ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ಕಮ್ಮಟದಲ್ಲಿ ನಿಜಕ್ಕೂ ಆದದ್ದೇನು.." ಶರತ್ ಚಕ್ರವರ್ತಿ ಬರೆದಿದ್ದಾರೆ

“ಕಾವ್ಯ ಕಮ್ಮಟದ ಬಗ್ಗೆ ಹುಟ್ಟಿಕೊಂಡ ಒಂದಷ್ಟು ಅನುಮಾನಗಳ ಬಗ್ಗೆ ಉತ್ತರಿಸಲೇ ಬೇಕಾದ್ದರಿಂದ ಅವಧಿಯ ಮುಖಾಂತರ ತಿಳಿಸುವುದು ಸೂಕ್ತ ಹಾಗೂ ಪರಿಣಾಮಕಾರಿಯೆನಿಸಿ ಈ ಲೇಖನವನ್ನ ಕಳುಹಿಸಿದ್ದೇನೆ.
ದಯಮಾಡಿ ಪ್ರಕಟಿಸುವಂತೆ ಕೋರುತ್ತಾ..
-ಶರತ್ ಚಕ್ರವರ್ತಿ”
ಹೀಗೊಂದು ಮೇಲ್ ’ಅವಧಿ’ಗೆ ಬಂತು. ಕಳೆದ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ಈ ಬಗ್ಗೆ ಚರ್ಚೆ, ಆರೋಪ, ಕಾಲೆಳೆಯುವುದು, ಕೆಣಕುವುದು ಎಲ್ಲವೂ ನಡೆಯುತ್ತಲೇ ಇದೆ. ಒಂದು ಆರೋಗ್ಯಕರ ಚರ್ಚೆಗೆ ವೇದಿಕೆಯಾಗಬೇಕು ಎನ್ನುವ ಉದ್ದೇಶದಿಂದ ನಾವು ಶರತ್ ಚಕ್ರವರ್ತಿ ಬರೆದ ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ. ಇಲ್ಲಿ ಯಾವುದೇ ವಿಷಯದ ಪರ ಅಥವಾ ವಿರೋಧ ಎಂದು ಬೇಲಿ ಕಟ್ಟಿಕೊಳ್ಳುವ ಮೊದಲು, ಚರ್ಚೆಯನ್ನು ಆಲಿಸುವ, ಅದರ ಬಗ್ಗೆ ಚಿಂತಿಸುವ ಮನೋಭಾವ ಮೊದಲು ನಮ್ಮದಾಗಬೇಕು.

ಈ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ, ದಯವಿಟ್ಟು ಟೀಕೆ ವ್ಯಂಗ್ಯ ಅಥವಾ ವೈಯಕ್ತಿಕ ದಾಳಿ ಆಗದಿರಲಿ

ಶರತ್ ಚಕ್ರವರ್ತಿ

ಹೀಗೊಂದು ಶೀರ್ಷಿಕೆಯಡಿಯಲ್ಲಿ ಒಂದಷ್ಟು ಅನುಮಾನಗಳನ್ನು ಪರಿಹರಿಸುವ ಹಾಗೂ ಆಶಯಗಳ ಬಗ್ಗೆ ತಿಳಿಸುವ ಸಲುವಾಗಿ ಇಂದಿನ ಲೇಖನ ಅವಶ್ಯಕವೆನಿಸುತ್ತಿದೆ. ಕಾಜಾಣ ಬಳಗ ಎರ್ಪಡಿಸಿದ್ದ ಕಾವ್ಯ ಕಮ್ಮಟವೇನಾಯಿತು? ಎಷ್ಟೋ ಸ್ನೇಹಿತರು ಆಸಕ್ತಿಯಿಂದ ಕಾಯುತ್ತಿದ್ದರು. ಕಮ್ಮಟ ಮುಗಿಸಿಕೊಂಡ ಬಂದಮೇಲೆ ಶುರುವಾದ ಚರ್ಚೆ, ಇತ್ಯಾದಿ ವಾಗ್ಯುದ್ಧಗಳಿಂದ ಮತ್ತಷ್ಟು ಜನ ಅಲ್ಲಿ ನಡೆದಿರಬಹುದಾದರೂ ಏನು ಎಂಬ ಕುತೂಹಲಕ್ಕೆ ಬಿದ್ದರು. ಆದರೆ ಅತಿಶಯೋಕ್ತಿ ಎನಿಸಿದ್ದು, ಅಲ್ಲಿ ಜಗಳವಾಡಿಕೊಂಡರಂತೆ, ಕಮ್ಮಟ ಸರಿಯಾಗಿ ನಡೆಯಲಿಲ್ಲವಂತೆ ಎಂದುಕೊಂಡದ್ದು. ಇದಿಷ್ಟೇ ಆಗಿದ್ದರೆ ಪರವಾಗಿಲ್ಲ. ಅನೇಕರು ಸಧ್ಯ ನಾನು ಹೋಗದಿದ್ದುದು ಒಳ್ಳೆಯದೇ ಆಯಿತು ಎಂದುಕೊಂಡರೆ, ಮತ್ತೊಷ್ಟು ಜನ ಕೈ ಕುಲುಕಿಕೊಂಡು ಹಾಲು ಕುಡಿದವರಂತೆ ಆಡಿದರಂತೆ.

ಹಾಗಾದರೆ ಕಮ್ಮಟದಲ್ಲಿ ನಡೆದುದ್ದೇನು..?
ಇದೊಂದು ಬಹುಮುಖ್ಯವಾದ ಪ್ರಶ್ನೆ. ಕಮ್ಮಟದ ಮೊದಲ ದಿನ ಕವಿಗೋಷ್ಠಿಯೊಂದಿಗೆ ಆರಂಭವಾಯಿತು. ಮೊದಲೇ ಹೆಸರು ನೊಂದಾಯಿಸಿಕೊಂಡಿದ್ದ ಶಿಬಿರಾರ್ಥಿಗಳು ಅಲ್ಲಿ ಕವನ ವಾಚನ ಮಾಡಿದರು. ಈ ಕವಿಗೋಷ್ಠಿಯು ಸದ್ಯದಲ್ಲೇ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವುದು ಹೆಗ್ಗಳಿಕೆ ಎಂದುಕೊಳ್ಳುತ್ತೇನೆ. ನಂತರ ಸಂಪನ್ಮೂಲ ವ್ಯಕ್ತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಮುಕುಂದರಾಜ್, ಶಿವಾರೆಡ್ಡಿ ಶಿಬಿರಾರ್ಥಿಗಳನ್ನ ಕುರಿತು ಮಾತಾಡುತ್ತಾ ಕನ್ನಡ ಕಾವ್ಯಸಂದರ್ಭದಲ್ಲಿ ಪಂಪನ ಕಾಲದಿಂದ ಅಡಿಗರವರೆಗಿನ ಸಾಹಿತ್ಯ ಅರಿವಿನ ಪರಿಚಯವಿತ್ತರು. ಸಂಜೆಯಾಗುತ್ತಿದ್ದಂತೆ ಕವಿಗಳಾದ ಚೇತನ ತೀರ್ಥಹಳ್ಳಿ, ವಿ.ಆರ್ ಕಾರ್ಪೆಂಟರ್, ಚಕ್ರವರ್ತಿ ಚಂದ್ರಚೂಡ, ರಂಗಕರ್ಮಿ ಯೋಗೇಶ್ ಮಾಸ್ಟರ್ ಕಾವ್ಯದೊಂದಿಗಿನ ಅವರ ಒಡನಾಟಗಳ ಬಗ್ಗೆ ಮಾತನಾಡಿದರು.
ಎರಡನೇ ದಿನ ನಟರಾಜ್ ಹುಳಿಯಾರ್ ಕಾವ್ಯ ಓದುವ ದಾರಿಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು. ನಂತರ ಅತಿಥಿಗಳಾದ ಟಿ.ಎಲ್ಲಪ್ಪ, ಗಂಗಾಧರಯ್ಯ ಮಾಕಳ್ಳಿ, ಅಕ್ಷತ ಹುಂಚದಕಟ್ಟೆ ಕಾವ್ಯ ಪರಿಕರ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. ಮೂರನೇ ದಿನ ರಾಮಲಿಂಗಪ್ಪ ಬೇಗೂರು ಹಾಗೂ ಪ್ರತಿಭಾ ನಂದಕುಮಾರ್ ಶಿಬಿರಾರ್ಥಿಗಳಿಗೆ ಮುಖಾಮುಖಿಯಾದರು. ಕಾರ್ಯಕ್ರಮದ ಕೊನೆಯಲ್ಲಿ ಕಾಜಾಣ ಪುರಸ್ಕಾರವನ್ನ ಕವಿ ಗೊರವರ ಅವರಿಗೆ ನೀಡಿ ಸನ್ಮಾನಿಸಿ ಕಾರ್ಯಕ್ರಮವನ್ನ ಮುಗಿಸಲಾಯಿತು.
ಗೊಂದಲ ಹುಟ್ಟಿಕೊಂಡಿದ್ದು ಎಲ್ಲಿ..?

ನಾನು ಹೇಳಲೇ ಬೇಕಾದ ವಿಷಯವಿದು. ಕವಯತ್ರಿ ಪ್ರತಿಭಾ ನಂದಕುಮಾರ್ ಕಾವ್ಯದ ಬಗ್ಗೆ ಒಂದಷ್ಟು ಮಾತನಾಡಿ ಅವರೇ ಬರೆದ ಅದ್ಬುತ ಕವಿತೆಗಳನ್ನ ವಾಚಿಸಿದರು. ಅಕ್ಷರಶಃ ಎಲ್ಲಾ ಶಿಬಿರಾರ್ಥಿಗಳನ್ನ ಸೆಳೆಯುವಂತಿದ್ದವು ಅವರ ಮಾತು ಹಾಗೂ ಕವಿತೆಗಳು. ಹಿಂದೆ ಮಾತಾಡಿದ ಹಲವು ಕವಿಗಳು ತಮ್ಮ ಮಾತುಗಳಲ್ಲಿ ಉದಾಹರಣೆಯಾಗಿ ಪಂಪ, ರನ್ನ, ಕುಮಾರವ್ಯಾಸರನ್ನ ಪದೇ ಪದೇ ಹೆಸರಿಸಿ ಬೋರ್ ಹೊಡೆಸಿದ್ದಂತು ನಿಜ. ಆದರೆ ಪ್ರತಿಭಾ ನಂದಕುಮಾರ್ ಮಾತುಗಳಲ್ಲಿ ಆಧುನಿಕ ಸಮಸ್ಯೆಗಳಿಗೆ ಕಾವ್ಯ ಹೇಗೆ ಮುಖಾಮುಖಿಯಾಗಬೇಕೆಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ಅವರ ಮಾತುಗಳು ಮುಗಿದ ನಂತರ ಸಂವಾದಕ್ಕೆ ಅವಕಾಶ ಒದಗಿಸಲಾಗಿತ್ತು. ಒಂದಿಬ್ಬರು ಪ್ರಶ್ನೆಗಳನ್ನು ಎತ್ತಿದರು. ಎಲ್ಲರ ಪ್ರಶ್ನೆಗಳು ಮುಗಿದ ಮೇಲೆ ಸ್ವತಃ ನಾನೇ ವೇದಿಕೆಗೆ ಹೋಗಿ ಮೂರು ದಿನಗಳಿಂದ ಹುಟ್ಟಿಕೊಂಡ ಹಲವು ಅನುಮಾನಗಳನ್ನ ಪ್ರಶ್ನಿಸ ಹೊರಟೆ. ಆ ಅನುಮಾನಗಳೆಂದರೆ
೧)ಪಂಪ, ರನ್ನರನ್ನೇ ಬೋರ್ ಹೊಡೆಯುವಷ್ಟು ಬಾರಿ ಹೆಸರಿಸಿದ ಕವಿಗಳು ಅಡಿಗರಿಂದೀಚೆಗಿನ ಸಾಹಿತ್ಯ ಹಾಗೂ ಸಾಹಿತಿಗಳ ಬಗ್ಗೆ ಮಾತಾನಾಡದಿದ್ದುದಕ್ಕೆ ಕಾರಣವೇನು?
೨)ಬಂಡಾಯ ಕಾವ್ಯ ನೆಲೆ ಕಳೆದುಕೊಂಡಿತು ಎಂಬುದು ನಿಜವ? ಹಾಗೇ ಬಂಡಾಯ ಸಾಹಿತ್ಯ ಅಪ್ರಸ್ತುತ ಎನ್ನುವುದಾದರೇ ಅದು ಹುಟ್ಟಿಹಾಕಿದ ಕ್ರಾಂತಿಗಳ ಕೊಡುಗೆ ಏನು ಇಲ್ಲವ? ನವೋದಯಗಳು ಭಾವಗೀತೆಗಳಾದರೆ ಬಂಡಾಯ ಕ್ರಾಂತಿಗೀತೆಗಳನ್ನು ಕೊಟ್ಟಿದ್ದು ನಿಜವಲ್ಲವ? (ಅತಿಥಿಯೊಬ್ಬರು ಬಂಡಾಯ ಸಾಹಿತ್ಯ ನೆಲೆ ಕಳೆದುಕೊಂಡು ಮೂಲೆ ಸೇರಿತು, ಇಂದಿಗೂ ನಾವು ನವೋದಯದ ಪದ್ಯಗಳನ್ನು ಹಾಡುತ್ತೇವೆ, ಎಂದಾಗ ಹುಟ್ಟಿಕೊಂಡ ಅನುಮಾನ)
೩) ಪಂಪನ ಕಾಲದಿಂದ ಇಲ್ಲಿಯವರೆಗೂ ಎಲ್ಲಾ ಕವಿಗಳು ಸಮಾಜದ ಹುಳುಕುಗಳನ್ನೇ ಟೀಕಿಸುತ್ತಾ ಬಂದಿದ್ದಾರೆ, ಆದರೆ ಅದು ಸಮಾಜದ ಮೇಲೆ ಪ್ರಭಾವ ಬೀರುವಲ್ಲಿ ಸಂಪೂರ್ಣ ಯಶವಾಗಿಲ್ಲ, ಎಂದು ಮುಕುಂದರಾಜರು ಅವರ ಭಾಷಣದಲ್ಲಿ ಹೇಳಿದರು. ಹಾಗಾದರೇ ಜನರಿಗೆ ಮುಟ್ಟುವಂತಹ ಸಾಹಿತ್ಯಕ್ಕಾಗಿ ಇಂದಿನ ಕವಿ ಪ್ರಯತ್ನಿಸಬೇಕಾಗುತ್ತದೆಯೆ?
ಇದಿಷ್ಟು ಪ್ರಶ್ನೆಗಳಿಟ್ಟುಕೊಂಡು ನಾನು ವೇದಿಕೆಯೇರಿದ್ದೆ. ನನ್ನ ಮೊದಲ ಪ್ರಶ್ನೆ ಶುರು ಮಾಡೋ ಮುಂಚೆಯೇ ಮುಕುಂದರಾಜರಿಗೆ ನನ್ನ ಪ್ರಶ್ನೆ ಚುಚ್ಚಿದಂತಾಯಿತು. ಏಕೆಂದರೆ ಧಾರಾವಾಡ ಸಮ್ಮೇಳನದಲ್ಲಿ ಹಳೆಗನ್ನಡ ಓದಬೇಕೆ ಬೇಡವೇ ಎಂಬೊಂದು ಚರ್ಚೆ ನಡೆದಿತ್ತು. ಇಲ್ಲಿಯೂ ಕೂಡ ಅಂತಹದ್ದೇ ಪ್ರಶ್ನೆ ಬಂದಿತ್ತಲ್ಲ ಎಂದು ತಪ್ಪಾಗಿ ತಿಳಿದು ಸಿಟ್ಟಾದರು. ಇಂತಹ ಪ್ರಶ್ನೆಯೊಂದೇ ಮೂರ್ಖತನದ್ದು ಎಂಬಂತೆ ಉತ್ತರಿಸಿದರು. ಆದರೆ ಉತ್ತರ ಏತ್ತರಿಸಿದ ಧ್ವನಿಯಲ್ಲಿತ್ತು, ವಾಗ್ಯುದ್ದ ನಡೆದಂತಯೇ. ಮಧ್ಯದಲ್ಲಿ ಮತ್ತಷ್ಟು ಶಿಬಿರಾರ್ಥಿಗಳ ಪರ ವಿರೋಧಗಳಂತೆ ಮಾತನಾಡಿ ಚರ್ಚೆ ವಿಷಯಾಂತರದತ್ತ ಸಾಗಿತ್ತು. ನಂತರ ಮತ್ತೊಮ್ಮೆ ಅವಕಾಶ ಕೇಳಿಕೊಂಡು ನನ್ನ ಸಮಸ್ಯೆಯನ್ನ ಅವರಿಗೆ ಮನವರಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಅಷ್ಟರಲ್ಲಾಗಲೇ ಸಮಯ ಮೀರಿ ಹೋಗಿದುದ್ದರಿಂದ ವೇದಿಕೆ ಬಿಟ್ಟು ಇಳಿಯಬೇಕಾಯಿತು. ನಂತರ ಮುಕುಂದರಾಜ್ ಸರ್ ಬಳಿ ನನ್ನ ಪ್ರಶ್ನೆಯನ್ನ ಅರ್ಥ ಮಾಡಿಸಿದೆ. ಕಮ್ಮಟದ ನಂತರ ಸಿಕ್ಕಿ ಒಂದಷ್ಟು ಚರ್ಚೆ ಮಾಡುವ ಭರವಸೆಯನ್ನಂತು ಕೊಟ್ಟರು. ಅಲ್ಲಿಗೆ ಸಮಾರೋಪದ ಸಮಯವಾಗಿ ಕಾರ್ಯಕ್ರಮದ ಅಂತ್ಯದ ಕಡೆ ಮುಖ ಮಾಡಿದೆವು.
ಆದರೆ ಫೇಸ್ಬುಕ್ನಲ್ಲಿ ನಡೆಯುತ್ತಿರುವ ವಾದಗಳೇನು?
ಅದೆಲ್ಲಾ ಸಾಹಿತ್ಯ ಸಂವಾದವೆಂದೇ ಕರೆಯಲಿಚ್ಚಿಸುತ್ತೇನೆ. ತಮ್ಮದೇ ಆದ ಸೈದ್ಧಾಂತಿಕ ದೃಷ್ಟಿಕೋನದಲ್ಲಿ ಅತಿಥಿಗಳ ಮಾತುಗಳನ್ನ, ತಮ್ಮಲ್ಲಿನ ಪ್ರಶ್ನೆ ಹಾಗೂ ಸಮಜಾಯಿಷಿಗಳನ್ನ ಎಲ್ಲರೂ ಕಾವ್ಯರೂಪದಲ್ಲೇ ವ್ಯಕ್ತಪಡಿಸುತ್ತಾ ವಾಗ್ವಾದಕ್ಕಿಳಿದರು. ಇದನ್ನ ಹಲವರು ಜಗಳವೆಂದೇ ತಿಳಿದರು. ಜಗಳವಲ್ಲದ ಇದು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಾಗಿವೆ. ಈ ತರಹದ ವಾಗ್ವಾದಗಳು ಕುವೆಂಪು ಮಾಸ್ತಿ ಕಾಲದಿಂದಲೂ ನಡೆಯುತ್ತಲೇ ಬಂದಿವೆ. ಆದರೆ ಒಂದು ಗಮನಿಸಬೇಕಾದ ಅಂಶವೆಂದರೆ ವಾದ-ವಿವಾದಗಳೆರಡು ಕಾವ್ಯದ ಮುಖಾಂತರವೇ ನಡೆಯುತ್ತಿರುವುದರಿಂದ ಕಮ್ಮಟದ ಪ್ರಭಾವದಿಂದ ಮತ್ತಷ್ಟು ಮೊನಚಾಗಿ ಬರೆಯುವಲ್ಲಿ ಶಿಬಿರಾರ್ಥಿಗಳು ತಮಗೆ ಗೊತ್ತಿಲ್ಲದೇ ತೊಡಗಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಕಾವ್ಯದ ಮುಖಾಂತರವೇ ಟೀಕಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಇದು ಸಂತೋಷದ ವಿಷಯವಲ್ಲದೇ ಮತ್ತೇನು.
ಕೊನೆಯದಾಗಿ…
ಕಾಜಾಣ ರೆಕ್ಕೆ ಮುರಿದುಕೊಂಡಿತು ಎಂದು ಒಂದಷ್ಟು ಮನಸ್ಸುಗಳು ಸಂತಸ ಪಟ್ಟವಂತೆ. ಅವರ ಮನಸ್ಥಿತಿಯ ಬಗ್ಗೆ ಕನಿಕರವಿದೆ. ಆದರೆ ಕಾಜಾಣ ಬಳಗ ಕಾವ್ಯ ಕಮ್ಮಟದಲ್ಲಿ ಹಾಜರಿದ್ದ ಶಿಬಿರಾರ್ಥಿಗಳ ಒಂದೊಂದು ಕವಿತೆಗಳನ್ನ ಸಂಗ್ರಹಿಸಿ “ಕಾವ್ಯ ಕಾಜಾಣ” ಎಂಬ ಹೊತ್ತಿಗೆಯನ್ನ ತರುವ ನಿರ್ಧಾರದಲ್ಲಿದೆ. ಅಲ್ಲದೇ ಕಮ್ಮಟ ಯಶಸ್ವಿ ನಡೆದ ಖುಷಿಗೆ ಗೆಟ್ ಟುಗೆದರ್ ತರಹದ ಸಣ್ಣದೊಂದು ಬೇಟಿಯನ್ನ ಆಯೋಜಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಅಲ್ಲಿ ನಮ್ಮ ಮುಂದಿನ ಕಾರ್ಯಕ್ರಮದ ಬಗ್ಗೆ ರೂಪರೇಷೆಯನ್ನು ತಯಾರಿಸಲಾಗುವುದು. ಮತ್ತಷ್ಟು ಕಲೆ, ಸಾಹಿತ್ಯದ ಕಾರ್ಯಕ್ರಮಗಳನ್ನ ಆಯೋಜಿಸುವುದರ ಮೂಲಕ ಕಾಜಾಣ ನಿಮ್ಮ ಜೊತೆಗಿರುತ್ತದೆ.
 

‍ಲೇಖಕರು G

10 February, 2014

26 Comments

  1. nagarajhettur

    ೧)ಪಂಪ, ರನ್ನರನ್ನೇ ಬೋರ್ ಹೊಡೆಯುವಷ್ಟು ಬಾರಿ ಹೆಸರಿಸಿದ ಕವಿಗಳು ಅಡಿಗರಿಂದೀಚೆಗಿನ ಸಾಹಿತ್ಯ ಹಾಗೂ ಸಾಹಿತಿಗಳ ಬಗ್ಗೆ ಮಾತಾನಾಡದಿದ್ದುದಕ್ಕೆ ಕಾರಣವೇನು?
    ೨)ಬಂಡಾಯ ಕಾವ್ಯ ನೆಲೆ ಕಳೆದುಕೊಂಡಿತು ಎಂಬುದು ನಿಜವ? ಹಾಗೇ ಬಂಡಾಯ ಸಾಹಿತ್ಯ ಅಪ್ರಸ್ತುತ ಎನ್ನುವುದಾದರೇ ಅದು ಹುಟ್ಟಿಹಾಕಿದ ಕ್ರಾಂತಿಗಳ ಕೊಡುಗೆ ಏನು ಇಲ್ಲವ? ನವೋದಯಗಳು ಭಾವಗೀತೆಗಳಾದರೆ ಬಂಡಾಯ ಕ್ರಾಂತಿಗೀತೆಗಳನ್ನು ಕೊಟ್ಟಿದ್ದು ನಿಜವಲ್ಲವ? (ಅತಿಥಿಯೊಬ್ಬರು ಬಂಡಾಯ ಸಾಹಿತ್ಯ ನೆಲೆ ಕಳೆದುಕೊಂಡು ಮೂಲೆ ಸೇರಿತು, ಇಂದಿಗೂ ನಾವು ನವೋದಯದ ಪದ್ಯಗಳನ್ನು ಹಾಡುತ್ತೇವೆ, ಎಂದಾಗ ಹುಟ್ಟಿಕೊಂಡ ಅನುಮಾನ)
    ಒಳ್ಳೆಯ ಪ್ರಶ್ನೆಗಳನ್ನೇ ಎತ್ತಿದ್ದೀರಿ ಶರತ್… ಪಂಪ, ರನ್ನ ನ ಬಗ್ಗೆ ಹೇಳುತ್ತಾ ಬಂಡಾಯ ದ ಪ್ರಸ್ತುತತೆ, ಅಪ್ರಸ್ತುತತೆ ಬಗ್ಗೆಯೂ ಚರ್ಚೆಯಾಗಲಿ. ಜೊತೆಗೆ ದಲಿತ ಬಂಡಾಯದ ಬಗ್ಗೆಯೂ ಚರ್ಚೆಯಾಗಲಿ. ಒಂದು ವಿಚಾರ ಹೇಳಬೇಕೆಂದರೆ ಕೆಲ ಹಿರಿಯ ತಲೆಮಾರಿನವರೆಲ್ಲರೂ ತಾವು ಓದಿದ್ದನ್ನೇ ಹೊಸ ಪೀಳಿಗೆಗೆ ಒತ್ತಾಯವಾಗಿ ಹೇರಲು ಬರುತ್ತಾರೆ. ಪಂಪ, ರನ್ನರನ್ನು ಓದಿಕೊಳ್ಳಿದ್ದ ಮೇಲೆ ಅವನು ಕವಿಯೇ ಅಲ್ಲ ಎಂದು ನಿರ್ಧರಿಸಿ ಸರ್ಟಿಫಿಕೆಟ್ ಕೊಡುತ್ತಾರೆ. ಅವರೇ ಹೇಳುವಂತೆ ಇವರ್ಯಾರು ಹೊಸ ಕವಿಗಳ , ಪದ್ಯಗಳ ಬಗ್ಗೆ ಉದಾಹರಣೆ ಕೊಡುವುದಿಲ್ಲ… ತಾವೆಲ್ಲಿ ಕೊಚ್ಚಿ ಹೋಗುತ್ತೇವೆಯೋ ಎಂಬ ಭಯ ಇರಬಹುದು. ಹಾಗೆ ಇವರ ವಿಮರ್ಶೆಗಳೂ ಕೂಡ ಹಾಗೆ ಇರುತ್ತವೆ. ರನ್ನ, ಪಂಪನೊಂದಿಗೆ ಇಂದಿನ ತಲೆಮಾರಿನ ಪದ್ಯಗಳನ್ನು ತುಲನೆ ಮಾಡುತ್ತಾರೆ… ಹಾಗೆ ಹೇಳಿದ್ದ ಹೀಗೆ ಹೇಳಿದ್ದ ಎನ್ನುತ್ತಾರೆ… ನವ್ಯ, ನವೋದಯ ಎಂದೆಲ್ಲ ಕಾರಣ ಕೊಟ್ಟು ತಮ್ಮ ಮೆದುಳಿನಲಿದ್ದವರನ್ನು ಮಾತ್ರ ಕವಿಗಳು ಎಂಬಂತೆ ಬಿಂಬಿಸುತ್ತಾರೆ…. ಬಹುತೇಕರು ವಾಸ್ತವ ನೆಲಗಟ್ಟಿನಲ್ಲಿ ನೋಡದಿರುವುದೇ ಇದಕ್ಕೆ ಕಾರಣ.. ಮೊದಲೇ ಡಿಸೈಡ್ ಮಾಡಿಕೊಂಡಿರುತ್ತಾರೆ ಇವರಿಗೆ ಹೀಗೆ ಬರೆಯಬೇಕು ಎಂದು… ಒಳ್ಳೆಯ ಪ್ರಶ್ನೆಗಳು… ಚರ್ಚೆಯಾಗಲಿ

    • Vedantham Shrinivasa

      “ಕೆಲ ಹಿರಿಯ ತಲೆಮಾರಿನವರೆಲ್ಲರೂ ತಾವು ಓದಿದ್ದನ್ನೇ ಹೊಸ ಪೀಳಿಗೆಗೆ ಒತ್ತಾಯವಾಗಿ ಹೇರಲು ಬರುತ್ತಾರೆ. ಪಂಪ, ರನ್ನರನ್ನು ಓದಿಕೊಳ್ಳಿದ್ದ ಮೇಲೆ ಅವನು ಕವಿಯೇ ಅಲ್ಲ ಎಂದು ನಿರ್ಧರಿಸಿ ಸರ್ಟಿಫಿಕೆಟ್ ಕೊಡುತ್ತಾರೆ.”
      these are misleading allegations against elders of Kannada literary world. Mr Hettur should name those individuals who did what he has alleged. Sweeping allegations disrupt harmony.

  2. h a patil

    – ಕಮ್ಮಟದಲ್ಲಿ ನಿಜಕ್ಕೂ ನಡೆದದ್ದೇನು ಎನ್ನುವ ಕುರಿತು ಒಂದು ಆರೋಗ್ಯಕರ ಚಿಂತನೆಗೆ ಅವಕಾಶ ಇದಾಗಿದೆ. ಇಲ್ಲಿ ಸೋ ಕಾಲ್ಡ್ ಬುದ್ಧಿಜೀವಿಗಳಲ್ಲಿ ಅನೇಕರು ಪಂಪ ರನ್ನನ ಕಾಲದಿಂದ ಅಡಿಗರ ಕಾಲದ ವರೆಗಿನ ಕಾವ್ಯ ಪರಂಪರೆ ಸಾಗಿಬಂದ ದಾರಿ ಕುರಿತು ಮಾತನಾಡುತ್ತಾರೆ. ಅಡಿಗರ ನಂತರದ ಕಾಲದಿಂದ ಇದಿನ ವರೆಗೆ ಕನ್ನಡ ಕಾವ್ಯ ಮತ್ತು ಸಾಹಿತ್ಯ ಪರಂಪರೆ ಸಾಗಿ ಬಂದಿಲ್ಲವೆ. ಅದನ್ನು ಕುರಿತು ಒಂದು ಸಮಗ್ರ ಚಿಂತನೆ, ವಿಚಾರ ವಿಮರ್ಶೆಗಳು ಬಂದೇ ಇಲ್ಲವೆನ್ನುವಷ್ಟು ವಿರಳ. ಈ ಸಾಹಿತ್ಯ ಪರಂಪರೆ ಇತ್ತೀಚಿನ ದಿನಗಳಲ್ಲಿ ಎಡ ಬಲಗಳೆಂಬ ನೆಲೆಯಲ್ಲಿ ಧ್ರುವೀಕರಣಗೊಂಡು ಬಿಟ್ಟಿವೆ. ಈ ನೆಲೆಗಳಿಂದ ನಾವು ಹೊರಬಂದು ಎರಡೂ ಬಣಗಳಲ್ಲಿಯ ಗುಣ ದೋಷಗಳ ಕುರಿತು ಸಮಗ್ರ ಚರ್ಚೆ ಇಂದಿನ ಅಗತ್ಯವೆನಿಸುತ್ತಿದೆ.

  3. prathibha nandakumar

    ಚರ್ಚೆ ಎಲ್ಲ ಆಲೋಚನೆಗಳ ವಿನಿಮಯಕ್ಕೆ ದಾರಿ. ಕಾಜಾಣ ಕಮ್ಮಟದಲ್ಲಿ ಚರ್ಚೆ ನಡೆಯಿತು ಅಂದರೆ ಅದು ಶುಭ ಸೂಚನೆಯೆ ಹೊರತು ರೆಕ್ಕೆ ಮುರಿದುಕೊಂಡ ಹಾಗಲ್ಲ. ಹಾಗೆ ನೋಡಿದರೆ ನನಗೂ ಕಮ್ಮಟ ಅನೇಕ ಸತ್ಯಗಳಿಗೆ ಕಣ್ಣು ತೆರೆಸಿತು. ಅದಕ್ಕೆ ನಾನು ಕಾಜಾಣಕ್ಕೆ ಅತ್ಯಂತ ಆಭಾರಿ ಆಗಿದ್ದೇನೆ. ಯಾರಾದ್ರೂ ಕಮ್ಮಟ ವಿಫಲ ಅಂದುಕೊಂಡರೆ ಅವರಿಗಿಂತ ಮೂರ್ಖರು ಬೇರೆ ಇಲ್ಲ. ಒಂದು ಕಮ್ಮಟ ಹೀಗೆಯೇ ದ್ವಂದ್ವಗಳನ್ನು ಅನುಮಾನಗಳನ್ನು ಹೊರಹಾಕಿಸಬೇಕು. ಅದು ಬೆಳವಣಿಗೆಯ ಕುರುಹೇ ಹೊರತು ಬೇರೆ ಅಲ್ಲ. ಇಂದಿನ ಹುಡುಗರು ಕಾವ್ಯವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮ ಎಂದು ಕಂಡುಕೊಂಡಿದ್ದೆ ನನಗೆ ಥ್ರಿಲ್ ಕೊಟ್ಟಿತು ಯಾಕೆಂದರೆ ಇದು ದೃಶ್ಯ ಮಾಧ್ಯಮದ ಯುಗ. ಕುಪ್ಪಳಿಯಿಂದ ಹಿಂದಿರುಗಿದ ಮೇಲೆ ನಾನು ಚೇತನಾಗೆ ಮೆಸೇಜ್ ಮಾಡಿ ನಾನು ಮತ್ತು ಜಯಂತ್ ಕಾಯ್ಕಿಣಿ ಸೇರಿ ಒಂದು ಕಮ್ಮಟ ಮಾಡುವ ಒಂದು ಸೂಚನೆಯನ್ನು ಕೊಟ್ಟೆ. ಯಾಕೆಂದರೆ ಕಾಜಾಣ ಬಳಗ ಕಾವ್ಯದ ಬಗ್ಗೆ ಗಂಭೀರ ಕಾಳಜಿ ಇಟ್ಟುಕೊಂಡಿದೆ ಅನ್ನುವುದೇ ಎಲ್ಲರು ಸಂಭ್ರಮಿಸಬೇಕಾದ ಸಂಗತಿ. ಕಾಜಾಣ ವಿನಾಟೀಕೆಗಳನ್ನು ಪಕ್ಕಕ್ಕಿಟ್ಟು ಹೀಗೆ ತನ್ನ ಚಟುವಟಿ ಕೆಗಳನ್ನು ಮುಂದುವರಿಸಲಿ. ನಾವು ನಿಮ್ಮೊಂದಿಗಿದ್ದೇವೆ.

  4. prathibha nandakumar

    ಸತ್ಯಗಳಿಗೆ ಕಣ್ಣು ತೆರೆಸಿತು ಅಂದರೆ – ಆಧುನಿಕ ಕನ್ನಡ ಕಾವ್ಯ ಹಳೆಯ ಕಾವ್ಯದ ಪರಂಪರೆಯ ಮುಂದುವರಿಕೆ ಅಂತ ನಾನು ತಿಳಿದುಕೊಂಡಿಲ್ಲ. ನಮ್ಮಲ್ಲಿ ಇನ್ನೂ ಯುವ ಕವಿಗಳಿಗೆ ಪಂಪ ಕುಮಾರವ್ಯಾಸರನ್ನು ಓದಿ ಅಂತ ಹೇಳುತ್ತಿದ್ದಾರೆ ಅನ್ನುವುದು ಗೊತ್ತಿರಲಿಲ್ಲ. ನಮ್ಮ ಕಾಲಕ್ಕೇ ಅದೆಲ್ಲಾ ಹೋಗಿಬಿಟ್ಟಿತ್ತು. ಹಾಗಾಗಿ ನಾವು ಇಂದಿನ ಪೀಳಿಗೆಯ ಕವಿಗಳ ಜೊತೆ ಕಾವ್ಯದ ಬಗ್ಗೆ ಮಾತಾಡುವಾಗ ಪಂಪ ಕುಮಾರವ್ಯಾಸರನ್ನು ತರಲೇ ಬಾರದು. ಹೇಗೆಂದರೆ ಇಂದಿನ ಯಾವ ಯುವ ಇಂಗ್ಲಿಷ್ ಕವಿಗೂ ಯಾರೂ ಮೊದಲು ಶೇಕ್ಸ್ಪಿಯರ್ ಓದಿಕೊಂಡು ಆಮೇಲೆ ಕವನ ಬರಿ ಅಂತ ಹೇಳುವುದಿಲ್ಲ. ಹಳೆಯ ಕವಿಗಳನ್ನು ಓದಿ ಅಂತ ಹೇಳಲೇ ಬೇಕಾದರೆ ಆಧುನಿಕ ಕವಿಗಳಾದ ಗಂಗಾಧರ ಚಿತ್ತಾಲ, ಅಡಿಗ, ಎ ಕೆ ರಾಮಾನುಜನ್, ತಿರುಮಲೇಶ್ ಮುಂತಾದವರನ್ನು ಸುಚಿಸಬೆಕೆ ಹೊರತು ಕುಮಾರವ್ಯಾಸನನ್ನು ಅಲ್ಲ. ಅವರಿಗಿದ್ದ ತುರ್ತುಗಳೇ ಬೇರೆ ಇಂದಿನವರ ತುರ್ತುಗಳೇ ಬೇರೆ. ಅಲ್ಲದೆ ಯಾವ ಕವಿಗೂ ಇವತ್ತು ನೀನು ಕನ್ನಡ ಕಾವ್ಯ ಪರಂಪರೆಯ ಮರಿಯಾಗಿ ಅದನ್ನು ಮುಂದುವರಿಸುವ ಜವಾಬ್ದಾರಿ ಇದೆ ಅಂತ ಹೇಳಲೇ ಬಾರದು. ಅದನ್ನೇ ನಾನು ಕಮ್ಮಟದಲ್ಲಿ ಹೇಳಿದ್ದು – ಕನಸಿನಲ್ಲಿ ಬರೆಯುವ ಕಾರ್ಪೆಂಟರ್ ಗೆ ಪರಂಪರೆಯ ಕಾವ್ಯದ ಮುಂದುವರಿಕೆಯಾಗಿ ಬರಿ ಅಂದರೆ ನ್ಯಾಯವಾ? ನನ್ನನ್ನು ಕೇಳಿದರೆ ಒಂದೆ ಒಂದು ಕವನವನ್ನೂ ಓದದೆಯೆ ಒಬ್ಬ ಹುಡುಗ ಅಥವಾ ಹುಡುಗಿ ತನ್ನದೇ ಭಾವನೆಗಳನ್ನು ಸುಂದರವಾಗಿ ಹೇಳಿದರೆ ಅದಕ್ಕೆ ನನ್ನ ಪೂರ್ಣ ಸ್ವಾಗತವಿದೆ. ಬರೆಯುವವರಿಗೆ ಹಳೆಯ ಕಾವ್ಯದ ಅಭ್ಯಾಸ ಒಂದು ಸಾಧನವೇ ಹೊರತು ಅನಿವಾರ್ಯವಲ್ಲ.

    • ರಮ್ಮಿಗ

      ಪ್ರತಿಭಾ ಅವರೇ, “ಅಂದಿನ ತುರ್ತು ಬೇರೆ ಇಂದಿನ ತುರ್ತೆ ಬೇರೆ” ಎಂಬ ಏಕೈಕ ಕಾರಣಕ್ಕೆ ಹಳೆಕಾಲದ ಕಾವ್ಯ ಓದದೆ ಇರುವುದು ನಿಮಗೆ ನೀವೇ ಮಾಡಿಕೊಳ್ಳುತ್ತಿರುವ ವಂಚನೆ. ಏಕೆಂದರೆ ಕಾವ್ಯ ಎಂಬುದು ಋತದ ಹಿಂದೆ ಹೊರಟ ಪಯಣವೇ ಹೊರತು ಸದ್ಯದ ತೀವ್ರತೆಗೆ ಒಳಗೊಳ್ಳುವ ಆಟವಲ್ಲ. ಸಾರ್ವಕಾಲಿಕ ಸತ್ಯಗಳ ಅನ್ವೇಷಣೆಗೆ ಎಲ್ಲಾ ಕಾಲದ ಕಾವ್ಯವೂ ಮುಖ್ಯ.

  5. ಹನುಮಂತ ಹಾಲಿಗೇರಿ

    ನಾಗರಾಜ್‍ ಹೆತ್ತೂರು ಹೆಳಿದಂತೆ ಶರತ್‍ ಸರಿಯಾದ ಪ್ರಶ್ನೆಗಳನ್ನೆ ಎತ್ತಿದ್ದಾರೆ. ಪರಂಪರೆ ಬೇಕು, ಆದರೆ, ಅದೆ ಬಡಬಡಿಕೆಯಾಗಬಾರದು. ಪರಂಪರೆಯನ್ನು ಓದಿಕೊಳ್ಳದವರು ಇವತ್ತು ಎಷ್ಟೊಳ್ಳೆ ಕವಿತೆ ಬರೆದವರಿದ್ದಾರೆ.

  6. Ramesh Aroli

    ಟಿ. ಎಸ್. ಗೊರವರರ ಯಾವ ಕಾವ್ಯ ಸಂಕಲನ/ ಕವಿತೆಗೆ ಕಾಜಾಣ ಕಾವ್ಯ ಪುರಸ್ಕಾರ ನೀಡಲಾಗಿದೆ? ದಯವಿಟ್ಟು ಉತ್ತರಿಸಿ.

  7. Rj

    ಕಾವ್ಯ ಕಮ್ಮಟದಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ನನಗೆ ಅರಿವಿಲ್ಲ.ಆದರೆ ಅದಾದ ಮೇಲೆ ಫೇಸ್ ಬುಕ್ಕಿನಲ್ಲಿ ನಡೆದ colliding ಬರಹಗಳು ಕಣ್ಣಿಗೆ ಕಂಡವು,Which was not at all acceptable.(ಪಂಪ,ರನ್ನ ಮುಂತಾದ) ಹಳಬರು ಇರುವದು ಅಧ್ಯಯನಕ್ಕೆ;ಅಳವಡಿಸಿಕೊಳ್ಳಲು ಅಲ್ಲ.
    ಅಧ್ಯಯನದ ನಂತರ ಪಂಪ,ರನ್ನರನ್ನು ಎತ್ತಿ ಆಚೆ ಪಕ್ಕಕ್ಕಿಡಿ;ನಿಮ್ಮ ನಿಮ್ಮ ಅರಿವನ್ನು ನಂಬಿರಿ.ಸೃಜನಶೀಲತೆಯನ್ನು ನಂಬಿರಿ.. Please..! 🙂
    -Rj

  8. pratibha kage

    ಕವನವೆನ್ನುವದು ಮನಸ್ಸಿನಿಂದ ಮೂಡಿಬರಬೇಕೆ ಹೋರತು ಯಾರೋ ಬರೆದಿದ್ದನ್ನ ನೋಡಿ ಬರೆಯುವ ಅನಿವಾಯ೵ತೆ ಇರಬಾರದು .

    • ರಮ್ಮಿಗ

      ವಿ ಆರ್ ಕಾರ್ಪೆಂಟರ್ ಅವರೇ, ನೀವೊಬ್ಬ ಕನ್ನಡ ಕವಿ. ನಾನು ನಿಮ್ಮ ಕಾವ್ಯದ ಪ್ರತಿಮೆಗಳ ಸೋಭಗಿಗೆ ಮಾರು ಹೋದವ. ನೀವು ಕನ್ನಡದಲ್ಲೇ ಪ್ರತಿಕ್ರಿಯೆ ಬರೆದರೆ ಸೊಗಸು ಹೆಚ್ಚು. ನಿಮ್ಮಂತಹ ಧೀಮಂತ ಕವಿಗೆಕೆ ಆಂಗ್ಲ ಭಾಷೆಯ ಹಂಗು ಅದೂ ಕನ್ನಡದ ತಾಣದಲ್ಲಿ?

  9. K.M.Vishwanath

    ಶರತ್
    ಬಹಳ ಸೊಗಸಾಗಿ ಬರೆದಿರುವಿರಿ
    ನಿಜಕ್ಕೂ ಕಾವ್ಯ ಕಮ್ಮಟ ಹೊಸ ಅನುಭವ ನೀಡಿತು ಕಾವ್ಯ ಕುರಿತು ಇರುವ ಕೆಲವು ವಿಷಯಗಳಿಗೆ ಆಹಾರವಾಯಿತು ತುಂಬಾ ಅನೂಕೂಲವು ಆಯಿತು
    ಕಾಜಾಣ ಇಂತಹ ಪ್ತಯತ್ನ ಮಾಡಿದ್ದಕ್ಕೆ ಒಳ್ಳೆಯ ವೇದಿಕೆ ನೀಡಿದ್ದಕ್ಕೆ ಸ್ಮರಿಸಲೇಬೇಕು ಕಾವ್ಯಾದ ಆಸಕ್ತಿ ಹೊಂದಿದ ಯುವಕರನ್ನು ಎಲ್ಲಿಯೂ ಫೋರ್ಸ್ ಹಾಕಿ ಇದನ್ನೆ ಓದಿರಿ
    ಪಂಪನ್ನೆ ಕುಮಾರವ್ಯಾಸನನ್ನೆ ಓದಿ ಅನ್ನೊದು ಆಗಾಬಾರದು ನಮ್ಮ ಪರಂಪರೆ ಬೇಕು ಎನ್ನುವ ಮಾತು ಸಾಕು
    ನನಗೆ ಈಗಲು ಕಾಡುವ ಪ್ರಶ್ನೆಗಳಿವೆ ಅಲ್ಲಿ ಅವಕಾಶ ಸಿಗಲಿಲ್ಲ ಇಲ್ಲಿಯಾದರು ಸಿಗಬಹುದೆ??
    ಕಾವ್ಯದ ಆಚೇಗಿನ ಬದುಕು ಹೇಗಿದೆ?
    ವಾಣಿಜ್ಯ ದೃಷ್ಠಿಯಿಂದ ಕಾವ್ಯ ಬದುಕು ಕಟ್ಟಿ ಕೊಡಬಹುದೆ?
    ಕಾವ್ಯ ಬರೆಯಿರಿ ಎಂದವರು ಅದರಿಂದ ಎಷ್ಟು ಏನು ಲಾಭವಿದೆ ಎಂದು ಹೇಳಿಲಿಲ್ಲಾ ? ಆತ್ಮ ತೃಪ್ತಿ ಅಷ್ಟೆ ಸಾಕೆ?
    ಕುವೆಂಪು ಚಿಕ್ಕಂದಿನಲ್ಲಿ ಸುಮಾರು 23 ವಯಸ್ಸಲ್ಲಿ ಬರೆದ ಕವಿತೆ ಕವಿ ಮನೆಯಲ್ಲಿ ಕಂಡೆ ಆದರೆ ಕಮ್ಮಟದಲ್ಲಿ ಯಾರು ಒಬ್ಬರು ಕೂಡಾ ಕುವೆಂಪು ಮೊದಲು ಹಲವು ತಪ್ಪು ಮಾಡಿಯೆ ಕಲಿತರು ಎಂದು ಹೇಳಲಿಲ್ಲಾ ಆ ಕವಿತೆ ಓದಿದಾಗ ನನಗೆ ಅನಿಸಿದ್ದು ಕುವೆಂಪು ಕೂಡಾ ತಪ್ಪುಗಳಿಂದಲೆ ಕಲಿತಿದ್ದು ಅಂತಾ
    ಕಮ್ಮಟದಲ್ಲಿ ಬೇಲೂರು ಸರ್ , ಶಿವರೆಡ್ಡಿ ಸರ್ , ಪ್ರತಿಭಾ ನಂದಕುಮಾರ ಇವರ ಮಾತು ನೆನಪಿನ ಪಟದಲ್ಲಿ ಹಾಗೆ ಉಳಿದಿವೆ.
    ಇತ್ತೀಚಿಗೆ ತುಂಬಾ ಚಿಕ್ಕ ವಯಸ್ಸಿನಲ್ಲಿ ಕಾದಂಬರಿ, ಕವಿತೆ ಬರೆಯುವ ಮಕ್ಕಳು/ಯುವಕರ ಸಾಹಿತ್ಯದಲ್ಲಿ ನಮ್ಮ ಪರಂಪರೆ ಇಲ್ಲವೆ??

  10. Ishwara Bhat

    ಪೂರ್ಣವಿವರಕ್ಕೆ ಧನ್ಯವಾದ. ಫೇಸ್ಬುಕ್ಕುಗಳಲ್ಲಾದ ಚರ್ಚೆಗಳಿಗೂ ಇದಕ್ಕೂ ಸಾಮ್ಯವಿದೆ.
    ಏನೂ ಓದದೆಯೇ ಒಬ್ಬ ಕವಿಯಾಗುತ್ತಾನೆ, ಸಮಾಜಕ್ಕೆ ಒಳಿತುಮಾಡುತ್ತಾನೆ ಎನ್ನುವುದು ನಂಬಲಸಾಧ್ಯವಾದ ವಿಷಯ (ನನ್ನ ಮಟ್ಟಿಗೆ).

  11. shammi sanjeev

    ಕಾವ್ಯಕಮ್ಮಟದ ಉದ್ದೇಶ ಅದರಷ್ಟಕ್ಕೆ ಈಡೇರಿದೆ..ಈಡೇರುತ್ತಲಿದೆ… ಬಂದವರು ತಾವೇನು ಪಡೆಯ ಬಂದಿದ್ದರೋ ಅದನ್ನು ಪಡೆದಿದ್ದಾರೆ.. ಅದ್ಭುತ ಜಾಗ..ಮಹಾನ್ ಪ್ರಕೃತಿ ಮತ್ತು ಕಾವ್ಯಗಳ ಮೂಲಕ ನಮ್ಮ ನಡುವಿರುವ ಚೇತನವೊಂದು ನಮ್ಮನ್ನ ಹರಸಿದೆ.. ನಿಷಿದ್ದವಾವುದು ಇಲ್ಲ ಓದಿಗೆ..ಹಾಗೊಂದು ಕಟ್ಟು ಹಾಕಿಕೊಳ್ಳೋದು ಸರಿಯಲ್ಲ…ಹಾದಿ ಯಾವುದು ಅಂತ ಗೊತ್ತಾಗಬೇಕಾದರೆ ನಮಗೆ ಅವಲೋಕನದಅರಿವಿರಬೇಕು… ಹಾಗೆ ಹೊಸ ಹಾದಿಯಂತೂ ಸೃಷ್ಟಿಯಾಗಲೇ ಬೇಕಾದು ಇಂದಿನ ತುರ್ತು ಅಗತ್ಯತೆ..ಇಲ್ಲವೆಂದರೆ ಕಾವ್ಯ ಮುಂದಿನ ದಿನಗಳಲ್ಲಿ ಅಪ್ರಸ್ತುತವಾದೀತು.. ನಮ್ಮ ಕಾಜಾಣ ಕಮ್ಮಟ ಮಾಡಿದ್ದು ಅದನ್ನೇ..ಹಾದಿ ಕಮ್ಡುಕೊಲ್ಲುವ ಮುನ್ನ ಗುರಿಯ ಅರಿವು ಮಾಡಿಸಿದ್ದು!! ನಾನಂತೂ ಧನ್ಯಳು!!

  12. ವಿಶ್ವ ವಿನ್ಯಾಸ್

    ಕಾವ್ಯ ಕಮ್ಮಟದಲ್ಲಿ ಚರ್ಚೆಯಾಯಿತು. ಚರ್ಚೆಯನ್ನು ಜಗಳವೆನ್ನುವವರಿಗೆ, ಕಾಜಾಣದ ರೆಕ್ಕೆ ಮುರಿಯಿತು ಎನ್ನುವ ಮನಸ್ಥಿತಿಗೆ ಮರುಕವಾಗುತ್ತಿದೆ. ಕನ್ನಡ ಉಳಿಯಬೇಕಾದ್ರೆ, ಕನ್ನಡ ಬೆಳೆಯಬೇಕಾದ್ರೆ, ಕವನ ಅರಳಬೇಕಾದ್ರೆ ಇಂತಹ ಚರ್ಚೆಗಳಾಗಬೇಕು. ಹೊಸ ಪೀಳಿಗೆಯ ತುಮುಲ, ಹುಡುಕಾಟ, ಹುಮ್ಮಸ್ಸುಗಳಿಗೆ ಕಾಜಾಣ ಬಳಗ ತುಂಬಾ ಅಚ್ಚುಕಟ್ಟಾಗಿ ಕಮ್ಮಟ ನಡೆಸಿತು. ಅವರಿಗೆ ನನ್ನ ಅಭಿನಂದನೆಗಳು…. ಟೀಕೆಗೆ, ಮತ್ಸರಕ್ಕೆ, ಕುಹಕಕ್ಕೆ ತಲೆಕೆಡಿಸಿಕೊಳ್ಳದೆ ಕಾಜಾಣ ಸ್ವಚಂದ ಹಾರಾಡಲಿ…
    ವಿಶ್ವ ವಿನ್ಯಾಸ್,,ಮೈಸೂರು

  13. ಬೇಲೂರು ರಘುನಂದನ್

    ಕಾವ್ಯ ಕಮ್ಮಟದ ಮೂರು ದಿನಗಳೂ ಪರಂಪರೆ ಅಂತ ವಿಭಾಗಿಸಿಕೊಂಡು ಚರ್ಚೆ ನಡೆಯಲೇ ಇಲ್ಲ.ಎಲ್ಲ ಸಂಪನ್ಮೂಲ ವ್ಯಕ್ತಿಗಳು ತಮ್ಮ ಮಾತುಗಳಲ್ಲಿ ನಡು ನಡುವೆ ಹಳತರ ಸ್ಯಾಂಪಲ್ಗಳನ್ನೂ ಕೊಟ್ಟರು. ಅದು ಖಂಡಿತ ಅಗತ್ಯವಾಗಿತ್ತು.ಇನ್ನುಳಿದಂತೆ ಶಿಬಿರಾರ್ಥಿಗಳ ಮನಸ್ಥಿತಿಗೆ ಅನುಗುಣವಾಗಿ ಎಲ್ಲ ಕವಿ ಮತ್ತು ಅತಿಥಿಗಳು ಮಾತಾಡಿದರು.ಒಟ್ಟು ಕನ್ನಡ ಕಾವ್ಯವನ್ನು ಕುರಿತು ಮಾತಾಡುವಾಗ ಹಿಂದಿನ ಹೆಜ್ಜೆಗಳ ಅರಿವು ಅಥವಾ ಅದರ ಬಗೆಗಿನ ಅರಿವು ಇರಬೇಕೆಂಬುದು ಅಲ್ಲಿನ ಚರ್ಚೆಗಳ ಆಶಯ.ಯಾಕೆಂದರೆ ಯಾವುದನ್ನಾದರೂ ಮೀರಬೇಕಾದರೆ ಮೀರಬೇಕಾದ್ದು ಯಾವುದು ಅನ್ನುವುದರ ತಿಳುವಳಿಕೆ ಇರಬೇಕಾದ್ದು ಅಗತ್ಯ. ಹಾಗೆ ನೋಡಿದರೆ ಪಂಪ ಕುಮಾರವ್ಯಾಸನಿರಲಿ ಪ್ರತಿಭಾ ಮೇಡಂ ಅಥವಾ ನಾನು ನಾನದ ಮೇಲೆ ಶರತು ಪ್ರವರ ಕೂಡ ನಾಳಿನ ಹುಡುಗರಿಗೆ ಬೇಕಾಗದೆ ಹೋಗುತ್ತಾರೆ. ಅದು ಸರಿ ಅನಿಸಿದರೂ ಕವಿತೆಯೊಳಗಿನ ಶಕ್ತಿ ಎಲ್ಲವನ್ನೂ ನಿಭಾಯಿಸಿದರೂ ಮತ್ತೆಲ್ಲೋ ಕೊರತೆ ಕವಿತೆಯ ಮೇಕಿಂಗ್ ಅಥವಾ ಸಂರಚನೆಗೋ ಎಲ್ಲಾದ್ರೂ ಪೆಟ್ಟುಬಿತ್ತೇನೋ ಅನ್ನೋ ಭಾವ ಕವಿಗೆ ಮೂಡಿಬಹುದೇನೋ ಅನ್ನುವುದ ಗಮನಿಸಿ ಹುಳಿಯಾರ್ ಮೊದಲಾದ ಎಲ್ಲ ಸಂಪನ್ಮೂಲ ವ್ಯಕ್ತಿಗಳು ಅಲ್ಲಲ್ಲಿ ಪರಂಪರೆಯನ್ನು ಉದಾಹರಿಸಿದರು. ಪರಂಪರೆ ಅನ್ನುವ ಪದ ಈ ಅರ್ಥದಲ್ಲಿ ಕಮ್ಮಟದಲ್ಲಿ ಬಳಕೆ ಆಯಿತು. ಎಲ್ಲೂ ಯಾವುದನ್ನೂ ಯಾರಿಗೂ ಹೇರಲಿಲ್ಲ. ಶರತ್ ನ ಒಟ್ಟು ಪ್ರೆಶ್ನೆ ಇದ್ದಿದ್ದು ಪರಂಪರೆಯನ್ನು ನಾವು ಹೇಗೆ ಗ್ರಹಿಸಿಕೊಳ್ಳಬೇಕು ಅನ್ನುವುದೇ ಆಗಿತ್ತು ಎಲ್ಲವನ್ನು ಅಳಿಸಿ ಹೊಸದನ್ನು ಕಟ್ಟಿಬಿಡುತ್ತೇನೆ ಅನ್ನುವ ದಾಷ್ಟ್ಯ ಇರಲಿಲ್ಲ.
    ಇದಿಷ್ಟೂ ಕಾವ್ಯ ಪರಂಪರೆ ಎಲ್ಲ ಮುಗಿದ ಮೇಲೆ ಕಮ್ಮಟ ಆದ ಮೇಲೆ ಫೇಸಬುಕ್ ನಲ್ಲಿ ನಡೆದ ಚರ್ಚೆಗಳು ಎಲ್ಲವನ್ನು ತಿರುಚುವಂತಿತ್ತು. ಇದು ನಿಜಕ್ಕೂ ಕಾಜಾಣಕ್ಕೆ ಶಾಕ್ ಆಗುವ ರೀತಿ ಇತ್ತು.ಎಲ್ಲೊ ಕವಿತೆಯ ಕೆಲಸ ಆಗುತ್ತಿದೆ ಅನ್ನುವುದನ್ನು ಬಿಟ್ಟು ಮತ್ತೆ ತಮ್ಮ ಹಿತಾಸಕ್ತಿಗನ್ನು ಸಾಹಿತ್ಯಿಕ ಚರ್ಚೆಯೊಳಗೆ ತುರುಕುವ ಪ್ರಯತ್ನಗಳು ಮೊದಲಿಂದಲೂ ನಡೆದುಕೊಂಡೇ ಬಂದಿದೆ. ಅದು ಇಲ್ಲೂ ತಪ್ಪಲಿಲ್ಲ. ಕಮ್ಮಟ ಆರಂಭ ಆಗುವ ಮೊದಲೇ ಕಮ್ಮಟಕ್ಕೆ ಬರುವವರ ತಪ್ಪಿಸುವ ಹುನ್ನಾರ ನಡೆದದ್ದು ನಾವು ಎಲ್ಲಿದ್ದೇವೆ ಸುಮ್ಮ ಸುಮ್ಮನೆ ಬರೆಯುತ್ತಿದ್ದಾರ ಇವರೆಲ್ಲಾ ಅನ್ನಿಸತೊಡಗಿತು. ಕಾಜಾಣದ ರೆಕ್ಕೆ ಮುರಿದವು,ದಿಕ್ಕು ತಪ್ಪಿತು,ಅಂತೆಲ್ಲಾ ಲೇವಡಿ ಮಾಡಿ ಕಾವ್ಯ ಕಮ್ಮಟವನ್ನು ಕುರಿತು ಸ್ಟೇಟಸ್ ಗಳನ್ನೂ ಹಾಕಿಕೊಂಡು ವಿಕೃತ ಕುಷಿಪಟ್ಟರು. ಒಂದು ಯುವಕರ ಗುಂಪು ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ಕಟ್ಟಿಕೊಡುವುದ ಕಂಡು ಕಾಲೆಳೆಯುವರಿಗೆ ಕವಿತೆಗಳೇ ಉತ್ತರಕೊಡುತ್ತವೆ.
    ಹಳತನ್ನೆಲ್ಲಾ ಅಳಿಸಿ ಹೊಸತನ್ನು ಹುಟ್ಟಿಸುತ್ತೇವೆ , ಹೊಸ ಕಾವ್ಯದ ಪಿತಾಮಹ ಆಗುತ್ತೇನೆ ಅನ್ನುವವರು ಕಮ್ಮಟಕ್ಕೆ ಬರದವರು ಹುಟ್ಟಿಕೊಂಡರು. ಕವಿತೆಯ ಬಗೆಗೆ ಚೂರು ಆಸಕ್ತಿ ಇರದವರು ಕಮ್ಮಟವನ್ನು ಕುರಿತು ಲೇವಡಿ ಮಾಡಿದರು. ಇದೊಂದು ರೀತಿಯ ಈ ಕಾಲದ ಸಾಂಸ್ಕೃತಿಕ ನಿರ್ನಾಮ.
    ಇದರೆಲ್ಲದರ ಆಚೆಗೆ ಕಾಜಾಣ ತನ್ನ ಕೆಲಸ ತಾ ಮಾಡಿಕೊಂಡು ಹಾರುತ್ತದೆ ಹಾಡುತ್ತದೆ ನಾಡಸುತ್ತುತ್ತದೆ ಅನ್ನುವುದಂತೂ ದಿಟ.ಸದ್ಯದಲ್ಲೇ ಕಾವ್ಯ ಕಾಜಾಣ ಈ ಎಲ್ಲ ಚರ್ಚೆಗಳಿಗೆ ಮುಖಾಮುಕಿ ಆಗುತ್ತದೆ ,,,,,,,
    – ಬೇಲೂರು ರಘುನಂದನ್

  14. ಬೇಲೂರು ರಘುನಂದನ್

    ರಮೇಶ್ ಅರೊಲಿಯವರೇ ……
    ಕಾಜಾಣ ಯುವ ಕಾವ್ಯ ಪುರಸ್ಕಾರದ ಸಮಿತಿಯಲ್ಲಿ ಎಂ.ಆರ್.ಕಮಲ, ಎಚ್. ಎಲ್. ಪುಷ್ಪ ಮತ್ತು ಎಚ್. ಎನ್.ಆರತಿ ಇದ್ದರು. ಕವನ ಸಂಕಲನ ತಂದಿರಬೇಕೆಂಬ ಮಿತಿಯನ್ನು ಕಾಜಣವಾಗಲಿ ಸಮಿತಿಯಾಗಲಿ ಹಾಕಿಕೊಂಡಿರಲಿಲ್ಲ. ಕವಿತೆಯನ್ನು ಅಲ್ಲಲ್ಲಿ ಬರೆಯುತ್ತಿದ್ದು,ಕವಿತೆಯ ಮಾಧ್ಯಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆಗೆದುಕೊಳ್ಳಲ್ಲಿ ಅನ್ನುವ ಆಶಯದಿಂದ ಸಮಿತಿಯು ಗೊರವರ ಅವರನ್ನು ಆರಿಸಲಾಯಿತು.
    ಈಗಾಗಲೇ ಸಂಕಲನ ಬಂದ ಕವಿಯನ್ನು ಈ ಸಲದ ಸಮಿತಿ ಗಣನೆಗೆ ತೆಗೆದುಕೊಳ್ಳದೇ ಪ್ರೋತ್ಸಾಹದಾಯಕವಾಗಿ ಕವಿಯೊಬ್ಬನನ್ನು ಆರಿಸಿದೆ……..
    – ಬೇಲೂರು ರಘುನಂದನ್

  15. M.S.Krishna Murthy Geetha

    ಕಮ್ಮಟದಲ್ಲಿ ನಡೆದ ಎಲ್ಲಾ ಕಾವ್ಯ ಚರ್ಚೆಗಳೂ ಸ್ವಾಗತಾರ್ಹ.. ಎಲ್ಲವೊ ಅರೋಗ್ಯಪೂರ್ಣ ಚರ್ಚೆಯಾಗಿದೆ ಎಂದೇ ತಿಳಿದು ಬರುತ್ತದೆ. ಬಂಡಾಯ ಕಾವ್ಯ, ಸಾಹಿತ್ಯ ಮೂಲೆಗುಂಪಾಗಿದೆ ಎಂಬ ಮಾತೊಂದನ್ನು ಬಿಟ್ಟು. ಪಂಪ ರನ್ನ ಮುಂತಾದ ಕವಿಗಳೇ ಪ್ರಸ್ತುತ ಎನ್ನುವಾಗ ಬಂಡಾಯ ಸಾಹಿತ್ಯ ಹೇಗೆ ಮೂಲೆಗುಂಪಾಗುತ್ತದೆ ಅಥವ ಅಪ್ರಸ್ತುತವಾಗುತ್ತದೆ ಎಂಬ ಪ್ರಶ್ನೆ ಎದುರಾಗುತ್ತದೆ.. ಕಾವ್ಯಾ ಕಮ್ಮಟಗಳು ನಡೆದಾಗ ಅಲ್ಲಿ ಹಲವು ಬಿಸಿ ಬಿಸಿ ಚರ್ಚೆಗಳು. ವಾಗ್ವಾದಗಳು, ಮುಂತಾದವು ಸಹಜ ಹಾಗೆ ಪೇ‍ಸ್‌ಬುಕ್ಕಿನಲ್ಲೂ ಸಹ ಪರ ಮತ್ತು ವಿರೋಧಗಳು ಇರುತ್ತವೆ. ಅದನ್ನೆಲ್ಲಾ ಕ್ರೀಡಾ ಮನೋಭಾವದಿಂದ ತೆಗೆದುಕೊಂಡು ಕಾಜಾಣ ತನ್ನ ಕಾವ್ಯ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತದೆ ಎಂಬ ನಂಬಿಕೆ ಇದೆ..ಶರತ್ ಕೊಂಚ ತಡವಾಗಿಯಾದರೂ ಕಮ್ಮಟದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

  16. Nagaraj Vastarey

    ಶರತ್ ಚಕ್ರವರ್ತಿಯವರಿಗೆ ನಲ್ಮೆ.
    ಯಾತಕ್ಕು ಮೊದಲೇ ಹೇಳಿಬಿಡುವುದು ವಾಸಿ; ನನಗೆ ಈ ‘ಕಾವ್ಯಕಮ್ಮಟ’ದ ಬಗ್ಗೆ ಏನೂ ಗೊತ್ತಿಲ್ಲ. ಹಾಗೇ ‘ಕಾಜಾಣ’ ಅಂತನ್ನುವುದು ಸಹ. ಕುಪ್ಪಳಿಯಲ್ಲಿ ಹೀಗೊಂದು ಕಮ್ಮಟ ನಡೆಯುತ್ತಿದೆ ಅನ್ನುವುದನ್ನು ಎಲ್ಲೋ ಕೇಳಪಟ್ಟಿದ್ದೆ; ‘ಅವಧಿ’ಯಲ್ಲಿಯೇ ಅದರ ಇನ್ವೈಟು ಓದಿದ ನೆನಪು. ಜನವರಿಯ ಕಡೆಯ ವಾರದಲ್ಲಿ ಈ ಬಗ್ಗೆ ತಿಳಿಯಪಟ್ಟು ಬೆರಗಾಗಿತ್ತು. ಹಾಗೇ ಒಂದಿಷ್ಟು ದಿಗಿಲು ಸಹ!
    ನಾನೊಬ್ಬ ಪ್ರ್ಯಾಕ್ಟೀಸುನಿರತ ಆರ್ಕಿಟೆಕ್ಟೆಂದು ನಿಮಗೆ ಗೊತ್ತೆಂದುಕೊಂಡಿದ್ದೇನೆ. ಆರ್ಕಿಟೆಕ್ಚರನ್ನು ಕಲೆಯೆಂಬಂತೆ ಅಭ್ಯಾಸಗೈಯುವ ಕೆಲವು ಮಂದಿಯಲ್ಲಿ ನಾನೂ ಒಬ್ಬ. ಆರ್ಕಿಟೆಕ್ಚರಿನ ಕಲಿಕೆ ಮತ್ತು ಬೋಧೆಗಳು ನನಗೆ ಅತ್ಯಂತ ಪ್ರಿಯವಾದ ಸಂಗತಿಗಳು. ಹಾಗೇ ಅದರ ಅಭ್ಯಾಸವೂ ಸಹ. ಅಭ್ಯಾಸ ಅಂತಂದರೆ ಓದು, ಬೋಧೆಗಳಲ್ಲಿ ಬರುವಂಥವನ್ನು, ಅಲ್ಲಿ ಆಡಿ ಆಡಿ ಹೇಳುವಂಥವನ್ನು- ಪ್ರಯೋಗಿಸಿಯೂ ನೋಡುವಂತಹ ಶಿಸ್ತು.
    ನನ್ನ ಕುರಿತಾಗಿ ಇಷ್ಟು ಹಿನ್ನೆಲೆಯನ್ನು ಕೊಟ್ಟಿದ್ದಕ್ಕೆ ಕಾರಣವಿದೆ. ನಾನು ಆರ್ಕಿಟೆಕ್ಚರನ್ನು ಕಲಿಸುತ್ತೇನೆ ಅಂದೆನಲ್ಲ, ಆ ಬಗ್ಗೆ ತುಸುವೇ ವಿಸ್ತರಿಸಬೇಕು. ಕಲಿಸುತ್ತೇನೆ ಅನ್ನುವುದು ಒಂದು ಸಾಮಾನ್ಯ ರೂಢಿಮಾತು. ಇಂಗ್ಲಿಷನ್ನು ಕಲಿಸಬಹುದು. ಕನ್ನಡವನ್ನು ಕಲಿಸಬಹುದು. ಸೈನ್ಸು, ಮ್ಯಾತ್ಸುಗಳನ್ನು ಕಲಿಸಬಹುದು. ಆದರೆ ಡಿಸೈನನ್ನು ಕಲಿಸಲಾಗುವುದಿಲ್ಲ! ವ್ಯತ್ಯಾಸ ಸ್ವವೇದ್ಯವಂತಂದುಕೊಂಡಿದ್ದೇನೆ. ಆರ್ಕಿಟೆಕ್ಚರಿನ ಬೋಧೆ ಮತ್ತು ಕಲಿಕೆಗಳಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ತೊಡಗಿಕೊಂಡಿರುವ ನನಗೆ ಪ್ರತಿನಿತ್ಯವೂ ‘ವ‘ರ್ಕ್ಶಾಪು’ ನಡೆಸುವುದಾಗುತ್ತದೆ. ನನ್ನ ಆಫೀಸಿನಲ್ಲಿ, ನಾನು ಅಧ್ಯಾಪನಗೈಯುವ ವಿನ್ಯಾಸಶಾಲೆಗಳಲ್ಲಿ- ದಿನಾಲೂ ‘ಕಮ್ಮಟ’ಗಳನ್ನು ನಿರ್ವಹಿಸುವುದಿದೆ. ಲೋಕರೂಢಿಯಲ್ಲಿ ಮಾತ್ರ ನಾನೊಬ್ಬ ಟೀಚರು; ಆದರೆ ವಾಸ್ತವದಲ್ಲಿ ಅಲ್ಲ! ಯಾಕೆಂದರೆ ಡಿಸೈನನ್ನು ಯಾರೂ ಯಾರಿಗೂ ಕಲಿಸಲಾಗುವುದಿಲ್ಲ. ವಿದ್ಯಾರ್ಥಿಯೊಬ್ಬ ಕಾಂಟೆಂಪ್ಲೇಟು ಮಾಡುವ ಡಿಸೈನಾಗಬಲ್ಲ ಐಡಿಯಾವೊಂದನ್ನು, ಅವನ ಪರಿಕಲ್ಪನೆಯನ್ನು- ಮೇಲುಸ್ತರದಲ್ಲಿಯಷ್ಟೇ ತಿದ್ದುತ್ತೇನೆ. ಅಂದರೆ ಗೈಡುಗೈಯುತ್ತೇನೆ. ಐಡಿಯಾವೊಂದನ್ನು ಹೀಗೆ ನೋಡಿದರೆ ಹೇಗೆ, ಹಾಗೆ ನೋಡಿದರೆ ಹೇಗೆ… ಅನ್ನುವ ಸಲಹೆ ಮಾತುಗಳನ್ನಷ್ಟೇ ಆಡುತ್ತೇನೆ. ನನ್ನ ಬೋಧನೆಯುದ್ದಕ್ಕು ಸಜೆಶನುಗಳಷ್ಟೇ ಇರುತ್ತವೆ. ಎದುರಿಗಿನ ಐಡಿಯಾವನ್ನು ಅದನ್ನು ಪರಿಕಲ್ಪಿಸಿದ ಮನಸ್ಸಿನಿಂದಾಚೆಯಿಂದ, ಇನ್ನೊಂದೇ ಕೋನದಿಂದ ನೋಡಿ- ಅದರ ಬೇರೆ ಬೇರೆ ಸಂಭವ-ಸಾಧ್ಯತೆಗಳ ಬಗ್ಗೆ ತಿಳಿಹೇಳುವುದಷ್ಟೇ ನನ್ನ ಕೆಲಸ. ನಾನು ಹೇಳಿದ ಮಾತ್ರಕ್ಕೇ- ವಿದ್ಯಾರ್ಥಿ ನನ್ನನ್ನು ಪೂರ್ತಾ ಒಪ್ಪಬೇಕೆಂದೇನಿಲ್ಲ. ಹಾಗೆ ಒಪ್ಪಿದಲ್ಲಿ ಡಿಸೈನು ಅವನದಲ್ಲ, ನನ್ನದಾಗಿಬಿಡುತ್ತದೆ! ಏಕೆಂದರೆ ಡಿಸೈನಿಗೆ ಇದು ಹೀಗೇ ಅನ್ನತಕ್ಕ ಸಿದ್ಧಸೂತ್ರವಿಲ್ಲ! ಅದಕ್ಕೆ ಕೊನೆಯೆನ್ನುವುದೂ ಇಲ್ಲ! ಅದೊಂದು ಸದಾ ಸನ್ನದ್ಧ ಸ್ವನಿರತ ಪ್ರಕ್ರಿಯೆ. ಅಂದರೆ ಅದೊಂದು ಸೆಲ್ಫ್-ಇಂಡಲ್ಜೆನ್ಸುಳ್ಳ ಪ್ರಾಸೆಸು; ಪ್ರಾಡಕ್ಟಲ್ಲ! ಎಂತಲೇ ಡಿಸೈನನ್ನು ಹೇಳಿಕೊಡಲಾಗುವುದಿಲ್ಲ.
    ಈಗ ನೀವು ಹೇಳುತ್ತಿರುವ ಕಮ್ಮಟಕ್ಕೆ ಬರುವಾ. ಕನ್ನಡವನ್ನು ಕಲಿಸಬಹುದು ಅಂದೆನಲ್ಲ, ಕನ್ನಡ ಗೊತ್ತಿದ್ದ ಮಾತ್ರಕ್ಕೇ ಯಾರಿಗೂ ಪದ್ಯಕಾರರಾಗುವುದು ಸಾಧ್ಯವೆ? ಹಾಗಂತ ಪದ್ಯಗಾರಿಕೆಯನ್ನು ಕಲಿಸಲು ಸಾಧ್ಯವೆ? ಹಾಗಾಗಿಯೇ, ಈ ಮೊದಲು ಕಾವ್ಯಕಮ್ಮಟವೆನ್ನುವ ವಿಷಯಕ್ಕೆ- ನನಗೆ ಬೆರಗೂ ದಿಗಿಲೂ ಉಂಟಾಗಿದ್ದು!
    ಇದನ್ನಿನ್ನು ಬೆಳೆಸುವುದು ಬೇಡ.
    % %
    ನನ್ನ ಮಟ್ಟಿಗೆ- ಡಿಸೈನು ಮತ್ತು ಪದ್ಯ, ಯಾವತ್ತೂ ಬೇರೆಯಲ್ಲ. ಎರಡೂ ಸೃಜನಶೀಲತೆಯನ್ನೇ ನೆಚ್ಚಿ ನಡೆಯುವಂಥವುಗಳು. ಈ ಬಗ್ಗೆ ಸಾಕಷ್ಟು ಸರ್ತಿ ಆಡಿದ್ದೇನೆ; ಬರೆದಿದ್ದೇನೆ. ಡಿಸೈನೆನ್ನುವುದು ಪದ್ಯಸದೃಶ-ಪ್ರಕ್ರಿಯೆ. ಹಾಗೇ ಪದ್ಯವೂ ಡಿಸೈನುಸದೃಶವೆ. ಜಗತ್ತಿನ ಎಲ್ಲ ಪದ್ಯಗಳೂ ವಿನ್ಯಾಸವೆ; ವಿನ್ಯಾಸಗಳೆಲ್ಲ ಪದ್ಯವೇ. ಈ ನಂಬಿಕೆಯೊಂದೇ ನನ್ನನ್ನು ಸದಾ ಬರೆಯಲಿಕ್ಕೆ ಚೋದಿಸುವುದು. ಹಾಗೆ ಬರೆದವುಗಳಲ್ಲಿ ಎಷ್ಟು ಪದ್ಯ, ಎಷ್ಟು ಅಲ್ಲ- ನನಗೆ ಗೊತ್ತಿಲ್ಲ. ಯಾವತ್ತೂ ಹೇಳಿರುವಂತೆ- ನನ್ನ ಬರೆಹವಷ್ಟೂ ನನ್ನ ಆರ್ಕಿಟೆಕ್ಟಿಕೆಯ ಸೈಡೆಫೆಕ್ಟು ಮಾತ್ರ!
    ನೀವು ನಿಮ್ಮ ಲೇಖನದಲ್ಲಿ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಚರ್ಚಿತವಾದ ‘ಹಳಗನ್ನಡದ ಸಾಹಿತ್ಯದ ಓದು ಯಾಕೆ ಬೇಕು?’ ಅನ್ನುವ ಪ್ರಶ್ನೆಯನ್ನು ರೆಫರಿಸಿದ್ದೀರಾದ್ದರಿಂದ, ಮತ್ತು ನಿಮ್ಮ ಗೆಳೆಯ ಪ್ರವರ ಕೊಟ್ಟೂರು ಈ ಕಮ್ಮಟವನ್ನು ಕುರಿತು, ನಿನ್ನೆ ಅಚಾನಕ್ಕು ಸಿಕ್ಕು ಸಂಕ್ಷಿಪ್ತವಾಗಿ ಹೇಳಿ- ಕುಪ್ಪಳಿಯಲ್ಲಿ ನನ್ನ ಹೆಸರನ್ನೂ ಪ್ರಸ್ತಾಪಿಸಲಾಯಿತೆನ್ನುವುದನ್ನು ತಿಳಿಸಿದ್ದರಿಂದ- ನಾನು ನಿಮ್ಮ ಅನುಮಾನಗಳ ಕುರಿತಾಗಿಯಲ್ಲವಾದರೂ, ಧಾರವಾಡದಲ್ಲಿ ನಾನು ಆಡಿದ್ದನ್ನು ದಾಖಲಿಸಲೋಸುಗ ನಿಮ್ಮ ವೇದಿಕೆಗೆ ಬಂದಿದ್ದೇನೆ. ಒಪ್ಪಿಸಿಕೊಳ್ಳಿ.
    ಮೊದಲು, ಪರಂಪರೆ ಮತ್ತು ಸಾಹಿತ್ಯದ ವಿಷಯ ಬಂದಾಗಲೆಲ್ಲ ನನ್ನನ್ನು ಮಿಸ್-ಕೋಟ್ ಮಾಡಲಾಗುತ್ತದೆನ್ನುವುದನ್ನು ತಿಳಿಸಬಯಸುತ್ತೇನೆ. ನಾನು ಪರಂಪರೆಯನ್ನು ವಿರೋಧಿಸುತ್ತಿಲ್ಲ. ನಾನು ಯಾವತ್ತೂ ವಿರೋಧಿಸುತ್ತಿರುವುದು, ಪರಂಪರೆಯನ್ನು ಪೂರ್ತಾ ತಿಳಿದುಕೊಂಡಿದ್ದರಷ್ಟೇ ನಾನು ಬರೆಯಲರ್ಹ ಅನ್ನುವ ಪೀಠಸ್ಥ-ಧೋರಣೆಯನ್ನು. ಇಷ್ಟಕ್ಕು, ಈ ಪರಂಪರೆ ಅಂತನ್ನುವುದನ್ನು ನನಗೆ ನಾನು ಆರ್ಕಿಟೆಕ್ಚರಿನಲ್ಲಿ ಪ್ರತಿನಿತ್ಯವೂ ಎದುರುಹಾಕಿಕೊಳ್ಳುವುದಾಗುತ್ತದೆ. ಹಳತರ ಮಗ್ಗುಲಿನಲ್ಲಿ ಹೊಸತೊಂದನ್ನು ಕಟ್ಟುವಾಗ, ನಾನು ಕಟ್ಟುವ ಹೊಸತು ಹಳತರೊಟ್ಟಿಗಿನ ಮುಖಾಮುಖಿಯಲ್ಲಿ ನನಗೆ ನಾನೇ ತಳೆದ ಅಭಿಪ್ರಾಯವಾಗಿರುತ್ತದೆ. ಅಂದರೆ ಪ್ರತಿ ಕಟ್ಟಡಗಾರಿಕೆಯಲ್ಲೂ ಅದರ ಸುತ್ತಲಿನ ಸಂದರ್ಭವನ್ನು ಅರ್ಥೈಸಿಕೊಂಡು ಕಟ್ಟಬೇಕಾಗುವ ಅಲಿಖಿತ ಮುಲಾಜಿರುತ್ತದೆ. ಆಬ್ಲಿಗೇಷನಿರುತ್ತದೆ. ಆದರೆ, ಒಬ್ಬ ವಿನ್ಯಾಸಕನಾಗಿ ನನಗೆ ಹಳತನ್ನು ಪೂರ್ತಾ ನಿರಾಕರಿಸುವ ಸ್ವಾತಂತ್ರ್ಯವಿದೆ. ಉದಾಹರಣೆಗೆ ನಾನು ಹಂಪಿಯಂತಹ ಸಂದರ್ಭದಲ್ಲಿ ಕಟ್ಟಬೇಕಿದೆ ಅಂತಿಟ್ಟುಕೊಳ್ಳಿ. ಹಂಪಿಯ ಪ್ರಸ್ತುತವಷ್ಟೂ ಅಲ್ಲಿನ ಕಲ್ಲುಗಳಲ್ಲಿದೆ. ಕಂಭ, ತೊಲೆ, ಗುಡಿ, ಗೋಪುರಗಳ ಅವಶೇಷಗಳಲ್ಲಿದೆ. ಅಲ್ಲಿ ಕಟ್ಟುವಾಗ ನನಗೆ ಹಂಪಿಯ ಇವೊತ್ತಿನ ‘ಸದ್ಯ’ವನ್ನು ಗಮನದಲ್ಲಿಟ್ಟುಕೊಳ್ಳಲೇಬೇಕಾದ ದಾಕ್ಷಿಣ್ಯವಿದ್ದೇ ಇದೆ. ಆದರೆ, ಈ ದಾಕ್ಷಿಣ್ಯವು ನನ್ನನ್ನು ನನ್ನ ಇವೊತ್ತಿನ ‘ಸದ್ಯ’ವನ್ನು ಅವಗಣಿಸುವಂತೆ ಮಾಡುವುದಿಲ್ಲ. ಹಾಗೆ ಮಾಡುತ್ತದದಾದ್ದರೆ ಆ ದಾಕ್ಷಿಣ್ಯವು ನನ್ನ ಮಟ್ಟಿಗೆ ಕಿಂಚಿತ್ತೂ ಮಾನ್ಯವಲ್ಲ! ಸರಳವಾಗಿ ಆಡುವುದಾದರೆ, ಹಂಪಿಯಲ್ಲಿ ನಾನು ಕಟ್ಟುತ್ತಿರುವುದರಿಂದ- ಅಲ್ಲಿನ ಬಲುಕಾಲದ ಪರಂಪರೆಯ ಮುಲಾಜಿನ ಮೇರೆಗೆ, ನನ್ನ ಕಟ್ಟಡವನ್ನು ಹಜ಼ಾರರಾಮ ದೇಗುಲವನ್ನೋ, ಹೇಮಕೂಟವನ್ನೋ, ಅಲ್ಲಿನ ಕಲ್ಲುರಥವನ್ನೋ ಹೋಲುವ ಹಾಗೆ- ಕಾಂಕ್ರೀಟಿನಲ್ಲಿ ಪ್ರತಿಕೃತಿಸುವುದು ಎಷ್ಟು ಹೇಯ! ನಾನು ಪರಂಪರೆಯೊಟ್ಟಿಗಿನ ನನ್ನ ಅಭಿಮತವನ್ನು ನನ್ನದೇ ರೀತಿಯಲ್ಲಿ ಮಾಡುತ್ತೇನೆ. ನನ್ನ ವಿನ್ಯಾಸವು ಹಳತನ್ನು ಹೇಗೆ ಒಳಗೊಳ್ಳಬಲ್ಲುದು ಅನ್ನುವುದರಲ್ಲಿ ಅದರ ಘನತೆಯಿದೆಯೇ ಹೊರತು, ಅದನ್ನು ಅನುಕರಿಸುವುದರಲ್ಲಿಲ್ಲ. ರಿಕಿಮಾರ್ಟಿನ್ನನ ಬಾಯಲ್ಲಿ ವಿಷ್ಣುಸಹಸ್ರನಾಮವನ್ನು ಕೇಳುವುದು ಅಪಚಾರ; ಹಾಗೇ ಅವನ ಕಪ್ಪಾಫ್ ಲೈಫನ್ನು ಎಮ್ಮೆಸ್ ಸುಬ್ಬುಲಕ್ಷ್ಮಿ ಹಾಡುವುದೂನೂ! ಅಂದರೆ ಇವೊತ್ತು ಬರೆಯುತ್ತಿರುವ ನನಗೆ- ನನ್ನದೇ ಇವೊತ್ತಿನ ಇಮ್ಮೀಡಿಯೆಸಿ ಮುಖ್ಯ. ನಾನು ನನ್ನ ಸದ್ಯವನ್ನು ನಂಬುವವನು ಮತ್ತು ನೆಚ್ಚುವವನು.
    ಹಾಗಾದರೆ, ಧಾರವಾಡದಲ್ಲಿ ನಾನು ಆಡಿದ್ದೇನು?
    ನಾನು ಹೇಳಿದ್ದು, ಇದೇ ಮಾತನ್ನು. ನಾನು ಯಾವತ್ತೂ ಪಂಪನನ್ನು, ರನ್ನ ಪೊನ್ನ ಜನ್ನ ಕುಮಾರವ್ಯಾಸರನ್ನು ಓದಬೇಡಿ ಅಂದವನಲ್ಲ. ನಾನು ಸದಾ ಹೇಳಿರುವುದು- ನಾನು ಓದಿಲ್ಲ; ಬಹುಶಃ ಓದುವುದಿಲ್ಲ ಅನ್ನುವುದನ್ನು ಮಾತ್ರ! ಯಾಕೆಂದರೆ ನನಗೆ ನೆನಪುಗಳಿಲ್ಲ. ನೆನಪುಗಳ ಹಂಗಿಲ್ಲ. ನನ್ನನ್ನು ನನ್ನ ಇವೊತ್ತು ಕಾಡುವಷ್ಟು ನಿನ್ನೆ ಕಾಡುವುದಿಲ್ಲ. ಹೀಗಿರುವಾಗ, ಇನ್ನೊಬ್ಬರ ನಿನ್ನೆಗಳು? ಅದೊಂದು ಮಹಾ ಮಹಾ ಭ್ರಾಂತು! ನನಗೆ ನನ್ನನ್ನು ಪಂಪನ ಬದಿಯಲ್ಲಿಟ್ಟುಕೊಂಡು ನನ್ನನ್ನೇ ನೋಡಿಕೊಳ್ಳುವ ಅರ್ಜುಸರ್ಜುಗಳಿಲ್ಲ. ಹಾಗೊಂದು ತುರ್ತು ಎದುರಾದಾಗ ನನಗೆ ಅವನನ್ನು ಓದುವುದಲ್ಲದೆ ನಿರ್ವಾಹವೂ ಇಲ್ಲ!
    % %
    ಕವಿತೆ ಅಂತನ್ನುವುದು ಯಾರನ್ನೂ ಹೇಳಿಕೇಳಿ ಬರುವುದಿಲ್ಲ. ಅದು ತಂತಾನೇ ಘಟಿಸುವ ಸ್ವಯಂಭುವಷ್ಟೆ. ಹಾಗೆ ನೋಡಿದರೆ, ಬರೆಯುವವನು ನಿಜಕ್ಕೂ ನಾನಲ್ಲ. ಬರೆಯುತ್ತಿರುವುದು ನನ್ನೊಡನೆ ಇರುವ ಇನ್ನೊಬ್ಬ. ಅವನು ಸದಾ ನನ್ನ ಜೊತೆಗಿದ್ದಾನೆ. ನನ್ನೆಲ್ಲದರಲ್ಲೂ ಸಾಥೀಯುತ್ತಾನೆ. ನನ್ನ ಕನಸುಗಳನ್ನು ಅವನು ಕಾಣುತ್ತಾನೆ. ನನ್ನ ಉಮೇದುಗಳನ್ನು ಅವನು ಸಂಗೋಪಿಸುತ್ತಾನೆ. ಕನ್ನಡಿಯಲ್ಲಿ ಆಗೊಮ್ಮೆ ಈಗೊಮ್ಮೆ ಝಲಕಾಗಿ ತೋರುತ್ತಾನೆ. ಇಂತಹ ಅಂತಿಂತಲ್ಲದ ಅವನು ಯಾರು? ನನಗೆ ನಿಜಕ್ಕು ಗೊತ್ತಿಲ್ಲ! ನನ್ನೊಳಗಿನ ಮಹಿಮೆಯಿದ್ದಾನು ಆತ. ಇದನ್ನು ನಾನು ನಿಜಕ್ಕು ನಂಬುತ್ತೇನೆ. ನಂಬುವುದಷ್ಟೇ ನನ್ನ ಮಟ್ಟಿಗಿನ ಇಂಬು. ಇದನ್ನು ನಾನು ಉಡಾಫೆಯಿಂದ ಹೇಳುತ್ತಿಲ್ಲ. ಯಾಕೆಂದರೆ, ನಾನು ನನ್ನ ಮೂವತ್ತೈದನೇ ವಯಸ್ಸಿನವರೆಗೆ ಏನೂ ಬರೆದವನಲ್ಲ. ಇದ್ದಕ್ಕಿದ್ದಂತೆ ಒಮ್ಮೆ ಒಳಗಿರುವ ‘ಅದು’ ನನ್ನಿಂದ ಏನೋ ಬರೆಸಿತು. ಇದು ಮಹಿಮೆಯಲ್ಲದೆ ಮತ್ತಿನ್ನೇನು?
    ಇನ್ನು ಕವಿತೆಯೆನ್ನುವುದು ತಂತಾನೇ ಆಗುವುದು ಅಂದೆನಷ್ಟೆ. ಜಗತ್ತಿನ ಎಲ್ಲ ಕವಿಗಳೂ ಇದನ್ನು ಒಪ್ಪಿಯಾರು. ಜಗತ್ತಿನ ಎಲ್ಲ ವಿನ್ಯಾಸಕಾರರೂ ಇದನ್ನು ಒಪ್ಪಲೇಬೇಕು. ಕವಿತೆ ಘಟಿಸುವ ಪರಿಯ ಮೇಲೆ ನಾನು ಅಂತನ್ನುವ ಸ್ವಯವಿರುವುದಿಲ್ಲ. ಸ್ವಯದ ಹಕ್ಕೊತ್ತಾಯವಿರುವುದಿಲ್ಲ. ಅಲ್ಲಿ ನಾನೆನ್ನುವುದೊಂದು ಮಾಧ್ಯಮ ಮಾತ್ರ. ಬಹುಶಃ ಇದನ್ನೇ ಕುಮಾರವ್ಯಾಸನು ಹಿಂದಾನೊಮ್ಮೆ ತಾನೊಬ್ಬ ಲಿಪಿಕಾರ ಮಾತ್ರ ಅಂತ ಹೇಳಿದ್ದೇನೋ.
    ನಿಜ ಹೇಳುತ್ತೇನೆ: ನನಗೆ ನಾನು ಬರೆಯುವುದರ ಮೇಲೆ ನಿಯಂತ್ರಣವಿರುವುದಿಲ್ಲ. ಬರೆಯುವಷ್ಟೂ ಕಾಲ ನಾನು ನಾನಲ್ಲದೆ, ಒಡನಿರುವ ಅವನಾಗಿರುತ್ತೇನೆ.
    ಗೊಡ್ಡುಗೊಡ್ಡು ಫಿಲಸಫಿಯೆನ್ನಬಹುದಾದರೂ, ಇದು ಸತ್ಯ.
    % %
    ಮತ್ತೆ ಪಂಪ-ರನ್ನರತ್ತ ಹಿಂತಿರುಗುವುದಾದರೆ, ಅವರು ಬರೆಯಲಿಕ್ಕೆ ಮೊದಲು ಅವರಿಗೆ ರೆಫರೆನ್ಸಾಗಿ ಯಾರಿದ್ದರು? ಧಾರವಾಡದಲ್ಲಿ ನಾನು ವೇದಿಕೆಯಲ್ಲಿರುವಾಗ, ಜೋಗಿಯವರು ಕಳಿಸಿದ ಎಸ್ಸೆಮ್ಮೆಸ್ಸು ಇನ್ನೂ ನನ್ನ ಇನ್ಬಾಕ್ಸಿನಲ್ಲಿದೆ. ‘ಓದು ಅವರವರಿಗೆ ಸಂಬಂಧಿಸಿದ್ದು ಅಲ್ಲವೆ? ಜಗತ್ತಿನ ಮಹಾಕವಿಗಳಾದ ವಾಲ್ಮೀಕಿ, ವ್ಯಾಸ, ಹೋಮರ್, ಡಾಂಟೆ… ಏನು ಓದಿದ್ದರು? ಏನು ಓದಲಿಕ್ಕೆ ಇತ್ತು?’
    ಅನಿಸುತ್ತದೆ: ಎಲ್ಲ ಕಾಲದಲ್ಲೂ ಪಂಪ-ರಿರುತ್ತಾರೆ. ಅವರು ಮತ್ತೆ ಮತ್ತೆ ಆಗಿಬರುತ್ತಾರೆ. ನಮ್ಮ ಆದಿಕವಿಯಾದರೋ, ಅವೊತ್ತು ತನ್ನ ಅವೊತ್ತಿಗೆ ಸ್ಪಂದಿಸಿ ತಾನೇ ಬರೆದಿರಬೇಕು. ಕುಮಾರವ್ಯಾಸನೂ ಹದಿನೈದನೇ ಶತಮಾನದ ‘ಕನ್ನಡ’ಕ್ಕೆ ತಾನೇ ಬದ್ಧನಿದ್ದಿರಬೇಕು. ಇಪ್ಪತ್ತೊಂದನೇ ಶತಮಾನದಲ್ಲಿನ ಹದಿನಾಲ್ಕನೇ ಇಸವಿಯಲ್ಲಿರುವ ನಾನು ನನ್ನ ಇವೊತ್ತನ್ನಷ್ಟೇ ನಂಬಬೇಕು; ನೆಚ್ಚಬೇಕು. ಹೀಗಿರುವಾಗ, ನೀನು ಕಾರು ಮತ್ತು ಕಾರ್ಪೊರೇಟು; ಹಾಗಾಗಿ ಬರೆಯಕೂಡದು ಅಂತನ್ನುವುದು, ಪಂಪನನ್ನು ರನ್ನನನ್ನು ಓದಿಲ್ಲ; ಓದದೆ ಬರೆಯುವುದು ಸಲ್ಲ ಅಂತನ್ನುವುದು- ಫರಮಾನು, ಫತ್ವಾಗಳಲ್ಲದೆ ಮತ್ತಿನ್ನೇನು? ಅವರುಗಳನ್ನು ಓದದ ಹೊರತು ಬರೆಯಕೂಡದೆಂದರೆ- ನನ್ನೊಳಗಿನ ಒರತೆಗೆ, ತುಡಿತಕ್ಕೆ ನಾನಲ್ಲದೆ ಇನ್ನಾರು ಮಾತಾದಾರು? ಕನ್ನಡವನ್ನು ನೆಚ್ಚುವ ಎಲ್ಲ ದೊಡ್ಡ ದೊಡ್ಡ ಮಂದಿ ಅದೇ ಕನ್ನಡದ ನಾಳೆಗಳನ್ನೇಕೆ ಹೊಸಕುತ್ತಿದ್ದಾರೆ?
    ಅರ್ಥವಾಗುತ್ತಿಲ್ಲ.
    % %
    ಕನ್ನಡವಿಲ್ಲದೆಯೆ ನಾನು ಬದುಕಬಲ್ಲೆ. ನಾನು ದಿನಂಪ್ರತಿ ವರ್ತಿಸುವ ಜಗತ್ತಿನಲ್ಲಿ, ನನ್ನ ಎಚ್ಚರಗಳಲ್ಲಿ ನಿಜಕ್ಕು ಕನ್ನಡವಿಲ್ಲ. ಆದರೆ ನನಗೆ ಕನ್ನಡ ಬೇಕು. ಕನ್ನಡಕ್ಕೆ ನಾನು ಬೇಕೋ ಇಲ್ಲವೋ ಗೊತ್ತಿಲ್ಲ, ಕನ್ನಡ ನನ್ನ ವೈಯಕ್ತಿಕ ಅಗತ್ಯಗಳಲ್ಲೊಂದು. ಹೀಗೆ ಕನ್ನಡವನ್ನು ಆಯ್ದುಕೊಂಡಿರುವ ನನಗೆ ಯಾವ ಬಗೆಯ ಕನ್ನಡ ಬೇಕೆನ್ನುವ ಆಯ್ಕೆಯ ಹಕ್ಕೂ ಇದೆಯೆಂದುಕೊಂಡಿದ್ದೇನೆ. ಸದರಿ ಹಕ್ಕಷ್ಟೇ, ನನ್ನನ್ನು ಇಷ್ಟೆಲ್ಲ ಮಾತನಾಡಲು ಹೊಂಚಿಸುತ್ತಿರುವುದು!
    ಇಲ್ಲೊಂದು ಅತೀವ ಖೇದದ ಸಂಗತಿಯನ್ನು ಹಂಚಿಕೊಳ್ಳುತ್ತೇನೆ. ನನಗೆ ಏಳೆಂಟು ವರ್ಷಗಳ ಹಿಂದೆ, ಕನ್ನಡ ಸಾಹಿತ್ಯದಲ್ಲಿರುವ ಇಸಮ್ಮುಗಳ ಪರಿವೆಯಿದ್ದಿಲ್ಲ. ಸಾಹಿತ್ಯವೇ ಗೊತ್ತಿದ್ದಿಲ್ಲವೆಂದ ಮೇಲೆ, ಈ ಇಸಮ್ಮುಗಳ ಮನೆ ಹಾಳಾಗಲಿ ಬಿಡಿ. ನವೋದಯ, ನವ್ಯ, ನವ್ಯೋತ್ತರ… ಇತ್ಯಾದಿಗಳು, ದಲಿತ-ದಲಿತೇತರವೆನ್ನುವಂಥವುಗಳು, ಅನಂತಮೂರ್ತಿ-ಅನಂತಮೂರ್ತ್ಯೇತರವೆನ್ನುವ ಪ್ರಬೇಧಗಳು, ಭೈರಪ್ಪ-ಭೈರಪ್ಪೇತರಿಕೆಯೆಂಬ ಬಣಗಾರಿಕೆಗಳು… ಊಹ್ಞೂಂ… ಇವಾವುವೂ ಗೊತ್ತಿದ್ದಿಲ್ಲ. ಈಗ ಇವೆಲ್ಲವನ್ನೂ ಅಯಾಚಿತವಾಗಿ ತಿಳಿದುಕೊಳ್ಳಬೇಕೆನ್ನುವ ನನ್ನ ಸಂದರ್ಭದ ಅನಿವಾರ್ಯವನ್ನು ನಿಜಕ್ಕು ಶಪಿಸುತ್ತೇನೆ. ಇಂತಹ ಟ್ಯಾಕ್ಸಾನಮಿಗಳನ್ನು ಮಾಡಿಕೊಳ್ಳುವ ಮಂದಿಗೆ ನಾನೆಂದೂ ಒಗ್ಗುವುದು ಬೇಡವೆನ್ನುವ ಉಮೇದಿದೆ. ನನ್ನೊಳಗಿರುವ ಅವನು ಈ ಉಮೇದನ್ನೂ ಸಂಗೋಪಿಸಿಯಾನೆನ್ನುವ ಉಮೇದು ಇನ್ನೂ ಹೆಚ್ಚಾಗಿದೆ.
    % %
    ಅಗತ್ಯಕ್ಕು ಹೆಚ್ಚು ಆಡಿದೆನೆನಿಸುತ್ತದೆ. ನಿಮ್ಮ ನೆಪದಲ್ಲಿ ನಾನು ನನ್ನನ್ನು ಒಡ್ಡಿಕೊಂಡಿದ್ದಕ್ಕೆ ಕ್ಷಮೆಯಿರಲಿ.
    ಇನ್ನೊಂದು ಮಾತು; ನಾನು ನಿಮ್ಮನ್ನು ಓದಿಲ್ಲ. ಓದಿದ್ದರೂ ಗಮನಿಸಿಲ್ಲ. ಈ ಮುಂದೆ ನಿಮ್ಮ ಮೇಲೊಂದು ಕಣ್ಣಿಡುತ್ತೇನೆ!
    ಪದ್ಯಕಾರನಿಗಿಂತ ಪದ್ಯ ಮುಖ್ಯವಷ್ಟೆ. ಪಂಪನಿರಲಿ, ವಸ್ತಾರೆಯಿರಲಿ- ನನಗೆ ಪದ್ಯವೆನ್ನುವುದು ಆ ಕ್ಷಣದ ಪುಳಕ ಮಾತ್ರ. ಒಮ್ಮೆ ಪುಲಕಿಸಿಯಾದ ಮೇಲೆ, ಅದು ಇದ್ದರೆಷ್ಟು ಬಿಟ್ಟರೆಷ್ಟು!!
    ನಮಸ್ಕಾರ.
    % % %

  17. RK

    ಕಾವ್ಯಕಮ್ಮಟದ ಸಂವಾದ ಕುಪ್ಪಳಿಗೆ ಮುಗಿಯದೆ ಸಾಮಾಜಿಕ ವೇದಿಕೆಗಳಲ್ಲಿ ಚರ್ಚೆಗೆ ಬಂದದ್ದು ಒಳಿತಾಯಿತು…
    ಕೆಲವರ ಅಸಹನೆ ಇದ್ದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ….
    ಪ್ರಶ್ನೆಗಳು ನನ್ನ ಮಟ್ಟಿಗಂತೂ ಪ್ರಸ್ತುತವೇ…
    ಪಂಪನ ಕಾಲದಿಂದ ಇಲ್ಲಿಯವರೆಗೂ ಎಲ್ಲಾ ಕವಿಗಳು ಸಮಾಜದ ಹುಳುಕುಗಳನ್ನೇ ಟೀಕಿಸುತ್ತಾ ಬಂದಿದ್ದಾರೆ, ಆದರೆ ಅದು ಸಮಾಜದ ಮೇಲೆ ಪ್ರಭಾವ ಬೀರುವಲ್ಲಿ ಸಂಪೂರ್ಣ ಯಶವಾಗಿಲ್ಲವೆ ಎಂಬುದು ಅತ್ಮಾವಲೋಕನದಂತಿದೆ… ನಮ್ಮೆಲ್ಲರ ಮನದಾಳಕಿಳಿಯಬೇಕಿದೆ

  18. ಜಿ.ಎನ್ ನಾಗರಾಜ್

    ಕಾಜಾಣ ಕಮ್ಮಟದಲ್ಲಿ ಹಾಗೂ ನಂತರ ಇಲ್ಲಿ ನಡೆದಿರುವ ಆಸಕ್ತಿಕರ ಚರ್ಚೆ ಹಾನಿಯನ್ನೇನು ಮಾಡಿಲ್ಲ. ಸ್ವಾಗತಾರ್ಹ ಚರ್ಚೆ.ಈ ಲೇಖನವನ್ನು ನೂರಾರು ಬಾರಿ ಹಂಚಿಕೊಳ್ಳಲಾಗಿದೆ ಎಂಬುದೂ ಕೂಡ ಕಾವ್ಯದ ಜೀವಂತಿಕೆಯನ್ನು ಹಾಗೂ ಕಾವ್ಯಾಸಕ್ತರ ಜೀವಂತಿಕೆಯನ್ನು ತೋರಿಸುತ್ತದೆ. ನನ್ನ ವೈಯುಕ್ತಿಕ ಅನುಭವದಲ್ಲಿಯಂತೂ ಚರ್ಚೆ,ವಾಗ್ವಾದಗಳು ಮಾತ್ರವಲ್ಲ ವಿವಾದಗಳೂ ನನ್ನಲ್ಲಿ ಸಾಹಿತ್ಯದ ಬಗೆಗಿನ ಆಸಕ್ತಿಯನ್ನು ಹಾಗೂ ತಿಳುವಳಿಕೆಯನ್ನು ಹೆಚ್ಚಿಸಿದುವೇ ಹೊರತು ಹಾನಿಯನ್ನೇನು ಮಾಡಲಿಲ್ಲ.ಕಮ್ಮಟದ ಬಗ್ಗೆ ಫೇಸ್ ಬುಕ್ ನ ವಾದಗಳನ್ನು ನಾನು ನೋಡಿಲ್ಲ. ಕೆಲವರಂತೂ ಫೇಸ್ ಬುಕ್ ಎಂದರೆ ಬೇಜವಾಬ್ದರಿಯಿಂದ ನಡೆದುಕೊಳ್ಳಲೊಂದು ತೆರೆದ ದಾರಿ ಎಂದು ಭಾವಿಸಿದ್ದಾರೆ. ಕೋಮುವಾದಿಗಳ ಅಸಹ್ಯಕರ ಮಾತುಗಳು ಇಂತಹ ವರ್ತನೆಗೆ ನೀರು ಹುಯ್ದು ಬೆಳೆಸಿವೆ. ನಮ್ಮ ಮನೆಯೊಳಗಿನ ಎಂಬಂತಹ ,ಆಪ್ತ ಮಿತ್ರರೊಳಗೆ ಖಾಸಗಿಯಾಗಿ ಮಾಡಬೇಕಾದ ಚರ್ಚೆಗಳನ್ನು ಫೇಸ ಬುಕ್ ಎಂಬ ವಿಶ್ವ ಬೀದಿಗೆ ತಂದು ತಮ್ಮನ್ನೂ ಜೊತೆಯವರನ್ನೂ ಅಗ್ಗ ಮಾಡಿಕೊಳ್ಳುವುದರಲ್ಲಿ ಖುಷಿ ಪಡುತ್ತಿದ್ದಾರೆ.ಗಲಾಟೆ ಮಾಡಲೆಂದೇ ಕುಡಿದು ಬಂದವರ ಅಥವಾ ಕುಡಿಸಿ ಕಳಿಸಿದವರ ಜೊತೆ ಮಾತು ಬೆಳೆಸುತ್ತಾ ಹೋಗುವುದು ಎಷ್ಟು ಮೂರ್ಖತನವೋ ಅಷ್ಟೇ ಇಂತಹ ಬೀದಿ ಕಾಳಗದ ಮಾತುಗಳಿಗೆ ಪ್ರತಿಕ್ರಿಯಿಸುವುದು. ಅದನ್ನು ಪಕ್ಕಕ್ಕೆತ್ತಿ ಬಿಸಾಡಿ ನಿಮ್ಮ ಉದ್ದೇಶದತ್ತ ಮುನ್ನಡೆಯುವುದೇ ಸರಿಯಾದ ಮಾರ್ಗ. ಇನ್ನು ಅಲ್ಲಿ ಎತ್ತಿದ ಪ್ರಶ್ನೆಗಳು ಮೌಲಿಕವಾಗಿವೆ. ಅದರ ಬಗ್ಗೆ ಇಲ್ಲಿ ವಿಸ್ತಾರಕ್ಕೆ ಹೋಗುವುದಿಲ್ಲ.

  19. Mohan V Kollegal

    ಎಲ್ಲ ಗೊಂದಲಗಳಿಗೂ ತೆರೆ ಎಳೆದ ಲೇಖನ. ಅಲ್ಲಿ ಚರ್ಚೆ ಆಯಿತೋ ಹೊರತು ಕೆಲವರು ತಿಳಿದುಕೊಂಡಂತೆ ಜಗಳವಾಗಲಿಲ್ಲ. ಬಹುತೇಕರ ಭಾಷಣಗಳು ಹೆಚ್ಚಾಗಿ ನವೋದಯ, ನವೋದಯ ಪೂರ್ವ ಕಾಲಘಟ್ಟಕ್ಕೆ ವಾಲಿಕೊಂಡಿತ್ತು. ಬೇಂದ್ರೆ, ಕುವೆಂಪು ಸುತ್ತ ಗಿರಕಿ ಹೊಡೆದವು. ಆದರೆ ಪ್ರತಿಭಾ ನಂದಕುಮಾರ್, ಟಿ. ಯಲ್ಲಪ್ಪರ ಕವಿತೆಗಳು ಇಂದಿಗೆ ನಮ್ಮನ್ನು ಎಳೆದುಕೊಂಡುಬಂದವು. ಅಲ್ಲಿ ಬಂದಿದ್ದವರೆಲ್ಲ ಬಹುತೇಕ ನವ ಬರಹಗಾರರೇ ಆಗಿದ್ದದ್ದುರಿಂದ ಕಾವ್ಯ ಪರಿಭಾಷೆ, ಪರಿಕರಗಳ ಬಗ್ಗೆ ಚರ್ಚೆಯಾಗಬೇಕಾಗಿತ್ತು. ವರ್ತಮಾನದ ತಲ್ಲಣಗಳಿಗೆ ಮಿಡಿಯುವ ಬಗ್ಗೆ ಮಾತಾಗಬೇಕಾಗಿತ್ತು. ಆದರೆ ಆ ಮೂರು ದಿನಗಳು ಎಲ್ಲಿಯೂ ವ್ಯರ್ಥವಾಗಲಿಲ್ಲ. ಎಲ್ಲವೂ ಅಚ್ಚುಕಟ್ಟಾಗಿ ಜವಾಬ್ದಾರಿಯುತವಾಗಿ ನಡೆಯಿತು.ಇಲ್ಲಿನ ಅನುಭವಗಳು ಮುಂದಿನ ಕಮ್ಮಟದ ಉತ್ಕೃಷ್ಟತೆಗೆ ನೆರವಾಗುತ್ತದೆ. ಕೈಸೋತು ನಾವು ಕೂರುವುದಿಲ್ಲ. ಮುಂದಿನ ಕಮ್ಮಟಕ್ಕೆ ಹಿಂದಿನ ಕಮ್ಮಟವೇ ಅಡಿಪಾಯ. ಅನುಭವಗಳು ಮುಂದಿನ ದಾರಿಗೆ ಬೆಳಕಾಗುತ್ತದೆ.

  20. Banavasi Somashekhar

    ಹೆಮ್ಮೆಯ ಕುಂವೀಯವರ ಭಾಷಣವನ್ನು ಟಿ.ವಿ.ಮಾಧ್ಯಮದಲ್ಲಿ ಸ್ವತಃ ನೋಡಿದ್ದೇವೆ.ಅವರು ಹೇಳಬೇಕಾಗಿದ್ದನ್ನು ನೇರವಾಗಿ,ಯಾವ ಮುಚ್ಚುಮರೆಯೂ ಇಲ್ಲದೇ ಹೇಳಿದ್ದಾರೆ.ಈ ಕುರಿತು ಅವರನ್ನು ಪ್ರಶ್ನಿಸುವ ಒಬ್ಬ ವಾರ್ತಾ ವಾಚಕ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದ.ಮತ್ತಷ್ಟು ವಿವಾದಕ್ಕೆ ಎಡೆ ಮಾಡುವ ಉದ್ದೇಶವಿರುವಂತಿತ್ತು,ಆತನ ಪ್ರಶ್ನೆಯಲ್ಲಿ.ಆದರೆ ಮಾನ್ಯ ಕುಂವೀಯವರು ಅವನ ಕಾಲೆಳೆವ ಬುದ್ಧಿಯನ್ನು ಗಮನಿಸಿ ಹೇಳಬೇಕಾದ್ದನ್ನು ಗೊಂದಲವಿಲ್ಲದಂತೆ ಮತ್ತಷ್ಟು ಸ್ಪಷ್ಟವಾಗಿಯೇ ಹೇಳಿದರು.ಶರತ್,ನೀವು ಇಡೀ ಸನ್ನೀವೇಷವನ್ನೇ ಇಲ್ಲಿ ಕಣ್ಣಿಗೆ ಕಟ್ಟಿಕೊಟ್ಟಿದ್ದೀರಿ.ನಿಜಕ್ಕೂ ಒಂದು ಮಾಹಿತಿ ಪೂರ್ಣ ವರದಿಯನ್ನು ಮಂಡಿಸಿದ್ದೀರಿ.ನಿಮಗೆ ಅಭಿನಂದನೆಗಳು ಸಲ್ಲುತ್ತವೆ.ಇದನ್ನು ಪ್ರಕಟಿಸಿದ ಅವಧಿಯೂ ತನ್ನ ಕಾಳಜಿ ಮತ್ತು ಬದ್ಧತೆಯನ್ನು ಹೆಚ್ಚಿಸಿಕೊಂಡಿದೆ.

  21. Sushma

    Ondhu samavesha andhamele ee tharahada aago hogu galu sarve saamanya,, nimma kaavya kaajanadha baruvike yannu kaayutha
    inthi nimma….

  22. Chetan S K

    ನಮಸ್ಕಾರ ನಾನು ಚೇತನ್. ನಾನು ಕೆಲವು ಕವನಗಳನ್ನು ಬರೆದಿದ್ದೇನೆ. ಆದರೆ ಅವುಗಳ ತಪ್ಪು ಒಪ್ಪುಗಳ ಮಾರ್ಗದರ್ಶನ ಇಲ್ಲದೆಹೋಗಿದೆ. ದಯಮಾಡಿ ದಾರಿ ತೋರಿ

Trackbacks/Pingbacks

  1. ಹಳೆಯ ಕಾವ್ಯದ ಅಭ್ಯಾಸ ಒಂದು ಸಾಧನ, ಅನಿವಾರ್ಯವಲ್ಲ – ಪ್ರತಿಭಾ ನಂದಕುಮಾರ್ « ಅವಧಿ / Avadhi - [...] February 11, 2014 by G ನಿನ್ನೆ ಶರತ್ ಚಕ್ರವರ್ತಿ  ’ಕಮ್ಮಟದಲ್ಲಿ ನಿಜಕ್ಕೂ ನಡೆದದ್ದೇನು?’ ಎನ್ನುವ ಲೇಖನ [...]
  2. ’ಪಂಪ-ರನ್ನ ಬರೆಯಲಿಕ್ಕೆ ಮೊದಲು ಅವರಿಗೆ ರೆಫರೆನ್ಸಾಗಿ ಯಾರಿದ್ದರು?’ – ನಾಗರಾಜ ವಸ್ತಾರೆ « ಅವಧಿ / Avadhi - [...] ಅವರು ನಿನ್ನೆ ಬರೆದ ಲೇಖನದಲ್ಲಿ ಎತ್ತಿದ ಪ್ರಶ್ನೆಗಳು ಕೇವಲ ಒಂದಿಬ್ಬರ ಮನದಲ್ಲಿರುವ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading