
ಸತೀಶ್ ಕುಲಕರ್ಣಿ
ಕೆ.ವಿ.ತಿರುಮಲೇಶ ನನಗೆ ಎಲ್ಲ ಕಾಲಕ್ಕೂ ಒಬ್ಬ ಸೋಜಿಗದ ಲೇಖಕ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಾನು ಅವರ ಆರಾಧಕ. ಮಹಾಪ್ರಸ್ಥಾನ, ಮುಖಾಮುಖಿ, ಪಾಪಿಯೊ, ಬೆಕ್ಕು ಅನೇಕ, ನಾಯಕ ಮತ್ತು ಇತರರು ಇವೆಲ್ಲ ಓದುತ್ತ ಬಂದವ. ಇತ್ತೀಚಿಗೆ ಗದ್ಯ ರೆಕ್ಕೆಯ ಕವಿತೆಗಳು ಕಚಗುಳಿ ನೀಡುವ ಮಕ್ಕಳ ಪದ್ಯಗಳು – ಇವೆಲ್ಲ ನನ್ನನ್ನು ಮತ್ತೆ ಮತ್ತೆ ಅವರನ್ನು ಓದುವಂತೆ ಮಾಡಿದ್ದವು.
ಆಕಸ್ಮಿಕವೆಂಬುದು ಒಮ್ಮೊಮ್ಮೆ ನಾವು ಪ್ರೀತಿಸುವವರ ಮನೆ ಬಾಗಿಲಿಗೆ ತಂದು ನಿಲ್ಲಿಸುತ್ತದೆ. ತಿರುಮಲೇಶರ ವಿಚಾರದಲ್ಲಿ ಆದದ್ದು ಹೀಗೆ. ೧೯೯೧ ಮಾಚ್ ೨೨ ರಿಂದ ೨೪ ರವರೆಗೆ ಮಹಾರಾಷ್ಟçದಲ್ಲಿ ನಾಗಪೂರದಲ್ಲಿ ‘ಪಥ ನಾಟ್ಯ ಸಮಾರೋಹ’ ಎಂಬ ದಕ್ಷಿಣ ಭಾರತ ಮಿತಿಯ ದೊಡ್ಡ ಕಾರ್ಯಕ್ರಮವನ್ನು South central cultural zone ನಾಗಪೂರ ಏರ್ಪಡಿಸಿತ್ತು. ಅದರ ಭಾಗವಾಗಿ ಒಂದು ಕವಿಗೋಷ್ಠಿ. ದಕ್ಷಿಣ ಭಾರತದ ಪ್ರತಿ ರಾಜ್ಯದ ೨ – ೩ ಕವಿಗಳು ಆಯ್ಕೆಯಾಗಿದ್ದರು. ಕನ್ನಡದಿಂದ ನಾನು, ಶ್ರೀಮತಿ ಹೇಮಾ ಪಟ್ಟಣಶೆಟ್ಟಿ ಹಾಗೂ ಡಾ. ಮಲ್ಲಿಕಾ ಘಂಟಿ ಇದ್ದೆವು.
ನಾಗಪೂರ ಕವಿಗೋಷ್ಠಿಯನ್ನು ಮುಗಿಸಿಕೊಂಡು ಸರಕಾರಿ ಬಸ್ಸಿನಲ್ಲಿ ಮಾರ್ಚ ೨೫ ರಂದು ನಾನು ಮತ್ತು ಹೇಮಾ ಅವರು ಹೈದಾರಬಾದಿಗೆ ಬಂದು ಇಳಿದಾಗ, ಅಂದೇ Peoples war group (PWG) ಹೈದರಾಬಾದ್ ಬಂದ್ ಕರೆ ಕೊಟ್ಟಿತ್ತು. ಮಹಾನಗರದ ಎಲ್ಲ ರಸ್ತೆಗಳು ಮೌನವಾಗಿದ್ದವು. ನರಪಿಳ್ಳೆಯೂ ನೋಡಲು ಸಿಗುತ್ತಿರಲಿಲ್ಲ. ಎಲ್ಲಿಗೆ ಹೋಗಬೇಕು, ಎಲ್ಲಿ ಉಳಿಯಬೇಕು ಎಂದು ತಿಳಿಯಲೇ ಇಲ್ಲ. ಆಗ ನೆನಪಾದದ್ದು ಕವಿ ತಿರುಮಲೇಶ್. ನಾನು ಅವರ ಓದುಗ ಮಾತ್ರ, ಎಂದೂ ನೋಡಿದವನಲ್ಲ, ಮಾತಾಡಿದವನಲ್ಲ. ಉಸ್ಮಾನಿಯಾ ಯೂನಿವರ್ಸಿಟಿಯಲ್ಲಿ ಇದ್ದದ್ದು ಮಾತ್ರ ಗೊತ್ತು. ಹಾಗಾಗಿ ಅಲ್ಲಿಯೇ ಕ್ಯಾಂಪಸ್ಸಿನಲ್ಲಿ ಇರಬಹುದೆಂದು ಅಂದಾಜಿಸಿದೆ.
ದಂಗೆಯ ನಂತರದಂತಿದ್ದ, ಬಸ್ಸ್ಟ್ಯಾಂಡಿನ ಅಲ್ಲಿಯೆ ಒಂದು ಸಂಧಿಯಲ್ಲಿ ಸೈಕಲ್ ರಿಕ್ಷಾವಾಲಾ ಪ್ರಯಾಣ ಕರಿಗಾಗಿ ಕಾಯುತ್ತಿದ್ದ. ನನ್ನ ಹರಕು ಮುರುಕು ಉರ್ದು ಹಿಂದಿಯಲ್ಲಿ ಉಸ್ಮಾನಿಯಾ ಯೂನಿವರ್ಸಿಟಿಗೆ ಬರುವೆಯಾ ? ಎಂದು ಕೇಳಿದೆ. ‘ಖತ್ರಾ ಹೈ ಸಾಬ್, ರಿಸ್ಕ್ ಲೇ ಲಿಯೇತೋ ಆತಾ ಹೂಂ, ಕುಚ್ ಹುವಾ ತೋ, ಉಪರ ವಾಲೆ ಕೋ ಛೋಡದೇಂಗೆ ಸರ್’ – ಎಂದ. ಅಂತೂ ಇಂತೂ ನಮ್ಮ ಸವಾರಿ ಸಂದುಗೊಂದುಗಳಲ್ಲಿ ಭಯ, ಅಳಕು ಜೀವ ಭಯಗಳ ನಡುವೆ ಸಾಗಿತು. ಕ್ಯಾಂಪಸ್ಸಿಗೆ ಬಂದು ತಿರುಮಲೇಶರ ಮನೆ ಕೇಳಿದೆವು. ಬಾಗಿಲು ತೆಗೆದಾಗ ನಮ್ಮ ಪ್ರೀತಿಯ ಕವಿ ಪ್ರತ್ಯಕ್ಷರಾದರು. ಲೆನಿನ್ ದಾಡಿ, ಕುಳ್ಳ, ಏರಿಸಿ ಹಿಕ್ಕಿದ ಕ್ರಾಪು, ಪಟ್ಟಾಪಟ್ಟಿ ಲುಂಗಿಯ ತಿರುಮಲೇಶರಿಗೆ ಹೈದರಾಬಾದಿಗೆ ಬಂದು ಇಳಿದಾಗ ಏನೆಲ್ಲ ಆಯ್ತು ಎಂದುವಿವರಿಸಿ ಹೇಳಿದೆವು. ಒಳಗೆ ಬನ್ನಿ, ಈ ರೂಮಿನಲ್ಲಿ ಲಗೇಜ್ ಇಡಿ, ಈಗ ಈ ರೂಮ್ ನಿಮ್ಮದು – ಎಂದರು.

ಮೂರು ದಿನ ಅವರ ಮನೆಯಲ್ಲಿಯೇ ಕಳೆದೆವು. ನಿತ್ಯ ರಾತ್ರಿ ೧೨ ರತನಕ ಹರಟೆ, ಸಾಹಿತ್ಯ ಸಂಭ್ರಮ. ಬೆಳಿಗ್ಗೆ ಕಾಫಿ, ತಿಂಡಿ. ಸಂಜೆ ಕ್ಯಾಂಪಸ್ಸಿನಲ್ಲಿ ವಾಕ್ – ಹೀಗೆಲ್ಲ ಮೂರು ದಿನ ತಿರುಮಲೇಶರ ಸಾಂಗತ್ಯ ಅನಾಯಾಸ ಸಿಕ್ಕಿತು. ಅವರ ವ್ಯಕ್ತಿತ್ವದ ಅನೇಕ ವಿಚಾರಗಳು ಇಳಿದವು. ನಾವು ಕುಟುಂಬದ ಸದಸ್ಯರಾಗಿ ಸಲೀಸಾಗಿ ಮೈಚಳಿ ಬಿಟ್ಟು ಮಾತನಾಡಿದೆವು.
ಅವರ ಕಾವ್ಯ, ಅವರ ಧೋರಣೆ, ಅವರು ಬರೆದ ಅಂತರಾಷ್ಟ್ರೀಯ ಮಟ್ಟದ ಇಂಗ್ಲೀಷ ಲೇಖನಗಳು, ಕಾವ್ಯ ಹುಟ್ಟುವ ಬಗೆ, ನಾಯಕ ಮತ್ತು ಇತರರು ಕಾದಂಬರಿಯ ಹೊಳಹು, ಮಹಾಪ್ರಸ್ಥಾನ ಸಂಕಲನಕ್ಕೆ ಬಂದ ‘ಅಡಿಗರ ಉತ್ತರಾಧಿಕಾರಿ’ ಎಂಬ ಕಾಂಪ್ಲಿಮೆಂಟ್ಸ್ ಹೇಳಿದರು. ಅವರ ಕೆಲವು ಮಾತುಗಳು ಈಗಲೂ ನೆನಪಿನಲ್ಲಿವೆ. ಒಬ್ಬ ಕವಿಯನ್ನು ನಾಶ ಮಾಡಬೇಕೆಂದರೆ ಅವನ ಕಾವ್ಯವನ್ನು ಶಾಲೆ, ಕಾಲೇಜುಗಳ ಪಠ್ಯವಾಗಿಸಬೇಕು. ಆಗ ಹೊಸ ತಲೆಮಾರು ಅವನನ್ನೂ ಮತ್ತು ಅವನ ಕಾವ್ಯವನ್ನು ಶಪಸುತ್ತದೆ – ಎಂದು ಹೇಳಿ ನಕ್ಕದ್ದು.
ಅಡಿಗರ ಜೊತೆಗೆ ಬಹಳ ಗಂಭೀರವಾಗಿ ಮಾತಾಡಬೇಕು. ಲಂಕೇಶರ ಜೊತೆಗೆ ಅವರ ಮೂಡ್ ನೋಡಿ, ಅನಂತಮೂರ್ತಿ ಅವರ ಸಂಗಡ ಯಾವಾಗ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು ! ಕವಿತೆ ಹರಳೆಣ್ಣೆಯಂತೆ ಜಿಡ್ಡು ಜಿಡ್ಡಾಗಿರಬಾರದು, ಪಾದರಸದಂತಿರಬೇಕು. ದೊಡ್ಡ ಕವಿತೆಗಳಿಗಿಂತ, ಒಂದು ಹಾಳೆ ಅಳತೆಯ ಕವಿತೆ ಇರಬೇಕೇನೊ ! (ದೊಡ್ಡವರು ದೊಡ್ಡ ಕವಿತೆ ಬರೆಯುತ್ತಾರೆ, ಸಣ್ಣವರು ಸಣ್ಣ ಕವಿತೆ. . . ಅವರ ಕವಿತೆಯ ಸಾಲು ನೆನಪಾಯ್ತು) ಮನುಷ್ಯ ಪ್ರವೃತ್ತಿಗಳನ್ನು ಪ್ರಾಣ ಮುಖೇನ ಹೇಳಿಸಲು ಸಾಧ್ಯ.
ಮಹಾಪ್ರಸ್ಥಾನ, ಅವರೆಲ್ಲ ಎಲ್ಲಿ ಹೋದರು, ಮುಖಾಮುಖಿ ಇಂತಹ ಕವಿತೆಗಳು , ಇಬ್ಬರು ಹುಚ್ಚರು, ಕರಿಬಿಳಿ ಬೆಕ್ಕು, ನಾಯಕ ಮತ್ತು ಇತರರು, ಅನೇಕ – ಇವೆಲ್ಲ ನನಗೆ ಸದಾ ನೆನಪಾಗುತ್ತವೆ.
ಕನ್ನಡ ನೆಲದಿಂದ ದೂರ ಇದ್ದರೂ, ಕನ್ನಡದ ಸಿದ್ಧ ಮಾದರಿಗಳಿಗೆ ತಾಕದಂತೆ ತಮ್ಮದೇಯಾದ ವಿಶಿಷ್ಟ ರುಚಿಯ ಭಾಷಾಭಿರುಚಿ ಬೆಳೆಸಿಕೊಂಡಿದ್ದ ತಿರುಮಲೇಶರು, ಪ್ರಸಿದ್ಧಿ ಗಿಸಿದ್ದಿಗೆ ತಲೆ ಕೆಡಿಸಿಕೊಂಡವರಲ್ಲ. ತಮ್ಮ ಪಾಡಿಗೆ ತಾವು ಬರೆದವರು. ಇಂಗ್ಲಿಷ್ ಮತ್ತು ಕನ್ನಡ ನುಡಿಗಟ್ಟಿಗೆ ಸಂವೇದನಗಳ ಕಸಿ ಮಾಡುತ್ತಿದ್ದ ಅಪರೂಪದ ಕವಿ. ಪ್ರಯೋಗಶೀಲತೆಯನ್ನೆ ಸದಾ ಗುಣವಾಗಿಸಿಕೊಂಡವರು.
ಮೂರು ದಿನಗಳ ನಂತರ PWG ಬಂದ್ ಮುಗಿದ ನಂತರ ನನ್ನ ಪುಸ್ತಕ ಜೋಳಿಗೆಯನ್ನು ಹೆಗಲೇರಿಸಿಕೊಂಡು, ಸಣ್ಣನ ಬ್ಯಾಗೊಂದನ್ನು ಕೈಯಲ್ಲಿ ಹಿಡಿದು ಅವರ ಮನೆಯಿಂದ ಹೊರಟಾಗ ‘ಒಂದು ಫೋಟೊ ಆಗಲಿ’ ಎಂದರು. ನಾವೆಲ್ಲ ಮನೆ ಕಟ್ಟೆಯ ಮೇಲೆ ಕುಳಿತು ತೆಗೆಯಿಸಿಕೊಂಡ ಫೋಟೊ ಈಗಲೂ ನನ್ನ ಬಳಿ ಇದೆ. ಅದು ಅವರ ಕೊನೆಯ ಭೇಟಿ. ಈಗಲೂ ಕಣ್ಮುಂದೆ ಅಳಿಸಲಾಗಿಲ್ಲ.
ಆನಂತರದ ದಿನಗಳಲ್ಲಿ ನನ್ನ ವಿಷಾದಯೋಗ ಸಂಕಲನಕ್ಕೆ ಮುನ್ನುಡಿ ಬರೆದು ಕೊಟ್ಟರು. ಸಂಕಲನದ ಮುನ್ನುಡಿಯಲ್ಲಿ ಎಲ್ಲಿಯೂ ನನ್ನ ಕಾವ್ಯದ ಬಗ್ಗೆ ಅಭಿಪ್ರಾಯ ಹೇರಲಿಲ್ಲ. ಮುನ್ನುಡಿ ಮುಗಿಸುವಾಗ ‘ಈ ಮಾತುಗಳು, ಸತೀಶ ಕಾವ್ಯಕ್ಕೆ ಬಾಗಿಲು ತೆರೆಸಬಹುದು’ ಎಂದು ಬರೆದಿದ್ದರು. ನಾಡಿನ ಅನೇಕ ಪತ್ರಿಕೆಗಳಲ್ಲಿ ವಿಷಾದಯೋಗದ ವಿಮರ್ಶೆ ಬಂದವು. ಎಲ್ಲ ಕಡೆ ತಿರುಮಲೇಶರ ಕಾವ್ಯ ಕುರಿತಾದ ಪ್ರಖರ ಮಾತುಗಳ ಉಲ್ಲೇಖ ತಪ್ಪದೇ ಆಗಿತ್ತು.






ಕೆ. ವಿ ತಿರುಮಲೇಶ್ ಅವರ ನೆನಪಿನ ಸುರಳಿ ಅವರ ವ್ಯಕ್ತಿತ್ವ ಕ್ಕೆ ಹಿಡಿದ ಕನ್ನಡಿ. ಸಾಹಿತ್ಯಕ್ಕೊಂದು ಅದ್ಭುತ ಶಕ್ತಿ ಇದೆ.