
ಕವಿತೆ ಬಂಚ್-
‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.
ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.
ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.
ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಜಯಶ್ರೀ ಬಿ ಕದ್ರಿ
ಜಯಶ್ರೀ ಬಿ ಕದ್ರಿಯವರು ಮಂಗಳೂರಿನ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮೂಲತ: ಕೇರಳದ ಕಾಸರಗೋಡಿನವರು. ‘ತೆರೆದಂತೆ ಹಾದಿ’ ಹಾಗೂ ‘ಬೆಳಕು ಬಳ್ಳಿ’ ಇವರ ಪ್ರಕಟಿತ ಕೃತಿಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಹಾಗೂ ಪಿ ಎಚ್ ಡಿ ಪದವಿ ಪಡೆದಿರುತ್ತಾರೆ. ಲೇಖನಗಳು, ಕವಿತೆ , ಪ್ರವಾಸ, ಓದು ಇತ್ಯಾದಿ ಆಸಕ್ತಿಗಳು.
1. ಪಾರಿಜಾತದ ಗಂಧ
ಅಂಗಳದಲ್ಲೊಂದು
ಪಾರಿಜಾತದ ಘಮಲು
ಮುಟ್ಟಿದರೆ ಬಾಡಿ ಹೋದೀತು
ಕನಸ ಪಕಳೆಗಳು ನಲುಗಿ ಹೋದೀತು
ತುದಿ ಬೆರಳಿಗಂಟಿದ ಪರಾಗದ ಸ್ಪರ್ಶವೇ
ಅರಳಿಸಿ ಬಿಡು ಜೀವದಲಿ
ರಾಗವನ್ನು
ಒಡಲಿನಲಿ ಚೈತನ್ಯದ ಚಿಲುಮೆಯನ್ನು

ಸಂಜೆ ಗತ್ತಲಿನ ಮೌನವೇ
ತಣಿಸಿಬಿಡು
ಒಡಲುರಿಯ ಬೇಗೆಯನ್ನು
ಬಾನ ಕಾವಳದ ರೌದ್ರವನ್ನು
2. ಕೇಳಿಸದ ಸದ್ದುಗಳು
ಕೇಳಿಸುವುದೇ ಇಲ್ಲ
ತಂತಿ ಮುರಿಯುವ ಸದ್ದು
ಬದುಕು ಮೆಲ್ಲನೆ ಬವಳಿ
ಕಾಡಿಸುವ ಹೊತ್ತು
ಉಸಿರು ಬೆರೆಯುವ ಸದ್ದು
ಜೀವ ಕರಗುವ ಹೊತ್ತು
ಎದೆಯ ಬಡಿತಕ್ಕೆ
ಬೆಚ್ಚಿ ಬೀಳುವ ಹೊತ್ತು
ಕೇಳಿಸುವುದೇ ಇಲ್ಲ
ಒಳಗೆ ಉರಿಯುವ ಸದ್ದು
ತನುವ ಮೀರಿದ ಮನವ
ಇರಿವ ಮೌನದ ಸದ್ದು

