರ್ವತಾರೋಹಿಗಳ ಬೆನ್ನೆಲುಬಾಗಿ, ಜೀವನ್ಮಿತ್ರರಾಗಿ ಜೊತೆಯಲ್ಲಿ ಸಾಗುವ ಶೆರ್ಪಾಗಳಲ್ಲಿ ಅಂತಹ ಸಾಮೂಹಿಕ ಮನಸ್ಥಿತಿಯೊಂದರ ಜಾಗೃತಿ ಹೇಗೆ ಆಯಿತು ಎನ್ನುವ ಬಗ್ಗೆ ವಿಷದವಾದ ವಿವರಣೆ ಆ ಪುಸ್ತಕದಲ್ಲಿ ಇದೆ. 1934ರಲ್ಲಿ ಜರ್ಮನ್ನರ ಗುಂಪೊಂದು ಹಿಮಾಲಯದ ಪರ್ವತಾರೋಹಣ ಸಂದರ್ಭದಲ್ಲಿ ಶೆರ್ಪಾ ಜನಾಂಗದ ಸಹಾಯಕರನ್ನು ತಮ್ಮ ಸ್ವಾರ್ಥಕ್ಕೋಸ್ಕರ ಅನಾಥರನ್ನಾಗಿ ಮಾಡಿ ನಡುಮಧ್ಯೆಯೇ ಬಿಟ್ಟು ಹೋಗಿಬಿಡುತ್ತದೆ. ಜೀವ ಸಲಕರಣೆಗಳ ಅಲಭ್ಯತೆಯಿಂದ ಅಸಹಾಯಕರಾಗಿ ಕಂಗಾಲಾಗುವ ಆ ಶೆರ್ಪಾ ಯುವಕರು ತಮ್ಮ ಬದುಕಿನ ಅತ್ಯಂತ ದುರ್ಗಮ ಕ್ಷಣಗಳನ್ನು ಆಗ ಕಳೆಯುತ್ತಾರೆ. ಈ ಘಳಿಗೆ ಅವರ ಸಮುದಾಯದಲ್ಲಿ ರಚನಾತ್ಮಕವಾದ ಆಲೋಚನಾ ಮನಸ್ಥಿತಿಗೆ ಪ್ರೇರಣೆಯಾಗುತ್ತದೆ. ಯಾವುದೇ ದ್ವೇಷದ ಮನಸ್ಥಿತಿ ಅವರಲ್ಲಿ ಮಡುಗಟ್ಟುವುದಿಲ್ಲ. ಬದಲಿಗೆ ಹಿಮಾಲಯದ ಮೂಲೆ ಮೂಲೆಗಳನ್ನು ಪ್ರೀತಿಯಿಂದ ಮಣಿಸಿಕೊಳ್ಳುವ, ಗೌರವದಿಂದ ಒಲಿಸಿಕೊಳ್ಳುವ ಛಲ ಅವರಲ್ಲಿ ಜಾಗೃತವಾಗುತ್ತದೆ. ಇಂದು ಹಿಮಾಲಯ ಪರ್ವತಗಳನ್ನೇರುವ ಪ್ರತಿ ಚಾರಣಿಗನಿಗೂ ಶೆರ್ಪಾಗಳು ದೇವದೂತರಾಗಿ ಕಾಣಬರುತ್ತಾರೆ. ಮದನ್ಗೋಪಾಲ್ರವರ ಈ ಅನುಭವದ ಮಾರ್ಗದರ್ಶಕನೂ, ಅವರೇ ಹೇಳುವಂತೆ ಶೆರ್ಪಾ ಜನಾಂಗದ ದೇವದೂತನೇ. ತಮ್ಮ ಸಿಟ್ಟು; ಸೆಡವು; ಆತಂಕಗಳನ್ನು ಕಾಲಕಾಲಕ್ಕೆ ದೂರಾಗಿಸುತ್ತಾ, ಪ್ರತಿ ಸಂಭ್ರಮಕ್ಕೆ ಸಾಕ್ಷಿಯಾಗುತ್ತಾ; ಜೊತೆ ಜೊತೆಗೇ ಸಂಭ್ರಮಿಸುತ್ತಾ ತಮ್ಮ ಪ್ರಯಾಣಕ್ಕೆ ಹಿತಕರ; ಸುರಕ್ಷತೆಯ ಭಾವವನ್ನು ತುಂಬುತ್ತಾ ಕಡೆಯವರೆಗೂ ಅವರನ್ನು ಕೈಹಿಡಿದು ನಡೆಸುವವನು ಗೋಂಬು ಎಂಬ ಶೆಪರ್ಾ ಮತ್ತವನ ತಂಡ. ಅವರನ್ನು ಮದನ್ ಗೋಪಾಲ್ ನಿರ್ವಾತದಲ್ಲಿ ನಿರ್ವಾಣ ತೋರುವ, ಸಲಹುವ ಹಿಮದ ವೈದ್ಯರು ಎನ್ನುತ್ತಾರೆ. ಎಡ್ಮಂಡ್ ಹಿಲರಿಯ ವೈಖರಿಯಲ್ಲೇ ಆ ಜನಾಂಗಕ್ಕೆ ಕೃತಜ್ಞತೆ ತೋರುವ ಅಪೇಕ್ಷೆ ಅವರದ್ದು. ಆ ನಿಟ್ಟಿನಲ್ಲಿಯೇ ಅವರು ಈ ಪುಸ್ತಕದ ಲಾಭಾಂಶದ ಸಂಪೂರ್ಣವನ್ನೂ ಶೆರ್ಪಾ ಜನಾಂಗಕ್ಕೆ ಮೀಸಲಿಡುವ ಔದಾರ್ಯ ತೋರುತ್ತಾರೆ.
ಕಾಂಚನ್ಜುಂಗಾ ಡೈರಿ ಪುಸ್ತಕ, ಲೇಖಕರ ಹಿಮ ಪರ್ವತಾರೋಹಣದ ಅನುಭವದ ಹಿನ್ನೆಲೆಯಲ್ಲಿಯೂ ಕೇವಲ ಒಂದು ಕಾಲಘಟ್ಟಕ್ಕೆ ಸೀಮಿತವಾಗುವುದಿಲ್ಲ. ವ್ಯಕ್ತಿಯೊಬ್ಬನ ಕಾಲಾತೀತ ನಿಲುವುಗಳಿಂದ ಅದು ಹೊರಸೂಸುವ ಸಾಮೂಹಿಕ ಚೈತನ್ಯದ ಕಾರಣದಿಂದ ಜೀವನ ದರ್ಶನದ ಅಭಿವ್ಯಕ್ತಿಯಾಗಿ, ತನ್ನ ಅತ್ಯಂತ ಸರಳ ಹಾಗೂ ನಿಖರವಾದ ನಿರೂಪಣೆಯಿಂದ ವಿಭಿನ್ನವಾಗಿ ನಿಲ್ಲುತ್ತದೆ. ಹಾಗಾಗಿ ಇದು ಅನುಭವವಷ್ಟೇ ಅಲ್ಲ, ಸಾಧಕನೊಬ್ಬನ ಕಣ್ಣಿನಲ್ಲಿ ಜೀವನದರ್ಶನದ ಪುಸ್ತಕ. ಪರ್ವತಾರೋಹಿಗಳಿಗೂ ಮಿಗಿಲಾಗಿ ಸಾಮಾನ್ಯ ಓದುಗನಲ್ಲಿ ಅಮೂರ್ತತೆಯ ಕುರಿತಂತೆ ದಿವ್ಯವಾದ ಅನುಭವವನ್ನು ನೀಡುತ್ತದೆ.
 

