THAT is no country for old men. The young
In one another’s arms, birds in the trees
-Those dying generations – at their song..
ಮುದುಕರಿಗೆ ಹೇಳಿ ಮಾಡಿಸಿದ ನಾಡಲ್ಲ ಇದು!
ಹಾಗನ್ನುತ್ತಾನೆ ಯೇಟ್ಸ್, ಸೇಲಿಂಗ್ ಟು ಬೈಜಾಂಟಿಯಮ್ ಕವಿತೆಯಲ್ಲಿ. ಅವನು ಹೇಳುವ ಅರ್ಥವೇ ಬೇರೆ. ಆ ಸಾಲುಗಳನ್ನು ಹೆಕ್ಕಿತಂದು ನಮ್ಮ ರಾಜಕಾರಣದ ಮುಂದಿಟ್ಟು ನೋಡಿದರೆ ಗೊತ್ತಾಗುವುದೇ ಬೇರೆ.
ನಮ್ಮಲ್ಲಿ ಯುವ ನಾಯಕರೇ ಇಲ್ಲ. ಯುವ ನಾಯಕತ್ವವೇ ಇಲ್ಲ. ಇವತ್ತಿಗೂ ದೇಶದ ಭವಿಷ್ಯವನ್ನು ನಿರ್ಧಾರ ಮಾಡುವವರು, ಹತೋಟಿಗೆ ತೆಗೆದುಕೊಳ್ಳುವವರು ವೃದ್ಧ ಧೃತರಾಷ್ಟ್ರರೇ. ಅದೇ ದೇವೇಗೌಡ, ಅದೇ ಖರ್ಗೆ, ಸಿದ್ಧರಾಮಯ್ಯ, ಎಸ್ಸೆಮ್ ಕೃಷ್ಣ., ಬಂಗಾರಪ್ಪ. ಈ ವಯಸ್ಸಿನಲ್ಲೂ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಅಪನಂಬುಗೆ. ಎಲ್ಲಾದರೊಂದು ಕಡೆ ಗೆಲ್ಲಬೇಕು ಎಂಬ ಅತಿಯಾಸೆ.
ರಾಜಕಾರಣಿಗಳ ಪಟ್ಟಿಯನ್ನೊಮ್ಮೆ ನೋಡಿ. ಬಹುತೇಕರು, ಅದರಲ್ಲೂ ಆಡಳಿತದ ಚುಕ್ಕಾಣಿ ಹಿಡಿಯಲಿಕ್ಕೆ, ದೇಶವನ್ನು ಮುನ್ನಡೆಸುವುದಕ್ಕೆ ಸಿದ್ಧರಾಗಿರುವವರೆಲ್ಲ ವಯೋವೃದ್ಧರೇ. ವಯಸ್ಸಿಗೆ ತಕ್ಕ ವಿವೇಕ, ಸಂಯಮ, ಘನತೆ ಒಬ್ಬರಲ್ಲಾದರೂ ಕಾಣಿಸುತ್ತದೆಯಾ ನೋಡಿ. ಮಾರ್ಕೆಟ್ಟಲ್ಲಿ ಚೌಕಾಸಿ ಮಾಡುವವರ ಥರ, ಮತ್ತೇರಿ ತೋಚಿದ್ದು ಮಾತಾಡುವವರ ಥರ, ಹಳೇ ಜಿದ್ದು ಸಾಧಿಸಲಿಕ್ಕೆ ಹೊರಟವರ ಥರ ಒಬ್ಬೊಬ್ಬರೂ ಕಾಣಿಸುತ್ತಾರೆ. ಅವರ ಆಶ್ವಾಸನೆಗಳೇನು, ಪ್ರಣಾಳಿಕೆಗಳೇನು, ಭರವಸೆಗಳೇನು? ಆಹಾ, ಎಂಥಾ ಉತ್ಸಾಹ! ಟಿಕೆಟ್ ಪಡೆಯುವುದಕ್ಕೆ ನೂಕು ನುಗ್ಗಲು ಏನು? ಈ ಪಾಪಿ ದುನಿಯಾ ಗೆಲ್ಲೋದು ಕಲಿಸಿ, ಆಳೋದು ಕಲಿಸಿಲ್ಲ, ಬಾಳೋದು ಕಲಿಸಿಲ್ಲ!
ಇವತ್ತೇನಾದರೂ ಅಚ್ಚರಿ ಉಳಿದಿದೆಯಾ ಗಮನಿಸಿ. ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಯಾರು ಗೆದ್ದರೂ ಆಗುವುದು ಅದೇ. ಎಲ್ಲರದೂ ಒಂದೇ ಮರ್ಮ.. ಹಳೆಯ ಹಾಡು ಹಾಡುತ್ತೇವೆ, ಅದನೆ ಕೇಳಿ ತಣಿಯಿರಿ ಎಂಬುದು ನಮ್ಮ ಕರ್ಮ.

ಬುದ್ಧಿ ಮಾಗಿರಬೇಕು, ಕ್ರಿಯಾಶೀಲತೆಗೆ ಯೌವನ ಇರಬೇಕು ಅನ್ನುತ್ತದೆ ಮಹಾಭಾರತ. ಮಹಾರಾಜ ತಾರುಣ್ಯದಲ್ಲಿರಬೇಕು, ಮಂತ್ರಿಗೆ ವಯಸ್ಸಾಗಿರಬೇಕು ಅಂದಿದ್ದ ಕೌಟಿಲ್ಯ. ಅಷ್ಟು ಹುಡುಕುವುದೇ ಬೇಕಾಗಿಲ್ಲ, ಮನೆಯಲ್ಲೂ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲೂ ಅದನ್ನೇ ನಾವು ಕಾಣುತ್ತೇವೆ. ಅನುಭವ ಕ್ರಿಯಾಶೀಲರ ಬೆನ್ನಿಗಿದ್ದರೆ ಸಾಕು. ಅನುಭವಿಗಳು ತಮಗೆ ವಯಸ್ಸಾದರೂ ಸರಿಯೇ ಎಂದು ಸಾರಥ್ಯ ವಹಿಸಿದರೆ?
ಅನುಭವವೂ ಕೈ ಕೊಡುವ ಕ್ಷೇತ್ರಗಳಿವೆ. ಹೊಸ ಹಾದಿಗಳನ್ನು ಯೌವನದ ಹುಮ್ಮಸ್ಸು ಹುಡುಕಿಕೊಂಡು ಹೊರಟಾಗಲೇ ಹೊಸತನದ ಹೊಸಿಲನ್ನು ದಾಟುವುದಕ್ಕೆ ಸಾಧ್ಯ. ಹಳೆಯ ಹಾದಿಯಲ್ಲೇ ಸುರಕ್ಷತೆಯಿಂದ ಕರೆದೊಯ್ದು ತನಗೆ ಗೊತ್ತಿರುವ ಜಾಗಗಳನ್ನು ತೋರಿಸಿ, ಅದೇ ಹಳೆಯ ಮಾಹಿತಿ ಕೊಡುವ ಹಿರಿಯ ಪ್ರವಾಸ ಮಾರ್ಗದರ್ಶಿಗಳ ವರಸೆ ಹಿರಿಯರದ್ದು. ಎಂಬಿಬಿಸ್ ಓದು, ಸರ್ಕಾರಿ ಉದ್ಯೋಗ ಹಿಡಿ, ಸ್ವಂತ ಮನೆ ಕಟ್ಟು, ಸ್ವಜಾತಿ ವಧುವನ್ನು ವಿವಾಹವಾಗು, ಮಕ್ಕಳಿಗೆ ಸದ್ಭುದ್ಧಿ ಕಲಿಸು ಅನ್ನುವುದೆಲ್ಲ ಒಳ್ಳೆಯ ವಿಚಾರಗಳೇ. ಆದರೆ, ಬದಲಾದ ಪರಿಸರಕ್ಕೆ ತಕ್ಕಂತೆ ಹೇಳುವ ರೀತಿಯೂ ಬದಲಾಗಲೇಬೇಕಲ್ಲ.
ಚುನಾವಣೆಯ ಅಂಗಳದಲ್ಲಿ ಅಡ್ಡಾಡಿದರೆ ಗಾಬರಿಯಾಗುತ್ತದೆ. ಯುವ ಕರ್ನಾಟಕ, ಎಂತೆಂಥಾ ಮುದುಕರಿಂದ ಆಳಿಸಿಕೊಳ್ಳಬೇಕಿದೆ ಎಂದು ಆತಂಕವಾಗುತ್ತದೆ. ಹೊಸತನದ ಸ್ಪರ್ಶವೂ ಇರದ ಈ ಹಿರಿಯ ವೆಟರನ್ ರಾಜಕಾರಣಿಗಳು ಮಂತ್ರಿಗಳಾದ ಮೇಲೆ ಏನು ಮಾಡುತ್ತಾರೆ ಅನ್ನುವುದೂ ನಮಗೆ ಗೊತ್ತಿಲ್ಲದ್ದೇನಲ್ಲ. ಉಚಿತ ವಿದ್ಯುತ್ತು, ಸಾಲ ಮನ್ನಾ, ಎರಡು ರುಪಾಯಿಗೆ ಅಕ್ಕಿ, ಭಾಗ್ಯಜ್ಯೋತಿ, ಮಕ್ಕಳಿಗೆ ಸೈಕಲ್ಲು, ಯುವಕರಿಗೆ ಕಾಂಡೋಮು, ಏಡ್ಸ್ ರೋಗಿಗಳಿಗೆ ಆಸ್ಪತ್ರೆ- ಮುಂತಾದ ಹಳೆಯ ಪಟ್ಟಿಯನ್ನು ಕಂಕುಳಲ್ಲಿಟ್ಟುಕೊಂಡು ಮುದುಕರು ಮನೆ ಮನೆಗೆ ಹೊರಟಿದ್ದಾರೆ. ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ಇವರಲ್ಲೇನಾದರೂ ಯೋಜನೆ ಇದೆಯಾ ಕೇಳಿ ನೋಡಿ. ಮೂರು ದಿನದಿಂದ ಊಟ ಮಾಡಿಲ್ಲ ಏನಾದ್ರೂ ಕೊಡಿ ಎಂಬ ಯಾಚಕನ ಮನೋಭಾವ ಬಿಟ್ಟರೆ ಮತ್ತೇನೂ ಅವರ ಬೇಡಿಕೆಯಲ್ಲಿ ಕಾಣಿಸುವುದಿಲ್ಲ. ಊಟ ಹಾಕಿದ್ದಕ್ಕೆ ಪ್ರತಿಫಲ ಏನು? ದೇವರು ನಿಮ್ಮನ್ನು ಚೆನ್ನಾಗಿಡಲಿ ಎಂಬ ಬಿಟ್ಟಿ ಹಾರೈಕೆ!
***
ಕರ್ನಾಟಕ ಯಾಕೆ ಹೀಗಾಗಿದೆ ಅನ್ನುವ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವೇನಲ್ಲ. ಐಟಿ, ಎಂಬಿಎ, ಇಂಜಿನಿಯರಿಂಗ್, ಕ್ರೀಡೆ, ಸಾಹಿತ್ಯ,.ಸಂಗೀತ, ಸಿನಿಮಾ- ಈ ಕ್ಷೇತ್ರಗಳಲ್ಲಿ ಆಸಕ್ತಿ ತೋರುವ ತರುಣರಿಗೆ ರಾಜಕೀಯದಲ್ಲಿ ಅಂಥ ಆಸಕ್ತಿಯೇನಿಲ್ಲ. ರಾಜಕಾರಣದ ಬಗ್ಗೆ ಮಹಾನ್ ಆಸಕ್ತಿ ಇಟ್ಟುಕೊಂಡವರಂತೆ ಮಾತಾಡುವುದು ಮಾಧ್ಯಮ ಮಾತ್ರ. ಮಾಧ್ಯಮದ ವರದಿಗಾರರು ಮಾತ್ರ. ಅದು ಬಿಟ್ಟರೆ, ತಮ್ಮ ಕ್ಷೇತ್ರದ ಅಭ್ಯರ್ಥಿಯ ಬೆಂಬಲಿಗರು ಮಾತ್ರ. ಮೊನ್ನೆ ತಮ್ಮ ನಾಯಕನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ರಂಪ ಮಾಡಿದ ಹೋರಾಟಗಾರರು ಯಾವತ್ತಾದರೂ ಎಲ್ಲಾದರೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ದನಿಯೆತ್ತಿದ್ದಾರಾ ಕೇಳಿನೋಡಿ.
ಭಾರತೀಯ ಕ್ರಿಕೆಟ್ ತಂಡವನ್ನೇ ನೋಡಿ. ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಪೀಯೂಷ್ ಚಾವ್ಲಾ, ಇಶಾನ್ ಶರ್ಮ, ಶ್ರೀಶಾಂತ್, ರೋಹಿತ್ ಶರ್ಮ, ಗೌತಮ್ ಗಂಭೀರ್ ಮುಂತಾದ ಯುವ ಆಟಗಾರರಿದ್ದಾರೆ. ಸಿನಿಮಾ ಕ್ಷೇತ್ರದಲ್ಲಂತೂ ತರುಣರದ್ದೇ ಕಾರುಬಾರು. ಸಂಗೀತದ ವಿಚಾರಕ್ಕೆ ಬಂದರೂ ಕೂಡ ಹಿರಿಯ ಸಂಗೀತಗಾರರು ಹಿನ್ನೆಲೆಗೆ ಸರಿದಿದ್ದಾರೆ. ಸಾಹಿತ್ಯದಲ್ಲೂ ತರುಣ ಬರಹಗಾರರದ್ದೇ ಮಾತು. ಹೀಗೆ ಎಲ್ಲೆಡೆಯಲ್ಲೂ ಹೊಸತನ ನಳನಳಿಸುತ್ತಿರುವ ಹೊತ್ತಿಗೇ, ರಾಜ್ಯ ಆಳುವುದಕ್ಕೆ ಹೊರಟಿದ್ದಾರೆ ಮುದುಕರು. ಅವರಿಗೆ ಉಳಿದಿರುವುದು ಅದೊಂದೇ.
ಪ್ರಜಾಪ್ರಭುತ್ವದ ಅನಾನುಕೂಲ ಮತ್ತು ಕೊರತೆಯೇನು ಅನ್ನುವುದು ನಮಗೀಗ ಸ್ಪಷ್ಟವಾಗುತ್ತಿದೆ. ತರುಣರು, ವಿದ್ಯಾವಂತರು ಮತ್ತು ನಾಳೆಯ ಕುರಿತು ಸ್ಪಷ್ಟ ಕಲ್ಪನೆ ಇರುವವರು ರಾಜ್ಯದ ನಾಯಕರನ್ನು ಚುನಾಯಿಸುವಂಥ ಪರಿಸ್ಥಿತಿ ಇಲ್ಲ. ಇವತ್ತು ಮತ ಹಾಕುವವರು ಯಾರು ಅನ್ನುವುದನ್ನು ಅಭ್ಯರ್ಥಿಗಳು ಹಂಚುತ್ತಿರುವ ಹೆಂಡ, ಸೀರೆ, ಟೀವಿಗಳೇ ಹೇಳುತ್ತಿವೆ. ಕ್ರಿಕೆಟ್ ತಂಡ ಆಯ್ಕೆಗೆ ವಹಿಸುವಷ್ಟು ಎಚ್ಚರವನ್ನೂ ರಾಷ್ಟ್ರನಾಯಕರ ಆಯ್ಕೆಗೆ ವಹಿಸುತ್ತಿಲ್ಲ ಎನ್ನುವುದನ್ನು ಸ್ವೀಕರಿಸುವುದು ಹೇಗೆ?
***
ಐವತ್ತು ವೃದ್ಧಾಪ್ಯದ ಹರೆಯ ಅಂದಿದ್ದ ವಿಕ್ಟರ್ ಹ್ಯೂಗೋ. ಕುವೆಂಪು ಉತ್ತರಾರ್ಧದಲ್ಲಿ ಎರಡು ಕಾದಂಬರಿ ಬರೆದರು. ಕೆ ಎಸ್ ನ ಎಂಬತ್ತು ಸಮೀಪಿಸಿದಾಗಲೂ ಪ್ರೇಮಕವಿತೆ ಬರೆಯುತ್ತಿದ್ದರು. ಅಂಥ ಉತ್ಸಾಹವನ್ನಾಗಲಿ, ಕತೃತ್ವ ಶಕ್ತಿಯಾಗಲೀ ನಮ್ಮ ಹಿರಿಯ ರಾಜಕಾರಣಿಗಳಲ್ಲಿ ಇದ್ದಂತಿಲ್ಲ. ಒಬ್ಬ ಗುಮಾಸ್ತನಿಗೆ, ಒಬ್ಬ ಅಕೌಂಟೆಂಟಿಗೆ ಐವತ್ತೆಂಟೋ ಅರುವತ್ತೋ ನಿವೃತ್ತಿಯ ವಯಸ್ಸು. ಆದರೆ, ದೇಶವನ್ನೇ ಆಳಹೊರಡುವ ಮಂದಿಗೆ ನಿವೃತ್ತಿಯಿಲ್ಲ.
ಭಾವನೆಗಳನ್ನು ಕಾಯಿಲೆಯ ಲಕ್ಷಣ ಎಂದುಕೊಳ್ಳುವ ವಯಸ್ಸಿನಲ್ಲಿ ಆಳಹೊರಡುವುದು ಹುಂಬತನ ಮತ್ತು ದೇಶದ ದುರಂತ ಅಷ್ಟೇ. ಹಾಗಂತ ವಯಸ್ಸಾದ ರಾಜಕಾರಣಿಗಳು ತಮ್ಮ ವಯಸ್ಸಿನ ಮಂದಿಯ ಕುರಿತಾದರೂ ಅನುಕಂಪದಿಂದ ವರ್ತಿಸುತ್ತಾರೆ ಎಂದು ಭಾವಿಸುವುದೂ ತಪ್ಪು. ಅಧಿಕಾರ ಎಂಬ ಮಂತ್ರದಂಡ, ಮುದಿ ದೇಹಕ್ಕೂ ಯೌವನದ ಲಾಲಸೆಗಳನ್ನು ಕಲಿಸುತ್ತದೆ. ಈ ವಿಚಾರದಲ್ಲಿ ನಾವು ಜೆ ಎಚ್ ಪಟೇಲರನ್ನು ಮರೆಯುವಂತೆಯೇ ಇಲ್ಲ.
ವಯಸ್ಸು ಸೊಗಸಾಗಿ ಕಾಣಿಸುವುದು ನಾಲ್ಕೇ ಸಂಗತಿಗಳಲ್ಲಿ; ಹಳೆಯ ಕಟ್ಟಿಗೆ ಒಲೆ ಉರಿಸಲು ಉತ್ತಮ. ಹಳೆ ವಿಸ್ಕಿ ಕುಡಿಯುವುದಕ್ಕೆ ಉತ್ತಮ, ಹಳೆಯ ಗೆಳೆಯರು ನಂಬಿಕೆಗೆ ಅರ್ಹರು, ಹಳೆಯ ಲೇಖಕರು ಓದುವುದಕ್ಕೆ ಸೊಗಸು. ಇದರಿಂದಾಚೆಗೆ ಹಳೆಯ ತಲೆಮಾರಿನಿಂದ ಏನನ್ನಾದರೂ ನಿರೀಕ್ಷಿಸಿದರೆ ಅದು ಯುವಜನತೆಯ ತಪ್ಪು ಅಷ್ಟೇ.
ಹಿರಿಯ ಕ್ರಿಕೆಟ್ ಆಟಗಾರರು, ತರುಣರ ಆಟ ನೋಡುತ್ತಾ ತುಂಟತನದಿಂದ ಕಾಮೆಂಟ್ ಮಾಡುತ್ತಾ ಆಟವನ್ನು ಮೆಚ್ಚುತ್ತಾ ಇರುವಂತೆ, ಹಿರಿಯ ರಾಜಕಾರಣಿಗಳೂ ಯುವಕರ ಕೈಗೆ ದೇಶ ಕೊಟ್ಟು ತಾವು ಅವರ ಶೈಲಿಯನ್ನು ನೋಡಿ ಮೆಚ್ಚುತ್ತಾ, ಟೀಕಿಸುತ್ತಾ, ಗೊಣಗುತ್ತಾ ಇದ್ದುಬಿಟ್ಟರೆ ಅದಕ್ಕಿಂತ ದೊಡ್ಡ ಉಪಕಾರ ಮತ್ತೊಂದಿಲ್ಲ ಅನ್ನಿಸುವುದಿಲ್ಲವೇ?
ಅವರನ್ನು ಗೌರವಿಸೋಣ, ಪ್ರೀತಿಸೋಣ, ಕೈ ಹಿಡಿದು ನಡೆಸೋಣ. ಅವರ ಸಿಟ್ಟನ್ನು ಆನಂದಿಸೋಣ, ಹುಟ್ಟುಹಬ್ಬದಂದು ಸಂಭ್ರಮಿಸೋಣ, ಅವರ ತುಂಟತನಕ್ಕೆ ಕಿರುನಗೆಯ ಕಾಣಿಕೆ ಸಲ್ಲಿಸೋಣ. ಆದರೆ ಅವರ ಕೈಗೆ ರಾಜ್ಯದ ಚುಕ್ಕಾಣಿ ಕೊಡಬೇಕೇ ಅನ್ನುವುದನ್ನೂ ಯೋಚಿಸೋಣ.





hiriya (haleya) chinthane. khushiyaythu.
– Godlabeelu
beautiful.
let us hope next time we get a young parliment !
ಭಾವನೆಗಳನ್ನು ಕಾಯಿಲೆಯ ಲಕ್ಷಣ ಎಂದುಕೊಳ್ಳುವ ವಯಸ್ಸಿನಲ್ಲಿ ಆಳಹೊರಡುವುದು ಹುಂಬತನ ಮತ್ತು ದೇಶದ ದುರಂತ ಅಷ್ಟೇ…..
ಖಂಡಿತ.
ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಕೊಡೊ, ಸುದ್ದಿ ತುರುಕುವ ಮಾಧ್ಯಮಗಳೇ ರಾಜಕೀಯದವ್ರನ್ನ ಅರ್ಧ ಹಾಳು ಮಾಡಿವೆಯೇನೋ… ಕರ್ಣಾಟಕದ ರಾಜಕೀಯ ಸದ್ಯಕ್ಕಂತೂ ಉದ್ದಾರವಾಗೋ ಯಾವ ಲಕ್ಷಣಗಳೂ ಇಲ್ಲ ಬಿಡಿ !
Nija, raajakaaranigalige nivrutti vayassu
nigadhigolisabeku.
_sunanda kadame
fentastic article
I agree with you intoto.
ಆತ್ಮ ಸಾಕ್ಷಿ ಇರುವ ಯಾವನಾದರೂ ಮುದಿ ರಾಜಕಾರಣಿ ಈದನ್ನೋದಿದರೆ, ವಿಷ ಕುಡಿದು ಸಾಯಬೇಕು.