ನಾಡ ಕಾಡುವ ಸದ್ದು
ಭೂಮಿಯೊಡಲಿನ ಸದ್ದು
ಆತ್ಮದನುರಣನಕೆ
ಕಂಪಿಸುವ ಸದ್ದು
3. ಇಲ್ಲಿ ನಿಶ್ಶಬ್ದ
ಇಲ್ಲಿ ನಿಶ್ಶಬ್ದ
ಆದರೆ ಸದ್ದುಗಳು
ಸಂಜೆ ಮಲ್ಲಿಗೆ ಹೂವು
ಅಲರಿಗೆ ಲಾಲಿ ತೂಗುವ ಹಾಗೆ
ಪಾರಿಜಾತದ ಹವಳದ ತೊಟ್ಟು
ಮೆಲ್ಲನೆ
ಎಲೆಯ ಕೆನ್ನೆಯ ಸವರಿದ ಹಾಗೆ
ಚಂದಿರನೇ ಬಾ
ಈ ಕೊಳದ ನಸುಗತ್ತಲಿನ
ಮೌನದಲೆಗಳಿಗೆ
ಈ ಮರದ ಮರ್ಮರ ತಾಪಕ್ಕೆ
ಈ ನೈದಿಲೆ ಹೂವಿನ
ಬೆಳ್ಳನೆ ದಳಗಳಿಗೆ
ತಂಪು ತಂಪಾಗಿ
ನಿಶೆಯೇ ಬಾ
ನಿನ್ನ ಕರಿಸೆರಗಿನ
ಮೌನ ಸಾಂತ್ವನದಲ್ಲಿ
ನಿನ್ನ ತಾರೆಗಳ ಮಿಣುಕಿನಲಿ
ನಾ ಮರಳಿ ಮಗುವಾಗುವೆ

4. ಕವಿತೆ
ಕವಿತೆಯೆಂದರೆ ಹಾಗೆ
ಅಗಾಗ ಪಳ್ಳೆಂದು
ನಗುವ ಹೂವು
ಕವಿತೆಯೆಂದರೆ
ತಂತಿ ಕಂಪಿಸಿದ
ಮೌನ
ಕೋಲ್ಮಿಂಚು ಸುಳಿದಂತೆ
ಗುಡುಗು ಕಣ್ಣೀರು
ಕವಿತೆಯೆಂದರೆ ಮತ್ತೆ
ಮೌನಕೂ ಮಾತಿಗೂ
ಚೇತನವು
ಬೆಸೆವ
ಕೊಂಡಿ
ಕವಿತೆಯೆಂದರೆ ಹಾಗೆ
ನಿಶ್ಶಬ್ದಕೂ ಧ್ವನಿ ತುಂಬಿ
ಭೋರ್ಗರೆಯುವ
ಕಡಲು.

ಕವಿತೆಯೆಂದರೆ ಮತ್ತೆ
ಭವದ ಸಾಯುಜ್ಯಕ್ಕೆ
ಉರಿವ
ಹಣತೆ
5. ಮಳೆ ಬರುವ ಕಾಲ
ಅಂದು ಸುರಿದ ಮಳೆ
ಭೋರ್ಗರೆದು ಸುರಿ ಸುರಿದು
ನೆಲದ ಮೂಲೆ ಮೊಡಕುಗಳ
ಒದ್ದೆಯಾಗಿಸಿ ಮತ್ತೆ
ಹಾಗೆಯೇ
ಮಾಯ
ಇಲ್ಲಿ ಮೊದಲಿನ ಹಾಗೆ
ಹಗಲ ನಿಟ್ಟುಸಿರು
ಎದೆಯ ಲಬ್ ಡಬ್
ಬಡಿತಕ್ಕು ನಡುಕ
ಕಂಗಾಲು
ಮಳೆಯು ಸುರಿದಾಗೊಮ್ಮೆ
ಹಸಿರು ಹೂವಿನ ಪತ್ರ
ಗರಿಕೆ ಸೊಗದೆಯ ನಡುವೆ
ಚಿಗುರು ತುಂಬೆಯಹೂವು
ಬೇರಿಗಿಳಿದ ನೀರನೇ ನೆಚ್ಚಿ
ಕಾದು ಕಾದು
ಗಾಳಿ ನೇವರಿಕೆಯಲಿ
ಮರಳಿ ಕನಸುವುದು

ಬಾರಯ್ಯ ಮಳೆರಾಯ
ಇಲ್ಲಿ ಬಿರುಕು ನೆಲ
ಒಡೆದ ಹಿಮ್ಮಡಿ ಮತ್ತೆ
ಕಾಲುದಾರಿಯ ಪಯಣ
ನಿನ್ನ ಕಣ್ಣಿನ ಮಮತೆ
ಜಲವಾಗಿ ಕೆರೆಕೊಳ್ಳ
ನಾಡಿಯನು
ಮಿಡಿಯಬೇಕು
ಭೂ ವನಿತೆ ಹಸಿರಾಗಿ
ತೆನೆ ತುಂಬಬೇಕು
6. ಅಡುಗೆ
ಅಡುಗೆ ಕಲಿಸುತ್ತಾಳೆ
ಟಿವಿಯಲ್ಲಿನ ಚೆಲುವೆ
ಇದೋ ಇಲ್ಲಿ
ಹಿಟ್ಟನ್ನು ಚೆನ್ನಾಗಿ ನಾದಿ
ರುಚಿಗೆ ಉಪ್ಪು ಮಸಾಲೆ ಎಲ್ಲ
ಕಾದ ಎಣ್ಣೆಯಲಿ ಕರಿಯಬೇಕು
ಹಾಲನ್ನು ಕುದಿ ಕುದಿಸಿ
ಮತ್ತೆ ಸಕ್ಕರೆ ಹಣ್ಣು
ಇದೇ ಪಂಚಾಮೃತ
ಮಕ್ಕಳಿಗಿದು ಇಷ್ಟ.
ನಿಮಗೆ ಬಿಡುವಿರದಲ್ಲಿ
ನಿಮಗೆ ಸುಸ್ತಾದಲ್ಲಿ
ಇದೋ ದಿಢೀರ್ ಅಡಿಗೆ
ಚಟ್‌ಪಟ್ ಚಾಟ್
ಆರೋಗ್ಯದಡಿಗೆ

ನಿಮ್ಮ ಗಂಡನ ನಗುವು
ನಿಮ್ಮ ಮಕ್ಕಳ ಗೆಲುವು
ಎಚ್ಚರಿಕೆ ಸೀದು ಹೋದೀತು
ಮೊಸರು ಹುಳಿಯಾದೀತು
ಆಸ್ಪೋಟದಾಗಳಿಗೆ
ಎಣ್ಣೆ ಸಿಡಿದೀತು
ಬೆಂದ ಇಡ್ಲಿಯ ಘಮಲು
ಬಡಿದ ರೊಟ್ಟಿಯ ತೆಳುವು
ಫಳಪಳಿಪ ಕಿಚನ್ನು
ನಿಮಗೆ ಬೇಕೇನಿನ್ನು
ನೀವು ಆದರ್ಶ ಗೃಹಿಣಿ.
7. ಕನಸುಗಳ ಬಜಾರು
ಬನ್ನಿ ಬನ್ನಿ ಇದು
ಕನಸುಗಳ ಬಜಾರು
ಕೋಟು ಹಾರ ತುರಾಯಿ
ಮೇಕಪ್ಪು ಲಿಪ್ ಸ್ಟಿಕ್ಕು
ಜಾದು ದಂಡದ ಮುಂದೆ
ಸೌಂದರ್ಯ ಲಹರಿ
ಕನಸ ಬಜಾರಿನಲಿ
ಅಳುವಿಲ್ಲ ನಗುವೆಲ್ಲ
ಪಳಪಳನೆ ಹೊಳೆ ಹೊಳೆವ
ಬೆಳ್ಳನೆಯ ಕಾಂತಿ
ರೋಗ ರುಜಿನಗಳಿಲ್ಲ
ತರ ತರದ ಬಣ್ಣಗಳು
ಹೂವುಗಳು ಗಂಧಗಳು
ಟ್ಯೂಬು ಸ್ಯಾಶೆಗಳಲ್ಲಿ
ಜೀವನದ ಚೈತ್ರ

ಇದು ಕನಸ ಬಜಾರು
ಇಲ್ಲಿ ನೋವಿಲ್ಲ
ಹೃದಯ ಒಡೆಯುವ ಸದ್ದು
ಭೀಭತ್ಸವಿಲ್ಲ
ನಿಮ್ಮ ಕೈಯಲಿ ಕ್ಯಾಶು
ನಮ್ಮ ಕೈಯಲಿ ಜೋಶು
ಬನ್ನಿರೈ ಬನ್ನಿರೈ
ಕನಸಿನರಮನೆಗೆ
ಟಿ ವಿ ಹಾಲುಗಳಲ್ಲಿ
ಸಿನಿಮಾ ಬ್ರೇಕುಗಳಲ್ಲಿ
ಕನಸ ಸುರಿಯುವೆವು
ಗಾಜಿನರಮನೆಯಲ್ಲಿ
ಈ ಕನಸು ಈ ಬಣ್ಣ
ಕರಗಿ ಹೋಗುವ ಮುನ್ನ
ಬನ್ನಿ ಜಾಹೀರಾಗಿ
ನಾವು ನೀವು
8. ಜಾತ್ರೆ
ಜಾತ್ರೆ ಮುಗಿದಂತಿದೆ
ಇಲ್ಲೆಲ್ಲ ಪೀಪಿ ಬೆಲೂನು ಸಂತೆ
ಟೆಂಟು ಬಲೆಗಳ ಬಿಚ್ಚಿ
ಹೊರಟಿದ್ದೇವೆ ಎಲ್ಲರೂ
ದೊಂಬರಾಟವು ಕಳೆದು
ಅಡುಗೆ ಊಟವು ಮುಗಿದು
ಬಯಲ ಒಡಲಿನ ಕಡೆಗೆ.
ಜಾತ್ರೆ ಮುಗಿದಂತಿದೆ
ಜನಜಂಗುಳಿಯಲಿ
ಕಳೆದು ಹೋಗಿರಬೇಕು
ಕೈಗೆ ಅಂಟಿದ ರಾಗ
ಕಣ್ಣ ಕಪ್ಪಿನ ನೋಟ
ಹಾದಿ ತಿರುವಿನ ಬಿನ್ನಾಣವೆಲ್ಲ
ಉಸಿರು ತಿದಿಯೊತ್ತಿ
ಕಿಬ್ಬದಿಯ ತಿವಿಯುತ್ತ
ಜಾತ್ರೆ ನಿಂತಂತಿದೆ
ಜೀವದ ಜಾತ್ರೆ ನಿಂತಂತಿದೆ

9. ಕನ್ನಡಕ
ಕಣ್ಣು ಯಾಕೋ ಮಬ್ಬು ಮಬ್ಬು
ಹೊಸದಾಗಿ ಬಂದಿದೆ
ಕನ್ನಡಕ
ಪುಟ್ಟ ಸಾಲುಗಳೀಗ
ಅತಿ ಸರಳ ಗಂಭೀರ
ಅರ್ಥೈಸಿಕೊಳ್ಳುವುದು
ಕಣ್ಣಿನ ಕಾಯಕ
ಅರೆ! ಏಕೆ ಈ ನಿಟ್ಟುಸಿರು
ಕಣ್ಣ ಕೆಳಗಿನ ಕಪ್ಪು
ಕೆನ್ನೆಯಂಚಿನ ನೆರಿಗೆ
ಕೈ ಜಾರಿದ ಮರಳು
ಕನ್ನಡಕವೇ ಹೇಳು
ಎಲ್ಲಿ ನಿನ್ನೆಯ ನೋಟ
ಇದೆಯೇ ಇದ್ದಿತ್ತೇ
ಮುಂಬೆಳಗಿನ ಕಾಣ್ಕೆ

ಈ ಸಂಜೆಯ ಹಿನ್ನೋಟದಲಿ
ಈ ಕಲ ಕಲ ರವ ಮೌನವಾಗುವ ಮುನ
ಈ ಕಣ್ಣ ಕತ್ತಲಿನ ಶೈತ್ಯ
ಆತ್ಮ ನಡುಗಿಸುವ ಮುನ್ನ
ನೀನಿಲ್ಲದೆ ಹೊಸ ಬೆಳಕು
ಮೂಡಬಹುದೇ






0 Comments