‍ಲೇಖಕರು G

August 27, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ಜೆಫ್ರಿ ಆರ್ಚರ ನ ‘ಪಾಥ್ಸ್ ಆಫ್ ಗ್ಲೋರಿ’ ಹಿಮಾಲಯ ಪರ್ವತಾರೋಹಣದ ಜಾರ್ಜ ಮೆಲೋರಿಯ ಅದ್ಭುತ ಸಾಹಸಗಳ, ಮೈನವಿರೇಳಿಸುವ ಸನ್ನಿವೇಶಗಳ, ಹೆಜ್ಜೆ ಹೆಜ್ಜೆಗೂ ರೋಮಾಂಚನಗೊಳಿಸುವ ನಿರೂಪಣಾ ಶೈಲಿಯಿಂದ ಓದುಗನನ್ನು ಹಿಡಿದಿಡುತ್ತದೆ. ಒಮ್ಮೆ ಓದಿದ್ದು ಬದುಕಿನಾದ್ಯಂತ ಆ ಚಿತ್ರಣಗಳು ಮತ್ತೆ ಮತ್ತೆ ನಮ್ಮೊಳಗೆ ಪ್ರತಿಧ್ವನಿಸುತ್ತಿದೆ. ದುರ್ಗಮ ಪರ್ವತ ಚಾರಣಗಳ, ಆರೋಹಣಗಳ ಸಾಹಸಗಳೇ ಹಾಗೆ. ಈಗ ಇಂತಹ ಸಾಲುಗಳಿಗೆ ಸೇರುವ ‘ಕಾಂಚನಜುಂಗಾ ಡೈರಿ’ ಯು ಮದನಗೋಪಾಲರಂಥ ಕನ್ನಡಿಗರೊಬ್ಬರ ಅನುಭವ ಕಥನವಾಗಿದ್ದು, ಅವರು ಸಾರತ್ವಕ ಲೋಕಕ್ಕೆ ನೀಡಿದುದಕ್ಕೆ ಅವರನ್ನು ಅಭಿನಂದಿಸುತ್ತ, ಪುಸ್ತಕ ಪರಿಚಯಿಸಿದ ಫಣಿಕುಮಾರರಿಗೆ ವಂದನೆಗಳು.

    ಪ್ರತಿಕ್ರಿಯೆ
  2. ಸಂತೋಷ್.ಎಲ್

    ಆದರೂ ಈ ಪ್ರಕೃತಿ ನಮ್ಮ ತೆಕ್ಕೆಗೆ ಸಿಗಲಾರಳು…

    ಪ್ರತಿಕ್ರಿಯೆ
  3. k.rkamalesh

    ಮಾನ್ಯರೆ,
    ಶ್ರೀ ಮದನ ಗೋಪಾಲ್, ಹಿರಿಯ ಐ.ಎ.ಎಸ್. ಅಧಿಕಾರಿ ಅವರ ಪುಸ್ತಕವನ್ನು ಶ್ರೀ ಫಣಿ ಅವರ ಪರಿಚಯದೊಂದಿಗೆ ಓದಿದೆ. ಶ್ರೀ ಮದನ ಗೋಪಾಲ್ ಸಾಹಸ ಪ್ರಿಯರು. ತಮ್ಮ ವಿಶಿಷ್ಟ ಮನೋಭಾವ ಹಾಗೂ ಬದ್ಧತೆಯಿಂದಾಗಿ ಕನ್ನಡ ನಾಡಿಗೆ ತುಂಬಾ ಬೇಕಾದವರು. ಅವರ ವ್ಯಕ್ತಿತ್ವವೇ ಈ ಗ್ರಂಥವನ್ನು ಆಕರ್ಣಿಯವಾಗಿ ಮಾಡಿದೆ. ಈ ಹಿಂದೆ ಅವರು ಹಿಮಾಲಯದ ವಿಚಾರದಲ್ಲಿ ಏರ್ಪಡಿಸಿದ್ದ ಛಾಯಚಿತ್ರಗಳನ್ನು ನೋಡಿದ್ದೇನೆ. ಅವುಗಳು ಶ್ರೀ ಮದನ ಗೋಪಾಲ್ ಅವರ ವ್ಯಕ್ತಿತ್ವವನ್ನು ಪರಿಚಯಿಸುತ್ತಿತ್ತು. ಈ ಪುಸ್ತಕ ಅವರಿಗೆ ಮತ್ತಷ್ಟು ಪುಷ್ಟಿ ಕೊಟ್ಟಿದೆ.
    ಕಾಂಚನ ಶಿಖರ ನಮ್ಮ ನಾಗರಿಕತೆಯ ಒಂದು ಭಾಗ. ಈಗ ಹಿಮಾಲಯ ಮತ್ತು ಗಂಗಾ ನದಿಗಳ ಬಗ್ಗೆ ಪ್ರೇಮ ಉಕ್ಕಿ ಬರುತ್ತಿದೆ. ಅದಕ್ಕೆ ಕಾರಣ ಬದಲಾದ ರಾಜಕೀಯ ವ್ಯವಸ್ಧೆಯಲ್ಲ. ಶ್ರೀ ಸಾಮಾನ್ಯರಿಗೆ ತಮ್ಮ ಪ್ರಾಕೃತಿಕ ಸಂಪತ್ತಿನ ವಿಚಾರದಲ್ಲಿ ಜಾಗೃತಿ ಮೂಡುತ್ತಿದೆ. ಅದಕ್ಕೆ ಕಾರಣ ಶ್ರೀ ಮದನ ಗೋಪಾಲ್ ಅವರಂತಹ ಲೇಖಕರು, ಪ್ರಕೃತಿ ಪ್ರಿಯರು ಹಾಗೂ ದೇಶದ ಸಂಪತ್ತಿನ ವಿಚಾರದಲ್ಲಿ ಕಾಳಜಿಯುಳ್ಳವರು ಮಾಡುತ್ತಿರುವ ಅಪೂರ್ವ ಪ್ರಯತ್ನವೆಂದು ಭಾವಿಸಿದ್ದೇನೆ. ಶ್ರೀ ಮದನ ಗೋಪಾಲ್ ಹಾಗೂ ನನ್ನ ಗಮನಕ್ಕೆ ತಂದ ಶ್ರೀ ಫಣಿಗೆ ಧನ್ಯವಾದಗಳು.
    ತಮ್ಮವ
    ಕೆ.ಆರ್. ಕಮಲೇಶ್
    ಮೊ.94487 93346

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: