ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರುಳಬಳ್ಳಿ ಕಳಚಿತು..

ಮತ್ತೊಂದು ಕರುಳಬಳ್ಳಿ ಕಳಚಿತು

ಡಾ ಸಿದ್ಧನಗೌಡ ಪಾಟೀಲ್

—-

ಸಿ ಆರ್ ಕೃಷ್ಣರಾವ್, ನಡೆದಾಡುವ ವಿಶ್ವಕೋಶ ಎಂಬ ವಿಶೇಷಣ ಹೊಂದಿದ್ದ ಪತ್ರಕರ್ತ,ಲೇಖಕ, ‘ನವಕರ್ನಾಟಕ ಪ್ರಕಾಶನ’ದ ಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಹಿರಿಯ ಸಂಗಾತಿ ಸಿ ಆರ್ ಕೃಷ್ಣರಾವ್ ಇಂದು ಬೆಳಿಗ್ಗೆ, ತಮ್ಮ ೯೩ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಸಿ ಆರ್ ಕೃಷ್ಣರಾವ್ ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾಬ್ಯಾಸ ಮಾಡುವಾಗಲೇ ೧೯೪೨ ರ ಚಲೇಜಾವ್ ಚಳುವಳಿಯ ಸೆಳೆತಕ್ಕೆ ಒಳಗಾಗಿ, AISF ವಿದ್ಯಾರ್ಥಿ ಸಂಘಟನೆ ಸೇರಿದರು. , ಸ್ವಾತಂತ್ರ್ಯ ಹೋರಾಟಗಾರರಿಗೆ, ಭೂಗತ ಕಮ್ಯುನಿಸ್ಟ್ ಹೋರಾಟಗಾರರಿಗೆ ಮೆಸ್ಸೆಂಜರ್ ಆಗಿ ತಮ್ಮ ಬಾಲ್ಯದಲ್ಲಿಯೇ ಕೆಲಸ ಮಾಡಿದರು.

ಸ್ವಾತಂತ್ರ್ಯಾ ನಂತರ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಾಗಿ, ಪಕ್ಷದ ಮುಖವಾಣಿ “ಜನಶಕ್ತಿ” ಪತ್ರಿಕೆಯ ಸಂಪಾದಕರಾಗುವುದರ ಮೂಲಕ ಪತ್ರಕರ್ತರಾಗಿ ಬೆಳೆದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆರಂಭಿಕ ಕಾಲದ ಕಾರ್ಯದರ್ಶಿ ಯಾಗಿ ಕೆಲಸ ಮಾಡಿದರು. ‘ಸೋವಿಯೆತ್ ಲ್ಯಾಂಡ್’ ಪತ್ರಿಕೆಗಾಗಿ ಮದ್ರಾಸ್ ಮತ್ತು ಮಾಸ್ಕೋದಿಂದ ಕೆಲಸ ಮಾಡಿದರು. ನಿವೃತ್ತಿಯ ನಂತರ ಬೆಂಗಳೂರಿಗೆ ಬಂದು ಹೊಸತು ಪತ್ರಿಕೆಯ, ನವಕರ್ನಾಟಕ ಪ್ರಕಾಶನದ ಕೆಲಸಗಳಲ್ಲಿ ತೊಡಗಿಕೊಂಡರು. ಲೇಖಕರಾಗಿ ಅವರು ವೈವಿಧ್ಯಮಯ ವಿಷಯಗಳ ಕುರಿತು ಹಲವಾರು ಕೃತಿಗಳನ್ನು ಬರೆದರು, ಸಂಪಾದಿಸಿದರು.

ವಿಶ್ವದ ವಿದ್ಯಮಾನಗಳ ಕುರಿತು ಅಪಾರ ಜ್ಞಾನ ಹೊಂದಿದ್ದ ಕೃಷ್ಣರಾವ್ ‘ಹೊಸತು’ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಡಾ ಜಿ ರಾಮಕೃಷ್ಣ ಅವರ ಜೊತೆಗೂಡಿ ಹೊಸತು ಪತ್ರಿಕೆಗೆ ಆರಂಭದ ದಿನಗಳಿಂದ ಇತ್ತೀಚಿನವರೆಗೂ ನಿರಂತರವಾಗಿ (ತಮ್ಮ ೯೨ನೆಯ ವಯಸ್ಸಿನವರೆಗೂ) ಬರೆದರು. ಕಳೆದ ವರ್ಷದವರೆಗೂ ಹೊಸತು, ನವಕರ್ನಾಟಕ ಆಫೀಸಿಗೆ ಬರುತ್ತಿದ್ದ ಸಿ ಆರ್ ಕೆ ಅವರಿಗೆ ಈ ಐದಾರು ತಿಂಗಳಿಂದ ನೆನಪಿನ ಶಕ್ತಿ ಕ್ಷೀಣಿಸಿತು.

ಕೆಲವೇ ದಿನಗಳ ಹಿಂದೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರ ಅವರು ಮತ್ತು ಸಂಘದ ಎಲ್ಲ ಪದಾಧಿಕಾರಿಗಳು, ಗೆಳೆಯ ಜಿ ಎನ್ ಮೋಹನ್ ಹಾಗೂ ನಾನು ಅವರ ಮನೆಗೇ ಹೋಗಿ ಸನ್ಮಾನಿಸಿ ಬಂದೆವು. ಮನೆಯಲ್ಲಿ ಅವರು ಮತ್ತು ಮಡದಿ ಶಾರದಾ ಇಬ್ಬರೇ ಇದ್ದರು. ತಾವೇ ಟೀ ಮಾಡಿ ಎಲ್ಲರಿಗೂ ಕೊಟ್ಟು ಸಂಭ್ರಮಿಸಿದರು.

ಪತ್ರಿಕೋದ್ಯಮ ಭ್ರಷ್ಟಾಚಾರದಿಂದ ದೂರವಿರಬೇಕು ಎಂದು ಹೊಸ ಪತ್ರಕರ್ತರಿಗೆ ಸಂದೇಶವನ್ನೂ ಕೊಟ್ಟರು. ಸದಾ ಕ್ರಿಯಾಶೀಲವಾಗಿದ್ದ ಹಿರಿಯ ಜೀವ ಶಾಶ್ವತ ವಿಶ್ರಾಂತಿಗೆ ತೆರಳಿದೆ. ಮಡದಿ, ಒಬ್ಬ ಮಗ, ಒಬ್ಬಳು ಮಗಳು, ಮೊಮ್ಮಕ್ಕಳು ಅಪಾರ ಸಂಗಾತಿಗಳನ್ನು ಅಗಲಿದ ಸಿಆರ್ಕೆ, ತಮ್ಮ ಜ್ಞಾನವನ್ನು, ಕ್ರಿಯಾಶೀಲತೆಯನ್ನು ಹಲವಾರು ಕೃತಿಗಳ ಮೂಲಕ ನಮ್ಮ ಮಧ್ಯೆ ಇಟ್ಟು ಹೋಗಿದ್ದಾರೆ.

ಹೊಸತು ಪತ್ರಿಕೆಯ ಸಹ ಸಂಪಾದಕರಾಗಿ ಸದಾ ಮಾರ್ಗದರ್ಶನ ಮಾಡುತ್ತಿದ್ದ ಹಿರಿಯ ಜೀವ ಸಿಆರ್ಕೆ ಇಲ್ಲ ಎಂದು ನಂಬಲಾಗುತ್ತಿಲ್ಲ. ಸಣಕಲ ದೇಹದ, ಸದಾ ನಗುಮುಖದ, ಜ್ಞಾನದ ಖಣಿಯಾಗಿದ್ದರೂ ಸದಾ ಅಭ್ಯಾಸಿಯಾಗಿದ್ದ ಸಿಆರ್ಕೆ ಅಗಲಿಕೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.

‍ಲೇಖಕರು avadhi

3 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading