ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಮಲಾಕರ್ ಭಟ್ ಓದಿದ ‘ಬಿಡುಗಡೆ’

ಕಮಲಾಕರ್ ಭಟ್

“ಬಿಡುಗಡೆ” ಎ ಎನ್ ಪ್ರಸನ್ನ ಅವರ ಹತ್ತು ಕತೆಗಳ ಸಂಕಲನ. ಅಂಕಿತ ಪ್ರಕಾಶನ ತಂದಿರುವ ಈ ಸಂಕಲನದಲ್ಲಿ ಮೇ 2020ರಿಂದ ನವಂಬರ್ 2020ರ ಅವಧಿಯಲ್ಲಿ ಬರೆದ ಕತೆಗಳು ಸೇರಿವೆ. ಇದು ಪ್ರಸನ್ನ ಅವರ ಆರನೆಯ ಕಥಾಸಂಕಲನ. ದೀರ್ಘ ಕಾಲದಿಂದ ಕತಾರಚನೆಯಲ್ಲಿ ತೊಡಗಿಕೊಂಡಿರುವ ಲೇಖಕರು ಅನುಭವೀ ಕತೆಗಾರ ಎನ್ನುವುದಕ್ಕೆ ಸಂಕಲನದ ಕತೆಗಳೂ ಪುಷ್ಟಿ ಕೊಡುತ್ತವೆ.

ಪ್ರಸನ್ನ ಅವರ ಈ ಸಂಕಲನ ತೋರಿಸುವಂತೆ ವಾಸ್ತವವಾದಿ ನಿರೂಪಣೆ ಅವರು ಆಯ್ದುಕೊಂಡಿರುವ ಹಾದಿ. ಸೀಮಿತ ಸಾಮಾಜಿಕ, ಭೌಗೋಳಿಕ ವಲಯಗಳಿಂದ ಎತ್ತುಕೊಂಡ ಪಾತ್ರಗಳ ಸುತ್ತ ಪ್ರಸನ್ನ ಅವರ ನಿರೂಪಕನ ಕಣ್ಣುಗಳು. ಆದರೆ, ಅವು ಕಂಡುಕೊಳ್ಳುವ ಹಾಗೂ ಓದುಗರಿಗೆ ಕಾಣಿಸುವ ವಿಶ್ವ ಮಾತ್ರ ಆಳವಾದದ್ದು. ಈ ಆಳದ ಪ್ರಾಪ್ತಿ ಪ್ರಸನ್ನ ಅವರ ನಿರೂಪಣಾ ಶೈಲಿಯಿಂದ ಸಾಧ್ಯವಾಗಿದೆ. ದಟ್ಟ ವಿವರಗಳ ಮೂಲಕ ಪಾತ್ರಗಳ ಹೊರಾವರಣ ಹಾಗೂ ಅಂತರಂಗಗಳೆರಡನ್ನೂ ಅವರು ಜೀವಂತಗೊಳಿಸುತ್ತಾರೆ. ಹಾಗಾಗಿಯೇ ಈ ಕಥೆಗಳು ತೆರೆದಿಡುವ ವಿಶ್ವ ಅತ್ಯಂತ ಪರಿಚಿತ ವಿಶ್ವವಾಗಿ ನಮಗೆ ತೋರುತ್ತದೆ.

ಕತಾಹಂದರ, ಪಾತ್ರಪ್ರಸ್ತುತಿ, ಪ್ರತಿಮಾವಿಧಾನ, ಹಿನ್ನೆಲೆಯ ಚಿತ್ರಣ, ಕಥನಕ್ರಮ ಹೀಗೆ ಎಲ್ಲ ದೃಷ್ಟಿಯಿಂದಲೂ ವಾಸ್ತವವಾದಿ ಶೈಲಿಯಲ್ಲಿರುವ ಎ ಎನ್ ಪ್ರಸನ್ನ ಅವರ “ಬಿಡುಗಡೆ” ಸಂಕಲನ ಸಾರ್ವಜನಿಕ ಹಾಗೂ ವ್ಯಕ್ತಿಗತ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಆಂತರಿಕ, ಕೌಟುಂಬಿಕ ಮತ್ತು ಸಾಮಾಜಿಕ ಸಂವಹನ, ಸಂಬಂಧ, ಅನುಸಂಧಾನಗಳ ನಿರೂಪಣೆಯನ್ನು ಕಕ್ಷೆಯೊಳಗೆ ತರುತ್ತದೆ. ನಿರೂಪಣಾ ಶೈಲಿಯಲ್ಲಿ ಏಕತಾನತೆ ಉಂಟಾಗದಿರಲು ಈ ಕತೆಗಾರರು ವೈವಿಧ್ಯತೆ ಬಳಸುವುದಿದೆ, ವಾಸ್ತವವಾದಿ ಶೈಲಿಯ ಎಲ್ಲೆಯನ್ನು ದಾಟಿ ಸಾಗುವುದೂ ಇದೆ.

ಪ್ರಸನ್ನ ಅವರು ನುರಿತ ಕತೆಗಾರರಾಗಿರುವುದರ ಜೊತೆಗೆ, ಕತೆ ಹೇಳುವ ಕುರಿತು ತುಂಬಾ ಆಸ್ಥೆ ಉಳ್ಳವರು ಎಂದು ಕತೆಗಳ ವಿಸ್ತಾರವೇ ನಮಗೆ ಹೇಳುತ್ತದೆ. ಅವರ ವಾಕ್ಯಗಳಲ್ಲಿ ಲವಲವಿಕೆ ಇದೆ, ವಿವರಗಳಲ್ಲಿ ಜೀವಂತಿಕೆ ಇದೆ, ಪ್ರತಿಮೆಗಳಲ್ಲಿ ಪ್ರಭೆಯಂತದ್ದೇನೋ ಇದೆ. ಓದಿಸಿಕೊಳ್ಳಲು ಇದು ಸಾಕಾಗುತ್ತದೆ.

‍ಲೇಖಕರು Admin

12 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading