‘ಕವಿತೆ ಬಂಚ್‌’ನಲ್ಲಿ ಸಂಘಮಿತ್ರೆ ನಾಗರಘಟ್ಟ​​

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಸಂಘಮಿತ್ರೆ ನಾಗರಘಟ್ಟ
ತಂದೆ ಎನ್.ಕೆ ಹನುಮಂತಯ್ಯ ತಾಯಿ ಶೈಲಜ ನಾಗರಘಟ್ಟ​​…ಪತ್ರಿಕೋದ್ಯಮದಲ್ಲಿ ಬಿ‌.ಎ ಪದವಿ ಮುಗಿಸಿ ಪ್ರಸ್ತುತ ಇಂಗ್ಲಿಷ್ ಎಂ.ಎ ಅಭ್ಯಾಸ ಮಾಡುತ್ತಿದ್ದಾರೆ. ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ, ರೇಖಾಚಿತ್ರ ರಚನೆ ನನ್ನ  ಪ್ರಮುಖ ಆಸಕ್ತಿ, ಹಲವಾರು ಕವನ ಸಂಕಲನಗಳಿಗೆ ಇವರ ರೇಖಾ ಚಿತ್ರಗಳು ಬಳಕೆಯಾಗಿವೆ. ‘ಹಿಮಪಕ್ಷಿ’ ಎಂಬ ಮುಖ ಸಂಪುಟ ಪತ್ರಿಕೆಯ ಸಂಪಾದಕರು.

1. ಗಡಿ ರೇಖೆ

ಅವಳ ಕಂಡಾಗ
ಪ್ರೀತಿಯೋ ಮೋಹವೋ
ಉಕ್ಕಿ ಹರಿದು
ಅವ ಧಾವಿಸಿ ಅವಳೆಡೆಗೆ ಬಂದ…
ಕಾಲಚಕ್ರ ಉರುಳಿದಂತೆ ಅವಳು
ಇವನ ಕಂಗಳಿಗೆ
ಬೇಲಿಯ ಹೂವಿನಂತಾದಳು…
ಅವ ಹೆಜ್ಜೇನಿನಂತೆ
ಹೂವಿನಿಂದೂವಿಗೆ
ಮಕರಂದವ ಹೀರುತ
ಹೊರಟ ಹಾದಿಯಲಿ
ಗುರುತುಗಳ ಉಳಿಸದೆ ಹೋದ,
ಯಾವ ಹೂಗಳು ಸಿಗದಾಗ
ಮರಳಿ ಅವಳತ್ತ ಬಂದ,

ಅವಳಿಗೋ ಇವನ
ಹೊರತಾಗಿ ಮತ್ಯಾವ
ಚಿಂತೆಯೂ ಇರಲಿಲ್ಲ
ಆದರದಿಂದ ಬರಮಾಡಿಕೊಂಡಳು
ಅವನೋ ಬೇಲಿ ಹೂವಿಗೆ
ಅನುಕಂಪದಾಸರೆಯಾಗಿರುವೆ
ಎಂದು ಊರಿಗೆಲ್ಲಾ ಸಾರಿದ
ಹೀಗೊಂದು ದಿನ
ಇವನು ಹೀರುತ್ತಿದ್ದ ಅನ್ಯ ಹೂವಿನ
ಮೋಹದ ಎಂಜಲಿನ ವಾಸನೆ
ಇವಳ ಮೂಗಿಗೆ ಬಡಿದು
ಮನ ಒಡೆಯಿತು
ಕುಗ್ಗಿ ಕಂಗಲಾಗದೆ
ಅವಳಿಗವಳೆ ಗಡಿ ರೇಖೆಯ
ಹಾಕಿಕೊಂಡಳು,…
ಅವನು ಮತ್ತೆಂದೂ ಅವಳತ್ತ
ಸುಳಿಯಲಾಗುವುದಿಲ್ಲವೇನೋ

2. ಮೌನ

ಹೊರಗೆ ಕವಿದಿದೆ ಮೌನ
ಭೀತಿಯ ಮೌನ
ಬಾಗಿಲಲಿ ಕಟ್ಟಿಹಾಕಲಾಗಿದೆ
ಆಡುವ ಮಕ್ಕಳ ಕಾಲುಗಳ
ಕೊಠಡಿಯ ಮೂಲೆಯಲಿ
ಗೋಡೆಗೆ ಅಂಟಿದ ಖುರ್ಚಿಗೆ
ಅಜ್ಜ- ಅಜ್ಜಿಯರ ಕೂರಿಸಲಾಗಿದೆ!
ದುಡಿವ ಅಪ್ಪನ ಕೈಗಳಿಗೀಗ
ಟಿ.ವಿಯ ರಿಮೋಟ್ ಬಂದು ಸೇರಿದೆ!
ಅಮ್ಮನಿಗೆ ಎಲ್ಲರನೂ
ಕಾಳಜಿ ಮಾಡುವ ಕೆಲಸವಂತೂ ತಪ್ಪಿಲ್ಲ!

ಪಕ್ಕದ ಬೀದಿಯಲಿ
ಕೂಲಿಯ ಮಕ್ಕಳು ಇನ್ನೂ
ಆಡುತ್ತಲೇ ಇದ್ದಾರೆ..
ಅವರಪ್ಪ ಇಟ್ಟಿಗೆ – ಜಲ್ಲಿಯ ಕುಟ್ಟುತ್ತಲೇ
ಇದ್ದಾನೆ
ಅವರಮ್ಮ ಸೀಮೆಂಟು ಚೀಲವ
ಒಡೆದು ಬಾಣಲಿಗೆ ಸುರಿಯುತ್ತಿದ್ದಾಳೆ..
ಅವರಿಗೆ ಹಸಿಸಾಗ ಅನ್ನವಿಲ್ಲ!
ಸಿಕ್ಕಾಗ ಮಾತ್ರ!

3. ನನ್ನ‌ ಬಾಲ್ಯ

ಮತ್ತದೇ ಬಾಲ್ಯದ ಹಾಡು
ಅದೇ ಕೋಣೆಯಲಿ
ಆಡುತ ಕುಣಿಯುತ
ಕಾಲ ಸರಿದದ್ದೇ ತಿಳಿಯಲಿಲ್ಲ
ಅಮ್ಮನೊಡಲಲಿ ತೂಕಡಿಸಿ
ಅಪ್ಪನ‌ ಹೆಗಲಲಿ ನಿದ್ದೆಗೆ
ಜಾರಿದ ಹೊತ್ತು
ಹಸಿವಾದಾಗ ಪಿಳ ಪಿಳನೆ
ನೋಡುವಾಗ, ರಚ್ಚೆ ಹಿಡಿವಾಗ
ಹುಟ್ಟಿತೊಂದು ರಾಗ.

ಸುತ್ತಲೂ ಹರಡಿದ‌ ಹಾಳೆ
ಎಲ್ಲದರ ಮೇಲೂ
ರುಜು ಮಾಡುವ ಪುಟ್ಟ ಕೈಗಳು.
ಮನೆ ಮುಂದಿನ
ಗಸ ಗಸೆ ಮರದ
ಹಣ್ಣುಗಳಿಗಾಗಿ ಜಿಗಿದ ಆ ದಿನ
ಹೆಜ್ಜೆ ಇಡಲು ಬಾರದಿದ್ದರೂ
ಚಕ್ರಗಳತ್ತ ಸೆಳೆದ ಕಾಲುಗಳು
ತೊಡಲುವ ನುಡಿಯಲೇ
ಅಕ್ಷರವ ಓದುವ ಹಂಬಲ
ಟೀಚರ್ ಆಟಕೆ
ಶಿಷ್ಯರಾದ ಗೋಡೆಗಳು
ಅಪ್ಪನ ಸೂಟ್ ಕೇಸ್
ಹಿಡಿದು ಅಮ್ಮನ ದುಪ್ಪಟ್ಟ
ಸುತ್ತಿಕೊಂಡು
ಜಾತ್ರೆಯ ಕನ್ನಡಕವ
ಸಿಗಿಸಿಕೊಂಡು ಎಲ್ಲಿಗೋ
ಹಾರುವ ಕನಸು..

4. ಮರಣ ಪತ್ರ
ಇಲ್ಲೊಂದು ಹರಿದ ಕಾಗದ
ಮಳೆಯಲಿ ಒದ್ದೆಯಾಗಿ
ಪದಗಳ ಶಾಯಿ ನೀರಿನಂತೆ
ಹರಿಯುತಿದೆ…ಹರಿದು
ಹರಿದು ಮಣ್ಣನು ಸೇರಿವೆ
ಉತ್ತರದಿಂದ ದಕ್ಷಿಣ
ಪೂರ್ವದಿಂದ ಪಶ್ಚಿಮ
ಎಲ್ಲಾ ದಿಕ್ಕಿಗೂ
ತೇಲಿ ಸೇರಿವೆ
ಅಕ್ಷರಗಳು…

ಒಂದೊಂದು ಮನೆಯ
ನೀರಿನ ಕೊಳಗವ ತಲುಪಿವೆ
ಎಲ್ಲರ ಒಣಗಿದ ಕಂಠವ
ತಣಿಸುತ್ತಿವೆ ಈ ಅಕ್ಷರದ
ನೀರು…ಇದು ಬರೀ ನೀರಲ್ಲ
ಅಕ್ಷರದ ನೀರು
ಸೋತ ಶ್ರಮಿಕನೋರ್ವನ
ಮರಣ ಪತ್ರದ
ಕಪ್ಪು ವರ್ಣದ ನೀರು….

5. ಸೂತಕಗಳು
ಹೀಗೊಂದು ಸಂಜೆ
ತೀರಾ ನೊಂದು
ಮಂಡಿ ನೆಲಕ್ಕೂರಿ
ಕೈಗಳ ಅದರ ಮೇಲಿರಿಸಿ
ಕಣ್ಣುಗಳ ಮುಚ್ಚಿ
ನಾನು ಧಾನ್ಯಿಸಬಲ್ಲೆನೆ
ಇಲ್ಲವೆ ಎಂದು ಪರಿಕಿಸುತ್ತಲೇ
ಕುಳಿತೆ.. ನನ್ನನು ಸೋಲಿಸಲೆಂದೇ
ಕಾದು ಕುಳಿತಿದ್ದ ಸೂತಕಗಳು
ಮುಖಕ್ಕೆ ರಾಚುತ್ತಿದ್ದವು…

ಜಗವೆಲ್ಲಾ ಸುಟ್ಟು
ಬೂದಿಯಾಗುತ್ತಿದ್ದರೂ
ನಿನಗೆ ಶಾಂತಿಯ ಹುಡುಕಾಟವೇ?
ಎಂಬಂತೆ ಪ್ರಶ್ನೆ.
ನಿನ್ನನ್ನೇ ನೀನು ನೋಡಿಕೊಂಡು
ಕುಳಿತರೇ ನಿನ್ನವರ ಕಣ್ಣೀರ
ಹೊರೆಸುವುದಾದರೂ ಯಾರು?
ನೀನೊಬ್ಬಳೇ ನಿನ್ನದಷ್ಟೇ ಸೂಚ್ಯವಾದರೆ
ನೀನು ಇದ್ದೂ ಸತ್ತಂತಲ್ಲವೇ?

6. ಚಿತ್ರ ಮಾತನಾಡುವ ಹೊತ್ತು

ಹಾಳೆ ಮೇಲಿನ
ಆ ಚಿತ್ರದ ಹುಡುಗಿ
ನನ್ನನ್ನೇ ಕಣ್ಣು ಮಿಟುಕಿಸದೆ
ನೋಡುತ್ತಿದ್ದಳು…
ಅಲಲೇ ಏನಪ್ಪ
ಜೀವ ತುಂಬಿದ
ನನ್ನನ್ನೇ ದಿಟ್ಟಿಸುವೆಯ
ಎಂದು ಜೋರಾಗಿ
ಎಂಜಲು ಸಿಡಿಯುವಷ್ಟು
ಜೋರಾಗಿ ನಕ್ಕೆ…
ಚಿತ್ರದ ಹುಡುಗಿಯ
ಕಂಗಳ ಬಳಿ
ನನ್ನ ಉಗುಳು ಅಂಟಿತು.

ಆಕೆ ಕೆಲ ಹೊತ್ತು
ಮೌನಿಯಾಗಿದ್ದಳು..
ಮೆಲ್ಲಗೆ ಉಸಿರು ಬಿಡುತ್ತ
ನನ್ನನ್ನೇ ಉದ್ದೇಶಿಸಿ
ಅಲ್ಲಾ ಅಕ್ಕ ನೀ ಯಾಕೆ
ಪದೇ ಪದೇ
ನನ್ನ ಮುಡಿಗೆ ಮಲ್ಲಿಗೆ
ಮುಡಿಸುವೆ.
ಕಿವಿಗೆ ಜೋತು ಬೀಳುವ
ಓಲೆಗಳ ತೊಡಿಸುವೆ.
ತುಟಿಗೆ ಗಾಢ ಬಣ್ಣವ ಬಳಿಯುವೆ.
ಹಣೆಗೆ ಮಿನುಗುವ ಚುಕ್ಕಿಯ ಇಡುವೆ.
ತೋಳ ತುಂಬಾ ಸೆರಗು ಮುಚ್ಚುವೆ.
ಕಾಲ್ಗಳಿಗೆ ಝಲ್ ಎಂಬ ಗೆಜ್ಜೆಗಳ ಹಾಕುವೆ.
ನನ್ನ ಪ್ರಶ್ನೆ ಇಷ್ಟೇ,
ನಿನ್ನ ಪಕ್ಕದಲ್ಲೇ
ಇರುವ ಮತ್ತೊಬ್ಬ
ಕಲಾವಿದ ನನ್ನನ್ನು ಬಿಡುಸುವಾಗಲೆಲ್ಲಾ
ಮುಡಿಯ ಕೆದರಿಬಿಡುತ್ತಾನೆ.

ಖಾಲಿ ಕಿವಿ-
ತುಟಿಗೆ ಹನಿಹನಿಯಾಗಿ
ತೊಟ್ಟಿಕ್ಕುವಷ್ಟು ರಂಗು,
ಖಾಲಿ ಹಣೆ,
ತೋಳು ಕಾಣುವಂತೆ
ಹರಿದ ಉಡುಗೆ ತೊಡಿಸುತ್ತಾನೆ….
ನೀನು ನೋಡಿದರೆ ಸದಾ
ಅವನ ಮೇಲೆ ಅಕ್ಕರೆ ತೋರುವೆ.
ಅದೇ ನನಗೆ ಕೋಪ
ನೀನು ನನಗೆ ದೊಡ್ಡ ದೊಡ್ಡ
ಬೂಟುಗಳ ತೊಡಿಸಬಾರದೇಕೇ???

7. ಹಸಿವು!

ಸತ್ತು ಬಿದ್ದಿದ್ದ
ಹೆಣವನ್ನು
ಕಿತ್ತು ತಿನ್ನುತ್ತಿದ್ದ
ನಾಯಿ ಶವದ
ಜಾತಿಯ-ಧರ್ಮವ
ಮೂಸಲಿಲ್ಲ ಹಸಿವಷ್ಟೇ
ಅದಕ್ಕೆ ತಿಳಿದದ್ದು!

ತನ್ನಪ್ಪ ರೋಗದೀ
ತೀರಿಕೊಂಡನೆಂದು
ಮಗ ಮಾರು ದೂರ
ಉಳಿಯುತ್ತಾನೆ –
ಉಳಿದರೂ ತಂದೆಯ
ಜೇಬಿನ ಹಣಕ್ಕಾಗಿ
ಹಾತೊರೆಯುತ್ತಾನೆ
ಅವನಿಗೂ
ಹಣದ ಹಸಿವಿದೆ!

ಒಡಲಲಿ‌ ತುಂಬಿದ
ಕೂಸು ಇನ್ನೇನು
ತಾಯ ಮಡಿಲಿಗೆ
ಸೇರಬೇಕು
ಅಷ್ಟರಲಿ ಪ್ರಮಾಣಿಕರಿಸದ
ರೋಗದ ಪತ್ರ ಸಿಗದೆ,
ಮಗು ಕರುಳ ಬಳ್ಳಿಯ
ತೊರೆದು ನೆಲಕ್ಕುರುಳಿ
ಒಂದೇ ಉಸಿರಿಗೆ
ಸತ್ತು ಹೋಯಿತು!

ನೂರಾರು ವರ್ಷ
ಅರಾಜಕತೆಯ
ಸಹಿಸದೆ- ವಿರುದ್ಧ
ದನಿಯ ಎತ್ತಿದ
ಹೆಮ್ಮರ ವೂ
ಇದೇ ರೋಗದ
ಅಂಟಿಗೆ ತಗುಲಿ
ಅಸು ನೀಗಿತು
ಆ ಜೀವಕೂ
ಹಸಿವಿತ್ತು-
ಕ್ರಾಂತಿಯ ಹಸಿವು!

8. ಒಡಲ ಕವಿತೆ

ಕವಿತೆಯ ಹೆರುವಾಗ
ಎದೆಯಾಳದಲಿ ಸಂಕಟ
ನರನರಗಳಲೂ ಅದರದೇ
ನೋವು- ಹರಿವು
ಹೆತ್ತವರಿಗಷ್ಟೇ ಗೊತ್ತು
ಅದರಿಂದಿನ ಸೂತ್ರ
ಅದು ಹುಟ್ಟಿದ ಮರುಗಳಿಗೆ
ತಾ ಮುಂದು ನಾ ಮುಂದು
ಎನ್ನುವ ನಾಮಕರಣಕಾರರು

ಮುದ್ದಾದ ಕವಿತೆಯ ಹಡೆದಾಗ
ಹೇಳದೆ- ಕೇಳದೆ ತೊಟ್ಟಿಲಿಂದಲೇ
ಸದ್ದಿಲ್ಲದೇ ಕದ್ದು ಸಂಭ್ರಮಿಸುವವರು
ಕೂಸು ಕಳೆದುಕೊಂಡ ಕವಿ ಮಾತ್ರ
ಎಂದಿನಂತೆ ಮತ್ತೊಂದು
ಭ್ರೂಣವ ಪಡೆವ ಯೋಚನೆಯಲಿ
ಎಲೆಮರೆಯಲೇ
ನವಜಾತ ಕವಿತೆಗೆ
ಜನ್ಮ ನೀಡುತ್ತಾ
ತಾಯ್ತತನವ ಅನುಭವಿಸುವನು…

‍ಲೇಖಕರು Admin

July 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ಪ್ರೀತಿಯ ಸಂಘಮಿತ್ರೆ ರೇಖೆಗಳಲಿ ಚಿತ್ರ ಮೂಡಿಸುತ್ತಲೇ ಅದೆಷ್ಟು ಮಾಗಿದೆ. ಚಿತ್ರಗಳು ಕೂಡ ತನ್ನೊಳಗೆ ಮುಗಿಯದ ಅನೇಕ ಬವಣೆಗಳನ್ನು ಹೊರಹಾಕುತ್ತವೆ…. ಕೆಲವೊಮ್ಮೆ ಅಚ್ಚರಿಯಿಂದ ಸುಮ್ಮನೆ ನೀ ಬರೆಯುವ ಚಿತ್ರಗಳಲ್ಲಿ ಮುಳುಗಿ ಮೌನಧರಿಸುತ್ತೇನೆ. ಬದುಕಿನ ಎಲ್ಲಾ ಮಗ್ಗಲುಗಳನ್ನು ತಾಕುವಂತೆ ಕಾವ್ಯಕಟ್ಟುವ ನೀನು ಹಿಂದೆ ಒಮ್ಮೆ ನಿನ್ನದೇ ಚಿತ್ರದ ಕೆಳಗೆ ಬರೆದ ಸಾಲು ನೆನಪಾದವು. ಜೀವಂತ ಕಾವ್ಯಬೇರುಗಳು ಕನ್ನಡದ ಕಾವ್ಯ ಜಗತ್ತಿನಲ್ಲಿ ಅರಳುತ್ತಿರುವ ಸಡಗರವೊಂದಕ್ಕೆ ಎದುರು ಮಾಡಿದೆ..,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: