ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ವಿ ಮಿಸ್ ಯು ಪಿ ಬಿ

ತಣ್ಣಗೆ ಹೊರಟು ಹೋದರು… ಕನ್ನಡ ಚಿತ್ರರಂಗದಿಂದ ಹೊರಟಂತೆ

‘ನಾನು ಈಗಲೂ ಹಾಡ್ತಾ ಇದ್ದೀನಿ. ಪಿಬಿಎಸ್‌ ಆಗಿಧ್ದೋನು ಎಸ್‌ಪಿಬಿ ಆಗಿದ್ದೀನಿ.’

ಹಾಗೆಂದು ಹೇಳಿದ್ದು ಪಿ.ಬಿ ಶ್ರೀನಿವಾಸ್‌. ಈ ಮಾತಲ್ಲಿ ಅವರ ಸೌಜನ್ಯ, ಪರಿಸ್ಥಿತಿಯನ್ನು ಒಪ್ಪಿಕೊಳ್ಳುವ ಗುಣ ಕಾಣಬಹುದು. ಅವರಿದ್ದದ್ದೇ ಹಾಗೆ. ಯಾವತ್ತೂ ಕೊರಗದೆ, ಯಾವತ್ತೂ ಮರುಗದೆ ಬಾಳಿದವರು ಅವರು. ಹಾಡುವುದು ಅನಿವಾರ್ಯ ಕರ್ಮ ನನಗೆ ಅನ್ನುವ ಮಾತು ಅವರಿಗೆ ಒಪ್ಪುತ್ತಿತ್ತು. ನಾಲ್ಕೈದು ಮಂದಿ ಎದುರಿಗಿದ್ದರೆ ಸಾಕು, ಪಿಬಿಎಸ್‌ ಹಾಡಲು ಶುರು ಮಾಡುತ್ತಿದ್ದರು. ತಾವೇ ಬರೆದ ಗೀತೆಗಳನ್ನು ಹಾಡುತ್ತಿದ್ದರು. ಹಿಂದಿ ಹಾಡುಗಳನ್ನು ಹಾಡುತ್ತಿದ್ದರು. ಹಾಡು ತನಗೆ ಜೀವನ್ಮರಣದ ಪ್ರಶ್ನೆ. ಹಾಡುವುದನ್ನು ನಿಲ್ಲಿಸಿದ ನಂತರ ತಾನು ಬದುಕಿರುವುದಿಲ್ಲ ಅನ್ನುವುದು ಅರ್ಥವಾದವರಂತೆ ಹಾಡುತ್ತಲೇ ಇದ್ದರು.

ಒಬ್ಬ ಗಾಯಕ 83 ವರುಷದ ಜೀವಿತಾವಧಿಯಲ್ಲಿ ಏನು ಮಾಡಬಹುದು? 22ನೇ ವಯಸ್ಸಿಗೆ ಅವರು ಹಾಡಲು ಶುರು ಮಾಡಿದರು. ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ದಿನಕ್ಕೊಂದೋ ಎರಡೋ ಹಾಡಿನಂತೆ ಹಾಡುತ್ತಲೇ ಬಂದರು. ವೇಳೆ ಸಾಕಷ್ಟು ಮಿಗುತ್ತಿತ್ತು. ಆ ಹೊತ್ತಲ್ಲಿ ಅವರು ಕವಿತೆ ಬರೆದರು. ಘಜಲ್‌ ಗೀಚಿದರು. ಲಕ್ಷಾಂತರ ಹಿಂದಿ ಕವಿತೆಗಳನ್ನು ಬರೆದು ಅದಕ್ಕೆ ತಾವೇ ರಾಗ ಸಂಯೋಜಿಸಿ ಹಾಡಿದರು. ಎಂಟು ಭಾಷೆಗಳನ್ನು ಕಲಿತರು. ಎಂಟರಲ್ಲೂ ಕವಿತೆ ರಚಿಸುವಷ್ಟರ ಮಟ್ಟಿಗೆ ಪರಿಣತರಾದರು. ಸಂತೋಷವಾಗಿದ್ದರು, ಮುಗ್ಧರಾಗಿದ್ದರು. ಸಿಟ್ಟು ಮಾಡಿಕೊಂಡರು. ಸಮಾಧಾನದಿಂದ ಕೇಳಿಸಿಕೊಂಡರು. ನೀನು ಹಾಡಿದ್ದು ಸಾಕಪ್ಪಾ ಅಂತ ಹೇಳುವ ಮೊದಲೇ ಅರ್ಥಮಾಡಿಕೊಂಡು ತಣ್ಣಗೆ ಹೊರಟುಹೋದರು, ಕನ್ನಡ ಚಿತ್ರರಂಗದಿಂದ ಹೊರಟಂತೆ.

ಪೇಟ, ನಾಮ ಹಾಕಿಕೊಂಡು ಘನವಾಗಿ ಕಾಣಿಸುತ್ತಿದ್ದ ಅವರನ್ನು ನೋಡಿದಾಗೆಲ್ಲ ನೆನಪಾಗುತ್ತಿದ್ದವರು ನಮ್ಮ ಪು.ತಿ. ನರಸಿಂಹಾಚಾರ್‌. ಪಿಬಿಎಸ್‌ ಕೂಡ ಪುತಿನರಷ್ಟೇ ತೀವ್ರವಾಗಿ ಕಲೆಗೆ ಒಡ್ಡಿಕೊಂಡವರು. ಕಳೆದ ಕೆಲವು ವರುಷಗಳಿಂದ ಅವರು ಹಾಡುವುದಕ್ಕಿಂತ ಹೆಚ್ಚಾಗಿ ಕವಿತೆ ಓದುತ್ತಿದ್ದರು ಅಂತ ಅವರ ಮೇಲೆ ಬೇಸರ ಮಾಡಿಕೊಂಡವರಿದ್ದಾರೆ. ಅತಿಯಾದ ಕನ್ನಡ ಪ್ರೀತಿ ತೋರುತ್ತಾರೆ ಅಂತ ಟೀಕಿಸಿದವರಿದ್ದಾರೆ. ಆದರೆ ಅದು ಅವರಿಗೆ ಅನಿವಾರ್ಯವೂ ಆಗಿತ್ತೋ ಏನೋ?

 

ಪಿಬಿಎಸ್‌ ಮರುಳು ಮಾಡುವಂತೆ ಹಾಡಿದ ಹಾಡುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಏನಿಲ್ಲವೆಂದರೂ ನೂರು ಹಾಡುಗಳಂತೂ ಸಿಗುತ್ತವೆ. ರಾಜ್‌ಕುಮಾರ್‌ ಶರೀರ, ಪಿಬಿಎಸ್‌ ಶಾರೀರ ಅನ್ನುವುದು ನಟ-ಗಾಯಕ ಸಂಬಂಧ ಹೇಗಿತ್ತು ಅನ್ನುವುದಕ್ಕೆ ಸಾಕ್ಷಿ. ಕನ್ನಡ ಚಿತ್ರಗೀತೆಗಳಿಗೊಂದು ಘನತೆ ತಂದುಕೊಟ್ಟವರೂ ಅವರೇ. ವಿಷಾದ ಗೀತೆಗಳನ್ನು ಹಾಡುವುದರಲ್ಲಿ ಅವರನ್ನು ಮೀರಿಸುವವರಿರಲಿಲ್ಲ. ಆಶ್ಚರ್ಯಕರವಾಗಿ ಅವರು ಉಲ್ಲಾಸದ ಗೀತೆಗಳನ್ನೂ ಹಾಡಿಬಿಡಬಲ್ಲವರಾಗಿದ್ದರು. ‘ಹೋಗದಿರಿ ಸೋದರರೇ …’ ಎಂದು ಗದ್ಗದರಾಗಿ ಹಾಡಿದವರೇ ‘ಹೋದರೆ ಹೋಗು ನನಗೇನು …’ ಎಂದು ತುಂಟತನ ಮಿಂಚುವಂತೆ ಹಾಡಿ ನಗಿಸುತ್ತಿದ್ದರು.

 

ಬೆಂಗಳೂರಿನ ನಂಟನ್ನು ಪಿಬಿಎಸ್‌ ಬಿಟ್ಟಿರಲಿಲ್ಲ. ಸಂಘಸಂಸ್ಥೆಗಳು ಅವರನ್ನು ಕರೆಸಿ ಸನ್ಮಾನಿಸುತ್ತಿದ್ದವು. ಅವರ ಗಾಯನ ಸಂಜೆ ನಡೆಯುತ್ತಿತ್ತು. ಅವರ ಗಂಡು ಧ್ವನಿ ಮೊಳಗುತ್ತಿತ್ತು. ಕನ್ನಡ ಚಿತ್ರರಂಗ ಮಾತ್ರ ಅವರನ್ನು ಮರೆತುಬಿಟ್ಟಿತು. ಪಿಬಿಎಸ್‌ ಕೊನೆಯ ದಿನಗಳಲ್ಲಿ ಜೀವಂತವಾಗಿದ್ದದ್ದು ಕೇವಲ ಅವರ ಹಾಡುಗಳ ಅಭಿಮಾನಿಗಳ ಮನದಲ್ಲಿ, ಚಿತ್ರರಸಿಕರ ಹೃದಯದಲ್ಲಿ. ಅವರು ಹಾಡುವಂಥ ಹಾಡುಗಳು ಅನೇಕವಿದ್ದವು. ಚಿತ್ರಗೀತೆಗಳ ಆಯಸ್ಸು ಮತ್ತು ಕಂಠಶ್ರೀಮಂತಿಕೆಗಿಂತ ಕ್ಯಾಸೆಟ್ಟು ಕಂಪೆನಿಗಳ ವ್ಯಾಪಾರವೇ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಮುಖ್ಯವಾಗುತ್ತಿದ್ದಂತೆ, ಅನೇಕ ಮಹಾನ್‌ ಗಾಯಕರು ದನಿ ಕಳಕೊಂಡರು. ಅಂಥವರ ಪೈಕಿ ಪಿಬಿಎಸ್‌ ಮೊದಲಿಗರು.

ಹದಿನೈದು ವರುಷಗಳ ಕಾಲ ಕನ್ನಡಿಗರ ಆಕಾಶವಾಣಿ, ಅಶರೀರವಾಣಿ ಆಗಿದ್ದವರು ಪ್ರತಿವಾದಿ ಭಯಂಕರ ಶ್ರೀನಿವಾಸ್‌. ಪ್ಲೇ ಬ್ಯಾಕ್‌ ಸಿಂಗರ್‌ ಶ್ರೀನಿವಾಸ್‌, ಪ್ರಾರ್ಥನಾ ಬಿಲೀವರ್‌ ಶ್ರೀನಿವಾಸ್‌ ಬಿಟ್ಟುಹೋದ ಹಾಡುಗಳು ಮತ್ತಷ್ಟು ವರುಷ ನಮ್ಮನ್ನು ಮುದಗೊಳಿಸುತ್ತವೆ ಅನ್ನುವ ನಂಬಿಕೆಯೇ ಅವರಿಗೆ ನಾವು ಸಲ್ಲಿಸಬಹುದಾದ ಗೌರವ, ಒಪ್ಪಿಸಬಹುದಾದ ಪ್ರೀತಿ. ರಾಜ್‌ ಚಿತ್ರಗಳಿಗೆ ಹಾಡುವುದನ್ನು ಬಿಟ್ಟ ನಂತರ ಅವರು ಅ-ಶರೀರ-ವಾಣಿ ಆಗಿದ್ದರು. ಈಗ ಶರೀರ ಮತ್ತು ಶಾರೀರ ಎರಡೂ ದೂರವಾಗಿದೆ.

 

‍ಲೇಖಕರು avadhi

18 April, 2013

3 Comments

  1. bharathi

    ಪಿಬಿಎಸ್ ಬಗ್ಗೆ ನಾನು ಇಂಥ ಲೇಖನ ಬರೆದಿದ್ದಕ್ಕೆ ಇದು ಹೈಸ್ಕೂಲ್ ಹುಡುಗಿ ಮಾತ್ರ (ಹುಡುಗ ಅಲ್ಲ) ಶೋಭಿಸುವಂತ ಬರಹ … ಅವರು ಒಬ್ಬ ಸಿನೆಮಾ ಗಾಯಕ ಮಾತ್ರವಾಗಿದ್ದರು ಅಷ್ಟೇ ಅಂತ ಯಾರೋ ಬರೆದಿದ್ದರು.ಮನಸ್ಸು ಅದನ್ನು ಓದಿ ವ್ಯಗ್ರವಾಗಿತ್ತು. ನಿಮ್ಮ ಲೇಖನ ಓದಿ ಈಗ ಯಾಕೋ ವಿಲಕ್ಷಣ ನೆಮ್ಮದಿಯಾಯ್ತು …

  2. chalam

    ಪಿಬಿಎಸ್ ಕನ್ನಡವನ್ನು ಬೆಳಗಿದವರು…ಈಗ ಅವರಿಲ್ಲ.ಹಾಡಿದ ಹಾಡುಗಳಿವೆ.ಹೀಗೆ ಕನ್ನಡವನ್ನು ಬೆಳಗಿದವರು ಇನ್ನೂ ಇದ್ದಾರೆ…ಅವರನ್ನು ಗುರುತಿಸಿ ಗೌರವಿಸದಿದ್ದರೆ ತಪ್ಪಾದೀತು.

  3. deepaG

    ಹಾಡು ಹಾಗೂ ನೃತ್ಯಗಳು ಮನಸ್ಸಿಗೆ ಮುದ ನೀಡುವ ಮದ್ಯಮಗಳಾಗದೆ ವ್ಯಾಪಾರೀಕರಣ ಹಾಗೂ ವೈಭವೀಕರಣಕ್ಕಿಳಿದಿವೆ ಇಂತವರ ಮದ್ಯಪಿಬಿಯಸ್ ನಂತವರು ಇಷ್ಟು ದಿನ ಅದೆನ್ನ ಸಹಿಸಿ ಕ್ಷಮಿಸಿ ಮನನೊಂದು ದೇಹ ತ್ಯಾಗ ಮಾಡಿದರೆಂದರೆ ಬಹುಶಃ ತಪ್ಪಾಗಲಾರದು. ಇಂತಹ ಗಾನ ಕೋಗಿಲೆ ಕನ್ನಡಿಗರ ಕರ್ಣಪಟಲದಲಿ ಸದಾ ಶಾಶ್ವತ ದ್ವನಿಯಾಗಿರುತ್ತಾರೆ. ಅವರಿಗೆ ನನ್ನ ಮನಃ ಪೂರ್ವಕ ಶ್ರದ್ದಾಂಜಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading