ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಾಕೃತಿಗಳಿಗೆ ಉಸಿರು ತುಂಬಿ ಹೋದ ಕಲಾವಿದ..

-ದಿಲಾವರ್ ರಾಮದುರ್ಗ

(ಚಿತ್ರಗಳು ದೇವು ಪತ್ತಾರ ಅವರ ಫೇಸ್ ಬುಕ್ ವಾಲ್ ನಿಂದ)

“ಅವ್ರು ನಿಮ್ಮ ಬಗ್ಗೆ ಯಾವತ್ತೂ ಹೇಳೋರು. ನನ್ನ ಚಿತ್ರಕಲೆ ತುಂಬಾ ಮೆಚ್ಚುತ್ತಿದ್ದ ಗೆಳೆಯರು ಅನ್ನೋರು. ನಿಮ್ಮ ಫೇಸ್ಬುಕ್ ಪೋಸ್ಟ್, ವಾಟ್ಸಾಪ್ ಸ್ಟೇಟಸ್ ತೋರಿಸಿ ನೋಡು ನನ್ನ ಗೆಳೆಯರ ಜೀವನಪ್ರೀತಿ, ನೋವುಗಳ ಮರೆತು ಹೆಂಗೆ ಖುಷಿಯಾಗಿರ್ತಾರ. ವೆರೈಟಿ ಫೊಟೊ ಹಾಕ್ತಾರ, ದೇಶ, ವಿದೇಶ ಸುತ್ತಾಡ್ತಾರ.. ನಾ ನೋಡ್ ಇಲ್ಲೇ ಅದೀನಿ. ಅದ ಕೆಲಸ ಅದ ಸೀಮಿತ ಹುದ್ದೆ ಅನ್ನೋರು. ಅಷ್ಟರೊಳಗ ಉಳಿದುಬಿಟ್ಟೆ ಅಂತಿದ್ರು. ನಿಮ್ಮ ಬಗ್ಗೆ ಭಾಳ ಖುಷಿ ಪಟ್ಟು ನಿಮ್ಮ ಪೋಸ್ಟ್ ನಮಗೆಲ್ಲ ತೋರಿಸೋರು. ದಿಲ್ ನಮ್ಮ ಕಡೆಯವರು.. ವಿಷ್ಣು ಮತ್ತು ಅವ್ರು ಸೇರಿ ಎಂಥಾ ಆಫೀಸ್ ಮಾಡ್ಯಾರ ಅಂದಿ ನೀ.. ಅಂತ್ಹೇಳಿ ಎಷ್ಟು ಖುಷಿ ಪಡ್ತಿದ್ರು, ನಿಮ್ಮ ಬಗ್ಗೆ ಭಾಳ ಅಭಿಮಾನ ಪ್ರೀತಿ.. ನೀವು ಬರಾಕಬೇಕು. ಕಡೆಯ ದರ್ಶನಕ್ಕ..” ಎಂದು ಬಿಕ್ಕಿ ಬಿಕ್ಕಿ ಅಳುತ್ತ ಇದ್ದ ಹೆಣ್ಣು ಮಗಳ ದನಿ ಕೇಳಿ ನನಗೆ ಗಾಬರಿ. ಮೊಬೈಲ್ ಸ್ಕ್ರೀನ್ ಮೇಲೆ ಹೊಸ ನಂಬರ್! ನಾನು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಇರದ ನಂಬರ್ ಫೋನ್ ಎತ್ತಿಕೊಳ್ಳೋದು ವಿರಳ. ಅವತ್ತು ಶುಕ್ರವಾರ ಬೆಳಿಗ್ಗೆ ಬೆಳಿಗ್ಗೆ ಬಂದ ಫೋನ್ ಎತ್ತಿಕೊಂಡೆ. ಅವರು ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದರು. ಹಿಂದಿನ ರಾತ್ರಿ ನಿದ್ರೆ ಸರಿಯಾಗದೆ ಬೆಳಿಗ್ಗೆ ಸ್ವಲ್ಪ ಅರೆನಿದ್ರೆಯಲ್ಲೆ ಇದ್ದೆ. ಈ ಹೆಣ್ಣು ಮಗಳ ದನಿ ಬೇರೆ ನಾನು ಇದೇ ಮೊದಲ ಸಲ ಕೇಳ್ತಿರೋದು. ನನ್ನ ಹೆಸರು ಹೇಳಿದ್ದರಿಂದ ರಾಂಗ್ ನಂಬರ್ ಎನ್ನುವ ಪ್ರಶ್ನೆ ಬರಲಿಲ್ಲ. ಕಡೆಗೆ ಅವರು ಹೇಳಿದ್ದು “ನಾನು ಭಾವು ಅವರ ಮಿಸೆಸ್ ಭಾವು ಪತ್ತಾರ್ ಮಿಸೆಸ್..” ಎದೆ ಧಸಕ್ಕೆಂದಿತು.

ಓಹ್ ನೋ ನೋ.. ಹೆಂಗ್ರಿ, ಹೇಗಾಯಿತು ಇದೆಲ್ಲ, ಎಂದು ವಿಚಾರಿಸಿದೆ. ಲೋ ಬಿಪಿ, ಹಾರ್ಟ್… ಎಂದು ಮುಂದೆ ಮಾತು ಬಾರದವರಂತಾದರು.. ಸುಧಾರಿಸಿಕೊಂಡು “ನಾನೂ ಹೋಗ್ತಿನ್ರಿ ಅವ್ರ ಜೊತೆ.. ನನಗ ಅವ್ರನ್ನ ಉಳಿಸ್ಕೋಳ್ಳಾಕ ಆಗಲಿಲ್ರಿ. ನನ್ನ ಮಗೂರಿ ಅದು.. ಮಾರ್ಥಾಸ್ ಹಾಸ್ಪಿಟಲ್ ಒಳಗ ತಣ್ಣಗ ಮಲಗಿದ್ದು ನೋಡಾಕ ಆಗ್ತಿಲ್ಲ.. ನಿನ್ನೆ ರಾತ್ರಿ ಧೈರ್ಯವಾಗಿರು ನನಗೇನೂ ಆಗಂಗಿಲ್ಲ ಅಂದಾವ್ರು ಬೆಳಗಿನ ಜಾವ ಚೂರ್ ಚೂರ್ ಉಸಿರಾಡಿ ಕಣ್ಮುಚ್ಚೆ ಬಿಟ್ರು… “ನಿಮ್ಮ ನಂಬರ್ ಹುಡುಕಿ ಫೋನ್ ಮಾಡಿದಿನಿ ನೀವು ಬರ್ರಿ ನಿಮ್ಮ ಬಗ್ಗೆ ಅವ್ರಿಗೆ ಭಾಳ ಪ್ರೀತಿ..” ಎಂದ ಅವರ ಮಾತು ಕೇಳುವಾಗ ನನ್ನ ಕರುಳು ಕಿವುಚಿದಂತಾಗುತ್ತಿತ್ತು.

ಹ್ಯೂಮನ್ ಬೀಯಿಂಗ್ ಭಾವ ಕೋಶದಲ್ಲಿ ಇಂಥ ಸ್ನೇಹಭಾವ, ಸೌಹಾರ್ದತೆ, ಪ್ರೀತಿ, ಅಭಿಮಾನ ಮಾತ್ರ ಜೀವಸತ್ಯ. ಮಿಕ್ಕಿದ್ದೆಲ್ಲ ಕ್ಷಣಿಕ. ಟೆಂಪರರಿ ಅಷ್ಟೇ.

ನಾನಿಷ್ಟು ಹೇಳಿದ್ದು ಭಾವು ಪತ್ತಾರ್ ಎನ್ನುವ ನಾಡಿನ ಹೆಸರಾಂತ ಮುದ್ರಣ ಮಾಧ್ಯಮ ರಂಗದ ಗ್ರಾಫಿಕ್ಸ್ ಮತ್ತು ಪೊರ್ಟ್ರೆಟ್ ಕಲಾವಿದರು ತಮ್ಮ ಕೊನೆಯ ಉಸಿರಿನತನಕ ಕಾಪಿಟ್ಟುಕೊಂಡಿದ್ದ ಬದುಕಿನ, ಸ್ನೇಹದ ಹೃದಯಾಂತರಾಳದ ಬಗೆ ಮತ್ತದರ ಮಹತ್ವದ ಕುರಿತಾಗಿ. ಅವರ ಸ್ನೇಹ ಭಾವದ ಘನತೆಯ ಬಗ್ಗೆ, ಮಾನವ ಪ್ರೇಮದ ಬಗ್ಗೆ.

ವ್ಯಕ್ತಿತ್ವ ಎನ್ನುವುದು ಇದಷ್ಟೇ ಆಗಿರುವುದಿಲ್ಲ. ಅವರೊಬ್ಬ ಕಲಾವಿದ. ಕಲಾವಿದರು ತಮ್ಮ ಕಲೆಯ ಮೂಲಕ ಕಲ್ಙರಲ್, ಪಾಲಿಟಿಕಲ್ ಮತ್ತು ಸೋಶಿಯಲ್ ಸೂಕ್ಷ್ಮ ಸಂವೇದನೆಗಳನ್ನು, ಸಟೈರಿಕ್, ವಿಟ್ ಅನ್ನು ಕಲಾತ್ಮಕ ಮತ್ತು ಸಂವಹನಾತ್ಮಕವಾಗಿ ಕಟ್ಟಿಕೊಡುವವರು. ಅಂಥ ಪ್ರಜ್ಞಾವಂತಿಕೆಯ ವ್ಯಕ್ತಿತ್ವ ಭಾವು ಅವರದು. ನಿಜವಾದ ಕಲಾವಿದ ಒಬ್ಬ ಚಿಂತಕ, ಕನಸುಗಾರ ಕೂಡ ಎನ್ನುವುದನ್ನು ಮರೆಯಬಾರದು. ಅಕ್ಷರಭೂತವಾದದ ಸಾಹಿತಿ, ಬರಹಗಾರರು ಸಾಹಿತ್ಯ ರಚನೆಯ ಹೆಸರಲ್ಲಿ ಉಳಿದ ಎಲ್ಲ ರಂಗಗಳನ್ನು ಅಧೀನ ಎಂದು ಭಾವಿಸಿದ್ದರಿಂದ ಕಲೆ ಮತ್ತು ಸಾಹಿತ್ಯ ಒಂದನ್ನೊಂದು ಪ್ರಭಾವಿಸುವುದು, ಸಂವಹನ ಕ್ರಿಯೆಯಲ್ಲಿ ಸಹಭಾಗಿ ಆಗುವುದು, ಅನುಸಂಧಾನ ನಡೆಯುವುದು ಅಪರೂಪ ಎಂಬಂತಾಗಿದೆ. ಸಾಹಿತಿಗಳು, ಪತ್ರಕರ್ತರು, ಚಿಂತಕರು ಎನ್ನುವುದು ಎಲ್ಲದರ ಬಗ್ಗೆ ಮಾತನಾಡುವ, ಸೂಪಿರಿಯಾರಿಟಿ ಪ್ರತಿಪಾದಕ ವ್ಯಕ್ತಿತ್ವಗಳಾಗತೊಡಗಿವೆ. ಇಂಟಿಗ್ರಿಟಿ ಎನ್ನುವುದು ಈಗ ಎಲ್ಲ ರಂಗಗಳಲ್ಲಿ ನಗಣ್ಯ. ಭಾವು ಅವರಂಥ ಕಲಾತ್ಮಕ ಅಭಿವ್ಯಕ್ತಿಯ ಪ್ರತಿಭೆಗಳು ಮುದ್ರಣ/ಡಿಜಿಟಲ್ ಮಾಧ್ಯಮ ಲೋಕದಲ್ಲಿ ಗಣನೆಗೆ ಒಳಪಡುವುದೇ ಇಲ್ಲ. ಅವರ ಸಂಗಾತಿ ಹೇಳಿದ ಮೇಲಿನ ಮಾತುಗಳಲ್ಲಿ ಭಾವು ಬದುಕಿನಲ್ಲಿ, ಕಲಾ ಅಂತರಂಗದ ಜಗತ್ತಿನಲ್ಲಿ Unsung unwept ಎನ್ನುವ ಬಿಕ್ಕಳಿಕೆಗಳು ಇದ್ದವು ಎನ್ನುವುದು ಧ್ವನಿಸುತ್ತದೆ.

ಭಾವು ಪತ್ತಾರ್ ಒಬ್ಬ ಅಪ್ಪಟ ಜೀವನಪ್ರೀತಿಯ ವ್ಯಕ್ತಿಯೂ ಆಗಿದ್ದರು. ಅದೊಂದು ವ್ಯಕ್ತಿತ್ವ. ಒಬ್ಬ ಚಿತ್ರಕಲಾ ಪ್ರತಿಭೆ ಎಂದಷ್ಟೇ ಅವರನ್ನು ಕಾಣುವುದು ಸಂಕುಚಿತ ಭಾವನೆ ಆದೀತು. ಅಂಥ ಕಲಾವಿದರು ತಮ್ಮ ಜೀವನ ಪಯಣ ಮುಗಿಸಿದ ಮೇಲೆ ಅವರನ್ನು ಕುರಿತು ಒಳ್ಳೆಯ ಕಲಾ ಪ್ರತಿಭೆಯನ್ನು ಕಳೆದುಕೊಂಡೆವು ಎಂದಷ್ಟೇ ಕೊನೆಯ ಶರಾ ಬರೆದರೆ ಅವರು ಅಷ್ಟು ದೀರ್ಘ ಕಾಲ ಕಲಾ ಮಾಧ್ಯಮದ ಮೂಲಕ ಒಟ್ಟು ಜೀವ ಸಂವೇದನೆಗೆ, ಹ್ಯೂಮನ್ ಡಿಗ್ನಿಟಿಗೆ ಸಂದಾಯ ಮಾಡಿದ ಕಾಣ್ಕೆಯನ್ನು ಕಡೆಗಣಿಸಿದಂತಲ್ಲವೆ? ಸಾಹಿತಿ ಸಾವು, ರಾಜಕಾರಿಣಿ ಸಾವು ನಾಡಿಗೆ ತುಂಬಲಾರದ ನಷ್ಟ ಎಂದಾದರೆ ಕಲಾವಿದನ ಇಹಲೋಕದ ಪಯಣ ಕೇವಲ ಕಲಾ ಲೋಕಕ್ಕೆ ಮಾತ್ರ ನಷ್ಟ ಎಂದಾಗಿಸುವುದು ನ್ಯಾಯ ಅಲ್ಲ.

ಭಾವು ಪತ್ತಾರ್ ಮತ್ತು ನಾನು ಒಂದೇ ಪತ್ರಿಕೆಯಲ್ಲಿ ಜೊತೆಯಾಗಿ ಕೆಲಸ ಮಾಡಿದವರು. ಅವರು ಗ್ರಾಫಿಕ್ಸ್ ವಿಭಾಗದಲ್ಲಿ ನಾನು ಎಡಿಟೋರಿಯಲ್ ನಲ್ಲಿ. ಪತ್ರಿಕೆಯ ಮರು ವಿನ್ಯಾಸ ಸಂದರ್ಭದಲ್ಲಿ ಮತ್ತು ಕೇಂದ್ರ ರಾಜ್ಯ ಬಜೆಟ್, ರೈಲ್ವೆ ಬಜೆಟ್ ಸುದ್ದಿಗಳು ಇದ್ದಾಗಲೆಲ್ಲ ಮತ್ತದೇ ಪ್ರತಿ ಸಲ ಏಜೆನ್ಸಿ ಪಿಕ್ಚರ್ ಹಾಕುವ ಬದಲಿಗೆ ಒಟ್ಟಾರೆ ಬಜೆಟ್ ಸಾರವನ್ನು ಕ್ರಿಟಿಕಲ್ ಆಗಿಯೊ, ಜನಸ್ವೀಕಾರ, ಸ್ವಾಗತಾರ್ಹ ಭಾವದಿಂದಲೊ ಅಥವಾ ಸಟೈರಿಕ್ ಆಗಿಯೊ ಇಲಸ್ಟ್ರೇಷಿಯಸ್ ಆಗಿ, ಕ್ಯಾರಿಕೇಚರ್ ಆಗಿ ಥಿಯೆಟ್ರಿಕಲ್ ಆಗಿ ಮಂಡಿಸಿದರೆ ಹೇಗೆ ಎಂದು ನಾನೊಬ್ಬ ಜರ್ನಲಿಸ್ಟ್/ಡಿಸೈನರ್ ಆಗಿ ಯೋಚಿಸುವ ಸಂದರ್ಭದಲೆಲ್ಲ ನನಗೆ ನೆನಪಾಗುತ್ತಿದ್ದ ಕಲಾವಿದರಲ್ಲಿ ಒಂದು ಭಾವು, ವಿಷ್ಣು, ಭೈರೇಶ್ ಮತ್ತೊಂದು ಮುರಳೀಧರ ರಾಠೋಡ್ ಎಂಬ ಪ್ರತಿಭೆಗಳು.

ರಾಠೋಡ್ ಅವರನ್ನು ಸಂಪರ್ಕಿಸಿ ಅವರನ್ನು ಪೀಡಿಸಿ ಆಫಿಸ್ ಗೆ ಕರೆದು ಎಡಿಟರ್ ಅಪ್ರೂವ್ ಮಾಡಿದ ಪರಿಕಲ್ಪನೆಗೆ ಇಲಸ್ಟ್ರೇಷನ್ ಮಾಡಿಸಿ, ಅದನ್ನೇ ಲೀಡ್ ಆಗಿಸಿ ವಿನ್ಯಾಸ ರೂಪಿಸಿ ಒಟ್ಟಾರೆ ಎಡಿಷನ್ ಡಿಸೈನ್ ರೆಡಿ ಮಾಡಿ ಅದು ಮುದ್ರಣಕ್ಕೆ ಹೋಗುವವರೆಗೆ ನಾನು ಮತ್ತು ಭಾವು, ವಿಷ್ಣುಕುಮಾರ್, ಮುರಳಿ ರಾಠೋಡ್ ನೀರು ಸಹ ಕುಡಿಯುತ್ತಿರಲಿಲ್ಲ. ಬಜೆಟ್ ಇದ್ದಾಗ ಎಡಿಟೋರಿಯಲ್ ಸೆಕ್ಷನ್ ಗೆ ತಿಂಡಿ ಹುಡುಕಿಕೊಂಡು ಬರ್ತಾ ಇತ್ತು. ಎಲ್ಲರೂ ಬ್ರೇಕ್ ಟೈಂನಲ್ಲಿ ಸ್ಪೆಷಲ್ ತಿಂಡಿ, ಕಾಫಿ , ಟೀ ಸೇವಿಸುತ್ತಿದ್ದರೆ ನಾವು ಇಲಸ್ಟ್ರೇಷನ್, ಐಡಿಯಾ, ಡಿಸೈನ್ ನಲ್ಲಿ ಮುಳುಗಿರುತ್ತಿದ್ದೆವು.

ಬಹುಶಃ ಕೆಲ ವರ್ಷಗಳ ಕಾಲ ನಮಗೆ ಇಂಥ ಅವಕಾಶ ಸಿಕ್ಕಾಗೆಲ್ಲ ಇದು ನಿರಂತರವಾಗಿರುತ್ತಿತ್ತು. ಅತ್ಯಂತ ಪ್ರೊಫೆಷನಲ್, ಸೆನ್ಸಿಬಲ್ ಸಂಪಾದಕರು ತಮ್ಮ ಅಧಿಕಾರ ಅವಧಿಗಳಲ್ಲಿ ನೀಡುತ್ತಿದ್ದ ಫುಲ್ ಫ್ರೀಡಂ ನಿಂದ ಸೃಜನಶೀಲ ತಂಡದ ಹುರುಪು ನೂರ್ಮಡಿ ಆಗಿರುತ್ತಿತ್ತು. ಫ್ರೀಡಂ ಇದೆಯಲ್ಲ ಅದು ಯಾವುದೇ ಸೃಜನಶೀಲರಿಗೆ ಸಿಗುವ ಅಪೂರ್ವ ಶಕ್ತಿ, ಹಾನರ್. ಇಂಥ ಫ್ರೀಡಂ ಮಹತ್ವವನ್ನೆ ಅರಿಯದ ದಂಡಪಿಂಡ ಬೇವಕೂಫ್ ರೂ ಇದ್ದರು. ಕೆಲವರದು ಮತ್ತದೆ ಅದೇ ರಾಗ, ಕಾಗುಣಿತ, ಕಾಗಕ್ಕ ಗುಬ್ಬಕ್ಕ ಕತೆ, ಚಿತ್ರ ಚೆನ್ನಾಗಿಲ್ಲ, ಕಲರ್ ಜಾಸ್ತಿ, ಫಾಂಟ್ ದೊಡ್ಡದು, ಚಿಕ್ಕದು… ಇದೆಲ್ಲ ಮೀರಿ ಒಂದು ಎಫರ್ಟ್ ಸಾರ್ವಜನಿಕರನ್ನು ಎದುರುಗೊಂಡು ಪ್ರಶಂಸೆಗೊಳಗಾದಾಗ ಯಶಸ್ಸಿನಲ್ಲಿ ಎಲ್ಲ ಪಾಲುದಾರರೇ.. ಒಂದು ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಎಲ್ಲದರ ಹಿಂದೆ ಎಂಥವರ ಪಾಡಿರುತ್ತದೆ, ಪರಿಣತಿ ಇರುತ್ತೆ, ಪರಿಕಲ್ಪನೆ ಸಾಮರ್ಥ್ಯ ಜೊತೆಗೆ ಭಾವು ಪತ್ತಾರ್ ಅವರಂಥ ಕಲಾವಿದರ ಸೃಜನಶೀಲ ಸ್ಪರ್ಶ ಇರುತ್ತೆ ಎನ್ನುವುದಕ್ಕೆ ಇದೆಲ್ಲ ಹೇಳಬೇಕಾಯಿತು.

ಮತ್ತೆ ಭಾವು ಬಗ್ಗೆ ಹೇಳುವುದಾದರೆ ಪೊರ್ಟ್ರೆಟ್ (ವ್ಯಕ್ತಿ ಚಿತ್ರಣ) ರಚನೆ, ಡ್ರಾಯಿಂಗ್ ನಲ್ಲಿ ಭಾವು ಅವರಿಗೆ ವಿಶೇಷ ಪರಿಣತಿ ಇತ್ತು. ಭಾವು ಟೈಂ ಸಿಕ್ಕಾಗೆಲ್ಲಾ ಮಹಾನ್ ವ್ಯಕ್ತಿತ್ವದ ಪೊರ್ಟ್ರೆಟ್ ಮಾಡಿಡಿ ಆಗಾಗ ಬಳಸಿಕೊಳ್ಳೋಣ ಎಂದಾಗ ಹಲವರ ಪೊರ್ಟ್ರೆಟ್ ಮಾಡಿಟ್ಟುಕೊಂಡಿದ್ದರು. ಹಾಗೊಂದು ಪೊರ್ಟ್ರೆಟ್ ಹೆಸರಾಂತ ನಾಟಕಕಾರ, ಚಿತ್ರನಟ ಗಿರೀಶ್ ಕಾರ್ನಾಡ್ ಅವರದು. ಆ ಪೊರ್ಟ್ರೆಟ್ ಗೆ ಥಿಯೆಟ್ರಿಕಲ್ ಟಚ್ ಕೊಟ್ಟು ಪಬ್ಲಿಷ್ ಮಾಡಿದಾಗ ಭಾವು ಅವರ ಅಭಿವ್ಯಕ್ತಿಗೆ ಬಂದ ಪ್ರತಿಕ್ರಿಯೆ ಅದ್ಭುತ. ಸ್ವಯಂ ಕಾರ್ನಾಡ್ ಕರೆ ಮಾಡಿ ತಮಗೆ ಆ ಒರಿಜಿನಲ್ ವರ್ಕ್ ಬೇಕು ಎಂದರು. ಅದರ ಪ್ರಿಂಟ್ ತೆಗೆದು ಫ್ರೇಂ ಸಹಿತ ಕಾರ್ನಾಡ್ ಅವರಿಗೆ ಕೊಡುಗೆ ನೀಡಿ ಬೆನ್ನು ತಟ್ಟಿಸಿಕೊಂಡವರು ಭಾವು.

ಇಂಥ ಅನೇಕ ಅವಿಸ್ಮರಣೀಯ ಅನುಭವಗಳು ಯಾವುದೇ ಕಲಾವಿದರನ್ನು ಜೀವನ್ಮುಖಿ ಆಗಿರಿಸುತ್ತವೆ.

ಇಂಥ ಅಪೂರ್ವ ನೆನಪುಗಳೊಂದಿಗೆ ಕಲಾವಿದರ ಅಸಲಿ ಹ್ಯೂಮನ್ ಜರ್ನಿ ಒಂದು ಗಮ್ಯದತ್ತ ಮುಂದುವರೆಯುವುದು ವ್ಹೇರಿ ಇಂಟರೆಸ್ಟಿಂಗ್. ಅವರ ಕಲಾಕೃತಿಗಳು ಇನ್ನಷ್ಟು ಸದ್ದು ಮಾಡುತ್ತಿರುವ, ಮಾತನಾಡುತ್ತಿರುವ, ಉಸಿರಾಡುತ್ತಿರುವ ಹೊತ್ತಲ್ಲಿ ಭಾವು ಉಸಿರು ನಿಲ್ಲಿಸಿದರು. ಮಾತು ಮುಗಿಸಿ ಹೊರಟು ಹೋದರು. ಅವರ ಸದಾ ನಗುಮುಖ, ಸಹೃದಯ ಭಾವ, ಸ್ನೇಹ ಭಾವ ನಮ್ಮ ನೆನಪಲ್ಲಿರಿಸಿ ಹೋದರು. ಹೋಗಿ ಬನ್ನಿ. ನನ್ನ ಈ ನುಡಿನಮನದ ಮೂಲಕ ತಮಗೊಂದು ಆಖರೀ ಸಲಾಂ. ನಮನಗಳು.

ನಾನು ಅವರ (ಭಾವು) ಅಭಿಮಾನಿ ಅವರು ನನ್ನ ಅಭಿಮಾನಿ. ನಾವು ಹ್ಯೂಮನ್ ಬೀಯಿಂಗ್ ಆಗಿರೋರು ಹೀಗೆ ಪರಸ್ಪರ ಅಭಿಮಾನಿ ಆಗಿರಬೇಕು ಅಲ್ಲವೇ..

‍ಲೇಖಕರು Admin

18 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading